ಅಧ್ಯಾಯ ಇಪ್ಪತ್ಮೂರು
ಯೆಹೋವನಿಗಾಗಿ ಕಾದುಕೊಂಡಿರಿ
1, 2. (ಎ) ಯೆಶಾಯ 30ನೆಯ ಅಧ್ಯಾಯದಲ್ಲಿ ಯಾವ ವಿಷಯವು ಅಡಗಿದೆ? (ಬಿ) ಯಾವ ಪ್ರಶ್ನೆಗಳನ್ನು ನಾವು ಈಗ ಪರಿಗಣಿಸುವೆವು?
ಯೆಶಾಯ 30ನೆಯ ಅಧ್ಯಾಯದಲ್ಲಿ, ದುಷ್ಟರ ವಿರುದ್ಧ ಇನ್ನೂ ಹೆಚ್ಚಿನ ದೈವೋಕ್ತಿಗಳನ್ನು ನಾವು ಓದುತ್ತೇವೆ. ಅದರೊಂದಿಗೆಯೇ, ಯೆಶಾಯನ ಪ್ರವಾದನೆಯ ಈ ಭಾಗವು, ಯೆಹೋವನ ಕೆಲವು ಮನಮುಟ್ಟುವ ಗುಣಗಳನ್ನು ಎತ್ತಿತೋರಿಸುತ್ತದೆ. ಯೆಹೋವನ ಗುಣಲಕ್ಷಣಗಳು ಎಷ್ಟೊಂದು ಸ್ಪಷ್ಟವಾಗಿ ವರ್ಣಿಸಲ್ಪಟ್ಟಿವೆ ಎಂದರೆ, ಅದು ನಾವು ಆತನ ಸಾಂತ್ವನದಾಯಕ ಇರುವನ್ನು ನೋಡುವಂತೆ, ಆತನ ಮಾರ್ಗದರ್ಶಕ ಧ್ವನಿಯನ್ನು ಆಲಿಸುವಂತೆ ಮತ್ತು ಆತನ ಗುಣದಾಯಕ ಸ್ಪರ್ಶವನ್ನು ಅನುಭವಿಸುತ್ತಿರುವಂತೆ ಇದೆ.—ಯೆಶಾಯ 30:20, 21, 26.
2 ಹಾಗಿದ್ದರೂ, ಯೆಶಾಯನ ನಾಡಿಗರು, ಅಂದರೆ ಯೆಹೂದದ ಧರ್ಮಭ್ರಷ್ಟ ನಿವಾಸಿಗಳು ಯೆಹೋವನ ಕಡೆಗೆ ಹಿಂದಿರುಗಲು ನಿರಾಕರಿಸುತ್ತಾರೆ. ಅದರ ಬದಲು, ಅವರು ಮನುಷ್ಯರಲ್ಲಿ ಭರವಸೆಯನ್ನಿಡುತ್ತಾರೆ. ಇದೆಲ್ಲವನ್ನು ನೋಡುವ ಯೆಹೋವನಿಗೆ ಹೇಗನಿಸುತ್ತದೆ? ಮತ್ತು ಇಂದು ಯೆಹೋವನನ್ನು ಕಾದುಕೊಂಡಿರುವಂತೆ ಯೆಶಾಯನ ಪ್ರವಾದನೆಯ ಈ ಭಾಗವು ಕ್ರೈಸ್ತರಿಗೆ ಹೇಗೆ ಸಹಾಯ ಮಾಡುತ್ತದೆ? (ಯೆಶಾಯ 30:18) ನಾವು ಅದನ್ನು ಚರ್ಚಿಸೋಣ.
ಮೂರ್ಖತನ ಮತ್ತು ಆಪತ್ತು
3. ಯಾವ ಸಂಚನ್ನು ಯೆಹೋವನು ಬಯಲುಪಡಿಸುತ್ತಾನೆ?
3 ಅಶ್ಶೂರದ ನೊಗದಿಂದ ತಪ್ಪಿಸಿಕೊಳ್ಳಲು ಯೆಹೂದದ ಮುಖಂಡರು ಈಗ ಸ್ವಲ್ಪ ಸಮಯದಿಂದ ಗುಪ್ತವಾಗಿ ಸಂಚುಹೂಡುತ್ತಿದ್ದಾರೆ. ಆದರೆ ಯೆಹೋವನು ಇದೆಲ್ಲವನ್ನು ಗಮನಿಸುತ್ತಿದ್ದಾನೆ. ಅವರ ಸಂಚನ್ನು ಈಗ ಆತನು ಬಯಲುಮಾಡುತ್ತಾನೆ: “ಯೆಹೋವನು ಹೀಗೆ ನುಡಿಯುತ್ತಾನೆ:—ದ್ರೋಹಿಗಳಾದ [ನನ್ನ] ಮಕ್ಕಳ ಗತಿಯನ್ನು ಏನು ಹೇಳಲಿ! ಇವರು ನನ್ನನ್ನು ಕೇಳದೆ ಒಂದು ಆಲೋಚನೆಯನ್ನು ಸಾಗಿಸಿ ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೆಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ; . . . ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿದ್ದಾರೆ.”—ಯೆಶಾಯ 30:1, 2ಬಿ.
4. ದೇವರ ದಂಗೆಕೋರ ಜನರು, ಐಗುಪ್ತವನ್ನು ದೇವರ ಸ್ಥಾನದಲ್ಲಿರಿಸಿರುವುದು ಹೇಗೆ?
4 ಅವರ ಗುಟ್ಟು ರಟ್ಟಾದುದನ್ನು ಕೇಳಿ ಈ ಮುಖಂಡರ ಹೃದಯವು ಬಾಯಿಗೆ ಬಂದಂತಾಗುತ್ತದೆ! ಐಗುಪ್ತದೊಂದಿಗೆ ಮೈತ್ರಿಯನ್ನು ಬೆಳೆಸುವ ಉದ್ದೇಶದಿಂದ ಅಲ್ಲಿಗೆ ಹೋಗುವುದು ಅಶ್ಶೂರದ ವಿರುದ್ಧ ಹಗೆಸಾಧನೆಗಿಂತಲೂ ಹೆಚ್ಚಿನದ್ದಾಗಿದೆ ಮಾತ್ರವಲ್ಲ, ಯೆಹೋವ ದೇವರ ವಿರುದ್ಧ ದಂಗೆಯೂ ಆಗಿದೆ. ರಾಜ ದಾವೀದನು ಆಳುತ್ತಿದ್ದಾಗ, ಯೆಹೋವನೇ ಆ ಜನಾಂಗದ ಆಶ್ರಯದುರ್ಗವಾಗಿದ್ದನು ಮತ್ತು ‘ಆತನ ರೆಕ್ಕೆಗಳ ಮರೆಯಲ್ಲಿಯೇ’ ಅವರು ಆಶ್ರಯಪಡೆದರು. (ಕೀರ್ತನೆ 27:1; 36:7) ಆದರೆ ಈಗ “ಫರೋಹನ ಆಶ್ರಯವನ್ನು ಪಡೆದು ಐಗುಪ್ತವನ್ನು ಮರೆಹೊಗಬೇಕೆಂದು” ಅವರು ಬಯಸುತ್ತಾರೆ. (ಯೆಶಾಯ 30:2ಎ) ಅವರು ಐಗುಪ್ತವನ್ನು ದೇವರ ಸ್ಥಾನದಲ್ಲಿರಿಸಿದ್ದಾರೆ! ಎಂತಹ ದ್ರೋಹ!—ಓದಿ ಯೆಶಾಯ 30:3-5.
5, 6. (ಎ) ಐಗುಪ್ತದೊಂದಿಗಿನ ಮೈತ್ರಿ ಸಂಬಂಧವು ಏಕೆ ಒಂದು ಘೋರ ತಪ್ಪಾಗಿದೆ? (ಬಿ) ದೇವಜನರು ಈ ಮುಂಚೆ ಕೈಗೊಂಡ ಯಾವ ಪ್ರಯಾಣವು, ಈ ಐಗುಪ್ತ ಪ್ರಯಾಣದ ಮೂರ್ಖತನವನ್ನು ಎತ್ತಿತೋರಿಸುತ್ತದೆ?
5 ಐಗುಪ್ತದ ಸಂಚಾರವು ಒಂದು ಆಕಸ್ಮಿಕ ಭೇಟಿ ಅಲ್ಲವೇ ಅಲ್ಲವೆಂಬುದನ್ನು ಸೂಚಿಸುತ್ತಾ, ಯೆಶಾಯನು ಹೆಚ್ಚಿನ ವಿವರಗಳನ್ನು ನೀಡುತ್ತಾನೆ. “ದಕ್ಷಿಣ ಸೀಮೆಯ ನೀರಾನೆಯ ವಿಷಯವಾದ ದೈವೋಕ್ತಿ. [ರಾಯಭಾರಿಗಳು] ಕತ್ತೆಗಳ ಬೆನ್ನುಗಳ ಮೇಲೆ ತಮ್ಮ ಧನವನ್ನೂ ಒಂಟೆಗಳ ಡುಬ್ಬಗಳ ಮೇಲೆ ತಮ್ಮ ದ್ರವ್ಯವನ್ನೂ ಹೊರಿಸಿಕೊಂಡು ಮೃಗೇಂದ್ರ, ಸಿಂಹ, ಕೃಷ್ಣ, ಸರ್ಪ, ಹಾರುವ ಉರಿಮಂಡಲ ಇವುಗಳಿಂದ ಭಯಂಕರವಾಗಿಯೂ ಶ್ರಮಸಂಕಟಗಳನ್ನುಂಟುಮಾಡುವದಾಗಿಯೂ ಇರುವ ದೇಶದ ಮಾರ್ಗವಾಗಿ . . . ಹೋಗುತ್ತಾರೆ.” (ಯೆಶಾಯ 30:6ಎ) ಸ್ಪಷ್ಟವಾಗಿಯೇ, ಇದು ಚೆನ್ನಾಗಿ ಆಯೋಜಿಸಲ್ಪಟ್ಟ ಒಂದು ಪ್ರಯಾಣವಾಗಿದೆ. ರಾಯಭಾರಿಗಳು ಒಂಟೆಗಳ ಮತ್ತು ಕತ್ತೆಗಳ ಮೇಲೆ ಬೆಲೆಬಾಳುವ ಸರಕುಗಳನ್ನು ಹೇರಿಕೊಂಡು ಐಗುಪ್ತಕ್ಕೆ ಪ್ರಯಾಣ ಬೆಳೆಸುತ್ತಾರೆ. ಇವರು ಹಾದುಹೋಗಬೇಕಾದ ಬಂಜರು ಭೂಮಿಯು, ಗರ್ಜಿಸುವ ಸಿಂಹಗಳಿಂದ ಮತ್ತು ವಿಷಭರಿತ ಹಾವುಗಳಿಂದ ಮುತ್ತಿರುತ್ತದೆ. ಕೊನೆಗೂ ಈ ರಾಯಭಾರಿಗಳು ತಮ್ಮ ಗಮ್ಯಸ್ಥಾನವನ್ನು ತಲಪಿ, ತಾವು ತಂದಿದ್ದ ಅಮೂಲ್ಯ ವಸ್ತುಗಳನ್ನು ಐಗುಪ್ತ್ಯರಿಗೆ ನೀಡುತ್ತಾರೆ. ಹೀಗೆ, ತಾವು ಸಂರಕ್ಷಣೆಯನ್ನೇ ಖರೀದಿಸಿದ್ದೇವೆಂದು ಅವರು ನೆನಸಿಕೊಳ್ಳುತ್ತಾರೆ. ಆದರೆ, ಯೆಹೋವನು ಹೇಳುವುದು: ಇವರು “ನಿಷ್ಪ್ರಯೋಜನವಾದ ಜನಾಂಗದ ಬಳಿಗೆ ಹೋಗುತ್ತಾರೆ. ಐಗುಪ್ತದ ಸಹಾಯವು ವ್ಯರ್ಥವೇ ವ್ಯರ್ಥ; ಆದದರಿಂದ ನಾನು ಅದಕ್ಕೆ ಸುಮ್ಮನೆ ಬಿದ್ದಿರುವ ಜಂಬದ ಮೃಗವೆಂದು [“ರಹಬೆಂದು,” ಪಾದಟಿಪ್ಪಣಿ] ಹೆಸರಿಟ್ಟಿದ್ದೇನೆ.” (ಯೆಶಾಯ 30:6ಬಿ, 7) ಒಂದು “ಜಂಬದ ಮೃಗ”ವಾದ ‘ರಹಬ್’ ಐಗುಪ್ತವನ್ನು ಸಂಕೇತಿಸಿತು. (ಯೆಶಾಯ 51:9, 10) ಅದು ಕೇವಲ ವಾಗ್ದಾನಗಳನ್ನು ಮಾಡುತ್ತದೆ, ಏನನ್ನೂ ನೆರವೇರಿಸುವುದಿಲ್ಲ. ಅಂತಹ ದೇಶದೊಂದಿಗೆ ಯೆಹೂದದ ಮೈತ್ರಿಯು ಒಂದು ಘೋರವಾದ ತಪ್ಪೇ ಸರಿ.
6 ಈ ರಾಯಭಾರಿಗಳ ಯಾತ್ರೆಯನ್ನು ಯೆಶಾಯನು ವರ್ಣಿಸುತ್ತಾ ಹೋದಂತೆ, ಮೋಶೆಯ ದಿನದಲ್ಲಿ ಕೈಗೊಳ್ಳಲ್ಪಟ್ಟ ತದ್ರೀತಿಯ ಯಾತ್ರೆಯನ್ನು ಅವನ ಕೇಳುಗರು ನೆನಪಿಸಿಕೊಳ್ಳಬಹುದು. ಅವರ ಪೂರ್ವಜರು ಕೂಡ ಅದೇ “ಘೋರವಾದ ಮಹಾರಣ್ಯ”ದ ಮಧ್ಯೆ ಹಾದುಹೋದರು. (ಧರ್ಮೋಪದೇಶಕಾಂಡ 8:14-16) ಆದರೆ ಮೋಶೆಯ ದಿನದಲ್ಲಿ ಇಸ್ರಾಯೇಲ್ಯರು ಕೈಗೊಂಡ ಆ ಪ್ರಯಾಣವು, ಅವರನ್ನು ಐಗುಪ್ತದಿಂದ ಮತ್ತು ದಾಸತ್ವದಿಂದ ಹೊರಗೆ ನಡೆಸಿದ ಪ್ರಯಾಣವಾಗಿತ್ತು. ಈಗಲಾದರೊ, ರಾಯಭಾರಿಗಳು ಐಗುಪ್ತಕ್ಕೆ ಅಂದರೆ ಮತ್ತೆ ಅಧೀನತೆಗೆ ಕಾಲಿರಿಸುತ್ತಿದ್ದಾರೆ. ಎಂತಹ ಮೂರ್ಖತನ! ನಾವೆಂದಿಗೂ ಅಂತಹ ಮೂರ್ಖ ನಿರ್ಣಯವನ್ನು ಮಾಡದಿರೋಣ. ಮತ್ತು ನಮಗಿರುವ ಆತ್ಮಿಕ ಸ್ವಾತಂತ್ರ್ಯವನ್ನು ತೊರೆದು ದಾಸತ್ವಕ್ಕೆ ಬಲಿಬೀಳದಿರೋಣ!—ಹೋಲಿಸಿ ಗಲಾತ್ಯ 5:1.
ಪ್ರವಾದಿಯ ಸಂದೇಶಕ್ಕೆ ವಿರೋಧ
7. ಯೆಹೋವನು ಯೆಹೂದಕ್ಕೆ ನೀಡಿದ ಎಚ್ಚರಿಕೆಯನ್ನು ಬರೆದಿಡುವಂತೆ ಯೆಶಾಯನಿಗೆ ಹೇಳುವುದೇಕೆ?
7 ಯೆಶಾಯನು ಈಗ ತಾನೇ ಪ್ರಕಟಿಸಿದ ಸಂದೇಶವು “ಮುಂದಿನ ಕಾಲದಲ್ಲಿ ಶಾಶ್ವತ ಸಾಕ್ಷಿಯಾಗಿರುವಂತೆ” ಅದನ್ನು ಬರೆದಿಡೆಂದು ಯೆಹೋವನು ಅವನಿಗೆ ಹೇಳುತ್ತಾನೆ. (ಯೆಶಾಯ 30:8) ಯೆಹೋವನ ಬದಲಿಗೆ ಮಾನವ ಸಂಬಂಧಗಳ ಮೇಲೆ ಭರವಸೆಯಿಡುವುದನ್ನು ದೇವರು ಮೆಚ್ಚುವುದಿಲ್ಲವೆಂಬ ವಿಷಯವು, ಇಂದಿನ ನಮ್ಮ ಸಂತತಿಯನ್ನೂ ಸೇರಿಸಿ ಮುಂದಿನ ಸಂತತಿಗಳ ಪ್ರಯೋಜನಕ್ಕಾಗಿ ಬರೆದಿಡಲ್ಪಡಬೇಕು. (2 ಪೇತ್ರ 3:1-4) ಆದರೆ ಲಿಖಿತ ದಾಖಲೆಗಾಗಿ ಅದಕ್ಕಿಂತಲೂ ಮಹತ್ವವಾದ ಕಾರಣವಿದೆ. “ಇವರು ದ್ರೋಹದ ಜನಾಂಗದವರು, ಮೋಸದ ಸಂತಾನದವರು, ಯೆಹೋವನ ಉಪದೇಶವನ್ನು ಕೇಳಲೊಲ್ಲದ ಸಂತತಿಯವರಷ್ಟೆ.” (ಯೆಶಾಯ 30:9) ಜನರು ದೇವರ ಸಲಹೆಯನ್ನು ತಿರಸ್ಕರಿಸಿದ್ದಾರೆ. ಆದಕಾರಣ ಅದನ್ನು ಬರೆದಿಡಬೇಕು. ಇಲ್ಲದಿದ್ದರೆ ತಮಗೆ ಸೂಕ್ತವಾದ ಯಾವ ಎಚ್ಚರಿಕೆಯನ್ನೂ ನೀಡಲಿಲ್ಲವೆಂದು ಇವರು ಹೇಳಬಹುದು.—ಜ್ಞಾನೋಕ್ತಿ 28:9; ಯೆಶಾಯ 8:1, 2.
8, 9. (ಎ) ಯಾವ ವಿಧದಲ್ಲಿ ಯೆಹೂದದ ಮುಖಂಡರು ಯೆಹೋವನ ಪ್ರವಾದಿಗಳನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಾರೆ? (ಬಿ) ತನ್ನನ್ನು ದಿಗಿಲುಗೊಳಿಸುವುದು ಅಷ್ಟೇನೂ ಸುಲಭವಲ್ಲವೆಂಬುದನ್ನು ಯೆಶಾಯನು ಹೇಗೆ ತೋರಿಸುತ್ತಾನೆ?
8 ಈ ಜನರ ದಂಗೆಕೋರ ಮನೋಭಾವವನ್ನು ಒಂದು ಉದಾಹರಣೆಯ ಮೂಲಕ ಯೆಶಾಯನು ತಿಳಿಸುತ್ತಾನೆ. ಇವರು “ದಿವ್ಯ ದರ್ಶಿಗಳನ್ನು ಕುರಿತು—ನಿಮಗೆ ದರ್ಶನವಾಗದಿರಲಿ ಅನ್ನುತ್ತಾರೆ; ಮತ್ತು ಸಾಕ್ಷಾತ್ಕಾರಿಗಳಿಗೆ—ನಮಗಾಗಿ ನ್ಯಾಯವಾದವುಗಳನ್ನು ಸಾಕ್ಷಾತ್ಕರಿಸಬೇಡಿರಿ, ನಯವಾದವುಗಳನ್ನು ನಮಗೆ ನುಡಿಯಿರಿ, ಮಾಯವಾದವುಗಳನ್ನೇ ಸಾಕ್ಷಾತ್ಕರಿಸಿರಿ.” (ಯೆಶಾಯ 30:10) ನಂಬಿಗಸ್ತ ಪ್ರವಾದಿಗಳು “ನ್ಯಾಯವಾದವುಗಳನ್ನು” ಇಲ್ಲವೆ ಸತ್ಯವಾದವುಗಳನ್ನು ಮಾತಾಡದೆ, “ನಯವಾದವುಗಳನ್ನು” ಮತ್ತು “ಮಾಯವಾದವುಗಳನ್ನು” ಇಲ್ಲವೆ ಕಟ್ಟುಕಥೆಗಳನ್ನು ಮಾತಾಡುವಂತೆ ಅಪ್ಪಣೆನೀಡುವ ಮೂಲಕ, ತಮ್ಮ ಕಿವಿಗಳಿಗೆ ಹಿತವೆನಿಸುವುದನ್ನೇ ಅವರು ಕೇಳಬಯಸುತ್ತಾರೆ ಎಂಬುದನ್ನು ಈ ಮುಖಂಡರು ತೋರಿಸುತ್ತಾರೆ. ಅವರನ್ನು ಸದಾ ಹೊಗಳಬೇಕು, ಎಂದೂ ತೆಗಳಬಾರದು. ಯಾರು ತಮ್ಮ ಇಷ್ಟಕ್ಕನುಸಾರ ಪ್ರವಾದಿಸಲು ಒಪ್ಪುವುದಿಲ್ಲವೊ ಅಂತಹ ಪ್ರವಾದಿಯು ‘ಮಾರ್ಗದಿಂದ ತೊಲಗಿ; . . . ದಾರಿಗೆ ಓರೆಯಾಗಬೇಕು.’ (ಯೆಶಾಯ 30:11ಎ) ಅವನು ಕಿವಿಗೆ ಇಂಪಾದ ವಿಷಯಗಳನ್ನು ಮಾತಾಡಬೇಕು ಇಲ್ಲವೆ ಸಾರುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಬೇಕು!
9 ಯೆಶಾಯನ ವಿರೋಧಿಗಳು ಒತ್ತಾಯಿಸುವುದು: “ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ.” (ಯೆಶಾಯ 30:11ಬಿ) ಯೆಶಾಯನು “ಇಸ್ರಾಯೇಲ್ಯರ ಸದಮಲಸ್ವಾಮಿ”ಯಾದ ಯೆಹೋವನ ನಾಮದಲ್ಲಿ ಮಾತಾಡುವುದನ್ನು ನಿಲ್ಲಿಸಿಬಿಡಲಿ! ಯೆಹೋವನ ಈ ಬಿರುದು ತಾನೇ ಅವರಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಏಕೆಂದರೆ ಯೆಹೋವನ ಉಚ್ಚ ಮಟ್ಟಗಳು ಅವರ ಹೀನಾಯವಾದ ಸ್ಥಿತಿಯನ್ನು ಬಯಲುಪಡಿಸುತ್ತವೆ. ಇದಕ್ಕೆ ಯೆಶಾಯನು ಯಾವ ಉತ್ತರವನ್ನು ನೀಡುತ್ತಾನೆ? ಅವನು ಪ್ರಕಟಿಸುವುದು: “ಇಸ್ರಾಯೇಲ್ಯರ ಸದಮಲಸ್ವಾಮಿಯು ಹೀಗನ್ನುತ್ತಾನೆ.” (ಯೆಶಾಯ 30:12ಎ) ತನ್ನ ವಿರೋಧಿಗಳು ದ್ವೇಷಿಸುವಂತಹ ಮಾತುಗಳನ್ನೇ ಆಡಲು ಯೆಶಾಯನು ಹಿಂಜರಿಯುವುದಿಲ್ಲ. ಅವನನ್ನು ಭಯಭೀತನನ್ನಾಗಿಸಲು ಸಾಧ್ಯವಿಲ್ಲ. ಇದು ನಮಗೆಂತಹ ಉತ್ತಮ ಮಾದರಿ! ದೇವರ ಸಂದೇಶವನ್ನು ಪ್ರಕಟಿಸುವ ವಿಷಯದಲ್ಲಿ, ಕ್ರೈಸ್ತರು ಎಂದಿಗೂ ರಾಜಿಮಾಡಿಕೊಳ್ಳಬಾರದು. (ಅ. ಕೃತ್ಯಗಳು 5:27-29) ಯೆಶಾಯನಂತೆ ಇವರೂ, ‘ಯೆಹೋವನು ಹೀಗನ್ನುತ್ತಾನೆ’ ಎಂದು ಪ್ರಕಟಿಸುತ್ತಾ ಇರುತ್ತಾರೆ!
ದಂಗೆಯ ಪರಿಣಾಮಗಳು
10, 11. ಯೆಹೂದದ ದಂಗೆಯಿಂದ ಆಗುವ ಪರಿಣಾಮಗಳಾವುವು?
10 ಯೆಹೂದವು ದೇವರ ವಾಕ್ಯವನ್ನು ತ್ಯಜಿಸಿದೆ, ಸುಳ್ಳನ್ನು ನಂಬಿದೆ ಮತ್ತು “ಕುಯುಕ್ತಿಗಳ” ಮೇಲೆ ಭರವಸೆಯಿಟ್ಟಿದೆ. (ಯೆಶಾಯ 30:12ಬಿ) ಇದರಿಂದಾಗುವ ಪರಿಣಾಮಗಳಾವುವು? ಆ ಜನಾಂಗದ ಇಚ್ಛೆಗೆ ವಿರುದ್ಧವಾಗಿ, ಯೆಹೋವನು ಅಲ್ಲೇ ನಿಲ್ಲುತ್ತಾನೆ, ಆದರೆ ಆ ಜನಾಂಗವು ಅಲ್ಲೆಲ್ಲೂ ನಿಲ್ಲದೆ ಕಣ್ಮರೆಯಾಗಿಬಿಡುವುದು! ಇದು ಥಟ್ಟನೆ ಹಾಗೂ ಸಂಪೂರ್ಣವಾಗಿ ಸಂಭವಿಸುತ್ತದೆ. ಇದನ್ನೇ ಒಂದು ದೃಷ್ಟಾಂತದ ಮೂಲಕ ಒತ್ತಿಹೇಳುತ್ತಾ, ಯೆಶಾಯನು ಆ ಜನಾಂಗದ ದಂಗೆಕೋರತನವನ್ನು ವಿವರಿಸುತ್ತಾನೆ: “ನೀವು ಬಿರುಕುಬಿಟ್ಟಿರುವ ಎತ್ತರದ ಗೋಡೆಯಂತಿದ್ದೀರಿ. ಆ ಗೋಡೆಯು ಇದ್ದಕ್ಕಿದ್ದಂತೆ ನೆಲಕ್ಕುರುಳಿ ಚೂರುಚೂರಾಗುವದು.” (ಯೆಶಾಯ 30:13, ಪರಿಶುದ್ಧ ಬೈಬಲ್a) ಗೋಡೆಯಲ್ಲಿ ಕಾಣಿಸಿಕೊಳ್ಳುವ ಬಿರುಕು ಹೇಗೆ ದೊಡ್ಡದಾಗುತ್ತಾ ಹೋಗಿ ಒಂದು ದಿನ ಆ ಗೋಡೆಯು ನೆಲಕ್ಕುರುಳುವಂತೆ ಮಾಡುವುದೊ, ಹಾಗೆಯೇ ಯೆಶಾಯನ ಸಮಕಾಲೀನರ ಹೆಚ್ಚುತ್ತಿರುವ ದಂಗೆಕೋರತನವು ಆ ಜನಾಂಗದ ಕುಸಿತಕ್ಕೆ ಕಾರಣವಾಗುವುದು.
11 ಬರಲಿರುವ ನಾಶನವು ಸಂಪೂರ್ಣವಾಗಿರುವುದು ಎಂಬುದನ್ನು ತೋರಿಸಲು ಯೆಶಾಯನು ಮತ್ತೊಂದು ದೃಷ್ಟಾಂತವನ್ನು ನೀಡುತ್ತಾನೆ: “ಉರಿಯಿಂದ ಕೆಂಡವನ್ನು ತೆಗೆಯುವದಕ್ಕಾಗಲಿ, ಬಾವಿಯಿಂದ ನೀರನ್ನು ಗೋಚುವದಕ್ಕಾಗಲಿ ಬೋಕಿಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದುಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.” (ಯೆಶಾಯ 30:14) ಯೆಹೂದದ ನಾಶನವು ಎಷ್ಟು ಸಂಪೂರ್ಣವಾಗಿರುವುದೆಂದರೆ, ಅಮೂಲ್ಯವಾದದ್ದೇನೂ ಅಲ್ಲಿ ಉಳಿದಿರಲಾರದು. ಉರಿಯಿಂದ ಕೆಂಡವನ್ನಾಗಲಿ ಇಲ್ಲವೆ ಬಾವಿಯಿಂದ ನೀರನ್ನಾಗಲಿ ತೆಗೆಯಲು, ಒಂದು ಮಡಕೆಯ ಚೂರು ಕೂಡ ಅಲ್ಲಿ ಸಿಗಲಾರದು. ಎಂತಹ ಅವಮಾನಕರವಾದ ದುರಂತ! ಇಂದು ಸತ್ಯಾರಾಧನೆಯ ವಿರುದ್ಧ ದಂಗೆಯೇಳುವವರ ನಾಶನವು ಸಹ ಅಷ್ಟೇ ಥಟ್ಟನೆಯೂ ಅಷ್ಟೇ ಸಂಪೂರ್ಣವಾಗಿಯೂ ಇರುವುದು.—ಇಬ್ರಿಯ 6:4-8; 2 ಪೇತ್ರ 2:1.
ಯೆಹೋವನ ಪ್ರಸ್ತಾಪ ತಳ್ಳಿಹಾಕಲ್ಪಟ್ಟದ್ದು
12. ಯೆಹೂದದ ಜನರು ನಾಶನದಿಂದ ಹೇಗೆ ತಪ್ಪಿಸಿಕೊಳ್ಳಬಲ್ಲರು?
12 ಆದರೆ ಯೆಶಾಯನ ಕೇಳುಗರಿಗಾದರೊ ನಾಶನವು ಅನಿವಾರ್ಯವಲ್ಲ. ಅವರು ಅದರಿಂದ ತಪ್ಪಿ ಉಳಿಯಬಹುದು. ಪ್ರವಾದಿಯು ವಿವರಿಸುವುದು: “ಇಸ್ರಾಯೇಲ್ಯರ ಸದಮಲಸ್ವಾಮಿಯಾಗಿರುವ ಕರ್ತನಾದ ಯೆಹೋವನು—ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವದು; ಶಾಂತರಾಗಿ ಭರವಸದಿಂದಿರುವದೇ ನಿಮಗೆ ಬಲ ಎಂದು ಹೇಳಿ”ದನು. (ಯೆಶಾಯ 30:15ಎ) ಯೆಹೋವನ ಜನರು ‘ಸುಮ್ಮನಿರುವ’ ಮೂಲಕ ಇಲ್ಲವೆ ಮಾನವ ಮೈತ್ರಿಗಳ ಸಹಾಯದಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಪ್ರಯತ್ನಿಸದೆ ಇರುವ ಮೂಲಕ ನಂಬಿಕೆಯನ್ನು ತೋರಿಸಿದರೆ ಮತ್ತು ಭಯಕ್ಕೆ ಇಂಬುಕೊಡದೆ ದೇವರ ರಕ್ಷಣಾತ್ಮಕ ಶಕ್ತಿಯಲ್ಲಿ ಭರವಸೆಯನ್ನು ಪ್ರದರ್ಶಿಸುತ್ತಾ ಇಲ್ಲವೆ ‘ಶಾಂತರಾಗಿರುತ್ತಾ’ ಇದ್ದರೆ, ಯೆಹೋವನು ಅವರನ್ನು ಕಾಪಾಡಲು ಸಿದ್ಧನಾಗಿದ್ದಾನೆ. ಆದರೆ “ನೀವು ಒಪ್ಪಿಕೊಂಡಿಲ್ಲ” ಎಂದು ಯೆಶಾಯನು ಆ ಜನರಿಗೆ ಹೇಳುತ್ತಾನೆ.—ಯೆಶಾಯ 30:15ಬಿ.
13. ಯೆಹೂದದ ಮುಖಂಡರು ಯಾವುದರಲ್ಲಿ ಭರವಸೆಯಿಡುತ್ತಾರೆ, ಮತ್ತು ಇಂತಹ ಭರವಸೆಯು ನ್ಯಾಯವಾದದ್ದೊ?
13 ತದನಂತರ ಯೆಶಾಯನು ಸವಿವರವಾಗಿ ಹೇಳುವುದು: “ನೀವು—ಬೇಡವೇ ಬೇಡ, ಕುದುರೆಗಳ ಮೇಲೆ ಓಡುವೆವು ಎಂದುಕೊಂಡದರಿಂದ ಓಡೇ ಹೋಗುವಿರಿ; ನೀವು—ವೇಗವಾಗಿ ಸವಾರಿಮಾಡುವೆವು ಎಂದುಕೊಂಡದರಿಂದ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.” (ಯೆಶಾಯ 30:16) ಯೆಹೋವನ ಬದಲಿಗೆ ವೇಗವಾದ ಕುದುರೆಗಳೇ ತಮಗೆ ರಕ್ಷಣೆಯನ್ನು ನೀಡುವವೆಂದು ಯೆಹೂದದ ನಿವಾಸಿಗಳು ನೆನಸುತ್ತಾರೆ. (ಧರ್ಮೋಪದೇಶಕಾಂಡ 17:16; ಜ್ಞಾನೋಕ್ತಿ 21:31) ಆದರೆ ಅವರ ಭರವಸೆಯು ಕೇವಲ ಒಂದು ಭ್ರಮೆಯಾಗಿರುವುದು. ಏಕೆಂದರೆ ಬೇಗನೆ ಅವರ ವೈರಿಗಳು ಅವರನ್ನು ಅಟ್ಟಿಕೊಂಡು ಬರುವರು. ದೊಡ್ಡ ಸೈನ್ಯವಿದ್ದರೂ ಯಾವ ಪ್ರಯೋಜನವೂ ಆಗಲಾರದು. “ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು; ಐವರು ಬೆದರಿಸುವದರಿಂದ ನೀವು ಓಡಿಹೋಗುವಿರಿ.” (ಯೆಶಾಯ 30:17ಎ) ಬೆರಳೆಣಿಕೆಯಷ್ಟು ವೈರಿಗಳು ಕೂಗಿಕೊಂಡರೆ ಸಾಕು, ಯೆಹೂದದ ಸೈನ್ಯವು ದಿಗಿಲುಗೊಂಡು ಓಡಿಹೋಗುವುದು.b ಆಮೇಲೆ, ಶೇಷವರ್ಗವು ಮಾತ್ರ ಉಳಿಯುವುದು. ಅದು “ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಗಣ ಕಂಬದಂತೆಯೂ [ಒಂಟಿಯಾಗಿ] ಉಳಿಯು”ವುದು. (ಯೆಶಾಯ 30:17ಬಿ) ಪ್ರವಾದನೆಯಲ್ಲಿ ತಿಳಿಸಲ್ಪಟ್ಟಂತೆಯೇ, ಸಾ.ಶ.ಪೂ. 607ರಲ್ಲಿ ಯೆರೂಸಲೇಮು ನಾಶವಾದಾಗ, ಒಂದು ಶೇಷವರ್ಗವು ಮಾತ್ರ ಉಳಿಯಿತು.—ಯೆರೆಮೀಯ 25:8-11.
ಖಂಡನೆಯ ಮಧ್ಯದಲ್ಲಿಯೂ ಸಾಂತ್ವನ
14, 15. ಯೆಶಾಯ 30:18ರ ಮಾತುಗಳು ಪುರಾತನ ಯೆಹೂದದ ನಿವಾಸಿಗಳಿಗೆ ಮತ್ತು ಇಂದಿನ ಸತ್ಯ ಕ್ರೈಸ್ತರಿಗೆ ಯಾವ ಸಾಂತ್ವನವನ್ನು ನೀಡುತ್ತವೆ?
14 ಈ ಗಂಭೀರವಾದ ಮಾತುಗಳು ಯೆಶಾಯನ ಕೇಳುಗರ ಕಿವಿಗಳಲ್ಲಿ ಇನ್ನೂ ಮರುಧ್ವನಿಸುತ್ತಿರುವಾಗಲೇ, ಅವನ ಸಂದೇಶದ ಸ್ವರವು ಬದಲಾಗುತ್ತದೆ. ಕೇಡಿನ ಬೆದರಿಕೆಯು ಆಶೀರ್ವಾದಗಳ ವಾಗ್ದಾನಕ್ಕೆ ದಾರಿಮಾಡಿಕೊಡುತ್ತದೆ. “ಹೀಗಿರಲು ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು; ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.” (ಯೆಶಾಯ 30:18) ಎಂತಹ ಹುರಿದುಂಬಿಸುವ ಮಾತುಗಳು! ಯೆಹೋವನು ತನ್ನ ಮಕ್ಕಳಿಗೆ ಸಹಾಯ ಮಾಡಲು ಹಾತೊರೆಯುವ ಸಹಾನುಭೂತಿಯುಳ್ಳ ಪಿತನಂತಿದ್ದಾನೆ. ಕರುಣೆಯನ್ನು ತೋರಿಸುವುದರಲ್ಲಿ ಆತನು ಹರ್ಷಿಸುತ್ತಾನೆ.—ಕೀರ್ತನೆ 103:13; ಯೆಶಾಯ 55:7.
15 ಈ ಪುನರಾಶ್ವಾಸನೆಯ ಮಾತುಗಳು, ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನದಿಂದ ಬದುಕಿ ಉಳಿಯಲು ಅನುಮತಿಸಲ್ಪಟ್ಟ ಯೆಹೂದಿ ಶೇಷವರ್ಗಕ್ಕೆ ಮತ್ತು ಸಾ.ಶ.ಪೂ. 537ರಲ್ಲಿ ವಾಗ್ದತ್ತ ದೇಶಕ್ಕೆ ಹಿಂದಿರುಗಿದ ಕೆಲವರಿಗೆಯೇ ಅನ್ವಯಿಸುತ್ತವೆ. ಆದರೆ, ಪ್ರವಾದಿಯ ಈ ಮಾತುಗಳು ಇಂದಿನ ಕ್ರೈಸ್ತರನ್ನೂ ಸಂತೈಸುತ್ತವೆ. ಯೆಹೋವನು ನಮ್ಮ ಪರವಾಗಿ ‘ಕಾಣಿಸಿಕೊಂಡು’ ಈ ದುಷ್ಟ ಲೋಕಕ್ಕೆ ಅಂತ್ಯವನ್ನು ತರುವನೆಂಬುದರ ಕುರಿತು ನಾವು ಜ್ಞಾಪಿಸಲ್ಪಟ್ಟಿದ್ದೇವೆ. ಯೆಹೋವನು “ನ್ಯಾಯಸ್ವರೂಪನಾದ ದೇವ”ನಾಗಿರುವುದರಿಂದ, ಸೈತಾನನ ಲೋಕವು ನಿಗದಿತ ಸಮಯಕ್ಕಿಂತಲೂ ಒಂದು ದಿನ ಹೆಚ್ಚು ಉಳಿಯಲಾರದೆಂಬುದರ ಬಗ್ಗೆ ನಂಬಿಗಸ್ತ ಆರಾಧಕರು ಖಾತ್ರಿಯಿಂದಿರಬಲ್ಲರು. ಆದುದರಿಂದ, “ಆತನಿಗಾಗಿ ಕಾದಿರುವವರೆಲ್ಲರೂ” ಆನಂದಪಡಲು ಬಹಳಷ್ಟು ಕಾರಣಗಳಿವೆ.
ಪ್ರಾರ್ಥನೆಗಳನ್ನು ಉತ್ತರಿಸುವ ಮೂಲಕ ಯೆಹೋವನು ತನ್ನ ಜನರನ್ನು ಸಂತೈಸುತ್ತಾನೆ
16. ಎದೆಗುಂದಿದವರಿಗೆ ಯೆಹೋವನು ಹೇಗೆ ಸಾಂತ್ವನ ನೀಡುತ್ತಾನೆ?
16 ಹಾಗಿದ್ದರೂ, ತಾವು ನೆನಸಿದಷ್ಟು ಬೇಗನೆ ಬಿಡುಗಡೆಯು ಬಾರದೆ ಇರುವ ಕಾರಣ ಕೆಲವರು ನಿರಾಶರಾಗಬಹುದು. (ಜ್ಞಾನೋಕ್ತಿ 13:12; 2 ಪೇತ್ರ 3:9) ಅಂತಹ ಭಾವನೆಯುಳ್ಳವರು, ಯೆಶಾಯನ ಮುಂದಿನ ಮಾತುಗಳಿಂದ ಸಾಂತ್ವನಪಡೆದುಕೊಳ್ಳಬಹುದು. ಅವು ಯೆಹೋವನ ವ್ಯಕ್ತಿತ್ವದ ಒಂದು ವಿಶಿಷ್ಟ ಅಂಶವನ್ನು ಎತ್ತಿತೋರಿಸುತ್ತವೆ. “ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ, ನೀವು ಇನ್ನು ಅಳುವದೇ ಇಲ್ಲ; ನೀವು ಕೂಗಿಕೊಂಡ ಶಬ್ದವನ್ನು ಆತನು ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವನು; ಕೇಳಿದ ಕೂಡಲೆ ನಿಮಗೆ ಸದುತ್ತರವನ್ನು ದಯಪಾಲಿಸುವನು.” (ಯೆಶಾಯ 30:19) ಯೆಶಾಯನು ಹೀಬ್ರು ಭಾಷೆಯಲ್ಲಿ ಬರೆಯುತ್ತಿದ್ದಾಗ, 18ನೆಯ ವಚನದಲ್ಲಿರುವ “ನಿಮ್ಮ” ಎಂಬ ಬಹುವಚನ ರೂಪಕ್ಕೆ 19ನೆಯ ವಚನದಲ್ಲಿ “ನಿನ್ನ” ಎಂಬ ಏಕವಚನ ರೂಪವನ್ನು ನೀಡುವ ಮೂಲಕ, ಒಬ್ಬ ವ್ಯಕ್ತಿಯೊಂದಿಗೆ ವ್ಯಕ್ತಿಗತವಾಗಿ ಮಾತಾಡುತ್ತಾನೊ ಎಂಬಂತೆ ಆ ಮಾತುಗಳಲ್ಲಿ ಕೋಮಲತೆಯನ್ನು ವ್ಯಕ್ತಪಡಿಸುತ್ತಾನೆ. ಸಂಕಟಕ್ಕೀಡಾದವರನ್ನು ಸಂತೈಸುವಾಗ, ಯೆಹೋವನು ಪ್ರತಿಯೊಬ್ಬರನ್ನು ವ್ಯಕ್ತಿಗತವಾಗಿ ಉಪಚರಿಸುತ್ತಾನೆ. ತಂದೆಯ ಸ್ಥಾನದಲ್ಲಿರುವ ಆತನು ಒಬ್ಬ ಎದೆಗುಂದಿದ ಪುತ್ರನಿಗೆ, ‘ನೀನೇಕೆ ನಿನ್ನ ಸಹೋದರನಂತೆ ಬಲವುಳ್ಳವನಾಗಿರಲು ಸಾಧ್ಯವಿಲ್ಲ?’ ಎಂದು ಕೇಳುವುದಿಲ್ಲ. (ಗಲಾತ್ಯ 6:4) ಅದರ ಬದಲು, ಆತನು ಗಮನವಿಟ್ಟು ಪ್ರತಿಯೊಬ್ಬರಿಗೂ ಕಿವಿಗೊಡುತ್ತಾನೆ. ವಾಸ್ತವದಲ್ಲಿ “ಕೇಳಿದ ಕೂಡಲೆ ನಿಮಗೆ ಸದುತ್ತರವನ್ನು ದಯಪಾಲಿಸು”ತ್ತಾನೆ. ಎಂತಹ ಪುನರಾಶ್ವಾಸನೆಯ ಮಾತುಗಳು! ಯೆಹೋವನಿಗೆ ಪ್ರಾರ್ಥಿಸುವ ಮೂಲಕ ಎದೆಗುಂದಿದವರು ಬಹಳಷ್ಟು ಬಲವನ್ನು ಪಡೆದುಕೊಳ್ಳಬಲ್ಲರು.—ಕೀರ್ತನೆ 65:2.
ದೇವರ ವಾಕ್ಯವನ್ನು ಓದುವ ಮೂಲಕ ಆತನ ಮಾರ್ಗದರ್ಶಕ ಧ್ವನಿಯನ್ನು ಕೇಳಿರಿ
17, 18. ಕಷ್ಟಕರ ಸಮಯಗಳಲ್ಲೂ, ಯೆಹೋವನು ಯಾವ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾನೆ?
17 ಯೆಶಾಯನು ತನ್ನ ಸಂದೇಶವನ್ನು ಮುಂದುವರಿಸಿದಂತೆ, ಬರಲಿರುವ ಸಂಕಟದ ಬಗ್ಗೆ ಅವನು ತನ್ನ ಕೇಳುಗರಿಗೆ ಜ್ಞಾಪಕಹುಟ್ಟಿಸುತ್ತಾನೆ. ಜನರು “ಕಷ್ಟವನ್ನೂ ಶ್ರಮವನ್ನೂ . . . ಅನ್ನಪಾನಗಳನ್ನಾಗಿ” ಪಡೆದುಕೊಳ್ಳುವರು. (ಯೆಶಾಯ 30:20ಎ) ಆಕ್ರಮಣಕ್ಕೊಳಗಾದಾಗ ಅವರು ಅನುಭವಿಸಲಿರುವ ಕಷ್ಟಸಂಕಟಗಳು, ಅನ್ನಪಾನಗಳ ಹಾಗೆ ಚಿರಪರಿಚಿತವಾಗಿರುವವು. ಹಾಗಿದ್ದರೂ, ಸಹೃದಯಿಗಳ ರಕ್ಷಣೆಗೆ ಬರಲು ಯೆಹೋವನು ಸಿದ್ಧನಾಗಿದ್ದಾನೆ. “ನಿಮ್ಮ ಬೋಧಕನು ಇನ್ನು ಮರೆಯಾಗಿರನು, ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ; ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.”—ಯೆಶಾಯ 30:20ಬಿ, 21.c
18 ಯೆಹೋವನು ಮಹಾನ್ “ಬೋಧಕ”ನಾಗಿದ್ದಾನೆ. ಬೋಧಕನೋಪಾದಿ ಆತನಿಗೆ ಸರಿಸಾಟಿ ಯಾರೂ ಇಲ್ಲ. ಹಾಗಾದರೆ ಜನರು ಆತನನ್ನು ‘ಕಾಣುವುದು’ ಮತ್ತು ‘ಕೇಳುವುದು’ ಹೇಗೆ? ಯೆಹೋವನು ತನ್ನೆಲ್ಲ ವಿಷಯಗಳನ್ನು ಪ್ರವಾದಿಗಳಿಗೆ ತಿಳಿಸುತ್ತಾನೆ, ಅವರು ಅದನ್ನು ಬೈಬಲಿನಲ್ಲಿ ದಾಖಲಿಸಿಟ್ಟಿದ್ದಾರೆ. (ಆಮೋಸ 3:6, 7) ಇಂದು ನಂಬಿಗಸ್ತ ಆರಾಧಕರು ಬೈಬಲನ್ನು ಓದುವಾಗ, ದೇವರ ಪಿತೃಸದೃಶ ಧ್ವನಿಯು ಅವರು ಯಾವ ಮಾರ್ಗದಲ್ಲಿ ಹೋಗಬೇಕೆಂದು ತಿಳಿಸುತ್ತಾ ಮತ್ತು ಅದರಲ್ಲಿ ನಡೆಯಲಿಕ್ಕಾಗಿ ತಮ್ಮ ನಡೆನುಡಿಗಳನ್ನು ಸರಿಹೊಂದಿಸಿಕೊಳ್ಳಬೇಕೆಂದು ಉತ್ತೇಜನ ನೀಡುತ್ತಾ ಇರುವಂತಿದೆ. ಯೆಹೋವನು ಬೈಬಲಿನ ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಮೂಲಕ ಒದಗಿಸುವ ಬೈಬಲಾಧಾರಿತ ಪ್ರಕಾಶನಗಳ ಪುಟಗಳ ಮೂಲಕ ಮಾತಾಡುವಾಗ, ಪ್ರತಿಯೊಬ್ಬ ಕ್ರೈಸ್ತನು ಅದಕ್ಕೆ ಜಾಗರೂಕತೆಯಿಂದ ಗಮನವನ್ನು ಕೊಡಬೇಕು. (ಮತ್ತಾಯ 24:45-47) ಪ್ರತಿಯೊಬ್ಬರೂ ಬೈಬಲ್ ವಾಚನವನ್ನು ಮಾಡಲೇಬೇಕು, ಏಕೆಂದರೆ ‘ಅದರಿಂದ ಅವನು ಬಾಳುವನು.’—ಧರ್ಮೋಪದೇಶಕಾಂಡ 32:46, 47; ಯೆಶಾಯ 48:17.
ಭಾವೀ ಆಶೀರ್ವಾದಗಳ ಬಗ್ಗೆ ಧ್ಯಾನಿಸಿರಿ
19, 20. ಮಹಾನ್ ಬೋಧಕನ ಧ್ವನಿಗೆ ಓಗೊಡುವವರು ಯಾವ ಆಶೀರ್ವಾದಗಳನ್ನು ಅನುಭವಿಸುವರು?
19 ಮಹಾನ್ ಬೋಧಕನ ಧ್ವನಿಗೆ ಕಿವಿಗೊಡುವವರು, ತಮ್ಮ ವಿಗ್ರಹಗಳಿಂದ ಅಸಹ್ಯಪಟ್ಟುಕೊಂಡು, ಅವುಗಳನ್ನು ಚೆಲ್ಲಾಪಿಲ್ಲಿ ಮಾಡಿಬಿಡುವರು. (ಓದಿ ಯೆಶಾಯ 30:22.) ಅಂತಹವರು ಅದ್ಭುತಕರ ಆಶೀರ್ವಾದಗಳನ್ನು ಅನುಭವಿಸುವರು. ಇವುಗಳನ್ನು ಯೆಶಾಯ 30:23-26ರಲ್ಲಿ ಯೆಶಾಯನು ವರ್ಣಿಸುತ್ತಾನೆ. ಅದೊಂದು ಮನೋಹರವಾದ ಪುನಸ್ಸ್ಥಾಪನ ಪ್ರವಾದನೆಯಾಗಿದ್ದು, ಯೆಹೂದಿ ಶೇಷವರ್ಗವು ಸಾ.ಶ.ಪೂ. 537ರಲ್ಲಿ ಸೆರೆಯಿಂದ ಹಿಂದಿರುಗಿದಾಗ ಪ್ರಥಮ ನೆರವೇರಿಕೆಯನ್ನು ಕಂಡಿತು. ಇಂದು, ಈಗಿನ ಆತ್ಮಿಕ ಪರದೈಸಿನಲ್ಲಿ ಮತ್ತು ಮುಂದೆ ಬರಲಿರುವ ಅಕ್ಷರಾರ್ಥ ಪರದೈಸಿನಲ್ಲಿ ಮೆಸ್ಸೀಯನು ತರಲಿರುವ ಅದ್ಭುತಕರ ಆಶೀರ್ವಾದಗಳನ್ನು ಗ್ರಹಿಸಲು ಈ ಪ್ರವಾದನೆಯು ನಮಗೆ ಸಹಾಯ ಮಾಡುತ್ತದೆ.
20 “ಆಗ ನೀವು ಹೊಲದಲ್ಲಿ ಬೀಜಬಿತ್ತುವದಕ್ಕೆ ಆತನು ಬಿತ್ತನೆಯ ಮಳೆಯನ್ನು ದಯಪಾಲಿಸುವನು; ನೆಲದ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವನು; ಆ ದಿನದಲ್ಲಿ ನಿಮ್ಮ ಮಂದೆಗಳು ದೊಡ್ಡದೊಡ್ಡ ಕಾವಲುಗಳಲ್ಲಿ ಮೇಯುವವು. ಹೊಲಗೇಯುವ ಎತ್ತುಕತ್ತೆಗಳು ಮೊರದಿಂದಲೂ ಕವೇಕೋಲಿನಿಂದಲೂ ತೂರಿದ ಉಪ್ಪುಪ್ಪಾದ ಮೇವನ್ನು ತಿನ್ನುವವು.” (ಯೆಶಾಯ 30:23, 24) ಬಹಳಷ್ಟು ಪೋಷಣೆಯನ್ನೀಡುವ “ಸಾರವಾದ” ಆಹಾರವು, ಮನುಷ್ಯನ ಪ್ರತಿದಿನದ ಭೋಜನವಾಗಿರುವುದು. ದೇಶವು ಎಷ್ಟು ಹೇರಳವಾಗಿ ಫಲನೀಡುವುದೆಂದರೆ, ಪ್ರಾಣಿಗಳು ಸಹ ಪ್ರಯೋಜನಪಡೆಯುವವು. ಜಾನುವಾರುಗಳು “ಉಪ್ಪುಪ್ಪಾದ ಮೇವನ್ನು” ತಿನ್ನುವವು. ಇಂತಹ ರುಚಿಕಟ್ಟಾದ ಮೇವು ವಿಶೇಷ ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಈ ಆಹಾರವು, ಸಾಧಾರಣವಾಗಿ ಮನುಷ್ಯ ಸೇವನೆಗೆ ಪ್ರತ್ಯೇಕಿಸಲ್ಪಟ್ಟ ಧಾನ್ಯಗಳಂತೆ, “ಮೊರದಿಂದಲೂ ಕವೇಕೋಲಿನಿಂದಲೂ” ತೂರಿ ಸ್ವಚ್ಛಗೊಳಿಸಲ್ಪಟ್ಟಿರುವುದು. ನಂಬಿಗಸ್ತ ಮಾನವವರ್ಗವು ಅನುಭವಿಸಲಿರುವ ಯೆಹೋವನ ಆಶೀರ್ವಾದಗಳ ಸಮೃದ್ಧತೆಯನ್ನು ದೃಷ್ಟಾಂತಿಸಲು, ಯೆಶಾಯನು ಎಂತಹ ಸೊಗಸಾದ ವಿವರಗಳನ್ನು ನೀಡುತ್ತಾನೆ!
21. ಬರಲಿರುವ ಆಶೀರ್ವಾದಗಳ ಸಂಪೂರ್ಣತೆಯನ್ನು ವಿವರಿಸಿರಿ.
21 “ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ ಎತ್ತರವಾದ ಗುಡ್ಡದಲ್ಲಿಯೂ ತೊರೆಗಳೂ . . . ಹರಿಯುತ್ತಿರುವವು.” (ಯೆಶಾಯ 30:25ಬಿ)d ಯೆಹೋವನ ಆಶೀರ್ವಾದಗಳ ಸಂಪೂರ್ಣತೆಯನ್ನು ಸೂಕ್ತವಾಗಿ ಒತ್ತಿಹೇಳುವ ವಿವರಣೆಯನ್ನು ಯೆಶಾಯನು ನೀಡುತ್ತಾನೆ. ಇನ್ನು ಮುಂದೆ ನೀರಿನ ಅಭಾವವಿಲ್ಲ. ಈ ಅತ್ಯಮೂಲ್ಯವಾದ ನೀರು ತಗ್ಗುಪ್ರದೇಶಗಳಲ್ಲಿ ಮಾತ್ರವಲ್ಲ, “ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ ಎತ್ತರವಾದ ಗುಡ್ಡದಲ್ಲಿಯೂ” ಹರಿಯುವುದು. ಹೌದು, ಹಸಿವು ಗತಕಾಲದ ಸಂಗತಿಯಾಗಿರುವುದು. (ಕೀರ್ತನೆ 72:16) ಮುಂದೆ, ಪರ್ವತಗಳಿಗಿಂತಲೂ ಎತ್ತರವಾದ ವಿಷಯಗಳ ಕಡೆಗೆ ಪ್ರವಾದಿಯು ಗಮನಹರಿಸುತ್ತಾನೆ. “ಇದಲ್ಲದೆ ಯೆಹೋವನು ತನ್ನ ಜನರ ವ್ರಣವನ್ನು ಕಟ್ಟಿ ಅವರ ಪೆಟ್ಟಿನ ಗಾಯವನ್ನು ಗುಣಮಾಡುವ ದಿವಸದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವದು, ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಿ ಏಳು ದಿನಗಳ ಬೆಳಕಿನಂತಾಗುವದು.” (ಯೆಶಾಯ 30:26) ಈ ವಿಶಿಷ್ಟ ಪ್ರವಾದನೆಗೆ ಎಂತಹ ರೋಮಾಂಚಕ ಪರಮಾವಧಿ! ದೇವರ ಮಹಿಮೆಯು ಪೂರ್ಣ ವೈಭವದಿಂದ ಪ್ರಜ್ವಲಿಸುವುದು. ದೇವರ ನಂಬಿಗಸ್ತ ಆರಾಧಕರು ಮುಂದೆ ಅನುಭವಿಸಲಿರುವ ಆಶೀರ್ವಾದಗಳು, ಅವರು ಈ ಮೊದಲು ಅನುಭವಿಸಿರುವುದಕ್ಕಿಂತಲೂ ಏಳರಷ್ಟು ಹೆಚ್ಚಾಗಿರುವುದು.
ನ್ಯಾಯತೀರ್ಪು ಮತ್ತು ಆನಂದ
22. ನಂಬಿಗಸ್ತರು ಅನುಭವಿಸಲಿರುವ ಆಶೀರ್ವಾದಗಳಿಗೆ ವಿರುದ್ಧವಾಗಿ ಯೆಹೋವನು ದುಷ್ಟರಿಗಾಗಿ ಏನನ್ನು ಕಾದಿರಿಸಿದ್ದಾನೆ?
22 ಯೆಶಾಯನ ಸಂದೇಶದ ಸ್ವರವು ಪುನಃ ಬದಲಾಗುತ್ತದೆ. ತನ್ನ ಕೇಳುಗರ ಗಮನವನ್ನು ಸೆಳೆಯುವಂತಹ ರೀತಿಯಲ್ಲಿ ಅವನು “ಇಗೋ” ಎನ್ನುತ್ತಾನೆ. “ಯೆಹೋವನಾಮಧೇಯನು ದೂರದಿಂದ ಬರುತ್ತಾನೆ; ಆತನ ಕೋಪವು ಉರಿಯುತ್ತಿದೆ, ಅದರಿಂದೇಳುವ ಹೊಗೆಯು ದಟ್ಟವಾಗಿದೆ; ಆತನ ತುಟಿಗಳು ರೋಷದಿಂದ ತುಂಬಿವೆ, ಆತನ ನಾಲಿಗೆಯು ನುಂಗುವ ಅಗ್ನಿ.” (ಯೆಶಾಯ 30:27) ಈ ವರೆಗೆ ಯೆಹೋವನು ಹಸ್ತಕ್ಷೇಪಮಾಡದೆ, ತನ್ನ ಜನರ ವೈರಿಗಳು ತಮ್ಮಿಚ್ಛೆಯಂತೆ ನಡೆದುಕೊಳ್ಳುವ ಅನುಮತಿಯನ್ನು ಅವರಿಗೆ ನೀಡಿದ್ದಾನೆ. ಆದರೆ ಈಗ, ಸ್ಥಿರವಾಗಿ ಮುಂದಕ್ಕೆ ಹೆಜ್ಜೆಯಿಡುವ ಬಿರುಗಾಳಿಯಂತೆ ಆತನು ನ್ಯಾಯತೀರ್ಪನ್ನು ವಿಧಿಸಲು ಬರುತ್ತಿದ್ದಾನೆ. “ಆತನ ಶ್ವಾಸವು ತುಂಬಿತುಳುಕಿ ಕಂಠದ ಮಟ್ಟಿಗೂ ಏರುವ ತೊರೆ; ಜನಾಂಗಗಳನ್ನು ಏನೂ ಉಳಿಸದ ಜರಡಿಯಿಂದ ಜಾಲಿಸುವದಕ್ಕೆ ಬರುತ್ತಾನೆ; ದಾರಿತಪ್ಪಿಸುವ ಕಡಿವಾಣವು ಜನಗಳ ಕಟ ಬಾಯಲ್ಲಿರುವದು.” (ಯೆಶಾಯ 30:28) ದೇವಜನರ ವೈರಿಗಳು, ‘ತುಂಬಿತುಳುಕುವ ತೊರೆ’ಯಿಂದ ಸುತ್ತುವರಿಯಲ್ಪಟ್ಟು, ಹಿಂಸಾತ್ಮಕವಾಗಿ ‘ಜರಡಿಯಿಂದ ಜಾಲಿಸಲ್ಪಟ್ಟು’ ಮತ್ತು ‘ಕಡಿವಾಣದಿಂದ’ ಎಳೆದಾಡಲ್ಪಡುವರು. ಅವರು ನಾಶವಾಗಿಹೋಗುವರು.
23. ಇಂದು ಕ್ರೈಸ್ತರು ಯಾವ ಕಾರಣಕ್ಕಾಗಿ “ಹೃದಯಾನಂದ”ಪಡುತ್ತಾರೆ?
23 ಒಂದು ದಿನ ತಮ್ಮ ದೇಶಕ್ಕೆ ಹಿಂದಿರುಗಲಿರುವ ನಂಬಿಗಸ್ತ ಆರಾಧಕರ ಸಂತೋಷಭರಿತ ಸ್ಥಿತಿಯನ್ನು ವರ್ಣಿಸುವಾಗ, ಯೆಶಾಯನ ಸ್ವರವು ಪುನಃ ಬದಲಾಗುತ್ತದೆ. “ನೀವೋ ಹಬ್ಬದ ಸೌರಣೆಯ ರಾತ್ರಿಯಲ್ಲೋ ಎಂಬಂತೆ ಹಾಡುವಿರಿ; ಇಸ್ರಾಯೇಲ್ಯರ ಶರಣನ ಸಾನ್ನಿಧ್ಯವನ್ನು ಬಯಸಿ ಯೆಹೋವನ ಪರ್ವತಕ್ಕೆ ಪಿಳ್ಳಂಗೋವಿಯ ನಾದದೊಡನೆ ಹೋಗುವವನಂತೆ ಹೃದಯಾನಂದಪಡುವಿರಿ.” (ಯೆಶಾಯ 30:29) ಇಂದಿನ ಸತ್ಯ ಕ್ರೈಸ್ತರು, ಸೈತಾನನ ಲೋಕಕ್ಕಾಗುವ ನ್ಯಾಯತೀರ್ಪಿನ ಬಗ್ಗೆ, “ರಕ್ಷಕನಾದ ಶರಣ” ಯೆಹೋವನು ತಮಗೆ ನೀಡಲಿರುವ ಸಂರಕ್ಷಣೆಯ ಬಗ್ಗೆ ಮತ್ತು ಬರಲಿರುವ ರಾಜ್ಯ ಆಶೀರ್ವಾದಗಳ ಬಗ್ಗೆ ಯೋಚಿಸುವಾಗ, ಅವರು ಕೂಡ ತದ್ರೀತಿಯ “ಹೃದಯಾನಂದ”ವನ್ನು ಅನುಭವಿಸುತ್ತಾರೆ.—ಕೀರ್ತನೆ 95:1.
24, 25. ಅಶ್ಶೂರವು ನಿಜವಾಗಿಯೂ ನ್ಯಾಯತೀರ್ಪಿಗೆ ಗುರಿಯಾಗುವುದೆಂದು ಯೆಶಾಯನ ಪ್ರವಾದನೆಯು ಹೇಗೆ ಒತ್ತಿಹೇಳುತ್ತದೆ?
24 ಆನಂದಭರಿತ ವಿಷಯವನ್ನು ಹೇಳಿದ ಬಳಿಕ, ಯೆಶಾಯನು ಪುನಃ ತೀರ್ಪಿನ ಬಗ್ಗೆ ಹೇಳುತ್ತಾನೆ ಮತ್ತು ದೇವರ ಕೋಪಕ್ಕೆ ತುತ್ತಾಗಿರುವ ದೇಶವನ್ನು ಗುರುತಿಸುತ್ತಾನೆ. “ಆಗ ಯೆಹೋವನು ತನ್ನ ಗಂಭೀರವಾದ ಧ್ವನಿಯನ್ನು ಕೇಳಮಾಡಿ ತೀವ್ರಕೋಪ, ಕಬಳಿಸುವ ಅಗ್ನಿಜ್ವಾಲೆ, ಬಿರಿದ ಮೋಡ, ಅತಿವೃಷ್ಟಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿಸುವನು. ಹೀಗೆ ಯೆಹೋವನು ದಂಡದಿಂದ ದಂಡಿಸುವಾಗ ಅಶ್ಶೂರ್ಯರು ಆತನ ಧ್ವನಿಯಿಂದಲೇ ಭಂಗಪಡುವರು.” (ಯೆಶಾಯ 30:30, 31) ದೇವರು ನಿಜವಾಗಿಯೂ ಅಶ್ಶೂರದ ಮೇಲೆ ನ್ಯಾಯತೀರಿಸುವನೆಂಬುದನ್ನು ಯೆಶಾಯನ ಈ ಸುಸ್ಪಷ್ಟವಾದ ವಿವರಣೆಯು ಒತ್ತಿಹೇಳುತ್ತದೆ. ವಾಸ್ತವದಲ್ಲಿ, ಅಶ್ಶೂರವು ದೇವರ ಮುಂದೆ ನಿಂತು, ಆತನ “ಶಿಕ್ಷಾಹಸ್ತವನ್ನು” ನೋಡಿ ಗಡಗಡನೆ ನಡಗುತ್ತದೆ.
25 ಪ್ರವಾದಿಯು ಮುಂದುವರಿಸಿ ಹೇಳುವುದು: “ಯೆಹೋವನು ಸಂಕಲ್ಪಿಸಿದ ದಂಡದ ಪ್ರತಿಯೊಂದು ಪೆಟ್ಟೂ ದಮ್ಮಡಿ ಕಿನ್ನರಿಗಳ ನಾದದೊಡನೆ ಅವರ ಮೇಲೆ ಬೀಳುವದು. ಆತನು ಅವರೊಂದಿಗೆ ಹೋರಾಡುತ್ತಾ ಕೈಬೀಸಿ ಯುದ್ಧಮಾಡುವನು. ಪುರಾತನ ಕಾಲದಿಂದಲೂ ಅಗ್ನಿಕುಂಡವು [“ತೋಫೆತ್,” ಪಾದಟಿಪ್ಪಣಿ] ಸಿದ್ಧವಾಗಿದೆ; ಹೌದು, ರಾಜನಿಗೆ ಅಣಿಯಾಗಿದೆ; ಅದನ್ನು ಆಳವಾಗಿಯೂ ಅಗಲವಾಗಿಯೂ ಮಾಡಿದ್ದಾನೆ; ಅದರಲ್ಲಿನ ಚಿತೆಯೊಳಗೆ ಬೆಂಕಿಯೂ ಬೇಕಾದಷ್ಟು ಕೊರಡುಗಳೂ ಇವೆ; ಯೆಹೋವನ ಶ್ವಾಸವು ಗಂಧಕದ ಪ್ರವಾಹದೋಪಾದಿಯಲ್ಲಿ ಅದನ್ನು ಉರಿಸುವದು.” (ಯೆಶಾಯ 30:32, 33) ಹಿನ್ನೋಮ್ ಕಣಿವೆಯಲ್ಲಿರುವ ತೋಫೆತ್, ಬೆಂಕಿಯಿಂದ ಉರಿಯುವ ಒಂದು ಸಾಂಕೇತಿಕ ಸ್ಥಳವಾಗಿ ಇಲ್ಲಿ ಉಪಯೋಗಿಸಲ್ಪಟ್ಟಿದೆ. ಅಶ್ಶೂರವು ತೋಫೆತಿನಲ್ಲಿ ಹಾಕಲ್ಪಡುವುದೆಂದು ಹೇಳುವ ಮೂಲಕ, ಆ ಜನಾಂಗದ ಮೇಲೆ ಥಟ್ಟನೆ ಬರುವ ನಾಶನವು ಸಂಪೂರ್ಣವಾಗಿರುವುದೆಂದು ಯೆಶಾಯನು ಒತ್ತಿಹೇಳುತ್ತಾನೆ.—ಹೋಲಿಸಿ 2 ಅರಸುಗಳು 23:10.
26. (ಎ) ಅಶ್ಶೂರದ ವಿರುದ್ಧ ನುಡಿಯಲ್ಪಟ್ಟ ದೈವೋಕ್ತಿಗಳಿಗೆ ಆಧುನಿಕ ದಿನದ ಅನ್ವಯವಿರುವುದು ಹೇಗೆ? (ಬಿ) ಇಂದು ಕ್ರೈಸ್ತರು ಯೆಹೋವನನ್ನು ಕಾದುಕೊಂಡಿರುವುದು ಹೇಗೆ?
26 ಈ ನ್ಯಾಯತೀರ್ಪು ಅಶ್ಶೂರದ ವಿರುದ್ಧ ನುಡಿಯಲ್ಪಟ್ಟಿದ್ದರೂ, ಯೆಶಾಯನ ಪ್ರವಾದನೆಯ ಮಹತ್ವವು ಇನ್ನೂ ಮುಂದಿನ ಸಮಯಕ್ಕೂ ಅನ್ವಯಿಸುತ್ತದೆ. (ರೋಮಾಪುರ 15:4) ಯೆಹೋವನು ಪುನಃ ಒಮ್ಮೆ ತನ್ನ ಜನರ ವೈರಿಗಳಿಗೆ ಕಡಿವಾಣ ಹಾಕಿ, ಅವರನ್ನು ಜಾಲಿಸಿ, ನೀರಿನಿಂದ ಅಳಿದುಹಾಕುವ ರೀತಿಯಲ್ಲಿ ಬರುವನು. (ಯೆಹೆಜ್ಕೇಲ 38:18-23; 2 ಪೇತ್ರ 3:7; ಪ್ರಕಟನೆ 19:11-21) ಆ ದಿನವು ಬೇಗನೆ ಬರಲಿ! ಈ ಮಧ್ಯೆ, ಕ್ರೈಸ್ತರು ತಮ್ಮ ಬಿಡುಗಡೆಯ ಸಮಯಕ್ಕಾಗಿ ಆತುರದಿಂದ ಕಾದಿರುತ್ತಾರೆ. ಯೆಶಾಯ 30ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟ ಸುಸ್ಪಷ್ಟವಾದ ಮಾತುಗಳನ್ನು ಮನನಮಾಡಿ, ಅದರಿಂದ ಅವರು ಬಲಪಡೆಯುತ್ತಾರೆ. ಪ್ರಾರ್ಥನೆಯ ಸುಯೋಗವನ್ನು ಅಮೂಲ್ಯವೆಂದೆಣಿಸಿ, ಬೈಬಲ್ ಅಧ್ಯಯನವನ್ನು ಕ್ರಮವಾಗಿ ಮಾಡಿ, ಬರಲಿರುವ ರಾಜ್ಯ ಆಶೀರ್ವಾದಗಳ ಬಗ್ಗೆ ಮನನ ಮಾಡುವಂತೆ, ಈ ಮಾತುಗಳು ದೇವರ ಸೇವಕರನ್ನು ಉತ್ತೇಜಿಸುತ್ತವೆ. (ಕೀರ್ತನೆ 42:1, 2; ಜ್ಞಾನೋಕ್ತಿ 2:1-6; ರೋಮಾಪುರ 12:12) ಹೀಗೆ ನಾವೆಲ್ಲರೂ ಯೆಹೋವನನ್ನು ಕಾದುಕೊಂಡಿರುವಂತೆ ಯೆಶಾಯನ ಮಾತುಗಳು ನಮಗೆ ಸಹಾಯ ಮಾಡುತ್ತವೆ.
[ಪಾದಟಿಪ್ಪಣಿಗಳು]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
b ಯೆಹೂದವು ನಂಬಿಗಸ್ತವಾಗಿ ಉಳಿದಿದ್ದರೆ, ತೀರ ವ್ಯತಿರಿಕ್ತವಾದದ್ದೇ ಸಂಭವಿಸಸಾಧ್ಯವಿತ್ತು.—ಯಾಜಕಕಾಂಡ 26:7, 8.
c ಬೈಬಲಿನಲ್ಲಿ ಯೆಹೋವನು “ಬೋಧಕ”ನೆಂದು ಕರೆಯಲ್ಪಟ್ಟಿರುವುದು ಇದೊಂದೇ ಸ್ಥಳದಲ್ಲಿ.
d ಯೆಶಾಯ 30:25ಎ ತಿಳಿಸುವುದು: “ಬುರುಜುಗಳು ಬಿದ್ದುಹೋಗುವ ಮಹಾಸಂಹಾರದ ದಿನದಲ್ಲಿ.” ಪ್ರಥಮ ನೆರವೇರಿಕೆಯಲ್ಲಿ, ಇದು ಬಾಬೆಲಿನ ಪತನವನ್ನು ಸೂಚಿಸಬಹುದು. ಏಕೆಂದರೆ ಆ ಸಮಯದಲ್ಲಿ, ಯೆಶಾಯ 30:18-26ರಲ್ಲಿ ಮುಂತಿಳಿಸಲ್ಪಟ್ಟ ಆಶೀರ್ವಾದಗಳನ್ನು ಇಸ್ರಾಯೇಲ್ಯರು ಅನುಭವಿಸುವಂತೆ ಅವರಿಗೆ ಮಾರ್ಗವು ತೆರೆದುಕೊಂಡಿತು. (ಪ್ಯಾರಗ್ರಾಫ್ 19ನ್ನು ನೋಡಿ.) ಅದು ಅರ್ಮಗೆದೋನಿನಲ್ಲಿ ನಡೆಯಲಿರುವ ನಾಶನವನ್ನೂ ಸೂಚಿಸಬಹುದು. ಆಗ, ಹೊಸ ಲೋಕದ ಪರಿಸರದಲ್ಲಿ ಈ ಆಶೀರ್ವಾದಗಳು ಅತ್ಯಂತ ಮಹಾನ್ ರೀತಿಯಲ್ಲಿ ನೆರವೇರುವವು.
[ಪುಟ 305ರಲ್ಲಿರುವ ಚಿತ್ರಗಳು]
ಮೋಶೆಯ ದಿನದಲ್ಲಿ ಇಸ್ರಾಯೇಲ್ಯರು ಐಗುಪ್ತದಿಂದ ಪಾರಾದರು. ಆದರೆ ಯೆಶಾಯನ ದಿನದಲ್ಲಿ, ಯೆಹೂದವು ಸಹಾಯಕ್ಕಾಗಿ ಐಗುಪ್ತದ ಬಳಿಗೆ ಹೋಗುತ್ತದೆ
[ಪುಟ 311ರಲ್ಲಿರುವ ಚಿತ್ರ]
“ಪ್ರತಿಯೊಂದು ಎತ್ತರವಾದ ಗುಡ್ಡದಲ್ಲಿಯೂ ತೊರೆಗಳು . . . ಹರಿಯುತ್ತಿರುವವು”
[ಪುಟ 312ರಲ್ಲಿರುವ ಚಿತ್ರ]
ಯೆಹೋವನ “ಕೋಪವು ಉರಿಯುತ್ತಿದೆ, ಅದರಿಂದೇಳುವ ಹೊಗೆಯು ದಟ್ಟ”ವಾಗಿರುವುದು