ಯೇಸು ಕಲಿಸಿದಂತೆ ನೀವು ಕಲಿಸುತ್ತೀರೊ?
“ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು. ಯಾಕಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.”—ಮತ್ತಾಯ 7:28, 29.
1. ಯೇಸು ಗಲಿಲಾಯದಲ್ಲಿ ಕಲಿಸಿದಾಗ ಅವನನ್ನು ಯಾರು ಹಿಂಬಾಲಿಸಿದರು, ಮತ್ತು ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು?
ಯೇಸು ಹೋದಲ್ಲಿಲ್ಲಾ, ಜನರ ಗುಂಪುಗಳು ಅವನೆಡೆಗೆ ಒಟ್ಟುಗೂಡಿದವು. “ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.” ಅವನ ಚಟುವಟಿಕೆಗಳ ವರದಿಯು ಹಬ್ಬಿದಂತೆ, “ಗಲಿಲಾಯ ದೆಕಪೊಲಿ ಯೆರೂಸಲೇಮ್ ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನ ಹಿಂದೆ ಹೋದರು.” (ಮತ್ತಾಯ 4:23, 25) ಅವರನ್ನು ನೋಡಿ, “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” ಅವನು ಕಲಿಸಿದಂತೆ, ಅವರಿಗಾಗಿ ಅವನಲ್ಲಿದ್ದ ಕನಿಕರ ಯಾ ಕೋಮಲ ವಾತ್ಸಲ್ಯವನ್ನು ಅವರು ಮನಗಾಣಬಹುದಿತ್ತು; ತಮ್ಮ ಗಾಯಗಳ ಮೇಲೆ ಉಪಶಮನಮಾಡುವ ಲೇಪದಂತಿದ್ದ ಆ ಸಂಗತಿಯೇ, ಅವರನ್ನು ಅವನ ಕಡೆಗೆ ಆಕರ್ಷಿಸಿತು.—ಮತ್ತಾಯ 9:35, 36.
2. ಯೇಸುವಿನ ಅದ್ಭುತಕಾರ್ಯಗಳಿಗೆ ಕೂಡಿಸಿ, ಜನರ ದೊಡ್ಡ ಗುಂಪುಗಳನ್ನು ಯಾವುದು ಸೆಳೆಯಿತು?
2 ಎಂತಹ ಅದ್ಭುತಕರವಾದ ಶಾರೀರಿಕ ಗುಣಪಡಿಸುವಿಕೆಗಳನ್ನು—ಕುಷ್ಠ ರೋಗಿಗಳನ್ನು ಶುದ್ಧರನ್ನಾಗಿ, ಕಿವುಡರನ್ನು ಕೇಳುವವರನ್ನಾಗಿ, ಕುರುಡರನ್ನು ನೋಡುವವರನ್ನಾಗಿ, ಕುಂಟರನ್ನು ನಡೆಯುವವರನ್ನಾಗಿ, ಸತ್ತವರನ್ನು ಪುನಃ ಜೀವಿಸುವವರಾಗಿ ಮಾಡುವ ಗುಣಪಡಿಸುವಿಕೆಗಳನ್ನು—ಯೇಸು ನಡೆಸಿದನು! ಯೇಸುವಿನ ಮೂಲಕ ಕೆಲಸ ಮಾಡುತ್ತಿರುವ ಯೆಹೋವನ ಶಕ್ತಿಯ ಈ ಪ್ರೇಕ್ಷಣೀಯ ಪ್ರತ್ಯಕ್ಷಾಭಿನಯಗಳು, ಜನರ ಗುಂಪುಗಳನ್ನು ಮಹಾ ಸಂಖ್ಯೆಗಳಲ್ಲಿ ಸೆಳೆಯುತ್ತಿದ್ದದ್ದು ಖಂಡಿತ! ಆದರೆ ಅವರನ್ನು ಸೆಳೆದಂತಹ ಏಕಮಾತ್ರ ವಿಷಯಗಳು ಅದ್ಭುತಕಾರ್ಯಗಳಾಗಿರಲಿಲ್ಲ; ಯೇಸು ಕಲಿಸುತ್ತಿರುವಾಗ ಒದಗಿಸಲಾಗುತ್ತಿದ್ದ ಆತ್ಮಿಕ ಗುಣಪಡಿಸುವಿಕೆಗಾಗಿ ಕೂಡ ದೊಡ್ಡ ಗುಂಪುಗಳು ಬಂದವು. ಉದಾಹರಣೆಗೆ, ಅವನ ಜನಪ್ರಿಯ ಪರ್ವತ ಪ್ರಸಂಗವನ್ನು ಕೇಳಿಯಾದ ಮೇಲೆ ಅವರ ಪ್ರತಿಕ್ರಿಯೆಯನ್ನು ಗಮನಿಸಿರಿ: “ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು. ಯಾಕಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.” (ಮತ್ತಾಯ 7:28, 29) ಅವರ ರಬ್ಬಿಗಳು, ತಮ್ಮ ಬೋಧನೆಗಳಿಗೆ ಬೆಂಬಲದೋಪಾದಿ ಪ್ರಾಚೀನ ರಬ್ಬಿಗಳ ಮೌಖಿಕ ಸಂಪ್ರದಾಯಗಳಿಂದ ಉದ್ಧರಿಸಿದರು. ಯೇಸು ದೇವರಿಂದ ಬಂದ ಅಧಿಕಾರದಿಂದ ಅವರಿಗೆ ಕಲಿಸಿದನು: “ನಾನು ಮಾತಾಟುವದನ್ನೆಲ್ಲಾ ತಂದೆ ನನಗೆ ಹೇಳಿದ ಮೇರೆಗೆ ಮಾತಾಡುತ್ತೇನೆ.”—ಯೋಹಾನ 12:50.
ಅವನ ಬೋಧನೆ ಹೃದಯವನ್ನು ಮುಟ್ಟಿತು
3. ಯೇಸುವಿನ ಸಂದೇಶದ ನಿರ್ವಹಣೆಯು ಶಾಸ್ತ್ರಿಗಳ ಹಾಗೂ ಫರಿಸಾಯರ ನಿರ್ವಹಣೆಯಿಂದ ಹೇಗೆ ಭಿನ್ನವಾಗಿತ್ತು?
3 ಯೇಸುವಿನ ಬೋಧನೆ ಮತ್ತು ಶಾಸ್ತ್ರಿಗಳ ಹಾಗೂ ಫರಿಸಾಯರ ಬೋಧನೆಯ ನಡುವೆ ಇದ್ದ ವ್ಯತ್ಯಾಸವು ಕೇವಲ ಒಳವಿಷಯ—ದೇವರಿಂದ ಬಂದ ಸತ್ಯತೆಗಳಿಗೆ ವೈದೃಶ್ಯವಾಗಿ ಮನುಷ್ಯರಿಂದ ಬಂದ ಕುಗ್ಗಿಸುವ ಮೌಖಿಕ ಸಂಪ್ರದಾಯಗಳು—ಮಾತ್ರವಲ್ಲ, ಅದನ್ನು ಕಲಿಸಿದ ರೀತಿಯೂ ಆಗಿತ್ತು. ಶಾಸ್ತ್ರಿಗಳು ಮತ್ತು ಫರಿಸಾಯರು, ಘನತೆಗೇರಿಸುವ ಬಿರುದುಗಳನ್ನು ದರ್ಪದಿಂದ ತಗಾದೆ ಮಾಡುತ್ತಾ ಮತ್ತು ಜನರ ಗುಂಪುಗಳನ್ನು “ಶಾಪಗ್ರಸ್ಥ ಜನ” ರೆಂದು ವ್ಯಂಗ್ಯವಾಗಿ ಹೋಗ ಹೇಳುವ, ದುರಹಂಕಾರಿಗಳೂ ಕಠೋರ ವ್ಯಕ್ತಿಗಳೂ ಆಗಿದ್ದರು. ಯೇಸುವಾದರೊ, ದೀನನೂ, ಸಾತ್ವಿಕನೂ, ದಯಾಪರನೂ, ಸಹಾನುಭೂತಿಯುಳ್ಳವನೂ, ಮತ್ತು ಅನೇಕ ವೇಳೆ ಕೋರಿಕೆಯನ್ನು ನೆರವೇರಿಸುವವನೂ ಹಾಗೂ ಅವರಿಗಾಗಿ ಕನಿಕರದಿಂದ ಪ್ರೇರೇಪಿಸಲ್ಪಟ್ಟವನೂ ಆಗಿದ್ದನು. ಯೇಸು ಸರಿಯಾದ ಮಾತುಗಳಿಂದ ಮಾತ್ರವಲ್ಲ, ತನ್ನ ಹೃದಯದಿಂದ ಬಂದು ತನ್ನ ಕೇಳುಗರ ಹೃದಯದೊಳಗೆ ನೇರವಾಗಿ ಹೋದ ಮನವೊಪ್ಪುವ ಮಾತುಗಳಿಂದ ಕೂಡ ಕಲಿಸಿದನು. ಅವನ ಆನಂದಭರಿತ ಸಂದೇಶವು ಜನರನ್ನು ಅವನ ಕಡೆಗೆ ಸೆಳೆಯಿತು, ಅವನಿಗೆ ಕಿವಿಗೊಡಲಿಕ್ಕಾಗಿ ದೇವಾಲಯಕ್ಕೆ ಬೇಗನೆ ಹೋಗುವಂತೆ ಅವರನ್ನು ಪ್ರಚೋದಿಸಿತು, ಮತ್ತು ಅವನನ್ನು ನಿಕಟವಾಗಿ ಹಿಂಬಾಲಿಸುವಂತೆ ಹಾಗೂ ಹರ್ಷದಿಂದ ಆಲಿಸುವಂತೆ ಮಾಡಿತು. “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ” ಎಂದು ಘೋಷಿಸುತ್ತಾ, ಜನರ ದೊಡ್ಡ ಗುಂಪುಗಳು ಅವನಿಗೆ ಕಿವಿಗೊಡಲು ಬಂದವು.—ಯೋಹಾನ 7:46-49; ಮಾರ್ಕ 12:37; ಲೂಕ 4:22; 19:48; 21:38.
4. ಯೇಸುವಿನ ಸಾರುವಿಕೆಯಲ್ಲಿ ವಿಶೇಷವಾಗಿ ಯಾವ ಸಂಗತಿಯು ಅನೇಕ ಜನರನ್ನು ಆಕರ್ಷಿಸಿತು?
4 ಅವನ ಬೋಧನೆಯ ಕಡೆಗೆ ಜನರು ಆಕರ್ಷಿತರಾದ ಕಾರಣಗಳಲ್ಲಿ ಒಂದು, ದೃಷ್ಟಾಂತಗಳ ಅವನ ಬಳಕೆಯಾಗಿತ್ತು ಎಂಬುದು ನಿಶ್ಚಯ. ಇತರರು ಕಂಡ ವಿಷಯಗಳನ್ನು ಯೇಸು ಕಂಡನು, ಆದರೆ ಅವರು ಎಂದೂ ಯೋಚಿಸಲಾರದಂತಹ ವಿಷಯಗಳನ್ನು ಅವನು ಯೋಚಿಸಿದನು. ಹೊಲದಲ್ಲಿ ಬೆಳೆಯುತ್ತಿರುವ ಹೂವುಗಳು, ತಮ್ಮ ಗೂಡುಗಳನ್ನು ಕಟ್ಟುತ್ತಿರುವ ಪಕ್ಷಿಗಳು, ಬೀಜ ಬಿತ್ತುತ್ತಿರುವ ಪುರುಷರು, ಕಳೆದು ಹೋದ ಕುರಿಮರಿಗಳನ್ನು ಹುಡುಕಿ ತರುತ್ತಿರುವ ಕುರುಬರು, ಹಳೆಯ ವಸ್ತ್ರಗಳ ಮೇಲೆ ತೇಪೆ ಹಾಕುತ್ತಿರುವ ಸ್ತ್ರೀಯರು, ಮಾರುಕಟ್ಟೆಯ ಸ್ಥಳದಲ್ಲಿ ಆಡುತ್ತಿರುವ ಮಕ್ಕಳು, ತಮ್ಮ ಬಲೆಗಳನ್ನು ಎಳೆಯುತ್ತಿರುವ ಮೀನುಗಾರರು—ಪ್ರತಿಯೊಬ್ಬರೂ ನೋಡುವಂತಹ ಸಾಮಾನ್ಯ ವಿಷಯಗಳು—ಯೇಸುವಿನ ದೃಷ್ಟಿಯಲ್ಲಿ ಎಂದೂ ಸಾಧಾರಣವಾಗಿರಲಿಲ್ಲ. ಅವನು ನೋಡಿದಲ್ಲೆಲ್ಲಾ, ದೇವರ ಮತ್ತು ಆತನ ರಾಜ್ಯವನ್ನು ದೃಷ್ಟಾಂತಿಸಲು ಯಾ ಅವನ ಸುತ್ತಲೂ ಇದ್ದ ಮಾನವ ಸಮಾಜದ ಕುರಿತು ಒಂದು ವಿಚಾರವನ್ನು ಹೇಳಲು ಬಳಸಬಹುದಿದ್ದ ಸಂಗತಿಯನ್ನು ಅವನು ನೋಡಿದನು.
5. ಯೇಸು ತನ್ನ ದೃಷ್ಟಾಂತಗಳನ್ನು ಯಾವುದರ ಮೇಲೆ ಆಧಾರಿಸಿದನು, ಮತ್ತು ಯಾವುದು ಅವನ ಸಾಮ್ಯಗಳನ್ನು ಪರಿಣಾಮಕಾರಿಯಾಗಿ ಮಾಡಿತು?
5 ಜನರು ಅನೇಕ ಬಾರಿ ನೋಡಿರುವಂತಹ ಪ್ರತಿದಿನದ ವಿಷಯಗಳ ಮೇಲೆ ಯೇಸುವಿನ ದೃಷ್ಟಾಂತಗಳು ಆಧಾರಿಸಿವೆ, ಮತ್ತು ಚಿರಪರಿಚಿತವಾದ ಈ ವಿಷಯಗಳಿಗೆ ಸತ್ಯತೆಗಳನ್ನು ಕೂಡಿಸುವಾಗ, ಆಲಿಸುವವರ ಮನಸ್ಸಿನೊಳಗೆ ಅವು ಕ್ಷಿಪ್ರವಾಗಿ ಹಾಗೂ ಆಳವಾಗಿ ಬೇರೂರುತ್ತವೆ. ಅಂತಹ ಸತ್ಯತೆಗಳು ಕೇವಲ ಆಲಿಸಲ್ಪಡುವುದಿಲ್ಲ; ಆದರೆ ಅವು ಮಾನಸಿಕ ಚಿತ್ರಗಳಾಗುತ್ತವೆ ಮತ್ತು ತದನಂತರ ಸುಲಭವಾಗಿ ಜ್ಞಾಪಕಕ್ಕೆ ಬರುತ್ತವೆ. ಯೇಸುವಿನ ಸಾಮ್ಯಗಳು, ಸತ್ಯತೆಗಳ ಅವರ ತಿಳಿವಳಿಕೆಗೆ ಅಡ್ಡ ಬರುವ ಮತ್ತು ತಡೆ ಮಾಡುವ ಅನಗತ್ಯ ವಿಷಯದಿಂದ ಅಸ್ತವ್ಯಸ್ತಗೊಳ್ಳದ ಸರಳತೆಯಿಂದ ಗುರುತಿಸಲ್ಪಡುತ್ತಿದ್ದವು. ಉದಾಹರಣೆಗೆ, ಸ್ನೇಹಮಯ ಸಮಾರ್ಯದವನ ಸಾಮ್ಯವನ್ನು ಪರಿಗಣಿಸಿರಿ. ಅವನೆಂತಹ ಒಳ್ಳೆಯ ನೆರೆಯವನಾಗಿದ್ದನೆಂದು ನೀವು ಸ್ಪಷ್ಟವಾಗಿಗಿ ನೋಡುತ್ತೀರಿ. (ಲೂಕ 10:29-37) ಆಮೇಲೆ ಇಬ್ಬರು ಗಂಡು ಮಕ್ಕಳ—ದ್ರಾಕ್ಷಾತೋಟದಲ್ಲಿ ಅವನು ಕೆಲಸಮಾಡುವನೆಂದು ಹೇಳಿ ಮಾಡದೆ ಇದ್ದ ಒಬ್ಬನ, ಕೆಲಸ ಮಾಡುವುದಿಲ್ಲವೆಂದು ಹೇಳಿ ಮಾಡಿದ ಇನ್ನೊಬ್ಬನ—ದೃಷ್ಟಾಂತವನ್ನು ಯೇಸು ಕೊಟ್ಟನು. ನಿಜವಾದ ವಿಧೇಯತೆಯ ಸ್ವತ ಏನಾಗಿದೆ ಎಂದು ನೀವು ಬೇಗನೆ ನೋಡುತ್ತೀರಿ—ನೇಮಿಸಲ್ಪಟ್ಟ ಕೆಲಸವನ್ನು ಮಾಡುವುದು. (ಮತ್ತಾಯ 21:28-31) ಯೇಸುವಿನ ಚೇತನಗೊಳಿಸುವ ಬೋಧನೆಯ ಸಮಯದಲ್ಲಿ ಯಾವ ಮನಸ್ಸುಗಳೂ ತೂಕಡಿಸಲಿಲ್ಲ ಯಾ ಅಲೆದಾಡಲಿಲ್ಲ. ಆಲಿಸುವಿಕೆ ಮತ್ತು ನೋಡುವಿಕೆ—ಎರಡರಿಂದಲೂ—ಅವರ ಮನಸ್ಸುಗಳು ಬಹಳ ಕಾರ್ಯಮಗ್ನವಾಗಿಡಲ್ಪಟ್ಟಿದ್ದವು.
ಪ್ರೀತಿ ಯೋಗ್ಯವಾಗಿಸಿದಾಗ ಯೇಸು ಮಣಿದನು
6. ವಿವೇಚನೆಯುಳ್ಳವರಾಗಿ, ಯಾ ಮಣಿಯುವವರಾಗಿರುವುದು, ವಿಶೇಷವಾಗಿ ಯಾವಾಗ ಸಹಾಯಕಾರಿಯಾಗಿದೆ?
6 ಅನೇಕ ವೇಳೆ ವಿವೇಚನೆಯುಳ್ಳವರಾಗಿರುವುದರ ಕುರಿತು ಬೈಬಲ್ ಮಾತಾಡುವಾಗ, ಅದು ಮಣಿಯುವುದನ್ನು ಅರ್ಥೈಸುತ್ತದೆಂದು, ಒಂದು ಪಾದಟಿಪ್ಪಣಿಯು ತೋರಿಸುತ್ತದೆ. ಆಧಿಕ್ಯಕಮ್ಮಿಯ ಅಂಶಗಳಿರುವಾಗ, ದೇವರಿಂದ ಬರುವ ವಿವೇಕವು ಮಣಿಯುವಂಥದ್ದಾಗಿದೆ. ಕೆಲವೊಮ್ಮೆ ನಾವು ವಿವೇಚನೆಯುಳ್ಳವರು, ಯಾ ಮಣಿಯುವವರಾಗಿರಬೇಕು. ಪ್ರೀತಿಯು ಅದನ್ನು ಅನುಗ್ರಹಿಸುವಾಗ ಮತ್ತು ಪಶ್ಚಾತಾಪ್ತವು ಅದಕ್ಕೆ ಆಧಾರವನ್ನು ಒದಗಿಸುವಾಗ, ಹಿರಿಯರು ಮಣಿಯಲು ಸಿದ್ಧರಾಗಿರಬೇಕು. (1 ತಿಮೊಥೆಯ 3:3; ಯಾಕೋಬ 3:17) ಕರುಣೆ ಯಾ ಅನುಕಂಪವು ಅದನ್ನು ಅವಶ್ಯಪಡಿಸಿದಾಗ ಸಾಮಾನ್ಯ ನಿಯಮಗಳಿಗೆ ವಿನಾಯಿತಿಗಳನ್ನು ಮಾಡುತ್ತಾ, ಮಣಿಯುವುದರ ಅದ್ಭುತಕರವಾದ ಮಾದರಿಗಳನ್ನು ಯೇಸು ಬಿಟ್ಟುಹೋದನು.
7. ಯೇಸು ಮಣಿಯುವವನಾಗಿರುವುದರ ಕುರಿತಾದ ಕೆಲವು ಉದಾಹರಣೆಗಳಾವುವು?
7 ಯೇಸು ಒಮ್ಮೆ ಹೇಳಿದ್ದು: “ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.” ಪೇತ್ರನು ಅವನನ್ನು ಮೂರು ಬಾರಿ ಅಲ್ಲಗಳೆದರೂ ಸಹ ಯೇಸು ಪೇತ್ರನನ್ನು ತಿರಸ್ಕರಿಸಲಿಲ್ಲ. ಯೇಸು ಸ್ಪಷ್ಟವಾಗಿಗಿ ಪರಿಗಣಿಸಿದ, ಆಧಿಕ್ಯಕಮ್ಮಿಯ ಪರಿಸ್ಥಿತಿಗಳು ಅಲ್ಲಿದ್ದವು. (ಮತ್ತಾಯ 10:33; ಲೂಕ 22:54-62) ರಕ್ತದ ಹರಿವು ಇದ್ದ ಅಶುದ್ಧ ಸ್ತ್ರೀಯು ಮೋಶೆಯ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ, ಜನರ ಗುಂಪುಗಳೊಳಗೆ ಬಂದಾಗ ಸಹ ಆಧಿಕ್ಯಕಮ್ಮಿಯ ಪರಿಸ್ಥಿತಿಗಳು ಅಲ್ಲಿದ್ದವು. ಯೇಸು ಆಕೆಯನ್ನೂ ಖಂಡಿಸಲಿಲ್ಲ. ಆಕೆಯ ನಿರಾಶೆಯನ್ನು ಅವನು ಅರ್ಥಮಾಡಿಕೊಂಡನು. (ಮಾರ್ಕ 1:40-42; 5:25-34; ಲೂಕ 5:12, 13 ಸಹ ನೋಡಿ.) ಅವನನ್ನು ಮೆಸ್ಸೀಯನಂತೆ ಗುರುತಿಸಬಾರದೆಂದು ಯೇಸು ತನ್ನ ಅಪೊಸ್ತಲರಿಗೆ ಹೇಳಿದ್ದನು, ಆದರೂ ಬಾವಿಯ ಬಳಿ ಒಬ್ಬಾಕೆ ಸಮಾರ್ಯದ ಸ್ತ್ರೀಗೆ ತನ್ನನ್ನು ಮೆಸ್ಸೀಯನಂತೆ ಅವನು ಗುರುತಿಸಿಕೊಂಡಾಗ, ಆ ನಿಯಮಕ್ಕೆ ಅನಮ್ಯವಾಗಿ ಅವನು ಅಂಟಿಕೊಳ್ಳಲಿಲ್ಲ. (ಮತ್ತಾಯ 16:20; ಯೋಹಾನ 4:25, 26) ಈ ಎಲ್ಲ ವಿದ್ಯಮಾನಗಳಲ್ಲಿ, ಪ್ರೀತಿ, ಕರುಣೆ, ಮತ್ತು ಅನುಕಂಪ ಈ ಮಣಿಯುವಿಕೆಯನ್ನು ಸೂಕ್ತವಾಗಿ ಮಾಡಿದವು.—ಯಾಕೋಬ 2:13.
8. ಶಾಸ್ತ್ರಿಗಳು ಮತ್ತು ಫರಿಸಾಯರು ನಿಯಮಗಳನ್ನು ಯಾವಾಗ ಸರಿಹೊಂದಿಸಿಕೊಳ್ಳುತ್ತಿದ್ದರು, ಮತ್ತು ಯಾವಾಗ ಅವರು ಹಾಗೆ ಮಾಡುತ್ತಿರಲಿಲ್ಲ?
8 ಮಣಿಯದ ಶಾಸ್ತ್ರಿಗಳು ಮತ್ತು ಫರಿಸಾಯರ ವಿಷಯದಲ್ಲಿ ಅದು ಭಿನ್ನವಾಗಿತ್ತು. ತಮ್ಮ ವಿಷಯದಲ್ಲಿ, ಹೋರಿಯನ್ನು ನೀರಿನ ಬಳಿಗೆ ಕರೆದೊಯ್ಯಲು ಅವರು ಸಬ್ಬತ್ ಸಂಪ್ರದಾಯಗಳನ್ನು ಉಲ್ಲಂಘಿಸುತ್ತಿದ್ದರು. ಅಥವಾ ಅವರ ಹೋರಿಯೊ ಮಗನೊ ಬಾವಿಯೊಳಗೆ ಬೀಳುವುದಾದರೆ, ಅವನನ್ನು ಹೊರಗೆ ತೆಗೆಯಲು ಅವರು ಸಬ್ಬತ್ತನ್ನು ಉಲ್ಲಂಘಿಸುತ್ತಿದ್ದರು. ಆದರೆ ಸಾಮಾನ್ಯ ಜನರಿಗಾಗಿ, ಅವರು ಎಷ್ಟುಮಾತ್ರವೂ ಮಣಿಯುತ್ತಿರಲಿಲ್ಲ! ಅವರು “[ಆವಶ್ಯಕತೆಗಳನ್ನು] ಬೆರಳಿನಿಂದಲಾದರೂ . . . ಮುಟ್ಟಲೊಲ್ಲರು.” (ಮತ್ತಾಯ 23:4; ಲೂಕ 14:5) ಯೇಸುವಿಗೆ, ಹೆಚ್ಚಿನ ನಿಯಮಗಳಿಗಿಂತ ಜನರು ಹೆಚ್ಚು ಪ್ರಮುಖರಾಗಿದ್ದರು; ಫರಿಸಾಯರಿಗೆ, ಜನರಿಗಿಂತ ನಿಯಮಗಳು ಹೆಚ್ಚು ಪ್ರಮುಖವಾಗಿದ್ದವು.
“ಆಜ್ಞೆಯ ಪುತ್ರ” ನಾಗಿ ಪರಿಣಮಿಸುವುದು
9, 10. ಯೆರೂಸಲೇಮಿಗೆ ಹಿಂದಿರುಗಿದ ಬಳಿಕ, ಯೇಸುವಿನ ಹೆತ್ತವರು ಅವನನ್ನು ಎಲ್ಲಿ ಕಂಡರು, ಮತ್ತು ಯೇಸುವಿನ ಪ್ರಶ್ನಿಸುವಿಕೆಯ ಅರ್ಥವು ಏನಾಗಿತ್ತು?
9 ಯೇಸುವಿನ ಬಾಲ್ಯದಲ್ಲಿ ನಡೆದ ಒಂದೇ ಒಂದು ಘಟನೆಯನ್ನು ಮಾತ್ರ ದಾಖಲಿಸಲಾಗಿದೆ ಎಂದು ಕೆಲವರು ಪ್ರಲಾಪಿಸುತ್ತಾರೆ. ಆದರೂ ಆ ಘಟನೆಯ ಮಹಾ ಮಹತ್ವವನ್ನು ಗ್ರಹಿಸಲು ಅನೇಕರು ತಪ್ಪುತ್ತಾರೆ. ಅದು ನಮಗಾಗಿ ಲೂಕ 2:46, 47 ರಲ್ಲಿ ವರದಿಸಲಾಗಿದೆ: “ಮೂರು ದಿನದ ಮೇಲೆ ಆತನನ್ನು ದೇವಾಲಯದಲ್ಲಿ ಕಂಡರು. ಆತನು ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ ಇದ್ದನು. ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರು ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.” ಈ ವಿದ್ಯಮಾನದಲ್ಲಿ “ಪ್ರಶ್ನೆಮಾಡುತ್ತಾ” ಎಂಬ ಶಬ್ದಕ್ಕಾಗಿ ಉಪಯೋಗಿಸಲಾದ ಗ್ರೀಕ್ ಪದವು, ಕೇವಲ ಒಬ್ಬ ಹುಡುಗನ ಕುತೂಹಲವಾಗಿರಲಿಲ್ಲ ಎಂಬ ವಿಚಾರವನ್ನು ಕಿಟಲ್ರ ತಿಯೊಲಾಜಿಕಲ್ ಡಿಕ್ಷನೆರಿ ಆಫ್ ನ್ಯೂ ಟೆಸ್ಟಮೆಂಟ್ ಎಂಬ ಇಂಗ್ಲಿಷ್ ಪುಸ್ತಕವು ಹೊರತರುತ್ತದೆ. ಪದವು ನ್ಯಾಯಸಂಬಂಧವಾದ ಪರಿಶೀಲನೆಗಳಲ್ಲಿ, ತನಿಖೆಗಳಲ್ಲಿ, ಮರುಪ್ರಶ್ನಿಸುವಿಕೆಯಲ್ಲಿ ಬಳಸಲಾದ ಪ್ರಶ್ನಿಸುವಿಕೆಗೆ, ಮಾರ್ಕ 10:2 ಮತ್ತು 12:18-23 ರಲ್ಲಿ ಉಲ್ಲೇಖಿಸಲಾದಂತಹ “ಫರಿಸಾಯರ ಮತ್ತು ಸದ್ದುಕಾಯರ ಶೋಧನಾತ್ಮಕ ಹಾಗೂ ಕಪಟ ಪ್ರಶ್ನೆಗಳನ್ನು” ಸಹ ಸೂಚಿಸಬಹುದು.
10 ಅದೇ ಡಿಕ್ಷನೆರಿಯು ಮುಂದುವರಿಸುವುದು: “ಈ ಬಳಕೆಯ ನೋಟದಲ್ಲಿ, [ಲೂಕ] 2:46 ಹುಡುಗನ ಪ್ರಶ್ನಿಸುವ ಕುತೂಹಲವನ್ನು ಅಷಾಗ್ಟಿ ಸೂಚಿಸದೆ, ಅವನ ಸಫಲ ವಾಗ್ವಾದ ನಡಿಸುವಿಕೆಯನ್ನು ಸೂಚಿಸುತ್ತದೊ . . . ಎಂಬುದಾಗಿ ಕೇಳಬಹುದು. [ವಚನ] 47 ಎರಡನೆಯ ವೀಕ್ಷಣೆಯೊಂದಿಗೆ ಸರಿಹೊಂದುವುದು.”a ವಚನ 47ರ ರೋಥರ್ಹ್ಯಾಮ್ಸ್ ಭಾಷಾಂತರವು ಅದನ್ನು ಒಂದು ನಾಟಕೀಯ ಮುಕಾಬಿಲೆಯೋಪಾದಿ ಪ್ರಸ್ತುತಪಡಿಸುತ್ತದೆ: “ಅವನಿಗೆ ಕಿವಿಗೊಟ್ಟವರೆಲ್ಲರು ಅವನ ತಿಳಿವಳಿಕೆ ಮತ್ತು ಅವನ ಉತ್ತರಗಳಿಂದಾಗಿ, ಅತ್ಯಾಶ್ಚರ್ಯಪಟ್ಟರು.” ಅವರ ಸತತವಾದ ಬೆರಗು ಅಂದರೆ “ತಮ್ಮ ಕಣ್ಣುಗಳು ಉಬ್ಬಿ ಹೊರಬರುತ್ತಿವೆಯೊ ಎಂಬಂತೆ ಅವರು ಅತ್ಯಾಶ್ಚರ್ಯಪಟ್ಟರು” ಎಂದು ರಾಬರ್ಟ್ಸನ್ ಅವರ ವರ್ಡ್ ಪಿಕ್ಚರ್ಸ್ ಇನ್ ದ ನ್ಯೂ ಟೆಸ್ಟಮೆಂಟ್ ಎಂಬ ಇಂಗ್ಲಿಷ್ ಪುಸ್ತಕವು ಹೇಳುತ್ತದೆ.
11. ಅವರು ನೋಡಿದ ಮತ್ತು ಕೇಳಿದ ವಿಷಯಕ್ಕೆ ಮರಿಯಳ ಮತ್ತು ಯೋಸೇಫರ ಪ್ರತಿಕ್ರಿಯೆಯು ಏನಾಗಿತ್ತು, ಮತ್ತು ಒಂದು ದೇವತಾಶಾಸ್ತ್ರ ಡಿಕ್ಷನೆರಿಯು ಏನನ್ನು ಸೂಚಿಸುತ್ತದೆ?
11 ಯೇಸುವಿನ ಹೆತ್ತವರು ಕೊನೆಯದಾಗಿ ದೇವಾಲಯಕ್ಕೆ ಬಂದಾಗ, ಅವರು “ಬೆರಗಾದರು.” (ಲೂಕ 2:48) ಈ ಅಭಿವ್ಯಕ್ತಿಯಲ್ಲಿರುವ ಗ್ರೀಕ್ ಪದವು “ಹೊಡೆತ ಹೊಡಿ, ಹೊಡೆತದಿಂದ ಓಡಿಸು” ಎಂಬುದನ್ನು ಅರ್ಥೈಸುತ್ತದೆ ಎಂದು ರಾಬರ್ಟ್ಸನ್ ಹೇಳುತ್ತಾರೆ. ಅವರು ಏನನ್ನು ಕಂಡು ಕೇಳಿದರೊ ಅದರಿಂದ ಯೋಸೇಫನು ಮತ್ತು ಮರಿಯಳು “ಹೊಡೆಯಲ್ಪಟ್ಟರು” ಎಂದು ಅವರು ಕೂಡಿಸುತ್ತಾರೆ. ಒಂದರ್ಥದಲ್ಲಿ ಈಗಾಗಲೇ ಯೇಸು ಒಬ್ಬ ವಿಸ್ಮಯಗೊಳಿಸುವ ಬೋಧಕನಾಗಿದ್ದನು. ದೇವಾಲಯದಲ್ಲಿ ನಡೆದ ಈ ಘಟನೆಯ ನೋಟದಲ್ಲಿ, “ತನ್ನ ವಿರೋಧಿಗಳು ಅಂತಿಮವಾಗಿ ಶರಣಾಗತರಾಗುವ ಘರ್ಷಣೆಯನ್ನು ಯೇಸು ಆಗಲೇ ತನ್ನ ಬಾಲ್ಯದಲ್ಲಿಯೇ ಆರಂಭಿಸುತ್ತಾನೆ” ಎಂಬ ವಾದವನ್ನು ಕಿಟಲ್ರ ಕೃತಿಯು ಮಾಡುತ್ತದೆ.
12. ಧಾರ್ಮಿಕ ನಾಯಕರೊಂದಿಗೆ ಯೇಸುವಿನ ತದನಂತರದ ಚರ್ಚೆಗಳನ್ನು ಯಾವುದು ಗುರುತಿಸಿತು?
12 ಮತ್ತು ಯೇಸುವಿನ ವಿರೋಧಿಗಳು ಶರಣಾಗತರಾದರು ನಿಶ್ಚಯ! ವರ್ಷಗಳಾನಂತರ, ಇಂತಹ ಪ್ರಶ್ನಿಸುವಿಕೆಯ ಮೂಲಕವೇ ಯೇಸು ಫರಿಸಾಯರನ್ನು ಸೋಲಿಸಿದನು. “ಅಂದಿನಿಂದ ಆತನನ್ನು ಇನ್ನೇನಾದರೂ ಕೇಳುವದಕ್ಕೆ ಯಾರಿಗೂ ಧೈರ್ಯ” ಹುಟ್ಟಲಿಲ್ಲ. (ಮತ್ತಾಯ 22:41-46) ಸದ್ದುಕಾಯರೂ ಅಂತೆಯೇ ಪುನರುತ್ಥಾನದ ಪ್ರಶ್ನೆಯ ಮೇಲೆ ನಿರುತ್ತರಮಾಡಲ್ಪಟ್ಟರು, ಮತ್ತು “ಆತನನ್ನು ಇನ್ನೇನು ಕೇಳುವದಕ್ಕೂ ಅವರಿಗೆ ಧೈರ್ಯವಿಲ್ಲದೆ ಹೋಯಿತು.” (ಲೂಕ 20:27-40) ಶಾಸ್ತ್ರಿಗಳಿಗೆ ಇದಕ್ಕಿಂತ ಉತ್ತಮ ಯಶಸ್ಸು ದೊರೆಯಲಿಲ್ಲ. ಅವರಲ್ಲಿ ಒಬ್ಬನು ಯೇಸುವಿನೊಂದಿಗೆ ಚರ್ಚಿಸಿದ ಅನಂತರ, “ಆತನನ್ನು ಪ್ರಶ್ನೆಮಾಡುವದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.”—ಮಾರ್ಕ 12:28-34.
13. ದೇವಾಲಯದಲ್ಲಿ ನಡೆದ ಘಟನೆಯನ್ನು ಯೇಸುವಿನ ಜೀವಿತದಲ್ಲಿ ಮಹತ್ವವುಳ್ಳದ್ದಾಗಿ ಮಾಡಿದ್ದು ಯಾವುದು, ಮತ್ತು ಯಾವ ಹೆಚ್ಚಿನ ಅರಿವನ್ನು ಅದು ಸೂಚಿಸುತ್ತದೆ?
13 ಯೇಸುವನ್ನು ಮತ್ತು ದೇವಾಲಯದಲ್ಲಿದ್ದ ಬೋಧಕರನ್ನೊಳಗೊಂಡ ಈ ಘಟನೆಯು, ವಿವರವಾಗಿ ಹೇಳಲಿಕ್ಕಾಗಿ ಅವನ ಬಾಲ್ಯದಿಂದ ಆರಿಸಲಾದ ಘಟನೆಯಾಗಿತ್ತು ಏಕೆ? ಯೇಸುವಿನ ಜೀವಿತದಲ್ಲಿ ಅದೊಂದು ಸಂಧಿಕಾಲವಾಗಿತ್ತು. ಯೇಸು ಸುಮಾರು 12 ವರ್ಷ ಪ್ರಾಯದವನಾಗಿದ್ದಾಗ, ಯೆಹೂದ್ಯರು ಯಾರನ್ನು ದೈವಾಜ್ಞೆಯ ಸಕಲ ಕಟ್ಟಳೆಗಳನ್ನು ಪಾಲಿಸಲು ಜವಾಬ್ದಾರನಾದ “ಆಜ್ಞೆಯ ಪುತ್ರ” ನೆಂದು ಕರೆದರೋ ಅಂತಹವನಾಗಿ ಪರಿಣಮಿಸಿದನು. ಅವನು ಆಕೆಗೆ ಮತ್ತು ಯೋಸೇಫನಿಗೆ ಉಂಟುಮಾಡಿದ್ದ ಮಾನಸಿಕ ಸಂಕಟದ ಕುರಿತು ಮರಿಯಳು ಯೇಸುವಿಗೆ ದೂರು ಕೊಟ್ಟಾಗ, ಅವನು ಬಹುಶಃ ತನ್ನ ಜನನದ ಅದ್ಭುತಕರ ಸ್ವರೂಪವನ್ನು ಮತ್ತು ತನ್ನ ಮೆಸ್ಸೀಯ ಸಂಬಂಧವಾದ ಭವಿಷ್ಯತ್ತನ್ನು ಗ್ರಹಿಸಿದನೆಂದು, ಆಕೆಯ ಮಗನ ಉತ್ತರವು ಸೂಚಿಸಿತು. ದೇವರು ತನ್ನ ತಂದೆಯಾಗಿದ್ದಾನೆಂದು ಬಹಳ ನೇರವಾಗಿ ಹೇಳುವ ಮೂಲಕ ಅದನ್ನು ಸೂಚಿಸಲಾಗಿದೆ: “ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” ಪ್ರಾಸಂಗಿಕವಾಗಿ, ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವಂತಹ ಈ ಮಾತುಗಳು, ಯೇಸು ಮಾತಾಡಿದ ಮೊದಲ ಶಬ್ದಗಳಾಗಿವೆ, ಮತ್ತು ಅವು ಅವನನ್ನು ಭೂಮಿಗೆ ಕಳುಹಿಸಲಿಕ್ಕಾಗಿದ್ದ ಯೆಹೋವನ ಉದ್ದೇಶದ ಕುರಿತು ಅವನ ಅರಿವನ್ನು ಸೂಚಿಸುತ್ತವೆ. ಹೀಗೆ ಈ ಸಂಪೂರ್ಣ ಉಪಕಥೆಯು ಪ್ರಧಾನ ಪ್ರಮುಖತೆಯದ್ದಾಗಿದೆ.—ಲೂಕ 2:48, 49.
ಯೇಸು ಮಕ್ಕಳನ್ನು ಪ್ರೀತಿಸುತ್ತಾನೆ ಮತ್ತು ಅರ್ಥಮಾಡಿಕೊಳ್ಳುತ್ತಾನೆ
14. ದೇವಾಲಯದಲ್ಲಿ ಎಳೆಯ ಯೇಸುವಿನ ದಾಖಲೆಯು, ಯಾವ ಆಸಕ್ತಿಕರ ಅಂಶಗಳನ್ನು ಯುವ ಜನರು ಅರಿಯುವಂತೆ ಮಾಡಬಹುದು?
14 ಈ ದಾಖಲೆಯು ವಿಶೇಷವಾಗಿ ಯುವ ಜನರಿಗೆ ರೋಮಾಂಚನಗೊಳಿಸುವಂಥದ್ದಾಗಿರಬೇಕು. ಪುರುಷನಾಗಿ ಬೆಳೆದಂತೆ ಯೇಸು ಎಷ್ಟೊಂದು ಶ್ರಮಶೀಲನಾಗಿ ಅಭ್ಯಸಿಸಿರಬೇಕೆಂದು ಇದು ತೋರಿಸುತ್ತದೆ. ಈ 12 ವರ್ಷ ಪ್ರಾಯದ “ಆಜ್ಞೆಯ ಪುತ್ರ”ನ ವಿವೇಕದಿಂದ ದೇವಾಲಯದಲ್ಲಿದ್ದ ರಬ್ಬಿಗಳು ಭಯಚಕಿತರಾದರು. ಆದರೂ ಅವನು ಯೋಸೇಫನೊಂದಿಗೆ ಬಡಗಿಯ ಅಂಗಡಿಯಲ್ಲಿ ಇನ್ನೂ ಕೆಲಸಮಾಡಿದನು, ಅವನಿಗೂ ಮರಿಯಳಿಗೂ “ಅಧೀನನಾಗಿದ್ದನು”, ಮತ್ತು “ದೇವರ ಮತ್ತು ಮನುಷ್ಯರ ದಯೆ” ಯಲ್ಲಿ ವೃದ್ಧಿಸಿದನು.—ಲೂಕ 2:51, 52.
15. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯುವ ಜನರಿಗೆ ಯೇಸು ಹೇಗೆ ಬೆಂಬಲವನ್ನೀಯುವವನಾಗಿದ್ದನು, ಮತ್ತು ಇಂದು ಯುವ ಜನರಿಗೆ ಇದು ಏನನ್ನು ಅರ್ಥೈಸುತ್ತದೆ?
15 ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು ಯುವ ಜನರಿಗೆ ಬಹಳ ಬೆಂಬಲವನ್ನೀಯುವವನಾಗಿದ್ದನು: “ಆದರೆ ಮಹಾಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನೂ ದಾವೀದನ ಕುಮಾರನಿಗೆ ಜಯ ಜಯವೆಂದು ದೇವಾಲಯದಲ್ಲಿ ಕೂಗುತ್ತಿರುವ ಹುಡುಗರನ್ನೂ ನೋಡಿ ಸಿಟ್ಟುಗೊಂಡು ಆತನಿಗೆ—ಇವರು ಹೇಳುವದನ್ನು ಕೇಳುತ್ತೀಯಾ ಎಂದು ಹೇಳಲು ಯೇಸು—ಹೌದು, ಕೇಳುತ್ತೇನೆ, ಸಣ್ಣ ಮಕ್ಕಳ ಬಾಯಿಂದಲೂ ಮೊಲೇಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ? ಅಂದನು.” (ಮತ್ತಾಯ 21:15, 16; ಕೀರ್ತನೆ 8:2) ಇಂದು ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡು ಸ್ತೋತ್ರವನ್ನು ತರುತ್ತಿರುವ—ಕೆಲವರು ತಮ್ಮ ಜೀವನಷ್ಟ ಪಟ್ಟು ಸಹ—ನೂರಾರು ಸಾವಿರ ಯುವ ಜನರಿಗೆ ಅವನು ಹಾಗೆಯೇ ಬೆಂಬಲವನ್ನೀಯುವವನಾಗಿದ್ದಾನೆ!
16. (ಎ) ಅವರ ಮಧ್ಯದಲ್ಲಿ ಒಂದು ಎಳೆಯ ಮಗುವನ್ನು ನಿಲ್ಲಿಸುವ ಮೂಲಕ ತನ್ನ ಅಪೊಸ್ತಲರಿಗೆ ಯಾವ ಪಾಠವನ್ನು ಯೇಸು ಕಲಿಸಿದನು? (ಬಿ) ಯೇಸುವಿನ ಜೀವಿತದ ಯಾವ ಸಂದಿಗ್ಧ ಸಮಯದಲ್ಲಿ ಮಕ್ಕಳಿಗಾಗಿ ಅವನಲ್ಲಿ ಇನ್ನೂ ಸಮಯವಿತ್ತು?
16 ತಮ್ಮಲ್ಲಿ ಯಾವನು ಹೆಚ್ಚಿನವನಾಗಿದ್ದನೆಂದು ಅಪೊಸ್ತಲರು ವಾದಿಸಿದಾಗ, ಯೇಸು ಆ 12 ಮಂದಿ ಶಿಷ್ಯರಿಗೆ ಹೇಳಿದ್ದು: “ಯಾವನಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಆಳೂ ಆಗಿರಬೇಕು ಎಂದು ಹೇಳಿ ಒಂದು ಚಿಕ್ಕ ಮಗುವನ್ನು ತೆಗೆದುಕೊಂಡು ಅವರ ನಡುವೆ ನಿಲ್ಲಿಸಿ ಅಪ್ಪಿಕೊಂಡು ಅವರಿಗೆ—ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಕ್ಕಳಲ್ಲಿ ಒಂದನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನಲ್ಲ, ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು.” (ಮಾರ್ಕ 9:35-37) ಇನ್ನೂ ಹೆಚ್ಚಾಗಿ, ಉಗ್ರವಾದ ಪರೀಕ್ಷೆ ಮತ್ತು ಮರಣವನ್ನು ಎದುರಿಸಲಿಕ್ಕಾಗಿ ಕೊನೆಯ ಬಾರಿ ಅವನು ಯೆರೂಸಲೇಮಿಗೆ ಹೋಗುತ್ತಿದಾಗ, ಮಕ್ಕಳಿಗಾಗಿ ಅವನು ಸಮಯವನ್ನು ತೆಗೆದುಕೊಂಡನು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿ ಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ”, ಆಮೇಲೆ ಅವನು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.”—ಮಾರ್ಕ 10:13-16.
17. ಮಕ್ಕಳೊಂದಿಗೆ ಸಂಬಂಧ ಕಲ್ಪಿಸುವುದು ಯೇಸುವಿಗೆ ಯಾಕೆ ಸರಳವಾಗಿತ್ತು, ಮತ್ತು ಅವನ ಕುರಿತು ಮಕ್ಕಳು ಏನನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು?
17 ವಯಸ್ಕರ ಲೋಕದಲ್ಲಿ ಒಂದು ಮಗುವಾಗಿರುವುದು ಯಾವ ರೀತಿಯದ್ದಾಗಿದೆ ಎಂದು ಯೇಸುವಿಗೆ ಗೊತ್ತಿದೆ. ಅವನು ವಯಸ್ಕರೊಂದಿಗೆ ಜೀವಿಸಿದನು, ಅವರೊಂದಿಗೆ ಕೆಲಸಮಾಡಿದನು, ಅವರಿಗೆ ಅಧೀನನಾಗಿರುವುದನ್ನು ಅನುಭವಿಸಿದನು, ಮತ್ತು ಅವರಿಂದ ಪ್ರೀತಿಸಲ್ಪಡುವ ಬೆಚ್ಚನೆಯ, ಭದ್ರವಾದ ಅನಿಸಿಕೆಯನ್ನು ಸಹ ಅನುಭವಿಸಿದನು. ಮಕ್ಕಳೇ, ಅದೇ ಯೇಸು ನಿಮ್ಮ ಮಿತ್ರನಾಗಿದ್ದಾನೆ; ಅವನು ನಿಮಗಾಗಿ ಮರಣ ಹೊಂದಿದನು, ಮತ್ತು ಅವನ ಆಜೆಗ್ಞಳಿಗೆ ನೀವು ವಿಧೇಯರಾಗುವುದಾದರೆ ನೀವು ಸದಾ ಕಾಲ ಜೀವಿಸುವಿರಿ.—ಯೋಹಾನ 15:13, 14.
18. ವಿಶೇಷವಾಗಿ ಒತ್ತಡ ಯಾ ಕಷ್ಟದ ಸಮಯಗಳಲ್ಲಿ, ಯಾವ ರೋಮಾಂಚಕಾರಿ ಆಲೋಚನೆಯನ್ನು ನಾವು ಮನಸ್ಸಿನಲ್ಲಿಡಬೇಕು?
18 ಯೇಸು ಆಜ್ಞಾಪಿಸುವಂತೆ ಮಾಡುವುದು, ಅದು ತೋರಬಹುದಾದಷ್ಟು ಕಠಿನವಾಗಿಲ್ಲ. ಯುವ ಜನರೇ, ಮತ್ತಾಯ 11:28-30 ರಲ್ಲಿ ನಾವು ಓದುವಂತೆಯೆ, ಅವನು ನಿಮಗಾಗಿ ಮತ್ತು ಪ್ರತಿಯೊಬ್ಬರಿಗಾಗಿ ಇದ್ದಾನೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು [ಯಾ, “ನನ್ನೊಂದಿಗೆ ನನ್ನ ನೊಗದ ಕೆಳಗೆ ಬನ್ನಿರಿ,” ಪಾದಟಿಪ್ಪಣಿ] ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” ಯೆಹೋವನನ್ನು ಸೇವಿಸುತ್ತಾ ನೀವು ಜೀವಿತದ ಉದ್ದಕ್ಕೂ ನಡೆದಂತೆ, ನೊಗವನ್ನು ಮೃದುವಾಗಿಯೂ ಹೊರೆಯನ್ನು ಹೌರವಾಗಿಯೂ ಮಾಡುತ್ತಾ, ಯೇಸು ನಿಮ್ಮ ಜೊತೆಗೆ ನಡೆಯುತ್ತಿದ್ದಾನೆ ಎಂಬುದನ್ನು ಕೇವಲ ಊಹಿಸಿರಿ. ನಮ್ಮೆಲ್ಲರಿಗೂ ಅದೊಂದು ರೋಮಾಂಚಕಾರಿ ಆಲೋಚನೆಯಾಗಿದೆ!
19. ಯೇಸುವಿನ ಬೋಧನಾ ವಿಧಗಳ ಕುರಿತು ಯಾವ ಪ್ರಶ್ನೆಗಳನ್ನು ನಾವು ಆಗಿಂದಾಗ್ಗೆ ಪುನರ್ವಿಮರ್ಶಿಸಬಹುದು?
19 ಯೇಸು ಕಲಿಸಿದಂತಹ ವಿಧಗಳಲ್ಲಿ ಕೇವಲ ಕೆಲವನ್ನು ಪುನರ್ವಿಮರ್ಶಿಸಿದ ಬಳಿಕ, ಅವನು ಕಲಿಸಿದಂತೆ ನಾವು ಕಲಿಸುತ್ತೇವೆಂದು ನಾವು ಕಂಡುಕೊಳ್ಳುತ್ತೇವೊ? ಶಾರೀರಿಕವಾಗಿ ಅಸ್ವಸ್ಥರಾಗಿರುವವರನ್ನು ಯಾ ಆತ್ಮಿಕವಾಗಿ ಹಸಿದಿರುವವರನ್ನು ನಾವು ನೋಡುವಾಗ, ಅವರಿಗೆ ಸಹಾಯ ಮಾಡಲು ನಮ್ಮಿಂದ ಸಾಧ್ಯವಾದದ್ದನ್ನು ಮಾಡುವಂತೆ ನಾವು ಕನಿಕರದಿಂದ ಪ್ರೇರೇಪಿಸಲ್ಪಡುತ್ತೇವೊ? ಇತರರಿಗೆ ನಾವು ಉಪದೇಶವನ್ನು ನೀಡುವಾಗ, ನಾವು ದೇವರ ವಾಕ್ಯವನ್ನು ಕಲಿಸುತ್ತೇವೊ, ಯಾ ಫರಿಸಾಯರಂತೆ, ನಮ್ಮ ಸ್ವಂತ ವಿಚಾರಗಳನ್ನು ಕಲಿಸುತ್ತೇವೊ? ಆತ್ಮಿಕ ಸತ್ಯತೆಗಳ ತಿಳಿವಳಿಕೆಯನ್ನು ಸ್ಪಷ್ಟೀಕರಿಸಲು, ಕಲ್ಪಿಸಿಕೊಳ್ಳಲು, ನಿರ್ದಿಷ್ಟಗೊಳಿಸಲು, ಮತ್ತು ವೃದ್ಧಿಸಲು ಬಳಸಸಾಧ್ಯವಿರುವಂತಹ ನಮ್ಮ ಸುತ್ತಲಿರುವ ಪ್ರತಿದಿನದ ವಿಷಯಗಳನ್ನು ನೋಡಲು ನಾವು ಜಾಗರೂಕರಾಗಿದ್ದೇವೊ? ಪರಿಸ್ಥಿತಿಗಳಿಂದಾಗಿ, ಕೆಲವು ನಿಯಮಗಳ ಅನ್ವಯಿಸುವಿಕೆಯ ಸಂಬಂಧದಲ್ಲಿ ಮಣಿಯುವ ಮೂಲಕ ಪ್ರೀತಿ ಮತ್ತು ಕರುಣೆ ಅಧಿಕ ಸೂಕ್ತವಾಗಿ ಅಭಿವ್ಯಕ್ತಿಸಲ್ಪಡುವಾಗ, ಅಂತಹ ನಿಯಮಗಳಿಗೆ ಅನಮ್ಯವಾಗಿ ಅಂಟಿಕೊಳ್ಳುವುದನ್ನು ನಾವು ತೊರೆಯುತ್ತೇವೊ? ಮತ್ತು ನಮ್ಮ ಮಕ್ಕಳ ಕುರಿತೇನು? ಯೇಸು ತೋರಿಸಿದಂತಹ ಅದೇ ರೀತಿಯ ಕೋಮಲ ಚಿಂತೆ ಮತ್ತು ಪ್ರೀತಿಯ ದಯೆಯನ್ನು ನಾವು ಅವರಿಗೆ ತೋರಿಸುತ್ತೇವೊ? ಹುಡುಗನೋಪಾದಿ ಯೇಸು ಅಭ್ಯಸಿಸಿದ ವಿಧದಲ್ಲಿಯೇ ಅಭ್ಯಸಿಸುವಂತೆ ನೀವು ನಿಮ್ಮ ಮಕ್ಕಳನ್ನು ಉತ್ತೇಜಿಸುತ್ತೀರೊ? ಯೇಸು ಮಾಡಿದಂತೆ ನೀವು ದೃಢತೆಯಿಂದ ವರ್ತಿಸಿ, ಆದರೆ ಪಶ್ಚಾತಾಪ್ತಪಡುವವರನ್ನು ಆದರಣೆಯಿಂದ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ಸ್ವೀಕರಿಸಲು ಸಿದ್ಧರಾಗಿರುವಿರೊ?—ಮತ್ತಾಯ 23:37.
20. ನಾವು ದೇವರನ್ನು ಸೇವಿಸಿದಂತೆ ಯಾವ ಹರ್ಷಭರಿತ ಆಲೋಚನೆಯಿಂದ ನಮ್ಮನ್ನು ನಾವು ಸಂತೈಸಿಕೊಳ್ಳಬಹುದು?
20 ಯೇಸು ಕಲಿಸಿದಂತೆ ಕಲಿಸಲು ನಾವು ನಮ್ಮ ಅತ್ಯುತ್ತಮವನ್ನು ಮಾಡಲು ಶ್ರಮಿಸುವುದಾದರೆ, ಖಂಡಿತವಾಗಿಯೂ ಅವನು ನಮ್ಮನ್ನು ‘ಅವನೊಂದಿಗೆ ಅವನ ನೊಗದ ಕೆಳಗೆ ಬರುವಂತೆ’ ಅನುಮತಿಸುವನು.—ಮತ್ತಾಯ 11:28-30.
[ಅಧ್ಯಯನ ಪ್ರಶ್ನೆಗಳು]
a ನಿಶ್ಚಯವಾಗಿಯೂ, ತನಗಿಂತ ವೃದ್ಧರಾಗಿದ್ದವರಿಗೆ, ವಿಶೇಷವಾಗಿ ತಲೆನರೆತವರಿಗೆ ಮತ್ತು ಯಾಜಕರಿಗೆ ಸೂಕ್ತವಾದ ಗೌರವವನ್ನು ಯೇಸು ಪ್ರದರ್ಶಿಸುವನೆಂದು ನಂಬಲು ನಮಗೆ ಎಲ್ಲ ಕಾರಣಗಳೂ ಇವೆ.—ಹೋಲಿಸಿ ಯಾಜಕಕಾಂಡ 19:32; ಅ. ಕೃತ್ಯಗಳು 23:2-5.
ನಿಮಗೆ ಜ್ಞಾಪಕವಿದೆಯೊ?
◻ ಜನರ ದೊಡ್ಡ ಗುಂಪುಗಳು ಯೇಸುವಿನ ಕಡೆಗೆ ಏಕೆ ಗುಂಪುಕೂಡಿದವು?
◻ ಯೇಸು ಕೆಲವೊಮ್ಮೆ ಕೆಲವು ನಿಯಮಗಳ ಸಂಬಂಧದಲ್ಲಿ ಏಕೆ ಮಣಿದನು?
◻ ದೇವಾಲಯದ ಬೋಧಕರನ್ನು ಯೇಸು ಪ್ರಶ್ನಿಸಿದ ವಿಷಯದಿಂದ ನಾವು ಏನನ್ನು ಕಲಿಯಬಹುದು?
◻ ಮಕ್ಕಳೊಂದಿಗಿದ್ದ ಯೇಸುವಿನ ಸಂಬಂಧದಿಂದ ಯಾವ ಪಾಠಗಳನ್ನು ನಾವು ಕಲಿಯಬಲ್ಲೆವು?