ಅಧ್ಯಯನ ಲೇಖನ 28
ದೇವಭಯ ಬೆಳೆಸ್ಕೊಳ್ಳಿ ಜೀವ ಉಳಿಸ್ಕೊಳ್ಳಿ
“ಸರಿಯಾದ ದಾರಿಯಲ್ಲಿ ನಡಿಯುವವನಿಗೆ ಯೆಹೋವನ ಭಯ ಇರುತ್ತೆ.”—ಜ್ಞಾನೋ. 14:2.
ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!
ಈ ಲೇಖನದಲ್ಲಿ ಏನಿದೆ?a
1-2. ಲೋಟನ ಕಾಲದಲ್ಲಿ ಇದ್ದ ಹಾಗೆ ಇವತ್ತು ಯಾವ ಪರಿಸ್ಥಿತಿ ಇದೆ?
ಲೋಟನ ಕಾಲದಲ್ಲಿ ಜನ ತುಂಬ ಕೆಟ್ಟುಹೋಗಿದ್ರು. “ನಾಚಿಕೆ ಇಲ್ಲದ ಕೆಟ್ಟ ಕೆಲಸಗಳನ್ನ ಮಾಡ್ತಿದ್ದ ಜನ್ರನ್ನ ನೋಡಿ [ಅವನು] ತುಂಬ ನೊಂದುಕೊಂಡಿದ್ದ.” (2 ಪೇತ್ರ 2:7, 8) ತನ್ನ ಸುತ್ತಮುತ್ತ ಜನ ಹೀಗಿದ್ರೂ ಲೋಟ ಅವ್ರ ತರ ಆಗಲಿಲ್ಲ. ಯಾಕಂದ್ರೆ ಅವನಿಗೆ ದೇವರ ಮೇಲೆ ಭಯ ಇತ್ತು, ಪ್ರೀತಿ ಇತ್ತು. ದೇವರಿಗೆ ಇಂಥ ಕೆಟ್ಟ ನಡತೆ ಇಷ್ಟ ಇಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಇವತ್ತು ಕೂಡ ನಮ್ಮ ಸುತ್ತಮುತ್ತ ಇರೋ ಜನ್ರು ಹೀಗೇ ಇದ್ದಾರೆ. ಆದ್ರೆ ನಾವು ನೈತಿಕವಾಗಿ ಶುದ್ಧವಾಗಿ ಇರಬೇಕಂದ್ರೆ ನಮಗೆ ಯೆಹೋವನ ಮೇಲೆ ಭಯ ಮತ್ತು ಪ್ರೀತಿ ಇರಬೇಕು.—ಜ್ಞಾನೋ. 14:2.
2 ಅದಕ್ಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಅದಕ್ಕಂತನೇ ಜ್ಞಾನೋಕ್ತಿ ಪುಸ್ತಕದಲ್ಲಿ ಎಷ್ಟೋ ಬುದ್ಧಿಮಾತುಗಳನ್ನ ಬರೆಸಿಟ್ಟಿದ್ದಾನೆ. ಗಂಡಸರು, ಹೆಂಗಸರು, ಚಿಕ್ಕವರು, ದೊಡ್ಡವರು ಎಲ್ರೂ ಈ ಬುದ್ಧಿಮಾತುಗಳನ್ನ ಪಾಲಿಸಿದ್ರೆ ತುಂಬ ಪ್ರಯೋಜನ ಆಗುತ್ತೆ.
ದೇವರ ಭಯ ನಮ್ಮನ್ನ ಕಾಪಾಡುತ್ತೆ
3. ನಾವು ಯಾಕೆ ನಮ್ಮ ಹೃದಯನ ಕಾಪಾಡ್ಕೊಬೇಕು ಅಂತ ಜ್ಞಾನೋಕ್ತಿ 17:3 ಹೇಳುತ್ತೆ? (ಚಿತ್ರನೂ ನೋಡಿ.)
3 ನಾವು ಯಾಕೆ ನಮ್ಮ ಹೃದಯನ ಕಾಪಾಡ್ಕೊಬೇಕು? ಯಾಕಂದ್ರೆ ಯೆಹೋವ ನಮ್ಮ ಹೃದಯನ ಪರೀಕ್ಷಿಸ್ತಾನೆ. ಅಂದ್ರೆ ನಾವು ಒಳ್ಳೆಯವ್ರ ತರ ನಾಟಕ ಆಡ್ತಿದ್ದೀವಾ ಅಥವಾ ನಿಜವಾಗ್ಲೂ ಒಳ್ಳೆಯವ್ರಾಗಿ ಇದ್ದೀವಾ ಅನ್ನೋದನ್ನ ದೇವರು ನೋಡ್ತಾನೆ. (ಜ್ಞಾನೋಕ್ತಿ 17:3 ಓದಿ.) ಹಾಗಾಗಿ ನಾವು ಶಾಶ್ವತ ಜೀವಕ್ಕೆ ನಡೆಸೋ ಯೆಹೋವನ ವಿವೇಕನ ನಮ್ಮ ಮನಸ್ಸಲ್ಲಿ ತುಂಬಿಸ್ಕೊಬೇಕು. ಆಗ ಆತನು ನಮ್ಮನ್ನ ನೋಡಿ ತುಂಬ ಖುಷಿಪಡ್ತಾನೆ. (ಯೋಹಾ. 4:14) ಅಷ್ಟೇ ಅಲ್ಲ, ಸೈತಾನ ಮತ್ತು ಅವನ ಲೋಕದ ಯೋಚ್ನೆಗಳಿಗೆ ನಮ್ಮ ಮನಸ್ಸಲ್ಲಿ ಜಾಗ ಇರಲ್ಲ. (1 ಯೋಹಾ. 5:18, 19) ಹೀಗೆ ಮಾಡಿದ್ರೆ ನಾವು ಯೆಹೋವನಿಗೆ ಇನ್ನೂ ಹತ್ರ ಆಗ್ತೀವಿ. ಆತನ ಮೇಲಿರೋ ಪ್ರೀತಿ, ಗೌರವ ಜಾಸ್ತಿ ಆಗುತ್ತೆ. ನಾವು ಆತನ ಮನಸ್ಸನ್ನ ನೋಯಿಸೋಕೆ ಒಂಚೂರೂ ಇಷ್ಟ ಪಡಲ್ಲ. ಕೆಟ್ಟದ್ದನ್ನ ಮಾಡೋದ್ರ ಬಗ್ಗೆ ಯೋಚ್ನೆನೂ ಮಾಡಲ್ಲ. ಕೆಟ್ಟದ್ರ ಕಡೆಗೆ ಮನಸ್ಸು ವಾಲಿದಾಗ ‘ಇಷ್ಟೊಂದು ಪ್ರೀತಿ ತೋರಿಸಿರೋ ಯೆಹೋವ ದೇವರಿಗೆ ನಾನು ಹೇಗೆ ತಾನೇ ದ್ರೋಹ ಮಾಡ್ಲಿ?’ ಅಂತ ಯೋಚಿಸ್ತೀವಿ.—1 ಯೋಹಾ. 4:9, 10.
4. ಕೆಟ್ಟ ಕೆಲಸ ಮಾಡದೆ ಇರೋಕೆ ಒಬ್ಬ ಸಹೋದರಿಗೆ ಯೆಹೋವನ ಭಯ ಹೇಗೆ ಸಹಾಯ ಮಾಡ್ತು?
4 ಕ್ರೊಯೆಶಿಯದಲ್ಲಿರೋ ಸಹೋದರಿ ಮಾರ್ಟ ಅವ್ರ ಉದಾಹರಣೆ ನೋಡಿ. ಯೆಹೋವ ದೇವರ ವಿರುದ್ಧ ದೊಡ್ಡ ತಪ್ಪು ಮಾಡೋಕೆ ಅವ್ರ ಮನಸ್ಸು ಎಳೀತಾ ಇತ್ತು. ಅವರು ಏನು ಹೇಳ್ತಾರಂದ್ರೆ “ಅದು ಸರಿನಾ ತಪ್ಪಾ ಅಂತ ನಂಗೆ ಯೋಚ್ನೆ ಮಾಡೋಕೆ ಆಗ್ಲಿಲ್ಲ. ಅದ್ರಿಂದ ಸಿಗೋ ಸುಖದ ಮೇಲೆನೇ ನನ್ನ ಗಮನ ಎಲ್ಲಾ ಇತ್ತು. ಅದಕ್ಕೆ ಆ ಕೆಟ್ಟ ಆಸೆನ ನಿಯಂತ್ರಿಸೋಕೆ ನಂಗೆ ತುಂಬ ಕಷ್ಟ ಆಗ್ತಿತ್ತು. ಆದ್ರೆ ಯೆಹೋವನ ಭಯ ನನ್ನನ್ನ ತಡೀತು.”b ಆ ಸಹೋದರಿ ಕೆಟ್ಟ ಕೆಲಸ ಮಾಡೋದ್ರಿಂದ ಮುಂದೆ ಏನೆಲ್ಲ ಕಷ್ಟ ಅನುಭವಿಸಬೇಕಾಗುತ್ತೆ ಅಂತ ಯೋಚ್ನೆ ಮಾಡಿದ್ರು. ನಾವೂ ಇದೇ ತರ ಯೋಚ್ನೆ ಮಾಡಬೇಕು. ಕೆಟ್ಟ ಕೆಲಸ ಮಾಡೋದ್ರಿಂದ ಯೆಹೋವ ದೇವರಿಗೆ ತುಂಬ ನೋವಾಗುತ್ತೆ ಅನ್ನೋದನ್ನ ನೆನಸ್ಕೊಬೇಕು. ಆತನನ್ನ ಶಾಶ್ವತವಾಗಿ ಆರಾಧಿಸೋ ಅವಕಾಶ ಕಳ್ಕೊಳ್ತೀವಿ ಅನ್ನೋ ಭಯ ನಮ್ಮಲ್ಲಿ ಇರಬೇಕು.—ಆದಿ. 6:5, 6.
5. ಲಿಯೋ ಅವ್ರ ಅನುಭವದಿಂದ ನೀವೇನು ಕಲಿತ್ರಿ?
5 ನಮಗೆ ಯೆಹೋವ ದೇವರ ಮೇಲೆ ಭಯ ಇದ್ರೆ ಕೆಟ್ಟವ್ರ ಸಹವಾಸ ಮಾಡೋಕೆ ಹೋಗಲ್ಲ. ಕಾಂಗೋದಲ್ಲಿರೋ ಸಹೋದರ ಲಿಯೋ ಆ ಪಾಠ ಕಲಿತ್ರು. ಅವ್ರಿಗೆ ದೀಕ್ಷಾಸ್ನಾನ ಆಗಿ 4 ವರ್ಷ ಆಗಿತ್ತು. ಆಮೇಲೆ ಅವರು ಕೆಟ್ಟವ್ರ ಜೊತೆ ಸಹವಾಸ ಮಾಡೋಕೆ ಶುರುಮಾಡಿದ್ರು. ‘ನಾನು ಅವ್ರ ಜೊತೆ ಇದ್ದೀನಿ ಅಷ್ಟೆ. ಅವ್ರ ತರ ಕೆಟ್ಟ ಕೆಲಸ ಏನೂ ಮಾಡ್ತಾ ಇಲ್ವಲ್ಲಾ. ಹಾಗಾಗಿ ದೇವರ ವಿರುದ್ಧ ನಾನು ದೊಡ್ಡ ತಪ್ಪು ಮಾಡಿದ ಹಾಗೆ ಆಗಲ್ಲ’ ಅಂತ ಅವ್ರಿಗೆ ಅನಿಸ್ತು. ಆದ್ರೆ ಹೋಗ್ತಾ ಹೋಗ್ತಾ ಅವರೂ ಅವ್ರ ಫ್ರೆಂಡ್ಸ್ ತರಾನೇ ಆಗಿಬಿಟ್ರು. ಕುಡಿತದ ಚಟಕ್ಕೆ ಬಿದ್ದುಬಿಟ್ರು. ಅನೈತಿಕ ಕೆಲಸಗಳನ್ನ ಮಾಡಿದ್ರು. ಆದ್ರೆ ಆಮೇಲೆ ಅವರು ಅಪ್ಪಅಮ್ಮ ಬೈಬಲಿಂದ ಕಲಿಸಿದ ವಿಷ್ಯಗಳನ್ನ ನೆನಪಿಸ್ಕೊಂಡ್ರು. ಮುಂಚಿನ ತರ ತಾನು ಈಗ ಖುಷಿಯಾಗಿಲ್ಲ ಅಂತ ಅರ್ಥ ಮಾಡ್ಕೊಂಡ್ರು. ತಪ್ಪನ್ನ ತಿದ್ಕೊಳ್ಳೋಕೆ ಮನಸ್ಸು ಮಾಡಿದ್ರು. ಅವರು ಹಿರಿಯರ ಸಹಾಯ ಪಡ್ಕೊಂಡು ಯೆಹೋವನ ಹತ್ರ ವಾಪಸ್ ಬಂದ್ರು. ಈಗ ಅವರು ಹಿರಿಯನಾಗಿ, ವಿಶೇಷ ಪಯನೀಯರ್ ಆಗಿ ಸೇವೆ ಮಾಡ್ತಾ ಖುಷಿಯಾಗಿ ಇದ್ದಾರೆ.
6. ಯಾವ ವಿಷ್ಯದ ಬಗ್ಗೆ ನಾವೀಗ ಚರ್ಚೆ ಮಾಡ್ತೀವಿ?
6 ಈ ಸೈತಾನನ ಲೋಕದಲ್ಲಿ ಎಲ್ಲಿ ನೋಡಿದ್ರೂ ಅಶ್ಲೀಲ ವಿಷ್ಯಗಳು, ಲೈಂಗಿಕ ಅನೈತಿಕತೆ ತುಂಬ್ಕೊಂಡಿದೆ. (ಎಫೆ. 4:19) ಇಂಥ ಕೆಟ್ಟ ವಿಷ್ಯಗಳಿಂದ ನಾವು ದೂರ ಇರಬೇಕಾದ್ರೆ ಯೆಹೋವ ದೇವರ ಮೇಲೆ ಭಯ ಬೆಳೆಸ್ಕೊಬೇಕು. (ಜ್ಞಾನೋ. 16:6) ಅದಕ್ಕೆ ನಮಗೆ ಜ್ಞಾನೋಕ್ತಿ 9ನೇ ಅಧ್ಯಾಯ ಸಹಾಯ ಮಾಡುತ್ತೆ. ಅದ್ರಲ್ಲಿ ಗಂಡಸ್ರಿಗೆ, ಹೆಂಗಸ್ರಿಗೆ ಎಲ್ರಿಗೂ ಪಾಠಗಳಿವೆ. ಈ ಅಧ್ಯಾಯದಲ್ಲಿ ವಿವೇಕವನ್ನ ಒಂದು ಸ್ತ್ರೀಗೆ ಮತ್ತು ಮೂರ್ಖತನವನ್ನ ಇನ್ನೊಂದು ಸ್ತ್ರೀಗೆ ಹೋಲಿಸಲಾಗಿದೆ. (ರೋಮನ್ನರಿಗೆ 5:14; ಗಲಾತ್ಯ 4:24 ಹೋಲಿಸಿ.) ಈ ಇಬ್ರೂ ಸ್ತ್ರೀಯರು ಅನುಭವ ಇಲ್ಲದವ್ರನ್ನ ಅಥವಾ ‘ಬುದ್ಧಿ ಇಲ್ಲದವ್ರನ್ನ’ ‘ನನ್ನ ಮನೆಗೆ ಬನ್ನಿ, ಊಟ ಮಾಡಿ’ ಅಂತ ಕರೀತಾರೆ. (ಜ್ಞಾನೋ. 9:1, 5, 6, 13, 16, 17) ವಿವೇಕ ಅನ್ನೋ ಸ್ತ್ರೀಯ ಮನೆಗೆ ಹೋದ್ರೆ ಏನಾಗುತ್ತೆ, ಮೂರ್ಖತನ ಅನ್ನೋ ಸ್ತ್ರೀಯ ಮನೆಗೆ ಹೋದ್ರೆ ಏನಾಗುತ್ತೆ ಅಂತ ಮುಂದೆ ನೋಡೋಣ.
ಮೂರ್ಖತನ ಅನ್ನೋ ಸ್ತ್ರೀಯ ಮನೆಗೆ ಹೋಗಬೇಡಿ
7. ಜ್ಞಾನೋಕ್ತಿ 9:13-18ರಲ್ಲಿ ಹೇಳೋ ಹಾಗೆ ‘ಬುದ್ಧಿ ಇಲ್ಲದ ಸ್ತ್ರೀಯ’ ಮನೆಗೆ ಹೋದವ್ರಿಗೆ ಏನಾಗುತ್ತೆ? (ಚಿತ್ರನೂ ನೋಡಿ.)
7 “ಬುದ್ಧಿ ಇಲ್ಲದ ಸ್ತ್ರೀ” ಅನುಭವ ಇಲ್ಲದವ್ರನ್ನ “‘ಇಲ್ಲಿ ಬನ್ನಿ,’ ಹಬ್ಬ ಮಾಡೋಣ” ಅಂತ ಜೋರಾಗಿ ಕರೀತಾ ಇದ್ದಾಳೆ. (ಜ್ಞಾನೋಕ್ತಿ 9:13-18 ಓದಿ.) ಅವಳ ಮನೆಗೆ ಹೋದವ್ರಿಗೆ ಏನಾಗುತ್ತೆ? “ಅವಳ ಮನೆ ಸತ್ತವರ ಮನೆ” ಅಂತ ಅವ್ರಿಗೆ ಗೊತ್ತಾಗುತ್ತೆ. ಇದೇ ತರದ ಮಾತುಗಳನ್ನ ನೀವು ಜ್ಞಾನೋಕ್ತಿ ಪುಸ್ತಕದಲ್ಲಿ ಬೇರೆ ಕಡೆನೂ ಓದಿರಬಹುದು. ಅಲ್ಲಿ “ನಡತೆಗೆಟ್ಟ” ಮತ್ತು “ನಾಚಿಕೆಗೆಟ್ಟ” ಹೆಂಗಸಿನ ಬಗ್ಗೆ ಹೇಳುತ್ತೆ. “ಅವಳ ಮನೆಗೆ ಹೋದ್ರೆ ಮರಣದ ಬಾಯಿಗೆ” ಹೋಗ್ತೀರ ಅಂತ ಬೈಬಲ್ ಎಚ್ಚರಿಸುತ್ತೆ. (ಜ್ಞಾನೋ. 2:11-19) ಜ್ಞಾನೋಕ್ತಿ 5:3-10ರಲ್ಲಿ ಇನ್ನೊಬ್ಬ “ನಡತೆಗೆಟ್ಟ ಹೆಂಗಸಿನ” ಬಗ್ಗೆ ಹೇಳುತ್ತೆ. “ಅವಳ ಕಾಲು ಸಾವಿನ ಹತ್ರ ಓಡುತ್ತೆ.”
8. ನಾವು ಯಾವ ತೀರ್ಮಾನ ಮಾಡಬೇಕಾಗುತ್ತೆ?
8 “ಬುದ್ಧಿ ಇಲ್ಲದ ಸ್ತ್ರೀ” ಈ ತರ ಕರೆದಾಗ ಜನ ಏನು ಮಾಡ್ತಾರೆ? ಹೋಗ್ತಾರಾ ಇಲ್ವಾ ಅನ್ನೋದು ಅವ್ರಿಗೆ ಬಿಟ್ಟಿದ್ದು. ಇದೇ ತರ ಇವತ್ತು ಅನೈತಿಕ ವಿಷ್ಯಗಳನ್ನ ಮಾಡೋಕೆ ನಮ್ಮನ್ನ ಯಾರಾದ್ರೂ ಒತ್ತಾಯ ಮಾಡಿದಾಗ ಅಥವಾ ಇಂಟರ್ನೆಟ್ಟಲ್ಲಿ ಅಶ್ಲೀಲ ಚಿತ್ರಗಳು ನಮ್ಮ ಕಣ್ಮುಂದೆ ಬಂದಾಗ ನಾವು ತೀರ್ಮಾನ ಮಾಡಬೇಕಾಗುತ್ತೆ.
9-10. ನಾವು ಯಾಕೆ ಲೈಂಗಿಕ ಅನೈತಿಕತೆ ಮಾಡಬಾರದು?
9 ನಾವು ಲೈಂಗಿಕ ಅನೈತಿಕತೆ ಮಾಡದೆ ಇದ್ರೆ ನಮಗೇ ಒಳ್ಳೇದು. ಯಾಕಂದ್ರೆ ಕಾನೂನಿನ ಪ್ರಕಾರ ಮದುವೆ ಆಗಿರೋ ಗಂಡು-ಹೆಣ್ಣಿನ ಮಧ್ಯ ಮಾತ್ರ ಈ ಲೈಂಗಿಕ ಸಂಬಂಧ ಇರಬೇಕು ಅಂತ ಬೈಬಲ್ ಹೇಳುತ್ತೆ. ಅದ್ರಿಂದ ಸಿಗೋ ಆನಂದವನ್ನ ಚೈತನ್ಯ ಕೊಡೋ ನೀರಿಗೆ ಹೋಲಿಸುತ್ತೆ. (ಜ್ಞಾನೋ. 5:15-18) ಆದ್ರೆ ಈ “ಬುದ್ಧಿ ಇಲ್ಲದ ಸ್ತ್ರೀ” “ಕದ್ದು ಕುಡಿಯೋ ನೀರು ಸಿಹಿ ಆಗಿರುತ್ತೆ” ಅಂತ ಹೇಳ್ತಿದ್ದಾಳೆ. “ಕದ್ದು ಕುಡಿಯೋ ನೀರು” ಅಂದ್ರೇನು? ಅದನ್ನ ಲೈಂಗಿಕ ಅನೈತಿಕತೆಗೆ ಸೂಚಿಸ್ತಾ ಇರಬೇಕು. ಯಾಕಂದ್ರೆ ಒಬ್ಬ ಕಳ್ಳ ಯಾರಿಗೂ ಗೊತ್ತಾಗದ ಹಾಗೆ ಕದಿಯೋ ತರ ಜನ್ರು ಇದನ್ನ ಕದ್ದುಮುಚ್ಚಿ ಮಾಡ್ತಾರೆ. ಆದ್ರೆ ಇದನ್ನ ಮಾಡುವಾಗ ಯಾರ ಕೈಗೂ ಸಿಕ್ಕಿಹಾಕೊಳ್ಳಲ್ಲ ಅಂತ ಅವರು ನೆನಸೋದ್ರಿಂದ ಅದು ಅವ್ರಿಗೆ ಸಿಹಿ ಆಗಿರುತ್ತೆ. ಆದ್ರೆ ನಿಜ ಹೇಳಬೇಕಂದ್ರೆ, ಅದು “ಸಿಹಿ” ಅಲ್ಲ ಕಹಿ! ಯಾಕಂದ್ರೆ ಯೆಹೋವ ಎಲ್ಲಾನೂ ನೋಡ್ತಾ ಇದ್ದಾನೆ. ಇದ್ರಿಂದ ಆತನ ಜೊತೆ ಇರೋ ಸಂಬಂಧ ಹಾಳಾಗ್ತಾ ಇದೆ. ಇದಕ್ಕಿಂತ ದೊಡ್ಡ ನಷ್ಟ ಬೇರೇನಿದೆ ಹೇಳಿ. (1 ಕೊರಿಂ. 6:9, 10) ಇದ್ರ ಜೊತೆ ಇನ್ನೂ ತುಂಬ ತೊಂದ್ರೆಗಳನ್ನ ಅನುಭವಿಸಬೇಕಾಗುತ್ತೆ. ಅದೇನು?
10 ಲೈಂಗಿಕ ಅನೈತಿಕತೆ ಮಾಡೋದ್ರಿಂದ ತುಂಬ ಅವಮಾನ ಅನುಭವಿಸಬೇಕಾಗುತ್ತೆ. ಅವ್ರ ಮೇಲೆ ಅವ್ರಿಗೇ ಅಸಹ್ಯ ಅನಿಸ್ತಾ ಇರುತ್ತೆ. ಮದುವೆಗೆ ಮುಂಚೆನೇ ಹುಡುಗಿರು ಗರ್ಭಿಣಿ ಆಗಿಬಿಡ್ತಾರೆ. ಕುಟುಂಬಗಳು ಒಡೆದು ಹೋಗುತ್ತೆ. ಇದಷ್ಟೇ ಅಲ್ಲ, ಅವರು ಯೆಹೋವನ ಕಣ್ಣಲ್ಲಿ ಸಾಯೋದಲ್ಲದೆ ನಿಜವಾಗ್ಲೂ ಪ್ರಾಣ ಕಳ್ಕೊಳ್ತಾರೆ. ಬೇರೆ ಬೇರೆ ರೋಗಗಳು ಬಂದು ಬೇಗ ಜೀವ ಕಳ್ಕೊಳ್ತಾರೆ. (ಜ್ಞಾನೋ. 7:23, 26) ಹಾಗಾಗಿ “ಅವಳ ಅತಿಥಿಗಳು ಸ್ಮಶಾನ ಸೇರಿದ್ದಾರೆ” ಅಂತ 9ನೇ ಅಧ್ಯಾಯದ 18ನೇ ವಚನ ಹೇಳೋದು ನಿಜಾನೇ. ಬುದ್ಧಿ ಇಲ್ಲದ ಸ್ತ್ರೀಯ ‘ಮನೆಗೆ’ ಹೋಗದೆ ಇರೋದು ಎಷ್ಟು ಒಳ್ಳೇದು ಅಂತ ಇದ್ರಿಂದ ಗೊತ್ತಾಗುತ್ತೆ. ಇಷ್ಟೆಲ್ಲ ಆಗುತ್ತೆ ಅಂತ ಗೊತ್ತಿದ್ರೂ ಜನ ಇದನ್ನ ಯಾಕೆ ಮಾಡ್ತಾರೆ?—ಜ್ಞಾನೋ. 9:13-18.
11. ನಾವು ಯಾಕೆ ಅಶ್ಲೀಲ ಚಿತ್ರಗಳನ್ನ ನೋಡಬಾರದು?
11 ಇವತ್ತು ಅಶ್ಲೀಲ ಚಿತ್ರಗಳನ್ನ ನೋಡೋ ಚಟಕ್ಕೆ ತುಂಬ ಜನ ಬಲಿ ಆಗಿದ್ದಾರೆ. ಇದ್ರಿಂದ ಏನೂ ಕೆಟ್ಟದಾಗಲ್ಲ ಅಂತ ಅವರು ನೆನಸ್ತಾರೆ. ಆದ್ರೆ ನಿಜ ಏನಂದ್ರೆ, ಇದ್ರಿಂದ ತುಂಬ ಕೆಟ್ಟದಾಗುತ್ತೆ. ತಮ್ಮ ಮೇಲೆ, ಬೇರೆಯವ್ರ ಮೇಲೆ ಗೌರವ ಕಳ್ಕೊಳ್ತಾರೆ. ಅಷ್ಟೇ ಅಲ್ಲ, ಒಂದು ಸಲ ಅವರು ಆ ಚಟಕ್ಕೆ ಬಿದ್ರೆ ಅದ್ರಿಂದ ಹೊರಗೆ ಬರೋಕೆ ತುಂಬ ಕಷ್ಟ ಪಡ್ತಾರೆ. ಅಶ್ಲೀಲ ಚಿತ್ರಗಳು ಮನಸ್ಸಲ್ಲಿ ಹಾಗೇ ಉಳಿದುಬಿಡುತ್ತೆ. ಅದನ್ನ ಅಳಿಸಿಹಾಕೋದು ಅಷ್ಟು ಸುಲಭ ಅಲ್ಲ. ಅವನ್ನ ನೋಡಿದ್ರೆ ತಪ್ಪಾದ ಆಸೆಗಳು ಕಮ್ಮಿ ಆಗಲ್ಲ. ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗಿರುತ್ತೆ. (ಕೊಲೊ. 3:5; ಯಾಕೋ. 1:14, 15) ಅಶ್ಲೀಲ ಚಿತ್ರಗಳನ್ನ ನೋಡ್ತಿರೋ ಎಷ್ಟೋ ಜನ ಅನೈತಿಕ ವಿಷ್ಯಗಳನ್ನ ಮಾಡಿದ್ದಾರೆ.
12. ಮನಸ್ಸಿನ ಚಿಕ್ಕ ಮೂಲೆಯಲ್ಲೂ ಕೆಟ್ಟ ಆಸೆ ಬರಬಾರದು ಅಂದ್ರೆ ನಾವೇನು ಮಾಡಬೇಕು?
12 ಇಂಟರ್ನೆಟ್ಟಲ್ಲಿ ಅಶ್ಲೀಲ ಚಿತ್ರಗಳು ದಿಢೀರಂತ ಬಂದಾಗ ನಾವೇನು ಮಾಡಬೇಕು? ಅದನ್ನ ನೋಡ್ತಾ ಇರಬಾರದು. ತಕ್ಷಣ ಕಣ್ಮುಚ್ಚಿಬಿಡಬೇಕು. ಯೆಹೋವನ ಜೊತೆ ನಮಗಿರೋ ಸ್ನೇಹ ಒಂದು ದೊಡ್ಡ ಆಸ್ತಿ ಇದ್ದ ಹಾಗೆ. ಅದಕ್ಕೆ ಬೆಲೆಕಟ್ಟಕ್ಕಾಗಲ್ಲ. ಅದನ್ನ ನಾವು ಮನಸ್ಸಲ್ಲಿ ಇಟ್ರೆ ಇದನ್ನ ಮಾಡೋಕೆ ನಮಗೆ ಸುಲಭ ಆಗುತ್ತೆ. ಕೆಲವು ಚಿತ್ರಗಳು ಅಶ್ಲೀಲವಾಗಿ ಇಲ್ಲದಿದ್ರೂ ನಮ್ಮಲ್ಲಿರೋ ಲೈಂಗಿಕ ಆಸೆಗಳನ್ನ ಕೆರಳಿಸುತ್ತೆ. ಅಂಥದ್ದನ್ನೂ ನಾವು ನೋಡಬಾರದು. ಯಾಕೆ? ಯಾಕಂದ್ರೆ ಅನೈತಿಕ ವಿಷ್ಯಗಳನ್ನ ಮಾಡಬೇಕು ಅನ್ನೋ ಯೋಚ್ನೆ ನಮ್ಮ ಮನಸ್ಸಿನ ಒಂದು ಚಿಕ್ಕ ಮೂಲೆಯಲ್ಲೂ ಬರಬಾರದು. ಅದಕ್ಕೆ ನಾವದನ್ನ ನೋಡಬಾರದು. (ಮತ್ತಾ. 5:28, 29) ಥೈಲ್ಯಾಂಡ್ನಲ್ಲಿ ಹಿರಿಯರಾಗಿ ಸೇವೆ ಮಾಡ್ತಿರೋ ಡೇವಿಡ್ ಹೀಗೆ ಹೇಳ್ತಾರೆ: “‘ನಾನು ನೋಡ್ತಿರೋ ಚಿತ್ರ ಅಶ್ಲೀಲವಾಗಿ ಇಲ್ಲದೆ ಇದ್ರೂ ನಾನು ಅದನ್ನ ನೋಡ್ತಾನೇ ಇದ್ರೆ ಯೆಹೋವ ಇಷ್ಟಪಡ್ತಾನಾ’ ಅಂತ ನನ್ನನ್ನೇ ಕೇಳ್ಕೊಳ್ತೀನಿ. ಇದ್ರಿಂದ ನನಗೆ ತಕ್ಷಣ ಸರಿಯಾಗಿ ಇರೋದನ್ನ ಮಾಡೋಕೆ ಸಹಾಯ ಆಗಿದೆ.”
13. ನಾವು ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡಬೇಕಂದ್ರೆ ನಮ್ಮಲ್ಲಿ ಏನಿರಬೇಕು?
13 ಯೆಹೋವನ ಮನಸ್ಸಿಗೆ ಎಲ್ಲಿ ನೋವು ಮಾಡಿಬಿಡ್ತೀವೋ ಅನ್ನೋ ಭಯ ನಮ್ಮಲ್ಲಿದ್ರೆ ನಾವು ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತೀವಿ. ಯಾಕಂದ್ರೆ ಯೆಹೋವನ ಭಯನೇ “ಜ್ಞಾನದ ಆರಂಭ.” (ಜ್ಞಾನೋ. 9:10) ಜ್ಞಾನ ಅಥವಾ ‘ನಿಜ ವಿವೇಕವನ್ನ’ ಜ್ಞಾನೋಕ್ತಿ 9ನೇ ಅಧ್ಯಾಯದಲ್ಲಿ ಒಬ್ಬ ಸ್ತ್ರೀಗೆ ಹೋಲಿಸಿದೆ.
“ನಿಜ ವಿವೇಕ” ಅನ್ನೋ ಸ್ತ್ರೀಯ ಮನೆಗೆ ಹೋಗಿ
14. ಜ್ಞಾನೋಕ್ತಿ 9:1-6ರಲ್ಲಿ ನಮಗೆ ಯಾವ ಆಮಂತ್ರಣ ಇದೆ?
14 ಜ್ಞಾನೋಕ್ತಿ 9:1-6 ಓದಿ. ನಿಜ ವಿವೇಕ ಯೆಹೋವನಿಂದ ಬರುತ್ತೆ. ಅದನ್ನ ಪಡ್ಕೊಳ್ಳೋಕೆ ನಮ್ಮ ಸೃಷ್ಟಿಕರ್ತ ನಮ್ಮನ್ನ ಆಮಂತ್ರಿಸ್ತಿದ್ದಾನೆ. (ಜ್ಞಾನೋ. 2:6; ರೋಮ. 16:27) ಈ ವಚನಗಳಲ್ಲಿ ಒಂದು ದೊಡ್ಡ ಮನೆಯ ಉದಾಹರಣೆ ಇದೆ. ಅದನ್ನ 7 ಕಂಬಗಳ ಮೇಲೆ ಕಟ್ಟಲಾಗಿದೆ. ವಿವೇಕ ಪಡ್ಕೊಳ್ಳೋಕೆ ಇಷ್ಟ ಇರೋ ಎಲ್ರನ್ನೂ “ಬನ್ನಿ” ಅಂತ ಯೆಹೋವ ಕರೀತಾ ಇದ್ದಾನೆ. ಇದ್ರಿಂದ ಆತನು ಎಷ್ಟು ಧಾರಾಳ ಮನಸ್ಸಿನ ದೇವರು ಅಂತ ಗೊತ್ತಾಗುತ್ತೆ.
15. ಯೆಹೋವ ದೇವರು ನಮಗೆ ಏನು ಮಾಡೋಕೆ ಹೇಳ್ತಿದ್ದಾನೆ?
15 ಯೆಹೋವ ದೇವರು ಎಷ್ಟೋ ಒಳ್ಳೇ ವಿಷ್ಯಗಳನ್ನ ನಮಗೆ ಧಾರಾಳವಾಗಿ ಕೊಟ್ಟಿದ್ದಾನೆ. ಇದು ಜ್ಞಾನೋಕ್ತಿ 9ನೇ ಅಧ್ಯಾಯದಲ್ಲಿ “ನಿಜ ವಿವೇಕ” ಅನ್ನೋ ಸ್ತ್ರೀ ಏನೆಲ್ಲ ಮಾಡಿದಳೋ ಅದ್ರಿಂದ ಗೊತ್ತಾಗುತ್ತೆ.c ಅವಳು ಮಾಂಸದ ಅಡಿಗೆ ಮಾಡಿ, ದ್ರಾಕ್ಷಾಮದ್ಯ ರೆಡಿ ಮಾಡಿ, ಊಟದ ಮೇಜನ್ನ ಸಿದ್ಧ ಮಾಡಿದಳು. (ಜ್ಞಾನೋ. 9:1, 2) ಅಷ್ಟೇ ಅಲ್ಲ, 4 ಮತ್ತು 5ನೇ ವಚನ ಹೇಳೋ ಹಾಗೆ ಅವಳು “ಬುದ್ಧಿ ಇಲ್ಲದವರಿಗೆ . . . ‘ಬನ್ನಿ, ನನ್ನ ರೊಟ್ಟಿ ತಿನ್ನಿ’” ಅಂತ ಕರೀತಾಳೆ. ನಾವು ಯಾಕೆ ನಿಜ ವಿವೇಕದ ಮನೆಗೆ ಹೋಗಿ ಅವಳು ಕೊಡೋ ಊಟ ತಿನ್ನಬೇಕು? ಯಾಕಂದ್ರೆ ಯೆಹೋವ ದೇವರಿಗೆ ನಾವು ಚೆನ್ನಾಗಿ ಇರಬೇಕು, ವಿವೇಕಿಗಳಾಗಬೇಕು ಅಂತ ಆಸೆ. ತಪ್ಪು ಮಾಡಿ ಕಷ್ಟ ಅನುಭವಿಸಿ ನಾವು ಪಾಠ ಕಲಿಬೇಕಂತ ಯೆಹೋವ ಇಷ್ಟಪಡಲ್ಲ. ಅದಕ್ಕೆ ‘ಆತನು ತನ್ನ ಭಂಡಾರದಲ್ಲಿ ಪ್ರಾಮಾಣಿಕರಿಗೆ ವಿವೇಕ ಕೂಡಿಸಿಟ್ಟಿದ್ದಾನೆ.’ (ಜ್ಞಾನೋ. 2:7) ಯೆಹೋವನ ಮೇಲೆ ನಮಗೆ ಭಯ ಇದ್ರೆ ಆತನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಪ್ರಯತ್ನ ಮಾಡ್ತೀವಿ. ಆಗ ಆತನು ಕೊಡೋ ಬುದ್ಧಿವಾದನ ಕೇಳ್ತೀವಿ. ಅದನ್ನ ಮನಸ್ಸಾರೆ ಪಾಲಿಸ್ತೀವಿ.—ಯಾಕೋ. 1:25.
16. (ಎ) ದೇವರ ಮೇಲೆ ಭಯ ಇದ್ದಿದ್ರಿಂದ ಆ್ಯಲನ್ ಹೇಗೆ ಸರಿಯಾದ ತೀರ್ಮಾನ ಮಾಡಿದ್ರು? (ಬಿ) ಇದ್ರಿಂದ ಏನಾಯ್ತು?
16 ದೇವರ ಮೇಲೆ ಭಯ ಇದ್ರೆ ನಮಗೆ ಸರಿಯಾದ ತೀರ್ಮಾನ ಮಾಡಕ್ಕಾಗುತ್ತೆ. ಅದಕ್ಕೆ ಸಹೋದರ ಆ್ಯಲನ್ ಅವ್ರ ಉದಾಹರಣೆ ನೋಡಿ. ಅವರು ಹಿರಿಯರಾಗಿದ್ದಾರೆ ಮತ್ತು ಒಬ್ಬ ಸ್ಕೂಲ್ ಟೀಚರ್ ಆಗಿದ್ದಾರೆ. ಅವರು ಹೇಳೋದು “ನಮ್ಮ ಸ್ಕೂಲಲ್ಲಿರೋ ಬೇರೆ ಟೀಚರ್ಸ್ ಅಶ್ಲೀಲ ಚಲನಚಿತ್ರಗಳನ್ನ ನೋಡೋದ್ರಿಂದ ಲೈಂಗಿಕ ಶಿಕ್ಷಣ ಸಿಗುತ್ತೆ ಅಂತ ಹೇಳ್ತಾರೆ.” ಇದು ತಪ್ಪು ಅಂತ ಆ್ಯಲನ್ಗೆ ಗೊತ್ತಿತ್ತು. “ನನಗೆ ದೇವರ ಮೇಲೆ ಭಯ ಇದ್ದಿದ್ರಿಂದ ನಾನು ಅಂಥ ಚಲನಚಿತ್ರಗಳನ್ನ ನೋಡೋಕೆ ಹೋಗಲಿಲ್ಲ. ನಾನು ಯಾಕೆ ಅವುಗಳನ್ನ ನೋಡಲ್ಲ ಅಂತಾನೂ ಆ ಟೀಚರ್ಸ್ಗೆ ಹೇಳಿದೆ” ಅಂತ ಸಹೋದರ ಆ್ಯಲನ್ ಹೇಳ್ತಾರೆ. “ವಿವೇಚನೆಯ ದಾರಿಯಲ್ಲಿ ಮುಂದಕ್ಕೆ ಹೋಗಿ” ಅಂತ “ನಿಜ ವಿವೇಕ” ಹೇಳೋ ಮಾತನ್ನ ಆ ಸಹೋದರ ಪಾಲಿಸಿದ್ರು. (ಜ್ಞಾನೋ. 9:6) ಅವರು ಈ ತರ ಮಾಡಿದ್ದು ಕೆಲವು ಟೀಚರ್ಸ್ಗೆ ಇಷ್ಟ ಆಯ್ತು. ಅವರು ಈಗ ಬೈಬಲ್ ಕಲೀತಾ ಇದ್ದಾರೆ. ಕೂಟಗಳಿಗೂ ಬರ್ತಿದ್ದಾರೆ.
17-18. “ನಿಜ ವಿವೇಕ” ಅನ್ನೋ ಸ್ತ್ರೀಯ ಮನೆಗೆ ಹೋಗುವವ್ರಿಗೆ ಈಗ ಮತ್ತು ಮುಂದೆ ಯಾವ ಆಶೀರ್ವಾದ ಸಿಗುತ್ತೆ? (ಚಿತ್ರನೂ ನೋಡಿ.)
17 ಯೆಹೋವ ದೇವರಿಗೆ ನಮ್ಮ ಭವಿಷ್ಯ ಚೆನ್ನಾಗಿರಬೇಕು ಅಂತ ಇಷ್ಟ. ಅದಕ್ಕೆ ನಾವು ಏನು ಮಾಡಬೇಕು ಅಂತ ಇಬ್ರು ಸ್ತ್ರೀಯರ ಉದಾಹರಣೆ ಬಳಸಿ ಅರ್ಥ ಮಾಡಿಸ್ತಿದ್ದಾನೆ. “ಬುದ್ಧಿ ಇಲ್ಲದ ಸ್ತ್ರೀ” ಜೋರಾಗಿ ಕರೆದಾಗ ಅವಳ ಮನೆಗೆ ಹೋಗೋರು ಕದ್ದುಮುಚ್ಚಿ ಮಾಡೋ ಕೆಟ್ಟ ಕೆಲಸಗಳಿಂದ ಖುಷಿ ಸಿಗುತ್ತೆ ಅಂತ ಅಂದ್ಕೊಂಡಿದ್ದಾರೆ. ಅದನ್ನ “ಸಿಹಿ” ಅಂತ ಅಂದ್ಕೊಂಡಿದ್ದಾರೆ. ಆದ್ರೆ ನಿಜ ಹೇಳಬೇಕಂದ್ರೆ ಅವರು ಬರೀ ಆ ಕ್ಷಣದ ಬಗ್ಗೆ ಮಾತ್ರ ಯೋಚ್ನೆ ಮಾಡ್ತಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡ್ತಿಲ್ಲ. ಇದ್ರಿಂದ ಅವರು ಗ್ಯಾರಂಟಿ ‘ಸ್ಮಶಾನ ಸೇರ್ತಾರೆ.’—ಜ್ಞಾನೋ. 9:13, 17, 18.
18 “ನಿಜ ವಿವೇಕ” ಅನ್ನೋ ಸ್ತ್ರೀಯ ಮನೆಗೆ ಹೋದ್ರೆ ನಮ್ಮ ಭವಿಷ್ಯ ತುಂಬ ಚೆನ್ನಾಗಿರುತ್ತೆ. ಯಾಕಂದ್ರೆ ಆ ಸ್ತ್ರೀ ತನ್ನ ಅತಿಥಿಗಳಿಗೋಸ್ಕರ ಆರೋಗ್ಯಕರವಾದ ಊಟ ರೆಡಿ ಮಾಡಿ ಇಟ್ಟಿದ್ದಾಳೆ. ಇದ್ರಿಂದ ನಾವು ಯೆಹೋವ ದೇವರಿಗೆ ಹತ್ರ ಆಗ್ತೀವಿ. (ಯೆಶಾ. 65:13) ಅದಕ್ಕೆ ಯೆಹೋವ “ನಾನು ಹೇಳೋದನ್ನ ಶ್ರದ್ಧೆಯಿಂದ ಕೇಳಿಸ್ಕೊಳ್ಳಿ, ಒಳ್ಳೇ ಆಹಾರ ತಿನ್ನಿ, ಆಗ ನೀವು ನಿಜವಾದ ಪೌಷ್ಠಿಕ ಆಹಾರ ತಿಂದು ಅತ್ಯಾನಂದ ಪಡ್ತೀರ” ಅಂತ ಪ್ರವಾದಿ ಯೆಶಾಯನ ಮುಖಾಂತರ ಹೇಳಿದ್ದಾನೆ. (ಯೆಶಾ. 55:1, 2) ಹಾಗಾಗಿ ನಾವು, ಯೆಹೋವ ಏನನ್ನ ಇಷ್ಟಪಡ್ತಾನೋ ಅದನ್ನ ಪ್ರೀತಿಸೋಕೆ ಮತ್ತು ಏನನ್ನ ಇಷ್ಟಪಡಲ್ವೋ ಅದನ್ನ ದ್ವೇಷಿಸೋಕೆ ಕಲೀತಾ ಇದ್ದೀವಿ. (ಕೀರ್ತ. 97:10) ಅಷ್ಟೇ ಅಲ್ಲ, “ನಿಜ ವಿವೇಕ” ಹೇಳೋ ಮಾತನ್ನ ಕೇಳಿ ಅಂತ ಬೇರೆಯವ್ರನ್ನೂ ಪ್ರೋತ್ಸಾಹಿಸ್ತಾ ಇದ್ದೀವಿ. ಇದು ಹೇಗಿದೆ ಅಂದ್ರೆ “ಅನುಭವ ಇಲ್ಲದವರು ಇಲ್ಲಿಗೆ ಬರಲಿ” ಅಂತ ‘ಪಟ್ಟಣದಲ್ಲಿ ಎತ್ತರವಾದ ಜಾಗದಲ್ಲಿ’ ನಿಂತ್ಕೊಂಡು ಜನ್ರನ್ನ ಕರೆದ ಹಾಗಿದೆ. ಇದನ್ನ ಕೇಳಿಸ್ಕೊಂಡು ಬಂದವ್ರಿಗೂ ನಮಗೂ ತುಂಬ ಪ್ರಯೋಜನ ಇದೆ. ಅಷ್ಟೇ ಅಲ್ಲ, ನಾವು “ವಿವೇಚನೆಯ ದಾರಿಯಲ್ಲಿ ಮುಂದಕ್ಕೆ” ಹೋಗ್ತಾ ಇದ್ರೆ ಶಾಶ್ವತ ‘ಜೀವನೂ’ ಸಿಗುತ್ತೆ.—ಜ್ಞಾನೋ. 9:3, 4, 6.
19. ಪ್ರಸಂಗಿ 12:13, 14 ಹೇಳೋ ಹಾಗೆ ನಾವೆಲ್ರೂ ಏನು ಮಾಡೋಣ? (“ದೇವರ ಮೇಲೆ ನಮಗೆ ಭಯ ಇದ್ರೆ . . . ” ಅನ್ನೋ ಚೌಕ ನೋಡಿ.)
19 ಪ್ರಸಂಗಿ 12:13, 14 ಓದಿ. ನಾವು ಯಾವಾಗ್ಲೂ ಯೆಹೋವನಿಗೆ ಭಯಪಡೋಣ. ಆಗ ನಮ್ಮ ಹೃದಯನ ಕಾಪಾಡ್ಕೊಳ್ತೀವಿ. ಇದ್ರಿಂದ ಈ ಕೆಟ್ಟ ಲೋಕದಲ್ಲೂ ನೈತಿಕವಾಗಿ ಶುದ್ಧವಾಗಿ ಇರ್ತೀವಿ. ಯೆಹೋವ ದೇವರಿಗೆ ಫ್ರೆಂಡಾಗೇ ಇರ್ತೀವಿ. ಅಷ್ಟೇ ಅಲ್ಲ, ‘ನಿಜ ವಿವೇಕದಿಂದ’ ಪ್ರಯೋಜನ ಪಡ್ಕೊಳ್ಳೋಕೆ ಬೇರೆಯವ್ರಿಗೂ ಸಹಾಯ ಮಾಡ್ತೀವಿ.
ಗೀತೆ 61 ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?
a ನಾವೆಲ್ರೂ ಯೆಹೋವನ ಮೇಲೆ ಭಯ ಬೆಳೆಸ್ಕೊಬೇಕು. ದೇವಭಯ ಇದ್ರೆ ನಾವು ನಮ್ಮ ಹೃದಯನ ಕಾಪಾಡ್ಕೊಳ್ತೀವಿ. ಲೈಂಗಿಕ ಅನೈತಿಕತೆ, ಅಶ್ಲೀಲ ವಿಷ್ಯಗಳಿಂದ ದೂರ ಇರ್ತೀವಿ. ಜ್ಞಾನೋಕ್ತಿ 9ನೇ ಅಧ್ಯಾಯದಲ್ಲಿ ವಿವೇಕಕ್ಕೂ ಮೂರ್ಖತನಕ್ಕೂ ಇರೋ ವ್ಯತ್ಯಾಸನ ತಿಳಿಸಲಾಗಿದೆ. ಅವೆರಡನ್ನೂ ಒಬ್ಬೊಬ್ಬ ಸ್ತ್ರೀಗೆ ಹೋಲಿಸಲಾಗಿದೆ. ಈ ಅಧ್ಯಾಯದಿಂದ ಈಗ್ಲೂ ಮುಂದಕ್ಕೂ ನಮಗೆ ತುಂಬ ಪ್ರಯೋಜನ ಇದೆ.
b ಕೆಲವ್ರ ಹೆಸ್ರು ಬದಲಾಗಿದೆ.
c ಹೀಬ್ರುನಲ್ಲಿ, ವಿವೇಕಕ್ಕೆ ಸ್ತ್ರೀಲಿಂಗವನ್ನ ಬಳಸಲಾಗಿದೆ. ಅದನ್ನ ಒಬ್ಬ ಸ್ತ್ರೀ ತರ ಚಿತ್ರೀಕರಿಸಲಾಗಿದೆ.