ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
2 ಹಾಗಾಗಿ ಸಹೋದರರೇ, ನಾನು ದೇವರ ಪವಿತ್ರ ರಹಸ್ಯವನ್ನ ನಿಮಗೆ ಹೇಳೋಕೆ ಬಂದಾಗ ದೊಡ್ಡ ದೊಡ್ಡ ಪದಗಳನ್ನ ಬಳಸಲಿಲ್ಲ+ ಅಥವಾ ನನಗೆ ಎಷ್ಟು ಜ್ಞಾನ ಇದೆ ಅಂತ ತೋರಿಸ್ಕೊಳ್ಳಲಿಲ್ಲ.+ 2 ನಾನು ನಿಮ್ಮ ಜೊತೆ ಇದ್ದಾಗ ಯೇಸು ಕ್ರಿಸ್ತನ ವಿಷ್ಯವನ್ನ ಮತ್ತು ಆತನು ಕಂಬದ ಮೇಲೆ ಸತ್ತ ವಿಷ್ಯ ಬಿಟ್ಟು+ ಬೇರೇನೂ ಮಾತಾಡಬಾರದು ಅಂತ ತೀರ್ಮಾನ ಮಾಡಿದ್ದೆ. 3 ನಾನು ನಿಮ್ಮ ಹತ್ರ ಬಂದಾಗ ನನಗೆ ಅಷ್ಟು ಶಕ್ತಿ ಇರಲಿಲ್ಲ, ಭಯಪಡ್ತಿದ್ದೆ, ತುಂಬ ನಡುಗ್ತಿದ್ದೆ. 4 ನಾನು ಮಾತಾಡುವಾಗ, ಕಲಿಸುವಾಗ ಜ್ಞಾನಿಗಳ ತರ ನಿಮ್ಮನ್ನ ಒಪ್ಪಿಸೋ ಹಾಗೆ ಮಾತಾಡಲಿಲ್ಲ, ಬದಲಿಗೆ ನನ್ನ ಮಾತು ಪವಿತ್ರ ಶಕ್ತಿಯ ಬಲವನ್ನ ತೋರಿಸ್ಕೊಡ್ತು.+ 5 ನಿಮ್ಮ ನಂಬಿಕೆಗೆ ಮನುಷ್ಯರ ವಿವೇಕ ಅಲ್ಲ, ದೇವರ ಶಕ್ತಿನೇ ಆಧಾರವಾಗಿ ಇರಬೇಕಂತ ನಾನು ಹಾಗೆ ಮಾಡ್ದೆ.
6 ನಾವೀಗ ಪ್ರೌಢ ವ್ಯಕ್ತಿಗಳಲ್ಲಿರೋ ವಿವೇಕದ ಬಗ್ಗೆ ಮಾತಾಡ್ತಾ ಇದ್ದೀವಿ.+ ಈ ಲೋಕದ* ವಿವೇಕದ ಬಗ್ಗೆ ಅಥವಾ ನಾಶ ಆಗೋ ಅದ್ರ ಅಧಿಪತಿಗಳ ವಿವೇಕದ ಬಗ್ಗೆ ಮಾತಾಡ್ತಿಲ್ಲ.+ 7 ಪವಿತ್ರ ರಹಸ್ಯದಿಂದ ಗೊತ್ತಾಗೋ ದೇವರ ವಿವೇಕದ ಬಗ್ಗೆ ಮಾತಾಡ್ತಾ ಇದ್ದೀವಿ.+ ಈ ವಿವೇಕ ಮರೆಯಾಗಿತ್ತು. ನಮಗೆ ಗೌರವ ಸಿಗಬೇಕು ಅನ್ನೋ ಉದ್ದೇಶದಿಂದ ದೇವರು ಈ ಲೋಕ ಹುಟ್ಟೋ ಮುಂಚೆನೇ ಅದನ್ನ ತೀರ್ಮಾನ ಮಾಡಿದ್ದನು. 8 ಈ ವಿವೇಕವನ್ನ ಈ ಲೋಕದ* ಅಧಿಪತಿಗಳಲ್ಲಿ ಒಬ್ರೂ ತಿಳ್ಕೊಳ್ಳಲಿಲ್ಲ.+ ತಿಳ್ಕೊಂಡಿದ್ರೆ ಮಹಿಮೆಯಿಂದ ತುಂಬಿರೋ ಪ್ರಭು ಯೇಸುವನ್ನ ಸಾಯಿಸ್ತಿರಲಿಲ್ಲ. 9 ಇದು, “ತನ್ನನ್ನ ಪ್ರೀತಿಸೋ ಜನ್ರಿಗಾಗಿ ದೇವರು ಸಿದ್ಧಮಾಡಿದ್ದ ವಿಷ್ಯಗಳನ್ನ ಯಾರೂ ನೋಡಲಿಲ್ಲ, ಕೇಳಿಸ್ಕೊಳಿಲ್ಲ, ಮನಸ್ಸಿಗೆ ತಗೊಳಿಲ್ಲ” ಅಂತ ಬರೆದಿರೋ ಹಾಗಾಯ್ತು.+ 10 ದೇವರು ಆ ವಿಷ್ಯಗಳನ್ನ ತನ್ನ ಪವಿತ್ರಶಕ್ತಿಯಿಂದ+ ನಮಗೆ ಹೇಳಿದ್ದಾನೆ.+ ಯಾಕಂದ್ರೆ ಪವಿತ್ರಶಕ್ತಿ ಎಲ್ಲ ವಿಷ್ಯಗಳನ್ನ, ಅದ್ರಲ್ಲೂ ದೇವರ ಬಗ್ಗೆ ಇರೋ ಗಾಢವಾದ ವಿಷ್ಯಗಳನ್ನ ಹೇಳುತ್ತೆ.*+
11 ಒಬ್ಬನ ಯೋಚ್ನೆಗಳು ಏನಂತ ಆ ವ್ಯಕ್ತಿಗೆ ಬಿಟ್ಟು ಬೇರೆ ಯಾರಿಗಾದ್ರೂ ಗೊತ್ತಾಗುತ್ತಾ? ಅದೇ ತರ ದೇವರ ಯೋಚ್ನೆಗಳು ಏನಂತ ಆತನ ಪವಿತ್ರಶಕ್ತಿಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಾಗಲ್ಲ. 12 ನಾವು ಲೋಕದ ಯೋಚ್ನೆಯನ್ನಲ್ಲ, ದೇವರ ಪವಿತ್ರಶಕ್ತಿಯನ್ನ ಪಡ್ಕೊಂಡಿದ್ದೀವಿ.+ ಹಾಗಾಗಿ ನಮಗೆ ದೇವರು ದಯೆಯಿಂದ ಹೇಳಿದ ವಿಷ್ಯಗಳನ್ನ ಅರ್ಥ ಮಾಡ್ಕೊಂಡಿದ್ದೀವಿ. 13 ಅಷ್ಟೇ ಅಲ್ಲ ನಾವು ಆ ವಿಷ್ಯಗಳನ್ನ ಬೇರೆಯವ್ರಿಗೆ ಹೇಳ್ತೀವಿ, ಜ್ಞಾನಿಗಳಿಂದ ಕಲಿತ ಮಾತುಗಳಿಂದ ಅಲ್ಲ,+ ಪವಿತ್ರಶಕ್ತಿಯಿಂದ ಕಲಿತ ಮಾತುಗಳಿಂದ ಅವನ್ನ ಹೇಳ್ತೀವಿ.+ ಹಾಗಾಗಿ ನಾವು ದೇವರ ಪವಿತ್ರಶಕ್ತಿಯಿಂದ ಕಲಿತ ಮಾತುಗಳಿಂದ ದೇವರ ವಿಷ್ಯಗಳನ್ನ ವಿವರಿಸ್ತೀವಿ.
14 ದೇಹದ ಆಸೆಗಳ ಪ್ರಕಾರ ನಡಿಯುವವನು ದೇವರ ಪವಿತ್ರಶಕ್ತಿ ಹೇಳೋ ವಿಷ್ಯಗಳನ್ನ ಒಪ್ಪಲ್ಲ. ಯಾಕಂದ್ರೆ ಅವನ್ನ ಅವನು ಹುಚ್ಚುಮಾತಾಗಿ ನೋಡ್ತಾನೆ. ಅವನ್ನ ಅವನು ತಿಳ್ಕೊಳ್ಳೋಕೆ ಆಗೋದೇ ಇಲ್ಲ. ಯಾಕಂದ್ರೆ ದೇವರ ಪವಿತ್ರಶಕ್ತಿಯ ಸಹಾಯದಿಂದ ಮಾತ್ರ ಅವನ್ನ ಪರೀಕ್ಷಿಸೋಕೆ ಆಗುತ್ತೆ. 15 ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಡಿಯುವವನು ಎಲ್ಲವನ್ನೂ ಪರೀಕ್ಷಿಸ್ತಾನೆ.+ ಆದ್ರೆ ಅವನನ್ನ ಬೇರೆ ಯಾವ ಮನುಷ್ಯನೂ ಪರೀಕ್ಷಿಸೋಕೆ ಆಗಲ್ಲ. 16 ಯಾಕಂದ್ರೆ “ಯೆಹೋವನಿಗೇ* ಕಲಿಸೋ ಹಾಗೆ ಆತನ ಮನಸ್ಸನ್ನ ಯಾರು ತಿಳ್ಕೊಂಡಿದ್ದಾರೆ?”+ ಆದ್ರೆ ನಾವು ಕ್ರಿಸ್ತನ ಮನಸ್ಸನ್ನ ತಿಳ್ಕೊಂಡಿದ್ದೀವಿ.+