ಒಂದನೇ ಅರಸು
19 ಅಹಾಬ+ ಈಜೆಬೇಲಳಿಗೆ+ ಎಲೀಯ ಮಾಡಿದ್ದನ್ನೆಲ್ಲ ಹೇಳಿದ. ಅವನು ಎಲ್ಲ ಪ್ರವಾದಿಗಳನ್ನ ಕತ್ತಿಯಿಂದ ಹೇಗೆ ಕೊಲ್ಲಿಸಿದ+ ಅನ್ನೋದನ್ನೂ ಹೇಳಿದ. 2 ಅದಕ್ಕೆ ಈಜೆಬೇಲ್ ಎಲೀಯನಿಗೆ “ನೀನು ಆ ಪ್ರವಾದಿಗಳಿಗೆ ಮಾಡಿದ ತರಾನೇ ನಾಳೆ ಇಷ್ಟು ಹೊತ್ತಿಗೆ ನಾನು ನಿನಗೆ ಮಾಡ್ಲಿಲ್ಲ ಅಂದ್ರೆ ದೇವರುಗಳು ನನಗೆ ಕಠಿಣ ಶಿಕ್ಷೆ ಕೊಡಲಿ” ಅನ್ನೋ ಸಂದೇಶ ಕಳಿಸಿದಳು. 3 ಇದನ್ನ ಕೇಳಿ ಎಲೀಯ ಭಯಪಟ್ಟು, ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಓಡಿಹೋದ.+ ಅವನು ಯೆಹೂದಕ್ಕೆ ಸೇರಿದ+ ಬೇರ್ಷೆಬಕ್ಕೆ+ ಬಂದು ತನ್ನ ಸೇವಕನನ್ನ ಅಲ್ಲೇ ಬಿಟ್ಟ. 4 ಅವನು ಅಲ್ಲಿಂದ ಒಂದು ದಿನದ ಪ್ರಯಾಣ ಮಾಡಿ ಕಾಡಿಗೆ ಬಂದು ಒಂದು ಪೊದೆ ಕೆಳಗೆ ಕೂತ್ಕೊಂಡ. ಅವನು ದೇವರ ಹತ್ರ ಸಾವನ್ನ ಬೇಡ್ಕೊಳ್ತಾ “ಯೆಹೋವನೇ ನನಗೆ ಸಾಕಾಯ್ತು. ಹೇಗಿದ್ರೂ ನಾನು ನನ್ನ ಪೂರ್ವಜರಿಗಿಂತ ಒಳ್ಳೆಯವನಲ್ಲ, ಹಾಗಾಗಿ ನನ್ನ ಜೀವ ತೆಗೆದುಬಿಡು”+ ಅಂದ.
5 ಆಮೇಲೆ ಅವನು ಆ ಪೊದೆ ಕೆಳಗೆ ನಿದ್ದೆಗೆ ಜಾರಿದ. ಇದ್ದಕ್ಕಿದ್ದ ಹಾಗೆ ಒಬ್ಬ ದೇವದೂತ ಬಂದು ಅವನನ್ನ ಮುಟ್ಟಿ+ “ಎದ್ದು ಊಟಮಾಡು”+ ಅಂದ. 6 ಅವನು ಎದ್ದು ನೋಡಿದಾಗ ಅವನ ತಲೆ ಹತ್ರ ಬಿಸಿಯಾಗಿದ್ದ ಕಲ್ಲುಗಳ ಮೇಲೆ ಒಂದು ರೊಟ್ಟಿ ಮತ್ತು ತಂಬಿಗೆ ನೀರಿತ್ತು. ಅವನು ಅದನ್ನ ತಿಂದು ಕುಡಿದು ಮತ್ತೆ ನಿದ್ದೆಗೆ ಜಾರಿದ. 7 ಆಗ ಯೆಹೋವನ ದೂತ ಎರಡನೇ ಸಲ ಬಂದು ಅವನನ್ನ ಮುಟ್ಟಿ “ಎದ್ದು ಊಟಮಾಡು, ಯಾಕಂದ್ರೆ ನಿನ್ನ ಮುಂದಿನ ಪ್ರಯಾಣ ತುಂಬ ಕಷ್ಟವಾಗಿರುತ್ತೆ” ಅಂದ. 8 ಹಾಗಾಗಿ ಅವನು ಎದ್ದು ತಿಂದು ಕುಡಿದ. ಆಮೇಲೆ ಅದ್ರಿಂದ ಸಿಕ್ಕಿದ ಶಕ್ತಿಯಿಂದ ಅವನು 40 ದಿನ ಹಗಲೂರಾತ್ರಿ ಪ್ರಯಾಣಮಾಡಿ ಸತ್ಯ ದೇವರ ಬೆಟ್ಟವಾಗಿದ್ದ ಹೋರೇಬಿಗೆ+ ಬಂದು ತಲುಪಿದ.
9 ಎಲೀಯ ಅಲ್ಲಿದ್ದ ಒಂದು ಗುಹೆ+ ಒಳಗೆ ಹೋಗಿ ಅಲ್ಲೇ ಒಂದು ರಾತ್ರಿ ಕಳೆದ. ಆಮೇಲೆ ಯೆಹೋವ “ಎಲೀಯ ನೀನಿಲ್ಲಿ ಏನು ಮಾಡ್ತಿದ್ದೀಯ?” ಅಂತ ಕೇಳಿದನು. 10 ಅದಕ್ಕೆ ಎಲೀಯ “ಸೈನ್ಯಗಳ ದೇವರಾದ ಯೆಹೋವನೇ, ನಾನು ನಿನಗಾಗಿ ತುಂಬ ಹುರುಪಿಂದ ಸೇವೆ ಮಾಡಿದ್ದೀನಿ.+ ಆದ್ರೆ ಇಸ್ರಾಯೇಲ್ಯರು ನಿನ್ನ ಒಪ್ಪಂದವನ್ನ ಮುರಿದು ಬಿಟ್ಟಿದ್ದಾರೆ.+ ನಿನ್ನ ಯಜ್ಞವೇದಿಗಳನ್ನ ಹಾಳು ಮಾಡಿದ್ದಾರೆ, ನಿನ್ನ ಪ್ರವಾದಿಗಳನ್ನ ಕತ್ತಿಯಿಂದ ಕೊಂದುಹಾಕಿದ್ದಾರೆ.+ ಈಗ ಜೀವಂತವಾಗಿ ಇರೋನು ನಾನೊಬ್ಬನೇ. ಈಗ ನನ್ನನ್ನೂ ಸಾಯಿಸಬೇಕು ಅಂತಿದ್ದಾರೆ”+ ಅಂದ. 11 ಆದ್ರೆ ದೇವರು ಎಲೀಯಗೆ “ನೀನು ಹೊರಗೆ ಹೋಗಿ ಬೆಟ್ಟದ ಮೇಲೆ ಯೆಹೋವನ ಮುಂದೆ ನಿಂತ್ಕೋ” ಅಂತ ಹೇಳಿದನು. ಆಗ ಯೆಹೋವ ಅಲ್ಲಿ ಹಾದುಹೋದನು!+ ಯೆಹೋವನ ಮುಂದೆ ಬೆಟ್ಟಗಳನ್ನೇ ಸೀಳೋ, ಕಡಿದಾದ ಬಂಡೆಗಳನ್ನ ಪುಡಿಪುಡಿ ಮಾಡೋ ಭಯಂಕರವಾದ ದೊಡ್ಡ ಬಿರುಗಾಳಿ ಬೀಸ್ತು.+ ಆದ್ರೆ ಯೆಹೋವ ಆ ಬಿರುಗಾಳಿಯಲ್ಲಿ ಇರಲಿಲ್ಲ. ಬಿರುಗಾಳಿ ಬೀಸಿದ ಮೇಲೆ ಭೂಕಂಪ ಆಯ್ತು.+ ಆದ್ರೆ ಯೆಹೋವ ಆ ಭೂಕಂಪದಲ್ಲೂ ಇರಲಿಲ್ಲ. 12 ಭೂಕಂಪ ಆದ್ಮೇಲೆ ಬೆಂಕಿ ಬಂತು.+ ಅದ್ರಲ್ಲೂ ಯೆಹೋವ ಇರಲಿಲ್ಲ. ಆಮೇಲೆ ಪ್ರಶಾಂತವಾದ ಚಿಕ್ಕ ಧ್ವನಿ ಕೇಳಿಸ್ತು.+ 13 ಆ ಧ್ವನಿನ ಎಲೀಯ ಕೇಳಿಸ್ಕೊಂಡ ತಕ್ಷಣ, ಅವನು ಬಟ್ಟೆಯಿಂದ* ಮುಖ ಮುಚ್ಕೊಂಡು+ ಗುಹೆ ಬಾಗಿಲ ಹತ್ರ ಬಂದ. ಆಗ ಆ ಧ್ವನಿ ಅವನನ್ನ “ಎಲೀಯನೇ ನೀನಿಲ್ಲಿ ಏನು ಮಾಡ್ತಿದ್ದೀಯ?” ಅಂತ ಕೇಳ್ತು. 14 ಆಗ ಎಲೀಯ “ಸೈನ್ಯಗಳ ದೇವರಾದ ಯೆಹೋವನೇ, ನಾನು ನಿನಗಾಗಿ ತುಂಬ ಹುರುಪಿಂದ ಸೇವೆ ಮಾಡಿದ್ದೀನಿ. ಆದ್ರೆ ಇಸ್ರಾಯೇಲ್ಯರು ನಿನ್ನ ಒಪ್ಪಂದವನ್ನ ಮುರಿದು ಬಿಟ್ಟಿದ್ದಾರೆ.+ ನಿನ್ನ ಯಜ್ಞವೇದಿಗಳನ್ನ ಹಾಳು ಮಾಡಿದ್ದಾರೆ, ನಿನ್ನ ಪ್ರವಾದಿಗಳನ್ನ ಕತ್ತಿಯಿಂದ ಕೊಂದುಹಾಕಿದ್ದಾರೆ. ಈಗ ಜೀವಂತವಾಗಿ ಇರುವವನು ನಾನೊಬ್ಬನೇ. ಈಗ ನನ್ನ ಪ್ರಾಣ ಕೂಡ ತೆಗಿಬೇಕು ಅಂತಿದ್ದಾರೆ”+ ಅಂದ.
15 ಯೆಹೋವ ಅವನಿಗೆ “ಇಲ್ಲಿಂದ ದಮಸ್ಕದ ಕಾಡಿಗೆ ಹೋಗು. ಅಲ್ಲಿಗೆ ಹೋದ್ಮೇಲೆ ಹಜಾಯೇಲನನ್ನ+ ಅರಾಮ್ಯದ ರಾಜನಾಗಿ ಅಭಿಷೇಕ ಮಾಡು. 16 ನಿಂಷಿಯ ಮೊಮ್ಮಗ ಯೇಹುನ+ ಇಸ್ರಾಯೇಲ್ಯರ ರಾಜನಾಗಿ ಅಭಿಷೇಕ ಮಾಡು ಮತ್ತು ಆಬೇಲ್-ಮೆಹೋಲಾದಲ್ಲಿ ಇರೋ ಶಾಫಾಟನ ಮಗ ಎಲೀಷನನ್ನ* ನಿನ್ನ ಸ್ಥಾನದಲ್ಲಿ ಪ್ರವಾದಿಯಾಗಿ ಅಭಿಷೇಕ ಮಾಡು.+ 17 ಹಜಾಯೇಲನ ಕತ್ತಿಯಿಂದ ಯಾರಾದ್ರೂ ತಪ್ಪಿಸ್ಕೊಂಡ್ರೆ,+ ಯೇಹು ಅವನನ್ನ ಕೊಂದುಹಾಕ್ತಾನೆ.+ ಯೇಹುವಿನ ಕತ್ತಿಯಿಂದ ಯಾರಾದ್ರೂ ತಪ್ಪಿಸ್ಕೊಂಡ್ರೆ ಎಲೀಷ ಅವನನ್ನ ಕೊಂದುಹಾಕ್ತಾನೆ.+ 18 ಅಷ್ಟೇ ಅಲ್ಲ, ಈಗಲೂ ಇಸ್ರಾಯೇಲಿನಲ್ಲಿ 7,000 ಜನ ನನ್ನ ಕಡೆ ಇದ್ದಾರೆ.+ ಅವರು ಬಾಳನ ಮುಂದೆ ಮೊಣಕಾಲೂ ಹಾಕಿಲ್ಲ+ ಮತ್ತು ಬಾಳನಿಗೆ ಮುದ್ದೂ ಇಟ್ಟಿಲ್ಲ”+ ಅಂದನು.
19 ಹಾಗಾಗಿ ಎಲೀಯ ಅಲ್ಲಿಂದ ಹೋಗಿ ಶಾಫಾಟನ ಮಗ ಎಲೀಷನನ್ನ ಭೇಟಿಯಾದ. ಆಗ ಎಲೀಷ ಹೊಲ ಉಳುತ್ತಿದ್ದ. ಅವನ ಮುಂದೆ 12 ಜೋಡಿ ಹೋರಿಗಳಿದ್ವು. 12ನೇ ಜೋಡಿ ಹಿಂದೆ ಎಲೀಷ ಇದ್ದ. ಆಗ ಎಲೀಯ ಎಲೀಷನ ಹತ್ರ ಹೋಗಿ ತನ್ನ ಬಟ್ಟೆನ+ ಅವನ ಮೇಲೆ ಹಾಕಿದ. 20 ತಕ್ಷಣ ಎಲೀಷ ಹೋರಿಗಳನ್ನ ಬಿಟ್ಟು ಎಲೀಯನ ಹಿಂದೆ ಓಡಿಬಂದು “ದಯವಿಟ್ಟು, ನನ್ನ ಅಪ್ಪಅಮ್ಮಗೆ ಮುತ್ತು ಕೊಟ್ಟು ಹೇಳಿ ಬರೋಕೆ ನನಗೆ ಅನುಮತಿ ಕೊಡು. ಆಮೇಲೆ ನಾನು ನಿನ್ನ ಹಿಂದೆ ಬರ್ತೀನಿ” ಅಂದ. ಅದಕ್ಕೆ ಎಲೀಯ “ಸರಿ, ಹೋಗಿ ಬಾ. ನಾನು ನಿನ್ನ ತಡಿಯಲ್ಲ” ಅಂದ. 21 ಹಾಗಾಗಿ ಎಲೀಷ ವಾಪಸ್ ಹೋಗಿ ಒಂದು ಜೋಡಿ ಹೋರಿಯನ್ನ ಬಲಿಯಾಗಿ ಕೊಟ್ಟ. ನೇಗಿಲನ್ನ ಬಳಸಿ ಹೋರಿಗಳ ಮಾಂಸ ಬೇಯಿಸಿ ಜನ್ರಿಗೆ ಕೊಟ್ಟ. ಅದನ್ನ ಅವರು ತಿಂದ್ರು. ಆಮೇಲೆ ಅವನು ಎಲೀಯನ ಜೊತೆ ಹೋಗಿ ಅವನ ಸೇವೆ ಮಾಡೋಕೆ ಶುರುಮಾಡಿದ.+