ನಿಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸಿರಿ
“ಯೆಹೋವನೇ ವಿವೇಕವನ್ನು ಕೊಡುವಾತನು; ಆತನ ಬಾಯಿಂದ ಜ್ಞಾನವೂ ವಿವೇಚನಾಶಕ್ತಿಯೂ ಹೊರಟುಬರುತ್ತವೆ.”—ಜ್ಞಾನೋಕ್ತಿ 2:6, NW.
1. ನಾವು ನಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ಹೇಗೆ ತಿರುಗಿಸಸಾಧ್ಯವಿದೆ?
ಯೆಹೋವನು ನಮ್ಮ ಮಹಾ ಉಪದೇಶಕನಾಗಿದ್ದಾನೆ. (ಯೆಶಾಯ 30:20, 21) ಆದರೆ ಆತನ ವಾಕ್ಯದಲ್ಲಿ ಪ್ರಕಟಪಡಿಸಲ್ಪಟ್ಟಿರುವ “ದೈವಜ್ಞಾನ”ದಿಂದ ಪ್ರಯೋಜನಪಡೆಯಲಿಕ್ಕಾಗಿ ನಾವು ಏನು ಮಾಡತಕ್ಕದ್ದು? ಭಾಗಶಃ ನಾವು ‘ನಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸ’ತಕ್ಕದ್ದು—ಈ ಗುಣವನ್ನು ಪಡೆದು, ಪ್ರದರ್ಶಿಸಲು ಒಂದು ಹೃತ್ಪೂರ್ವಕ ಬಯಕೆಯನ್ನು ಪಡೆದಿರಬೇಕು. ಇದಕ್ಕಾಗಿ ನಾವು ದೇವರ ಕಡೆಗೆ ನೋಡಬೇಕು, ಯಾಕಂದರೆ ಜ್ಞಾನಿಯು ಹೇಳಿದ್ದು: “ಯೆಹೋವನೇ ವಿವೇಕವನ್ನು ಕೊಡುವಾತನು; ಆತನ ಬಾಯಿಂದ ಜ್ಞಾನವೂ ವಿವೇಚನಾಶಕ್ತಿಯೂ ಹೊರಟುಬರುತ್ತವೆ” (NW). (ಜ್ಞಾನೋಕ್ತಿ 2:1-6) ಜ್ಞಾನ, ವಿವೇಕ ಮತ್ತು ವಿವೇಚನಾಶಕ್ತಿಗಳು ಏನಾಗಿವೆ?
2. (ಎ) ಜ್ಞಾನ ಎಂದರೇನು? (ಬಿ) ನೀವು ವಿವೇಕದ ಅರ್ಥವನ್ನು ಹೇಗೆ ನಿರೂಪಿಸುವಿರಿ? (ಸಿ) ವಿವೇಚನಾಶಕ್ತಿ ಅಂದರೇನು?
2 ಜ್ಞಾನವು ಅನುಭವ, ಅವಲೋಕನೆ, ಅಥವಾ ಅಧ್ಯಯನದ ಮೂಲಕ ಗಳಿಸಲ್ಪಟ್ಟಿರುವ ವಾಸ್ತವಾಂಶಗಳೊಂದಿಗೆ ಇರುವ ಪರಿಚಯವಾಗಿದೆ. ವಿವೇಕವು, ಜ್ಞಾನವನ್ನು ಕಾರ್ಯಕ್ಕೆ ಹಾಕುವ ಸಾಮರ್ಥ್ಯವಾಗಿದೆ. (ಮತ್ತಾಯ 11:19) ಇಬ್ಬರು ಸ್ತ್ರೀಯರು ಒಂದೇ ಮಗುವನ್ನು ತಮ್ಮದೆಂದು ಹೇಳಿಕೊಂಡಾಗ, ಮತ್ತು ರಾಜನಾದ ಸೊಲೊಮೋನನು ಆ ವಾಗ್ವಾದವನ್ನು ಬಗೆಹರಿಸಲಿಕ್ಕಾಗಿ ಒಬ್ಬ ತಾಯಿಗೆ ತನ್ನ ಮಗುವಿನ ಕಡೆಗಿರುವ ನಿಷ್ಠೆಯ ಕುರಿತಾದ ತನ್ನ ಜ್ಞಾನವನ್ನು ಉಪಯೋಗಿಸಿದಾಗ, ವಿವೇಕವನ್ನು ಪ್ರದರ್ಶಿಸಿದನು. (1 ಅರಸುಗಳು 3:16-28) ವಿವೇಚನಾಶಕ್ತಿಯು, “ವಿಮರ್ಶೆಯ ತೀಕ್ಷ್ಣತೆ” ಆಗಿದೆ. “ಯಾವುದರ ಮೂಲಕ ಮನಸ್ಸು, ಒಂದು ವಿಷಯದಿಂದ ಇನ್ನೊಂದನ್ನು ಪ್ರತ್ಯೇಕಿಸುತ್ತದೊ ಆ ಮನಸ್ಸಿನ ಶಕ್ತಿ ಅಥವಾ ಸಾಮರ್ಥ್ಯ” ಅದಾಗಿದೆ. (ವೆಬ್ಸ್ಟರ್ಸ್ ಯೂನಿವರ್ಸಲ್ ಡಿಕ್ಷನರಿ) ನಾವು ನಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸುವಲ್ಲಿ, ಯೆಹೋವನು ಅದನ್ನು ನಮಗೆ ತನ್ನ ಮಗನ ಮೂಲಕ ಕೊಡುವನು. (2 ತಿಮೊಥೆಯ 2:1, 7) ಆದರೆ ವಿವೇಚನಾಶಕ್ತಿಯು ಜೀವಿತದ ವಿವಿಧ ಅಂಶಗಳನ್ನು ಹೇಗೆ ಬಾಧಿಸಬಲ್ಲದು?
ವಿವೇಚನಾಶಕ್ತಿ ಮತ್ತು ನಮ್ಮ ನುಡಿ
3. ಜ್ಞಾನೋಕ್ತಿ 11:12, 13ನ್ನು ನೀವು ಹೇಗೆ ವಿವರಿಸುವಿರಿ ಮತ್ತು “ಬುದ್ಧಿಹೀನ”ರಾಗಿರುವುದರ ಅರ್ಥವೇನು?
3 “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆಯೆಂಬುದನ್ನು ಗ್ರಹಿಸುವಂತೆ, ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುತ್ತದೆ. (ಪ್ರಸಂಗಿ 3:7) ನಾವೇನನ್ನು ಹೇಳುತ್ತೇವೊ ಅದರ ಕುರಿತಾಗಿ ಜಾಗರೂಕರಾಗಿರುವಂತೆಯೂ ಈ ಗುಣವು ಸಾಧ್ಯಮಾಡುತ್ತದೆ. ಜ್ಞಾನೋಕ್ತಿ 11:12, 13 ತಿಳಿಸುವುದು: “ನೆರೆಯವನನ್ನು ಹೀನೈಸುವವನು ಬುದ್ಧಿಹೀನನು; ವಿವೇಕಿಯು [“ವಿಶಾಲವಾದ ವಿವೇಚನಾಶಕ್ತಿಯುಳ್ಳವನು,” NW] ಬಾಯಿಬಿಡನು. ಚಾಡಿಕೋರನು ಗುಟ್ಟು ರಟ್ಟುಮಾಡುವನು; ನಂಬಿಗಸ್ತನು ಸಂಗತಿಯನ್ನು ಗುಪ್ತಪಡಿಸುವನು.” ಹೌದು, ಇನ್ನೊಬ್ಬ ವ್ಯಕ್ತಿಯನ್ನು ಹೀನೈಸುವ ಒಬ್ಬ ಪುರುಷನು ಅಥವಾ ಸ್ತ್ರೀಯು, “ಬುದ್ಧಿಹೀನ”ರು. ನಿಘಂಟುಕಾರರಾದ ವಿಲ್ಹೆಮ್ ಗೆಸೆನ್ಯಸ್ರವರಿಗನುಸಾರ, ಅಂತಹ ಒಬ್ಬ ವ್ಯಕ್ತಿಗೆ, “ತಿಳಿವಳಿಕೆಯ ಕೊರತೆ” ಇದೆ. ಅವನಿಗೆ ಅಥವಾ ಅವಳಿಗೆ ಒಳ್ಳೆಯ ವಿಮರ್ಶನಾಶಕ್ತಿಯ ಕೊರತೆಯಿದೆ. “ಬುದ್ಧಿ” ಎಂಬ ಪದದ ಬಳಕೆಯು ತೋರಿಸುತ್ತದೇನೆಂದರೆ, ಅಂತರಂಗದ ಸಕಾರಾತ್ಮಕ ಗುಣಗಳ ಅಭಾವವಿದೆ. ಕ್ರೈಸ್ತನೆಂದು ಹೇಳಿಕೊಳ್ಳುವವನು, ತನ್ನ ಹರಟೆಮಾತನ್ನು ದೂಷಣೆ ಅಥವಾ ಬಯ್ಯುವಿಕೆಯ ಹಂತದ ವರೆಗೆ ಮುಂದುವರಿಸುವುದಾದರೆ, ನೇಮಿತ ಹಿರಿಯರು ಸಭೆಯಲ್ಲಿನ ಈ ಅಹಿತಕರವಾದ ಪರಿಸ್ಥಿತಿಯನ್ನು ಕೊನೆಗೊಳಿಸಲು ಕ್ರಿಯೆಗೈಯಬೇಕು.—ಯಾಜಕಕಾಂಡ 19:16; ಕೀರ್ತನೆ 101:5; 1 ಕೊರಿಂಥ 5:11.
4. ಗುಪ್ತವಾದ ಮಾಹಿತಿಯ ಕುರಿತಾಗಿ ವಿವೇಚನಾಶೀಲರಾದ ಮತ್ತು ನಂಬಿಗಸ್ತ ಕ್ರೈಸ್ತರು ಏನು ಮಾಡುತ್ತಾರೆ?
4 “ಬುದ್ಧಿಹೀನ”ರಂತಿರದೆ, “ವಿಶಾಲವಾದ ವಿವೇಚನಾಶಕ್ತಿಯುಳ್ಳ” ವ್ಯಕ್ತಿಗಳು, ಮೌನವಾಗಿರುವುದು ಸೂಕ್ತವಾಗಿರುವಾಗ ಮೌನವಾಗಿರುತ್ತಾರೆ. ಅವರು ಗುಟ್ಟನ್ನು ಹೊರಗೆಡಹುವುದಿಲ್ಲ. (ಜ್ಞಾನೋಕ್ತಿ 20:19) ಎಚ್ಚರಿಕೆಯಿಲ್ಲದ ಮಾತುಕತೆಯು ಹಾನಿಯನ್ನು ಉಂಟುಮಾಡಬಲ್ಲದೆಂಬುದನ್ನು ತಿಳಿದಿದ್ದು, ವಿವೇಚನಾಶೀಲ ವ್ಯಕ್ತಿಗಳು “ನಂಬಿಗಸ್ತ”ರಾಗಿರುತ್ತಾರೆ. ಅವರು ಜೊತೆ ವಿಶ್ವಾಸಿಗಳಿಗೆ ನಿಷ್ಠರಾಗಿರುತ್ತಾರೆ, ಮತ್ತು ಅವರನ್ನು ಅಪಾಯದಲ್ಲಿ ಹಾಕಬಹುದಾದ ಗುಟ್ಟಿನ ವಿಷಯಗಳನ್ನು ಹೇಳಿಕೊಡುವುದಿಲ್ಲ. ವಿವೇಚನಾಶೀಲ ಕ್ರೈಸ್ತರು, ಸಭೆಗೆ ಸಂಬಂಧಿಸಿದ ಯಾವುದೇ ರೀತಿಯ ಗುಪ್ತ ಮಾಹಿತಿಯನ್ನು ಪಡೆಯುವಲ್ಲಿ, ಯೆಹೋವನ ಸಂಸ್ಥೆಯು ತನ್ನ ಸ್ವಂತ ಪ್ರಕಾಶನದ ಮೂಲಕ ಅದನ್ನು ತಿಳಿಯಪಡಿಸುವುದು ಸೂಕ್ತವೆಂದು ಎಣಿಸುವ ಸಮಯದ ತನಕ, ಆ ವಿಷಯವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ.
ವಿವೇಚನಾಶಕ್ತಿ ಮತ್ತು ನಮ್ಮ ನಡತೆ
5. ‘ಮೂಢರು’ ಸಡಿಲು ನಡತೆಯನ್ನು ಹೇಗೆ ವೀಕ್ಷಿಸುತ್ತಾರೆ, ಮತ್ತು ಏಕೆ?
5 ಬೈಬಲಿನ ಜ್ಞಾನೋಕ್ತಿಗಳು ನಮಗೆ, ವಿವೇಚನಾಶಕ್ತಿಯನ್ನು ಉಪಯೋಗಿಸಲು ಮತ್ತು ಅಯೋಗ್ಯವಾದ ನಡತೆಯನ್ನು ದೂರಮಾಡಲು ಸಹಾಯ ಮಾಡುತ್ತವೆ. ಉದಾಹರಣೆಗಾಗಿ, ಜ್ಞಾನೋಕ್ತಿ 10:23 (NW) ಹೇಳುವುದು: “ಸಡಿಲು ನಡತೆಯನ್ನು ಅಭ್ಯಸಿಸುತ್ತಾ ಹೋಗುವುದು ಮೂಢನಿಗೆ ಕ್ರೀಡೆಯಂತೆ, ಆದರೆ ವಿವೇಕವು ವಿವೇಚನಾಶಕ್ತಿಯುಳ್ಳ ಮನುಷ್ಯನಿಗಾಗಿದೆ.” ಯಾರಿಗೆ ಸಡಿಲು ನಡತೆಯು “ಕ್ರೀಡೆ”ಯಂತೆ ಇದೆಯೊ ಅವರು, ತಮ್ಮ ಮಾರ್ಗಕ್ರಮದ ಅಯುಕ್ತತೆಗೆ ಅಂಧರಾಗಿದ್ದಾರೆ ಮತ್ತು ಯಾರಿಗೆ ಎಲ್ಲರೂ ಲೆಕ್ಕವನ್ನು ಸಲ್ಲಿಸಬೇಕೊ ಆ ದೇವರನ್ನು ಅವರು ಕಡೆಗಣಿಸುತ್ತಾರೆ. (ರೋಮಾಪುರ 14:12) ದೇವರು ತಮ್ಮ ತಪ್ಪನ್ನು ನೋಡುವುದಿಲ್ಲವೆಂದು ಊಹಿಸುವಷ್ಟರ ಮಟ್ಟಿಗೆ, ಅಂತಹ ‘ಮೂಢರು’ ತಮ್ಮ ತರ್ಕರೀತಿಯಲ್ಲಿ ವಕ್ರರಾಗುತ್ತಾರೆ. ಅವರ ಕ್ರಿಯೆಗಳ ಮೂಲಕ ಅವರು ಕಾರ್ಯತಃ ಹೇಳುವುದು: “ದೇವರಿಲ್ಲ.” (ಕೀರ್ತನೆ 14:1-3; ಯೆಶಾಯ 29:15, 16) ದೈವಿಕ ಮೂಲತತ್ವಗಳಿಂದ ಮಾರ್ಗದರ್ಶಿಸಲ್ಪಡದಿರುವುದರಿಂದ, ಅವರಿಗೆ ವಿವೇಚನಾಶಕ್ತಿಯ ಕೊರತೆಯಿದೆ ಮತ್ತು ಅವರು ವಿಷಯಗಳನ್ನು ಸರಿಯಾಗಿ ವಿಮರ್ಶಿಸಲು ಶಕ್ತರಾಗಿರುವುದಿಲ್ಲ.—ಜ್ಞಾನೋಕ್ತಿ 28:5.
6. ಸಡಿಲು ನಡತೆ ಏಕೆ ಮೂಢತನವಾಗಿದೆ, ಮತ್ತು ನಮಗೆ ವಿವೇಚನಾಶಕ್ತಿಯಿರುವಲ್ಲಿ ನಾವು ಅದನ್ನು ಹೇಗೆ ವೀಕ್ಷಿಸುವೆವು?
6 ಸಡಿಲು ನಡತೆಯು “ಕ್ರೀಡೆ”ಯಲ್ಲ, ಒಂದು ಆಟವಲ್ಲವೆಂಬುದನ್ನು “ವಿವೇಚನಾಶಕ್ತಿಯುಳ್ಳವನು” ಅರಿತುಕೊಳ್ಳುತ್ತಾನೆ. ಅದು ದೇವರನ್ನು ಅಪ್ರಸನ್ನಗೊಳಿಸುತ್ತದೆ ಮತ್ತು ಆತನೊಂದಿಗಿನ ನಮ್ಮ ಸಂಬಂಧವನ್ನು ಕೆಡಿಸಬಲ್ಲದೆಂಬುದು ಅವನಿಗೆ ತಿಳಿದಿದೆ. ಅಂತಹ ನಡತೆಯು ಮೂಢತನವಾಗಿದೆ, ಯಾಕಂದರೆ ಅದು ಜನರ ಸ್ವಗೌರವವನ್ನು ಕಸಿದುಕೊಳ್ಳುತ್ತದೆ, ವಿವಾಹಗಳನ್ನು ಧ್ವಂಸಗೊಳಿಸುತ್ತದೆ, ಮನಸ್ಸು ಮತ್ತು ದೇಹ ಎರಡನ್ನೂ ಹಾನಿಗೊಳಿಸುತ್ತದೆ ಮತ್ತು ಆತ್ಮಿಕತೆಯ ನಷ್ಟಕ್ಕೆ ನಡಿಸುತ್ತದೆ. ಆದುದರಿಂದ ನಾವು ನಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸೋಣ ಮತ್ತು ಯಾವುದೇ ರೀತಿಯ ಸಡಿಲು ನಡತೆ ಅಥವಾ ಅನೈತಿಕತೆಯನ್ನು ದೂರಮಾಡೋಣ.—ಜ್ಞಾನೋಕ್ತಿ 5:1-23.
ವಿವೇಚನಾಶಕ್ತಿ ಮತ್ತು ನಮ್ಮ ಮನೋವೃತ್ತಿ
7. ಕೋಪದ ಕೆಲವು ಶಾರೀರಿಕ ಪರಿಣಾಮಗಳಾವುವು?
7 ನಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸುವುದು, ನಾವು ನಮ್ಮ ಮನೋವೃತ್ತಿಯನ್ನು ನಿಯಂತ್ರಿಸುವಂತೆಯೂ ಸಹಾಯ ಮಾಡುತ್ತದೆ. “ಕೋಪಕ್ಕೆ ನಿಧಾನಿಯಾಗಿರುವವನು, ವಿವೇಚನಾಶಕ್ತಿಯಲ್ಲಿ ಸಮೃದ್ಧನಾಗಿದ್ದಾನೆ, ಆದರೆ ತಾಳ್ಮೆಗೆಟ್ಟವನು ಮೂರ್ಖತನವನ್ನು ಉನ್ನತಕ್ಕೇರಿಸುತ್ತಾನೆ” ಎಂದು ಜ್ಞಾನೋಕ್ತಿ 14:29 (NW) ಹೇಳುತ್ತದೆ. ಒಬ್ಬ ವಿವೇಚನಾಶೀಲ ವ್ಯಕ್ತಿಯು, ಅನಿಯಂತ್ರಿತ ಕೋಪವನ್ನು ದೂರಮಾಡಲು ಶ್ರಮಿಸುವ ಒಂದು ಕಾರಣವು, ಅದು ನಮ್ಮ ಮೇಲೆ ಶಾರೀರಿಕವಾಗಿ ಬೀರುವ ಪ್ರತಿಕೂಲ ಪರಿಣಾಮಗಳೇ ಆಗಿದೆ. ಅದು ರಕ್ತದೊತ್ತಡವನ್ನು ಏರಿಸಬಲ್ಲದು ಮತ್ತು ಉಸಿರಾಟಕ್ಕೆ ಸಂಬಂಧವಾದ ತೊಂದರೆಯನ್ನುಂಟುಮಾಡಬಲ್ಲದು. ವೈದ್ಯರು ಕೋಪ ಮತ್ತು ಕ್ರೋಧವನ್ನು, ಉಬ್ಬಸ, ಚರ್ಮದ ರೋಗಗಳು, ಪಚನಶಕ್ತಿಯ ಸಮಸ್ಯೆಗಳು ಮತ್ತು ಹುಣ್ಣುಗಳಂತಹ ವ್ಯಾಧಿಗಳನ್ನು ಉಂಟುಮಾಡುವ ಅಥವಾ ಹೆಚ್ಚಿಸುವಂತಹ ಭಾವನೆಗಳಾಗಿ ಉಲ್ಲೇಖಿಸಿದ್ದಾರೆ.
8. ತಾಳ್ಮೆಗೆಟ್ಟವರಾಗಿರುವುದು ಯಾವುದಕ್ಕೆ ನಡಿಸಸಾಧ್ಯವಿದೆ, ಆದರೆ ಈ ವಿಷಯದಲ್ಲಿ ವಿವೇಚನಾಶಕ್ತಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
8 ಕೇವಲ ನಮ್ಮ ಆರೋಗ್ಯವನ್ನು ಹಾನಿಗೊಳಿಸದಿರಲಿಕ್ಕಾಗಿ ನಾವು ವಿವೇಚನಾಶಕ್ತಿಯನ್ನು ಉಪಯೋಗಿಸಿ “ಕೋಪಕ್ಕೆ ನಿಧಾನಿ”ಗಳಾಗಿರಬಾರದು. ತಾಳ್ಮೆಗೆಟ್ಟವರಾಗಿರುವುದು, ನಾವು ವಿಷಾದಿಸುವಂತಹ ಮೂರ್ಖ ಕೃತ್ಯಗಳಿಗೆ ನಡಿಸಬಲ್ಲದು. ನಿಯಂತ್ರಣವಿಲ್ಲದ ನುಡಿ ಅಥವಾ ದುಡುಕಿನ ನಡತೆಯಿಂದ ಏನು ಪರಿಣಮಿಸಸಾಧ್ಯವಿದೆಯೊ ಅದನ್ನು ಪರಿಗಣಿಸಿ, ಮೂರ್ಖತನದ ಕೆಲಸವನ್ನು ಮಾಡುವ ಮೂಲಕ, “ಮೂರ್ಖತನವನ್ನು ಉನ್ನತಕ್ಕೇರಿಸು”ವುದರಿಂದ ವಿವೇಚನಾಶಕ್ತಿಯು ನಮ್ಮನ್ನು ದೂರವಿಡುತ್ತದೆ. ಕ್ರೋಧವು ನಮ್ಮ ಯೋಚನಾ ವಿಧಾನಗಳನ್ನು ಪಲ್ಲಟಗೊಳಿಸುತ್ತಾ, ನಾವು ಸ್ವಸ್ಥವಾದ ವಿಮರ್ಶನಾಶಕ್ತಿಯನ್ನು ಉಪಯೋಗಿಸಸಾಧ್ಯವಾಗದಂತೆ ಮಾಡಬಲ್ಲದೆಂಬುದನ್ನು ಗ್ರಹಿಸಲು, ವಿವೇಚನಾಶಕ್ತಿಯು ನಮಗೆ ವಿಶೇಷವಾಗಿ ಸಹಾಯ ಮಾಡಬಲ್ಲದು. ಇದು ದೈವಿಕ ಚಿತ್ತವನ್ನು ಮಾಡುವ ಮತ್ತು ದೇವರ ನೀತಿಯ ತತ್ತ್ವಗಳಿಗನುಸಾರ ಜೀವಿಸುವ ನಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುವುದು. ಹೌದು, ಅನಿಯಂತ್ರಿತ ಕೋಪಕ್ಕೆ ಮಣಿಯುವುದು, ಆತ್ಮಿಕವಾಗಿ ಹಾನಿಕರವಾಗಿದೆ. ವಾಸ್ತವದಲ್ಲಿ, “ಕೋಪದ ಆವೇಶಗಳು” (NW), ದೇವರ ರಾಜ್ಯಕ್ಕೆ ಬಾಧ್ಯರಾಗುವುದರಿಂದ ನಮ್ಮನ್ನು ದೂರವಿಡುವ ಅಸಹ್ಯಕರ “ಶರೀರಭಾವದ ಕರ್ಮಗಳಲ್ಲಿ” ವರ್ಗೀಕರಿಸಲ್ಪಟ್ಟಿವೆ. (ಗಲಾತ್ಯ 5:19-21) ಹಾಗಾದರೆ, ವಿವೇಚನಾಶೀಲ ಕ್ರೈಸ್ತರೋಪಾದಿ ನಾವು, “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಕೋಪಿಸುವದರಲ್ಲಿಯೂ ನಿಧಾನವಾಗಿ”ರೋಣ.—ಯಾಕೋಬ 1:19.
9. ವಿವೇಚನಾಶಕ್ತಿ ಮತ್ತು ಸಹೋದರ ಪ್ರೀತಿಯು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ನಮಗೆ ಹೇಗೆ ಸಹಾಯ ಮಾಡಬಲ್ಲದು?
9 ನಾವು ಸಿಟ್ಟುಗೊಳ್ಳುವುದಾದರೂ, ಒಂದು ಹೆಗ್ಗಿಚ್ಚನ್ನು ಹೋಗಲಾಡಿಸಲು ನಾವು ಸುಮ್ಮನಿರಬೇಕೆಂಬುದನ್ನು ವಿವೇಚನಾಶಕ್ತಿಯು ಸೂಚಿಸಬಹುದು. ಜ್ಞಾನೋಕ್ತಿ 17:27 (NW) ಹೇಳುವುದು: “ತನ್ನ ಮಾತುಗಳನ್ನು ತಡೆಹಿಡಿಯುವವನು ಜ್ಞಾನಿ, ಮತ್ತು ವಿವೇಚನಾಶಕ್ತಿಯುಳ್ಳ ಒಬ್ಬ ಮನುಷ್ಯನು ಶಾಂತ ಆತ್ಮವುಳ್ಳವನಾಗಿರುತ್ತಾನೆ.” ವಿವೇಚನಾಶಕ್ತಿ ಮತ್ತು ಸಹೋದರ ಪ್ರೀತಿಯು, ನೋವನ್ನುಂಟುಮಾಡುವ ಯಾವುದೊ ವಿಷಯವನ್ನು ಒದರಿಬಿಡುವ ಒಂದು ಪ್ರೇರಣೆಯನ್ನು ನಿಯಂತ್ರಿಸುವ ಅಗತ್ಯವನ್ನು ಮನಗಾಣುವಂತೆ ನಮಗೆ ಸಹಾಯ ಮಾಡುವುದು. ಈಗಾಗಲೇ ಕೋಪದ ಒಂದು ಕೆರಳಿಕೆಯು ಸಂಭವಿಸಿರುವಲ್ಲಿ, ನಾವು ಕ್ಷಮೆಯಾಚಿಸಿ, ಅಳವಡಿಸುವಿಕೆಗಳನ್ನು ಮಾಡುವಂತೆ, ಪ್ರೀತಿ ಮತ್ತು ನಮ್ರತೆಯು ನಮ್ಮನ್ನು ಪ್ರಚೋದಿಸುವುದು. ಆದರೆ ಯಾರಾದರೊಬ್ಬರು ನಮ್ಮನ್ನು ರೇಗಿಸಿದರೆಂದು ನೆನಸಿಕೊಳ್ಳಿರಿ. ಆಗ ನಾವು ದೀನ ಮತ್ತು ನಮ್ರ ರೀತಿಯಲ್ಲಿ ಹಾಗೂ ಶಾಂತಿಯನ್ನು ಪ್ರವರ್ಧಿಸುವ ಮುಖ್ಯ ಹೇತುವಿನೊಂದಿಗೆ ಅವನೊಂದಿಗೆ ಒಂಟಿಯಾಗಿ ಮಾತಾಡೋಣ.—ಮತ್ತಾಯ 5:23, 24; 18:15-17.
ವಿವೇಚನಾಶಕ್ತಿ ಮತ್ತು ನಮ್ಮ ಕುಟುಂಬ
10. ಕುಟುಂಬ ಜೀವನದಲ್ಲಿ ವಿವೇಕ ಮತ್ತು ವಿವೇಚನಾಶಕ್ತಿಯು ಯಾವ ಪಾತ್ರವನ್ನು ವಹಿಸುತ್ತದೆ?
10 ಕುಟುಂಬ ಸದಸ್ಯರು ವಿವೇಕ ಮತ್ತು ವಿವೇಚನಾಶಕ್ತಿಯನ್ನು ತೋರಿಸುವ ಅಗತ್ಯವಿದೆ, ಯಾಕಂದರೆ ಈ ಗುಣಗಳು ಒಂದು ಮನೆವಾರ್ತೆಯನ್ನು ಕಟ್ಟುವವು. ಜ್ಞಾನೋಕ್ತಿ 24:3, 4 ಹೇಳುವುದು: “ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ [“ವಿವೇಕವೇ,” NW] ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ [“ವಿವೇಚನಾಶಕ್ತಿಯೇ,” NW] ಆಧಾರ; ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ತಿಳುವಳಿಕೆಯೇ [“ಜ್ಞಾನವೇ,” NW] ಉಪಕರಣ.” ವಿವೇಕ ಮತ್ತು ವಿವೇಚನಾಶಕ್ತಿಯು, ಯಶಸ್ವಿ ಕುಟುಂಬ ಜೀವಿತಕ್ಕಾಗಿ ಶ್ರೇಷ್ಠವಾದ ಕಟ್ಟಡಕಟ್ಟುವ ಬ್ಲಾಕ್ಗಳಂತಿದೆ. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಭಾವನೆಗಳು ಮತ್ತು ಚಿಂತೆಗಳನ್ನು ಹೊರಸೆಳೆಯುವಂತೆ ವಿವೇಚನಾಶಕ್ತಿಯು ಸಹಾಯ ಮಾಡುತ್ತದೆ. ಒಬ್ಬ ವಿವೇಚನಾಶೀಲ ವ್ಯಕ್ತಿಯು, ಸಂವಾದ ಮಾಡಲು, ಕಿವಿಗೊಡಲು ಮತ್ತು ತನ್ನ ವಿವಾಹ ಸಂಗಾತಿಯ ಭಾವನೆಗಳು ಮತ್ತು ಯೋಚನೆಗಳ ಕುರಿತಾಗಿ ಒಳನೋಟವನ್ನು ಗಳಿಸಲು ಶಕ್ತನಾಗಿರುತ್ತಾನೆ.—ಜ್ಞಾನೋಕ್ತಿ 20:5.
11. ವಿವೇಚನಾಶೀಲಳಾದ ಒಬ್ಬ ವಿವಾಹಿತ ಸ್ತ್ರೀಯು, ಹೇಗೆ ‘ತನ್ನ ಮನೆಯನ್ನು ಕಟ್ಟಿಕೊಳ್ಳ’ಸಾಧ್ಯವಿದೆ?
11 ನಿಸ್ಸಂದೇಹವಾಗಿ ವಿವೇಕ ಮತ್ತು ವಿವೇಚನಾಶಕ್ತಿಯು, ಒಂದು ಸಂತೋಷಭರಿತ ಕುಟುಂಬ ಜೀವಿತಕ್ಕಾಗಿ ಅತ್ಯಾವಶ್ಯಕವಾಗಿದೆ. ದೃಷ್ಟಾಂತಕ್ಕಾಗಿ, ಜ್ಞಾನೋಕ್ತಿ 14:1 ಹೇಳುವುದು: “ಜ್ಞಾನವಂತೆಯು [“ವಿವೇಕಿಯು,” NW] ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು.” ತನ್ನ ಗಂಡನಿಗೆ ಯೋಗ್ಯವಾದ ಅಧೀನತೆಯಲ್ಲಿರುವ ಒಬ್ಬ ವಿವೇಕಿ ಮತ್ತು ವಿವೇಚನಾಶೀಲ ವಿವಾಹಿತ ಸ್ತ್ರೀಯು, ಮನೆವಾರ್ತೆಯ ಒಳಿತಿಗಾಗಿ ಕಠಿನವಾಗಿ ದುಡಿಯುವಳು ಮತ್ತು ಈ ರೀತಿಯಲ್ಲಿ ತನ್ನ ಕುಟುಂಬವನ್ನು ಕಟ್ಟಲು ಸಹಾಯ ಮಾಡುವಳು. ‘ತನ್ನ ಮನೆಯನ್ನು ಕಟ್ಟಿಕೊಳ್ಳುವ’ ಒಂದು ಸಂಗತಿ ಯಾವುದೆಂದರೆ, ಅವಳು ಯಾವಾಗಲೂ ತನ್ನ ಗಂಡನ ಕುರಿತಾಗಿ ಒಳ್ಳೇದನ್ನು ಮಾತಾಡಿ, ಈ ರೀತಿಯಲ್ಲಿ ಅವನಿಗಾಗಿ ಇತರರಿಗಿರುವ ಗೌರವವನ್ನು ಹೆಚ್ಚಿಸುವಳು. ಮತ್ತು ಯೆಹೋವನ ವಿಷಯದಲ್ಲಿ ಪೂಜ್ಯಭಾವನೆಯ ಭಯವಿರುವ ಒಬ್ಬ ಸಮರ್ಥ, ವಿವೇಚನಾಶೀಲ ಹೆಂಡತಿಯು, ತನಗಾಗಿ ಸ್ತುತಿಯನ್ನು ಗಳಿಸಿಕೊಳ್ಳುತ್ತಾಳೆ.—ಜ್ಞಾನೋಕ್ತಿ 12:4; 31:28, 30.
ವಿವೇಚನಾಶಕ್ತಿ ಮತ್ತು ಜೀವಿತದಲ್ಲಿ ನಮ್ಮ ಮಾರ್ಗಕ್ರಮ
12. “ಬುದ್ಧಿಹೀನ”ರು ಮೂರ್ಖತನವನ್ನು ಹೇಗೆ ವೀಕ್ಷಿಸುತ್ತಾರೆ, ಮತ್ತು ಯಾಕೆ?
12 ವಿವೇಚನಾಶಕ್ತಿಯು ನಮ್ಮ ಎಲ್ಲಾ ವ್ಯವಹಾರಗಳಲ್ಲಿ ಯೋಗ್ಯವಾದ ಮಾರ್ಗಕ್ರಮವನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ. ಇದು ಜ್ಞಾನೋಕ್ತಿ 15:21 (NW)ರಲ್ಲಿ ಸೂಚಿಸಲ್ಪಟ್ಟಿದೆ. ಅದು ಹೇಳುವುದು: “ಬುದ್ಧಿಹೀನನಿಗೆ ಮೂರ್ಖತನವು ಹರ್ಷವಾಗಿದೆ, ಆದರೆ ವಿವೇಚನಾಶಕ್ತಿಯುಳ್ಳ ಮನುಷ್ಯನು ನೇರವಾಗಿ ಮುಂದೆಹೋಗುವವನೇ.” ನಾವು ಈ ಜ್ಞಾನೋಕ್ತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಮೂರ್ಖತನ ಅಥವಾ ಹುಚ್ಚುತನದ ಒಂದು ಮಾರ್ಗಕ್ರಮವು, ಬುದ್ಧಿಯಿಲ್ಲದ ಸ್ತ್ರೀಪುರುಷರಿಗೆ ಮತ್ತು ಯುವ ಜನರಿಗೆ ಆನಂದವನ್ನು ಉಂಟುಮಾಡುತ್ತದೆ. ಅವರು ಒಳ್ಳೆಯ ಹೇತುವಿನ ಕೊರತೆಯುಳ್ಳವರಾಗಿದ್ದು, “ಬುದ್ಧಿಹೀನ”ರಾಗಿದ್ದಾರೆ, ಮತ್ತು ಈ ಕಾರಣದಿಂದ ಮೂರ್ಖತನದಲ್ಲಿ ಹರ್ಷಿಸುವಷ್ಟು ಅವಿವೇಕಿಗಳಾಗಿದ್ದಾರೆ.
13. ನಗೆ ಮತ್ತು ತಿಳಿಗೇಡಿತನದ ಕುರಿತಾಗಿ ಸೊಲೊಮೋನನು ಏನನ್ನು ವಿವೇಚಿಸಿದನು?
13 ತಿಳಿಗೇಡಿತನಕ್ಕೆ ಅರ್ಥವಿಲ್ಲವೆಂದು ಇಸ್ರಾಯೇಲಿನ ವಿವೇಚನಾಶೀಲ ರಾಜ ಸೊಲೊಮೋನನು ಕಲಿತುಕೊಂಡನು. ಅವನು ಒಪ್ಪಿಕೊಂಡದ್ದು: “ನಾನು ಮನಸ್ಸಿನಲ್ಲಿ—ಬಾ, ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಸುಖದ ರುಚಿ ನೋಡು ಅಂದುಕೊಂಡೆನು. ಆಹಾ, ಇದೂ ವ್ಯರ್ಥವೇ. ನಗೆಯು ಹುಚ್ಚುತನ, ಸಂತೋಷದಿಂದೇನು ಅಂದುಕೊಂಡೆನು.” (ಪ್ರಸಂಗಿ 2:1, 2) ಕೇವಲ ನಲಿವು ಮತ್ತು ನಗೆ ತೃಪ್ತಿದಾಯಕವಲ್ಲ, ಯಾಕಂದರೆ ಅವು ನೈಜವಾದ ಮತ್ತು ಬಾಳುವ ಸಂತೋಷವನ್ನು ತರಲಾರವು ಎಂಬುದನ್ನು ಒಬ್ಬ ವಿವೇಚನಾಶೀಲ ಮನುಷ್ಯನೋಪಾದಿ ಸೊಲೊಮೋನನು ಕಂಡುಕೊಂಡನು. ನಗುವು, ನಾವು ನಮ್ಮ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಮರೆಯುವಂತೆ ಸಹಾಯ ಮಾಡಬಹುದು, ಆದರೆ ಆ ಸಮಸ್ಯೆಗಳು ಅನಂತರ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೇಲೆ ಬರಬಹುದು. ಸೊಲೊಮೋನನು ನಗುವಿನ ಕುರಿತಾಗಿ ಯೋಗ್ಯವಾಗಿಯೇ “ಹುಚ್ಚುತನ” ಎಂದು ಹೇಳಸಾಧ್ಯವಿತ್ತು. ಯಾಕೆ? ಯಾಕೆಂದರೆ ವಿಚಾರಹೀನ ನಗೆಯು, ಸ್ವಸ್ಥಕರವಾದ ವಿಮರ್ಶನಾಶಕ್ತಿಯನ್ನು ಮರೆಮಾಡುತ್ತದೆ. ಅದು ನಾವು ತೀರ ಗಂಭೀರವಾದ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವಂತೆ ಮಾಡಬಹುದು. ಆಸ್ಥಾನದ ವಿದೂಷಕನೊಬ್ಬನ ಮಾತುಗಳು ಮತ್ತು ಕ್ರಿಯೆಗಳೊಂದಿಗೆ ಸಂಬಂಧಿಸಿರುವಂತಹ ರೀತಿಯ ಹರ್ಷಿಸುವಿಕೆಯು, ಸಾರ್ಥಕವಾದ ವಿಷಯವನ್ನು ಉತ್ಪಾದಿಸುವಂತಹದ್ದೆಂದು ಹೇಳಸಾಧ್ಯವಿಲ್ಲ. ನಗು ಮತ್ತು ನಲಿವಿನೊಂದಿಗಿನ ಸೊಲೊಮೋನನ ಪ್ರಯೋಗದ ತಾತ್ಪರ್ಯವನ್ನು ವಿವೇಚಿಸುವುದು, ನಾವು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗಿರದಂತಿರಲು ಸಹಾಯ ಮಾಡುವುದು.—2 ತಿಮೊಥೆಯ 3:1, 4, 5.
14. ವಿವೇಚನಾಶಕ್ತಿಯುಳ್ಳ ಮನುಷ್ಯನು “ನೇರವಾಗಿ ಮುಂದೆ ಹೋಗು”ವುದು ಹೇಗೆ?
14 ವಿವೇಚನಾಶಕ್ತಿಯುಳ್ಳ ಮನುಷ್ಯನು “ನೇರವಾಗಿ ಮುಂದೆಹೋಗು”ವುದು ಹೇಗೆ? ಆತ್ಮಿಕ ವಿವೇಚನಾಶಕ್ತಿ ಮತ್ತು ದೈವಿಕ ತತ್ತ್ವಗಳ ಅನ್ವಯವು, ಜನರನ್ನು ಒಂದು ನೇರವಾದ, ತೊಡಕಿಲ್ಲದ ಮಾರ್ಗಕ್ರಮದಲ್ಲಿ ನಡಿಸುತ್ತದೆ. ಬೈಯಿಂಗ್ಟನ್ನ ಭಾಷಾಂತರವು ಮುಚ್ಚುಮರೆಯಿಲ್ಲದೆ ಹೇಳುವುದು: “ಒಬ್ಬ ಮಿದುಳಿಲ್ಲದ ಮನುಷ್ಯನಿಗೆ ಮೂರ್ಖತನವು ಸ್ವರ್ಗಸುಖವಾಗಿದೆ, ಆದರೆ ಒಬ್ಬ ಬುದ್ಧಿವಂತನು ನೇರವಾಗಿ ಹೋಗುವನು.” “ವಿವೇಚನಾಶಕ್ತಿಯುಳ್ಳ ಮನುಷ್ಯನು” ತನ್ನ ಪಾದಗಳಿಗಾಗಿ ನೇರವಾದ ಹಾದಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾನೆ ಮತ್ತು ದೇವರ ವಾಕ್ಯವನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವ ಕಾರಣದಿಂದ, ಸರಿ ಮತ್ತು ತಪ್ಪಿನ ನಡುವೆ ವ್ಯತ್ಯಾಸವನ್ನು ಮಾಡಶಕ್ತನಾಗಿರುತ್ತಾನೆ.—ಇಬ್ರಿಯ 5:14; 12:12, 13.
ವಿವೇಚನಾಶಕ್ತಿಗಾಗಿ ಯಾವಾಗಲೂ ಯೆಹೋವನ ಕಡೆಗೆ ನೋಡಿರಿ
15. ಜ್ಞಾನೋಕ್ತಿ 2:6-9ರಿಂದ ನಾವು ಏನು ಕಲಿಯುತ್ತೇವೆ?
15 ಜೀವನದಲ್ಲಿ ಒಂದು ನೇರವಾದ ಮಾರ್ಗಕ್ರಮವನ್ನು ಅನುಸರಿಸಲಿಕ್ಕಾಗಿ, ನಮ್ಮ ಅಪರಿಪೂರ್ಣತೆಯನ್ನು ಅಂಗೀಕರಿಸಿ, ಆತ್ಮಿಕ ವಿವೇಚನಾಶಕ್ತಿಗಾಗಿ ಯೆಹೋವನ ಕಡೆಗೆ ನೋಡುವ ಅಗತ್ಯ ನಮ್ಮೆಲ್ಲರಿಗಿದೆ. ಜ್ಞಾನೋಕ್ತಿ 2:6-9 ಹೇಳುವುದು: “ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. ಆತನು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು. ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು ನ್ಯಾಯಮಾರ್ಗವನ್ನು ರಕ್ಷಿಸುತ್ತಾ ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು. ಹೀಗಿರಲು ನೀನು ನೀತಿನ್ಯಾಯಗಳನ್ನೂ ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನೂ ತಿಳಿದುಕೊಳ್ಳುವಿ.”—ಯಾಕೋಬ 4:6ನ್ನು ಹೋಲಿಸಿರಿ.
16. ಯೆಹೋವನಿಗೆ ವಿರೋಧದಲ್ಲಿ ಯಾವುದೇ ವಿವೇಕ, ವಿವೇಚನಾಶಕ್ತಿ ಅಥವಾ ಸಲಹೆ ಇಲ್ಲವೇಕೆ?
16 ಯೆಹೋವನ ಮೇಲಿನ ನಮ್ಮ ಅವಲಂಬನೆಯನ್ನು ಅಂಗೀಕರಿಸುತ್ತಾ, ಆತನ ವಾಕ್ಯವನ್ನು ಆಳವಾಗಿ ಪರಿಶೋಧಿಸುವ ಮೂಲಕ ಆತನ ಚಿತ್ತವನ್ನು ವಿವೇಚಿಸಲು ನಾವು ನಮ್ರರಾಗಿ ಪ್ರಯತ್ನಿಸೋಣ. ಆತನು ಪೂರ್ಣ ಅರ್ಥದಲ್ಲಿ ವಿವೇಕವನ್ನು ಹೊಂದಿರುತ್ತಾನೆ ಮತ್ತು ಆತನ ಸಲಹೆಯು ಯಾವಾಗಲೂ ಉಪಯುಕ್ತ. (ಯೆಶಾಯ 40:13; ರೋಮಾಪುರ 11:34) ವಾಸ್ತವದಲ್ಲಿ ಆತನಿಗೆ ವಿರೋಧವಾಗಿ ಎದ್ದುನಿಲ್ಲುವ ಯಾವುದೇ ಸಲಹೆಯು ಬೆಲೆಯಿಲ್ಲದ್ದಾಗಿದೆ. ಜ್ಞಾನೋಕ್ತಿ 21:30 ತಿಳಿಸುವುದು: “ಯಾವ ಜ್ಞಾನವೂ [“ವಿವೇಕವೂ,” NW] ಯಾವ ವಿವೇಕವೂ [“ವಿವೇಚನಾಶಕ್ತಿಯೂ,” NW] ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವದಿಲ್ಲ.” (ಜ್ಞಾನೋಕ್ತಿ 19:21ನ್ನು ಹೋಲಿಸಿರಿ.) ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲ್ಪಡುವ ಪ್ರಕಾಶನಗಳ ಸಹಾಯದೊಂದಿಗೆ, ದೇವರ ವಾಕ್ಯದ ಒಂದು ಅಭ್ಯಾಸದಿಂದ ವಿಕಸಿಸಲ್ಪಡುವ ಆತ್ಮಿಕ ವಿವೇಚನಾಶಕ್ತಿಯು ಮಾತ್ರ, ಜೀವನದಲ್ಲಿ ಒಂದು ಯೋಗ್ಯವಾದ ಮಾರ್ಗಕ್ರಮವನ್ನು ಬೆನ್ನಟ್ಟುವಂತೆ ನಮಗೆ ಸಹಾಯ ಮಾಡುವುದು. (ಮತ್ತಾಯ 24:45-47) ಆದುದರಿಂದ ನಾವು, ವ್ಯತಿರಿಕ್ತವಾದ ಸಲಹೆಯು ಎಷ್ಟು ಸರಿಯೆಂದು ತೋರಬಹುದಾದರೂ, ಅದು ದೇವರ ವಾಕ್ಯವನ್ನು ಎದುರಿಸಿ ನಿಲ್ಲಲು ಸಾಧ್ಯವಿಲ್ಲವೆಂಬುದನ್ನು ತಿಳಿಯುತ್ತಾ, ನಮ್ಮ ಜೀವನ ಮಾರ್ಗವನ್ನು ಯೆಹೋವನ ಸಲಹೆಗೆ ಹೊಂದಿಕೆಯಲ್ಲಿ ನಿರ್ದೇಶಿಸೋಣ.
17. ತಪ್ಪು ಸಲಹೆಯು ಕೊಡಲ್ಪಡುವಲ್ಲಿ ಏನು ಪರಿಣಮಿಸಸಾಧ್ಯವಿದೆ?
17 ಸಲಹೆಯು ದೇವರ ವಾಕ್ಯದ ಮೇಲೆ ದೃಢವಾಗಿ ಆಧಾರಿತವಾಗಿರಬೇಕು ಮತ್ತು ಒಂದು ಪ್ರಶ್ನೆಯನ್ನು ಉತ್ತರಿಸುವ ಮುಂಚೆ ಬೈಬಲ್ ಅಭ್ಯಾಸ ಹಾಗೂ ಮನನ ಆವಶ್ಯಕ ಎಂಬುದನ್ನು, ಸಲಹೆ ಕೊಡುವ ವಿವೇಚನಾಶೀಲ ಕ್ರೈಸ್ತರು ಗ್ರಹಿಸುತ್ತಾರೆ. (ಜ್ಞಾನೋಕ್ತಿ 15:28) ಗಂಭೀರವಾದ ವಿಷಯಗಳ ಕುರಿತಾದ ಪ್ರಶ್ನೆಗಳು ತಪ್ಪಾಗಿ ಉತ್ತರಿಸಲ್ಪಡುವಲ್ಲಿ, ಮಹತ್ತಾದ ಹಾನಿಯು ಫಲಿಸಬಲ್ಲದು. ಹೀಗಿರುವುದರಿಂದ ಕ್ರೈಸ್ತ ಹಿರಿಯರಿಗೆ ಆತ್ಮಿಕ ವಿವೇಚನಾಶಕ್ತಿಯು ಅಗತ್ಯ. ಮತ್ತು ಅವರು ಜೊತೆ ವಿಶ್ವಾಸಿಗಳಿಗೆ ಆತ್ಮಿಕವಾಗಿ ಸಹಾಯ ಮಾಡಲು ಪ್ರಯತ್ನಿಸುತ್ತಿರುವಾಗ, ಯೆಹೋವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಬೇಕು.
ಆತ್ಮಿಕ ವಿವೇಚನಾಶಕ್ತಿಯೊಂದಿಗೆ ತುಂಬಿಕೊಳ್ಳಿರಿ
18. ಸಭೆಯಲ್ಲಿ ಒಂದು ಸಮಸ್ಯೆಯು ಏಳುವಲ್ಲಿ, ನಮ್ಮ ಆತ್ಮಿಕ ಸಮತೂಕವನ್ನು ನಾವು ಕಾಪಾಡುವಂತೆ ವಿವೇಚನಾಶಕ್ತಿಯು ಹೇಗೆ ಸಹಾಯ ಮಾಡಬಲ್ಲದು?
18 ಯೆಹೋವನನ್ನು ಮೆಚ್ಚಿಸಲು, ನಮಗೆ “ಎಲ್ಲಾ ವಿಷಯಗಳಲ್ಲೂ ವಿವೇಚನಾಶಕ್ತಿಯು” ಅಗತ್ಯ. (2 ತಿಮೊಥೆಯ 2:7, NW) ಬೈಬಲಿನ ಅತ್ಯಾಸಕ್ತಿಯ ಅಭ್ಯಾಸ ಮತ್ತು ದೇವರ ಆತ್ಮ ಹಾಗೂ ಸಂಸ್ಥೆಯ ನಿರ್ದೇಶನದೊಂದಿಗೆ ಅನುವರ್ತನೆಯು, ಒಂದು ತಪ್ಪಾದ ಮಾರ್ಗಕ್ರಮದಲ್ಲಿ ನಡಿಸಸಾಧ್ಯವಿರುವ ಸನ್ನಿವೇಶಗಳನ್ನು ನಾವು ಎದುರಿಸುವಾಗ ಏನು ಮಾಡಬೇಕೆಂಬುದನ್ನು ವಿವೇಚಿಸಲು ನಮಗೆ ಸಹಾಯ ಮಾಡುವುದು. ಉದಾಹರಣೆಗಾಗಿ, ಸಭೆಯಲ್ಲಿನ ಯಾವುದೊ ಒಂದು ವಿಷಯವು, ಅದು ಯಾವ ರೀತಿಯಲ್ಲಿ ನಿರ್ವಹಿಸಲ್ಪಡಬೇಕು ಎಂದು ನಾವು ನೆನಸುತ್ತೇವೊ ಆ ವಿಧದಲ್ಲಿ ನಿರ್ವಹಿಸಲ್ಪಡುವುದಿಲ್ಲ ಎಂದಿಟ್ಟುಕೊಳ್ಳಿರಿ. ಯೆಹೋವನ ಜನರೊಂದಿಗೆ ಸಹವಾಸಿಸುವುದನ್ನು ನಿಲ್ಲಿಸಲು ಮತ್ತು ದೇವರಿಗೆ ಸೇವೆ ಸಲ್ಲಿಸುವುದನ್ನು ಬಿಟ್ಟುಬಿಡಲು ಇದು ಕಾರಣವೇ ಅಲ್ಲ ಎಂಬುದನ್ನು ಅವಲೋಕಿಸುವಂತೆ ಆತ್ಮಿಕ ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುವುದು. ಯೆಹೋವನಿಗೆ ಸೇವೆಸಲ್ಲಿಸುವ ನಮ್ಮ ಸುಯೋಗ, ನಾವು ಅನುಭವಿಸುವ ಆತ್ಮಿಕ ಸ್ವಾತಂತ್ರ್ಯ, ರಾಜ್ಯ ಘೋಷಕರೋಪಾದಿ ನಮ್ಮ ಸೇವೆಯಿಂದ ನಾವು ಪಡೆಯಸಾಧ್ಯವಿರುವ ಆನಂದದ ಕುರಿತಾಗಿ ಯೋಚಿಸಿರಿ. ಆತ್ಮಿಕ ವಿವೇಚನಾಶಕ್ತಿಯು ನಮಗೆ, ಸರಿಯಾದ ಯಥಾದೃಷ್ಟಿಯನ್ನು ಪಡೆಯಲು ಮತ್ತು ನಾವು ದೇವರಿಗೆ ಸಮರ್ಪಿತರಾಗಿದ್ದೇವೆ ಹಾಗೂ ಇತರರು ಏನನ್ನೇ ಮಾಡಲಿ, ಆತನೊಂದಿಗಿನ ನಮ್ಮ ಸಂಬಂಧವನ್ನು ನಾವು ಕಾಪಾಡಿಕೊಳ್ಳಬೇಕು ಎಂಬುದನ್ನು ಗ್ರಹಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಒಂದು ಸಮಸ್ಯೆಯನ್ನು ನಿರ್ವಹಿಸಲು ನಾವು ದೇವಪ್ರಭುತ್ವ ರೀತಿಯಲ್ಲಿ ಏನನ್ನೂ ಮಾಡಲು ಸಾಧ್ಯವಿರದಿದ್ದಲ್ಲಿ, ಆ ಸನ್ನಿವೇಶವನ್ನು ಸರಿಪಡಿಸಲು ನಾವು ಯೆಹೋವನ ಮೇಲೆ ತಾಳ್ಮೆಯಿಂದ ಆತುಕೊಳ್ಳಬೇಕು. ಬಿಟ್ಟುಕೊಡುವ ಅಥವಾ ಹತಾಶೆಗೆ ಮಣಿಯುವ ಬದಲಿಗೆ, ನಾವು ‘ದೇವರಿಗಾಗಿ ಕಾದಿರೋ’ಣ.—ಕೀರ್ತನೆ 42:5, 11.
19. (ಎ) ಫಿಲಿಪ್ಪಿಯವರಿಗಾಗಿದ್ದ ಪೌಲನ ಪ್ರಾರ್ಥನೆಯ ಸಾರವೇನಾಗಿತ್ತು? (ಬಿ) ಯಾವುದೇ ಒಂದು ವಿಷಯವು ನಮಗೆ ಪೂರ್ಣವಾಗಿ ಅರ್ಥವಾಗದಿದ್ದರೆ, ವಿವೇಚನಾಶಕ್ತಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
19 ಆತ್ಮಿಕ ವಿವೇಚನಾಶಕ್ತಿಯು ನಾವು ದೇವರಿಗೆ ಮತ್ತು ಆತನ ಜನರಿಗೆ ನಿಷ್ಠಾವಂತರಾಗಿ ಉಳಿಯಲು ನಮಗೆ ಸಹಾಯ ಮಾಡುತ್ತದೆ. ಫಿಲಿಪ್ಪಿಯಲ್ಲಿರುವ ಕ್ರೈಸ್ತರಿಗೆ ಪೌಲನು ಹೇಳಿದ್ದು: “ನಾನು ಪ್ರಾರ್ಥಿಸುತ್ತ ಮುಂದುವರಿಯುವುದು, ನೀವು ಕ್ರಿಸ್ತನ ದಿನದ ತನಕ ದೋಷರಹಿತರಾಗಿದ್ದು, ಇತರರನ್ನು ಮುಗ್ಗರಿಸದಿರುವಂತೆ, ನಿಮ್ಮ ಪ್ರೀತಿಯು ಇನ್ನೂ ಹೆಚ್ಚೆಚ್ಚಾಗಿ ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನಾಶಕ್ತಿಯಲ್ಲಿ ಸಮೃದ್ಧಿಯಾಗುವಂತೆ ಮತ್ತು ಹೆಚ್ಚು ಪ್ರಮುಖ ವಿಷಯಗಳನ್ನು ಖಾತರಿಮಾಡಿಕೊಳ್ಳುವಂತೆ ಆಗಲಿ ಎಂದೇ.” (ಫಿಲಿಪ್ಪಿ 1:9, 10, NW) ಯೋಗ್ಯ ರೀತಿಯಲ್ಲಿ ತರ್ಕಿಸಲು, ನಮಗೆ “ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನಾಶಕ್ತಿಯ” ಅಗತ್ಯವಿದೆ. “ವಿವೇಚನಾಶಕ್ತಿ” ಎಂದು ಇಲ್ಲಿ ಭಾಷಾಂತರಿಸಲ್ಪಟ್ಟ ಗ್ರೀಕ್ ಶಬ್ದವು, “ಸೂಕ್ಷ್ಮಗ್ರಾಹಿ ನೈತಿಕ ಗ್ರಹಣಶಕ್ತಿ”ಯನ್ನು ಅರ್ಥೈಸುತ್ತದೆ. ನಾವು ಯಾವುದೇ ವಿಷಯವನ್ನು ಕಲಿಯುವಾಗ, ನಾವು ದೇವರು ಮತ್ತು ಕ್ರಿಸ್ತನೊಂದಿಗಿನ ಅದರ ಸಂಬಂಧವನ್ನು ಗ್ರಹಿಸಲು ಮತ್ತು ಅದು ಯೆಹೋವನ ವ್ಯಕ್ತಿತ್ವ ಹಾಗೂ ಒದಗಿಸುವಿಕೆಗಳನ್ನು ಹೇಗೆ ವೃದ್ಧಿಮಾಡುತ್ತದೆಂಬುದರ ಕುರಿತು ಮನನ ಮಾಡಲು ಬಯಸುತ್ತೇವೆ. ಇದು ನಮ್ಮ ವಿವೇಚನಾಶಕ್ತಿಯನ್ನು ಮತ್ತು ಯೆಹೋವ ದೇವರು ಹಾಗೂ ಯೇಸು ಕ್ರಿಸ್ತನು ನಮಗಾಗಿ ಏನನ್ನು ಮಾಡಿದ್ದಾರೊ ಅದಕ್ಕಾಗಿರುವ ನಮ್ಮ ಗಣ್ಯತೆಯನ್ನು ವರ್ಧಿಸುತ್ತದೆ. ನಾವು ಯಾವುದೇ ವಿಷಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳದಿರುವಲ್ಲಿ, ನಾವು ದೇವರು, ಕ್ರಿಸ್ತನು ಮತ್ತು ದೈವಿಕ ಉದ್ದೇಶದ ಕುರಿತಾಗಿ ಕಲಿತಿರುವ ಎಲ್ಲಾ ಮಹತ್ವದ ಸಂಗತಿಗಳಲ್ಲಿನ ನಮ್ಮ ನಂಬಿಕೆಯನ್ನು ತೊರೆಯಬಾರದೆಂಬುದನ್ನು ಗ್ರಹಿಸುವಂತೆ ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುವುದು.
20. ನಾವು ಆತ್ಮಿಕ ವಿವೇಚನಾಶಕ್ತಿಯೊಂದಿಗೆ ಹೇಗೆ ತುಂಬಿರಬಲ್ಲೆವು?
20 ನಾವು ಯಾವಾಗಲೂ ನಮ್ಮ ವಿಚಾರಗಳನ್ನೂ ಕ್ರಿಯೆಗಳನ್ನೂ ದೇವರ ವಾಕ್ಯದೊಂದಿಗೆ ಹೊಂದಿಸಿಕೊಳ್ಳುವಲ್ಲಿ, ನಾವು ಆತ್ಮಿಕ ವಿವೇಚನಾಶಕ್ತಿಯಿಂದ ತುಂಬಿರುವೆವು. (2 ಕೊರಿಂಥ 13:5) ಇದನ್ನು ಒಂದು ರಚನಾತ್ಮಕ ವಿಧದಲ್ಲಿ ಮಾಡುವುದು, ನಾವು ನಮ್ರರಾಗಿರುವಂತೆ, ನಾವು ಹೇಳಿದ್ದೇ ಸರಿ ಎನ್ನದಿರುವಂತೆ ಮತ್ತು ಇತರರ ಕುರಿತಾಗಿ ಟೀಕಾತ್ಮಕರಾಗಿರದಂತೆ ನಮಗೆ ಸಹಾಯ ಮಾಡುತ್ತದೆ. ತಿದ್ದುಪಾಟಿನಿಂದ ಪ್ರಯೋಜನಪಡೆದು, ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವಂತೆ ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುವುದು. (ಜ್ಞಾನೋಕ್ತಿ 3:7) ಹಾಗಾದರೆ ಯೆಹೋವನನ್ನು ಮೆಚ್ಚಿಸುವ ಬಯಕೆಯೊಂದಿಗೆ, ನಾವು ಆತನ ವಾಕ್ಯದ ನಿಷ್ಕೃಷ್ಟ ಜ್ಞಾನದಿಂದ ತುಂಬಿರಲು ಪ್ರಯತ್ನಿಸೋಣ. ಇದು ನಮಗೆ ತಪ್ಪಿನಿಂದ ಸರಿಯಾದದ್ದನ್ನು ವಿವೇಚಿಸಲು, ನಿಜವಾಗಿ ಪ್ರಾಮುಖ್ಯವಾಗಿರುವಂಥದ್ದನ್ನು ನಿರ್ಧರಿಸಲು ಮತ್ತು ಯೆಹೋವನೊಂದಿಗಿನ ನಮ್ಮ ಅಮೂಲ್ಯ ಸಂಬಂಧಕ್ಕೆ ನಿಷ್ಠೆಯಿಂದ ಅಂಟಿಕೊಳ್ಳಲು ಶಕ್ತರನ್ನಾಗಿ ಮಾಡುವುದು. ನಾವು ನಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸುವಲ್ಲಿ ಇದೆಲ್ಲವೂ ಶಕ್ಯ. ಆದರೂ, ಇನ್ನೂ ಹೆಚ್ಚಿನದ್ದು ಅಗತ್ಯ. ವಿವೇಚನಾಶಕ್ತಿಯು ನಮ್ಮನ್ನು ಕಾಪಾಡುವಂತೆ ನಾವು ಬಿಡಬೇಕು.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ ನಾವು ನಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸಬೇಕು ಏಕೆ?
◻ ವಿವೇಚನಾಶಕ್ತಿಯು ನಮ್ಮ ನಡೆನುಡಿಯನ್ನು ಹೇಗೆ ಬಾಧಿಸಬಲ್ಲದು?
◻ ವಿವೇಚನಾಶಕ್ತಿಯು ನಮ್ಮ ಮನೋವೃತ್ತಿಯ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು?
◻ ನಾವು ವಿವೇಚನಾಶಕ್ತಿಗಾಗಿ ಯಾವಾಗಲೂ ಯೆಹೋವನ ಕಡೆಗೆ ನೋಡಬೇಕು ಏಕೆ?
[ಪುಟ 13 ರಲ್ಲಿರುವ ಚಿತ್ರ]
ನಮ್ಮ ಮನೋವೃತ್ತಿಯನ್ನು ನಿಯಂತ್ರಿಸಲು ವಿವೇಚನಾಶಕ್ತಿಯು ಸಹಾಯಮಾಡುತ್ತದೆ
[ಪುಟ 15 ರಲ್ಲಿರುವ ಚಿತ್ರ]
ತಿಳಿಗೇಡಿತನವು ನಿಜವಾಗಿ ತೃಪ್ತಿದಾಯಕವಲ್ಲ ಎಂಬುದನ್ನು ವಿವೇಚನಾಶೀಲನಾದ ರಾಜ ಸೊಲೊಮೋನನು ಗ್ರಹಿಸಿದನು