“ನನ್ನನ್ನು ಕಾದುಕೊಂಡಿರ್ರಿ”
“ಯೆಹೋವನು ಇಂತೆನ್ನುತ್ತಾನೆ—ಹೀಗಿರಲು ನನ್ನನ್ನು ಕಾದುಕೊಂಡಿರ್ರಿ.”—ಚೆಫನ್ಯ 3:8.
1. ಯಾವ ಎಚ್ಚರಿಕೆಯನ್ನು ಪ್ರವಾದಿಯಾದ ಚೆಫನ್ಯನ ಮೂಲಕ ಕೊಡಲಾಯಿತು, ಮತ್ತು ಇಂದು ಜೀವಿಸುತ್ತಿರುವ ಜನರಿಗೆ ಇದು ಯಾವ ಆಸಕ್ತಿಯದ್ದಾಗಿದೆ?
“ಯೆಹೋವನ ಮಹಾದಿನವು ಹತ್ತಿರವಾಗಿದೆ.” ಈ ಎಚ್ಚರಿಕೆಯ ಕೂಗು, ಸಾ.ಶ.ಪೂ. ಏಳನೆಯ ಶತಮಾನದ ಮಧ್ಯಭಾಗದಲ್ಲಿ ಪ್ರವಾದಿಯಾದ ಚೆಫನ್ಯನ ಮೂಲಕ ನುಡಿಯಲ್ಪಟ್ಟಿತು. (ಚೆಫನ್ಯ 1:14, NW) ಯೆರೂಸಲೇಮನ್ನು ಮತ್ತು ಯೆಹೋವನ ಜನರನ್ನು ದುರುಪಚರಿಸುವ ಮೂಲಕ ಆತನ ಪರಮಾಧಿಕಾರವನ್ನು ಪ್ರತಿಭಟಿಸಿದ್ದ ಆ ರಾಷ್ಟ್ರಗಳ ಮೇಲೆ ಯೆಹೋವನ ನ್ಯಾಯತೀರ್ಪುಗಳನ್ನು ವಿಧಿಸುವ ದಿನವು ಬಂದಾಗ, ಆ ಪ್ರವಾದನೆಯು 40 ಅಥವಾ 50 ವರ್ಷಗಳೊಳಗೆ ನೆರವೇರಿತು. ಇದು 20ನೆಯ ಶತಮಾನದ ಅಂತ್ಯದಲ್ಲಿ ಜೀವಿಸುತ್ತಿರುವ ಜನರಿಗೆ ಆಸಕ್ತಿಯದ್ದಾಗಿದೆ ಏಕೆ? ನಾವು ಯೆಹೋವನ ಅಂತಿಮ “ಮಹಾದಿನವು” ವೇಗವಾಗಿ ಸಮೀಪಿಸುತ್ತಿರುವ ಸಮಯದಲ್ಲಿ ಜೀವಿಸುತ್ತಾ ಇದ್ದೇವೆ. ಚೆಫನ್ಯನ ಸಮಯದಲ್ಲಾದಂತೆಯೇ, ಯೆಹೋವನ “ಉಗ್ರಕೋಪ”ವು ಯೆರೂಸಲೇಮಿನ ಆಧುನಿಕ ದಿನ ಸಮಾನವಾದ ಕ್ರೈಸ್ತಪ್ರಪಂಚ ಮತ್ತು ಯೆಹೋವನ ಜನರನ್ನು ದುರುಪಚರಿಸುವ ಹಾಗೂ ಆತನ ವಿಶ್ವ ಪರಮಾಧಿಕಾರವನ್ನು ಪ್ರತಿಭಟಿಸುವ ಎಲ್ಲ ರಾಷ್ಟ್ರಗಳ ವಿರುದ್ಧ ಉರಿಯಲಿದೆ.—ಚೆಫನ್ಯ 1:4; 2:4, 8, 12, 13; 3:8; 2 ಪೇತ್ರ 3:12, 13.
ಚೆಫನ್ಯ—ಒಬ್ಬ ಧೀರ ಸಾಕ್ಷಿ
2, 3. (ಎ) ಚೆಫನ್ಯನ ಕುರಿತು ನಮಗೆ ಏನು ಗೊತ್ತಿದೆ, ಮತ್ತು ಅವನು ಯೆಹೋವನ ಧೀರ ಸಾಕ್ಷಿಯಾಗಿದ್ದನೆಂಬುದನ್ನು ಯಾವುದು ಸೂಚಿಸುತ್ತದೆ? (ಬಿ) ಚೆಫನ್ಯನ ಪ್ರವಾದಿಸುವಿಕೆಯ ಸಮಯ ಮತ್ತು ಸ್ಥಳವನ್ನು ಗುರುತಿಸಲು ಯಾವ ನಿಜತ್ವಗಳು ನಮ್ಮನ್ನು ಶಕ್ತರನ್ನಾಗಿ ಮಾಡುತ್ತವೆ?
2 ಯಾರ ಹೆಸರಿನ (ಹೀಬ್ರು, ಟ್ಸೆಫನ್ಯ) ಅರ್ಥವು, “ಯೆಹೋವನು ಬಚ್ಚಿಟ್ಟಿದ್ದಾನೆ (ಸಂಗ್ರಹಿಸಿಟ್ಟಿದ್ದಾನೆ)” ಎಂದಾಗಿದೆಯೊ, ಆ ಪ್ರವಾದಿಯಾದ ಚೆಫನ್ಯನ ಕುರಿತು ಸ್ವಲ್ಪವೇ ತಿಳಿದಿದೆ. ಹಾಗಿದ್ದರೂ, ಬೇರೆ ಪ್ರವಾದಿಗಳಿಗೆ ವ್ಯತಿರಿಕ್ತವಾಗಿ, ಚೆಫನ್ಯನು ತನ್ನ ವಂಶಾವಳಿಯನ್ನು ನಾಲ್ಕನೆಯ ಸಂತತಿಯ ವರೆಗೆ, ಹಿಂದೆ “ಹಿಜ್ಕೀಯ”ನ ವರೆಗೆ ಒದಗಿಸಿದನು. (ಚೆಫನ್ಯ 1:1; ಹೋಲಿಸಿ ಯೆಶಾಯ 1:1; ಯೆರೆಮೀಯ 1:1; ಯೆಹೆಜ್ಕೇಲ 1:3.) ಇದು ಎಷ್ಟೊಂದು ಅಸಾಮಾನ್ಯವಾಗಿದೆ ಎಂದರೆ, ಹೆಚ್ಚಿನ ವ್ಯಾಖ್ಯಾನಗಾರರು, ನಂಬಿಗಸ್ತ ರಾಜ ಹಿಜ್ಕೀಯನನ್ನು ಅವನ ಮುತ್ತಜ್ಜನೆಂದು ಗುರುತಿಸುತ್ತಾರೆ. ಹಿಜ್ಕೀಯನು ಅವನ ಮುತ್ತಜ್ಜನಾಗಿದ್ದರೆ, ಆಗ ಚೆಫನ್ಯನು ರಾಜವಂಶಸ್ಥನಾಗಿದ್ದನು ಮತ್ತು ಇದು ಯೆಹೂದದ ರಾಜಕುಮಾರರ ವಿಷಯದಲ್ಲಿ ಅವನ ಕಠೋರ ಖಂಡನೆಗೆ ಮಹತ್ವವನ್ನು ಕೂಡಿಸಿದ್ದೀತು ಮತ್ತು ಅವನು ಯೆಹೋವನ ಧೀರ ಸಾಕ್ಷಿಯೂ ಪ್ರವಾದಿಯೂ ಆಗಿದ್ದನೆಂಬುದನ್ನು ತೋರಿಸಿದ್ದೀತು. ಯೆರೂಸಲೇಮಿನ ನಕ್ಷಾ ನಿರೂಪಣೆಯ ಕುರಿತಾದ ಮತ್ತು ಆಸ್ಥಾನದಲ್ಲಿ ಸಂಭವಿಸುತ್ತಿದ್ದ ವಿಷಯಗಳ ಕುರಿತಾದ ಅವನ ಚಿರಪರಿಚಿತ ಜ್ಞಾನವು, ಅವನು ರಾಜಧಾನಿಯಲ್ಲೇ ಯೆಹೋವನ ನ್ಯಾಯತೀರ್ಪುಗಳನ್ನು ಘೋಷಿಸಿದ್ದಿರಬಹುದು ಎಂಬುದನ್ನು ಸೂಚಿಸುತ್ತದೆ.—ನೋಡಿ ಚೆಫನ್ಯ 1:8-11, ಪಾದಟಿಪ್ಪಣಿಗಳು, NW.
3 ಚೆಫನ್ಯನು, ಯೆಹೂದದ ನಾಗರಿಕ ‘ದೇಶಾಧಿಪತಿಗಳು’ (ಕುಲೀನರು, ಅಥವಾ ಕುಲ ಪ್ರಧಾನರು) ಮತ್ತು “ರಾಜವಂಶದವರ” ವಿರುದ್ಧ ದೈವಿಕ ನ್ಯಾಯತೀರ್ಪುಗಳನ್ನು ಘೋಷಿಸಿದನಾದರೂ, ತನ್ನ ವಿಮರ್ಶೆಯಲ್ಲಿ ಅವನೆಂದಿಗೂ ಸ್ವತಃ ರಾಜನನ್ನು ಉಲ್ಲೇಖಿಸಲಿಲ್ಲವೆಂಬ ಸಂಗತಿಯು ಗಮನಾರ್ಹವಾಗಿದೆ.a (ಚೆಫನ್ಯ 1:8; 3:3) ಯುವ ರಾಜನಾದ ಯೋಷೀಯನು ಶುದ್ಧಾರಾಧನೆಗಾಗಿ ಈಗಾಗಲೇ ಒಲವನ್ನು ತೋರಿಸಿದ್ದನೆಂಬುದನ್ನು ಇದು ಸೂಚಿಸುತ್ತದಾದರೂ, ಚೆಫನ್ಯನ ಮೂಲಕ ಸನ್ನಿವೇಶದ ಬಲವಾದ ಅಸಮ್ಮತಿಯ ನೋಟದಲ್ಲಿ, ಸ್ಪಷ್ಟವಾಗಿ ಅವನು ತನ್ನ ಧಾರ್ಮಿಕ ಸುಧಾರಣೆಗಳನ್ನು ಇನ್ನೂ ಆರಂಭಿಸಿರಲಿಲ್ಲ. ಇದೆಲ್ಲವು, ಸಾ.ಶ.ಪೂ. 659ರಿಂದ 629ರ ವರೆಗೆ ಆಳಿದ ಯೋಷೀಯನ ಆರಂಭದ ವರ್ಷಗಳ ಸಮಯದಲ್ಲಿ ಚೆಫನ್ಯನು ಯೆಹೂದದಲ್ಲಿ ಪ್ರವಾದಿಸಿದನೆಂಬುದನ್ನು ಸೂಚಿಸುತ್ತದೆ. ಚೆಫನ್ಯನ ಉತ್ಸಾಹವುಳ್ಳ ಪ್ರವಾದನಾ ಕಾರ್ಯವು, ಆ ಸಮಯದಲ್ಲಿ ಯೆಹೂದದಲ್ಲಿ ಚಾಲ್ತಿಯಲ್ಲಿದ್ದ ಮೂರ್ತಿಪೂಜೆ, ಹಿಂಸಾಕೃತ್ಯ, ಮತ್ತು ಭ್ರಷ್ಟತೆಯ ವಿಷಯವಾಗಿ ಯುವ ಯೋಷೀಯನ ಅರಿವನ್ನು ನಿಸ್ಸಂದೇಹವಾಗಿ ಹೆಚ್ಚಿಸಿತು ಮತ್ತು ಮೂರ್ತಿಪೂಜೆಯ ವಿರುದ್ಧ ಅವನ ತದನಂತರದ ಕಾರ್ಯಾಚರಣೆಯನ್ನು ಉತ್ತೇಜಿಸಿತು.—2 ಪೂರ್ವಕಾಲವೃತ್ತಾಂತ 34:1-3.
ಯೆಹೋವನ ಉಗ್ರಕೋಪಕ್ಕಾಗಿರುವ ಕಾರಣಗಳು
4. ಯಾವ ಮಾತುಗಳಲ್ಲಿ ಯೆಹೋವನು ಯೆಹೂದ ಮತ್ತು ಯೆರೂಸಲೇಮಿನ ವಿರುದ್ಧ ತನ್ನ ಕೋಪವನ್ನು ವ್ಯಕ್ತಪಡಿಸಿದನು?
4 ಯೆಹೂದ ಮತ್ತು ಅದರ ರಾಜಧಾನಿ ಪಟ್ಟಣವಾದ ಯೆರೂಸಲೇಮಿನ ಮುಖಂಡರು ಮತ್ತು ನಿವಾಸಿಗಳ ಕಡೆಗೆ ಕೋಪದ ಭಾವವುಳ್ಳವನಾಗಿರಲು ಯೆಹೋವನಿಗೆ ಸಕಾರಣವಿತ್ತು. ತನ್ನ ಪ್ರವಾದಿಯಾದ ಚೆಫನ್ಯನ ಮೂಲಕ ಆತನು ಹೇಳಿದ್ದು: “ನಾನು ಯೆಹೂದದ ಮೇಲೂ ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತಿ ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಶೇಷಗೊಳಿಸಿ ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮಮಾಡುವೆನು; ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆ ಪೂಜಿಸುವವರನ್ನೂ ಯೆಹೋವನ ಭಕ್ತರೆಂದು ಪ್ರತಿಜ್ಞೆಮಾಡಿಕೊಂಡು ಆರಾಧಿಸಿ ಮಲ್ಕಾಮನ ಮೇಲೆ ಆಣೆಯಿಡುವವರನ್ನೂ . . . ಧ್ವಂಸಪಡಿಸುವೆನು.”—ಚೆಫನ್ಯ 1:4-6.
5, 6. (ಎ) ಚೆಫನ್ಯನ ಸಮಯದಲ್ಲಿ ಯೆಹೂದದಲ್ಲಿನ ಧಾರ್ಮಿಕ ಸನ್ನಿವೇಶವು ಏನಾಗಿತ್ತು? (ಬಿ) ಯೆಹೂದದ ನಾಗರಿಕ ಮುಖಂಡರು ಮತ್ತು ಅವರ ಕೈಕೆಳಗಿನವರ ಪರಿಸ್ಥಿತಿಯು ಏನಾಗಿತ್ತು?
5 ಯೆಹೂದವು, ಬಾಳ್ ಆರಾಧನೆಯ ಕೆಳದರ್ಜೆಯ ಫಲಶಕ್ತಿ ಸಂಸ್ಕಾರಗಳು, ಪೈಶಾಚಿಕ ಖಗೋಳ ವಿಜ್ಞಾನ, ಮತ್ತು ವಿಧರ್ಮಿ ದೇವನಾದ ಮಲ್ಕಾಮನ ಆರಾಧನೆಯಿಂದ ಕಳಂಕಿತಗೊಂಡಿತು. ಕೆಲವರು ಸೂಚಿಸುವಂತೆ ಮಲ್ಕಾಮನು ಮೋಲೆಕನೇ ಆಗಿದ್ದಲ್ಲಿ, ಆಗ ಯೆಹೂದದ ಸುಳ್ಳು ಆರಾಧನೆಯು, ಮಕ್ಕಳ ಅಸಹ್ಯಕರವಾದ ಬಲಿಕೊಡುವಿಕೆಯನ್ನು ಒಳಗೊಂಡಿತು. ಅಂತಹ ಧಾರ್ಮಿಕ ಆಚರಣೆಗಳು ಯೆಹೋವನ ದೃಷ್ಟಿಯಲ್ಲಿ ಹೇಸಿಕೆ ಹುಟ್ಟಿಸುವಂತಹವುಗಳಾಗಿದ್ದವು. (1 ಅರಸುಗಳು 11:5, 7; 14:23, 24; 2 ಅರಸುಗಳು 17:16, 17) ಮೂರ್ತಿಪೂಜಕರು ಆಣೆಗಳನ್ನು ಇನ್ನೂ ಯೆಹೋವನ ಹೆಸರಿನಲ್ಲಿ ಮಾಡಿದುದರಿಂದ ಅವರು ಆತನ ಕೋಪವನ್ನು ಹೆಚ್ಚಿನ ಮಟ್ಟದಲ್ಲಿ ಅನುಭವಿಸಿದರು. ಆತನು ಇನ್ನು ಮುಂದೆ ಅಂತಹ ಧಾರ್ಮಿಕ ಅಶುದ್ಧತೆಯನ್ನು ಸಹಿಸನು ಮತ್ತು ಏಕರೂಪವಾಗಿ ವಿಧರ್ಮಿ ಹಾಗೂ ಧರ್ಮಭ್ರಷ್ಟ ಯಾಜಕರನ್ನು ಕೊಂದುಹಾಕುವನು.
6 ಅಲ್ಲದೆ, ಯೆಹೂದದ ನಾಗರಿಕ ಮುಖಂಡರು ಭ್ರಷ್ಟರಾಗಿದ್ದರು. ಆಕೆಯ ದೇಶಾಧಿಪತಿಗಳು ಕೊಂದು ತಿನ್ನುವ “ಗರ್ಜಿಸುವ ಸಿಂಹ”ಗಳಂತಿದ್ದರು ಮತ್ತು ಆಕೆಯ ನ್ಯಾಯಾಧಿಪತಿಗಳು ಅತ್ಯಾಶೆಯ “ತೋಳ”ಗಳಿಗೆ ಸದೃಶರಾಗಿದ್ದರು. (ಚೆಫನ್ಯ 3:3) ಅವರ ಕೈಕೆಳಗಿನವರು “ಮೋಸಹಿಂಸೆಗಳಿಂದ ದೋಚಿದ್ದನ್ನು ತಮ್ಮ ಒಡೆಯನ ಮನೆಯೊಳಗೆ ತುಂಬಿಸುವ” ವಿಷಯವಾಗಿ ಆರೋಪಿಸಲ್ಪಟ್ಟರು. (ಚೆಫನ್ಯ 1:9) ಪ್ರಾಪಂಚಿಕತೆಯು ಸರ್ವಸಾಧಾರಣವಾಗಿತ್ತು. ಅನೇಕರು ಸಂಪತ್ತನ್ನು ಒಟ್ಟುಗೂಡಿಸಲು ಸನ್ನಿವೇಶದ ಲಾಭವನ್ನು ತೆಗೆದುಕೊಳ್ಳುತ್ತಿದ್ದರು.—ಚೆಫನ್ಯ 1:13.
ಯೆಹೋವನ ದಿನದ ಕುರಿತು ಸಂದೇಹಗಳು
7. “ಯೆಹೋವನ ಮಹಾದಿನ”ಕ್ಕೆ ಎಷ್ಟು ಕಾಲ ಮೊದಲು ಚೆಫನ್ಯನು ಪ್ರವಾದಿಸಿದನು, ಮತ್ತು ಅನೇಕ ಯೆಹೂದ್ಯರ ಆತ್ಮಿಕ ಪರಿಸ್ಥಿತಿಯು ಏನಾಗಿತ್ತು?
7 ನಾವು ಈಗಾಗಲೇ ನೋಡಿರುವಂತೆ, ಚೆಫನ್ಯನ ದಿನದಲ್ಲಿ ಚಾಲ್ತಿಯಲ್ಲಿದ್ದ ವಿಪತ್ಕಾರಕ ಧಾರ್ಮಿಕ ಸನ್ನಿವೇಶವು ಸೂಚಿಸುವುದೇನೆಂದರೆ, ಸುಮಾರು ಸಾ.ಶ.ಪೂ. 648ರ ಸಮಯಕ್ಕೆ ರಾಜ ಯೋಷೀಯನು ಮೂರ್ತಿಪೂಜೆಯ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಆರಂಭಿಸುವ ಮೊದಲು, ಚೆಫನ್ಯನು ಸಾಕ್ಷಿ ಹಾಗೂ ಪ್ರವಾದಿಯಂತೆ ತನ್ನ ಕೆಲಸವನ್ನು ನೆರವೇರಿಸಿದನು. (2 ಪೂರ್ವಕಾಲವೃತ್ತಾಂತ 34:4, 5) ಹಾಗಾದರೆ ಯೆಹೂದ ರಾಜ್ಯದ ಮೇಲೆ “ಯೆಹೋವನ ಮಹಾದಿನವು” ಬರುವ ಮೊದಲು, ಚೆಫನ್ಯನು ಕಡಿಮೆ ಪಕ್ಷ 40 ವರ್ಷಗಳ ವರೆಗೆ ಪ್ರವಾದಿಸಿದನೆಂಬುದು ಸಂಭವನೀಯ. ಎರಡರ ನಡುವಣ ಕಾಲದಲ್ಲಿ ಅನೇಕ ಯೆಹೂದ್ಯರು ಸಂದೇಹಗಳಿಗೆ ಎಡೆಕೊಟ್ಟರು ಮತ್ತು ಉದಾಸೀನರಾಗುತ್ತಾ ಯೆಹೋವನನ್ನು ಸೇವಿಸುವುದರಿಂದ ‘ಹಿಮ್ಮೆಟ್ಟಿದರು.’ ಚೆಫನ್ಯನು, “ಯೆಹೋವನನ್ನು ಆಶ್ರಯಿಸದೆ ಯೆಹೋವನ ದರ್ಶನವನ್ನು ಬಯಸದೆ” ಹೋದವರ ವಿಷಯವಾಗಿ ಮಾತಾಡುತ್ತಾನೆ. (ಚೆಫನ್ಯ 1:6) ಸುವ್ಯಕ್ತವಾಗಿ, ಯೆಹೂದದಲ್ಲಿದ್ದ ವ್ಯಕ್ತಿಗಳು ದೇವರ ಕುರಿತು ತಮ್ಮನ್ನು ಚಿಂತೆಗೊಳಪಡಿಸಿಕೊಳ್ಳದೆ ಉದಾಸೀನರಾಗಿದ್ದರು.
8, 9. (ಎ) “ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನ”ರನ್ನು ಯೆಹೋವನು ಏಕೆ ಪರೀಕ್ಷಿಸಲಿದ್ದನು? (ಬಿ) ಯಾವ ವಿಧಗಳಲ್ಲಿ ಯೆಹೋವನು ಯೆಹೂದದ ನಿವಾಸಿಗಳಿಗೆ ಮತ್ತು ಅವರ ನಾಗರಿಕ ಹಾಗೂ ಧಾರ್ಮಿಕ ಮುಖಂಡರಿಗೆ ಗಮನಕೊಡಲಿದ್ದನು?
8 ತನ್ನ ಜನರೆಂದು ಹೇಳಿಕೊಳ್ಳುವವರನ್ನು ಪರೀಕ್ಷಿಸುವ ತನ್ನ ಉದ್ದೇಶವನ್ನು ಯೆಹೋವನು ತಿಳಿಯಪಡಿಸಿದನು. ಆತನ ಆರಾಧಕರೆಂದು ಹೇಳಿಕೊಳ್ಳುವವರಲ್ಲಿ, ಮಾನವ ವ್ಯವಹಾರಗಳಲ್ಲಿ ಅಡ್ಡಬರುವ ತನ್ನ ಸಾಮರ್ಥ್ಯ ಅಥವಾ ಉದ್ದೇಶದ ವಿಷಯವಾಗಿ ತಮ್ಮ ಹೃದಯಗಳಲ್ಲಿ ಸಂದೇಹಗಳಿಗೆ ಇಂಬುಕೊಟ್ಟವರನ್ನು ಆತನು ಹುಡುಕಲಿದ್ದನು. ಆತನು ಹೇಳಿದ್ದು: “ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು; ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು.” (ಚೆಫನ್ಯ 1:12) “ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನ”ರು (ದ್ರಾಕ್ಷಾಮದ್ಯದ ಮಾಡುವಿಕೆಗೆ ಒಂದು ಸೂಚನೆ) ಎಂಬ ಅಭಿವ್ಯಕ್ತಿಯು, ಒಂದು ತೊಟ್ಟಿಯ ಕೆಳಭಾಗದಲ್ಲಿ ಗಸಿಯಂತೆ ತಳವೂರಿರುವವರಿಗೆ ಸೂಚಿತವಾಗಿದೆ, ಇವರು ಮಾನವ ಜಾತಿಯ ವ್ಯವಹಾರಗಳಲ್ಲಿ ಆಸನ್ನವಾಗಿರುವ ದೈವಿಕ ಅಡ್ಡಬರುವಿಕೆಯ ಯಾವುದೇ ಘೋಷಣೆಯಿಂದ ಕ್ಷೋಭೆಗೊಳಪಡಲು ಬಯಸದವರಾಗಿದ್ದಾರೆ.
9 ಯೆಹೋವನು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ಮತ್ತು ವಿಧರ್ಮಿ ಆಚರಣೆಗಳಿಂದ ತನ್ನ ಆರಾಧನೆಯನ್ನು ಮಿಶ್ರಗೊಳಿಸಿದ್ದ ಅವರ ಯಾಜಕರ ಕಡೆಗೆ ಗಮನವನ್ನು ಕೊಡಲಿದ್ದನು. ಅವರಿಗೆ ರಾತ್ರಿಯ ಮರೆಯಲ್ಲಿಯೋ ಎಂಬಂತೆ, ಯೆರೂಸಲೇಮಿನ ಗೋಡೆಗಳೊಳಗೆ ಭದ್ರವೆನಿಸಿದ್ದರೆ, ಅವರು ಆಶ್ರಯವನ್ನು ಪಡೆದಿರುವ ಆತ್ಮಿಕ ಅಂಧಕಾರವನ್ನು ಭೇದಿಸುವ ಉಜ್ವಲ ದೀಪಗಳ ಸಹಾಯದಿಂದ ಆತನು ಅವರನ್ನು ಹುಡುಕಲಿದ್ದನು. ಅವರ ಧಾರ್ಮಿಕ ಉದಾಸೀನತೆಯನ್ನು ಮೊದಲು ನ್ಯಾಯತೀರ್ಪಿನ ಗಂಭೀರವಾದ ಸಂದೇಶಗಳ ಮೂಲಕ, ನಂತರ ಆ ನ್ಯಾಯತೀರ್ಪುಗಳನ್ನು ನಿರ್ವಹಿಸುವ ಮೂಲಕ ಆತನು ಕ್ಷೋಭೆಗೊಳಿಸಲಿದ್ದನು.
“ಯೆಹೋವನ ಮಹಾದಿನವು ಹತ್ತಿರವಾಗಿದೆ”
10. ಚೆಫನ್ಯನು “ಯೆಹೋವನ ಮಹಾದಿನ”ವನ್ನು ಹೇಗೆ ವರ್ಣಿಸಿದನು?
10 ಹೀಗೆ ಘೋಷಿಸುವಂತೆ ಯೆಹೋವನು ಚೆಫನ್ಯನನ್ನು ಪ್ರೇರೇಪಿಸಿದನು: “ಯೆಹೋವನ ಮಹಾದಿನವು ಹತ್ತಿರವಾಗಿದೆ. ಸಮೀಪಿಸಿದೆ, ಬಹು ತ್ವರೆಯಾಗಿ ಬರುತ್ತಿದೆ. ಯೆಹೋವನ ದಿನದ ಶಬ್ದವು ಕಹಿಯಾಗಿದೆ.” (ಚೆಫನ್ಯ 1:14, NW) ಎಚ್ಚರಿಕೆಗೆ ಗಮನಕೊಡಲು ಮತ್ತು ಶುದ್ಧಾರಾಧನೆಗೆ ಹಿಂದಿರುಗಲು ನಿರಾಕರಿಸಿದ ಪ್ರತಿಯೊಬ್ಬರಿಗೆ—ಯಾಜಕರು, ದೇಶಾಧಿಪತಿಗಳು, ಮತ್ತು ಜನರು—ನಿಶ್ಚಯವಾಗಿಯೂ ಕಹಿಯಾದ ದಿನಗಳು ಮುಂದಿದ್ದವು. ನ್ಯಾಯತೀರ್ಪನ್ನು ನಿರ್ವಹಿಸುವ ಆ ದಿನವನ್ನು ವರ್ಣಿಸುತ್ತಾ, ಪ್ರವಾದನೆಯು ಮುಂದುವರಿಸುವುದು: “ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ. ಕೋಟೆಗಳನ್ನೂ ದೊಡ್ಡ ಕೊತ್ತಲಗಳನ್ನೂ ಹಿಡಿಯಲು ಆರ್ಬಟಿಸಿ ಕೊಂಬೂದುವ ದಿನ.”—ಚೆಫನ್ಯ 1:15, 16.
11, 12. (ಎ) ಯೆರೂಸಲೇಮಿನ ವಿರುದ್ಧ ಯಾವ ನ್ಯಾಯತೀರ್ಪಿನ ಸಂದೇಶವು ಪ್ರಕಟಿಸಲಾಯಿತು? (ಬಿ) ಪ್ರಾಪಂಚಿಕ ಸಮೃದ್ಧಿಯು ಯೆಹೂದ್ಯರನ್ನು ರಕ್ಷಿಸಲಿತ್ತೊ?
11 ವೇಗವಾಗಿ ಗತಿಸುವ ಕೆಲವೇ ದಶಕಗಳೊಳಗೆ, ಬಾಬೆಲಿನ ಸೇನೆಗಳು ಯೆಹೂದವನ್ನು ಆಕ್ರಮಿಸಲಿದ್ದವು. ಯೆರೂಸಲೇಮ್ ತಪ್ಪಿಸಿಕೊಳ್ಳಲಾರದು. ಅದರ ವಾಸಯೋಗ್ಯ ಹಾಗೂ ವ್ಯಾಪಾರ ವಿಭಾಗಗಳು ಧ್ವಂಸಮಾಡಲ್ಪಡುವವು. “ಅದೇ ದಿನದಲ್ಲಿ ಮೀನುಬಾಗಲಿಂದ ಕೂಗಾಟ, ಎರಡನೆಯ ಕೇರಿಯಿಂದ ಗೋಳಾಟ, ಗುಡ್ಡಗಳ ಮೇಲಿಂದ ಧಡಮ್ ಎನ್ನುವ ಶಬ್ದ, ಅಂತು ದೊಡ್ಡ ಗದ್ದಲವಾಗುವದು; ಇದು ಯೆಹೋವನ ನುಡಿ. ಒರಳ ಕೇರಿಯವರೇ, ಕಿರಚಿರಿ, ಎಲ್ಲಾ ಸಾಹುಕಾರರು ಹಾಳಾದರು, ಹೊರೆಬೆಳ್ಳಿಯವರೆಲ್ಲರು ನಾಶವಾದರು.”—ಚೆಫನ್ಯ 1:10, 11, ಪಾದಟಿಪ್ಪಣಿ, NW.
12 ಯೆಹೋವನ ದಿನವು ಹತ್ತಿರವಿದೆ ಎಂಬುದನ್ನು ನಂಬಲು ನಿರಾಕರಿಸುತ್ತಾ, ಅನೇಕ ಯೆಹೂದ್ಯರು ಲಾಭಕರ ವ್ಯಾಪಾರ ಸಾಹಸಗಳಲ್ಲಿ ಆಳವಾಗಿ ಒಳಗೊಂಡಿದ್ದರು. ಆದರೆ ತನ್ನ ನಂಬಿಗಸ್ತ ಪ್ರವಾದಿಯಾದ ಚೆಫನ್ಯನ ಮುಖಾಂತರ, ಯೆಹೋವನು ಮುಂತಿಳಿಸಿದ್ದೇನೆಂದರೆ, ಅವರ ಸಂಪತ್ತು “ಸೂರೆಯಾಗುವದು, ಅವರ ಮನೆಗಳು ಹಾಳಾಗುವವು.” ತಾವು ಉತ್ಪಾದಿಸಿದ ದ್ರಾಕ್ಷಾರಸವನ್ನು ಅವರು ಕುಡಿಯಲಾರರು ಮತ್ತು “ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿಬಂಗಾರಗಳು ಕೂಡಾ ಅವರನ್ನು ರಕ್ಷಿಸಲಾರವು.”—ಚೆಫನ್ಯ 1:13, 18.
ಇತರ ರಾಷ್ಟ್ರಗಳು ನ್ಯಾಯತೀರಿಸಲ್ಪಟ್ಟದ್ದು
13. ಮೋವಾಬ್, ಅಮ್ಮೋನ್ ಮತ್ತು ಅಶ್ಶೂರದ ವಿರುದ್ಧ ಯಾವ ನ್ಯಾಯತೀರ್ಪಿನ ಸಂದೇಶವನ್ನು ಚೆಫನ್ಯನು ಪ್ರಕಟಿಸಿದನು?
13 ತನ್ನ ಪ್ರವಾದಿಯಾದ ಚೆಫನ್ಯನ ಮೂಲಕ, ತನ್ನ ಜನರನ್ನು ದುರುಪಚರಿಸಿದ್ದ ರಾಷ್ಟ್ರಗಳ ವಿರುದ್ಧವೂ ಯೆಹೋವನು ತನ್ನ ಕೋಪವನ್ನು ವ್ಯಕ್ತಪಡಿಸಿದನು. ಆತನು ಘೋಷಿಸಿದ್ದು: “ಮೋವಾಬ್ಯರೂ ಅಮ್ಮೋನ್ಯರೂ ಉಬ್ಬಟೆಯಿಂದ ನನ್ನ ಜನರ ಮೇರೆಯನ್ನು ಮೀರಿ ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ. ಇಸ್ರಾಯೇಲ್ಯರ ದೇವರಾದ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಹೀಗಿರಲು, ನನ್ನ ಜೀವದಾಣೆ, ಸೊದೋಮಿನ ಗತಿಯೇ ಮೋವಾಬಿಗೆ ಆಗುವದು, ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವದು; ಆ ಪ್ರಾಂತಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು . . . ಯೆಹೋವನು ಬಡಗಲಿಗೆ ಕೈಚಾಚಿ ಅಶ್ಶೂರವನ್ನು ಧ್ವಂಸಪಡಿಸುವನು; ನಿನೆವೆಯನ್ನು ಹಾಳುಮಾಡಿ ಮರುಭೂಮಿಯಂತೆ ಒಣಗಿಸಿಬಿಡುವನು.”—ಚೆಫನ್ಯ 2:8, 9, 13.
14. ವಿದೇಶೀಯ ರಾಷ್ಟ್ರಗಳು ಇಸ್ರಾಯೇಲ್ಯರ ಮತ್ತು ಅವರ ದೇವರಾದ ಯೆಹೋವನ ವಿರುದ್ಧ ‘ಉಬ್ಬಿಕೊಂಡ’ರೆಂಬುದಕ್ಕೆ ಯಾವ ಪ್ರಮಾಣವಿದೆ?
14 ಮೋವಾಬ್ ಮತ್ತು ಅಮ್ಮೋನ್, ಇಸ್ರಾಯೇಲಿನ ದೀರ್ಘಸಮಯದ ವೈರಿಗಳಾಗಿದ್ದರು. (ಹೋಲಿಸಿ ನ್ಯಾಯಸ್ಥಾಪಕರು 3:12-14.) ಪ್ಯಾರಿಸ್ನ ಲೂವರ್ ಮ್ಯೂಸಿಯಮ್ನಲ್ಲಿರುವ ಮೋವಾಬ್ಯ ಶಿಲೆಯು, ಮೋವಾಬ್ಯರ ರಾಜನಾದ ಮೇಷನ ಮೂಲಕ ಮಾಡಲಾದ ಬಡಾಯಿಯ ಹೇಳಿಕೆಯ ಶಿಲಾಲೇಖನವನ್ನು ಹೊಂದಿದೆ. ತನ್ನ ದೇವರಾದ ಕೆಮೋಷನ ಸಹಾಯದಿಂದ ಹಲವಾರು ಇಸ್ರಾಯೇಲ್ಯ ಪಟ್ಟಣಗಳ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಅವನು ಅಹಂಕಾರದಿಂದ ವರದಿಸುತ್ತಾನೆ. (2 ಅರಸುಗಳು 1:1) ಅಮ್ಮೋನ್ಯರು ತಮ್ಮ ದೇವರಾದ ಮಲ್ಕಾಮನ ಹೆಸರಿನಲ್ಲಿ ಇಸ್ರಾಯೇಲ್ಯ ಕ್ಷೇತ್ರವಾದ ಗಾದನ್ನು ಸ್ವಾಧೀನಮಾಡಿಕೊಂಡ ವಿಷಯವಾಗಿ, ಚೆಫನ್ಯನ ಸಮಕಾಲೀನನಾದ ಯೆರೆಮೀಯನು ಮಾತಾಡಿದನು. (ಯೆರೆಮೀಯ 49:1) ಅಶ್ಶೂರದ ವಿಷಯವಾಗಿ, Vನೆಯ ರಾಜ ಶಲ್ಮನೆಸೆರನು ಚೆಫನ್ಯನ ದಿನದ ಸುಮಾರು ಒಂದು ಶತಮಾನದಷ್ಟು ಮುಂಚೆ, ಸಮಾರ್ಯಕ್ಕೆ ಮುತ್ತಿಗೆ ಹಾಕಿ, ಸ್ವಾಧೀನಪಡಿಸಿಕೊಂಡನು. (2 ಅರಸುಗಳು 17:1-6) ಸ್ವಲ್ಪ ಸಮಯದ ತರುವಾಯ, ರಾಜ ಸನ್ಹೇರೀಬನು ಯೆಹೂದವನ್ನು ಆಕ್ರಮಿಸಿದನು, ಅದರ ಭದ್ರಗೊಳಿಸಲ್ಪಟ್ಟ ಪಟ್ಟಣಗಳಲ್ಲಿ ಹೆಚ್ಚಿನವುಗಳನ್ನು ಸ್ವಾಧೀನಪಡಿಸಿಕೊಂಡನು, ಮತ್ತು ಯೆರೂಸಲೇಮಿಗೂ ಬೆದರಿಕೆಯನ್ನು ಹಾಕಿದನು. (ಯೆಶಾಯ 36:1, 2) ಯೆರೂಸಲೇಮಿನ ಶರಣಾಗತಿಯನ್ನು ತಗಾದೆ ಮಾಡಿ ಕೇಳುವಾಗ ಅಶ್ಶೂರದ ರಾಜನ ಪ್ರತಿನಿಧಿಯು ನಿಶ್ಚಯವಾಗಿ ಯೆಹೋವನ ವಿರುದ್ಧ ಉಬ್ಬಿಕೊಂಡನು.—ಯೆಶಾಯ 36:4-20.
15. ತನ್ನ ಜನರ ವಿರುದ್ಧ ಉಬ್ಬಿಕೊಂಡಿದ್ದ ರಾಷ್ಟ್ರಗಳ ದೇವರುಗಳನ್ನು ಯೆಹೋವನು ಹೇಗೆ ಅಪಮಾನಪಡಿಸಲಿದ್ದನು?
15 ಇಸ್ರಾಯೇಲಿನ ವಿರುದ್ಧ ಉಬ್ಬಿಕೊಂಡ, “ಅವರು ಜನಾಂಗವಾಗಿ ಉಳಿಯದಂತೆಯೂ ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆಯೂ ಅವರನ್ನು ಸಂಹರಿಸೋಣ”ವೆಂದು ಜಂಬದಿಂದ ಹೇಳಿದ ಹಲವಾರು ರಾಷ್ಟ್ರಗಳನ್ನು—ಮೋವಾಬ್, ಅಮ್ಮೋನ್, ಮತ್ತು ಅಶ್ಶೂರವನ್ನು ಸೇರಿಸಿ—ಕೀರ್ತನೆ 83 ಉಲ್ಲೇಖಿಸುತ್ತದೆ. (ಕೀರ್ತನೆ 83:4) ಈ ಎಲ್ಲ ಅಹಂಕಾರಿ ರಾಷ್ಟ್ರಗಳು ಮತ್ತು ಅವುಗಳ ದೇವರುಗಳು ಸೇನಾಧೀಶ್ವರನಾದ ಯೆಹೋವನಿಂದ ಅಪಮಾನಿಸಲ್ಪಡುವರೆಂದು ಪ್ರವಾದಿಯಾದ ಚೆಫನ್ಯನು ಧೈರ್ಯದಿಂದ ಪ್ರಕಟಿಸಿದನು. “ಆ ಪ್ರಾಂತಗಳವರು ಸೇನಾಧೀಶ್ವರ ಯೆಹೋವನ ಜನರನ್ನು ದೂಷಿಸಿ ಅವರ ಮೇಲೆ ಉಬ್ಬಿಕೊಂಡು ಬಂದದರಿಂದ ಅವರ ಹೆಮ್ಮೆಯ ನಿಮಿತ್ತವೇ ಅವರಿಗೆ ಈ ಗತಿಯಾಗುವದು. ಯೆಹೋವನು ಅವರಿಗೆ ಭಯಂಕರವಾಗುವನು; ಲೋಕದ ದೇವರುಗಳನ್ನೆಲ್ಲಾ ಕ್ಷಯಿಸಿಬಿಡುವನು; ಸಮಸ್ತಜನರು, ಅಂದರೆ ಸಮುದ್ರಪ್ರಾಂತದ ನಿವಾಸಿಗಳಾದ ಸಕಲಜನಾಂಗಗಳವರು ತಮ್ಮ ತಮ್ಮ ಸ್ಥಳಗಳಲ್ಲೇ ಆತನನ್ನು ಆರಾಧಿಸುವರು.”—ಚೆಫನ್ಯ 2:10, 11.
“ಕಾದುಕೊಂಡಿರ್ರಿ”
16. (ಎ) ಯಾರಿಗೆ ಯೆಹೋವನ ದಿನದ ಸಮೀಪಿಸುವಿಕೆಯು ಹರ್ಷದ ಮೂಲವಾಗಿತ್ತು ಮತ್ತು ಏಕೆ? (ಬಿ) ಈ ನಂಬಿಗಸ್ತ ಉಳಿಕೆಯವರಿಗೆ ಯಾವ ಹುರಿದುಂಬಿಸುವ ಕರೆಯು ನೀಡಲ್ಪಟ್ಟಿತು?
16 ಆತ್ಮಿಕ ಆಲಸ್ಯ, ಅಜ್ಞೇಯತಾವಾದ, ಮೂರ್ತಿಪೂಜೆ, ಭ್ರಷ್ಟತೆ, ಮತ್ತು ಪ್ರಾಪಂಚಿಕತೆಯು, ಯೆಹೂದ ಮತ್ತು ಯೆರೂಸಲೇಮಿನ ಮುಖಂಡರಲ್ಲಿ ಮತ್ತು ಅನೇಕ ನಿವಾಸಿಗಳಲ್ಲಿ ಚಾಲ್ತಿಯಲ್ಲಿದ್ದಾಗ್ಯೂ, ಚೆಫನ್ಯನ ಎಚ್ಚರಿಕೆಯ ಪ್ರವಾದನೆಗಳಿಗೆ ಕೆಲವು ನಂಬಿಗಸ್ತ ಯೆಹೂದ್ಯರು ಕಿವಿಗೊಟ್ಟರೆಂಬುದು ವ್ಯಕ್ತ. ಅವರು ಯೆಹೂದದ ದೇಶಾಧಿಪತಿಗಳು, ನ್ಯಾಯಾಧೀಶರು ಮತ್ತು ಯಾಜಕರ ಅಸಹ್ಯಕರ ಆಚರಣೆಗಳಿಂದ ದುಃಖಿತರಾದರು. ಈ ನಿಷ್ಠಾವಂತರಿಗೆ ಚೆಫನ್ಯನ ಪ್ರಕಟನೆಗಳು ಸಾಂತ್ವನದ ಮೂಲವಾಗಿದ್ದವು. ಸಂಕಟದ ಕಾರಣವಾಗಿರುವುದರ ಬದಲು, ಯೆಹೋವನ ದಿನದ ಸಮೀಪಿಸುವಿಕೆಯು ಅವರಿಗೆ ಹರ್ಷದ ಮೂಲವಾಗಿತ್ತು, ಏಕೆಂದರೆ ಅದು ಇಂತಹ ಹೇಯ ಆಚರಣೆಗಳಿಗೆ ಒಂದು ತಡೆಯನ್ನು ತರಲಿತ್ತು. ಈ ನಂಬಿಗಸ್ತ ಉಳಿಕೆಯವರು ಯೆಹೋವನ ಹುರಿದುಂಬಿಸುವ ಕರೆಯನ್ನು ಆಲಿಸಿದರು: “ಯೆಹೋವನು ಇಂತೆನ್ನುತ್ತಾನೆ—ಹೀಗಿರಲು ನನ್ನನ್ನು ಕಾದುಕೊಂಡಿರ್ರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ; ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವದಷ್ಟೆ.”—ಚೆಫನ್ಯ 3:8.
17. ರಾಷ್ಟ್ರಗಳ ಮೇಲೆ ಚೆಫನ್ಯನ ನ್ಯಾಯತೀರ್ಪಿನ ಸಂದೇಶಗಳು ಯಾವಾಗ ಮತ್ತು ಹೇಗೆ ನೆರವೇರಲಾರಂಭಿಸಿದವು?
17 ಆ ಎಚ್ಚರಿಕೆಯನ್ನು ಆಲಿಸಿದವರು ಆಶ್ಚರ್ಯಗೊಳ್ಳಲಿಲ್ಲ. ಚೆಫನ್ಯನ ಪ್ರವಾದನೆಯ ನೆರವೇರಿಕೆಯನ್ನು ನೋಡಲು ಅನೇಕರು ಜೀವಿಸಿದರು. ಸಾ.ಶ.ಪೂ. 632ರಲ್ಲಿ, ಬಾಬೆಲಿನವರು, ಮೇದ್ಯರು ಮತ್ತು ಉತ್ತರದಿಂದ ಅಲೆದಾಡುವ ಗುಂಪುಗಳ—ಬಹುಶಃ ಸಿಥಿಯನರು—ಒಕ್ಕೂಟದ ಮೂಲಕ ನಿನೆವೆಯು ಸ್ವಾಧೀನಗೊಳಿಸಲ್ಪಟ್ಟು, ನಾಶಮಾಡಲ್ಪಟ್ಟಿತು. ಇತಿಹಾಸಕಾರ ವಿಲ್ ಡುರ್ಯಾಂಟ್ ಹೇಳುವುದು: “ಸೈಆ್ಯಕ್ಸರೀಸ್ನ ನೇತೃತ್ವದ ಕೆಳಗೆ ಮೇದ್ಯರ ಒಂದು ಸೇನೆಯೊಂದಿಗೆ, ನಬೊಪೊಲ್ಯಾಸರ್ನ ನೇತೃತ್ವದ ಕೆಳಗೆ ಬಾಬೆಲಿನವರ ಒಂದು ಸೇನೆ, ಮತ್ತು ಕಾಕಸಸ್ನಿಂದ ಸಿಥಿಯನರ ಒಂದು ಗುಂಪಿನೊಂದಿಗೆ ಐಕ್ಯಗೊಂಡು, ವಿಸ್ಮಯಕರವಾದ ಅನಾಯಾಸ ಹಾಗೂ ಶೀಘ್ರತೆಯಿಂದ ಉತ್ತರದ ಕೋಟೆಗಳನ್ನು ಸೆರೆಹಿಡಿಯಿತು. . . . ಒಂದೇ ಏಟಿನಲ್ಲಿ ಅಶ್ಶೂರವು ಇತಿಹಾಸದಿಂದ ಮಾಯವಾಯಿತು.” ಚೆಫನ್ಯನು ಪ್ರವಾದಿಸಿದ್ದು ನಿಖರವಾಗಿ ಇದೇ ಆಗಿತ್ತು.—ಚೆಫನ್ಯ 2:13-15.
18. (ಎ) ಯೆರೂಸಲೇಮಿನ ಮೇಲೆ ದೈವಿಕ ನ್ಯಾಯತೀರ್ಪು ಹೇಗೆ ನಿರ್ವಹಿಸಲ್ಪಟ್ಟಿತು, ಮತ್ತು ಏಕೆ? (ಬಿ) ಮೋವಾಬ್ ಮತ್ತು ಅಮ್ಮೋನ್ನ ಕುರಿತಾದ ಚೆಫನ್ಯನ ಪ್ರವಾದನೆಯು ಹೇಗೆ ನೆರವೇರಿತು?
18 ಯೆಹೋವನನ್ನು ಕಾದುಕೊಂಡಿದ್ದ ಅನೇಕ ಯೆಹೂದ್ಯರು, ಯೆಹೂದ ಮತ್ತು ಯೆರೂಸಲೇಮಿನ ಮೇಲೆ ಆತನ ನ್ಯಾಯತೀರ್ಪುಗಳು ನಿರ್ವಹಿಸಲ್ಪಡುವುದನ್ನು ನೋಡಲೂ ಜೀವಿತರಾಗಿದ್ದರು. ಯೆರೂಸಲೇಮಿನ ಕುರಿತು ಚೆಫನ್ಯನು ಹೀಗೆ ಪ್ರವಾದಿಸಿದ್ದನು: “ಅಯ್ಯೋ, ಅವಿಧೇಯವೂ ಮಲಿನವೂ ಆದ ಹಿಂಸಕನಗರಿಯ ಗತಿಯನ್ನು ಏನು ಹೇಳಲಿ! ಅದು ದೈವೋಕ್ತಿಗೆ ಕಿವಿಗೊಡಲಿಲ್ಲ, ಶಿಕ್ಷಣೆಗೆ ಒಳಪಡಲಿಲ್ಲ, ಯೆಹೋವನಲ್ಲಿ ಭರವಸವಿಡಲಿಲ್ಲ, ತನ್ನ ದೇವರ ಸನ್ನಿಧಿಗೆ ಸಮೀಪಿಸಲಿಲ್ಲ.” (ಚೆಫನ್ಯ 3:1, 2) ತನ್ನ ಅಪನಂಬಿಗಸ್ತಿಕೆಯ ಕಾರಣ, ಯೆರೂಸಲೇಮ್ ಎರಡು ಬಾರಿ ಬಾಬೆಲಿನವರಿಂದ ಸುತ್ತುವರಿಯಲ್ಪಟ್ಟಿತು ಮತ್ತು ಅಂತಿಮವಾಗಿ ಸ್ವಾಧೀನಗೊಳಿಸಲ್ಪಟ್ಟು ಸಾ.ಶ.ಪೂ 607ರಲ್ಲಿ ನಾಶಮಾಡಲ್ಪಟ್ಟಿತು. (2 ಪೂರ್ವಕಾಲವೃತ್ತಾಂತ 36:5, 6, 11-21) ಮೋವಾಬ್ ಮತ್ತು ಅಮ್ಮೋನ್ನ ವಿಷಯದಲ್ಲಿ, ಯೆಹೂದಿ ಇತಿಹಾಸಕಾರ ಜೋಸೀಫಸ್ಗನುಸಾರ, ಯೆರೂಸಲೇಮಿನ ಪತನದ ತರುವಾಯ ಐದನೆಯ ವರ್ಷದಲ್ಲಿ, ಬಾಬೆಲಿನವರು ಅವರ ಮೇಲೆ ಯುದ್ಧ ಮಾಡಿದರು ಮತ್ತು ಅವರನ್ನು ಜಯಿಸಿದರು. ಪ್ರವಾದಿಸಿದಂತೆ ಅವರು ತರುವಾಯ ನಿರ್ನಾಮವಾದರು.
19, 20. (ಎ) ಆತನನ್ನು ಕಾದುಕೊಂಡಿದ್ದವರನ್ನು ಯೆಹೋವನು ಹೇಗೆ ಬಹುಮಾನಿಸಿದನು? (ಬಿ) ಈ ಘಟನೆಗಳು ನಮಗೆ ಸಂಬಂಧಿಸಿವೆ ಏಕೆ, ಮತ್ತು ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
19 ಇವುಗಳ ಮತ್ತು ಚೆಫನ್ಯನ ಪ್ರವಾದನೆಯ ಇತರ ವಿವರಗಳ ನೆರವೇರಿಕೆಯು, ಯೆಹೋವನನ್ನು ಕಾದುಕೊಂಡಿದ್ದ ಯೆಹೂದ್ಯರಿಗೆ ಮತ್ತು ಯೆಹೂದ್ಯೇತರರಿಗೆ ನಂಬಿಕೆಯನ್ನು ಬಲಪಡಿಸುವ ಅನುಭವವಾಗಿತ್ತು. ಯೆಹೂದ ಮತ್ತು ಯೆರೂಸಲೇಮಿಗೆ ಸಂಭವಿಸಿದ ನಾಶನದಿಂದ ಪಾರಾದವರಲ್ಲಿ ಯೆರೆಮೀಯ, ಕೂಷ್ಯನಾದ ಎಬೆದ್ಮೆಲೆಕ, ಮತ್ತು ರೇಕಾಬ್ಯನಾದ ಯೋನಾದಾಬನ ಕುಟುಂಬವು ಸೇರಿತ್ತು. (ಯೆರೆಮೀಯ 35:18, 19; 39:11, 12, 16-18) ಯೆಹೋವನನ್ನು ಕಾದುಕೊಂಡಿರಲು ಮುಂದುವರಿದ, ಪರದೇಶವಾಸದಲ್ಲಿದ್ದ ನಂಬಿಗಸ್ತ ಯೆಹೂದ್ಯರು ಮತ್ತು ಅವರ ಸಂತಾನವು, ಸಾ.ಶ.ಪೂ. 537ರಲ್ಲಿ ಬಾಬೆಲಿನಿಂದ ಬಿಡಿಸಲ್ಪಟ್ಟು, ಶುದ್ಧಾರಾಧನೆಯನ್ನು ಪುನಃಸ್ಥಾಪಿಸಲು ಯೆಹೂದಕ್ಕೆ ಹಿಂದಿರುಗಿದ ಆನಂದಿತ ಉಳಿಕೆಯವರ ಭಾಗವಾದರು.—ಎಜ್ರ 2:1; ಚೆಫನ್ಯ 3:14, 15, 20.
20 ಇದೆಲ್ಲವು ನಮ್ಮ ಸಮಯಕ್ಕಾಗಿ ಏನನ್ನು ಅರ್ಥೈಸುತ್ತದೆ? ಅನೇಕ ವಿಧಗಳಲ್ಲಿ ಚೆಫನ್ಯನ ದಿನದಲ್ಲಿನ ಸನ್ನಿವೇಶವು ಇಂದು ಕ್ರೈಸ್ತಪ್ರಪಂಚದಲ್ಲಿ ಸಂಭವಿಸುತ್ತಿರುವ ಹೇಯ ವಿಷಯಗಳಿಗೆ ಅನುರೂಪವಾಗಿದೆ. ಅಷ್ಟೇ ಅಲ್ಲದೆ, ಆ ಸಮಯಗಳಲ್ಲಿನ ಯೆಹೂದ್ಯರ ವಿವಿಧ ಮನೋಭಾವಗಳು, ಇಂದು ಕಂಡುಕೊಳ್ಳಲ್ಪಡಸಾಧ್ಯವಿರುವ—ಕೆಲವೊಮ್ಮೆ ಯೆಹೋವನ ಜನರೊಳಗೂ—ಮನೋಭಾವಗಳಿಗೆ ಹೋಲಿಕೆಯನ್ನು ಪಡೆದಿರುತ್ತವೆ. ಇವು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡಲಿರುವ ವಿಷಯಗಳಾಗಿವೆ.
[ಪಾದಟಿಪ್ಪಣಿ]
a ‘ರಾಜವಂಶದವರು’ ಎಂಬ ಅಭಿವ್ಯಕ್ತಿಯು, ಯೋಷೀಯನ ಪುತ್ರರು ಆ ಸಮಯದಲ್ಲಿ ಬಹಳ ಎಳೆಯವರಾಗಿದ್ದ ಕಾರಣ, ಎಲ್ಲ ರಾಜಯೋಗ್ಯ ರಾಜಕುಮಾರರಿಗೆ ಸೂಚಿಸುತ್ತದೆಂದು ತೋರಲಿತ್ತು.
ಪುನರ್ವಿಮರ್ಶೆಯ ವಿಧದಲ್ಲಿ
◻ ಚೆಫನ್ಯನ ದಿನದಲ್ಲಿ ಯೆಹೂದದಲ್ಲಿನ ಧಾರ್ಮಿಕ ಸನ್ನಿವೇಶವು ಏನಾಗಿತ್ತು?
◻ ನಾಗರಿಕ ಮುಖಂಡರೊಳಗೆ ಯಾವ ಪರಿಸ್ಥಿತಿಗಳು ಚಾಲ್ತಿಯಲ್ಲಿದ್ದವು, ಮತ್ತು ಜನರಲ್ಲಿ ಅನೇಕರ ಮನೋಭಾವವು ಏನಾಗಿತ್ತು?
◻ ಯೆಹೋವನ ಜನರ ವಿರುದ್ಧ ರಾಷ್ಟ್ರಗಳು ಉಬ್ಬಿಕೊಂಡದ್ದು ಹೇಗೆ?
◻ ಯೆಹೂದ ಮತ್ತು ಇತರ ರಾಷ್ಟ್ರಗಳಿಗೆ ಯಾವ ಎಚ್ಚರಿಕೆಯನ್ನು ಚೆಫನ್ಯನು ಕೊಟ್ಟನು?
◻ ಯೆಹೋವನನ್ನು ಕಾದುಕೊಂಡಿದ್ದವರು ಹೇಗೆ ಬಹುಮಾನಿಸಲ್ಪಟ್ಟರು?
[ಪುಟ 9 ರಲ್ಲಿರುವ ಚಿತ್ರ]
ಮೋವಾಬ್ಯರ ರಾಜನಾದ ಮೇಷನು, ಪುರಾತನ ಇಸ್ರಾಯೇಲಿನ ವಿರುದ್ಧ ತೆಗಳಿಕೆಯ ಮಾತುಗಳನ್ನು ಆಡಿದನೆಂದು ಮೋವಾಬ್ಯ ಶಿಲೆಯು ದೃಢಪಡಿಸುತ್ತದೆ
[ಕೃಪೆ]
Moabite Stone: Musée du Louvre, Paris
[ಪುಟ 10 ರಲ್ಲಿರುವ ಚಿತ್ರ]
ಚೆಫನ್ಯನ ಪ್ರವಾದನೆಯನ್ನು ಬೆಂಬಲಿಸುತ್ತಾ, ಬಾಬೆಲಿನ ವೃತ್ತಾಂತದ ಈ ಬೆಣೆ ಲಿಪಿಯ ಹಲಗೆಯು, ಸೇನೆಗಳ ಒಕ್ಕೂಟದ ಮೂಲಕ ನಿನೆವೆಯ ನಾಶನವನ್ನು ದಾಖಲಿಸುತ್ತದೆ
[ಕೃಪೆ]
Cuneiform tablet: Courtesy of The British Museum