ನಾವೇಕೆ “ಸದಾ ಎಚ್ಚರವಾಗಿ” ಇರಬೇಕು?
“ನಿಮ್ಮ ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲ.”—ಮತ್ತಾ. 24:42.
1. ಸಮಯ ಎಷ್ಟಾಗಿದೆ ಮತ್ತು ಸುತ್ತಮುತ್ತ ಏನು ನಡೆಯುತ್ತಿದೆ ಎಂಬದರ ಅರಿವು ನಮಗಿರಬೇಕು ಏಕೆ? ದೃಷ್ಟಾಂತ ಕೊಡಿ. (ಲೇಖನದ ಆರಂಭದ ಚಿತ್ರ ನೋಡಿ.)
ಅಧಿವೇಶನ ಇನ್ನೇನು ಆರಂಭವಾಗಲಿದೆ. ಅಧ್ಯಕ್ಷನು ವೇದಿಕೆಗೆ ಬಂದು ಎಲ್ಲರಿಗೂ ಸ್ವಾಗತ ಕೋರಿ, ಸಂಗೀತ ಶುರುವಾಗಲಿದೆಯೆಂದು ಹೇಳುತ್ತಾನೆ. ತಮ್ಮತಮ್ಮ ಆಸನಗಳಲ್ಲಿ ಕೂರುವ ಸಮಯ ಇದೆಂದು ಸಭಿಕರಿಗೆ ಗೊತ್ತಾಗುತ್ತದೆ. ಸುಮಧುರ ಸಂಗೀತ ಆಲಿಸುವ, ಮುಂದಿನ ಕಾರ್ಯಕ್ರಮಕ್ಕಾಗಿ ಹೃದಮನವನ್ನು ಸಿದ್ಧಪಡಿಸುವ ಸಮಯ ಇದು. ಆದರೆ ಕೆಲವರು ಅಧ್ಯಕ್ಷನಿಗೆ ಗಮನಕೊಟ್ಟಿಲ್ಲ, ಸಂಗೀತ ಶುರುವಾದದ್ದನ್ನು ಗಮನಿಸಿಲ್ಲವೆಂದು ಕಾಣುತ್ತದೆ. ಹಾಗಾಗಿ ಅಧಿವೇಶನ ಆರಂಭವಾಗಲಿದೆಯೆಂದು ಅವರಿಗೆ ಗೊತ್ತಾಗಿಲ್ಲ. ಇನ್ನೂ ಅಲ್ಲಿಲ್ಲಿ ಓಡಾಡುತ್ತಾ ಮಿತ್ರರೊಂದಿಗೆ ಮಾತಾಡುತ್ತಿದ್ದಾರೆ. ಈ ಸನ್ನಿವೇಶವು, ಸಮಯ ಎಷ್ಟಾಗಿದೆ, ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಅರಿವು ಇಲ್ಲದಿದ್ದರೆ ಏನಾಗುತ್ತದೆಂದು ತೋರಿಸುತ್ತದೆ. ಇದು ನಮಗೆ, ಬಲು ಬೇಗನೆ ಸಂಭವಿಸಲಿರುವ ಒಂದು ಅತಿ ಪ್ರಾಮುಖ್ಯ ಘಟನೆಯ ಬಗ್ಗೆ ಅರಿವು ಇರಬೇಕು ಮತ್ತು ನಾವದಕ್ಕೆ ಸಿದ್ಧರಿರಬೇಕು ಎಂಬ ಮುಖ್ಯ ಪಾಠವನ್ನು ಕಲಿಸುತ್ತದೆ. ಆ ಘಟನೆ ಯಾವುದು?
2. “ಸದಾ ಎಚ್ಚರವಾಗಿರಿ” ಎಂದು ಯೇಸು ಶಿಷ್ಯರಿಗೆ ಹೇಳಿದ್ದೇಕೆ?
2 ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ ಸಮಯದಲ್ಲಿ ಎಚ್ಚರವಾಗಿರುವ ಮತ್ತು ಸಿದ್ಧರಾಗಿರುವ ಅಗತ್ಯದ ಬಗ್ಗೆ ಎಚ್ಚರಿಸಿದನು. ಆತನು ಅವರಿಗೆ ಹೇಳಿದ್ದು, “ಆ ನೇಮಿತ ಸಮಯವು ಯಾವಾಗ ಎಂಬುದು ನಿಮಗೆ ತಿಳಿಯದ ಕಾರಣ ಅದಕ್ಕಾಗಿ ನೋಡುತ್ತಾ ಇರಿ, ಎಚ್ಚರವಾಗಿ ಇರಿ.” ನಂತರ ಆತನು ಅನೇಕ ಬಾರಿ ಅವರಿಗೆ, “ಸದಾ ಎಚ್ಚರವಾಗಿರಿ” ಎಂದು ಹೇಳಿದನು. (ಮತ್ತಾ. 24:3; ಮಾರ್ಕ 13:32-37 ಓದಿ.) ಈ ಬಗ್ಗೆ ಯೇಸು ತನ್ನ ಶಿಷ್ಯರಿಗೆ ಎಚ್ಚರಿಸಿದನೆಂದು ಮತ್ತಾಯನ ವೃತ್ತಾಂತ ಸಹ ತೋರಿಸುತ್ತದೆ. ಯೇಸು ಹೇಳಿದ್ದು: “ನಿಮ್ಮ ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ.” ಆತನು ಪುನಃ ಎಚ್ಚರಿಸಿದ್ದು: “ನೀವು ಸಹ ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” ಆತನು ಮತ್ತೂ ಹೇಳಿದ್ದು: “ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.”—ಮತ್ತಾ. 24:42-44; 25:13.
3. ಯೇಸುವಿನ ಎಚ್ಚರಿಕೆಗೆ ನಾವೇಕೆ ಗಮನ ಕೊಡುತ್ತೇವೆ?
3 ಯೆಹೋವನ ಸಾಕ್ಷಿಗಳಾದ ನಾವು ಯೇಸು ಕೊಟ್ಟ ಎಚ್ಚರಿಕೆಗೆ ಗಮನ ಕೊಡುತ್ತೇವೆ. ಏಕೆಂದರೆ ನಾವು ‘ಅಂತ್ಯಕಾಲದ’ ಕೊನೆ ಭಾಗದಲ್ಲಿ ಜೀವಿಸುತ್ತಿದ್ದೇವೆ ಮತ್ತು ‘ಮಹಾ ಸಂಕಟ’ ಆರಂಭವಾಗಲು ಹೆಚ್ಚು ಸಮಯ ಉಳಿದಿಲ್ಲವೆಂದು ನಮಗೆ ತಿಳಿದಿದೆ. (ದಾನಿ. 12:4; ಮತ್ತಾ. 24:21) ಯೇಸು ಮುಂತಿಳಿಸಿದಂತೆಯೇ ಯೆಹೋವನ ಜನರು ಭೂಮಿಯಲ್ಲೆಲ್ಲ ದೇವರ ರಾಜ್ಯದ ಸುವಾರ್ತೆ ಸಾರುತ್ತಿದ್ದಾರೆ. ಅದೇ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಯುದ್ಧಗಳು, ಕಾಯಿಲೆಗಳು, ಭೂಕಂಪಗಳು, ಆಹಾರದ ಅಭಾವವೂ ಇದೆ. ಹಿಂದೆಂದೂ ಇರದಷ್ಟು ಧಾರ್ಮಿಕ ಗಲಿಬಿಲಿ, ದುಷ್ಕೃತ್ಯ, ಹಿಂಸಾಚಾರ ಇದೆ. (ಮತ್ತಾ. 24:7, 11, 12, 14; ಲೂಕ 21:11) ಯೇಸು ತನ್ನ ತಂದೆಯ ಉದ್ದೇಶವನ್ನು ಪೂರೈಸಲು ಬರುವ ಸಮಯಕ್ಕಾಗಿ ನಾವೀಗ ಕಾತುರದಿಂದ ಕಾಯುತ್ತಾ ಇದ್ದೇವೆ.—ಮಾರ್ಕ 13:26, 27.
ಆ ದಿನ ಹತ್ತಿರವಾಗುತ್ತಾ ಇದೆ!
4. (ಎ) ಅರ್ಮಗೆದೋನ್ ಶುರುವಾಗುವ ಸಮಯ ಯೇಸುವಿಗೆ ಈಗ ಗೊತ್ತೆಂದು ನಾವೇಕೆ ಹೇಳಬಹುದು? (ಬಿ) ಮಹಾ ಸಂಕಟ ಶುರುವಾಗುವ ಸಮಯ ಗೊತ್ತಿಲ್ಲದಿದ್ದರೂ ನಮಗೆ ಯಾವ ಖಚಿತವಿದೆ?
4 ಅಧಿವೇಶನದಲ್ಲಿ ಕಾರ್ಯಕ್ರಮ ಯಾವಾಗ ಶುರುವಾಗುತ್ತದೆಂದು ನಮಗೆ ಗೊತ್ತಿರುತ್ತದೆ. ಆದರೆ ಮಹಾ ಸಂಕಟ ಶುರುವಾಗುವ ಸರಿಯಾದ ಸಮಯ ನಮಗೆ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಯೇಸು ಭೂಮಿಯಲ್ಲಿರುವಾಗ ಹೇಳಿದ್ದು: “ಆ ದಿನ ಮತ್ತು ಗಳಿಗೆಯ ವಿಷಯವಾಗಿ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ.” (ಮತ್ತಾ. 24:36) ಆದರೆ ಯೇಸುವಿಗೆ ಅರ್ಮಗೆದೋನ್ ಯುದ್ಧ ಶುರುವಾಗುವ ಸಮಯ ಈಗ ಗೊತ್ತಿರಬೇಕು ಯಾಕೆಂದರೆ ಆ ಯುದ್ಧದ ನೇತೃತ್ವ ವಹಿಸುವವನು ಆತನೇ. (ಪ್ರಕ. 19:11-16) ನಮಗಾದರೊ ಅಂತ್ಯ ಬರುವ ತಾರೀಕಾಗಲಿ ಸಮಯವಾಗಲಿ ಗೊತ್ತಿಲ್ಲ. ಆದ್ದರಿಂದಲೇ ನಾವು ಸದಾ ಎಚ್ಚರವಾಗಿರುವುದು ತುಂಬ ಪ್ರಾಮುಖ್ಯ. ಮಹಾ ಸಂಕಟ ಯಾವಾಗ ಆರಂಭವಾಗಬೇಕೆಂದು ಯೆಹೋವನು ಈಗಾಗಲೇ ಗೊತ್ತುಮಾಡಿದ್ದಾನೆ. ಒಂದೊಂದು ದಿನ ದಾಟಿದಂತೆ ಆ ಸಮಯ ಹತ್ತಿರಹತ್ತಿರ ಬರುತ್ತಾ ಇದೆ. ಅದು “ತಾಮಸವಾಗದು” ಅಂದರೆ ವಿಳಂಬಮಾಡದು. (ಹಬಕ್ಕೂಕ 2:1-3 ಓದಿ.) ನಮಗೆ ಯಾಕಷ್ಟು ಖಚಿತವಿದೆ?
5. ಯೆಹೋವನ ಪ್ರವಾದನೆಗಳು ಯಾವಾಗಲೂ ಸಮಯಕ್ಕೆ ಸರಿಯಾಗಿ ನೆರವೇರುತ್ತವೆಂದು ತೋರಿಸುವ ಒಂದು ಉದಾಹರಣೆ ಕೊಡಿ.
5 ಯೆಹೋವನ ಪ್ರವಾದನೆಗಳು ಯಾವಾಗಲೂ ಸಮಯಕ್ಕೆ ಸರಿಯಾಗಿ ನೆರವೇರಿವೆ! ಉದಾಹರಣೆಗೆ, ಆತನು ತನ್ನ ಜನರನ್ನು ಐಗುಪ್ತದಿಂದ ಬಿಡಿಸಿದ ದಿನದ ಬಗ್ಗೆ ಯೋಚಿಸಿ. ಅದು ಕ್ರಿ.ಪೂ. 1513 ನೈಸಾನ್ 14ನೇ ದಿನವಾಗಿತ್ತು. ನಂತರ ಮೋಶೆ ಆ ದಿನದ ಬಗ್ಗೆ ಬರೆದದ್ದು: “ನಾನೂರಮೂವತ್ತು ವರುಷಗಳು ಕಳೆದನಂತರ ಅದೇ ದಿವಸದಲ್ಲಿ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತದೇಶವನ್ನು ಬಿಟ್ಟು ಹೊರಟುಹೋದವು.” (ವಿಮೋ. 12:40-42) ಈ 430 ವರ್ಷಗಳು ಶುರುವಾದದ್ದು ಯಾವಾಗ? ಕ್ರಿ.ಪೂ. 1943ರ ನೈಸಾನ್ 14ರಂದು. ಆ ದಿನದಂದು ಯೆಹೋವನು ಅಬ್ರಹಾಮನ ಸಂತಾನವನ್ನು ಆಶೀರ್ವದಿಸುವ ತನ್ನ ವಾಗ್ದಾನವನ್ನು ಜಾರಿಗೆ ತರಲಾರಂಭಿಸಿದನು. (ಗಲಾ. 3:17, 18) ಇದಾಗಿ ಸ್ವಲ್ಪ ಸಮಯದ ನಂತರ ಯೆಹೋವನು ಅಬ್ರಹಾಮನಿಗೆ ಹೀಗಂದನು: “ನೀನು ಚೆನ್ನಾಗಿ ತಿಳಿಯತಕ್ಕದ್ದೇನಂದರೆ—ನಿನ್ನ ಸಂತತಿಯವರು ಅನ್ಯದೇಶದಲ್ಲಿ ಕೆಲವು ಕಾಲ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರುಷ ಆ ದೇಶದವರಿಂದ ಬಾಧೆಪಡುವರು.” (ಆದಿ. 15:13; ಅ. ಕಾ. 7:6) ಈ 400 ವರ್ಷಗಳು, ಕ್ರಿ.ಪೂ. 1913ರಲ್ಲಿ ಇಷ್ಮಾಯೇಲನು ಇಸಾಕನಿಗೆ ಗೇಲಿಮಾಡಿದಾಗ ಆರಂಭವಾಗಿ, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿದ ದಿನದಂದು ಕೊನೆಗೊಂಡವು. (ಆದಿ. 21:8-10; ಗಲಾ. 4:22-29) ನಿಜ, ಯೆಹೋವನು ತನ್ನ ಜನರನ್ನು ಯಾವ ದಿನದಂದು ಬಿಡಿಸಬೇಕೆಂದು ನೂರಾರು ವರ್ಷಗಳ ಮುಂಚೆಯೇ ನಿಶ್ಚಯಿಸಿದ್ದನು!
6. ಯೆಹೋವನು ತನ್ನ ಜನರನ್ನು ರಕ್ಷಿಸುವನೆಂದು ನಾವೇಕೆ ಭರವಸೆಯಿಂದ ಇರಬಹುದು?
6 ಐಗುಪ್ತದಿಂದ ಬಿಡುಗಡೆಯಾಗಿ ಬಂದ ಇಸ್ರಾಯೇಲ್ಯರಲ್ಲಿ ಯೆಹೋಶುವ ಒಬ್ಬನು. ಅನೇಕ ವರ್ಷಗಳ ನಂತರ ಅವನು ಇಸ್ರಾಯೇಲ್ಯರಿಗೆ ನೆನಪುಹುಟ್ಟಿಸಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋ. 23:2, 14) ಅದೇ ರೀತಿ ಇಂದು ಯೆಹೋವನು ತನ್ನ ಜನರನ್ನು ಮಹಾ ಸಂಕಟದಿಂದ ಪಾರುಮಾಡಿ, ಹೊಸ ಲೋಕದಲ್ಲಿ ನಿತ್ಯಜೀವ ಕೊಡುವೆನೆಂದು ಮಾತುಕೊಟ್ಟಿದ್ದಾನೆ. ಈ ಮಾತು ಸತ್ಯವಾಗಲಿದೆಯೆಂದು ನಾವು ಭರವಸೆಯಿಂದ ಇರಬಹುದು. ಆದರೆ ಆ ಹೊಸ ಲೋಕದಲ್ಲಿ ನಾವಿರಬೇಕಾದರೆ ಸದಾ ಎಚ್ಚರವಾಗಿರಲೇಬೇಕು.
ಪಾರಾಗಬೇಕಾದರೆ ಸದಾ ಎಚ್ಚರವಾಗಿರಿ
7, 8. (ಎ) ಪ್ರಾಚೀನಕಾಲದ ಕಾವಲುಗಾರರ ಕೆಲಸ ಏನಾಗಿತ್ತು? (ಬಿ) ಇದರಿಂದ ನಮಗೇನು ಪಾಠವಿದೆ? (ಸಿ) ಕಾವಲುಗಾರರು ಕೆಲಸದಲ್ಲಿ ನಿದ್ದೆಹೋದರೆ ಏನಾಗುತ್ತದೆ ಎಂಬದಕ್ಕೆ ಉದಾಹರಣೆ ಕೊಡಿ.
7 ಪ್ರಾಚೀನ ಕಾಲಗಳಲ್ಲಿ ನಗರಗಳನ್ನು ಕಾಯುತ್ತಿದ್ದ ಕಾವಲುಗಾರರಿಂದ ನಾವೊಂದು ಪಾಠ ಕಲಿಯಬಹುದು. ಶತ್ರುಗಳು ಒಳಗೆ ಬರದ ಹಾಗೆ ಯೆರೂಸಲೇಮಿನಂಥ ಅನೇಕ ನಗರಗಳ ಸುತ್ತ ಎತ್ತರದ ಗೋಡೆಗಳಿದ್ದವು. ಈ ಗೋಡೆಗಳ ಮೇಲೆ ಕಾವಲುಗಾರರು ನಿಂತಿರುತ್ತಿದ್ದರು. ಅಲ್ಲಿಂದ ಅವರು ನಗರದ ಸುತ್ತಲಿನ ಪ್ರದೇಶದ ಮೇಲೆ ಕಣ್ಣಿಡಲು ಆಗುತ್ತಿತ್ತು. ಇನ್ನೂ ಕೆಲವು ಕಾವಲುಗಾರರು ನಗರದ ಹೆಬ್ಬಾಗಿಲುಗಳ ಬಳಿ ನಿಂತಿರುತ್ತಿದ್ದರು. ಅವರು ಹಗಲೂರಾತ್ರಿ ಕಾವಲಿರಬೇಕಿತ್ತು. ಶತ್ರುಗಳು ಬರುವುದನ್ನು ನೋಡಿದರೆ ನಗರದೊಳಗಿನ ಜನರನ್ನು ಎಚ್ಚರಿಸಬೇಕಿತ್ತು. (ಯೆಶಾ. 62:6) ಕಾವಲುಗಾರರು ಎಚ್ಚರವಾಗಿದ್ದು, ಸುತ್ತಲೂ ಏನಾಗುತ್ತಾ ಇದೆಯೆಂದು ಹುಷಾರಾಗಿ ಗಮನಿಸುತ್ತಾ ಇರುವುದು ತುಂಬ ಪ್ರಾಮುಖ್ಯವಾಗಿತ್ತು. ಇಲ್ಲದಿದ್ದರೆ ಅವರಿಂದಾಗಿ ಎಷ್ಟೋ ಜನರು ಜೀವ ಕಳಕೊಳ್ಳುವ ಸಾಧ್ಯತೆಯಿತ್ತು.—ಯೆಹೆ. 33:6.
8 ಕ್ರಿ.ಶ. 70ರಲ್ಲಿ ರೋಮನ್ನರಿಗೆ ಯೆರೂಸಲೇಮನ್ನು ವಶಪಡಿಸಲು ಹೇಗೆ ಸಾಧ್ಯವಾಯಿತೆಂದು ಯೆಹೂದಿ ಇತಿಹಾಸಗಾರ ಜೋಸೀಫಸ್ ಬರೆದರು. ಆ ನಗರದ ಒಂದು ಭಾಗವನ್ನು ಕಾಯುತ್ತಿದ್ದ ಕಾವಲುಗಾರರು ನಿದ್ದೆಹೋಗಿದ್ದರು. ಹಾಗಾಗಿ ರೋಮನ್ ಸೈನಿಕರು ಆ ನಗರದೊಳಗೆ ಪ್ರವೇಶಿಸಲು ಆಯಿತು. ಈ ಸೈನಿಕರು ದೇವಾಲಯಕ್ಕೆ ನುಗ್ಗಿ ಬೆಂಕಿಯಿಟ್ಟರು. ನಂತರ ಇಡೀ ನಗರವನ್ನು ನಾಶಮಾಡಿದರು. ಯೆಹೂದಿ ಜನಾಂಗವು ಹಿಂದೆಂದೂ ಅನುಭವಿಸಿರದಷ್ಟು ಮಹಾ ಸಂಕಟದ ಅಂತಿಮ ಘಟ್ಟ ಅದಾಗಿತ್ತು.
9. ಇಂದು ಹೆಚ್ಚಿನ ಜನರಿಗೆ ಏನು ತಿಳಿದಿಲ್ಲ?
9 ಇಂದು ಹೆಚ್ಚಿನ ಸರ್ಕಾರಗಳು ತಮ್ಮ ದೇಶದ ಗಡಿಗಳನ್ನು ಕಾಯಲಿಕ್ಕಾಗಿ ಸೈನಿಕರನ್ನು ಇಟ್ಟಿವೆ. ಕಣ್ಗಾವಲಿಡುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಗಳನ್ನು ಬಳಸುತ್ತಿವೆ. ಹೀಗೆ ತಮ್ಮ ದೇಶದ ಸುರಕ್ಷೆಗೆ ಅಪಾಯ ತರುವ ಯಾವುದೇ ವ್ಯಕ್ತಿ ಅಥವಾ ವಸ್ತುಗಳು ಒಳಗೆ ಬರದಂತೆ ನೋಡಿಕೊಳ್ಳುತ್ತವೆ. ಆದರೆ ಈ ಸರ್ಕಾರಗಳಿಗೆ ತಮಗಿಂತ ಹೆಚ್ಚು ಶಕ್ತಿಶಾಲಿ ಸರ್ಕಾರ ಸ್ವರ್ಗದಲ್ಲಿರುವುದು ಗೊತ್ತಿಲ್ಲ. ಕ್ರಿಸ್ತ ಯೇಸು ರಾಜನಾಗಿರುವ ಈ ಸರ್ಕಾರವು ಬೇಗನೆ ಭೂಮಿ ಮೇಲಿರುವ ಎಲ್ಲ ಸರ್ಕಾರಗಳ ಮೇಲೆ ಯುದ್ಧ ಮಾಡಲಿದೆ. (ಯೆಶಾ. 9:6, 7; 56:10; ದಾನಿ. 2:44) ಆ ದಿನಕ್ಕಾಗಿ ನಾವು ತುಂಬ ಕಾತುರದಿಂದ ಕಾಯುತ್ತಿದ್ದೇವೆ. ಅದಕ್ಕಾಗಿ ಸಿದ್ಧರೂ ಆಗಿರಲು ಬಯಸುತ್ತೇವೆ. ಆದ್ದರಿಂದ ನಾವು ಬೈಬಲ್ ಪ್ರವಾದನೆಗೆ ಗಮನಕೊಟ್ಟು, ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡುತ್ತಾ ಇರುತ್ತೇವೆ.—ಕೀರ್ತ. 130:6.
ಅಪಕರ್ಷಿತರಾಗಬೇಡಿ
10, 11. (ಎ) ನಾವು ಯಾವ ವಿಷಯದಲ್ಲಿ ಜಾಗ್ರತೆ ವಹಿಸಬೇಕು? ಏಕೆ? (ಬಿ) ಜನರು ಬೈಬಲ್ ಪ್ರವಾದನೆಯನ್ನು ಅಲಕ್ಷಿಸುವಂತೆ ಪಿಶಾಚನು ಮಾಡಿದ್ದಾನೆಂದು ನಿಮಗೇಕೆ ಮನದಟ್ಟಾಗಿದೆ?
10 ಇಡೀ ರಾತ್ರಿ ಕಾವಲಿದ್ದು ಸುಸ್ತಾಗಿರುವ ಕಾವಲುಗಾರನಿಗೆ ಕೆಲಸದ ಕೊನೆಯ ತಾಸುಗಳಲ್ಲಿ ಎಚ್ಚರವಾಗಿರಲು ತುಂಬ ಕಷ್ಟವಾಗುತ್ತದೆ. ಅದೇ ರೀತಿ ನಾವು ಈ ಲೋಕದ ಕಡೇ ದಿವಸಗಳಲ್ಲಿ ಜೀವಿಸುತ್ತಿರುವುದರಿಂದ ಅಂತ್ಯ ಇನ್ನೂ ಹತ್ತಿರಹತ್ತಿರ ಬರುತ್ತಿರುವಾಗ ಎಚ್ಚರವಾಗಿರಲು ಹೆಚ್ಚು ಕಷ್ಟವಾಗಬಹುದು. ಆದರೆ ನಾವು ಎಚ್ಚರವಾಗಿರಲು ತಪ್ಪಿದರೆ ದೊಡ್ಡ ದುರಂತ ಆಗುವುದು ಖಂಡಿತ! ಎಚ್ಚರವಾಗಿರಲು ಅಡ್ಡಿಮಾಡುವ ಮೂರು ವಿಷಯಗಳನ್ನು ಈಗ ಚರ್ಚಿಸೋಣ.
11 ಪಿಶಾಚನು ಜನರನ್ನು ವಂಚಿಸುತ್ತಾನೆ. ಅವನು “ಈ ಲೋಕದ ಅಧಿಪತಿ.” ಈ ವಿಷಯವನ್ನು ಯೇಸು ಸಾಯುವ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ ಮೂರು ಸಲ ನೆನಪುಹುಟ್ಟಿಸಿದನು. (ಯೋಹಾ. 12:31; 14:30; 16:11) ಪಿಶಾಚನು ಸುಳ್ಳು ಧರ್ಮವನ್ನು ಬಳಸಿ ಜನರನ್ನು ವಂಚಿಸಿದ್ದಾನೆ. ಆದ್ದರಿಂದಲೇ ಈ ಲೋಕದ ಅಂತ್ಯ ತುಂಬ ಹತ್ತಿರವಿದೆಯೆಂದು ಸ್ಪಷ್ಟವಾಗಿ ತೋರಿಸುವ ಬೈಬಲ್ ಪ್ರವಾದನೆಗಳನ್ನು ಹೆಚ್ಚಿನ ಜನರು ಅಲಕ್ಷಿಸುತ್ತಾರೆ. (ಚೆಫ. 1:14) ಸೈತಾನನು “ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿದ್ದಾನೆ” ಎಂಬುದು ಸ್ಪಷ್ಟ. (2 ಕೊರಿಂ. 4:3-6) ಹಾಗಾಗಿ ನಾವು ಜನರಿಗೆ ಈ ಲೋಕದ ಅಂತ್ಯ ಹತ್ತಿರವಿದೆ, ಕ್ರಿಸ್ತನು ಈಗ ರಾಜನಾಗಿ ಆಳುತ್ತಿದ್ದಾನೆ ಎಂದು ಹೇಳುವಾಗ ಹೆಚ್ಚಿನವರು ಕಿವಿಗೆ ಹಾಕಿಕೊಳ್ಳುವುದಿಲ್ಲ. “ನನಗೆ ಇದೆಲ್ಲ ಕೇಳಲಿಕ್ಕೆ ಇಷ್ಟವಿಲ್ಲ” ಎಂದು ಹೇಳಿಬಿಡುತ್ತಾರೆ.
12. ಪಿಶಾಚನು ನಮ್ಮನ್ನು ವಂಚಿಸುವಂತೆ ಏಕೆ ಬಿಡಬಾರದು?
12 ಹೀಗೆ ಜನರು ತೋರಿಸುವ ನಿರಾಸಕ್ತಿಯಿಂದ ನಾವು ನಿರುತ್ಸಾಹಗೊಳ್ಳಬಾರದು. ಸದಾ ಎಚ್ಚರವಾಗಿರುವುದು ಏಕೆ ಪ್ರಾಮುಖ್ಯವೆಂದು ನಮಗೆ ಗೊತ್ತು. ಪೌಲನು ತನ್ನ ಸಹೋದರರಿಗೆ ಹೇಳಿದಂತೆ “ಯೆಹೋವನ ದಿನವು ಬರುತ್ತದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. . . . ರಾತ್ರಿಯಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ . . . ಬರುತ್ತದೆ.” (1 ಥೆಸಲೊನೀಕ 5:1-6 ಓದಿ.) ಯೇಸು ನಮ್ಮನ್ನು ಎಚ್ಚರಿಸಿದ್ದು: “ನೀವು ಸಹ ಸಿದ್ಧರಾಗಿರಿ, ಏಕೆಂದರೆ ಸಂಭವನೀಯವೆಂದು ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಲೂಕ 12:39, 40) ಬೇಗನೆ ಸೈತಾನನು ಇನ್ನೊಂದು ವಿಧದಲ್ಲಿ ಜನರನ್ನು ವಂಚಿಸಲಿದ್ದಾನೆ. ಹೇಗೆ? ಲೋಕದಲ್ಲಿ “ಶಾಂತಿ ಮತ್ತು ಭದ್ರತೆ” ಇದೆಯೆಂದು ನೆನಸುವಂತೆ ಮಾಡುವ ಮೂಲಕ. ಆಗ ಯೆಹೋವನ ದಿನ ತಟ್ಟನೆ ಬರಲಿದೆ. ಜನರಿಗೆ ಆಘಾತವಾಗಲಿದೆ. ನಮ್ಮ ಪ್ರತಿಕ್ರಿಯೆ ಏನಾಗಿರುವುದು? ಆ ದಿನಕ್ಕಾಗಿ ನಾವು ಸಿದ್ಧರಾಗಿದ್ದು ಬೇರೆಲ್ಲರಂತೆ ವಂಚಿತರಾಗದೇ ಇರಲು “ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ” ಇರಬೇಕು. ಆದ್ದರಿಂದಲೇ ನಾವು ಪ್ರತಿದಿನ ದೇವರ ವಾಕ್ಯವನ್ನು ಓದಿ, ಯೆಹೋವನು ನಮಗೇನು ಹೇಳುತ್ತಾನೊ ಅದರ ಬಗ್ಗೆ ಧ್ಯಾನಿಸಬೇಕು.
13. (ಎ) ಲೋಕದ ಮನೋಭಾವ ಹೇಗೆ ಜನರನ್ನು ಪ್ರಭಾವಿಸುತ್ತಿದೆ? (ಬಿ) ಈ ಅಪಾಯಕಾರಿ ಪ್ರಭಾವ ನಮಗೆ ತಟ್ಟದಂತೆ ಏನು ಮಾಡಬೇಕು?
13 ಲೋಕದ ಮನೋಭಾವವು ಜನರನ್ನು ಪ್ರಭಾವಿಸುತ್ತಿದೆ. ದೇವರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲವೆಂದು ಇಂದು ಅನೇಕರು ನೆನಸುತ್ತಾರೆ. (ಮತ್ತಾ. 5:3) ಈ ಲೋಕವು ನೀಡುವ ವಸ್ತುಗಳಲ್ಲಿ ಆದಷ್ಟು ಹೆಚ್ಚನ್ನು ಗಳಿಸಲು ತಮ್ಮ ಹೆಚ್ಚಿನ ಸಮಯ, ಶಕ್ತಿಯನ್ನು ಬಳಸುತ್ತಾರೆ. (1 ಯೋಹಾ. 2:16) ಅಲ್ಲದೆ, ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದಿನ ವೈವಿಧ್ಯಮಯ ಮನೋರಂಜನೆಯು ಜನರನ್ನು ಆಕರ್ಷಿಸಿ ಸುಖಭೋಗವನ್ನು ಪ್ರೀತಿಸುವಂತೆ, ತಮಗಿರುವ ಯಾವುದೇ ಆಸೆಯನ್ನು ತೀರಿಸಿಕೊಳ್ಳುವಂತೆ ಉತ್ತೇಜಿಸುತ್ತದೆ. (2 ತಿಮೊ. 3:4) ಹಾಗಾಗಿ ಜನರು ಹೆಚ್ಚು ಪ್ರಾಮುಖ್ಯವಾದ ವಿಷಯವನ್ನು ಅಂದರೆ ದೇವರೊಂದಿಗಿನ ಸಂಬಂಧದ ಬಗ್ಗೆ ಯೋಚಿಸುವುದೇ ಇಲ್ಲ. ಆದ್ದರಿಂದಲೇ ಪೌಲನು ಕ್ರೈಸ್ತರಿಗೆ “ನಿದ್ರೆಯಿಂದ ಎಚ್ಚತ್ತುಕೊಳ್ಳು”ವಂತೆ ಅಂದರೆ ತಮ್ಮ ಆಸೆಗಳನ್ನು ಪೂರೈಸುವುದರ ಮೇಲೆ ಮಾತ್ರ ಗಮನ ಇಡಬಾರದೆಂದು ನೆನಪಿಸಿದನು.—ರೋಮ. 13:11-14.
14. ಲೂಕ 21:34, 35 ರಲ್ಲಿ ನಮಗೆ ಯಾವ ಎಚ್ಚರಿಕೆ ಇದೆ?
14 ನಮ್ಮ ಯೋಚನಾ ರೀತಿಯನ್ನು ಲೋಕದ ಮನೋಭಾವ ಅಲ್ಲ ಬದಲಾಗಿ ದೇವರ ಪವಿತ್ರಾತ್ಮ ಪ್ರಭಾವಿಸಬೇಕು. ಮುಂದೆ ಏನಾಗಲಿದೆಯೆಂದು ಯೆಹೋವನು ಪವಿತ್ರಾತ್ಮದ ಮೂಲಕ ನಮಗೆ ಸ್ಪಷ್ಟವಾಗಿ ಅರ್ಥಮಾಡಿಸಿದ್ದಾನೆ.[1] (1 ಕೊರಿಂ. 2:12) ಹಾಗಿದ್ದರೂ ನಾವು ಜಾಗ್ರತೆಯಿಂದಿರಬೇಕು. ಏಕೆಂದರೆ ಜೀವನದ ತೀರ ಸಾಮಾನ್ಯ ವಿಷಯಗಳೇ ಯೆಹೋವನ ಸೇವೆಯಿಂದ ನಮ್ಮ ಗಮನ ತಿರುಗಿಸಬಹುದು. (ಲೂಕ 21:34, 35 ಓದಿ.) ಇತರರು ನಮ್ಮನ್ನು ನೋಡಿ ‘ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂದು ನಂಬುವ ಮೂರ್ಖರು’ ಎಂದು ಹೇಳಬಹುದು. (2 ಪೇತ್ರ 3:3-7) ಆದರೆ ಅವರಿಂದಾಗಿ ನಾವು ನಿರುತ್ಸಾಹಗೊಳ್ಳಬಾರದು. ಏಕೆಂದರೆ ಅಂತ್ಯ ಬೇಗನೆ ಬರಲಿದೆ ಎಂಬದಕ್ಕೆ ನಮ್ಮ ಬಳಿ ಸ್ಪಷ್ಟ ಪುರಾವೆಯಿದೆ. ದೇವರ ಪವಿತ್ರಾತ್ಮ ನಮ್ಮ ಮೇಲೆ ಪ್ರಭಾವ ಬೀರಬೇಕಾದರೆ ನಾವು ತಪ್ಪದೇ ಕೂಟಗಳಿಗೆ ಹಾಜರಾಗಿ ಸಹೋದರರೊಟ್ಟಿಗೆ ಸಹವಾಸ ಮಾಡಬೇಕು.
15. (ಎ) ಪೇತ್ರ, ಯಾಕೋಬ, ಯೋಹಾನರಿಗೆ ಏನಾಯಿತು? (ಬಿ) ನಮಗೂ ಏನಾಗುವ ಸಾಧ್ಯತೆಯಿದೆ?
15 ನಮ್ಮ ಬಲಹೀನತೆಗಳಿಂದಾಗಿ ಎಚ್ಚರವಾಗಿರಲು ಕಷ್ಟವಾಗಬಹುದು. ಮಾನವರು ಅಪರಿಪೂರ್ಣರು, ಅವರಲ್ಲಿ ಬಲಹೀನತೆಗಳಿವೆಯೆಂದು ಯೇಸುವಿಗೆ ಅರ್ಥವಾಗುತ್ತಿತ್ತು. ಆತನು ಸಾಯುವ ಹಿಂದಿನ ರಾತ್ರಿ ಏನಾಯಿತೆಂದು ನೆನಪಿಗೆ ತನ್ನಿ. ಯೇಸು ಪರಿಪೂರ್ಣನಾಗಿದ್ದರೂ ನಂಬಿಗಸ್ತನಾಗಿರಲು ತಂದೆಯ ಸಹಾಯ ಬೇಕೆಂದು ಅರಿತಿದ್ದನು. ಅದಕ್ಕಾಗಿ ಪ್ರಾರ್ಥಿಸಿದನು. ಪ್ರಾರ್ಥನೆ ಮಾಡಲು ಹೋಗುವ ಮುಂಚೆ ಅಪೊಸ್ತಲರಾದ ಪೇತ್ರ, ಯಾಕೋಬ, ಯೋಹಾನರಿಗೆ ಎಚ್ಚರವಾಗಿರಲು ಹೇಳಿದನು. ಆದರೆ ಅವರು ಎಚ್ಚರವಾಗಿರುವುದು ಎಷ್ಟು ಮಹತ್ವವೆಂದು ಅರಿತುಕೊಳ್ಳಲಿಲ್ಲ. ಅವರಿಗೆ ಸುಸ್ತಾಗಿತ್ತು, ನಿದ್ದೆಹೋದರು. ಯೇಸುವಿಗೂ ಸುಸ್ತಾಗಿತ್ತು. ಆದರೆ ಆತನು ಎಚ್ಚರವಾಗಿದ್ದನು, ತನ್ನ ತಂದೆಗೆ ಪ್ರಾರ್ಥನೆ ಮಾಡುತ್ತಾ ಇದ್ದನು. ಅಪೊಸ್ತಲರು ಸಹ ಅದನ್ನೇ ಮಾಡಬೇಕಿತ್ತು.—ಮಾರ್ಕ 14:32-41.
16. ಲೂಕ 21:36 ಕ್ಕನುಸಾರವಾಗಿ ನಾವು ‘ಸದಾ ಎಚ್ಚರದಿಂದಿರಲು’ ಯೇಸು ಸೂಚಿಸಿದ್ದು ಹೇಗೆ?
16 ನಾವು ‘ಸದಾ ಎಚ್ಚರದಿಂದಿರಲು’ ಮತ್ತು ಯೆಹೋವನ ದಿನಕ್ಕಾಗಿ ಸಿದ್ಧರಾಗಿರಲು ಯಾವುದು ಸಹಾಯಮಾಡುತ್ತದೆ? ಸರಿಯಾದದ್ದನ್ನೇ ಮಾಡಬೇಕೆಂಬ ಬಲವಾದ ಆಸೆ ನಮಗಿರಬೇಕು. ಆದರೆ ಅಷ್ಟೇ ಸಾಕಾಗಲ್ಲ. ಯೇಸು ಸಾಯುವ ಕೆಲವು ದಿನ ಮುಂಚೆ ತನ್ನ ಶಿಷ್ಯರಿಗೆ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತಾ ಇರಬೇಕೆಂದು ಹೇಳಿದನು. (ಲೂಕ 21:36 ಓದಿ.) ಈ ಅಂತ್ಯಕಾಲದಲ್ಲಿ ಎಚ್ಚರವಾಗಿರಲಿಕ್ಕಾಗಿ ನಾವೂ ಎಲ್ಲ ಸಮಯ ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ಇರಬೇಕು.—1 ಪೇತ್ರ 4:7.
ಸದಾ ಎಚ್ಚರವಾಗಿರ್ರಿ
17. ಭವಿಷ್ಯದಲ್ಲಿ ಏನಾಗಲಿದೆಯೊ ಅದಕ್ಕಾಗಿ ಸಿದ್ಧರಾಗಿರಲು ನಾವೇನು ಮಾಡಬೇಕು?
17 ಅಂತ್ಯವು “ನೀವು ನೆನಸದ ಗಳಿಗೆಯಲ್ಲಿ” ಬರುತ್ತದೆಂದು ಯೇಸು ಹೇಳಿದನು. (ಮತ್ತಾ. 24:44) ಹಾಗಾಗಿ ನಾವು ಎಲ್ಲಾ ಸಮಯದಲ್ಲೂ ಸಿದ್ಧರಾಗಿರಬೇಕು. ಸೈತಾನನ ಲೋಕವು ಸಂತೋಷ ತರುತ್ತದೆಂದು ಹೇಳುವಂಥ ಜೀವನಶೈಲಿಗಾಗಿ ಪ್ರಯಾಸಪಡುವ ಸಮಯ ಇದಲ್ಲ. ಅಂಥ ಜೀವನಶೈಲಿ ಸಂತೋಷ ತರುತ್ತದೆಂಬ ಮಾತು ಕನಸು ಅಷ್ಟೇ. ನಾವು ಹೇಗೆ ಎಚ್ಚರವಾಗಿರಬಹುದೆಂದು ಯೆಹೋವ ಮತ್ತು ಯೇಸು ಬೈಬಲಿನ ಮೂಲಕ ತಿಳಿಸಿದ್ದಾರೆ. ಆದ್ದರಿಂದ ಬೈಬಲ್ ಪ್ರವಾದನೆಗಳಿಗೆ ಮತ್ತು ಅವುಗಳು ಈಗ ಹೇಗೆ ನೆರವೇರುತ್ತಿವೆ ಎಂಬದಕ್ಕೆ ಗಮನಕೊಡೋಣ. ಯೆಹೋವನಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾ, ಆತನ ರಾಜ್ಯಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಡೋಣ. ಹೀಗೆ ಮಾಡಿದರೆ ಅಂತ್ಯ ಬರುವಾಗ ಸಿದ್ಧರಾಗಿರುವೆವು. (ಪ್ರಕ. 22:20) ಇದು ತುಂಬ ಮುಖ್ಯ ಏಕೆಂದರೆ ಇದು ನಮ್ಮ ಜೀವದ ಪ್ರಶ್ನೆ!
^ [1] (ಪ್ಯಾರ 14) ದೇವರ ರಾಜ್ಯ ಈಗ ಆಳುತ್ತಿದೆ! (ಇಂಗ್ಲಿಷ್) ಪುಸ್ತಕ 21 ನೇ ಅಧ್ಯಾಯ ನೋಡಿ.