ಅಧ್ಯಾಯ ಒಂಬತ್ತು
ವಿಪತ್ಕಾಲದಲ್ಲಿ ಯೆಹೋವನ ಮೇಲೆ ಭರವಸೆಯಿಡಿ
1. ಕ್ರೈಸ್ತರು ಇಂದು ಯೆಶಾಯ 7 ಮತ್ತು 8ನೆಯ ಅಧ್ಯಾಯಗಳನ್ನು ಪರೀಕ್ಷಿಸುವುದರಿಂದ ಏಕೆ ಪ್ರಯೋಜನ ಹೊಂದುವರು?
ಯೆಶಾಯ 7 ಮತ್ತು 8ನೆಯ ಅಧ್ಯಾಯಗಳು, ಎರಡು ಪ್ರತಿವಿರುದ್ಧ ಪ್ರತಿಕ್ರಿಯೆಗಳನ್ನು ಪ್ರಕಟಿಸುತ್ತವೆ. ಯೆಶಾಯ ಮತ್ತು ಆಹಾಜರಿಬ್ಬರೂ ಯೆಹೋವನಿಗೆ ಸಮರ್ಪಿತವಾಗಿದ್ದ ಜನಾಂಗಕ್ಕೆ ಸೇರಿದವರಾಗಿದ್ದರು. ಇವರಿಬ್ಬರಿಗೂ ದೇವದತ್ತವಾಗಿ ನೇಮಿಸಿದ ಕೆಲಸಗಳಿದ್ದವು. ಒಬ್ಬನು ಪ್ರವಾದಿಯಾಗಿದ್ದನು, ಇನ್ನೊಬ್ಬನು ಯೆಹೂದದ ಅರಸನಾಗಿದ್ದನು. ಇಬ್ಬರೂ ಒಂದೇ ರೀತಿಯ ಅಪಾಯವನ್ನು ಅಂದರೆ ಶಕ್ತಿಶಾಲಿ ವೈರಿಸೈನ್ಯಗಳು ಯೆಹೂದಕ್ಕೆ ದಾಳಿಯಿಡುವ ಅಪಾಯವನ್ನು ಎದುರಿಸಿದರು. ಆದರೆ, ಯೆಶಾಯನು ಆ ಬೆದರಿಕೆಯನ್ನು ಯೆಹೋವನಲ್ಲಿ ಭರವಸೆಯುಳ್ಳವನಾಗಿ ಎದುರಿಸಿದಾಗ, ಆಹಾಜನಾದರೊ ಭಯಪೀಡಿತನಾದನು. ಈ ವಿಭಿನ್ನವಾದ ಪ್ರತಿಕ್ರಿಯೆಗಳೇಕೆ? ಇಂದಿನ ಕ್ರೈಸ್ತರು ತದ್ರೀತಿ ಶತ್ರುಸೈನ್ಯಗಳಿಂದ ಸುತ್ತುವರಿಯಲ್ಪಟ್ಟಾಗ, ಅವರು ಯೆಶಾಯನ ಈ ಎರಡು ಅಧ್ಯಾಯಗಳನ್ನು ಪರಿಶೀಲಿಸಿ ಅವುಗಳಲ್ಲಿರುವ ಪಾಠಗಳನ್ನು ಕಂಡುಹಿಡಿಯುವುದು ಉಚಿತ.
ನಿರ್ಣಯವನ್ನು ಮಾಡುವುದು
2, 3. ಯೆಶಾಯನು ತನ್ನ ಆರಂಭದ ಮಾತುಗಳಲ್ಲಿ ಯಾವ ಸಾರಾಂಶವನ್ನು ಕೊಡುತ್ತಾನೆ?
2 ಹೊಸ ಚಿತ್ರದ ಹೊರಮೇರೆಯನ್ನು ನಿರ್ಣಯಿಸಲು ಚಿತ್ರಗಾರನೊಬ್ಬನು ಸರ್ರನೆ ಉದ್ದವಾದ ಗೆರೆಗಳನ್ನು ಎಳೆಯುತ್ತಾನೆ. ಹಾಗೆಯೇ ಯೆಶಾಯನು ತಾನು ಹೇಳಲಿರುವ ವೃತ್ತಾಂತವನ್ನು, ನಡೆಯಲಿರುವ ಸಂಭವಗಳ ಆದಿ ಅಂತ್ಯಗಳನ್ನು ತಿಳಿಯಪಡಿಸುವ ಕೆಲವು ವಿಸ್ತಾರ ಹೇಳಿಕೆಗಳಿಂದ ಆರಂಭಿಸುತ್ತಾನೆ: “ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ಮೇಲೆ ದಂಡೆತ್ತಿ ಬಂದರು. (ಅದನ್ನು ಜಯಿಸುವದಕ್ಕೆ ಆಗಲಿಲ್ಲ.)”—ಯೆಶಾಯ 7:1.
3 ಸಾ.ಶ.ಪೂ. ಎಂಟನೆಯ ಶತಮಾನ. ಆಹಾಜನು ತನ್ನ ತಂದೆಯಾದ ಯೋಥಾಮನ ಉತ್ತರಾಧಿಕಾರಿಯಾಗಿ ಯೆಹೂದದ ಅರಸನಾಗಿದ್ದನು. ಆಗ ಸಿರಿಯದ ಅರಸ ರೆಚೀನ ಮತ್ತು ಇಸ್ರಾಯೇಲಿನ ಉತ್ತರ ರಾಜ್ಯದ ಅರಸ ಪೆಕಹ—ಇವರು ಯೆಹೂದವನ್ನು ಮುತ್ತಿ ಭಯಂಕರ ರೀತಿಯಲ್ಲಿ ಆಕ್ರಮಣಮಾಡಿದರು. ಕ್ರಮೇಣ ಅವರು ಯೆರೂಸಲೇಮಿಗೂ ಮುತ್ತಿಗೆ ಹಾಕಲಿದ್ದರು. ಆದರೂ ಆ ಮುತ್ತಿಗೆಯು ನಿಷ್ಫಲಗೊಳ್ಳಲಿತ್ತು. (2 ಅರಸುಗಳು 16:5, 6; 2 ಪೂರ್ವಕಾಲವೃತ್ತಾಂತ 28:5-8) ಹಾಗೇಕೆ? ನಾವದನ್ನು ಅನಂತರ ತಿಳಿಯಲಿರುವೆವು.
4. ಆಹಾಜನ ಮತ್ತು ಅವನ ಜನತೆಯ ಹೃದಯಗಳು ಏಕೆ ಭಯ ತುಂಬಿದವುಗಳಾಗಿವೆ?
4 ಯುದ್ಧದ ಮೊದಲಲ್ಲಿ, “ಅರಾಮ್ಯರು ಎಫ್ರಾಯೀಮ್ಯರನ್ನು ಹೊಂದಿಕೊಂಡಿದ್ದಾರೆಂಬ ಸುದ್ದಿಯು ಅರಮನೆಗೆ ಮುಟ್ಟಿದಾಗ ಅರಸನ ಮನವೂ ಪ್ರಜೆಯ ಮನವೂ ಗಾಳಿಯಿಂದ ವನವೃಕ್ಷಗಳು ಅಲ್ಲಾಡುವಂತೆ ನಡುಗಿದವು.” (ಯೆಶಾಯ 7:2) ಹೌದು, ಸಿರಿಯದ ಅರಾಮ್ಯರು ಇಸ್ರಾಯೇಲ್ಯರ ಜೊತೆಗೂಡಿದ್ದಾರೆಂದೂ ಇದೇ ಗಳಿಗೆಯಲ್ಲಿ ಅವರು ಎಫ್ರಾಯೀಮ್ಯರ (ಇಸ್ರಾಯೇಲಿನ) ಜಮೀನಿನಲ್ಲಿ ಪಾಳೆಯ ಹಾಕಿದ್ದಾರೆಂದು ತಿಳಿಯುವುದು ಆಹಾಜನಿಗೂ ಅವನ ಜನರಿಗೂ ಭಯಹುಟ್ಟಿಸುವ ವಿಷಯವಾಗಿತ್ತು. ಏಕೆಂದರೆ ಅಲ್ಲಿಂದ ಯೆರೂಸಲೇಮಿಗೆ ಬಂದು ಮುಟ್ಟುವುದು ಕೇವಲ ಎರಡು ಮೂರು ದಿನಗಳ ರಸ್ತೆಯಾಗಿತ್ತು!
5. ದೇವಜನರು ಇಂದು ಯೆಶಾಯನನ್ನು ಯಾವ ವಿಧಗಳಲ್ಲಿ ಹೋಲುತ್ತಾರೆ?
5 ಯೆಹೋವನು ಯೆಶಾಯನಿಗೆ ಹೇಳುವುದು: “ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡುಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ರಾಜಮಾರ್ಗದಲ್ಲಿ ಮೇಲಿನ ಕೆರೆಯ ಕಾಲಿವೆಯ ಕೊನೆಯ ಹತ್ತಿರ ಆಹಾಜನನ್ನು ಎದುರು”ಗೊಳ್ಳು. (ಯೆಶಾಯ 7:3) ತುಸು ಯೋಚಿಸಿ! ಅರಸನು ಯೆಹೋವನ ಪ್ರವಾದಿಯನ್ನು ಹುಡುಕಿ ಮಾರ್ಗದರ್ಶನವನ್ನು ಪಡೆಯಬೇಕಾಗಿದ್ದ ಈ ಸಮಯದಲ್ಲಿ, ಪ್ರವಾದಿಯೇ ಹೋಗಿ ಅರಸನನ್ನು ಕಂಡುಹಿಡಿಯಬೇಕಾಯಿತು! ಹಾಗಿದ್ದರೂ, ಯೆಶಾಯನು ಯೆಹೋವನಿಗೆ ಇಷ್ಟಪೂರ್ವಕವಾಗಿ ವಿಧೇಯನಾಗುತ್ತಾನೆ. ತದ್ರೀತಿ, ಇಂದು ದೇವಜನರು ಈ ಲೋಕದ ಒತ್ತಡಗಳಿಂದ ಭಯಪೀಡಿತರಾಗಿರುವ ಜನರನ್ನು ಕಂಡುಹಿಡಿಯಲು ಸಿದ್ಧಮನಸ್ಸಿನಿಂದ ಹೋಗುತ್ತಾರೆ. (ಮತ್ತಾಯ 24:6, 14) ಪ್ರತಿವರ್ಷ, ಈ ಸುವಾರ್ತೆ ಸಾರುವವರ ಭೇಟಿಗಳಿಗೆ ಪ್ರತಿವರ್ತಿಸಿ ಯೆಹೋವನ ಸಂರಕ್ಷಣಾತ್ಮಕ ಹಸ್ತವನ್ನು ಹಿಡಿದುಕೊಳ್ಳುವ ನೂರಾರು ಸಾವಿರ ಜನರನ್ನು ನೋಡುವುದು ಎಷ್ಟು ತೃಪ್ತಿಕರ!
6. (ಎ) ಪ್ರವಾದಿಯು ರಾಜ ಆಹಾಜನಿಗೆ ಹುರಿದುಂಬಿಸುವ ಯಾವ ಸಂದೇಶವನ್ನು ಕೊಡುತ್ತಾನೆ? (ಬಿ) ಇಂದು ಯಾವ ಸ್ಥಿತಿಗತಿ ಪ್ರಚಲಿತವಾಗಿದೆ?
6 ಯೆಶಾಯನು ಆಹಾಜನನ್ನು ಯೆರೂಸಲೇಮಿನ ಗೋಡೆಗಳ ಹೊರಗೆ ಭೇಟಿಯಾಗುತ್ತಾನೆ. ಅರಸನು ನಿರೀಕ್ಷಿತ ಮುತ್ತಿಗೆಯ ತಯಾರಿಗಾಗಿ ನಗರದ ಜಲ ಸರಬರಾಯಿಯನ್ನು ಪರೀಕ್ಷಿಸುತ್ತಿದ್ದಾನೆ. ಆಗ ಯೆಶಾಯನು ಆಹಾಜನಿಗೆ ಯೆಹೋವನ ಸಂದೇಶವನ್ನು ನೀಡುತ್ತಾನೆ: “ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ! ರೆಚೀನ ಅರಾಮ್ಯರು ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಗೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.” (ಯೆಶಾಯ 7:4) ಆ ಆಕ್ರಮಣಗಾರರು ಈ ಮೊದಲು ಯೆಹೂದವನ್ನು ಹಾಳುಗೊಳಿಸಿದಾಗ, ಅವರ ಕೋಪವು ಜ್ವಾಲೆಗಳಷ್ಟು ಬಿಸಿಯಾಗಿತ್ತು. ಆದರೆ ಈಗ ಅವರು ಕೇವಲ ‘ಎರಡು ಮೋಟುಗೊಳ್ಳಿಗಳೇ’ ಆಗಿದ್ದಾರೆ. ಆಹಾಜನು ಸಿರಿಯದ ಅರಸ ರೆಚೀನನಿಗಾಗಲಿ, ರೆಮಲ್ಯನ ಮಗನೂ ಇಸ್ರಾಯೇಲಿನ ಅರಸನೂ ಆದ ಪೆಕಹನಿಗಾಗಲಿ ಹೆದರಬೇಕಾಗಿರಲಿಲ್ಲ. ಇಂದು ಸಹ ಸಂಗತಿಯು ಹೀಗೆಯೇ ಇದೆ. ಶತಮಾನಗಳಿಂದ ಕ್ರೈಸ್ತಪ್ರಪಂಚದ ನಾಯಕರು ಸತ್ಯ ಕ್ರೈಸ್ತರನ್ನು ಹಿಂಸೆಯ ಅಗ್ನಿಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ ಈಗ, ಕ್ರೈಸ್ತಪ್ರಪಂಚವು ಬಹಳಷ್ಟು ಮಟ್ಟಿಗೆ ಸುಟ್ಟುಹೋಗಿರುವ ಮೋಟನ್ನು ಹೋಲುತ್ತದೆ. ಅದರ ದಿನಗಳು ಮುಗಿಯುತ್ತಿವೆ.
7. ಯೆಶಾಯನ ಮತ್ತು ಅವನ ಪುತ್ರನ ಹೆಸರುಗಳು ಏಕೆ ನಿರೀಕ್ಷೆಗೆ ಕಾರಣವಾಗಿವೆ?
7 ಆಹಾಜನ ದಿನಗಳಲ್ಲಿ, ಯೆಹೋವನಲ್ಲಿ ಭರವಸೆಯಿಟ್ಟವರಿಗೆ ಯೆಶಾಯನ ಸಂದೇಶವು ಮಾತ್ರವಲ್ಲ, ಅವನ ಮತ್ತು ಅವನ ಮಗನ ಹೆಸರಿನ ಅರ್ಥವೂ ನಿರೀಕ್ಷೆಯನ್ನು ಕೊಟ್ಟಿತು. ಯೆಹೂದವು ಅಪಾಯಕ್ಕೊಳಗಾಗಿರುವುದು ನಿಜವಾಗಿದ್ದರೂ, “ಯೆಹೋವನ ರಕ್ಷಣೆ” ಎಂಬ ಅರ್ಥವಿರುವ ಯೆಶಾಯನ ಹೆಸರು ಯೆಹೋವನು ರಕ್ಷಣೆಯನ್ನು ಒದಗಿಸುವನೆಂದು ಸೂಚಿಸುತ್ತದೆ. ಯೆಶಾಯನು ತನ್ನ ಮಗನಾದ ಶೆಯಾರ್ ಯಾಶೂಬನನ್ನು ಕರೆದುಕೊಂಡು ಹೋಗುವಂತೆ ಯೆಹೋವನು ಹೇಳುತ್ತಾನೆ. “ಬರಿಯ ಜನಶೇಷವೊಂದು ಹಿಂದಿರುಗಿ ಬರುವುದು” ಎಂಬುದೇ ಆ ಹೆಸರಿನ ಅರ್ಥ. ಅಂದರೆ, ಯೆಹೂದ ರಾಜ್ಯವು ಕೊನೆಯದಾಗಿ ಅಳಿದು ಹೋಗುತ್ತದಾದರೂ, ದೇವರು ಕರುಣೆಯಿಂದ ಉಳಿಕೆ ಜನವೊಂದನ್ನು ದೇಶದೊಳಕ್ಕೆ ಹಿಂದೆ ತರುವನು.
ಜನಾಂಗಗಳ ಮಧ್ಯೆ ನಡೆಯುವ ಯುದ್ಧವಷ್ಟೇ ಅಲ್ಲ
8. ಯೆರೂಸಲೇಮಿನ ಮೇಲೆ ನಡೆದ ಆಕ್ರಮಣವು ರಾಷ್ಟ್ರಗಳ ಮಧ್ಯೆ ನಡೆಯುವ ಯುದ್ಧಕ್ಕಿಂತ ಏಕೆ ಹೆಚ್ಚಿನದ್ದಾಗಿದೆ?
8 ಯೆಹೋವನು ಯೆಹೂದದ ವೈರಿಗಳ ಯುದ್ಧತಂತ್ರವನ್ನು ಯೆಶಾಯನ ಮೂಲಕ ತಿಳಿಯಪಡಿಸುತ್ತಾನೆ. ಅವರ ತಂತ್ರವು ಹೀಗಿದೆ: “ಯೆಹೂದದ ಮೇಲೆ ದಂಡೆತ್ತಿ ಹೆದರಿಸಿ ಒಳಗೆ ನುಗ್ಗಿಕೊಂಡು ಹೋಗಿ ಅದರಲ್ಲಿ ಟಾಬೇಲನ ಮಗನಿಗೆ ಪಟ್ಟಕಟ್ಟೋಣ.” (ಯೆಶಾಯ 7:5, 6) ಈ ಸಿರಿಯ ಮತ್ತು ಇಸ್ರಾಯೇಲ್ ಒಕ್ಕೂಟವು ಯೆಹೂದವನ್ನು ಸೋಲಿಸಿ ದಾವೀದನ ಸಂತತಿಯವನಾದ ಆಹಾಜನ ಬದಲಿಗೆ ತಮ್ಮ ವ್ಯಕ್ತಿಯನ್ನು ಪಟ್ಟಕ್ಕೇರಿಸಲು ಹೂಟ ಹೂಡುತ್ತದೆ. ಯೆರೂಸಲೇಮಿನ ಮೇಲಿನ ಆಕ್ರಮಣವು ಈಗ ಜನಾಂಗಗಳ ಮಧ್ಯೆ ನಡೆಯುವ ಯುದ್ಧಕ್ಕಿಂತ ದೊಡ್ಡದಾಗಿದೆ. ಅದು ಸೈತಾನ ಮತ್ತು ಯೆಹೋವ—ಇವರ ಮಧ್ಯೆ ನಡೆಯುವ ಹೋರಾಟವಾಗಿ ಪರಿಣಮಿಸಿದೆ. ಏಕೆ? ಏಕೆಂದರೆ ಯೆಹೋವ ದೇವರು ರಾಜ ದಾವೀದನೊಂದಿಗೆ, ಅವನ ಗಂಡುಮಕ್ಕಳು ಯೆಹೋವನ ಜನರ ಮೇಲೆ ದೊರೆತನ ಮಾಡುವರೆಂದು ಒಂದು ಒಡಂಬಡಿಕೆಯನ್ನು ಮಾಡಿದ್ದನು. (2 ಸಮುವೇಲ 7:11, 16) ಹಾಗಿದ್ದುದರಿಂದ, ಇನ್ನೊಂದು ರಾಜವಂಶವನ್ನು ಯೆರೂಸಲೇಮಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವುದು ಸೈತಾನನಿಗೆ ಎಂತಹ ವಿಜಯವನ್ನು ತರುತ್ತಿತ್ತು! ದಾವೀದನ ವಂಶವು, “ಸಮಾಧಾನದ ಪ್ರಭು”ವಾದ ಶಾಶ್ವತ ಬಾಧ್ಯಸ್ಥನನ್ನು ಮುಂತರುವ ಯೆಹೋವನ ಉದ್ದೇಶವನ್ನೂ ಅವನು ಕೆಡಿಸಸಾಧ್ಯವಿತ್ತು.—ಯೆಶಾಯ 9:6, 7.
ಯೆಹೋವನ ಪ್ರೀತಿಯ ಆಶ್ವಾಸನೆಗಳು
9. ಆಹಾಜನಿಗೂ ಇಂದಿನ ಕ್ರೈಸ್ತರಿಗೂ ಯಾವ ಆಶ್ವಾಸನೆಗಳು ಧೈರ್ಯವನ್ನು ಕೊಡಬೇಕು?
9 ಸಿರಿಯ ಮತ್ತು ಇಸ್ರಾಯೇಲಿನ ಈ ಹೂಟವು ಕಾರ್ಯಸಿದ್ಧಿಯನ್ನು ಪಡೆಯಲಿತ್ತೊ? ಇಲ್ಲ. ಯೆಹೋವನು ಪ್ರಕಟಿಸುವುದು: “ಇದು ನೆರವೇರದು, ಆಗುವದೇ ಇಲ್ಲ.” (ಯೆಶಾಯ 7:7) ಯೆರೂಸಲೇಮಿನ ಮೇಲೆ ಹಾಕಿದ ಮುತ್ತಿಗೆ ವಿಫಲಗೊಳ್ಳುವುದು ಮಾತ್ರವಲ್ಲ, “ಅರುವತ್ತೈದು ವರುಷಗಳೊಳಗೆ ಎಫ್ರಾಯೀಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು” ಎಂದೂ ಯೆಹೋವನು ಯೆಶಾಯನ ಮೂಲಕ ಹೇಳುತ್ತಾನೆ. (ಯೆಶಾಯ 7:9) ಹೌದು, 65 ವರುಷಗಳೊಳಗೆ ಇಸ್ರಾಯೇಲು ಜನಾಂಗವಾಗಿ ಉಳಿಯದು.a ನಿರ್ದಿಷ್ಟವಾದ ಸಮಯ ತಖ್ತೆಯಿರುವ ಈ ಆಶ್ವಾಸನೆಯು ಆಹಾಜನಿಗೆ ಧೈರ್ಯವನ್ನು ಕೊಡಬೇಕಾಗಿತ್ತು. ಅದೇ ರೀತಿ, ಸೈತಾನನ ಲೋಕಕ್ಕಿರುವ ಸಮಯವು ಮುಗಿಯುತ್ತ ಇದೆ ಎಂಬ ಅರಿವಿನಿಂದ ಇಂದಿನ ದೇವಜನರು ಬಲಗೊಳ್ಳುತ್ತಾರೆ.
10. (ಎ) ಇಂದು ಸತ್ಯ ಕ್ರೈಸ್ತರು ಯೆಹೋವನನ್ನು ಹೇಗೆ ಅನುಕರಿಸಬಲ್ಲರು? (ಬಿ) ಯೆಹೋವನು ಆಹಾಜನಿಗೆ ಏನನ್ನು ಕೇಳಿಕೊಳ್ಳುವ ಅವಕಾಶವನ್ನು ಕೊಡುತ್ತಾನೆ?
10 ಆಗ ಆಹಾಜನ ಮುಖದಲ್ಲಿ ಪ್ರಾಯಶಃ ಅಪನಂಬಿಕೆ ಕಂಡುಬರುತ್ತದೆ. ಏಕೆಂದರೆ ಯೆಶಾಯನ ಮೂಲಕ ಯೆಹೋವನು ಹೇಳುವುದು: “ನಿಮಗೆ ನಂಬಿಕೆಯು ಸ್ಥಿರವಿಲ್ಲದಿದ್ದರೆ ನಿಮಗೆ ಸ್ಥಿರತೆಯೇ ಇಲ್ಲ.” ಯೆಹೋವನು ತಾಳ್ಮೆಯಿಂದ, “ಮತ್ತೆ . . . ಆಹಾಜ”ನೊಂದಿಗೆ ಮಾತಾಡಿದನು. (ಯೆಶಾಯ 7:9, 10) ಎಷ್ಟು ಉತ್ತಮವಾದ ಒಂದು ಮಾದರಿ! ಇಂದು ಅನೇಕರು ರಾಜ್ಯ ಸಂದೇಶಕ್ಕೆ ಸಿದ್ಧಮನಸ್ಸಿನಿಂದ ಪ್ರತಿವರ್ತಿಸುವುದಿಲ್ಲವಾದರೂ, ನಾವು ಪುನಃ ಪುನಃ ಅವರನ್ನು ಸಂದರ್ಶಿಸಿ “ಮತ್ತೆ” ಅವರೊಂದಿಗೆ ಮಾತನಾಡುವ ಮೂಲಕ ಯೆಹೋವನನ್ನು ಅನುಕರಿಸುವುದು ಉತ್ತಮ. ಯೆಹೋವನು ಬಳಿಕ ಆಹಾಜನಿಗೆ ಹೇಳುವುದು: “ನಿನ್ನ ದೇವರಾದ ಯೆಹೋವನಿಂದ ಒಂದು ಗುರುತನ್ನು ಕೇಳಿಕೋ; ಅದು ಪಾತಾಳದಷ್ಟು ಆಳದಲ್ಲಿದ್ದರೂ ಮೇಲಣ ಲೋಕದಷ್ಟು ಎತ್ತರದಲ್ಲಿದ್ದರೂ ಕೇಳಿಕೋ.” (ಯೆಶಾಯ 7:11) ಆಹಾಜನು ಒಂದು ಗುರುತನ್ನು ಕೇಳಬಹುದಾಗಿತ್ತು ಮತ್ತು ತಾನು ದಾವೀದನ ಮನೆತನವನ್ನು ರಕ್ಷಿಸುವೆನೆಂಬ ಖಾತರಿಯನ್ನು ಕೊಡಲು ಯೆಹೋವನು ಅದನ್ನು ನೆರವೇರಿಸಲಿದ್ದನು.
11. ‘ನಿನ್ನ ದೇವರು’ ಎಂಬ ಯೆಹೋವನ ಮಾತುಗಳಲ್ಲಿ ಯಾವ ಆಶ್ವಾಸನೆ ಕಂಡುಬರುತ್ತದೆ?
11 ‘ನಿನ್ನ ದೇವರಿಂದ ಒಂದು ಗುರುತನ್ನು ಕೇಳಿಕೋ’ ಎಂದು ಯೆಹೋವನು ಹೇಳುವುದನ್ನು ಗಮನಿಸಿ. ಯೆಹೋವನು ನಿಜವಾಗಿಯೂ ದಯಾಪರನು. ಆಹಾಜನು ಸುಳ್ಳುದೇವತೆಗಳನ್ನು ಆರಾಧಿಸಲು ತೊಡಗಿದ್ದನೆಂದೂ ಅಸಹ್ಯವಾದ ವಿಧರ್ಮಿ ಆಚಾರಗಳನ್ನು ಆಚರಿಸುತ್ತಿದ್ದನೆಂದೂ ಆಗಲೇ ಸುದ್ದಿಯಿತ್ತು. (2 ಅರಸುಗಳು 16:3, 4) ಹಾಗಿದ್ದರೂ ಮತ್ತು ಆಹಾಜನ ಭಯಭರಿತ ಮನೋಭಾವದ ಎದುರಿನಲ್ಲೂ, ತಾನು ಆಹಾಜನ ದೇವರೆಂದು ಯೆಹೋವನು ಹೇಳಿಕೊಳ್ಳುತ್ತಾನೆ. ಮಾನವರನ್ನು ಯೆಹೋವನು ದುಡುಕಿ ತಳ್ಳಿಹಾಕುವುದಿಲ್ಲವೆಂದು ಇದು ನಮಗೆ ಆಶ್ವಾಸನೆ ನೀಡುತ್ತದೆ. ತಪ್ಪುಮಾಡುವವರ ಮತ್ತು ನಂಬಿಕೆಯಲ್ಲಿ ಬಲಹೀನರಾಗಿರುವವರ ಕೈಹಿಡಿದು ಅವರನ್ನು ಎತ್ತಲು ಆತನು ಇಷ್ಟವುಳ್ಳವನಾಗಿದ್ದಾನೆ. ದೇವರ ಪ್ರೀತಿಯ ಈ ಆಶ್ವಾಸನೆಯು ಆಹಾಜನು ಯೆಹೋವನ ಸಹಾಯವನ್ನು ಕೋರುವಂತೆ ಪ್ರೇರಿಸಿತೊ?
ಸಂದೇಹದಿಂದ ಅವಿಧೇಯತೆಗೆ
12. (ಎ) ಆಹಾಜನು ಯಾವ ದುರಹಂಕಾರದ ಭಾವವನ್ನು ತಾಳುತ್ತಾನೆ? (ಬಿ) ಯೆಹೋವನ ಬಳಿ ಹಿಂದಿರುಗುವ ಬದಲಿಗೆ ಆಹಾಜನು ಸಹಾಯಕ್ಕಾಗಿ ಯಾರ ಬಳಿಗೆ ಹೋಗುತ್ತಾನೆ?
12 ಆಗ ಆಹಾಜನು ಪ್ರತಿಭಟನೆ ತೋರಿಸುತ್ತ ಹೇಳುವುದು: “ನಾನು ಕೇಳಿಕೊಳ್ಳುವದೇ ಇಲ್ಲ, ಯೆಹೋವನನ್ನು ಪರೀಕ್ಷಿಸುವದಿಲ್ಲ.” (ಯೆಶಾಯ 7:12) ಆಹಾಜನು ಇಲ್ಲಿ, “ನೀವು . . . ನಿಮ್ಮ ದೇವರಾದ ಯೆಹೋವನನ್ನು ಪರೀಕ್ಷಿಸಿದಂತೆ ಇನ್ನು ಮುಂದೆ ಮಾಡಬೇಡಿರಿ” ಎಂಬ ಧರ್ಮಶಾಸ್ತ್ರದ ಮಾತುಗಳನ್ನು ಕೈಕೊಂಡು ನಡೆಯುತ್ತಿಲ್ಲ. (ಧರ್ಮೋಪದೇಶಕಾಂಡ 6:16) ಶತಮಾನಗಳು ಕಳೆದ ಬಳಿಕ, ಸೈತಾನನಿಂದ ಶೋಧಿಸಲ್ಪಟ್ಟಾಗ ಯೇಸು ಇವೇ ಮಾತುಗಳನ್ನು ಉಲ್ಲೇಖಿಸಿದನು. (ಮತ್ತಾಯ 4:7) ಆಹಾಜನ ವಿಷಯದಲ್ಲಾದರೊ, ಯೆಹೋವನು ಆಹಾಜನನ್ನು ಸತ್ಯಾರಾಧನೆಗೆ ತಿರುಗಿ ಬರುವಂತೆ ಕೇಳಿಕೊಳ್ಳುತ್ತಿದ್ದಾನೆ, ಗುರುತನ್ನು ನೆರವೇರಿಸಿ ಅವನ ನಂಬಿಕೆಯನ್ನು ಬಲಪಡಿಸಲು ಸಿದ್ಧನಾಗಿದ್ದಾನೆ. ಆದರೆ ಆಹಾಜನು ಬೇರೆ ಕಡೆಯಲ್ಲಿ ಸಂರಕ್ಷಣೆ ಪಡೆಯಲು ಇಷ್ಟಪಡುತ್ತಾನೆ. ಆ ಅರಸನು ಅಶ್ಶೂರಕ್ಕೆ ಹಣದ ದೊಡ್ಡ ಮೊತ್ತವನ್ನು ಕಳುಹಿಸಿ, ಅಶ್ಶೂರವು ತನ್ನ ಉತ್ತರದ ವೈರಿಗಳ ವಿರುದ್ಧವಾಗಿ ತನಗೆ ಸಹಾಯಮಾಡುವಂತೆ ಕೇಳಿಕೊಂಡ ಸಮಯವು ಇದೇ ಆಗಿದ್ದಿರಬಹುದು. (2 ಅರಸುಗಳು 16:7, 8) ತನ್ಮಧ್ಯೆ, ಸಿರಿಯ ಮತ್ತು ಇಸ್ರಾಯೇಲ್ ಸೈನ್ಯಗಳು ಯೆರೂಸಲೇಮಿನ ಸುತ್ತಲೂ ಮುತ್ತಿಗೆ ಹಾಕುತ್ತವೆ.
13. ನಾವು 13ನೆಯ ವಚನದಲ್ಲಿ ಯಾವ ಬದಲಾವಣೆಯನ್ನು ನೋಡುತ್ತೇವೆ, ಅದು ಏನನ್ನು ಸೂಚಿಸುತ್ತದೆ?
13 ಆ ಅರಸನ ನಂಬಿಕೆಯ ಕೊರತೆಯನ್ನು ಮನಸ್ಸಿನಲ್ಲಿಡುತ್ತ, ಯೆಶಾಯನು ಹೇಳುವುದು: “ದಾವೀದನ ಮನೆತನದವರೇ, ಕೇಳಿರಿ! ಮನುಷ್ಯರನ್ನು ಬೇಸರಗೊಳಿಸುವದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವರನ್ನೂ ಬೇಸರಗೊಳಿಸುವಿರಾ?” (ಯೆಶಾಯ 7:13) ಹೌದು, ಇಂತಹ ಸತತ ಪ್ರತಿಭಟನೆಯು ಯೆಹೋವನನ್ನು ಬೇಸರಗೊಳಿಸಬಲ್ಲದು. ಪ್ರವಾದಿಯು ಈಗ “ನಿಮ್ಮ ದೇವರು” ಎಂಬುದರ ಬದಲಿಗೆ “ನನ್ನ ದೇವರು” ಎಂದು ಹೇಳುವುದನ್ನೂ ಗಮನಿಸಿರಿ. ಇದು ಅಶುಭಕರ ಬದಲಾವಣೆಯೇ ಸರಿ! ಹೀಗೆ, ಆಹಾಜನು ಯೆಹೋವನನ್ನು ತಳ್ಳಿಹಾಕಿ ಅಶ್ಶೂರದ ಕಡೆ ತಿರುಗುವಾಗ, ಯೆಹೋವನೊಂದಿಗೆ ಸಂಬಂಧವನ್ನು ಪುನಸ್ಸ್ಥಾಪಿಸಲಿಕ್ಕಿದ್ದ ಒಂದು ಉತ್ತಮ ಸಂದರ್ಭವನ್ನು ಕಳೆದುಕೊಳ್ಳುತ್ತಾನೆ. ತಾತ್ಕಾಲಿಕವಾದ ಲಾಭಗಳನ್ನು ಪಡೆಯುವ ಸಲುವಾಗಿ ಶಾಸ್ತ್ರೀಯ ನಂಬಿಕೆಗಳ ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳುವ ಮೂಲಕ ನಾವೆಂದಿಗೂ ದೇವರೊಂದಿಗಿನ ಸಂಬಂಧವನ್ನು ತ್ಯಾಗಮಾಡದೆ ಇರುವಂತಾಗಲಿ.
ಇಮ್ಮಾನುವೇಲ್ ಎಂಬ ಗುರುತು
14. ದಾವೀದನೊಂದಿಗೆ ಮಾಡಿದ ಒಡಂಬಡಿಕೆಗೆ ಯೆಹೋವನು ತನ್ನ ನಂಬಿಗಸ್ತಿಕೆಯನ್ನು ಹೇಗೆ ತೋರಿಸುತ್ತಾನೆ?
14 ಯೆಹೋವನು ತಾನು ದಾವೀದನೊಂದಿಗೆ ಮಾಡಿದ ಒಡಂಬಡಿಕೆಗೆ ನಂಬಿಗಸ್ತನಾಗಿಯೇ ಉಳಿಯುತ್ತಾನೆ. ತಾನು ಕೊಡುತ್ತೇನೆಂದು ಹೇಳಲಾಗಿದ್ದ ಗುರುತು ಖಂಡಿತವಾಗಿಯೂ ಕೊಡಲ್ಪಡುವುದು! ಯೆಶಾಯನು ಮುಂದುವರಿಸುವುದು: “ಇದರಿಂದ ಕರ್ತನು [“ಯೆಹೋವನು,” NW] ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ, ಒಬ್ಬ ಕನ್ಯಕೆಯು ಗರ್ಭಿಣಿಯಾಗಿ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು. ಅವನು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವಾಗ ಮೊಸರನ್ನೂ ಜೇನುತುಪ್ಪವನ್ನೂ ತಿನ್ನುವನು. ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವದರೊಳಗೆ, ಯಾವ ಇಬ್ಬರು ರಾಜರಿಗೆ ನೀನು ಹೆದರಿ ನಡುಗುತ್ತೀಯೋ ಅವರ ದೇಶವು ನಿರ್ಜನವಾಗುವದು.”—ಯೆಶಾಯ 7:14-16.
15. ಇಮ್ಮಾನುವೇಲನ ಕುರಿತ ಪ್ರವಾದನೆಯು ಯಾವ ಎರಡು ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ?
15 ಆಕ್ರಮಣಕಾರರು ದಾವೀದನ ರಾಜ ಸಂತತಿಗೆ ಅಂತ್ಯವನ್ನು ತರುವರು ಎಂದು ಭಯಪಡುವ ಯಾವನಿಗೂ ಸುವಾರ್ತೆ ಇಲ್ಲಿದೆ. “ಇಮ್ಮಾನುವೇಲ್” ಅಂದರೆ “ದೇವರು ನಮ್ಮೊಂದಿಗಿದ್ದಾನೆ” ಎಂದರ್ಥ. ದೇವರು ಯೆಹೂದದೊಂದಿಗಿರುವುದರಿಂದ ದಾವೀದನೊಂದಿಗೆ ಮಾಡಿರುವ ತನ್ನ ಒಡಂಬಡಿಕೆಯು ರದ್ದಾಗುವಂತೆ ಆತನು ಬಿಡನು. ಅದಲ್ಲದೆ, ಯೆಹೋವನು ಏನನ್ನು ಮಾಡಲಿದ್ದಾನೆಂದು ಮಾತ್ರವಲ್ಲ, ಯಾವಾಗ ಮಾಡಲಿದ್ದಾನೆಂದೂ ಆಹಾಜನಿಗೂ ಅವನ ಜನತೆಗೂ ತಿಳಿಸಲಾಗುತ್ತದೆ. ಆ ಹುಡುಗ ಇಮ್ಮಾನುವೇಲನು ಒಳ್ಳೆಯದರ ಕೆಟ್ಟದ್ದರ ನಡುವಣ ವ್ಯತ್ಯಾಸವನ್ನು ಅರಿಯುವುದರೊಳಗೆ, ವೈರಿ ಜನಾಂಗಗಳು ನಾಶವಾಗಲಿದ್ದವು. ಮತ್ತು ಇದು ಸತ್ಯವಾಗಿ ಪರಿಣಮಿಸುತ್ತದೆ!
16. ಯೆಹೋವನು ಆಹಾಜನ ದಿನಗಳಲ್ಲಿ ಇಮ್ಮಾನುವೇಲನ ಗುರುತನ್ನು ಏಕೆ ಅನಿಶ್ಚಿತವಾಗಿ ಇಟ್ಟಿದ್ದಿರಬಹುದು?
16 ಮಗು ಇಮ್ಮಾನುವೇಲನು ಯಾರ ಮಗನೆಂದು ಬೈಬಲು ತಿಳಿಸುವುದಿಲ್ಲ. ಆದರೆ, ಎಳೆಯ ಇಮ್ಮಾನುವೇಲನು ಗುರುತಾಗಿ ಪರಿಣಮಿಸಲಿದ್ದುದರಿಂದ ಮತ್ತು ಯೆಶಾಯನು ತರುವಾಯ ತಾನೂ ತನ್ನ ಮಕ್ಕಳೂ “ಗುರುತುಗಳು” ಎಂದು ಹೇಳುವುದರಿಂದ, ಇಮ್ಮಾನುವೇಲನು ಅದೇ ಪ್ರವಾದಿಯ ಮಗನಾಗಿದ್ದಿರಬಹುದು. (ಯೆಶಾಯ 8:18) ಆಹಾಜನ ದಿನಗಳ ಇಮ್ಮಾನುವೇಲನ ಗುರುತನ್ನು ಯೆಹೋವನು ಅನಿಶ್ಚಿತವಾಗಿಡಲು ಕಾರಣವು, ಮುಂದಿನ ಸಂತತಿಗಳು ಮಹಾ ಇಮ್ಮಾನುವೇಲನ ಗುರುತನ್ನು ಕಂಡುಹಿಡಿಯುವುದರಿಂದ ತಪ್ಪಿಹೋಗದಂತೆ ಮಾಡಲಿಕ್ಕಾಗಿರಬಹುದು. ಆ ಮಹಾ ಇಮ್ಮಾನುವೇಲನು ಯಾರು?
17. (ಎ) ಮಹಾ ಇಮ್ಮಾನುವೇಲನು ಯಾರು, ಮತ್ತು ಅವನ ಜನನವು ಏನನ್ನು ಸೂಚಿಸಿತು? (ಬಿ) “ದೇವರು ನಮ್ಮ ಕೂಡ ಇದ್ದಾನೆ” ಎಂದು ದೇವಜನರು ಇಂದು ಏಕೆ ಕೂಗಿ ಹೇಳಬಲ್ಲರು?
17 ಯೆಶಾಯನ ಪುಸ್ತಕವನ್ನು ಬಿಟ್ಟರೆ, ಇಮ್ಮಾನುವೇಲ್ ಎಂಬ ಹೆಸರು ಬೈಬಲಿನಲ್ಲಿ ಒಂದು ಬಾರಿ ಮಾತ್ರ, ಅಂದರೆ ಮತ್ತಾಯ 1:23ರಲ್ಲಿ ಮಾತ್ರ ಕಂಡುಬರುತ್ತದೆ. ಮತ್ತಾಯನು ಇಮ್ಮಾನುವೇಲನ ಜನನವನ್ನು ದಾವೀದನ ಸಿಂಹಾಸನದ ಹಕ್ಕಿನ ಬಾಧ್ಯಸ್ಥನಾದ ಯೇಸುವಿನ ಜನನಕ್ಕೆ ಅನ್ವಯಿಸುವಂತೆ ಯೆಹೋವನು ಪ್ರೇರಿಸಿದನು. (ಮತ್ತಾಯ 1:18-23) ಮೊದಲನೆಯ ಇಮ್ಮಾನುವೇಲನ ಜನನವು, ದೇವರು ದಾವೀದನ ಮನೆತನವನ್ನು ತ್ಯಜಿಸಿರುವುದಿಲ್ಲವೆಂಬುದರ ಗುರುತಾಗಿತ್ತು. ತದ್ರೀತಿ, ಮಹಾ ಇಮ್ಮಾನುವೇಲನಾದ ಯೇಸುವಿನ ಜನನವು, ದೇವರು ಮಾನವಕುಲವನ್ನಾಗಲಿ ತಾನು ದಾವೀದನ ಮನೆತನದೊಂದಿಗೆ ಮಾಡಿದ ಒಡಂಬಡಿಕೆಯನ್ನಾಗಲಿ ತ್ಯಜಿಸಿರುವುದಿಲ್ಲವೆಂಬುದರ ಗುರುತಾಗಿತ್ತು. (ಲೂಕ 1:31-33) ಹೀಗೆ, ಯೆಹೋವನ ಮುಖ್ಯ ಪ್ರತಿನಿಧಿಯು ಮಾನವರ ಮಧ್ಯೆ ಇದ್ದುದರಿಂದ ಮತ್ತಾಯನು ನಿಜವಾಗಿಯೂ, “ದೇವರು ನಮ್ಮ ಕೂಡ ಇದ್ದಾನೆ” ಎಂದು ಹೇಳಸಾಧ್ಯವಿತ್ತು. ಇಂದು ಯೇಸು ಸ್ವರ್ಗೀಯ ರಾಜನಾಗಿ ಆಳುತ್ತಿದ್ದಾನೆ ಮಾತ್ರವಲ್ಲ, ತನ್ನ ಭೂಸಭೆಯೊಂದಿಗೂ ಇದ್ದಾನೆ. (ಮತ್ತಾಯ 28:20) ಆದುದರಿಂದ, “ದೇವರು ನಮ್ಮ ಕೂಡ ಇದ್ದಾನೆ”! ಎಂದು ಧೈರ್ಯದಿಂದ, ಕೂಗಿ ಹೇಳಲು ದೇವಜನರಿಗೆ ಹೆಚ್ಚಿನ ಕಾರಣವಿರುವುದು ನಿಶ್ಚಯ.
ಅಪನಂಬಿಗಸ್ತಿಕೆಯ ಕಾರಣ ಬಂದ ಇನ್ನೂ ಹೆಚ್ಚಿನ ದುಷ್ಪರಿಣಾಮಗಳು
18. (ಎ) ಯೆಶಾಯನ ಮುಂದಿನ ಮಾತುಗಳು ಅವನ ಕೇಳುಗರಿಗೆ ಭೀತಿಯನ್ನುಂಟುಮಾಡುವುದೇಕೆ? (ಬಿ) ಸ್ವಲ್ಪದರಲ್ಲಿ ಯಾವ ಸಂಭವಗಳು ನೆರವೇರಲಿವೆ?
18 ಯೆಶಾಯನು ಈಗತಾನೇ ನುಡಿದ ಮಾತುಗಳು ಸಾಂತ್ವನದಾಯಕವಾಗಿದ್ದರೂ, ಅವನ ಮುಂದಿನ ಮಾತುಗಳು ಕೇಳುಗರಿಗೆ ಭೀತಿಯನ್ನುಂಟುಮಾಡುತ್ತವೆ: “ಮತ್ತು ಯೆಹೂದದಿಂದ ಎಫ್ರಾಯೀಮು ಅಗಲಿದಂದಿನಿಂದ ಈಚೆಗೆ ಸಂಭವಿಸದ ದುಷ್ಕಾಲವನ್ನು ಯೆಹೋವನು ನಿನ್ನ ಮೇಲೂ ನಿನ್ನ ಪ್ರಜೆಯ ಮೇಲೂ ನಿನ್ನ ತಂದೆಯ ಮನೆತನದ ಮೇಲೂ ಬರಮಾಡುವನು; ಆ ದುಷ್ಕಾಲವು ಅಶ್ಶೂರದ ಅರಸೇ.” (ಯೆಶಾಯ 7:17) ಹೌದು, ಅಶ್ಶೂರದ ಅರಸನಿಂದ ವಿಪತ್ತು ಬರಲಿದೆ. ಕುಖ್ಯಾತವಾಗಿ ಕ್ರೂರರಾಗಿರುವ ಅಶ್ಶೂರದವರಿಂದ ಬರಲಿದ್ದ ಪ್ರಭುತ್ವವು ಆಹಾಜನಿಗೂ ಅವನ ಪ್ರಜೆಗಳಿಗೂ ಅನೇಕ ರಾತ್ರಿ ನಿದ್ದೆ ಬಾರದಂತೆ ಮಾಡಿದ್ದಿರಬಹುದು. ಹೀಗಿರುವುದರಿಂದ, ಅಶ್ಶೂರದವರೊಂದಿಗೆ ಮಿತ್ರನಾಗುವಲ್ಲಿ ಅವರು ಇಸ್ರಾಯೇಲ್ ಮತ್ತು ಸಿರಿಯದವರಿಂದ ತನ್ನನ್ನು ಬಿಡಿಸುವರೆಂದು ಆಹಾಜನು ತರ್ಕಿಸಿದ್ದಾನೆ. ಅಶ್ಶೂರದ ಅರಸನು ಕೊನೆಗೆ ಇಸ್ರಾಯೇಲ್ ಮತ್ತು ಸಿರಿಯವನ್ನು ಆಕ್ರಮಿಸುವ ಮೂಲಕ ಆಹಾಜನ ಬಿನ್ನಹಕ್ಕೆ ಓಗೊಡಲಿದ್ದದ್ದು ನಿಶ್ಚಯ. (2 ಅರಸುಗಳು 16:9) ಪೆಕಹನೂ ರೆಚೀನನೂ ತಾವು ಯೆರೂಸಲೇಮಿಗೆ ಹಾಕಿದ ಮುತ್ತಿಗೆಯನ್ನು ಬಿಟ್ಟು ಹಿಂದಿರುಗುವಂತೆ ನಿರ್ಬಂಧಿಸಲ್ಪಡುವುದು ಇದೇ ಕಾರಣಕ್ಕಾಗಿ ಇರಬಹುದು. ಹೀಗೆ ಸಿರಿಯ-ಇಸ್ರಾಯೇಲ್ ಒಕ್ಕೂಟಕ್ಕೆ ಯೆರೂಸಲೇಮನ್ನು ಜಯಿಸಲಿಕ್ಕೆ ಆಗಲಿಲ್ಲ. (ಯೆಶಾಯ 7:1) ಆದರೆ ಈಗಲಾದರೊ, ತಮ್ಮ ನಿರೀಕ್ಷಿತ ಸಂರಕ್ಷಕರಾದ ಅಶ್ಶೂರರೇ ತಮ್ಮ ಮೇಲೆ ದಬ್ಬಾಳಿಕೆ ನಡೆಸಲಿದ್ದಾರೆ ಎಂದು ಯೆಶಾಯನು ತನ್ನ ತಲ್ಲಣಗೊಂಡ ಸಭೆಗೆ ತಿಳಿಸುತ್ತಾನೆ!—ಹೋಲಿಸಿ ಜ್ಞಾನೋಕ್ತಿ 29:25.
19. ಈ ಐತಿಹಾಸಿಕ ವೃತ್ತಾಂತವು ಇಂದಿನ ಕ್ರೈಸ್ತರಿಗೆ ಯಾವ ಎಚ್ಚರಿಕೆಯನ್ನು ಕೊಡುತ್ತದೆ?
19 ಈ ನಿಜ ಐತಿಹಾಸಿಕ ವೃತ್ತಾಂತವು ಇಂದು ಕ್ರೈಸ್ತರಿಗೆ ಒಂದು ಮುನ್ನೆಚ್ಚರಿಕೆಯನ್ನು ಕೊಡುತ್ತದೆ. ಒತ್ತಡಕ್ಕೊಳಗಾಗುವಾಗ ನಾವು ಕ್ರೈಸ್ತ ಮೂಲಸೂತ್ರಗಳ ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ಮತ್ತು ಹೀಗೆ, ಯೆಹೋವನ ಸಂರಕ್ಷಣೆಯನ್ನು ತಿರಸ್ಕರಿಸುವಂತೆ ಪರೀಕ್ಷಿಸಲ್ಪಡಬಹುದು. ಇದು, ಯೆಶಾಯನ ಮುಂದಿನ ಮಾತುಗಳಲ್ಲಿ ಸ್ಪಷ್ಟವಾಗುವಂತೆ, ಮಂದದೃಷ್ಟಿಯ, ಹೌದು ಸ್ವನಾಶಕರವೂ ಆದ ನೋಟವಾಗಿದೆ. ಈ ದೇಶಕ್ಕೂ ಅದರ ಜನತೆಗೂ ಅಶ್ಶೂರರ ಆಕ್ರಮಣವು ಏನು ಮಾಡುವುದೆಂಬುದನ್ನು ಪ್ರವಾದಿಯು ವರ್ಣಿಸುತ್ತ ಮುಂದುವರಿಯುತ್ತಾನೆ.
20. “ನೊಣಗಳು” ಮತ್ತು “ತುಂಬಿಗಳು” ಯಾರು, ಮತ್ತು ಅವರೇನು ಮಾಡುವರು?
20 ಯೆಶಾಯನು ತನ್ನ ಹೇಳಿಕೆಗಳನ್ನು ನಾಲ್ಕು ಭಾಗಗಳಾಗಿ ವಿಭಾಗಿಸುತ್ತಾನೆ. ಪ್ರತಿಯೊಂದು ಭಾಗವು “ಆ ಕಾಲದಲ್ಲಿ,” ಅಂದರೆ ಅಶ್ಶೂರವು ಯೆಹೂದವನ್ನು ಆಕ್ರಮಿಸುವ ದಿನದಲ್ಲಿ ಏನಾಗುವುದೆಂಬುದನ್ನು ತಿಳಿಸುತ್ತದೆ. “ಆ ಕಾಲದಲ್ಲಿ ಐಗುಪ್ತದ ನದಿಗಳ ಕಟ್ಟಕಡೆಯಲ್ಲಿನ ನೊಣಗಳೂ ಅಶ್ಶೂರ್ ದೇಶದ ತುಂಬಿಗಳೂ ಬರಲೆಂದು ಯೆಹೋವನು ಸಿಳ್ಳುಹಾಕುವನು. ಅವೆಲ್ಲಾ ಬಂದು ಕಡಿದಾದ ದೊಂಗರಗಳಲ್ಲಿಯೂ ಬಂಡೆಗಳ ಸಂದುಗೊಂದುಗಳಲ್ಲಿಯೂ ಎಲ್ಲಾ ಮುಳ್ಳುಪೊದೆಗಳಲ್ಲಿಯೂ ಗೋಮಾಳಗಳಲ್ಲಿಯೂ ಮುತ್ತಿಕೊಳ್ಳುವವು.” (ಯೆಶಾಯ 7:18, 19) ಅಶ್ಶೂರ ಮತ್ತು ಐಗುಪ್ತದ ಸೈನ್ಯಗಳು ನೊಣ, ತುಂಬಿಗಳಂತೆ ವಾಗ್ದತ್ತ ದೇಶಕ್ಕೆ ಆಕರ್ಷಿಸಲ್ಪಡುವವು. ಮತ್ತು ಇದು ತಾತ್ಕಾಲಿಕ ಮುತ್ತಿಗೆಯಾಗಿರದು. “ನೊಣಗಳೂ” “ತುಂಬಿಗಳೂ” ದೇಶದ ಸಂದುಗೊಂದುಗಳಲ್ಲಿ ಬಂದು ನೆಲಸುವುವು.
21. ಅಶ್ಶೂರದ ಅರಸನು ಹೇಗೆ “ಕ್ಷೌರದ ಕತ್ತಿ”ಯಂತಿರುವನು?
21 ಯೆಶಾಯನು ಮುಂದುವರಿಸುವುದು: “ಆಗ ಕರ್ತನು [“ಯೆಹೋವನು,” NW] ಯೂಫ್ರೇಟೀಸ್ ನದಿಯ ಆಚೆಗಿರುವ ಅಶ್ಶೂರದ ರಾಜನೆಂಬ ಬಾಡಿಗೆಯ ಕ್ಷೌರದ ಕತ್ತಿಯಿಂದ [ಯೆಹೂದದ] ತಲೆಯನ್ನೂ ಕಾಲಕೂದಲನ್ನೂ ಬೋಳಿಸುವನು; ಅದು ಗಡ್ಡವನ್ನು ಸಹ ತೆಗೆದುಬಿಡುವದು.” (ಯೆಶಾಯ 7:20) ಈಗ ಮುಖ್ಯ ಅಪಾಯವನ್ನು ತರಲಿದ್ದ ಅಶ್ಶೂರದ ಹೆಸರನ್ನು ಮಾತ್ರ ಹೇಳಲಾಗುತ್ತದೆ. ಸಿರಿಯ ಮತ್ತು ಇಸ್ರಾಯೇಲನ್ನು ‘ಬೋಳಿಸಲು’ ಆಹಾಜನು ಅಶ್ಶೂರದ ರಾಜನನ್ನು ಬಾಡಿಗೆಗೆ ಹಿಡಿಯುತ್ತಾನೆ. ಆದರೂ, ಯೂಫ್ರೇಟೀಸ್ ಪ್ರದೇಶದ ಈ “ಬಾಡಿಗೆಯ ಕ್ಷೌರದ ಕತ್ತಿ” ಯೆಹೂದದ ‘ತಲೆಗೆ’ ವಿರುದ್ಧವಾಗಿ ಹೋಗಿ, ಅದನ್ನು ನುಣುಪಾಗಿ ಬೋಳಿಸಿ, ಅದರ ಗಡ್ಡವನ್ನೂ ಬೋಳಿಸಿ ಬಿಡುವುದು!
22. ಅಶ್ಶೂರರ ಸನ್ನಿಹಿತ ಮುತ್ತಿಗೆಯ ಪರಿಣಾಮಗಳನ್ನು ತೋರಿಸಲು ಯೆಶಾಯನು ಯಾವ ಮಾದರಿಗಳನ್ನು ಉಪಯೋಗಿಸುತ್ತಾನೆ?
22 ಪರಿಣಾಮವೇನಾಗಲಿತ್ತು? “ಆ ಕಾಲದಲ್ಲಿ ಯಾವನೇ ಆಗಲಿ ಹಸುವಿನ ಕಡಸನ್ನೂ ಎರಡು ಕುರಿಗಳನ್ನೂ ಸಾಕಿ ಅವು ಕರೆಯುವ ಹೆಚ್ಚು ಹಾಲಿನಿಂದ ಮೊಸರನ್ನು ತಿನ್ನುವನು; ದೇಶದಲ್ಲಿ ಉಳಿದ ಪ್ರತಿಯೊಬ್ಬನೂ ಮೊಸರುಜೇನುಗಳನ್ನೇ ಉಂಡು ಜೀವಿಸುವನು.” (ಯೆಶಾಯ 7:21, 22) ಅಶ್ಶೂರರು ದೇಶವನ್ನು ‘ಬೋಳಿಸಿದಾಗ’ ಕೊಂಚ ಜನರೇ ಉಳಿಯುವುದರಿಂದ, ಆಹಾರವನ್ನು ಒದಗಿಸಲು ಅವರಿಗೆ ಕೊಂಚ ಸಂಖ್ಯೆಯ ಪ್ರಾಣಿಗಳೇ ಸಾಕು. ‘ಮೊಸರುಬೆಣ್ಣೆ ಮತ್ತು ಜೇನುತುಪ್ಪ’ ಮಾತ್ರ ಅಲ್ಲಿರುತ್ತದಲ್ಲದೆ ಇನ್ನೇನೂ, ಅಂದರೆ ದ್ರಾಕ್ಷಾಮದ್ಯ, ರೊಟ್ಟಿ ಮತ್ತು ಇತರ ಮುಖ್ಯ ಆಹಾರಗಳು ಅಲ್ಲಿರುವುದಿಲ್ಲ. ವಿಪರೀತ ಹಾಳುಬೀಳುವಿಕೆಯನ್ನು ಒತ್ತಿಹೇಳಲಿಕ್ಕಾಗಿಯೊ ಎಂಬಂತೆ, ಯೆಶಾಯನು ಬೆಲೆಯುಳ್ಳ ಫಲವತ್ತಾದ ಜಮೀನಿಗೆ ಬದಲು ಮುಳ್ಳುಪೊದೆಗಳು ಮತ್ತು ಹಣಜಿಯು ಎದ್ದು ಬರುವುವೆಂದು ಮೂರು ಬಾರಿ ಹೇಳುತ್ತಾನೆ. ಪಟ್ಟಣಗಳ ಹೊರಪ್ರದೇಶಕ್ಕೆ ಹೋಗುವವರಿಗೆ ಪೊದೆಗಳಲ್ಲಿ ಹೊಂಚುಹಾಕುತ್ತಿರುವ ಕಾಡು ಪ್ರಾಣಿಗಳಿಗೆದುರಾಗಿ “ಬಿಲ್ಲುಬಾಣ”ಗಳ ಅಗತ್ಯವಿರುವುದು. ಮರಪೊದೆಗಳನ್ನು ಕಡಿದು ಸ್ವಚ್ಫಮಾಡಿರುವ ಹೊಲಗಳು ದನಕುರಿಗಳು ತುಳಿದಾಡುವ ಸ್ಥಳಗಳಾಗುವವು. (ಯೆಶಾಯ 7:23-25) ಈ ಪ್ರವಾದನೆಯು ಆಹಾಜನ ದಿನಗಳಲ್ಲಿಯೇ ನೆರವೇರಲು ಆರಂಭಿಸುತ್ತದೆ.—2 ಪೂರ್ವಕಾಲವೃತ್ತಾಂತ 28:20.
ನಿಷ್ಕೃಷ್ಟ ಪ್ರವಾದನೆಗಳು
23. (ಎ) ಈಗ ಯೆಶಾಯನು ಏನು ಮಾಡುವಂತೆ ಆಜ್ಞಾಪಿಸಲಾಗುತ್ತದೆ? (ಬಿ) ಹಲಿಗೆಯ ಮೇಲಿನ ಗುರುತು ಹೇಗೆ ದೃಢೀಕರಿಸಲ್ಪಡುತ್ತದೆ?
23 ಈಗ ಯೆಶಾಯನು ಸದ್ಯದ ಪರಿಸ್ಥಿತಿಗಳಿಗೆ ಹಿಂದಿರುಗಿ ಬರುತ್ತಾನೆ. ಸಿರಿಯ-ಇಸ್ರಾಯೇಲ್ ಒಕ್ಕೂಟವು ಯೆರೂಸಲೇಮನ್ನು ಇನ್ನೂ ಮುತ್ತಿರುವಾಗಲೇ ಯೆಶಾಯನು ವರದಿ ಮಾಡುವುದು: “ಆ ಮೇಲೆ ಯೆಹೋವನು ನನಗೆ—ದೊಡ್ಡ ಹಲಿಗೆಯನ್ನು ತೆಗೆದುಕೊಂಡು ಸಾಧಾರಣ ಲಿಪಿಯಿಂದಲೇ ವಿಷಯಸೂಚಕವಾದ ಈ ಪದವನ್ನು ಬರೆ—ಮಹೇರ್ ಶಾಲಾಲ್ ಹಾಷ್ ಬಜ್; . . . [ನೀನು ಹೀಗೆ ಬರೆದದ್ದಕ್ಕೆ] ಯಾಜಕನಾದ ಊರೀಯ, ಯೆಬೆರೆಕ್ಯನ ಮಗನಾದ ಜೆಕರ್ಯ ಈ ನಂಬಿಗಸ್ತರಾದ ಸಾಕ್ಷಿಗಳನ್ನು ಕರೆಯುವೆನು ಎಂದು ಹೇಳಿದನು.” (ಯೆಶಾಯ 8:1, 2) ಮಹೇರ್ ಶಾಲಾಲ್ ಹಾಷ್ ಬಜ್ ಅಂದರೆ “ಸೂರೆಗೆ ಆತುರ, ಕೊಳ್ಳೆಗೆ ಅವಸರ” ಎಂದು ಅರ್ಥ. ಆ ಸಮಾಜದ ಇಬ್ಬರು ಸನ್ಮಾನ್ಯ ಪುರುಷರು ತಾನು ದೊಡ್ಡ ಹಲಿಗೆಯಲ್ಲಿ ಬರೆದ ಈ ಹೆಸರನ್ನು ಪ್ರಮಾಣೀಕರಿಸುವಂತೆ, ಮತ್ತು ಇದರಿಂದಾಗಿ ಮುಂದಕ್ಕೆ ಅವರು ಇದರ ವಿಶ್ವಾಸಾರ್ಹತೆಯನ್ನು ದೃಢೀಕರಿಸುವಂತೆ ಯೆಶಾಯನು ಕೇಳಿಕೊಳ್ಳುತ್ತಾನೆ. ಆದರೆ ಈ ಗುರುತು ಎರಡನೆಯ ಗುರುತಿನಿಂದ ದೃಢೀಕರಿಸಲ್ಪಡಬೇಕು.
24. ಮಹೇರ್ ಶಾಲಾಲ್ ಹಾಷ್ ಬಜ್ ಎಂಬ ಗುರುತು ಯೆಹೂದದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡಬೇಕು?
24 ಯೆಶಾಯನು ಹೇಳುವುದು: “ಅನಂತರ ನಾನು ನನ್ನ ಹೆಂಡತಿಯನ್ನು ಕೂಡಲು ಆಕೆಯು ಬಸುರಾಗಿ ಗಂಡು ಮಗುವನ್ನು ಹೆತ್ತಳು. ಆಗ ಯೆಹೋವನು ನನಗೆ—ಅದಕ್ಕೆ ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು. ಆ ಮಗುವು ಅಪ್ಪಾ, ಅಮ್ಮಾ, ಎಂದು ಕೂಗಬಲ್ಲದಾಗುವದರೊಳಗೆ ಅಶ್ಶೂರದ ಅರಸನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ಹೊರಿಸಿಕೊಂಡು ಹೋಗುವನು ಎಂದು ಹೇಳಿದನು.” (ಯೆಶಾಯ 8:3, 4) ಆ ದೊಡ್ಡ ಹಲಿಗೆ ಮತ್ತು ಹೊಸದಾಗಿ ಹುಟ್ಟಿದ ಗಂಡುಮಗು—ಇವೆರಡೂ ಅಶ್ಶೂರವು ಬೇಗನೆ ಯೆಹೂದದ ಪೀಡಕ ರಾಜ್ಯಗಳಾದ ಸಿರಿಯ ಮತ್ತು ಇಸ್ರಾಯೇಲನ್ನು ಕೊಳ್ಳೆಹೊಡೆಯುವುವು ಎಂಬುದಕ್ಕೆ ಗುರುತಾಗಿರುವುವು. ಎಷ್ಟು ಬೇಗನೆ? ಹೆಚ್ಚಿನ ಶಿಶುಗಳು ಮೊದಲಾಗಿ ಕಲಿಯುವ, “ಅಪ್ಪಾ, ಅಮ್ಮಾ” ಎಂಬ ಪದಗಳನ್ನು ಆ ಗಂಡುಮಗು ಕಲಿಯುವುದರೊಳಗೆ. ಇಂತಹ ಪ್ರವಾದನೆಯು ಯೆಹೋವನಲ್ಲಿ ಜನರ ಭರವಸೆಯನ್ನು ಹೆಚ್ಚಿಸಬೇಕು ಅಥವಾ ಅದು, ಕೆಲವರು ಯೆಶಾಯನ ಮತ್ತು ಅವನ ಪುತ್ರರ ಕುಚೋದ್ಯಮಾಡುವಂತೆಯೂ ನಡಿಸಸಾಧ್ಯವಿತ್ತು. ಏನೇ ಆಗಲಿ, ಯೆಶಾಯನ ಪ್ರವಾದನಾ ಮಾತುಗಳು ಮಾತ್ರ ನಿಜವಾಗಿ ಪರಿಣಮಿಸಿದವು.—2 ಅರಸುಗಳು 17:1-6.
25. ಯೆಶಾಯನ ಮತ್ತು ಈಗಿನ ದಿನಗಳ ಮಧ್ಯೆ ಯಾವ ಸಮಾನತೆಗಳಿವೆ?
25 ಯೆಶಾಯನು ಪದೇ ಪದೇ ಕೊಟ್ಟ ಮುನ್ನೆಚ್ಚರಿಕೆಗಳಿಂದ ಕ್ರೈಸ್ತರು ಪಾಠವನ್ನು ಕಲಿಯಬಲ್ಲರು. ಈ ಐತಿಹಾಸಿಕ ನಾಟಕದಲ್ಲಿ ಯೆಶಾಯನು ಯೇಸು ಕ್ರಿಸ್ತನನ್ನೂ, ಯೆಶಾಯನ ಮಕ್ಕಳು ಯೇಸುವಿನ ಅಭಿಷಿಕ್ತ ಶಿಷ್ಯರನ್ನೂ ಮುನ್ಸೂಚಿಸಿದರೆಂದು ಅಪೊಸ್ತಲ ಪೌಲನು ನಮಗೆ ತಿಳಿಯಪಡಿಸಿದನು. (ಇಬ್ರಿಯ 2:10-13) ಯೇಸು ಭೂಮಿಯಲ್ಲಿರುವ ತನ್ನ ಅಭಿಷಿಕ್ತ ಹಿಂಬಾಲಕರ ಮುಖಾಂತರ, ನಿಜ ಕ್ರೈಸ್ತರು ಈ ಕಠಿನ ಕಾಲದಲ್ಲಿ “ಎಚ್ಚರವಾಗಿ” ಇರುವ ಆವಶ್ಯಕತೆಯನ್ನು ಜ್ಞಾಪಕ ಹುಟ್ಟಿಸುತ್ತ ಬಂದಿದ್ದಾನೆ. (ಲೂಕ 21:34-36) ಅದೇ ಸಮಯದಲ್ಲಿ, ಪಶ್ಚಾತ್ತಾಪಪಡದ ವಿರೋಧಿಗಳಿಗೆ, ಅವರು ಅಂತಹ ಎಚ್ಚರಿಕೆಗಳ ವಿಷಯದಲ್ಲಿ ಕುಚೋದ್ಯ ಮಾಡಿದರೂ, ಬರಲಿರುವ ನಾಶನದ ಕುರಿತು ಎಚ್ಚರಿಸಲಾಗುತ್ತದೆ. (2 ಪೇತ್ರ 3:3, 4) ಯೆಶಾಯನ ದಿನಗಳಲ್ಲಿ ನೆರವೇರಿದ ಈ ಸಮಯಸೂಚಕ ಪ್ರವಾದನೆಗಳು ನಮ್ಮ ದಿನಗಳಿಗಿರುವ ದೇವರ ಸಮಯ ತಖ್ತೆಯೂ “ಬಂದೇ ಬರುವದು, ತಾಮಸವಾಗದು,” ಎಂಬುದಕ್ಕೆ ಖಾತರಿಯಾಗಿದೆ.—ಹಬಕ್ಕೂಕ 2:3.
ಧ್ವಂಸಕಾರಕ “ನೀರು”
26, 27. (ಎ) ಯೆಶಾಯನು ಯಾವ ಸಂಭವಗಳನ್ನು ಮುಂತಿಳಿಸುತ್ತಾನೆ? (ಬಿ) ಯೆಶಾಯನ ಮಾತುಗಳು ಇಂದಿನ ಯೆಹೋವನ ಸೇವಕರಿಗೆ ಏನನ್ನು ಸೂಚಿಸುತ್ತವೆ?
26 ಯೆಶಾಯನು ತನ್ನ ಮುನ್ನೆಚ್ಚರಿಕೆಗಳನ್ನು ಮುಂದುವರಿಸುತ್ತಾನೆ: “ಯೆಹೋವನು ಮತ್ತೊಂದಾವರ್ತಿ ನನಗೆ ಹೀಗೆ ನುಡಿದನು—ಈ ಜನರು ಮೆಲ್ಲಗೆ ಹರಿಯುವ ಸಿಲೋವದ ನೀರನ್ನು ಉಪೇಕ್ಷಿಸಿ ರೆಚೀನನನ್ನೂ ರೆಮಲ್ಯನ ಮಗನನ್ನೂ ನಂಬಿ ಮೆರೆದದ್ದರಿಂದ ಇಗೋ, ಕರ್ತನು ಪೂರ್ಣಪ್ರತಾಪದಿಂದ ಕೂಡಿದ ಅಶ್ಶೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು; ಅದು ತನ್ನ ಪಾತ್ರವನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ ಯೆಹೂದದಲ್ಲಿಯೂ ನುಗ್ಗಿ ತುಂಬಿತುಳುಕಿ ಹಬ್ಬಿಕೊಂಡು ಕತ್ತಿನ ವರೆಗೂ ಏರುವದು; ಇಮ್ಮಾನುವೇಲನೇ! ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲದಲ್ಲೆಲ್ಲಾ ಮುತ್ತಿಬಿಡುವವು.”—ಯೆಶಾಯ 8:5-8.
27 ಇಸ್ರಾಯೇಲಿನ ಉತ್ತರ ರಾಜ್ಯವಾದ “ಈ ಜನರು,” ದಾವೀದನೊಂದಿಗೆ ಯೆಹೋವನು ಮಾಡಿದ್ದ ಒಡಂಬಡಿಕೆಯನ್ನು ತಳ್ಳಿಹಾಕುತ್ತಾರೆ. (2 ಅರಸುಗಳು 17:16-18) ಅದು ಅವರಿಗೆ, ಯೆರೂಸಲೇಮಿನ ನೀರಿನ ಸರಬರಾಯಿಯಾದ ಸಿಲೋವದಲ್ಲಿ ತೊಟ್ಟುತೊಟ್ಟಾಗಿ ಹರಿಯುವ ನೀರಿನಷ್ಟೇ ನಿರ್ಬಲವಾಗಿ ತೋರುತ್ತದೆ. ಅವರು ಯೆಹೂದದ ಮೇಲೆ ತಾವು ಮಾಡುತ್ತಿರುವ ಯುದ್ಧದ ವಿಷಯದಲ್ಲಿ ಉಲ್ಲಾಸಿಸುತ್ತಾರೆ. ಆದರೆ ಅವರ ಧಿಕ್ಕಾರಕ್ಕೆ ಶಿಕ್ಷೆ ದೊರಕುವುದಂತೂ ಖಂಡಿತ. ಅಶ್ಶೂರದವರು “ತುಂಬಿತುಳುಕಿ” ಅಥವಾ ದಂಡು ನುಗ್ಗಿಸಿ ಸಿರಿಯ ಮತ್ತು ಇಸ್ರಾಯೇಲನ್ನು ಆಕ್ರಮಿಸುವಂತೆ ಯೆಹೋವನು ಬಿಡಲಿದ್ದನು. ಇಂದಿನ ರಾಜಕೀಯ ವಿಭಾಗವು ಸುಳ್ಳು ಧರ್ಮದ ಕ್ಷೇತ್ರವನ್ನು ತುಂಬಿತುಳುಕುವಂತೆ ಯೆಹೋವನು ಬಿಡಲಿರುವಂತೆಯೇ ಇದಿರುವುದು. (ಪ್ರಕಟನೆ 17:16; ಹೋಲಿಸಿ ದಾನಿಯೇಲ 9:26.) ಬಳಿಕ, ಉಕ್ಕಿ ಹರಿಯುವ “ದೊಡ್ಡ ಪ್ರವಾಹವು” “ಯೆಹೂದದಲ್ಲಿಯೂ ನುಗ್ಗಿ” “ಕತ್ತಿನ ವರೆಗೂ” ಅಂದರೆ ಯೆಹೂದದ ಶಿರಸ್ಸು (ಅರಸನು) ಆಳುವ ಯೆರೂಸಲೇಮಿನ ವರೆಗೂ ಏರುವುದು.b ನಮ್ಮ ದಿನಗಳಲ್ಲಿಯೂ ಇದೇ ರೀತಿ ಸುಳ್ಳುಧರ್ಮದ ರಾಜಕೀಯ ವಧಕಾರರು ಯೆಹೋವನ ಜನರನ್ನು “ಕತ್ತಿನ ವರೆಗೂ” ಮುತ್ತಿಗೆ ಹಾಕುವರು. (ಯೆಹೆಜ್ಕೇಲ 38:2, 10-16) ಇದರ ಪರಿಣಾಮವೇನಾಗುವುದು? ಯೆಶಾಯನ ದಿನಗಳಲ್ಲಿ ಏನಾಗುತ್ತದೆ? ಅಶ್ಶೂರದವರು ನಗರದ ಗೋಡೆಗಳನ್ನೇರಿ ದೇವಜನರನ್ನು ನಾಶಪಡಿಸಿ ಬಿಡುತ್ತಾರೊ? ಇಲ್ಲ. ಏಕೆಂದರೆ ದೇವರು ಅವರೊಂದಿಗಿದ್ದಾನೆ.
ಭಯಪಡದಿರು—“ದೇವರು ನಮ್ಮ ಕೂಡ ಇದ್ದಾನೆ”
28. ಯೆಹೂದದ ವೈರಿಗಳ ಹುರುಪಿನ ಪ್ರಯತ್ನಗಳ ಎದುರಿನಲ್ಲೂ, ಯೆಹೋವನು ಯೆಹೂದಕ್ಕೆ ಯಾವುದರ ಆಶ್ವಾಸನೆ ಕೊಡುತ್ತಾನೆ?
28 ಯೆಶಾಯನು ಎಚ್ಚರಿಸುವುದು: ದೇವರ ಒಡಂಬಡಿಕೆಯ ಜನರ ವಿರೋಧಿಗಳಾದ “ಜನಾಂಗಗಳೇ, ಭಂಗಪಡಿಸಿರಿ, ನೀವೂ ಭಂಗಪಡುವಿರಿ; ದೂರದೇಶೀಯರೇ, ಕಿವಿಗೊಡಿರಿ; ನಡುಕಟ್ಟಿರಿ, ಭಂಗಪಡುವಿರಿ; ಹೌದು ನಡುಕಟ್ಟಿರಿ, ಭಂಗಪಡುವಿರಿ. ಆಲೋಚನೆಮಾಡಿಕೊಳ್ಳಿರಿ, ಅದು ಮುರಿದುಹೋಗುವದು; ಅಪ್ಪಣೆಮಾಡಿರಿ, ಅದು ನಿಲ್ಲದು; ದೇವರು ನಮ್ಮ ಕೂಡ ಇದ್ದಾನಷ್ಟೆ.” (ಯೆಶಾಯ 8:9, 10) ಕೆಲವು ವರ್ಷಗಳ ನಂತರ, ಆಹಾಜನ ನಂಬಿಗಸ್ತ ಪುತ್ರನಾದ ಹಿಜ್ಕೀಯನ ಆಳಿಕೆಯಲ್ಲಿ ಈ ಮಾತುಗಳು ನೆರವೇರುತ್ತವೆ. ಅಶ್ಶೂರರು ಯೆಹೂದವನ್ನು ಮುತ್ತಿದಾಗ, ಯೆಹೋವನ ದೂತನು ಅವರಲ್ಲಿ 1,85,000 ಮಂದಿಯನ್ನು ಹತಿಸುತ್ತಾನೆ. ದೇವರು ತನ್ನ ಜನರೊಂದಿಗೆ ಮತ್ತು ದಾವೀದನ ರಾಜಸಂತತಿಯೊಂದಿಗೆ ಇದ್ದಾನೆಂದು ಇದರಿಂದ ಸ್ಪಷ್ಟವಾಗುತ್ತದೆ. (ಯೆಶಾಯ 37:33-37) ಇದರಂತೆಯೇ, ಬರಲಿರುವ ಅರ್ಮಗೆದೋನ್ ಯುದ್ಧದಲ್ಲಿ ಯೆಹೋವನು ಮಹಾ ಇಮ್ಮಾನುವೇಲನನ್ನು ಕಳುಹಿಸುವನು. ಇವನು ತನ್ನ ವೈರಿಗಳನ್ನು ನಾಶಮಾಡಲು ಮಾತ್ರವಲ್ಲ, ತನ್ನಲ್ಲಿ ಭರವಸೆಯಿಡುವವರನ್ನು ರಕ್ಷಿಸಲಿಕ್ಕಾಗಿಯೂ ಬರುವನು.—ಕೀರ್ತನೆ 2:2, 9, 12.
29. (ಎ) ಆಹಾಜನ ದಿನಗಳ ಯೆಹೂದ್ಯರು ಹಿಜ್ಕೀಯನ ದಿನಗಳವರಿಗಿಂತ ಭಿನ್ನರಾಗಿರುವುದು ಹೇಗೆ? (ಬಿ) ಯೆಹೋವನ ಸೇವಕರು ಇಂದು ಧಾರ್ಮಿಕ ಮತ್ತು ರಾಜಕೀಯ ಒಕ್ಕೂಟಗಳಲ್ಲಿ ಏಕೆ ಸೇರುವುದಿಲ್ಲ?
29 ಆಹಾಜನ ಸಮಕಾಲೀನರು ಹಿಜ್ಕೀಯನ ದಿನಗಳ ಯೆಹೂದ್ಯರಂತಿರದೆ ಯೆಹೋವನ ಸಂರಕ್ಷಣೆಯಲ್ಲಿ ನಂಬಿಕೆಯ ಕೊರತೆಯುಳ್ಳವರಾಗುತ್ತಾರೆ. ಅವರು ಸಿರಿಯ-ಇಸ್ರಾಯೇಲ್ ಒಕ್ಕೂಟಕ್ಕೆದುರಾಗಿ ಅಶ್ಶೂರರೊಡನೆ ಒಂದು ಒಕ್ಕೂಟವನ್ನು ಅಥವಾ “ಒಪ್ಪಂದ”ವನ್ನು ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಯೆಹೋವನ “ಕೈ” ‘ಈ ಜನರ ಮಾರ್ಗದ’ ವಿರುದ್ಧ ಅಥವಾ ಜನಪ್ರಿಯ ಪ್ರವೃತ್ತಿಯ ವಿರುದ್ಧ ಮಾತಾಡುವಂತೆ ಯೆಶಾಯನನ್ನು ಉತ್ತೇಜಿಸುತ್ತದೆ. ಅವನು ಎಚ್ಚರಿಸುವುದು: “ಇವರು ಯಾವದನ್ನು ಒಪ್ಪಂದವೆನ್ನುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಇವರು ಯಾವದಕ್ಕೆ ಹೆದರುತ್ತಾರೋ ನೀವು ಅದಕ್ಕೆ ಹೆದರಬೇಡಿರಿ, ನಡುಗಬೇಡಿರಿ. ಸೇನಾಧೀಶ್ವರನಾದ ಯೆಹೋವನನ್ನೇ ಪ್ರತಿಷ್ಠೆಪಡಿಸಿರಿ; ಆತನಿಗೇ ಹೆದರಿಕೊಳ್ಳಿರಿ, ನಡುಗಿರಿ.” (ಯೆಶಾಯ 8:11-13) ಇದನ್ನು ಮನಸ್ಸಿನಲ್ಲಿಡುತ್ತ, ಇಂದು ಯೆಹೋವನ ಸೇವಕರು ತಾವು ಧಾರ್ಮಿಕ ಸಮಿತಿಗಳೊಂದಿಗೆ ಮತ್ತು ರಾಜಕೀಯ ಒಕ್ಕೂಟಗಳೊಂದಿಗೆ ಕೂಡಿ ಒಳಸಂಚು ಮಾಡುವ ವಿಷಯದಲ್ಲಾಗಲಿ ಮತ್ತು ಅವುಗಳಲ್ಲಿ ಭರವಸೆಯಿಡುವ ವಿಷಯದಲ್ಲಾಗಲಿ ಎಚ್ಚರದಿಂದಿರುತ್ತಾರೆ. ಯೆಹೋವನ ಸೇವಕರಿಗೆ ದೇವರ ಸಂರಕ್ಷಣಾ ಶಕ್ತಿಯಲ್ಲಿ ಪೂರ್ತಿ ಭರವಸೆಯಿದೆ. ಎಷ್ಟೆಂದರೂ, ‘ಯೆಹೋವನು ನಮ್ಮ ಪಕ್ಷ ಇರುವಲ್ಲಿ ಮನುಷ್ಯನು ಏನು ಮಾಡಾನು?’—ಕೀರ್ತನೆ 118:6.
30. ಯೆಹೋವನಲ್ಲಿ ಭರವಸೆಯಿಡದವರ ಗತಿ ಏನಾಗಲಿರುವುದು?
30 ಯೆಹೋವನು ನಂಬುವವರಿಗೆ “ಆಶ್ರಯ”ವಾಗಿ ಪರಿಣಮಿಸುವನೆಂದು ಯೆಶಾಯನು ಪುನರಾವರ್ತಿಸಿ ಹೇಳುತ್ತಾನೆ. ತದ್ವಿರುದ್ಧವಾಗಿ, ಆತನನ್ನು ತಳ್ಳಿಹಾಕುವವರು “ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ . . . ಬಲೆಯೂ ಬೋನೂ” ಆಗುವರು. (ಯೆಶಾಯ 8:14, 15) ಇಲ್ಲಿ ತಿಳಿಸಲಾದ ಐದು ವಿಭಿನ್ನ ಕ್ರಿಯಾಪದಗಳು, ಯೆಹೋವನಲ್ಲಿ ಭರವಸವಿಡದ ಜನರ ಅಂತಿಮ ದುರವಸ್ಥೆಯನ್ನು ಒತ್ತಿ ಹೇಳುತ್ತವೆ ಎಂಬುದು ನಿಶ್ಚಯ. ಯೇಸುವನ್ನು ಒಂದನೆಯ ಶತಮಾನದಲ್ಲಿ ತಳ್ಳಿಹಾಕಿದವರು ಹಾಗೆಯೇ ಮುಗ್ಗರಿಸಿ ಬಿದ್ದರು. (ಲೂಕ 20:17, 18) ಸಿಂಹಾಸನವೇರಿರುವ ಸ್ವರ್ಗೀಯ ರಾಜನಾದ ಯೇಸುವಿಗೆ ರಾಜನಿಷ್ಠೆಯನ್ನು ತೋರಿಸಲು ತಪ್ಪುವವರಿಗೂ ಅದೇ ಪ್ರತಿಫಲವು ದೊರೆಯುವುದು.—ಕೀರ್ತನೆ 2:5-9.
31. ಇಂದು ಸತ್ಯ ಕ್ರೈಸ್ತರು ಯೆಶಾಯನ ಮತ್ತು ಅವನ ಬೋಧನೆಗಳಿಗೆ ಕಿವಿಗೊಟ್ಟವರ ಮಾದರಿಯನ್ನು ಹೇಗೆ ಅನುಸರಿಸಬಲ್ಲರು?
31 ಯೆಶಾಯನ ದಿನಗಳಲ್ಲಿ ಎಲ್ಲರೂ ಮುಗ್ಗರಿಸಿ ಬೀಳಲಿಲ್ಲ. ಯೆಶಾಯನು ಹೇಳುವುದು: “ಬೋಧನೆಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ಉಪದೇಶವನ್ನು ಮುಚ್ಚಿ ಮುದ್ರಿಸು. ಯಾಕೋಬನ ಮನೆತನದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವನಿಗಾಗಿ ನಾನು ಕಾದುಕೊಂಡು ಎದುರುನೋಡುತ್ತಿರುವೆನು.” (ಯೆಶಾಯ 8:16, 17) ಅವರ ಅಪರಾಧಿಗಳಾದ ಒಡನಾಡಿಗಳು ಭರವಸೆಯಿಡಲು ನಿರಾಕರಿಸುವ ಕಾರಣ ಯೆಹೋವನು ತನ್ನ ಮುಖವನ್ನು ಅವರಿಂದ ತಿರುಗಿಸಿದರೂ, ಯೆಶಾಯನೂ ಅವನ ಬೋಧನೆಗೆ ಕಿವಿಗೊಡುವವರೂ ದೇವರ ಧರ್ಮಶಾಸ್ತ್ರವನ್ನು ತ್ಯಜಿಸದೆ ಯೆಹೋವನಲ್ಲಿ ಭರವಸೆಯಿಡುತ್ತ ಹೋಗುವರು. ನಾವೂ ಯೆಹೋವನಲ್ಲಿ ಭರವಸೆಯಿಡುವವರ ಮಾದರಿಯನ್ನು ಅನುಸರಿಸುವವರಾಗಿರೋಣ. ಸತ್ಯಾರಾಧನೆಗೆ ಅಂಟಿಕೊಳ್ಳಲು ಅವರಿಗಿದ್ದ ದೃಢನಿಶ್ಚಯತೆ ನಮ್ಮಲ್ಲಿಯೂ ಇರುವಂತಾಗಲಿ!—ದಾನಿಯೇಲ 12:4, 9; ಮತ್ತಾಯ 24:45; ಹೋಲಿಸಿ ಇಬ್ರಿಯ 6:11, 12.
“ಗುರುತುಗಳು” ಮತ್ತು “ಅದ್ಭುತಗಳು”
32. (ಎ) ಇಂದು ಯಾರು “ಗುರುತುಗಳಾಗಿಯೂ ಅದ್ಭುತಗಳಾಗಿಯೂ” ಕಾರ್ಯನಡೆಸುತ್ತಾರೆ? (ಬಿ) ಕ್ರೈಸ್ತರು ಏಕೆ ಲೋಕದಿಂದ ಎದ್ದುಕಾಣುವವರಾಗಿರಬೇಕು?
32 ಯೆಶಾಯನು ಈಗ ಘೋಷಿಸುವುದು: “ಆಹಾ, ನಾನೂ ನನಗೆ ಯೆಹೋವನು ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರನಾದ ಯೆಹೋವನಿಂದುಂಟಾದ ಗುರುತುಗಳಾಗಿಯೂ ಅದ್ಭುತಗಳಾಗಿಯೂ ಇಸ್ರಾಯೇಲ್ಯರ ಮಧ್ಯದಲ್ಲಿದ್ದೇವೆ.” (ಯೆಶಾಯ 8:18) ಹೌದು, ಯೆಶಾಯ, ಶೆಯಾರ್ ಯಾಶೂಬ್ ಮತ್ತು ಮಹೇರ್ ಶಾಲಾಲ್ ಹಾಷ್ ಬಜ್—ಇವರು ಯೆಹೂದಕ್ಕಿದ್ದ ಯೆಹೋವನ ಉದ್ದೇಶಗಳ ಗುರುತುಗಳಾಗಿದ್ದರು. ಇಂದು ಅದೇ ರೀತಿಯಲ್ಲಿ ಯೇಸು ಮತ್ತು ಅವನ ಅಭಿಷಿಕ್ತ ಸೋದರರು ಗುರುತುಗಳಾಗಿದ್ದಾರೆ. (ಇಬ್ರಿಯ 2:11-13) ಮತ್ತು “ಬೇರೆ ಕುರಿಗಳ” “ಮಹಾ ಸಮೂಹ”ವೊಂದು ಸೇವೆಯಲ್ಲಿ ಅವರೊಂದಿಗೆ ಜೊತೆಗೂಡಿದೆ. (ಪ್ರಕಟನೆ 7:9, 14; ಯೋಹಾನ 10:16) ಒಂದು ಗುರುತು ಅದರ ಸುತ್ತುಮುತ್ತಲಿನಿಂದ ಎದ್ದುನಿಂತು ಕಾಣಿಸಿಕೊಳ್ಳುವಲ್ಲಿ ಮಾತ್ರ ಪ್ರಯೋಜನಕಾರಿಯಾಗಿರಬಲ್ಲದು. ಅದೇ ರೀತಿ, ಕ್ರೈಸ್ತರು ಲೋಕದಿಂದ ಪ್ರತ್ಯೇಕರಾಗಿ ನಿಂತು, ಯೆಹೋವನಲ್ಲಿ ಪೂರ್ತಿ ಭರವಸೆಯನ್ನಿಡುತ್ತ ಆತನ ಉದ್ದೇಶಗಳನ್ನು ಧೈರ್ಯದಿಂದ ಪ್ರಕಟಿಸುವಲ್ಲಿ ಮಾತ್ರ ಗುರುತುಗಳಾಗಿರುವ ತಮ್ಮ ಆಜ್ಞೆಯನ್ನು ನೆರವೇರಿಸುತ್ತಾರೆ.
33. (ಎ) ನಿಜ ಕ್ರೈಸ್ತರು ಏನು ಮಾಡಲು ದೃಢತೆಯಿಂದಿದ್ದಾರೆ? (ಬಿ) ನಿಜ ಕ್ರೈಸ್ತರು ಏಕೆ ಸ್ಥಿರವಾಗಿ ನಿಲ್ಲಶಕ್ತರಾಗುವರು?
33 ಆದಕಾರಣ ಎಲ್ಲರೂ ಈ ಲೋಕದ ಮಟ್ಟಗಳಿಗನುಸಾರ ಅಲ್ಲ, ದೇವರ ಮಟ್ಟಗಳಿಗನುಸಾರ ನಡೆಯಲಿ. ಗುರುತುಗಳೋಪಾದಿ, ನಿರ್ಭೀತಿಯಿಂದ ಎದ್ದು ಕಾಣಿಸಿಕೊಳ್ಳುವವರಾಗಿರಿ ಮತ್ತು ಮಹಾ ಯೆಶಾಯನಾದ ಯೇಸು ಕ್ರಿಸ್ತನಿಗೆ ಕೊಡಲ್ಪಟ್ಟ ಈ ನೇಮಕವನ್ನು ಮುಂದುವರಿಸಿರಿ: “ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ, ಇವುಗಳನ್ನು ಪ್ರಚುರಗೊಳಿಸುವ” ಜನರಾಗಿ ಭಯಪಡದೆ, ಗುರುತುಗಳೋಪಾದಿ ಎದ್ದು ನಿಲ್ಲುತ್ತ ಮುಂದುವರಿಯಿರಿ. (ಯೆಶಾಯ 61:1, 2; ಲೂಕ 4:17-21) ಅಶ್ಶೂರದ ನೆರೆಯು ಭೂಮಿಯನ್ನು ವ್ಯಾಪಿಸುವಾಗ, ಅದು ನಮ್ಮ ಕತ್ತಿನ ವರೆಗೆ ಬಂದರೂ ನಿಜ ಕ್ರೈಸ್ತರಾದ ನಮ್ಮನ್ನು ಅದು ಕೊಚ್ಚಿಕೊಂಡು ಹೋಗದು. “ದೇವರು ನಮ್ಮ ಕೂಡ” ಇರುವುದರಿಂದ ನಾವು ಸ್ಥಿರವಾಗಿ ನಿಲ್ಲುವೆವು.
[ಪಾದಟಿಪ್ಪಣಿಗಳು]
a ಈ ಪ್ರವಾದನೆಯ ನೆರವೇರಿಕೆಯ ಕುರಿತಾದ ಹೆಚ್ಚಿನ ವಿವರಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ, ಶಾಸ್ತ್ರಗಳ ಒಳನೋಟ, (ಇಂಗ್ಲಿಷ್) ಸಂಪುಟ 1, ಪುಟಗಳು 62 ಮತ್ತು 758ನ್ನು ನೋಡಿ.
b ಅಶ್ಶೂರವನ್ನು, ರೆಕ್ಕೆಗಳನ್ನು ಹರಡಿಸಿ “ದೇಶದ ಅಗಲದಲ್ಲೆಲ್ಲಾ ಮುತ್ತಿಬಿಡುವ” ಪಕ್ಷಿಗೂ ಹೋಲಿಸಲಾಗಿದೆ. ಹೀಗೆ, ದೇಶವು ಹರಡಿರುವಲ್ಲೆಲ್ಲ ಅಶ್ಶೂರ ಸೈನ್ಯವು ಹರಡಿರುವುದು.
[ಪುಟ 103ರಲ್ಲಿರುವ ಚಿತ್ರಗಳು]
ಆಹಾಜನಿಗೆ ಯೆಹೋವನ ಸಂದೇಶವನ್ನು ಒಯ್ದಾಗ ಯೆಶಾಯನು ಶೆಯಾರ್ ಯಾಶೂಬನನ್ನು ತನ್ನೊಂದಿಗೆ ಕರೆದೊಯ್ದನು
[ಪುಟ 111ರಲ್ಲಿರುವ ಚಿತ್ರಗಳು]
ಯೆಶಾಯನು ದೊಡ್ಡ ಹಲಿಗೆಯಲ್ಲಿ “ಮಹೇರ್ ಶಾಲಾಲ್ ಹಾಷ್ ಬಜ್” ಎಂದು ಏಕೆ ಬರೆದನು?