ನೀವು ಸದ್ಗುಣವನ್ನು ಬೆನ್ನಟ್ಟುತ್ತಿದ್ದೀರೊ?
“ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ [“ಪರಿಗಣಿಸುತ್ತ ಮುಂದುವರಿಯಿರಿ,” NW].”—ಫಿಲಿಪ್ಪಿ 4:8.
1. ದುರ್ಗುಣವೆಂದರೇನು, ಮತ್ತು ಅದು ಯೆಹೋವನ ಆರಾಧನೆಯನ್ನು ಭ್ರಷ್ಟಗೊಳಿಸಿಲ್ಲವೇಕೆ?
ದುರ್ಗುಣವೆಂದರೆ ನೈತಿಕ ಕೆಟ್ಟತನ ಅಥವಾ ಭ್ರಷ್ಟತೆ. ಅದು ನಾವು ಜೀವಿಸುತ್ತಿರುವ ಜಗತ್ತನ್ನು ವ್ಯಾಪಿಸಿದೆ. (ಎಫೆಸ 2:1-3) ಆದರೂ, ತನ್ನ ಶುದ್ಧಾರಾಧನೆಯು ಭ್ರಷ್ಟಗೊಳ್ಳುವಂತೆ ಯೆಹೋವ ದೇವರು ಬಿಡನು. ಕ್ರೈಸ್ತ ಪ್ರಕಾಶನಗಳು, ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳು, ಅನೀತಿಯ ನಡತೆಯ ವಿರುದ್ಧ ನಮಗೆ ಸಕಾಲಿಕ ಎಚ್ಚರಿಕೆಗಳನ್ನು ಕೊಡುತ್ತವೆ. ದೇವರ ದೃಷ್ಟಿಯಲ್ಲಿ “ಒಳ್ಳೇದನ್ನು ಬಿಗಿಯಾಗಿ ಹಿಡಿದು”ಕೊಳ್ಳುವಂತೆ ಸ್ವಸ್ಥವಾದ ಶಾಸ್ತ್ರೀಯ ಸಹಾಯವನ್ನು ನಾವು ಪಡೆಯುತ್ತೇವೆ. (ರೋಮಾಪುರ 12:9) ಆದಕಾರಣ, ಒಂದು ಸಂಸ್ಥೆಯೋಪಾದಿ ಯೆಹೋವನ ಸಾಕ್ಷಿಗಳು ಶುದ್ಧರಾಗಿರಲು, ಸದ್ಗುಣಿಗಳಾಗಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ವ್ಯಕ್ತಿಗತವಾಗಿ ನಮ್ಮ ವಿಷಯದಲ್ಲೇನು? ಹೌದು, ನೀವು ಸದ್ಗುಣವನ್ನು ಬೆನ್ನಟ್ಟುತ್ತಿದ್ದೀರೊ?
2. ಸದ್ಗುಣವೆಂದರೇನು, ಮತ್ತು ಸದ್ಗುಣಿಯಾಗಿರಲು ಪ್ರಯತ್ನವು ಅಗತ್ಯವೇಕೆ?
2 ಸದ್ಗುಣವೆಂದರೆ ನೈತಿಕ ಹಿರಿಮೆ, ಒಳ್ಳೆಯತನ, ಸ್ವದರ್ತನೆ ಮತ್ತು ಆಲೋಚನೆ. ಅದು ನಿಷ್ಕ್ರಿಯ ಗುಣವಾಗಿರದೆ, ಕ್ರಿಯಾಶೀಲ, ಸಕರಾತ್ಮಕ ಗುಣ. ಸದ್ಗುಣದಲ್ಲಿ ಪಾಪವನ್ನು ವರ್ಜಿಸುವುದಕ್ಕಿಂತ ಹೆಚ್ಚಿನದ್ದು ಸೇರಿದೆ; ಒಳ್ಳೆಯದನ್ನು ಬೆನ್ನಟ್ಟುವುದೆಂದು ಅದರ ಅರ್ಥ. (1 ತಿಮೊಥೆಯ 6:11) ಅಪೊಸ್ತಲ ಪೇತ್ರನು ಜೊತೆ ಕ್ರೈಸ್ತರಿಗೆ ಪ್ರಬೋಧಿಸಿದ್ದು: “ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ . . . ಕೂಡಿಸಿರಿ.” ಹೇಗೆ? “ಸಕಲ ಶ್ರದ್ಧಾಪೂರ್ವಕವಾದ ಯತ್ನವನ್ನು [ದೇವರ ಅಮೂಲ್ಯ ವಾಗ್ದಾನಗಳಿಗೆ] ಉತ್ತರವಾಗಿ ಒದಗಿಸುವ” ಮೂಲಕವೇ. (2 ಪೇತ್ರ 1:5, NW) ನಮ್ಮ ಪಾಪಪೂರ್ಣ ಪ್ರಕೃತಿಯ ಕಾರಣ, ನಾವು ಸದ್ಗುಣಿಗಳಾಗಿ ಉಳಿಯಬೇಕಾದರೆ ನಿಜ ಪ್ರಯತ್ನವು ಬೇಕಾಗುತ್ತದೆ. ಆದರೂ ಗತಕಾಲದ ದೇವಭಕ್ತ ಜನರು, ಭಾರೀ ತಡೆಗಟ್ಟುಗಳ ಎದುರಿನಲ್ಲಿಯೂ ಸದ್ಗುಣಿಗಳಾಗಿ ಉಳಿದಿದ್ದಾರೆ.
ಅವನು ಸದ್ಗುಣವನ್ನು ಬೆನ್ನಟ್ಟಿದನು
3. ಆಹಾಜ ರಾಜನು ಯಾವ ದುಷ್ಕೃತ್ಯಗಳಿಗೆ ದೋಷಿಯಾಗಿದ್ದನು?
3 ಸದ್ಗುಣವನ್ನು ಬೆನ್ನಟ್ಟಿದವರ ಅನೇಕ ವೃತ್ತಾಂತಗಳು ಶಾಸ್ತ್ರಗಳಲ್ಲಿವೆ. ದೃಷ್ಟಾಂತಕ್ಕೆ, ಸದ್ಗುಣಿಯಾಗಿದ್ದ ಹಿಜ್ಕೀಯನ ವಿಷಯವಾಗಿ ಪರ್ಯಾಲೋಚಿಸಿರಿ. ಅವನ ತಂದೆಯಾಗಿದ್ದ ಯೆಹೂದದ ಆಹಾಜ ರಾಜನು ಮೋಲೆಕನನ್ನು ಆರಾಧಿಸಿದ್ದು ವ್ಯಕ್ತ. “ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು. ಇವನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರಲಿಲ್ಲ. ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟು ಇಸ್ರಾಯೇಲ್ರಾಜರ ಮಾರ್ಗದಲ್ಲಿ ನಡೆದನು; ಇದಲ್ಲದೆ ಯೆಹೋವನು ಇಸ್ರಾಯೇಲ್ಯರ ಎದುರಿನಿಂದ ಓಡಿಸಿಬಿಟ್ಟ ಜನಾಂಗಗಳ ಹೇಸಿಗೆಕೆಲಸಗಳನ್ನು ಅನುಸರಿಸಿ ತನ್ನ ಮಗನನ್ನು ಆಹುತಿಕೊಟ್ಟನು [“ಬೆಂಕಿಯ ಮೂಲಕ ದಾಟುವಂತೆ ಮಾಡಿದನು,” NW]. ಪೂಜಾಸ್ಥಳಗಳಲ್ಲಿಯೂ ದಿನ್ನೆಗಳ ಮೇಲೆಯೂ ಎಲ್ಲಾ ಹಸುರು ಮರಗಳ ಕೆಳಗೆಯೂ ಯಜ್ಞಧೂಪಗಳನ್ನು ಸಮರ್ಪಿಸಿದನು.” (2 ಅರಸುಗಳು 16:2-4) ‘ಬೆಂಕಿಯ ಮೂಲಕ ದಾಟುವುದು’ ಯಾವುದೊ ಒಂದು ಶುದ್ಧೀಕರಣ ಸಂಸ್ಕಾರವನ್ನು ಸೂಚಿಸಿತು ಮತ್ತು ಅದು ಮಾನವ ಯಜ್ಞವಲ್ಲವೆಂದು ಕೆಲವರು ವಾದಿಸುತ್ತಾರೆ. ಆದರೂ, ಜಾನ್ ಡೇ ಅವರ ಮೋಲೆಕ—ಹಳೆಯ ಒಡಂಬಡಿಕೆಯಲ್ಲಿ ಮಾನವ ಯಜ್ಞದ ದೇವರು (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ಪ್ರಾಚೀನ ಮತ್ತು ಪ್ಯೂನಿಕ್ [ಕಾರ್ಥೇಜಿಯನ್] ಕೃತಿಗಳಲ್ಲಿ ಹಾಗೂ ಪ್ರಾಕ್ತನ ಶಾಸ್ತ್ರೀಯ ಮೂಲಗಳಲ್ಲಿ . . . ಕಾನಾನ್ಯ ಜಗತ್ತಿನಲ್ಲಿ ಮಾನವ ಯಜ್ಞದ ಅಸ್ತಿತ್ವಕ್ಕೆ ಪುರಾವೆಯಿದೆ. ಆದಕಾರಣ ಹಳೆಯ ಒಡಂಬಡಿಕೆಯಲ್ಲಿ [ಮಾನವ ಯಜ್ಞಕ್ಕೆ] ಇರುವ ಪರೋಕ್ಷ ಪ್ರಸ್ತಾಪವನ್ನು ಸಂಶಯಿಸಲು ಯಾವ ಕಾರಣವೂ ಇಲ್ಲ.” ಹೆಚ್ಚಿನದಾಗಿ, ಆಹಾಜನು “ತನ್ನ ಮಕ್ಕಳನ್ನು ಆಹುತಿಕೊಟ್ಟನು” ಎಂದು 2 ಪೂರ್ವಕಾಲವೃತ್ತಾಂತ 28:3 ನಿಖರವಾಗಿ ಹೇಳುತ್ತದೆ. (ಹೋಲಿಸಿ ಧರ್ಮೋಪದೇಶಕಾಂಡ 12:31; ಕೀರ್ತನೆ 106:37, 38.) ಎಂತಹ ದುಷ್ಕೃತ್ಯಗಳು!
4. ದುರ್ಗುಣ ತುಂಬಿದ ಪರಿಸರದಲ್ಲಿ ಹಿಜ್ಕೀಯನು ಹೇಗೆ ನಡೆದುಕೊಂಡನು?
4 ಈ ದುರ್ಗುಣ ತುಂಬಿದ ಪರಿಸರದಲ್ಲಿ ಹಿಜ್ಕೀಯನು ಹೇಗೆ ಬಾಳಿದನು? ಕೀರ್ತನೆ 119 ಆಸಕ್ತಿಭರಿತವಾಗಿದೆ. ಏಕೆಂದರೆ ಅದನ್ನು ಹಿಜ್ಕೀಯನು ಇನ್ನೂ ರಾಜಕುಮಾರನಾಗಿದ್ದಾಗ ರಚಿಸಿದನೆಂದು ಕೆಲವರು ನಂಬುತ್ತಾರೆ. (ಕೀರ್ತನೆ 119:46, 99, 100) ಆದಕಾರಣ ಈ ಮಾತುಗಳಿಂದ ಅವನ ಸನ್ನಿವೇಶಗಳು ಸೂಚಿಸಲ್ಪಡಬಹುದು: “ಪ್ರಭುಗಳು ಕೂತುಕೊಂಡು ನನಗೆ ವಿರೋಧವಾಗಿ ಒಳಸಂಚುಮಾಡಿದರೂ ನಿನ್ನ ಸೇವಕನು ನಿನ್ನ ನಿಬಂಧನೆಗಳನ್ನೇ ಧ್ಯಾನಿಸುತ್ತಿರುವನು. ಮನೋವ್ಯಥೆಯಿಂದ ಕಣ್ಣೀರುಸುರಿಸುತ್ತೇನೆ [“ನಿದ್ರಾಹೀನನಾಗಿದ್ದೇನೆ,” NW].” (ಕೀರ್ತನೆ 119:23, 28) ಸುಳ್ಳು ಧರ್ಮಾಚರಣೆ ಮಾಡುವವರಿಂದ ಆವರಿಸಲ್ಪಟ್ಟು ಹಿಜ್ಕೀಯನು, ರಾಜಾಸ್ಥಾನದ ಸದಸ್ಯರ ಮಧ್ಯೆ, ನಿದ್ದೆ ಕೂಡ ಕಷ್ಟವಾಗಿರುವಷ್ಟು ಪರಿಹಾಸ್ಯಕ್ಕೊಳಗಾಗಿದ್ದಿರಬಹುದು. ಆದರೂ, ಅವನು ಸದ್ಗುಣವನ್ನು ಬೆನ್ನಟ್ಟುತ್ತಾ, ಸಕಾಲದಲ್ಲಿ ಅರಸನಾಗಿ, “ಎಲ್ಲಾ ವಿಷಯಗಳಲ್ಲಿಯೂ . . . ಯೆಹೋವನ ಚಿತ್ತಾನುಸಾರವಾಗಿ ನಡೆದನು. . . . ಇವನು ಇಸ್ರಾಯೇಲ್ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದನು.”—2 ಅರಸುಗಳು 18:1-5.
ಅವರು ಸದ್ಗುಣಿಗಳಾಗಿ ಉಳಿದರು
5. ದಾನಿಯೇಲನೂ ಅವನ ಮೂವರು ಸಂಗಾತಿಗಳೂ ಯಾವ ಪರೀಕ್ಷೆಗಳನ್ನು ಎದುರಿಸಿದರು?
5 ದಾನಿಯೇಲ ಮತ್ತು ಅವನ ಮೂವರು ಇಬ್ರಿಯ ಸಂಗಾತಿಗಳಾಗಿದ್ದ ಹನನ್ಯ, ಮೀಶಾಯೇಲ ಮತ್ತು ಅಜರ್ಯರು ಕೂಡ ಸದ್ಗುಣದಲ್ಲಿ ಆದರ್ಶಪ್ರಾಯರಾಗಿದ್ದರು. ಅವರನ್ನು ಅವರ ಸ್ವದೇಶದಿಂದ ಬಲಾತ್ಕಾರವಾಗಿ ಬಾಬೆಲಿಗೆ ದೇಶಭ್ರಷ್ಟರಾಗಿ ಕೊಂಡೊಯ್ಯಲಾಗಿತ್ತು. ಆ ನಾಲ್ವರು ಯುವಕರಿಗೆ, ಬೇಲ್ತೆಶಚ್ಚರ್, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬ ಬಾಬೆಲೀ ಹೆಸರುಗಳು ಕೊಡಲ್ಪಟ್ಟವು. ಅವರಿಗೆ ದೇವರಾಜ್ಞೆಯು ನಿಷೇಧಿಸಿದ ಆಹಾರಗಳು ಸೇರಿದ್ದ “ರಾಜನ ಭೋಜನಪದಾರ್ಥ”ಗಳನ್ನು ಕೊಡಲಾಯಿತು. ಇದಲ್ಲದೆ, ‘ಕಸ್ದೀಯ ಪಂಡಿತರ ಭಾಷೆ ಮತ್ತು ಶಾಸ್ತ್ರ’ಕ್ಕೆ ಸಂಬಂಧಿಸಿದ ಮೂರು ವರುಷಗಳ ತರಬೇತನ್ನು ಅವರು ಪಡೆದುಕೊಳ್ಳುವಂತೆ ಅವರನ್ನು ನಿರ್ಬಂಧಿಸಲಾಯಿತು. ಕೇವಲ ಇನ್ನೊಂದು ಭಾಷೆಯನ್ನು ಕಲಿಯುವುದಕ್ಕಿಂತ ಹೆಚ್ಚಿನದ್ದು ಇದರಲ್ಲಿ ಸೇರಿತ್ತು, ಏಕೆಂದರೆ ಇಲ್ಲಿ “ಕಸ್ದೀಯರು” ಎಂಬ ಪದವು ಪಂಡಿತ ವರ್ಗವನ್ನು ನಿರ್ದೇಶಿಸುತ್ತದೆ. ಹೀಗೆ, ಈ ಇಬ್ರಿಯ ಯುವಕರು ಬಾಬೆಲಿನ ವಿಕೃತ ಬೋಧನೆಗಳಿಗೆ ಒಡ್ಡಲ್ಪಟ್ಟರು.—ದಾನಿಯೇಲ 1:1-7.
6. ದಾನಿಯೇಲನು ಸದ್ಗುಣವನ್ನು ಬೆನ್ನಟ್ಟಿದನೆಂದು ನಾವೇಕೆ ಹೇಳಬಲ್ಲೆವು?
6 ಹೊಂದಿಕೊಳ್ಳಲು ಇದ್ದ ಭಾರೀ ಒತ್ತಡಗಳ ಎದುರಿನಲ್ಲಿಯೂ, ದಾನಿಯೇಲ ಮತ್ತು ಅವನ ಮೂವರು ಸಂಗಾತಿಗಳು ದುರ್ಗುಣದ ಬದಲು ಸದ್ಗುಣವನ್ನು ಆರಿಸಿಕೊಂಡರು. ದಾನಿಯೇಲ 1:21 ಹೇಳುವುದು: “ದಾನಿಯೇಲನು ರಾಜನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ . . . ಇದ್ದನು [“ಮುಂದುವರಿದನು,” NW].” ಹೌದು, ದಾನಿಯೇಲನು ಅನೇಕ ಬಲಾಢ್ಯ ಅರಸರ ಏಳುಬೀಳುಗಳ ಸಮಯದಲ್ಲಿ, 80ಕ್ಕೂ ಹೆಚ್ಚು ವರುಷಗಳಲ್ಲಿ ಯೆಹೋವನ ಸೇವಕನು ಆಗಿ “ಮುಂದುವರಿದನು.” ಸರಕಾರದ ಭ್ರಷ್ಟ ಅಧಿಕಾರಿಗಳ ಒಳಸಂಚುಗಳು ಮತ್ತು ಹೂಟಗಳ ಮತ್ತು ಬಾಬೆಲಿನ ಧರ್ಮದಲ್ಲಿ ಹರಡಿದ್ದ ಲೈಂಗಿಕ ದುರ್ಗುಣದ ಎದುರಿನಲ್ಲಿಯೂ ಅವನು ದೇವರಿಗೆ ನಂಬಿಗಸ್ತನಾಗಿದ್ದನು. ದಾನಿಯೇಲನು ಸದ್ಗುಣವನ್ನು ಬೆನ್ನಟ್ಟುತ್ತಾ ಹೋದನು.
7. ದಾನಿಯೇಲ ಮತ್ತು ಅವನ ಮೂವರು ಸಂಗಾತಿಗಳು ಅನುಸರಿಸಿದ ಮಾರ್ಗದಿಂದ ನಾವೇನನ್ನು ಕಲಿಯಬಲ್ಲೆವು?
7 ದೇವಭಯವಿದ್ದ ದಾನಿಯೇಲ ಮತ್ತು ಅವನ ಸಂಗಾತಿಗಳಿಂದ ನಾವು ಹೆಚ್ಚನ್ನು ಕಲಿಯಬಲ್ಲೆವು. ಅವರು ಸದ್ಗುಣವನ್ನು ಬೆನ್ನಟ್ಟುತ್ತ, ಬಾಬೆಲಿನ ಸಂಸ್ಕೃತಿಯೊಳಗೆ ವಿಲೀನಗೊಳ್ಳಲು ನಿರಾಕರಿಸಿದರು. ಬಾಬೆಲೀ ಹೆಸರುಗಳು ಅವರಿಗೆ ಕೊಡಲ್ಪಟ್ಟರೂ, ಅವರು ಯೆಹೋವನ ಸೇವಕರಾಗಿದ್ದರೆಂಬ ಗುರುತನ್ನು ಅವರು ಕಳೆದುಕೊಳ್ಳಲಿಲ್ಲ. ಅಷ್ಟೇಕೆ, ಸುಮಾರು 70 ವರ್ಷಗಳ ತರುವಾಯ, ಬಾಬೆಲಿನ ಅರಸನು ದಾನಿಯೇಲನನ್ನು ಅವನ ಇಬ್ರಿಯ ಹೆಸರಿನಿಂದ ಕರೆದನು! (ದಾನಿಯೇಲ 5:13) ತನ್ನ ದೀರ್ಘವಾದ ಜೀವಮಾನದಲ್ಲೆಲ್ಲ, ದಾನಿಯೇಲನು ಸಣ್ಣ ವಿಷಯಗಳಲ್ಲಿಯೂ ರಾಜಿಮಾಡಿಕೊಳ್ಳಲು ನಿರಾಕರಿಸಿದನು. ಯುವಕನಾಗಿದ್ದಾಗ, ತಾನು “ರಾಜನ ಭೋಜನಪದಾರ್ಥಗಳನ್ನು ತಿಂದು . . . ತನ್ನನ್ನು ಅಶುದ್ಧಮಾಡಿಕೊಳ್ಳಬಾರದೆಂದು ನಿಶ್ಚಯಿಸಿ”ದ್ದನು. (ದಾನಿಯೇಲ 1:8) ದಾನಿಯೇಲನೂ ಅವನ ಮೂವರು ಸಂಗಾತಿಗಳೂ ತೆಗೆದುಕೊಂಡ ಈ ಸಂಧಾನಮಾಡಿಕೊಳ್ಳಬಾರದೆಂಬ ನಿಲುವು, ಅವರು ತರುವಾಯ ಎದುರಿಸಿದ ಉಳಿವು ಅಳಿವಿನ ಪರೀಕ್ಷೆಗಳನ್ನು ಪಾರಾಗುವರೆ ಅವರನ್ನು ಬಲಪಡಿಸಿತೆಂಬುದು ನಿಸ್ಸಂದೇಹ.—ದಾನಿಯೇಲ ಅಧ್ಯಾಯಗಳು 3 ಮತ್ತು 6.
ಇಂದು ಸದ್ಗುಣವನ್ನು ಬೆನ್ನಟ್ಟುವುದು
8. ಸೈತಾನನ ಲೋಕದಲ್ಲಿ ವಿಲೀನಗೊಳ್ಳುವುದನ್ನು ಕ್ರೈಸ್ತ ಯುವಜನರು ಹೇಗೆ ತಡೆಯಬಲ್ಲರು?
8 ದಾನಿಯೇಲ ಮತ್ತು ಅವನ ಮೂವರು ಸಂಗಾತಿಗಳಂತೆ, ಇಂದು ದೇವರ ಜನರು ಸೈತಾನನ ದುಷ್ಟ ಲೋಕದಲ್ಲಿ ತಮ್ಮನ್ನು ವಿಲೀನಗೊಳಿಸಿಕೊಳ್ಳುವುದನ್ನು ಪ್ರತಿರೋಧಿಸುತ್ತಾರೆ. (1 ಯೋಹಾನ 5:19) ನೀವು ಒಬ್ಬ ಕ್ರೈಸ್ತ ಯುವ ವ್ಯಕ್ತಿಯಾಗಿರುವುದಾದರೆ, ನಿಮ್ಮ ಸಮಾನಸ್ಥರ ಉಡುಗೆ, ಕೇಶಶೈಲಿ ಮತ್ತು ಸಂಗೀತದಲ್ಲಿನ ವಿಪರೀತ ಅಭಿರುಚಿಗಳನ್ನು ಅನುಕರಿಸುವಂತೆ ಬಲವತ್ತಾದ ಒತ್ತಡವನ್ನು ನೀವು ಅನುಭವಿಸುತ್ತಿರಬಹುದು. ಹೊರಬರುತ್ತಿರುವ ಪ್ರತಿಯೊಂದು ಗೀಳನ್ನು ಅಥವಾ ಸ್ಟೈಲನ್ನು ಅನುಕರಿಸುವ ಬದಲು, ಸ್ಥಿರವಾಗಿ ನಿಲ್ಲುತ್ತ, ನಿಮ್ಮನ್ನು “ಈ ವಿಷಯಗಳ ವ್ಯವಸ್ಥೆಗನುಸಾರ ರೂಪಿಸಿಕೊಳ್ಳಲು” ಅನುಮತಿಸಬೇಡಿರಿ. (ರೋಮಾಪುರ 12:2, NW) “ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕು.” (ತೀತ 2:11, 12) ಪ್ರಾಮುಖ್ಯ ವಿಷಯವು ನಿಮ್ಮ ಸಮಾನಸ್ಥರ ಒಪ್ಪಿಗೆಯಲ್ಲ, ಯೆಹೋವನದ್ದೇ ಆಗಿದೆ.—ಜ್ಞಾನೋಕ್ತಿ 12:2.
9. ಕ್ರೈಸ್ತರು ವ್ಯಾಪಾರ ಲೋಕದಲ್ಲಿ ಯಾವ ಒತ್ತಡಗಳನ್ನು ಎದುರಿಸಬಹುದು, ಮತ್ತು ಅವರು ಹೇಗೆ ನಡೆದುಕೊಳ್ಳಬೇಕು?
9 ವಯಸ್ಕ ಕ್ರೈಸ್ತರೂ ಒತ್ತಡಗಳನ್ನು ಎದುರಿಸುತ್ತಾರೆ; ಅವರೂ ಸದ್ಗುಣಿಗಳಾಗಿರಬೇಕು. ಕ್ರೈಸ್ತ ವ್ಯಾಪಾರಸ್ಥರು ಸಂದೇಹಾಸ್ಪದವಾದ ವಿಧಾನಗಳನ್ನು ಬಳಸುವಂತೆ ಅಥವಾ ಸರಕಾರಿ ಕಾಯಿದೆಗಳನ್ನು ಮತ್ತು ತೆರಿಗೆಯ ನಿಯಮಗಳನ್ನು ಅಸಡ್ಡೆಯಿಂದ ಕಾಣುವಂತೆ ಪ್ರೇರಿಸಲ್ಪಡಬಹುದು. ವ್ಯಾಪಾರ ಸ್ಪರ್ಧಿಗಳು ಅಥವಾ ಜೊತೆಕಾರ್ಮಿಕರು ಯಾವುದೇ ರೀತಿ ವರ್ತಿಸಲಿ, ನಾವು “ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” NW] ನಡೆದುಕೊಳ್ಳ”ಬಯಸುತ್ತೇವೆ. (ಇಬ್ರಿಯ 13:18) ನಾವು ಧಣಿಗಳು, ಕೆಲಸಗಾರರು, ಗಿರಾಕಿಗಳು ಮತ್ತು ಐಹಿಕ ಸರಕಾರಗಳೊಂದಿಗೆ ಪ್ರಾಮಾಣಿಕರೂ ನ್ಯಾಯವಂತರೂ ಆಗಿರುವಂತೆ ಶಾಸ್ತ್ರೀಯವಾಗಿ ಅಗತ್ಯಪಡಿಸಲ್ಪಟ್ಟಿದ್ದೇವೆ. (ಧರ್ಮೋಪದೇಶಕಾಂಡ 25:13-16; ಮತ್ತಾಯ 5:37; ರೋಮಾಪುರ 13:1; 1 ತಿಮೊಥೆಯ 5:18; ತೀತ 2:9, 10) ನಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಾವು ಕ್ರಮಬದ್ಧರೂ ಆಗಿರಲು ಪ್ರಯಾಸಪಡೋಣ. ನಿಷ್ಕೃಷ್ಟವಾದ ದಾಖಲೆಗಳನ್ನಿಡುವ ಮತ್ತು ಕರಾರುಗಳನ್ನು ಲಿಖಿತರೂಪದಲ್ಲಿ ನಮೂದಿಸುವ ಮೂಲಕ, ನಾವು ಅನೇಕ ವೇಳೆ ಅಪಾರ್ಥಗಳನ್ನು ತಪ್ಪಿಸಬಲ್ಲೆವು.
ಎಚ್ಚರಿಕೆಯಿಂದಿರಿ!
10. ಸಂಗೀತದ ಆಯ್ಕೆಯ ವಿಷಯದಲ್ಲಿ ‘ಎಚ್ಚರಿಕೆಯಿಂದಿರುವ’ ಅಗತ್ಯವೇಕಿದೆ?
10 ದೇವರ ದೃಷ್ಟಿಯಲ್ಲಿ ಸದ್ಗುಣಿಗಳಾಗಿ ಉಳಿಯುವುದರ ಇನ್ನೊಂದು ಪಕ್ಕವನ್ನು ಕೀರ್ತನೆ 119:9 (NW) ಎತ್ತಿಹೇಳುತ್ತದೆ. ಕೀರ್ತನೆಗಾರನು ಹಾಡಿದ್ದು: “ಒಬ್ಬ ಯೌವನಸ್ಥನು ತನ್ನ ಮಾರ್ಗವನ್ನು ಹೇಗೆ ಶುದ್ಧೀಕರಿಸಿಕೊಳ್ಳುವನು? ನಿನ್ನ ವಾಕ್ಯಕ್ಕನುಸಾರ ಎಚ್ಚರಿಕೆಯಿಂದಿರುವ ಮೂಲಕವೇ.” ಸೈತಾನನ ಅತಿ ಪರಿಣಾಮಕಾರಿಯಾದ ಒಂದು ಅಸ್ತ್ರವು, ಭಾವಾತಿರೇಕಗಳನ್ನು ಉದ್ರೇಕಿಸುವ ಶಕ್ತಿಯುಳ್ಳ ಸಂಗೀತವೇ ಆಗಿದೆ. ವಿಷಾದಕರವಾಗಿ, ಸಂಗೀತದ ವಿಷಯದಲ್ಲಿ ಕೆಲವು ಕ್ರೈಸ್ತರು ‘ಎಚ್ಚರಿಕೆಯಿಂದಿರಲು’ ತಪ್ಪಿಹೋಗಿರುವ ಕಾರಣ, ಕೊನೆಗೆ ಅವರು ಅದರ ಅತಿರೇಕ ರೂಪಗಳಾದ ರ್ಯಾಪ್ ಮತ್ತು ಹೆವಿ ಮೆಟಲ್ನಂತಹವುಗಳಿಗೆ ಸೆಳೆಯಲ್ಪಡುವವರಾಗುವುದನ್ನು ಕಂಡುಕೊಳ್ಳುತ್ತಾರೆ. ಅಂತಹ ಸಂಗೀತವು ತಮಗೆ ಹಾನಿಮಾಡುವುದಿಲ್ಲವೆಂದು ಅಥವಾ ತಾವು ಅದರ ಭಾವಗೀತೆಗೆ ಯಾವ ಗಮನವನ್ನೂ ಕೊಡುವುದಿಲ್ಲವೆಂದು ಕೆಲವರು ವಾದಿಸಬಹುದು. ಇತರರು, ತಮಗೆ ಅದರ ಬಲವಾದ ತಾಳ ಹಿಡಿಸುತ್ತದೆಂದೊ ಗಿಟಾರಿನ ದೊಡ್ಡ ಧ್ವನಿ ಹಿಡಿಸುತ್ತದೆಂದೊ ಹೇಳುತ್ತಾರೆ. ಆದರೆ ಕ್ರೈಸ್ತರಿಗೆ, ಒಂದು ಸಂಗತಿಯು ಹಿಡಿಸುವುದು ಅಥವಾ ಹಿಡಿಸದೆ ಇರುವುದು ವಿವಾದಾಂಶವಲ್ಲ. ಅವರ ಚಿಂತೆಯು, “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳು”ಕೊಳ್ಳುವುದೇ ಆಗಿದೆ. (ಓರೆಅಕ್ಷರಗಳು ನಮ್ಮವು.) (ಎಫೆಸ 5:10) ಒಟ್ಟಿನಲ್ಲಿ, ಹೆವಿ ಮೆಟಲ್ ಮತ್ತು ರ್ಯಾಪ್ ಸಂಗೀತಗಳು, ದೇವಜನರ ಮಧ್ಯೆ ನಿಶ್ಚಯವಾಗಿ ಯಾವುದಕ್ಕೆ ಸ್ಥಳವೇ ಇಲ್ಲವೊ ಆ ಅಕ್ರೈಸ್ತತೆ, ಹಾದರ ಮತ್ತು ಸೈತಾನತ್ವದಂತಹ ದುರ್ಗುಣಗಳನ್ನು ಕೂಡ ಉತ್ತೇಜಿಸುತ್ತವೆ.a (ಎಫೆಸ 5:3) ಎಳೆಯರಾಗಲಿ, ವೃದ್ಧರಾಗಲಿ, ನಾವು ಪ್ರತಿಯೊಬ್ಬರು ಈ ಪ್ರಶ್ನೆಯ ಕುರಿತು ಚೆನ್ನಾಗಿ ಚಿಂತಿಸುವೆವು: ನನ್ನ ಸಂಗೀತ ಆಯ್ಕೆಯಿಂದ ನಾನು ಸದ್ಗುಣವನ್ನು ಬೆನ್ನಟ್ಟುತ್ತಿದ್ದೇನೊ, ದುರ್ಗುಣವನ್ನೊ?
11. ಟೆಲಿವಿಷನ್ ಕಾರ್ಯಕ್ರಮಗಳು, ವಿಡಿಯೋಗಳು ಮತ್ತು ಚಲನ ಚಿತ್ರಗಳ ವಿಷಯದಲ್ಲಿ ಕ್ರೈಸ್ತನು ಹೇಗೆ ಎಚ್ಚರಿಕೆಯಿಂದಿರಬಲ್ಲನು?
11 ಅನೇಕ ಟೆಲಿವಿಷನ್ ಕಾರ್ಯಕ್ರಮಗಳು, ವಿಡಿಯೋಗಳು ಮತ್ತು ಚಲನ ಚಿತ್ರಗಳು ದುರ್ಗುಣವನ್ನು ಪ್ರೋತ್ಸಾಹಿಸುತ್ತವೆ. ಒಬ್ಬ ಪ್ರಮುಖ ಮಾನಸಿಕ ಆರೋಗ್ಯ ಪರಿಣತರಿಗನುಸಾರ, ‘ಭೋಗ ವಾದ, ಲೈಂಗಿಕಾಸಕ್ತಿ, ಹಿಂಸಾಚಾರ, ದುರಾಶೆ ಮತ್ತು ಸ್ವಾರ್ಥ’—ಇವುಗಳು ಇಂದು ನಿರ್ಮಿಸಲಾಗುತ್ತಿರುವ ಹೆಚ್ಚಿನ ಚಲನ ಚಿತ್ರಗಳಲ್ಲಿ ಪ್ರಧಾನಾಂಶವಾಗಿರುತ್ತವೆ. ಆದಕಾರಣ, ಎಚ್ಚರಿಕೆಯಿಂದಿರುವುದರಲ್ಲಿ, ನಾವು ನೋಡಲು ಏನನ್ನು ಆರಿಸಿಕೊಳ್ಳುತ್ತೇವೊ ಅದರಲ್ಲಿ ಆಯ್ಕೆಯನ್ನು ಮಾಡುವುದೂ ಸೇರಿದೆ. ಕೀರ್ತನೆಗಾರನು ಪ್ರಾರ್ಥಿಸಿದ್ದು: “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು.” (ಕೀರ್ತನೆ 119:37) ಜೋಸೆಫ್ ಎಂಬ ಹೆಸರಿನ ಒಬ್ಬ ಕ್ರೈಸ್ತ ಯುವಕನು ಈ ಮೂಲತತ್ತ್ವವನ್ನು ಅನ್ವಯಿಸಿಕೊಂಡನು. ಒಂದು ನಿರ್ದಿಷ್ಟ ಚಲನ ಚಿತ್ರವು ಕಾಮ ಮತ್ತು ಹಿಂಸಾಚಾರವನ್ನು ಪ್ರದರ್ಶಿಸಲಾರಂಭಿಸಿದಾಗ, ಅವನು ಆ ಥಿಯೇಟರನ್ನು ಬಿಟ್ಟು ಹೋದನು. ಹಾಗೆ ಹೋಗುವುದರಲ್ಲಿ ಅವನು ನಾಚಿಕೆಪಟ್ಟನೊ? ಜೋಸೆಫ್ ಹೇಳುವುದು: “ನಿಶ್ಚಯವಾಗಿಯೂ ಇಲ್ಲ. ನಾನು ಪ್ರಥಮವಾಗಿ ಯೆಹೋವನ ಕುರಿತು ಮತ್ತು ಆತನನ್ನು ಮೆಚ್ಚಿಸುವುದರ ಕುರಿತು ಯೋಚಿಸಿದೆ.”
ಅಭ್ಯಾಸ ಮತ್ತು ಧ್ಯಾನದ ಪಾತ್ರ
12. ಸದ್ಗುಣವನ್ನು ಬೆನ್ನಟ್ಟಬೇಕಾದರೆ ವೈಯಕ್ತಿಕ ಅಧ್ಯಯನ ಮತ್ತು ಧ್ಯಾನ—ಇವೇಕೆ ಅಗತ್ಯ?
12 ಕೆಟ್ಟ ಸಂಗತಿಗಳನ್ನು ತ್ಯಜಿಸುವುದು ಮಾತ್ರ ಸಾಲದು. ಸದ್ಗುಣವನ್ನು ಬೆನ್ನಟ್ಟುವುದರಲ್ಲಿ ದೇವರ ವಾಕ್ಯದಲ್ಲಿ ದಾಖಲಿಸಿರುವ ಸದ್ವಿಷಯಗಳನ್ನು ಅದರ ನೀತಿಯ ತತ್ತ್ವಗಳನ್ನು ಜೀವಿತದಲ್ಲಿ ಅನ್ವಯಿಸಸಾಧ್ಯವಾಗುವಂತೆ ಅಭ್ಯಸಿಸಿ ಧ್ಯಾನಮಾಡುವುದೂ ಸೇರಿದೆ. “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ [“ಚಿಂತೆ,” NW],” ಎಂದು ಕೀರ್ತನೆಗಾರನು ಉದ್ಗರಿಸಿದನು. (ಕೀರ್ತನೆ 119:97) ಬೈಬಲಿನ ಮತ್ತು ಕ್ರೈಸ್ತ ಪ್ರಕಾಶನಗಳ ವೈಯಕ್ತಿಕ ಅಧ್ಯಯನವು ನಿಮ್ಮ ಸಾಪ್ತಾಹಿಕ ಕಾರ್ಯತಖ್ತೆಯ ಭಾಗವಾಗಿದೆಯೊ? ನಿಜ, ದೇವರ ವಾಕ್ಯದ ಶ್ರದ್ಧಾಪೂರ್ವಕವಾದ ಅಧ್ಯಯನ ಮತ್ತು ಅದರ ಪ್ರಾರ್ಥನಾಪೂರ್ವಕವಾದ ಧ್ಯಾನವು ಪಂಥಾಹ್ವಾನದಾಯಕವಾಗಿರಸಾಧ್ಯವಿದೆ. ಆದರೆ ಅನೇಕ ವೇಳೆ ಇತರ ಚಟುವಟಿಕೆಗಳಿಂದ ನಾವು ಸಮಯವನ್ನು ಖರೀದಿಸಸಾಧ್ಯವಿರುತ್ತದೆ. (ಎಫೆಸ 5:15, 16) ಪ್ರಾಯಶಃ ಮುಂಜಾನೆಯ ಜಾವಗಳು ನಿಮಗೆ ಪ್ರಾರ್ಥನೆ, ಅಧ್ಯಯನ ಮತ್ತು ಧ್ಯಾನಕ್ಕೆ ಅತ್ಯುಪಯುಕ್ತವಾಗಬಹುದು.—ಹೋಲಿಸಿ ಕೀರ್ತನೆ 119:147.
13, 14. (ಎ) ಧ್ಯಾನವು ಅಮೂಲ್ಯವಾಗಿದೆ ಏಕೆ? (ಬಿ) ಯಾವ ಶಾಸ್ತ್ರವಚನಗಳ ಕುರಿತಾದ ಧ್ಯಾನವು, ನಾವು ಲೈಂಗಿಕ ದುರಾಚಾರವನ್ನು ಹೇಸುವಂತೆ ಸಹಾಯಮಾಡಬಲ್ಲದು?
13 ಧ್ಯಾನವು ಅಮೂಲ್ಯ, ಏಕೆಂದರೆ ನಾವು ಕಲಿತದ್ದನ್ನು ಮರೆಯದಿರಲು ಅದು ಸಹಾಯಮಾಡುತ್ತದೆ. ಹೆಚ್ಚು ಪ್ರಾಮುಖ್ಯವಾಗಿ, ದೈವಿಕ ದೃಷ್ಟಿಕೋನಗಳನ್ನು ಉತ್ತೇಜಿಸುವರೆ ಅದು ಸಹಾಯಮಾಡಬಲ್ಲದು. ದೃಷ್ಟಾಂತಕ್ಕಾಗಿ: ದೇವರು ಜಾರತ್ವವನ್ನು ನಿಷೇಧಿಸುತ್ತಾನೆಂದು ತಿಳಿಯುವುದು ಒಂದು ವಿಷಯ, ಆದರೆ ‘ಕೆಟ್ಟತನಕ್ಕೆ ಹೇಸಿ ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳುವುದು’ ತೀರ ಇನ್ನೊಂದು ವಿಷಯ. (ರೋಮಾಪುರ 12:9) ಲೈಂಗಿಕ ದುರಾಚಾರದ ಕುರಿತು ಯೆಹೋವನಿಗೆ ಅನಿಸುವ ರೀತಿಯನ್ನು, ಕೊಲೊಸ್ಸೆ 3:5ರಂತಹ ಮುಖ್ಯ ಬೈಬಲ್ ವಚನಗಳನ್ನು ಧ್ಯಾನಿಸುವುದರಿಂದ ನಾವು ಕಾರ್ಯತಃ ಅನುಭವಿಸಬಲ್ಲೆವು. ಅದು ಪ್ರೋತ್ಸಾಹಿಸುವುದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.” ನಿಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಿರಿ: ‘ನಾನು ಯಾವ ರೀತಿಯ ಲೈಂಗಿಕ ಹಸಿವನ್ನು ಸಾಯಿಸಬೇಕು? ಅಶುದ್ಧ ಆಸೆಯನ್ನು ಉದ್ರೇಕಿಸಬಹುದಾದ ಯಾವುದರಿಂದ ನಾನು ದೂರವಿರಬೇಕು? ವಿರುದ್ಧಲಿಂಗದವರನ್ನು ಉಪಚರಿಸುವ ವಿಷಯದಲ್ಲಿ ನಾನು ಬದಲಾವಣೆಗಳನ್ನು ಮಾಡುವ ಅಗತ್ಯವಿದೆಯೆ?’—ಹೋಲಿಸಿ 1 ತಿಮೊಥೆಯ 5:1, 2.
14 “ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡುಮಾಡ”ದಂತೆ ಜಾರತ್ವದಿಂದ ದೂರವಿದ್ದು ಆತ್ಮನಿಯಂತ್ರಣವನ್ನು ಅಭ್ಯಾಸಿಸುವಂತೆ ಪೌಲನು ಪ್ರೋತ್ಸಾಹಿಸಿದನು. (1 ಥೆಸಲೊನೀಕ 4:3-7) ನಿಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಿರಿ: ‘ಜಾರತ್ವಮಾಡುವುದು ಏಕೆ ಹಾನಿಕರ? ನಾನು ಈ ವಿಷಯದಲ್ಲಿ ಪಾಪಮಾಡಿರುವಲ್ಲಿ, ನಾನು ನನಗಾಗಲಿ, ಇನ್ನೊಬ್ಬನಿಗಾಗಲಿ ಯಾವ ಕೆಡುಕನ್ನು ಮಾಡುವೆನು? ಆತ್ಮಿಕವಾಗಿ, ಭಾವಾತ್ಮಕವಾಗಿ ಮತ್ತು ಶಾರೀರಿಕವಾಗಿ ನಾನು ಹೇಗೆ ಬಾಧಿತನಾಗುವೆನು? ದೇವರ ನಿಯಮವನ್ನು ಉಲ್ಲಂಘಿಸಿ, ಪಶ್ಚಾತ್ತಾಪ ಪಟ್ಟಿರದ ಸಭೆಯ ವ್ಯಕ್ತಿಗಳ ವಿಷಯವೇನು? ಅವರ ಸ್ಥಿತಿ ಹೇಗಾಗಿ ಪರಿಣಮಿಸಿದೆ?’ ಇಂತಹ ನಡತೆಯ ವಿಷಯದಲ್ಲಿ ಶಾಸ್ತ್ರವು ಹೇಳುವುದನ್ನು ಹೃದಯಕ್ಕೆ ತೆಗೆದುಕೊಳ್ಳುವುದು, ದೇವರ ದೃಷ್ಟಿಯಲ್ಲಿ ಏನು ಕೆಟ್ಟದ್ದಾಗಿದೆಯೋ ಅದಕ್ಕಾಗಿ ನಮಗಿರುವ ದ್ವೇಷವನ್ನು ಆಳವಾಗಿಸಬಲ್ಲದು. (ವಿಮೋಚನಕಾಂಡ 20:14; 1 ಕೊರಿಂಥ 5:11-13; 6:9, 10; ಗಲಾತ್ಯ 5:19-21; ಪ್ರಕಟನೆ 21:8) ಒಬ್ಬ ಜಾರನು “ಮನುಷ್ಯನನ್ನು ತಿರಸ್ಕರಿಸುವದು ಮಾತ್ರವಲ್ಲದೆ . . . ದೇವರನ್ನೂ ತಿರಸ್ಕರಿಸುತ್ತಾನೆ” ಎಂದು ಪೌಲನನ್ನುತ್ತಾನೆ. (1 ಥೆಸಲೊನೀಕ 4:8) ಯಾವ ಸತ್ಕ್ರೈಸ್ತನು ತನ್ನ ಸ್ವರ್ಗೀಯ ತಂದೆಯನ್ನು ಅಲಕ್ಷಿಸಾನು?
ಸದ್ಗುಣ ಮತ್ತು ಸಹವಾಸ
15. ಸದ್ಗುಣದ ಬೆನ್ನಟ್ಟುವಿಕೆಯಲ್ಲಿ ಸಹವಾಸವು ಯಾವ ಪಾತ್ರವನ್ನು ವಹಿಸುತ್ತದೆ?
15 ಸದ್ಗುಣಿಗಳಾಗಿ ಉಳಿಯುವರೆ ಇನ್ನೊಂದು ಸಹಾಯವು ಒಳ್ಳೆಯ ಸಹವಾಸವಾಗಿದೆ. ಕೀರ್ತನೆಗಾರನು ಹಾಡಿದ್ದು: “ನಿನ್ನ ನೇಮಗಳನ್ನು ಕೈಕೊಂಡು ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು.” (ಕೀರ್ತನೆ 119:63) ಕ್ರೈಸ್ತ ಕೂಟಗಳಲ್ಲಿ ಒದಗಿಸಲ್ಪಡುವ ಹಿತಕರವಾದ ಸಹವಾಸವು ನಮಗೆ ಆವಶ್ಯಕ. (ಇಬ್ರಿಯ 10:24, 25) ನಮ್ಮನ್ನು ಪ್ರತ್ಯೇಕಿಸಿಕೊಳ್ಳುವಲ್ಲಿ, ನಾವು ನಮ್ಮ ಯೋಚನೆಯಲ್ಲಿ ಸ್ವವಿಚಾರಾಸಕ್ತರಾಗಬಹುದು ಮತ್ತು ದುರ್ಗುಣವು ನಮ್ಮನ್ನು ಸುಲಭವಾಗಿ ಬೆನ್ನಟ್ಟಸಾಧ್ಯವಿದೆ. (ಜ್ಞಾನೋಕ್ತಿ 18:1) ಆದರೆ ಹೃದಯೋಲ್ಲಾಸ ಕೊಡುವ ಕ್ರೈಸ್ತ ಸಹವಾಸವು ಸದ್ಗುಣಿಗಳಾಗಿ ಉಳಿಯುವ ನಮ್ಮ ನಿರ್ಧಾರವನ್ನು ಬಲಗೊಳಿಸಬಲ್ಲದು. ಹೌದು, ನಾವು ದುಸ್ಸಹವಾಸದ ಕುರಿತೂ ಎಚ್ಚರಿಕೆಯಿಂದಿರಬೇಕು. ನೆರೆಯವರೊಂದಿಗೆ, ಜೊತೆಕಾರ್ಮಿಕರೊಂದಿಗೆ ಮತ್ತು ಸಹಪಾಠಿಗಳೊಂದಿಗೆ ನಾವು ಸೌಹಾರ್ದದಿಂದಿರಬಲ್ಲೆವು ನಿಜ. ಆದರೆ ನಾವು ನಿಜವಾಗಿಯೂ ವಿವೇಕಿಗಳಾಗಿ ನಡೆಯುತ್ತಿರುವಲ್ಲಿ, ಕ್ರೈಸ್ತ ಸದ್ಗುಣವನ್ನು ಬೆನ್ನಟ್ಟುತ್ತಿರದವರೊಂದಿಗೆ ತೀರ ಒತ್ತಾಗಿ ಇರುವುದನ್ನು ನಾವು ತೊರೆಯುವೆವು.—ಹೋಲಿಸಿ ಕೊಲೊಸ್ಸೆ 4:5.
16. ಇಂದು ನಾವು ಸದ್ಗುಣವನ್ನು ಬೆನ್ನಟ್ಟಲು 1 ಕೊರಿಂಥ 15:33ರ ಅನ್ವಯವು ನಮಗೆ ಹೇಗೆ ಸಹಾಯಮಾಡಬಲ್ಲದು?
16 ಪೌಲನು ಬರೆದುದು: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ಈ ಹೇಳಿಕೆಯಿಂದ, ಪುನರುತ್ಥಾನದ ಕುರಿತ ಶಾಸ್ತ್ರೀಯ ಬೋಧನೆಯನ್ನು ತಳ್ಳಿಹಾಕಿದ ಕ್ರೈಸ್ತರೆನಿಸಿಕೊಂಡವರೊಂದಿಗೆ ಸಹವಾಸಮಾಡುವುದರಿಂದ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳಬಲ್ಲರೆಂದು ಅವನು ಅವರನ್ನು ಎಚ್ಚರಿಸುತ್ತಿದ್ದನು. ಪೌಲನ ಎಚ್ಚರಿಕೆಯ ಹಿಂದಿರುವ ಮೂಲತತ್ತ್ವವು, ಸಭೆಯ ಒಳಗೂ ಹೊರಗೂ ನಾವು ಮಾಡುವ ಸಹವಾಸಕ್ಕೆ ಅನ್ವಯಿಸುತ್ತದೆ. (1 ಕೊರಿಂಥ 15:12, 33) ನಮ್ಮ ಆತ್ಮಿಕ ಸೋದರ ಸೋದರಿಯರು ನಮ್ಮಲ್ಲಿರುವ ಪೂರ್ತಿ ವ್ಯಕ್ತಿಪರವಾದ ಯಾವುದೊ ವೀಕ್ಷಣದೊಂದಿಗೆ ಸಮ್ಮತಿಸದ ಕಾರಣ ನಾವು ಅವರನ್ನು ವರ್ಜಿಸಲು ಬಯಸಬಾರದು ನಿಶ್ಚಯ. (ಮತ್ತಾಯ 7:4, 5; ರೋಮಾಪುರ 14:1-12) ಆದರೂ, ಸಭೆಯಲ್ಲಿ ಯಾವನಾದರೂ ಸಂದೇಹಾಸ್ಪದ ನಡತೆಯಲ್ಲಿ ಭಾಗವಹಿಸುವಾಗ ಅಥವಾ ನಿಷ್ಠುರವಾದ ಅಥವಾ ದೂರುವ ಮನೋಭಾವವನ್ನು ಪ್ರದರ್ಶಿಸುವಾಗ ಎಚ್ಚರಿಕೆಯು ಅಗತ್ಯ. (2 ತಿಮೊಥೆಯ 2:20-22) ನಾವು ಯಾರೊಂದಿಗೆ “ಪರಸ್ಪರ ಉತ್ತೇಜನದ ವಿನಿಮಯ”ವನ್ನು (NW) ಅನುಭವಿಸಬಲ್ಲೆವೊ ಅಂತಹವರೊಂದಿಗೆ ಒತ್ತಾಗಿ ಕೂಡಿಕೊಳ್ಳುವುದು ವಿವೇಕಪ್ರದ. (ರೋಮಾಪುರ 1:11, 12) ನಾವು ಸದ್ಗುಣದ ಮಾರ್ಗವನ್ನನುಸರಿಸಿ “ಜೀವಮಾರ್ಗ”ದಲ್ಲಿ ಉಳಿಯುವಂತೆ ಇದು ನಮಗೆ ಸಹಾಯಮಾಡುವುದು.—ಕೀರ್ತನೆ 16:11.
ಸದ್ಗುಣವನ್ನು ಬೆನ್ನಟ್ಟುತ್ತಾ ಮುಂದುವರಿಯಿರಿ
17. ಅರಣ್ಯಕಾಂಡ 25ನೆಯ ಅಧ್ಯಾಯಕ್ಕನುಸಾರ, ಇಸ್ರಾಯೇಲ್ಯರಿಗೆ ಯಾವ ವಿಪತ್ತು ಸಂಭವಿಸಿತು, ಮತ್ತು ಇದು ನಮಗೆ ಯಾವ ಪಾಠವನ್ನು ಒದಗಿಸುತ್ತದೆ?
17 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ವಶಮಾಡಿಕೊಳ್ಳುವುದಕ್ಕೆ ತುಸು ಮೊದಲು, ಅವರಲ್ಲಿ ಸಾವಿರಾರು ಮಂದಿ ದುರ್ಗುಣವನ್ನು ಬೆನ್ನಟ್ಟುವ ಆಯ್ಕೆಮಾಡಿಕೊಂಡು ವಿಪತ್ತನ್ನು ಅನುಭವಿಸಿದರು. (ಅರಣ್ಯಕಾಂಡ, ಅಧ್ಯಾಯ 25) ಇಂದು ಯೆಹೋವನ ಜನರು ನೀತಿಯ ನೂತನ ಲೋಕದ ಹೊಸ್ತಿಲಲ್ಲಿ ನಿಂತಿದ್ದಾರೆ. ಅದರೊಳಕ್ಕೆ ಪ್ರವೇಶವು ಈ ಜಗತ್ತಿನ ದುರ್ಗುಣಗಳನ್ನು ತ್ಯಜಿಸುತ್ತ ಮುಂದುವರಿಯುವವರ ದಿವ್ಯ ಸುಯೋಗವಾಗಿರುವುದು. ಅಪರಿಪೂರ್ಣ ಮಾನವರಾದ ನಮ್ಮಲ್ಲಿ ತಪ್ಪಾದ ಪ್ರವೃತ್ತಿಗಳು ಇರಬಹುದಾದರೂ, ದೇವರು ತನ್ನ ಪವಿತ್ರಾತ್ಮದ ನೀತಿಯ ಮಾರ್ಗದರ್ಶನವನ್ನು ನಾವು ಅನುಸರಿಸುವಂತೆ ಸಹಾಯಮಾಡಬಲ್ಲನು. (ಗಲಾತ್ಯ 5:16; 1 ಥೆಸಲೊನೀಕ 4:3, 4) ಆದಕಾರಣ, ಇಸ್ರಾಯೇಲ್ಯರಿಗೆ ಯೆಹೋಶುವನು ಕೊಟ್ಟ ಬುದ್ಧಿವಾದಕ್ಕೆ ನಾವು ಕಿವಿಗೊಡೋಣ: “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರ್ರಿ. ಆತನಿಗೆ ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವೆಮಾಡಿರಿ.” (ಯೆಹೋಶುವ 24:14) ಯೆಹೋವನನ್ನು ಅಸಂತೋಷಗೊಳಿಸೇವೆಂಬ ಪೂಜ್ಯಭಾವದ ಭಯವು, ನಾವು ಸದ್ಗುಣಮಾರ್ಗವನ್ನು ಬೆನ್ನಟ್ಟುವಂತೆ ಸಹಾಯಮಾಡುವುದು.
18. ದುರ್ಗುಣ ಮತ್ತು ಸದ್ಗುಣಗಳ ಕುರಿತು, ಎಲ್ಲ ಕ್ರೈಸ್ತರ ನಿರ್ಧಾರವು ಏನಾಗಿರಬೇಕು?
18 ದೇವರನ್ನು ಮೆಚ್ಚಿಸುವುದು ನಿಮ್ಮ ಹೃದ್ಬಯಕೆಯಾಗಿರುವಲ್ಲಿ, ಪೌಲನ ಬುದ್ಧಿವಾದಕ್ಕೆ ಕಿವಿಗೊಡಲು ದೃಢಮನಸ್ಸು ಮಾಡಿರಿ: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.” ಹಾಗೆ ಮಾಡುವಲ್ಲಿ ಫಲಿತಾಂಶವೇನು? ಪೌಲನಂದದ್ದು: “ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.” (ಫಿಲಿಪ್ಪಿ 4:8, 9) ಹೌದು, ಯೆಹೋವನ ಸಹಾಯದಿಂದ, ನೀವು ದುರ್ಗುಣವನ್ನು ತಳ್ಳಿಹಾಕಿ ಸದ್ಗುಣವನ್ನು ಬೆನ್ನಟ್ಟಬಲ್ಲಿರಿ.
[ಅಧ್ಯಯನ ಪ್ರಶ್ನೆಗಳು]
a ಎಪ್ರಿಲ್ 15, 1993ರ ಕಾವಲಿನಬುರುಜು, ಪುಟ 19-24 ಮತ್ತು ಫೆಬ್ರವರಿ 8, ಫೆಬ್ರವರಿ 22, ಮತ್ತು ಮಾರ್ಚ್ 22, 1993 ಮತ್ತು ನವೆಂಬರ್ 22, 1996ರ ಅವೇಕ್! ಪತ್ರಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು . . . ” ಎಂಬ ಲೇಖನಮಾಲೆಯನ್ನು ನೋಡಿರಿ.
ಪುನರ್ವಿಮರ್ಶೆಗಾಗಿ ವಿಷಯಗಳು
◻ ಸದ್ಗುಣವನ್ನು ಬೆನ್ನಟ್ಟಬೇಕಾದರೆ ಏನು ಅಗತ್ಯ?
◻ ಹಿಜ್ಕೀಯ, ದಾನಿಯೇಲ ಮತ್ತು ಮೂವರು ಇಬ್ರಿಯರು ಯಾವ ಪರಿಸ್ಥಿತಿಗಳಡಿಯಲ್ಲಿ ಸದ್ಗುಣಿಗಳಾಗಿ ಉಳಿದರು?
◻ ಸೈತಾನನ ಹಂಚಿಕೆಗಳನ್ನು ಪ್ರತಿರೋಧಿಸುವುದರಲ್ಲಿ ನಾವು ಹೇಗೆ ದಾವೀದನಂತಿರಬಲ್ಲೆವು?
◻ ಮನೋರಂಜನೆಯ ವಿಷಯದಲ್ಲಿ ಕ್ರೈಸ್ತರು ಏಕೆ ಎಚ್ಚರಿಕೆಯಿಂದಿರಬೇಕು?
◻ ಸದ್ಗುಣವನ್ನು ಬೆನ್ನಟ್ಟುವುದರಲ್ಲಿ ಅಧ್ಯಯನ, ಧ್ಯಾನ ಮತ್ತು ಸಹವಾಸಗಳು ಯಾವ ಪಾತ್ರವನ್ನು ವಹಿಸುತ್ತವೆ?
[ಪುಟ 15 ರಲ್ಲಿರುವ ಚಿತ್ರ]
ಯುವ ಹಿಜ್ಕೀಯನು ಮೋಲೆಕನ ಆರಾಧಕರಿಂದ ಸುತ್ತುವರಿಯಲ್ಪಟ್ಟಿದ್ದರೂ ಸದ್ಗುಣವನ್ನು ಬೆನ್ನಟ್ಟಿದನು
[ಪುಟ 17 ರಲ್ಲಿರುವ ಚಿತ್ರ]
ಮನೋರಂಜನೆಯ ಸಂಬಂಧದಲ್ಲಿ ಕ್ರೈಸ್ತರು ಎಚ್ಚರಿಕೆಯಿಂದಿರಬೇಕು