ರಕ್ಷಣೆಗಾಗಿ ಬಹಿರಂಗ ಪ್ರಕಟನೆಯನ್ನು ಮಾಡಿರಿ
“ಯೆಹೋವನ ನಾಮವನ್ನು ಕರೆಯುವವರೆಲ್ಲರ ರಕ್ಷಣೆಯಾಗುವುದು.”—ರೋಮಾಪುರ 10:13, NW.
1.ಇತಿಹಾಸದಾದ್ಯಂತ ಯಾವ ಎಚ್ಚರಿಕೆಗಳು ಧ್ವನಿಸಲ್ಪಟ್ಟಿವೆ?
ಇತಿಹಾಸವು, ಹಲವಾರು ‘ಯೆಹೋವನ ದಿನಗಳನ್ನು’ ವರ್ಣಿಸುತ್ತದೆ. ನೋಹನ ದಿನದ ಜಲಪ್ರಳಯ, ಸೊದೋಮ್ ಗೊಮೋರಗಳ ವಿನಾಶ ಮತ್ತು ಸಾ.ಶ.ಪೂ. 607ರಲ್ಲಿ ಮತ್ತು ಸಾ.ಶ. 70ರಲ್ಲಿನ ಯೆರೂಸಲೇಮಿನ ನಾಶನಗಳು, ಯೆಹೋವನ ಮಹತ್ತರ ಮತ್ತು ಭಯಪ್ರೇರಕ ದಿನಗಳಾಗಿದ್ದವು. ಅವು, ಯೆಹೋವನ ವಿರುದ್ಧ ದಂಗೆಯೆದ್ದವರ ಮೇಲೆ ನ್ಯಾಯತೀರ್ಪನ್ನು ವಿಧಿಸುವ ದಿನಗಳಾಗಿದ್ದವು. (ಮಲಾಕಿಯ 4:5; ಲೂಕ 21:22) ಆ ದಿನಗಳಲ್ಲಿ, ಅನೇಕರು ತಮ್ಮ ದುಷ್ಟತನದ ಕಾರಣದಿಂದ ನಾಶವಾದರು. ಆದರೆ ಕೆಲವರು ಪಾರಾದರು. ಸನ್ನಿಹಿತವಾದ ವಿಪ್ಲವದ ಕುರಿತಾಗಿ ದುಷ್ಟರಿಗೆ ತಿಳಿಯಪಡಿಸುತ್ತಾ, ಸಹೃದಯದ ವ್ಯಕ್ತಿಗಳಿಗೆ ರಕ್ಷಣೆಗಾಗಿ ಒಂದು ಅವಕಾಶವನ್ನು ಕೊಡುತ್ತಾ, ಯೆಹೋವನು ಎಚ್ಚರಿಕೆಗಳನ್ನು ಧ್ವನಿಸುವಂತೆ ಮಾಡಿದನು.
2, 3. (ಎ)ಪಂಚಾಶತ್ತಮದಲ್ಲಿ ಯಾವ ಪ್ರವಾದನಾ ಎಚ್ಚರಿಕೆಯು ಉಲ್ಲೇಖಿಸಲ್ಪಟ್ಟಿತು? (ಬಿ) ಸಾ.ಶ. 33ರ ಪಂಚಾಶತ್ತಮದಂದಿನಿಂದ, ಯೆಹೋವನ ನಾಮವನ್ನು ಕರೆಯುವುದರಲ್ಲಿ ಏನು ಅವಶ್ಯಪಡಿಸಲ್ಪಟ್ಟಿತು?
2 ಸಾ.ಶ. 70ರಲ್ಲಿನ ಯೆರೂಸಲೇಮಿನ ನಾಶನವು, ಇದಕ್ಕೆ ಒಂದು ಗಮನಾರ್ಹ ಮಾದರಿಯಾಗಿದೆ. ಆ ಘಟನೆಯನ್ನು ಬಹುಮಟ್ಟಿಗೆ 900 ವರ್ಷಗಳಿಗೆ ಮುಂಚಿತವಾಗಿ ಮುಂತಿಳಿಸುತ್ತಾ, ಪ್ರವಾದಿಯಾದ ಯೋವೇಲನು ಬರೆದುದು: “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆ ಭೂಮ್ಯಾಕಾಶಗಳಲ್ಲಿ ರಕ್ತ ಬೆಂಕಿ ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು; ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.” ಇಂತಹ ಒಂದು ಭೀತಿಕಾರಕ ಸಮಯವನ್ನು ಯಾರಾದರೂ ಪಾರಾಗುವುದಾದರೂ ಹೇಗೆ? ಪ್ರೇರಣೆಯ ಕೆಳಗೆ ಯೋವೇಲನು ಬರೆದುದು: “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ [“ಕರೆಯುವವರೆಲ್ಲರಿಗೆ,” NW] ರಕ್ಷಣೆಯಾಗುವದು; ಯೆಹೋವನು ತಿಳಿಸಿದಂತೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಅನೇಕರು ಉಳಿದಿರುವರು; ಯೆಹೋವನು ಕರೆಯುವ ಜನಶೇಷದಲ್ಲಿ ಅವರು ಸೇರಿದವರಾಗಿರುವರು.”—ಯೋವೇಲ 2:30-32.
3 ಸಾ.ಶ. 33ರ ಪಂಚಾಶತ್ತಮದಲ್ಲಿ, ಅಪೊಸ್ತಲ ಪೇತ್ರನು ಯೆರೂಸಲೇಮಿನಲ್ಲಿದ್ದ ಯೆಹೂದ್ಯರ ಮತ್ತು ಮತಾಂತರಿಗಳ ಒಂದು ಗುಂಪನ್ನು ಸಂಬೋಧಿಸಿ, ಯೋವೇಲನ ಪ್ರವಾದನೆಯನ್ನು ಉಲ್ಲೇಖಿಸುತ್ತಾ, ಅವರ ದಿನದಲ್ಲಿ ಒಂದು ನೆರವೇರಿಕೆಯನ್ನು ನಿರೀಕ್ಷಿಸಸಾಧ್ಯವಿದೆಯೆಂಬುದನ್ನು ತನ್ನ ಕೇಳುಗರಿಗೆ ತೋರಿಸಿದನು: “ಕರ್ತನ [“ಯೆಹೋವನ,” NW] ಆಗಮನದ ಗಂಭೀರವಾದ ಮಹಾ ದಿನವು ಬರುವದಕ್ಕೆ ಮುಂಚೆ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ, ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು; ಆದರೂ ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ [“ಕರೆಯುವವರೆಲ್ಲರಿಗೆ,” NW] ರಕ್ಷಣೆಯಾಗುವದು.” (ಅ. ಕೃತ್ಯಗಳು 2:16-21) ಪೇತ್ರನಿಗೆ ಕಿವಿಗೊಡುತ್ತಿದ್ದ ಜನರ ಗುಂಪುಗಳೆಲ್ಲವೂ ಮೋಶೆಯ ಧರ್ಮಶಾಸ್ತ್ರದ ಕೆಳಗಿದ್ದವು, ಮತ್ತು ಈ ಕಾರಣದಿಂದ ಅವರಿಗೆ ಯೆಹೋವನ ನಾಮವು ತಿಳಿದಿತ್ತು. ಇನ್ನುಮುಂದೆ ಯೆಹೋವನ ನಾಮವನ್ನು ಕರೆಯುವುದು ಹೆಚ್ಚಿನದ್ದನ್ನು ಒಳಗೊಂಡಿರುವುದೆಂಬುದನ್ನು ಪೇತ್ರನು ವಿವರಿಸಿದನು. ಇದರಲ್ಲಿ, ಯಾರು ಕೊಲ್ಲಲ್ಪಟ್ಟು ಅಮರ ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಟ್ಟನೊ ಆ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ಸೇರಿತ್ತೆಂಬುದು ಗಮನಾರ್ಹ.—ಅ. ಕೃತ್ಯಗಳು 2:37, 38.
4.ಕ್ರೈಸ್ತರು ಯಾವ ಸಂದೇಶವನ್ನು ಪ್ರಚುರಪಡಿಸಿದರು?
4 ಪಂಚಾಶತ್ತಮದಂದಿನಿಂದ, ಕ್ರೈಸ್ತರು ಪುನರುತ್ಥಿತ ಯೇಸುವಿನ ಕುರಿತಾದ ವಾಕ್ಯವನ್ನು ಹಬ್ಬಿಸಿದರು. (1 ಕೊರಿಂಥ 1:23) ಮಾನವರು ಯೆಹೋವ ದೇವರ ಆತ್ಮಿಕ ಪುತ್ರರೋಪಾದಿ ದತ್ತುಸ್ವೀಕರಿಸಲ್ಪಟ್ಟು, ‘ಯೆಹೋವನ ಗುಣಾತಿಶಯಗಳನ್ನು ಪ್ರಚಾರಮಾಡುವ’ ಒಂದು ಆತ್ಮಿಕ ಜನಾಂಗವಾದ ಹೊಸ ‘ದೇವರ ಇಸ್ರಾಯೇಲಿನ’ ಭಾಗವಾಗಸಾಧ್ಯವಿತ್ತು ಎಂಬುದನ್ನು ಅವರು ಪ್ರಸಿದ್ಧಪಡಿಸಿದರು. (ಗಲಾತ್ಯ 6:16; 1 ಪೇತ್ರ 2:9) ಮರಣದ ತನಕ ನಂಬಿಗಸ್ತರಾಗಿ ಉಳಿದವರು, ಯೇಸುವಿನ ಸ್ವರ್ಗೀಯ ರಾಜ್ಯದಲ್ಲಿ ಆತನೊಂದಿಗೆ ಜೊತೆಬಾಧ್ಯಸ್ಥರಾಗಿ, ಅಮರ ಸ್ವರ್ಗೀಯ ಜೀವಿತವನ್ನು ಬಾಧ್ಯತೆಯಾಗಿ ಪಡೆಯಲಿದ್ದರು. (ಮತ್ತಾಯ 24:13; ರೋಮಾಪುರ 8:15, 16; 1 ಕೊರಿಂಥ 15:50-54) ಇನ್ನೂ ಹೆಚ್ಚಾಗಿ, ಈ ಕ್ರೈಸ್ತರು, ಯೆಹೋವನ ಮಹತ್ತರ ಮತ್ತು ಭಯಪ್ರೇರಕ ದಿನದ ಬರುವಿಕೆಯನ್ನು ಘೋಷಿಸಲಿದ್ದರು. ಆ ಸಮಯದ ವರೆಗೆ ಯೆರೂಸಲೇಮನ್ನು ಮತ್ತು ದೇವರ ಜನರೆಂದು ಹೇಳಿಕೊಳ್ಳುವವರನ್ನು ಬಡಿದಂತಹ ಯಾವುದೇ ಘಟನೆಯನ್ನು ಅತಿಶಯಿಸುವಂತಹ ಒಂದು ಸಂಕಟವನ್ನು ಅದು ಅನುಭವಿಸುವುದೆಂದು ಅವರು ಯೆಹೂದಿ ಲೋಕಕ್ಕೆ ಎಚ್ಚರಿಕೆ ನೀಡಬೇಕಾಗಿತ್ತು. ಆದಾಗಲೂ, ಪಾರಾಗುವವರು ಇರಲಿದ್ದರು. ಯಾರು? ಯೆಹೋವನ ನಾಮವನ್ನು ಕರೆದವರು.
“ಕಡೇ ದಿವಸಗಳಲ್ಲಿ”
5.ಇಂದು ಪ್ರವಾದನೆಯ ಯಾವ ನೆರವೇರಿಕೆಗಳು ನಡೆದಿವೆ?
5 ಅನೇಕ ವಿಧಗಳಲ್ಲಿ, ಹಿಂದಿನ ಆ ಪರಿಸ್ಥಿತಿಗಳು, ನಾವಿಂದು ಏನನ್ನು ನೋಡುತ್ತೇವೊ ಅದರ ಮುನ್ಛಾಯೆಯಾಗಿದ್ದವು. 1914ರಂದಿನಿಂದ ಮಾನವಕುಲವು, ಬೈಬಲಿನಲ್ಲಿ ಯಾವುದು “ಅಂತ್ಯಕಾಲ,” “ವಿಷಯಗಳ ವ್ಯವಸ್ಥೆಯ ಸಮಾಪ್ತಿ,” (NW) ಮತ್ತು “ಕಡೇ ದಿವಸಗಳು” ಎಂದು ಸೂಚಿಸಲ್ಪಟ್ಟಿದೆಯೊ ಆ ವಿಶೇಷವಾದ ಸಮಯಾವಧಿಯಲ್ಲಿ ಜೀವಿಸುತ್ತಿದೆ. (ದಾನಿಯೇಲ 12:1, 4; ಮತ್ತಾಯ 24:3-8; 2 ತಿಮೊಥೆಯ 3:1-5, 13) ನಮ್ಮ ಶತಮಾನದಲ್ಲಿ, ಕ್ರೂರ ಯುದ್ಧಗಳು, ನಿರ್ಬಂಧವಿಲ್ಲದ ಹಿಂಸಾಚಾರ, ಮತ್ತು ಸಮಾಜ ಹಾಗೂ ಪರಿಸರದ ಅವನತಿಯು, ಬೈಬಲ್ ಪ್ರವಾದನೆಯ ಒಂದು ಗಮನಾರ್ಹ ನೆರವೇರಿಕೆಯನ್ನು ಒದಗಿಸಿದೆ. ಇವೆಲ್ಲವೂ, ಮಾನವಕುಲವು ಯೆಹೋವನ ಕೊನೆಯ, ನಿರ್ಣಾಯಕ ಭಯಪ್ರೇರಕ ದಿನವನ್ನು ಇನ್ನೇನು ಅನುಭವಿಸಲಿದೆ ಎಂಬುದನ್ನು ಸೂಚಿಸುತ್ತಾ, ಯೇಸುವಿನಿಂದ ಪ್ರವಾದಿಸಲ್ಪಟ್ಟ ಸೂಚನೆಯ ಭಾಗವಾಗಿವೆ. ಇದು, ‘ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಿರದ, ಇನ್ನು ಮೇಲೆಯೂ ಆಗದ ಮಹಾ ಸಂಕಟದ’ ಪರಾಕಾಷ್ಠೆ, ಅರ್ಮಗೆದ್ದೋನಿನ ಯುದ್ಧದಲ್ಲಿ ಅಂತ್ಯಗೊಳ್ಳುತ್ತದೆ.—ಮತ್ತಾಯ 24:21; ಪ್ರಕಟನೆ 16:16.
6. (ಎ)ದೀನ ವ್ಯಕ್ತಿಗಳನ್ನು ರಕ್ಷಿಸಲಿಕ್ಕಾಗಿ ಯೆಹೋವನು ಹೇಗೆ ಕ್ರಿಯೆಗೈಯುತ್ತಿದ್ದಾನೆ? (ಬಿ) ಪಾರಾಗುವ ವಿಧದ ಕುರಿತಾಗಿ ಪೌಲನ ಸಲಹೆಯನ್ನು ನಾವೆಲ್ಲಿ ಕಂಡುಕೊಳ್ಳುತ್ತೇವೆ?
6 ವಿನಾಶದ ದಿನವು ಇನ್ನೂ ಹೆಚ್ಚು ಹತ್ತಿರವಾದಂತೆ, ಯೆಹೋವನು ದೀನ ವ್ಯಕ್ತಿಗಳ ರಕ್ಷಣೆಗಾಗಿ ಕ್ರಿಯೆಗೈಯುತ್ತಿದ್ದಾನೆ. ಈ “ಅಂತ್ಯಕಾಲ”ದಲ್ಲಿ, ಆತನು ದೇವರ ಆತ್ಮಿಕ ಇಸ್ರಾಯೇಲಿನ ಶೇಷವರ್ಗವನ್ನು ಒಟ್ಟುಗೂಡಿಸಿ, ತನ್ನ ಭೂಸೇವಕರ ಗಮನವನ್ನು 1930ಗಳಿಂದ, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಆಗಿರುವ “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ”ವನ್ನು ಒಟ್ಟುಗೂಡಿಸುವುದರ ಕಡೆಗೆ ನಿರ್ದೇಶಿಸಿದ್ದಾನೆ. ಒಂದು ಗುಂಪಿನೋಪಾದಿ, ಇವರು ಜೀವಂತವಾಗಿ “ಮಹಾ ಸಂಕಟದಿಂದ ಹೊರಬರುತ್ತಾರೆ.” (ಪ್ರಕಟನೆ 7:9, 14) ಆದರೆ ಪ್ರತಿಯೊಬ್ಬ ವ್ಯಕ್ತಿಯು, ಅವನ ಅಥವಾ ಅವಳ ಪಾರಾಗುವಿಕೆಯನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು? ಅಪೊಸ್ತಲ ಪೌಲನು ಆ ಪ್ರಶ್ನೆಗೆ ಉತ್ತರಿಸುತ್ತಾನೆ. ರೋಮಾಪುರ 10ನೆಯ ಅಧ್ಯಾಯದಲ್ಲಿ ಅವನು ಪಾರಾಗುವಿಕೆಗಾಗಿ ಉತ್ತಮ ಸಲಹೆ—ಅವನ ದಿನದಲ್ಲಿ ಅನ್ವಯವಾದಂತಹ ಮತ್ತು ನಮ್ಮ ದಿನದಲ್ಲಿ ಪುನಃ ಅನ್ವಯವಾಗುವಂತಹ ಸಲಹೆ—ಯನ್ನು ಕೊಡುತ್ತಾನೆ.
ರಕ್ಷಣೆಗಾಗಿ ಒಂದು ಪ್ರಾರ್ಥನೆ
7. (ಎ)ರೋಮಾಪುರ 10:1, 2ರಲ್ಲಿ ಯಾವ ನಿರೀಕ್ಷೆಯು ಗುರುತಿಸಲ್ಪಟ್ಟಿದೆ? (ಬಿ) “ಸುವಾರ್ತೆಯು” ಹೆಚ್ಚು ವಿಸ್ತೃತವಾಗಿ ಘೋಷಿಸಲ್ಪಡುವಂತೆ ಮಾಡಲು ಯೆಹೋವನಿಗೆ ಈಗ ಸಾಧ್ಯವಿತ್ತು ಏಕೆ?
7 ಪೌಲನು ರೋಮಾಪುರ ಪುಸ್ತಕವನ್ನು ಬರೆದಾಗ, ಯೆಹೋವನು ಆಗಲೇ ಇಸ್ರಾಯೇಲನ್ನು ಒಂದು ಜನಾಂಗದೋಪಾದಿ ತ್ಯಜಿಸಿಬಿಟ್ಟಿದ್ದನು. ಆದರೂ ಅಪೊಸ್ತಲನು ದೃಢೀಕರಿಸಿದ್ದು: “ಇಸ್ರಾಯೇಲ್ಯರು ರಕ್ಷಣೆಹೊಂದಬೇಕೆಂಬದೇ ನನ್ನ ಮನೋಭಿಲಾಷೆಯೂ ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.” ಒಬ್ಬೊಬ್ಬ ಯೆಹೂದ್ಯರೂ ದೇವರ ಚಿತ್ತದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬಹುದೆಂಬುದು ಅವನ ನಿರೀಕ್ಷೆಯಾಗಿತ್ತು. ಇದು ಅವರು ರಕ್ಷಿಸಲ್ಪಡುವಂತೆ ಮುನ್ನಡೆಸಲಿತ್ತು. (ರೋಮಾಪುರ 10:1, 2) ಇನ್ನೂ ಹೆಚ್ಚಾಗಿ, ಯಾರು ನಂಬಿಕೆಯನ್ನು ಅಭ್ಯಾಸಿಸುತ್ತಾರೋ ಆ ಮಾನವಕುಲದ ಇಡೀ ಜಗತ್ತಿನಲ್ಲಿರುವವರ ರಕ್ಷಣೆಯನ್ನು ಯೆಹೋವನು ಬಯಸುತ್ತಾನೆ. ಇದನ್ನು ಯೋಹಾನ 3:16ರಲ್ಲಿ ಸೂಚಿಸಲಾಗಿದೆ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಆ ಭವ್ಯ ರಕ್ಷಣೆಗಾಗಿ ಮಾರ್ಗವನ್ನು ತೆರೆಯಿತು. ನೋಹನ ದಿನದಲ್ಲಿ ಮತ್ತು ಹಿಂಬಾಲಿಸಿದಂತಹ ನ್ಯಾಯತೀರ್ಪಿನ ಇತರ ದಿನಗಳಲ್ಲಿದ್ದಂತೆ, ರಕ್ಷಣೆಯ ಮಾರ್ಗದ ಕಡೆಗೆ ಕೈತೋರಿಸುತ್ತಾ, “ಸುವಾರ್ತೆಯು” ಘೋಷಿಸಲ್ಪಡುವಂತೆ ಯೆಹೋವನು ಮಾಡಿದ್ದಾನೆ.—ಮಾರ್ಕ 13:10, 19, 20.
8. ಪೌಲನ ನಮೂನೆಯನ್ನು ಅನುಕರಿಸುತ್ತಾ, ನಿಜ ಕ್ರೈಸ್ತರು ಇಂದು ಯಾರಿಗೆ ಸದ್ಭಾವನೆಯನ್ನು ನೀಡುತ್ತಾರೆ, ಮತ್ತು ಹೇಗೆ?
8 ಯೆಹೂದಿ ಮತ್ತು ಅನ್ಯಜನಾಂಗದವರ ಕಡೆಗೆ ತನ್ನ ಸ್ವಂತ ಸದ್ಭಾವನೆಯನ್ನು ತೋರಿಸುತ್ತಾ, ಪೌಲನು ಪ್ರತಿಯೊಂದು ಸಂದರ್ಭದಲ್ಲಿ ಸಾರಿದನು. ಅವನು “ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.” ಅವನು ಎಫೆಸದ ಹಿರಿಯರಿಗೆ ಹೇಳಿದ್ದು: “ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯದೆ ಯೆಹೂದ್ಯರಿಗೂ ಗ್ರೀಕರಿಗೂ ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ಖಂಡಿತವಾಗಿ ಬೋಧಿಸುವವನಾಗಿದ್ದೆನು.” (ಅ. ಕೃತ್ಯಗಳು 18:4; 20:20, 21) ತದ್ರೀತಿಯಲ್ಲಿ, ಯೆಹೋವನ ಸಾಕ್ಷಿಗಳು ಇಂದು, ಕ್ರೈಸ್ತರೆಂದು ಹೇಳಿಕೊಳ್ಳುವವರಿಗೆ ಮಾತ್ರವಲ್ಲ, ಬದಲಾಗಿ ಎಲ್ಲ ಜನರಿಗೆ “ಭೂಲೋಕದ ಕಟ್ಟಕಡೆಯ ವರೆಗೂ” ಸಾರುವುದರಲ್ಲಿ ತಮ್ಮನ್ನು ವಿನಿಯೋಗಿಸಿಕೊಳ್ಳುತ್ತಿದ್ದಾರೆ.—ಅ. ಕೃತ್ಯಗಳು 1:8; 18:5.
“ನಂಬಿಕೆಯ ವಿಷಯವಾದ ವಾಕ್ಯ”ವನ್ನು ಅರಿಕೆಮಾಡುವುದು
9. (ಎ)ರೋಮಾಪುರ 10:8, 9 ಯಾವ ವಿಧದ ನಂಬಿಕೆಯನ್ನು ಉತ್ತೇಜಿಸುತ್ತದೆ? (ಬಿ) ನಮ್ಮ ನಂಬಿಕೆಯ ನಿವೇದನೆಯನ್ನು ನಾವು ಯಾವಾಗ ಮತ್ತು ಹೇಗೆ ಮಾಡಬೇಕು?
9 ತಾಳಿಕೊಳ್ಳುವಂತಹ ನಂಬಿಕೆಯು, ರಕ್ಷಣೆಗಾಗಿ ಆವಶ್ಯಕವಾಗಿದೆ. ಧರ್ಮೋಪದೇಶಕಾಂಡ 30:14ನ್ನು ಉಲ್ಲೇಖಿಸುತ್ತಾ ಪೌಲನು ಘೋಷಿಸಿದ್ದು: “ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಅನ್ನುತ್ತದೆ. ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.” (ರೋಮಾಪುರ 10:8) ಆ “ನಂಬಿಕೆಯ ವಿಷಯವಾದ ವಾಕ್ಯ”ವನ್ನು ನಾವು ಸಾರಿದಂತೆ, ಅದು ನಮ್ಮ ಹೃದಯಗಳಲ್ಲಿ ಹೆಚ್ಚೆಚ್ಚು ಆಳವಾಗಿ ಕೆತ್ತಲ್ಪಡುತ್ತದೆ. ಅದು ಪೌಲನ ವಿಷಯದಲ್ಲಿ ಸತ್ಯವಾಗಿತ್ತು, ಮತ್ತು ಅವನ ಮುಂದಿನ ಮಾತುಗಳು, ಆ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ಅವನಂತಿರಲಿಕ್ಕಾಗಿರುವ ನಮ್ಮ ದೃಢನಿರ್ಧಾರವನ್ನು ಬಲಪಡಿಸಬಲ್ಲವು: “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ.” (ರೋಮಾಪುರ 10:9) ಈ ಅರಿಕೆಯು, ದೀಕ್ಷಾಸ್ನಾನದ ಸಮಯದಲ್ಲಿ ಇತರರ ಮುಂದೆ ಮಾಡಲ್ಪಡುವುದು ಮಾತ್ರವಲ್ಲ, ಅದು ಸತ್ಯದ ಎಲ್ಲ ಭವ್ಯ ಅಂಶಗಳ ಕುರಿತಾದ ಒಂದು ಹುರುಪಿನ ಬಹಿರಂಗವಾದ ಸಾಕ್ಷಿ, ಒಂದು ಸತತವಾದ ಅರಿಕೆಯಾಗಿರಬೇಕು. ಅಂತಹ ಸತ್ಯವು, ಪರಮಾಧಿಕಾರಿ ಪ್ರಭುವಾದ ಯೆಹೋವನ ಅಮೂಲ್ಯವಾದ ಹೆಸರು, ನಮ್ಮ ಮೆಸ್ಸೀಯ ಸಂಬಂಧಿತ ರಾಜನೂ ವಿಮೋಚಕನೂ ಆಗಿರುವ ಕರ್ತನಾದ ಯೇಸು ಕ್ರಿಸ್ತನು, ಮತ್ತು ಶೋಭಾಯಮಾನವಾದ ರಾಜ್ಯ ವಾಗ್ದಾನಗಳ ಮೇಲೆ ಕೇಂದ್ರೀಕರಿಸುತ್ತದೆ.
10. ರೋಮಾಪುರದವರಿಗೆ 10:10, 11ಕ್ಕೆ ಹೊಂದಿಕೆಯಲ್ಲಿ, ನಾವು ಈ “ನಂಬಿಕೆಯ ವಿಷಯವಾದ ವಾಕ್ಯ”ವನ್ನು ಹೇಗೆ ನಿರ್ವಹಿಸಬೇಕು?
10 ಅಪೊಸ್ತಲನು ತಿಳಿಸುತ್ತಾ ಹೋಗುವಂತೆ, ಈ “ನಂಬಿಕೆಯ ವಿಷಯವಾದ ವಾಕ್ಯ”ವನ್ನು ಸ್ವೀಕರಿಸದ ಹಾಗೂ ಅನ್ವಯಿಸದ ಯಾವುದೇ ವ್ಯಕ್ತಿಗೆ ರಕ್ಷಣೆಯಿಲ್ಲ: “ಹೃದಯದಿಂದ ಒಬ್ಬನು ನೀತಿಗಾಗಿ ನಂಬಿಕೆಯನ್ನು ಪ್ರದರ್ಶಿಸುತ್ತಾನೆ, ಆದರೆ ಬಾಯಿಂದ ರಕ್ಷಣೆಗಾಗಿ ಬಹಿರಂಗ ಪ್ರಕಟನೆಯನ್ನು ಮಾಡುತ್ತಾನೆ. ಆತನ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವುದಿಲ್ಲ ಎಂದು ಶಾಸ್ತ್ರವು ಹೇಳುತ್ತದೆ.” (ರೋಮಾಪುರ 10:10, 11, NW) ನಾವು ಈ “ನಂಬಿಕೆಯ ವಿಷಯವಾದ ವಾಕ್ಯ”ದ ಕುರಿತಾಗಿ ನಿಷ್ಕೃಷ್ಟ ಜ್ಞಾನವನ್ನು ಗಳಿಸಿ, ಅದನ್ನು ಇತರರಿಗೆ ತಿಳಿಸಲು ಪ್ರಚೋದಿಸಲ್ಪಡುವಂತೆ ಅದನ್ನು ನಮ್ಮ ಹೃದಯಗಳಲ್ಲಿ ಪೋಷಿಸುವುದನ್ನು ಮುಂದುವರಿಸಬೇಕು. ಸ್ವತಃ ಯೇಸು ನಮಗೆ ಜ್ಞಾಪಿಸುವುದು: “ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಸಂತತಿಯಲ್ಲಿ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವಾಗ ನಾಚಿಕೊಳ್ಳುವನು.”—ಮಾರ್ಕ 8:38.
11. ಸುವಾರ್ತೆಯು ಎಷ್ಟು ವ್ಯಾಪಕವಾಗಿ ಸಾರಲ್ಪಡಬೇಕು, ಮತ್ತು ಏಕೆ?
11 ಪ್ರವಾದಿಯಾದ ದಾನಿಯೇಲನಿಂದ ಮುಂತಿಳಿಸಲ್ಪಟ್ಟಂತೆ, ಈ ಅಂತ್ಯದ ಸಮಯದಲ್ಲಿ, ರಾಜ್ಯ ಸಾಕ್ಷಿಯು ಲೋಕದ ಕಟ್ಟಕಡೆಯ ವರೆಗೆ ವಿಸ್ತರಿಸಿದಂತೆ, “ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ” ಪ್ರಕಾಶಿಸುವುದು ಕಂಡುಬಂದಿದೆ. ಅವರು “ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡು”ತ್ತಿದ್ದಾರೆ ಮತ್ತು ಸತ್ಯ ಜ್ಞಾನವು ನಿಶ್ಚಯವಾಗಿಯೂ ಸಮೃದ್ಧವಾಗಿದೆ, ಯಾಕಂದರೆ ಈ ಅಂತ್ಯದ ಸಮಯಕ್ಕೆ ಸಂಬಂಧಿಸಿದ ಪ್ರವಾದನೆಗಳ ಮೇಲೆ ಯೆಹೋವನು ಸತತವಾಗಿ ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಬೀರುತ್ತಿದ್ದಾನೆ. (ದಾನಿಯೇಲ 12:3, 4) ಸತ್ಯನೀತಿಯನ್ನು ಪ್ರೀತಿಸುವವರೆಲ್ಲರ ಪಾರಾಗುವಿಕೆಗಾಗಿ ಅತ್ಯಾವಶ್ಯಕವಾಗಿರುವ ರಕ್ಷಣೆಯ ಸಂದೇಶವು ಇಲ್ಲಿದೆ.
12. ಪ್ರಕಟನೆ 14:6ರಲ್ಲಿ ವರ್ಣಿಸಲ್ಪಟ್ಟಿರುವ ದೇವದೂತನ ನೇಮಕಕ್ಕೆ ರೋಮಾಪುರ 10:12 ಹೇಗೆ ಸಂಬಂಧಿಸುತ್ತದೆ?
12 ಅಪೊಸ್ತಲ ಪೌಲನು ಮುಂದುವರಿಸುವುದು: “ಈ ವಿಷಯದಲ್ಲಿ ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚುಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತ; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ.” (ರೋಮಾಪುರ 10:12) “ಸುವಾರ್ತೆಯು” ಇಂದು ಇನ್ನೂ ಹೆಚ್ಚು ವಿಸ್ತಾರವಾದ ಭೌಗೋಲಿಕ ಮಟ್ಟದಲ್ಲಿ, ಎಲ್ಲ ಜನರಿಗೆ, ಲೋಕದ ಕಟ್ಟಕಡೆಯ ವರೆಗೆ ಸಾರಲ್ಪಡಲೇಬೇಕು. ಪ್ರಕಟನೆ 14:6ರ ದೇವದೂತನು, ಆಕಾಶದ ಮಧ್ಯದಲ್ಲಿ ಹಾರುತ್ತಾ, “ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನ”ವನ್ನು ನಮಗೆ ವಹಿಸಿಕೊಡುತ್ತಿದ್ದಾನೆ. ಪ್ರತಿಕ್ರಿಯೆತೋರಿಸುವವರಿಗೆ ಇದು ಹೇಗೆ ಪ್ರಯೋಜನವನ್ನು ತರುವುದು?
ಯೆಹೋವನ ನಾಮವನ್ನು ಕರೆಯುವುದು
13. (ಎ)ನಮ್ಮ 1998ರ ವಾರ್ಷಿಕವಚನ ಯಾವುದು? (ಬಿ) ಈ ವಾರ್ಷಿಕವಚನವು ಇಂದು ಅತಿ ಸೂಕ್ತವಾಗಿದೆ ಏಕೆ?
13 ಯೋವೇಲ 2:32ನ್ನು ಉಲ್ಲೇಖಿಸುತ್ತಾ, ಪೌಲನು ಪ್ರಕಟಿಸುವುದು: “ಯೆಹೋವನ ನಾಮವನ್ನು ಕರೆಯುವವರೆಲ್ಲರ ರಕ್ಷಣೆಯಾಗುವುದು.” (ರೋಮಾಪುರ 10:13, NW) ಆ ಮಾತುಗಳು, 1998ಕ್ಕಾಗಿರುವ ಯೆಹೋವನ ಸಾಕ್ಷಿಗಳ ವಾರ್ಷಿಕವಚನವಾಗಿ ಆಯ್ಕೆಮಾಡಲ್ಪಟ್ಟಿರುವುದು ಎಷ್ಟು ಸೂಕ್ತವಾಗಿದೆ! ಯೆಹೋವನಲ್ಲಿ ಭರವಸೆಯೊಂದಿಗೆ, ಆತನ ನಾಮ ಮತ್ತು ಅದು ಯಾವುದಕ್ಕಾಗಿ ನಿಲ್ಲುತ್ತದೋ ಆ ಭವ್ಯ ಉದ್ದೇಶಗಳನ್ನು ತಿಳಿಯಪಡಿಸುತ್ತಾ ಮುನ್ನಡೆಯುವುದು, ಹಿಂದೆಂದೂ ಇಷ್ಟು ಪ್ರಾಮುಖ್ಯವಾದದ್ದಾಗಿರಲಿಲ್ಲ! ಪ್ರಥಮ ಶತಮಾನದಲ್ಲಿದ್ದಂತೆ, ಸದ್ಯದ ಭ್ರಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ, ಈ ಮಾರ್ದನಿಸುವ ಕೂಗು ಹೊರಡುತ್ತದೆ: “ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ.” (ಅ. ಕೃತ್ಯಗಳು 2:40) ಅದು ಲೋಕವ್ಯಾಪಕವಾಗಿರುವ ದೇವಭಯವುಳ್ಳ ಎಲ್ಲ ಜನರಿಗೆ, ಅವರಿಗೂ ಸುವಾರ್ತೆಯ ಅವರ ಬಹಿರಂಗ ಪ್ರಕಟನೆಗೆ ಕಿವಿಗೊಡುವವರಿಗೂ ರಕ್ಷಣೆಯನ್ನು ದಯಪಾಲಿಸಲಿಕ್ಕಾಗಿ ಯೆಹೋವನನ್ನು ಕರೆಯಲು ತುತೂರಿಯಂತಹ ಆಮಂತ್ರಣವಾಗಿದೆ.—1 ತಿಮೊಥೆಯ 4:16.
14. ರಕ್ಷಣೆಗಾಗಿ ನಾವು ಯಾವ ಬಂಡೆಯನ್ನು ಕರೆಯಬೇಕು?
14 ಈ ಭೂಮಿಯ ಮೇಲೆ ಯೆಹೋವನ ಮಹಾ ದಿನವು ಬಂದೆರಗುವಾಗ ಏನು ಸಂಭವಿಸುವುದು? ಹೆಚ್ಚಿನವರು, ರಕ್ಷಣೆಗಾಗಿ ಯೆಹೋವನ ಕಡೆಗೆ ನೋಡುವುದಿಲ್ಲ. ಸಾಮಾನ್ಯವಾಗಿ ಮಾನವಕುಲವು, “ತಮ್ಮನ್ನು ಮರೆಮಾಡಿಕೊಂಡು ಬೆಟ್ಟಗಳಿಗೂ ಬಂಡೆಗಳಿಗೂ—ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿರುವಾತನ ಮುಖಕ್ಕೂ ಯಜ್ಞದ ಕುರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ” ಎಂದು ಹೇಳುತ್ತಾ ಇರುವುದು. (ಪ್ರಕಟನೆ 6:15, 16) ಅವರ ನಿರೀಕ್ಷೆಯು, ಈ ವಿಷಯಗಳ ವ್ಯವಸ್ಥೆಯ ಪರ್ವತಸದೃಶ ಸಂಸ್ಥೆಗಳು ಮತ್ತು ಸಂಘಟನೆಗಳಲ್ಲಿರುವುದು. ಎಲ್ಲಕ್ಕಿಂತಲೂ ಮಹಾನ್ ಬಂಡೆಯಾಗಿರುವ ಯೆಹೋವ ದೇವರಲ್ಲಿ ಅವರು ಭರವಸೆಯನ್ನಿಡುತ್ತಿದ್ದರೆ ಎಷ್ಟು ಉತ್ತಮವಾಗಿರುತ್ತಿತ್ತು! (ಧರ್ಮೋಪದೇಶಕಾಂಡ 32:3, 4) ಆತನ ಕುರಿತಾಗಿ ರಾಜ ದಾವೀದನು ಹೇಳಿದ್ದು: “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ . . . ಆಗಿದ್ದಾನೆ.” ಯೆಹೋವನು “ನಮ್ಮ ರಕ್ಷಕನಾದ ಶರಣ”ನಾಗಿದ್ದಾನೆ. (ಕೀರ್ತನೆ 18:2; 95:1) ಆತನ ಹೆಸರು ಒಂದು “ಬಲವಾದ ಬುರುಜು” ಆಗಿದೆ, ಬರಲಿರುವ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಸಂರಕ್ಷಿಸುವಷ್ಟು ಬಲವಾಗಿರುವ ಏಕಮಾತ್ರ “ಬುರುಜು.” (ಜ್ಞಾನೋಕ್ತಿ 18:10) ಹೀಗಿರುವುದರಿಂದ, ಇಂದು ಜೀವಿತರಾಗಿರುವ ಬಹುಮಟ್ಟಿಗೆ 600 ಕೋಟಿ ಮಾನವರಲ್ಲಿ ಸಾಧ್ಯವಿರುವಷ್ಟು ಹೆಚ್ಚು ಮಂದಿ, ನಂಬಿಗಸ್ತಿಕೆ ಮತ್ತು ಪ್ರಾಮಾಣಿಕತೆಯಿಂದ ಯೆಹೋವನ ನಾಮವನ್ನು ಕರೆಯಲು ಕಲಿಯುವುದು ಅತ್ಯಾವಶ್ಯಕವಾಗಿದೆ.
15. ನಂಬಿಕೆಯ ವಿಷಯವಾಗಿ ರೋಮಾಪುರ 10:14 ಏನನ್ನು ಸೂಚಿಸುತ್ತದೆ?
15 ತಕ್ಕದ್ದಾಗಿಯೇ, ಅಪೊಸ್ತಲ ಪೌಲನು ಕೇಳುತ್ತಾ ಮುಂದುವರಿಯುವುದು: “ಆದರೆ ತಾವು ಯಾವನನ್ನು ನಂಬಲಿಲ್ಲವೂ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ?” (ರೋಮಾಪುರ 10:14) ರಕ್ಷಣೆಗಾಗಿ ಯೆಹೋವನನ್ನು ಕರೆಯುವುದಕ್ಕೋಸ್ಕರ, “ನಂಬಿಕೆಯ ವಿಷಯವಾದ ವಾಕ್ಯ”ವನ್ನು ತಮ್ಮದಾಗಿ ಮಾಡಿಕೊಳ್ಳಲು ಇನ್ನೂ ಸಹಾಯಮಾಡಬಹುದಾದ ಜನಸ್ತೋಮಗಳಿವೆ. ನಂಬಿಕೆಯು ಅತ್ಯಾವಶ್ಯಕ. ಇನ್ನೊಂದು ಪತ್ರದಲ್ಲಿ ಪೌಲನು ತಿಳಿಸುವುದು: “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ಇನ್ನೂ ಲಕ್ಷಾಂತರ ಮಂದಿ ದೇವರಲ್ಲಿ ನಂಬಿಕೆಯನ್ನಿಡುವಂತಾಗುವುದಾದರೂ ಹೇಗೆ? ರೋಮಾಪುರದವರಿಗೆ ಬರೆದ ಪತ್ರದಲ್ಲಿ ಪೌಲನು ಕೇಳುವುದು: “ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ?” (ರೋಮಾಪುರ 10:14) ಅವರು ಕಿವಿಗೊಡುವಂತೆ ಯೆಹೋವನು ಮಾಧ್ಯಮವನ್ನು ಒದಗಿಸುತ್ತಾನೊ? ಖಂಡಿತವಾಗಿಯೂ ಆತನು ಒದಗಿಸುತ್ತಾನೆ! ಪೌಲನ ಮುಂದುವರಿಯುವ ಮಾತುಗಳಿಗೆ ಕಿವಿಗೊಡಿರಿ: “ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?”
16. ದೈವಿಕ ಏರ್ಪಾಡಿನಲ್ಲಿ, ಸಾರುವವರು ಏಕೆ ಅತಿ ಪ್ರಾಮುಖ್ಯವಾಗಿದ್ದಾರೆ?
16 ಸಾರುವವರು ಬೇಕೆಂಬುದು ಪೌಲನ ವಾದದಿಂದ ತೀರ ಸ್ಪಷ್ಟವಾಗುತ್ತದೆ. “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೆ” ಹೀಗಿರುವುದೆಂದು ಯೇಸು ಸೂಚಿಸಿದನು. (ಮತ್ತಾಯ 24:14; 28:18-20) ಸಾರುವಿಕೆಯು, ಸುರಕ್ಷಿತವಾಗಿರಲಿಕ್ಕೋಸ್ಕರ ಯೆಹೋವನ ನಾಮವನ್ನು ಕರೆಯಲಿಕ್ಕಾಗಿ ಜನರಿಗೆ ಸಹಾಯಮಾಡಲಿಕ್ಕಾಗಿರುವ ದೈವಿಕ ಏರ್ಪಾಡಿನ ಒಂದು ಅತಿ ಪ್ರಾಮುಖ್ಯ ಭಾಗವಾಗಿದೆ. ಕ್ರೈಸ್ತಪ್ರಪಂಚದಲ್ಲೂ, ಅನೇಕರು ದೇವರ ಅಮೂಲ್ಯ ಹೆಸರನ್ನು ಸನ್ಮಾನಿಸಲಿಕ್ಕಾಗಿ ಏನನ್ನೂ ಮಾಡುವುದಿಲ್ಲ. ವಿವರಿಸಲಸಾಧ್ಯವಾದ ತ್ರಯೈಕ್ಯ ಸಿದ್ಧಾಂತದಲ್ಲಿ ಅನೇಕರು ಯೆಹೋವನನ್ನು, ಯೇಸು ಮತ್ತು ಪವಿತ್ರಾತ್ಮದೊಂದಿಗೆ ಆಶಾರಹಿತವಾಗಿ ಗಲಿಬಿಲಿಗೊಳಿಸಿದ್ದಾರೆ. ಅಲ್ಲದೆ, ಕೀರ್ತನೆ 14:1 ಮತ್ತು 53:1ರಲ್ಲಿ ಸೂಚಿಸಲ್ಪಟ್ಟಿರುವ ವರ್ಗದಲ್ಲಿ ಅನೇಕರು ಸೇರುತ್ತಾರೆ: “ದುರ್ಮತಿಗಳು—ದೇವರಿಲ್ಲವೆಂದು [“ಯೆಹೋವನಿಲ್ಲವೆಂದು,” NW] ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.” ಯೆಹೋವನು ಜೀವಂತ ದೇವರಾಗಿದ್ದಾನೆ ಎಂಬುದನ್ನು ಅವರು ತಿಳಿದುಕೊಳ್ಳುವ ಅಗತ್ಯವಿದೆ ಮತ್ತು ಸನ್ನಿಹಿತವಾಗಿರುವ ಮಹಾ ಸಂಕಟದಿಂದ ಸುರಕ್ಷಿತರಾಗಿ ಪಾರಾಗಲಿಕ್ಕಾಗಿ ಆತನ ಹೆಸರು ಯಾವುದಕ್ಕಾಗಿ ನಿಲ್ಲುತ್ತದೊ ಅದೆಲ್ಲವನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಸಾರುವವರ ‘ಅಂದವಾದ ಪಾದಗಳು’
17. (ಎ)ಪೌಲನು ಒಂದು ಪುನಸ್ಸ್ಥಾಪನಾ ಪ್ರವಾದನೆಯನ್ನು ಉಲ್ಲೇಖಿಸುವುದು ಏಕೆ ಸೂಕ್ತವಾಗಿದೆ? (ಬಿ) ‘ಅಂದವಾದ ಪಾದಗಳನ್ನು’ ಹೊಂದಿರುವುದರಲ್ಲಿ ಏನು ಒಳಗೂಡಿದೆ?
17 ಅಪೊಸ್ತಲ ಪೌಲನಿಗೆ ಇನ್ನೊಂದು ಅತ್ಯಾವಶ್ಯಕ ಪ್ರಶ್ನೆಯಿದೆ: “ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ? ಇದಕ್ಕೆ ಸರಿಯಾಗಿ ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ.” (ರೋಮಾಪುರ 10:15) ಪೌಲನು ಇಲ್ಲಿ ಯೆಶಾಯ 52:7ನ್ನು ಉಲ್ಲೇಖಿಸುತ್ತಾನೆ. ಇದು, 1919ರಂದಿನಿಂದ ಅನ್ವಯವಾಗಿರುವ ಒಂದು ಪುನಸ್ಸ್ಥಾಪನಾ ಪ್ರವಾದನೆಯ ಭಾಗವಾಗಿದೆ. ಇಂದು, ಪುನಃ ಒಮ್ಮೆ, ಯೆಹೋವನು “ಶುಭ ಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ . . . ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುವ” ದೂತನನ್ನು ಕಳುಹಿಸುತ್ತಾನೆ. ವಿಧೇಯಪೂರ್ವಕವಾಗಿ, ದೇವರ ಅಭಿಷಿಕ್ತ ‘ಕಾವಲುಗಾರರು’ ಮತ್ತು ಅವರ ಸಂಗಾತಿಗಳು ಹರ್ಷದಿಂದ ಕೂಗುತ್ತಿದ್ದಾರೆ. (ಯೆಶಾಯ 52:7, 8) ಇಂದು ರಕ್ಷಣೆಯನ್ನು ಪ್ರಕಟಿಸುತ್ತಿರುವವರು ಮನೆಯಿಂದ ಮನೆಗೆ ನಡೆಯುತ್ತಿರುವಾಗ, ಅವರ ಪಾದಗಳು ದಣಿದವುಗಳೂ, ಧೂಳುಹಿಡಿದವುಗಳೂ ಆಗಬಹುದಾದರೂ ಅವರ ಮುಖಗಳು ಆನಂದದಿಂದ ಎಷ್ಟು ಹೊಳೆಯುತ್ತವೆ! ಶಾಂತಿಯ ಸುವಾರ್ತೆಯನ್ನು ಘೋಷಿಸಲಿಕ್ಕಾಗಿ ಮತ್ತು ಶೋಕಿಸುವವರನ್ನು ಸಂತೈಸಲಿಕ್ಕಾಗಿ, ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೆಹೋವನ ನಾಮವನ್ನು ಕರೆಯಲು ಇವರಿಗೆ ಸಹಾಯಮಾಡಲಿಕ್ಕಾಗಿ ತಾವು ಯೆಹೋವನಿಂದ ನೇಮಿಸಲ್ಪಟ್ಟಿದ್ದೇವೆ ಎಂಬುದು ಅವರಿಗೆ ತಿಳಿದಿದೆ.
18. ಸುವಾರ್ತೆಯನ್ನು ಧ್ವನಿಸುವ ಕೊನೆಯ ಫಲಿತಾಂಶದ ಕುರಿತಾಗಿ ರೋಮಾಪುರ 10:16-18 ಏನು ಹೇಳುತ್ತದೆ?
18 ಜನರು ‘ಸಾರಿದ ವಾಕ್ಯವನ್ನು ನಂಬ’ಲಿ ಅಥವಾ ಅವರು ಅದಕ್ಕೆ ಅವಿಧೇಯರಾಗಲು ಆರಿಸಿಕೊಳ್ಳಲಿ, ಪೌಲನ ಮಾತುಗಳು ನಿಜವಾಗುತ್ತವೆ: “ಅವರ ಕಿವಿಗೆ ಬೀಳಲಿಲ್ಲವೇನು ಎಂದು ಕೇಳುತ್ತೇನೆ. ಬಿದ್ದದ್ದು ನಿಶ್ಚಯ. ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿದವು.” (ರೋಮಾಪುರ 10:16-18) ದೇವರ ಸೃಷ್ಟಿಕಾರ್ಯಗಳಲ್ಲಿ ಪ್ರದರ್ಶಿಸಲ್ಪಟ್ಟಂತಹ ‘ಆತನ ಪ್ರಭಾವವನ್ನು ಆಕಾಶವು ಪ್ರಚುರಪಡಿಸು’ವಂತೆಯೇ, ಭೂಮಿಯ ಮೇಲಿರುವ ಆತನ ಸಾಕ್ಷಿಗಳು, “ದುಃಖಿತರೆಲ್ಲರನ್ನು ಸಂತೈಸುವದಕ್ಕೂ,” ‘ನಮ್ಮ ದೇವರು ಮುಯ್ಯಿತೀರಿಸುವ ದಿನ ಯೆಹೋವನು ನೇಮಿಸಿರುವ ಶುಭವರುಷ’ವನ್ನು ಘೋಷಿಸಲೇಬೇಕು.—ಕೀರ್ತನೆ 19:1-4; ಯೆಶಾಯ 61:2.
19. ಇಂದು ‘ಯೆಹೋವನ ನಾಮವನ್ನು ಕರೆಯುವವ’ರಿಗೆ ಏನು ಫಲಿಸುವುದು?
19 ಯೆಹೋವನ ಮಹಾನ್ ಮತ್ತು ಭಯಪ್ರೇರಕ ದಿನವು ಇನ್ನೂ ಹೆಚ್ಚು ನಿಕಟವಾಗುತ್ತಾ ಬರುತ್ತದೆ. “ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು.” (ಯೋವೇಲ 1:15; 2:31) ಇನ್ನೂ ಹೆಚ್ಚಿನ ಜನಸ್ತೋಮಗಳು ಯೆಹೋವನ ಸಂಸ್ಥೆಗೆ ಹಿಂಡು ಹಿಂಡಾಗಿ ಬರುತ್ತಾ, ಸುವಾರ್ತೆಗೆ ತುರ್ತುಭಾವದಿಂದ ಪ್ರತಿಕ್ರಿಯಿಸುವಂತಾಗಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ. (ಯೆಶಾಯ 60:8; ಹಬಕ್ಕೂಕ 2:3) ಯೆಹೋವನ ಇತರ ದಿನಗಳು, ನೋಹನ ದಿನದಲ್ಲಿ, ಲೋಟನ ದಿನದಲ್ಲಿ, ಮತ್ತು ಧರ್ಮಭ್ರಷ್ಟ ಇಸ್ರಾಯೇಲ್ ಮತ್ತು ಯೆಹೂದದ ದಿನಗಳಲ್ಲಿ ದುಷ್ಟರಿಗೆ ನಾಶನವನ್ನು ತಂದವು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನಾವೀಗ, ಎಲ್ಲಕ್ಕಿಂತಲೂ ಅತ್ಯಂತ ದೊಡ್ಡ ಸಂಕಟದ ಅಂಚಿನಲ್ಲಿದ್ದೇವೆ. ಆಗ ಯೆಹೋವನ ಬಿರುಗಾಳಿಯು, ನಿತ್ಯ ಶಾಂತಿಯ ಒಂದು ಪ್ರಮೋದವನಕ್ಕಾಗಿ ದಾರಿಯನ್ನು ಸುಗಮಗೊಳಿಸುತ್ತಾ, ಈ ಭೂಮಿಯಿಂದ ದುಷ್ಟತನವನ್ನು ತೆಗೆದುಹಾಕುವುದು. ನಂಬಿಗಸ್ತಿಕೆಯಿಂದ “ಯೆಹೋವನ ನಾಮವನ್ನು ಕರೆಯುವವ”ರಲ್ಲಿ ನೀವು ಒಬ್ಬರಾಗಿರುವಿರೊ? ಹಾಗಿರುವಲ್ಲಿ, ಹರ್ಷಿಸಿರಿ! ನೀವು ರಕ್ಷಿಸಲ್ಪಡುವಿರೆಂಬ ದೇವರ ಸ್ವಂತ ವಾಗ್ದಾನವು ನಿಮಗಿದೆ.—ರೋಮಾಪುರ 10:13.
ನೀವು ಹೇಗೆ ಉತ್ತರಿಸುವಿರಿ?
◻ ಸಾ.ಶ. 33ರ ಪಂಚಾಶತ್ತಮದ ಬಳಿಕ ಯಾವ ಹೊಸ ವಿಷಯಗಳು ಘೋಷಿಸಲ್ಪಟ್ಟವು?
◻ ಕ್ರೈಸ್ತರು “ನಂಬಿಕೆಯ ವಿಷಯವಾದ ವಾಕ್ಯ”ಕ್ಕೆ ಹೇಗೆ ಗಮನಕೊಡಬೇಕು?
◻ ‘ಯೆಹೋವನ ನಾಮವನ್ನು ಕರೆಯುವುದ’ರ ಅರ್ಥವೇನು?
◻ ರಾಜ್ಯ ಸಂದೇಶವಾಹಕರಿಗೆ ಯಾವ ಅರ್ಥದಲ್ಲಿ ‘ಅಂದವಾದ ಪಾದಗಳು’ ಇವೆ?
[ಪುಟ 18 ರಲ್ಲಿರುವ ಚಿತ್ರ]
ದೇವರ ಜನರು ಆತನ ಗುಣಾತಿಶಯಗಳನ್ನು ಪೋರ್ಟರೀಕೊ, ಸೆನೆಗಲ್, ಪೆರೂ, ಪ್ಯಾಪುವ ನ್ಯೂ ಗಿನೀ—ಹೌದು, ಭೂಗೋಳದಾದ್ಯಂತ ಪ್ರಕಟಿಸುತ್ತಿದ್ದಾರೆ