ತಲಾಂತುಗಳ ದೃಷ್ಟಾಂತದಿಂದ ಕಲಿಯಿರಿ
‘ಅವನು ಒಬ್ಬನಿಗೆ ಐದು ತಲಾಂತುಗಳನ್ನು, ಇನ್ನೊಬ್ಬನಿಗೆ ಎರಡು ತಲಾಂತುಗಳನ್ನು, ಮತ್ತೊಬ್ಬನಿಗೆ ಒಂದು ತಲಾಂತನ್ನು ಕೊಟ್ಟನು.’—ಮತ್ತಾ. 25:15.
1, 2. ಯೇಸು ತಲಾಂತುಗಳ ಕಥೆ ಹೇಳಿದ್ದೇಕೆ?
ಯೇಸು ತಲಾಂತುಗಳ ಕಥೆಯನ್ನು ಹೇಳಿದ್ದು ಅಭಿಷಿಕ್ತ ಹಿಂಬಾಲಕರಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಸ್ಪಷ್ಟವಾಗಿ ತಿಳಿಸಲಿಕ್ಕಾಗಿ. ಆದರೆ ಈ ಕಥೆಯಿಂದ ಯೇಸುವಿನ ಎಲ್ಲಾ ಶಿಷ್ಯರಿಗೂ ಪಾಠ ಇದೆ. ನಮಗೆ ಸ್ವರ್ಗೀಯ ನಿರೀಕ್ಷೆ ಇರಲಿ ಭೂ ನಿರೀಕ್ಷೆ ಇರಲಿ ಈ ಕಥೆಯ ಅರ್ಥವೇನೆಂದು ನಾವು ತಿಳಿದುಕೊಳ್ಳಬೇಕು.
2 ಯೇಸು ಈ ಕಥೆಯನ್ನು ಯಾವಾಗ ಹೇಳಿದನು? ತಾನು ರಾಜನಾದಾಗ ಮತ್ತು ಅಂತ್ಯಕಾಲ ಆರಂಭವಾದಾಗ ತೋರಿಬರುವ ಸೂಚನೆಯನ್ನು ತನ್ನ ಶಿಷ್ಯರಿಗೆ ಕೊಡುತ್ತಿದ್ದಾಗ ಹೇಳಿದನು. (ಮತ್ತಾ. 24:3) ಆದ್ದರಿಂದ ತಲಾಂತುಗಳ ಕಥೆ ಯೇಸು ಹೇಳಿದ ಸೂಚನೆಯ ಭಾಗವಾಗಿದ್ದು ನಮ್ಮ ದಿನಗಳಲ್ಲಿ ನೆರವೇರುತ್ತಿದೆ.
3. ಮತ್ತಾಯ 24, 25 ಅಧ್ಯಾಯಗಳಲ್ಲಿನ ಕಥೆಗಳಿಂದ ಯಾವ ಪಾಠಗಳನ್ನು ಕಲಿಯಬಹುದು?
3 ತಲಾಂತುಗಳ ಕಥೆಯನ್ನು ಯೇಸು ಹೇಳಿದಾಗ ಅಂತ್ಯಕಾಲದ ಸೂಚನೆಯ ಭಾಗವಾಗಿರುವ ಇನ್ನೂ ಮೂರು ಕಥೆಗಳನ್ನು ಹೇಳಿದನು. ಈ ಕಥೆಗಳಲ್ಲಿ ಆತನ ಹಿಂಬಾಲಕರಲ್ಲಿರಬೇಕಾದ ನಿರ್ದಿಷ್ಟ ಗುಣಗಳನ್ನು ತಿಳಿಸಲಾಗಿದೆ. ಈ ಕಥೆಗಳು ಮತ್ತಾಯ 24:45ರಿಂದ 25:46ನೇ ವಚನಗಳಲ್ಲಿವೆ. ಯೇಸು ಹೇಳಿದ ಮೊದಲ ಕಥೆ ನಂಬಿಗಸ್ತ ಆಳಿನ ಕುರಿತಾಗಿದೆ. ಇವರು ಅಭಿಷಿಕ್ತರ ಚಿಕ್ಕ ಗುಂಪಾಗಿದ್ದು ಯೆಹೋವನ ಜನರಿಗೆ ಕಲಿಸುವ ಜವಾಬ್ದಾರಿ ಹೊಂದಿದ್ದಾರೆ. ಇವರು ನಂಬಿಗಸ್ತರು ಮತ್ತು ವಿವೇಚನೆಯುಳ್ಳವರು ಆಗಿರಬೇಕು.a (ಪಾದಟಿಪ್ಪಣಿ ನೋಡಿ.) ಎರಡನೇ ಕಥೆ ಹತ್ತು ಕನ್ಯೆಯರ ಕುರಿತಾಗಿದೆ. ಆ ಕಥೆಯಲ್ಲಿ ಯೇಸು ತನ್ನೆಲ್ಲಾ ಅಭಿಷಿಕ್ತರಿಗೆ ಸಿದ್ಧರಾಗಿರಬೇಕು ಮತ್ತು ಎಚ್ಚರದಿಂದಿರಬೇಕು ಎಂಬ ಎಚ್ಚರಿಕೆ ಕೊಟ್ಟನು. ಯಾಕೆಂದರೆ ಆತನು ಬರುವ ದಿನ ಅಥವಾ ಗಳಿಗೆ ಅವರಿಗೆ ಗೊತ್ತಿಲ್ಲ.b (ಪಾದಟಿಪ್ಪಣಿ ನೋಡಿ.) ಮೂರನೇ ಕಥೆ ತಲಾಂತುಗಳ ಕುರಿತಾಗಿದೆ. ಅಭಿಷಿಕ್ತರು ತಮ್ಮ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸಲು ಕಷ್ಟಪಟ್ಟು ಕೆಲಸಮಾಡಬೇಕು ಎಂದು ಈ ಕಥೆಯ ಮೂಲಕ ಯೇಸು ಕಲಿಸಿದನು. ನಾಲ್ಕನೇ ಕಥೆ ಕುರಿ ಮತ್ತು ಆಡುಗಳ ಕುರಿತಾಗಿದೆ. ಯೇಸು ಇದನ್ನು ಭೂಮಿ ಮೇಲೆ ಶಾಶ್ವತವಾಗಿ ಜೀವಿಸುವವರನ್ನು ಮನಸ್ಸಿನಲ್ಲಿಟ್ಟು ಹೇಳಿದನು. ಇವರು ನಿಷ್ಠರಾಗಿರಬೇಕು ಮತ್ತು ಅಭಿಷಿಕ್ತರಿಗೆ ತಮ್ಮಿಂದಾದಷ್ಟು ಬೆಂಬಲಕೊಡಬೇಕು ಎಂದು ಒತ್ತಿಹೇಳುತ್ತಿದ್ದಾನೆ.c (ಪಾದಟಿಪ್ಪಣಿ ನೋಡಿ.) ಈ ಲೇಖನದಲ್ಲಿ ತಲಾಂತುಗಳ ಕಥೆಯ ಅರ್ಥವನ್ನು ನೋಡಲಿದ್ದೇವೆ.
ಯಜಮಾನನು ತನ್ನ ಆಳುಗಳಿಗೆ ತುಂಬ ಹಣ ಕೊಡುತ್ತಾನೆ
4, 5. (ಎ) ಕಥೆಯಲ್ಲಿರುವ ಮನುಷ್ಯ ಯಾರನ್ನು ಸೂಚಿಸುತ್ತಾನೆ? (ಬಿ) ತಲಾಂತು ಎಂದರೇನು?
4 ಮತ್ತಾಯ 25:14-30 ಓದಿ. ತಲಾಂತುಗಳ ಕಥೆಯಲ್ಲಿ ಪ್ರಯಾಣಮಾಡಿದ ಒಬ್ಬ ಮನುಷ್ಯನ ಕುರಿತು ಯೇಸು ಹೇಳಿದನು. ಇದೇ ರೀತಿಯ ಇನ್ನೊಂದು ಕಥೆಯನ್ನೂ ಹೇಳಿದ್ದನು. ಅದರಲ್ಲಿ ಒಬ್ಬ ಮನುಷ್ಯನು ರಾಜ್ಯಾಧಿಕಾರ ಪಡೆಯಲು ಪ್ರಯಾಣಿಸಿದನು.d (ಪಾದಟಿಪ್ಪಣಿ ನೋಡಿ.) (ಲೂಕ 19:12) ಅನೇಕ ವರ್ಷಗಳ ತನಕ ನಮ್ಮ ಸಾಹಿತ್ಯ ಈ ಎರಡೂ ಕಥೆಗಳಲ್ಲಿ ತಿಳಿಸಲಾಗಿರುವ ಮನುಷ್ಯನು ಕ್ರಿ.ಶ. 33ರಂದು ಸ್ವರ್ಗಕ್ಕೆ ಹೋದ ಯೇಸು ಎಂದು ಹೇಳುತ್ತಿತ್ತು. ಆದರೆ ಸ್ವರ್ಗಕ್ಕೆ ಹೋದ ಕೂಡಲೆ ಯೇಸು ರಾಜನಾಗಲಿಲ್ಲ. ‘ತನ್ನ ವೈರಿಗಳು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ’ ಅಂದರೆ 1914ರ ವರೆಗೆ ಕಾದನು.—ಇಬ್ರಿ. 10:12, 13.
5 ಕಥೆಯಲ್ಲಿ ಆ ಮನುಷ್ಯನ ಹತ್ತಿರ ಎಂಟು ತಲಾಂತುಗಳಿದ್ದವು ಎಂದು ಯೇಸು ಹೇಳಿದನು. ಅದು ದೊಡ್ಡ ಮೊತ್ತದ ಹಣವಾಗಿತ್ತು.e (ಪಾದಟಿಪ್ಪಣಿ ನೋಡಿ.) ಅ ಮನುಷ್ಯನು ಹೊರಡುವ ಮೊದಲು ಆ ಹಣವನ್ನು ತನ್ನ ಆಳುಗಳಿಗೆ ಕೊಟ್ಟು ಹೋದನು. ಅದನ್ನು ಬಳಸಿ ತನಗೋಸ್ಕರ ಅವರು ಇನ್ನೂ ಹೆಚ್ಚು ಹಣ ಮಾಡುವಂತೆ ಹೇಳಿದ್ದನು. ಆ ತಲಾಂತುಗಳು ಆ ಮನುಷ್ಯನಿಗೆ ತುಂಬ ಅಮೂಲ್ಯವಾಗಿದ್ದವು. ಅದೇ ರೀತಿ ಯೇಸುವಿಗೆ ಕೂಡ ಯಾವುದೋ ಒಂದು ವಿಷಯ ತುಂಬ ಅಮೂಲ್ಯವಾಗಿತ್ತು. ಅದೇನು? ಭೂಮಿಯಲ್ಲಿದ್ದಾಗ ಆತನು ಮಾಡಿದ ಕೆಲಸವೇ.
6, 7. ತಲಾಂತುಗಳು ಏನನ್ನು ಸೂಚಿಸುತ್ತವೆ?
6 ಸಾರುವ ಕೆಲಸಕ್ಕೆ ಯೇಸು ತುಂಬ ಪ್ರಾಮುಖ್ಯತೆ ಕೊಡುತ್ತಿದ್ದನು. ಆತನು ಸುವಾರ್ತೆ ಸಾರಿದ ಕಾರಣ ಅನೇಕರು ಆತನ ಶಿಷ್ಯರಾದರು. (ಲೂಕ 4:43 ಓದಿ.) ಆದರೆ ಮುಂದೆ ಇನ್ನೂ ಹೆಚ್ಚು ಕೆಲಸ ಮಾಡಲಿಕ್ಕಿದೆ, ಹೆಚ್ಚು ಜನರು ಸತ್ಯವನ್ನು ಸ್ವೀಕರಿಸುವರು ಅಂತ ಆತನಿಗೆ ಗೊತ್ತಿತ್ತು. “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಕೊಯ್ಲಿಗೆ ಸಿದ್ಧವಾಗಿವೆ” ಎಂದು ಆತನು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾ. 4:35-38) ಕೊಯ್ಲಿಗೆ ಸಿದ್ಧವಾಗಿರುವ ಹೊಲವನ್ನು ಒಬ್ಬ ಒಳ್ಳೇ ರೈತನು ಹಾಗೇ ಬಿಟ್ಟುಬಿಡುವುದಿಲ್ಲ. ಯೇಸುವಿಗೂ ಅದೇ ಮನೋಭಾವವಿತ್ತು. ಆದುದರಿಂದ ಆತನು ಸ್ವರ್ಗಕ್ಕೆ ಹೋಗುವ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಆಜ್ಞಾಪಿಸಿದನು. (ಮತ್ತಾ. 28:18-20) ಹೀಗೆ ಆತನು ಅವರಿಗೆ ಒಂದು ಅಮೂಲ್ಯ ನಿಕ್ಷೇಪವನ್ನು ಅಂದರೆ ಸುವಾರ್ತೆ ಸಾರುವ ಪ್ರಾಮುಖ್ಯ ಜವಾಬ್ದಾರಿಯನ್ನು ಕೊಟ್ಟನು.—2 ಕೊರಿಂ. 4:7.
7 ತನ್ನ ಆಳುಗಳಿಗೆ ಹಣ ಕೊಟ್ಟ ಆ ಮನುಷ್ಯನಂತೆ ಯೇಸು ತನ್ನ ಅಭಿಷಿಕ್ತ ಹಿಂಬಾಲಕರಿಗೆ ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಕೊಟ್ಟನು. (ಮತ್ತಾ. 25:14) ಆದ್ದರಿಂದ ತಲಾಂತುಗಳು ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಸೂಚಿಸುತ್ತವೆ.
8. ಪ್ರತಿಯೊಬ್ಬ ಆಳಿಗೆ ಯಜಮಾನನು ಬೇರೆಬೇರೆ ಮೊತ್ತದ ಹಣ ಕೊಟ್ಟನಾದರೂ ಆತನು ಅವರಿಂದ ಏನನ್ನು ಬಯಸಿದನು?
8 ಯಜಮಾನನು ಮೊದಲ ಆಳಿಗೆ ಐದು ತಲಾಂತನ್ನು, ಎರಡನೇ ಆಳಿಗೆ ಎರಡು ತಲಾಂತನ್ನು, ಮೂರನೇ ಆಳಿಗೆ ಒಂದು ತಲಾಂತನ್ನು ಕೊಟ್ಟನು ಎಂದು ಯೇಸು ಹೇಳಿದನು. (ಮತ್ತಾ. 25:15) ಪ್ರತಿಯೊಬ್ಬ ಆಳಿಗೆ ಯಜಮಾನನು ಕೊಟ್ಟ ಹಣದ ಮೊತ್ತ ಬೇರೆಬೇರೆ ಆಗಿತ್ತಾದರೂ ತನಗಾಗಿ ಹಣವನ್ನು ಹೆಚ್ಚಿಸಲು ಅವರು ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬೇಕೆಂದು ಬಯಸಿದನು. ಅದೇ ರೀತಿ ಸಾರುವ ಕೆಲಸದಲ್ಲಿ ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುವಂತೆ ಯೇಸು ಅಭಿಷಿಕ್ತರಿಂದ ಬಯಸಿದನು. (ಮತ್ತಾ. 22:37; ಕೊಲೊ. 3:23) ಕ್ರಿ.ಶ. 33ರ ಪಂಚಾಶತ್ತಮದಲ್ಲಿ ಯೇಸುವಿನ ಹಿಂಬಾಲಕರು ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಲು ಶುರುಮಾಡಿದರು. ಅವರು ಅದಕ್ಕಾಗಿ ಎಷ್ಟು ಶ್ರಮಪಟ್ಟರೆಂದು ಅಪೊಸ್ತಲರ ಕಾರ್ಯಗಳ ಪುಸ್ತಕ ಓದುವಾಗ ತಿಳಿಯುತ್ತದೆ.f (ಪಾದಟಿಪ್ಪಣಿ ನೋಡಿ.)—ಅ. ಕಾ. 6:7; 12:24; 19:20.
ಆಳುಗಳು ತಲಾಂತುಗಳನ್ನು ಅಂತ್ಯಕಾಲದಲ್ಲಿ ಬಳಸುತ್ತಾರೆ
9. (ಎ) ಇಬ್ಬರು ನಂಬಿಗಸ್ತ ಆಳುಗಳು ತಮಗೆ ಕೊಡಲಾದ ಹಣವನ್ನು ಏನು ಮಾಡಿದರು? (ಬಿ) ಇದರಿಂದ ನಮಗೇನು ಪಾಠ? (ಸಿ) ಭೂನಿರೀಕ್ಷೆ ಇರುವವರು ಏನು ಮಾಡಬೇಕು?
9 ಯಜಮಾನನು ಕೊಟ್ಟ ಹಣವನ್ನು ಒಳ್ಳೇ ರೀತಿ ಬಳಸಿದ ಮೊದಲೆರಡು ಆಳುಗಳು ಅಂತ್ಯಕಾಲದಲ್ಲಿ ಜೀವಿಸುತ್ತಿರುವ ನಂಬಿಗಸ್ತ ಅಭಿಷಿಕ್ತ ಸಹೋದರ ಸಹೋದರಿಯರಾಗಿದ್ದಾರೆ. ವಿಶೇಷವಾಗಿ 1919ರಿಂದ ಅವರು ಸಾರುವ ಕೆಲಸದಲ್ಲಿ ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಕಥೆಯಲ್ಲಿ ಮೊದಲೆರಡು ಆಳುಗಳು ಬೇರೆಬೇರೆ ಮೊತ್ತದ ಹಣ ಪಡೆದರೆಂದು ಹೇಳಲಾಗಿದೆ. ಇದರರ್ಥ ನಂಬಿಗಸ್ತ ಅಭಿಷಿಕ್ತರ ಎರಡು ಗುಂಪುಗಳಿವೆ ಎಂದಲ್ಲ. ಆ ಇಬ್ಬರು ಆಳುಗಳು ಕಷ್ಟಪಟ್ಟು ಕೆಲಸಮಾಡಿ ಆ ಹಣವನ್ನು ಎರಡರಷ್ಟು ಮಾಡಿದರು. ಹಾಗಾದರೆ ಅಭಿಷಿಕ್ತರು ಮಾತ್ರ ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಶ್ರಮಪಟ್ಟು ಕೆಲಸಮಾಡಬೇಕಾ? ಇಲ್ಲ. ಭೂಮಿ ಮೇಲೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಇರುವವರು ಕೂಡ ಅಭಿಷಿಕ್ತರಿಗೆ ಸಾರುವ ಕೆಲಸದಲ್ಲಿ ಬೆಂಬಲಕೊಟ್ಟು ಅವರಿಗೆ ನಿಷ್ಠೆಯಿಂದಿರಬೇಕು ಅಂತ ಕುರಿ ಮತ್ತು ಆಡುಗಳ ಕುರಿತ ಯೇಸುವಿನ ಕಥೆಯಿಂದ ಗೊತ್ತಾಗುತ್ತದೆ. ಅವರು ಅಭಿಷಿಕ್ತರಿಗೆ ಬೆಂಬಲ ಕೊಡುವುದನ್ನು ತಮಗಿರುವ ಭಾಗ್ಯವೆಂದು ನೆನಸುತ್ತಾರೆ. ಅಭಿಷಿಕ್ತರು ಮತ್ತು ಬೇರೆ ಕುರಿಗಳು ‘ಒಂದೇ ಹಿಂಡು’ ಆಗಿರುವುದರಿಂದ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಎಲ್ಲರೂ ಶ್ರಮಪಡುತ್ತಿದ್ದಾರೆ.—ಯೋಹಾ. 10:16.
10. ಅಂತ್ಯಕಾಲದಲ್ಲಿ ಜೀವಿಸುತ್ತಿದ್ದೇವೆಂದು ಸೂಚನೆಯ ಯಾವ ಒಂದು ಭಾಗ ತೋರಿಸುತ್ತದೆ?
10 ತನ್ನೆಲ್ಲಾ ಹಿಂಬಾಲಕರು ಹೆಚ್ಚು ಶಿಷ್ಯರನ್ನು ಮಾಡಲು ಶ್ರಮಿಸಬೇಕೆಂದು ಯೇಸು ಬಯಸುತ್ತಾನೆ. ಪ್ರಥಮ ಶತಮಾನದಲ್ಲಿ ಆತನ ಶಿಷ್ಯರು ಇದನ್ನೇ ಮಾಡಿದರು. ತಲಾಂತುಗಳ ಕುರಿತ ಯೇಸುವಿನ ಕಥೆ ಅಂತ್ಯಕಾಲದಲ್ಲಿ ನೆರವೇರುತ್ತಿರುವಾಗ ಆತನ ಹಿಂಬಾಲಕರು ಈ ಕೆಲಸ ಮಾಡುತ್ತಿದ್ದಾರಾ? ಹೌದು. ಹಿಂದೆಂದಿಗಿಂತಲೂ ಇಂದು ಹೆಚ್ಚು ಜನರು ಸುವಾರ್ತೆ ಕೇಳಿಸಿಕೊಂಡು ಶಿಷ್ಯರಾಗುತ್ತಿದ್ದಾರೆ! ಯೇಸುವಿನ ಹಿಂಬಾಲಕರು ಶ್ರಮಪಟ್ಟು ಕೆಲಸಮಾಡುತ್ತಿರುವ ಕಾರಣ ಪ್ರತಿ ವರ್ಷ ಸಾವಿರಾರು ಮಂದಿ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಇವರೂ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಎಲ್ಲಾ ಚಟುವಟಿಕೆಗಳು ಮತ್ತು ಒಳ್ಳೇ ಫಲಿತಾಂಶಗಳಿಂದ ಸ್ಪಷ್ಟವಾಗುವುದೇನೆಂದರೆ, ಸಾರುವ ಕೆಲಸವು ಅಂತ್ಯಕಾಲದ ಕುರಿತು ಯೇಸು ಕೊಟ್ಟ ಸೂಚನೆಯ ಪ್ರಮುಖ ಭಾಗ. ಇಷ್ಟೆಲ್ಲಾ ಮಾಡುತ್ತಿರುವ ತನ್ನ ಕೆಲಸಗಾರರನ್ನು ಯೇಸು ಖಂಡಿತ ಮೆಚ್ಚುತ್ತಾನೆ!
ಯಜಮಾನನು ಯಾವಾಗ ಬರುವನು?
11. ಯೇಸು ಮಹಾ ಸಂಕಟದ ಸಮಯದಲ್ಲಿ ಬರುವನೆಂದು ನಮಗೆ ಹೇಗೆ ಗೊತ್ತು?
11 “ಬಹುಕಾಲದ ಬಳಿಕ ಆ ಆಳುಗಳ ಯಜಮಾನನು ಬಂದು ಅವರಿಂದ ಲೆಕ್ಕ ತೆಗೆದುಕೊಂಡನು” ಎಂದನು ಯೇಸು. (ಮತ್ತಾ. 25:19) ಮಹಾ ಸಂಕಟದ ಅಂತ್ಯ ಹತ್ತಿರವಿರುವಾಗ ಯಜಮಾನನಾದ ಯೇಸು ಇದನ್ನು ಮಾಡುವನು. ಇದನ್ನು ಹೇಗೆ ಹೇಳಬಹುದು? ಮತ್ತಾಯ 24 ಮತ್ತು 25ನೇ ಅಧ್ಯಾಯಗಳಲ್ಲಿ ಕೊಡಲಾಗಿರುವ ಯೇಸುವಿನ ಪ್ರವಾದನೆಯಲ್ಲಿ ಆತನು ತುಂಬ ಸಾರಿ ತನ್ನ ಬರೋಣದ ಬಗ್ಗೆ ಹೇಳಿದ್ದಾನೆ. ಉದಾಹರಣೆಗೆ, “ಮನುಷ್ಯಕುಮಾರನು ಆಕಾಶದ ಮೇಘಗಳ ಮೇಲೆ . . . ಬರುವುದನ್ನು [ಜನರು] ಕಾಣುವರು” ಎಂದು ಹೇಳಿದನು. ಇದು ಮಹಾ ಸಂಕಟದ ಸಮಯದಲ್ಲಿ ಯೇಸು ನ್ಯಾಯಾಧಿಪತಿಯಾಗಿ ಬರುವ ಸಮಯಕ್ಕೆ ಸೂಚಿಸುತ್ತದೆ. ಅಂತ್ಯಕಾಲದಲ್ಲಿ ಜೀವಿಸುತ್ತಿರುವ ತನ್ನ ಹಿಂಬಾಲಕರು ಎಚ್ಚರವಾಗಿರುವಂತೆ ಸಹ ಆತನು ಎಚ್ಚರಿಸಿದನು. ಆತನಂದದ್ದು: ‘ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲ’ ಮತ್ತು “ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾ. 24:30, 42, 44) ಹೀಗೆ ತಲಾಂತುಗಳ ಕಥೆಯಲ್ಲಿ ಯೇಸು ತಾನು ನ್ಯಾಯತೀರಿಸಲು ಹಾಗೂ ಸೈತಾನನ ಲೋಕವನ್ನು ನಾಶಮಾಡಲು ಬರುವ ಸಮಯಕ್ಕೂ ಸೂಚಿಸುತ್ತಿದ್ದನು.g—ಪಾದಟಿಪ್ಪಣಿ ನೋಡಿ.
12, 13. (ಎ) ಯಜಮಾನನು ಮೊದಲೆರಡು ಆಳುಗಳಿಗೆ ಏನಂದನು? ಯಾಕೆ? (ಬಿ) ಅಭಿಷಿಕ್ತರಿಗೆ ಯಾವಾಗ ಕೊನೆಯ ಮುದ್ರೆ ಒತ್ತಲಾಗುವುದು? (“ಸಾಯುವ ಮುಂಚೆ ಯೋಗ್ಯರೆಂದು ತೀರ್ಪು ಹೊಂದುವವರು” ಚೌಕ ನೋಡಿ.) (ಸಿ) ಅಭಿಷಿಕ್ತರಿಗೆ ಬೆಂಬಲ ಕೊಟ್ಟವರಿಗೆ ಯಾವ ಬಹುಮಾನ ಸಿಗುವುದು?
12 ಯಜಮಾನನು ಪ್ರಯಾಣ ಮುಗಿಸಿ ಬಂದಾಗ ಐದು ತಲಾಂತು ಇದ್ದವನು ಇನ್ನೂ ಐದನ್ನು, ಎರಡು ತಲಾಂತು ಇದ್ದವನು ಇನ್ನೂ ಎರಡನ್ನು ಸಂಪಾದಿಸಿದ್ದು ಅವನಿಗೆ ಗೊತ್ತಾಯಿತು. ಯಜಮಾನನು ಆ ಇಬ್ಬರು ಆಳುಗಳಿಗೂ ಇದೇ ಮಾತನ್ನು ಹೇಳಿದನು: “ಭೇಷ್, ನಂಬಿಗಸ್ತನಾದ ಒಳ್ಳೇ ಆಳು ನೀನು! ನೀನು ಸ್ವಲ್ಪ ವಿಷಯಗಳಲ್ಲಿ ನಂಬಿಗಸ್ತನಾಗಿದ್ದೀ. ನಾನು ನಿನ್ನನ್ನು ಅನೇಕ ವಿಷಯಗಳ ಮೇಲೆ ನೇಮಿಸುವೆನು.” (ಮತ್ತಾ. 25:21, 23) ಯಜಮಾನನಾದ ಯೇಸು ಭವಿಷ್ಯದಲ್ಲಿ ಬರುವಾಗ ಏನು ಮಾಡುವನು?
13 ಮಹಾ ಸಂಕಟ ಆರಂಭವಾಗುವ ಸ್ವಲ್ಪ ಮುಂಚೆ ಇನ್ನೂ ಭೂಮಿ ಮೇಲಿರುವ ಶ್ರಮಜೀವಿಗಳಾದ ಅಭಿಷಿಕ್ತರಿಗೆ ಯೆಹೋವನು ಕೊನೆಯ ಒಪ್ಪಿಗೆ ಕೊಡುವನು. ಅದೇ ಕೊನೆಯ ಮುದ್ರೆ ಒತ್ತುವಿಕೆ. (ಪ್ರಕ. 7:1-3) ನಂತರ ಯೇಸು ಅವರಿಗೆ ಬಹುಮಾನವಾಗಿ ಅರ್ಮಗೆದೋನಿನ ಮುಂಚೆ ಸ್ವರ್ಗಕ್ಕೆ ಕರೆದುಕೊಳ್ಳುವನು. ಆದರೆ ಸಾರುವ ಕೆಲಸದಲ್ಲಿ ಅಭಿಷಿಕ್ತರಿಗೆ ಬೆಂಬಲಕೊಟ್ಟ ಭೂನಿರೀಕ್ಷೆ ಇರುವವರ ಕುರಿತೇನು? ಅವರನ್ನು ಕುರಿಗಳೆಂದು ತೀರ್ಪು ಕೊಡಲಾಗುವುದು. ಅವರು ದೇವರ ರಾಜ್ಯದ ಆಳ್ವಿಕೆಯ ಕೆಳಗೆ ಭೂಮಿಯಲ್ಲಿ ಜೀವಿಸುವ ಬಹುಮಾನ ಪಡೆಯುವರು.—ಮತ್ತಾ. 25:34.
ಕೆಟ್ಟ ಹಾಗೂ ಮೈಗಳ್ಳ ಆಳು
14, 15. ಅನೇಕ ಅಭಿಷಿಕ್ತರು ಕೆಟ್ಟವರೂ, ಮೈಗಳ್ಳರೂ ಆಗುವರೆಂದು ಯೇಸುವಿನ ಮಾತಿನ ಅರ್ಥವಾಗಿತ್ತಾ? ವಿವರಿಸಿ.
14 ಒಂದು ತಲಾಂತು ಇದ್ದ ಆಳಿನ ಕುರಿತೂ ಕಥೆಯಲ್ಲಿ ಹೇಳಲಾಗಿದೆ. ಅವನು ತನ್ನ ಯಜಮಾನನಿಗಾಗಿ ಹೆಚ್ಚು ಹಣ ಮಾಡಲಿಲ್ಲ ಅಥವಾ ಆ ಹಣದಿಂದ ಬಡ್ಡಿ ಸಂಪಾದಿಸಲಿಲ್ಲ. ಬದಲಿಗೆ ದುಡ್ಡನ್ನು ಬಚ್ಚಿಟ್ಟ. ಆದ್ದರಿಂದ ಯಜಮಾನನು ಅವನನ್ನು ಕೆಟ್ಟವನು, ಮೈಗಳ್ಳನು ಎಂದು ಕರೆದನು. ನಂತರ ಆ ಆಳನ್ನು ‘ಕತ್ತಲೆಗೆ ಎಸೆದನು.’ ಅಲ್ಲಿ ಅವನು ಹತಾಶೆಯಿಂದ ಅತ್ತನು.—ಮತ್ತಾ. 25:24-30; ಲೂಕ 19:22, 23.
15 ಮೂವರು ಆಳುಗಳಲ್ಲಿ ಒಬ್ಬನು ಕೆಟ್ಟವನು, ಮೈಗಳ್ಳನು ಆಗಿರುವನು ಎಂದು ಯೇಸು ಹೇಳಿದನು. ಅವನ ಮಾತಿನ ಅರ್ಥ ಮೂರರಲ್ಲಿ ಒಂದು ಭಾಗದಷ್ಟು ಅಭಿಷಿಕ್ತರು ಆ ಕೆಟ್ಟ ಆಳಿನಂತಿರುವರು ಎಂದಾಗಿರಲಿಲ್ಲ. ಇದನ್ನು ಹೇಗೆ ಹೇಳಬಹುದು? ಯೇಸು ಹೇಳಿದ ಇನ್ನೂ ಎರಡು ಕಥೆಗಳೊಂದಿಗೆ ಈ ಕಥೆಯನ್ನು ಹೋಲಿಸಿದಾಗ ಗೊತ್ತಾಗುತ್ತದೆ. ನಂಬಿಗಸ್ತ ಆಳಿನ ಕುರಿತ ಕಥೆಯಲ್ಲಿ ಕೆಟ್ಟ ಆಳು ಇತರ ಆಳುಗಳನ್ನು ಹಿಂಸಿಸುವನು ಎಂದು ಆತನು ಹೇಳಿದನು. ನಂಬಿಗಸ್ತನು, ವಿವೇಚನೆಯುಳ್ಳವನು ಆದ ಆಳಿನಲ್ಲಿ ಕೆಲವರು ಕೆಟ್ಟ ಆಳಾಗುವರು ಎನ್ನುವುದು ಯೇಸುವಿನ ಮಾತಿನ ಅರ್ಥವಾಗಿರಲಿಲ್ಲ. ಬದಲಿಗೆ ಆ ಕೆಟ್ಟ ಆಳಿನಂತೆ ಆಗಬಾರದೆಂದು ಅಭಿಷಿಕ್ತರನ್ನು ಎಚ್ಚರಿಸುತ್ತಿದ್ದನು. ಹತ್ತು ಕನ್ಯೆಯರ ಕುರಿತ ಕಥೆಯಲ್ಲಿ ಯೇಸು ಐದು ಬುದ್ಧಿಹೀನ ಕನ್ಯೆಯರ ಕುರಿತು ಹೇಳಿದನು. ಅಭಿಷಿಕ್ತರಲ್ಲಿ ಅರ್ಧ ಮಂದಿ ಬುದ್ಧಿಹೀನರಾಗಿರುವರು ಎಂದು ಆತನ ಮಾತಿನ ಅರ್ಥವಾಗಿರಲಿಲ್ಲ. ಬದಲಿಗೆ ಸಿದ್ಧರಾಗಿರದಿದ್ದರೆ, ಎಚ್ಚರವಾಗಿರದಿದ್ದರೆ ಏನಾಗುವುದೆಂದು ಅವರಿಗೆ ಎಚ್ಚರಿಸುತ್ತಿದ್ದನು.h (ಪಾದಟಿಪ್ಪಣಿ ನೋಡಿ.) ಅದೇ ರೀತಿ ತಲಾಂತುಗಳ ಕಥೆಯಲ್ಲಿ ಅನೇಕ ಅಭಿಷಿಕ್ತರು ಕೆಟ್ಟವರೂ, ಮೈಗಳ್ಳರೂ ಆಗುವರು ಅಂತ ಯೇಸು ಹೇಳುತ್ತಿಲ್ಲ. ಬದಲಿಗೆ ಆತನು ಅಭಿಷಿಕ್ತರಿಗೆ ಕೆಟ್ಟ ಆಳಿನ ಹಾಗೆ ಆಗದಂತೆ ಎಚ್ಚರಿಸುತ್ತಿದ್ದನು. ಅವರು ಸಾರುವ ಕೆಲಸದಲ್ಲಿ ಶ್ರಮಿಸಬೇಕಿತ್ತು.—ಮತ್ತಾ. 25:16.
16. (ಎ) ತಲಾಂತುಗಳ ಕಥೆಯಿಂದ ಯಾವ ಎರಡು ಪಾಠಗಳನ್ನು ಕಲಿಯಬಹುದು? (ಬಿ) ತಲಾಂತುಗಳ ಕಥೆಯನ್ನು ಅರ್ಥಮಾಡಿಕೊಳ್ಳಲು ಈ ಲೇಖನ ಹೇಗೆ ಸಹಾಯಮಾಡಿದೆ? (“ತಲಾಂತುಗಳ ಕಥೆಯ ಅರ್ಥವೇನು?” ಚೌಕ ನೋಡಿ.)
16 ತಲಾಂತುಗಳ ಕಥೆಯಿಂದ ಯಾವ ಎರಡು ಪಾಠಗಳನ್ನು ಕಲಿಯಬಹುದು? ಒಂದು, ಯೇಸು ತನ್ನ ಅಭಿಷಿಕ್ತ ಹಿಂಬಾಲಕರಿಗೆ ಅಮೂಲ್ಯ ನಿಕ್ಷೇಪವನ್ನು ಅಂದರೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಪ್ರಾಮುಖ್ಯ ಜವಾಬ್ದಾರಿಯನ್ನು ಕೊಟ್ಟನು. ಎರಡು, ನಾವೆಲ್ಲರು ಸಾರುವ ಕೆಲಸದಲ್ಲಿ ಶ್ರಮಿಸುವಂತೆ ಯೇಸು ಬಯಸುತ್ತಾನೆ. ಈ ಕೆಲಸವನ್ನು ಕೊನೆಯ ತನಕ ನಂಬಿಗಸ್ತಿಕೆಯಿಂದ ಮಾಡುತ್ತಾ ಇದ್ದರೆ ಮತ್ತು ಯೇಸುವಿಗೆ ವಿಧೇಯತೆ, ನಿಷ್ಠೆ ತೋರಿಸುತ್ತಾ ಇದ್ದರೆ ಆತನು ನಮಗೆ ಬಹುಮಾನ ಕೊಟ್ಟೇ ಕೊಡುವನು.—ಮತ್ತಾ. 25:21, 23, 34.
a ನಂಬಿಗಸ್ತನು, ವಿವೇಚನೆಯುಳ್ಳವನು ಆದ ಆಳು ಯಾರೆಂದು ಜುಲೈ 15, 2013ರ ಕಾವಲಿನಬುರುಜು ಪುಟ 21-22, ಪ್ಯಾರ 8-10ರಲ್ಲಿ ವಿವರಿಸಲಾಗಿದೆ.
b ಹಿಂದಿನ ಲೇಖನದಲ್ಲಿ ಕನ್ಯೆಯರು ಯಾರೆಂದು ವಿವರಿಸಲಾಗಿದೆ.
c ಕುರಿ ಮತ್ತು ಆಡುಗಳ ಕಥೆಯ ವಿವರಣೆಯನ್ನು ಅಕ್ಟೋಬರ್ 15, 1995ರ ಕಾವಲಿನಬುರುಜು ಪುಟ 23-28ರಲ್ಲಿ ಮತ್ತು ಈ ಪತ್ರಿಕೆಯ ಮುಂದಿನ ಲೇಖನದಲ್ಲಿ ಕೊಡಲಾಗಿದೆ.
d “ತಲಾಂತುಗಳ ಕಥೆ ಮತ್ತು ಮೈನಾ ಹಣದ ಕಥೆಯಲ್ಲಿ ಯಾವ ಹೋಲಿಕೆಯಿದೆ?” ಎಂಬ ಚೌಕ ನೋಡಿ.
e ಯೇಸುವಿನ ದಿನಗಳಲ್ಲಿ ಒಂದು ತಲಾಂತು ಅಂದರೆ ಒಬ್ಬ ಕೆಲಸದಾಳು 20 ವರ್ಷ ಕೆಲಸ ಮಾಡಿ ಸಂಪಾದಿಸುತ್ತಿದ್ದ ಹಣವಾಗಿತ್ತು.
f ಅಪೊಸ್ತಲರು ಸತ್ತುಹೋದ ಮೇಲೆ ಎಲ್ಲಾ ಸಭೆಗಳಿಗೆ ಧರ್ಮಭ್ರಷ್ಟತೆ ಹರಡಿತು. ಅನೇಕ ಶತಮಾನಗಳ ತನಕ ಸಾರುವ ಕೆಲಸ ತೀರ ಕಡಿಮೆಯಾಗಿತ್ತು. ಆದರೆ ‘ಕೊಯ್ಲಿನ’ ಸಮಯದಲ್ಲಿ ಅಥವಾ ಅಂತ್ಯಕಾಲದಲ್ಲಿ ಸುವಾರ್ತೆ ಸಾರುವ ಕೆಲಸ ಪುನಃ ಆರಂಭವಾಗಲಿತ್ತು. (ಮತ್ತಾ. 13:24-30, 36-43) ಜುಲೈ 15, 2013ರ ಕಾವಲಿನಬುರುಜು ಪುಟ 9-12 ನೋಡಿ.
h ಈ ಪತ್ರಿಕೆಯಲ್ಲಿ “‘ಸದಾ ಎಚ್ಚರವಾಗಿ’ ಇರುವಿರಾ?” ಎಂಬ ಲೇಖನದ ಪ್ಯಾರ 13 ನೋಡಿ.