ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ, ವಸ್ತುಗಳಿಗಲ್ಲ
“ನೀವು [ದೇವರ] ರಾಜ್ಯವನ್ನು ಹುಡುಕುತ್ತಾ ಇರಿ, ಆಗ ಇವೆಲ್ಲವೂ ನಿಮಗೆ ಕೂಡಿಸಲ್ಪಡುವವು.”—ಲೂಕ 12:31.
1. ನಮ್ಮ ಅಗತ್ಯ ಮತ್ತು ಆಸೆಗಳ ನಡುವೆ ಇರುವ ವ್ಯತ್ಯಾಸವೇನು?
ಬದುಕಲು ನಮಗೆ ಅಗತ್ಯವಾಗಿರುವುದು ಕೆಲವೇ. ಊಟ, ಬಟ್ಟೆ, ಇರಲಿಕ್ಕೆ ಸ್ವಲ್ಪ ಜಾಗ ಅಷ್ಟೇ. ಆದರೆ ನಮ್ಮ ಆಸೆಗಳು ನೂರೆಂಟು. ನಿಜವೇನೆಂದರೆ ನಾವು ಆಸೆಪಡುವುದೆಲ್ಲವೂ ಜೀವನಕ್ಕೆ ಅಗತ್ಯವಾಗಿಲ್ಲ ಎಂದು ಹೆಚ್ಚಿನವರಿಗೆ ಅರ್ಥವಾಗುವುದಿಲ್ಲ.
2. ಜನರು ಆಸೆಪಡುವ ಕೆಲವು ವಸ್ತುಗಳು ಯಾವುವು?
2 ಬಡದೇಶಗಳಲ್ಲಿ ಇರುವವರು ಮತ್ತು ಶ್ರೀಮಂತ ದೇಶಗಳಲ್ಲಿ ಇರುವವರು ಆಸೆಪಡುವ ವಸ್ತುಗಳು ತೀರಾ ಬೇರೆ. ಬಡದೇಶದವರಿಗೆ ಮೊಬೈಲ್ ಫೋನ್, ಬೈಕ್ ಅಥವಾ ಚಿಕ್ಕ ಜಮೀನು ಇರಬೇಕೆಂಬ ಆಸೆ. ಶ್ರೀಮಂತ ದೇಶಗಳವರಿಗೆ ತುಂಬ ಬೆಲೆಯ ಹೊಸಹೊಸ ಬಟ್ಟೆಗಳು, ಇನ್ನೂ ದೊಡ್ಡ ಮನೆ, ಇನ್ನೂ ದುಬಾರಿಯಾದ ವಾಹನ ಬೇಕೆಂಬ ಆಸೆ. ನಾವು ಎಲ್ಲೇ ಜೀವಿಸಲಿ, ಶ್ರೀಮಂತರಾಗಿರಲಿ ಬಡವರಾಗಿರಲಿ ನಿಜವಾಗಿ ಅಗತ್ಯವಿಲ್ಲದ ಅಥವಾ ಕೈಗೆಟಕದ ಹೆಚ್ಚೆಚ್ಚು ವಸ್ತುಗಳಿಗಾಗಿ ಆಸೆ ನಮ್ಮಲ್ಲಿ ಬರಸಾಧ್ಯವಿದೆ.
ಪ್ರಾಪಂಚಿಕತೆ ನಮ್ಮನ್ನೂ ಪ್ರಭಾವಿಸಬಹುದು
3. ಪ್ರಾಪಂಚಿಕತೆ ಅಂದರೇನು?
3 ಪ್ರಾಪಂಚಿಕತೆ ಅಂದರೇನು? ದೇವರೊಂದಿಗಿನ ಸಂಬಂಧಕ್ಕಿಂತ ಹಣ, ವಸ್ತುಗಳ ಬಗ್ಗೆಯೇ ಹೆಚ್ಚು ಚಿಂತಿಸುವ ಮನೋಭಾವವೇ. ಅಂಥ ಮನೋಭಾವ ಇರುವ ವ್ಯಕ್ತಿಯ ಹತ್ತಿರ ಅಗತ್ಯವಾದ ವಸ್ತುಗಳಿದ್ದರೂ ಅವನಿಗೆ ತೃಪ್ತಿ ಇರುವುದಿಲ್ಲ. ಯಾವಾಗಲೂ ‘ಅದು ಬೇಕು, ಇದು ಬೇಕು’ ಎಂಬ ಆಸೆ ಇರುತ್ತದೆ. ಒಬ್ಬನು ಬಡವನಾಗಿದ್ದರೂ ದುಬಾರಿ ವಸ್ತುಗಳನ್ನು ಖರೀದಿಸದಿದ್ದರೂ ಅವನಲ್ಲಿ ಪ್ರಾಪಂಚಿಕ ಮನೋಭಾವ ಬರಸಾಧ್ಯವಿದೆ. ಅವನು ದೇವರ ರಾಜ್ಯಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಡುವುದಿಲ್ಲ.—ಇಬ್ರಿ. 13:5.
4. ಸೈತಾನನು ‘ಕಣ್ಣಿನಾಶೆಯನ್ನು’ ಹೇಗೆ ಬಳಸುತ್ತಾನೆ?
4 ನಮ್ಮ ಹತ್ತಿರ ತುಂಬ ವಸ್ತುಗಳಿದ್ದರೆ ಮಾತ್ರ ಸಂತೋಷ ಇರುತ್ತದೆ, ಇಲ್ಲದಿದ್ದರೆ ಇಲ್ಲ ಎಂದು ನಾವು ನಂಬಬೇಕು ಎನ್ನುವುದೇ ಸೈತಾನನ ಇಷ್ಟ. ಆದ್ದರಿಂದ ಅವನು ತನ್ನ ಲೋಕ ಮತ್ತು ನಮ್ಮ ‘ಕಣ್ಣಿನಾಶೆಯ’ ಮೂಲಕ ‘ಇನ್ನೂ ಬೇಕು, ಇನ್ನೂ ಬೇಕು’ ಎಂಬ ಆಸೆ ನಮ್ಮಲ್ಲಿ ಹುಟ್ಟುವಂತೆ ಮಾಡುತ್ತಾನೆ. (1 ಯೋಹಾ. 2:15-17; ಆದಿ. 3:6; ಜ್ಞಾನೋ. 27:20) ಹೊಸಹೊಸ ವಸ್ತುಗಳನ್ನು ಖರೀದಿಸಲು ನಮ್ಮ ಮನವೊಪ್ಪಿಸುವ ಜಾಹೀರಾತುಗಳು ನಿರಂತರ ನಮ್ಮ ಕಣ್ಣಿಗೆ ಅಥವಾ ಕಿವಿಗೆ ಬೀಳುತ್ತವೆ. ನೋಡಿದ ತಕ್ಷಣ ಇಷ್ಟವಾಯಿತು ಅಥವಾ ಜಾಹೀರಾತಿನಲ್ಲಿ ನೋಡಿದ್ದೀರಿ ಎಂದಮಾತ್ರಕ್ಕೆ ನೀವು ಏನನ್ನಾದರೂ ಖರೀದಿಸಿದ್ದೀರಾ? ಹಾಗಿದ್ದರೆ ಅದು ನಿಜವಾಗಿ ನಿಮಗೆ ಅಗತ್ಯವಿಲ್ಲವೆಂದು ನಂತರ ಗೊತ್ತಾಗಿರಬಹುದು. ನಮಗೆ ಅಗತ್ಯವಿಲ್ಲದ, ಬೇಡವಾದ ವಸ್ತುಗಳನ್ನು ಖರೀದಿಸುತ್ತಾ ಇದ್ದರೆ ನಮ್ಮ ಜೀವನ ಸರಳವಾಗಿರುವುದಿಲ್ಲ. ಆ ವಸ್ತುಗಳು ನಾವು ಯೆಹೋವನ ಸೇವೆಗೆ ಪೂರ್ತಿ ಗಮನಕೊಡದಂತೆ ಮಾಡುತ್ತವೆ. ಉದಾಹರಣೆಗೆ ಬೈಬಲಿನ ಅಧ್ಯಯನ ಮಾಡಲು, ಕೂಟಗಳಿಗೆ ತಯಾರಿಸಲು ಮತ್ತು ಹಾಜರಾಗಲು, ಸೇವೆಗೆ ತಪ್ಪದೆ ಹೋಗಲು ಸಾಕಷ್ಟು ಸಮಯ ಸಿಗದೆ ಹೋಗಬಹುದು. ಆದ್ದರಿಂದ ಅಪೊಸ್ತಲ ಯೋಹಾನನ ಈ ಎಚ್ಚರಿಕೆಯನ್ನು ನೆನಪಿಡಿ: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ.”
5. ಹೆಚ್ಚಿನ ಹಣ, ವಸ್ತುಗಳನ್ನು ಕೂಡಿಸಲು ತಮ್ಮ ಶಕ್ತಿಸಾಮರ್ಥ್ಯವನ್ನು ಬಳಸುವವರಿಗೆ ಏನಾಗುವ ಸಾಧ್ಯತೆಯಿದೆ?
5 ನಮ್ಮ ಶಕ್ತಿಸಾಮರ್ಥ್ಯವನ್ನು ಯೆಹೋವನ ಸೇವೆಯಲ್ಲಿ ಬಳಸದೆ ಹೆಚ್ಚು ಹಣ ಸಂಪಾದಿಸಲು, ಹೆಚ್ಚು ವಸ್ತುಗಳನ್ನು ಕೂಡಿಸಲು ಬಳಸಬೇಕೆಂಬುದೇ ಸೈತಾನನ ಇಷ್ಟ. (ಮತ್ತಾ. 6:24) ಒಂದುವೇಳೆ ನಾವು ಹಾಗೆ ಮಾಡಿದರೆ ನಮ್ಮ ಜೀವನಕ್ಕೆ ಉದ್ದೇಶ, ಅರ್ಥ ಇರುವುದಿಲ್ಲ. ಕೊನೆಯಲ್ಲಿ ಒಂದೋ ನಿರಾಶೆಯಲ್ಲಿ ಮುಳುಗಿಹೋಗುತ್ತೇವೆ ಅಥವಾ ಮೈತುಂಬ ಸಾಲ ಮಾಡಿಕೊಳ್ಳುತ್ತೇವೆ. ಇನ್ನೂ ಕೆಟ್ಟದೆಂದರೆ ಯೆಹೋವನಲ್ಲಿ ಮತ್ತು ಆತನ ರಾಜ್ಯದಲ್ಲಿ ನಂಬಿಕೆ ಕಳಕೊಳ್ಳುತ್ತೇವೆ. (1 ತಿಮೊ. 6:9, 10; ಪ್ರಕ. 3:17) ಇದು ಬಿತ್ತುವವನ ಕಥೆಯಲ್ಲಿ ಯೇಸು ವರ್ಣಿಸಿದಂತೆ ಇದೆ. ರಾಜ್ಯ ಸಂದೇಶವೆಂಬ ಬೀಜವು ‘ಮುಳ್ಳುಗಿಡಗಳ ಮಧ್ಯದಲ್ಲಿ ಬಿತ್ತಲ್ಪಟ್ಟಾಗ ಉಳಿದೆಲ್ಲ ವಿಷಯಗಳಿಗಾಗಿರುವ ಆಶೆಗಳು ಒಳಗೆ ಸೇರಿ ವಾಕ್ಯವನ್ನು ಅದುಮಿಬಿಟ್ಟು, ಅದು ಫಲ ಕೊಡದಂತೆ ಮಾಡುತ್ತದೆ.’—ಮಾರ್ಕ 4:14, 18, 19.
6. ಬಾರೂಕನಿಂದ ನಾವು ಯಾವ ಪಾಠ ಕಲಿಯಬಹುದು?
6 ಪ್ರವಾದಿ ಯೆರೆಮೀಯನ ಕಾರ್ಯದರ್ಶಿ ಬಾರೂಕನ ಬಗ್ಗೆ ಸ್ವಲ್ಪ ಯೋಚಿಸಿ. ಅವನು “ಮಹಾಪದವಿಯನ್ನು” ಅಂದರೆ ಶಾಶ್ವತ ಪ್ರಯೋಜನವಿಲ್ಲದ ವಿಷಯಗಳನ್ನು ಆಶಿಸಿದನು. ಆಗ ಯೆಹೋವನು ಅವನಿಗೆ ಯೆರೂಸಲೇಮ್ ಬೇಗನೆ ನಾಶವಾಗಲಿದೆಯೆಂದು ನೆನಪುಹುಟ್ಟಿಸಿದನು. ಆದರೆ ಅವನ ಜೀವವನ್ನು ಮಾತ್ರ ಉಳಿಸುತ್ತೇನೆಂದು ಮಾತುಕೊಟ್ಟನು. (ಯೆರೆ. 45:1-5) ಬಾರೂಕನು ಇದಕ್ಕಿಂತ ಹೆಚ್ಚೇನನ್ನೂ ನಿರೀಕ್ಷಿಸಬಾರದಿತ್ತು. ಏಕೆಂದರೆ ಜನರ ವಸ್ತುಗಳನ್ನು, ಸೊತ್ತುಗಳನ್ನು ಯೆಹೋವನು ಖಂಡಿತ ಉಳಿಸುತ್ತಿರಲಿಲ್ಲ. (ಯೆರೆ. 20:5) ಇಂದು ಸೈತಾನನ ಲೋಕದ ಅಂತ್ಯ ತುಂಬ ಹತ್ತಿರವಿದೆ. ಹಾಗಾಗಿ ಹೆಚ್ಚೆಚ್ಚು ವಸ್ತುಗಳನ್ನು ಕೂಡಿಸುವ ಸಮಯ ಇದಲ್ಲ. ಈಗ ನಮಗಿರುವ ಸೊತ್ತುಗಳು, ವಸ್ತುಗಳು ನಮಗೆಷ್ಟೇ ಅಮೂಲ್ಯವಾಗಿದ್ದರೂ ಮಹಾ ಸಂಕಟದ ನಂತರ ನಮ್ಮದಾಗಿರುತ್ತವೆಂದು ನಿರೀಕ್ಷಿಸಬಾರದು.—ಜ್ಞಾನೋ. 11:4; ಮತ್ತಾ. 24:21, 22; ಲೂಕ 12:15.
7. ನಾವು ಮುಂದೆ ಏನನ್ನು ಚರ್ಚಿಸಲಿದ್ದೇವೆ? ಏಕೆ?
7 ಹಾಗಾದರೆ ನಮ್ಮ ಮತ್ತು ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸುತ್ತಾ, ಅದೇ ಸಮಯ ನಮ್ಮ ಜೀವನದ ಅತೀ ಪ್ರಾಮುಖ್ಯ ವಿಷಯದ ಮೇಲೆ ಗಮನವಿಡಲು ಹೇಗೆ ಸಾಧ್ಯ? ಪ್ರಾಪಂಚಿಕತೆಯಿಂದ ನಾವು ಹೇಗೆ ದೂರವಿರಬಹುದು? ನಮಗೆ ಅಗತ್ಯವಿರುವ ವಸ್ತುಗಳ ಬಗ್ಗೆ ವಿಪರೀತ ಚಿಂತೆಮಾಡುವುದನ್ನು ನಿಲ್ಲಿಸಲು ಯಾವುದು ಸಹಾಯಮಾಡುತ್ತದೆ? ಈ ಬಗ್ಗೆ ಯೇಸು ಪರ್ವತ ಪ್ರಸಂಗದಲ್ಲಿ ಅತ್ಯುತ್ತಮ ಬುದ್ಧಿವಾದ ಕೊಟ್ಟಿದ್ದಾನೆ. (ಮತ್ತಾ. 6:19-21) ಹಾಗಾಗಿ ನಾವೀಗ ಮತ್ತಾಯ 6:25-34 ನ್ನು ಓದಿ ಚರ್ಚಿಸೋಣ. ಇದು ನಾವು ರಾಜ್ಯಕ್ಕೆ ಮೊದಲ ಸ್ಥಾನ ಕೊಡಬೇಕು, ವಸ್ತುಗಳಿಗಲ್ಲ ಎನ್ನುವುದನ್ನು ಮನಗಾಣಿಸಲಿದೆ.—ಲೂಕ 12:31.
ನಮಗೆ ಅಗತ್ಯವಿರುವುದನ್ನು ಯೆಹೋವನು ಕೊಡುತ್ತಾನೆ
8, 9. (ಎ) ನಮಗೆ ಅಗತ್ಯವಿರುವ ವಸ್ತುಗಳ ಬಗ್ಗೆ ನಾವೇಕೆ ಅತಿಯಾಗಿ ಚಿಂತಿಸಬಾರದು? (ಬಿ) ಮನುಷ್ಯರ ಬಗ್ಗೆ, ಅವರ ಅಗತ್ಯಗಳ ಬಗ್ಗೆ ಯೇಸುವಿಗೆ ಏನು ತಿಳಿದಿತ್ತು?
8 ಮತ್ತಾಯ 6:25 ಓದಿ. ಏನು ಊಟಮಾಡೋದು, ಏನು ಕುಡಿಯೋದು, ಏನು ಧರಿಸಿಕೊಳ್ಳೋದು ಎಂಬದರ ಬಗ್ಗೆ ತನ್ನ ಶಿಷ್ಯರು ಚಿಂತೆಮಾಡುತ್ತಿದ್ದರೆಂದು ಯೇಸುವಿಗೆ ಗೊತ್ತಿತ್ತು. ಆದ್ದರಿಂದ ಆತನು ಪರ್ವತ ಪ್ರಸಂಗದಲ್ಲಿ “ನಿಮ್ಮ ಪ್ರಾಣಗಳ ಕುರಿತು . . . ಚಿಂತೆಮಾಡುವುದನ್ನು ನಿಲ್ಲಿಸಿರಿ” ಎಂದು ಹೇಳಿದನು. ಈ ಎಲ್ಲ ವಿಷಯಗಳ ಬಗ್ಗೆ ಏಕೆ ಚಿಂತಿಸಬಾರದೆಂದು ಶಿಷ್ಯರಿಗೆ ಅರ್ಥಮಾಡಿಸಲು ಬಯಸಿದನು. ಏಕೆಂದರೆ ಆತನಿಗೆ ಗೊತ್ತಿತ್ತು ಅವರು ಅತಿಯಾಗಿ ಚಿಂತೆ ಮಾಡಿದರೆ ಜೀವನದಲ್ಲಿ ಹೆಚ್ಚು ಪ್ರಾಮುಖ್ಯವಾಗಿರುವ ಆಧ್ಯಾತ್ಮಿಕ ವಿಷಯಗಳನ್ನು ಅಲಕ್ಷಿಸಿಬಿಡುವರು ಅಂತ. ನಿಜವಾಗಿ ಅಗತ್ಯವಿರುವ ವಿಷಯಗಳ ಬಗ್ಗೆ ಚಿಂತಿಸಿದರೂ ಹಾಗಾಗಲಿತ್ತು. ಯೇಸುವಿಗೆ ತನ್ನ ಶಿಷ್ಯರ ಬಗ್ಗೆ ತುಂಬ ಕಾಳಜಿಯಿದ್ದ ಕಾರಣ ಪರ್ವತ ಪ್ರಸಂಗದಲ್ಲಿ ಆತನು ಚಿಂತೆಮಾಡಬೇಡಿ ಎಂದು ಪುನಃ ನಾಲ್ಕು ಸಲ ಎಚ್ಚರಿಸಿದನು.—ಮತ್ತಾ. 6:27, 28, 31, 34.
9 ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಧರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಚಿಂತೆ ಮಾಡಬಾರದೆಂದು ಯೇಸು ಹೇಳಿದ್ದೇಕೆ? ಊಟ ಬಟ್ಟೆ ನಮಗೆ ಅಗತ್ಯ ತಾನೇ? ಖಂಡಿತ. ಅವುಗಳನ್ನು ಖರೀದಿಸಲು ನಮ್ಮ ಬಳಿ ದುಡ್ಡು ಇಲ್ಲವೆಂದರೆ ಚಿಂತೆಯಾಗುವುದು ಸಹಜ. ಇದು ಯೇಸುವಿಗೆ ತಿಳಿದಿತ್ತು. ಜನರಿಗೆ ಏನು ಅಗತ್ಯವೆಂದೂ ಆತನಿಗೆ ಗೊತ್ತಿತ್ತು. “ಕಡೇ ದಿವಸಗಳಲ್ಲಿ” ತನ್ನ ಶಿಷ್ಯರು ತುಂಬ ಕಷ್ಟದ ಸಮಯದಲ್ಲಿ ಜೀವಿಸಲಿದ್ದಾರೆಂದು ಆತನಿಗೆ ತಿಳಿದಿತ್ತು. (2 ತಿಮೊ. 3:1) ಇಂದು ಎಷ್ಟೋ ಜನರಿಗೆ ಕೆಲಸ ಸಿಕ್ಕುವುದಿಲ್ಲ, ಬೆಲೆ ಗಗನಕ್ಕೇರುತ್ತಿದೆ. ಅನೇಕ ಸ್ಥಳಗಳಲ್ಲಿ ಜನರು ಕಡುಬಡತನದಲ್ಲಿ ಇದ್ದಾರೆ. ಒಂದು ಹೊತ್ತು ಊಟ ಸಿಕ್ಕಿದರೆ ಸಿಕ್ಕಿತು, ಇಲ್ಲಾಂದ್ರೆ ಅದೂ ಇಲ್ಲ. ಆದರೆ ಆಹಾರಕ್ಕಿಂತ ನಮ್ಮ ಪ್ರಾಣವು ಮತ್ತು ಉಡುಪಿಗಿಂತ ನಮ್ಮ ದೇಹವು ತುಂಬ ಮುಖ್ಯವೆಂದು ಸಹ ಯೇಸುವಿಗೆ ತಿಳಿದಿತ್ತು.
10. ಯೇಸು ಶಿಷ್ಯರಿಗೆ ಕಲಿಸಿದ ಪ್ರಾರ್ಥನೆಯಲ್ಲಿ ಅವರ ಜೀವನದಲ್ಲಿ ಯಾವುದು ತುಂಬ ಮುಖ್ಯವಾಗಿರಬೇಕೆಂದು ಹೇಳಿದನು?
10 ಇದಕ್ಕೆ ಮುಂಚೆ ಯೇಸು ಶಿಷ್ಯರಿಗೆ “ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು” ಎಂದು ಪ್ರಾರ್ಥಿಸಲು ಕಲಿಸಿದ್ದನು. (ಮತ್ತಾ. 6:11) ಇನ್ನೊಂದು ಸಂದರ್ಭದಲ್ಲಿ ಆತನು “ನಮ್ಮ ಅನುದಿನದ ಆಹಾರವನ್ನು ಪ್ರತಿದಿನದ ಆವಶ್ಯಕತೆಗನುಸಾರ ದಯಪಾಲಿಸು” ಎಂದು ಪ್ರಾರ್ಥಿಸಲು ಹೇಳಿದನು. (ಲೂಕ 11:3) ಇದರರ್ಥ ನಮಗೆ ಅಗತ್ಯವಿರುವುದನ್ನು ಪಡೆಯುವುದರ ಬಗ್ಗೆಯೇ ದಿನವಿಡೀ ಯೋಚಿಸುತ್ತಾ ಇರಬೇಕೆಂದಲ್ಲ. ನಿಜ ಹೇಳಬೇಕೆಂದರೆ ತಮ್ಮ ಸ್ವಂತ ಅಗತ್ಯಗಳ ಕುರಿತು ಪ್ರಾರ್ಥಿಸುವುದಕ್ಕಿಂತ ದೇವರ ರಾಜ್ಯ ಬರುವಂತೆ ಪ್ರಾರ್ಥಿಸುವುದು ಹೆಚ್ಚು ಮುಖ್ಯವೆಂದು ಯೇಸು ಶಿಷ್ಯರಿಗೆ ಹೇಳಿದನು. (ಮತ್ತಾ. 6:10; ಲೂಕ 11:2) ಯೆಹೋವನು ತನ್ನೆಲ್ಲ ಸೃಷ್ಟಿಯನ್ನು ಹೇಗೆ ನೋಡಿಕೊಳ್ಳುತ್ತಾನೆಂದು ಶಿಷ್ಯರಿಗೆ ನೆನಪಿಸುವ ಮೂಲಕ ಯೇಸು ಅವರನ್ನು ಸಂತೈಸಿ ಚಿಂತೆ ಮಾಡುವುದನ್ನು ಬಿಟ್ಟುಬಿಡಲು ಸಹಾಯಮಾಡಿದನು.
11, 12. ಆಕಾಶದ ಪಕ್ಷಿಗಳನ್ನು ಯೆಹೋವನು ನೋಡಿಕೊಳ್ಳುವ ವಿಧದಿಂದ ನಾವೇನು ಕಲಿಯುತ್ತೇವೆ? (ಲೇಖನದ ಆರಂಭದ ಚಿತ್ರ ನೋಡಿ.)
11 ಮತ್ತಾಯ 6:26 ಓದಿ. ನಾವು ‘ಆಕಾಶದ ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎಂದು ಯೇಸು ಹೇಳಿದನು. ಪಕ್ಷಿಗಳು ಪುಟ್ಟ ಜೀವಿಗಳಾಗಿದ್ದರೂ ತಿನ್ನಲು ತುಂಬ ಬೇಕು. ಪಕ್ಷಿಗಳು ಏನಾದರೂ ಮನುಷ್ಯನಷ್ಟು ದೊಡ್ಡದಿರುತ್ತಿದ್ದರೆ ಮನುಷ್ಯನಿಗಿಂತ ಹೆಚ್ಚು ಆಹಾರ ತಿನ್ನುತ್ತಿದ್ದವು. ಅವು ಹಣ್ಣುಹಂಪಲು, ಬೀಜ, ಕ್ರಿಮಿಕೀಟ, ಹುಳಗಳನ್ನು ತಿನ್ನುತ್ತವೆ. ಅವು ಬೀಜ ಬಿತ್ತುವುದಿಲ್ಲ, ಬೆಳೆ ಬೆಳೆಸುವುದೂ ಇಲ್ಲ. ಅವುಗಳಿಗೆ ಅಗತ್ಯವಿರುವುದನ್ನು ಯೆಹೋವನೇ ಒದಗಿಸಿಕೊಡುತ್ತಾನೆ. (ಕೀರ್ತ. 147:9) ಆದರೆ ಆತನು ಆಹಾರ ತಂದು ಪಕ್ಷಿಗಳ ಬಾಯೊಳಗೆ ಹಾಕುವುದಿಲ್ಲ. ಅವುಗಳೇ ಹೋಗಿ ಹುಡುಕಬೇಕು. ಅವುಗಳಿಗೆ ಬೇಕಾದಷ್ಟು ಆಹಾರ ಧಾರಾಳವಾಗಿ ಸಿಗುತ್ತದೆ.
12 ಪಕ್ಷಿಗಳನ್ನೇ ಯೆಹೋವನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನಾದರೆ ಮನುಷ್ಯರನ್ನು ನೋಡಿಕೊಳ್ಳದೆ ಇರುತ್ತಾನಾ? ಈ ಬಗ್ಗೆ ಯೇಸುವಿಗೆ ಯಾವ ಸಂಶಯವೂ ಇರಲಿಲ್ಲ.[1] (1 ಪೇತ್ರ 5:6, 7) ಪಕ್ಷಿಗಳು ಸೋಮಾರಿಗಳಲ್ಲ, ಹಾಗೇ ನಾವೂ ಸೋಮಾರಿಯಾಗಿರಬಾರದು. ಒಂದೇ ನಾವು ಆಹಾರ ಬೆಳೆಸಲು ಕೆಲಸಮಾಡಬೇಕು ಇಲ್ಲವೆ ಅದನ್ನು ಕೊಂಡುಕೊಳ್ಳಲು ಹಣ ಸಂಪಾದಿಸಬೇಕು. ಈ ಪ್ರಯತ್ನವನ್ನು ಯೆಹೋವನು ಆಶೀರ್ವದಿಸುತ್ತಾನೆ. ನಮ್ಮ ಹತ್ತಿರ ಸಾಕಷ್ಟು ಹಣ, ಆಹಾರ ಇಲ್ಲದಿದ್ದಾಗಲೂ ಆತನು ನಮಗೆ ಅಗತ್ಯವಿರುವುದನ್ನು ಒದಗಿಸುತ್ತಾನೆ. ಉದಾಹರಣೆಗೆ ಇತರರು ತಮ್ಮ ಬಳಿ ಇರುವುದನ್ನು ನಮ್ಮೊಂದಿಗೆ ಹಂಚಿಕೊಳ್ಳುವಂತೆ ಆತನು ಪ್ರೇರಿಸಬಹುದು. ಪಕ್ಷಿಗಳ ವಾಸಕ್ಕಾಗಿ ಬೇಕಾದ ಸ್ಥಳವನ್ನು ಸಹ ಯೆಹೋವನು ಒದಗಿಸುತ್ತಾನೆ. ಗೂಡುಗಳನ್ನು ಕಟ್ಟುವ ಸಾಮರ್ಥ್ಯ ಕೊಟ್ಟಿದ್ದಾನೆ. ಅದನ್ನು ಕಟ್ಟಲು ಬೇಕಾದ ವಸ್ತುಗಳನ್ನು ಸೃಷ್ಟಿಮಾಡಿದವನೂ ಆತನೇ. ಅದೇ ರೀತಿ ನಮ್ಮ ಕುಟುಂಬದ ವಾಸಕ್ಕಾಗಿ ಸೂಕ್ತ ಜಾಗ ಸಿಗುವಂತೆ ಆತನು ಸಹಾಯ ಮಾಡಶಕ್ತನು.
13. ನಾವು ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬೆಲೆಬಾಳುವವರು ಎಂದು ಹೇಗೆ ಗೊತ್ತಾಗುತ್ತದೆ?
13 ಯೆಹೋವನು ಪಕ್ಷಿಗಳಿಗೆ ಆಹಾರ ಕೊಡುತ್ತಾನೆಂದು ಯೇಸು ಶಿಷ್ಯರಿಗೆ ನೆನಪಿಸಿದ ಬಳಿಕ, “ನೀವು ಅವುಗಳಿಗಿಂತ ಹೆಚ್ಚು ಬೆಲೆಬಾಳುವವರಲ್ಲವೆ?” ಎಂದು ಹೇಳಿದನು. (ಲೂಕ 12:6, 7 ಹೋಲಿಸಿ.) ಇದನ್ನು ಹೇಳಿದಾಗ ಆತನ ಮನಸ್ಸಲ್ಲಿ ತಾನು ಅತಿ ಬೇಗನೆ ಎಲ್ಲ ಮಾನವರಿಗೋಸ್ಕರ ತನ್ನ ಜೀವವನ್ನು ಕೊಡುವ ವಿಷಯ ಇದ್ದಿರಬಹುದು. ಸ್ವಲ್ಪ ಯೋಚಿಸಿ, ಯೇಸು ಪಕ್ಷಿಗಳಿಗಾಗಿ ಅಥವಾ ಬೇರೆ ಯಾವ ಪ್ರಾಣಿಗಾಗಿ ಸಾಯಲಿಲ್ಲ. ನಮಗೋಸ್ಕರ ಸತ್ತನು, ನಾವು ಶಾಶ್ವತವಾಗಿ ಜೀವಿಸಬೇಕೆಂದು ಸತ್ತನು.—ಮತ್ತಾ. 20:28.
14. ಚಿಂತೆಮಾಡುವ ವ್ಯಕ್ತಿಗೆ ಏನು ಮಾಡಲು ಆಗುವುದಿಲ್ಲ?
14 ಮತ್ತಾಯ 6:27 ಓದಿ. ಚಿಂತೆಮಾಡುವ ಮೂಲಕ ನಮ್ಮಲ್ಲಿ ಯಾರೂ ನಮ್ಮ ಆಯಸ್ಸನ್ನು ಹೆಚ್ಚಿಸಲು ಆಗುವುದಿಲ್ಲ ಎಂದು ಯೇಸು ಹೇಳಿದನು. ನಮ್ಮ ಅಗತ್ಯಗಳ ಕುರಿತು ನಾವು ಮೂರು ಹೊತ್ತೂ ಚಿಂತೆ ಮಾಡುತ್ತಾ ಕುಳಿತರೆ ನಮ್ಮ ಆಯಸ್ಸು ಕಡಿಮೆ ಆಗುತ್ತದೆ. ಏಕೆಂದರೆ ಒತ್ತಡ ಹೆಚ್ಚಾದಾಗ ಬೇರೆಬೇರೆ ಕಾಯಿಲೆಗಳು, ಕೆಲವೊಮ್ಮೆ ಸಾವೂ ಬರುತ್ತದೆ.
15, 16. (ಎ) ಯೆಹೋವನು ಹೊಲದ ಲಿಲಿಹೂವುಗಳನ್ನು ನೋಡಿಕೊಳ್ಳುವ ವಿಧದಿಂದ ನಾವೇನು ಕಲಿಯುತ್ತೇವೆ? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? ಏಕೆ?
15 ಮತ್ತಾಯ 6:28-30 ಓದಿ. ಸೇವೆಗೆ, ಕೂಟಗಳಿಗೆ, ಸಮ್ಮೇಳನಗಳಿಗೆ ಹೋಗುವಾಗ ಹಾಕಿಕೊಳ್ಳಲು ಒಳ್ಳೇ ಬಟ್ಟೆ ಇದ್ದರೆ ನಮಗೆಲ್ಲರಿಗೆ ಖುಷಿ. ಆದರೆ ನಾವು “ಉಡುಪಿನ ವಿಷಯದಲ್ಲಿ ಚಿಂತೆ” ಮಾಡಬೇಕಾ? ಯೆಹೋವನು ತನ್ನ ಸೃಷ್ಟಿಯನ್ನು ಹೇಗೆ ನೋಡಿಕೊಳ್ಳುತ್ತಾನೆಂದು ಯೇಸು ಶಿಷ್ಯರಿಗೆ ಪುನಃ ನೆನಪಿಸಲು ‘ಹೊಲದ ಲಿಲಿಹೂವುಗಳ’ ಕುರಿತು ತಿಳಿಸಿದನು. ಲಿಲಿಹೂವುಗಳು ಎಂದು ಯೇಸು ಹೇಳಿದಾಗ ಅದರಂತಿರುವ ಗ್ಲ್ಯಾಡಿಓಲಸ್, ಹಯಸಿಂತ್, ಐರಿಸ್, ಟ್ಯೂಲಿಪ್ಸ್ ಹೂವುಗಳಿಗೆ ಸೂಚಿಸಿರಬಹುದು. ಇವುಗಳಲ್ಲಿ ಯಾವ ಹೂವುಗಳೂ ತಮಗಾಗಿ ಬಟ್ಟೆ ಹೊಲಿಯಬೇಕಿಲ್ಲ. ಆದರೂ ಅವು ಎಷ್ಟು ಸುಂದರವೆಂದರೆ “ಅವುಗಳಲ್ಲಿ ಒಂದಕ್ಕಿರುವ ಅಲಂಕಾರವು ಸೊಲೊಮೋನನಿಗೆ ಅವನು ತನ್ನ ಸಕಲ ವೈಭವದಲ್ಲಿದ್ದಾಗಲೂ ಇರಲಿಲ್ಲವೆಂದು” ಯೇಸು ಹೇಳಿದನು.
16 ಯೇಸು ಮುಂದೆ ಹೇಳಿದ ಮಾತುಗಳ ಬಗ್ಗೆ ಯೋಚಿಸಿ: “ಎಲೈ ಅಲ್ಪವಿಶ್ವಾಸಿಗಳೇ, . . . ಹೊಲದ ಸಸ್ಯಗಳಿಗೆ ದೇವರು ಈ ರೀತಿಯಲ್ಲಿ ಉಡಿಸುತ್ತಾನಾದರೆ ನಿಮಗೆ ಇನ್ನೂ ಹೆಚ್ಚು ಉಡಿಸಿತೊಡಿಸುವನಲ್ಲವೆ?” ಖಂಡಿತ! ಆದರೆ ಯೇಸುವಿನ ಶಿಷ್ಯರಿಗೆ ಹೆಚ್ಚು ನಂಬಿಕೆಯ ಅಗತ್ಯವಿತ್ತು. (ಮತ್ತಾ. 8:26; 14:31; 16:8; 17:20) ಅವರನ್ನು ನೋಡಿಕೊಳ್ಳಲು ಯೆಹೋವನಿಗೆ ಮನಸ್ಸಿದೆ, ಸಾಮರ್ಥ್ಯವೂ ಇದೆ ಎಂದು ಅವರು ಭರವಸೆಯಿಡಬೇಕಾಗಿತ್ತು. ನಮ್ಮ ಕುರಿತೇನು? ಯೆಹೋವನು ನಮ್ಮನ್ನು ನೋಡಿಕೊಳ್ಳುವನೆಂದು ನಾವು ನಂಬುತ್ತೇವಾ?
17. ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಯಾವುದು ಹಾಳುಮಾಡುತ್ತದೆ?
17 ಮತ್ತಾಯ 6:31, 32 ಓದಿ. ಯೆಹೋವನ ಬಗ್ಗೆ ಗೊತ್ತಿಲ್ಲದ ಹೆಚ್ಚಿನ ಜನರ ಗಮನವೆಲ್ಲ ತುಂಬ ಹಣ ಮಾಡುವ ಮತ್ತು ವಸ್ತುಗಳನ್ನು ಕೂಡಿಸುವ ಮೇಲೆಯೇ ಇರುತ್ತದೆ. ನಾವೂ ಇದನ್ನೇ ಮಾಡಿದರೆ ಯೆಹೋವನೊಂದಿಗಿನ ನಮ್ಮ ಸಂಬಂಧ ಹಾಳಾಗುತ್ತದೆ. ನಮ್ಮ ತಂದೆಯಾದ ಆತನು ನಮ್ಮನ್ನು ಪ್ರೀತಿಸುತ್ತಾನೆಂದು ನಮಗೆ ಗೊತ್ತಿದೆ. ಆತನು ಹೇಳಿದಂತೆ ನಾವು ರಾಜ್ಯಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟರೆ ನಮಗೆ ಅಗತ್ಯವಾದದ್ದೆಲ್ಲವನ್ನು ಮತ್ತು ಅದಕ್ಕಿಂತ ಹೆಚ್ಚನ್ನು ಕೊಡುವನು ಎಂಬ ಭರವಸೆ ಇದೆ. ನಮಗೆ ನಿಜ ಸಂತೋಷ ಸಿಗುವುದು ಆತನೊಂದಿಗಿನ ಒಳ್ಳೇ ಸಂಬಂಧದಿಂದ ಮಾತ್ರ ಎನ್ನುವುದನ್ನು ಮನಗಂಡಿದ್ದೇವೆ. ಇದು ನಮಗೆ ‘ಅನ್ನವಸ್ತ್ರಗಳಲ್ಲೇ’ ತೃಪ್ತರಾಗಿರಲು ಸಹಾಯ ಮಾಡುತ್ತದೆ.—1 ತಿಮೊ. 6:6-8.
ಜೀವನದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಕೊಟ್ಟಿದ್ದೀರಾ?
18. (ಎ) ವೈಯಕ್ತಿಕವಾಗಿ ನಮ್ಮ ಬಗ್ಗೆ ಯೆಹೋವನಿಗೆ ಏನು ತಿಳಿದಿದೆ? (ಬಿ) ನಮಗಾಗಿ ಆತನು ಏನು ಮಾಡುವನು?
18 ಮತ್ತಾಯ 6:33 ಓದಿ. ದೇವರ ರಾಜ್ಯಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟರೆ ಯೆಹೋವನು ನಮಗೆ ಅಗತ್ಯವಿರುವುದನ್ನೆಲ್ಲ ಕೊಡುವನು. ನಾವೇಕೆ ಅಷ್ಟು ಭರವಸೆಯಿಂದ ಇರಬಹುದೆಂದು ಯೇಸು ವಿವರಿಸುತ್ತಾ “ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ” ಎಂದು ಹೇಳಿದನು. ನಿಮಗೇನು ಬೇಕಿದೆ ಅಂದರೆ ಅಗತ್ಯವಿದೆ ಎಂದು ನಿಮಗೆ ತಿಳಿಯುವ ಮುಂಚೆಯೇ ಯೆಹೋವನಿಗೆ ಅದು ತಿಳಿದಿದೆ. (ಫಿಲಿ. 4:19) ನಿಮಗೆ ಧರಿಸಲು ಯಾವ ಬಟ್ಟೆ ಅಗತ್ಯವಿದೆ ಎಂದೂ ಆತನಿಗೆ ಗೊತ್ತು. ಊಟಕ್ಕೆ ನಿಮಗೇನು ಅವಶ್ಯ ಅನ್ನೋದು ಸಹ ಆತನಿಗೆ ಗೊತ್ತಿದೆ. ನಿಮಗೆ, ನಿಮ್ಮ ಕುಟುಂಬಕ್ಕೆ ವಾಸಿಸಲು ಮನೆ ಬೇಕೆಂದೂ ಆತನಿಗೆ ಗೊತ್ತು. ನಿಮಗೆ ನಿಜವಾಗಿಯೂ ಅಗತ್ಯವಿರುವುದು ಸಿಗುವಂತೆ ಆತನು ಖಂಡಿತ ನೋಡಿಕೊಳ್ಳುವನು.
19. ನಾಳೆ ಏನಾಗುತ್ತದೆಂದು ನಾವೇಕೆ ಚಿಂತಿಸಬಾರದು?
19 ಮತ್ತಾಯ 6:34 ಓದಿ. ಈ ವಚನದಲ್ಲಿ ಪುನಃ ಯೇಸು “ಚಿಂತೆಮಾಡಬೇಡಿ” ಎಂದು ಶಿಷ್ಯರಿಗೆ ಹೇಳಿದನು. ಪ್ರತಿ ದಿನ ನಮಗೆ ಅಗತ್ಯವಿರುವುದನ್ನು ಯೆಹೋವನು ಕೊಟ್ಟೇ ಕೊಡುತ್ತಾನೆ. ಹಾಗಾಗಿ ನಾವು ಯೆಹೋವನಲ್ಲೇ ಪೂರ್ಣ ಭರವಸೆಯಿಡಬೇಕು. ನಾಳೆ ಏನಾಗುತ್ತದೆ, ಮುಂದೆ ಏನು ಮಾಡೋದು ಎಂದು ನಾವು ಅತಿಯಾಗಿ ಚಿಂತಿಸಬೇಕಿಲ್ಲ. ಒಂದುವೇಳೆ ಅತಿಯಾಗಿ ಚಿಂತಿಸಿದರೆ ನಾವು ನಮ್ಮ ಮೇಲೆಯೇ ಆತುಕೊಳ್ಳಲು ಆರಂಭಿಸಬಹುದು. ಇದು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುತ್ತದೆ.—ಜ್ಞಾನೋ. 3:5, 6; ಫಿಲಿ. 4:6, 7.
ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ, ಯೆಹೋವನು ನಿಮ್ಮನ್ನು ನೋಡಿಕೊಳ್ಳುತ್ತಾನೆ
20. (ಎ) ಯೆಹೋವನ ಸೇವೆಯಲ್ಲಿ ನೀವು ಯಾವ ಗುರಿ ಇಡಬಹುದು? (ಬಿ) ನಿಮ್ಮ ಜೀವನವನ್ನು ಸರಳಗೊಳಿಸಲು ನೀವೇನು ಮಾಡಬೇಕು?
20 ಪ್ರಪಂಚದ ವಸ್ತುಗಳನ್ನು ಪಡೆಯಲು ನಮ್ಮ ಶಕ್ತಿಯನ್ನೆಲ್ಲಾ ಸುರಿದು ಯೆಹೋವನ ಸೇವೆಯನ್ನು ಪೂರ್ಣವಾಗಿ ಮಾಡಲು ಬಲಶಕ್ತಿಯಿಲ್ಲದೆ ಹೋದರೆ ಅದು ನಿಜಕ್ಕೂ ದುಃಖದ ವಿಷಯ! ನಮ್ಮ ಶಕ್ತಿಸಾಮರ್ಥ್ಯವನ್ನು ನಾವು ಯೆಹೋವನಿಗೆ ಕೊಡಬೇಕು. ಉದಾಹರಣೆಗೆ ಹೆಚ್ಚು ಪ್ರಚಾರಕರ ಅಗತ್ಯವಿರುವ ಸಭೆಗೆ ನೀವು ಸ್ಥಳಾಂತರಿಸಬಹುದಾ? ಪಯನೀಯರ್ ಸೇವೆ ಮಾಡಬಹುದಾ? ಈಗಾಗಲೇ ನೀವು ಪಯನೀಯರ್ ಸೇವೆ ಮಾಡುತ್ತಿರುವಲ್ಲಿ ‘ರಾಜ್ಯ ಪ್ರಚಾರಕರ ಶಾಲೆ’ಗೆ ಹಾಜರಾಗಲು ಅರ್ಜಿ ಹಾಕಬಹುದಾ? ವಾರದಲ್ಲಿ ಕೆಲವು ದಿನ ಬೆತೆಲ್ ಅಥವಾ ಭಾಷಾಂತರ ಕಛೇರಿಗೆ ಹೋಗಿ ಸಹಾಯ ಮಾಡಬಹುದಾ? ಕಟ್ಟಡ ವಿನ್ಯಾಸ/ನಿರ್ಮಾಣದ ಸ್ಥಳೀಯ ಸ್ವಯಂಸೇವಕರಾಗಿ ಕೆಲಸಮಾಡಬಹುದಾ? ರಾಜ್ಯ ಸಭಾಗೃಹಗಳನ್ನು ಕಟ್ಟುವುದರಲ್ಲಿ ಸಹಾಯ ಮಾಡಬಹುದಾ? ನಿಮ್ಮ ಹೆಚ್ಚಿನ ಸಮಯ, ಶಕ್ತಿಯನ್ನು ಯೆಹೋವನ ಸೇವೆಗೆ ಕೊಡಲು ನಿಮ್ಮ ಜೀವನವನ್ನು ಹೇಗೆ ಸರಳಗೊಳಿಸಬಹುದೆಂದು ಯೋಚಿಸಿ. “ನಿಮ್ಮ ಜೀವನವನ್ನು ಸರಳಮಾಡುವ ವಿಧ” ಎಂಬ ಚೌಕದಲ್ಲಿ ಕೆಲವು ಸಲಹೆಗಳಿವೆ. ನೀವೇನು ಮಾಡಬೇಕೆಂದು ನಿರ್ಣಯ ಮಾಡಲು ಸಹಾಯ ಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿ. ಬಳಿಕ ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಆರಂಭಿಸಿ.
21. ಯೆಹೋವನಿಗೆ ಇನ್ನೂ ಹತ್ತಿರವಾಗಲು ಯಾವುದು ನಿಮಗೆ ಸಹಾಯ ಮಾಡುವುದು?
21 ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡುವಂತೆ ಯೇಸು ನಮಗೆ ಕಲಿಸಿದನು. ನಾವು ಹಾಗೆ ಮಾಡುತ್ತಿರುವಲ್ಲಿ ಅಗತ್ಯವಿರುವ ವಿಷಯಗಳ ಬಗ್ಗೆ ಅತಿಯಾಗಿ ಚಿಂತಿಸುತ್ತಿರುವುದಿಲ್ಲ. ಯೆಹೋವನು ನಮ್ಮನ್ನು ನೋಡಿಕೊಳ್ಳುತ್ತಾನೆಂದು ಭರವಸೆಯಿಡುವಾಗ ನಾವು ಆತನಿಗೆ ಹೆಚ್ಚು ಹತ್ತಿರವಾಗುತ್ತೇವೆ. ನಾವು ಆಸೆಪಡುವುದೆಲ್ಲವನ್ನು ಅಥವಾ ಲೋಕ ಕೊಡುವುದೆಲ್ಲವನ್ನು ಕೊಂಡುಕೊಳ್ಳಲು ಹೋಗದೆ ನಮ್ಮನ್ನೇ ಅಂಕೆಯಲ್ಲಿಡಲು ಕಲಿಯುತ್ತೇವೆ. ನಮ್ಮ ಹತ್ತಿರ ಹಣವಿದ್ದರೂ ಕೊಂಡುಕೊಳ್ಳುವುದಿಲ್ಲ. ನಮ್ಮ ಜೀವನವನ್ನು ಈಗ ಸರಳಗೊಳಿಸಿದರೆ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ಮತ್ತು ಆತನು ವಾಗ್ದಾನ ಮಾಡಿರುವ ‘ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿಯಲು’ ಸಹಾಯವಾಗುವುದು.—1 ತಿಮೊ. 6:19.
^ [1] (ಪ್ಯಾರ 12) ಯೆಹೋವನ ಸೇವಕರಲ್ಲಿ ಕೆಲವರಿಗೆ ಕೆಲವೊಮ್ಮೆ ತಿನ್ನಲು ಸಾಕಷ್ಟು ಆಹಾರ ಇರುವುದಿಲ್ಲ. ಯೆಹೋವನು ಏಕೆ ಇದನ್ನು ಅನುಮತಿಸಬಹುದೆಂದು ತಿಳಿಯಲು 2014, ಸೆಪ್ಟೆಂಬರ್ 15ರ ಕಾವಲಿನಬುರುಜು ಪುಟ 22ರಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿ.