ಲೋಕವನ್ನು ಬದಲಾಯಿಸಿದ ಆ ವಾರ
“ಯೆಹೋವನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!”—ಮತ್ತಾಯ 21:9, NW.
1. ಕಳೆದ ಆಗಸ್ಟ್ನ ಘಟನಾವಳಿಗಳು ಪರಸ್ಪರ ವ್ಯತ್ಯಾಸದ ಯಾವ ಎರಡು ಗುಂಪುಗಳ ಮೇಲೆ ಪ್ರಭಾವ ಬೀರಿದವು?
ಲೋಕವನ್ನು ನಡುಗಿಸಿದ ಮೂರು ಅತ್ಯಂತ ಸಂಕಟಮಯ ದಿನಗಳು.” ಆಗಸ್ಟ್ 1991ರಲ್ಲಿ, ಇಂಥ ವಾರ್ತಾ ಮಾಧ್ಯಮ ತಲೆಪಂಕ್ತಿಯು, ಕೆಲವೇ ದಿನಗಳಲ್ಲಿ ಲೋಕವು ಬುಡಮೇಲಾಗಿ ಹೋಗಸಾಧ್ಯವಿದೆ ಎಂಬ ನಿಜತ್ವವನ್ನು ಒತ್ತಿಹೇಳಿತು. ನಿಶ್ಚಯವಾಗಿಯೂ ಆಗಸ್ಟ್ನ ಆ ಕೊನೆಯ ದಿನಗಳು ಇಡೀ ಲೋಕಕ್ಕೆ ವಿಶೇಷ ಘಟನೆಗಳುಳ್ಳ ದಿನಗಳಾಗಿದ್ದವು ಮಾತ್ರವೇ ಅಲ್ಲ, “ಅವರು ಲೋಕದ ಭಾಗವಲ್ಲ” ಎಂದು ಯೇಸು ಯಾರ ಕುರಿತು ಹೇಳಿದ್ದನೋ ಆ ಗುಂಪಿಗೂ ಮಹತ್ತಾಗಿದ್ದವು. ಇಂದು ಈ ಗುಂಪು ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುತ್ತದೆ.
2, 3. (ಎ) ಯುದ್ಧಮೋಡಗಳ ಅಪಾಯವಿದ್ದಾಗ್ಯೂ ಝಾಗ್ರೆಬ್ನಲ್ಲಿ ಸ್ವಾತಂತ್ರ್ಯವು ಹೇಗೆ ಎತ್ತಿಹಿಡಿಯಲ್ಪಟ್ಟಿತು? (ಬಿ) ಬಲವಾದ ನಂಬಿಕೆಯು ಒಡೆಸ್ಸಾದಲ್ಲಿ ಹೇಗೆ ಪ್ರತಿಫಲವನ್ನು ಕೊಟ್ಟಿತು?
2 ಯುಗಸ್ಲಾವಿಯದಲ್ಲಿ ಎಂದೂ ಯೋಜಿಸಲಾದ ಯೆಹೋವನ ಸಾಕ್ಷಿಗಳ ಮೊತ್ತಮೊದಲ ಅಂತರ್ರಾಷ್ಟ್ರೀಯ ಅಧಿವೇಶನವು ಆಗಸ್ಟ್ 16 ರಿಂದ 18 ಕ್ಕೆ ನೇಮಿತವಾಗಿತ್ತು. ಸಂಭವಿಸಿದ ಪ್ರಕಾರ, ಅಂತರ್ ಯುದ್ಧದ ಅಂಚಿನಲ್ಲಿದ್ದ ಒಂದು ರಾಷ್ಟ್ರದೊಳಗೆ ಅದು ಯೆಹೋವನ ಜನರ ದೊಡ್ಡ ಅಧಿವೇಶನವೂ ಆಗಿ ಪರಿಣಮಿಸಲಿಕ್ಕಿತ್ತು. ಸ್ಥಳೀಕ ಸಾಕ್ಷಿಗಳು, ನೆರೆಹೊರೆಯ ದೇಶಗಳ ಸ್ವಯಂಸೇವಕರೊಂದಿಗೆ ಕೂಡಿ, ಝಾಗ್ರೆಬ್ನಲ್ಲಿ ಹಸ್ಕ್ ಗ್ರಾಡೆನ್ಸ್ಕಿ ಫುಟ್ಬಾಲ್ ಸ್ಟೇಡಿಯಂಗೆ ಪೂರಾ ಮುಖತಿದ್ದನ್ನು ಕೊಟ್ಟು ನವೀಕರಿಸಲು ಎರಡು ತಿಂಗಳ ತನಕ ದುಡಿದಿದ್ದರು. ಅದು ಠಾಕುಠೀಕಾಗಿದ್ದು, “ದೈವಿಕ ಸ್ವಾತಂತ್ರ್ಯ ಪ್ರಿಯರು” ಅಧಿವೇಶನಕ್ಕೆ ಆದರ್ಶ ಸ್ಥಳವಾಗಿತ್ತು. ಸಾವಿರಾರು ಮಂದಿ ಅಂತರ್ರಾಷ್ಟ್ರೀಯ ಪ್ರತಿನಿಧಿಗಳು ಹಾಜರಾಗಲು ಯೋಜಿಸಿದ್ದರು, ಅಮೆರಿಕದಿಂದಲೂ 600 ಮಂದಿ ಬರಲಿದ್ದರು. ಅಂತರ್ ಯುದ್ಧಗಳ ಅಪಾಯ ಸೂಚಕ ಮೋಡಗಳು ಬೆದರಿಕೆ ಹಾಕಿದಾಗ, ಸುದ್ದಿ ಹರಡಿತು: “ಅಮೆರಿಕನರು ಎಂದೂ ಬರಲಾರರು.” ಆದರೆ ಅವರು ಬಂದರು, ಇನ್ನೂ ಅನೇಕ ದೇಶಗಳ ಪ್ರತಿನಿಧಿಗಳೊಂದಿಗೆ. 10,000 ಹಾಜರಿಯನ್ನು ನಿರೀಕ್ಷಿಸಲಾಗಿತ್ತು, ಆದರೆ ಕೊನೆಯ ದಿನ 14,684 ಮಂದಿಯಿಂದ ಸ್ಟೇಡಿಯಂ ತುಂಬಿತ್ತು! ಅವರು ‘ಸಭೆಯಾಗಿ ಕೂಡಿಕೊಳ್ಳುವುದನ್ನು ಬಿಟ್ಟುಬಿಡದೆ’ ಇದದ್ದರಿಂದ ಎಲ್ಲರೂ ಹೇರಳವಾಗಿ ಆಶೀರ್ವದಿಸಲ್ಪಟ್ಟರು.—ಇಬ್ರಿಯ 10:25.
3 ಸಾಗ್ರೆಬ್ ಅಧಿವೇಶನವನ್ನು ಹಿಂಬಾಲಿಸಿ ಮೂರು ದಿನಗಳಲ್ಲಿ ರಶ್ಯಾದಲ್ಲಿ ಒಂದು ಅಯಶಸ್ವಿ ಕ್ರಾಂತಿಯು ನಡಿಸಲ್ಪಟ್ಟಿತು. ಆ ಸಮಯದಲ್ಲಿ ದೈವಿಕ ಸ್ವಾತಂತ್ರ್ಯ ಪ್ರಿಯರು ಯುಕ್ರೈನ್ನ ಒಡೆಸ್ಸಾದಲ್ಲಿ ತಮ್ಮ ಅಧಿವೇಶನಕ್ಕಾಗಿ ಕೊನೆಯ ತಯಾರಿಯನ್ನು ಮಾಡುತ್ತಿದ್ದರು. ಅಧಿವೇಶನವನ್ನು ನಡಿಸಲು ಸಾಧ್ಯವಾಗುವುದೋ? ಬಲವಾದ ನಂಬಿಕೆಯೊಂದಿಗೆ ಸಹೋದರರು ಸ್ಟೇಡಿಯಂನ ನವೀಕರಣಕ್ಕೆ ಕಟ್ಟಕಡೆಯ ಒಪ್ಪಗೆಲಸವನ್ನು ಕೊಟ್ಟರು ಮತ್ತು ಪ್ರತಿನಿಧಿಗಳು ಬರುತ್ತಲೇ ಇದ್ದರು. ಅದ್ಭುತಕರವೂ ಎಂಬಂತೆ ಕ್ರಾಂತಿ ಕೊನೆಗೊಂಡಿತು. ಒಂದು ಉಲ್ಲಾಸಕರ ಅಧಿವೇಶನವು 12,115 ಹಾಜರಿಯೊಂದಿಗೆ ಮತ್ತು ಹಾಜರಿಯ ಉಚ್ಛಾಂಕದ 16 ಪ್ರತಿಶತವಾದ 1,943—ದೀಕ್ಷಾಸ್ನಾನದೊಂದಿಗೆ ಆಗಸ್ಟ್ 24, 25 ರಂದು ಜರಗಿತು! ಈ ಹೊಸ ಸಾಕ್ಷಿಗಳು, ಮತ್ತು ಅವರೊಂದಿಗೆ ದೀರ್ಘಕಾಲದ ಸಮಗ್ರತೆ ಪಾಲಕರು ಸಹ, ಈ ಅಧಿವೇಶನಕ್ಕೆ ಯೆಹೋವನಲ್ಲಿ ಪೂರ್ಣ ಭರವಸವುಳ್ಳವರಾಗಿ ಬಂದದ್ದಕ್ಕಾಗಿ ಆನಂದಿತರಾದರು.—ಜ್ಞಾನೋಕ್ತಿ 3:5, 6.
4. ಯೇಸುವಿಂದ ಇಡಲ್ಪಟ್ಟ ಯಾವ ನಮೂನೆಯನ್ನು ಪೂರ್ವ ಯೂರೋಪಿನ ಸಾಕ್ಷಿಗಳು ಅನುಸರಿಸುತ್ತಾ ಇದ್ದಾರೆ?
4 ಈ ನಂಬಿಗಸ್ತ ಸಾಕ್ಷಿಗಳು ನಮ್ಮ ಮಾದರಿಯಾದ ಯೇಸು ಕ್ರಿಸ್ತನಿಂದ ಇಡಲ್ಪಟ್ಟ ನಮೂನೆಯನ್ನು ಅನುಸರಿಸುತ್ತಿದ್ದರು. ಯೆಹೂದ್ಯರು ಅವನನ್ನು ಕೊಲ್ಲಲು ಹುಡುಕುತ್ತಿದ್ದಾಗಲೂ, ಯೆಹೋವನು ಆಜ್ಞಾಪಿಸಿದ್ದ ಹಬ್ಬಗಳನ್ನು ಹಾಜರಾಗಲು ಅವನೆಂದೂ ತಪ್ಪಿರಲಿಲ್ಲ. ಅವನು ತನ್ನ ಕೊನೆಯ ಪಸ್ಕಕ್ಕಾಗಿ ಯೆರೂಸಲೇಮಿಗೆ ಬಂದಿರಲಾಗಿ, ಅವರು ದೇವಾಲಯದಲ್ಲಿ ಸುತ್ತಲೂ ನಿಂತುಕೊಂಡು, ಕೇಳಿದ್ದು: “ಅವನು ಹಬ್ಬಕ್ಕೆ ಬಾರದೆ ಇದ್ದಾನೋ? ನಿಮಗೆ ಹೇಗೆ ಕಾಣುತ್ತದೆ?” (ಯೋಹಾನ 11:56) ಆದರೆ ಅವನು ಅವಶ್ಯ ಬಂದನು. ಇದು ಮಾನವ ಐತಿಹಾಸಿಕ ಪಥದ ಒಂದು ವಿಪರ್ಯಸತ್ತೆಯಲ್ಲಿ ಪರಮಾವಧಿಯನ್ನು ತಂದ ಒಂದು ವಾರಕ್ಕಾಗಿ ದಾರಿಯನ್ನು ಸಿದ್ಧಮಾಡಿತು. ಯೆಹೂದಿ ಕ್ಯಾಲೆಂಡರ್ನಲ್ಲಿ—ನೈಸಾನ್ 8ರಿಂದ 14ರ ತನಕದ—ಆ ವಾರದ ಕೆಲವು ಅತ್ಯುಜಲ್ವ ಭಾಗಗಳಲ್ಲಿ ಕೆಲವನ್ನು ನಾವೀಗ ಪುನರ್ವಿಮರ್ಶಿಸೋಣವೇ?
ನೈಸಾನ್ 8
5. ಸಾ.ಶ. 33 ರ ನೈಸಾನ್ 8 ರಲ್ಲಿ ಬೇಥಾನ್ಯಕ್ಕೆ ಪ್ರಯಾಣಿಸುತ್ತಿದ್ದಾಗ ಯೇಸುವಿಗೆ ಯಾವುದರ ಅರಿವಿತ್ತು?
5 ಈ ದಿನದಲ್ಲಿ ಯೇಸು ಮತ್ತು ಅವನ ಶಿಷ್ಯರು ಬೇಥಾನ್ಯಕ್ಕೆ ಆಗಮಿಸುತ್ತಾರೆ. ಇಲ್ಲಿ ಆತನು ಇತ್ತೀಚೆಗೆ ಯಾರನ್ನು ಸತ್ತವರೊಳಗಿಂದ ಎಬ್ಬಿಸಿದ್ದನೋ ಆ ತನ್ನ ಪ್ರಿಯ ಮಿತ್ರನಾದ ಲಾಜರನ ಮನೆಯಲ್ಲಿ ಆರು ರಾತ್ರಿಗಳನ್ನು ಕಳೆಯುತ್ತಾನೆ. ಬೇಥಾನ್ಯವು ಯೆರೂಸಲೇಮಿಗೆ ಸಮೀಪದಲ್ಲೇ ಇದೆ. ಖಾಸಗಿಯಾಗಿ ಯೇಸು ತನ್ನ ಶಿಷ್ಯರಿಗೆ ಆವಾಗಲೇ ಈ ಸಲಹೆಯನ್ನು ಕೊಟ್ಟಿದ್ದನು: “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯ ಕುಮಾರನನ್ನು ಮಹಾ ಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. ಅವರು ಅವನಿಗೆ ಮರಣ ದಂಡನೆಯನ್ನು ವಿಧಿಸಿ ಅವನನ್ನು ಅಪಹಾಸ್ಯ ಮಾಡುವುದಕ್ಕೂ ಕೊರಡೆಗಳಿಂದ ಹೊಡೆಯುವುದಕ್ಕೂ ಕಂಭಕ್ಕೆ ಹಾಕುವುದಕ್ಕೂ ಅನ್ಯರ ಕೈಗೆ ಒಪ್ಪಿಸುವರು; ಅವನು ಸತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು.” (ಮತ್ತಾಯ 20:18, 19) ತನಗೆ ಈಗ ಯಾತನಾಮಯವಾದ ಪರೀಕ್ಷೆಗಳನ್ನು ಎದುರಿಸಲಿಕ್ಕಿದೆ ಎಂದು ಯೇಸುವಿಗೆ ಪೂರ್ಣ ಅರಿವಿತ್ತು. ಆದರೂ, ಆ ಶ್ರೇಷ್ಠ ಪರೀಕ್ಷೆಯು ಆಗಮಿಸುತ್ತಾ ಇರುವಾಗಲೂ, ಆತನು ತನ್ನ ಸಹೋದರರ ಸೇವೆಯನ್ನು ಪ್ರೀತಿಯಲ್ಲಿ ನಡಿಸಲು ಪ್ರತಿಯೊಂದು ಪ್ರಯತ್ನವನ್ನು ಮಾಡುತ್ತಾನೆ. “ಕ್ರಿಸ್ತ ಯೇಸುವಿನಲ್ಲಿದ್ದಂಥ ಈ ಮನಸ್ಸು” ನಮ್ಮಲ್ಲಿಯೂ ಯಾವಾಗಲೂ ಇರುವಂತಾಗಲಿ.—ಫಿಲಿಪ್ಪಿ 2:1, 5; 1 ಯೋಹಾನ 3:16.
ನೈಸಾನ್ 9
6. ನೈಸಾನ್ 9 ರ ಸಂಜೆ ಮರಿಯಳು ಏನು ಮಾಡಿದಳು, ಮತ್ತು ಯೇಸು ಯೂದನಿಗೆ ಏನು ಹೇಳಿದನು?
6 ನೈಸಾನ್ 9 ಪ್ರಾರಂಭಿಸಿದಾಗ, ಹೊತ್ತು ಕಂತಿದ ಮೇಲೆ, ಯೇಸು ಹಿಂದೆ ಕುಷ್ಠ ರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಒಂದು ಊಟದಲ್ಲಿ ಆನಂದಿಸುತ್ತಾನೆ. ಇಲ್ಲಿಯೇ ಲಾಜರನ ಅಕ್ಕ ಮರಿಯಳು ಬೆಲೆಯುಳ್ಳ ಸುಗಂಧ ತೈಲವನ್ನು ಯೇಸುವಿನ ತಲೆಗೂ ಪಾದಕ್ಕೂ ಸುರಿದು ಅವನ ಪಾದಗಳನ್ನು ದೀನತೆಯಿಂದ ತನ್ನ ತಲೇಗೂದಲಿನಿಂದ ಒರಸಿದಳ್ದು. ಯೂದನು ಆಕ್ಷೇಪಿಸಿದಾಗ, ಯೇಸು ಅಂದದ್ದು: “ಈಕೆಯನ್ನು ಬಿಡು; ನನ್ನನ್ನು ಹೂಣಿಡುವ ದಿನದ ನೋಟದಲ್ಲಿ ಅವಳಿದನ್ನು ನಡಿಸುತ್ತಿರಬಹುದು.” ಅನೇಕ ಮಂದಿ ಯೆಹೂದ್ಯರು ಬೇಥಾನ್ಯಕ್ಕೆ ಹೋಗಿ ಯೇಸುವನ್ನು ನಂಬುವವರಾದರು ಎಂದು ಕೇಳಿ, ಮಹಾ ಯಾಜಕರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲಲು ಹಂಚಿಕೆ ಹೂಡಿದರು.—ಯೋಹಾನ 12:1-7.
7. ನೈಸಾನ್ 9 ರ ಬೆಳಿಗ್ಗೆ, ಯೆಹೋವನ ನಾಮವು ಹೇಗೆ ಗೌರವಿಸಲ್ಪಟ್ಟಿತು ಮತ್ತು ಯೇಸು ಏನನ್ನು ಮುಂತಿಳಿಸಿದನು?
7 ಯೇಸು ಬೆಳಿಗ್ಗೆ ಬೇಗ ಎದ್ದು ಯೆರೂಸಲೇಮಿಗೆ ತನ್ನ ಪ್ರಯಾಣವನ್ನು ಆರಂಭಿಸಿದನು. ಜನಸಮೂಹವು ಖರ್ಜೂರದ ಗರಿಗಳನ್ನು ಬೀಸುತ್ತಾ ಅವನನ್ನು ಎದುರುಗೊಳ್ಳುವುದಕ್ಕೆ ಹೊರಗೆ ಬಂದು, “ಜಯ, ಯೆಹೋವನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಆಶೀರ್ವಾದ” ಎಂದು ಆರ್ಭಟಿಸಿದರು. ಅನಂತರ ಯೇಸು ಒಂದು ಕತ್ತೇಮರಿಯ ಮೇಲೆ ಕೂತುಕೊಂಡು ಪಟ್ಟಣದ ಕಡೆಗೆ ಸವಾರಿ ಮಾಡಿದ ಮೂಲಕ ಜೆಕರ್ಯ 9:9 ರ ಪ್ರವಾದನೆಯನ್ನು ನೆರವೇರಿಸಿದನು. ಅವನು ಯೆರೂಸಲೇಮಿಗೆ ಹತ್ತಿರವಾದಾಗ, ರೋಮನರು ಅದಕ್ಕೆ ಚೂಪಾದ ಗೂಟಗಳಿಂದ ಮುತ್ತಿಗೆ ಹಾಕಿ ಅದನ್ನು ಪೂರ್ಣವಾಗಿ ನಾಶಮಾಡುವರೆಂದು ಮುಂತಿಳಿಸುತ್ತಾ, ಅಳುತ್ತಾನೆ. ಆ ಪ್ರವಾದನೆಯು 37 ವರ್ಷಗಳ ಅನಂತರ ಗಮನಾರ್ಹವಾಗಿ ನೆರವೇರಲಿಕ್ಕಿತ್ತು. (ಪುರಾತನ ಯೆರೂಸಲೇಮಿನ ನಮೂನೆಯಲ್ಲಿ ಧರ್ಮಭ್ರಷ್ಟಗೊಂಡ ಕ್ರೈಸ್ತಪ್ರಪಂಚಕ್ಕೆ ಸಹಾ ಇದು ಕೇಡನ್ನು ಸೂಚಿಸುತ್ತದೆ.) ಯೆಹೂದಿ ಅಧಿಪತಿಗಳಿಗೆ ಯೇಸು ಅವರ ಅರಸನಾಗುವುದು ಬೇಡವಿತ್ತು. ಕೋಪದಿಂದ ಅವರು ಉದ್ಗರಿಸುವುದು: “ಲೋಕವೆಲ್ಲಾ ಅವನ ಹಿಂದೆ ಹೋಯಿತಲ್ಲಾ.”—ಯೋಹಾನ 12:13, 19.
ನೈಸಾನ್ 10
8. ನೈಸಾನ್ 10 ರಂದು, ಯೇಸು ಯೆಹೋವನ ಪ್ರಾರ್ಥನಾಲಯಕ್ಕೆ ಆಳವಾದ ಗೌರವವನ್ನು ತೋರಿಸಿದ್ದು ಹೇಗೆ, ಮತ್ತು ಏನು ಹಿಂಬಾಲಿಸಿತು?
8 ಯೇಸು ಪುನಃ ದೇವಾಲಯವನ್ನು ಸಂದರ್ಶಿಸುತ್ತಾನೆ. ಎರಡನೆಯ ಸಲ ಅವನು ಲೋಭವುಳ್ಳ ವ್ಯಾಪಾರಸ್ಥರನ್ನು ಮತ್ತು ಚಿನಿವಾರರನ್ನು ದೇವಾಲಯದೊಳಗಿಂದ ಹೊರಗಟ್ಟುತ್ತಾನೆ. ವ್ಯಾಪಾರೋದ್ಯಮವು—“ಹಣದಾಸೆಯು”—ಯೆಹೋವನ ಪ್ರಾರ್ಥನಾಲಯದಲ್ಲಿ ಆಡಳಿತ ವಹಿಸಬಾರದು! (1 ತಿಮೊಥಿ 6:9, 10) ಯೇಸು ಬೇಗನೇ ಸಾಯಲಿಕ್ಕಿದ್ದನು. ಇದನ್ನು ದೃಷ್ಟಾಂತಿಸುವುದಕ್ಕಾಗಿ ಒಂದು ಕಾಳನ್ನು ನೆಡುವುದರ ಕುರಿತು ಮಾತಾಡುತ್ತಾನೆ. ಮೂಲ ಕಾಳು ಸಾಯುತ್ತದೆ. ಆದರೆ ಅದು ಕುಡಿಯೊಡೆದು ಸಸಿಯಾಗಿ ಬಹಳ ಧಾನ್ಯವನ್ನು ಫಲಿಸುತ್ತದೆ. ತದ್ರೀತಿಯಲ್ಲಿ, ಯೇಸುವಿನ ಮರಣವು ಅವನಲ್ಲಿ ನಂಬಿಕೆಯನ್ನಿಡುವ ಜನಸಮೂಹಕ್ಕೆ ನಿತ್ಯಜೀವವಾಗಿ ಪರಿಣಮಿಸುವುದು. ಸಮೀಪಿಸುತ್ತಿರುವ ತನ್ನ ಮರಣದ ಕುರಿತು ವ್ಯಥಿತನಾಗಿದ್ದರೂ, ತನ್ನ ತಂದೆಯ ನಾಮವು ಆ ಮೂಲಕ ಮಹಿಮೆ ಹೊಂದುವಂತೆ ಯೇಸು ಪ್ರಾರ್ಥಿಸುತ್ತಾನೆ. ಪ್ರತಿಕ್ರಿಯೆಯಲ್ಲಿ, ಪರಲೋಕದಿಂದ ದೇವರ ವಾಣಿಯು ನೆರೆದಿದ್ದ ಎಲ್ಲರಿಗೆ ಕೇಳಿಸುವಂತೆ ಗುಡುಗಿದ್ದು: “ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು.”—ಯೋಹಾನ 12:27, 28.
ನೈಸಾನ್ 11—ಚಟುವಟಿಕೆಯ ದಿನ
9. (ಎ) ನೈಸಾನ್ 11 ರ ದಿನದಾರಂಭದಲ್ಲಿ, ಧರ್ಮಭ್ರಷ್ಟ ಯೆಹೂದ್ಯರನ್ನು ಖಂಡಿಸುವುದರಲ್ಲಿ ಯೇಸು ದೃಷ್ಟಾಂತಗಳನ್ನು ಉಪಯೋಗಿಸಿದ್ದು ಹೇಗೆ? (ಬಿ) ಯೇಸುವಿನ ಸಾಮ್ಯಕ್ಕೆ ಹೊಂದಿಕೆಯಲ್ಲಿ, ಯಾರು ಒಂದು ಮಹಾ ಸಂದರ್ಭವನ್ನು ಕಳಕೊಂಡರು?
9 ಯೇಸು ಮತ್ತು ಅವನ ಶಿಷ್ಯರು ಒಂದು ಪೂರ್ಣ ದಿನದ ಚಟುವಟಿಕೆಗಾಗಿ ಪುನಃ ಬೇಥಾನ್ಯದಿಂದ ಹೊರಡುತ್ತಾರೆ. ಧರ್ಮಭ್ರಷ್ಟ ಯೆಹೂದ್ಯರು ಏಕೆ ಖಂಡಿಸಲ್ಪಡುತ್ತಾರೆಂದು ತೋರಿಸುವುದಕ್ಕೆ ಯೇಸು ಮೂರು ದೃಷ್ಟಾಂತಗಳನ್ನು ಉಪಯೋಗಿಸುತ್ತಾನೆ. ದಾರಿಯಲ್ಲಿ, ಫಲಕೊಡದ ಒಂದು ಅಂಜೂರದ ಮರವನ್ನು ಅವನು ಶಪಿಸುತ್ತಾನೆ ಮತ್ತು ಹೀಗೆ ಫಲಕೊಡದ, ಅಪನಂಬಿಗಸ್ತ ಯೆಹೂದಿ ಜನಾಂಗವನ್ನು ಚಿತ್ರಿಸುತ್ತಾನೆ. ದೇವಾಲಯವನ್ನು ಪ್ರವೇಶಿಸುತ್ತಾ, ಒಬ್ಬ ಯಜಮಾನನ ದ್ರಾಕ್ಷೇ ತೋಟದ ಅಪಾತ್ರ ಒಕ್ಕಲಿಗರು ಕೊನೆಗೆ ಯಜಮಾನನ ಮಗ ಮತ್ತು ಬಾಧ್ಯಸ್ಥನನ್ನೂ ಹೇಗೆ ಕೊಲ್ಲುವರು ಎಂಬದನ್ನು ವರ್ಣಿಸುತ್ತಾನೆ. ಹೀಗೆ, ಯೇಸುವನ್ನು ಕೊಲ್ಲುವುದರಲ್ಲಿ ಪರಮಾವಧಿಗೇರಲಿದ್ದ, ಯೆಹೋವನ ನೆಚ್ಚಿಗೆಗೆ ಯೆಹೂದ್ಯರು ಗೈದ ವಿದ್ರೋಹವನ್ನು ಚಿತ್ರಿಸುತ್ತಾನೆ. ಒಬ್ಬ ಅರಸನಿಂದ—ಯೆಹೋವನಿಂದ—ಏರ್ಪಡಿಸಲ್ಪಟ್ಟ ಒಂದು ಮದುವೆಯೂಟವನ್ನು ಅನಂತರ ಯೇಸು ವರ್ಣಿಸುತ್ತಾನೆ. ಅದಕ್ಕೆ ಆಮಂತ್ರಿತರಾದ ಅತಿಥಿಗಳು (ಯೆಹೂದ್ಯರು) ಸ್ವಾರ್ಥದಿಂದ ಅದಕ್ಕೆ ಹಾಜರಾಗಲು ತಪ್ಪಿಸಿಕೊಳ್ಳುತ್ತಾರೆ. ಆದಕಾರಣ, ಆಮಂತ್ರಣವು ಹೊರಗಿನವರಿಗೆ—ಅನ್ಯರಿಗೆ ನೀಡಲ್ಪಡುತ್ತದೆ ಮತ್ತು ಅವರಲ್ಲಿ ಕೆಲವರು ಪ್ರತಿಕ್ರಿಯೆ ತೋರಿಸುತ್ತಾರೆ. ಆದರೆ ಮದುವೇ ಬಟ್ಟೆಯನ್ನು ಹಾಕಿಕೊಳ್ಳದ ಒಬ್ಬ ಮನುಷ್ಯನನ್ನು ಹೊರಕ್ಕೆ ನೂಕಲಾಗುತ್ತದೆ. ಅವನು ಕ್ರೈಸ್ತ ಪ್ರಪಂಚದ ಖೋಟಾ ಕ್ರೈಸ್ತರನ್ನು ಪ್ರತಿನಿಧಿಸುತ್ತಾನೆ. ಯೇಸುವಿನ ದಿನಗಳ ಅನೇಕ ಯೆಹೂದ್ಯರು ಆಮಂತ್ರಿಸಲ್ಪಟ್ಟಿದ್ದರು, ಆದರೆ ಸ್ವರ್ಗೀಯ ರಾಜ್ಯಕ್ಕೆ ಬಾಧ್ಯರಾದ 1,44,000 ಮುದ್ರೆ ಒತ್ತಿಸಲ್ಪಟ್ಟವರಲ್ಲಿ ಜತೆಗೂಡಲು “ಆಯಲ್ಪಟವ್ಟರು ಸ್ವಲ್ಪ ಜನ.”—ಮತ್ತಾಯ 22:14; ಪ್ರಕಟನೆ 7:4.
10-12. (ಎ) ಯೆಹೂದಿ ವೈದಿಕರಿಗೆ ಯೇಸು ಛೀಮೋರೆ ಹಾಕಿದ್ದು ಏಕೆ, ಮತ್ತು ಆ ಕಪಟಿಗಳ ಮೇಲೆ ಯಾವ ಕಟು ಅಪವಾದವನ್ನು ಆತನು ಹೊರಿಸಿದನು? (ಬಿ) ಧರ್ಮಭ್ರಷ್ಟ ಯೆಹೂದ್ಯರ ಮೇಲೆ ಕಟ್ಟಕಡೆಗೆ ತೀರ್ಪು ನಿರ್ವಹಿಸಲ್ಪಟ್ಟದ್ದು ಹೇಗೆ?
10 ಕಪಟಿಗಳಾದ ಯೆಹೂದಿ ವೈದಿಕರು ಯೇಸುವನ್ನು ಹಿಡಿಯಲು ಒಂದು ಸಂಧಿಯನ್ನು ಹುಡುಕುತ್ತಾರೆ, ಆದರೆ ಅವರ ಹಲವಾರು ಕೃತ್ರಿಮ ಪ್ರಶ್ನೆಗಳನ್ನು ಅವನು ಉತ್ತರಿಸಿ ಜನರ ಮುಂದೆಯೇ ಅವರನ್ನು ದಿಗ್ಭಮ್ರೆಗೊಳಿಸುತ್ತಾನೆ. ಓ, ಆ ಸ್ವ-ಮತಭ್ರಷ್ಟ ಧಾರ್ಮಿಕ ಯೆಹೂದ್ಯರೇ! ಎಷ್ಟು ನಿರ್ದಾಕ್ಷಿಣ್ಯವಾಗಿ ಯೇಸು ಅವರಿಗೆ ಛೀಮೋರೆ ಹಾಕುತ್ತಾನೆ! ಅವರು ಪ್ರಧಾನ ಸ್ಥಾನಕ್ಕಾಗಿ, ಪ್ರತ್ಯೇಕತರದ ಉಡುಪುಗಳಿಗಾಗಿ, ಘನತೆವೆತ್ತ ಬಿರುದುಗಳಾದ “ರಬ್ಬೀ” ಮತ್ತು “ಫಾದರ್” ಮುಂತಾದವುಗಳಿಗಾಗಿ, ನಮ್ಮ ದಿನಗಳ ಅನೇಕ ವೈದಿಕರಂತೆಯೇ ಹಂಬಲಿಸಿದ್ದರು. ಯೇಸು ಸೂತ್ರವನ್ನು ನಮೂದಿಸಿದನು: “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”—ಮತ್ತಾಯ 23:12.
11 ಯೇಸು ಆ ಧಾರ್ಮಿಕ ಮುಖಂಡರನ್ನು ಕ್ರೋಧದಿಂದ ಖಂಡಿಸುತ್ತಾನೆ. ಅವರನ್ನು ಕುರುಡ ಮಾರ್ಗದರ್ಶಕರೆಂದು ಮತ್ತು ಕಪಟಿಗಳೆಂದು ಕರೆಯುತ್ತಾ, ಏಳು ಸಾರಿ “ನಿಮಗೆ ಅಯ್ಯೋ!” ಎಂದು ಉದ್ಗರಿಸುತ್ತಾನೆ. ಮತ್ತು ಪ್ರತಿ ಸಾರಿ ಖಂಡನೆಗಾಗಿ ಸ್ಪಷ್ಟ ಕಾರಣವನ್ನು ಕೊಡುತ್ತಾನೆ. ಅವರು ಸ್ವರ್ಗೀಯ ರಾಜ್ಯಕ್ಕೆ ಪ್ರವೇಶಿಸುವ ಬಾಗಲನ್ನು ಮುಚ್ಚುತ್ತಾರೆ. ಅವರು ಒಬ್ಬ ಮತಾಂತರಿಯನ್ನು ಪಾಶದೊಳಗೆ ಹಾಕುವಾಗ, ಅವನು ಎರಡು ಪಾಲಷ್ಟು ಹೆಚ್ಚು ಗೆಹೆನ್ನಾಪಾತ್ರನಾಗಿ ಪರಿಣಮಿಸುತ್ತಾನೆ, ಯಾಕಂದರೆ ಅವನು ಆವಾಗಲೇ ಹಿಂದಣ ಘೋರ ಪಾಪದಿಂದಾಗಿ ಇಲ್ಲವೇ ಮತಭ್ರಾಂತಿಯಿಂದಾಗಿ ನಾಶನದ ಹಾದಿಯಲ್ಲಿರುವ ಸಂಭವನೀಯತೆಯಿಂದಾಗಿ. “ಹುಚ್ಚರೇ, ಕುರುಡರೇ” ಎಂದು ಘೋಷಿಸುತ್ತಾನೆ ಯೇಸು, ದೇವಾಲಯದಲ್ಲಿ ಶುದ್ಧ ಭಕ್ತಿಯನ್ನು ಕಾಪಾಡುವ ಬದಲಿಗೆ ಫರಿಸಾಯರು ಅದರ ಚಿನ್ನದ ಮೇಲೆ ತಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತಾರೆ. ಮರುಗ, ಸೋಪು, ಜೀರಿಗೆಗಳ ದಶಮಾಂಶವನ್ನು ಅಳುಪಿನಿಂದ ಕೊಡುವಾಗ ನ್ಯಾಯ, ಕರುಣೆ, ನಂಬಿಕೆಯನ್ನಾದರೋ ದುರ್ಲಕ್ಷಿಸುತ್ತಾರೆ, ಧರ್ಮಶಾಸ್ತ್ರದ ಗೌರವಾರ್ಹ ವಿಷಯಗಳನ್ನಾದರೋ ದುರ್ಲಕ್ಷಿಸುತ್ತಾರೆ. ವಿಧಿವಿಹಿತವಾದ ಶುಚಿಮಾಡುವಿಕೆಯು ಅವರ ಅಂತರ್ಯದ ಮಲಿನತೆಯನ್ನು ತೆಗೆದುಬಿಡಲಾರದು—ಹತ್ತರಿಸಿದ ಯೇಸುವಿನ ಯಜ್ಞದಲ್ಲಿ ನಂಬಿಕೆಯಿಂದ ಶುದ್ಧೀಕರಿಸಲ್ಪಟ್ಟ ಹೃದಯವು ಮಾತ್ರವೇ ಅದನ್ನು ಪೂರೈಸಬಲ್ಲದು. ಅವರ ಅಂತರ್ಯದ ಕಪಟತನ ಮತ್ತು ಅಧರ್ಮವು ಅವರ “ಸುಣ್ಣಾ ಹಚ್ಚಿದ” ಬಾಹ್ಯ ಸ್ವರೂಪವನ್ನು ಸುಳ್ಳುಮಾಡುತ್ತದೆ.—ಮತ್ತಾಯ 23:13-29.
12 ಹೌದು, ಪುರಾತನ “ಪ್ರವಾದಿಗಳನ್ನು ಕೊಂದವರ ಮಕ್ಕಳಾದ” ಫರಿಸಾಯರಿಗೆ ಅದು ನಿಶ್ಚಯವಾಗಿಯೂ ಗೋಳುಕರೆಯಾಗಿತ್ತು! ಹಾವುಗಳು, ಸರ್ಪಜಾತಿಯವರೇ ಆಗಿದ್ದ ಅವರು ಗೆಹೆನ್ನಾ ದಂಡನೆಗೆ ಪಾತ್ರರಾಗಿದ್ದರು, ಯಾಕಂದರೆ ಅವರು ಯೇಸುವನ್ನು ಮಾತ್ರವಲ್ಲ ಆತನು ಕಳುಹಿಸುವವರನ್ನೂ ಕೊಲಲ್ಲಿಕ್ಕಿದ್ದರು. “ಈ ಸಂತತಿಯವರ ಮೇಲೆ” ನಿರ್ವಹಿಸಲ್ಪಡುವ ಒಂದು ತೀರ್ಪು ಇದಾಗಿದೆ. ಇದರ ನೆರವೇರಿಕೆಯಲ್ಲಿ, 37 ವರ್ಷಗಳ ಅನಂತರ ಯೆರೂಸಲೇಮು ಪೂರ್ಣವಾಗಿ ನಾಶವಾಗಿ ಹೋಯಿತು.—ಮತ್ತಾಯ 23:30-36.
13. ದೇವಾಲಯ ಕಾಣಿಕೆಗಳ ಕುರಿತಾದ ಯೇಸುವಿನ ಹೇಳಿಕೆಗಳು ಇಂದು ಯಾವ ಪರಿಸ್ಥಿತಿಗಳ ಮೇಲೆ ಪ್ರತಿಬಿಂಬಿಸುತ್ತವೆ?
13 ದೇವಾಲಯವನ್ನು ಬಿಟ್ಟುಹೋಗುವ ಮೊದಲು, ಯೇಸು ಬೊಕ್ಕಸದೊಳಗೆ ಎರಡು ಕಾಸುಗಳನ್ನು ಹಾಕಿದ—“ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟ”—ಒಬ್ಬ ಬಡ ವಿಧವೆಯ ಕುರಿತು ಹೊಗಳಿ ಮಾತಾಡಿದನು. ದುರಾಶೆಯುಳ್ಳ ಐಶ್ವರ್ಯವಂತರು ಹಾಕುತ್ತಿದ್ದ ನಾಮಮಾತ್ರದ ಕಾಣಿಕೆಗೆ ಇದೆಷ್ಟು ವೈದೃಶ್ಯವಾಗಿತ್ತು! ಆ ಬಡ ವಿಧವೆಯಂತೆ, ಇಂದು ಯೆಹೋವನ ಸಾಕ್ಷಿಗಳು ಲೋಕವ್ಯಾಪಕ ರಾಜ್ಯ ಕಾರ್ಯದ ಬೆಂಬಲಕ್ಕಾಗಿ ಮತ್ತು ಪ್ರವರ್ಧನೆಗಾಗಿ ಸಮಯ, ಶಕ್ತಿ ಮತ್ತು ಹಣವನ್ನು ಸಿದ್ಧಮನಸ್ಸಿನಿಂದ ತ್ಯಾಗಮಾಡುತ್ತಾರೆ. ತಮ್ಮ ಹಿಂಡನ್ನು ದೋಚಿ ವೈಯಕ್ತಿಕ ಐಶ್ವರ್ಯದ ಮಹಲುಗಳನ್ನು ಕಟ್ಟುತ್ತಿರುವ ಆ ಅನೈತಿಕ ಟೀವೀ ಸೌವಾರ್ತಿಕರಿಗಿಂತ ಇದೆಷ್ಟು ತೀರಾ ಬೇರೆಯಾಗಿದೆ!—ಲೂಕ 20:45–21:4.
ನೈಸಾನ್ 11 ಕೊನೆಗೊಳ್ಳುತ್ತಾ ಬರುವಾಗ
14. ಯೇಸು ಯಾವ ದುಃಖವನ್ನು ವ್ಯಕ್ತಪಡಿಸಿದನು ಮತ್ತು ತನ್ನ ಶಿಷ್ಯರ ಹೆಚ್ಚಿನ ಪ್ರಶ್ನೆಯನ್ನು ಅವನು ಉತ್ತರಿಸಿದ್ದು ಹೇಗೆ?
14 ಯೇಸು ಯೆರೂಸಲೇಮಿಗಾಗಿ ಮತ್ತು ಅದರ ಜನರಿಗಾಗಿ ಅಳುತ್ತಾ, ಘೋಷಿಸಿದ್ದು: “ಯೆಹೋವನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ.” (ಮತ್ತಾಯ 23:37-39) ತದನಂತರ ಶಿಷ್ಯರು ಇದರ ಕುರಿತು ಕೇಳುತ್ತಾರೆ, ಮತ್ತು ಉತ್ತರವಾಗಿ ಯೇಸು ರಾಜ್ಯಾಧಿಕಾರದಲ್ಲಿ ತನ್ನ ಸಾನಿಧ್ಯತೆಯನ್ನು ಮತ್ತು ಸೈತಾನನ ದುಷ್ಟ ವಿಷಯ ವ್ಯವಸ್ಥೆಯ ಸಮಾಪ್ತಿಯ ಅಂತ್ಯವನ್ನು ಗುರುತಿಸುವ ಚಿಹ್ನೆಯನ್ನು ವಿವರಿಸುತ್ತಾನೆ.—ಮತ್ತಾಯ 24:1–25:46; ಮಾರ್ಕ 13:1-37; ಲೂಕ 21:5-36.
15. ತನ್ನ ತೀರ್ಪಿನ ಸಾನಿಧ್ಯದ ಕುರಿತು ಯೇಸು ಯಾವ ಚಿಹ್ನೆಯನ್ನು ಕೊಟ್ಟನು, ಅದು ಎಂದಿನಿಂದ ನೆರವೇರುತ್ತಲಿದೆ?
15 ಬೇಗನೇ ಆಲಯದ ಮೇಲೆ ನಿರ್ವಹಿಸಲ್ಪಡಲಿದ್ದ ಯೆಹೋವನ ತೀರ್ಪಿಗೆ ನಿರ್ದೇಶಿಸುತ್ತಾ, ಅದು ಇಡೀ ವಿಷಯ ವ್ಯವಸ್ಥೆಯ ಸಮಾಪ್ತಿಯಲ್ಲಿ ಬರಲಿರುವ ಆಪತ್ಕಾರಕ ಘಟನಾವಳಿಗೆ ಚಿತ್ರರೂಪವಾಗಿದೆ ಎಂದು ಯೇಸು ಸೂಚಿಸುತ್ತಾನೆ. ಆತನ ಸಾನಿಧ್ಯದ ಆ ಸಮಯವು, ಅಭೂತಪೂರ್ವ ಪ್ರಮಾಣದ ಹೋರಾಟಗಳ ಪ್ರಾರಂಭದಿಂದ ಹಿಡಿದು ಬರಗಳು, ಭೂಕಂಪಗಳು, ಸೋಂಕುರೋಗಗಳು, ಪ್ರೀತಿರಾಹಿತ್ಯ ಮತ್ತು ನಿಯಮರಾಹಿತ್ಯದಿಂದಲೂ ಗುರುತಿಸಲ್ಪಡುವುವು. 1914 ರಿಂದ ಹಿಡಿದು ನಮ್ಮ 20 ನೆಯ ಶತಮಾನದ ಲೋಕದ ವಿಷಯದಲ್ಲಿ ಇದೆಷ್ಟು ಸತ್ಯವಾಗಿರುತ್ತದೆ!
16, 17. ಯಾವ ಲೋಕ ವಿಕಸನಗಳನ್ನು ಯೇಸು ವಿವರಿಸಿದನು, ಮತ್ತು ಕ್ರೈಸ್ತರು ಆ ಪ್ರವಾದನೆಗೆ ಹೇಗೆ ಪ್ರತಿಕ್ರಿಯೆ ತೋರಿಸಬೇಕು?
16 “ಲೋಕಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಿರದ ಮತ್ತು ಇನ್ನು ಮೇಲೆಯೂ ಆಗದ ಮಹಾ ಮಹಾಸಂಕಟ”ದಲ್ಲಿ ಒಂದು ಪರಮಾವಧಿಯು ಮುಟ್ಟಲ್ಪಡುವುದು. ಇದು ನೋಹನ ದಿನಗಳ ಜಲಪ್ರಲಯದಷ್ಟು ವಿಪತ್ಕಾರಕವಾಗಿರಲಾಗಿ, ಐಹಿಕ ವಿಷಯಗಳ ಬೆನ್ನಟ್ಟುವಿಕೆಗಳಲ್ಲಿ ತಲ್ಲೀನರಾಗಿರುವ ವಿರುದ್ಧ ಯೇಸು ಎಚ್ಚರಿಸುತ್ತಾನೆ. “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದುದರಿಂದ ಎಚ್ಚರವಾಗಿರ್ರಿ.” ಆ ಎಚ್ಚರಿಕೆಯನ್ನು ನೀಡಲು ಮತ್ತು ಆತನ ಸಾನಿಧ್ಯದ ಈ ದಿನಕ್ಕಾಗಿ ಹೇರಳವಾದ ಆತ್ಮಿಕ ಆಹಾರವನ್ನು ಒದಗಿಸಲಿಕ್ಕಾಗಿ ಯಜಮಾನನು ಒಂದು ಅಭಿಷಿಕ್ತ “ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು” ನೇಮಿಸಿರುವುದಕ್ಕಾಗಿ ನಾವೆಷ್ಟು ಸಂತೋಷದಿಂದಿರಬಲ್ಲೆವು!—ಮತ್ತಾಯ 24:21, 42, 45-47.
17 ನಮ್ಮ ಇಪ್ಪತ್ತನೆಯ ಶತಮಾನದಲ್ಲಿ, “ಭೂಮಿಯ ಮೇಲೆ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವುದು. . . . ಆಕಾಶದ ಶಕ್ತಿಗಳು ಕದಲುವುದರಿಂದ ಮನುಷ್ಯರು ಭಯ ಹಿಡಿದವರಾಗಿ ಲೋಕಕ್ಕೆ ಏನು ಬರುವುದೋ ಎಂದು ಎದುರುನೋಡುತ್ತಾ ಭಯದಿಂದ ಬವಳಿಬರುವಂತೆ” ಇರುವುದನ್ನು ನಾವು ಕಂಡಿದ್ದೇವೆ. ಆದರೆ ಯೇಸು ನಮಗೆ ಹೇಳುವುದು: “ಇವೆಲ್ಲಾ ಸಂಭವಿಸುವುದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ, ಯಾಕಂದರೆ ನಿಮ್ಮ ಬಿಡುಗಡೆಯು ಸಮೀಪವಾಗಿದೆ.” ಮತ್ತು ಅವನು ನಮ್ಮನ್ನು ಎಚ್ಚರಿಸುವುದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೇ ಬಂದೀತು.” ಎಚ್ಚರಿಕೆಯಿಂದಿರುವ ಮೂಲಕ ಮಾತ್ರವೇ “ಮನುಷ್ಯ ಕುಮಾರನಾದ” ಯೇಸುವಿನ ಸಾನಿಧ್ಯದಲ್ಲಿ ಅವನ ಮುಂದೆ ಅನುಗ್ರಹಿತ ಸ್ಥಾನದಲ್ಲಿ ನಾವು ನಿಲ್ಲಶಕ್ತರಾಗುವೆವು.—ಲೂಕ 21:25-28, 34-36.
18. ಹತ್ತು ಕನ್ಯೆಯರ ಮತ್ತು ತಲಾಂತುಗಳ ಯೇಸುವಿನ ದೃಷ್ಟಾಂತಗಳಿಂದ ಯಾವ ಪ್ರೋತ್ಸಾಹನೆಯನ್ನು ನಾವು ಪಡೆಯಬಹುದು?
18 ಆಧುನಿಕ-ದಿನದ ಆತನ ಚತುರ ಮುನ್ನೋಟದ ಸಮಾಪ್ತಿಯಲ್ಲಿ, ಯೇಸು ಮೂರು ದೃಷ್ಟಾಂತಗಳನ್ನು ಕೊಡುತ್ತಾನೆ. ಮೊದಲನೆಯದಾಗಿ, ಹತ್ತು ಕನ್ಯೆಯರ ಸಾಮ್ಯದಲ್ಲಿ, “ಎಚ್ಚರವಾಗಿರುವ” ಅಗತ್ಯವನ್ನು ಅವನು ಪುನಃ ಒತ್ತಿಹೇಳುತ್ತಾನೆ. ಅನಂತರ, ಆಳುಗಳ ಮತ್ತು ತಲಾಂತುಗಳ ದೃಷ್ಟಾಂತದಲ್ಲಿ, ಉದ್ಯೋಗಶೀಲತೆಯು ಹೇಗೆ ‘ಧನಿಯ ಸೌಭಾಗ್ಯದಲ್ಲಿ ಸೇರುವ’ ಆಮಂತ್ರಣದಿಂದ ಬಹುಮಾನಿಸಲ್ಪಡುವುದು ಎಂದು ಅವನು ತೋರಿಸುತ್ತಾನೆ. ಈ ಸಾಮ್ಯಗಳಲ್ಲಿ ಮುನ್ಸೂಚಿಸಲ್ಪಟ್ಟ ಅಭಿಷಿಕ್ತ ಕ್ರೈಸ್ತರು, ಹಾಗೂ ಬೇರೆ ಕುರಿಗಳು ಈ ಸುಸ್ಪಷ್ಟ ವರ್ಣನೆಗಳಿಂದ ಅಧಿಕ ಪ್ರೋತ್ಸಾಹನೆಯನ್ನು ಪಡೆಯಬಲ್ಲರು.—ಮತ್ತಾಯ 25:1-30.
19, 20. ಯಾವ ಆನಂದಕರ ಆಧುನಿಕ-ದಿನದ ಸಂಬಂಧವು ಯೇಸುವಿನ ಕುರಿ ಮತ್ತು ಆಡುಗಳ ದೃಷ್ಟಾಂತದಲ್ಲಿ ತೋರಿಸಲ್ಪಟ್ಟಿದೆ?
19 ಮೂರನೆಯ ದೃಷ್ಟಾಂತವು ಯೇಸು ತನ್ನ ಮಹಿಮೆಯುಳ್ಳ ಸ್ವರ್ಗೀಯ ಸಿಂಹಾಸನದಲ್ಲಿ ಕೂತುಕೊಳ್ಳಲು ಆಗಮಿಸುವ ನಂತರದ ಆತನ ರಾಜ್ಯಾಧಿಕಾರದ ಸಾನಿಧ್ಯಕ್ಕೆ ಸೂಚಿಸುತ್ತದೆ. ಜನಾಂಗಗಳಿಗೆ ತೀರ್ಪುಮಾಡುವ ಮತ್ತು ಭೂಮಿಯ ಜನರನ್ನು ಎರಡು ಗುಂಪುಗಳಾಗಿ ಪ್ರತ್ಯೇಕ ಮಾಡುವ ಸಮಯವು ಅದಾಗಿದೆ; ಒಂದರಲ್ಲಿ ಕುರಿಸದೃಶರಾದ ದೀನ ಜನರು ಇರುವರು ಮತ್ತು ಇನ್ನೊಂದರಲ್ಲಿ ಮೊಂಡರಾದ ಆಡುಸದೃಶರು ಇರುವರು. ಕುರಿಗಳು ಅರಸನ ಸಹೋದರರಿಗೆ—ಈ ಲೋಕಾಂತ್ಯದ ಸಮಯದಲ್ಲಿ ಭೂಮಿಯಲ್ಲಿ ಉಳಿದಿರುವ ಅಭಿಷಿಕ್ತರಿಗೆ ತಮ್ಮನ್ನು ಬೆಂಬಲಿಗರಾಗಿ ತೋರಿಸಿ ಕೊಡಲು ಅಧಿಕ ಪ್ರಯತ್ನವನ್ನು ಮಾಡುವರು. ಈ ಕುರಿಗಳು ನಿತ್ಯಜೀವವನ್ನು ಬಹುಮಾನವಾಗಿ ಹೊಂದುವಾಗ ಅಗಣ್ಯತೆಯುಳ್ಳ ಆಡುಗಳಾದರೋ ನಿತ್ಯ ನಾಶನಕ್ಕೆ ಹೋಗುವರು.—ಮತ್ತಾಯ 25:31-46.
20 ಈ ವಿಷಯ ವ್ಯವಸ್ಥೆಯ ಸಮಾಪ್ತಿಯಲ್ಲಿ ಬೇರೆ ಕುರಿಗಳು ಮತ್ತು ಅರಸನ ಸಹೋದರರ ನಡುವೆ ಎಂಥ ಆಶ್ಚರ್ಯಕರ ಸಂಬಂಧವನ್ನು ನಾವು ಕಾಣುತ್ತೇವೆ! ಅರಸನ ಸಾನಿಧ್ಯದ ಆರಂಭದಲ್ಲಿ ಕಾರ್ಯದ ಜವಾಬ್ದಾರಿಕೆಯ ಹೊರೆಯನ್ನು ಅಭಿಷಿಕ್ತ ಉಳಿಕೆಯವರು ನಿರ್ವಹಿಸಿದ್ದರೂ, ಲಕ್ಷಾಂತರ ಹುರುಪಿನ ಬೇರೆಕುರಿಗಳು ಈಗ ಭೂಮಿಯಲ್ಲಿರುವ ದೇವರ ಸೇವಕರ 99.8 ಪ್ರತಿಶತ ಪ್ರಮಾಣದಲ್ಲಿದ್ದಾರೆ. (ಯೋಹಾನ 10:16) ಮತ್ತು ಅವರೂ ತಮ್ಮನ್ನು ಸಮಗ್ರತೆ-ಪಾಲಕರಾದ ಅಭಿಷಿಕ್ತ ಉಳಿಕೆಯವರ ಸಂಗಡಿಗರಾಗಿ ‘ಹಸಿವೆ, ಬಾಯಾರಿಕೆ, ರೋಗ, ಮತ್ತು ಸೆರೆವಾಸ’ವನ್ನು ತಾಳಿಕೊಳ್ಳಲು ಸಿದ್ಧಮನಸ್ಕರಾಗಿ ತೋರಿಸಿಕೊಂಡಿದ್ದಾರೆ.a
ನೈಸಾನ್ 12
21. ನೈಸಾನ್ 12 ರಂದು ಯಾವುದು ಮುಂದೆ ಸಾಗಿತು ಮತ್ತು ಹೇಗೆ?
21 ಯೇಸುವನ್ನು ಕೊಲ್ಲುವ ಹಂಚಿಕೆಯು ಮುಂದರಿಯುತ್ತದೆ. ಯೂದನು ಮೂವತ್ತು ಬೇಳ್ಳಿ ನಾಣ್ಯಗಳಿಗಾಗಿ ಯೇಸುವನ್ನು ಹಿಡುಕೊಡಲು ಸಮ್ಮತಿಸಿ ಮಹಾಯಾಜಕರನ್ನು ದೇವಾಲಯದಲ್ಲಿ ಸಂದರ್ಶಿಸುತ್ತಾನೆ. ಇದು ಕೂಡಾ ಪ್ರವಾದಿಸಲ್ಪಟ್ಟಿತ್ತು.—ಜೆಕರ್ಯ 11:12.
ನೈಸಾನ್ 13
22. ನೈಸಾನ್ 13 ರಂದು ಯಾವ ಸಿದ್ಧತೆಯು ಮಾಡಲ್ಪಟ್ಟಿತು?
22 ಪ್ರಾಯಶಃ ಪ್ರಾರ್ಥನೆ ಮತ್ತು ಮನನಕ್ಕಾಗಿ ಬೇಥಾನ್ಯದಲ್ಲೇ ಉಳಿದ ಯೇಸು, ಒಬ್ಬ “ಇಂಥವನ”ನ್ನು ಹುಡುಕುವಂತೆ ತನ್ನ ಶಿಷ್ಯರನ್ನು ಯೆರೂಸಲೇಮಿಗೆ ಕಳುಹಿಸುತ್ತಾನೆ. ಈ ಮನುಷ್ಯನ ಮನೆಯ ಮೇಲ್ಮಾಳಿಗೆಯ ಒಂದು ದೊಡ್ಡ ಕೋಣೆಯಲ್ಲಿ ಅವರು ಪಸ್ಕಕ್ಕಾಗಿ ಸಿದ್ಧತೆಗಳನ್ನು ಮಾಡುತ್ತಾರೆ. (ಮತ್ತಾಯ 26:17-19) ನೈಸಾನ್ 13 ರ ಹೊತ್ತು ಕಂತಿದಾಗ, ಇತಿಹಾಸದಲ್ಲೆಲ್ಲಾ ಅತ್ಯಂತ ವಿಶೇಷ ಘಟನೆಗಳುಳ್ಳ ಆಚರಣೆಗಾಗಿ ಯೇಸು ಅವರನ್ನು ಜತೆಗೂಡುತ್ತಾನೆ. ನೈಸಾನ್ 14 ರಲ್ಲಿ ಈಗ ಏನು ಕಾದಿದೆ? ನಮ್ಮ ಮುಂದಿನ ಲೇಖನವು ತಿಳಿಸುತ್ತದೆ. (w92 3/1)
[ಅಧ್ಯಯನ ಪ್ರಶ್ನೆಗಳು]
a ಹಿಂಬಾಲಿಸುವ ಲೇಖನವು ನಮಗೆಲ್ಲರಿಗೆ ಒಂದು ಅಧಿಕ ಮಹತ್ತಾದ ಪ್ರಮಾಣದಲ್ಲಿ ಅಭಿಷಿಕ್ತ ಚಿಕ್ಕ ಹಿಂಡು ಮತ್ತು ಬೇರೆ ಕುರಿಗಳ ನಡುವಣ ಅತ್ಯಾಪ್ತ ಸಂಬಂಧವನ್ನು ಗಣ್ಯಮಾಡಲು ಸಹಾಯ ಮಾಡತಕ್ಕದ್ದು.
ಹೇಗೆ ಸಾರಾಂಶ ಕೊಡುವಿರಿ?
▫ ನೈಸಾನ್ 8 ಮತ್ತು 10 ರ ಅವಧಿಯಲ್ಲಿ ಕೆಲವರು ಯೇಸುವಿಗೆ ಯಾವ ಆತಿಥ್ಯ ಮತ್ತು ಸ್ವಾಗತವನ್ನು ಕೊಟ್ಟರು?
▫ ನೈಸಾನ್ 11 ರಂದು ಕಪಟಿಗಳಾದ ವೈದಿಕರನ್ನು ಯೇಸು ಹೇಗೆ ಬಯಲುಪಡಿಸಿದನು?
▫ ಯಾವ ಮಹಾ ಪ್ರವಾದನೆಯನ್ನು ಯೇಸು ಕೊಟ್ಟನು, ಮತ್ತು ಅದು ಇಂದು ನೆರವೇರುತ್ತಿರುವುದು ಹೇಗೆ?
▫ ನೈಸಾನ್ 12 ಮತ್ತು 13 ರಲ್ಲಿ ಘಟನಾವಳಿಗಳು ಒಂದು ಪರಮಾವಧಿಯ ಕಡೆಗೆ ಮುಂದುವರಿದದ್ದು ಹೇಗೆ?
[ಪುಟ 12 ರಲ್ಲಿರುವ ಚಿತ್ರ]
ಎರಡು ಕಾಸುಗಳನ್ನು—ತನ್ನಲಿದ್ದ ಎಲ್ಲವನ್ನು ಕಾಣಿಕೆಯಾಗಿ ಹಾಕಿದ ವಿಧವೆಯನ್ನು ಯೇಸು ಹೊಗಳುತ್ತಾನೆ