ನಿಮ್ಮ ಎಲ್ಲ ವ್ಯಾಕುಲತೆಯನ್ನು ಯೆಹೋವನ ಮೇಲೆ ಹಾಕಿರಿ
“ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ (ವ್ಯಾಕುಲತೆ, NW) ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:6, 7.
1. ವ್ಯಾಕುಲತೆಯು ನಮ್ಮನ್ನು ಹೇಗೆ ಪ್ರಭಾವಿಸಬಲ್ಲದು, ಮತ್ತು ಇದನ್ನು ಹೇಗೆ ದೃಷ್ಟಾಂತಿಸಬಹುದು?
ವ್ಯಾಕುಲತೆಯು ನಮ್ಮ ಜೀವಿತವನ್ನು ತೀವ್ರವಾಗಿ ಪ್ರಭಾವಿಸಬಲ್ಲದು. ರೇಡಿಯೊ ಮೂಲಕ ಕೇಳಲ್ಪಡುವ ಒಂದು ಸುಂದರವಾದ ಸಂಗೀತವನ್ನು ಕೆಲವೊಮ್ಮೆ ಅಡಿಪ್ಡಡಿಸುವ ವಾಯುಕ್ಷೋಭೆಗೆ ಅದನ್ನು ಹೋಲಿಸಸಾಧ್ಯವಿದೆ. ರೇಡಿಯೊ ತರಂಗಗಳೊಂದಿಗೆ ಯಾವುದೇ ಅಡ್ಡೈಸುವಿಕೆ ಇರದಿದ್ದಲ್ಲಿ, ಮನೋಹರವಾದ ಸಂಗೀತಗಳನ್ನು ಅನುಭವಿಸಸಾಧ್ಯವಿದೆ ಮತ್ತು ಅವು ಪ್ರಶಾಂತ ಸ್ಥಿತಿಯನ್ನು ಉಂಟುಮಾಡಬಲ್ಲವು. ಆದರೆ, ವಾಯುಕ್ಷೋಭೆಯ ಕರಕರ ಸದ್ದು ನಮ್ಮಲ್ಲಿ ಕಿರುಕುಳ ಮತ್ತು ಆಶಾಭಂಗವನ್ನುಂಟುಮಾಡುತ್ತಾ, ಅತ್ಯಂತ ಸುಂದರವಾದ ರಾಗವನ್ನು ಕೂಡ ವಿಕೃತಗೊಳಿಸಬಲ್ಲದು. ನಮ್ಮ ಪ್ರಶಾಂತತೆಯ ಮೇಲೆ ವ್ಯಾಕುಲತೆಗೆ ತದ್ರೀತಿಯ ಪರಿಣಾಮವಿರಸಾಧ್ಯವಿದೆ. ಅದು ನಮ್ಮನ್ನು ಎಷ್ಟೊಂದು ಹತಾಶರನ್ನಾಗಿ ಮಾಡಬಲ್ಲದೆಂದರೆ, ಪ್ರಾಮುಖ್ಯವಾದ ವಿಷಯಗಳಿಗೆ ಗಮನ ಕೊಡಲು ನಮಗೆ ಸಾಧ್ಯವಾಗುವುದಿಲ್ಲ. ನಿಶ್ಚಯವಾಗಿ, “ಕಳವಳವು ಮನಸ್ಸನ್ನು ಕುಗ್ಗಿಸುವದು.”—ಜ್ಞಾನೋಕ್ತಿ 12:25.
2. “ಜೀವಿತದ ವ್ಯಾಕುಲತೆಗಳ” ಕುರಿತು ಯೇಸು ಕ್ರಿಸ್ತನು ಏನನ್ನು ಹೇಳಿದನು?
2 ವಿಪರೀತ ವ್ಯಾಕುಲತೆಯ ಮೂಲಕ ಅಪಕರ್ಷಿಸಲ್ಪಡುವುದರ ಅಪಾಯದ ಕುರಿತು ಯೇಸು ಕ್ರಿಸ್ತನು ಮಾತಾಡಿದನು. ಕಡೆಯ ದಿನಗಳ ಕುರಿತಾದ ತನ್ನ ಪ್ರವಾದನೆಯಲ್ಲಿ, ಅವನು ಪ್ರೋತ್ಸಾಹಿಸಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆ (ವ್ಯಾಕುಲತೆ, NW) ಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.” (ಲೂಕ 21:34-36) ಮಿತಿಮೀರಿ ತಿನ್ನುವುದು ಮತ್ತು ಕುಡಿಯುವುದು ಲವಲವಿಕೆಯಿಲ್ಲದ ಮಾನಸಿಕ ಸ್ಥಿತಿಯನ್ನು ಉಂಟುಮಾಡುವಂತೆಯೇ, “ಪ್ರಪಂಚದ (ಜೀವಿತದ, NW) ವ್ಯಾಕುಲತೆಗಳಿಂದ” ಹತಾಶರಾಗುವುದು ನಮ್ಮ ಮಾನಸಿಕ ಯಥಾದೃಷ್ಟಿಯನ್ನು—ದುಃಖಕರ ಪರಿಣಾಮಗಳೊಂದಿಗೆ—ಕಳೆದುಕೊಳ್ಳುವಂತೆ ಮಾಡಬಹುದು.
ವ್ಯಾಕುಲತೆಯ ಅರ್ಥ
3. “ವ್ಯಾಕುಲತೆ” ಯನ್ನು ಹೇಗೆ ವಿಶದೀಕರಿಸಲಾಗಿದೆ, ಮತ್ತು ಅದರ ಕಾರಣಗಳಲ್ಲಿ ಕೆಲವು ಯಾವುವು?
3 “ವ್ಯಾಕುಲತೆ” ಯನ್ನು “ಸಾಮಾನ್ಯವಾಗಿ ಆಸನ್ನವಾಗಿರುವ ಯಾ ಮುಂಭಾವಿಸಿರುವ ಒಂದು ದುರದೃಷ್ಟದ ಮೇಲೆ ಮನಸ್ಸಿನ ವೇದನಮಯ ಅಥವಾ ಆತಂಕದಿಂದ ಕೂಡಿದ ಕಳವಳ” ಎಂಬುದಾಗಿ ವಿಶದೀಕರಿಸಲಾಗುತ್ತದೆ. ಅದು “ಭಯಭರಿತ ಚಿಂತೆ ಯಾ ಅಭಿರುಚಿ” ಅಷ್ಟೇ ಅಲ್ಲದೆ “ಅಳುಕು ಮತ್ತು ಭಯದ ಅಸಾಧಾರಣ ಹಾಗೂ ಪೂರ್ತಿಯಾಗಿ ಮುಳುಗಿಸಿಬಿಡುವ ಪ್ರಜ್ಞೆ” ಆಗಿದೆ. “ಮತ್ತು ಇದು ಅನೇಕ ಬಾರಿ ಶಾರೀರಿಕ ಸಂಜ್ಞೆ (ಬೆವರುವುದು, ಬಿಗುಪು, ಮತ್ತು ವೇಗವಾದ ನಾಡಿಯ ಬಡಿತದಂತಹ) ಗಳ ಮೂಲಕ, ಬೆದರಿಕೆಯ ನೈಜತೆ ಹಾಗೂ ಸ್ವರೂಪದ ಸಂಬಂಧದಲ್ಲಿ ಸಂಶಯ ತೋರಿಸುವ ಮೂಲಕ, ಮತ್ತು ಅದರೊಂದಿಗೆ ನಿಭಾಯಿಸಲು ಒಬ್ಬನ ಸಾಮರ್ಥ್ಯದ ಕುರಿತು ಆತ್ಮ ಸಂಶಯದ ಮೂಲಕ ಗುರುತಿಸಲ್ಪಡುತ್ತದೆ.” (ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಅಟ್ ಡಿಕ್ಷನರಿ) ಆದುದರಿಂದ ವ್ಯಾಕುಲತೆಯು ಒಂದು ಜಟಿಲವಾದ ಸಮಸ್ಯೆಯಾಗಿರಬಲ್ಲದು. ಅದರ ಅನೇಕ ಕಾರಣಗಳಲ್ಲಿ ಅನಾರೋಗ್ಯ, ವೃದ್ಧಾಪ್ಯ, ಅಪರಾಧದ ಭಯ, ಉದ್ಯೋಗದ ನಷ್ಟ, ಮತ್ತು ಒಬ್ಬನ ಕುಟುಂಬದ ಕ್ಷೇಮಕ್ಕಾಗಿ ಚಿಂತೆ ಸೇರಿವೆ.
4. (ಎ) ಜನರ ಮತ್ತು ಅವರ ವ್ಯಾಕುಲತೆಗಳ ಕುರಿತು ಏನನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಒಳ್ಳೆಯದು? (ಬಿ) ನಾವು ವ್ಯಾಕುಲತೆಯನ್ನು ಅನುಭವಿಸುತ್ತಿದ್ದರೆ, ಏನನ್ನು ಮಾಡಸಾಧ್ಯವಿದೆ?
4 ವ್ಯಾಕುಲತೆಯನ್ನು ಉಂಟುಮಾಡಬಲ್ಲ ವಿವಿಧ ಪರಿಸ್ಥಿತಿಗಳು ಯಾ ಪ್ರಸಂಗಗಳು ಇರುವಂತೆಯೇ, ವ್ಯಾಕುಲತೆಯ ವಿವಿಧ ಮಟ್ಟಗಳಿವೆ ಎಂಬುದು ಸ್ಪಷ್ಟ. ಒಂದು ಸನ್ನಿವೇಶಕ್ಕೆ ಎಲ್ಲ ಜನರು ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ಆದಕಾರಣ, ಯಾವುದೊ ವಿಷಯವು ನಮಗೆ ತೊಂದರೆಯನ್ನುಂಟು ಮಾಡದಿದ್ದರೂ, ಯೆಹೋವನ ನಮ್ಮ ಜೊತೆ ಆರಾಧಕರಲ್ಲಿ ಕೆಲವರಿಗೆ ಅದು ತೀವ್ರವಾದ ವ್ಯಾಕುಲತೆಯ ಕಾರಣವಾಗಿರಬಹುದೆಂಬುದನ್ನು ನಾವು ಗ್ರಹಿಸಬೇಕಾಗಿದೆ. ದೇವರ ವಾಕ್ಯದ ಸುಸಂಗತ ಹಾಗೂ ಹರ್ಷಭರಿತ ಸತ್ಯತೆಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ನಮಗೆ ಸಾಧ್ಯವಾಗದಿರುವಂತಹ ಒಂದು ಮಟ್ಟವನ್ನು ವ್ಯಾಕುಲತೆಯು ತಲಪುವುದಾದರೆ, ಏನನ್ನು ಮಾಡಸಾಧ್ಯವಿದೆ? ಯೆಹೋವನ ಸಾರ್ವಭೌಮತೆ ಮತ್ತು ಕ್ರಿಸ್ತೀಯ ಸಮಗ್ರತೆಯ ವಿವಾದಾಂಶಗಳ ಮೇಲೆ ನಾವು ಕೇಂದ್ರೀಕರಿಸಲು ಅಶಕ್ತರಾಗುವಷ್ಟು ವ್ಯಾಕುಲತೆಯಿಂದ ಪೀಡಿಸಲ್ಪಡುವುದಾದರೆ ಆಗೇನು? ನಮ್ಮ ಸ್ಥಿತಿಗತಿಗಳನ್ನು ಬದಲಿಸಲು ನಾವು ಅಶಕ್ತರಾಗಿರಬಹುದು. ಬದಲಿಗೆ, ಜೀವನದ ಜಟಿಲ ಸಮಸ್ಯೆಗಳಿಂದ ಉಂಟಾದ ಅನುಚಿತ ವ್ಯಾಕುಲತೆಯೊಂದಿಗೆ ನಿಭಾಯಿಸುವಂತೆ ನಮಗೆ ಸಹಾಯ ಮಾಡುವ ಶಾಸ್ತ್ರೀಯ ವಿಚಾರಗಳಿಗಾಗಿ ನಾವು ಹುಡುಕಬೇಕಾಗಿದೆ.
ಸಹಾಯವು ಲಭ್ಯವಿದೆ
5. ಕೀರ್ತನೆ 55:22 ರೊಂದಿಗೆ ಹೊಂದಿಕೆಯಾಗಿ ನಾವು ಹೇಗೆ ಕಾರ್ಯವೆಸಗಬಹುದು?
5 ಕ್ರೈಸ್ತರಿಗೆ ಆತ್ಮಿಕ ನೆರವು ಬೇಕಾದಾಗ ಮತ್ತು ವ್ಯಾಕುಲತೆಗಳಿಂದ ಪೀಡಿಸಲ್ಪಟ್ಟಾಗ, ಅವರು ದೇವರ ವಾಕ್ಯದಿಂದ ಸಾಂತ್ವನವನ್ನು ಪಡೆಯಬಲ್ಲರು. ಅದು ವಿಶ್ವಾಸಾರ್ಹವಾದ ಮಾರ್ಗದರ್ಶನೆಯನ್ನು ಒದಗಿಸುತ್ತದೆ ಮತ್ತು ಯೆಹೋವನ ನಿಷ್ಠಾವಂತ ಸೇವಕರೋಪಾದಿ ನಾವು ಒಬ್ಬಂಟಿಗರಾಗಿಲ್ಲವೆಂಬ ತಕ್ಕಷ್ಟು ಆಶ್ವಾಸನೆಯನ್ನು ನಮಗೆ ಕೊಡುತ್ತದೆ. ದೃಷ್ಟಾಂತಕ್ಕೆ, ಕೀರ್ತನೆಗಾರನಾದ ದಾವೀದನು ಹಾಡಿದ್ದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಈ ಮಾತುಗಳೊಂದಿಗೆ ಸುಸಂಗತವಾಗಿ ನಾವು ಹೇಗೆ ವರ್ತಿಸಬಲ್ಲೆವು? ನಮ್ಮ ಎಲ್ಲಾ ವ್ಯಾಕುಲತೆಗಳನ್ನು, ಚಿಂತೆಗಳನ್ನು, ಭಯಗಳನ್ನು, ಮತ್ತು ನಿರಾಶೆಗಳನ್ನು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯ ಮೇಲೆ ಹಾಕುವ ಮೂಲಕವೇ. ಭದ್ರತೆಯ ಅನಿಸಿಕೆಯನ್ನು ಮತ್ತು ಹೃದಯದ ಶಾಂತತೆಯನ್ನು ನಮಗೆ ಕೊಡಲು ಇದು ಸಹಾಯ ಮಾಡುವುದು.
6. ಫಿಲಿಪ್ಪಿ 4:6, 7 ಕ್ಕನುಸಾರ, ಪ್ರಾರ್ಥನೆಯು ನಮಗಾಗಿ ಏನು ಮಾಡಬಲ್ಲದು?
6 ನಮ್ಮೆಲ್ಲಾ ವ್ಯಾಕುಲತೆಯನ್ನು ಸೇರಿಸಿ, ನಮ್ಮ ಹೊರೆಯನ್ನು ಯೆಹೋವನ ಮೇಲೆ ನಾವು ಹಾಕಬೇಕಾದರೆ, ಕ್ರಮವಾದ ಹೃತ್ಪೂರ್ವಕ ಪ್ರಾರ್ಥನೆಯು ಅವಶ್ಯ. ಇದು ನಮಗೆ ಆಂತರಿಕ ಶಾಂತಿಯನ್ನು ತರುವುದು, ಯಾಕೆಂದರೆ ಅಪೊಸ್ತಲ ಪೌಲನು ಬರೆದದ್ದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಹೋಲಿಸಲಾಗದ “ದೇವಶಾಂತಿಯು” ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲೂ ಯೆಹೋವನ ಸಮರ್ಪಿತ ಸೇವಕರಿಂದ ಅನುಭವಿಸಲ್ಪಡುವ ಅಸಾಧಾರಣ ನೆಮ್ಮದಿಯಾಗಿದೆ. ಅದು ದೇವರೊಂದಿಗಿನ ನಮ್ಮ ನಿಕಟವಾದ ವೈಯಕ್ತಿಕ ಸಂಬಂಧದಿಂದ ಫಲಿಸುತ್ತದೆ. ಪವಿತ್ರಾತ್ಮಕ್ಕಾಗಿ ನಾವು ಪ್ರಾರ್ಥಿಸಿ, ಅದು ನಮ್ಮನ್ನು ಪ್ರಚೋದಿಸುವಂತೆ ಬಿಡುವಲ್ಲಿ, ಜೀವಿತದ ಎಲ್ಲ ಸಮಸ್ಯೆಗಳಿಂದ ನಾವು ಮುಕ್ತಗೊಳಿಸಲ್ಪಡುವುದಿಲ್ಲ, ಆದರೆ ನಾವು ಆತ್ಮದ ಫಲವಾದ ಶಾಂತಿಯನ್ನು ಅನುಭವಿಸುತ್ತೇವೆ. (ಲೂಕ 11:13; ಗಲಾತ್ಯ 5:22, 23) ನಾವು ವ್ಯಾಕುಲತೆಯಿಂದ ಪೂರ್ತಿಯಾಗಿ ಮುಳುಗಿಸಲ್ಪಡುವುದಿಲ್ಲ, ಯಾಕೆಂದರೆ ಯೆಹೋವನು ತನ್ನೆಲ್ಲಾ ನಂಬಿಗಸ್ತ ಜನರನ್ನು “ಸುರಕ್ಷಿತ” ರಾಗಿರುವಂತೆ ಮಾಡುವನೆಂದು ಮತ್ತು ನಮಗೆ ಶಾಶ್ವತವಾದ ಹಾನಿಯನ್ನುಂಟುಮಾಡುವ ಯಾವ ವಿಷಯವೂ ಸಂಭವಿಸುವಂತೆ ಬಿಡಲಾರನೆಂದು ನಮಗೆ ಗೊತ್ತಿದೆ.—ಕೀರ್ತನೆ 4:8.
7. ವ್ಯಾಕುಲತೆಯೊಂದಿಗೆ ನಿಭಾಯಿಸುವಂತೆ ಸಹಾಯ ಮಾಡುವುದರಲ್ಲಿ ಕ್ರೈಸ್ತ ಹಿರಿಯರು ಯಾವ ಪಾತ್ರವನ್ನು ವಹಿಸಬಲ್ಲರು?
7 ನಾವು ಶಾಸ್ತ್ರವಚನಗಳ ಮೇಲೆ ಮನನ ಮಾಡುತ್ತಿರುವುದಾದರೂ ಪ್ರಾರ್ಥನೆಯಲ್ಲಿ ಪಟ್ಟು ಹಿಡಿದಿರುವವರಾಗಿದ್ದರೂ ನಮ್ಮ ವ್ಯಾಕುಲತೆಯು ಮುಂದುವರಿಯುವಲ್ಲಿ ಆಗೇನು? (ರೋಮಾಪುರ 12:12) ಸಭೆಯಲ್ಲಿರುವ ನೇಮಿತ ಹಿರಿಯರು ಸಹ ನಮಗೆ ಆತ್ಮಿಕವಾಗಿ ಸಹಾಯ ಮಾಡಲಿಕ್ಕಾಗಿರುವ ಯೆಹೋವನ ಒದಗಿಸುವಿಕೆಯಾಗಿದ್ದಾರೆ. ದೇವರ ವಾಕ್ಯವನ್ನು ಬಳಸುವ ಮೂಲಕ ಮತ್ತು ನಮ್ಮೊಂದಿಗೆ ಹಾಗೂ ನಮಗಾಗಿ ಪ್ರಾರ್ಥಿಸುವ ಮೂಲಕ ಅವರು ನಮಗೆ ಸಾಂತ್ವನ ಹಾಗೂ ನೆರವನ್ನು ನೀಡಬಲ್ಲರು. (ಯಾಕೋಬ 5:13-16) ದೇವರ ಮಂದೆಯನ್ನು ಇಷ್ಟಪೂರ್ವಕವಾಗಿ, ಸಿದ್ಧಮನಸ್ಸಿನಿಂದ, ಮತ್ತು ಆದರ್ಶಪ್ರಾಯ ವಿಧದಲ್ಲಿ ಕಾಯುವಂತೆ ಅಪೊಸ್ತಲ ಪೇತ್ರನು ತನ್ನ ಜೊತೆ ಹಿರಿಯರನ್ನು ಪ್ರೇರೇಪಿಸಿದನು. (1 ಪೇತ್ರ 5:1-4) ಈ ಪುರುಷರು ನಮ್ಮ ಕ್ಷೇಮದಲ್ಲಿ ಪ್ರಾಮಾಣಿಕವಾಗಿ ಆಸಕ್ತರಾಗಿದ್ದಾರೆ ಮತ್ತು ಸಹಾಯಕಾರಿಯಾಗಿರಲು ಬಯಸುತ್ತಾರೆ. ಹಿರಿಯರ ಸಹಾಯದಿಂದ ಪೂರ್ಣವಾಗಿ ಪ್ರಯೋಜನ ಪಡೆಯಲು ಮತ್ತು ಸಭೆಯಲ್ಲಿ ಆತ್ಮಿಕವಾಗಿ ಚೆನ್ನಾಗಿ ಮುಂದುವರಿಯಲು, ಪೇತ್ರನ ಸಲಹೆಯನ್ನು ಅನ್ವಯಿಸುವ ಅಗತ್ಯ ನಮಗೆಲ್ಲರಿಗಿದೆ ಎಂಬುದು ನಿಶ್ಚಯ: “ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.
8, 9. ಮೊದಲನೆಯ ಪೇತ್ರ 5:6-11 ರಿಂದ ಯಾವ ಸಾಂತ್ವನವನ್ನು ಪಡೆಯಬಹುದು?
8 ಪೇತ್ರನು ಕೂಡಿಸಿದ್ದು: “ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ. ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ. ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು. ಆತನಿಗೆ ಆಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.”—1 ಪೇತ್ರ 5:6-11.
9 ‘ದೇವರು ನಮಗೋಸ್ಕರ ಚಿಂತಿಸುವುದರಿಂದ, ನಮ್ಮೆಲ್ಲಾ ವ್ಯಾಕುಲತೆಯನ್ನು ನಾವು ದೇವರ ಮೇಲೆ ಹಾಕ’ ಬಲ್ಲೆವು ಎಂದು ಗ್ರಹಿಸುವುದು ಎಷ್ಟು ಸಾಂತ್ವನದಾಯಕವಾಗಿದೆ! ನಮ್ಮ ವ್ಯಾಕುಲತೆಯಲ್ಲಿ ಸ್ವಲ್ಪ ಭಾಗವು, ನಮ್ಮ ಮೇಲೆ ಹಿಂಸೆ ಮತ್ತು ಬೇರೆ ಕಷ್ಟಾನುಭವಗಳನ್ನು ತರುವ ಮೂಲಕ ಯೆಹೋವನೊಂದಿಗಿರುವ ನಮ್ಮ ಸಂಬಂಧವನ್ನು ನಾಶ ಮಾಡುವ ಪಿಶಾಚನ ಪ್ರಯತ್ನಗಳಿಂದ ಫಲಿಸುವುದಾದರೆ, ಸಮಗ್ರತೆಯನ್ನು ಕಾಪಾಡುವವರಿಗೆ ಎಲ್ಲವೂ ಚೆನ್ನಾಗಿ ಅಂತ್ಯಗೊಳ್ಳುವುದೆಂದು ಅರಿಯುವುದು ಅದ್ಭುತಕರವಾಗಿಲ್ಲವೊ? ಹೌದು, ಸ್ವಲ್ಪ ಕಾಲದ ವರೆಗೆ ನಾವು ಕಷ್ಟಾನುಭವಿಸಿದ ಮೇಲೆ, ಕೃಪಾಪೂರ್ಣನಾದ ದೇವರು ನಮ್ಮ ತರಬೇತನ್ನು ಪೂರ್ಣಗೊಳಿಸುವನು ಮತ್ತು ನಮ್ಮನ್ನು ಸ್ಥಿರಸಂಕಲ್ಪವುಳ್ಳವರನ್ನಾಗಿಯೂ ಬಲಿಷ್ಠರನ್ನಾಗಿಯೂ ಮಾಡುವನು.
10. ವ್ಯಾಕುಲತೆಯನ್ನು ಹಗುರಗೊಳಿಸಲು ಸಹಾಯ ಮಾಡಬಲ್ಲ ಯಾವ ಮೂರು ಗುಣಗಳನ್ನು ಮೊದಲನೆಯ ಪೇತ್ರ 5:6, 7 ಸೂಚಿಸುತ್ತದೆ?
10 ಮೊದಲನೆಯ ಪೇತ್ರ 5:6, 7, ವ್ಯಾಕುಲತೆಯೊಂದಿಗೆ ನಿಭಾಯಿಸುವಂತೆ ನಮಗೆ ಸಹಾಯ ಮಾಡಬಲ್ಲ ಮೂರು ಗುಣಗಳನ್ನು ಸೂಚಿಸುತ್ತದೆ. ಒಂದು ದೈನ್ಯ, ಯಾ “ದೀನಮನಸ್ಸು” ಆಗಿದೆ. 6 ನೆಯ ವಚನವು “ತಕ್ಕ ಕಾಲದಲ್ಲಿ” ಎಂಬ ಅಭಿವ್ಯಕ್ತಿಯೊಂದಿಗೆ—ತಾಳ್ಮೆಗಾಗಿರುವ ಅಗತ್ಯವನ್ನು ಸೂಚಿಸುತ್ತಾ—ಕೊನೆಗೊಳ್ಳುತ್ತದೆ. 7 ನೆಯ ವಚನವು ತೋರಿಸುವುದೇನೆಂದರೆ, ನಮ್ಮೆಲ್ಲಾ ವ್ಯಾಕುಲತೆಯನ್ನು ನಾವು ದೇವರ ಮೇಲೆ ಧೈರ್ಯವಾಗಿ ಹಾಕಸಾಧ್ಯವಿದೆ ‘ಯಾಕೆಂದರೆ ಆತನು ನಮಗೋಸ್ಕರ ಚಿಂತಿಸುತ್ತಾನೆ,’ ಮತ್ತು ಆ ಮಾತುಗಳು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನು ಪ್ರೋತ್ಸಾಹಿಸುತ್ತವೆ. ಹಾಗಾದರೆ ವ್ಯಾಕುಲತೆಯನ್ನು ಹಗುರಗೊಳಿಸುವಲ್ಲಿ ದೈನ್ಯ, ತಾಳ್ಮೆ, ಮತ್ತು ದೇವರಲ್ಲಿ ಸಂಪೂರ್ಣ ಭರವಸೆ ಹೇಗೆ ಸಹಾಯ ಮಾಡಬಲ್ಲವೆಂದು ನಾವು ನೋಡೋಣ.
ದೈನ್ಯವು ಸಹಾಯ ಮಾಡಬಲ್ಲ ವಿಧ
11. ವ್ಯಾಕುಲತೆಯನ್ನು ನಿಭಾಯಿಸುವಂತೆ ದ್ಯೆನ್ಯವು ನಮಗೆ ಹೇಗೆ ಸಹಾಯ ಮಾಡಬಹುದು?
11 ನಾವು ದೀನರಾಗಿರುವುದಾದರೆ, ದೇವರ ಆಲೋಚನೆಗಳು ನಮ್ಮ ಆಲೋಚನೆಗಳಿಗಿಂತ ಬಹಳ ಶ್ರೇಷ್ಠವಾಗಿವೆ ಎಂದು ನಾವು ಒಪ್ಪಿಕೊಳ್ಳುವೆವು. (ಯೆಶಾಯ 55:8, 9) ಯೆಹೋವನ ಎಲ್ಲವನ್ನು ಒಳಗೊಳ್ಳುವ ಯಥಾದೃಷ್ಟಿಯ ಹೋಲಿಕೆಯಲ್ಲಿ ನಮ್ಮ ಸೀಮಿತ ಮಾನಸಿಕ ವ್ಯಾಪ್ತಿಯನ್ನು ಗ್ರಹಿಸುವಂತೆ ದೈನ್ಯವು ನಮಗೆ ಸಹಾಯ ಮಾಡುತ್ತದೆ. ನೀತಿವಂತ ಮನುಷ್ಯನಾದ ಯೋಬನ ವಿಷಯದಲ್ಲಿ ತೋರಿಸಲ್ಪಟ್ಟಂತೆ, ನಾವು ವಿವೇಚಿಸದ ಸಂಗತಿಗಳನ್ನು ಆತನು ನೋಡುತ್ತಾನೆ. (ಯೋಬ 1:7-12; 2:1-6) ನಮ್ಮನ್ನು “ದೇವರ ತ್ರಾಣವುಳ್ಳ ಹಸ್ತದ ಕೆಳಗೆ” ತಗ್ಗಿಸಿಕೊಳ್ಳುವ ಮೂಲಕ, ಅತ್ಯುಚ್ಚ ಸಾರ್ವಭೌಮನ ಸಂಬಂಧದಲ್ಲಿ ನಮ್ಮ ದೀನ ಸ್ಥಾನವನ್ನು ನಾವು ಅಂಗೀಕರಿಸುತ್ತಾ ಇದ್ದೇವೆ. ಸರದಿಯಾಗಿ ಇದು, ಆತನು ಅನುಮತಿಸುವ ಸ್ಥಿತಿಗತಿಗಳೊಂದಿಗೆ ನಿಭಾಯಿಸುವಂತೆ ನಮಗೆ ಸಹಾಯ ಮಾಡುತ್ತದೆ. ತತ್ಕ್ಷಣದ ಪರಿಹಾರಕ್ಕಾಗಿ ನಮ್ಮ ಹೃದಯಗಳು ಹಾತೊರೆಯಬಹುದು, ಆದರೆ ಯೆಹೋವನ ಗುಣಗಳು ಪರಿಪೂರ್ಣ ಸಮತೂಕದಲ್ಲಿರುವುದರಿಂದ, ನಮ್ಮ ಪರವಾಗಿ ಯಾವಾಗ ಮತ್ತು ಹೇಗೆ ಕಾರ್ಯಮಾಡಬೇಕೆಂದು ಆತನಿಗೆ ಖಚಿತವಾಗಿ ತಿಳಿದಿದೆ. ಹಾಗಾದರೆ ಎಳೆಯ ಮಕ್ಕಳಂತೆ, ನಮ್ಮ ವ್ಯಾಕುಲತೆಗಳೊಂದಿಗೆ ನಿಭಾಯಿಸಲು ಆತನು ನಮಗೆ ಸಹಾಯ ಮಾಡುವನೆಂಬ ಭರವಸೆಯಿಂದ, ನಾವು ದೈನ್ಯದಿಂದ ಯೆಹೋವನ ಮೇಲೆ ಆತುಕೊಳ್ಳೋಣ.—ಯೆಶಾಯ 41:8-13.
12. ಇಬ್ರಿಯ 13:5ರ ಮಾತುಗಳನ್ನು ನಾವು ದೈನ್ಯದಿಂದ ಅನ್ವಯಿಸುವುದಾದರೆ, ಪ್ರಾಪಂಚಿಕ ಭದ್ರತೆಯ ಕುರಿತಾದ ವ್ಯಾಕುಲತೆಯು ಹೇಗೆ ಪ್ರಭಾವಿಸಲ್ಪಡುವುದು?
12 ದೇವರ ವಾಕ್ಯದಿಂದ ಬರುವ ಸಲಹೆಯನ್ನು ಅನ್ವಯಿಸುವ ಸಿದ್ಧಮನಸ್ಸನ್ನು ದೈನ್ಯವು ಒಳಗೊಳ್ಳುತ್ತದೆ. ಇದು ಅನೇಕ ವೇಳೆ ವ್ಯಾಕುಲತೆಯನ್ನು ಕಡಿಮೆಗೊಳಿಸಬಲ್ಲದು. ಉದಾಹರಣೆಗೆ, ನಮ್ಮ ವ್ಯಾಕುಲತೆಯು, ಪ್ರಾಪಂಚಿಕ ಬೆನ್ನಟ್ಟುವಿಕೆಗಳಲ್ಲಿ ಆಳವಾದ ಒಳಗೊಳ್ಳುವಿಕೆಯಿಂದ ಫಲಿಸಿದ್ದರೆ, ಪೌಲನ ಸಲಹೆಯ ಮೇಲೆ ಚಿಂತನೆ ಮಾಡುವುದು ಒಳ್ಳೆಯದಾಗಿರುವುದು: “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು [ದೇವರು] ತಾನೇ ಹೇಳಿದ್ದಾನೆ.” (ಇಬ್ರಿಯ 13:5) ಇಂತಹ ಸಲಹೆಯನ್ನು ದೈನ್ಯದಿಂದ ಅನ್ವಯಿಸಿಕೊಳ್ಳುವ ಮೂಲಕ, ಪ್ರಾಪಂಚಿಕ ಭದ್ರತೆಯ ಕುರಿತಾದ ಮಹಾ ವ್ಯಾಕುಲತೆಯಿಂದ ತಮ್ಮನ್ನು ಅನೇಕರು ಮುಕ್ತಗೊಳಿಸಿಕೊಂಡಿದ್ದಾರೆ. ಅವರ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳದೆ ಇದ್ದಿರಬಹುದಾದರೂ, ಅವರಿಗೆ ಆತ್ಮಿಕ ಹಾನಿಯನ್ನುಂಟುಮಾಡುತ್ತಾ, ಅದು ಅವರ ಆಲೋಚನೆಗಳನ್ನು ಆಳುವುದಿಲ್ಲ.
ತಾಳ್ಮೆಯ ಪಾತ್ರ
13, 14. (ಎ) ಸಹನೆಯ ತಾಳ್ಮೆಯ ವಿಷಯವಾಗಿ, ಯಾವ ಮಾದರಿಯನ್ನು ಮನುಷ್ಯನಾದ ಯೋಬನು ಒದಗಿಸಿದನು? (ಬಿ) ಯೆಹೋವನ ಮೇಲೆ ತಾಳ್ಮೆಯಿಂದ ಕಾಯುವುದು ನಮಗಾಗಿ ಏನನ್ನು ಮಾಡಬಲ್ಲದು?
13 ಮೊದಲನೆಯ ಪೇತ್ರ 5:6 ರಲ್ಲಿರುವ “ತಕ್ಕ ಕಾಲದಲ್ಲಿ” ಎಂಬ ಅಭಿವ್ಯಕ್ತಿಯು, ಸಹನೆಯ ತಾಳ್ಮೆಗಾಗಿರುವ ಅಗತ್ಯವನ್ನು ಸೂಚಿಸುತ್ತದೆ. ಕೆಲವೊಮ್ಮೆ ಒಂದು ಸಮಸ್ಯೆಯು ದೀರ್ಘವಾದ ಸಮಯದ ವರೆಗೆ ಮುಂದುವರಿಯುತ್ತದೆ, ಮತ್ತು ಅದು ವ್ಯಾಕುಲತೆಯನ್ನು ಹೆಚ್ಚಿಸಬಲ್ಲದು. ಅಂತಹ ಒಂದು ಸನ್ನಿವೇಶದಲ್ಲಿ, ವಿಷಯಗಳನ್ನು ಯೆಹೋವನ ಕೈಗಳಲ್ಲಿ ಬಿಡುವ ಅಗತ್ಯ ನಮಗಿರುತ್ತದೆ. ಶಿಷ್ಯನಾದ ಯಾಕೋಬನು ಬರೆದದ್ದು: “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು (ಯೆಹೋವನು, NW) ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11) ಯೋಬನು ಆರ್ಥಿಕ ಧ್ವಂಸವನ್ನು ಅನುಭವಿಸಿದನು, ಮರಣದಲ್ಲಿ ಹತ್ತು ಮಕ್ಕಳನ್ನು ಕಳೆದುಕೊಂಡನು, ಅಸಹ್ಯಕರವಾದ ಕಾಯಿಲೆಯಿಂದ ಬಳಲಿದನು, ಮತ್ತು ಸುಳ್ಳು ಸಮಾಧಾನಕಾರರಿಂದ ತಪ್ಪಾಗಿ ಖಂಡಿಸಲ್ಪಟ್ಟನು. ಇಂತಹ ಸ್ಥಿತಿಗತಿಗಳಲ್ಲಿ ಒಂದು ನಿರ್ದಿಷ್ಟ ಮಟ್ಟದ ವ್ಯಾಕುಲತೆಯು ಸಾಧಾರಣವಾಗಿರುತ್ತಿತ್ತು.
14 ಅಂತೂ, ಯೋಬನು ಸಹನೆಯ ತಾಳ್ಮೆಯಲ್ಲಿ ಆದರ್ಶಪ್ರಾಯನಾಗಿದ್ದನು. ನಂಬಿಕೆಯ ತೀಕ್ಷೈವಾದ ಪರೀಕ್ಷೆಯನ್ನು ನಾವು ಅನುಭವಿಸುತ್ತಿದ್ದರೆ, ಪರಿಹಾರಕ್ಕಾಗಿ—ಅವನು ಮಾಡಿದಂತೆಯೇ—ನಾವು ಕಾಯಬೇಕಾಗಬಹುದು. ಆದರೆ ಕಟ್ಟಕಡೆಗೆ ತನ್ನ ಕಷ್ಟಾನುಭವದಿಂದ ಯೋಬನಿಗೆ ವಿಶ್ರಾಂತಿಯನ್ನು ಕೊಡುವ ಮೂಲಕ ಮತ್ತು ಹೇರಳವಾಗಿ ಅವನನ್ನು ಬಹುಮಾನಿಸುವ ಮೂಲಕ, ದೇವರು ಅವನ ಪರವಾಗಿ ಕಾರ್ಯವೆಸಗಿದನು. (ಯೋಬ 42:10-17) ಸಹನೆಯಿಂದ ಯೆಹೋವನ ಮೇಲೆ ಕಾಯುವುದು, ನಮ್ಮ ತಾಳ್ಮೆಯನ್ನು ಬೆಳೆಸುತ್ತದೆ ಮತ್ತು ಆತನಿಗಾಗಿರುವ ನಮ್ಮ ಭಕ್ತಿಯ ಆಳವನ್ನು ಪ್ರಕಟಿಸುತ್ತದೆ.—ಯಾಕೋಬ 1:2-4.
ಯೆಹೋವನಲ್ಲಿ ಭರವಸೆ
15. ಯೆಹೋವನಲ್ಲಿ ನಾವು ಏಕೆ ಸಂಪೂರ್ಣ ಭರವಸೆಯಿಡಬೇಕು?
15 ‘ದೇವರು ಅವರಿಗೋಸ್ಕರ ಚಿಂತಿಸುವುದರಿಂದ ತಮ್ಮ ಎಲ್ಲಾ ವ್ಯಾಕುಲತೆಯನ್ನು ಆತನ ಮೇಲೆ ಹಾಕುವಂತೆ’ ಪೇತ್ರನು ಜೊತೆ ವಿಶ್ವಾಸಿಗಳನ್ನು ಪ್ರೇರೇಪಿಸಿದನು. (1 ಪೇತ್ರ 5:7) ಆದುದರಿಂದ ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನು ನಾವು ಇಡಬಲ್ಲೆವು ಮತ್ತು ಇಡತಕ್ಕದ್ದು. ಜ್ಞಾನೋಕ್ತಿ 3:5, 6 ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಹಿಂದಿನ ಅನುಭವಗಳಿಂದಾಗಿ, ವ್ಯಾಕುಲತೆಯಿಂದ ತುಂಬಿರುವ ಕೆಲವರು ಇತರ ಮಾನವರ ಮೇಲೆ ಭರವಸೆಯಿಡುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ. ಆದರೆ ಜೀವದ ಮೂಲನೂ ಪೋಷಕನೂ ಆಗಿರುವ ನಮ್ಮ ಸೃಷ್ಟಿಕರ್ತನ ಮೇಲೆ ಭರವಸೆಯಿಡಲು ನಮಗೆ ಖಂಡಿತವಾಗಿಯೂ ಕಾರಣವಿದೆ. ನಿರ್ದಿಷ್ಟವಾದೊಂದು ವಿಷಯದಲ್ಲಿ ನಮ್ಮ ಸ್ವಂತ ಪ್ರತಿಕ್ರಿಯೆಯ ಮೇಲೆ ನಾವು ಭರವಸೆಯಿಡದಿದ್ದರೂ, ನಮ್ಮ ವಿಪತ್ತುಗಳಿಂದ ನಮ್ಮನ್ನು ಬಿಡಿಸಲು ನಾವು ಯಾವಾಗಲೂ ಯೆಹೋವನ ಮೇಲೆ ಆತುಕೊಳ್ಳಬಲ್ಲೆವು.—ಕೀರ್ತನೆ 34:18, 19; 36:9; 56:3, 4.
16. ಪ್ರಾಪಂಚಿಕ ವಿಷಯಗಳ ಮೇಲೆ ವ್ಯಾಕುಲತೆಯ ಕುರಿತು ಯೇಸು ಕ್ರಿಸ್ತನು ಏನನ್ನು ಹೇಳಿದನು?
16 ದೇವರಲ್ಲಿ ಭರವಸೆಯಿಡುವುದು, ತನ್ನ ತಂದೆಯಿಂದ ಕಲಿತಿದ್ದ ವಿಷಯಗಳನ್ನು ಕಲಿಸಿದ ಆತನ ಮಗನಾದ ಯೇಸು ಕ್ರಿಸ್ತನಿಗೆ ವಿಧೇಯರಾಗುವುದನ್ನು ಒಳಗೊಳ್ಳುತ್ತದೆ. (ಯೋಹಾನ 7:16) ಯೆಹೋವನನ್ನು ಸೇವಿಸುವ ಮೂಲಕ ‘ಪರಲೋಕದಲ್ಲಿ ನಿಧಿಗಳನ್ನು ಕೂಡಿಸಿಟ್ಟುಕೊಳ್ಳುವಂತೆ’ ಯೇಸು ತನ್ನ ಶಿಷ್ಯರನ್ನು ಪ್ರೇರೇಪಿಸಿದನು. ಆದರೆ ಆಹಾರ, ಬಟ್ಟೆ, ಮತ್ತು ಆಶ್ರಯವನ್ನು ಒಳಗೊಳ್ಳುವ ಪ್ರಾಪಂಚಿಕ ಆವಶ್ಯಕತೆಗಳ ಕುರಿತೇನು? “ಚಿಂತೆಮಾಡಬೇಡಿರಿ” ಎಂಬ ಸಲಹೆಯನ್ನು ಯೇಸು ನೀಡಿದನು. ದೇವರು ಹಕ್ಕಿಗಳನ್ನು ಸಾಕಿ ಸಲಹುತ್ತಾನೆಂದು ಅವನು ಸೂಚಿಸಿ ಹೇಳಿದನು. ಆತನು ಹೂವುಗಳನ್ನು ಸುಂದರವಾಗಿ ಹೊದಿಸುತ್ತಾನೆ. ದೇವರ ಮಾನವ ಸೇವಕರು ಇವುಗಳಿಗಿಂತ ಅಧಿಕ ಯೋಗ್ಯತೆಯುಳ್ಳವರಲ್ಲವೊ? ನಿಶ್ಚಯವಾಗಿಯೂ ಅವರು ಅಧಿಕ ಯೋಗ್ಯತೆಯುಳ್ಳವರಾಗಿದ್ದಾರೆ. ಆದಕಾರಣ, ಯೇಸು ಪ್ರೋತ್ಸಾಹಿಸಿದ್ದು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” ಯೇಸು ಮುಂದುವರಿಸಿದ್ದು: “ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.” (ಮತ್ತಾಯ 6:20, 25-34) ಹೌದು, ನಮಗೆ ಆಹಾರ, ನೀರು, ಬಟ್ಟೆ, ಮತ್ತು ಆಶ್ರಯದ ಅಗತ್ಯವಿದೆ, ಆದರೆ ನಾವು ಯೆಹೋವನಲ್ಲಿ ಭರವಸೆಯಿಡುವುದಾದರೆ, ಈ ವಿಷಯಗಳ ಕುರಿತು ನಾವು ಅನುಚಿತವಾಗಿ ವ್ಯಾಕುಲಗೊಳ್ಳಲಾರೆವು.
17. ರಾಜ್ಯವನ್ನು ಮೊದಲಾಗಿ ಹುಡುಕುವುದರ ಅಗತ್ಯವನ್ನು ನಾವು ಹೇಗೆ ದೃಷ್ಟಾಂತಿಸಬಹುದು?
17 ರಾಜ್ಯವನ್ನು ಮೊದಲಾಗಿ ಹುಡುಕಲು, ನಾವು ದೇವರಲ್ಲಿ ಭರವಸೆಯಿಡಬೇಕು ಮತ್ತು ನಮ್ಮ ಆದ್ಯತೆಗಳನ್ನು ಸರಿಯಾದ ಕ್ರಮದಲ್ಲಿ ಇಡಬೇಕು. ಮುಳುಗುವವನೊಬ್ಬನು ಉಸಿರಾಡುವ ಯಾವುದೇ ಉಪಕರಣವಿರದೆ ಮುತ್ತನ್ನು ಹೊಂದಿರುವ ಒಂದು ಸಿಂಪಿಯ ಅನ್ವೇಷಣೆಯಲ್ಲಿ ನೀರಿನ ಮೇಲ್ಭಾಗದ ತಳಕ್ಕೆ ಧುಮುಕಬಹುದು. ಇದು ತನ್ನ ಕುಟುಂಬಕ್ಕಾಗಿ ಒದಗಿಸುವ ಅವನ ವಿಧಾನವಾಗಿದೆ. ನಿಶ್ಚಯವಾಗಿಯೂ ಒಂದು ಉನ್ನತವಾದ ಆದ್ಯತೆ! ಆದರೆ ಯಾವುದು ಹೆಚ್ಚು ಪ್ರಾಮುಖ್ಯವಾಗಿದೆ? ಗಾಳಿ! ತನ್ನ ಶ್ವಾಸಕೋಶಗಳನ್ನು ಪುನಃ ಭರ್ತಿಮಾಡಲು ಅವನು ಕ್ರಮವಾಗಿ ನೀರಿನ ಮೇಲ್ಭಾಗಕ್ಕೆ ಬರಬೇಕು. ಗಾಳಿಯು ಪ್ರಧಾನ ಆದ್ಯತೆಯಾಗಿದೆ. ಹಾಗೆಯೇ, ಜೀವಿತದ ಆವಶ್ಯಕತೆಗಳನ್ನು ಪಡೆಯುವ ಸಲುವಾಗಿ ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಸ್ವಲ್ಪಮಟ್ಟಿಗೆ ಒಳಗೊಳ್ಳಬೇಕಾಗಬಹುದು. ಹಾಗಿದ್ದರೂ, ಆತ್ಮಿಕ ವಿಷಯಗಳು ಪ್ರಥಮವಾಗಿರಬೇಕು ಯಾಕೆಂದರೆ, ನಮ್ಮ ಮನೆವಾರ್ತೆಯ ಜೀವವು ಈ ವಿಷಯಗಳ ಮೇಲೆ ಅವಲಂಬಿಸಿದೆ. ಪ್ರಾಪಂಚಿಕ ಅಗತ್ಯಗಳ ಕುರಿತು ಅನುಚಿತ ವ್ಯಾಕುಲತೆಯನ್ನು ತೊರೆಯಲು, ನಮಗೆ ದೇವರಲ್ಲಿ ಸಂಪೂರ್ಣ ಭರವಸೆಯಿರಬೇಕು. ಅಲ್ಲದೆ, ‘ಕರ್ತನ ಕೆಲಸದಲ್ಲಿ ಮಾಡಲು ಅಧಿಕ ಕೆಲಸವಿರುವುದು’ ವ್ಯಾಕುಲತೆಯನ್ನು ಹಗುರಗೊಳಿಸಲು ಸಹಾಯ ಮಾಡಬಹುದು, ಯಾಕೆಂದರೆ “ಯೆಹೋವನ ಆನಂದ”ವು ನಮ್ಮ ಆಶ್ರಯದುರ್ಗವಾಗಿ ಪರಿಣಮಿಸುತ್ತದೆ.—1 ಕೊರಿಂಥ 15:58; ನೆಹೆಮೀಯ 8:10.
ನಿಮ್ಮ ವ್ಯಾಕುಲತೆಯನ್ನು ಯೆಹೋವನ ಮೇಲೆ ಹಾಕುತ್ತಾ ಇರ್ರಿ
18. ನಮ್ಮೆಲ್ಲಾ ವ್ಯಾಕುಲತೆಯನ್ನು ಯೆಹೋವನ ಮೇಲೆ ಹಾಕುವುದು ನಿಜವಾಗಿಯೂ ನಮಗೆ ಸಹಾಯ ಮಾಡಬಲ್ಲದೆಂದು ತೋರಿಸಲು ಯಾವ ಪ್ರಮಾಣವಿದೆ?
18 ಆತ್ಮಿಕ ವಿಷಯಗಳ ಮೇಲೆ ಯಾವಾಗಲೂ ಮನಸ್ಸನ್ನು ಕೇಂದ್ರೀಕರಿಸುವ ಸಲುವಾಗಿ, ನಮ್ಮೆಲ್ಲಾ ವ್ಯಾಕುಲತೆಯನ್ನು ನಾವು ಯೆಹೋವನ ಮೇಲೆ ಹಾಕುತ್ತಾ ಇರಬೇಕು. ತನ್ನ ಸೇವಕರಿಗಾಗಿ ಆತನು ನಿಜವಾಗಿಯೂ ಚಿಂತಿಸುತ್ತಾನೆಂದು ಯಾವಾಗಲೂ ಜ್ಞಾಪಕದಲ್ಲಿಟ್ಟುಕೊಳ್ಳಿರಿ. ದೃಷ್ಟಾಂತಕ್ಕಾಗಿ: ತನ್ನ ಗಂಡನ ಅವಿಶ್ವಾಸದಿಂದಾಗಿ, ಒಬ್ಬ ಕ್ರೈಸ್ತ ಸ್ತ್ರೀಯ ವ್ಯಾಕುಲತೆಯು, ಆಕೆಗೆ ನಿದ್ದೆಮಾಡಲು ಸಾಧ್ಯವಾಗದ ಮಟ್ಟಿಗೆ ಹೆಚ್ಚಾಯಿತು. (ಹೋಲಿಸಿ ಕೀರ್ತನೆ 119:28.) ಹಾಗಿದ್ದರೂ, ಹಾಸಿಗೆಯಲ್ಲಿ ತನ್ನೆಲ್ಲಾ ವ್ಯಾಕುಲತೆಯನ್ನು ಆಕೆ ಯೆಹೋವನ ಮೇಲೆ ಹಾಕುತ್ತಿದ್ದಳು. ದೇವರಿಗೆ, ಆಕೆ ಮತ್ತು ಆಕೆಯ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ವೇದನೆಯ ಕುರಿತು ಹೇಳುತ್ತಾ—ತನ್ನ ಅತ್ಯಂತ ಆಂತರ್ಯದ ಅನಿಸಿಕೆಗಳನ್ನು ಪ್ರಕಟಿಸುತ್ತಿದ್ದಳು. ಉದ್ರಿಕ್ತ ಪ್ರಾರ್ಥನೆಯಲ್ಲಿ ಪರಿಹಾರಕ್ಕಾಗಿ ಆಕೆ ಅತ್ತ ಬಳಿಕ, ನಿದ್ದೆಹೋಗಲು ಆಕೆಗೆ ಯಾವಾಗಲೂ ಸಾಧ್ಯವಾಗುತ್ತಿತ್ತು. ಯಾಕೆಂದರೆ ಯೆಹೋವನು ಆಕೆಯ ಮತ್ತು ಆಕೆಯ ಮಕ್ಕಳ ಕಾಳಜಿವಹಿಸುವನೆಂಬ ಭರವಸೆ ಆಕೆಗಿತ್ತು. ಶಾಸ್ತ್ರೀಯವಾಗಿ ವಿಚ್ಛೇಧನ ಪಡೆದಿರುವ ಈ ಸ್ತ್ರೀಯು ಈಗ ಒಬ್ಬ ಹಿರಿಯನೊಂದಿಗೆ ಸಂತೋಷವಾಗಿ ಮದುವೆಯಾಗಿದ್ದಾಳೆ.
19, 20. (ಎ) ವ್ಯಾಕುಲತೆಯನ್ನು ನಾವು ನಿಭಾಯಿಸಬಹುದಾದ ಕೆಲವು ವಿಧಗಳು ಯಾವುವು? (ಬಿ) ನಮ್ಮೆಲ್ಲಾ ವ್ಯಾಕುಲತೆಯೊಂದಿಗೆ ನಾವು ಏನನ್ನು ಮಾಡುತ್ತಾ ಇರಬೇಕು?
19 ಯೆಹೋವನ ಜನರೋಪಾದಿ, ವ್ಯಾಕುಲತೆಯನ್ನು ನಿಭಾಯಿಸುವ ವಿವಿಧ ಮಾರ್ಗಗಳು ನಮಗಿವೆ. ದೇವರ ವಾಕ್ಯವನ್ನು ಅನ್ವಯಿಸುವುದು ವಿಶೇಷವಾಗಿ ಸಹಾಯಕಾರಿಯಾಗಿದೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಪ್ರಕಟಿಸಲಾಗುವ ಸಹಾಯಕಾರಿ ಹಾಗೂ ಉತ್ಸಾಹದಾಯಕ ಲೇಖನಗಳನ್ನು ಸೇರಿಸಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮುಖಾಂತರ ದೇವರಿಂದ ಒದಗಿಸಲ್ಪಡುವ ಸಮೃದ್ಧವಾದ ಆತ್ಮಿಕ ಆಹಾರವೂ ನಮಗಿದೆ. (ಮತ್ತಾಯ 24:45-47) ದೇವರ ಪವಿತ್ರಾತ್ಮದ ನೆರವು ನಮಗಿದೆ. ಕ್ರಮವಾದ ಮತ್ತು ಉದ್ರಿಕ್ತ ಪ್ರಾರ್ಥನೆಯು ನಮ್ಮನ್ನು ಬಹಳವಾಗಿ ಪ್ರಯೋಜನಪಡಿಸುತ್ತದೆ. ಆತ್ಮಿಕ ಸಹಾಯ ಮತ್ತು ಸಾಂತ್ವನವನ್ನು ಒದಗಿಸಲು ನೇಮಿತ ಕ್ರೈಸ್ತ ಹಿರಿಯರು ಸಿದ್ಧರೂ ಇಷ್ಟವುಳ್ಳವರೂ ಆಗಿದ್ದಾರೆ.
20 ನಮ್ಮನ್ನು ಆವರಿಸಬಹುದಾದ ವ್ಯಾಕುಲತೆಯೊಂದಿಗೆ ನಿರ್ವಹಿಸುವುದರಲ್ಲಿ, ನಮ್ಮ ಸ್ವಂತ ದೈನ್ಯ ಮತ್ತು ತಾಳ್ಮೆ ಬಹಳ ಪ್ರಯೋಜನಕಾರಿಯಾಗಿವೆ. ವಿಶೇಷವಾಗಿ ಪ್ರಾಮುಖ್ಯವಾದದ್ದು ಯೆಹೋವನಲ್ಲಿ ಸಂಪೂರ್ಣ ಭರವಸೆ, ಯಾಕೆಂದರೆ ಆತನ ಸಹಾಯ ಮತ್ತು ಮಾರ್ಗದರ್ಶನವನ್ನು ನಾವು ಅನುಭವಿಸಿದಂತೆ, ನಮ್ಮ ನಂಬಿಕೆಯು ಕಟ್ಟಲ್ಪಡುತ್ತದೆ. ಸರದಿಯಾಗಿ, ದೇವರಲ್ಲಿ ನಂಬಿಕೆಯು ಅನುಚಿತವಾಗಿ ಕಳವಳಗೊಳ್ಳುವುದರಿಂದ ನಮ್ಮನ್ನು ತಡೆಯುತ್ತದೆ. (ಯೋಹಾನ 14:1) ರಾಜ್ಯವನ್ನು ಮೊದಲಾಗಿ ಹುಡುಕಲು ಮತ್ತು ಕರ್ತನ ಆನಂದದಾಯಕ ಕೆಲಸದಲ್ಲಿ ಕಾರ್ಯಮಗ್ನರಾಗಿರಲು, ನಂಬಿಕೆಯು ನಮ್ಮನ್ನು ಪ್ರೇರಿಸುತ್ತದೆ. ವ್ಯಾಕುಲತೆಯೊಂದಿಗೆ ನಿಭಾಯಿಸಲು ಇದು ನಮಗೆ ಸಹಾಯ ಮಾಡಬಲ್ಲದು. ಇಂತಹ ಚಟುವಟಿಕೆಯು, ಅನಂತವಾಗಿ ದೇವರ ಸ್ತುತಿಗಳನ್ನು ಹಾಡುವವರ ಮಧ್ಯದಲ್ಲಿ ನಾವು ನಿರಾತಂಕವಾಗಿರುವಂತೆ ಮಾಡುತ್ತದೆ. (ಕೀರ್ತನೆ 104:33) ಆದುದರಿಂದ ನಾವು ನಮ್ಮೆಲ್ಲಾ ವ್ಯಾಕುಲತೆಯನ್ನು ಯೆಹೋವನ ಮೇಲೆ ಹಾಕುತ್ತಾ ಇರೋಣ.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
▫ ವ್ಯಾಕುಲತೆಯನ್ನು ಹೇಗೆ ವಿಶದೀಕರಿಸಬಹುದು?
▫ ವ್ಯಾಕುಲತೆಯನ್ನು ನಾವು ನಿಭಾಯಿಸಸಾಧ್ಯವಿರುವ ಕೆಲವು ವಿಧಗಳಾವುವು?
▫ ವ್ಯಾಕುಲತೆಯನ್ನು ಹಗುರಗೊಳಿಸಲು ದೈನ್ಯ ಮತ್ತು ತಾಳ್ಮೆ ಹೇಗೆ ಸಹಾಯ ಮಾಡಬಲ್ಲವು?
▫ ವ್ಯಾಕುಲತೆಯೊಂದಿಗೆ ನಿಭಾಯಿಸುವಲ್ಲಿ, ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡುವುದು ಏಕೆ ಪ್ರಾಮುಖ್ಯವಾಗಿದೆ?
▫ ನಮ್ಮೆಲ್ಲಾ ವ್ಯಾಕುಲತೆಯನ್ನು ನಾವು ಯೆಹೋವನ ಮೇಲೆ ಏಕೆ ಹಾಕುತ್ತಾ ಇರಬೇಕು?
[ಪುಟ 24 ರಲ್ಲಿರುವ ಚಿತ್ರ]
“ಚಿಂತೆಮಾಡಬೇಡಿರಿ” ಎಂದು ಯೇಸು ಏಕೆ ಹೇಳಿದನೆಂದು ನಿಮಗೆ ಗೊತ್ತಿದೆಯೊ?