ಯೇಸುವಿನ ಮಾತುಗಳು ನಿಮ್ಮ ಮನೋಭಾವವನ್ನು ಪ್ರಭಾವಿಸಲಿ
“ದೇವರು ಯಾರನ್ನು ಕಳುಹಿಸಿದ್ದಾನೋ . . . ಆತನು ದೇವರ ಮಾತುಗಳನ್ನೇ ಆಡುತ್ತಾನೆ.”—ಯೋಹಾ. 3:34.
1, 2. ಪರ್ವತ ಪ್ರಸಂಗದಲ್ಲಿನ ಯೇಸುವಿನ ಮಾತುಗಳನ್ನು ಯಾವುದಕ್ಕೆ ಹೋಲಿಸಬಹುದು, ಮತ್ತು ಅದು “ದೇವರ ಮಾತುಗಳ” ಮೇಲೆ ಆಧರಿತವಾಗಿತ್ತೆಂದು ನಾವು ಹೇಗೆ ಹೇಳಬಹುದು?
ಇಂದು ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ವಜ್ರಗಳಲ್ಲಿ, ‘ಸ್ಟಾರ್ ಆಫ್ ಆಫ್ರಿಕ’ ಎಂಬ 530 ಕ್ಯಾರಟ್ ತೂಕದ ವಜ್ರ ಒಂದಾಗಿದೆ. ಅದು ನಿಜವಾಗಿಯೂ ಒಂದು ಅಮೂಲ್ಯ ರತ್ನ! ಆದರೆ, ಯೇಸುವಿನ ಪರ್ವತ ಪ್ರಸಂಗದಲ್ಲಿರುವ ಆಧ್ಯಾತ್ಮಿಕ ರತ್ನಗಳಿಗೆ ಅದಕ್ಕಿಂತ ಎಷ್ಟೋ ಹೆಚ್ಚು ಮೌಲ್ಯವಿದೆ. ಇದು ಆಶ್ಚರ್ಯದ ಸಂಗತಿಯೇನಲ್ಲ ಏಕೆಂದರೆ ಯೇಸುವಿನ ಮಾತುಗಳು ಯೆಹೋವನದ್ದಾಗಿದ್ದವು. ಯೇಸುವಿಗೆ ಸೂಚಿಸುತ್ತಾ ಬೈಬಲ್ ಹೇಳುವುದು: “ದೇವರು ಯಾರನ್ನು ಕಳುಹಿಸಿದ್ದಾನೋ . . . ಆತನು ದೇವರ ಮಾತುಗಳನ್ನೇ ಆಡುತ್ತಾನೆ.”—ಯೋಹಾ. 3:34-36.
2 ಪರ್ವತ ಪ್ರಸಂಗ ಕೊಡಲು ಕೇವಲ ಅರ್ಧ ತಾಸು ಹಿಡಿದಿರಬಹುದಾದರೂ, ಅದರಲ್ಲಿ ಹೀಬ್ರು ಶಾಸ್ತ್ರಗಳ 8 ವಿಭಿನ್ನ ಪುಸ್ತಕಗಳಿಂದ 21 ಉಲ್ಲೇಖಗಳಿವೆ. ಹೀಗಿರುವುದರಿಂದ ಅದು “ದೇವರ ಮಾತುಗಳ” ಮೇಲೆ ದೃಢವಾಗಿ ಆಧರಿತವಾಗಿತ್ತೆಂದು ಹೇಳಬಹುದು. ದೇವರ ಪ್ರಿಯ ಮಗನ ಈ ಕುಶಲ ಪ್ರಸಂಗದಲ್ಲಿರುವ ಬೆಲೆಕಟ್ಟಲಾಗದ ಮಾತುಗಳನ್ನು ನಾವು ಹೇಗೆ ಅನ್ವಯಿಸಬಹುದು ಎಂಬದನ್ನು ಈಗ ಪರಿಗಣಿಸೋಣ.
“ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ”
3. ಸಿಟ್ಟನ್ನಿಟ್ಟುಕೊಳ್ಳುವ ಪರಿಣಾಮಗಳ ಬಗ್ಗೆ ಎಚ್ಚರಿಸಿದ ಬಳಿಕ ಯೇಸು ಯಾವ ಸಲಹೆಯಿತ್ತನು?
3 ಕ್ರೈಸ್ತರಾಗಿರುವ ನಾವು ಸಂತೋಷಿತರೂ ಶಾಂತಿಶೀಲರೂ ಆಗಿದ್ದೇವೆ. ಏಕೆಂದರೆ ನಮಗೆ ದೇವರ ಪವಿತ್ರಾತ್ಮ ಲಭ್ಯವಿದೆ ಮತ್ತು ಸಂತೋಷ ಹಾಗೂ ಸಮಾಧಾನ ಅದರ ಫಲಗಳಾಗಿವೆ. (ಗಲಾ. 5:22, 23) ಶಿಷ್ಯರು ಶಾಂತಿ ಮತ್ತು ಸಂತೋಷವನ್ನು ಕಳೆದುಕೊಳ್ಳುವುದನ್ನು ಯೇಸು ಬಯಸಲಿಲ್ಲ. ಹಾಗಾಗಿ, ದೀರ್ಘಕಾಲ ಸಿಟ್ಟನ್ನಿಟ್ಟುಕೊಳ್ಳುವುದರಿಂದ ಬರುವ ಮಾರಣಾಂತಿಕ ಪರಿಣಾಮಗಳ ಕುರಿತು ಆತನು ಅವರಿಗೆ ತಿಳಿಸಿದನು. (ಮತ್ತಾಯ 5:21, 22 ಓದಿ.) ತದನಂತರ ಅವನು ಹೇಳಿದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು.”—ಮತ್ತಾ. 5:23, 24, NW.
4, 5. (ಎ) ಮತ್ತಾಯ 5:23, 24ರಲ್ಲಿ ಯೇಸು ಹೇಳಿದ “ಕಾಣಿಕೆ” ಏನಾಗಿದೆ? (ಬಿ) ನಾವು ಸಹೋದರನೊಬ್ಬನ ಮನನೋಯಿಸಿರುವಲ್ಲಿ ಅವನೊಂದಿಗೆ ಸಮಾಧಾನ ಮಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯ?
4 ಯೇಸು ಹೇಳಿದ “ಕಾಣಿಕೆ” ಯೆರೂಸಲೇಮ್ ದೇವಾಲಯದಲ್ಲಿ ಸಾಮಾನ್ಯವಾಗಿ ಅರ್ಪಿಸಲಾಗುತ್ತಿದ್ದ ಯಾವುದೇ ನೈವೇದ್ಯ ಅಥವಾ ಯಜ್ಞವಾಗಿತ್ತು. ಆ ಸಮಯದಲ್ಲಿ ಪ್ರಾಣಿ ಯಜ್ಞಗಳು ಯೆಹೋವನ ಆರಾಧನೆಯ ಭಾಗವಾಗಿದ್ದರಿಂದ ಪ್ರಾಮುಖ್ಯವಾಗಿದ್ದವು. ಆದರೆ ಯೇಸು ಅದಕ್ಕಿಂತ ಹೆಚ್ಚು ಪ್ರಾಮುಖ್ಯವಾದ ವಿಷಯದ ಕುರಿತು ಒತ್ತಿಹೇಳಿದನು. ಅದೇನೆಂದರೆ, ನಾವು ಸಹೋದರನೊಬ್ಬನ ಮನನೋಯಿಸಿರುವಲ್ಲಿ ದೇವರಿಗೆ ಕಾಣಿಕೆಯನ್ನು ಅರ್ಪಿಸುವ ಮುಂಚೆ ಅವನೊಂದಿಗೆ ಸಮಾಧಾನ ಮಾಡಿಕೊಳ್ಳಬೇಕು.
5 ಯೇಸುವಿನ ಈ ಮಾತುಗಳಿಂದ ನಾವೇನನ್ನು ಕಲಿಯಬಲ್ಲೆವು? ನಾವು ಇತರರೊಂದಿಗೆ ನಡೆದುಕೊಳ್ಳುವ ರೀತಿಗೂ ಯೆಹೋವನೊಂದಿಗಿನ ನಮ್ಮ ಸಂಬಂಧಕ್ಕೂ ನಿಕಟ ನಂಟಿದೆ. (1 ಯೋಹಾ. 4:20) ಪ್ರಾಚೀನ ಸಮಯಗಳಲ್ಲಿ ಯಜ್ಞಗಳನ್ನರ್ಪಿಸುತ್ತಿದ್ದ ವ್ಯಕ್ತಿ, ಜೊತೆ ಮಾನವನನ್ನು ಸರಿಯಾಗಿ ಉಪಚರಿಸದಿದ್ದಲ್ಲಿ ಆ ಯಜ್ಞಗಳು ನಿರರ್ಥಕವಾಗಿರುತ್ತಿದ್ದವು.—ಮೀಕ 6:6-8 ಓದಿ.
ನಮ್ಮಲ್ಲಿ ದೀನತೆ ಇರಬೇಕು
6, 7. ಸಹೋದರನೊಬ್ಬನ ಮನನೋಯಿಸಿರುವಲ್ಲಿ ಅವನೊಂದಿಗೆ ಸಮಾಧಾನ ಮಾಡಿಕೊಳ್ಳಲು ದೀನತೆ ನಮಗೇಕೆ ಅಗತ್ಯ?
6 ನಾವು ಸಹೋದರನೊಬ್ಬನ ಮನನೋಯಿಸಿರುವಲ್ಲಿ ಅವನೊಂದಿಗೆ ಸಮಾಧಾನ ಮಾಡಿಕೊಳ್ಳುವಾಗ ನಮ್ಮ ದೀನಭಾವ ವ್ಯಕ್ತವಾಗುತ್ತದೆ. ದೀನ ಜನರು ತಮ್ಮ ಹಕ್ಕುಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ವಾದಕ್ಕಿಳಿಯುವುದಿಲ್ಲ. ಹೀಗೆ ವಾದಕ್ಕಿಳಿಯುವುದರಿಂದ ಸನ್ನಿವೇಶ ಇನ್ನಷ್ಟು ಬಿಗಡಾಯಿಸುವುದು. ಇಂಥದ್ದೇ ಸನ್ನಿವೇಶ ಹಿಂದೊಮ್ಮೆ ಕೊರಿಂಥದ ಕ್ರೈಸ್ತರ ಮಧ್ಯೆಯಿತ್ತು. ಆ ಕುರಿತು ಅಪೊಸ್ತಲ ಪೌಲನು ಈ ವಿಚಾರಪ್ರೇರಕ ವಿಷಯವನ್ನು ತಿಳಿಸಿದನು: “ನಿಮ್ಮ ನಿಮ್ಮಲ್ಲಿ ವ್ಯಾಜ್ಯವಾಡುವದೇ ನೀವು ಸೋತವರೆಂಬದಕ್ಕೆ ಗುರುತು. ಅದಕ್ಕಿಂತ ಅನ್ಯಾಯವನ್ನು ಯಾಕೆ ಸಹಿಸಬಾರದು? ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು?”—1 ಕೊರಿಂ. 6:6, 7.
7 ‘ನನ್ನದೇನೂ ತಪ್ಪಿಲ್ಲ, ತಪ್ಪು ನಿನ್ನದೇ’ ಎಂಬದನ್ನು ಸ್ಥಾಪಿಸಲಿಕ್ಕೆ ಸಹೋದರನ ಬಳಿ ಹೋಗಬೇಕೆಂದು ಯೇಸು ಹೇಳಲಿಲ್ಲ. ಬದಲಿಗೆ ನಮ್ಮ ಉದ್ದೇಶ ಶಾಂತಿಭರಿತ ಸಂಬಂಧವನ್ನು ಪುನಃ ಬೆಸೆಯುವುದೇ ಆಗಿರಬೇಕು. ಸಮಾಧಾನ ಮಾಡಿಕೊಳ್ಳಲು ಹೋದಾಗ ನಮ್ಮ ಅನಿಸಿಕೆಗಳನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಬೇಕು. ಆ ಸಹೋದರನ ಮನಸ್ಸಿಗೂ ನೋವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಒಂದು ವೇಳೆ ತಪ್ಪು ನಮ್ಮದಾಗಿರುವಲ್ಲಿ ದೀನತೆಯಿಂದ ಅದನ್ನು ಒಪ್ಪಿಕೊಳ್ಳಬೇಕು.
“ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ”
8. ಮತ್ತಾಯ 5:29, 30ರಲ್ಲಿರುವ ಯೇಸುವಿನ ಮಾತುಗಳ ತಾತ್ಪರ್ಯ ತಿಳಿಸಿ.
8 ಯೇಸು ತನ್ನ ಪರ್ವತ ಪ್ರಸಂಗದಲ್ಲಿ ನೈತಿಕತೆಯ ಕುರಿತು ಬಲವಾದ ಸಲಹೆ ಕೊಟ್ಟನು. ನಮ್ಮ ಅಪರಿಪೂರ್ಣ ಶರೀರದ ಅಂಗಗಳು ನಮಗೆ ಅಪಾಯ ತರಬಲ್ಲವು ಎಂಬುದು ಅವನಿಗೆ ತಿಳಿದಿತ್ತು. ಆದಕಾರಣ ಯೇಸು ಹೇಳಿದ್ದು: “ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು; ನಿನ್ನ ದೇಹವೆಲ್ಲಾ ನರಕದಲ್ಲಿ [“ಗೆಹೆನ್ನದಲ್ಲಿ,” NW] ಬೀಳುವದಕ್ಕಿಂತ ಅವಯವಗಳಲ್ಲಿ ಒಂದು ಹೋಗುವದು ನಿನಗೆ ಹಿತವಲ್ಲವೇ. ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಡಿದು ಬಿಸಾಟುಬಿಡು; ನಿನ್ನ ದೇಹವೆಲ್ಲಾ ನರಕದಲ್ಲಿ [“ಗೆಹೆನ್ನದಲ್ಲಿ,” NW] ಬೀಳುವದಕ್ಕಿಂತ ಅವಯವಗಳಲ್ಲಿ ಒಂದು ಹೋಗುವದು ನಿನಗೆ ಹಿತವಲ್ಲವೇ.”—ಮತ್ತಾ. 5:29, 30.
9. ನಮ್ಮ “ಕಣ್ಣು” ಇಲ್ಲವೇ ‘ಕೈ’ ಹೇಗೆ ನಮ್ಮನ್ನು ‘ಪಾಪದಲ್ಲಿ ಸಿಕ್ಕಿಸಬಲ್ಲದು’?
9 ಇಲ್ಲಿ ಯೇಸು ತಿಳಿಸಿದ “ಕಣ್ಣು,” ವಿಷಯವೊಂದರ ಮೇಲೆ ಗಮನ ಕೇಂದ್ರೀಕರಿಸುವ ನಮ್ಮ ಸಾಮರ್ಥ್ಯಕ್ಕೂ, ‘ಕೈ’ ನಾವು ನಮ್ಮ ಕೈಗಳಿಂದ ಮಾಡುವ ಸಂಗತಿಗಳಿಗೂ ಸೂಚಿಸುತ್ತದೆ. ನಾವು ಅಜಾಗರೂಕರಾಗಿರುವಲ್ಲಿ ದೇಹದ ಈ ಅಂಗಗಳು ನಮ್ಮನ್ನು ‘ಪಾಪದಲ್ಲಿ ಸಿಕ್ಕಿಸುವವು’ ಮತ್ತು ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆಯುವುದನ್ನು’ ನಿಲ್ಲಿಸುವಂತೆ ಮಾಡುವವು. (ಆದಿ. 5:22; 6:9) ಆದ್ದರಿಂದ ದೇವರಿಗೆ ಅವಿಧೇಯರಾಗುವಂತೆ ಮಾಡುವ ಪ್ರಲೋಭನೆಗೊಳಗಾದಾಗ ನಾವು ಸಾಂಕೇತಿಕವಾಗಿ ಕಣ್ಣನ್ನು ಕೀಳಬೇಕು ಅಥವಾ ಕೈಯನ್ನು ಕಡಿದು ಹಾಕಬೇಕು. ಇದರರ್ಥ ನಾವು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
10, 11. ಲೈಂಗಿಕ ಅನೈತಿಕತೆಯಿಂದ ದೂರವಿರಲು ನಮಗೆ ಯಾವುದು ಸಹಾಯ ಮಾಡಬಲ್ಲದು?
10 ಅನೈತಿಕ ವಿಷಯಗಳ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸದಂತೆ ಹೇಗೆ ಜಾಗ್ರತೆ ವಹಿಸಬಹುದು? ದೇವಭಯವುಳ್ಳ ಯೋಬನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” (ಯೋಬ 31:1) ವಿವಾಹಿತನಾಗಿದ್ದ ಯೋಬನು ನೈತಿಕ ವಿಷಯದಲ್ಲಿ ದೇವರ ನಿಯಮಗಳನ್ನು ಮುರಿಯಬಾರದೆಂಬ ದೃಢನಿರ್ಧಾರ ಮಾಡಿದ್ದನು. ನಾವು ವಿವಾಹಿತರಿರಲಿ ಇಲ್ಲದಿರಲಿ ನಮ್ಮ ಮನೋಭಾವವೂ ಅದೇ ಆಗಿರಬೇಕು. ಲೈಂಗಿಕ ಅನೈತಿಕತೆಯಿಂದ ದೂರವಿರಲು ನಾವು ದೇವರ ಪವಿತ್ರಾತ್ಮದಿಂದ ಮಾರ್ಗದರ್ಶಿತರಾಗಬೇಕು ಏಕೆಂದರೆ ಅದು, ದೇವರನ್ನು ಪ್ರೀತಿಸುವವರಲ್ಲಿ ಸ್ವನಿಯಂತ್ರಣವನ್ನು ಫಲಿಸುತ್ತದೆ.—ಗಲಾ. 5:22-25.
11 ಲೈಂಗಿಕ ಅನೈತಿಕತೆಯಿಂದ ದೂರವಿರಲು ನಾವು ಹೀಗೆ ಕೇಳಿಕೊಳ್ಳುವುದು ಸಹಾಯಕಾರಿ: ‘ನನ್ನ ಕಣ್ಣುಗಳು ನನ್ನಲ್ಲಿ ಪುಸ್ತಕ, ಟಿ.ವಿ. ಅಥವಾ ಇಂಟರ್ನೆಟ್ನಲ್ಲಿ ಸಿಗುವ ಅನೈತಿಕ ಮಾಹಿತಿಗಾಗಿ ಆಸಕ್ತಿ ಕೆರಳಿಸುವಂತೆ ಬಿಡುತ್ತೇನೋ?’ ಶಿಷ್ಯ ಯಾಕೋಬನ ಈ ಮಾತುಗಳನ್ನು ಸಹ ನಾವು ನೆನಪಿನಲ್ಲಿಡೋಣ: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” (ಯಾಕೋ. 1:14, 15) ಒಬ್ಬ ಸಮರ್ಪಿತ ವ್ಯಕ್ತಿ ಅನೈತಿಕ ಉದ್ದೇಶದಿಂದ ವಿರುದ್ಧ ಲಿಂಗದ ವ್ಯಕ್ತಿಯನ್ನು ‘ನೋಡುತ್ತಿರುವಲ್ಲಿ’ ತನ್ನ ಕಣ್ಣನ್ನು ಕಿತ್ತು ಬಿಸಾಡುತ್ತಿದ್ದಾನೋ ಏನೋ ಎನ್ನುವಷ್ಟು ತೀವ್ರ ಬದಲಾವಣೆಗಳನ್ನು ಮಾಡಬೇಕು.—ಮತ್ತಾಯ 5:27, 28 ಓದಿ.
12. ಪೌಲನು ಕೊಟ್ಟ ಯಾವ ಸಲಹೆ, ಅನೈತಿಕ ಆಶೆಗಳ ವಿರುದ್ಧ ಹೋರಾಡುವಂತೆ ನಮಗೆ ಸಹಾಯ ಮಾಡುವುದು?
12 ಕೈಗಳನ್ನು ಅಯೋಗ್ಯ ಕಾರ್ಯಗಳಿಗಾಗಿ ಬಳಸಿ ಯೆಹೋವನ ನೈತಿಕ ಮಟ್ಟಗಳನ್ನು ಉಲ್ಲಂಘಿಸುವ ಸಾಧ್ಯತೆಯಿರುವುದರಿಂದ ನೈತಿಕವಾಗಿ ಶುದ್ಧರಾಗಿರಲು ನಾವು ದೃಢ ಸಂಕಲ್ಪದಿಂದಿರಬೇಕು. ಆದಕಾರಣ ನಾವು ಪೌಲನ ಈ ಸಲಹೆಯನ್ನು ಪಾಲಿಸಬೇಕು: “ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.” (ಕೊಲೊ. 3:5) “ಸಾಯಿಸಿರಿ” ಎಂಬ ಪದವು ಅನೈತಿಕ ಶರೀರದಾಶೆಗಳ ವಿರುದ್ಧ ಹೋರಾಡಲು ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳನ್ನು ಒತ್ತಿಹೇಳುತ್ತದೆ.
13, 14. ಅನೈತಿಕ ಯೋಚನೆಗಳು ಮತ್ತು ಕ್ರಿಯೆಗಳನ್ನು ದೂರವಿಡುವುದು ಪ್ರಾಮುಖ್ಯವೇಕೆ?
13 ಒಬ್ಬ ವ್ಯಕ್ತಿಗೆ ತನ್ನ ಕೈ ಅಥವಾ ಕಾಲಿನಿಂದ ಜೀವಕ್ಕೆ ಅಪಾಯವಿದೆಯೆಂದು ತಿಳಿದುಬರುವಾಗ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಕತ್ತರಿಸಿ ತೆಗೆಯಲು ಸಹ ಸಿದ್ಧನಿರುತ್ತಾನೆ. ಹಾಗೆಯೇ, ನಮ್ಮ ಆಧ್ಯಾತ್ಮಿಕತೆಗೆ ಅಪಾಯವನ್ನೊಡ್ಡುವ ಅನೈತಿಕ ಯೋಚನೆಗಳು ಮತ್ತು ಕ್ರಿಯೆಗಳನ್ನು ದೂರವಿಡಲು ಕಣ್ಣು ಅಥವಾ ಕೈಯನ್ನು ಸಾಂಕೇತಿಕ ಅರ್ಥದಲ್ಲಿ ‘ಕಿತ್ತು ಬಿಸಾಡುವುದು’ ಅಗತ್ಯ. ಗೆಹೆನ್ನದಿಂದ ಸೂಚಿಸಲ್ಪಟ್ಟ ನಿತ್ಯನಾಶನವನ್ನು ತಪ್ಪಿಸಿಕೊಳ್ಳುವ ಏಕೈಕ ಮಾರ್ಗವು ಮಾನಸಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧರಾಗಿ ಉಳಿಯುವುದೇ ಆಗಿದೆ.
14 ಬಾಧ್ಯತೆಯಾಗಿ ಪಡೆದಿರುವ ಪಾಪ ಮತ್ತು ಅಪರಿಪೂರ್ಣತೆಯಿಂದಾಗಿ, ನೈತಿಕವಾಗಿ ಶುದ್ಧರಾಗಿರಲು ಪ್ರಯತ್ನ ಅಗತ್ಯ. ಪೌಲನು ಹೇಳಿದ್ದು: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂ. 9:27) ಆದ್ದರಿಂದ ನೈತಿಕತೆಯ ಕುರಿತ ಯೇಸುವಿನ ಸಲಹೆಯನ್ನು ಅನ್ವಯಿಸಿಕೊಳ್ಳಲು ನಿಶ್ಚಿತರಾಗಿರೋಣ. ಅವನ ವಿಮೋಚನಾ ಮೌಲ್ಯದ ಯಜ್ಞಕ್ಕೆ ಗಣ್ಯತೆಯನ್ನು ತೋರಿಸದ ರೀತಿಯಲ್ಲಿ ಎಂದೂ ನಡೆದುಕೊಳ್ಳದಿರೋಣ.—ಮತ್ತಾ. 20:28; ಇಬ್ರಿ. 6:4-6.
“ಕೊಡಿರಿ”
15, 16. (ಎ) ಕೊಡುವುದರಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು? (ಬಿ) ಲೂಕ 6:38ರಲ್ಲಿರುವ ಯೇಸುವಿನ ಮಾತುಗಳ ಅರ್ಥವೇನು?
15 ಯೇಸುವಿನ ಮಾತುಗಳು ಮತ್ತು ಅತ್ಯುತ್ಕೃಷ್ಟ ಮಾದರಿ, ಕೊಡುವ ಮನೋಭಾವವನ್ನು ಉತ್ತೇಜಿಸುತ್ತದೆ. ಅಪರಿಪೂರ್ಣ ಮಾನವರ ಪ್ರಯೋಜನಾರ್ಥ ಅವನು ಭೂಮಿಗೆ ಬರುವ ಮೂಲಕ ಅಸಾಧಾರಣವಾದ ಉದಾರತೆ ತೋರಿಸಿದನು. (2 ಕೊರಿಂಥ 8:9 ಓದಿ.) ಒಬ್ಬ ಮಾನವನಾಗಿ ಹುಟ್ಟಿ ಪಾಪಪೂರ್ಣ ಮಾನವರಿಗಾಗಿ ತನ್ನ ಜೀವವನ್ನು ಕೊಡಲು, ಯೇಸು ಸ್ವರ್ಗೀಯ ಮಹಿಮೆಯನ್ನು ಸಿದ್ಧಮನಸ್ಸಿನಿಂದ ಬಿಟ್ಟುಬಂದನು. ಈ ಮಾನವರಲ್ಲಿ ಕೆಲವರು ಸ್ವರ್ಗೀಯ ರಾಜ್ಯದಲ್ಲಿ ಅವನೊಂದಿಗೆ ಜೊತೆ ಅರಸರಾಗಿ ಐಶ್ವರ್ಯವಂತರಾಗುವರು. (ರೋಮಾ. 8:16, 17) ಯೇಸು ಈ ಮುಂದಿನ ಮಾತುಗಳನ್ನು ಹೇಳುತ್ತಾ ಉದಾರತೆಯನ್ನು ಪ್ರೋತ್ಸಾಹಿಸಿದನು:
16 “ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” (ಲೂಕ 6:38) ‘ಸೆರಗಿಗೆ ಹಾಕುವುದು’ ಎಂಬ ಅಭಿವ್ಯಕ್ತಿಯು ಪೂರ್ವದ ದೇಶಗಳ ಮಾರುಕಟ್ಟೆಗಳಲ್ಲಿದ್ದ ರೂಢಿಗೆ ಸೂಚಿಸುತ್ತದೆ. ಜನರು ಒಂದು ಅಗಲವಾದ ಮೇಲಂಗಿಯನ್ನು ಧರಿಸುತ್ತಿದ್ದರು. ಇದನ್ನೇ ಕೆಲವೊಮ್ಮೆ ಸಾಮಾನುಗಳನ್ನು ತುಂಬಿಸುವ ಚೀಲವಾಗಿ ಉಪಯೋಗಿಸಲಾಗುತ್ತಿದ್ದು, ವ್ಯಾಪಾರಿಗಳು ಅದರಲ್ಲಿ ಸಾಮಾನುಗಳನ್ನು ಹಾಕುತ್ತಿದ್ದರು. ನಾವು ಉದಾರವಾಗಿ ಕೊಡುವಲ್ಲಿ ಪ್ರಾಯಶಃ ನಾವು ಅಗತ್ಯದಲ್ಲಿರುವಾಗ ಹೆಚ್ಚನ್ನು ಪಡೆಯುವೆವು.—ಪ್ರಸಂ. 11:2.
17. ಕೊಡುವ ವಿಷಯದಲ್ಲಿ ಯೆಹೋವನು ಹೇಗೆ ಅತ್ಯುತ್ಕೃಷ್ಟ ಮಾದರಿಯನ್ನಿಟ್ಟನು, ಮತ್ತು ಯಾವ ರೀತಿಯ ಕೊಡುವಿಕೆಯಿಂದ ನಮಗೆ ಸಂತೋಷ ಸಿಗುತ್ತದೆ?
17 ಸಂತೋಷದಿಂದ ಕೊಡುವವರನ್ನು ಯೆಹೋವನು ಪ್ರೀತಿಸುತ್ತಾನೆ ಮತ್ತು ಅವರಿಗೆ ಪ್ರತಿಫಲ ಕೊಡುತ್ತಾನೆ. ಕೊಡುವ ವಿಷಯದಲ್ಲಿ ಯೆಹೋವನೇ ಅತ್ಯುತ್ಕೃಷ್ಟ ಮಾದರಿಯನ್ನಿಡುತ್ತಾ ತನ್ನ ಒಬ್ಬನೇ ಮಗನನ್ನು ಕೊಟ್ಟನು. “ಆತನನ್ನು [ಯೇಸುವನ್ನು] ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾ. 3:16) ಪೌಲನು ಬರೆದದ್ದು: “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂದು ತಿಳುಕೊಳ್ಳಿರಿ. ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂ. 9:6, 7) ಸತ್ಯಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ನಾವು ಸಮಯ, ಶಕ್ತಿ ಮತ್ತು ಆರ್ಥಿಕ ಬೆಂಬಲ ಕೊಡುವುದರಿಂದ ಸಂತೋಷ ಹಾಗೂ ಪ್ರತಿಫಲ ಖಂಡಿತ ಸಿಗುವುದು.—ಜ್ಞಾನೋಕ್ತಿ 19:17; ಲೂಕ 16:9 ಓದಿ.
“ನಿನ್ನ ಮುಂದೆ ಕೊಂಬೂದಿಸಬೇಡ”
18. ಯಾವಾಗ ನಮಗೆ ನಮ್ಮ ಸ್ವರ್ಗೀಯ ಪಿತನಿಂದ “ಫಲದೊರೆಯದು”?
18 “ಜನರು ನೋಡಲಿ ಎಂದು ನಿಮ್ಮ ಧರ್ಮಕಾರ್ಯಗಳನ್ನು ಅವರ ಮುಂದೆ ಮಾಡಬಾರದು, ನೋಡಿರಿ; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ ಫಲದೊರೆಯದು.” (ಮತ್ತಾ. 6:1) ಯೇಸು, ‘ಧರ್ಮಕಾರ್ಯಗಳು’ ಅನ್ನುವಾಗ ದೈವಿಕ ಚಿತ್ತಕ್ಕನುಗುಣವಾದ ನಡತೆಗೆ ಸೂಚಿಸುತ್ತಿದ್ದನು. ಆದರೆ ಇಂತಹ ದೈವಭಕ್ತಿಯ ಕ್ರಿಯೆಗಳನ್ನು ಜನರ ಮುಂದೆ ಮಾಡಲೇಬಾರದೆಂದು ಅವನು ಹೇಳುತ್ತಿರಲಿಲ್ಲ. ಏಕೆಂದರೆ ಸ್ವತಃ ಅವನೇ ತನ್ನ ಶಿಷ್ಯರಿಗಂದದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.” (ಮತ್ತಾ. 5:14-16) ಒಂದುವೇಳೆ ನಾವು ಅಂಥ ಕ್ರಿಯೆಗಳನ್ನು, ರಂಗಮಂಚದಲ್ಲಿ ನಟಿಸುವ ನಟರಂತೆ “ಜನರು ನೋಡಲಿ” ಮತ್ತು ಹೊಗಳಲಿ ಎಂಬ ಇರಾದೆಯಿಂದ ಮಾಡುವಲ್ಲಿ ನಮ್ಮ ಸ್ವರ್ಗೀಯ ಪಿತನಿಂದ ಯಾವುದೇ “ಫಲದೊರೆಯದು.” ಅಂಥ ಇರಾದೆಗಳಿರುವಲ್ಲಿ ನಮಗೆ ದೇವರೊಂದಿಗೆ ಆಪ್ತ ಸಂಬಂಧವೂ ಇರದು ರಾಜ್ಯಾಡಳಿತದ ನಿತ್ಯಾಶೀರ್ವಾದಗಳೂ ಸಿಗವು.
19, 20. (ಎ) ‘ಧರ್ಮಕೊಡುವಾಗ ಕೊಂಬೂದಿಸಬೇಡ’ ಎಂದು ಯೇಸು ಹೇಳಿದ್ದರ ಅರ್ಥವೇನು? (ಬಿ) ಬಲಗೈ ಮಾಡಿದ್ದು ಎಡಗೈಗೆ ತಿಳಿಯದಂತೆ ಮಾಡುವುದು ಹೇಗೆ?
19 ನಮಗೆ ಯೋಗ್ಯ ಮನೋಭಾವವಿರುವಲ್ಲಿ ನಾವು ಯೇಸುವಿನ ಈ ಸಲಹೆಯನ್ನು ಪಾಲಿಸುವೆವು: “ಆದದರಿಂದ ನೀನು ಧರ್ಮಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾ. 6:2) ‘ಧರ್ಮಕೊಡುವುದು’ ಎಂಬ ಅಭಿವ್ಯಕ್ತಿಯು ಅಗತ್ಯದಲ್ಲಿರುವವರ ಸಹಾಯಾರ್ಥವಾಗಿ ಕೊಡುವ ದಾನಗಳಿಗೆ ಸೂಚಿಸುತ್ತದೆ. (ಯೆಶಾಯ 58:6, 7 ಓದಿ.) ಬಡವರಿಗೆ ಸಹಾಯ ಮಾಡಲು ಯೇಸು ಮತ್ತವನ ಅಪೊಸ್ತಲರು ಹಣ ಕೂಡಿಸಿಡುತ್ತಿದ್ದರು. (ಯೋಹಾ. 12:5-8; 13:29) ದಾನಧರ್ಮ ಮಾಡುವಾಗ ಯಾರೂ ಅಕ್ಷರಶಃವಾಗಿ ಕೊಂಬೂದುತ್ತಿರಲಿಲ್ಲ. ಆದ್ದರಿಂದ “ಧರ್ಮಕೊಡುವಾಗ” ನಾವು ‘ಕೊಂಬೂದಿಸಬಾರದು’ ಎಂದು ಯೇಸು ಹೇಳಿದಾಗ ಆತನು ಉತ್ಪ್ರೇಕ್ಷಾಲಂಕಾರ ಬಳಸುತ್ತಿದ್ದನು. ನಾವು ದಾನಧರ್ಮ ಮಾಡಿದ್ದೇವೆಂದು ಯೆಹೂದಿ ಫರಿಸಾಯರಂತೆ ಊರೆಲ್ಲಾ ಡಂಗುರ ಸಾರಿ ಹೇಳಬಾರದು. ಅವರನ್ನು ಯೇಸು “ಕಪಟಿಗಳು” ಎಂದು ಕರೆದನು ಏಕೆಂದರೆ ಅವರು “ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ” ನಿಂತು ತಮ್ಮ ದಾನಧರ್ಮಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಈ ಕಪಟಿಗಳು ‘ತಮಗೆ ಬರತಕ್ಕ ಫಲವನ್ನು ಹೊಂದಿದ್ದರು.’ ಅವರಿಗೆ ಸಿಗುವ ಪ್ರತಿಫಲ ಕೇವಲ ಜನರಿಂದ ಬಾಯಿತುಂಬ ಹೊಗಳಿಕೆ ಮತ್ತು ಸಭಾಮಂದಿರಗಳಲ್ಲಿ ಪ್ರಮುಖ ರಬ್ಬಿಗಳೊಂದಿಗೆ ಮುಖ್ಯಪೀಠ ಅಷ್ಟೇ. ಆದರೆ ಯೆಹೋವನಿಂದ ಅವರಿಗೇನೂ ಸಿಗುತ್ತಿರಲಿಲ್ಲ. (ಮತ್ತಾ. 23:6) ಹಾಗಾದರೆ ಯೇಸುವಿನ ಶಿಷ್ಯರು ಏನು ಮಾಡಬೇಕಿತ್ತು? ಯೇಸು ಅವರಿಗೂ ನಮಗೂ ಹೇಳಿದ್ದು:
20 “ಆದರೆ ನೀನು ದಾನಧರ್ಮಗಳನ್ನು ಮಾಡುವಾಗ ನಿನ್ನ ಬಲಗೈ ಮಾಡುತ್ತಿರುವುದು ನಿನ್ನ ಎಡಗೈಗೆ ತಿಳಿಯದಿರಲಿ; ನಿನ್ನ ದಾನಧರ್ಮಗಳು ಗೋಪ್ಯವಾಗಿರಲಿ; ಆಗ ರಹಸ್ಯವಾದ ಸ್ಥಳದಿಂದ ನೋಡುತ್ತಿರುವ ನಿನ್ನ ತಂದೆಯು ನಿನಗೆ ಪ್ರತಿಫಲ ಕೊಡುವನು.” (ಮತ್ತಾ. 6:3, 4, NW) ಹೆಚ್ಚಾಗಿ ನಮ್ಮ ಕೈಗಳು ಜೊತೆಯಾಗಿ ಕೆಲಸ ಮಾಡುತ್ತವೆ. ಆದ್ದರಿಂದ ಬಲಗೈ ಮಾಡಿದ್ದು ಎಡಗೈಗೆ ತಿಳಿಯಬಾರದು ಎಂಬುದರ ಅರ್ಥ ನಮ್ಮ ದಾನಧರ್ಮಗಳ ಬಗ್ಗೆ ಬೇರೆಯವರಿಗೆ ಗೊತ್ತಾಗಬಾರದು. ನಮ್ಮ ಬಲಗೈಗೆ ಎಡಗೈ ಎಷ್ಟು ಹತ್ತಿರವಿದೆಯೋ ಅಷ್ಟು ಹತ್ತಿರದ ವ್ಯಕ್ತಿಗೂ ಅದು ಗೊತ್ತಾಗಬಾರದು.
21. ‘ರಹಸ್ಯವಾದ ಸ್ಥಳದಿಂದ ನೋಡುತ್ತಿರುವವನು’ ಕೊಡುವ ಪ್ರತಿಫಲದಲ್ಲಿ ಏನು ಸೇರಿದೆ?
21 ನಾವು ದಾನಮಾಡಿದ್ದರ ಬಗ್ಗೆ ಕೊಚ್ಚಿಕೊಳ್ಳದಿರುವಲ್ಲಿ, ನಾವು ಮಾಡಿದ ‘ದಾನಧರ್ಮವು’ ಗೋಪ್ಯವಾಗಿರುವುದು. ಆಗ “ರಹಸ್ಯವಾದ ಸ್ಥಳದಿಂದ ನೋಡುತ್ತಿರುವ” ನಮ್ಮ ತಂದೆಯು ಪ್ರತಿಫಲ ಕೊಡುವನು. ನಮ್ಮ ಸ್ವರ್ಗೀಯ ಪಿತನು ಪರಲೋಕದಲ್ಲಿ ವಾಸಿಸುತ್ತಿದ್ದು ಮಾನವ ದೃಷ್ಟಿಗೆ ಅಗೋಚರವಾಗಿರುವ ಕಾರಣ ಮಾನವ ದೃಷ್ಟಿಕೋನದಲ್ಲಿ ‘ರಹಸ್ಯವಾದ ಸ್ಥಳದಲ್ಲಿದ್ದಾನೆ.’ (ಯೋಹಾ. 1:18) ‘ರಹಸ್ಯವಾದ ಸ್ಥಳದಿಂದ ನೋಡುತ್ತಿರುವವನು’ ಕೊಡುವ ಪ್ರತಿಫಲದಲ್ಲಿ, ಯೆಹೋವನು ನಮ್ಮನ್ನು ತನ್ನೊಂದಿಗೆ ಆಪ್ತ ಸಂಬಂಧಕ್ಕೆ ತರುವುದು, ನಮ್ಮ ಪಾಪಗಳನ್ನು ಕ್ಷಮಿಸುವುದು ಮತ್ತು ನಮಗೆ ನಿತ್ಯಜೀವ ಕೊಡುವುದು ಸೇರಿದೆ. (ಜ್ಞಾನೋ. 3:32; ಯೋಹಾ. 17:3; ಎಫೆ. 1:7) ಅದು ಮಾನವರ ಹೊಗಳಿಕೆಗೆ ಪಾತ್ರರಾಗುವುದಕ್ಕಿಂತ ಎಷ್ಟೋ ಹೆಚ್ಚು ಮಿಗಿಲಾದದ್ದಾಗಿದೆ!
ಅಮೂಲ್ಯವಾಗಿ ಪರಿಗಣಿಸಬೇಕಾದ ಮಾತುಗಳು
22, 23. ನಾವು ಯೇಸುವಿನ ಮಾತುಗಳನ್ನು ಏಕೆ ಅಮೂಲ್ಯವಾಗಿ ಪರಿಗಣಿಸಬೇಕು?
22 ಪರ್ವತ ಪ್ರಸಂಗ ನಿಜಕ್ಕೂ ಬಹುಮುಖಗಳುಳ್ಳ ಸೊಬಗಿನ ಆಧ್ಯಾತ್ಮಿಕ ರತ್ನಗಳಿಂದ ತುಂಬಿದೆ. ಈ ಕ್ಲೇಶಭರಿತ ಲೋಕದಲ್ಲೂ ನಮಗೆ ಸಂತೋಷವನ್ನು ಕೊಡಬಲ್ಲ ಅಮೂಲ್ಯ ಮಾತುಗಳು ಅದರಲ್ಲಿವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಹೌದು, ಯೇಸುವಿನ ಮಾತುಗಳನ್ನು ಅಮೂಲ್ಯವೆಂದೆಣಿಸಿ ಅವುಗಳು ನಮ್ಮ ಮನೋಭಾವ ಮತ್ತು ಜೀವನರೀತಿಯನ್ನು ಪ್ರಭಾವಿಸುವಂತೆ ಬಿಡುವಲ್ಲಿ ನಾವು ಸಂತೋಷಿತರಾಗಬಲ್ಲೆವು.
23 ಯೇಸುವಿನ ಮಾತುಗಳನ್ನು “ಕೇಳಿ” ಅವುಗಳಂತೆ “ನಡೆಯುವವನು” ಆಶೀರ್ವದಿತನು. (ಮತ್ತಾಯ 7:24, 25 ಓದಿ.) ಆದ್ದರಿಂದ ಯೇಸುವಿನ ಸಲಹೆಗನುಸಾರ ನಡೆಯಲು ಗಟ್ಟಿಮನಸ್ಸು ಮಾಡೋಣ. ಪರ್ವತ ಪ್ರಸಂಗದಲ್ಲಿ ಅವನು ಹೇಳಿದ ಇನ್ನಷ್ಟು ಮಾತುಗಳನ್ನು ಈ ಲೇಖನಮಾಲೆಯ ಕೊನೆಯ ಲೇಖನದಲ್ಲಿ ಪರಿಗಣಿಸಲಾಗುವುದು.
ನಿಮ್ಮ ಉತ್ತರವೇನು?
• ಸಹೋದರನೊಬ್ಬನ ಮನನೋಯಿಸಿರುವಲ್ಲಿ ಅವನೊಂದಿಗೆ ಸಮಾಧಾನ ಮಾಡಿಕೊಳ್ಳುವುದು ಪ್ರಾಮುಖ್ಯವೇಕೆ?
• “ಬಲಗಣ್ಣು” ನಮ್ಮನ್ನು ಪಾಪದಲ್ಲಿ ಸಿಕ್ಕಿಸದಂತೆ ಏನು ಮಾಡಬಲ್ಲೆವು?
• ಕೊಡುವ ವಿಷಯದಲ್ಲಿ ನಮ್ಮ ಮನೋಭಾವ ಹೇಗಿರಬೇಕು?
[ಪುಟ 11ರಲ್ಲಿರುವ ಚಿತ್ರ]
ಜೊತೆ ವಿಶ್ವಾಸಿಯ ಮನನೋಯಿಸಿರುವಲ್ಲಿ ಅವರೊಂದಿಗೆ ‘ಸಮಾಧಾನ ಮಾಡಿಕೊಳ್ಳುವುದು’ ಎಷ್ಟು ಉತ್ತಮ!
[ಪುಟ 12, 13ರಲ್ಲಿರುವ ಚಿತ್ರಗಳು]
ಸಂತೋಷದಿಂದ ಕೊಡುವವರನ್ನು ಯೆಹೋವನು ಆಶೀರ್ವದಿಸುತ್ತಾನೆ