ಅಧ್ಯಾಯ ಹತ್ತು
ಸಮಾಧಾನದ ಪ್ರಭುವಿನ ಕುರಿತ ವಾಗ್ದಾನ
1. ಕಾಯಿನನ ಸಮಯದಿಂದ ಹಿಡಿದು ಮಾನವಕುಲವು ಏನನ್ನು ಅನುಭವಿಸಿದೆ?
ಸುಮಾರು ಆರು ಸಾವಿರ ವರುಷಗಳ ಹಿಂದೆ ಪ್ರಥಮ ಮಾನವ ಗಂಡುಮಗು ಜನಿಸಿತು. ಅವನ ಹೆಸರು ಕಾಯಿನ. ಅವನ ಜನನ ಅತ್ಯಂತ ವಿಶಿಷ್ಟ ರೀತಿಯದ್ದಾಗಿತ್ತು. ಅಷ್ಟರ ವರೆಗೆ ಅವನ ಹೆತ್ತವರಾಗಲಿ, ದೇವದೂತರಾಗಲಿ, ಅಷ್ಟೇ ಏಕೆ, ಸೃಷ್ಟಿಕರ್ತನು ಸಹ, ಮಾನವ ಮಗುವೊಂದನ್ನು ನೋಡಿರಲಿಲ್ಲ. ಈ ನವಜನಿತ ಶಿಶು, ಶಪಿತ ಮಾನವಕುಲಕ್ಕೆ ನಿರೀಕ್ಷೆಯನ್ನು ತರಬಹುದಾಗಿತ್ತು. ಆದರೆ, ಅದೇ ಶಿಶು ದೊಡ್ಡದಾದಾಗ ಒಬ್ಬ ಕೊಲೆಗಾರನಾಗಿ ಪರಿಣಮಿಸಿದ್ದು ಎಷ್ಟು ನಿರಾಶಾದಾಯಕವಾಗಿತ್ತು! (1 ಯೋಹಾನ 3:12) ಅಂದಿನಿಂದ ಹಿಡಿದು, ಮಾನವಕುಲವು ಅಸಂಖ್ಯಾತ ಕೊಲೆಗಳನ್ನು ನೋಡಿದೆ. ಕೆಟ್ಟದ್ದನ್ನು ಮಾಡುವ ಪ್ರವೃತ್ತಿಯು ಮಾನವರಲ್ಲಿರುವುದರಿಂದ, ಅವರು ತಮ್ಮ ನಡುವೆಯಾಗಲಿ, ದೇವರೊಂದಿಗಾಗಲಿ ಸಮಾಧಾನದ ಸಂಬಂಧದಲ್ಲಿರುವುದಿಲ್ಲ.—ಆದಿಕಾಂಡ 6:5; ಯೆಶಾಯ 48:22.
2, 3. ಯೇಸು ಕ್ರಿಸ್ತನು ಯಾವ ಪ್ರತೀಕ್ಷೆಗಳನ್ನು ಸಾಧ್ಯಗೊಳಿಸಿದನು, ಮತ್ತು ಅಂತಹ ಆಶೀರ್ವಾದಗಳನ್ನು ಪಡೆಯಲಿಕ್ಕಾಗಿ ನಾವೇನು ಮಾಡಬೇಕು?
2 ಕಾಯಿನನು ಹುಟ್ಟಿ ಸುಮಾರು ನಾಲ್ಕು ಸಹಸ್ರ ವರ್ಷಗಳ ಬಳಿಕ ಇನ್ನೊಂದು ಗಂಡುಮಗು ಜನಿಸಿತು. ಇವನ ಹೆಸರು ಯೇಸು. ಈ ಮಗುವಿನ ಜನನವೂ ಅತಿ ವಿಶೇಷ ರೀತಿಯದ್ದಾಗಿತ್ತು. ಅವನು ಪವಿತ್ರಾತ್ಮ ಶಕ್ತಿಯಿಂದ ಕನ್ಯೆಯೊಬ್ಬಳಿಂದ ಜನಿಸಿದನು. ಈ ರೀತಿಯ ಜನನವು ಇತಿಹಾಸದಲ್ಲಿ ಪುನಃ ಸಂಭವಿಸಲೇ ಇಲ್ಲ. ಅವನ ಜನನದ ಸಮಯದಲ್ಲಿ ಹರ್ಷಿತರಾಗಿದ್ದ ದೇವದೂತರ ಗುಂಪೊಂದು, “ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ” ಎಂದು ದೇವರಿಗೆ ಸ್ತುತಿಗಳನ್ನು ಹಾಡಿತು. (ಲೂಕ 2:13, 14) ಯೇಸು ಕೊಲೆಗಾರನಾಗುವ ಬದಲಿಗೆ, ಜನರು ದೇವರೊಂದಿಗೆ ಸಮಾಧಾನ ಮಾಡಿಕೊಳ್ಳುವ ಮತ್ತು ನಿತ್ಯಜೀವವನ್ನು ಪಡೆಯುವ ದಾರಿಯನ್ನು ತೆರೆದನು.—ಯೋಹಾನ 3:16; 1 ಕೊರಿಂಥ 15:55.
3 ಯೇಸುವನ್ನು “ಸಮಾಧಾನದ ಪ್ರಭು” ಎಂದು ಕರೆಯಲಾಗುವುದೆಂದು ಯೆಶಾಯನು ಪ್ರವಾದಿಸಿದನು. (ಯೆಶಾಯ 9:6) ಅವನು ಮಾನವಕುಲದ ಪರವಾಗಿ ತನ್ನ ಸ್ವಂತ ಜೀವವನ್ನು ಅರ್ಪಿಸಲಿದ್ದನು. ಇದರಿಂದ ಪಾಪಗಳ ಕ್ಷಮಾಪಣೆಯು ಸಾಧ್ಯವಾಯಿತು. (ಯೆಶಾಯ 53:11) ಇಂದು ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡುವ ಮೂಲಕ ನಾವು ದೇವರೊಂದಿಗೆ ಸಮಾಧಾನವನ್ನು ಮತ್ತು ಪಾಪಗಳ ಕ್ಷಮಾಪಣೆಯನ್ನು ಪಡೆಯಸಾಧ್ಯವಿದೆ. ಇಂತಹ ಆಶೀರ್ವಾದಗಳಿಗಾಗಿ ಪರಿಶ್ರಮಪಡುವ ಅಗತ್ಯವಿದೆ. (ಕೊಲೊಸ್ಸೆ 1:21-23) ಅವುಗಳನ್ನು ಪಡೆಯಲಿಚ್ಛಿಸುವವರು ಯೆಹೋವ ದೇವರಿಗೆ ವಿಧೇಯರಾಗಿರಲು ಕಲಿಯಲೇಬೇಕು. (1 ಪೇತ್ರ 3:11; ಹೋಲಿಸಿ ಇಬ್ರಿಯ 5:8, 9.) ಆದರೆ ಯೆಶಾಯನ ದಿನಗಳಲ್ಲಿ ಇಸ್ರಾಯೇಲೂ ಯೆಹೂದವೂ ಇದಕ್ಕೆ ವ್ಯತಿರಿಕ್ತವಾದ ಸಂಗತಿಗಳನ್ನೇ ಮಾಡುತ್ತವೆ.
ದೆವ್ವಗಳ ಕಡೆಗೆ ತಿರುಗುವುದು
4, 5. ಯೆಶಾಯನ ದಿನದ ಸ್ಥಿತಿಗತಿಗಳು ಹೇಗಿವೆ, ಮತ್ತು ಕೆಲವರು ಸಹಾಯಕ್ಕಾಗಿ ಯಾರ ಕಡೆಗೆ ನೋಡುತ್ತಾರೆ?
4 ಅವಿಧೇಯತೆಯ ಕಾರಣ, ಯೆಶಾಯನ ಸಮಕಾಲೀನರು ತೀರ ವಿಷಾದಕರವಾದ ನೈತಿಕ ಪರಿಸ್ಥಿತಿಯಲ್ಲಿದ್ದಾರೆ. ಅಂದರೆ ಅವರು ಆತ್ಮಿಕ ಅಂಧಕಾರದ ಸಾಕ್ಷಾತ್ ಹೊಂಡದಲ್ಲಿ ಬಿದ್ದಿದ್ದಾರೆ. ದೇವಾಲಯವು ಎಲ್ಲಿ ನೆಲೆಸಿದೆಯೊ ಆ ಯೆಹೂದದ ದಕ್ಷಿಣ ರಾಜ್ಯದಲ್ಲಿಯೂ ಸಮಾಧಾನವಿಲ್ಲ. ತಮ್ಮ ಅಪನಂಬಿಗಸ್ತಿಕೆಯ ಫಲವಾಗಿ ಯೆಹೂದದ ಜನರು ಅಶ್ಶೂರರ ಆಕ್ರಮಣವನ್ನು ಎದುರಿಸಬೇಕಾಗಿದೆ ಮಾತ್ರವಲ್ಲ, ಕಠಿನ ಸಮಯಗಳೂ ಅವರ ಮುಂದಿವೆ. ಸಹಾಯಕ್ಕಾಗಿ ಅವರು ಯಾರ ಕಡೆಗೆ ನೋಡುತ್ತಾರೆ? ದುಃಖಕರವಾದ ವಿಷಯವೇನಂದರೆ ಅನೇಕರು ಯೆಹೋವನ ಕಡೆಗಲ್ಲ, ಸೈತಾನನ ಕಡೆಗೆ ತಿರುಗುತ್ತಾರೆ. ಅವರು ಸೈತಾನನನ್ನು ಹೆಸರು ಹೇಳಿ ಬೇಡಿಕೊಳ್ಳುವುದಿಲ್ಲವೆಂಬುದು ಸರಿ. ಬದಲಿಗೆ, ಪುರಾತನ ಕಾಲದ ಸೌಲನಂತೆ, ಅವರು ಪ್ರೇತವ್ಯವಹಾರದಲ್ಲಿ ಒಳಗೂಡುತ್ತಾರೆ. ತಮ್ಮ ಸಮಸ್ಯೆಗಳಿಗೆ ಉತ್ತರವನ್ನು ಹುಡುಕಲು ಸತ್ತವರನ್ನು ವಿಚಾರಿಸುತ್ತಾರೆ.—1 ಸಮುವೇಲ 28:1-20.
5 ಕೆಲವರು ಈ ಆಚರಣೆಗೆ ಬೇಕಾದ ಉತ್ತೇಜನವನ್ನೂ ನೀಡುತ್ತಿದ್ದಾರೆ. ಯೆಶಾಯನು ಇಂತಹ ಧರ್ಮಭ್ರಷ್ಟತೆಯನ್ನು ತಿಳಿಸುತ್ತಾ ಹೇಳುವುದು: “ಲೊಚಗುಟ್ಟುವ ಪಿಟಿಪಿಟಿಗುಟ್ಟುವ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಆಶ್ರಯಿಸಿರಿ ಎಂದು ಒಂದು ವೇಳೆ ನಿಮಗೆ ಹೇಳಾರು. ಜನರು ತಮ್ಮ ದೇವರನ್ನೇ ಆಶ್ರಯಿಸಬಾರದೋ? ಜೀವಿತರಿಗಾಗಿ ಸತ್ತವರಲ್ಲಿ ವಿಚಾರಿಸುವದು ಯುಕ್ತವೋ?” (ಯೆಶಾಯ 8:19) ಪ್ರೇತ ಮಾಧ್ಯಮಗಳು ‘ಲೊಚಗುಟ್ಟುತ್ತ ಪಿಟಿಪಿಟಿಗುಟ್ಟುತ್ತ’ ಜನರನ್ನು ವಂಚಿಸಬಲ್ಲವು. ಇಂತಹ ಧ್ವನಿಗಳು ಮೃತರ ಆತ್ಮಗಳಿಂದ ಬರುತ್ತವೆಂದು ಹೇಳಲಾಗುವುದಾದರೂ, ಪ್ರೇತ ಮಾಧ್ಯಮವಾಗಿ ಕಾರ್ಯಮಾಡುವ ಒಬ್ಬ ವ್ಯಕ್ತಿಯು, ದೂರದಿಂದ ಶಬ್ದ ಬರುತ್ತಿದೆಯೆಂಬ ಭ್ರಮೆಯುಂಟಾಗುವಂತೆ ಧ್ವನಿ ಮಾಡಬಲ್ಲನು. ಆದರೆ ಕೆಲವು ಬಾರಿ, ಏಂದೋರಿನ ಮಾಟಗಾರ್ತಿಯನ್ನು ವಿಚಾರಿಸಿದಾಗ ಸೌಲನಿಗಾದಂತೆ, ದೆವ್ವಗಳು ಸ್ವತಃ ನೇರವಾಗಿ ಒಳಗೊಂಡು ಮೃತ ವ್ಯಕ್ತಿಯಂತೆ ನಟಿಸಬಹುದು.—1 ಸಮುವೇಲ 28:8-19.
6. ಪ್ರೇತವ್ಯವಹಾರವನ್ನು ಅವಲಂಬಿಸಿರುವ ಇಸ್ರಾಯೇಲ್ಯರು ವಿಶೇಷವಾಗಿ ದೋಷಾರ್ಹರು ಏಕೆ?
6 ಯೆಹೋವನು ಪ್ರೇತವ್ಯವಹಾರವನ್ನು ನಿಷೇಧಿಸಿದ್ದರೂ, ಯೆಹೂದದಲ್ಲಿ ಇವೆಲ್ಲ ನಡೆಯುತ್ತಿವೆ. ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಇದು ಮರಣದಂಡನೆಗೆ ಯೋಗ್ಯವಾದ ಪಾಪ. (ಯಾಜಕಕಾಂಡ 19:31; 20:6, 27; ಧರ್ಮೋಪದೇಶಕಾಂಡ 18:9-12) ಆದರೆ ಯೆಹೋವನ ವಿಶೇಷ ಸ್ವತ್ತಾದ ಈ ಜನರು ಅಂತಹ ಘೋರ ಪಾಪವನ್ನೇಕೆ ನಡೆಸುತ್ತಾರೆ? ಏಕೆಂದರೆ ಅವರು ಯೆಹೋವನ ಧರ್ಮಶಾಸ್ತ್ರವನ್ನು ಮತ್ತು ಸಲಹೆಗಳನ್ನು ತಿರಸ್ಕರಿಸಿ, “ಪಾಪದಿಂದ ಮೋಸಹೋಗಿ ಕಠಿನ”ರಾಗಿದ್ದಾರೆ. (ಇಬ್ರಿಯ 3:13) “ಕೊಬ್ಬಿನಂತೆ ಅವರ ಬುದ್ಧಿ ಮಂದ”ವಾಗಿದೆ ಮತ್ತು ಅವರು ತಮ್ಮ ದೇವರಿಂದ ವಿಮುಖಗೊಂಡಿದ್ದಾರೆ.—ಕೀರ್ತನೆ 119:70.a
7. ಇಂದು ಅನೇಕರು ಯೆಶಾಯನ ದಿನದ ಇಸ್ರಾಯೇಲ್ಯರನ್ನು ಅನುಕರಿಸುವುದು ಹೇಗೆ, ಮತ್ತು ಇಂತಹವರು ಪಶ್ಚಾತ್ತಾಪಪಡದಿದ್ದಲ್ಲಿ ಅವರಿಗೆ ಏನು ಸಂಭವಿಸುವುದು?
7 ‘ಅಶ್ಶೂರರ ಆಕ್ರಮಣ ಸನ್ನಿಹಿತವಾಗಿರುವಾಗ, ಯೆಹೋವನ ಧರ್ಮಶಾಸ್ತ್ರದಿಂದ ಏನು ಪ್ರಯೋಜನವಾದೀತು?’ ಎಂದು ಅವರು ತರ್ಕಿಸಿದ್ದಿರಬಹುದು. ತಮ್ಮ ದುಃಸ್ಥಿತಿಗಾಗಿ ಅವರಿಗೆ ಒಡನೆ ದೊರೆಯುವ, ಸುಲಭವಾದ ಪರಿಹಾರ ಬೇಕಾಗಿತ್ತು. ಅವರು ಯೆಹೋವನ ಚಿತ್ತದ ನೆರವೇರಿಕೆಗಾಗಿ ಕಾಯಲು ಸಿದ್ಧರಾಗಿರಲಿಲ್ಲ. ಹಾಗೆಯೇ, ನಮ್ಮ ದಿನಗಳಲ್ಲಿಯೂ, ಅನೇಕರು ಯೆಹೋವನ ಧರ್ಮಶಾಸ್ತ್ರವನ್ನು ಅಸಡ್ಡೆಮಾಡುತ್ತ, ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರೇತವ್ಯವಹಾರ ಮಾಧ್ಯಮಗಳನ್ನು ಹುಡುಕಿ, ಜಾತಕಗಳನ್ನು ವಿಚಾರಿಸಿ, ಮಂತ್ರತಂತ್ರಗಳ ಬೇರೆ ವಿಧಾನಗಳನ್ನು ಅವಲಂಬಿಸುತ್ತಾರೆ. ಆದರೂ, ಹಿಂದಿನ ಕಾಲದಂತೆಯೇ ಇಂದು ಸಹ, ಜೀವಿತರಿಗಾಗಿ ಸತ್ತವರಿಂದ ಉತ್ತರ ಪಡೆಯುವುದು ಅಷ್ಟೇ ಹಾಸ್ಯಾಸ್ಪದವಾಗಿದೆ. ಪಶ್ಚಾತ್ತಾಪಪಡದೆ ಇಂತಹ ಆಚಾರಗಳಲ್ಲಿ ತೊಡಗುವವರ ಭವಿಷ್ಯತ್ತು, ‘ಕೊಲೆಗಾರರು, ಜಾರರು, . . . ವಿಗ್ರಹಾರಾಧಕರು, ಮತ್ತು ಎಲ್ಲಾ ಸುಳ್ಳುಗಾರರ’ ಭವಿಷ್ಯದಂತೆಯೇ ಇರುವುದು. ಅವರಿಗೆ ಭಾವೀ ಜೀವನದ ಪ್ರತೀಕ್ಷೆಯೇ ಇರುವುದಿಲ್ಲ.—ಪ್ರಕಟನೆ 21:8.
ದೇವರ ‘ನಿಯಮ ಮತ್ತು ಪ್ರಮಾಣ’
8. ಇಂದು ಮಾರ್ಗದರ್ಶನಕ್ಕಾಗಿ ನಾವು ಹೋಗಬೇಕಾದ “ನಿಯಮ” ಮತ್ತು “ಪ್ರಮಾಣ” ಯಾವುದಾಗಿದೆ?
8 ಪ್ರೇತವ್ಯವಹಾರವನ್ನು ಖಂಡಿಸುವ ಆಜ್ಞೆಯೊಂದಿಗೆ ಯೆಹೋವನು ನೀಡಿರುವ ಬೇರೆ ಎಲ್ಲ ಆಜ್ಞೆಗಳು, ಯೆಹೂದದಲ್ಲಿ ಸಕಲರಿಗೂ ತಿಳಿದದ್ದಾಗಿವೆ. ಈ ಆಜ್ಞೆಗಳು, ಲಿಖಿತ ರೂಪದಲ್ಲಿ ಭದ್ರವಾಗಿಡಲ್ಪಟ್ಟಿವೆ. ಇಂದು, ದೇವರ ಸಂಪೂರ್ಣ ವಾಕ್ಯವು ಲಿಖಿತ ರೂಪದಲ್ಲಿದೆ. ಈ ವಾಕ್ಯವೇ ಬೈಬಲ್. ಅದರಲ್ಲಿ ದೈವಿಕ ನಿಯಮಗಳು ಹಾಗೂ ಕಟ್ಟಳೆಗಳು ಮಾತ್ರವಲ್ಲ, ದೇವರು ತನ್ನ ಜನರೊಂದಿಗೆ ವ್ಯವಹರಿಸಿದ ದಾಖಲೆಗಳೂ ಇವೆ. ಯೆಹೋವನ ವ್ಯವಹಾರಗಳ ಕುರಿತಾದ ಈ ದಾಖಲೆಯು, ಒಂದು ಪ್ರಮಾಣ ಇಲ್ಲವೆ ಸಾಕ್ಷ್ಯದ ರೂಪದಲ್ಲಿದೆ. ಇದು ನಮಗೆ ಯೆಹೋವನ ವ್ಯಕ್ತಿತ್ವ ಹಾಗೂ ಗುಣಗಳ ಕುರಿತು ಕಲಿಸುತ್ತದೆ. ಇಸ್ರಾಯೇಲ್ಯರು ತಮಗೆ ಬೇಕಾದ ಮಾರ್ಗದರ್ಶನಕ್ಕಾಗಿ ಸತ್ತವರನ್ನು ವಿಚಾರಿಸುವ ಬದಲಿಗೆ ಎಲ್ಲಿಗೆ ಹೋಗಬೇಕಿತ್ತು? ಯೆಶಾಯನು ಉತ್ತರಿಸುವುದು: “ನಿಯಮದ ಕಡೆಗೆ ಮತ್ತು ಪ್ರಮಾಣದ ಕಡೆಗೆ!” (ಯೆಶಾಯ 8:20ಎ, NW) ಹೌದು, ನಿಜವಾದ ಜ್ಞಾನೋದಯವನ್ನು ಹುಡುಕುವವರು ದೇವರ ಲಿಖಿತ ವಾಕ್ಯವನ್ನೇ ಅವಲಂಬಿಸಬೇಕು.
9. ಪಶ್ಚಾತ್ತಾಪಪಡದ ಪಾಪಿಗಳು ಬೈಬಲಿನ ವಚನಗಳನ್ನು ಪದೇ ಪದೇ ಉಲ್ಲೇಖಿಸುವುದರಿಂದ ಯಾವ ಪ್ರಯೋಜನವಾದರೂ ಇದೆಯೊ?
9 ಪ್ರೇತವ್ಯವಹಾರದಲ್ಲಿ ತೊಡಗಿರುವ ಕೆಲವು ಇಸ್ರಾಯೇಲ್ಯರು, ತಾವು ದೇವರ ಲಿಖಿತ ವಾಕ್ಯವನ್ನು ಬಹಳ ಗೌರವಿಸುವುದಾಗಿ ಹೇಳಿಕೊಳ್ಳಬಹುದು. ಆದರೆ ಇಂತಹ ಹೇಳಿಕೆಗಳು ಸಾರವಿಲ್ಲದವುಗಳಾಗಿವೆ ಮತ್ತು ಸುಳ್ಳು ಮಾತುಗಳಾಗಿವೆ. ಯೆಶಾಯನು ಹೇಳುವುದು: “ಅರುಣೋದಯದ ಬೆಳಕೇ ಇಲ್ಲದ ಈ ಹೇಳಿಕೆಗನುಸಾರ ಅವರು ಹೇಳುತ್ತಿರುವರು.” (ಯೆಶಾಯ 8:20ಬಿ, NW) ಯಾವ ಹೇಳಿಕೆಯ ಕುರಿತು ಯೆಶಾಯನು ತಿಳಿಸುತ್ತಿದ್ದಾನೆ? ಬಹುಶಃ ‘ನಿಯಮ ಮತ್ತು ಪ್ರಮಾಣದ ಕಡೆಗೆ’ ಎಂಬ ಹೇಳಿಕೆಯನ್ನೇ. ಇಂದಿನ ಧರ್ಮಭ್ರಷ್ಟರು ಮತ್ತು ಇತರರು ಶಾಸ್ತ್ರಗಳನ್ನು ಉಲ್ಲೇಖಿಸಬಹುದಾಗಿರುವಂತೆಯೇ, ಹಲವು ಧರ್ಮಭ್ರಷ್ಟ ಇಸ್ರಾಯೇಲ್ಯರು ದೇವರ ವಾಕ್ಯವನ್ನು ಸೂಚಿಸಿ ಮಾತಾಡುತ್ತಿರಬಹುದು. ಆದರೆ ಇವು ಬರಿಯ ಮಾತುಗಳಾಗಿವೆ. ಕೇವಲ ಶಾಸ್ತ್ರವಚನಗಳನ್ನು ಉಲ್ಲೇಖಿಸುವುದರಿಂದ, ‘ಬೆಳಕನ್ನು’ ಇಲ್ಲವೆ ಯೆಹೋವನಿಂದ ಜ್ಞಾನೋದಯವನ್ನು ಪಡೆಯಲು ಸಾಧ್ಯವಿಲ್ಲ. ಬದಲಿಗೆ ಇಂತಹ ಜ್ಞಾನೋದಯಕ್ಕಾಗಿ, ಶಾಸ್ತ್ರಗಳ ಉಲ್ಲೇಖದೊಂದಿಗೆ ಯೆಹೋವನ ಚಿತ್ತವನ್ನು ಮಾಡಬೇಕು ಮಾತ್ರವಲ್ಲ, ಅಶುದ್ಧ ಆಚರಣೆಗಳಿಂದಲೂ ದೂರವಿರಬೇಕು.b
“ಅದು ಅನ್ನದ ಕ್ಷಾಮವಲ್ಲ”
10. ಯೆಹೋವನನ್ನು ತಿರಸ್ಕರಿಸಿದ ಕಾರಣ, ಯೆಹೂದದ ಜನರು ಹೇಗೆ ಕಷ್ಟಾನುಭವಿಸುತ್ತಿದ್ದಾರೆ?
10 ಯೆಹೋವನಿಗೆ ಅವಿಧೇಯರಾಗುವವರು ಮಾನಸಿಕ ಅಂಧಕಾರವನ್ನು ಅನುಭವಿಸುತ್ತಾರೆ. (ಎಫೆಸ 4:17, 18) ಆತ್ಮಿಕ ಅರ್ಥದಲ್ಲಿ, ಯೆಹೂದದ ಜನರು ತಿಳುವಳಿಕೆಯಿಲ್ಲದೆ ಕುರುಡರಂತಾಗಿದ್ದಾರೆ. (1 ಕೊರಿಂಥ 2:14) ಯೆಶಾಯನು ಅವರ ಸ್ಥಿತಿಯನ್ನು ವರ್ಣಿಸುತ್ತಾನೆ: “ಅವರು ಘೋರಕಷ್ಟಕ್ಕೊಳಗಾಗಿ ಹಸಿದುಕೊಂಡು ದೇಶದಲ್ಲಿ ಅಲೆಯುವರು.” (ಯೆಶಾಯ 8:21ಎ) ಯೆಹೂದ ಜನಾಂಗವು ವಿಶೇಷವಾಗಿ ರಾಜ ಆಹಾಜನ ಆಳ್ವಿಕೆಯಲ್ಲಿ ದೇವರಿಗೆ ಅಪನಂಬಿಗಸ್ತಿಕೆಯಿಂದ ನಡೆದುಕೊಂಡ ಕಾರಣ, ಅದೀಗ ಒಂದು ಸ್ವತಂತ್ರ ರಾಜ್ಯವಾಗಿ ಉಳಿಯುವುದು ಕಷ್ಟ. ಅದರ ಸುತ್ತಲೂ ವೈರಿಗಳಿದ್ದಾರೆ. ಅಶ್ಶೂರದ ಸೇನೆಯು ಯೆಹೂದದ ಪಟ್ಟಣಗಳ ಮೇಲೆ ಒಂದೊಂದಾಗಿ ದಾಳಿಮಾಡುತ್ತಿದೆ. ಅದು ಫಲವತ್ತಾದ ಭೂಮಿಯನ್ನು ಧ್ವಂಸಮಾಡುವುದರಿಂದ, ಎಲ್ಲೆಲ್ಲೂ ಆಹಾರದ ಅಭಾವವುಂಟಾಗುತ್ತಿದೆ. ಅನೇಕರು “ಘೋರಕಷ್ಟಕ್ಕೊಳಗಾಗಿ ಹಸಿದುಕೊಂಡು” ಅಲೆಯುತ್ತಿದ್ದಾರೆ. ಆದರೆ, ಮತ್ತೊಂದು ರೀತಿಯ ಹಸಿವನ್ನೂ ಆ ದೇಶದವರು ಅನುಭವಿಸುತ್ತಾರೆ. ಕೆಲವು ದಶಕಗಳ ಹಿಂದೆ ಪ್ರವಾದಿ ಆಮೋಸನು ಹೀಗೆ ಮುಂತಿಳಿಸಿದ್ದನು: “ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ಆಹಾ, ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.” (ಆಮೋಸ 8:11) ಯೆಹೂದವು ಇಂತಹದ್ದೇ ಆತ್ಮಿಕ ಕ್ಷಾಮದ ಸುಳಿಯಲ್ಲಿ ಸಿಕ್ಕಿಕೊಂಡಿದೆ!
11. ತನಗೆ ಸಿಗುವ ದಂಡನೆಯಿಂದ ಯೆಹೂದವು ಪಾಠ ಕಲಿಯುವುದೊ?
11 ಇದರಿಂದ ಯೆಹೂದವು ಪಾಠ ಕಲಿತು ಯೆಹೋವನ ಕಡೆಗೆ ಹಿಂದಿರುಗುವುದೊ? ಅದರ ನಿವಾಸಿಗಳು ಪ್ರೇತವ್ಯವಹಾರ ಮತ್ತು ಮೂರ್ತಿಪೂಜೆಯನ್ನು ತ್ಯಜಿಸಿ, ‘ನಿಯಮಕ್ಕೆ ಮತ್ತು ಪ್ರಮಾಣಕ್ಕೆ’ ಹಿಂದಿರುಗುವರೊ? ಯೆಹೋವನು ಅವರ ಪ್ರತಿಕ್ರಿಯೆಯನ್ನು ಮುಂಗಾಣುತ್ತಾನೆ: “ಹಸಿದಾಗ ರೇಗಿಕೊಂಡು ತಮ್ಮ ರಾಜನನ್ನೂ ತಮ್ಮ ದೇವರನ್ನೂ ಶಪಿಸುವರು.” (ಯೆಶಾಯ 8:21ಬಿ) ಹೌದು, ತಾವು ಇರುವ ಪರಿಸ್ಥಿತಿಗಾಗಿ ಅನೇಕರು ತಮ್ಮ ಮಾನವ ರಾಜನನ್ನು ದೂಷಿಸುವರು. ಇತರರು, ತಾವು ಅನುಭವಿಸುತ್ತಿರುವ ಕೇಡುಗಳಿಗಾಗಿ ಮೂರ್ಖತನದಿಂದ ಯೆಹೋವನನ್ನು ದೂಷಿಸುವರು! (ಹೋಲಿಸಿ ಯೆರೆಮೀಯ 44:15-18.) ಇಂದು ಕೂಡ ಅನೇಕರು, ಮಾನವರ ದುಷ್ಟತನದಿಂದ ಉಂಟಾಗುವ ದುರಂತಗಳಿಗಾಗಿ ದೇವರನ್ನು ದೂಷಿಸುತ್ತಾರೆ.
12. (ಎ) ದೇವರಿಂದ ವಿಮುಖಗೊಂಡ ಯೆಹೂದವು ಏನನ್ನು ಅನುಭವಿಸಿದೆ? (ಬಿ) ಯಾವ ಪ್ರಮುಖ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?
12 ದೇವರನ್ನು ಶಪಿಸುವುದರಿಂದ ಯೆಹೂದದ ನಿವಾಸಿಗಳು ಸಮಾಧಾನವನ್ನು ಅನುಭವಿಸುವರೊ? ಇಲ್ಲ. ಯೆಶಾಯನು ಮುಂತಿಳಿಸುವುದು: “ಮೇಲಕ್ಕೆ ಕಣ್ಣೆತ್ತಿದರೂ ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವವು; ಕಾರ್ಗತ್ತಲೆಗೆ ತಳ್ಳಲ್ಪಡುವರು.” (ಯೆಶಾಯ 8:22) ದೇವರನ್ನು ದೂಷಿಸಲಿಕ್ಕಾಗಿ ಅವರು ತಮ್ಮ ಕಣ್ಣುಗಳನ್ನು ಮೇಲಕ್ಕೆ ಎತ್ತಿದ ನಂತರ, ಅವರು ತಮ್ಮ ಆಶಾಹೀನ ಪ್ರತೀಕ್ಷೆಗಳ ಕಡೆಗೆ ಅಂದರೆ ಭೂಮಿಯ ಕಡೆಗೆ ದೃಷ್ಟಿಬೀರುತ್ತಾರೆ. ಅವರು ದೇವರಿಂದ ವಿಮುಖರಾದ ಕಾರಣ ಕೇಡನ್ನು ಅನುಭವಿಸಲಿದ್ದಾರೆ. (ಜ್ಞಾನೋಕ್ತಿ 19:3) ಹಾಗಾದರೆ, ಯೆಹೋವನು ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ಮಾಡಿದ ವಾಗ್ದಾನಗಳಿಗೆ ಏನು ಸಂಭವಿಸಿತು? (ಆದಿಕಾಂಡ 22:15-18; 28:14, 15) ಯೆಹೋವನು ಅವುಗಳನ್ನು ನೆರವೇರಿಸದೆ ಇರುವನೊ? ಯೆಹೂದ ಗೋತ್ರಕ್ಕೆ ಮತ್ತು ದಾವೀದನಿಗೆ ವಾಗ್ದಾನಿಸಲ್ಪಟ್ಟ ರಾಜವಂಶವನ್ನು, ಅಶ್ಶೂರ ಸೇನೆಯು ಇಲ್ಲವೆ ಬೇರೆ ಯಾವುದೇ ಮಿಲಿಟರಿ ಶಕ್ತಿಯು ನಿರ್ಮೂಲಮಾಡಿಬಿಡುವುದೊ? (ಆದಿಕಾಂಡ 49:8-10; 2 ಸಮುವೇಲ 7:11-16) ಇಸ್ರಾಯೇಲ್ಯರು ಸದಾಕಾಲ ಕತ್ತಲೆಯಲ್ಲಿ ಆಶಾಹೀನರಾಗಿಯೇ ಇರುವರೊ?
‘ಅವಮಾನಕ್ಕೆ ಗುರಿಮಾಡಲ್ಪಟ್ಟ’ ದೇಶ
13. “ಅನ್ಯಜನಗಳಿರುವ ಗಲಿಲಾಯ” ಏನಾಗಿದೆ, ಮತ್ತು ಅದು ಯಾವ ರೀತಿಯಲ್ಲಿ ‘ಅವಮಾನಕ್ಕೆ ಗುರಿಯಾಗುತ್ತದೆ’?
13 ಅಬ್ರಹಾಮನ ಸಂತತಿಯವರು ಅನುಭವಿಸಿದ ಅತ್ಯಂತ ಘೋರ ದುರ್ಘಟನೆಗಳಲ್ಲಿ ಒಂದರ ಕುರಿತು ಯೆಶಾಯನು ಹೇಳುತ್ತಾನೆ: “ಆದರೆ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಪೂರ್ವಕಾಲದಲ್ಲಿ ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿದನು; ಅನಂತರದಲ್ಲಿ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, [“ಸಮುದ್ರ ಪಕ್ಕದ ದಾರಿ,” NW] ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತವನ್ನೆಲ್ಲಾ ಘನಪಡಿಸಿದ್ದಾನೆ.” (ಯೆಶಾಯ 9:1) ಗಲಿಲಾಯ ಕ್ಷೇತ್ರವು ಇಸ್ರಾಯೇಲ್ ರಾಜ್ಯದ ಉತ್ತರ ದಿಕ್ಕಿನಲ್ಲಿದೆ. ಯೆಶಾಯನ ಪ್ರವಾದನೆಯಲ್ಲಿ, ಅದು “ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳನ್ನು” ಮತ್ತು “ಸಮುದ್ರ ಪಕ್ಕದ ದಾರಿ”ಯನ್ನು ಒಳಗೊಳ್ಳುತ್ತದೆ. ಇದು ಪುರಾತನ ಕಾಲದ ರಸ್ತೆಯಾಗಿದ್ದು, ಗಲಿಲಾಯ ಸಮುದ್ರದಿಂದ ಭೂಮಧ್ಯ ಸಮುದ್ರಕ್ಕೆ ನಡೆಸಿತು. ಯೆಶಾಯನ ದಿನದಲ್ಲಿ, ಈ ಕ್ಷೇತ್ರವನ್ನು “ಅನ್ಯಜನಗಳಿರುವ ಗಲಿಲಾಯ ಸೀಮೆ” ಎಂಬುದಾಗಿ ಕರೆಯಲಾಯಿತು. ಏಕೆಂದರೆ ಗಲಿಲಾಯದ ಅನೇಕ ಪಟ್ಟಣಗಳಲ್ಲಿ ಇಸ್ರಾಯೇಲ್ಯರಲ್ಲದವರು, ಅಂದರೆ ಅನ್ಯಜನರು ವಾಸಿಸುತ್ತಿದ್ದರು.c ಆದರೆ ಈ ದೇಶವು ‘ಅವಮಾನಕ್ಕೆ ಗುರಿಯಾದುದು’ ಹೇಗೆ? ಹೇಗೆಂದರೆ, ವಿಧರ್ಮಿ ಅಶ್ಶೂರರು ಈ ದೇಶವನ್ನು ಜಯಿಸಿ, ಅಲ್ಲಿದ್ದ ಇಸ್ರಾಯೇಲ್ಯರನ್ನು ದೇಶಭ್ರಷ್ಟರನ್ನಾಗಿಸಿ, ಆ ಇಡೀ ಪ್ರಾಂತದಲ್ಲಿ ವಿಧರ್ಮಿಗಳು ಅಂದರೆ ಅಬ್ರಹಾಮನ ವಂಶಸ್ಥರಲ್ಲದವರು ನೆಲೆಸುವಂತೆ ಮಾಡುತ್ತಾರೆ. ಹೀಗೆ, ಒಂದು ಪ್ರತ್ಯೇಕ ಜನಾಂಗವಾಗಿದ್ದ ಹತ್ತು ಗೋತ್ರಗಳ ಉತ್ತರ ರಾಜ್ಯವು, ಇತಿಹಾಸದ ಪುಟಗಳಿಂದ ಕಣ್ಮರೆಯಾಗುತ್ತದೆ.—2 ಅರಸುಗಳು 17:5, 6, 18, 23, 24.
14. ಯೆಹೂದವು ‘ಅಂಧಕಾರದಲ್ಲಿ’ ಮುಳುಗಿ ಹೋದರೂ, ಅದು ಹತ್ತು ಗೋತ್ರಗಳ ರಾಜ್ಯದ ಅಂಧಕಾರಕ್ಕಿಂತ ಕಡಿಮೆಯಾಗಿರುವುದು ಹೇಗೆ?
14 ಯೆಹೂದ ರಾಜ್ಯವು ಸಹ ಅಶ್ಶೂರರ ಒತ್ತಡವನ್ನು ಅನುಭವಿಸುತ್ತಿದೆ. ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳಿಂದ ಪ್ರತಿನಿಧಿಸಲ್ಪಟ್ಟ ಆ ಹತ್ತು ಗೋತ್ರಗಳ ರಾಜ್ಯದಂತೆ ಇದು ಕೂಡ ಶಾಶ್ವತವಾಗಿ ‘ಅಂಧಕಾರದಲ್ಲಿ’ ಮುಳುಗಿ ಹೋಗುವುದೊ? ಇಲ್ಲ. “ಅನಂತರದಲ್ಲಿ” ಯೆಹೋವನು ಯೆಹೂದ ರಾಜ್ಯದ ದಕ್ಷಿಣ ಕ್ಷೇತ್ರಕ್ಕೆ ಮತ್ತು ಉತ್ತರ ರಾಜ್ಯದಿಂದ ಆಳಲ್ಪಟ್ಟ ಕ್ಷೇತ್ರಕ್ಕೂ ಆಶೀರ್ವಾದಗಳನ್ನು ನೀಡುವನು. ಆದರೆ ಹೇಗೆ?
15, 16. (ಎ) “ಜೆಬುಲೋನ್ ಸೀಮೆ ಮತ್ತು ನೆಫ್ತಾಲಿಮ್ ಸೀಮೆ”ಗಳ ಸನ್ನಿವೇಶವು ಬದಲಾಗುವ ‘ಅನಂತರದ’ ಸಮಯವು ಯಾವುದು? (ಬಿ) ಅವಮಾನಕ್ಕೆ ಗುರಿಯಾದ ದೇಶವು ಗೌರವಿಸಲ್ಪಡುವುದು ಹೇಗೆ?
15 ಅಪೊಸ್ತಲ ಮತ್ತಾಯನು ಈ ಪ್ರಶ್ನೆಗೆ ಉತ್ತರ ನೀಡುತ್ತಾನೆ. ಯೇಸುವಿನ ಭೂಶುಶ್ರೂಷೆಯ ಕುರಿತಾದ ಅವನ ಪ್ರೇರಿತ ದಾಖಲೆಯಲ್ಲಿ ನಾವು ಅದನ್ನು ಕಂಡುಕೊಳ್ಳಬಹುದು. ಆ ಸೇವೆಯ ಆರಂಭದ ದಿನಗಳನ್ನು ವರ್ಣಿಸುತ್ತಾ ಮತ್ತಾಯನು ಹೇಳುವುದು: “ಯೇಸು . . . ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್ ನೆಫ್ತಲೀಮ್ ಎಂಬ ನಾಡುಗಳಿಗೆ ಬಂದು ಸಮುದ್ರದ ಹತ್ತರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ಮನೆಮಾಡಿಕೊಂಡು ಇದ್ದನು. ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿಸಿರುವ ಮಾತು ನೆರವೇರಿತು; ಆ ಮಾತು ಏನೆಂದರೆ—ಜೆಬುಲೋನ್ ಸೀಮೆ ಮತ್ತು ನೆಫ್ತಲೀಮ್ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ, ಕತ್ತಲಲ್ಲಿ ವಾಸಿಸಿದ ಈ ಸೀಮೆಗಳ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಸೂರ್ಯೋದಯವಾಯಿತು.”—ಮತ್ತಾಯ 4:12-16.
16 ಹೌದು, ಯೆಶಾಯನು ಮುಂತಿಳಿಸಿದ “ಅನಂತರದ” ಸಮಯವು, ಕ್ರಿಸ್ತನ ಭೂಶುಶ್ರೂಷೆಯ ಸಮಯವಾಗಿದೆ. ಯೇಸು ತನ್ನ ಭೂಜೀವಿತದ ಹೆಚ್ಚಿನ ಭಾಗವನ್ನು ಗಲಿಲಾಯದಲ್ಲೇ ಕಳೆದನು. ಅವನು ಗಲಿಲಾಯ ಪ್ರಾಂತದಲ್ಲೇ ತನ್ನ ಶುಶ್ರೂಷೆಯನ್ನು ಆರಂಭಿಸಿ, “ಪರಲೋಕರಾಜ್ಯವು ಸಮೀಪಿಸಿತು” ಎಂದು ಸಾರಿಹೇಳಿದನು. (ಮತ್ತಾಯ 4:17) ಗಲಿಲಾಯದಲ್ಲೇ ಅವನು ತನ್ನ ಪ್ರಸಿದ್ಧ ಪರ್ವತ ಪ್ರಸಂಗವನ್ನು ನೀಡಿದನು, ತನ್ನ ಅಪೊಸ್ತಲರನ್ನು ಆರಿಸಿದನು, ಪ್ರಥಮ ಅದ್ಭುತಕಾರ್ಯವನ್ನು ನಡೆಸಿದನು ಮತ್ತು ಪುನರುತ್ಥಾನದ ನಂತರ ಸುಮಾರು 500 ಹಿಂಬಾಲಕರಿಗೆ ಕಾಣಿಸಿಕೊಂಡನು. (ಮತ್ತಾಯ 5:1–7:27; 28:16-20; ಮಾರ್ಕ 3:13, 14; ಯೋಹಾನ 2:8-11; 1 ಕೊರಿಂಥ 15:6) ಈ ರೀತಿಯಲ್ಲಿ ಯೇಸು “ಜೆಬುಲೋನ್ ಸೀಮೆ ಮತ್ತು ನೆಫ್ತಲೀಮ್ ಸೀಮೆ”ಯನ್ನು ಗೌರವಿಸಿ, ಯೆಶಾಯನ ಪ್ರವಾದನೆಯನ್ನು ನೆರವೇರಿಸಿದನು. ಆದರೆ ಯೇಸು, ತನ್ನ ಶುಶ್ರೂಷೆಯನ್ನು ಗಲಿಲಾಯ ಪ್ರಾಂತಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಆ ದೇಶದಾದ್ಯಂತ ಸುವಾರ್ತೆಯನ್ನು ಸಾರುವ ಮೂಲಕ, ಯೇಸು ಯೆಹೂದ ಕ್ಷೇತ್ರಕ್ಕೆ ಮಾತ್ರವಲ್ಲ ಇಡೀ ಇಸ್ರಾಯೇಲ್ ಜನಾಂಗಕ್ಕೆ ‘ಗೌರವವನ್ನು ಉಂಟುಮಾಡಿದನು.’
“ದೊಡ್ಡ ಬೆಳಕು”
17. ಒಂದು “ದೊಡ್ಡ ಬೆಳಕು” ಗಲಿಲಾಯದಲ್ಲಿ ಪ್ರಕಾಶಿಸುವುದು ಹೇಗೆ?
17 ಹಾಗಾದರೆ, ಮತ್ತಾಯನು ತಿಳಿಸಿದಂತಹ ಗಲಿಲಾಯದಲ್ಲಿ ಕಾಣಿಸಿಕೊಂಡ ‘ದೊಡ್ಡ ಬೆಳಕಿನ’ ಕುರಿತು ಏನು ಹೇಳಸಾಧ್ಯವಿದೆ? ಇದು ಕೂಡ ಯೆಶಾಯನ ಪ್ರವಾದನೆಯಿಂದ ತೆಗೆಯಲ್ಪಟ್ಟ ಉದ್ಧರಣೆಯೇ ಆಗಿದೆ. ಯೆಶಾಯನು ಬರೆದುದು: “ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು.” (ಯೆಶಾಯ 9:2) ಸಾ.ಶ. ಒಂದನೆಯ ಶತಮಾನದೊಳಗಾಗಿ, ಸತ್ಯದ ಬೆಳಕು ವಿಧರ್ಮಿಯರ ಸುಳ್ಳು ಬೋಧನೆಗಳಿಂದ ಮರೆಮಾಡಲ್ಪಟ್ಟಿತ್ತು. ಈ ಸಮಸ್ಯೆಗೆ ಯೆಹೂದಿ ಧಾರ್ಮಿಕ ಮುಖಂಡರು ಹೆಚ್ಚನ್ನು ಕೂಡಿಸಿದರು. ಅವರು ತಮ್ಮ ಧಾರ್ಮಿಕ ಸಂಪ್ರದಾಯಗಳಿಗೆ ಅಂಟಿಕೊಳ್ಳುತ್ತಾ, “ದೇವರ ವಾಕ್ಯವನ್ನು ನಿರರ್ಥಕ”ಗೊಳಿಸಿದರು. (ಮತ್ತಾಯ 15:6) ದೀನರು ದಬ್ಬಾಳಿಕೆಗೆ ಗುರಿಯಾದರು ಮಾತ್ರವಲ್ಲ, ‘ದಾರಿತೋರಿಸುವ ಕುರುಡರನ್ನು’ ಹಿಂಬಾಲಿಸುತ್ತಾ ಗೊಂದಲಕ್ಕೂ ತುತ್ತಾದರು. (ಮತ್ತಾಯ 23:2-4, 16) ಆದರೆ ಮೆಸ್ಸೀಯನಾದ ಯೇಸು ಭೂಮಿಗೆ ಬಂದಾಗ, ಅನೇಕ ದೀನರ ಕಣ್ಣುಗಳು ಅದ್ಭುತಕರವಾದ ವಿಧದಲ್ಲಿ ತೆರೆಯಲ್ಪಟ್ಟವು. (ಯೋಹಾನ 1:9, 12) ಯೇಸು ಭೂಮಿಯಲ್ಲಿದ್ದಾಗ ಮಾಡಿದ ಕೆಲಸವನ್ನು ಮತ್ತು ಅವನ ಯಜ್ಞದಿಂದ ಉಂಟಾದ ಆಶೀರ್ವಾದಗಳನ್ನು, ಯೆಶಾಯನ ಪ್ರವಾದನೆಯು ಬಹಳ ಸೂಕ್ತವಾಗಿಯೇ “ದೊಡ್ಡ ಬೆಳಕು” ಎಂಬುದಾಗಿ ನಿರೂಪಿಸುತ್ತದೆ.—ಯೋಹಾನ 8:12.
18, 19. ಬೆಳಕಿಗೆ ಪ್ರತಿಕ್ರಿಯಿಸುವವರು ಯಾವ ಕಾರಣಕ್ಕಾಗಿ ತುಂಬ ಹರ್ಷಿಸುತ್ತಾರೆ?
18 ಯಾರು ಈ ಬೆಳಕಿಗೆ ಪ್ರತಿಕ್ರಿಯಿಸಿದರೊ ಅಂತಹವರಿಗೆ ಹರ್ಷಿಸಲು ಸಕಾರಣವಿತ್ತು. ಯೆಶಾಯನು ಮುಂದುವರಿಸಿದ್ದು: “ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ, ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ; ಸುಗ್ಗಿಕಾಲದಲ್ಲಿ ಜನರು ಹರ್ಷಿಸುವ ಹಾಗೂ ಕೊಳ್ಳೆಯನ್ನು ಹಂಚಿಕೊಳ್ಳುವವರು ಹೆಚ್ಚಳಪಡುವ ಹಾಗೂ ನಿನ್ನ ಮುಂದೆ ಆನಂದಿಸುತ್ತಾರೆ.” (ಯೆಶಾಯ 9:3) ಯೇಸು ಮತ್ತು ಅವನ ಹಿಂಬಾಲಕರ ಸಾರುವ ಚಟುವಟಿಕೆಯಿಂದಾಗಿ, ಅನೇಕ ಪ್ರಾಮಾಣಿಕ ಹೃದಯದವರು ಯೆಹೋವನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಬಯಕೆಯನ್ನು ವ್ಯಕ್ತಪಡಿಸಿದರು. (ಯೋಹಾನ 4:24) ಹೀಗೆ, ನಾಲ್ಕು ವರ್ಷಗಳೊಳಗೆ ಬಹು ಸಂಖ್ಯೆಯಲ್ಲಿ ಜನರು ಕ್ರೈಸ್ತತ್ವವನ್ನು ಸ್ವೀಕರಿಸಿದರು. ಸಾ.ಶ. 33ರ ಪಂಚಾಶತ್ತಮದಂದು ಮೂರು ಸಾವಿರ ಜನರು ದೀಕ್ಷಾಸ್ನಾನ ಪಡೆದುಕೊಂಡರು. ಇದಾದ ಸ್ವಲ್ಪದರಲ್ಲೇ, “ಗಂಡಸರ ಸಂಖ್ಯೆ ಸುಮಾರು ಐದು ಸಾವಿರ ತನಕ ಬೆಳೆಯಿತು.” (ಅ. ಕೃತ್ಯಗಳು 2:41; 4:4) ಯೇಸುವಿನ ಶಿಷ್ಯರು ಆ ಬೆಳಕನ್ನು ಹುರುಪಿನಿಂದ ಪ್ರತಿಬಿಂಬಿಸಿದಾಗ, ಅವರ “ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು.”—ಅ. ಕೃತ್ಯಗಳು 6:7.
19 ಈ ಅಭಿವೃದ್ಧಿಯನ್ನು ಕಂಡು ಯೇಸುವಿನ ಹಿಂಬಾಲಕರು ಬಹಳವಾಗಿ ಹರ್ಷಿಸಿದರು. ಅವರ ಹರ್ಷವು, ಸಮೃದ್ಧವಾದ ಕೊಯ್ಲಿನಿಂದಾಗಿ ಹರ್ಷಿಸುವ ಇಲ್ಲವೆ ಮಹಾ ವಿಜಯದ ನಂತರ ಕೊಳ್ಳೆಯನ್ನು ಪಾಲುಮಾಡಿಕೊಂಡು ಹರ್ಷಿಸುವ ಜನರಿಗೆ ಸಮಾನವಾಗಿತ್ತು. (ಅ. ಕೃತ್ಯಗಳು 2:46, 47) ಸಕಾಲದಲ್ಲಿ, ಎಲ್ಲ ಜನಾಂಗಗಳ ಮೇಲೆ ಈ ಬೆಳಕು ಪ್ರಕಾಶಿಸುವಂತೆ ಯೆಹೋವನು ಮಾಡಿದನು. (ಅ. ಕೃತ್ಯಗಳು 14:27) ಆದಕಾರಣ, ಯೆಹೋವನನ್ನು ಸಮೀಪಿಸುವ ದಾರಿ ತಮಗಾಗಿ ತೆರೆದಿರುವುದನ್ನು ಕಂಡು, ಎಲ್ಲ ಜನಾಂಗದವರು ಹರ್ಷಿಸಿದರು.—ಅ. ಕೃತ್ಯಗಳು 13:48.
“ಮಿದ್ಯಾನಿನ ನಾಶದಿನದಲ್ಲಿ”
20. (ಎ) ಯಾವ ವಿಧಗಳಲ್ಲಿ ಮಿದ್ಯಾನ್ಯರು ಇಸ್ರಾಯೇಲ್ಯರ ವೈರಿಗಳಾಗಿದ್ದರು, ಮತ್ತು ಅವರ ಬೆದರಿಕೆಗೆ ಯೆಹೋವನು ಯಾವ ರೀತಿಯಲ್ಲಿ ಅಂತ್ಯವನ್ನು ತಂದನು? (ಬಿ) ದೇವಜನರ ವೈರಿಗಳು ಒಡ್ಡುವಂತಹ ಬೆದರಿಕೆಗೆ, ಭಾವೀ “ಮಿದ್ಯಾನಿನ ನಾಶದಿನದಲ್ಲಿ” ಯೇಸು ಹೇಗೆ ಅಂತ್ಯವನ್ನು ತರುವನು?
20 ಮೆಸ್ಸೀಯನ ಚಟುವಟಿಕೆಯಿಂದಾಗುವ ಪರಿಣಾಮಗಳು ಶಾಶ್ವತವಾಗಿ ಉಳಿಯುವವು. ಯೆಶಾಯನ ಮುಂದಿನ ಮಾತುಗಳು ಇದನ್ನೇ ತಿಳಿಯಪಡಿಸುತ್ತವೆ: “ಅವರಿಗೆ ಭಾರವಾದ ನೊಗವನ್ನೂ ಬೆನ್ನನ್ನು ಹೊಡೆದ ಕೋಲನ್ನೂ ಬಿಟ್ಟಿಹಿಡಿದವನ ದೊಣ್ಣೆಯನ್ನೂ ಮಿದ್ಯಾನಿನ ನಾಶದಿನದಲ್ಲಿ ಮುರಿದು ಬಿಟ್ಟಂತೆ ಮುರಿದುಬಿಟ್ಟಿದ್ದೀ.” (ಯೆಶಾಯ 9:4) ಅನೇಕ ಶತಮಾನಗಳ ಹಿಂದೆ, ಇಸ್ರಾಯೇಲ್ಯರನ್ನು ಪಾಪವೆಂಬ ಉರುಲಿನಲ್ಲಿ ಸಿಲುಕಿಸಲು ಮಿದ್ಯಾನ್ಯರು ಮತ್ತು ಮೋವಾಬ್ಯರು ಒಟ್ಟಿಗೆ ಸೇರಿ ಸಂಚುಹೂಡಿದರು. (ಅರಣ್ಯಕಾಂಡ 25:1-9; 14-18; 31:15, 16) ತದನಂತರ, ಏಳು ವರ್ಷಗಳ ಕಾಲ ಈ ಮಿದ್ಯಾನ್ಯರು ಇಸ್ರಾಯೇಲ್ಯರ ಹಳ್ಳಿಗಳ ಮೇಲೆ ಮತ್ತು ಹೊಲಗದ್ದೆಗಳ ಮೇಲೆ ಅನಿರೀಕ್ಷಿತ ದಾಳಿಯನ್ನು ಮಾಡಿ, ಕೊಳ್ಳೆ ಹೊಡೆದರು. (ನ್ಯಾಯಸ್ಥಾಪಕರು 6:1-6) ಆದರೆ ಯೆಹೋವನು, ತನ್ನ ಸೇವಕನಾದ ಗಿದ್ಯೋನನ ಮೂಲಕ ಮಿದ್ಯಾನ್ಯ ಸೇನೆಗಳನ್ನು ಸದೆಬಡಿದನು. ಆ “ಮಿದ್ಯಾನಿನ ನಾಶದಿನದ” ನಂತರ, ಯೆಹೋವನ ಸೇವಕರು ಪುನಃ ಎಂದಾದರೂ ಮಿದ್ಯಾನ್ಯರ ಕೈಗಳಲ್ಲಿ ಕಷ್ಟಾನುಭವಿಸಿದ ದಾಖಲೆಯೇ ಇಲ್ಲ. (ನ್ಯಾಯಸ್ಥಾಪಕರು 6:7-16; 8:28) ನಿಕಟ ಭವಿಷ್ಯತ್ತಿನಲ್ಲಿ, ಮಹಾ ಗಿದ್ಯೋನನಾದ ಯೇಸು ಕ್ರಿಸ್ತನು, ಯೆಹೋವನ ಜನರ ಈಗಿನ ವೈರಿಗಳಿಗೆ ಮಾರಕ ಹೊಡೆತವನ್ನು ನೀಡಲಿದ್ದಾನೆ. (ಪ್ರಕಟನೆ 17:14; 19:11-21) ತರುವಾಯ, “ಮಿದ್ಯಾನಿನ ನಾಶದಿನದಲ್ಲಿ” ನಡೆದಂತೆ, ಮಾನುಷ ಪರಾಕ್ರಮದಿಂದಲ್ಲ ಬದಲಿಗೆ ಯೆಹೋವನ ಶಕ್ತಿಯಿಂದ ಸಂಪೂರ್ಣವೂ ಶಾಶ್ವತವೂ ಆದ ಜಯವು ದೊರೆಯುವುದು. (ನ್ಯಾಯಸ್ಥಾಪಕರು 7:2-22) ಆಗ, ದೇವರ ಜನರು ದಬ್ಬಾಳಿಕೆಯ ನೊಗದ ಕೆಳಗೆ ಇನ್ನೆಂದಿಗೂ ಕಷ್ಟಾನುಭವಿಸುವುದಿಲ್ಲ!
21. ಯುದ್ಧಗಳ ಭವಿಷ್ಯತ್ತಿನ ಕುರಿತು ಯೆಶಾಯನ ಪ್ರವಾದನೆಯು ಏನನ್ನು ತಿಳಿಯಪಡಿಸುತ್ತದೆ?
21 ಯೆಹೋವನು ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಾನೆ ನಿಜ. ಆದರೆ, ಆತನು ಯುದ್ಧವನ್ನು ಮಹತ್ವಕ್ಕೇರಿಸುತ್ತಾನೆಂಬುದು ಇದರರ್ಥವಲ್ಲ. ಪುನರುತ್ಥಿತ ಯೇಸುವೇ ಸಮಾಧಾನದ ಪ್ರಭುವಾಗಿದ್ದು, ತನ್ನ ವೈರಿಗಳನ್ನು ನಿರ್ಮೂಲಮಾಡುವ ಮೂಲಕ ನಿತ್ಯ ಸಮಾಧಾನವನ್ನು ತರುತ್ತಾನೆ. ಯುದ್ಧದ ಸಾಮಾಗ್ರಿಗಳೆಲ್ಲ ಬೆಂಕಿಯಿಂದ ಸಂಪೂರ್ಣವಾಗಿ ನಾಶವಾಗುವುದರ ಕುರಿತು ಯೆಶಾಯನು ಈಗ ಮಾತಾಡುತ್ತಾನೆ: “[ಯುದ್ಧದ] ಗದ್ದಲದಲ್ಲಿ ತುಳಿದಾಡಿದವರೆಲ್ಲರ ಮೆಟ್ಟುಗಳೂ ರಕ್ತದಲ್ಲಿ ಹೊರಳಾಡಿಸಿದ ಉಡುಪುಗಳೂ ಅಗ್ನಿಗೆ ಆಹಾರವಾಗಿ ಸುಟ್ಟುಹೋಗುವವು.” (ಯೆಶಾಯ 9:5) ಸೈನಿಕರ ನಡಿಗೆಯ ತುಳಿದಾಟದಿಂದ ಉಂಟಾಗುವ ಕಂಪನಗಳು ಇನ್ನು ಮುಂದೆ ಕೇಳಿಸಲಾರವು. ಮತ್ತು ಯೋಧರ ರಕ್ತಮಯ ಸಮವಸ್ತ್ರಗಳು ಇನ್ನು ಮುಂದೆ ಕಾಣಸಿಗಲಾರವು. ಏಕೆಂದರೆ, ಇನ್ನೆಂದಿಗೂ ಯುದ್ಧವು ಇರಲಾರದು!—ಕೀರ್ತನೆ 46:9.
“ಅದ್ಭುತಸ್ವರೂಪನಾದ ಸಲಹೆಗಾರನು”
22. ಯೆಶಾಯನ ಪುಸ್ತಕದಲ್ಲಿ ಯೇಸುವಿಗೆ ಯಾವ ಬಹುಮುಖ ಪ್ರವಾದನ ಹೆಸರು ಕೊಡಲ್ಪಟ್ಟಿದೆ?
22 ಮೆಸ್ಸೀಯನಾಗಿ ಹುಟ್ಟಬೇಕಾದವನು ಅದ್ಭುತಕರವಾದ ರೀತಿಯಲ್ಲಿ ಜನಿಸಿದಾಗ, ಯೇಸು ಎಂಬ ಹೆಸರನ್ನು ಪಡೆದುಕೊಂಡನು. ಆ ಹೆಸರಿನ ಅರ್ಥ, “ಯೆಹೋವನು ರಕ್ಷಣೆಯಾಗಿದ್ದಾನೆ” ಎಂದಾಗಿದೆ. ಆದರೆ ಅವನಿಗೆ ಬೇರೆ ಹೆಸರುಗಳೂ ಇವೆ. ಈ ಪ್ರವಾದನ ಹೆಸರುಗಳು, ಅವನ ಮುಖ್ಯ ಪಾತ್ರ ಮತ್ತು ಉಚ್ಛ ಸ್ಥಾನಮಾನವನ್ನು ಸೂಚಿಸಿದವು. ಇಂತಹ ಒಂದು ಹೆಸರು ಇಮ್ಮಾನುವೇಲ್ ಆಗಿದೆ. ಇದರ ಅರ್ಥ, “ದೇವರು ನಮ್ಮ ಕೂಡ ಇದ್ದಾನೆ” ಎಂದಾಗಿದೆ. (ಯೆಶಾಯ 7:14, ಪಾದಟಿಪ್ಪಣಿ) ಅವನಿಗಿರುವ ಮತ್ತೊಂದು ಪ್ರವಾದನ ಹೆಸರಿನ ಬಗ್ಗೆ ಯೆಶಾಯನು ತಿಳಿಸುವುದು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, [“ಅದ್ಭುತಸ್ವರೂಪನಾದ ಸಲಹೆಗಾರನು,” NW] ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು.” (ಯೆಶಾಯ 9:6) ಈ ಬಹುಮುಖ ಪ್ರವಾದನ ಹೆಸರಿನ ಪೂರ್ಣ ಅರ್ಥವನ್ನು ಈಗ ಪರಿಗಣಿಸಿರಿ.
23, 24. (ಎ) ಯಾವ ಅರ್ಥದಲ್ಲಿ ಯೇಸು ಒಬ್ಬ “ಅದ್ಭುತಸ್ವರೂಪನಾದ ಸಲಹೆಗಾರ”ನಾಗಿದ್ದಾನೆ? (ಬಿ) ಯಾವ ರೀತಿಯಲ್ಲಿ ಇಂದಿನ ಕ್ರೈಸ್ತ ಸಲಹೆಗಾರರು ಯೇಸುವಿನ ಮಾದರಿಯನ್ನು ಅನುಕರಿಸಬಲ್ಲರು?
23 ಒಬ್ಬ ಸಲಹೆಗಾರನು, ಸಲಹೆಯನ್ನು ಇಲ್ಲವೆ ಬುದ್ಧಿವಾದವನ್ನು ನೀಡುವಾತನಾಗಿದ್ದಾನೆ. ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಅದ್ಭುತಕರವಾದ ಸಲಹೆಯನ್ನು ನೀಡಿದನು. “ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು” ಎಂಬುದಾಗಿ ನಾವು ಬೈಬಲಿನಲ್ಲಿ ಓದುತ್ತೇವೆ. (ಮತ್ತಾಯ 7:28) ಅವನು ಮಾನವ ಸ್ವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಶಕ್ತನಾಗಿರುವುದರಿಂದಲೇ ಅವನ ಸಲಹೆಯು ವಿವೇಕಪ್ರದವೂ ಸಹಾನುಭೂತಿಯುಳ್ಳದ್ದೂ ಆಗಿರುತ್ತದೆ. ಅವನ ಸಲಹೆಯು ಕೇವಲ ದಂಡನೆ ಇಲ್ಲವೆ ಶಿಕ್ಷೆಗಳಿಗೆ ಸೀಮಿತವಾಗಿರುವುದಿಲ್ಲ. ಹೆಚ್ಚಿನ ವೇಳೆ ಅದು ಉಪದೇಶ ಮತ್ತು ಪ್ರೀತಿಪರ ಬುದ್ಧಿವಾದದ ರೂಪದಲ್ಲಿರುತ್ತದೆ. ಯೇಸುವಿನ ಸಲಹೆ ಅದ್ಭುತವಾಗಿದೆ, ಏಕೆಂದರೆ ಅದು ಯಾವಾಗಲೂ ವಿವೇಕಪ್ರದವೂ ಪರಿಪೂರ್ಣವೂ ದೋಷಾತೀತವೂ ಆಗಿದೆ. ಇಂತಹ ಸಲಹೆಗನುಸಾರ ನಡೆದುಕೊಂಡಾಗ, ಅದು ನಮ್ಮನ್ನು ನಿತ್ಯ ಜೀವಕ್ಕೆ ನಡೆಸುತ್ತದೆ.—ಯೋಹಾನ 6:68.
24 ಯೇಸುವಿನ ಸಲಹೆಯು ಕೇವಲ ಅವನ ಸ್ವಂತ ಬುದ್ಧಿವಂತಿಕೆಯಿಂದ ಕೂಡಿದ ಸಲಹೆಯಾಗಿರಲಿಲ್ಲ. ಬದಲಿಗೆ, ಅವನೇ ಹೇಳುವುದು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು.” (ಯೋಹಾನ 7:16) ಸೊಲೊಮೋನನ ವಿಷಯದಲ್ಲಿ ಹೇಗೋ ಹಾಗೆಯೇ ಯೇಸುವಿನ ವಿವೇಕದ ಮೂಲನು ಯೆಹೋವನಾಗಿದ್ದಾನೆ. (1 ಅರಸುಗಳು 3:7-14; ಮತ್ತಾಯ 12:42) ಅಂತೆಯೇ, ಕ್ರೈಸ್ತ ಸಭೆಯಲ್ಲಿರುವ ಬೋಧಕರು ಮತ್ತು ಸಲಹೆಗಾರರು ತಮ್ಮ ಉಪದೇಶವನ್ನು ದೇವರ ವಾಕ್ಯದ ಮೇಲೆ ಆಧಾರಿಸುವಂತೆ ಯೇಸುವಿನ ಮಾದರಿಯು ಅವರನ್ನು ಪ್ರಚೋದಿಸಬೇಕು.—ಜ್ಞಾನೋಕ್ತಿ 21:30.
“ಪರಾಕ್ರಮಿಯಾದ ದೇವರು” ಮತ್ತು “ನಿತ್ಯನಾದ ತಂದೆ”
25. “ಪರಾಕ್ರಮಿಯಾದ ದೇವರು” ಎಂಬ ಹೆಸರು ಸ್ವರ್ಗೀಯ ಯೇಸುವಿನ ಬಗ್ಗೆ ನಮಗೇನು ತಿಳಿಸುತ್ತದೆ?
25 ಯೇಸು “ಪರಾಕ್ರಮಿಯಾದ ದೇವರು” ಮತ್ತು “ನಿತ್ಯನಾದ ತಂದೆ” ಆಗಿದ್ದಾನೆ. ಇದು, “ನಮ್ಮ ತಂದೆಯಾದ ದೇವರ” ಅಂದರೆ, ಯೆಹೋವನ ಅಧಿಕಾರ ಮತ್ತು ಸ್ಥಾನವನ್ನು ಅವನು ಅತಿಕ್ರಮಿಸುವ ಅರ್ಥವನ್ನು ಹೊಂದಿರುವುದಿಲ್ಲ. (2 ಕೊರಿಂಥ 1:2) “ಆತನು [ಯೇಸು] . . . ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸ”ಲಿಲ್ಲ. (ಫಿಲಿಪ್ಪಿ 2:6) ಅವನು ಸರ್ವಶಕ್ತ ದೇವರೆಂದು ಕರೆಯಲ್ಪಡದೆ, ಪರಾಕ್ರಮಿ ದೇವರೆಂದು ಕರೆಯಲ್ಪಟ್ಟಿದ್ದಾನೆ. ತಾನೇ ಸರ್ವಶಕ್ತ ದೇವರೆಂದು ಯೇಸು ನೆನಸಲೇ ಇಲ್ಲ. ಏಕೆಂದರೆ ತಂದೆಯ ಕುರಿತು ಮಾತಾಡಿದಾಗ, ಅವನು ‘ಒಬ್ಬನೇ ಸತ್ಯದೇವರು’ ಅಂದರೆ, ಆರಾಧಿಸಲ್ಪಡಬೇಕಾದ ಏಕೈಕ ದೇವರೆಂದು ಸೂಚಿಸಿ ಮಾತಾಡಿದನು. (ಯೋಹಾನ 17:3; ಪ್ರಕಟನೆ 4:11) ಶಾಸ್ತ್ರವಚನಗಳಲ್ಲಿ, “ದೇವರು” ಎಂಬ ಪದಕ್ಕೆ “ಪರಾಕ್ರಮಿ” ಇಲ್ಲವೆ “ಬಲಿಷ್ಠನು” ಎಂಬ ಅರ್ಥವಿದೆ. (ವಿಮೋಚನಕಾಂಡ 12:12; 2 ಕೊರಿಂಥ 4:4) ಯೇಸು ಭೂಮಿಗೆ ಬರುವ ಮೊದಲು, “ದೇವಸ್ವರೂಪ”ದಲ್ಲಿ ಜೀವಿಸುತ್ತಿದ್ದ ‘ದೇವರಾಗಿದ್ದನು.’ ಪುನರುತ್ಥಾನದ ನಂತರ, ಅವನು ಸ್ವರ್ಗದಲ್ಲಿ ಇನ್ನೂ ಉನ್ನತವಾದ ಸ್ಥಾನಕ್ಕೆ ಏರಿಸಲ್ಪಟ್ಟನು. (ಯೋಹಾನ 1:1; ಫಿಲಿಪ್ಪಿ 2:6-11) ಅಲ್ಲದೆ, “ದೇವರು” ಎಂಬ ಈ ಬಿರುದಿಗೆ ಇನ್ನೂ ಹೆಚ್ಚಿನ ಅರ್ಥವಿದೆ. ಇಸ್ರಾಯೇಲಿನ ನ್ಯಾಯಾಧೀಶರು “ದೇವರುಗಳು” ಎಂದು ಕರೆಯಲ್ಪಟ್ಟರು. ಒಮ್ಮೆ ಸ್ವತಃ ಯೇಸುವೇ ಅವರನ್ನು ಹೀಗೆ ಕರೆದನು. (ಕೀರ್ತನೆ 82:6; ಯೋಹಾನ 10:35) ಯೇಸು ತಾನೇ ಯೆಹೋವನ ನೇಮಿತ ನ್ಯಾಯಾಧೀಶನಾಗಿರುತ್ತಾನೆ. “ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವದಕ್ಕೆ” ಅವನು ನೇಮಿಸಲ್ಪಟ್ಟಿದ್ದಾನೆ. (2 ತಿಮೊಥೆಯ 4:1; ಯೋಹಾನ 5:30) ಸ್ಪಷ್ಟವಾಗಿ, ಪರಾಕ್ರಮಿಯಾದ ದೇವರೆಂಬ ಹೆಸರು ಅವನಿಗೆ ಸರಿಯಾಗಿಯೇ ಒಪ್ಪುತ್ತದೆ.
26. ಯೇಸುವನ್ನು “ನಿತ್ಯನಾದ ತಂದೆ” ಎಂದು ಏಕೆ ಕರೆಯಸಾಧ್ಯವಿದೆ?
26 “ನಿತ್ಯನಾದ ತಂದೆ” ಎಂಬ ಬಿರುದು, ಮೆಸ್ಸೀಯ ರಾಜನ ಶಕ್ತಿ ಮತ್ತು ಅಧಿಕಾರವನ್ನು ಸೂಚಿಸುತ್ತದೆ. ಈ ಅಧಿಕಾರದಿಂದಲೇ ಅವನು ಮಾನವರಿಗೆ ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು ನೀಡುತ್ತಾನೆ. (ಯೋಹಾನ 11:25, 26) ನಮ್ಮ ಪ್ರಥಮ ಹೆತ್ತವನಾದ ಆದಾಮನು, ಮರಣವೆಂಬ ಆಸ್ತಿಯನ್ನು ಬಿಟ್ಟುಹೋದನು. ಆದರೆ ಕಡೇ ಆದಾಮನಾದ ಯೇಸು, “ಬದುಕಿಸುವ ಆತ್ಮ”ನಾದನು. (1 ಕೊರಿಂಥ 15:22, 45; ರೋಮಾಪುರ 5:12, 18) ನಿತ್ಯ ತಂದೆಯಾದ ಯೇಸು ಸದಾಕಾಲ ಜೀವಿಸಲಿರುವಂತೆಯೇ, ವಿಧೇಯ ಮಾನವಕುಲವು ಅವನ ತಂದೆತನದ ಪ್ರಯೋಜನಗಳನ್ನು ಸದಾಕಾಲಕ್ಕೂ ಅನುಭವಿಸುವುದು.—ರೋಮಾಪುರ 6:9.
“ಸಮಾಧಾನದ ಪ್ರಭು”
27, 28. “ಸಮಾಧಾನದ ಪ್ರಭು”ವಿನ ಪ್ರಜೆಗಳು ಈಗ ಅನುಭವಿಸುತ್ತಿರುವ ಮತ್ತು ಮುಂದೆ ಅನುಭವಿಸಲಿರುವ ಅದ್ಭುತಕರ ಪ್ರಯೋಜನಗಳು ಯಾವುವು?
27 ನಿತ್ಯ ಜೀವದ ಪ್ರತೀಕ್ಷೆಯ ಜೊತೆಗೆ, ದೇವರೊಂದಿಗೆ ಮತ್ತು ಜೊತೆಮಾನವರೊಂದಿಗೆ ಸಮಾಧಾನದಿಂದಿರುವ ಅಗತ್ಯ ಮನುಷ್ಯನಿಗಿದೆ. ನಮ್ಮ ಸಮಯದಲ್ಲೂ ಯಾರು ತಮ್ಮನ್ನು “ಸಮಾಧಾನದ ಪ್ರಭು”ವಿನ ಆಳ್ವಿಕೆಗೆ ಅಧೀನಪಡಿಸಿಕೊಂಡಿದ್ದಾರೊ, ಅವರು “ತಮ್ಮ . . . ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ” ಮಾಡಿದ್ದಾರೆ. (ಯೆಶಾಯ 2:2-4) ಇವರು ರಾಜಕೀಯ, ಪ್ರಾಂತೀಯ, ಕುಲಸಂಬಂಧಿತ ಇಲ್ಲವೆ ಹಣಕಾಸಿನ ಭಿನ್ನತೆಗಳ ಕಾರಣ ಒಬ್ಬರನ್ನೊಬ್ಬರು ದ್ವೇಷಿಸುವುದಿಲ್ಲ. ಬದಲಿಗೆ, ಏಕೈಕ ಸತ್ಯ ದೇವರಾದ ಯೆಹೋವನ ಆರಾಧನೆಯಲ್ಲಿ ಐಕ್ಯರಾಗಿದ್ದಾರೆ. ಮತ್ತು ಸಭೆಯ ಒಳಗೂ ಹೊರಗೂ ಇರುವಂತಹ ತಮ್ಮ ನೆರೆಯವರೊಂದಿಗೆ ಸಮಾಧಾನವನ್ನು ಕಾಪಾಡಿಕೊಳ್ಳಲು ಪ್ರಯಾಸಪಡುತ್ತಾರೆ.—ಗಲಾತ್ಯ 6:10; ಎಫೆಸ 4:2, 3; 2 ತಿಮೊಥೆಯ 2:24.
28 ದೇವರ ನೇಮಿತ ಸಮಯದಲ್ಲಿ, ಕ್ರಿಸ್ತನು ಭೂಮಿಯ ಮೇಲೆ ಸಮಾಧಾನವನ್ನು ಸ್ಥಾಪಿಸುವನು. ಈ ಸಮಾಧಾನವು, ಸ್ಥಿರವಾದದ್ದೂ, ಶಾಶ್ವತವಾದದ್ದೂ ಮತ್ತು ಭೌಗೋಲಿಕವೂ ಆಗಿರುವುದು. (ಅ. ಕೃತ್ಯಗಳು 1:7) “ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು.” (ಯೆಶಾಯ 9:7ಎ) ಯೇಸು ಸಮಾಧಾನದ ಪ್ರಭುವಾಗಿ ತನ್ನ ಅಧಿಕಾರವನ್ನು ಚಲಾಯಿಸುವನಾದರೂ, ದಬ್ಬಾಳಿಕೆಗಾರನಾಗಿರುವುದಿಲ್ಲ. ಅವನು ತನ್ನ ಪ್ರಜೆಗಳ ಇಚ್ಛಾ ಸ್ವಾತಂತ್ರ್ಯವನ್ನು ಕಸಿದುಕೊಂಡು, ಅವರನ್ನು ಒತ್ತಾಯದಿಂದ ಅಧೀನಪಡಿಸಲಾರ. ಬದಲಿಗೆ ಅವನು “ನೀತಿನ್ಯಾಯಗಳ ಮೂಲಕ” ಎಲ್ಲವನ್ನೂ ಸಾಧಿಸುವನು. ಎಂತಹ ಚೈತನ್ಯದಾಯಕ ಬದಲಾವಣೆ!
29. ನಿತ್ಯ ಸಮಾಧಾನವೆಂಬ ಆಶೀರ್ವಾದವನ್ನು ಅನುಭವಿಸಲು ನಾವು ಬಯಸುವುದಾದರೆ, ಏನು ಮಾಡಬೇಕಾಗಿದೆ?
29 ಯೇಸುವಿನ ಪ್ರವಾದನಾ ಹೆಸರಿಗಿರುವ ಅದ್ಭುತಕರ ಸೂಚಿತಾರ್ಥಗಳನ್ನು ಪರಿಗಣಿಸುವಾಗ, ಈ ಪ್ರವಾದನಾ ಭಾಗಕ್ಕೆ ಯೆಶಾಯನು ನೀಡುವ ಸಮಾಪ್ತಿಯು ನಿಜವಾಗಿಯೂ ರೋಮಾಂಚಕವಾಗಿದೆ. ಅವನು ಬರೆಯುವುದು: “ಸೇನಾಧೀಶ್ವರನಾದ ಯೆಹೋವನ ಆಗ್ರಹವು [“ಹುರುಪು,” NW] ಇದನ್ನು ನೆರವೇರಿಸುವದು.” (ಯೆಶಾಯ 9:7ಬಿ) ಹೌದು, ಯೆಹೋವನು ಹುರುಪಿನಿಂದ ಕ್ರಿಯೆಗೈಯುತ್ತಾನೆ. ಆತನು ಯಾವ ಕೆಲಸವನ್ನೂ ಅರೆಮನಸ್ಸಿನಿಂದ ಮಾಡುವುದಿಲ್ಲ. ತಾನು ಮಾಡಿರುವ ವಾಗ್ದಾನಗಳನ್ನು ಆತನು ಪೂರ್ಣವಾಗಿ ನೆರವೇರಿಸುವನೆಂಬ ಖಾತ್ರಿ ನಮಗಿರಸಾಧ್ಯವಿದೆ. ಆದುದರಿಂದ, ಯಾರು ನಿತ್ಯ ಸಮಾಧಾನವನ್ನು ಅನುಭವಿಸಲು ಬಯಸುತ್ತಾರೊ, ಅವರು ಯೆಹೋವನನ್ನು ಪೂರ್ಣಮನಸ್ಸಿನಿಂದ ಸೇವಿಸಲಿ. ಯೆಹೋವ ದೇವರು ಮತ್ತು ಸಮಾಧಾನದ ಪ್ರಭುವಾಗಿರುವ ಯೇಸುವಿನಂತೆ, ದೇವರ ಎಲ್ಲ ಸೇವಕರು “ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಲಿ” (NW).—ತೀತ 2:14.
[ಪಾದಟಿಪ್ಪಣಿಗಳು]
a ಹಿಜ್ಕೀಯನು ರಾಜನಾಗುವ ಮೊದಲು ಕೀರ್ತನೆ 119ನ್ನು ಬರೆದನೆಂದು ಅನೇಕರು ನಂಬುತ್ತಾರೆ. ಹಾಗಿರುವಲ್ಲಿ, ಯೆಶಾಯನು ಪ್ರವಾದಿಸುತ್ತಿದ್ದ ಕಾಲದಲ್ಲಿ ಅವನು ಅದನ್ನು ಬರೆದಿದ್ದಿರಬಹುದು.
b ಯೆಶಾಯ 8:20ರಲ್ಲಿರುವ ‘ಹೇಳಿಕೆ’ ಎಂಬ ಪದವು, ಪ್ರೇತವ್ಯವಹಾರದ ಕುರಿತಾದ ಹೇಳಿಕೆಗೆ ಸೂಚಿತವಾಗಿರಬಹುದು. ಈ ವಿಷಯವು ಯೆಶಾಯ 8:19ರಲ್ಲಿ ಉಲ್ಲೇಖಿಸಲ್ಪಟ್ಟಿದೆ. ಒಂದು ವೇಳೆ ಇದು ಸತ್ಯವಾಗಿದ್ದರೆ, ಯೆಹೂದದ ನಿವಾಸಿಗಳು ಪ್ರೇತ ಮಾಧ್ಯಮಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವಂತೆ ಪ್ರೇತವ್ಯವಹಾರದ ಬೆಂಬಲಿಗರು ಒತ್ತಾಯಿಸುವುದನ್ನು ಮುಂದುವರಿಸುವರು ಎಂದು ಯೆಶಾಯನು ಹೇಳುತ್ತಿದ್ದಾನೆ. ಹೀಗೆ ಮಾಡುವುದರಿಂದ ಅವರು ಯೆಹೋವನಿಂದ ಜ್ಞಾನೋದಯವನ್ನು ಎಂದಿಗೂ ಪಡೆಯಲಾರರು.
c ರಾಜ ಸೊಲೊಮೋನನು ತೂರಿನ ಅರಸನಾದ ಹೀರಾಮನಿಗೆ ನೀಡಿದ ಗಲಿಲಾಯ ಪ್ರಾಂತದ 20 ಪಟ್ಟಣಗಳಲ್ಲಿ ಇಸ್ರಾಯೇಲ್ಯರಲ್ಲದವರೇ ವಾಸಿಸುತ್ತಿದ್ದಿರಬಹುದು ಎಂದು ಕೆಲವರು ಸೂಚಿಸಿದ್ದಾರೆ.—1 ಅರಸುಗಳು 9:10-13.
[ಪುಟ 122ರಲ್ಲಿರುವ ಭೂಪಟ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಖೋರಾಜಿನ್
ಬೇತ್ಸಾಯಿದ
ಕಪೆರ್ನೌಮ್
ಗೆನೆಜರೆತ್ ಬಯಲು
ಗಲಿಲಾಯ ಸಮುದ್ರ
ಮಗದಾನ
ತಿಬೇರಿಯ
ಯೊರ್ದನ್ ನದಿ
ಗದರ
ಗದರ
[ಪುಟ 119ರಲ್ಲಿರುವ ಚಿತ್ರಗಳು]
ಕಾಯಿನ ಮತ್ತು ಯೇಸುವಿನ ಜನನ, ಇವೆರಡೂ ತುಂಬ ವಿಶೇಷ ಘಟನೆಗಳಾಗಿದ್ದವು. ಆದರೆ ಕೇವಲ ಯೇಸುವಿನ ಜನನದಿಂದ ಸಂತೋಷಕರ ಫಲಿತಾಂಶವು ಸಿಕ್ಕಿತು
[ಪುಟ 121ರಲ್ಲಿರುವ ಚಿತ್ರ]
ಅನ್ನಕ್ಕಾಗಿರುವ ಹಸಿವು ಮತ್ತು ನೀರಿಗಾಗಿರುವ ಬಾಯಾರಿಕೆಗಿಂತಲೂ ಹೆಚ್ಚು ಕೆಟ್ಟದಾದ ಕ್ಷಾಮವು ಇರುವುದು
[ಪುಟ 127ರಲ್ಲಿರುವ ಚಿತ್ರ]
ಯೇಸು ದೇಶದಲ್ಲಿ ಒಂದು ಬೆಳಕಾಗಿದ್ದನು