ಅಧ್ಯಾಯ ಐದು
ಸತ್ಯ ದೇವರು ಬಿಡುಗಡೆಯನ್ನು ಮುಂತಿಳಿಸುತ್ತಾನೆ
1, 2. (ಎ) ಯೆಹೋವನು ಯಾವ ಪ್ರಶ್ನೆಗಳನ್ನು ಕೇಳುತ್ತಾನೆ? (ಬಿ) ತಾನೊಬ್ಬನೇ ಸತ್ಯ ದೇವರೆಂಬುದನ್ನು ಯೆಹೋವನು ಹೇಗೆ ರುಜುಪಡಿಸುವನು?
‘ಸತ್ಯ ದೇವರು ಯಾರು?’ ಜನರು ಈ ಪ್ರಶ್ನೆಯನ್ನು ಶತಮಾನಗಳಿಂದ ಕೇಳಿದ್ದಾರೆ. ಆದುದರಿಂದ, ಯೆಶಾಯನ ಪುಸ್ತಕದಲ್ಲಿ ಯೆಹೋವನು ತಾನೇ ಈ ಪ್ರಶ್ನೆಯನ್ನು ಎಬ್ಬಿಸುವುದು ಎಷ್ಟು ಸೋಜಿಗದ ಸಂಗತಿ! ಮಾನವರು ಈ ಮುಂದಿನ ವಿಷಯಗಳನ್ನು ಪರಿಗಣಿಸುವಂತೆ ಆತನು ಆಮಂತ್ರಿಸುತ್ತಾನೆ: ‘ಒಬ್ಬನೇ ಸತ್ಯ ದೇವರು ಯೆಹೋವನು ಮಾತ್ರವೊ? ಇಲ್ಲವೆ ಆತನ ಸ್ಥಾನಕ್ಕೆ ಸವಾಲೊಡ್ಡಬಲ್ಲ ಇನ್ನಾವನಾದರೂ ಇದ್ದಾನೊ?’ ಈ ಚರ್ಚೆಯನ್ನು ಆರಂಭಿಸಿದ ಬಳಿಕ, ಈ ದೇವತ್ವದ ವಿವಾದವನ್ನು ನಿರ್ಣಯಿಸಲಿಕ್ಕಾಗಿ ಯೆಹೋವನು ನ್ಯಾಯಸಮ್ಮತವಾದ ಒಂದು ಮಾನದಂಡವನ್ನು ಒದಗಿಸುತ್ತಾನೆ. ಕೊಡಲಾಗಿರುವ ತರ್ಕಾಂಶಗಳು ಪ್ರಾಮಾಣಿಕ ಹೃದಯದ ಜನರು ಹತ್ತಿಕ್ಕಲಾಗದ ಒಂದೇ ಒಂದು ನಿರ್ಣಯವನ್ನು ಮಾಡುವಂತೆ ನಡೆಸುತ್ತದೆ.
2 ಯೆಶಾಯನ ದಿನಗಳಲ್ಲಿ ಜನರು ವಿಗ್ರಹಗಳನ್ನು ವ್ಯಾಪಕವಾಗಿ ಆರಾಧಿಸುತ್ತಿದ್ದರು. ಯೆಶಾಯನ ಪ್ರವಾದನೆಯ 44ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವ ಮುಚ್ಚುಮರೆಯಿಲ್ಲದ ಮತ್ತು ಸ್ಪಷ್ಟವಾದ ಚರ್ಚೆಯಲ್ಲಿ, ವಿಗ್ರಹಾರಾಧನೆಯು ಎಷ್ಟು ವ್ಯರ್ಥವೆಂಬುದನ್ನು ತೋರಿಸಲಾಗಿದೆ! ಹೀಗಿದ್ದರೂ, ದೇವರ ಸ್ವಂತ ಜನರೇ ಈ ವಿಗ್ರಹಾರಾಧನೆಯ ಬಲೆಗೆ ಬಿದ್ದಿದ್ದಾರೆ. ಆದಕಾರಣ, ಯೆಶಾಯನ ಹಿಂದಿನ ಅಧ್ಯಾಯಗಳಲ್ಲಿ ನೋಡಲಾಗಿರುವಂತೆಯೇ, ಇಸ್ರಾಯೇಲ್ಯರ ಮೇಲೆ ತೀಕ್ಷ್ಣವಾದ ಶಿಕ್ಷೆ ಬರಲಿದೆ. ಆದರೆ ಯೆಹೋವನು ಆ ಜನಾಂಗಕ್ಕೆ ಪ್ರೀತಿಯಿಂದ ಪುನರಾಶ್ವಾಸನೆಯನ್ನು ನೀಡುತ್ತಾನೆ. ಅದೇನೆಂದರೆ, ಬಾಬೆಲಿನವರು ಅವರನ್ನು ಸೆರೆಯಾಳುಗಳಾಗಿ ಒಯ್ಯಲಿರುವುದಾದರೂ ತನ್ನ ಕ್ಲುಪ್ತ ಕಾಲದಲ್ಲಿ ಯೆಹೋವನು ಅವರನ್ನು ಬಿಡುಗಡೆ ಮಾಡುವನು. ಬಂಧನದಿಂದ ಬಿಡುಗಡೆ ಮತ್ತು ಸತ್ಯಾರಾಧನೆಯ ಪುನಸ್ಸ್ಥಾಪನೆಯ ಕುರಿತಾದ ಪ್ರವಾದನೆಗಳ ನೆರವೇರಿಕೆಯು, ಯೆಹೋವನೊಬ್ಬನೇ ಸತ್ಯ ದೇವರೆಂಬುದನ್ನು ಸಂಶಯವೇ ಇಲ್ಲದಂತಹ ರೀತಿಯಲ್ಲಿ ರುಜುಪಡಿಸುವುದು. ಇದು ಜನಾಂಗಗಳ ನಿರ್ಜೀವ ದೇವತೆಗಳನ್ನು ಆರಾಧಿಸುವವರೆಲ್ಲರಿಗೆ ಅವಮಾನಕರವಾಗಿರುವುದು.
3. ಯೆಶಾಯನ ಪ್ರವಾದನ ಮಾತುಗಳು ಇಂದು ಕ್ರೈಸ್ತರಿಗೆ ಹೇಗೆ ಸಹಾಯಮಾಡುತ್ತವೆ?
3 ಈ ಭಾಗದಲ್ಲಿರುವ ಯೆಶಾಯನ ಪ್ರವಾದನೆಗಳೂ ಪುರಾತನ ಕಾಲದಲ್ಲಿ ನಡೆದ ಅವುಗಳ ನೆರವೇರಿಕೆಯೂ, ಇಂದಿನ ಕ್ರೈಸ್ತರ ನಂಬಿಕೆಯನ್ನು ಬಲಪಡಿಸುತ್ತದೆ. ಅಲ್ಲದೆ, ಯೆಶಾಯನ ಪ್ರವಾದನ ವಾಕ್ಯಗಳಿಗೆ ನಮ್ಮ ದಿನಗಳಲ್ಲಿ ಮಾತ್ರವಲ್ಲ ಭವಿಷ್ಯತ್ತಿನಲ್ಲಿಯೂ ನೆರವೇರಿಕೆಯೊಂದಿದೆ. ಮತ್ತು ಆ ಘಟನೆಗಳು, ದೇವರ ಪ್ರಾಚೀನಕಾಲದ ಜನರಿಗೆ ಮುಂತಿಳಿಸಲ್ಪಟ್ಟದ್ದಕ್ಕಿಂತಲೂ ಹೆಚ್ಚು ಶ್ರೇಷ್ಠವಾದ ಒಬ್ಬ ವಿಮೋಚಕನನ್ನು ಹಾಗೂ ಒಂದು ವಿಮೋಚನೆಯನ್ನು ಒಳಗೂಡಿವೆ.
ಯೆಹೋವನಿಗೆ ಸೇರಿರುವವರಿಗೆ ನಿರೀಕ್ಷೆ
4. ಯೆಹೋವನು ಇಸ್ರಾಯೇಲನ್ನು ಹೇಗೆ ಪ್ರೋತ್ಸಾಹಿಸುತ್ತಾನೆ?
4 ಅಧ್ಯಾಯ 44 ಸಕಾರಾತ್ಮಕವಾಗಿ ಆರಂಭಗೊಳ್ಳುತ್ತದೆ. ಇಸ್ರಾಯೇಲು ದೇವರಿಂದ ಚುನಾಯಿಸಲ್ಪಟ್ಟು, ಆತನ ಸೇವಕನಾಗಲು ಸುತ್ತುಮುತ್ತಲಿನ ಜನಾಂಗಗಳಿಂದ ಪ್ರತ್ಯೇಕಿಸಲ್ಪಟ್ಟಿದೆ ಎಂಬುದನ್ನು ಅಲ್ಲಿ ಜ್ಞಾಪಕಕ್ಕೆ ತರಲಾಗುತ್ತದೆ. ಪ್ರವಾದನೆಯು ಹೇಳುವುದು: “ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಇಸ್ರಾಯೇಲೇ, ಈಗ ಕೇಳು. ನಿನ್ನನ್ನು ನಿರ್ಮಾಣಮಾಡಿ ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯಮಾಡುವವನಾದ ಯೆಹೋವನು ಹೀಗೆನ್ನುತ್ತಾನೆ—ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ!” (ಯೆಶಾಯ 44:1, 2) ಯೆಹೋವನು ಇಸ್ರಾಯೇಲನ್ನು ತಾಯಿಯ ಗರ್ಭದಿಂದಲೊ ಎಂಬಂತೆ, ಅದು ಐಗುಪ್ತದಿಂದ ಹೊರಟು ಬಂದು ಒಂದು ಜನಾಂಗವಾದಂದಿನಿಂದ ಪರಾಮರಿಸಿದ್ದಾನೆ. ಆತನು ತನ್ನ ಜನರನ್ನು ಸಾಮೂಹಿಕವಾಗಿ “ಯೆಶುರೂನ್” ಎಂದು ಕರೆಯುತ್ತಾನೆ. ಇದು “ಸತ್ಯವಂತನು” ಎಂಬ ಅರ್ಥವಿರುವ, ಮಮತೆ ಮತ್ತು ಕೋಮಲತೆಯನ್ನು ಸೂಚಿಸುವ ಒಂದು ಬಿರುದಾಗಿದೆ. ಇಸ್ರಾಯೇಲ್ಯರು ಪ್ರಾಮಾಣಿಕರಾಗಿರುವುದರಲ್ಲಿ ಅನೇಕ ವೇಳೆ ತಪ್ಪಿಹೋಗಿರುವ ಕಾರಣ, ಅವರು ಸತ್ಯವಂತರಾಗಿ ಉಳಿಯುವಂತೆ ಈ ಹೆಸರು ಅವರಿಗೆ ಒಂದು ಮರುಜ್ಞಾಪನವೂ ಆಗಿದೆ.
5, 6. ಯೆಹೋವನು ಇಸ್ರಾಯೇಲಿಗೆ ಯಾವ ಚೈತನ್ಯದಾಯಕ ಒದಗಿಸುವಿಕೆಗಳನ್ನು ಮಾಡುವನು, ಮತ್ತು ಪರಿಣಾಮವೇನು?
5 ಯೆಹೋವನ ಮುಂದಿನ ಮಾತುಗಳು ಎಷ್ಟು ರಮ್ಯ ಮತ್ತು ಚೈತನ್ಯದಾಯಕವಾಗಿವೆ! ಆತನು ಹೇಳುವುದು: “ಬತ್ತಿದ ಭೂಮಿಯಲ್ಲಿ ಮಳೆಗರೆದು ಒಣ ನೆಲದಲ್ಲಿ ಕಾಲಿವೆಗಳನ್ನು ಹರಿಸುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನು, ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು, ಸುರಿಸುವೆನು. ನೀರಿನ ಕಾಲಿವೆಗಳ ಬಳಿಯಲ್ಲಿ ಹಸುರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿಯಾಗುವರು.” (ಯೆಶಾಯ 44:3, 4) ಬಿಸಿಲಿನಿಂದ ಕೂಡಿರುವ ಒಣಪ್ರದೇಶಗಳಲ್ಲಿಯೂ, ನೀರಿನ ಒರತೆಗಳಿಂದ ಮರಗಳು ಸಮೃದ್ಧವಾಗಿ ಬೆಳೆಯಬಲ್ಲವು. ಹಾಗೆಯೇ, ಯೆಹೋವನು ಸತ್ಯದ ಜೀವದಾಯಕ ಜಲವನ್ನು ಒದಗಿಸಿ, ತನ್ನ ಪವಿತ್ರಾತ್ಮವನ್ನು ಸುರಿಸುವಾಗ, ಇಸ್ರಾಯೇಲು ನೀರಿನ ಕಾಲುವೆಗಳ ಪಕ್ಕದಲ್ಲಿರುವ ಮರಗಳಂತೆ ಹುಲುಸಾಗಿ ಬೆಳೆಯುವುದು. (ಕೀರ್ತನೆ 1:3; ಯೆರೆಮೀಯ 17:7, 8) ಯೆಹೋವನು ತನ್ನ ಜನರಿಗೆ ಆತನ ದೇವತ್ವಕ್ಕೆ ಸಾಕ್ಷಿಗಳಾಗಿರುವ ಪಾತ್ರವನ್ನು ವಹಿಸಿ, ಅದನ್ನು ನೆರವೇರಿಸುವ ಶಕ್ತಿಯನ್ನು ಕೊಡುವನು.
6 ಪವಿತ್ರಾತ್ಮವನ್ನು ಸುರಿಸುವುದರ ಒಂದು ಪರಿಣಾಮವು, ಇಸ್ರಾಯೇಲ್ಯರಿಗೆ ಯೆಹೋವನೊಂದಿಗಿರುವ ಸಂಬಂಧದ ಕುರಿತು ಇರುವ ಗಣ್ಯತೆಯನ್ನು ಕೆಲವರು ನವೀಕರಿಸುವಂತೆ ಮಾಡುವುದೇ ಆಗಿರುವುದು. ಈ ಕಾರಣದಿಂದ ನಾವು ಹೀಗೆ ಓದುತ್ತೇವೆ: “[ಅನ್ಯಜನರಲ್ಲಿ] ಒಬ್ಬನು—ನಾನು ಯೆಹೋವನ ಭಕ್ತನು [“ಯೆಹೋವನಿಗೆ ಸೇರಿದವನು,” NW] ಎಂದು ಹೇಳಿಕೊಳ್ಳುವನು; ಇನ್ನೊಬ್ಬನು ಯಾಕೋಬ್ಯನು ಎನಿಸಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಯೆಹೋವದಾಸನು ಎಂದು ಬರೆದುಕೊಂಡು ಇಸ್ರಾಯೇಲ್ಯನೆಂಬ ಬಿರುದನ್ನು ಧರಿಸಿಕೊಳ್ಳುವನು.” (ಯೆಶಾಯ 44:5) ಹೌದು, ಯೆಹೋವನ ನಾಮವನ್ನು ಧರಿಸುವುದರಲ್ಲಿ ಘನತೆಯಿರುವುದು. ಏಕೆಂದರೆ, ಆತನೊಬ್ಬನೇ ಸತ್ಯ ದೇವರೆಂದು ಆಗ ತಿಳಿಯಲಾಗುವುದು.
ದೇವರುಗಳಿಗೆ ಪಂಥಾಹ್ವಾನ
7, 8. ಯೆಹೋವನು ಜನಾಂಗಗಳ ದೇವರುಗಳಿಗೆ ಹೇಗೆ ಸವಾಲೊಡ್ಡುತ್ತಾನೆ?
7 ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಸಾಮಾನ್ಯವಾಗಿ ದಾಸತ್ವದಲ್ಲಿರುವ ಒಬ್ಬ ವ್ಯಕ್ತಿಯನ್ನು ಅವನ ಸಮೀಪಬಂಧುಗಳಲ್ಲಿ ಒಬ್ಬನು ಈಡುಕೊಟ್ಟು ದಾಸತ್ವದಿಂದ ಬಿಡಿಸಸಾಧ್ಯವಿತ್ತು. (ಯಾಜಕಕಾಂಡ 25:47-54; ರೂತಳು 2:20) ಆದಕಾರಣ, ಯೆಹೋವನು ಈಗ ತನ್ನನ್ನು ಇಸ್ರಾಯೇಲನ್ನು ಪುನಃ ಕೊಂಡುಕೊಳ್ಳುವ ವ್ಯಕ್ತಿಯಾಗಿ, ಅಂದರೆ ವಿಮೋಚಕನಾಗಿ ಗುರುತಿಸಿಕೊಳ್ಳುತ್ತಾನೆ. ಆತನು ಬಾಬೆಲೂ ಅದರ ಸಕಲ ದೇವತೆಗಳೂ ನಾಚಿಕೆಗೀಡಾಗುವಂತೆ ಆ ಇಸ್ರಾಯೇಲ್ ಜನಾಂಗವನ್ನೇ ರಕ್ಷಿಸುತ್ತಾನೆ. (ಯೆರೆಮೀಯ 50:34) ಆತನು ಆ ಸುಳ್ಳು ದೇವರುಗಳನ್ನು ಮತ್ತು ಅವುಗಳ ಆರಾಧಕರನ್ನು ಎದುರಿಸುತ್ತಾ ಹೇಳುವುದು: “ಇಸ್ರಾಯೇಲ್ಯರ ಅರಸನೂ ವಿಮೋಚಕನೂ ಆಗಿರುವ ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ—ನಾನೇ ಆದಿ, ಅಂತವೂ ನಾನೇ; ನಾನು ಹೊರತು ಯಾವ ದೇವರೂ ಇಲ್ಲ. ನಾನು ಪುರಾತನದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಯಾರು ಪ್ರಕಟಿಸಿಕೊಂಡಿದ್ದಾರೆ? ಅಂಥವರಿದ್ದರೆ ನನ್ನೆದುರಿಗೆ ಹೇಳಿ ಸ್ಥಾಪಿಸಲಿ; ಇಲ್ಲವೆ ಮುಂದಿನವುಗಳನ್ನು ಈಗ ತಿಳಿಸಲಿ, ಭವಿಷ್ಯತ್ತುಗಳನ್ನು ಹೇಳಲಿ. ಹೆದರಬೇಡಿರಿ, ಅಂಜದಿರಿ! ನಾನು ಪೂರ್ವದಿಂದಲೂ ನಿಮಗೆ ಹೇಳಿ ಪ್ರಕಟಿಸಿಕೊಂಡೆನಷ್ಟೆ. ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರಿದ್ದಾನೋ? ಇನ್ನು ಯಾವ ಶರಣನೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.”—ಯೆಶಾಯ 44:6-8.
8 ಆ ದೇವತೆಗಳು ತಮ್ಮ ಮೊಕದ್ದಮೆಯನ್ನು ಮುಂದೆ ತರುವಂತೆ ಯೆಹೋವನು ಅವರಿಗೆ ಕರೆ ಕೊಡುತ್ತಾನೆ. ಅವರು ಮುಂದೆ ನಡೆಯಲಿರುವುದನ್ನು ಈಗ ತಿಳಿಸಬಲ್ಲರೊ, ಭಾವೀ ಘಟನೆಗಳು ಈಗಲೇ ನಡೆಯುತ್ತಿವೆಯೊ ಎಂಬಷ್ಟು ನಿಷ್ಕೃಷ್ಟವಾಗಿ ಅವುಗಳನ್ನು ಮುಂತಿಳಿಸಬಲ್ಲರೊ? ಇಲ್ಲ. ‘ಆದಿಯೂ ಅಂತವೂ’ ಆದಾತನು, ಅಂದರೆ ಎಲ್ಲಾ ಸುಳ್ಳು ದೇವತೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಇದ್ದಾತನು ಮತ್ತು ಅವರು ಮರೆಯಲ್ಪಟ್ಟು ದೀರ್ಘಕಾಲ ಕಳೆದ ಬಳಿಕವೂ ಇರುವಾತನು ಮಾತ್ರ ವಿಷಯಗಳನ್ನು ಹೀಗೆ ಮುಂತಿಳಿಸಬಲ್ಲನು. ಈ ಸತ್ಯ ಸಂಗತಿಯ ವಿಷಯದಲ್ಲಿ ಸಾಕ್ಷಿ ನೀಡಲು ಆತನ ಜನರು ಭಯಪಡಬೇಕಾಗಿಲ್ಲ. ಏಕೆಂದರೆ, ಬೃಹದಾಕಾರದ ಬಂಡೆಯಂತೆ ದೃಢವಾಗಿ ಮತ್ತು ಸ್ಥಿರವಾಗಿ ಇರುವ ಯೆಹೋವನ ಬೆಂಬಲ ಅವರಿಗಿರುವುದು!—ಧರ್ಮೋಪದೇಶಕಾಂಡ 32:4; 2 ಸಮುವೇಲ 22:31, 32.
ವಿಗ್ರಹಾರಾಧನೆಯ ನಿರರ್ಥಕತೆ
9. ಒಂದು ಸಜೀವ ವಸ್ತುವಿನ ಯಾವುದೇ ರೀತಿಯ ರೂಪವನ್ನು ಇಸ್ರಾಯೇಲ್ಯರು ಮಾಡುವುದು ತಪ್ಪಾಗಿತ್ತೊ? ವಿವರಿಸಿ.
9 ಸುಳ್ಳು ದೇವರುಗಳಿಗೆ ಯೆಹೋವನೊಡ್ಡಿದ ಸವಾಲು, ದಶಾಜ್ಞೆಗಳಲ್ಲಿ ಎರಡನೆಯದ್ದನ್ನು ಜ್ಞಾಪಕಕ್ಕೆ ತರುತ್ತದೆ. ಆ ಆಜ್ಞೆಯು ಸುಸ್ಪಷ್ಟವಾಗಿ ಹೇಳಿದ್ದು: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು.” (ವಿಮೋಚನಕಾಂಡ 20:4, 5) ಇದನ್ನು ನಿಷೇಧಿಸಿದ್ದರ ಅರ್ಥವು, ಇಸ್ರಾಯೇಲ್ಯರು ವಸ್ತುಗಳ ಆಲಂಕಾರಿಕ ರೂಪಗಳನ್ನೂ ಮಾಡಬಾರದು ಎಂದಾಗಿರಲಿಲ್ಲವೆಂಬುದು ಖಂಡಿತ. ಏಕೆಂದರೆ ಸಸ್ಯಗಳ, ಪ್ರಾಣಿಗಳ ಮತ್ತು ಕೆರೂಬಿಯರ ರೂಪಗಳನ್ನು ಮಾಡಿ ದೇವದರ್ಶನದ ಗುಡಾರದಲ್ಲಿಡಬೇಕೆಂದು ಯೆಹೋವನು ತಾನೇ ಆಜ್ಞಾಪಿಸಿದ್ದನು. (ವಿಮೋಚನಕಾಂಡ 25:18; 26:31) ಆದರೆ ಇವುಗಳನ್ನು ಪೂಜ್ಯಭಾವದಿಂದ ಕಾಣಬಾರದಾಗಿತ್ತು ಅಥವಾ ಆರಾಧಿಸಬಾರದಾಗಿತ್ತು. ಈ ರೂಪಗಳಿಗೆ ಯಾರೂ ಪ್ರಾರ್ಥಿಸಬಾರದಾಗಿತ್ತು ಅಥವಾ ಯಜ್ಞಗಳನ್ನು ಅರ್ಪಿಸಬಾರದಾಗಿತ್ತು. ಆರಾಧನೆಯ ವಸ್ತುವಾಗಿ ಉಪಯೋಗಿಸಲಿಕ್ಕಾಗಿ ಯಾವುದೇ ರೀತಿಯ ವಿಗ್ರಹವನ್ನು ಮಾಡುವುದನ್ನು ದೈವಪ್ರೇರಿತ ಆಜ್ಞೆಯು ನಿಷೇಧಿಸಿತ್ತು. ವಿಗ್ರಹಗಳನ್ನು ಆರಾಧಿಸುವುದು ಅಥವಾ ಅವುಗಳಿಗೆ ಪೂಜ್ಯಭಾವದಿಂದ ಅಡ್ಡಬೀಳುವುದು ವಿಗ್ರಹಾರಾಧನೆಯಾಗಿದೆ.—1 ಯೋಹಾನ 5:21.
10, 11. ಯೆಹೋವನು ವಿಗ್ರಹಗಳನ್ನು ಲಜ್ಜಾಸ್ಪದವಾಗಿ ಪರಿಗಣಿಸುವುದೇಕೆ?
10 ಈಗ ಯೆಶಾಯನು ನಿರ್ಜೀವ ವಿಗ್ರಹಗಳ ನಿಷ್ಪ್ರಯೋಜಕತೆ ಮತ್ತು ಅದನ್ನು ಮಾಡುವವರಿಗೆ ಆಗಲಿರುವ ಅಪಮಾನವನ್ನು ವರ್ಣಿಸುತ್ತಾನೆ: “ವಿಗ್ರಹ ಕೆತ್ತುವವರೆಲ್ಲಾ ಮಟ್ಟಮಾಯವೇ; ಅವರ ಇಷ್ಟದ ಬೊಂಬೆಗಳು ಯಾತಕ್ಕೂ ಬಾರವು; ಬೊಂಬೆಗಳ ಪಕ್ಷದ ಸಾಕ್ಷಿಗಾರರು ನೋಡುವವರಲ್ಲ, ಗ್ರಹಿಸುವವರಲ್ಲ; ನಾಚಿಕೆಗೆ ಗುರಿಯಾಗುವರು. ದೇವತೆಯನ್ನು ರೂಪಿಸುವವರೂ ವ್ಯರ್ಥವಿಗ್ರಹವನ್ನು ಎರಕ ಹೊಯ್ಯುವವರೂ ಎಂಥವರು? ವಿಗ್ರಹಶರಣರೆಲ್ಲಾ ಆಶಾಭಂಗಪಡುವರು; ಅದನ್ನು ಕೆತ್ತಿದವರು ಮನುಷ್ಯಮಾತ್ರದವರೇ; ಅವರೆಲ್ಲರು ಕೂಡಿ ನಿಲ್ಲಲಿ, ಒಟ್ಟಿಗೆ ಹೆದರಿಕೊಂಡು ಲಜ್ಜೆಪಡುವರು.”—ಯೆಶಾಯ 44:9-11.
11 ಈ ವಿಗ್ರಹಗಳನ್ನು ದೇವರು ಅಷ್ಟು ಲಜ್ಜಾಸ್ಪದವಾಗಿ ಏಕೆ ಪರಿಗಣಿಸುತ್ತಾನೆ? ಏಕೆಂದರೆ ಪ್ರಥಮವಾಗಿ, ಸರ್ವಶಕ್ತನ ರೂಪವನ್ನು ಪ್ರಾಪಂಚಿಕ ವಸ್ತುಗಳಿಂದ ನಿಷ್ಕೃಷ್ಟವಾಗಿ ರಚಿಸುವುದು ಅಸಾಧ್ಯ. (ಅ. ಕೃತ್ಯಗಳು 17:29) ಇದಲ್ಲದೆ, ಸೃಷ್ಟಿಕರ್ತನ ಬದಲಿಗೆ ಸೃಷ್ಟಿವಸ್ತುವನ್ನು ಆರಾಧಿಸುವುದು ಯೆಹೋವನ ದೇವತ್ವಕ್ಕೆ ಅವಮರ್ಯಾದೆಯಾಗಿದೆ. ಮತ್ತು ಇದು, ‘ದೇವರ ಸ್ವರೂಪದಲ್ಲೇ’ ಸೃಷ್ಟಿಸಲ್ಪಟ್ಟಿರುವ ಮನುಷ್ಯನ ಘನತೆಗೆ ಕುಂದುತರುತ್ತದಲ್ಲವೊ?—ಆದಿಕಾಂಡ 1:27; ರೋಮಾಪುರ 1:23, 25.
12, 13. ಮನುಷ್ಯನು ಆರಾಧನೆಗೆ ಯೋಗ್ಯವಾದ ಯಾವ ವಿಗ್ರಹವನ್ನೂ ಏಕೆ ರಚಿಸಲಾರನು?
12 ಒಂದು ಭೌತಿಕ ವಸ್ತುವು ಆರಾಧಿಸಲ್ಪಡುವುದಕ್ಕಾಗಿ ಕೆತ್ತಲ್ಪಟ್ಟಿದೆಯೆಂಬ ಒಂದೇ ಕಾರಣಕ್ಕಾಗಿ ಅದು ಹೇಗೊ ಪವಿತ್ರವಾಗಿ ಪರಿಣಮಿಸಸಾಧ್ಯವಿದೆಯೆ? ವಿಗ್ರಹಗಳನ್ನು ಮಾಡುವುದು ಕೇವಲ ಮಾನುಷ ಪ್ರಯತ್ನವೆಂದು ಯೆಶಾಯನು ನೆನಪು ಹುಟ್ಟಿಸುತ್ತಾನೆ. ವಿಗ್ರಹ ರಚಕನ ಉಪಕರಣಗಳೂ ವಿಧಾನಗಳೂ ಬೇರಾವುದೊ ಶಿಲ್ಪಿಯು ಉಪಯೋಗಿಸುವ ರೀತಿಯದ್ದೇ ಆಗಿರುತ್ತವೆ: “ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸಮಾಡುತ್ತಾ ಚಮಟಿಕೆಗಳಿಂದ ಬಡಿದು ತೋಳಿನ ಬಲದಿಂದ ವಿಗ್ರಹವನ್ನು ರೂಪಿಸುವನು; ಅವನೂ ಹಸಿದು ಬಳಲುವನು, ನೀರಿಲ್ಲದೆ ಕಂಗೆಡುವನು. ಬಡಗಿಯು [ಮರಕ್ಕೆ] ನೂಲುಹಾಕಿ ಮೊಳೆಯಿಂದ ಗೆರೆಯೆಳೆದು ಉಳಿಬಾಚಿಗಳಿಂದ ಕೆತ್ತಿ ಕೈವಾರದಿಂದ ಗುರುತಿಸಿ ಅದು ಮನೆಯಲ್ಲಿ ವಾಸಿಸತಕ್ಕದ್ದಾಗಲೆಂದು ಮನುಷ್ಯನ ಆಕಾರಕ್ಕೆ ತಂದು ನರನ ಅಂದದಂತೆ ರೂಪಿಸುವನು.”—ಯೆಶಾಯ 44:12, 13.
13 ಮನುಷ್ಯನ ಸಮೇತ, ಭೂಮಿಯ ಮೇಲಿರುವ ಸಕಲ ಜೀವಿಗಳನ್ನು ಸೃಷ್ಟಿಸಿದಾತನು ಸತ್ಯ ದೇವರೇ. ಇಂದ್ರಿಯ ಗ್ರಹಣಶಕ್ತಿಯುಳ್ಳ ಜೀವಿಗಳು ಯೆಹೋವನ ದೇವತ್ವಕ್ಕೆ ಅದ್ಭುತಕರವಾದ ಸಾಕ್ಷ್ಯವಾಗಿರುವುದಾದರೂ, ಯೆಹೋವನು ಸೃಷ್ಟಿಸಿರುವ ಪ್ರತಿಯೊಂದು ವಸ್ತುವೂ ಆತನಿಗಿಂತ ಕೆಳಮಟ್ಟದ್ದಾಗಿದೆ. ಆತನಿಗಿಂತ ಉತ್ತಮವಾದ ವಸ್ತುಗಳನ್ನು ಮಾಡುವ ಸಾಮರ್ಥ್ಯ ಮನುಷ್ಯನಿಗಿದೆಯೆ? ಮನುಷ್ಯನು ತನಗಿಂತಲೂ ಶ್ರೇಷ್ಠವಾದ, ಎಷ್ಟು ಶ್ರೇಷ್ಠವೆಂದರೆ ಅದು ತನ್ನ ಆರಾಧನೆಗೆ ಯೋಗ್ಯವಾಗಿರುವಂತಹ ಯಾವುದನ್ನಾದರೂ ಮಾಡಬಲ್ಲನೆ? ಒಬ್ಬ ಮನುಷ್ಯನು ವಿಗ್ರಹವನ್ನು ತಯಾರಿಸುವಾಗ, ಅವನಿಗೆ ಆಯಾಸ, ಹಸಿವು ಮತ್ತು ಬಾಯಾರಿಕೆಯಾಗುತ್ತದೆ. ಇವು ಮಾನವನ ಮಿತಿಗಳೆಂಬುದು ನಿಜ, ಆದರೆ ಈ ಮಿತಿಗಳು ಕಡಿಮೆಪಕ್ಷ ಮನುಷ್ಯನು ಜೀವದಿಂದಿದ್ದಾನೆಂದಾದರೂ ತೋರಿಸುತ್ತವೆ. ಅವನು ಮಾಡುವ ವಿಗ್ರಹ ಒಬ್ಬ ಮನುಷ್ಯನಂತೆ ಕಾಣಬಹುದು, ನಿಜ. ಅದು ಸೊಗಸಾಗಿಯೂ ಇರಬಹುದು. ಆದರೂ ಅದರಲ್ಲಿ ಜೀವವಿಲ್ಲ. ಆದಕಾರಣ, ವಿಗ್ರಹಗಳು ದೈವಿಕವಲ್ಲವೆಂಬುದು ಖಂಡಿತ. ಇದಲ್ಲದೆ, ಕೆತ್ತಲ್ಪಟ್ಟಿರುವ ಯಾವ ವಿಗ್ರಹವೂ, ಅದನ್ನು ಮರ್ತ್ಯ ಮಾನವನು ಮಾಡಿರುವುದಿಲ್ಲವೊ ಎಂಬಂತೆ ‘ಆಕಾಶದಿಂದ ಬಿದ್ದಿರುವುದಿಲ್ಲ.’—ಅ. ಕೃತ್ಯಗಳು 19:35.
14. ವಿಗ್ರಹವನ್ನು ತಯಾರಿಸುವವರು ಪೂರ್ತಿಯಾಗಿ ಯೆಹೋವನ ಮೇಲೆ ಹೊಂದಿಕೊಂಡಿರು ವುದು ಹೇಗೆ?
14 ವಿಗ್ರಹವನ್ನು ತಯಾರಿಸುವವರು, ಯೆಹೋವನೇ ಸೃಷ್ಟಿಸಿರುವ ನೈಸರ್ಗಿಕ ವಿಧಾನಗಳು ಮತ್ತು ವಸ್ತುಗಳ ಮೇಲೆ ಪೂರ್ತಿಯಾಗಿ ಹೊಂದಿಕೊಂಡಿರುತ್ತಾರೆಂದು ಯೆಶಾಯನು ತೋರಿಸುತ್ತಾನೆ: “ಅವನು ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುವನು, ತುರಾಯಿ ಅಲ್ಲೋನ್ ಮರಗಳನ್ನು ತೆಗೆದುಕೊಳ್ಳುವನು, ವನವೃಕ್ಷಗಳಲ್ಲಿ ಒಂದನ್ನು ತನಗೋಸ್ಕರ ಸಲಹುವನು; ಅವನು ಪೀತದಾರವನ್ನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಅದು ಸೌದೆಗಾಗುವದು; ಅವನು ಸ್ವಲ್ಪ ತೆಗೆದು ಕಾಯಿಸಿಕೊಳ್ಳುವನು, ಉರಿಸಿ ರೊಟ್ಟಿಸುಡುವನು; ಅದರಲ್ಲೇ ಒಂದು ದೇವರನ್ನು ಮಾಡಿಕೊಂಡು ಪೂಜಿಸುವನು, ಬೊಂಬೆ ಕೆತ್ತಿ ಅಡ್ಡಬೀಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದು ಮಾಂಸಭೋಜನಕ್ಕೆ ಅನುಕೂಲಿಸುವದು; ಬಾಡುಸುಟ್ಟು ಹಸಿವೆ ತೀರಿಸಿಕೊಳ್ಳುವನು; ಮತ್ತು ಕಾಯಿಸಿಕೊಳ್ಳುತ್ತಾ—ಆಹಾ, ಬೆಂಕಿ ಕಂಡೆ; ಬೆಚ್ಚಗಾಯಿತು ಎಂದುಕೊಳ್ಳುವನು. ಉಳಿದ ಭಾಗವನ್ನು ತನ್ನ ದೇವರನ್ನಾಗಿ ಬೊಂಬೆ ಕೆತ್ತಿ ಅದಕ್ಕೆ ಎರಗಿ ಅಡ್ಡಬಿದ್ದು—ನೀನೇ ನನ್ನ ದೇವರು, ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುವನು.”—ಯೆಶಾಯ 44:14-17.
15. ವಿಗ್ರಹವನ್ನು ತಯಾರಿಸುವವನು ತಿಳಿವಳಿಕೆಯಲ್ಲಿ ಸಂಪೂರ್ಣವಾಗಿ ಯಾವ ಕೊರತೆಯನ್ನು ತೋರಿಸುತ್ತಾನೆ?
15 ಸುಡಲ್ಪಟ್ಟಿರದ ಸೌದೆಯ ತುಂಡು ಯಾರನ್ನಾದರೂ ಬಿಡುಗಡೆ ಮಾಡೀತೇ? ನಿಶ್ಚಯವಾಗಿಯೂ ಇಲ್ಲ. ಬಿಡುಗಡೆಯನ್ನು ಸತ್ಯ ದೇವರು ಮಾತ್ರ ಒದಗಿಸಬಲ್ಲನು. ಹಾಗಾದರೆ, ಜನರು ಜಡವಸ್ತುಗಳನ್ನು ಹೇಗೆ ದೇವರ ಸ್ಥಾನದಲ್ಲಿಟ್ಟು ಆರಾಧಿಸಬಲ್ಲರು? ನಿಜವಾದ ಸಮಸ್ಯೆಯಿರುವುದು ವ್ಯಕ್ತಿಯ ಹೃದಯದಲ್ಲಿಯೇ ಎಂದು ಯೆಶಾಯನು ತೋರಿಸುತ್ತಾನೆ: “ಇಂಥವರು ಏನೂ ತಿಳಿಯದವರು, ಏನೂ ಗ್ರಹಿಸಲಾರದವರು; ಅವರ ಕಣ್ಣು ಕಾಣದಂತೆಯೂ ಹೃದಯ ಗ್ರಹಿಸದಂತೆಯೂ ಯೆಹೋವನು ಅಂಟುಬಳಿದಿದ್ದಾನಲ್ಲಾ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು, ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸಸುಟ್ಟು ತಿಂದೆನಲ್ಲಾ; ಮಿಕ್ಕದ್ದನ್ನು ನಾನು ಬೊಂಬೆ ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ, ಅಂದುಕೊಳ್ಳುವಷ್ಟು ಜ್ಞಾನ ವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆ ತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿತಪ್ಪಿಸಿದ ಕಾರಣ ನನ್ನ ಕೈ ಸುಳ್ಳನ್ನು ಹಿಡಿದಿದೆಯಲ್ಲಾ ಎಂದುಕೊಳ್ಳಲೂ ಆಗದು, ತನ್ನನ್ನು ರಕ್ಷಿಸಿಕೊಳ್ಳಲೂ ಆಗದು.” (ಯೆಶಾಯ 44:18-20) ಹೌದು, ವಿಗ್ರಹಾರಾಧನೆಯು ಆತ್ಮಿಕವಾಗಿ ಏನಾದರೂ ಒಳ್ಳೆಯದನ್ನು ಮಾಡೀತೆಂದು ನೆನಸುವುದು, ಪುಷ್ಟಿಕರವಾದ ಆಹಾರದ ಬದಲು ಬೂದಿಯನ್ನು ತಿಂದಂತೆಯೇ ಸರಿ.
16. ವಿಗ್ರಹಾರಾಧನೆಯು ಹೇಗೆ ಆರಂಭವಾಯಿತು, ಮತ್ತು ಅದನ್ನು ಯಾವುದು ಸಾಧ್ಯಮಾಡುತ್ತದೆ?
16 ವಿಗ್ರಹಾರಾಧನೆಯು ನಿಜವಾಗಿಯೂ ಆರಂಭವಾದದ್ದು ಸ್ವರ್ಗದಲ್ಲಿ. ಕಟ್ಟಕಡೆಗೆ ಸೈತಾನನಾಗಿ ಪರಿಣಮಿಸಿದ ಬಲಾಢ್ಯ ಆತ್ಮಜೀವಿಯೊಬ್ಬನು, ಯೆಹೋವನಿಗೆ ಮಾತ್ರ ಯೋಗ್ಯವಾಗಿದ್ದ ಆರಾಧನೆಯನ್ನು ಆಶಿಸಿದಾಗ ಇದು ಸಂಭವಿಸಿತು. ಸೈತಾನನ ದುರಾಶೆಯು ಎಷ್ಟು ಬಲವಾದದ್ದಾಗಿತ್ತೆಂದರೆ, ಅದು ಅವನನ್ನು ದೇವರಿಂದ ವಿಮುಖಗೊಳಿಸಿತು. ವಿಗ್ರಹಾರಾಧನೆಯ ನಿಜವಾದ ಆರಂಭವು ಇದೇ ಆಗಿತ್ತು, ಏಕೆಂದರೆ ಲೋಭವು ವಿಗ್ರಹಾರಾಧನೆಗೆ ಸಮಾನವಾಗಿದೆ ಎಂದು ಅಪೊಸ್ತಲ ಪೌಲನು ಹೇಳಿದನು. (ಯೆಶಾಯ 14:12-14; ಯೆಹೆಜ್ಕೇಲ 28:13-15, 17; ಕೊಲೊಸ್ಸೆ 3:5) ಪ್ರಥಮ ಮಾನವ ಜೊತೆಯು ಸ್ವಾರ್ಥ ವಿಚಾರಗಳನ್ನು ಯೋಚಿಸುವಂತೆ ಸೈತಾನನು ಪ್ರೇರಿಸಿದನು. “ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ” ಎಂದು ಹೇಳುವ ಮೂಲಕ ಸೈತಾನನು ಮುಂದಿಟ್ಟ ವಿಚಾರವನ್ನು ಹವ್ವಳು ಆಶಿಸಿದಳು. ಇಂತಹ ದುರಾಸೆಯು ಹೃದಯದಿಂದ ಹೊರಡುತ್ತದೆ ಎಂದು ಯೇಸು ಹೇಳಿದನು. (ಆದಿಕಾಂಡ 3:5; ಮಾರ್ಕ 7:20-23) ಹೃದಯಗಳು ಭ್ರಷ್ಟಗೊಂಡಿರುವಾಗ ವಿಗ್ರಹಾರಾಧನೆಯು ಸಾಧ್ಯವಾಗುತ್ತದೆ. ಆದುದರಿಂದ, ನಮ್ಮ ‘ಹೃದಯಗಳನ್ನು ಬಹು ಜಾಗರೂಕತೆಯಿಂದ’ ಕಾಪಾಡಿಕೊಳ್ಳುವುದು, ಅಂದರೆ ಯೆಹೋವನಿಗೆ ನ್ಯಾಯವಾದ ಹಕ್ಕಿರುವ ಆ ಸ್ಥಾನವನ್ನು ಬೇರೆ ಯಾವನೇ ವ್ಯಕ್ತಿಯಾಗಲಿ ಇನ್ನಾವ ವಸ್ತುವಾಗಲಿ ವಶೀಕರಿಸಿಕೊಳ್ಳದಂತೆ ನೋಡಿಕೊಳ್ಳುವುದು ಅದೆಷ್ಟು ಪ್ರಾಮುಖ್ಯ.—ಜ್ಞಾನೋಕ್ತಿ 4:23; ಯಾಕೋಬ 1:14.
ಯೆಹೋವನು ಹೃದಯಗಳಿಗೆ ಮನವಿಮಾಡುತ್ತಾನೆ
17. ಇಸ್ರಾಯೇಲು ಏನನ್ನು ಹೃದಯದಲ್ಲಿರಿಸಿಕೊಳ್ಳಬೇಕು?
17 ತದನಂತರ, ತಾವು ಒಂದು ಸುಯೋಗದ ಅಂದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ ಎಂಬುದನ್ನು ಇಸ್ರಾಯೇಲ್ಯರು ಜ್ಞಾಪಿಸಿಕೊಳ್ಳುವಂತೆ ಯೆಹೋವನು ಮನವಿಮಾಡುತ್ತಾನೆ. ಅವರು ಆತನ ಸಾಕ್ಷಿಗಳಾಗಿದ್ದಾರೆ! ಆತನು ಹೇಳುವುದು: “ಯಾಕೋಬೇ, ಇಸ್ರಾಯೇಲೇ, ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೋ, ನನ್ನ ಸೇವಕನಾಗಿದ್ದೀಯಲ್ಲವೇ; ಇಸ್ರಾಯೇಲೇ, ನಾನು ನಿನ್ನನ್ನು ನಿರ್ಮಿಸಿದೆನು, ನೀನು ನನ್ನ ಸೇವಕನು, ನಿನ್ನನ್ನು ಮರೆತುಬಿಡೆನು. ನಿನ್ನ ದ್ರೋಹಗಳನ್ನು ಮಂಜಿನಂತೆ ಪರಿಹರಿಸಿದ್ದೇನೆ, ನಿನ್ನ ಪಾಪಗಳನ್ನು ಮೋಡದಂತೆ ಹಾರಿಸಿದ್ದೇನೆ; ನಿನ್ನನ್ನು ವಿಮೋಚಿಸಿದ್ದೇನೆ, ನನ್ನ ಕಡೆಗೆ ತಿರುಗಿಕೋ. ಆಕಾಶವೇ, ಹರ್ಷಧ್ವನಿಗೈ, ಯೆಹೋವನು ತನ್ನ ಕಾರ್ಯವನ್ನು ನೆರವೇರಿಸಿದ್ದಾನೆ; ಭೂಮಿಯ ಅಧೋಭಾಗವೇ, ಆರ್ಬಟಿಸು; ಪರ್ವತಗಳೇ, ವನವೇ, ಸಕಲವನವೃಕ್ಷಗಳೇ, ಕೋಲಾಹಲಮಾಡಿರಿ; ಯೆಹೋವನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾಯೇಲಿನ ರಕ್ಷಣೆಯಿಂದ ತನ್ನ ಮಹಿಮೆಯನ್ನು ಪ್ರಚುರಗೊಳಿಸುವನು.”—ಯೆಶಾಯ 44:21-23.
18. (ಎ) ಇಸ್ರಾಯೇಲಿಗೆ ಹರ್ಷಿಸಲು ಕಾರಣವಿರುವುದೇಕೆ? (ಬಿ) ಯೆಹೋವನ ಸೇವಕರು ಇಂದು ಕರುಣೆಯ ವಿಷಯದಲ್ಲಿ ಆತನ ಮಾದರಿಯನ್ನು ಹೇಗೆ ಅನುಕರಿಸಬಲ್ಲರು?
18 ಇಸ್ರಾಯೇಲು ಯೆಹೋವನನ್ನು ನಿರ್ಮಿಸಲಿಲ್ಲ. ಆತನು ಒಬ್ಬ ಮಾನವ ನಿರ್ಮಿತ ದೇವರಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಇಸ್ರಾಯೇಲನ್ನು ತನ್ನ ಚುನಾಯಿತ ಸೇವಕನಾಗಿ ರಚಿಸಿದ್ದು ಯೆಹೋವನೇ. ಮತ್ತು ಆ ಜನಾಂಗವನ್ನು ಬಿಡುಗಡೆ ಮಾಡುವಾಗ ಆತನು ತನ್ನ ದೇವತ್ವವನ್ನು ಪುನಃ ರುಜುಪಡಿಸುವನು. ಆತನು ತನ್ನ ಜನರನ್ನು ಕೋಮಲತೆಯಿಂದ ಸಂಬೋಧಿಸುತ್ತಾನೆ. ಅವರು ಪಶ್ಚಾತ್ತಾಪಪಡುವಲ್ಲಿ ಅವರ ಪಾಪಗಳನ್ನು ಪೂರ್ತಿಯಾಗಿ ಮುಚ್ಚಿಬಿಡುವೆನೆಂದೂ, ಅವರ ದೋಷಗಳನ್ನು ತೂರಿಹೋಗಲಾಗದ ಮೋಡಗಳ ಹಿಂದೆ ಅಡಗಿಸಿಡುವೆನೆಂದೂ ಆತನು ಆಶ್ವಾಸನೆ ಕೊಡುತ್ತಾನೆ. ಇಸ್ರಾಯೇಲಿಗೆ ಹರ್ಷಿಸಲು ಎಷ್ಟು ಒಳ್ಳೆಯ ಕಾರಣವಿದು! ಯೆಹೋವನ ಮಾದರಿಯು ಆತನ ಆಧುನಿಕ ದಿನದ ಸೇವಕರು ಆತನ ಕರುಣೆಯನ್ನು ಅನುಕರಿಸುವಂತೆ ಪ್ರಚೋದಿಸುತ್ತದೆ. ಅವರು ಇದನ್ನು ಪಾಪಮಾಡುವವರಿಗೆ ಸಹಾಯವನ್ನು ನೀಡುತ್ತ, ಸಾಧ್ಯವಿರುವಲ್ಲಿ ಅವರನ್ನು ಆತ್ಮಿಕ ರೀತಿಯಲ್ಲಿ ಪುನಸ್ಸ್ಥಾಪಿಸಲು ಪ್ರಯತ್ನಿಸುವ ಮೂಲಕ ಮಾಡಸಾಧ್ಯವಿದೆ.—ಗಲಾತ್ಯ 6:1, 2.
ದೇವತ್ವದ ಪರೀಕ್ಷೆಯ ಪರಮಾವಧಿ
19, 20. (ಎ) ಯೆಹೋವನು ತನ್ನ ವ್ಯಾಜ್ಯವನ್ನು ಯಾವ ರೀತಿಯಲ್ಲಿ ಪರಮಾವಧಿಗೇರಿಸುತ್ತಾನೆ? (ಬಿ) ಯೆಹೋವನು ತನ್ನ ಜನರಿಗೆ ಯಾವ ಹೃದಯೋತ್ತೇಜಕ ವಿಷಯಗಳನ್ನು ಪ್ರವಾದಿಸುತ್ತಾನೆ, ಮತ್ತು ಇದನ್ನು ನೆರವೇರಿಸುವ ಆತನ ಪ್ರತಿನಿಧಿ ಯಾರು?
19 ಈಗ ಯೆಹೋವನು ತನ್ನ ಶಾಸನಬದ್ಧ ತರ್ಕವನ್ನು ಶಕ್ತಿಯುತವಾದ ಪರಮಾವಧಿಗೇರಿಸುತ್ತಾನೆ. ದೇವತ್ವದ ಅತಿ ಕಠಿನವಾದ ಪರೀಕ್ಷೆಯನ್ನು, ಅಂದರೆ ಭವಿಷ್ಯತ್ತನ್ನು ನಿಷ್ಕೃಷ್ಟವಾಗಿ ಮುಂತಿಳಿಸುವ ಸಾಮರ್ಥ್ಯದ ಕುರಿತು ತನ್ನ ಸ್ವಂತ ಉತ್ತರವನ್ನು ಆತನು ಪ್ರಕಟಿಸಲಿದ್ದಾನೆ. ಒಬ್ಬ ಬೈಬಲ್ ವಿದ್ವಾಂಸರು, ಯೆಶಾಯ 44ರ ಮುಂದಿನ ಐದು ವಚನಗಳನ್ನು, ಏಕಮಾತ್ರ ಸೃಷ್ಟಿಕರ್ತನೂ, ಭವಿಷ್ಯತ್ತನ್ನು ಪ್ರಕಟಿಸುವ ಏಕಮಾತ್ರ ವ್ಯಕ್ತಿಯೂ, ಇಸ್ರಾಯೇಲಿನ ವಿಮೋಚನೆಯ ನಿರೀಕ್ಷೆಯೂ ಆಗಿರುವ “ಇಸ್ರಾಯೇಲಿನ ದೇವರ ವಿಶ್ವಾತೀತ ಕವಿತೆ” ಎಂದು ಕರೆದರು. ಈ ಭಾಗವು, ಬಾಬೆಲಿನಿಂದ ಆ ಜನಾಂಗವನ್ನು ವಿಮೋಚಿಸುವ ಮನುಷ್ಯನ ಹೆಸರನ್ನು ಪ್ರಕಟಿಸುವ ಮೂಲಕ ಕ್ರಮೇಣವಾಗಿ ತನ್ನ ಪರಮಾವಧಿಗೇರುತ್ತದೆ.
20 “ನಿನ್ನನ್ನು ಗರ್ಭದಿಂದಲೂ ರೂಪಿಸುತ್ತಾ ಬಂದಿರುವ ನಿನ್ನ ವಿಮೋಚಕನಾದ ಯೆಹೋವನು ಹೀಗೆನ್ನುತ್ತಾನೆ—ನಾನೇ ಸರ್ವಕಾರ್ಯಕರ್ತನಾದ ಯೆಹೋವನು, ನಾನೊಬ್ಬನೇ ಗಗನಮಂಡಲವನ್ನು ಹರವಿ ಭೂಮಂಡಲವನ್ನು ವಿಸ್ತರಿಸುವವನಾಗಿದ್ದೇನೆ; ನನಗೆ ಸಹಾಯಕನುಂಟೋ? ನಾನು ಕೊಚ್ಚಿಕೊಳ್ಳುವವರ ಶಕುನಗಳನ್ನು ನಿರರ್ಥಕಪಡಿಸಿ ಕಣಿಹೇಳುವವರನ್ನು ಮರುಳುಗೊಳಿಸಿ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಹುಚ್ಚುತನವಾಗ ಮಾಡಿ ನನ್ನ ಸೇವಕನ ಮಾತನ್ನು ಸ್ಥಾಪಿಸಿ ನನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನಾಗಿದ್ದೇನೆ; ಯೆರೂಸಲೇಮು ಜನನಿವಾಸವಾಗುವದು, ಯೆಹೂದದ ಪಟ್ಟಣಗಳು ತಿರಿಗಿ ಕಟ್ಟಲ್ಪಡುವವು, ಅಲ್ಲಿನ ಹಾಳನ್ನು ಹಸನುಮಾಡುವೆನು ಎಂದು ನಾನು ಮುಂತಿಳಿಸಿ ಜಲರಾಶಿಗೆ—ಬತ್ತಿಹೋಗು, ನಿನ್ನಲ್ಲಿ ಸೇರುವ ನದಿಗಳನ್ನು ಒಣಗಿಸುವೆನು ಎಂದು ನಾನು ಅಪ್ಪಣೆ ಕೊಡುವವನಾಗಿದ್ದೇನೆ; ಮತ್ತು ಕೋರೆಷನ ವಿಷಯವಾಗಿ—ಅವನು ನನ್ನ ಮುಂದೆ ಕಾಯುವವನು, ಯೆರೂಸಲೇಮು ಕಟ್ಟಲ್ಪಡಲಿ, ದೇವಸ್ಥಾನದ ಅಸ್ತಿವಾರವು ಹಾಕಲ್ಪಡಲಿ ಎಂದು ಹೇಳಿ ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸತಕ್ಕವನು ಎಂಬದಾಗಿ ಮಾತಾಡುವವನಾಗಿದ್ದೇನೆ.”—ಯೆಶಾಯ 44:24-28.
21. ಯೆಹೋವನ ಮಾತುಗಳು ಯಾವ ಖಾತ್ರಿಯನ್ನು ಕೊಡುತ್ತವೆ?
21 ಹೌದು, ಯೆಹೋವನಿಗೆ ಭಾವೀ ಘಟನೆಗಳನ್ನು ಮುಂತಿಳಿಸುವ ಸಾಮರ್ಥ್ಯ ಮಾತ್ರವಲ್ಲ, ತನ್ನ ಪ್ರಕಟಿತ ಉದ್ದೇಶವನ್ನು ಪೂರ್ಣವಾಗಿ ನೆರವೇರಿಸುವ ಶಕ್ತಿಯೂ ಇದೆ. ಈ ಪ್ರಕಟನೆಯು ಇಸ್ರಾಯೇಲಿಗೆ ನಿರೀಕ್ಷೆಯ ಮೂಲವಾಗಿ ಪರಿಣಮಿಸುವುದು. ಬಾಬೆಲಿನ ಸೈನ್ಯಗಳು ದೇಶವನ್ನು ಧ್ವಂಸಮಾಡಿದರೂ, ಯೆರೂಸಲೇಮ್ ಮತ್ತು ಅದರ ಆಶ್ರಿತ ನಗರಗಳು ಪುನಃ ಕಟ್ಟಲ್ಪಟ್ಟು, ಅಲ್ಲಿ ಸತ್ಯಾರಾಧನೆಯು ಪುನಸ್ಸ್ಥಾಪಿಸಲ್ಪಡುವುದು. ಆದರೆ ಹೇಗೆ?
22. ಯೂಫ್ರೇಟೀಸ್ ನದಿಯು ಹೇಗೆ ಬತ್ತಿಹೋಗುತ್ತದೆಂಬುದನ್ನು ವಿವರಿಸಿ.
22 ದೈವಪ್ರೇರಿತರಲ್ಲದ ಭವಿಷ್ಯವಾದಿಗಳಿಗೆ ಸಾಮಾನ್ಯವಾಗಿ ತಮ್ಮ ಭವಿಷ್ಯನುಡಿಗಳನ್ನು ತೀರ ನಿರ್ದಿಷ್ಟವಾಗಿ ನುಡಿಯುವಷ್ಟು ಧೈರ್ಯವಿರುವುದಿಲ್ಲ. ಏಕೆಂದರೆ, ಕಾಲವು ಅವರ ತಪ್ಪನ್ನು ರುಜುಪಡಿಸುವುದೆಂಬ ಭಯ ಅವರಿಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನು ಯೆಶಾಯನ ಮೂಲಕ, ತನ್ನ ಜನರು ಸ್ವದೇಶಕ್ಕೆ ಹೋಗಿ ಯೆರೂಸಲೇಮನ್ನೂ ದೇವಾಲಯವನ್ನೂ ಪುನಃ ಕಟ್ಟುವಂತೆ ಅವರನ್ನು ಬಂಧಿವಾಸದಿಂದ ಬಿಡಿಸಲಿಕ್ಕಾಗಿ ತಾನು ಉಪಯೋಗಿಸಲಿರುವ ಪುರುಷನ ಹೆಸರನ್ನೂ ಪ್ರಕಟಿಸುತ್ತಾನೆ. ಅವನ ಹೆಸರು ಕೋರೆಷ ಮತ್ತು ಅವನು ಪಾರಸಿಯನಾದ ಮಹಾ ಕೋರೆಷನೆಂದೂ ಪ್ರಸಿದ್ಧನಾಗಿದ್ದಾನೆ. ಬಾಬೆಲಿನ ಬೃಹದಾಕಾರದ ಮತ್ತು ವಿಸ್ತಾರವಾದ ರಕ್ಷಣಾ ವ್ಯವಸ್ಥೆಯನ್ನು ತೂರಿ ಒಳಗೆ ಹೋಗಲು ಕೋರೆಷನು ಉಪಯೋಗಿಸಲಿರುವ ಯುದ್ಧತಂತ್ರದ ವಿವರಣೆಯನ್ನೂ ಯೆಹೋವನು ನೀಡುತ್ತಾನೆ. ಬಾಬೆಲನ್ನು ಎತ್ತರವಾದ ಗೋಡೆಗಳೂ ನಗರದ ಮಧ್ಯದಲ್ಲಿ ಮತ್ತು ಸುತ್ತಲೂ ಹರಿಯುವ ಜಲಮಾರ್ಗಗಳೂ ರಕ್ಷಿಸುತ್ತಿದ್ದವು. ಆದರೆ ಕೋರೆಷನು, ಆ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವಾದ ಯೂಫ್ರೇಟೀಸ್ ನದಿಯನ್ನು ಸದುಪಯೋಗಿಸಿ ತನ್ನ ಕಾರ್ಯವನ್ನು ಸಾಧಿಸುವನು. ಪುರಾತನ ಇತಿಹಾಸಕಾರರಾದ ಹಿರಾಡಟಸ್ ಮತ್ತು ಸೆನಫನ್ರಿಗನುಸಾರ, ಬಾಬೆಲಿಗೆ ಹರಿಯುವ ಯೂಫ್ರೇಟೀಸ್ ನದಿಯ ಮೇಲ್ಪ್ರವಾಹದ ಒಂದು ಸ್ಥಳದಲ್ಲಿ ಕೋರೆಷನು ನದಿಯ ದಿಕ್ಕನ್ನು ಬದಲಾಯಿಸಿ, ಅದರ ನೀರಿನ ಮಟ್ಟವನ್ನು ತನ್ನ ಸೈನಿಕರು ಅದರ ಮೂಲಕ ದಾಟಿ ಹೋಗುವಷ್ಟು ಕೆಳಗಿಳಿಸಿದನು. ಹೀಗೆ, ಬಾಬೆಲಿನ ಸಂರಕ್ಷಣೆಯ ಸಂಬಂಧದಲ್ಲಿಯಾದರೊ, ಮಹಾ ಯೂಫ್ರೇಟೀಸ್ ನದಿಯು ಬತ್ತಿಹೋಗುತ್ತದೆ.
23. ಕೋರೆಷನು ಇಸ್ರಾಯೇಲನ್ನು ವಿಮೋಚಿಸುವನೆಂಬ ಪ್ರವಾದನೆಯ ನೆರವೇರಿಕೆಗೆ ಯಾವ ದಾಖಲೆಯಿದೆ?
23 ಆದರೆ ಕೋರೆಷನು ದೇವಜನರನ್ನು ಬಿಡುಗಡೆಮಾಡಿ, ಯೆರೂಸಲೇಮ್ ಮತ್ತು ಅದರ ದೇವಾಲಯವು ಕಟ್ಟಲ್ಪಡುವಂತೆ ನೋಡಿಕೊಳ್ಳುವನು ಎಂಬ ವಾಗ್ದಾನದ ಕುರಿತೇನು? ಬೈಬಲಿನಲ್ಲಿ ಜೋಪಾನವಾಗಿರಿಸಲ್ಪಟ್ಟಿರುವ ಒಂದು ಅಧಿಕೃತ ಘೋಷಣೆಯಲ್ಲಿ ಕೋರೆಷನು ತಾನೇ ಪ್ರಕಟಿಸುವುದು: “ಪಾರಸಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ—ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು ತನಗೋಸ್ಕರ ಯೆಹೂದದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ. ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಯೆಹೂದದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ; ಅವರ ದೇವರು ಅವರ ಸಂಗಡ ಇರಲಿ.” (ಎಜ್ರ 1:2, 3) ಯೆಶಾಯನ ಮೂಲಕ ಮುಂತಿಳಿಸಲ್ಪಟ್ಟಿದ್ದ ಯೆಹೋವನ ಮಾತುಗಳು ಪೂರ್ಣವಾಗಿ ನೆರವೇರಿದವು!
ಯೆಶಾಯ, ಕೋರೆಷ ಮತ್ತು ಇಂದಿನ ಕ್ರೈಸ್ತರು
24. “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ” ಎಂಬ ಅರ್ತಷಸ್ತನ ಆಜ್ಞೆ ಹೊರಡುವುದಕ್ಕೂ ಮೆಸ್ಸೀಯನ ಬರೋಣಕ್ಕೂ ಯಾವ ಸಂಬಂಧವಿದೆ?
24 ಯೆಶಾಯ ಪುಸ್ತಕದ 44ನೆಯ ಅಧ್ಯಾಯವು, ಯೆಹೋವನನ್ನು ಒಬ್ಬನೇ ಸತ್ಯ ದೇವರೆಂದೂ ತನ್ನ ಪುರಾತನ ಕಾಲದ ಜನರ ವಿಮೋಚಕನೆಂದೂ ಹೊಗಳುತ್ತದೆ. ಇದಲ್ಲದೆ, ಈ ಪ್ರವಾದನೆಯು ಇಂದಿರುವ ನಮಗೆಲ್ಲರಿಗೆ ಬಹಳ ಅರ್ಥಗರ್ಭಿತವಾಗಿದೆ. ಯೆರೂಸಲೇಮಿನ ದೇವಾಲಯವನ್ನು ಪುನಃ ಕಟ್ಟಲು ಸಾ.ಶ.ಪೂ. 538/537ರಲ್ಲಿ ಕೋರೆಷನು ಕೊಟ್ಟ ಆಜ್ಞೆಯು, ಇನ್ನೊಂದು ಗಮನಾರ್ಹ ಪ್ರವಾದನೆಯ ನೆರವೇರಿಕೆಯಲ್ಲಿ ಅಂತ್ಯಗೊಂಡ ವಿಷಯಗಳನ್ನು ಆರಂಭಿಸಿತು. ಕೋರೆಷನ ಆಜ್ಞೆಯನ್ನನುಸರಿಸಿ, ಆ ಬಳಿಕ ಅರಸನಾದ ಅರ್ತಷಸ್ತನ ಆಜ್ಞೆಯು ಬಂತು. ಯೆರೂಸಲೇಮ್ ನಗರವನ್ನು ಪುನರ್ನಿರ್ಮಿಸಬೇಕೆಂದು ಆ ಆಜ್ಞೆ ಹೇಳಿತು. ದಾನಿಯೇಲನ ಪುಸ್ತಕವು, “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ [ಸಾ.ಶ.ಪೂ. 455ರಲ್ಲಿ] ಅಭಿಷಿಕ್ತನಾದ ಪ್ರಭುವು ಬರುವದರೊಳಗೆ” ಪ್ರತಿಯೊಂದು ವಾರದಲ್ಲಿ 7 ವರ್ಷಗಳಿರುವ 69 “ವಾರಗಳು” ಇರುವವೆಂದು ತಿಳಿಯಪಡಿಸಿತು. (ದಾನಿಯೇಲ 9:24, 25) ಈ ಪ್ರವಾದನೆಯೂ ನೆರವೇರಿತು. ಕ್ಲುಪ್ತ ಸಮಯದಲ್ಲಿ, ಅಂದರೆ ವಾಗ್ದತ್ತ ದೇಶದಲ್ಲಿ ಅರ್ತಷಸ್ತನ ಆಜ್ಞೆ ಹೊರಟು 483 ವರುಷಗಳಾದ ನಂತರ, ಸಾ.ಶ. 29ನೆಯ ವರ್ಷದಲ್ಲಿ ಯೇಸು ದೀಕ್ಷಾಸ್ನಾನ ಹೊಂದಿ ತನ್ನ ಭೂಶುಶ್ರೂಷೆಯನ್ನು ಪ್ರಾರಂಭಿಸಿದನು.a
25. ಕೋರೆಷನ ಕೈಯಿಂದ ಸಂಭವಿಸಿದ ಬಾಬೆಲಿನ ಪತನವು ಆಧುನಿಕ ಸಮಯಗಳಲ್ಲಿ ಯಾವುದನ್ನು ಸೂಚಿಸುತ್ತದೆ?
25 ಬಾಬೆಲಿನ ಪತನದ ಕಾರಣ ನಿಷ್ಠಾವಂತ ಯೆಹೂದ್ಯರಿಗೆ ಬಂಧಿವಾಸದಿಂದಾದ ಬಿಡುಗಡೆಯು, 1919ರಲ್ಲಿ ಆತ್ಮಿಕ ಬಂಧಿವಾಸದಿಂದ ಅಭಿಷಿಕ್ತ ಕ್ರೈಸ್ತರಿಗಾದ ಬಿಡುಗಡೆಯ ಒಂದು ಮುನ್ಛಾಯೆಯಾಗಿತ್ತು. ಆ ಬಿಡುಗಡೆಯು, ಮಹಾ ಬಾಬೆಲ್—ಲೋಕದ ಎಲ್ಲ ಸುಳ್ಳು ಧರ್ಮಗಳನ್ನು ಸಾಮೂಹಿಕವಾಗಿ ಗುರುತಿಸುವ ಚಿಹ್ನೆ—ಎಂಬ ವೇಶ್ಯೆಯಾಗಿ ವರ್ಣಿಸಲ್ಪಟ್ಟಿರುವ ಇನ್ನೊಂದು ಬಾಬೆಲು ಪತನಗೊಂಡಿತ್ತು ಎಂಬುದಕ್ಕೆ ರುಜುವಾತಾಗಿತ್ತು. ಪ್ರಕಟನೆ ಪುಸ್ತಕದಲ್ಲಿ ದಾಖಲೆಯಾಗಿರುವಂತೆ, ಅಪೊಸ್ತಲ ಯೋಹಾನನು ಆಕೆಯ ಪತನವನ್ನು ಮುನ್ನೋಡಿದನು. (ಪ್ರಕಟನೆ 14:8) ಆಕೆಯು ಥಟ್ಟನೆ ನಾಶವಾಗುವುದನ್ನೂ ಅವನು ಮುನ್ನೋಡಿದನು. ವಿಗ್ರಹಗಳಿಂದ ತುಂಬಿದ್ದ ಆ ಲೋಕ ಸಾಮ್ರಾಜ್ಯದ ನಾಶನದ ಕುರಿತಾದ ಯೋಹಾನನ ವರ್ಣನೆಯು, ಪುರಾತನ ನಗರವಾದ ಬಾಬೆಲನ್ನು ಕೋರೆಷನು ಯಶಸ್ವಿಯಾಗಿ ಸೋಲಿಸಿದ ವಿಷಯದಲ್ಲಿ ಯೆಶಾಯನು ನೀಡಿರುವ ವರ್ಣನೆಯನ್ನು ಕೊಂಚ ಮಟ್ಟಿಗೆ ಹೋಲುತ್ತದೆ. ಬಾಬೆಲಿನ ಸಂರಕ್ಷಣೆಗಾಗಿದ್ದ ಜಲಮಾರ್ಗಗಳು ಕೋರೆಷನಿಂದ ಬಾಬೆಲನ್ನು ರಕ್ಷಿಸಲು ಹೇಗೆ ವಿಫಲವಾದವೊ ಹಾಗೆಯೇ ಮಹಾ ಬಾಬೆಲ್ ನ್ಯಾಯವಾಗಿಯೇ ನಾಶಪಡಿಸಲ್ಪಡುವ ಮೊದಲು, ಅದನ್ನು ಬೆಂಬಲಿಸಿ ಸಂರಕ್ಷಿಸುತ್ತಿರುವ ಮಾನವಕುಲವೆಂಬ “ನೀರು” ಬತ್ತಿ ಹೋಗುವುದು.—ಪ್ರಕಟನೆ 16:12.b
26. ಯೆಶಾಯನ ಪ್ರವಾದನೆಯೂ ಅದರ ನೆರವೇರಿಕೆಯೂ ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸುತ್ತದೆ?
26 ಹೀಗೆ, ಯೆಶಾಯನು ತನ್ನ ಪ್ರವಾದನೆಯನ್ನು ಪ್ರಕಟಪಡಿಸಿ ಎರಡೂವರೆ ಸಾವಿರ ವರ್ಷಗಳಿಗಿಂತಲೂ ಹೆಚ್ಚು ಸಮಯದ ನಂತರ, ನಮ್ಮ ದಿನಗಳ ದೃಷ್ಟಿಕೋನದಿಂದ ನೋಡುವಾಗ, ದೇವರು ಖಂಡಿತವಾಗಿಯೂ ತನ್ನ “ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನು” ಎಂಬುದನ್ನು ನಾವು ನೋಡಬಲ್ಲೆವು. (ಯೆಶಾಯ 44:26) ಆದಕಾರಣ, ಯೆಶಾಯನ ಪ್ರವಾದನೆಯ ನೆರವೇರಿಕೆಯು, ಪವಿತ್ರ ಶಾಸ್ತ್ರಗಳಲ್ಲಿರುವ ಎಲ್ಲ ಪ್ರವಾದನೆಗಳ ಭರವಸಾರ್ಹತೆಗೆ ಒಂದು ಎದ್ದುಕಾಣುವ ಮಾದರಿಯಾಗಿರುತ್ತದೆ.
[ಪಾದಟಿಪ್ಪಣಿಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದ 11ನೆಯ ಅಧ್ಯಾಯವನ್ನು ನೋಡಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 35 ಮತ್ತು 36ನೆಯ ಅಧ್ಯಾಯಗಳನ್ನು ನೋಡಿ.
[ಪುಟ 63ರಲ್ಲಿರುವ ಚಿತ್ರ]
ಸುಡಲ್ಪಟ್ಟಿರದ ಸೌದೆಯ ತುಂಡು ಯಾರನ್ನಾದರೂ ಬಿಡುಗಡೆ ಮಾಡೀತೆ?
[ಪುಟ 73ರಲ್ಲಿರುವ ಚಿತ್ರ]
ಇರಾನಿನ ಒಬ್ಬ ಅರಸನ, ಪ್ರಾಯಶಃ ಕೋರೆಷನ ಶಿಲಾ ತಲೆ
[ಪುಟ 75ರಲ್ಲಿರುವ ಚಿತ್ರ]
ಯೂಫ್ರೇಟೀಸ್ ನದಿಯ ನೀರನ್ನು ಬೇರೆ ದಿಕ್ಕಿಗೆ ತಿರುಗಿಸುವ ಮೂಲಕ ಕೋರೆಷನು ಪ್ರವಾದನೆಯನ್ನು ನೆರವೇರಿಸುತ್ತಾನೆ