ಯೇಸುವಿನ ಮಾತುಗಳು ಸಂತೋಷವನ್ನು ಹೆಚ್ಚಿಸುತ್ತವೆ
‘ಯೇಸು ಆ ಜನರ ಗುಂಪುಗಳನ್ನು ಕಂಡು ಬೆಟ್ಟವನ್ನೇರಿ ಕೂತುಕೊಂಡ ತರುವಾಯ ಆತನ ಶಿಷ್ಯರು ಆತನ ಬಳಿಗೆ ಬಂದರು. ಆತನು ಅವರಿಗೆ ಉಪದೇಶ ಮಾಡಿದನು.’—ಮತ್ತಾ. 5:1, 2.
1, 2. (ಎ) ಯೇಸು ಪರ್ವತ ಪ್ರಸಂಗವನ್ನು ಕೊಟ್ಟ ಸಂದರ್ಭ ತಿಳಿಸಿ. (ಬಿ) ಯೇಸು ತನ್ನ ಪ್ರಸಂಗವನ್ನು ಹೇಗೆ ಆರಂಭಿಸಿದನು?
ಇಸವಿ ಸಾ.ಶ. 31ರ ಸಮಯ. ಯೇಸು ಗಲಿಲಾಯದಲ್ಲಿನ ತನ್ನ ಸಾರುವ ಸಂಚಾರವನ್ನು ಅರ್ಧದಲ್ಲೇ ನಿಲ್ಲಿಸಿ ಪಸ್ಕವನ್ನು ಆಚರಿಸಲು ಯೆರೂಸಲೇಮಿಗೆ ಹೋಗುತ್ತಾನೆ. (ಯೋಹಾ. 5:1) ಗಲಿಲಾಯಕ್ಕೆ ಹಿಂದಿರುಗಿದ ಬಳಿಕ 12 ಮಂದಿ ಅಪೊಸ್ತಲರನ್ನು ಆರಿಸಲಿಕ್ಕಾಗಿ ದೇವರ ಮಾರ್ಗದರ್ಶನವನ್ನು ಕೋರುತ್ತಾ ಆತನು ಇಡೀ ರಾತ್ರಿ ಪ್ರಾರ್ಥಿಸುತ್ತಾನೆ. ಮರುದಿನ ಯೇಸು ಅಸ್ವಸ್ಥರನ್ನು ಗುಣಪಡಿಸುತ್ತಿರುವಾಗ ಜನರು ಗುಂಪುಗೂಡುತ್ತಾರೆ. ಆಗ ಅವನು ಆ ಬೆಟ್ಟದಲ್ಲಿ ಶಿಷ್ಯರ ಮತ್ತು ನೆರೆದಿದ್ದ ಜನರ ಮುಂದೆ ಕುಳಿತು ಉಪದೇಶಿಸಲಾರಂಭಿಸುತ್ತಾನೆ.—ಮತ್ತಾ. 4:23–5:2; ಲೂಕ 6:12-19.
2 ಯೇಸು ಈ ಪರ್ವತ ಪ್ರಸಂಗದ ಆರಂಭದಲ್ಲಿ, ದೇವರೊಂದಿಗೆ ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳುವುದರಿಂದ ಸಂತೋಷ ಲಭಿಸುತ್ತದೆ ಎಂಬುದರ ಕುರಿತು ಮಾತಾಡುತ್ತಾನೆ. (ಮತ್ತಾಯ 5:1-12 ಓದಿ.) ಸಂತೋಷವೆಂದರೆ, ‘ತೃಪ್ತಿಯಿಂದ ಹಿಡಿದು ತೀವ್ರಾನಂದದ ವರೆಗೆ ವ್ಯಾಪಿಸುವ ಯೋಗಕ್ಷೇಮದ ಸ್ಥಿತಿ.’ ಸಂತೋಷದಿಂದಿರಲು ಯೇಸು ಕೊಟ್ಟ ಒಂಬತ್ತು ಕಾರಣಗಳು, ಕ್ರೈಸ್ತರು ಏಕೆ ಸಂತೋಷಿತರಾಗಿದ್ದಾರೆ ಎಂಬುದನ್ನು ಎತ್ತಿತೋರಿಸುತ್ತವೆ. ಯೇಸುವಿನ ಈ ಮಾತುಗಳು 2,000 ವರ್ಷಗಳ ಹಿಂದೆ ಎಷ್ಟು ಉಪಯುಕ್ತವಾಗಿದ್ದವೋ ಈಗಲೂ ಅಷ್ಟೇ ಉಪಯುಕ್ತವಾಗಿವೆ. ಇವುಗಳನ್ನು ನಾವೀಗ ಪರಿಗಣಿಸೋಣ.
“ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು”
3. ನಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿರುವುದರ ಅರ್ಥವೇನು?
3 “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.” (ಮತ್ತಾ. 5:3, NW) “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು,” ತಾವು ಆಧ್ಯಾತ್ಮಿಕವಾಗಿ ನಿರ್ಗತಿಕರಾಗಿರುವುದರಿಂದ ತಮಗೆ ದೇವರ ಕರುಣೆ ಅಗತ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
4, 5. (ಎ) ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು ಏಕೆ? (ಬಿ) ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಹೇಗೆ ಪೂರೈಸಿಕೊಳ್ಳಬಹುದು?
4 ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು ಏಕೆಂದರೆ, “ಸ್ವರ್ಗದ ರಾಜ್ಯವು ಅವರದು.” ಯೇಸುವಿನ ಆದಿ ಶಿಷ್ಯರು ಆತನನ್ನು ಮೆಸ್ಸೀಯನಾಗಿ ಸ್ವೀಕರಿಸಿದ್ದರಿಂದ ಸ್ವರ್ಗದಲ್ಲಿ ಆತನೊಂದಿಗೆ ಆಳುವ ಸದವಕಾಶ ಅವರಿಗೆ ತೆರೆಯಲ್ಪಟ್ಟಿತು. (ಲೂಕ 22:28-30) ನಮ್ಮ ನಿರೀಕ್ಷೆ ಸ್ವರ್ಗದಲ್ಲಿ ಯೇಸುವಿನ ಜೊತೆ ಅರಸರಾಗುವುದು ಆಗಿರಲಿ ಇಲ್ಲವೇ ಆ ರಾಜ್ಯದಡಿ ಭೂಪರದೈಸಿನಲ್ಲಿ ನಿತ್ಯಜೀವ ಪಡೆಯುವುದು ಆಗಿರಲಿ, ನಿಜಕ್ಕೂ ನಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ನಮಗಿದ್ದರೆ ಮತ್ತು ದೇವರ ಮೇಲೆ ಅವಲಂಬಿಸುವ ಅಗತ್ಯವನ್ನು ನಾವು ಮನಗಂಡರೆ ಸಂತೋಷಿತರಾಗಿರಬಲ್ಲೆವು.
5 ಎಲ್ಲರೂ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿರುವುದಿಲ್ಲ. ಅನೇಕರಲ್ಲಿ ನಂಬಿಕೆಯ ಕೊರತೆಯಿದೆ ಮತ್ತು ಅವರು ಪವಿತ್ರ ವಿಷಯಗಳನ್ನು ಮಾನ್ಯಮಾಡುವುದಿಲ್ಲ. (2 ಥೆಸ. 3:1, 2; ಇಬ್ರಿ. 12:16) ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳುವ ವಿಧಗಳಲ್ಲಿ, ಬೈಬಲನ್ನು ಶ್ರದ್ಧೆಯಿಂದ ಓದುವುದು, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವುದು ಮತ್ತು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು ಸೇರಿದೆ.—ಮತ್ತಾ. 28:19, 20; ಇಬ್ರಿ. 10:23-25.
“ದುಃಖಿಸುವವರು ಸಂತೋಷಿತರು”
6. “ದುಃಖಿಸುವವರು” ಯಾರು, ಮತ್ತು ಅವರು “ಸಂತೋಷಿತರು” ಏಕೆ?
6 “ದುಃಖಿಸುವವರು ಸಂತೋಷಿತರು; ಅವರಿಗೆ ಸಾಂತ್ವನ ದೊರೆಯುವುದು.” (ಮತ್ತಾ. 5:4, NW) “ದುಃಖಿಸುವವರು” ಕೂಡ ‘ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರ’ ಹಾಗೆಯೇ ಇದ್ದಾರೆ. ಅಂಥವರು ತಮ್ಮ ಜೀವನದ ಬಗ್ಗೆ ಯಾವಾಗಲೂ ಕೊರಗುತ್ತಾ ದುಃಖಿಸುತ್ತಿರುವುದಿಲ್ಲ. ಬದಲಾಗಿ ತಮ್ಮ ಸ್ವಂತ ಪಾಪಪೂರ್ಣ ಸ್ಥಿತಿಗಾಗಿ ಮತ್ತು ಮಾನವ ಅಪರಿಪೂರ್ಣತೆಯಿಂದ ಉಂಟಾಗಿರುವ ಪರಿಸ್ಥಿತಿಗಳಿಗಾಗಿ ದುಃಖಿಸುತ್ತಾರೆ. ಹಾಗೆ ದುಃಖಿಸುವವರು “ಸಂತೋಷಿತರು” ಏಕೆ? ಏಕೆಂದರೆ ಅವರು ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ನಂಬಿಕೆಯನ್ನಿಡುತ್ತಾರೆ ಮತ್ತು ದೇವರೊಂದಿಗಿನ ಒಳ್ಳೇ ಸಂಬಂಧದಿಂದಾಗಿ ಸಾಂತ್ವನ ಪಡೆಯುತ್ತಾರೆ.—ಯೋಹಾ. 3:36.
7. ಸೈತಾನನ ಲೋಕದ ಕುರಿತು ನಮಗೆ ಹೇಗನಿಸಬೇಕು?
7 ಸೈತಾನನ ಲೋಕದಲ್ಲೆಲ್ಲೂ ಹಬ್ಬಿರುವ ದುಷ್ಟತನವನ್ನು ನೋಡಿ ನಮಗೆ ದುಃಖವಾಗುತ್ತದೋ? ಈ ಲೋಕವು ನಮಗೇನನ್ನು ನೀಡುತ್ತದೋ ಅದರ ಬಗ್ಗೆ ನಮಗೆ ನಿಜವಾಗಿ ಹೇಗನಿಸುತ್ತದೆ? ಅಪೊಸ್ತಲ ಯೋಹಾನನು ಬರೆದದ್ದು: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” (1 ಯೋಹಾ. 2:16) ಆದರೆ ದೇವರಿಂದ ವಿಮುಖವಾಗಿರುವ ಮಾನವ ಸಮಾಜವನ್ನು ಹಿಡಿತದಲ್ಲಿಟ್ಟುಕೊಂಡಿರುವ ಪ್ರೇರಣಾ ಶಕ್ತಿ ಅಂದರೆ “ಪ್ರಾಪಂಚಿಕ ಆತ್ಮ” ನಮ್ಮ ಆಧ್ಯಾತ್ಮಿಕತೆಯನ್ನು ಶಿಥಿಲಗೊಳಿಸುತ್ತಿರುವಲ್ಲಿ ಆಗೇನು? ಹಾಗಿರುವಲ್ಲಿ, ಎಡೆಬಿಡದೆ ಪ್ರಾರ್ಥಿಸಿ, ದೇವರ ವಾಕ್ಯದ ಅಧ್ಯಯನ ಮಾಡಿರಿ ಮತ್ತು ಹಿರಿಯರಿಂದ ಸಹಾಯ ಕೇಳಿ ಪಡೆದುಕೊಳ್ಳಿ. ನಾವು ಯಾವುದೇ ಕಾರಣಗಳಿಂದ ದುಃಖಿಸುತ್ತಿರಲಿ ಯೆಹೋವನ ಸಮೀಪಕ್ಕೆ ಹೋದಂತೆ ನಮಗೆ “ಸಾಂತ್ವನ ದೊರೆಯುವುದು.”—1 ಕೊರಿಂ. 2:12; ಕೀರ್ತ. 119:52; ಯಾಕೋ. 5:14, 15.
“ಸೌಮ್ಯಭಾವದವರು ಸಂತೋಷಿತರು”
8, 9. ಸೌಮ್ಯಭಾವದವರಾಗಿರುವುದರ ಅರ್ಥವೇನು, ಮತ್ತು ಅವರು ಸಂತೋಷಿತರು ಏಕೆ?
8 “ಸೌಮ್ಯಭಾವದವರು ಸಂತೋಷಿತರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾ. 5:5, NW) “ಸೌಮ್ಯಭಾವ” ಅಥವಾ ದೈನ್ಯಭಾವವು ಬಲಹೀನತೆಯೂ ಅಲ್ಲ ವಿನಯತೆಯ ಮುಖವಾಡವೂ ಅಲ್ಲ. ನಮ್ಮಲ್ಲಿ ಸೌಮ್ಯಭಾವವಿರುವಲ್ಲಿ ಯೆಹೋವನ ಚಿತ್ತವನ್ನು ಮಾಡುವ ಮೂಲಕ ಮತ್ತು ಆತನ ನಿರ್ದೇಶನಗಳನ್ನು ಅಂಗೀಕರಿಸುವ ಮೂಲಕ ದೈನ್ಯತೆ ತೋರಿಸುವೆವು. ಜೊತೆ ವಿಶ್ವಾಸಿಗಳೊಂದಿಗೆ ಮತ್ತು ಇತರರೊಂದಿಗೆ ನಾವು ನಡೆದುಕೊಳ್ಳುವ ರೀತಿಯಿಂದಲೂ ಸೌಮ್ಯಭಾವವು ವ್ಯಕ್ತವಾಗುತ್ತದೆ. ಅಂಥ ದೈನ್ಯಭಾವವು ಅಪೊಸ್ತಲ ಪೌಲನ ಸಲಹೆಗೆ ಹೊಂದಿಕೆಯಲ್ಲಿದೆ.—ರೋಮಾಪುರ 12:17-19 ಓದಿ.
9 ಸೌಮ್ಯಭಾವದವರು ಸಂತೋಷಿತರು ಏಕೆ? ಏಕೆಂದರೆ ಸೌಮ್ಯಭಾವದ ಯೇಸು ಹೇಳಿದಂತೆ, “ಅವರು ಭೂಮಿಗೆ ಬಾಧ್ಯರಾಗುವರು.” ಯೇಸು ಭೂಮಿಯ ಪ್ರಧಾನ ಬಾಧ್ಯಸ್ಥನು. (ಕೀರ್ತ. 2:8; ಮತ್ತಾ. 11:29; ಇಬ್ರಿ. 2:8, 9) ‘ಕ್ರಿಸ್ತನೊಂದಿಗೆ ಬಾಧ್ಯರಾಗುವವರು’ ಸಹ ಸೌಮ್ಯಭಾವದವರಾಗಿದ್ದು ಯೇಸುವಿನೊಂದಿಗೆ ಭೂಮಿಯನ್ನು ಬಾಧ್ಯತೆಯಾಗಿ ಪಡೆಯುವರು. (ರೋಮಾ. 8:16, 17) ದೈನ್ಯಭಾವದ ಇನ್ನೂ ಅನೇಕ ಜನರು ಯೇಸುವಿನ ರಾಜ್ಯದಾಳಿಕೆಯಡಿ ಭೂಮಿಯಲ್ಲಿ ನಿತ್ಯಜೀವ ಪಡೆಯುವರು.—ಕೀರ್ತ. 37:10, 11.
10. ಸೌಮ್ಯಭಾವದ ಕೊರತೆ ನಮ್ಮ ಸೇವಾ ಸುಯೋಗಗಳನ್ನೂ ಇತರರೊಂದಿಗಿನ ಸಂಬಂಧವನ್ನೂ ಹೇಗೆ ಬಾಧಿಸುತ್ತದೆ?
10 ಯೇಸುವಿನಂತೆ ನಾವು ಕೂಡ ಸೌಮ್ಯಭಾವದವರಾಗಿರತಕ್ಕದ್ದು. ಆದರೆ ಜಗಳಗಂಟಿಗಳೆಂಬ ಹೆಸರು ನಮಗಿರುವಲ್ಲಿ ಆಗೇನು? ಮಾತೆತ್ತಿದರೆ ಜಗಳಕ್ಕಿಳಿಯುವ ಸ್ವಭಾವ ನಮಗಿದ್ದರೆ ಜನರು ನಮ್ಮಿಂದ ದೂರವಿರಲು ಬಯಸುವರು. ನಾವು ಸಭೆಯಲ್ಲಿ ಜವಾಬ್ದಾರಿಗಳನ್ನು ಪಡೆಯಲಿಚ್ಛಿಸುವ ಸಹೋದರರಾಗಿರುವಲ್ಲಿ ಇಂಥ ಗುಣವು ನಮ್ಮನ್ನು ಅನರ್ಹಗೊಳಿಸುತ್ತದೆ. (1 ತಿಮೊ. 3:1, 3) ‘ಜಗಳವಾಡದೆ ಶಾಂತರಾಗಿ ಎಲ್ಲಾ ಮನುಷ್ಯರಿಗೆ ಪೂರ್ಣ ಸಾತ್ವಿಕತ್ವವನ್ನು ತೋರಿಸಬೇಕೆಂದು’ ಕ್ರೇತದ ಕ್ರೈಸ್ತರಿಗೆ ನೆನಪುಹುಟ್ಟಿಸುತ್ತಿರಲು ಪೌಲನು ತೀತನಿಗೆ ಹೇಳಿದನು. (ತೀತ 3:1, 2, NIBV) ಅಂಥ ಸೌಮ್ಯಭಾವ ಇತರರಿಗೆಷ್ಟು ಒಳಿತನ್ನು ತರುತ್ತದೆ!
‘ನೀತಿಗಾಗಿ ಹಸಿಯುತ್ತಿರುವವರು’
11-13. (ಎ) ನೀತಿಗಾಗಿ ಹಸಿದು ಬಾಯಾರುವುದರ ಅರ್ಥವೇನು? (ಬಿ) ನೀತಿಗಾಗಿ ಹಸಿದು ಬಾಯಾರುವವರು ಹೇಗೆ “ತೃಪ್ತರಾಗುವರು”?
11 “ನೀತಿಗಾಗಿ ಹಸಿಯುತ್ತಾ ಬಾಯಾರುತ್ತಾ ಇರುವವರು ಸಂತೋಷಿತರು; ಅವರು ತೃಪ್ತರಾಗುವರು.” (ಮತ್ತಾ. 5:6, NW) ಯೇಸು ಇಲ್ಲಿ ತಿಳಿಸಿದ ‘ನೀತಿಯು,’ ದೇವರ ಚಿತ್ತ ಮತ್ತು ಆತನ ಆಜ್ಞೆಗಳನ್ನು ಪಾಲಿಸುವ ಮೂಲಕ ಸರಿಯಾದದ್ದನ್ನು ಮಾಡುವ ಗುಣವಾಗಿದೆ. ಕೀರ್ತನೆಗಾರನು ತಾನು ದೇವರ ನೀತಿಯ ವಿಧಿಗಳಿಗಾಗಿ ‘ಹಂಬಲಿಸುತ್ತಿರುವೆನು’ ಎಂದು ಹೇಳಿದನು. (ಕೀರ್ತ. 119:20) ನಾವು ನೀತಿಯನ್ನು ಮಹತ್ತ್ವದ್ದಾಗಿ ಎಣಿಸುತ್ತೇವೋ? ಹಾಗಿದ್ದರೆ ಅದಕ್ಕಾಗಿ ಹಸಿದು ಬಾಯಾರುತ್ತಿದ್ದೇವೋ?
12 ನೀತಿಗಾಗಿ ಹಸಿಯುತ್ತಾ ಬಾಯಾರುತ್ತಾ ಇರುವವರು ಸಂತೋಷಿತರು ಏಕೆಂದರೆ ಅವರು “ತೃಪ್ತರಾಗುವರು” ಎಂದು ಯೇಸು ಹೇಳಿದನು. ಇದು ಸಾ.ಶ. 33ರ ಪಂಚಾಶತ್ತಮದ ನಂತರ ಸಾಧ್ಯವಾಯಿತು ಏಕೆಂದರೆ ಅಂದಿನಿಂದ ಯೆಹೋವನ ಪವಿತ್ರಾತ್ಮವು ‘ನೀತಿ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು’ ಕೊಡಲಾರಂಭಿಸಿತು. (ಯೋಹಾ. 16:8) ‘ನೀತಿಶಿಕ್ಷೆಗೆ ಉಪಯುಕ್ತವಾಗಿರುವ’ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಬರೆಯುವಂತೆ ದೇವರು ಪವಿತ್ರಾತ್ಮದ ಮೂಲಕ ಮಾನವರನ್ನು ಪ್ರೇರಿಸಿದನು. (2 ತಿಮೊ. 3:16) ದೇವರಾತ್ಮವು ನಾವು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವಂತೆಯೂ ಸಾಧ್ಯಮಾಡುತ್ತದೆ. ಆ ವ್ಯಕ್ತಿತ್ವ ಅಥವಾ “ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿ . . . ನಿರ್ಮಿಸಲ್ಪಟ್ಟಿದೆ.” (ಎಫೆ. 4:24) ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದ ಆಧಾರದ ಮೇಲೆ ಕ್ಷಮೆ ಕೋರುವವರು ದೇವರ ಮುಂದೆ ನೀತಿಯುತ ನಿಲುವನ್ನು ಪಡೆಯುವರು. ಈ ಮಾತು ನಮಗೆ ಆದರಣೆ ಕೊಡುತ್ತದಲ್ಲವೋ?—ರೋಮಾಪುರ 3:23, 24 ಓದಿ.
13 ನಮಗೆ ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯಿರುವಲ್ಲಿ, ನೀತಿಗಾಗಿರುವ ಹಸಿವು ಮತ್ತು ಬಾಯಾರಿಕೆ ನೀತಿಯುತ ಪರಿಸ್ಥಿತಿಗಳಲ್ಲಿ ಭೂಮಿಯ ಮೇಲೆ ನಿತ್ಯಜೀವವನ್ನು ಆನಂದಿಸುವಾಗ ಪೂರ್ತಿಯಾಗಿ ತಣಿಸಲ್ಪಡುವುದು. ಅಲ್ಲಿಯ ವರೆಗೆ ಯೆಹೋವನ ಮಟ್ಟಗಳಿಗನುಗುಣವಾಗಿ ಜೀವಿಸಲು ದೃಢನಿರ್ಧಾರದಿಂದಿರೋಣ. ಯೇಸು ಹೇಳಿದ್ದು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” (ಮತ್ತಾ. 6:33) ಹೀಗೆ ಮಾಡುತ್ತಿರುವಾಗ ನಮಗೆ ಕೈತುಂಬ ಕೆಲಸವಿರುವುದು ಮತ್ತು ಹೃದಯವು ನಿಜ ಸಂತೋಷದಿಂದ ತುಂಬಿತುಳುಕುವುದು.—1 ಕೊರಿಂ. 15:58.
“ಕರುಣೆಯುಳ್ಳವರು ಸಂತೋಷಿತರು”—ಏಕೆ?
14, 15. ನಾವು ಹೇಗೆ ಕರುಣೆ ತೋರಿಸಬಹುದು, ಮತ್ತು “ಕರುಣೆಯುಳ್ಳವರು” ಸಂತೋಷಿತರೇಕೆ?
14 “ಕರುಣೆಯುಳ್ಳವರು ಸಂತೋಷಿತರು; ಅವರಿಗೆ ಕರುಣೆ ತೋರಿಸಲ್ಪಡುವುದು.” (ಮತ್ತಾ. 5:7, NW) “ಕರುಣೆಯುಳ್ಳವರು” ಇತರರಿಗೆ ದಯೆ ಮತ್ತು ಕನಿಕರವನ್ನು ತೋರಿಸುತ್ತಾರೆ. ಕನಿಕರವಿದ್ದದ್ದರಿಂದಲೇ ಯೇಸು ಅದ್ಭುತಕರವಾಗಿ ಅನೇಕರನ್ನು ಗುಣಪಡಿಸಿದನು. (ಮತ್ತಾ. 14:14) ಯೆಹೋವನು ಪಶ್ಚಾತ್ತಾಪಿಗಳನ್ನು ಕರುಣೆಯಿಂದ ಕ್ಷಮಿಸುವಂತೆ, ತಮಗೆ ಅನ್ಯಾಯ ಮಾಡಿದವರನ್ನು ಕ್ಷಮಿಸುವವರು ಸಹ ಕರುಣೆ ತೋರಿಸುತ್ತಾರೆ. (ವಿಮೋ. 34:6, 7; ಕೀರ್ತ. 103:10) ನಾವು ಕೂಡ ಅದೇ ರೀತಿಯಲ್ಲಿ ಕರುಣೆ ತೋರಿಸಬಹುದು. ಅಲ್ಲದೇ, ಪ್ರತಿಕೂಲ ಸ್ಥಿತಿಯಲ್ಲಿರುವವರಿಗೆ ಉಪಶಮನ ಕೊಡುವಂಥ ದಯಾಪರ ಮಾತುಗಳು ಹಾಗೂ ಕ್ರಿಯೆಗಳ ಮೂಲಕವೂ ಕರುಣೆ ತೋರಿಸಬಲ್ಲೆವು. ಕರುಣೆ ತೋರಿಸುವ ಅತ್ಯುತ್ತಮ ವಿಧವು, ಇತರರೊಂದಿಗೆ ಬೈಬಲ್ ಸತ್ಯವನ್ನು ಹಂಚುವುದೇ ಆಗಿದೆ. ಯೇಸು ಸಹ ಬಹು ಜನರ ಗುಂಪಿಗಾಗಿ ಕನಿಕರಪಟ್ಟು “ಅವರಿಗೆ ಬಹಳ ಉಪದೇಶ” ಮಾಡಿದನು.—ಮಾರ್ಕ 6:34.
15 “ಕರುಣೆಯುಳ್ಳವರು ಸಂತೋಷಿತರು; ಅವರಿಗೆ ಕರುಣೆ ತೋರಿಸಲ್ಪಡುವುದು” ಎಂದು ಯೇಸು ಹೇಳಿದ ಮಾತುಗಳನ್ನು ಸಮ್ಮತಿಸಲು ನಮಗೆ ಸಕಾರಣಗಳಿವೆ. ನಾವು ಇತರರಿಗೆ ಕರುಣೆ ತೋರಿಸುವಲ್ಲಿ ಅವರು ಕೂಡ ನಮ್ಮೊಂದಿಗೆ ಕರುಣೆಯಿಂದ ವರ್ತಿಸುವ ಸಾಧ್ಯತೆಯಿದೆ. ನಾವು ಇತರರಿಗೆ ಕರುಣೆ ತೋರಿಸಿರುವಲ್ಲಿ ಯೆಹೋವನು ಸಹ ನಮಗೆ ಪ್ರತಿಕೂಲ ತೀರ್ಪು ನೀಡದಿರಲೂಬಹುದು. (ಯಾಕೋ. 2:13) ಪಾಪಗಳ ಕ್ಷಮಾಪಣೆ ಮತ್ತು ನಿತ್ಯಜೀವ ಕೇವಲ ಕರುಣೆಯುಳ್ಳವರಿಗೆ ಸಿಗುವುದು.—ಮತ್ತಾ. 6:15.
“ಹೃದಯದಲ್ಲಿ ಶುದ್ಧರಾಗಿರುವವರು ಸಂತೋಷಿತರು”—ಏಕೆ?
16. “ಹೃದಯದಲ್ಲಿ ಶುದ್ಧ”ರಾಗಿರುವುದರ ಅರ್ಥವೇನು, ಮತ್ತು ಆ ಗುಣವುಳ್ಳವರು ಹೇಗೆ “ದೇವರನ್ನು ನೋಡುವರು”?
16 “ಹೃದಯದಲ್ಲಿ ಶುದ್ಧರಾಗಿರುವವರು ಸಂತೋಷಿತರು; ಅವರು ದೇವರನ್ನು ನೋಡುವರು.” (ಮತ್ತಾ. 5:8, NW) ನಾವು “ಹೃದಯದಲ್ಲಿ ಶುದ್ಧ”ರಾಗಿರುವುದಾದರೆ, ಆ ಶುದ್ಧತೆಯು ನಾವು ಪ್ರಿಯವೆಂದೆಣಿಸುವ ವಿಷಯಗಳಲ್ಲಿ, ನಮ್ಮ ಆಸೆಗಳಲ್ಲಿ ಮತ್ತು ಇರಾದೆಗಳಲ್ಲಿ ತೋರಿಬರುವುದು. ನಾವು ‘ಶುದ್ಧಹೃದಯದಿಂದ ಹುಟ್ಟಿದ ಪ್ರೀತಿಯನ್ನೂ’ ತೋರಿಸುವೆವು. (1 ತಿಮೊ. 1:5) ನಮ್ಮ ಅಂತರಂಗ ಶುದ್ಧವಾಗಿರುವಲ್ಲಿ, ‘ದೇವರನ್ನು ನೋಡುವೆವು.’ ಇದರರ್ಥ ನಾವು ಯೆಹೋವನನ್ನು ಪ್ರತ್ಯಕ್ಷವಾಗಿ ನೋಡುತ್ತೇವೆಂದಾಗಿರುವುದಿಲ್ಲ, ಏಕೆಂದರೆ “ಮನುಷ್ಯರಲ್ಲಿ ಯಾವನೂ [ದೇವರನ್ನು] ನೋಡಿ ಜೀವಿಸಲಾರನು.” (ವಿಮೋ. 33:20) ಆದರೆ ದೇವರ ವ್ಯಕ್ತಿತ್ವವನ್ನು ಯೇಸು ಪರಿಪೂರ್ಣವಾಗಿ ಪ್ರತಿಬಿಂಬಿಸಿದ್ದರಿಂದ ಅವನು ಹೀಗೆ ಹೇಳಸಾಧ್ಯವಿತ್ತು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾ. 14:7-9) ಭೂಮಿಯಲ್ಲಿರುವ ಯೆಹೋವನ ಆರಾಧಕರಾದ ನಾವು ಆತನು ನಮ್ಮ ಪರವಾಗಿ ಕ್ರಿಯೆಗೈಯುವುದನ್ನು ಗಮನಿಸುವ ಮೂಲಕ ‘ಆತನನ್ನು ನೋಡಬಲ್ಲೆವು.’ (ಯೋಬ 42:5) ಅಭಿಷಿಕ್ತ ಕ್ರೈಸ್ತರು ಪರಲೋಕಕ್ಕೆ ಪುನರುತ್ಥಾನಗೊಂಡು ಅವರ ಸ್ವರ್ಗೀಯ ತಂದೆಯನ್ನು ಕಣ್ಣಾರೆ ಕಾಣುವಾಗ ದೇವರನ್ನು ನೋಡುವ ಸಂಗತಿಯು ಉತ್ತುಂಗಕ್ಕೇರುವುದು.—1 ಯೋಹಾ. 3:2.
17. ಹೃದಯದಲ್ಲಿ ಶುದ್ಧರಾಗಿರುವುದು ನಮ್ಮ ಮೇಲೆ ಯಾವ ಪರಿಣಾಮ ಬೀರುತ್ತದೆ?
17 ಶುದ್ಧ ಹೃದಯವು ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಿರ್ಮಲವಾಗಿರುತ್ತದೆ. ಆದುದರಿಂದ ಅದು, ಯೆಹೋವನ ದೃಷ್ಟಿಯಲ್ಲಿ ಅಶುದ್ಧವಾದ ಸಂಗತಿಗಳ ಕುರಿತು ಯೋಚಿಸುತ್ತಿರುವುದಿಲ್ಲ. (1 ಪೂರ್ವ. 28:9; ಯೆಶಾ. 52:11) ನಾವು ಹೃದಯದಲ್ಲಿ ಶುದ್ಧರಾಗಿರುವಲ್ಲಿ ನಾವು ಹೇಳುವ ಮತ್ತು ಮಾಡುವ ಸಂಗತಿಗಳು ಶುದ್ಧವಾಗಿರುವವು. ಯೆಹೋವನಿಗೆ ನಾವು ಸಲ್ಲಿಸುವ ಸೇವೆಯಲ್ಲಿ ಕಪಟವಿರದು.
‘ಶಾಂತಿಶೀಲರು ದೇವರ ಪುತ್ರರಾಗುವರು’
18, 19. “ಶಾಂತಿಶೀಲರು” ಹೇಗೆ ನಡೆದುಕೊಳ್ಳುತ್ತಾರೆ?
18 “ಶಾಂತಿಶೀಲರು ಸಂತೋಷಿತರು; ಅವರು ‘ದೇವರ ಪುತ್ರರು’ ಎಂದು ಕರೆಯಲ್ಪಡುವರು.” (ಮತ್ತಾ. 5:9, NW) “ಶಾಂತಿಶೀಲ” ಜನರನ್ನು, ಅವರೇನು ಮಾಡುತ್ತಾರೋ ಮತ್ತು ಏನು ಮಾಡುವುದಿಲ್ಲವೋ ಅದರಿಂದ ಗುರುತಿಸಬಹುದು. ಯೇಸು ಯಾರ ಬಗ್ಗೆ ಹೇಳಿದನೋ ಅಂಥ ಜನರು ನಾವಾಗಿರುವಲ್ಲಿ ನಾವು ಶಾಂತಿಶೀಲರಾಗಿರುವೆವು ಮತ್ತು ‘ಅಪಕಾರಕ್ಕೆ ಅಪಕಾರಮಾಡದವರು’ ಆಗಿರುವೆವು. ನಾವು ‘ಯಾವಾಗಲೂ ಎಲ್ಲರಿಗೂ ಹಿತವನ್ನು ಮಾಡುವವರಾಗಿರುವೆವು.’—1 ಥೆಸ. 5:15.
19 ಮತ್ತಾಯ 5:9ರಲ್ಲಿ “ಶಾಂತಿಶೀಲರು” ಎಂದು ಭಾಷಾಂತರಿಸಲಾದ ಗ್ರೀಕ್ ಪದದ ಅಕ್ಷರಾರ್ಥವು “ಶಾಂತಿ ಮಾಡಿಸುವವರು” ಎಂದಾಗಿದೆ. ನಾವು “ಶಾಂತಿಶೀಲರು” ಆಗಿರಬೇಕಾದರೆ ಶಾಂತಿಯನ್ನು ವರ್ಧಿಸುವಂಥ ಕ್ರಿಯೆಗೈಯಬೇಕು. ಶಾಂತಿ ಮಾಡಿಸುವವರು ‘ಮಿತ್ರರನ್ನು ಅಗಲಿಸುವಂಥ’ ಯಾವುದೇ ಕೆಲಸವನ್ನು ಮಾಡುವುದಿಲ್ಲ. (ಜ್ಞಾನೋ. 16:28) ನಾವು “ಶಾಂತಿಶೀಲರು” ಆಗಿರುವಲ್ಲಿ ‘ಎಲ್ಲರ ಸಂಗಡ ಸಮಾಧಾನದಿಂದಿರಲು’ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವೆವು.—ಇಬ್ರಿ. 12:14.
20. ಈಗ “ದೇವರ ಪುತ್ರರು” ಯಾರಾಗಿದ್ದಾರೆ, ಮತ್ತು ಕ್ರಮೇಣ ಇನ್ನಾರು ದೇವರ ಮಕ್ಕಳಾಗಲಿರುವರು?
20 ಶಾಂತಿಶೀಲರು “‘ದೇವರ ಪುತ್ರರು’ ಎಂದು ಕರೆಯಲ್ಪಡು”ವುದರಿಂದ ಅವರು ಸಂತೋಷಿತರಾಗಿರುವರು. ನಂಬಿಗಸ್ತ ಅಭಿಷಿಕ್ತ ಕ್ರೈಸ್ತರನ್ನು ಯೆಹೋವನು ದತ್ತುಪಡೆದಿದ್ದರಿಂದ ಅವರು “ದೇವರ ಪುತ್ರರು” ಆಗಿರುವರು. ಅವರು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವುದರಿಂದ ಮತ್ತು ‘ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರನ್ನು’ ಪೂರ್ಣ ಹೃದಯದಿಂದ ಆರಾಧಿಸುವುದರಿಂದ ಈಗಾಗಲೇ ಆತನ ಮಕ್ಕಳಾಗಿ ಒಂದು ಆಪ್ತ ಸಂಬಂಧ ಹೊಂದಿದ್ದಾರೆ. (2 ಕೊರಿಂ. 13:11; ಯೋಹಾ. 1:12) ಯೇಸುವಿನ ಶಾಂತಿಶೀಲ “ಬೇರೆ ಕುರಿಗಳ” ಬಗ್ಗೆ ಏನು? ಸಹಸ್ರ ವರ್ಷದಾಳ್ವಿಕೆಯ ಸಮಯದಲ್ಲಿ ಯೇಸು ಅವರ “ನಿತ್ಯನಾದ ತಂದೆ” ಆಗುವನು. ಆ ಆಳ್ವಿಕೆಯ ಕೊನೆಯಲ್ಲಿ ಅವನು ತನ್ನನ್ನೇ ದೇವರಿಗೆ ಅಧೀನಪಡಿಸುವನು ಮತ್ತು ಆಗ ಬೇರೆ ಕುರಿಗಳು ಸಂಪೂರ್ಣ ಅರ್ಥದಲ್ಲಿ ದೇವರ ಮಕ್ಕಳಾಗುವರು.—ಯೋಹಾ. 10:16; ಯೆಶಾ. 9:6; ರೋಮಾ. 8:21; 1 ಕೊರಿಂ. 15:27, 28.
21. ನಾವು ‘ಆತ್ಮವನ್ನನುಸರಿಸಿ ನಡೆಯುತ್ತೇವಾದರೆ’ ಏನು ಮಾಡುವೆವು?
21 ನಾವು ‘ಆತ್ಮವನ್ನನುಸರಿಸಿ ನಡೆಯುತ್ತೇವಾದರೆ’ ನಮ್ಮ ಶಾಂತಿಶೀಲತೆಯು ಎಲ್ಲರಿಗೆ ವ್ಯಕ್ತವಾಗುವ ಗುಣಗಳಲ್ಲಿ ಒಂದಾಗಿರುವುದು. ಆಗ ನಾವು ‘ಒಬ್ಬರನ್ನೊಬ್ಬರು ಕೆಣಕುವವರು’ ಆಗಿರುವುದಿಲ್ಲ. (ಗಲಾ. 5:22-26) ಬದಲಿಗೆ ನಾವು ‘ಎಲ್ಲರ ಸಂಗಡ ಸಮಾಧಾನದಿಂದಿರಲು’ ಪ್ರಯತ್ನಿಸುವೆವು.—ರೋಮಾ. 12:18.
ಹಿಂಸಿಸಲ್ಪಟ್ಟರೂ ಸಂತೋಷಿತರು!
22-24. (ಎ) ನೀತಿಯ ನಿಮಿತ್ತ ಹಿಂಸಿಸಲ್ಪಟ್ಟವರ ಸಂತೋಷಕ್ಕೆ ಕಾರಣಗಳೇನು? (ಬಿ) ಮುಂದಿನ ಎರಡು ಅಧ್ಯಯನ ಲೇಖನಗಳಲ್ಲಿ ನಾವೇನನ್ನು ಕಲಿಯಲಿದ್ದೇವೆ?
22 “ನೀತಿಯ ನಿಮಿತ್ತ ಹಿಂಸಿಸಲ್ಪಟ್ಟಿರುವವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.” (ಮತ್ತಾ. 5:10, NW) ಈ ವಿಷಯದ ಕುರಿತು ಹೆಚ್ಚನ್ನು ತಿಳಿಸುತ್ತಾ ಯೇಸು ಹೇಳಿದ್ದು: “ನನ್ನ ನಿಮಿತ್ತ ಜನರು ನಿಮ್ಮನ್ನು ದೂಷಿಸಿ ಹಿಂಸೆಪಡಿಸಿ ನಿಮ್ಮ ವಿರುದ್ಧ ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳುವಾಗ ನೀವು ಸಂತೋಷಿತರು. ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ; ಏಕೆಂದರೆ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಅವರು ಅದೇ ರೀತಿಯಲ್ಲಿ ಹಿಂಸೆಪಡಿಸಿದರು.” —ಮತ್ತಾ. 5:11, 12, NW.
23 ಪ್ರಾಚೀನ ಕಾಲದ ದೇವರ ಪ್ರವಾದಿಗಳಂತೆ ಕ್ರೈಸ್ತರಿಗೆ, ತಮ್ಮನ್ನು ದೂಷಿಸಲಾಗುವುದು, ಹಿಂಸಿಸಲಾಗುವುದು ಮತ್ತು ತಮ್ಮ ವಿರುದ್ಧ ಕೆಟ್ಟ ವಿಷಯಗಳನ್ನು ಸುಳ್ಳಾಗಿ ಹೇಳಲಾಗುವುದೆಂದು ತಿಳಿದಿದೆ. ಇದೆಲ್ಲವೂ “ನೀತಿಯ ನಿಮಿತ್ತ” ಅವರಿಗೆ ಬರುವುದು. ಹಾಗಿದ್ದರೂ, ಇಂಥ ಪರೀಕ್ಷೆಗಳನ್ನು ತಾಳಿಕೊಳ್ಳುವ ಮೂಲಕ ಯೆಹೋವನನ್ನು ಸಂತೋಷಪಡಿಸಿದ ಮತ್ತು ಘನತೆಗೇರಿಸಿದ ತೃಪ್ತಿ ಕ್ರೈಸ್ತರಾದ ನಮಗೆ ಸಿಗುತ್ತದೆ. (1 ಪೇತ್ರ 2:19-21) ಇಂದಾಗಲಿ, ಮುಂದಾಗಲಿ ಯಾವುದೇ ಕಷ್ಟಗಳು ಯೆಹೋವನ ಸೇವೆಮಾಡುವುದರಿಂದ ನಮಗೆ ಸಿಗುವ ಆನಂದವನ್ನು ಕಸಿದುಕೊಳ್ಳಲಾರವು. ಅದು, ಯೇಸುವಿನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಆಳುವವರ ಸಂತೋಷವನ್ನಾಗಲಿ ಆ ಸರಕಾರದ ಭೂಪ್ರಜೆಗಳಾಗಿ ನಿತ್ಯಜೀವವನ್ನು ಪಡೆಯುವವರ ಆನಂದವನ್ನಾಗಲಿ ಕಡಿಮೆಗೊಳಿಸಲಾರದು. ಇಂಥ ಆರ್ಶೀವಾದಗಳು ದೇವರ ಕೃಪೆ, ಒಳ್ಳೇತನ ಮತ್ತು ಉದಾರತೆಯ ಪುರಾವೆಗಳಾಗಿವೆ.
24 ಈ ಪರ್ವತ ಪ್ರಸಂಗದಿಂದ ಇನ್ನೂ ಬಹಳಷ್ಟನ್ನು ಕಲಿಯಲಿಕ್ಕಿದೆ. ಮುಂದಿನ ಎರಡು ಅಧ್ಯಯನ ಲೇಖನಗಳಲ್ಲಿ ಹಲವು ಪಾಠಗಳನ್ನು ನಾವು ಕಲಿಯುವೆವು. ಯೇಸು ಕ್ರಿಸ್ತನ ಆ ಮಾತುಗಳನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಲ್ಲೆವು ಎಂಬದನ್ನು ನೋಡೋಣ.
ನಿಮ್ಮ ಉತ್ತರವೇನು?
• “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು” ಸಂತೋಷಿತರೇಕೆ?
• “ಸೌಮ್ಯಭಾವದವರು” ಸಂತೋಷಿತರಾಗಿರಲು ಕಾರಣಗಳೇನು?
• ಕ್ರೈಸ್ತರು ಹಿಂಸಿಸಲ್ಪಟ್ಟರೂ ಸಂತೋಷಿತರೇಕೆ?
• ಸಂತೋಷಕ್ಕಾಗಿ ಯೇಸು ಕೊಟ್ಟ ಕಾರಣಗಳಲ್ಲಿ ನಿಮಗೆ ಯಾವುದು ಹಿಡಿಸಿತು?
[ಪುಟ 7ರಲ್ಲಿರುವ ಚಿತ್ರ]
ಸಂತೋಷದಿಂದಿರಲು ಯೇಸು ಅಂದು ಎತ್ತಿತೋರಿಸಿದ ಒಂಬತ್ತು ಕಾರಣಗಳು ಇಂದೂ ಉಪಯುಕ್ತವಾಗಿವೆ
[ಪುಟ 8ರಲ್ಲಿರುವ ಚಿತ್ರ]
ಕರುಣೆ ತೋರಿಸುವ ಅತ್ಯುತ್ತಮ ವಿಧವು, ಇತರರೊಂದಿಗೆ ಬೈಬಲ್ ಸತ್ಯವನ್ನು ಹಂಚಿಕೊಳ್ಳುವುದೇ ಆಗಿದೆ