ಯೇಸು ರಾಜ್ಯ ಮಹಿಮೆಯಲ್ಲಿ ಬರುವಾಗ
“ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ.”—ಮತ್ತಾಯ 16:28.
1, 2. ಸಾ.ಶ. 32ರ ಪಂಚಾಶತ್ತಮ ಬಳಿಕ ಸ್ವಲ್ಪದರಲ್ಲಿ ಏನು ಸಂಭವಿಸಿತು, ಮತ್ತು ಆ ಘಟನೆಯ ಉದ್ದೇಶವೇನಾಗಿತ್ತು?
ಸಾಮಾನ್ಯ ಶಕ 32ರ ಪಂಚಾಶತ್ತಮದ ಬಳಿಕ ಸ್ವಲ್ಪದರಲ್ಲಿ, ಯೇಸು ಕ್ರಿಸ್ತನ ಅಪೊಸ್ತಲರಲ್ಲಿ ಮೂವರು ಒಂದು ಸ್ಮರಣಯೋಗ್ಯ ದರ್ಶನವನ್ನು ಕಂಡರು. ಪ್ರೇರಿತ ದಾಖಲೆಗನುಸಾರ, “ಯೇಸು ಪೇತ್ರನನ್ನೂ ಯಾಕೋಬನನ್ನೂ ಇವನ ತಮ್ಮನಾದ ಯೋಹಾನನನ್ನೂ ಮಾತ್ರ ವಿಂಗಡವಾಗಿ ಕರಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣ ಮುಂದೆ ಆತನ ರೂಪ ಬೇರೆಯಾಯಿತು.”—ಮತ್ತಾಯ 17:1, 2.
2 ಆ ರೂಪಾಂತರ ದರ್ಶನವು ಒಂದು ಸಂದಿಗ್ಧ ಸಮಯದಲ್ಲಿ ಬಂತು. ತಾನು ಯೆರೂಸಲೇಮಿನಲ್ಲಿ ಬಾಧೆಯನ್ನನುಭವಿಸಿ ಸಾಯುವೆನೆಂದು ಯೇಸು ತನ್ನ ಹಿಂಬಾಲಕರಿಗೆ ಹೇಳತೊಡಗಿದ್ದನು, ಆದರೆ ಅವನ ಮಾತುಗಳನ್ನು ಗ್ರಹಿಸುವುದು ಅವರಿಗೆ ಕಷ್ಟವಾಯಿತು. (ಮತ್ತಾಯ 16:21-23) ಆ ದರ್ಶನವು ಯೇಸುವಿನ ಮೂವರು ಅಪೊಸ್ತಲರ ನಂಬಿಕೆಯನ್ನು, ಅವನಿಗೆ ಬರಲಿದ್ದ ಮರಣಕ್ಕಾಗಿ ಸಿದ್ಧರಾಗಿರುವಂತೆ ಬಲಪಡಿಸಿದ್ದು ಮಾತ್ರವಲ್ಲ, ಅದನ್ನನುಸರಿಸಿ ಕ್ರೈಸ್ತ ಸಭೆಗಿದ್ದ ವರ್ಷಗಟ್ಟಲೆಯ ಶ್ರಮಪೂರ್ಣ ಕೆಲಸ ಮತ್ತು ಪರೀಕ್ಷಿಸಲ್ಪಡುವಿಕೆಗೂ ಬಲಪಡಿಸಿತು. ನಾವಿಂದು ಆ ದರ್ಶನದಿಂದ ಏನನ್ನಾದರೂ ಕಲಿಯಬಲ್ಲೆವೊ? ಹೌದು, ಏಕೆಂದರೆ ಅದು ಏನನ್ನು ಮುನ್ಸೂಚಿಸಿತೊ ಅದು ನಮ್ಮ ಸಮಯದಲ್ಲಿ ವಾಸ್ತವವಾಗಿ ನೆರವೇರುತ್ತದೆ.
3, 4. (ಎ) ರೂಪಾಂತರಕ್ಕೆ ಆರು ದಿನಗಳ ಮೊದಲು ಯೇಸು ಏನು ಹೇಳಿದನು? (ಬಿ) ರೂಪಾಂತರದ ಸಮಯದಲ್ಲಿ ಏನಾಯಿತೆಂಬುದನ್ನು ವರ್ಣಿಸಿರಿ.
3 ರೂಪಾಂತರಕ್ಕೆ ಆರು ದಿನಗಳಿಗೆ ಮುಂಚಿತವಾಗಿ, ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಮನುಷ್ಯಕುಮಾರನು ತನ್ನ ತಂದೆಯ ಪ್ರಭಾವದೊಡನೆ ತನ್ನ ದೂತರ ಸಮೇತವಾಗಿ ಬರುವನು; ಆಗ ಆತನು ಒಬ್ಬೊಬ್ಬನಿಗೆ ಅವನವನ ನಡತೆಗೆ ತಕ್ಕ ಫಲವನ್ನು ಕೊಡುವನು.” ಈ ಮಾತುಗಳು, “ವಿಷಯಗಳ ವ್ಯವಸ್ಥೆಯ ಸಮಾಪ್ತಿ” (NW)ಯಲ್ಲಿ ನೆರವೇರಲಿದ್ದವು. ಯೇಸು ಇನ್ನೂ ಹೇಳಿದ್ದು: “ನಿಮಗೆ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ.” (ಮತ್ತಾಯ 16:27, 28; 24:3; 25:31-34, 41; ದಾನಿಯೇಲ 12:4) ಆ ರೂಪಾಂತರವು ಈ ಕೊನೆಯ ಮಾತುಗಳ ನೆರವೇರಿಕೆಯಾಗಿ ಸಂಭವಿಸಿತು.
4 ಆ ಮೂವರು ಅಪೊಸ್ತಲರು ನಿಷ್ಕೃಷ್ಟವಾಗಿ ಏನನ್ನು ನೋಡಿದರು? ಆ ಘಟನೆಯನ್ನು ಲೂಕನು ಈ ಕೆಳಗಿನಂತೆ ವರ್ಣಿಸಿದನು: “ಆತನು [ಯೇಸು] ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬೇರೆಯಾಯಿತು. ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂತು. ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತಾಡುತ್ತಿದ್ದರು. ಇವರು ಯಾರಂದರೆ ಮೋಶೆಯೂ ಎಲೀಯನೂ. ಇವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇಮಿನಲ್ಲಿ ಆತನು ನೆರವೇರಿಸಬೇಕಾಗಿದ್ದ ಮರಣದ ವಿಷಯವಾಗಿ ಮಾತಾಡುತ್ತಿದ್ದರು.” ಆಗ, “ಮೋಡವು ಬಂದು ಅವರ [ಅಪೊಸ್ತಲರ] ಮೇಲೆ ಕವಿಯಿತು. ಅವರು ಮೋಡದೊಳಗೆ ಸೇರಿದಾಗ ಹೆದರಿದರು. ಆಗ ಆ ಮೋಡದೊಳಗಿಂದ—ಈತನು ನನ್ನ ಮಗನು ನಾನು ಆರಿಸಿ ಕೊಂಡವನು; ಈತನ ಮಾತನ್ನು ಕೇಳಿರಿ ಎಂಬ ಆಕಾಶವಾಣಿ ಆಯಿತು.”—ಲೂಕ 9:29-31, 34, 35.
ನಂಬಿಕೆ ಬಲಗೊಳಿಸಲ್ಪಟ್ಟದ್ದು
5. ರೂಪಾಂತರವು ಅಪೊಸ್ತಲ ಪೇತ್ರನ ಮೇಲೆ ಯಾವ ಪ್ರಭಾವವನ್ನುಂಟುಮಾಡಿತು?
5 ಅಪೊಸ್ತಲ ಪೇತ್ರನು ಈ ಮೊದಲೇ ಯೇಸುವನ್ನು, “ಕ್ರಿಸ್ತನು, ಜೀವಸ್ವರೂಪವಾದ ದೇವರಕುಮಾರನು” ಎಂದು ಗುರುತಿಸಿದ್ದನು. (ಮತ್ತಾಯ 16:16) ಸ್ವರ್ಗದಿಂದ ಬಂದ ಯೆಹೋವನ ಮಾತುಗಳು ಆ ಗುರುತುಸ್ಥಾಪನೆಯನ್ನು ದೃಢೀಕರಿಸಿದವು, ಮತ್ತು ರೂಪಾಂತರಿತ ಯೇಸುವಿನ ದರ್ಶನವು, ಕ್ರಿಸ್ತನು ರಾಜ್ಯಶಕ್ತಿ ಮತ್ತು ಮಹಿಮೆಯಲ್ಲಿ ಬಂದು, ಕಟ್ಟಕಡೆಗೆ ಮಾನವಕುಲಕ್ಕೆ ನ್ಯಾಯತೀರಿಸುವುದರ ಪೂರ್ವಾನುಭವವಾಗಿತ್ತು. ರೂಪಾಂತರವಾಗಿ 30ಕ್ಕೂ ಹೆಚ್ಚು ವರ್ಷಗಳ ತರುವಾಯ, ಪೇತ್ರನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸುವವರಾಗಿರಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ತಿಳಿಯಪಡಿಸಿದೆವು. ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ಮೆಚ್ಚಿದ್ದೇನೆ ಎಂಬಂಥ ವಾಣಿಯು ಸರ್ವೋತ್ಕೃಷ್ಟಪ್ರಭಾವದಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಘನಮಾನಗಳನ್ನು ಹೊಂದಿದನಲ್ಲವೇ. ನಾವು ಪರಿಶುದ್ಧಪರ್ವತದ ಮೇಲೆ ಆತನ ಸಂಗಡ ಇದ್ದಾಗ ಆಕಾಶದಿಂದ ಬಂದ ಆ ವಾಣಿಯನ್ನು ನಾವೇ ಕೇಳಿದೆವು.”—2 ಪೇತ್ರ 1:16-18; 1 ಪೇತ್ರ 4:17.
6. ರೂಪಾಂತರದ ಬಳಿಕ ಸಂಭವಗಳು ಹೇಗೆ ವಿಕಾಸಗೊಂಡವು?
6 ಇಂದು, ಆ ಮೂವರು ಅಪೊಸ್ತಲರು ಏನನ್ನು ನೋಡಿದರೊ ಅದರ ಮೂಲಕ ನಮ್ಮ ನಂಬಿಕೆಯೂ ಬಲಗೊಳಿಸಲ್ಪಡುತ್ತದೆ. ಸಾ.ಶ. 32ರಿಂದ ಹಿಡಿದು ಘಟನೆಗಳು ಮುಂದುವರಿದಿವೆ ನಿಶ್ಚಯ. ಮುಂದಿನ ವರುಷದಲ್ಲಿ, ಯೇಸು ಸತ್ತು, ಪುನರುತ್ಥಾನ ಹೊಂದಿ, ತನ್ನ ತಂದೆಯ ಬಲಬದಿಗೇರಿದನು. (ಅ. ಕೃತ್ಯಗಳು 2:29-36) ಆ ವರುಷದ ಪಂಚಾಶತ್ತಮದಲ್ಲಿ, ಹೊಸತಾದ “ದೇವರ ಇಸ್ರಾಯೇಲ್ಯರು” ಉತ್ಪಾದಿಸಲ್ಪಟ್ಟರು ಮತ್ತು ಒಂದು ಸಾರುವ ಆಂದೋಲನವು, ಯೆರೂಸಲೇಮಿನಿಂದ ಆರಂಭಗೊಂಡು, ಕೊನೆಗೆ ಭೂಮಿಯ ಕಟ್ಟಕಡೆಯ ವರೆಗೆ ಹರಡಿತು. (ಗಲಾತ್ಯ 6:16; ಅ. ಕೃತ್ಯಗಳು 1:8) ಹೆಚ್ಚುಕಡಮೆ ಒಡನೆಯೇ ಯೇಸುವಿನ ಹಿಂಬಾಲಕರ ನಂಬಿಕೆಯು ಪರೀಕ್ಷಿಸಲ್ಪಟ್ಟಿತು. ಅಪೊಸ್ತಲರು ಸಾರುವುದನ್ನು ನಿಲ್ಲಿಸಲು ನಿರಾಕರಿಸಿದ ಕಾರಣ ದಸ್ತಗಿರಿಮಾಡಲ್ಪಟ್ಟು ಕಠಿನವಾಗಿ ಹೊಡೆಯಲ್ಪಟ್ಟರು. ಸ್ವಲ್ಪದರಲ್ಲಿ ಸ್ತೆಫನನ ಕೊಲೆಯಾಯಿತು. ಬಳಿಕ, ರೂಪಾಂತರದ ಒಬ್ಬ ಪ್ರತ್ಯಕ್ಷಸಾಕ್ಷಿಯಾಗಿದ್ದ ಯಾಕೋಬನನ್ನು ಕೊಲ್ಲಲಾಯಿತು. (ಅ. ಕೃತ್ಯಗಳು 5:17-40; 6:8–7:60; 12:1, 2) ಆದರೂ ಪೇತ್ರ ಮತ್ತು ಯೋಹಾನರು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಲು ಇನ್ನೂ ಅನೇಕ ವರ್ಷಕಾಲ ಬದುಕಿ ಉಳಿದರು. ಕಾರ್ಯತಃ, ಸಾ.ಶ. ಒಂದನೆಯ ಶತಮಾನದ ಅಂತ್ಯದಲ್ಲಿ ಯೋಹಾನನು, ಸ್ವರ್ಗೀಯ ಮಹಿಮೆಯಲ್ಲಿದ್ದ ಯೇಸುವಿನ ಇನ್ನೂ ಹೆಚ್ಚಿನ ಕ್ಷಣಿಕದರ್ಶನಗಳನ್ನು ದಾಖಲೆಮಾಡಿದನು.—ಪ್ರಕಟನೆ 1:12-20; 14:14; 19:11-16.
7. (ಎ) ರೂಪಾಂತರ ದರ್ಶನವು ಯಾವಾಗ ನೆರವೇರತೊಡಗಿತು? (ಬಿ) ಕೆಲವರಿಗೆ ಅವರವರ ನಡತೆಯ ಪ್ರಕಾರ ಯೇಸು ಯಾವಾಗ ಫಲಕೊಟ್ಟನು?
7 “ಕರ್ತನ ದಿನವು” 1914ರಲ್ಲಿ ಆರಂಭವಾದಂದಿನಿಂದ, ಯೋಹಾನನು ನೋಡಿದ ದರ್ಶನಗಳಲ್ಲಿ ಅನೇಕ ದರ್ಶನಗಳು ನೆರವೇರಿವೆ. (ಪ್ರಕಟನೆ 1:10) ಆದರೆ ರೂಪಾಂತರವು ಮುನ್ಸೂಚಿಸಿದಂತೆ, ಯೇಸುವು ‘ತನ್ನ ತಂದೆಯ ಮಹಿಮೆಯಲ್ಲಿ ಬರುವ’ ವಿಷಯವಾಗಿ ಏನು? ಈ ದರ್ಶನವು, 1914ರಲ್ಲಿ ದೇವರ ಸ್ವರ್ಗೀಯ ರಾಜ್ಯವು ಹುಟ್ಟಿದಾಗ ನೆರವೇರತೊಡಗಿತು. ಯೇಸು ಬೆಳ್ಳಿಯಂತೆ, ಹೊಸದಾಗಿ ಸಿಂಹಾಸನವೇರಿದ ಅರಸನಾಗಿ ವಿಶ್ವರಂಗದಲ್ಲಿ ಎದ್ದುಬಂದಾಗ, ಅದು ಹೊಸದಿನದ ಅರುಣೋದಯದಂತಿತ್ತು. (2 ಪೇತ್ರ 1:19; ಪ್ರಕಟನೆ 11:15; 22:16) ಯೇಸು ಆಗ ಕೆಲವರಿಗೆ ಅವರವರ ನಡತೆಗೆ ತಕ್ಕಹಾಗಿನ ಫಲವನ್ನು ಕೊಟ್ಟನೊ? ಹೌದು. ಅದಾಗಿ ಸ್ವಲ್ಪದರಲ್ಲಿ ಅಭಿಷಿಕ್ತ ಕ್ರೈಸ್ತರ ಸ್ವರ್ಗೀಯ ಪುನರುತ್ಥಾನವು ಆರಂಭಗೊಂಡಿತೆಂಬುದಕ್ಕೆ ಬಲವಾದ ಪುರಾವೆಯಿದೆ.—2 ತಿಮೊಥೆಯ 4:8; ಪ್ರಕಟನೆ 14:13.
8. ರೂಪಾಂತರ ದರ್ಶನದ ನೆರವೇರಿಕೆಯ ತುತ್ತತುದಿಯನ್ನು ಯಾವ ಘಟನೆಗಳು ಗುರುತಿಸುವುವು?
8 ಆದರೆ ಬೇಗನೆ, ಯೇಸುವು “ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ” ಸಕಲ ಮಾನವಕುಲಕ್ಕೆ ತೀರ್ಪುಮಾಡುವರೆ ಬರುವನು. (ಮತ್ತಾಯ 25:31) ಆ ಸಮಯದಲ್ಲಿ, ಅವನು ತನ್ನ ಉಜ್ವಲವಾದ ಸಕಲ ಮಹಿಮೆಯಿಂದ ತನ್ನನ್ನು ತೋರಿಸಿಕೊಟ್ಟು, “ಒಬ್ಬೊಬ್ಬನಿಗೆ” ಅವನ ಅಥವಾ ಅವಳ ನಡತೆಗೆ ತಕ್ಕದಾದ ಪ್ರತಿಫಲವನ್ನು ಕೊಡುವನು. ಕುರಿಸದೃಶರು ಅವರಿಗಾಗಿ ತಯಾರಿಸಿದ ರಾಜ್ಯದಲ್ಲಿ ನಿತ್ಯಜೀವವನ್ನು ಪಡೆಯುವರು ಮತ್ತು ಆಡುಸದೃಶರು “ನಿತ್ಯಛೇದನೆ”ಗೆ ತೆರಳುವರು. ರೂಪಾಂತರದ ದರ್ಶನದ ನೆರವೇರಿಕೆಗೆ ಅದು ಎಷ್ಟು ಸೊಗಸಾದ ಸಮಾಪ್ತಿಯಾಗಿರುವುದು!—ಮತ್ತಾಯ 25:34, 41, 46, NW; ಮಾರ್ಕ 8:38; 2 ಥೆಸಲೊನೀಕ 1:6-10.
ಯೇಸುವಿನ ಮಹಿಮಾನ್ವಿತ ಸಂಗಾತಿಗಳು
9. ರೂಪಾಂತರದ ನೆರವೇರಿಕೆಯಲ್ಲಿ, ಮೋಶೆ ಮತ್ತು ಎಲೀಯರು ಯೇಸುವಿನೊಂದಿಗಿರುವರೆಂದು ನಾವು ನಿರೀಕ್ಷಿಸಬೇಕೊ? ವಿವರಿಸಿ.
9 ರೂಪಾಂತರದಲ್ಲಿ ಯೇಸು ಒಬ್ಬಂಟಿಗನಾಗಿರಲಿಲ್ಲ. ಮೋಶೆಯೂ ಎಲೀಯನೂ ಅವನೊಂದಿಗೆ ಕಂಡುಬಂದರು. (ಮತ್ತಾಯ 17:2, 3) ಅವರು ಅಕ್ಷರಾರ್ಥವಾಗಿ ಅಲ್ಲಿದ್ದರೊ? ಇಲ್ಲ, ಏಕೆಂದರೆ ಅವರಿಬ್ಬರೂ ದೀರ್ಘಕಾಲದಿಂದ ಸತ್ತಿದ್ದು, ಪುನರುತ್ಥಾನಕ್ಕಾಗಿ ಕಾಯುತ್ತ ಸಮಾಧಿಯಲ್ಲಿ ನಿದ್ರಿಸುತ್ತಿದ್ದರು. (ಪ್ರಸಂಗಿ 9:5, 10; ಇಬ್ರಿಯ 11:35) ಯೇಸು ಸ್ವರ್ಗೀಯ ಮಹಿಮೆಯಲ್ಲಿ ಬರುವಾಗ ಅವರೂ ಅವನೊಂದಿಗೆ ಬರುವರೊ? ಇಲ್ಲ, ಏಕೆಂದರೆ ಮಾನವರಿಗೆ ಸ್ವರ್ಗೀಯ ನಿರೀಕ್ಷೆಯು ತೆರೆಯಲ್ಪಡುವ ಮುಂಚಿತವಾಗಿ ಮೋಶೆಯೂ ಎಲೀಯನೂ ಬದುಕಿದ್ದರು. ಅವರು ಭೌಮಿಕವಾದ ‘ನೀತಿವಂತರ ಪುನರುತ್ಥಾನ’ದ ಭಾಗವಾಗುವರು. (ಅ. ಕೃತ್ಯಗಳು 24:15) ಆದಕಾರಣ, ರೂಪಾಂತರ ದರ್ಶನದಲ್ಲಿ ಅವರ ತೋರಿಬರುವಿಕೆಯು, ಸಾಂಕೇತಿಕ. ಯಾವುದರ ಸಂಕೇತ?
10, 11. ಭಿನ್ನ ಸನ್ನಿವೇಶಗಳಲ್ಲಿ ಎಲೀಯ ಮತ್ತು ಮೋಶೆ, ಯಾರನ್ನು ಚಿತ್ರಿಸುತ್ತಾರೆ?
10 ಬೇರೆ ಸನ್ನಿವೇಶಗಳಲ್ಲಿ, ಮೋಶೆ ಮತ್ತು ಎಲೀಯರು ಪ್ರವಾದನಾತ್ಮಕ ವ್ಯಕ್ತಿಗಳಾಗಿದ್ದಾರೆ. ಧರ್ಮಶಾಸ್ತ್ರದೊಡಂಬಡಿಕೆಯ ಮಧ್ಯಸ್ಥನಾದ ಮೋಶೆಯು, ಹೊಸ ಒಡಂಬಡಿಕೆಯ ಮಧ್ಯಸ್ಥಗಾರನಾದ ಯೇಸುವನ್ನು ಮುನ್ಚಿತ್ರಿಸಿದನು. (ಧರ್ಮೋಪದೇಶಕಾಂಡ 18:18; ಗಲಾತ್ಯ 3:19; ಇಬ್ರಿಯ 8:6) ಎಲೀಯನು ಮೆಸ್ಸೀಯನ ಭವಿಷ್ಯಸೂಚಕನಾದ ಸ್ನಾನಿಕ ಯೋಹಾನನನ್ನು ಮುನ್ಸೂಚಿಸಿದನು. (ಮತ್ತಾಯ 17:11-13) ಅಲ್ಲದೆ, ಪ್ರಕಟನೆ 11ನೆಯ ಅಧ್ಯಾಯದ ಪೂರ್ವಾಪರ ವಚನದಲ್ಲಿ, ಮೋಶೆಯೂ ಎಲೀಯನೂ ಅಂತ್ಯಕಾಲದಲ್ಲಿರುವ ಅಭಿಷಿಕ್ತ ಉಳಿಕೆಯವರನ್ನು ಮುನ್ಚಿತ್ರಿಸುತ್ತಾರೆ. ಅದು ನಮಗೆ ಹೇಗೆ ಗೊತ್ತು?
11 ಒಳ್ಳೆಯದು, ಪ್ರಕಟನೆ 11:1-6ಕ್ಕೆ ತಿರುಗಿ. ಮೂರನೆಯ ವಚನ ಓದುವುದು: “ನನ್ನ ಇಬ್ಬರು ಸಾಕ್ಷಿಗಳು ಗೋಣೀತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರುವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಮಾಡುವೆನು.” ಈ ಪ್ರವಾದನೆಯು Iನೆಯ ಲೋಕ ಯುದ್ಧದ ಸಮಯದಲ್ಲಿ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರ ಮೇಲೆ ನೆರವೇರಿತು.a ಇಬ್ಬರು ಸಾಕ್ಷಿಗಳೇಕೆ? ಏಕೆಂದರೆ ಅಭಿಷಿಕ್ತ ಉಳಿಕೆಯವರು ಆತ್ಮಿಕ ರೀತಿಯಲ್ಲಿ, ಮೋಶೆ ಮತ್ತು ಎಲೀಯರಂತಹ ಕೆಲಸವನ್ನು ಮಾಡುತ್ತಾರೆ. ವಚನಗಳು 5 ಮತ್ತು 6 ಹೇಳುವುದು: “ಇವರಿಗೆ [ಇಬ್ಬರು ಸಾಕ್ಷಿಗಳಿಗೆ] ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವದು; ಇವರಿಗೆ ಯಾವನಾದರೂ ಕೇಡನ್ನು ಉಂಟುಮಾಡಬೇಕೆಂದಿದ್ದರೆ ಅವನಿಗೆ ಆ ರೀತಿಯಾಗಿ ಕೊಲೆಯಾಗಬೇಕು. ತಾವು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಪೀಡಿಸುವದಕ್ಕೂ ಅಧಿಕಾರವುಂಟು.” ಹೀಗೆ, ಮೋಶೆ ಮತ್ತು ಎಲೀಯರು ಮಾಡಿದ ಅದ್ಭುತಗಳ ಕುರಿತು ನಾವು ಜ್ಞಾಪಿಸಲ್ಪಡುತ್ತೇವೆ.—ಅರಣ್ಯಕಾಂಡ 16:31-34; 1 ಅರಸುಗಳು 17:1; 2 ಅರಸುಗಳು 1:9-12.
12. ರೂಪಾಂತರದ ಸನ್ನಿವೇಶದಲ್ಲಿ, ಮೋಶೆ ಮತ್ತು ಎಲೀಯರನ್ನು ಯಾರು ಚಿತ್ರಿಸುತ್ತಾರೆ?
12 ಹಾಗಾದರೆ ರೂಪಾಂತರದ ಪೂರ್ವಾಪರದಲ್ಲಿ, ಮೋಶೆ ಮತ್ತು ಎಲೀಯರು ಯಾರನ್ನು ಮುನ್ಚಿತ್ರಿಸುತ್ತಾರೆ? ಅವರು ಯೇಸುವಿನ ಕೂಡ “ವೈಭವದೊಡನೆ” ಕಾಣಿಸಿಕೊಂಡರೆಂದು ಲೂಕನು ಹೇಳುತ್ತಾನೆ. (ಲೂಕ 9:31) ಸ್ಪಷ್ಟವಾಗಿ, ಅವರು ಯೇಸುವಿನೊಂದಿಗೆ “ಜಂಟಿ ಬಾಧ್ಯರು” ಆಗಿ ಪವಿತ್ರಾತ್ಮಾಭಿಷಿಕ್ತರಾಗಿರುವ ಮತ್ತು ಆ ಮೂಲಕ ಅವನೊಂದಿಗೆ “ಮಹಿಮೆಯಲ್ಲಿ ಪಾಲು” ಹೊಂದುವ ಆಶ್ಚರ್ಯಕರವಾದ ನಿರೀಕ್ಷೆಯನ್ನು ಪಡೆದಿರುವ ಕ್ರೈಸ್ತರನ್ನು ಮುನ್ಸೂಚಿಸುತ್ತಾರೆ. (ರೋಮಾಪುರ 8:17, NW) ಯೇಸುವು ತನ್ನ ತಂದೆಯ ಮಹಿಮೆಯಲ್ಲಿ “ಅವನವನ ನಡತೆಗೆ ತಕ್ಕ ಫಲವನ್ನು” ಕೊಡಲು ಬರುವಾಗ ಪುನರುತ್ಥಾನ ಹೊಂದಿದ ಅಭಿಷಿಕ್ತರು ಅವನೊಂದಿಗಿರುವರು.—ಮತ್ತಾಯ 16:27.
ಮೋಶೆ ಮತ್ತು ಎಲೀಯರಂತಹ ಸಾಕ್ಷಿಗಳು
13. ಮೋಶೆ ಮತ್ತು ಎಲೀಯರು, ಯೇಸುವಿನೊಂದಿಗೆ ಮಹಿಮೆಗೇರಿಸಲ್ಪಡುವ ಅವನ ಜಂಟಿ ಬಾಧ್ಯಸ್ಥರಿಗೆ ತಕ್ಕದಾದ ಪ್ರವಾದನಾತ್ಮಕ ಚಿತ್ರಗಳೆಂಬುದನ್ನು ಯಾವ ವಿಷಯಗಳು ಗುರುತಿಸುತ್ತವೆ?
13 ಮೋಶೆ ಮತ್ತು ಎಲೀಯರನ್ನು, ಅವರು ಯೇಸುವಿನ ಅಭಿಷಿಕ್ತ ಜಂಟಿ ಬಾಧ್ಯರ ತಕ್ಕದಾದ ಪ್ರವಾದನಾತ್ಮಕ ಚಿತ್ರಗಳಾಗಿದ್ದಾರೆಂದು ಗುರುತಿಸಲು ಗಮನಾರ್ಹ ಸೂಚನೆಗಳಿವೆ. ಮೋಶೆ ಮತ್ತು ಎಲೀಯ—ಇವರಿಬ್ಬರೂ ಯೆಹೋವನ ವದನಕರಾಗಿ ಅನೇಕ ವರ್ಷಕಾಲ ಸೇವೆಮಾಡಿದರು. ಇವರಿಬ್ಬರೂ ಒಬ್ಬ ಪ್ರಭುವಿನ ಕೋಪಕ್ಕೆ ಗುರಿಯಾದರು. ಆವಶ್ಯಕ ಸಮಯದಲ್ಲಿ, ಅವರಲ್ಲಿ ಒಬ್ಬೊಬ್ಬರನ್ನೂ ಒಂದು ವಿದೇಶಿ ಕುಟುಂಬವು ಬೆಂಬಲಿಸಿತು. ಇವರಿಬ್ಬರೂ ಅರಸರಿಗೆ ಧೈರ್ಯದಿಂದ ಪ್ರವಾದಿಸಿ, ಸುಳ್ಳು ಪ್ರವಾದಿಗಳ ವಿರುದ್ಧ ದೃಢವಾಗಿ ನಿಂತರು. ಮೋಶೆ ಮತ್ತು ಎಲೀಯರಿಬ್ಬರೂ ಸೀನಾಯಿ (ಹೋರೆಬ್ ಎಂದೂ ಹೆಸರಿದೆ) ಬೆಟ್ಟದ ಮೇಲೆ ಯೆಹೋವನ ಬಲಪ್ರದರ್ಶನವನ್ನು ಕಂಡರು. ಇವರಿಬ್ಬರೂ ಯೋರ್ದನಿನ ಪೂರ್ವಬದಿಯಲ್ಲಿ ಉತ್ತರಾಧಿಕಾರಿಗಳನ್ನು ನೇಮಿಸಿದರು. ಮೋಶೆ (ಯೆಹೋಶುವನೊಂದಿಗೆ) ಮತ್ತು ಎಲೀಯ (ಎಲೀಷನೊಂದಿಗೆ) ಕಳೆದ ಸಮಯವು, ಯೇಸುವಿನ ಜೀವಮಾನದಲ್ಲಿ ನಡೆದುದನ್ನು ಬಿಟ್ಟರೆ, ಅದ್ಭುತಗಳ ಸಂಖ್ಯೆಯಲ್ಲಿ ಹೆಚ್ಚಿನದನ್ನು ನೋಡಿತು.b
14. ಅಭಿಷಿಕ್ತರು ಯೆಹೋವನ ವದನಕರಾಗಿ, ಮೋಶೆ ಮತ್ತು ಎಲೀಯರಂತೆ ಹೇಗೆ ಸೇವೆಮಾಡಿದ್ದಾರೆ?
14 ಅದೆಲ್ಲವೂ ದೇವರ ಇಸ್ರಾಯೇಲ್ಯರನ್ನು ನಮಗೆ ನೆನಪಿಸುವುದಿಲ್ಲವೊ? ಹೌದು, ನಿಶ್ಚಯ. ಯೇಸು ತನ್ನ ನಂಬಿಗಸ್ತ ಅನುಯಾಯಿಗಳಿಗೆ ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:19, 20) ಈ ಮಾತುಗಳಿಗೆ ವಿಧೇಯತೆಯಲ್ಲಿ, ಅಭಿಷಿಕ್ತ ಕ್ರೈಸ್ತರು ಸಾ.ಶ. 33ರ ಪಂಚಾಶತ್ತಮದಿಂದ ಈಗಿನ ತನಕ ಯೆಹೋವನ ವದನಕರಾಗಿ ಸೇವೆಮಾಡಿರುತ್ತಾರೆ. ಮೋಶೆ ಮತ್ತು ಎಲೀಯರಂತೆ, ಅವರು ಅಧಿಪತಿಗಳ ಕೋಪವನ್ನು ಎದುರಿಸಿ ಅವರಿಗೆ ಸಾಕ್ಷಿ ನೀಡಿದ್ದಾರೆ. ಯೇಸು ತನ್ನ 12 ಮಂದಿ ಅಪೊಸ್ತಲರಿಗೆ ಹೇಳಿದ್ದು: “ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು.” (ಮತ್ತಾಯ 10:18) ಅವನ ಮಾತುಗಳು ಕ್ರೈಸ್ತ ಸಭೆಯ ಇತಿಹಾಸದಲ್ಲೆಲ್ಲ ಪದೇ ಪದೇ ನೆರವೇರಿವೆ.—ಅ. ಕೃತ್ಯಗಳು 25:6, 11, 12, 24-27; 26:3.
15, 16. ಒಂದು ಕಡೆಯಲ್ಲಿ ಅಭಿಷಿಕ್ತರು, ಇನ್ನೊಂದು ಕಡೆಯಲ್ಲಿ ಮೋಶೆ ಮತ್ತು ಎಲೀಯರು—ಇವರ ಮಧ್ಯೆ (ಎ) ಸತ್ಯಕ್ಕಾಗಿ ನಿರ್ಭೀತರಾಗಿ ನಿಲ್ಲುವ ಮತ್ತು (ಬಿ) ಇಸ್ರಾಯೇಲ್ಯೇತರರಿಂದ ಸಹಾಯವನ್ನು ಪಡೆದುಕೊಳ್ಳುವ ವಿಷಯದಲ್ಲಿ ಯಾವ ಸಮಾಂತರಗಳಿವೆ?
15 ಇದಲ್ಲದೆ, ಧಾರ್ಮಿಕ ಮಿಥ್ಯೆಗಳೆದುರು ಸತ್ಯದ ಪರವಾಗಿ ನಿಲ್ಲುವುದರಲ್ಲಿ ಅಭಿಷಿಕ್ತ ಕ್ರೈಸ್ತರು ಮೋಶೆ ಮತ್ತು ಎಲೀಯರಷ್ಟೇ ನಿರ್ಭೀತರಾಗಿದ್ದರು. ಪೌಲನು ಯೆಹೂದಿ ಸುಳ್ಳು ಪ್ರವಾದಿಯಾದ ಬಾರ್ಯೇಸುವನ್ನು ಹೇಗೆ ಖಂಡಿಸಿದನೆಂದೂ, ಅಥೇನೆ ಪಟ್ಟಣದ ದೇವತೆಗಳ ಸುಳ್ಳನ್ನು ಹೇಗೆ ಸಮಯೋಚಿತ ಜಾಣ್ಮೆಯಿಂದ, ಆದರೆ ದೃಢವಾಗಿ ಬಯಲುಗೊಳಿಸಿದನೆಂಬುದನ್ನೂ ಜ್ಞಾಪಿಸಿಕೊಳ್ಳಿರಿ. (ಅ. ಕೃತ್ಯಗಳು 13:6-12; 17:16, 22-31) ಆಧುನಿಕ ದಿನಗಳಲ್ಲಿ ಅಭಿಷಿಕ್ತ ಉಳಿಕೆಯವರು ಕ್ರೈಸ್ತ ಪ್ರಪಂಚವನ್ನು ಧೈರ್ಯದಿಂದ ಬಯಲುಗೊಳಿಸಿದ್ದಾರೆಂದೂ ಅಂತಹ ಸಾಕ್ಷಿಕೆಲಸವು ಆಕೆಯನ್ನು ಪೀಡಿಸಿದೆಯೆಂಬುದನ್ನೂ ನೆನಪಿನಲ್ಲಿಡಿರಿ.—ಪ್ರಕಟನೆ 8:7-12.c
16 ಮೋಶೆ ಫರೋಹನ ಕೋಪದೆದುರಿನಿಂದ ಪಲಾಯನ ಮಾಡಿದಾಗ, ಅವನು ಇತ್ರೋವನೆಂದೂ ಕರೆಯಲ್ಪಟ್ಟಿದ್ದ ಇಸ್ರಾಯೇಲ್ಯೇತರ ರೆಗೂವೇಲನ ಮನೆಯಲ್ಲಿ ಆಶ್ರಯ ಪಡೆದನು. ಸಮಯಾನಂತರ ಮೋಶೆಯು, ಯಾರ ಮಗನಾದ ಹೋಬಾಬನು ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ಮಾರ್ಗದರ್ಶಿಸಿದನೊ, ಆ ರೆಗೂವೇಲನಿಂದ ಅಮೂಲ್ಯವಾದ ವ್ಯವಸ್ಥಾಪನಾ ಸಲಹೆಯನ್ನು ಪಡೆದನು.d (ವಿಮೋಚನಕಾಂಡ 2:15-22; 18:5-27; ಅರಣ್ಯಕಾಂಡ 10:29) ದೇವರ ಇಸ್ರಾಯೇಲಿನ ಸದಸ್ಯರಿಗೆ ಇದೇ ರೀತಿಯಲ್ಲಿ ದೇವರ ಇಸ್ರಾಯೇಲಿನ ಅಭಿಷಿಕ್ತ ಸದಸ್ಯರಲ್ಲದ ವ್ಯಕ್ತಿಗಳು ಸಹಾಯಮಾಡಿದ್ದಾರೊ? ಹೌದು, ಈ ಅಂತ್ಯ ದಿನಗಳಲ್ಲಿ ದೃಶ್ಯವನ್ನು ಪ್ರವೇಶಿಸಿರುವ “ಬೇರೆ ಕುರಿಗಳ” “ಮಹಾ ಸಮೂಹವು” ಅವರನ್ನು ಬೆಂಬಲಿಸಿದೆ. (ಪ್ರಕಟನೆ 7:9; ಯೋಹಾನ 10:16; ಯೆಶಾಯ 61:5) ಈ “ಕುರಿಗಳು” ತನ್ನ ಅಭಿಷಿಕ್ತ ಸಹೋದರರಿಗೆ ನೀಡಲಿರುವ ಹೃದಯೋಲ್ಲಾಸದ, ಪ್ರೀತಿಪೂರ್ಣವಾದ ಬೆಂಬಲವನ್ನು ಮುಂತಿಳಿಸುತ್ತ, ಯೇಸು ಪ್ರವಾದನಾತ್ಮಕವಾಗಿ ಅವರಿಗೆ ಹೇಳಿದ್ದು: “ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ . . . ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮತ್ತಾಯ 25:35-40.
17. ಎಲೀಯನಿಗೆ ಹೋರೇಬ್ ಬೆಟ್ಟದಲ್ಲಿ ಆದದ್ದಕ್ಕೆ ಹೋಲಿಕೆಯಾದ ಅನುಭವವು ಅಭಿಷಿಕ್ತರಿಗೆ ಹೇಗಾಯಿತು?
17 ಇದಲ್ಲದೆ, ಹೋರೇಬ್ ಬೆಟ್ಟದಲ್ಲಿ ಎಲೀಯನಿಗಾದ ಅನುಭವಕ್ಕೆ ಹೋಲಿಕೆಯಾದ ಅನುಭವ ದೇವರ ಇಸ್ರಾಯೇಲ್ಯರಿಗಾಯಿತು.e ಆ ಸಮಯದಲ್ಲಿ ರಾಣಿ ಇಜಬೆಲಳಿಂದ ಪಲಾಯನಮಾಡುತ್ತಿದ್ದ ಎಲೀಯನಂತೆ, ಭಯಗೊಂಡಿದ್ದ ಅಭಿಷಿಕ್ತ ಉಳಿಕೆಯವರು, Iನೆಯ ಲೋಕ ಯುದ್ಧಾಂತ್ಯದಲ್ಲಿ ತಮ್ಮ ಕೆಲಸವು ಮುಗಿಯಿತೆಂದು ಎಣಿಸಿದರು. ಬಳಿಕ, ಎಲೀಯನಂತೆಯೇ, “ದೇವರ ಮನೆ” ಎಂದು ಹೇಳಿಕೊಳ್ಳುವ ಆ ಸಂಸ್ಥೆಗಳಿಗೆ ತೀರ್ಪುಮಾಡಲು ಬಂದ ಯೆಹೋವನನ್ನು ಅವರು ಸಂಧಿಸಿದರು. (1 ಪೇತ್ರ 4:17; ಮಲಾಕಿಯ 3:1-3) ಕ್ರೈಸ್ತ ಪ್ರಪಂಚದಲ್ಲಿ ಕೊರತೆ ಕಂಡುಬಂದುದರಿಂದ, ಅಭಿಷಿಕ್ತ ಉಳಿಕೆಯವರನ್ನು ಅವರು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬುದಾಗಿ ಅಂಗೀಕರಿಸಿ, ಯೇಸುವಿನ ಭೂಸ್ವತ್ತುಗಳೆಲ್ಲದರ ಮೇಲೆ ನೇಮಿಸಲಾಯಿತು. (ಮತ್ತಾಯ 24:45-47) ಹೋರೇಬಿನಲ್ಲಿ ಎಲೀಯನು, ತನಗೆ ಮಾಡಲು ಹೆಚ್ಚು ಕೆಲಸವಿದೆಯೆಂದು ತೋರಿಸಿದ ಮತ್ತು ಯೆಹೋವನದ್ದಾಗಿ ಪರಿಣಮಿಸಿದ “ಮಂದಮಾರುತಶಬ್ದ”ವನ್ನು ಕೇಳಿದನು. ಯುದ್ಧಾನಂತರದ ಶಾಂತ ವರುಷಗಳಲ್ಲಿ, ಯೆಹೋವನ ನಂಬಿಗಸ್ತ ಅಭಿಷಿಕ್ತ ಸೇವಕರು ಬೈಬಲಿನ ಪುಟಗಳಿಂದ ಆತನ ಶಬ್ದವನ್ನು ಕೇಳಿದರು. ತಮಗೆ ನೆರವೇರಿಸಲು ಒಂದು ಆಜ್ಞೆಯಿದೆಯೆಂಬುದನ್ನು ಅವರೂ ಗ್ರಹಿಸಿದರು.—1 ಅರಸುಗಳು 19:4, 9-18; ಪ್ರಕಟನೆ 11:7-13.
18. ಯೆಹೋವನ ಶಕ್ತಿಯ ಎದ್ದುಕಾಣುವ ಪ್ರದರ್ಶನಗಳು, ದೇವರ ಇಸ್ರಾಯೇಲ್ಯರ ಮೂಲಕ ಹೇಗೆ ಪ್ರವಹಿಸಲ್ಪಟ್ಟಿವೆ?
18 ಕೊನೆಯದಾಗಿ, ಯೆಹೋವನ ಶಕ್ತಿಯ ಎದ್ದುಕಾಣುವ ಪ್ರದರ್ಶನಗಳು ದೇವರ ಇಸ್ರಾಯೇಲ್ಯರ ಮೂಲಕ ಪ್ರವಹಿಸಲ್ಪಟ್ಟಿವೆಯೊ? ಯೇಸುವಿನ ಮರಣಾನಂತರ, ಅಪೊಸ್ತಲರು ಅನೇಕ ಅದ್ಭುತಗಳನ್ನು ನಡೆಸಿದರು, ಆದರೆ ಅವು ಕ್ರಮೇಣ ನಿಂತುಹೋದವು. (1 ಕೊರಿಂಥ 13:8-13) ಈ ದಿನಗಳಲ್ಲಿ, ನಾವು ಭೌತಿಕ ಅರ್ಥದಲ್ಲಿ ಅದ್ಭುತಗಳನ್ನು ನೋಡುವುದಿಲ್ಲ. ಮತ್ತೊಂದು ಪಕ್ಕದಲ್ಲಿ, ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು.” (ಯೋಹಾನ 14:12) ಯೇಸುವಿನ ಶಿಷ್ಯರು ಒಂದನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದಲ್ಲೆಲ್ಲ ಸುವಾರ್ತೆಯನ್ನು ಸಾರಿದಾಗ ಇದು ಆರಂಭಿಕವಾಗಿ ನೆರವೇರಿತು. (ರೋಮಾಪುರ 10:18) ಇಂದು, ಅಭಿಷಿಕ್ತ ಉಳಿಕೆಯವರು, ಸುವಾರ್ತೆಯನ್ನು “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರುವುದರಲ್ಲಿ ನುಗ್ಗುಮೊನೆಯಾಗುತ್ತಿರುವಾಗ ಇನ್ನೂ ಹೆಚ್ಚು ದೊಡ್ಡದಾದ ಕೆಲಸಗಳು ಮಾಡಲ್ಪಟ್ಟಿವೆ. (ಮತ್ತಾಯ 24:14) ಪರಿಣಾಮವೇನು? ಈ ಇಪ್ಪತ್ತನೆಯ ಶತಮಾನವು, ಇತಿಹಾಸದಲ್ಲಿ ಯೆಹೋವನ ಸಮರ್ಪಿತ, ನಂಬಿಗಸ್ತ ಸೇವಕರ ಅತಿ ದೊಡ್ಡ ಸಂಖ್ಯೆಯ ಒಟ್ಟುಗೂಡುವಿಕೆಯನ್ನು ನೋಡಿದೆ. (ಪ್ರಕಟನೆ 5:9, 10; 7:9, 10) ಯೆಹೋವನ ಶಕ್ತಿಯ ಎಷ್ಟು ಉಜ್ವಲವಾದ ಸಾಕ್ಷ್ಯ!—ಯೆಶಾಯ 60:22.
ಯೇಸುವಿನ ಸಹೋದರರು ಮಹಿಮೆಯಲ್ಲಿ ಬರುತ್ತಾರೆ
19. ಯೇಸುವಿನ ಅಭಿಷಿಕ್ತ ಸಹೋದರರನ್ನು ಅವನೊಂದಿಗೆ ಮಹಿಮೆಯಲ್ಲಿ ಯಾವಾಗ ನೋಡಲಾಗುತ್ತದೆ?
19 ಯೇಸುವಿನ ಅಭಿಷಿಕ್ತ ಸಹೋದರರಲ್ಲಿ ಉಳಿಕೆಯವರು ತಮ್ಮ ಭೂಯಾತ್ರೆಯನ್ನು ತೀರಿಸುವಾಗ, ಅವರು ಅವನೊಂದಿಗೆ ಮಹಿಮೆಗೊಳಿಸಲ್ಪಡುತ್ತಾರೆ. (ರೋಮಾಪುರ 2:6, 7; 1 ಕೊರಿಂಥ 15:53; 1 ಥೆಸಲೊನೀಕ 4:14, 17) ಹೀಗೆ ಅವರು ಸ್ವರ್ಗೀಯ ರಾಜ್ಯದಲ್ಲಿ ಅಮರರಾದ ಅರಸರೂ ಯಾಜಕರೂ ಆಗುತ್ತಾರೆ. ಆಗ ಅವರು ಯೇಸುವಿನೊಂದಿಗೆ, ‘ಕಬ್ಬಿಣದ ಕೋಲಿನಿಂದ [ಜನರನ್ನು] ಆಳುವರು; ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದುಹೋಗುವದು.’ (ಪ್ರಕಟನೆ 2:27; 20:4-6; ಕೀರ್ತನೆ 110:2, 5, 6) ಅವರು ಯೇಸುವಿನೊಂದಿಗೆ ಸಿಂಹಾಸನಗಳ ಮೇಲೆ ಕುಳಿತು “ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ” ನ್ಯಾಯತೀರಿಸುವರು. (ಮತ್ತಾಯ 19:28) ನರಳುತ್ತಿರುವ ಜಗತ್ತು ಈ ಘಟನೆಗಳಿಗಾಗಿ ಲವಲವಿಕೆಯಿಂದ ಎದುರುನೋಡಿದೆ. ಅವು “ದೇವಪುತ್ರನ . . . ಪ್ರತ್ಯಕ್ಷ”ತೆಯ ಭಾಗವಾಗಿವೆ.—ರೋಮಾಪುರ 8:19-21; 2 ಥೆಸಲೊನೀಕ 1:6-8.
20. (ಎ) ರೂಪಾಂತರವು ಪೇತ್ರನ ನಂಬಿಕೆಯನ್ನು ಯಾವ ಪ್ರತೀಕ್ಷೆಯ ವಿಷಯದಲ್ಲಿ ಬಲಪಡಿಸಿತು? (ಬಿ) ರೂಪಾಂತರವು ಇಂದು ಕ್ರೈಸ್ತರನ್ನು ಹೇಗೆ ಬಲಪಡಿಸುತ್ತದೆ?
20 “ಮಹಾ ಸಂಕಟ”ದ ಸಮಯದಲ್ಲಿ ಯೇಸುವಿನ ಪ್ರತ್ಯಕ್ಷತೆಯ ಕುರಿತು ಬರೆದಾಗ ಪೌಲನು ನುಡಿದುದು: “ಆ ದಿನದಲ್ಲಿ ಆತನು ತನ್ನ ಪವಿತ್ರರ ಮೂಲಕ ಪ್ರಭಾವಹೊಂದುವವನಾಗಿಯೂ . . . ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವವನಾಗಿಯೂ” ಬರುವನು. (ಮತ್ತಾಯ 24:21; 2 ಥೆಸಲೊನೀಕ 1:10) ಅದು ಪೇತ್ರ, ಯಾಕೋಬ, ಯೋಹಾನರಿಗೆ ಮತ್ತು ಆತ್ಮಾಭಿಷಿಕ್ತರಾದ ಸಕಲ ಕ್ರೈಸ್ತರಿಗೆ ಎಷ್ಟು ಉಜ್ವಲವಾದ ಪ್ರತೀಕ್ಷೆ! ಆ ರೂಪಾಂತರವು ಪೇತ್ರನ ನಂಬಿಕೆಯನ್ನು ಬಲಪಡಿಸಿತು. ಇದರ ಕುರಿತು ಓದುವುದು ನಮ್ಮ ನಂಬಿಕೆಯನ್ನೂ ಬಲಪಡಿಸಿ, ಯೇಸು ಬೇಗನೆ, “ಒಬ್ಬೊಬ್ಬನಿಗೆ ಅವನವನ ನಡತೆಗೆ ತಕ್ಕ ಫಲವನ್ನು ಕೊಡುವ”ನೆಂಬ ಭರವಸೆಯನ್ನು ದೃಢಮಾಡುತ್ತದೆ ನಿಶ್ಚಯ. ಈ ದಿನದ ವರೆಗೆ ಬದುಕಿ ಉಳಿದಿರುವ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು, ತಾವು ಕ್ರಿಸ್ತನೊಂದಿಗೆ ಮಹಿಮೆಗೊಳಿಸಲ್ಪಡುವೆವೆಂಬ ಅವರ ಭರವಸೆಯು ದೃಢೀಕರಿಸಲ್ಪಡುವುದನ್ನು ನೋಡುತ್ತಾರೆ. ಬೇರೆ ಕುರಿಗಳ ನಂಬಿಕೆಯು, ಅವನು ಅವರನ್ನು ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯದಿಂದ ಮಹಿಮಾಭರಿತವಾದ ನೂತನ ಲೋಕದೊಳಕ್ಕೆ ರಕ್ಷಿಸುವನೆಂಬ ಜ್ಞಾನದಲ್ಲಿ ಬಲಹೊಂದಿದೆ. (ಪ್ರಕಟನೆ 7:14) ಅಂತ್ಯದ ತನಕ ಸ್ಥಿರ ನಿಲ್ಲಲು ಇದೆಷ್ಟು ಒಳ್ಳೆಯ ಪ್ರೋತ್ಸಾಹನೆ! ಮತ್ತು ಈ ದರ್ಶನವು, ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ, ಇನ್ನೂ ಎಷ್ಟೊ ಹೆಚ್ಚನ್ನು ನಮಗೆ ಕಲಿಸಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a “ನಿನ್ನ ನಾಮವು ಪರಿಶುದ್ಧವೆಂದೆಣಿಸಲ್ಪಡಲಿ,” (ಇಂಗ್ಲಿಷ್) ಪುಸ್ತಕದ ಪುಟಗಳು 313-14, ಮತ್ತು ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ ಪುಟಗಳು 164-5 ನೋಡಿರಿ. ಇವು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ.
b ವಿಮೋಚನಕಾಂಡ 2:15-22; 3:1-6; 5:2; 7:8-13; 8:18; 19:16-19; ಧರ್ಮೋಪದೇಶಕಾಂಡ 31:23; 1 ಅರಸುಗಳು 17:8-16; 18:21-40; 19:1, 2, 8-18; 2 ಅರಸುಗಳು 2:1-14.
d ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ, ನೀವು ಅರ್ಮಗೆದೋನಿನಿಂದ ದೇವರ ನೂತನ ಲೋಕದೊಳಕ್ಕೆ ಪಾರಾಗಬಹುದು (ಇಂಗ್ಲಿಷ್) ಪುಸ್ತಕದ ಪುಟಗಳು 281-3 ನೋಡಿ.
ಜ್ಞಾಪಕವಿದೆಯೆ?
◻ ರೂಪಾಂತರದಲ್ಲಿ ಯೇಸುವಿನೊಂದಿಗೆ ಯಾರು ತೋರಿಬಂದರು?
◻ ರೂಪಾಂತರದ ಮೂಲಕ ಅಪೊಸ್ತಲರ ನಂಬಿಕೆ ಹೇಗೆ ಬಲಗೊಂಡಿತು?
◻ ಮೋಶೆ ಮತ್ತು ಎಲೀಯರು ರೂಪಾಂತರದಲ್ಲಿ ಯೇಸುವಿನೊಂದಿಗೆ “ಮಹಿಮೆಯಿಂದ” ತೋರಿಬಂದಾಗ, ಅವರು ಯಾರನ್ನು ಪ್ರತಿನಿಧೀಕರಿಸಿದರು?
◻ ಒಂದು ಕಡೆಯಲ್ಲಿ ಮೋಶೆ ಮತ್ತು ಎಲೀಯರು, ಇನ್ನೊಂದು ಕಡೆಯಲ್ಲಿ ದೇವರ ಇಸ್ರಾಯೇಲ್ಯರು—ಇವರ ಮಧ್ಯೆ ಯಾವ ಸಮಾಂತರಗಳಿವೆ?
[ಪುಟ 10 ರಲ್ಲಿರುವ ಚಿತ್ರ]
ರೂಪಾಂತರವು, ಗತಕಾಲದ ಹಾಗೂ ಪ್ರಸ್ತುತ ಸಮಯದ ಕ್ರೈಸ್ತರ ನಂಬಿಕೆಯನ್ನು ಬಲಪಡಿಸಿದೆ