ವಿಗ್ರಹಾರಾಧನೆಯಿಂದ ಯಾಕೆ ಕಾಪಾಡಿಕೊಳ್ಳಬೇಕು?
“ಪ್ರಿಯರಾದ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.”—1 ಯೋಹಾನ 5:21.
1. ಯೆಹೋವನ ಆರಾಧನೆಯು ವಿಗ್ರಹಾರಾಧನೆಯಿಂದ ಸ್ವತಂತ್ರವಾಗಿರುವುದೇಕೆ?
ಯೆಹೋವನು ಲೋಹದ, ಕಟ್ಟಿಗೆಯ, ಅಥವಾ ಕಲ್ಲಿನ ವಿಗ್ರಹವಲ್ಲ. ಆತನನ್ನು ಭೂಮಿಯ ಒಂದು ದೇವಾಲಯದಲ್ಲಿರಿಸಲು ಸಾಧ್ಯವಿಲ್ಲ. ಆತನು ಮಾನವರಿಗೆ ಅದೃಶ್ಯನಾಗಿರುವ, ಸರ್ವಶಕ್ತ ಆತ್ಮನಾಗಿರುವುದರಿಂದ, ಆತನ ಒಂದು ರೂಪ ಮಾಡುವುದು ಅಸಾಧ್ಯ. ಹೀಗಿರುವುದರಿಂದ, ಯೆಹೋವನ ಶುದ್ಧಾರಾಧನೆಯು ಪೂರ್ಣವಾಗಿ ವಿಗ್ರಹಾರಾಧನೆರಹಿತವಾಗಿರಲೇ ಬೇಕು.—ವಿಮೋಚನಕಾಂಡ 33:20; ಅ. ಕೃತ್ಯಗಳು 17:24; 2 ಕೊರಿಂಥ 3:17.
2. ಯಾವ ಪ್ರಶ್ನೆಗಳು ಪರಿಗಣನೆಗೆ ಅರ್ಹವಾಗಿವೆ?
2 ಹಾಗಾದರೆ, ನೀವೊಬ್ಬ ಯೆಹೋವನ ಆರಾಧಕರಾಗಿರುವಲ್ಲಿ, ನೀವು ‘ವಿಗ್ರಹಾರಾಧನೆ ಅಂದರೇನು?’ ಎಂದು ಪ್ರಾಯಶಃ ಕೇಳಬಹುದು. ಹಿಂದಿನ ದಿನಗಳಲ್ಲಿ ಯೆಹೋವನ ಸೇವಕರು ಅದನ್ನು ತೊರೆಯಸಾಧ್ಯವಾದದ್ದು ಹೇಗೆ? ಮತ್ತು ಇಂದು ವಿಗ್ರಹಾರಾಧನೆಯಿಂದ ಯಾಕೆ ಕಾಪಾಡಿಕೊಳ್ಳಬೇಕು?
ವಿಗ್ರಹಾರಾಧನೆಯು ಏನಾಗಿದೆ
3, 4. ವಿಗ್ರಹಾರಾಧನೆಯನ್ನು ಹೇಗೆ ಸ್ಪಷ್ಟೀಕರಿಸಬಹುದು?
3 ಸರ್ವಸಾಮಾನ್ಯವಾಗಿ, ವಿಗ್ರಹಾರಾಧನೆಯು ಒಂದು ವ್ರತಾಚರಣೆ ಯಾ ಒಂದು ಸಂಸ್ಕಾರವನ್ನು ಒಳಗೊಂಡಿರುತ್ತದೆ. ವಿಗ್ರಹಾರಾಧನೆಯು ಒಂದು ವಿಗ್ರಹಕ್ಕೆ ಪೂಜ್ಯಭಾವ, ಪ್ರೀತಿ, ಆರಾಧನೆ, ಯಾ ಮನ್ನಣೆಯಾಗಿರುತ್ತದೆ. ಮತ್ತು ಒಂದು ವಿಗ್ರಹವು ಏನಾಗಿದೆ? ಒಂದು ರೂಪ, ಯಾವುದೇ ವಸ್ತುವಿನ ಒಂದು ಪ್ರತಿನಿಧಿತ್ವ, ಯಾ ಒಂದು ಚಿಹ್ನೆ, ಒಂದು ಭಕ್ತಿಯ ವಸ್ತು ಅದಾಗಿದೆ. ಸಜೀವ (ಒಂದು ಮಾನವ, ಪ್ರಾಣಿಯ, ಯಾ ಸಂಸ್ಥಾಪನೆಯ) ಆಸ್ತಿತ್ವವಿದೆಯೆಂದು ನಂಬುವ ವಾಸ್ತವಿಕ ಯಾ ಕಾಲ್ಪನಿಕ ಉಚ್ಚ ಶಕ್ತಿಯ ಕಡೆಗೆ ವಿಗ್ರಹಾರಾಧನೆಯು ಸಾಮಾನ್ಯವಾಗಿ ನಿರ್ದೇಶಿಸಲ್ಪಟ್ಟಿರುತ್ತದೆ. ಆದರೆ ಜೀವರಹಿತ (ಒಂದು ಶಕ್ತಿ ಯಾ ನಿಸರ್ಗದ ಜೀವವಿಲ್ಲದ ವಸ್ತು) ವಸ್ತುಗಳ ಸಂಬಂಧದಲ್ಲಿಯೂ ಕೂಡ ವಿಗ್ರಹಾರಾಧನೆಯನ್ನು ಆಚರಿಸಬಹುದು.
4 ಶಾಸ್ತ್ರವಚನಗಳಲ್ಲಿ, ವಿಗ್ರಹಗಳಿಗೆ ಸೂಚಿಸುವ ಹೀಬ್ರು ಶಬ್ದಗಳು ಅನೇಕ ಬಾರಿ ಅಯೋಗ್ಯತೆಯನ್ನು ಒತ್ತಿ ಹೇಳುವ, ಯಾ ತಿರಸ್ಕಾರದ ಪದಗಳಾಗಿವೆ. ಇವುಗಳಲ್ಲಿ ಉಪಯೋಗಿಸಲಾದ ಶಬ್ದಗಳು “ಕೊರೆದ ಯಾ ಕೆತ್ತಿದ ವಿಗ್ರಹ” (ಅಕ್ಷರಶಃ, ಯಾವುದೇ ಕೆತ್ತಿ ಮಾಡಿದ); “ಎರಕದ ಪ್ರತಿಮೆ, ರೂಪ, ಯಾ ವಿಗ್ರಹ” (ಯಾವುದೇ ಅಚ್ಚಿನಲ್ಲಿ ಹೊಯ್ದ ಯಾ ಎರಕ ಹೊಯ್ದ); “ಭೀಕರ ಮೂರ್ತಿ”; “ವ್ಯರ್ಥ ವಿಗ್ರಹ” (ಅಕ್ಷರಶಃ, ನಿಷ್ಪಯ್ರೋಜಕ); ಮತ್ತು “ಹೇಯ ವಿಗ್ರಹಗಳು,” ಎಂದಾಗಿವೆ. ಗ್ರೀಕ್ ಪದ ಐಡೋಲನ್ ಎಂಬುದನ್ನು “ವಿಗ್ರಹ” ಎಂದು ತರ್ಜುಮೆ ಮಾಡಲಾಗಿದೆ.
5. ಎಲ್ಲಾ ರೂಪಗಳು ವಿಗ್ರಹಗಳಲವ್ಲೆಂದು ಯಾಕೆ ಹೇಳಸಾಧ್ಯವಿದೆ?
5 ಎಲ್ಲ ರೂಪಗಳು ವಿಗ್ರಹಗಳಲ್ಲ. ಆಜ್ಞಾಶಾಸನಗಳ ಮಂಜೂಷಕ್ಕಾಗಿ ಎರಡು ಬಂಗಾರದ ಕೆರೂಬಿಗಳನ್ನು ಮಾಡಲು ಮತ್ತು ಮಂಜೂಷಕ್ಕಾಗಿರುವ ಗುಡಾರದ ಹತ್ತು ಬಟ್ಟೆಗೆಳ ಒಳ ಹೊದಿಕೆಯ ಮೇಲೆ ಮತ್ತು ಪವಿತ್ರಸ್ಥಾನವನ್ನು ಮಹಾಪವಿತ್ರಸ್ಥಾನದಿಂದ ಪ್ರತ್ಯೇಕಿಸುವ ತೆರೆಯ ಮೇಲೆ ಅಂಥಾ ಆತ್ಮ ಜೀವಿಗಳ ಪ್ರತಿನಿಧಿತ್ವಗಳನ್ನು ಕಸೂತಿ ಹಾಕಿಸಲು ದೇವರು ತಾನೇ ಇಸ್ರಾಯೇಲ್ಯರಿಗೆ ಹೇಳಿದನು. (ವಿಮೋಚನಕಾಂಡ 25:1, 18; 26:1, 31-33) ಸ್ವರ್ಗೀಯ ಕೆರೂಬಿಯರ ಪ್ರಧಾನ ಚಿಹ್ನೆಯಾಗಿರುವ ಈ ಪ್ರತಿನಿಧಿತ್ವಗಳನ್ನು ಕೇವಲ ಪೌರೋಹಿತ್ಯ ನಡಸುವ ಯಾಜಕರು ನೋಡಿದರು. (ಹೋಲಿಸಿ ಇಬ್ರಿಯ 9:24, 25.) ನೀತಿಯ ದೇವದೂತರು ತಾವೇ ಆರಾಧನೆಯನ್ನು ಸ್ವೀಕರಿಸದೆ ಇರುವಾಗ, ಮಂಜೂಷದ ಕೆರೂಬಿಯರ ಪ್ರತಿನಿಧಿತ್ವಗಳನ್ನು ಪೂಜ್ಯಭಾವದಿಂದ ನೋಡಬಾರದೆಂಬುದು ವ್ಯಕ್ತವಾಗುತ್ತದೆ.—ಕೊಲೊಸ್ಸೆ 2:18; ಪ್ರಕಟನೆ 19:10; 22:8, 9.
ವಿಗ್ರಹಾರಾಧನೆಯ ಕಡೆಗೆ ಯೆಹೋವನ ದೃಷ್ಟಿಕೋನ
6. ವಿಗ್ರಹಾರಾಧನೆಯ ಬಗ್ಗೆ ಯೆಹೋವನ ದೃಷ್ಟಿಕೋನವೇನು?
6 ಯೆಹೋವನು ಎಲ್ಲ ವಿಗ್ರಹಾರಾಧಕ ಆಚಾರಗಳ ವಿರುದ್ಧವಾಗಿರುವುದರಿಂದ ಆತನ ಸೇವಕರು ವಿಗ್ರಹಾರಾಧನೆಯ ವಿರುದ್ಧ ತಮ್ಮನ್ನು ಕಾಪಾಡಿಕೊಳ್ಳುತ್ತಾರೆ. ಪೂಜ್ಯಭಾವನೆಯ ವಸ್ತುಗಳಾಗಿ ರೂಪಗಳನ್ನು ಮಾಡಿಕೊಂಡು, ಅವುಗಳನ್ನು ಆರಾಧಿಸಬಾರದೆಂದು ಇಸ್ರಾಯೇಲ್ಯರಿಗೆ ದೇವರು ಆಜ್ಞೆಯನ್ನಿತ್ತನು. ದಶಾಜ್ಞೆಗಳಲ್ಲಿ ಈ ಮಾತುಗಳು ದೊರಕುತ್ತವೆ: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನಾದದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಮಾಡುವವನಾಗಿಯೂ ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋ ಸಾವಿರ ತಲೆಗಳ ವರೆಗೆ ದಯೆತೋರಿಸುವವನಾಗಿಯೂ ಇದ್ದೇನೆ.”—ವಿಮೋಚನಕಾಂಡ 20:4-6.
7. ಯೆಹೋವನು ಎಲ್ಲ ವಿಗ್ರಹಾರಾಧನೆಗೆ ಯಾಕೆ ವಿರುದ್ಧವಾಗಿದ್ದಾನೆ?
7 ಎಲ್ಲಾ ವಿಗ್ರಹಾರಾಧನೆಗೆ ಯೆಹೋವನು ಯಾಕೆ ವಿರುದ್ಧವಾಗಿದ್ದಾನೆ? ದಶಾಜ್ಞೆಗಳಲ್ಲಿ ಎರಡನೆಯದರಲ್ಲಿ ಮೇಲೆ ತೋರಿಸಿರುವಂತೆ, ಪ್ರಧಾನವಾಗಿ ಆತನು ಸಂಪೂರ್ಣ ಭಕ್ತಿಯನ್ನು ಒತ್ತಾಯಿಸುವುದರಿಂದಲೇ. ಇನ್ನೂ, ತನ್ನ ಪ್ರವಾದಿ ಯೆಶಾಯನ ಮೂಲಕ ಆತನು ಅಂದದ್ದು: “ನಾನೇ ಯೆಹೋವನು; ಅದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.” (ಯೆಶಾಯ 42:8) ಒಂದು ಸಮಯದಲ್ಲಿ, ವಿಗ್ರಹಾರಾಧನೆಯು ಇಸ್ರಾಯೇಲ್ಯರಿಗೆ ಉರುಲಾಯಿತು, ಎಷ್ಟರವರೆಗೆ ಅಂದರೆ “ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು.” (ಕೀರ್ತನೆ 106:36, 37) ವಿಗ್ರಹಾರಾಧಕರು ಯೆಹೋವನು ಸತ್ಯ ದೇವರು ಎಂಬದನ್ನು ಅಲ್ಲಗಳೆಯುವುದು ಮಾತ್ರವಲ್ಲ, ದೆವ್ವಗಳ ಸಹಿತವಾಗಿ ಆತನ ಮುಖ್ಯ ಶತ್ರುವಾದ ಸೈತಾನನ ಅಭಿರುಚಿಗಳನ್ನು ಕೂಡ ಪೂರೈಸುತ್ತಾರೆ.
ಪರೀಕ್ಷೆಯ ಕೆಳಗೆ ನಿಷ್ಠರು
8. ಮೂವರು ಇಬ್ರಿಯರಾದ ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ ಯಾವ ಪರೀಕ್ಷೆಯನ್ನು ಎದುರಿಸಿದರು?
8 ಯೆಹೋವನಿಗೆ ನಿಷ್ಠೆಯು ಕೂಡ ನಾವು ವಿಗ್ರಹಾರಾಧನೆಯ ವಿರುದ್ಧ ಕಾಪಾಡಿಕೊಳ್ಳುವಂತೆ ಮಾಡುತ್ತದೆ. ಇದನ್ನು ದಾನಿಯೇಲ 3 ನೇ ಅಧ್ಯಾಯದಲ್ಲಿ ದಾಖಲೆಯಾದ ಫಟನೆಯ ಮೂಲಕ ಉದಾಹರಿಸಲಾಗಿದೆ. ಆತನು ನಿಲ್ಲಿಸಿದ ಮಹಾ ಬಂಗಾರದ ವಿಗ್ರಹದ ಪ್ರಾರಂಭೋತ್ಸವವನ್ನಾಚರಿಸಲು, ಬಾಬೆಲಿನ ರಾಜ ನೆಬೂಕದ್ನೆಚ್ಚರನು ತನ್ನ ಸಾಮ್ರಾಜ್ಯದ ಅಧಿಕಾರಿಗಳನ್ನು ಒಟ್ಟುಗೂಡಿಸಿದನು. ಆತನ ಆಜ್ಞೆಯಲ್ಲಿ ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ—ಬಾಬೆಲಿನ ಮೂವರು ಇಬ್ರಿಯ ಸಂಸ್ಥಾನಾಧಿಕಾರಿಗಳು—ಎಂಬವರೂ ಸೇರಿದ್ದರು. ನಿಶ್ಚಯಿಸಿದ ಸಂಗೀತ ಉಪಕರಣಗಳ ಶಬ್ದ ಕೇಳಿದ ಕೂಡಲೆ ಹಾಜರಿರುವವರೆಲ್ಲರು ವಿಗ್ರಹದ ಎದುರು ಅಡ್ಡ ಬೀಳಬೇಕಾಗಿತ್ತು. ಇದು ಬಾಬೆಲ್ ಸಾಮ್ರಾಜ್ಯವನ್ನು ಪ್ರತಿನಿಧಿಸುವ ಒಂದು ವಿಗ್ರಹದ ಎದುರು ಮೂವರು ಇಬ್ರಿಯರು ಅಡ್ಡಬೀಳುವಂತೆ ಮಾಡುವ ಬಾಬೆಲಿನ ನಿಜ ದೇವರಾದ ಸೈತಾನನ ಒಂದು ಪ್ರಯತ್ನವಾಗಿತ್ತು. ಆ ದೃಶ್ಯದಲ್ಲಿ ನೀವಿದೀರ್ದೆಂದು ಕಲ್ಪಿಸಿಕೊಳ್ಳಿರಿ.
9, 10. (ಎ) ಆ ಮೂವರು ಇಬ್ರಿಯರು ಯಾವ ಸ್ಥಾನವನ್ನು ತಕ್ಕೊಂಡರು, ಮತ್ತು ಅವರು ಹೇಗೆ ಬಹುಮಾನಿತರಾದರು? (ಬಿ) ಆ ಮೂವರು ಇಬ್ರಿಯರ ಮಾರ್ಗಕ್ರಮದಿಂದ ಯೆಹೋವನ ಸಾಕ್ಷಿಗಳು ಯಾವ ಪ್ರೋತ್ಸಾಹನೆಯನ್ನು ಪಡೆಯಬಲ್ಲರು?
9 ನೋಡಿರಿ! ಆ ಮೂವರು ಇಬ್ರಿಯರು ನಿಂತಿರುತ್ತಾರೆ. ಮೂರ್ತಿಗಳನ್ನು ಯಾ ಕೆತ್ತಿದ ವಿಗ್ರಹಗಳನ್ನು ಮಾಡುವುದರ ಮತ್ತು ಸೇವಿಸುವುದರ ವಿರುದ್ಧ ದೇವರ ನಿಯಮವನ್ನು ಅವರು ನೆನಪಿಗೆ ತರುತ್ತಾರೆ. ನೆಬೂಕದ್ನೆಚ್ಚರನು ಅವರಿಗೆ ಒಂದು ಕಟ್ಟಕಡೆಯ ತೀರ್ಮಾನವನ್ನು ಕೊಡುತ್ತಾನೆ—ಅಡಬ್ಡೀಳಿರಿ ಇಲ್ಲವೆ ಸಾಯಿರಿ! ಆದರೆ ಯೆಹೋವನಿಗೆ ನಿಷ್ಠೆಯಲ್ಲಿ, ಅವರು ಹೇಳುವುದು: “ಅರಸೇ, ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಆವಿಗೆಯೊಳಗಿಂದ ನಮ್ಮನ್ನು, ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.”—ದಾನಿಯೇಲ 3:16-18.
10 ದೇವರ ಈ ನಿಷ್ಠ ಸೇವಕರು ಅತಿಯಾಗಿ ಕಾಯಿಸಿದ ಆವಿಗೆಯೊಳಗೆ ಬಿಸಾಡಲ್ಪಟ್ಟರು. ಆವಿಗೆಯಲ್ಲಿ ನಾಲ್ವರು ವ್ಯಕ್ತಿಗಳು ನಡೆದಾಡುತ್ತಿದ್ದದ್ದನ್ನು ನೋಡಿ ಬೆರಗುಗೊಂಡು, ನೆಬೂಕದ್ನೆಚ್ಚರನು ಆ ಮೂವರು ಇಬ್ರಿಯರನ್ನು ಹೊರಗೆ ಕರೆಯುತ್ತಾನೆ, ಮತ್ತು ಅವರು ಯಾವ ಹಾನಿಯೂ ಆಗದೆ ಹೊರಬರುತ್ತಾರೆ. ಆಗ ಅರಸನು ಕೂಗಿ ಹೇಳುವುದು: “ಶದ್ರಕ್ ಮೇಶಕ್ ಅಬೇದ್ನೆಗೋ ಎಂಬವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲಾ. . . . ಹೀಗೆ ಉದ್ಧರಿಸಲು ಸಮರ್ಥನಾದ ಇನ್ನಾವ ದೇವರೂ ಇಲ್ಲವಲ್ಲಾ.” (ದಾನಿಯೇಲ 3:28, 29) ಆ ಮೂವರು ಇಬ್ರಿಯರ ಸಮಗ್ರತೆ ಕಾಪಾಡಿಕೊಳ್ಳುವಿಕೆಯು ಯೆಹೋವನ ಇಂದಿನ ಸಾಕ್ಷಿಗಳಿಗೆ, ದೇವರಿಗೆ ನಿಷ್ಠಾವಂತರಾಗಿರಲು, ಲೋಕದ ಕಡೆಗೆ ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು, ಮತ್ತು ವಿಗ್ರಹಾರಾಧನೆಯನ್ನು ತೊರೆಯಲು ಪ್ರೋತ್ಸಾಹನೆಯನ್ನು ಒದಗಿಸುತ್ತದೆ.—ಯೋಹಾನ 17:16.
ನ್ಯಾಯಾಲಯದಲ್ಲಿ ವಿಗ್ರಹಗಳು ಅಪಜಯ ಹೊಂದುತ್ತವೆ
11, 12. (ಎ) ಯೆಹೋವ ಮತ್ತು ವಿಗ್ರಹ-ದೇವರುಗಳನ್ನೊಳಗೊಂಡ ಯಾವ ದಾಖಲೆಯನ್ನು ಯೆಶಾಯನ ಮೂಲಕ ಮಾಡಲಾಯಿತು? (ಬಿ) ಯೆಹೋವನ ಮೂಲಕ ಆಹ್ವಾನಿಸಲ್ಪಟ್ಟಾಗ ಜನಾಂಗಗಳ ದೇವರುಗಳು ಏನು ಮಾಡಿದರು?
11 ವಿಗ್ರಹಗಳಿಗೆ ಪೂಜ್ಯಭಾವವು ಪ್ರಯೋಜನಕರವಲ್ಲವಾಗಿರುವುದೇ ವಿಗ್ರಹಾರಾಧನೆಯ ವಿರುದ್ಧ ಕಾಪಾಡಿಕೊಳ್ಳಲು ಇನ್ನೊಂದು ಕಾರಣವಾಗಿರುತ್ತದೆ. ಮಾನವ ನಿರ್ಮಿತ ವಿಗ್ರಹಗಳು—ಅನೇಕ ಬಾರಿ ಬಾಯಿ, ಕಣ್ಣು, ಮತ್ತು ಕಿವಿಗಳೊಂದಿಗೆ—ಜೀವವಿರುವವೆಂದು ಕಂಡು ಬಂದರೂ ಅವುಗಳಿಗೆ ಮಾತಾಡುವುದು, ನೋಡುವುದು, ಯಾ ಕೇಳುವುದು ಅಸಾಧ್ಯ, ಮತ್ತು ಅವುಗಳ ಭಕ್ತರಿಗೆ ಅವು ಯಾವ ಸಹಾಯವನ್ನೂ ಮಾಡಶಕ್ತವಾಗಿರುವುದಿಲ್ಲ. (ಕೀರ್ತನೆ 135:15-18) ಇದನ್ನು ಕಾರ್ಯತಃ, ಸಾ.ಶ.ಪೂ. ಎಂಟನೇ ಶತಮಾನದಲ್ಲಿ ಯೆಹೋವ ಮತ್ತು ವಿಗ್ರಹ ದೇವರುಗಳ ನಡುವಿನ ನ್ಯಾಯಾಲಯದ ಮೊಕದ್ದಮೆಯ ಕುರಿತು ಯೆಶಾಯ 43:8-28 ರಲ್ಲಿ ದೇವರ ಪ್ರವಾದಿಯು ದಾಖಲಿಸಿದಾಗ ತೋರಿಸಿಕೊಡಲಾಯಿತು. ಅದರಲ್ಲಿ ದೇವ ಜನರಾದ ಇಸ್ರಾಯೇಲ್ಯರು ಒಂದು ಬದಿಯಲಿದ್ದರು, ಮತ್ತು ಲೋಕದ ಜನಾಂಗಗಳು ಇನ್ನೊಂದು ಬದಿಯಲಿದ್ದರು. “ಸಂಗತಿಗಳನ್ನು ಮುಂತಿಳಿಸಲು,” ಅಂದರೆ ನಿಷ್ಕ್ರಷ್ಟವಾಗಿ ಪ್ರವಾದಿಸಲು ಯೆಹೋವನು ಜನಾಂಗಗಳ ಸುಳ್ಳು ದೇವರುಗಳನ್ನು ಆಹ್ವಾನಿಸಿದನು. ಒಬ್ಬನಿಂದಾದರೂ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ತನ್ನ ಜನರ ಬಳಿ ತಿರುಗಿ, ಯೆಹೋವನು ನುಡಿದದ್ದು: “ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು.” ಯೆಹೋವನಿಗಿಂತ ಮುಂಚೆ ಅವರ ದೇವರುಗಳು ಆಸ್ತಿತ್ವದಲ್ಲಿದ್ದುವೆಂದು ಯಾ ಅವುಗಳು ಪ್ರವಾದಿಸಬಲ್ಲವೆಂದು ಜನಾಂಗಗಳಿಂದ ರುಜುಪಡಿಸಲು ಸಾಧ್ಯವಾಗಲಿಲ್ಲ. ಆದರೆ ಯೆಹೋವನು ಬಾಬೆಲಿನ ನಾಶವಾಗುವಿಕೆಯನ್ನು ಮತ್ತು ಆತನ ಬಂದಿವಾಸಿ ಜನರ ಬಿಡುಗಡೆಯನ್ನು ಮುಂತಿಳಿಸಿದನು.
12 ಅದೂ ಅಲ್ಲದೆ, ಯೆಶಾಯ 44:1-8 ರಲ್ಲಿ ವಿವರಿಸಿದಂತೆ, ದೇವರ ಬಿಡುಗಡೆ ಹೊಂದಿದ ಸೇವಕರು, “ಯೆಹೋವನ ಭಕ್ತ” ರೆಂದು ಹೇಳುವರು. ಆತನು ತಾನೇ ಅಂದದ್ದು: “ನಾನೇ ಆದಿ, ಅಂತವೂ ನಾನೇ; ನಾನು ಹೊರತು ಯಾವ ದೇವರೂ ಇಲ್ಲ.” ವಿಗ್ರಹ ದೇವರುಗಳಿಂದ ಅಪ್ರಮಾಣೀಕರಣವೇ ಇಲ್ಲ. ಯೆಹೋವನು ತನ್ನ ಜನರ ವಿಷಯದಲ್ಲಿ ಮತ್ತೊಮ್ಮೆ ಹೇಳಿದ್ದು: “ನೀವೇ ನನ್ನ ಸಾಕ್ಷಿಗಳು,” ಮತ್ತು ಕೂಡಿಸಿದ್ದು: “ನಾನಲ್ಲದೆ ಇನ್ನೊಬ್ಬ ದೇವರಿದ್ದಾನೋ? ಇನ್ನು ಯಾವ ಶರಣನೂ ಇಲ್ಲ.”
13. ವಿಗ್ರಹಾರಾಧನೆಯು ಒಬ್ಬ ವಿಗ್ರಹಾರಾಧಕನ ಕುರಿತು ಏನು ಬಯಲುಪಡಿಸುತ್ತದೆ?
13 ಇನ್ನೂ ನಾವು ವಿಗ್ರಹಾರಾಧನೆಯ ವಿರುದ್ಧ ಕಾಪಾಡಿಕೊಳ್ಳಲು ಕಾರಣವು ಅದರಲ್ಲಿ ತೊಡಗುವುದು ವಿವೇಕದ ಕೊರತೆಯನ್ನು ಸೂಚಿಸುತ್ತದೆ. ವಿಗ್ರಹಾರಾಧಕನು ಆತನು ಆರಿಸಿದ ಮರದ ಭಾಗದಿಂದ ಆರಾಧನೆಗಾಗಿ ದೇವರನ್ನು ಮಾಡುತ್ತಾನೆ, ಮತ್ತು ಇನ್ನೊಂದು ಭಾಗದಿಂದ ತನ್ನ ಆಹಾರವನ್ನು ಬೇಯಿಸಲು ಬೆಂಕಿಯನ್ನು ಹೊತ್ತಿಸುತ್ತಾನೆ. (ಯೆಶಾಯ 44:9-17) ಎಂಥ ಮೂರ್ಖತನ! ಅವುಗಳ ದೇವತನವನ್ನು ರುಜುಪಡಿಸಲು ಮನಗಾಣಿಸುವ ಸಾಕ್ಷಿಯನ್ನು ಕೊಡಲು ಅಶಕ್ಯರಾದುದರಿಂದಲೂ ಕೂಡ, ವಿಗ್ರಹ-ದೇವರುಗಳನ್ನು ಮಾಡುವವನು ಮತ್ತು ಭಕ್ತನು ನಾಚಿಕೆಯನ್ನನುಭವಿಸುತ್ತಾರೆ. ಆದರೆ ಯೆಹೋವನ ದೇವತ್ವವು ಪ್ರಶ್ನಾತೀತವಾಗಿದೆ, ಯಾಕಂದರೆ ಆತನು ಬಾಬೆಲಿನಿಂದ ತನ್ನ ಜನರ ಬಿಡುಗಡೆಯನ್ನು ಮುಂತಿಳಿಸಿದ್ದು ಮಾತ್ರವಲ್ಲ, ಇದು ಸಂಭವಿಸುವಂತೆಯೂ ಮಾಡಿದನು. ಯೆರೂಸಲೇಮ್ ಪುನಃ ಜನನಿವಾಸಿತವಾಯಿತು, ಯೂದಾಯದ ಪಟ್ಟಣಗಳು ಪುನಃ ಕಟ್ಟಲ್ಪಟ್ಟವು, ಮತ್ತು ಬಾಬೆಲಿನ “ಜಲರಾಶಿ” ಯು—ಯೂಫ್ರೇಟೀಸ್ ನದಿ—ಸಂರಕ್ಷಣೆಯ ಮೂಲವಾಗಿರದೆ ಆವಿಯಾಗಿ ಹೋಯಿತು. (ಯೆಶಾಯ 44:18-27) ದೇವರು ಇನ್ನೂ ಮುಂತಿಳಿಸಿದಂತೆಯೇ, ಪಾರಸಿಯನಾದ ಕೋರೆಷನು ಬಾಬೆಲನ್ನು ಜಯಿಸಿದನು.—ಯೆಶಾಯ 44:28–45:6.
14. ವಿಶ್ವದ ಉಚ್ಚ ನ್ಯಾಯಾಲಯದಲ್ಲಿ, ನಿತ್ಯಕ್ಕಾಗಿ ಏನು ರುಜುಪಡಿಸಲಾಗುವುದು?
14 ವಿಗ್ರಹ-ದೇವತೆಗಳು ದೇವತ್ವದ ಕುರಿತು ಕಾನೂನಿನ ಮೊಕದ್ದಮೆಯಲ್ಲಿ ಸೋತರು. ಮತ್ತು ಬಾಬೆಲಿಗೆ ಏನು ಸಂಭವಿಸಿತೊ ಅದೇ ಅವಳ ಅಧುನಿಕ ಪ್ರತಿರೂಪ, ಮಹಾ ಬಾಬೆಲ್, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯಕ್ಕೆ ಸಂಭವಿಸುವುದು. ಅವಳು ಮತ್ತು ಅವಳ ಎಲ್ಲಾ ದೇವರುಗಳು, ಧಾರ್ಮಿಕ ಸಾಧನ ಸಾಮಗ್ರಿಗಳು, ಮತ್ತು ವಿಗ್ರಹಾರಾಧನೆಯ ವಸ್ತುಗಳು ಬೇಗನೆ ನಿತ್ಯಕ್ಕೂ ಇಲ್ಲವಾಗುವವು. (ಪ್ರಕಟನೆ 17:12–18:8) ವಿಶ್ವದ ಉಚ್ಚ ನ್ಯಾಯಾಲಯದಲ್ಲಿ, ಯೆಹೋವನೊಬ್ಬನೇ ಜೀವಂತ ಮತ್ತು ಸತ್ಯ ದೇವರು ಮತ್ತು ಆತನೇ ತನ್ನ ಪ್ರವಾದನಾ ವಾಕ್ಯವನ್ನು ನೆರವೇರಿಸುವವನು ಎಂದು ಆಗ ಶಾಶ್ವತವಾಗಿ ರುಜುಪಡಿಸಲಾಗುವುದು.
ದೆವ್ವಗಳಿಗೆ ಯಜ್ಞಾರ್ಪಣೆಗಳು
15. ಪವಿತ್ರಾತ್ಮ ಮತ್ತು ಮೊದಲನೇ ಶತಮಾನದ ಆಡಳಿತ ಮಂಡಳಿಯು ಯೆಹೋವನ ಜನರ ಮತ್ತು ವಿಗ್ರಹಾರಾಧನೆಯ ಕುರಿತು ಏನು ಸೂಚಿಸುತ್ತದೆ?
15 ದೇವರ ಆತ್ಮ ಮತ್ತು ಸಂಸ್ಥಾಪನೆಯ ಮೂಲಕ ಮಾರ್ಗದರ್ಶಿಸಲ್ಪಡುತ್ತಾರಾದ ಕಾರಣದಿಂದಲೂ ಯೆಹೋವನ ಜನರು ವಿಗ್ರಹಾರಾಧನೆಯಿಂದ ಕಾಪಾಡಿಕೊಳ್ಳುತ್ತಾರೆ. ಮೊದಲನೆಯ ಶತಮಾನದ ಯೆಹೋವನ ಸೇವಕರುಗಳ ಆಡಳಿತ ಮಂಡಳಿಯು ಜತೆ ಕ್ರೈಸ್ತರಿಗೆ ಅಂದದ್ದು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವುದು ಅವಶ್ಯವಾಗಿದೆ. ಇದಕ್ಕೆ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ವಿಹಿತವಾಗಿ ತೋರಿತು. ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೇದಾಗುವುದು. ಶುಭವಾಗಲಿ.”—ಅ. ಕೃತ್ಯಗಳು 15:28, 29.
16. ವಿಗ್ರಹಕ್ಕೆ ನೈವೇದ್ಯ ಮಾಡಲಾದ ವಸ್ತುಗಳ ಕುರಿತು ಪೌಲನೇನಂದನೋ ಅದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ಹೇಳುವಿರಿ?
16 ವಿಗ್ರಹಾರಾಧನೆಯಿಂದ ಕಾಪಾಡಿಕೊಳ್ಳಲು ಇರುವ ಮತ್ತೊಂದು ಕಾರಣವು ಭೂತ ಪ್ರೇತಗಳಲ್ಲಿನ ನಂಬಿಕೆಯನ್ನು ತೊರೆಯುವುದೇ. ಕರ್ತನ ಸಂಧ್ಯಾ ಭೋಜನದ ವಿಷಯದಲ್ಲಿ, ಅಪೊಸ್ತಲ ಪೌಲನು ಕೊರಿಂಥದ ಕ್ರೈಸ್ತರಿಗಂದದ್ದು: “ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ. . . . ನಾವು ದೇವಸ್ತೋತ್ರಮಾಡಿ ಪಾತ್ರೆಯಲ್ಲಿ ಪಾನಮಾಡುವದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ. ನಾವು ರೊಟ್ಟಿಯನ್ನು ಮುರಿದು ತಿನ್ನುವದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ. ರೊಟ್ಟಿಯು ಒಂದೇಯಾಗಿರುವದರಿಂದ ಅನೇಕರಾಗಿರುವ ನಾವು ಒಂದೇ ದೇಹದಂತಿದ್ದೇವೆ; ಯಾಕಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುತಕ್ಕೊಂಡು ತಿನ್ನುತ್ತೇವೆ. ವಂಶಕ್ರಮದಿಂದ ಇಸ್ರಾಯೇಲ್ಯರಾಗಿರುವವರನ್ನು ಯೋಚಿಸಿರಿ. ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಭಾಗಿಗಳಾಗಿದ್ದಾರಲ್ಲವೇ. ಹೀಗೆ ಹೇಳುವದರಿಂದ ಏನು ಹೇಳಿದ ಹಾಗಾಯಿತು? ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥವು ವಾಸ್ತವವೆಂದು ಅಥವಾ ವಿಗ್ರಹವು ವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ. ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ ದೆವ್ವಗಳಿಗೆ ಅರ್ಪಿಸುತ್ತಾರೆಂದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಭಾಗಿಗಳಾಗಿರಬೇಕೆಂದು ನನ್ನ ಇಷ್ಟವಲ್ಲ. ನೀವು ಕರ್ತನ ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾರಿರಿ; ಕರ್ತನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರಿರಿ. ಕರ್ತನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು?”—1 ಕೊರಿಂಥ 10:14-22.
17. ಸಾ.ಶ. ಮೊದಲನೇ ಶತಮಾನದಲ್ಲಿ, ಯಾವ ಪರಿಸ್ಥಿತಿಗಳಲ್ಲಿ ಒಬ್ಬ ಕ್ರೈಸ್ತನು ವಿಗ್ರಹಕ್ಕೆ ನೈವೇದ್ಯ ಮಾಡಿದ ಮಾಂಸವನ್ನು ತಿನ್ನಬಹುದಾಗಿತ್ತು, ಮತ್ತು ಯಾಕೆ?
17 ಒಂದು ಪ್ರಾಣಿಯ ಒಂದು ಭಾಗವನ್ನು ಒಂದು ವಿಗ್ರಹಕ್ಕೆ ನೈವೇದ್ಯಮಾಡಲಾಯಿತು, ಒಂದು ಪಾಲು ಯಾಜಕರಿಗೆ ಹೋಯಿತು, ಮತ್ತು ಆರಾಧಕನಿಗೆ ಹಬ್ಬಕ್ಕಾಗಿ ಕೊಂಚ ದೊರಕಿತು. ಆದಾಗ್ಯೂ, ಮಾಂಸದ ಒಂದು ಭಾಗವು ಮಾರುಕಟ್ಟೆಯಲ್ಲಿ ಮಾರಲ್ಪಡಬಹುದಾಗಿತ್ತು. ಒಂದು ವಿಗ್ರಹಾಲಯದಲ್ಲಿ ಹೋಗಿ ಮಾಂಸವನ್ನು ತಿನ್ನುವುದು ಒಂದು ಮತಾಚರಣೆಯ ಭಾಗವಾಗಿ ತಿನ್ನದಿದ್ದರೂ ಅದು ಕ್ರೈಸ್ತನೊಬ್ಬನಿಗೆ ಅನುಚಿತವಾಗಿತ್ತು, ಯಾಕಂದರೆ ಅದು ಇತರರನ್ನು ಎಡವಬಹುದಾಗಿತ್ತು ಯಾ ಆತನನ್ನು ಸುಳ್ಳು ಆರಾಧನೆಗೆ ಸೆಳೆಯಬಹುದಾಗಿತ್ತು. (1 ಕೊರಿಂಥ 8:1-13; ಪ್ರಕಟನೆ 2:12, 14, 18, 20) ಒಂದು ಪ್ರಾಣಿಯನ್ನು ವಿಗ್ರಹಕ್ಕೆ ಅರ್ಪಿಸುವುದು ಅದರ ಮಾಂಸವನ್ನು ಬದಲಾಯಿಸಲಿಲ್ಲ, ಹೀಗಿರುವುದರಿಂದ ಕ್ರೈಸ್ತನೊಬ್ಬನು ಮಾರುಕಟ್ಟೆಯಿಂದ ಮಾಂಸವನ್ನು ಕೊಂಡುಕೊಳ್ಳಬಹುದಿತ್ತು. ಒಂದು ಮನೆಯಲ್ಲಿ ಬಡಿಸಲಾದ ಮಾಂಸದ ಮೂಲವನ್ನು ಕೂಡ ಆತನು ವಿಚಾರಿಸಬೇಕೆಂದಿರಲಿಲ್ಲ. ಆದರೆ ಅದು “ಬಲಿಕೊಟ್ಟದ್ದು” ಎಂದು ಯಾರಾದರೂ ಹೇಳುವಲ್ಲಿ, ಯಾರನ್ನಾದರೂ ಎಡವುವದನ್ನು ತಡೆಯಲು, ಅದನ್ನಾತನು ತಿನ್ನದೆ ಇರುತ್ತಿದ್ದನು.—1 ಕೊರಿಂಥ 10:25-29.
18. ಒಂದು ವಿಗ್ರಹಕ್ಕೆ ಬಲಿಕೊಟ್ಟದ್ದನ್ನು ತಿನ್ನುವವರು ದೆವ್ವಗಳೊಂದಿಗೆ ಒಳಗೂಡ ಸಾಧ್ಯವಾದದ್ದು ಹೇಗೆ?
18 ಬಲಿಕೊಡುವ ಸಂಸ್ಕಾರದ ನಂತರ, ಆ ಮಾಂಸದಲ್ಲಿ ದೇವರು ಇದ್ದು, ಅದನ್ನು ಆರಾಧಕರ ಉತ್ಸವದಲ್ಲಿ ತಿನ್ನುವವರ ದೇಹದೊಳಗೆ ಪ್ರವೇಶಿಸುತ್ತಿದ್ದನೆಂದು ಅನೇಕ ಬಾರಿ ಆಲೋಚಿಸಲಾಗುತ್ತಿತ್ತು. ಒಟ್ಟಿಗೆ ಊಟ ಮಾಡಿದ ಜನರು ತಮ್ಮಲ್ಲಿ ಒಂದು ಬಂಧವನ್ನು ಹೊಸೆದುಕೊಂಡಂತೆಯೇ, ಬಲಿಕೊಡಲ್ಪಟ್ಟ ಪ್ರಾಣಿಗಳಲ್ಲಿ ಪಾಲು ತಕ್ಕೊಳ್ಳುವವರು ಯಜ್ಞವೇದಿಯಲ್ಲಿ ಪಾಲಿಗರಾಗುತ್ತಿದ್ದರು ಮತ್ತು ವಿಗ್ರಹದ ಮೂಲಕ ಪ್ರತಿನಿಧಿತವಾದ ಭೂತ-ದೇವರೊಂದಿಗೆ ಸಹಭಾಗಿತ್ವ ಪಡೆಯುತ್ತಿದ್ದರು. ಇಂಥ ವಿಗ್ರಹಾರಾಧನೆಯ ಮೂಲಕ, ದೆವ್ವಗಳು ಒಬ್ಬನೇ ಸತ್ಯ ದೇವರ ಆರಾಧನೆಯನ್ನು ಮಾಡುವುದರಿಂದ ಮಾನವರನ್ನು ತಡೆದಿವೆ. (ಯೆರೆಮೀಯ 10:1-15) ವಿಗ್ರಹಗಳಿಗೆ ನೈವೇದ್ಯ ಮಾಡಿರುವ ವಿಷಯಗಳಿಂದ ಯೆಹೋವನ ಜನರು ತಮ್ಮನ್ನು ದೂರವಿಟ್ಟುಕೊಂಡಿರಬೇಕಾದುದರಲ್ಲಿ ಆಶ್ಚರ್ಯವಿಲ್ಲ! ದೇವರಿಗೆ ನಿಷ್ಠೆ, ಆತನ ಪವಿತ್ರಾತ್ಮ ಮತ್ತು ಸಂಸ್ಥಾಪನೆಯ ಮೂಲಕ ಬರುವ ಮಾರ್ಗದರ್ಶನದ ಸ್ವೀಕಾರ, ಮತ್ತು ಭೂತಪ್ರೇತಗಳ ನಂಬಿಕೆಗಳಲ್ಲಿ ಒಳಗೂಡುವುದನ್ನು ತೊರೆಯುವುದರ ನಿರ್ಧಾರ ಕೂಡ ವಿಗ್ರಹಾರಾಧನೆಯ ವಿರುದ್ಧ ಇಂದು ನಮ್ಮನ್ನು ಕಾಪಾಡಿಕೊಳ್ಳುವುದಕ್ಕೆ ಬಲವಾದ ಪ್ರೇರಕಗಳಾಗಿ ಪರಿಣಮಿಸುತ್ತವೆ.
ಕಾಪಾಡಿಕೊಳ್ಳುವುದರ ಅಗತ್ಯತೆ ಯಾಕೆ?
19. ಪ್ರಾಚೀನ ಎಫೆಸದಲ್ಲಿ ಯಾವ ರೀತಿಯ ವಿಗ್ರಹಾರಾಧನೆ ಆಸ್ತಿತ್ವದಲ್ಲಿತ್ತು?
19 ಕ್ರೈಸ್ತರು ದೃಢಪ್ರಯತ್ನದಿಂದ ವಿಗ್ರಹಾರಾಧನೆಯ ವಿರುದ್ಧ ಕಾಪಾಡಿಕೊಳ್ಳುತ್ತಾರೆ ಯಾಕಂದರೆ ಅದಕ್ಕೆ ಅನೇಕ ರೂಪಗಳುಂಟು, ಮತ್ತು ಕೇವಲ ಒಂದು ವಿಗ್ರಹಾರಾಧನಾ ಕ್ರಿಯೆಯು ಕೂಡ ಅವರ ನಂಬಿಕೆಯನ್ನು ಒಪ್ಪಂದ ಮಾಡಬಹುದು. ಜತೆ ವಿಶ್ವಾಸಿಗಳಿಗೆ ಅಪೊಸ್ತಲ ಯೋಹಾನನು ಹೇಳಿದ್ದು: “ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.” (1 ಯೋಹಾನ 5:21) ಈ ಸಲಹೆಯು ಅಗತ್ಯವಿತ್ತು ಯಾಕಂದರೆ ಅನೇಕ ವಿಧದ ವಿಗ್ರಹಾರಾಧನೆಯು ಅವರನ್ನು ಸುತ್ತುವರಿದಿತ್ತು. ಮಾಟ ಮಂತ್ರದ ಆಚರಣೆಯಲ್ಲಿ ಮುಳುಗಿದ್ದ ಮತ್ತು ಸುಳ್ಳು ದೇವತೆಗಳ ದಂತಕಥೆಗಳಲ್ಲಿ ಮುಳುಗಿದ್ದ ಪಟ್ಟಣವಾದ ಎಫೆಸದಿಂದ ಯೋಹಾನನು ಬರೆದನು. ಲೋಕದ ಏಳು ಅದ್ಭುತಗಳಲ್ಲೊಂದು—ದುಷ್ಕರ್ಮಿಗಳಿಗಾಗಿ ರಕ್ಷಣಾಲಯದ ಸ್ಥಳ ಮತ್ತು ಅನೈತಿಕತೆಯ ಸಂಸ್ಕಾರಗಳ ಕೇಂದ್ರವಾದ, ಅರ್ತೆಮೀ ದೇವಸ್ಥಾನ—ಎಫೆಸದಲ್ಲಿತ್ತು. ಎಫೆಸದ ತತ್ವಜ್ಞಾನಿ ಹರ್ಅಕಿಟ್ಲಸ್ ಆ ದೇವಸ್ಥಾನದ ಯಜ್ಞವೇದಿಗೆ ನಡಸುವ ಕತ್ತಲಿನ ಹಾದಿಯನ್ನು ಅಸಹ್ಯದ ಕತ್ತಲೆಗೆ ಸರಿಹೋಲಿಸಿದನು, ಮತ್ತು ದೇವಸ್ಥಾನದ ನೈತಿಕತೆಯನ್ನು ಮೃಗಗಳಿಗಿಂತ ಹೀನವೆಂದು ಮನಗಂಡನು. ಹೀಗೆ, ಎಫೆಸದ ಕ್ರೈಸ್ತರು ದೆವ್ವಾರಾಧನೆ, ಅನೈತಿಕತೆ, ಮತ್ತು ವಿಗ್ರಹಾರಾಧನೆಯ ವಿರುದ್ಧ ಸ್ಥಿರವಾಗಿ ನಿಲ್ಲಬೇಕಾಗಿತ್ತು.
20. ಲೇಶಮಾತ್ರ ವಿಗ್ರಹಾರಾಧನೆಯನ್ನು ಕೂಡ ತೊರೆಯುವುದು ಯಾಕೆ ಅವಶ್ಯವಾಗಿತ್ತು?
20 ಲೇಶಮಾತ್ರ ವಿಗ್ರಹಾರಾಧನೆಯನ್ನು ಕೂಡ ತೊರೆಯಲು ಕ್ರೈಸ್ತರಿಗೆ ಬಲವಾದ ನಿರ್ಧಾರದ ಅಗತ್ಯವಿದೆ ಯಾಕಂದರೆ ಪಿಶಾಚನಿಗೆ ಆರಾಧನೆಯ ಕೇವಲ ಒಂದು ಕ್ರಿಯೆಯು ಕೂಡ ಪರೀಕ್ಷೆಯ ಕೆಳಗೆ ಮಾನವರು ದೇವರಿಗೆ ನಂಬಿಗಸ್ತರಾಗಿ ಉಳಿಯುವದಿಲ್ಲವೆಂಬ ಆತನ ಆಹ್ವಾನಕ್ಕೆ ಬೆಂಬಲವೀಯುವಂತಾಗುವುದು. (ಯೋಬ 1:8-12) ಯೇಸುವಿಗೆ “ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ತೋರಿಸುವಾಗ, ಸೈತಾನನಂದದ್ದು: “ನೀನು ನನಗೆ ಸಾಷ್ಟಾಂಗನಮಸ್ಕಾರ (ಒಂದು ಆರಾಧನಾ ಕ್ರಿಯೆಯನ್ನು, NW) ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು.” ಕ್ರಿಸ್ತನ ನಿರಾಕರಣೆಯು ವಿಶ್ವ ಸಾರ್ವಭೌಮತೆಯ ವಿವಾದದಲ್ಲಿ ಯೆಹೋವನ ಪಕ್ಷವನ್ನು ಎತ್ತಿ ಹಿಡಿಯಿತು ಮತ್ತು ಪಿಶಾಚನು ಸುಳ್ಳುಗಾರನೆಂದು ರುಜುಪಡಿಸಿತು.—ಮತ್ತಾಯ 4:8-11; ಜ್ಞಾನೋಕ್ತಿ 27:11.
21. ರೋಮನ್ ಸಾಮ್ರಾಟನ ವಿಷಯದಲ್ಲಿ, ನಂಬಿಗಸ್ತ ಕ್ರೈಸ್ತರು ಏನನ್ನು ಮಾಡಲು ನಿರಾಕರಿಸಿದರು?
21 ವಿವಾದದಲ್ಲಿ ಸೈತಾನನ ಪಕ್ಷವನ್ನು ಬೆಂಬಲಿಸುವ ಆರಾಧನೆಯ ಒಂದು ಕ್ರಿಯೆಯನ್ನು ಯೇಸುವಿನ ಆರಂಭದ ಹಿಂಬಾಲಕರು ಮಾಡಲಿಲ್ಲ. ಸರಕಾರೀ “ಮೇಲಿರುವ ಅಧಿಕಾರಿಗಳಿಗೆ” ತಕ್ಕ ಗೌರವವು ಅವರಿಗಿತ್ತಾದರೂ, ಒಂದು ವೇಳೆ ಅವರ ಜೀವಗಳನ್ನು ತೆರಬೇಕಾದರೂ ಕೂಡ, ರೋಮಿನ ಸಾಮ್ರಾಟನ ಗೌರವಾರ್ಥವಾಗಿ ಧೂಪವನ್ನು ಅವರು ಸುಡುತ್ತಿರಲಿಲ್ಲ. (ರೋಮಾಪುರ 13:1-7) ಈ ಸಂಬಂಧದಲ್ಲಿ ಡ್ಯಾನಿಯಲ್ ಪಿ. ಮ್ಯಾನ್ಇಕ್ಸ್ ಬರೆದದ್ದು: “ಅವರ ಅನುಕೂಲತೆಗಾಗಿ ಮಲ್ಲರಂಗದಲ್ಲಿ ಉರಿಯುವ ಬೆಂಕಿಯೊಂದಿಗೆ ಯಜ್ಞವೇದಿಯನ್ನು ಸಾಮಾನ್ಯವಾಗಿ ಇಟ್ಟಿದ್ದರೂ, ಕೇವಲ ಕೊಂಚವೆ ಕ್ರೈಸ್ತರು ಬಹಿರಂಗವಾಗಿ ತಪ್ಪೊಪ್ಪಿಕೊಂಡರು. ಸೆರೆಯಾಳು ಮಾಡಬೇಕಾಗಿದ್ದುದ್ದೇನಂದರೆ ಒಂದು ಚಿಟಿಕೆ ಧೂಪವನ್ನು ಬೆಂಕಿಯೊಳಗೆ ಎರಚುವುದು ಮತ್ತು ಆಗ ಅವನಿಗೆ ನೈವೇದ್ಯದ ಪ್ರಮಾಣಪತ್ರವನ್ನು ಕೊಡಲಾಗುತಿತ್ತು ಮತ್ತು ಅವನು ಸ್ವತಂತ್ರನಾಗುತ್ತಿದ್ದನು. ಆವನು ಸಾಮ್ರಾಟನನ್ನು ಆರಾಧಿಸುತ್ತಿದ್ದಿಲ್ಲವೆಂಬದಾಗಿಯೂ; ಅದು ರೋಮ್ ಸರಕಾರದ ಮುಖ್ಯನಾಗಿರುವ ಸಾಮ್ರಾಟನ ದೈವಿಕ ಲಕ್ಷಣಗಳ ಕೇವಲ ಒಪ್ಪಿಕೊಳ್ಳುವಿಕೆಯೆಂದೂ ಅವನಿಗೆ ಜಾಗರೂಕತೆಯಿಂದ ತಿಳಿಸಿಕೊಡಲಾಗುತಿತ್ತು. ಆದರೂ, ಹೆಚ್ಚಿನ ಕ್ರೈಸ್ತರು ಪಾರಾಗುವ ಸಂದರ್ಭದ ಯಾವುದೇ ಪ್ರಯೋಜನ ತಕ್ಕೊಳ್ಳಲಿಲ್ಲ.” (ದೋಸ್ ಅಬೌಟ್ ಟು ಡೈ, ಪುಟ 137) ಒಂದುವೇಳೆ ಹಾಗೆಯೇ ಪರೀಕ್ಷಿಸಲ್ಪಡುವಲ್ಲಿ, ನೀವು ಎಲ್ಲಾ ವಿಗ್ರಹಾರಾಧನೆಯನ್ನು ಸಂಪೂರ್ಣವಾಗಿ ತಡೆಗಟ್ಟುವಿರೊ?
ನೀವು ವಿಗ್ರಹಾರಾಧನೆಯಿಂದ ಕಾಪಾಡಿಕೊಳ್ಳುವಿರೋ?
22, 23. ವಿಗ್ರಹಾರಾಧನೆಯ ವಿರುದ್ಧ ನಿಮ್ಮನ್ನು ಯಾಕೆ ಕಾಪಾಡಿಕೊಳ್ಳಬೇಕು?
22 ಸ್ಪಷ್ಟವಾಗಿಗಿ, ಕ್ರೈಸ್ತರು ಎಲ್ಲ ವಿಧದ ವಿಗ್ರಹಾರಾಧನೆಯಿಂದ ತಮ್ಮನ್ನು ಕಾಪಾಡಿಕೊಳ್ಳಲೇಬೇಕು. ಯೆಹೋವನು ಸಂಪೂರ್ಣ ಭಕ್ತಿಯನ್ನು ಅಪೇಕ್ಷಿಸುತ್ತಾನೆ. ಬಾಬೆಲಿನ ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದ ಮಹಾ ಪ್ರತಿಮೆಗೆ ದೈವಮೂರ್ತಿಯಾಗಿ ಪೂಜಿಸಲು ನಿರಾಕರಿಸಿದ್ದರಲ್ಲಿ ಮೂವರು ನಂಬಿಗಸ್ತ ಇಬ್ರಿಯರು ಉತ್ತಮ ಉದಾಹರಣೆಯನ್ನು ಒದಗಿಸಿದರು. ಯೆಶಾಯ ಪ್ರವಾದಿಯ ಮೂಲಕ ದಾಖಲೆಯಾಗಿರುವ ವಿಶ್ವ ನ್ಯಾಯಾಲಯದ ಮೊಕದ್ದಮೆಯಲ್ಲಿ, ಯೆಹೋವನೊಬ್ಬನೇ ಸತ್ಯ ಮತ್ತು ಜೀವಂತ ದೇವರೆಂದು ತೋರಿಸಿಕೊಡಲಾಯಿತು. ಆತನ ಆರಂಭದ ಕ್ರೈಸ್ತ ಸಾಕ್ಷಿಗಳು ವಿಗ್ರಹಗಳಿಗೆ ನೈವೇದ್ಯ ಮಾಡಿದ್ದ ವಿಷಯಗಳಿಂದ ತಮ್ಮನ್ನು ಕಾಪಾಡಿಕೊಂಡಿರಬೇಕಾಗಿತ್ತು. ಅವರೊಳಗಿನ ಅನೇಕ ನಿಷ್ಠಾವಂತರು ಯೆಹೋವನನ್ನು ಅಲ್ಲಗಳೆಯಬಲ್ಲ ಒಂದೇ ಒಂದು ವಿಗ್ರಹಾರಾಧಕ ಕ್ರಿಯೆಯನ್ನು ಸಹ ಮಾಡುವ ಒತ್ತಡಕ್ಕೆ ಸೋತು ಹೋಗಲಿಲ್ಲ.
23 ಹಾಗೆಂದ ಮೇಲೆ, ನೀವು ವೈಯಕ್ತಿಕವಾಗಿ ನಿಮ್ಮನ್ನು ವಿಗ್ರಹಾರಾಧನೆಯಿಂದ ಕಾಪಾಡಿಕೊಳ್ಳುತ್ತೀರೊ? ನೀವು ದೇವರಿಗೆ ಸಂಪೂರ್ಣ ಭಕ್ತಿಯನ್ನು ಕೊಡುತ್ತಿದ್ದೀರೋ? ನೀವು ಯೆಹೋವನ ಸಾರ್ವಭೌಮತೆಯನ್ನು ಬೆಂಬಲಿಸುತ್ತೀರೊ ಮತ್ತು ಆತನು ಸತ್ಯ ಮತ್ತು ಜೀವಂತ ದೇವರೆಂದು ಆತನನ್ನು ಮೆಚ್ಚಿ ಕೊಂಡಾಡುತ್ತೀರೊ? ಹಾಗಿರುವಲ್ಲಿ, ವಿಗ್ರಹಾರಾಧಕ ಆಚಾರಗಳ ವಿರುದ್ಧ ಸ್ಥಿರವಾಗಿ ನಿಲ್ಲುವುದನ್ನು ಮುಂದುವರಿಸುವುದು ನಿಮ್ಮ ದೃಢ ಸಂಕಲ್ಪವಾಗಿರಬೇಕು. ಆದರೆ ಪ್ರತಿಯೊಂದು ವಿಧದ ವಿಗ್ರಹಾರಾಧನೆಯ ವಿರುದ್ಧ ನಿಮ್ಮನ್ನು ಕಾಪಾಡಿಕೊಳ್ಳಲು ಯಾವ ಹೆಚ್ಚಿನ ಶಾಸ್ತ್ರೀಯ ವಿಷಯಗಳು ನಿಮಗೆ ಸಹಾಯ ಮಾಡಬಲ್ಲವು?
ನಿಮ್ಮ ಆಲೋಚನೆಗಳು ಏನಾಗಿವೆ?
▫ ವಿಗ್ರಹಾರಾಧನೆ ಅಂದರೇನು?
▫ ಎಲ್ಲ ವಿಧದ ವಿಗ್ರಹಾರಾಧನೆಯನ್ನು ಯೆಹೋವನು ಯಾಕೆ ವಿರೋಧಿಸುತ್ತಾನೆ?
▫ ವಿಗ್ರಹಾರಾಧನೆಯ ಕುರಿತು ಮೂವರು ಇಬ್ರಿಯರು ಯಾವ ಸ್ಥಾನವನ್ನು ತೆಗೆದು ಕೊಂಡರು?
▫ ವಿಗ್ರಹಗಳಿಗೆ ಬಲಿಕೊಟ್ಟದ್ದನ್ನು ತಿನ್ನುವವರು ದೆವ್ವಗಳೊಂದಿಗೆ ಭಾಗಿಗಳಾಗ ಸಾಧ್ಯವಿದ್ದುದು ಹೇಗೆ?
▫ ವಿಗ್ರಹಾರಾಧನೆಯ ವಿರುದ್ಧ ನಮ್ಮನ್ನು ಯಾಕೆ ಕಾಪಾಡಿಕೊಳ್ಳಬೇಕು?
[ಪುಟ 23 ರಲ್ಲಿರುವ ಚಿತ್ರ]
ತಮ್ಮ ಜೀವಗಳು ಅಪಾಯಕ್ಕೊಳಪಟ್ಟಾಗ್ಯೂ ಮೂವರು ಇಬ್ರಿಯರು ವಿಗ್ರಹಾರಾಧನೆಯಲ್ಲಿ ಭಾಗವಹಿಸಲಿಲ್ಲ