ಲೋಕದ ಆತ್ಮವು ನಿಮ್ಮಲ್ಲಿ ವಿಷವನ್ನು ಹರಡಿಸುತ್ತಿದೆಯೊ?
ಸೆಪ್ಟೆಂಬರ್ 12, 1990ರಂದು, ಕಸಾಕ್ಸ್ತಾನದ ಕಾರ್ಖಾನೆಯೊಂದರಲ್ಲಿ ಒಂದು ಸ್ಫೋಟವು ಸಂಭವಿಸಿತು. ಅಪಾಯಕಾರಿ ವಿದ್ಯುತ್ ವಿಕಿರಣವು ವಾತಾವರಣದೊಳಗೆ ಬಿಡುಗಡೆಮಾಡಲ್ಪಟ್ಟಿತು. ಇದು 1,20,000 ಸ್ಥಳಿಕ ನಿವಾಸಿಗಳ ಆರೋಗ್ಯಕ್ಕೆ ಬೆದರಿಕೆಯನ್ನೊಡ್ಡಿತು. ಇವರಲ್ಲಿ ಅನೇಕರು ಆ ಮಾರಕ ವಿಷದ ವಿರುದ್ಧ ಬೀದಿಗಳಲ್ಲಿ ಬಹಿರಂಗವಾಗಿ ಪ್ರತಿಭಟಿಸಿದರು.
ಆದರೆ ಹೆಚ್ಚಿನ ಮಾಹಿತಿಯು ಪ್ರಕಟಪಡಿಸಲ್ಪಟ್ಟಂತೆ, ತಾವು ಅನೇಕ ದಶಕಗಳಿಂದ ಒಂದು ವಿಷಕಾರಿ ಪರಿಸರದಲ್ಲಿ ಜೀವಿಸುತ್ತಿದ್ದೇವೆಂದು ಅವರಿಗೆ ತಿಳಿದುಬಂತು. ಅನೇಕ ವರ್ಷಗಳಿಂದ, 1,00,000 ಟನ್ನುಗಳಷ್ಟು ವಿದ್ಯುತ್ ವಿಕಿರಣ ಕಚಡವನ್ನು, ಅರಕ್ಷಿತ, ತೆರೆದ ನಿವೇಶನವೊಂದರಲ್ಲಿ ರಾಶಿಹಾಕಲಾಗುತ್ತಿತ್ತು. ಅಪಾಯವು ಅವರ ಮನೆಬಾಗಿಲ ಮೆಟ್ಟಿಲ್ಲಲ್ಲೇ ಇತ್ತಾದರೂ, ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಏಕೆ?
ಪ್ರತಿದಿನ, ಸ್ಥಳಿಕ ಕ್ರೀಡಾಂಗಣದಲ್ಲಿ, ಅಧಿಕಾರಿಗಳು ಒಂದು ವಿದ್ಯುತ್ ವಿಕಿರಣ ಅಂಕವನ್ನು ಪ್ರಕಟಿಸುತ್ತಿದ್ದರು. ಯಾವುದೇ ರೀತಿಯ ಅಪಾಯವಿಲ್ಲವೆಂಬ ಅಭಿಪ್ರಾಯವನ್ನು ಇದು ಕೊಡುತ್ತಿತ್ತು. ಆ ಸಂಖ್ಯೆಗಳು ನಿಷ್ಕೃಷ್ಟವಾಗಿದ್ದವು, ಆದರೆ ಅವು ಗ್ಯಾಮಾ ಕಿರಣಗಳನ್ನು ಮಾತ್ರ ಸೂಚಿಸಿದವು. ಅಳೆಯದೆ ಬಿಡಲ್ಪಟ್ಟ ಆ್ಯಲ್ಫಾ ಕಿರಣಗಳು ಅಷ್ಟೇ ಅಪಾಯಕಾರಿಯಾಗಿರಬಲ್ಲವು. ತಮ್ಮ ಮಕ್ಕಳು ಏಕೆ ಇಷ್ಟು ರೋಗಿಷ್ಠರಾಗಿದ್ದರೆಂದು ಅನೇಕ ತಾಯಂದಿರಿಗೆ ತಿಳಿಯತೊಡಗಿತು.
ಆತ್ಮಿಕ ರೀತಿಯಲ್ಲಿ ಮಾತಾಡುವುದಾದರೆ, ಅದೃಶ್ಯವಾದ ಮಲಿನಗೊಳಿಸುವಿಕೆಯ ಮೂಲಕ ನಮ್ಮಲ್ಲಿಯೂ ವಿಷವು ಹರಡಬಲ್ಲದು. ಮತ್ತು ಕಸಾಕ್ಸ್ತಾನದಲ್ಲಿ ಬಲಿಪಶುಗಳಾದ ಆ ಜನರಂತೆ, ಅಧಿಕಾಂಶ ಮಂದಿಯ ಜೀವಕ್ಕೆ ಬೆದರಿಕೆಯನ್ನುಂಟುಮಾಡುವ ಈ ಅಪಾಯದ ಕುರಿತು ಅರಿವಿಲ್ಲ. ಬೈಬಲ್ ಈ ಮಾಲಿನ್ಯವನ್ನು “ಲೋಕದ ಆತ್ಮ” (NW)ವೆಂದು ಗುರುತಿಸುತ್ತದೆ. ಇದು ಪಿಶಾಚನಾದ ಸೈತಾನನಿಂದಲೇ ಏರ್ಪಡಿಸಲ್ಪಟ್ಟಿದೆ. (1 ಕೊರಿಂಥ 2:12) ನಮ್ಮ ದೈವಭಕ್ತಿಯನ್ನು ಶಿಥಿಲಗೊಳಿಸಲಿಕ್ಕಾಗಿ, ದೇವರ ಶತ್ರುವು ಲೋಕದ ಈ ಆತ್ಮವನ್ನು—ಅಥವಾ ಚಾಲ್ತಿಯಲ್ಲಿರುವ ಮನೋಭಾವವನ್ನು—ದುರುದ್ದೇಶದಿಂದ ಬಳಸಿಕೊಳ್ಳುತ್ತಾನೆ.
ನಮ್ಮ ಆತ್ಮಿಕ ಬಲವನ್ನು ಲೋಕದ ಆತ್ಮವು ಹೇಗೆ ಬತ್ತಿಸಬಲ್ಲದು? ಕಣ್ಣಿನ ಆಶೆಯನ್ನು ಕೆರಳಿಸುವ ಮೂಲಕ ಮತ್ತು ನಮ್ಮ ಜನ್ಮಸಿದ್ಧ ಸ್ವಾರ್ಥತೆಯ ಲಾಭವನ್ನು ಪಡೆದುಕೊಳ್ಳುವ ಮೂಲಕವೇ. (ಎಫೆಸ 2:1-3; 1 ಯೋಹಾನ 2:16) ಲೌಕಿಕ ಯೋಚನೆಯು ನಮ್ಮ ಆತ್ಮಿಕತೆಯಲ್ಲಿ ಕ್ರಮೇಣವಾಗಿ ವಿಷವನ್ನು ಹರಡಿಸಸಾಧ್ಯವಿರುವ ಮೂರು ವಿಭಿನ್ನ ಕ್ಷೇತ್ರಗಳನ್ನು ನಾವು ಉದಾಹರಣೆಯ ಮೂಲಕ ಪರಿಗಣಿಸುವೆವು.
ರಾಜ್ಯವನ್ನು ಪ್ರಥಮವಾಗಿ ಹುಡುಕುವುದು
ಯೇಸು, ‘ರಾಜ್ಯವನ್ನೂ ದೇವರ ನೀತಿಯನ್ನೂ ಪ್ರಥಮವಾಗಿ ಹುಡುಕು’ (NW)ವಂತೆ ಕ್ರೈಸ್ತರನ್ನು ಪ್ರೇರಿಸಿದನು. (ಮತ್ತಾಯ 6:33) ಇನ್ನೊಂದು ಕಡೆಯಲ್ಲಿ, ಲೋಕದ ಆತ್ಮವು ನಾವು ನಮ್ಮ ಸ್ವಂತ ಅಭಿರುಚಿಗಳು ಮತ್ತು ಸುಖಸೌಕರ್ಯಗಳಿಗೆ ಅನುಚಿತವಾದ ಮಹತ್ವವನ್ನು ಕೊಡುವಂತೆ ನಮ್ಮನ್ನು ನಡಿಸಸಾಧ್ಯವಿದೆ. ಆರಂಭದ ಅಪಾಯವು, ಆತ್ಮಿಕ ಅಭಿರುಚಿಗಳನ್ನು ಒಮ್ಮಿಂದೊಮ್ಮೆಲೇ ಬಿಟ್ಟುಬಿಡುವುದರಲ್ಲಿ ಅಲ್ಲ, ಬದಲಾಗಿ ಅವುಗಳಿಗೆ ಎರಡನೆಯ ಸ್ಥಾನವನ್ನು ಕೊಡುವುದರಲ್ಲಿ ಅಡಗಿದೆ. ಕಸಾಕ್ಸ್ತಾನದ ಜನರಂತೆ, ಭದ್ರತೆಯ ಒಂದು ಸುಳ್ಳು ಪ್ರಜ್ಞೆಯಿಂದಾಗಿ ನಾವು ಅಪಾಯವನ್ನು ಕಡೆಗಣಿಸಸಾಧ್ಯವಿದೆ. ನಮ್ಮ ನಂಬಿಗಸ್ತ ಸೇವೆಯ ವರ್ಷಗಳು ಮತ್ತು ನಮ್ಮ ಆತ್ಮಿಕ ಸಹೋದರ ಸಹೋದರಿಯರಿಗಾಗಿರುವ ನಮ್ಮ ಗಣ್ಯತೆಯು, ನಾವು ಸತ್ಯದ ಮಾರ್ಗವನ್ನು ಎಂದಿಗೂ ತೊರೆಯಲು ಸಾಧ್ಯವಿಲ್ಲವೆಂದು ನೆನಸುವಂತೆ ನಮ್ಮನ್ನು ಮೋಸದಿಂದ ಸಮಾಧಾನಗೊಳಿಸಸಾಧ್ಯವಿದೆ. ಎಫೆಸ ಸಭೆಯಲ್ಲಿದ್ದ ಅನೇಕರು ಈ ರೀತಿಯಲ್ಲಿ ಭಾವಿಸಿದ್ದಿರಬಹುದು.
ಸಾ.ಶ. 96ನೆಯ ಇಸವಿಯಷ್ಟಕ್ಕೆ, ಯೇಸು ಅವರಿಗೆ ಈ ಮುಂದಿನ ಸಲಹೆಯನ್ನು ಕೊಟ್ಟನು: “ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟು ಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ.” (ಪ್ರಕಟನೆ 2:4) ದೀರ್ಘ ಸಮಯದಿಂದ ಸೇವೆ ಸಲ್ಲಿಸುತ್ತಿದ್ದ ಈ ಕ್ರೈಸ್ತರು, ಅನೇಕ ಕಷ್ಟಗಳನ್ನು ತಾಳಿಕೊಂಡಿದ್ದರು. (ಪ್ರಕಟನೆ 2:2, 3) ಅಪೊಸ್ತಲ ಪೌಲನನ್ನೂ ಸೇರಿಸಿ, ಅವರು ನಂಬಿಗಸ್ತ ಹಿರಿಯರಿಂದ ಕಲಿಸಲ್ಪಟ್ಟಿದ್ದರು. (ಅ. ಕೃತ್ಯಗಳು 20:17-21, 27) ಆದಾಗಲೂ, ವರ್ಷಗಳಿಂದ ಯೆಹೋವನಿಗಾಗಿದ್ದ ಅವರ ಪ್ರೀತಿಯು ಕ್ಷೀಣಿಸಿತ್ತು, ಮತ್ತು ಅವರು ತಮ್ಮ ಆತ್ಮಿಕ ಆವೇಗವನ್ನು ಕಳೆದುಕೊಂಡರು.—ಪ್ರಕಟನೆ 2:5.
ಎಫೆಸದವರಲ್ಲಿ ಕೆಲವರು, ಆ ನಗರದ ವಾಣಿಜ್ಯವ್ಯವಹಾರ ಮತ್ತು ಸಮೃದ್ಧಿಯಿಂದ ಬಾಧಿಸಲ್ಪಟ್ಟಿರುವುದು ಸಂಭವನೀಯ. ವಿಷಾದಕರವಾಗಿ, ಇಂದಿನ ಸಮಾಜದ ಪ್ರಾಪಂಚಿಕ ಪ್ರವೃತ್ತಿಯು ತದ್ರೀತಿಯಲ್ಲೇ ಕೆಲವು ಕ್ರೈಸ್ತರ ದಿಕ್ಕನ್ನು ಬದಲಾಯಿಸಿದೆ. ಸುಖಸೌಕರ್ಯಗಳಿಂದ ಕೂಡಿದ ಒಂದು ಜೀವನ ಶೈಲಿಯ ಹಿಂದೆ ದೃಢಸಂಕಲ್ಪದ ಬೆನ್ನಟ್ಟುವಿಕೆಯು, ಅನಿವಾರ್ಯವಾಗಿ ಆತ್ಮಿಕ ಗುರಿಗಳಿಂದ ನಮ್ಮ ದಿಕ್ಕನ್ನು ಬದಲಾಯಿಸುವುದು.—ಮತ್ತಾಯ 6:24ನ್ನು ಹೋಲಿಸಿರಿ.
ಈ ಅಪಾಯದ ಕುರಿತಾಗಿ ಎಚ್ಚರಿಕೆ ನೀಡುತ್ತಾ, ಯೇಸು ಹೇಳಿದ್ದು: “ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವಲ್ಲಿ ನಿನ್ನ ಕಣ್ಣು ನೆಟ್ಟಗಿದ್ದರೆ [“ಸರಳವಾಗಿದ್ದರೆ,” NW] ನಿನ್ನ ದೇಹವೆಲ್ಲಾ ಬೆಳಕಾಗಿರುವದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ [“ಅಸೂಯೆಯುಳ್ಳದ್ದಾಗಿದ್ದರೆ,” NW ಪಾದಟಿಪ್ಪಣಿ] ನಿನ್ನ ದೇಹವೆಲ್ಲಾ ಕತ್ತಲಾಗಿರುವದು.” (ಮತ್ತಾಯ 6:22, 23) “ಸರಳ”ವಾಗಿರುವ ಒಂದು ಕಣ್ಣು, ಆತ್ಮಿಕವಾಗಿ ಕೇಂದ್ರೀಕರಿಸಿರುವ ಒಂದು ಕಣ್ಣು, ದೇವರ ರಾಜ್ಯದ ಮೇಲೆ ನೆಟ್ಟಿರುವ ಒಂದು ಕಣ್ಣಾಗಿದೆ. ಇನ್ನೊಂದು ಕಡೆಯಲ್ಲಿ ಒಂದು “ಕೆಟ್ಟ” ಕಣ್ಣು ಅಥವಾ ಒಂದು “ಅಸೂಯೆಯುಳ್ಳ” ಕಣ್ಣು ಮಂದದೃಷ್ಟಿಯುಳ್ಳದ್ದು, ಕೇವಲ ತತ್ಕ್ಷಣದ ಶಾರೀರಿಕ ಆಶೆಗಳ ಮೇಲೆ ಕೇಂದ್ರೀಕರಿಸಲು ಶಕ್ತವಾಗಿರುತ್ತದೆ. ಆತ್ಮಿಕ ಗುರಿಗಳು ಮತ್ತು ಭಾವೀ ಪ್ರತಿಫಲಗಳು ಅದರ ದೃಷ್ಟಿವ್ಯಾಪ್ತಿಯಾಚೆ ನೆಲೆಸಿರುತ್ತವೆ.
ಇದಕ್ಕಿಂತ ಹಿಂದಿನ ವಚನದಲ್ಲಿ ಯೇಸು ಹೇಳಿದ್ದು: “ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ.” (ಮತ್ತಾಯ 6:21) ನಮ್ಮ ಹೃದಯವು ಆತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೊ ಅಥವಾ ಪ್ರಾಪಂಚಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೊ ಎಂದು ನಾವು ಹೇಗೆ ತಿಳಿದುಕೊಳ್ಳಸಾಧ್ಯವಿದೆ? ‘ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡು’ವುದರಿಂದ, ನಮ್ಮ ಸಂಭಾಷಣೆಯೇ ಪ್ರಾಯಶಃ ಅತ್ಯುತ್ತಮವಾದ ಮಾರ್ಗದರ್ಶಿಯಾಗಿದೆ. (ಲೂಕ 6:45) ಪ್ರಾಪಂಚಿಕ ವಿಷಯಗಳು ಅಥವಾ ಲೌಕಿಕ ಸಾಧನೆಗಳ ಕುರಿತಾಗಿಯೇ ನಾವು ಸತತವಾಗಿ ಮಾತಾಡುತ್ತಿರುವುದಾದರೆ, ನಮ್ಮ ಹೃದಯವು ವಿಭಜಿತವಾಗಿದೆ ಮತ್ತು ನಮ್ಮ ಆತ್ಮಿಕ ದೃಷ್ಟಿಯು ದೋಷಯುಕ್ತವಾಗಿದೆಯೆಂಬುದಕ್ಕೆ ಅದು ರುಜುವಾತಾಗಿದೆ.
ಒಬ್ಬ ಸ್ಪ್ಯಾನಿಷ್ ಸಹೋದರಿಯಾದ ಕಾರ್ಮೆನ್, ಈ ಸಮಸ್ಯೆಯೊಂದಿಗೆ ಹೋರಾಡಿದಳು.a ಕಾರ್ಮೆನ್ ವಿವರಿಸುವುದು: “ನನ್ನನ್ನು ಸತ್ಯದಲ್ಲಿ ಬೆಳೆಸಲಾಯಿತು, ಆದರೆ 18ನೆಯ ವಯಸ್ಸಿನಲ್ಲಿ, ನಾನು ನನ್ನ ಸ್ವಂತ ಶಿಶುವಿಹಾರ ಶಾಲೆಯನ್ನು ಆರಂಭಿಸಿದೆ. ಮೂರು ವರ್ಷಗಳ ನಂತರ, ನನ್ನಲ್ಲಿ ನಾಲ್ಕು ಉದ್ಯೋಗಿಗಳಿದ್ದರು, ವ್ಯಾಪಾರವು ಏಳಿಗೆ ಹೊಂದುತ್ತಿತ್ತು, ಮತ್ತು ನಾನು ತುಂಬ ಹಣವನ್ನು ಸಂಪಾದಿಸುತ್ತಿದ್ದೆ. ಆದರೆ ನನ್ನನ್ನು ಅತಿಯಾಗಿ ತೃಪ್ತಿಪಡಿಸಿದಂತಹ ವಿಷಯವು, ನನಗೆ ಈಗ ಹಣಕಾಸಿನ ಸ್ವಾತಂತ್ರ್ಯವಿದೆ ಮತ್ತು ನಾನು ‘ಯಶಸ್ವಿ’ಯಾಗಿದ್ದೇನೆಂಬ ವಾಸ್ತವಾಂಶವಾಗಿದ್ದಿರಬಹುದು. ಪ್ರಾಮಾಣಿಕವಾಗಿ ಹೇಳುವುದಾದರೆ, ನನ್ನ ಹೃದಯವು ನನ್ನ ವ್ಯಾಪಾರದಲ್ಲಿತ್ತು—ಅದು ನನ್ನ ಅತಿ ಮಹಾನ್ ಆಸಕ್ತಿಯಾಗಿತ್ತು.
“ನನ್ನ ಹೆಚ್ಚಿನ ಸಮಯವನ್ನು ವ್ಯಾಪಾರ ಅಭಿರುಚಿಗಳಿಗೆ ಸಮರ್ಪಿಸುತ್ತಿರುವಾಗಲೂ ನಾನು ಇನ್ನೂ ಒಬ್ಬ ಸಾಕ್ಷಿಯಾಗಿರಬಲ್ಲೆ ಎಂದು ನನಗನಿಸಿತು. ಇನ್ನೊಂದು ಕಡೆ, ನಾನು ಯೆಹೋವನನ್ನು ಸೇವಿಸಲು ಹೆಚ್ಚನ್ನು ಮಾಡಸಾಧ್ಯವಿದೆಯೆಂಬ ಕಾಡುವಂತಹ ಭಾವನೆಯೂ ನನಗಿತ್ತು. ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡಲು ನನ್ನನ್ನು ಕೊನೆಗೂ ಮನವೊಪ್ಪಿಸಿದಂಥದ್ದು, ಪಯನೀಯರರಾಗಿದ್ದ ಇಬ್ಬರು ಸ್ನೇಹಿತರ ಮಾದರಿಯೇ. ಅವರಲ್ಲಿ ಒಬ್ಬಳಾಗಿದ್ದ ಹೂಲ್ಯಾನಾ, ನನ್ನ ಸಭೆಯಲ್ಲಿದ್ದಳು. ನಾನು ಪಯನೀಯರ್ ಸೇವೆಯನ್ನು ಮಾಡುವಂತೆ ಅವಳು ನನ್ನನ್ನು ಒತ್ತಾಯಿಸಲಿಲ್ಲವಾದರೂ, ಅವಳ ಸಂಭಾಷಣೆಗಳು ಮತ್ತು ಅವಳ ಶುಶ್ರೂಷೆಯಿಂದ ಅವಳು ಸ್ಪಷ್ಟವಾಗಿ ಪಡೆದುಕೊಳ್ಳುತ್ತಿದ್ದ ಆನಂದವು, ನಾನು ನನ್ನ ಸ್ವಂತ ಆತ್ಮಿಕ ಮೌಲ್ಯಗಳನ್ನು ಪುನಃ ಪರಿಗಣಿಸುವಂತೆ ನನಗೆ ಸಹಾಯ ಮಾಡಿತು.
“ಸ್ವಲ್ಪ ಸಮಯದ ಬಳಿಕ, ಅಮೆರಿಕದಲ್ಲಿ ರಜೆಯಲ್ಲಿದ್ದಾಗ, ಒಬ್ಬ ಪಯನೀಯರ್ ಸಹೋದರಿಯಾದ ಗ್ಲೋರಿಯಳೊಂದಿಗೆ ನಾನು ತಂಗಿದೆ. ಅವಳು ಇತ್ತೀಚೆಗೆ ವಿಧವೆಯಾಗಿದ್ದಳು, ಮತ್ತು ತನ್ನ ಐದು ವರ್ಷ ಪ್ರಾಯದ ಮಗಳು, ಹಾಗೂ ಕ್ಯಾನ್ಸರ್ ಪೀಡಿತರಾಗಿದ್ದ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದಳು. ಆದರೂ ಅವಳು ಪಯನೀಯರ್ ಸೇವೆಯನ್ನು ಮಾಡುತ್ತಿದ್ದಳು. ಅವಳ ಮಾದರಿ ಮತ್ತು ಶುಶ್ರೂಷೆಗಾಗಿದ್ದ ಅವಳ ಹೃತ್ಪೂರ್ವಕ ಗಣ್ಯತೆಯು, ನನ್ನ ಹೃದಯವನ್ನು ಸ್ಪರ್ಶಿಸಿತು. ನಾನು ಅವಳ ಮನೆಯಲ್ಲಿ ಕಳೆದಂತಹ ನಾಲ್ಕೇ ದಿನಗಳು, ನಾನು ಯೆಹೋವನಿಗೆ ನನ್ನ ಅತ್ಯುತ್ತಮವಾದದ್ದನ್ನು ಕೊಡುವಂತೆ ನನ್ನನ್ನು ದೃಢಸಂಕಲ್ಪವುಳ್ಳವಳನ್ನಾಗಿ ಮಾಡಿದವು. ಪ್ರಥಮವಾಗಿ ನಾನು ಒಬ್ಬ ಕ್ರಮದ ಪಯನೀಯರಳಾದೆ, ಮತ್ತು ಕೆಲವು ವರ್ಷಗಳ ಬಳಿಕ ನನ್ನ ಗಂಡ ಮತ್ತು ನಾನು ಬೆತೆಲಿನಲ್ಲಿ ಸೇವೆಸಲ್ಲಿಸಲು ಆಮಂತ್ರಿಸಲ್ಪಟ್ಟೆವು. ನನ್ನ ಆತ್ಮಿಕ ಪ್ರಗತಿಗೆ ಒಂದು ಅಡಚಣೆಯಾಗಿದ್ದ ನನ್ನ ವ್ಯಾಪಾರಕ್ಕೆ ನಾನು ವಿದಾಯ ಹೇಳಿದೆ ಮತ್ತು ಈಗ ನನ್ನ ಜೀವಿತವು ಯೆಹೋವನ ದೃಷ್ಟಿಯಲ್ಲಿ ಯಶಸ್ಸಿನದ್ದಾಗಿದೆಯೆಂದು ನನಗನಿಸುತ್ತದೆ. ಇದು ನಿಜವಾಗಿಯೂ ಮಹತ್ವದ ಸಂಗತಿಯಾಗಿದೆ.”—ಲೂಕ 14:33.
ಕಾರ್ಮೆನಳು ಮಾಡಿದಂತೆ, “ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಖಚಿತಪಡಿಸಿ”ಕೊಳ್ಳಲು (NW) ಕಲಿಯುವುದು, ನಮ್ಮ ಉದ್ಯೋಗ, ಶಿಕ್ಷಣ, ಮನೆ, ಮತ್ತು ಜೀವನ ಶೈಲಿಯ ವಿಷಯದಲ್ಲಿ ವಿವೇಕಯುತವಾದ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ಮಾಡುವುದು. (ಫಿಲಿಪ್ಪಿ 1:10) ಆದರೆ ಮನೋರಂಜನೆಯ ವಿಷಯದಲ್ಲಿಯೂ ನಾವು ಹೆಚ್ಚು ಪ್ರಾಮುಖ್ಯವಾದ ಸಂಗತಿಗಳನ್ನು ಖಚಿತಪಡಿಸಿಕೊಳ್ಳುತ್ತೇವೊ? ಲೋಕದ ಆತ್ಮವು ಅಪಾರವಾದ ಪ್ರಭಾವವನ್ನು ಬೀರುವ ಇನ್ನೊಂದು ಕ್ಷೇತ್ರ ಇದಾಗಿದೆ.
ವಿರಾಮ ಮತ್ತು ಮನೋರಂಜನೆಯನ್ನು ಅದರ ಯೋಗ್ಯ ಸ್ಥಾನದಲ್ಲಿಡಿರಿ
ಲೋಕದ ಆತ್ಮವು, ವಿಶ್ರಾಮ ಮತ್ತು ಮನೋರಂಜನೆಗಾಗಿರುವ ಜನರ ಸ್ವಾಭಾವಿಕ ಆಶೆಯನ್ನು ಕುಟಿಲವಾಗಿ ಬಳಸಿಕೊಳ್ಳುತ್ತದೆ. ಹೆಚ್ಚಿನ ಜನರಿಗೆ ಭವಿಷ್ಯತ್ತಿಗಾಗಿ ಯಾವುದೇ ನಿಜವಾದ ನಿರೀಕ್ಷೆಯಿಲ್ಲದಿರುವುದರಿಂದ, ಅವರು ತಮ್ಮ ವರ್ತಮಾನಕಾಲವನ್ನು ಮನೋರಂಜನೆಯೊಂದಿಗೆ ಮತ್ತು ಆರಾಮದಿಂದ ಕಳೆಯಲು ಪ್ರಯತ್ನಿಸುವುದು ಗ್ರಾಹ್ಯ. (ಯೆಶಾಯ 22:13ನ್ನು ಹೋಲಿಸಿರಿ; 1 ಕೊರಿಂಥ 15:32.) ವಿರಾಮ ಮತ್ತು ಮನೋರಂಜನೆಗಾಗಿ ನಾವು ಹೆಚ್ಚೆಚ್ಚು ಮಹತ್ತ್ವವನ್ನು ಕೊಡುತ್ತಿರುವುದಾಗಿ ಕಂಡುಕೊಳ್ಳುತ್ತೇವೊ? ಲೋಕದ ಆಲೋಚನಾ ರೀತಿಯು, ನಮ್ಮ ದೃಷ್ಟಿಕೋನವನ್ನು ರೂಪಿಸುತ್ತಿದೆಯೆಂಬುದಕ್ಕೆ ಅದೊಂದು ಚಿಹ್ನೆಯಾಗಿರಬಲ್ಲದು.
ಬೈಬಲ್ ಎಚ್ಚರಿಸುವುದು: “ಭೋಗಾಸಕ್ತನು [“ವಿನೋದಾಸಕ್ತನು,” ಲಾಂಸಾ] ಕೊರತೆಪಡುವನು.” (ಜ್ಞಾನೋಕ್ತಿ 21:17) ವಿನೋದಿಸುವುದು ತಪ್ಪಲ್ಲ, ಆದರೆ ಅದನ್ನು ಪ್ರೀತಿಸುವುದು ಅಥವಾ ಅದಕ್ಕೆ ಪ್ರಧಾನ ಮಹತ್ತ್ವವನ್ನು ಕೊಡುವುದು, ಆತ್ಮಿಕ ಕೊರತೆಗೆ ನಡಿಸುವುದು. ನಮ್ಮ ಆತ್ಮಿಕ ಹಸಿವು ಅನಿವಾರ್ಯವಾಗಿ ಕಡಮೆಯಾಗುವುದು, ಮತ್ತು ಸುವಾರ್ತೆಯನ್ನು ಸಾರುವುದಕ್ಕಾಗಿ ನಮ್ಮಲ್ಲಿ ಕಡಿಮೆ ಸಮಯವಿರುವುದು.
ಈ ಕಾರಣಕ್ಕಾಗಿ, ನಾವು “ಕ್ರಿಯೆಗೈಯಲು ಮಾನಸಿಕವಾಗಿ ಸಜ್ಜಾಗಿದ್ದು, ಪರಿಪೂರ್ಣವಾಗಿ ಆತ್ಮನಿಯಂತ್ರಣವುಳ್ಳವ”ರಾಗಿರುವಂತೆ ದೇವರ ವಾಕ್ಯವು ನಮಗೆ ಬುದ್ಧಿಹೇಳುತ್ತದೆ. (1 ಪೇತ್ರ 1:13, ದ ನ್ಯೂ ಇಂಗ್ಲಿಷ್ ಬೈಬಲ್) ನಮ್ಮ ವಿರಾಮ ಮತ್ತು ಮನೋರಂಜನೆಯ ಸಮಯವನ್ನು, ಯಾವುದು ಸಮಂಜಸವಾದ ಸಮಯವಾಗಿದೆಯೊ ಅಷ್ಟಕ್ಕೆ ಸೀಮಿತಗೊಳಿಸಲು ಆತ್ಮನಿಯಂತ್ರಣವು ಅಗತ್ಯ. ಕ್ರಿಯೆಗಾಗಿ ಸಜ್ಜಾಗಿರುವುದರ ಅರ್ಥ, ಆತ್ಮಿಕ ಚಟುವಟಿಕೆಗಾಗಿ—ಅದು ಅಭ್ಯಾಸ, ಕೂಟಗಳು ಅಥವಾ ಕ್ಷೇತ್ರ ಸೇವೆಯೇ ಆಗಿರಲಿ—ತಯಾರಾಗಿರುವುದೇ.
ಅಗತ್ಯವಿರುವ ವಿಶ್ರಾಮದ ಕುರಿತಾಗಿ ಏನು? ವಿರಮಿಸಲಿಕ್ಕಾಗಿ ನಾವು ಸಮಯವನ್ನು ತೆಗೆದುಕೊಳ್ಳುವಾಗ ನಮಗೆ ದೋಷಿಭಾವನೆಯಾಗಬೇಕೊ? ನಿಶ್ಚಯವಾಗಿಯೂ ಇಲ್ಲ. ವಿಶೇಷವಾಗಿ ಇಂದಿನ ಒತ್ತಡಭರಿತ ಲೋಕದಲ್ಲಿ ವಿಶ್ರಾಮವು ಅತ್ಯಾವಶ್ಯಕವಾಗಿದೆ. ಹಾಗಿದ್ದರೂ, ಸಮರ್ಪಿತ ಕ್ರೈಸ್ತರೋಪಾದಿ, ನಮ್ಮ ಜೀವಿತಗಳು ವಿರಾಮ ಮತ್ತು ಮನೋರಂಜನೆಯ ಮೇಲೆ ಕೇಂದ್ರೀಕರಿಸುವಂತೆ ನಾವು ಅನುಮತಿಸಲು ಸಾಧ್ಯವಿಲ್ಲ. ತೀರ ಹೆಚ್ಚಿನ ವಿರಾಮ ಮತ್ತು ಮನೋರಂಜನೆಯು, ಕ್ರಮೇಣವಾಗಿ ತೀರ ಕಡಿಮೆ ಅರ್ಥಭರಿತ ಚಟುವಟಿಕೆಯನ್ನು ಮಾಡುವಂತೆ ನಮ್ಮನ್ನು ಮೋಸದಿಂದ ನಡಿಸಬಹುದು. ಅದು ನಮ್ಮ ತುರ್ತುಪ್ರಜ್ಞೆಯನ್ನು ಕುಂದಿಸಬಲ್ಲದು, ಮತ್ತು ಸ್ವಲೋಲುಪತೆಯನ್ನೂ ಉತ್ತೇಜಿಸಬಹುದು. ಹಾಗಾದರೆ, ವಿಶ್ರಾಮದ ಕಡೆಗೆ ನಾವು ಒಂದು ಸಮತೆಯ ವೀಕ್ಷಣವನ್ನು ಹೇಗೆ ಹೊಂದಿರಸಾಧ್ಯವಿದೆ?
ಮಿತಿಮೀರಿ ದುಡಿಯುವ—ವಿಶೇಷವಾಗಿ ಐಹಿಕ ಕೆಲಸವು ಅನಗತ್ಯವಾಗಿರುವಲ್ಲಿ—ಬದಲಿಗೆ ಒಂದಿಷ್ಟು ವಿಶ್ರಾಮವನ್ನು ತೆಗೆದುಕೊಳ್ಳುವಂತೆ ಬೈಬಲ್ ಶಿಫಾರಸ್ಸು ಮಾಡುತ್ತದೆ. (ಪ್ರಸಂಗಿ 4:6) ಪುನಃ ಬಲವನ್ನು ಪಡೆದುಕೊಳ್ಳುವಂತೆ ವಿಶ್ರಾಮವು ನಮ್ಮ ದೇಹಗಳಿಗೆ ಸಹಾಯ ಮಾಡುತ್ತದಾದರೂ, ಆತ್ಮಿಕ ಶಕ್ತಿಯ ಮೂಲವು ದೇವರ ಕ್ರಿಯಾಶೀಲ ಶಕ್ತಿಯಾಗಿದೆ. (ಯೆಶಾಯ 40:29-31) ಈ ಪವಿತ್ರಾತ್ಮವನ್ನು ನಾವು ನಮ್ಮ ಕ್ರೈಸ್ತ ಚಟುವಟಿಕೆಗಳ ಸಂಬಂಧದಲ್ಲಿ ಪಡೆದುಕೊಳ್ಳುತ್ತೇವೆ. ವೈಯಕ್ತಿಕ ಅಧ್ಯಯನವು, ನಮ್ಮ ಹೃದಯಗಳನ್ನು ಪೋಷಿಸಿ, ಸರಿಯಾಗಿರುವ ಆಶೆಗಳನ್ನು ಕೆರಳಿಸುತ್ತದೆ. ಕೂಟಗಳಿಗೆ ಹಾಜರಾಗುವುದು, ನಮ್ಮ ಸೃಷ್ಟಿಕರ್ತನಿಗಾಗಿರುವ ಗಣ್ಯತೆಗೆ ಪುಷ್ಟಿ ಕೊಡುತ್ತದೆ. ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು, ಇತರರಿಗಾಗಿರುವ ಭಾವನೆಗಳನ್ನು ಬೆಳೆಸುತ್ತದೆ. (1 ಕೊರಿಂಥ 9:22, 23) ಪೌಲನು ವಾಸ್ತವಿಕವಾಗಿ ವಿವರಿಸಿದಂತೆ, “ಹೊರಗಣ ಮನುಷ್ಯನು ಸವೆತ ಬಿರಿತಗಳನ್ನು ಅನುಭವಿಸುತ್ತಾನೆಂಬುದು ನಿಶ್ಚಯವಾದರೂ, ಒಳಗಣ ಮನುಷ್ಯನು ಪ್ರತಿ ದಿನ ನವಶಕ್ತಿಯನ್ನು ಪಡೆದುಕೊಳ್ಳುತ್ತಾನೆ.”—2 ಕೊರಿಂಥ 4:16, ಫಿಲಿಪ್ಸ್.
ಆರು ಮಕ್ಕಳ ತಾಯಿ ಮತ್ತು ಒಬ್ಬ ಅವಿಶ್ವಾಸಿ ಗಂಡನ ಹೆಂಡತಿಯಾಗಿರುವ ಈಲಾನಾ, ತುಂಬ ಕಾರ್ಯಮಗ್ನ ಜೀವಿತವನ್ನು ನಡಿಸುತ್ತಾಳೆ. ಅವಳಿಗೆ ತನ್ನ ಸ್ವಂತ ಕುಟುಂಬ ಮತ್ತು ಇತರ ಹಲವಾರು ಸಂಬಂಧಿಕರ ಕಡೆಗೆ ಜವಾಬ್ದಾರಿಗಳಿವೆ. ಇದರ ಅರ್ಥ, ಅವಳು ಯಾವಾಗಲೂ ಕಾರ್ಯಮಗ್ನಳಾಗಿದ್ದು, ಅವಸರದಲ್ಲಿರುವಂತೆ ತೋರುತ್ತಾಳೆ. ಹಾಗಿದ್ದರೂ, ಸಾರುವ ಕಾರ್ಯದಲ್ಲಿ ಮತ್ತು ಕೂಟದ ತಯಾರಿಯಲ್ಲಿಯೂ ಅವಳೊಂದು ಗಮನಾರ್ಹವಾದ ಮಾದರಿಯನ್ನಿಡುತ್ತಾಳೆ. ಇಷ್ಟೊಂದು ಚಟುವಟಿಕೆಯನ್ನು ಅವಳು ಹೇಗೆ ನಿರ್ವಹಿಸಲು ಸಾಧ್ಯ?
“ಕೂಟಗಳು ಮತ್ತು ಕ್ಷೇತ್ರ ಸೇವೆಯು, ನಾನು ನನ್ನ ಇತರ ಜವಾಬ್ದಾರಿಗಳನ್ನು ನಿಭಾಯಿಸುವಂತೆ ನಿಜವಾಗಿಯೂ ಸಹಾಯ ಮಾಡುತ್ತದೆ,” ಎಂದು ಈಲಾನಾ ವಿವರಿಸುತ್ತಾಳೆ. “ಉದಾಹರಣೆಗಾಗಿ, ಸಾಕ್ಷಿಕಾರ್ಯದ ಅನಂತರ, ನನ್ನ ಮನೆಕೆಲಸವನ್ನು ಮಾಡುತ್ತಿರುವಾಗ ಯೋಚಿಸಲಿಕ್ಕಾಗಿ ನನಗೆ ತುಂಬ ವಿಷಯವಿರುತ್ತದೆ. ಅನೇಕವೇಳೆ ನಾನು ಮನೆಕೆಲಸವನ್ನು ಮಾಡುತ್ತಿರುವಾಗ ಹಾಡುತ್ತಿರುತ್ತೇನೆ. ಇನ್ನೊಂದು ಕಡೆಯಲ್ಲಿ, ನಾನೊಂದು ಕೂಟಕ್ಕೆ ತಪ್ಪಿಸಿಕೊಂಡಲ್ಲಿ ಅಥವಾ ಕಡಿಮೆ ಕ್ಷೇತ್ರ ಸೇವೆಯನ್ನು ಮಾಡಿರುವುದಾದರೆ, ಮನೆಯ ಚಿಕ್ಕಪುಟ್ಟ ಕೆಲಸಗಳೂ ಒಂದು ದೊಡ್ಡ ಪ್ರಯಾಸವಾಗಿ ಪರಿಣಮಿಸುತ್ತವೆ.”
ವಿರಾಮ ಮತ್ತು ಮನೋರಂಜನೆಗೆ ಕೊಡಲ್ಪಡುವ ಮಿತಿಮೀರಿದ ಮಹತ್ತ್ವಕ್ಕೆ ಎಷ್ಟು ವ್ಯತಿರಿಕ್ತ!
ಆತ್ಮಿಕ ಸೌಂದರ್ಯವು ಯೆಹೋವನನ್ನು ಪ್ರಸನ್ನಗೊಳಿಸುತ್ತದೆ
ದೈಹಿಕ ತೋರಿಕೆಯ ವಿಷಯದಲ್ಲಿ ಹೆಚ್ಚೆಚ್ಚಾಗಿ ಗೀಳುಹಿಡಿದಿರುವ ಒಂದು ಲೋಕದಲ್ಲಿ ನಾವು ಜೀವಿಸುತ್ತೇವೆ. ತಮ್ಮ ತೋರಿಕೆಗಳನ್ನು ಉತ್ತಮಗೊಳಿಸಲು ಮತ್ತು ವೃದ್ಧಾಪ್ಯದ ಪರಿಣಾಮಗಳನ್ನು ಕಡಿಮೆಗೊಳಿಸಲು ವಿನ್ಯಾಸಿಸಲ್ಪಟ್ಟಿರುವ ಚಿಕಿತ್ಸೆಗಳಿಗಾಗಿ ಜನರು ತುಂಬ ಹಣವನ್ನು ಖರ್ಚುಮಾಡುತ್ತಾರೆ. ಇವುಗಳಲ್ಲಿ, ಕೂದಲಿನ ಟ್ರಾನ್ಸ್ಪ್ಲ್ಯಾಂಟ್ ಮತ್ತು ಬಣ್ಣಹಚ್ಚುವಿಕೆ, ಸ್ತನದ ಇಂಪ್ಲ್ಯಾಂಟ್ಗಳು, ಮತ್ತು ಸೌಂದರ್ಯವರ್ಧಕ ಶಸ್ತ್ರಕ್ರಿಯೆಯು ಒಳಗೂಡಿರುತ್ತದೆ. ಕೋಟಿಗಟ್ಟಲೆ ಜನರು, ತೂಕವನ್ನು ಕಡಿಮೆಗೊಳಿಸುವ ಕೇಂದ್ರಗಳು, ವ್ಯಾಯಾಮ ಶಾಲೆಗಳು, ಮತ್ತು ಏರೋಬಿಕ್ ತರಗತಿಗಳಿಗೆ ಹೋಗುತ್ತಾರೆ ಅಥವಾ ಅವರು ವ್ಯಾಯಾಮದ ವಿಡಿಯೊಗಳನ್ನು ಮತ್ತು ಆಹಾರಪಥ್ಯದ ಪುಸ್ತಕಗಳನ್ನು ಖರೀದಿಸುತ್ತಾರೆ. ನಮ್ಮ ದೈಹಿಕ ತೋರಿಕೆಯೇ, ಸಂತೋಷಕ್ಕೆ ಪಾಸ್ಪೋರ್ಟ್ ಆಗಿದೆ, ನಮ್ಮ “ರೂಪ”ವೇ ಸರ್ವಸ್ವವೆಂದು ನಾವು ನಂಬುವಂತೆ ಲೋಕವು ಮಾಡುತ್ತದೆ.
ಅಮೆರಿಕದಲ್ಲಿ, ನ್ಯೂಸ್ವೀಕ್ ಪತ್ರಿಕೆಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂದು ಸಮೀಕ್ಷೆಯು ಕಂಡುಕೊಂಡದ್ದೇನೆಂದರೆ, ಅಮೆರಿಕದ ಬಿಳಿವರ್ಣದ ಹದಿವಯಸ್ಕರಲ್ಲಿ 90 ಪ್ರತಿಶತ ಮಂದಿ, “ತಮ್ಮ ದೈಹಿಕ ತೋರಿಕೆಯೊಂದಿಗೆ ಅತೃಪ್ತ”ರಾಗಿದ್ದರು. ಆದರ್ಶಮಯವಾದ ಅಂಗಸೌಷ್ಠವಕ್ಕಾಗಿರುವ ಹತಾಶೆಯ ಅನ್ವೇಷಣೆಯು, ನಮ್ಮ ಆತ್ಮಿಕತೆಯನ್ನು ಬಾಧಿಸಬಲ್ಲದು. ಒಬ್ಬ ಯುವ ಯೆಹೋವನ ಸಾಕ್ಷಿಯಾಗಿದ್ದ ಡೋರ, ಕೊಂಚಮಟ್ಟಿಗೆ ಹೆಚ್ಚು ತೂಕವುಳ್ಳವಳಾಗಿದ್ದದರಿಂದ, ತನ್ನ ದೈಹಿಕ ತೋರಿಕೆಯ ಕುರಿತು ಲಜ್ಜಿತಳಾಗಿದ್ದಳು. ಅವಳು ವಿವರಿಸುವುದು: “ನಾನು ಖರೀದಿಗಾಗಿ ಹೋಗುತ್ತಿದ್ದಾಗ, ನನ್ನ ಗಾತ್ರಕ್ಕೆ ತಕ್ಕದಾದ ಉಡುಪುಗಳನ್ನು ಕಂಡುಕೊಳ್ಳುವುದು ಕಷ್ಟಕರವಾಗಿತ್ತು. ಫ್ಯಾಷನ್ದಾಯಕ ಬಟ್ಟೆಗಳು ತೆಳ್ಳಗಿನ ಹದಿವಯಸ್ಕರಿಗಾಗಿ ಮಾತ್ರ ಮಾಡಲ್ಪಟ್ಟಿರುವಂತೆ ತೋರುತ್ತಿತ್ತು. ಇನ್ನೂ ಕೆಟ್ಟದ್ದೆಂದರೆ, ಜನರು ನನ್ನ ತೂಕದ ಕುರಿತಾಗಿ ಕಡೆಗಣಿಸುವ ಹೇಳಿಕೆಗಳನ್ನು ನುಡಿಯುತ್ತಿದ್ದರು. ಇದು ನನ್ನನ್ನು ತುಂಬ ಕ್ಷೋಭೆಗೊಳಿಸುತ್ತಿತ್ತು—ವಿಶೇಷವಾಗಿ ಆ ಹೇಳಿಕೆಗಳು ನನ್ನ ಆತ್ಮಿಕ ಸಹೋದರರು ಮತ್ತು ಸಹೋದರಿಯರಿಂದ ಬರುತ್ತಿದ್ದಾಗ.
“ಫಲಿತಾಂಶವಾಗಿ, ನನ್ನ ತೋರಿಕೆಯ ವಿಷಯವು ನನ್ನ ಮನಸ್ಸನ್ನು ಹೆಚ್ಚೆಚ್ಚಾಗಿ ಆಕ್ರಮಿಸಿತು. ಎಷ್ಟರ ಮಟ್ಟಿಗೆಂದರೆ, ಆತ್ಮಿಕ ಮೌಲ್ಯಗಳು ನನ್ನ ಜೀವನದಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಳ್ಳಲಾರಂಭಿಸಿದವು. ನನ್ನ ಸಂತೋಷವು ನನ್ನ ಸೊಂಟದ ಗಾತ್ರದ ಮೇಲೆ ಅವಲಂಬಿಸಿತ್ತೊ ಎಂಬಂತಿತ್ತು. ಹಲವಾರು ವರ್ಷಗಳು ದಾಟಿವೆ, ಮತ್ತು ಈಗ ನಾನು ಒಬ್ಬ ಸ್ತ್ರೀಯೋಪಾದಿ ಮತ್ತು ಕ್ರೈಸ್ತಳೋಪಾದಿ ಪ್ರೌಢಳಾಗಿರುವುದರಿಂದ, ನಾನು ವಿಷಯಗಳನ್ನು ವಿಭಿನ್ನವಾಗಿ ದೃಷ್ಟಿಸುತ್ತೇನೆ. ನಾನು ನನ್ನ ತೋರಿಕೆಯ ಕುರಿತಾಗಿ ಕಾಳಜಿ ವಹಿಸುತ್ತೇನಾದರೂ, ಆತ್ಮಿಕ ಸೌಂದರ್ಯವು ಹೆಚ್ಚು ಮಹತ್ವದ ಸಂಗತಿಯಾಗಿದೆಯೆಂದು ನಾನು ಗ್ರಹಿಸುತ್ತೇನೆ ಮತ್ತು ನನಗೆ ಅತಿ ಹೆಚ್ಚು ತೃಪ್ತಿಯನ್ನು ಕೊಡುವಂತಹದ್ದು ಅದೇ ಆಗಿದೆ. ಒಮ್ಮೆ ನಾನದನ್ನು ತಿಳಿದುಕೊಂಡ ಬಳಿಕ, ನಾನು ರಾಜ್ಯಾಭಿರುಚಿಗಳನ್ನು ತಕ್ಕದ್ದಾದ ಸ್ಥಾನದಲ್ಲಿ ಇಡಲು ಶಕ್ತಳಾದೆ.”
ಸಾರಳು, ಈ ಸಮತೆಯ ದೃಷ್ಟಿಕೋನವನ್ನು ಹೊಂದಿದ್ದ ಪ್ರಾಚೀನ ಸಮಯದ ಒಬ್ಬ ನಂಬಿಗಸ್ತ ಸ್ತ್ರೀಯಾಗಿದ್ದಳು. ಅವಳು 60ಕ್ಕಿಂತಲೂ ಹೆಚ್ಚು ವಯಸ್ಸಿನವಳಾಗಿದ್ದಾಗ ಅವಳಿಗಿದ್ದಂತಹ ದೈಹಿಕ ಸೌಂದರ್ಯದ ಕುರಿತಾಗಿ ಬೈಬಲ್ ಮಾತಾಡುತ್ತದಾದರೂ, ಅದು ಪ್ರಧಾನವಾಗಿ ಅವಳ ಉತ್ತಮ ಗುಣಗಳಿಗೆ—ಒಳಗಣ ಭೂಷಣಕ್ಕೆ—ಗಮನವನ್ನು ಸೆಳೆಯುತ್ತದೆ. (ಆದಿಕಾಂಡ 12:11; 1 ಪೇತ್ರ 3:4-6) ಅವಳು ಒಂದು ಕೋಮಲವಾದ ಮತ್ತು ಸೌಮ್ಯ ಮನೋವೃತ್ತಿಯನ್ನು ತೋರಿಸಿದಳು ಮತ್ತು ಅವಳು ತನ್ನ ಗಂಡನಿಗೆ ಅಧೀನತೆಯಿಂದ ವಿಧೇಯಳಾದಳು. ಇತರರು ತನ್ನನ್ನು ಹೇಗೆ ವೀಕ್ಷಿಸುತ್ತಾರೆಂಬುದರ ಕುರಿತಾಗಿ ಸಾರಳು ಅನುಚಿತವಾಗಿ ಚಿಂತಿತಳಾಗಿರಲಿಲ್ಲ. ಅವಳು ಒಂದು ಧನಿಕ ಕುಟುಂಬದಿಂದ ಬಂದಿದ್ದಳಾದರೂ, ಅವಳು 60ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಇಷ್ಟಪೂರ್ವಕವಾಗಿ ಗುಡಾರಗಳಲ್ಲಿ ಜೀವಿಸಿದಳು. ಅವಳು ತನ್ನ ಗಂಡನನ್ನು ದೀನಭಾವದಿಂದಲೂ ನಿಸ್ವಾರ್ಥಳಾಗಿಯೂ ಬೆಂಬಲಿಸಿದಳು; ಅವಳು ನಂಬಿಕೆಯ ಸ್ತ್ರೀಯಾಗಿದ್ದಳು. ಅವಳನ್ನು ನಿಜವಾಗಿಯೂ ಒಬ್ಬ ಸೌಂದರ್ಯವತಿಯನ್ನಾಗಿ ಮಾಡಿದಂತಹದ್ದು ಅದೇ ಆಗಿತ್ತು.—ಜ್ಞಾನೋಕ್ತಿ 31:30; ಇಬ್ರಿಯ 11:11.
ಕ್ರೈಸ್ತರೋಪಾದಿ, ನಾವು ನಮ್ಮ ಆತ್ಮಿಕ ಸೌಂದರ್ಯವನ್ನು ವರ್ಧಿಸುವುದರಲ್ಲಿ ಆಸಕ್ತರಾಗಿದ್ದೇವೆ. ಈ ಸೌಂದರ್ಯವು ಕ್ರಮವಾಗಿ ವಿಕಸಿಸಲ್ಪಡುವುದಾದರೆ, ಅಧಿಕವಾಗುತ್ತಾ ಬಾಳುವುದು. (ಕೊಲೊಸ್ಸೆ 1:9, 10) ಎರಡು ಮುಖ್ಯ ವಿಧಗಳಲ್ಲಿ ನಾವು ನಮ್ಮ ಆತ್ಮಿಕ ತೋರಿಕೆಯ ಕಾಳಜಿಯನ್ನು ವಹಿಸಬಲ್ಲೆವು.
ನಮ್ಮ ಜೀವರಕ್ಷಕ ಶುಶ್ರೂಷೆಯಲ್ಲಿ ನಾವು ಭಾಗವಹಿಸಿದಂತೆ, ನಾವು ಯೆಹೋವನ ದೃಷ್ಟಿಯಲ್ಲಿ ಹೆಚ್ಚು ಸುಂದರರಾಗುತ್ತೇವೆ. (ಯೆಶಾಯ 52:7; 2 ಕೊರಿಂಥ 3:18–14:2) ಇನ್ನೂ ಹೆಚ್ಚಾಗಿ, ನಾವು ಕ್ರೈಸ್ತ ಗುಣಗಳನ್ನು ಪ್ರದರ್ಶಿಸಲು ಕಲಿಯುತ್ತಿರುವಾಗ, ನಮ್ಮ ಸೌಂದರ್ಯವು ಗಾಢವಾಗುತ್ತದೆ. ನಮ್ಮ ಆತ್ಮಿಕ ಸೌಂದರ್ಯವನ್ನು ವರ್ಧಿಸಲಿಕ್ಕಾಗಿರುವ ಅವಕಾಶಗಳು ಹೇರಳವಾಗಿವೆ: “ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. . . . ಉಲ್ಲಾಸವಾಗಿರ್ರಿ. . . . ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ. . . . ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ. . . . ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:10-18) ಅಂತಹ ಮನೋಭಾವಗಳನ್ನು ಬೆಳೆಸಿಕೊಳ್ಳುವುದು, ದೇವರಿಗೂ ಜೊತೆ ಮಾನವರಿಗೂ ನಮ್ಮನ್ನು ಪ್ರಿಯರನ್ನಾಗಿ ಮಾಡುವುದು, ಮತ್ತು ನಮ್ಮ ಪಿತ್ರಾರ್ಜಿತ ಪಾಪಪೂರ್ಣ ಪ್ರವೃತ್ತಿಗಳ ಕುರೂಪವಾದ ತೋರಿಕೆಯನ್ನು ತಗ್ಗಿಸುವುದು.—ಗಲಾತ್ಯ 5:22, 23; 2 ಪೇತ್ರ 1:5-8.
ಲೋಕದ ಆತ್ಮವನ್ನು ನಾವು ಹೋರಾಡಸಾಧ್ಯವಿದೆ!
ಅನೇಕ ನವಿರಾದ ವಿಧಗಳಲ್ಲಿ, ಲೋಕದ ವಿಷಕಾರಿ ಆತ್ಮವು ನಮ್ಮ ಸಮಗ್ರತೆಯನ್ನು ದುರ್ಬಲಗೊಳಿಸಸಾಧ್ಯವಿದೆ. ಅದು, ನಾವು ಏನನ್ನು ಹೊಂದಿರುತ್ತೇವೊ ಅದರೊಂದಿಗೆ ಅತೃಪ್ತರಾಗುವಂತೆ ಮತ್ತು ದೇವರ ಅಭಿರುಚಿಗಳಿಗಿಂತ ನಮ್ಮ ಸ್ವಂತ ಅಗತ್ಯಗಳು ಮತ್ತು ಅಭಿರುಚಿಗಳಿಗೆ ಆದ್ಯತೆ ಕೊಡುವಂತೆ ನಮ್ಮನ್ನು ವ್ಯಾಕುಲಗೊಳಿಸಸಾಧ್ಯವಿದೆ. ಅಥವಾ ಅದು ವಿರಾಮ ಮತ್ತು ಮನೋರಂಜನೆ ಇಲ್ಲವೇ ದೈಹಿಕ ತೋರಿಕೆಗೆ ಅನುಚಿತವಾದ ಮಹತ್ತ್ವವನ್ನು ಕೊಡುತ್ತಾ, ದೇವರ ಯೋಚನೆಗಳಿಗೆ ಬದಲಾಗಿ ಮನುಷ್ಯರ ಯೋಚನೆಗಳನ್ನು ಆಲೋಚಿಸುವಂತೆ ನಮ್ಮನ್ನು ನಡಿಸಬಹುದು.—ಮತ್ತಾಯ 16:21-23ನ್ನು ಹೋಲಿಸಿರಿ.
ಸೈತಾನನು ನಮ್ಮ ಆತ್ಮಿಕತೆಯನ್ನು ನಾಶಗೊಳಿಸಲು ದೃಢಸಂಕಲ್ಪವುಳ್ಳವನಾಗಿದ್ದಾನೆ, ಮತ್ತು ಲೋಕದ ಆತ್ಮವು ಅವನ ಮುಖ್ಯ ಶಸ್ತ್ರಗಳಲ್ಲಿ ಒಂದಾಗಿದೆ. ಪಿಶಾಚನು ತನ್ನ ತಂತ್ರಗಳನ್ನು, ಒಂದು ಘರ್ಜಿಸುವ ಸಿಂಹದಿಂದ ಒಂದು ಮುಂಜಾಗ್ರತೆಯ ಸರ್ಪದ ತಂತ್ರಗಳಿಗೆ ಬದಲಾಯಿಸಬಲ್ಲನೆಂಬುದನ್ನು ಜ್ಞಾಪಕದಲ್ಲಿಡಿರಿ. (ಆದಿಕಾಂಡ 3:1; 1 ಪೇತ್ರ 5:8) ಆಗಾಗ್ಗೆ, ಲೋಕವು ಒಬ್ಬ ಕ್ರೈಸ್ತನನ್ನು ಪಾಶವೀಯ ಹಿಂಸೆಯಿಂದ ಜಯಿಸುತ್ತದೆ, ಆದರೆ ಅನೇಕ ವೇಳೆ ಅದು ಅವನಲ್ಲಿ ನಿಧಾನವಾಗಿ ವಿಷವನ್ನು ಹರಡಿಸುತ್ತದೆ. ಪೌಲನು ಈ ಎರಡನೆಯ ಅಪಾಯದ ಕುರಿತು ಹೆಚ್ಚು ಚಿಂತಿತನಾಗಿದ್ದನು: “ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.”—2 ಕೊರಿಂಥ 11:3.
ಸರ್ಪನ ಕುಯುಕ್ತಿಯಿಂದ ನಮ್ಮನ್ನೇ ಸಂರಕ್ಷಿಸಿಕೊಳ್ಳಲು, ‘ಲೋಕದಿಂದ ಹುಟ್ಟುವ’ ಪ್ರಚಾರಕಾರ್ಯವನ್ನು ಗುರುತಿಸಿ, ಅನಂತರ ಅದನ್ನು ದೃಢವಾಗಿ ತಿರಸ್ಕರಿಸುವ ಅಗತ್ಯವಿದೆ. (1 ಯೋಹಾನ 2:16) ಲೌಕಿಕ ಯೋಚನಾ ರೀತಿಯು ಹಾನಿರಹಿತವಾಗಿದೆಯೆಂದು ನಂಬುವಂತೆ ನಾವು ಮೋಸಗೊಳಿಸಲ್ಪಡಬಾರದು. ಸೈತಾನನ ವ್ಯವಸ್ಥೆಯ ವಿಷಮಯ ಗಾಳಿಯು, ದಿಗಿಲುಗೊಳಿಸುವ ಮಟ್ಟಗಳನ್ನು ತಲಪಿದೆ.—ಎಫೆಸ 2:2.
ಒಮ್ಮೆ ಲೌಕಿಕ ಆಲೋಚನೆಯು ಗುರುತಿಸಲ್ಪಟ್ಟ ನಂತರ, ಯೆಹೋವನ ಶುದ್ಧ ಬೋಧನೆಯನ್ನು ನಾವು ನಮ್ಮ ಹೃದಮನಗಳಲ್ಲಿ ತುಂಬಿಸಿಕೊಳ್ಳುವ ಮೂಲಕ, ಅದರ ವಿರುದ್ಧ ಹೋರಾಡಬಲ್ಲೆವು. ರಾಜ ದಾವೀದನಂತೆ ನಾವು ಹೀಗೆ ಹೇಳೋಣ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು.”—ಕೀರ್ತನೆ 25:4, 5.
[ಪಾದಟಿಪ್ಪಣಿ]
a ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.
[ಪುಟ 26 ರಲ್ಲಿರುವ ಚಿತ್ರ]
ಸುಖಸೌಕರ್ಯಗಳಿಂದ ಕೂಡಿದ ಒಂದು ಜೀವನ ಶೈಲಿಯನ್ನು ಬೆನ್ನಟ್ಟುವುದು, ಆತ್ಮಿಕ ಗುರಿಗಳಿಂದ ನಮ್ಮ ದಿಕ್ಕನ್ನು ಬದಲಾಯಿಸಸಾಧ್ಯವಿದೆ