ಕ್ರೈಸ್ತರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತಾರೆ
“ದೇವರು ಆತ್ಮಸ್ವರೂಪಿ, ಮತ್ತು ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು.”—ಯೋಹಾನ 4:24, NW.
1. ಯಾವ ರೀತಿಯ ಆರಾಧನೆಯು ದೇವರನ್ನು ಮೆಚ್ಚಿಸುತ್ತದೆ?
ಯೆಹೋವನ ಏಕಜಾತ ಪುತ್ರನಾದ ಯೇಸು ಕ್ರಿಸ್ತನು, ತನ್ನ ತಂದೆಯು ಮೆಚ್ಚುವ ಆರಾಧನೆ ಯಾವುದೆಂಬ ವಿಷಯದಲ್ಲಿ ತನ್ನ ಕೇಳುಗರ ಮನಸ್ಸಿನಲ್ಲಿ ಯಾವುದೇ ಸಂದೇಹವನ್ನು ಬಿಡಲಿಲ್ಲ. ಸುಖರ್ ಎಂಬ ಊರಿನ ಬಾವಿಯ ಬಳಿ ಅವನು ಸಮಾರ್ಯದ ಸ್ತ್ರೀಯೊಬ್ಬಳಿಗೆ ಹೃದಯೋಲ್ಲಾಸಗೊಳಿಸುವ ಸಾಕ್ಷಿಯನ್ನು ನೀಡುತ್ತಿದ್ದಾಗ ಯೇಸು ಹೇಳಿದ್ದು: “ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ. ಆದದರಿಂದ ನಾವು ಅರಿತಿರುವದನ್ನೇ ಆರಾಧಿಸುವವರಾಗಿದ್ದೇವೆ; ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು. ಅದಿರಲಿ; ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ [“ಆತ್ಮದಿಂದಲೂ ಸತ್ಯದಿಂದಲೂ,” NW] ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ [“ಆತ್ಮದಿಂದಲೂ ಸತ್ಯದಿಂದಲೂ,” NW] ಆರಾಧಿಸಬೇಕು.” (ಯೋಹಾನ 4:22-24) ನಾವು ಆ ಮಾತುಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
2. ಸಮಾರ್ಯದವರ ಆರಾಧನೆಯು ಯಾವುದರ ಮೇಲೆ ಆಧಾರಿತವಾಗಿತ್ತು?
2 ಸಮಾರ್ಯದವರಲ್ಲಿ ತಪ್ಪಾದ ಧಾರ್ಮಿಕ ಅಭಿಪ್ರಾಯಗಳಿದ್ದವು. ಪವಿತ್ರ ಶಾಸ್ತ್ರದ ಆರಂಭದ ಐದು ಪುಸ್ತಕಗಳನ್ನು ಮಾತ್ರ ಅವರು ಪ್ರೇರಿತವಾದವುಗಳೆಂದು ಅಂಗೀಕರಿಸಿದರು. ಅದೂ, ಸಮಾರಿಟನ್ ಪೆಂಟಟ್ಯೂಕ್ ಎಂದು ಕರೆಯಲ್ಪಡುವ ಅವರ ಸ್ವಂತ ಪರಿಷ್ಕೃತ ಭಾಷಾಂತರವನ್ನು ಮಾತ್ರ ಅಂಗೀಕರಿಸುತ್ತಿದ್ದರು. ಸಮಾರ್ಯದವರು ದೇವರನ್ನು ನಿಜವಾಗಿಯೂ ತಿಳಿದುಕೊಂಡಿರಲಿಲ್ಲವಾದರೂ, ಯೆಹೂದ್ಯರಿಗೆ ಶಾಸ್ತ್ರೀಯ ಜ್ಞಾನವು ಒಪ್ಪಿಸಲ್ಪಟ್ಟಿತ್ತು. (ರೋಮಾಪುರ 3:1, 2) ನಂಬಿಗಸ್ತ ಯೆಹೂದ್ಯರಿಗೂ ಇತರರಿಗೂ ಯೆಹೋವನ ಅನುಗ್ರಹಪಾತ್ರರಾಗುವ ಸಾಧ್ಯತೆಯಿತ್ತು. ಆದರೆ ಇದು ಅವರಿಂದ ಏನನ್ನು ಅಪೇಕ್ಷಿಸುವುದು?
3. ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸಬೇಕಾದರೆ ಏನು ಅಗತ್ಯ?
3 ಯೆಹೋವನನ್ನು ಮೆಚ್ಚಿಸಬೇಕಾದರೆ ಹಿಂದಿನ ಕಾಲದ ಯೆಹೂದ್ಯರೂ ಸಮಾರ್ಯದವರೂ ಇತರರೂ ಏನು ಮಾಡಬೇಕಾಗಿತ್ತು? ಅವರು ಆತನನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸಬೇಕಾಗಿತ್ತು. ನಾವೂ ಹಾಗೆಯೇ ಮಾಡತಕ್ಕದ್ದು. ದೇವರಿಗೆ ನಾವು ಸಲ್ಲಿಸುವ ಸೇವೆಯು ಹುರುಪಿನದ್ದು ಅಥವಾ ಉತ್ಸಾಹದ್ದು ಮತ್ತು ಪ್ರೀತಿ ಹಾಗೂ ನಂಬಿಕೆಯ ಹೃದಯದಿಂದ ಪ್ರಚೋದಿತವಾದದ್ದು ಆಗಿರಬೇಕಾದರೂ, ಆತ್ಮದಿಂದ ದೇವರನ್ನು ಆರಾಧಿಸಬೇಕಾದರೆ ಆತನ ಪವಿತ್ರಾತ್ಮವು ನಮ್ಮಲ್ಲಿದ್ದು, ಅದು ನಮ್ಮನ್ನು ನಡೆಸುವಂತೆ ನಾವು ಬಿಡಬೇಕು. ದೇವರ ವಾಕ್ಯದ ಅಧ್ಯಯನ ಮತ್ತು ಅನ್ವಯದ ಫಲಿತಾಂಶವಾಗಿ, ನಮ್ಮ ಆತ್ಮ ಅಥವಾ ಮನೋಪ್ರವೃತ್ತಿಯು ಆತನ ಆತ್ಮಕ್ಕೆ ಇಲ್ಲವೆ ಮನೋಪ್ರವೃತ್ತಿಗೆ ಹೊಂದಿಕೊಂಡಿರುವುದು. (1 ಕೊರಿಂಥ 2:8-12) ನಮ್ಮ ಆರಾಧನೆಯು ಯೆಹೋವನಿಗೆ ಅಂಗೀಕಾರಾರ್ಹವಾಗಿರಬೇಕಾದರೆ, ಅದು ಆತನಿಗೆ ಸತ್ಯದಿಂದಲೂ ಸಲ್ಲಿಸಲ್ಪಡಬೇಕು. ಬೈಬಲು ಆತನ ವಿಷಯದಲ್ಲಿ ಏನು ತಿಳಿಸುತ್ತದೊ ಅದಕ್ಕೆ ಮತ್ತು ಆತನ ಉದ್ದೇಶಗಳಿಗೆ ಅದು ಹೊಂದಿಕೆಯಲ್ಲಿರತಕ್ಕದ್ದು.
ಸತ್ಯವನ್ನು ಕಂಡುಹಿಡಿಯಸಾಧ್ಯವಿದೆ
4. ಕೆಲವರು ಸತ್ಯವನ್ನು ಹೇಗೆ ವೀಕ್ಷಿಸುತ್ತಾರೆ?
4 ಸಂಪೂರ್ಣ ಸತ್ಯವು ಮಾನವಕುಲಕ್ಕೆ ನಿಲುಕದ ಸಂಗತಿಯೆಂಬ ಅಭಿಪ್ರಾಯವನ್ನು ತತ್ತ್ವಜ್ಞಾನದ ಕೆಲವು ವಿದ್ಯಾರ್ಥಿಗಳು ಬೆಳೆಸಿಕೊಂಡಿದ್ದಾರೆ. ಸ್ವೀಡಿಶ್ ಲೇಖಕ ಆಲ್ಫ್ ಆಲ್ಬರ್ಗ್ ಬರೆದುದು: “ಅನೇಕ ತಾತ್ತ್ವಿಕ ಪ್ರಶ್ನೆಗಳು ಎಂಥವುಗಳೆಂದರೆ, ಅವುಗಳಿಗೆ ಒಂದು ನಿಶ್ಚಿತ ಉತ್ತರವನ್ನು ಕೊಡಲಾಗುವುದಿಲ್ಲ.” ಕೆಲವರು ಕೇವಲ ತುಲನಾತ್ಮಕವಾದ ಸತ್ಯವಿದೆ ಎಂದು ಹೇಳುತ್ತಾರಾದರೂ, ಅದು ನಿಜವೊ? ಯೇಸು ಕ್ರಿಸ್ತನಿಗನುಸಾರ ಇದು ನಿಜವಲ್ಲ.
5. ಯೇಸು ಈ ಲೋಕಕ್ಕೆ ಬಂದದ್ದೇಕೆ?
5 ಮುಂದೆ ಹೇಳಿರುವ ದೃಶ್ಯವನ್ನು ನಾವು ಪ್ರೇಕ್ಷಿಸುತ್ತಿದ್ದೇವೆಂದು ಭಾವಿಸೋಣ: ಸಾ.ಶ. 33ರ ಆರಂಭದ ಸಮಯ. ಯೇಸು ರೋಮನ್ ರಾಜ್ಯಪಾಲ ಪೊಂತ್ಯ ಪಿಲಾತನ ಮುಂದೆ ನಿಂತಿದ್ದಾನೆ. “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ,” ಎಂದು ಯೇಸು ಪಿಲಾತನಿಗೆ ಹೇಳುತ್ತಾನೆ. ಆಗ ಪಿಲಾತನು, “ಸತ್ಯವಂದರೇನು?” ಎಂದು ಪ್ರಶ್ನಿಸುತ್ತಾನಾದರೂ ಯೇಸುವಿನ ಉತ್ತರಕ್ಕಾಗಿ ಅವನು ಕಾಯುವುದಿಲ್ಲ.—ಯೋಹಾನ 18:36-38.
6. (ಎ) “ಸತ್ಯ”ದ ಅರ್ಥವನ್ನು ಹೇಗೆ ನಿರೂಪಿಸಲಾಗಿದೆ? (ಬಿ) ಯೇಸು ತನ್ನ ಶಿಷ್ಯರಿಗೆ ಯಾವ ಆದೇಶವನ್ನು ಕೊಟ್ಟನು?
6 “ಸತ್ಯ”ವನ್ನು “ವಾಸ್ತವ ವಿಷಯಗಳ, ಘಟನೆಗಳ ಮತ್ತು ನಿಜತ್ವಗಳ ಸಂಗ್ರಹ” ಎಂದು ನಿರೂಪಿಸಲಾಗಿದೆ. (ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೇಟ್ ಡಿಕ್ಷನೆರಿ) ಆದರೆ ಯೇಸು ಸಾಮಾನ್ಯಾರ್ಥದ ಸತ್ಯದ ಬಗ್ಗೆ ಸಾಕ್ಷಿಕೊಡುತ್ತಾ ಮಾತಾಡಿದನೊ? ಇಲ್ಲ. ಅವನ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಸತ್ಯವಿತ್ತು. ಅಂತಹ ಸತ್ಯವನ್ನು ಪ್ರಕಟಿಸಲು ಅವನು ತನ್ನ ಶಿಷ್ಯರಿಗೆ ಆದೇಶ ನೀಡುತ್ತಾ ಹೇಳಿದ್ದು: “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಯೇಸುವಿನ ನಿಜ ಶಿಷ್ಯರು, ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಮೊದಲು “ಸುವಾರ್ತೆಯ ಸತ್ಯಾರ್ಥ”ವನ್ನು ಪ್ರಕಟಿಸಬೇಕಾಗಿತ್ತು. (ಮತ್ತಾಯ 24:3; ಗಲಾತ್ಯ 2:14) ಇದು, “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು,” ಎಂಬ ಯೇಸುವಿನ ಮಾತುಗಳ ನೆರವೇರಿಕೆಯಾಗಿರುವುದು. (ಮತ್ತಾಯ 24:14) ಆದುದರಿಂದ, ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಎಲ್ಲಾ ಜನಾಂಗಗಳಿಗೆ ಸತ್ಯವನ್ನು ಬೋಧಿಸುತ್ತಿರುವವರನ್ನು ನಾವು ಗುರುತಿಸುವುದು ಅತ್ಯಾವಶ್ಯಕವಾಗಿದೆ.
ನಾವು ಸತ್ಯವನ್ನು ಹೇಗೆ ಕಲಿಯಬಲ್ಲೆವು?
7. ಯೆಹೋವನು ಸತ್ಯದ ಮೂಲನೆಂಬುದನ್ನು ನೀವು ಹೇಗೆ ರುಜುಪಡಿಸುವಿರಿ?
7 ಯೆಹೋವನೇ ಆತ್ಮಿಕ ಸತ್ಯದ ಮೂಲನು. ಕೀರ್ತನೆಗಾರನಾದ ದಾವೀದನು ಯೆಹೋವನನ್ನು “ಸತ್ಯದ ದೇವರು” ಎಂದು ಕರೆದನು. (ಕೀರ್ತನೆ 31:5, NW; ಕೀರ್ತನೆ 43:3) ಯೇಸು ತನ್ನ ತಂದೆಯ ಮಾತು ಸತ್ಯವೆಂಬುದನ್ನು ಒಪ್ಪಿಕೊಂಡು, “ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ” ಎಂದೂ ತಿಳಿಯಪಡಿಸಿದನು. (ಯೋಹಾನ 6:45; 17:17; ಯೆಶಾಯ 54:13) ಆದುದರಿಂದ, ಸತ್ಯಕ್ಕಾಗಿ ಹುಡುಕುವವರು ಮಹಾ ಉಪದೇಶಕನಾದ ಯೆಹೋವನಿಂದಲೇ ಬೋಧಿಸಲ್ಪಡಬೇಕೆಂಬುದು ಸುವ್ಯಕ್ತ. (ಯೆಶಾಯ 30:20, 21, NW) ಸತ್ಯಾನ್ವೇಷಕರು “ದೈವಜ್ಞಾನವನ್ನು” ಸಂಪಾದಿಸಿಕೊಳ್ಳುವುದು ಆವಶ್ಯಕ. (ಜ್ಞಾನೋಕ್ತಿ 2:5) ಮತ್ತು ಯೆಹೋವನು ಪ್ರೀತಿಪೂರ್ವಕವಾಗಿ ವಿವಿಧ ವಿಧಗಳಲ್ಲಿ ಸತ್ಯವನ್ನು ಕಲಿಸಿರುತ್ತಾನೆ ಇಲ್ಲವೆ ತಿಳಿಯಪಡಿಸಿದ್ದಾನೆ.
8. ದೇವರು ಸತ್ಯವನ್ನು ಯಾವ ವಿಧಗಳಲ್ಲಿ ಕಲಿಸಿದ್ದಾನೆ ಅಥವಾ ರವಾನಿಸಿದ್ದಾನೆ?
8 ಉದಾಹರಣೆಗೆ, ದೇವರು ಧರ್ಮಶಾಸ್ತ್ರವನ್ನು ದೇವದೂತರ ಮುಖೇನ ಇಸ್ರಾಯೇಲ್ಯರಿಗೆ ರವಾನಿಸಿದನು. (ಗಲಾತ್ಯ 3:19) ಸ್ವಪ್ನಗಳ ಮೂಲಕ ಆತನು ಮೂಲಪಿತೃಗಳಾದ ಅಬ್ರಹಾಮ ಮತ್ತು ಯಾಕೋಬರಿಗೆ ಆಶೀರ್ವಾದಗಳನ್ನು ವಾಗ್ದಾನಿಸಿದನು. (ಆದಿಕಾಂಡ 15:12-16; 28:10-19) ದೇವರು ಸ್ವರ್ಗದಿಂದ ಮಾತಾಡಿದ್ದೂ ಉಂಟು. ಉದಾಹರಣೆಗೆ, ಯೇಸುವಿಗೆ ದೀಕ್ಷಾಸ್ನಾನವಾದಾಗ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ರೋಮಾಂಚಕವಾದ ಮಾತುಗಳು ಕೇಳಿಬಂದವು. (ಮತ್ತಾಯ 3:17) ಬೈಬಲ್ ಲೇಖಕರನ್ನು ಪ್ರೇರಿಸುವ ಮೂಲಕ ದೇವರು ಸತ್ಯವನ್ನು ರವಾನಿಸಿದನೆಂಬುದಕ್ಕೂ ನಾವು ಆತನಿಗೆ ಕೃತಜ್ಞರಾಗಿರಬಲ್ಲೆವು. (2 ತಿಮೊಥೆಯ 3:16, 17) ಹೀಗೆ, ದೇವರ ವಾಕ್ಯದಿಂದ ಕಲಿಯುವ ಮೂಲಕ, ನಮಗೆ “ಸತ್ಯದ ಮೇಲೆ ನಂಬಿಕೆ” ಹುಟ್ಟಬಲ್ಲದು.—2 ಥೆಸಲೊನೀಕ 2:13.
ಸತ್ಯವೂ ದೇವರ ಕುಮಾರನೂ
9. ಸತ್ಯವನ್ನು ತಿಳಿಯಪಡಿಸಲಿಕ್ಕಾಗಿ ದೇವರು ತನ್ನ ಮಗನನ್ನು ಹೇಗೆ ಉಪಯೋಗಿಸಿದ್ದಾನೆ?
9 ಮಾನವಕುಲಕ್ಕೆ ಸತ್ಯವನ್ನು ಬೋಧಿಸಲು ದೇವರು ವಿಶೇಷವಾಗಿ ತನ್ನ ಕುಮಾರನಾದ ಯೇಸು ಕ್ರಿಸ್ತನನ್ನು ಉಪಯೋಗಿಸಿದ್ದಾನೆ. (ಇಬ್ರಿಯ 1:1-3) ವಾಸ್ತವವೇನಂದರೆ, ಆ ಹಿಂದೆ ಯಾವನೂ ಮಾತಾಡಿದ್ದಿರದಂಥ ರೀತಿಯಲ್ಲಿ ಯೇಸು ಸತ್ಯದ ಕುರಿತು ಮಾತಾಡಿದನು. (ಯೋಹಾನ 7:46) ಅವನು ಸ್ವರ್ಗಕ್ಕೇರಿ ಹೋದ ಬಳಿಕವೂ ತನ್ನ ತಂದೆಯಿಂದ ಕಲಿತ ಸತ್ಯವನ್ನು ತಿಳಿಯಪಡಿಸಿದನು. ಉದಾಹರಣೆಗೆ, ಅಪೊಸ್ತಲ ಯೋಹಾನನು ‘ಯೇಸು ಕ್ರಿಸ್ತನಿಂದ ಒಂದು ಪ್ರಕಟನೆಯನ್ನು’ ಪಡೆದನು. ಈ ಪ್ರಕಟನೆಯನ್ನು ಯೇಸು ‘ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವದಕ್ಕಾಗಿ ದೇವರಿಂದ’ ಪಡೆದಿದ್ದನು.—ಪ್ರಕಟನೆ 1:1-3.
10, 11. (ಎ) ಯೇಸು ಸಾಕ್ಷಿ ನೀಡಿದ ಸತ್ಯವು ಯಾವುದಕ್ಕೆ ಸಂಬಂಧಿಸಿದೆ? (ಬಿ) ಸತ್ಯವು ನಿಜಸ್ವರೂಪದ್ದಾಗುವಂತೆ ಯೇಸು ಮಾಡಿದ್ದು ಹೇಗೆ?
10 ಯೇಸು ಪೊಂತ್ಯ ಪಿಲಾತನಿಗೆ, ತಾನು ಸತ್ಯಕ್ಕೆ ಸಾಕ್ಷಿಕೊಡಲಿಕ್ಕೋಸ್ಕರ ಭೂಮಿಗೆ ಬಂದಿದ್ದೇನೆಂದು ಹೇಳಿದನು. ಅಂತಹ ಸತ್ಯವು, ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯದ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣಕ್ಕೆ ಸಂಬಂಧಿಸಿದೆಯೆಂದು ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ತಿಳಿಯಪಡಿಸಿದನು. ಆದರೆ ಸತ್ಯಕ್ಕೆ ಸಾಕ್ಷಿಕೊಡುವ ವಿಷಯವು ಸಾರುವ ಮತ್ತು ಬೋಧಿಸುವ ಕೆಲಸಕ್ಕಿಂತ ಹೆಚ್ಚಿನದ್ದನ್ನು ಯೇಸುವಿನಿಂದ ಕೇಳಿಕೊಂಡಿತು. ಯೇಸು ಆ ಸತ್ಯವನ್ನು ನೆರವೇರಿಸುವ ಮೂಲಕ ಅದು ನಿಜಸ್ವರೂಪದ್ದಾಗುವಂತೆ ಮಾಡಿದನು. ಈ ಕಾರಣದಿಂದ, ಅಪೊಸ್ತಲ ಪೌಲನು ಬರೆದುದು: “ತಿಂದು ಕುಡಿಯುವ ವಿಷಯದಲ್ಲಿಯೂ ಹಬ್ಬ ಅಮಾವಾಸ್ಯೆ ಸಬ್ಬತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ಎಣಿಸಬಾರದು. ಇವು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ; ಇವುಗಳ ನಿಜಸ್ವರೂಪವು ಕ್ರಿಸ್ತನೇ.”—ಕೊಲೊಸ್ಸೆ 2:16, 17.
11 ಸತ್ಯವು ನಿಜಸ್ವರೂಪವಾಗಿ ಪರಿಣಮಿಸಿದ ಒಂದು ವಿಧವು, ಬೇತ್ಲೆಹೇಮಿನಲ್ಲಿ ಯೇಸುವಿನ ಮುಂತಿಳಿಸಲ್ಪಟ್ಟ ಜನನದ ಮೂಲಕವೇ. (ಮೀಕ 5:2; ಲೂಕ 2:4-11) ‘69 ವಾರವರ್ಷಗಳ’ ಅಂತ್ಯದಲ್ಲಿ ಮೆಸ್ಸೀಯನ ತೋರಿಬರುವಿಕೆಯ ಕುರಿತಾದ ದಾನಿಯೇಲನ ಪ್ರವಾದನೆಯ ನೆರವೇರಿಕೆಯಲ್ಲಿಯೂ ಸತ್ಯವು ನಿಜಸ್ವರೂಪದ್ದಾಗಿ ಪರಿಣಮಿಸಿತು. ಅದು ಸಾ.ಶ. 29ರಲ್ಲಿ, ಯೇಸು ದೀಕ್ಷಾಸ್ನಾನಕ್ಕಾಗಿ ತನ್ನನ್ನು ಅರ್ಪಿಸಿಕೊಂಡಾಗ ಮತ್ತು ಪವಿತ್ರಾತ್ಮದಿಂದ ಅಭಿಷಿಕ್ತನಾದಾಗ ನಿಷ್ಕೃಷ್ಟ ಕಾಲದಲ್ಲಿ ಸಂಭವಿಸಿತು. (ದಾನಿಯೇಲ 9:25; ಲೂಕ 3:1, 21, 22) ಸತ್ಯವು ಇನ್ನೂ ಮುಂದಕ್ಕೆ ನಿಜಸ್ವರೂಪವಾಗಿ ಪರಿಣಮಿಸಿದ್ದು, ಒಬ್ಬ ರಾಜ್ಯ ಘೋಷಕನೋಪಾದಿ ಯೇಸು ನಡೆಸಿದ ಜ್ಞಾನೋದಯಗೊಳಿಸುವ ಶುಶ್ರೂಷೆಯ ಮೂಲಕವೇ. (ಯೆಶಾಯ 9:1, 2, 6, 7; 61:1, 2; ಮತ್ತಾಯ 4:13-17; ಲೂಕ 4:18-21) ಅವನ ಮರಣ ಮತ್ತು ಪುನರುತ್ಥಾನದ ಮೂಲಕವೂ ಅದು ನಿಜಸ್ವರೂಪದ್ದಾಯಿತು.—ಕೀರ್ತನೆ 16:8-11; ಯೆಶಾಯ 53:5, 8, 11, 12; ಮತ್ತಾಯ 20:28; ಯೋಹಾನ 1:29; ಅ. ಕೃತ್ಯಗಳು 2:25-31.
12. ‘ನಾನೇ ಸತ್ಯವೂ ಆಗಿದ್ದೇನೆ’ ಎಂದು ಯೇಸು ಏಕೆ ಹೇಳಸಾಧ್ಯವಾಯಿತು?
12 ಸತ್ಯವು ಯೇಸುವಿನ ಮೇಲೆ ಕೇಂದ್ರೀಕರಿಸಿದ್ದುದರಿಂದ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ,” ಎಂದು ಅವನು ಹೇಳಲು ಸಾಧ್ಯವಾಯಿತು. (ಯೋಹಾನ 14:6) ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರವನ್ನು ಒಪ್ಪಿಕೊಳ್ಳುವ ಮೂಲಕ ಜನರು “ಸತ್ಯಪರರು” ಆಗುವಾಗ, ಅವರಿಗೆ ಆತ್ಮಿಕವಾಗಿ ಬಿಡುಗಡೆಯಾಗುತ್ತದೆ. (ಯೋಹಾನ 8:32-36; 18:37) ಮತ್ತು ಕುರಿಸದೃಶರು ಸತ್ಯವನ್ನು ಅಂಗೀಕರಿಸಿ, ನಂಬಿಕೆಯಲ್ಲಿ ಕ್ರಿಸ್ತನನ್ನು ಅನುಸರಿಸುವ ಕಾರಣ ಅವರು ನಿತ್ಯಜೀವವನ್ನು ಪಡೆಯುವರು.—ಯೋಹಾನ 10:24-28.
13. ನಾವು ಯಾವ ಮೂರು ಕ್ಷೇತ್ರಗಳಲ್ಲಿ ಶಾಸ್ತ್ರೀಯ ಸತ್ಯವನ್ನು ಪರೀಕ್ಷಿಸುವೆವು?
13 ಯೇಸು ಮತ್ತು ಅವನ ಪ್ರೇರಿತ ಶಿಷ್ಯರು ಕೊಟ್ಟ ಸತ್ಯ ವಿಷಯಗಳ ಸಂಗ್ರಹವೇ ನಿಜ ಕ್ರೈಸ್ತ ನಂಬಿಕೆಯಾಗಿದೆ. “ಕ್ರಿಸ್ತನಂಬಿಕೆಗೆ ಒಳಗಾಗುತ್ತಾ” ಇರುವವರು ಹೀಗೆ “ಸತ್ಯವನ್ನನುಸರಿಸಿ ನಡೆಯುವವರು” ಆಗುತ್ತಾರೆ. (ಅ. ಕೃತ್ಯಗಳು 6:7; 3 ಯೋಹಾನ 3, 4) ಹಾಗಾದರೆ, ಇಂದು ಸತ್ಯದಲ್ಲಿ ಯಾರು ನಡೆಯುತ್ತಾರೆ? ಎಲ್ಲಾ ಜನಾಂಗಗಳಿಗೆ ಸತ್ಯವನ್ನು ನಿಜವಾಗಿಯೂ ಬೋಧಿಸುವವರು ಯಾರು? ಇಂತಹ ಪ್ರಶ್ನೆಗಳನ್ನು ಕೇಳುವಾಗ, ನಾವು ಆದಿಕ್ರೈಸ್ತರ ಕಾರ್ಯಗಳ ಮೇಲೆ ಕೇಂದ್ರೀಕರಿಸಿ, ಅವರ (1) ನಂಬಿಕೆಗಳು, (2) ಆರಾಧನಾ ರೀತಿ, ಮತ್ತು (3) ವೈಯಕ್ತಿಕ ನಡತೆಯ ಸಂಬಂಧದಲ್ಲಿರುವ ಶಾಸ್ತ್ರೀಯ ಸತ್ಯವನ್ನು ಪರೀಕ್ಷಿಸೋಣ.
ಸತ್ಯ ಮತ್ತು ನಂಬಿಕೆಗಳು
14, 15. ಆದಿಕ್ರೈಸ್ತರಿಗೂ ಯೆಹೋವನ ಸಾಕ್ಷಿಗಳಿಗೂ ಶಾಸ್ತ್ರದ ಕಡೆಗಿರುವ ಮನೋಭಾವದ ಕುರಿತಾಗಿ ನೀವೇನು ಹೇಳುವಿರಿ?
14 ಆದಿಕ್ರೈಸ್ತರು ಯೆಹೋವನ ಲಿಖಿತ ವಾಕ್ಯವನ್ನು ಅತಿ ಅಮೂಲ್ಯವಾದದ್ದಾಗಿ ಪರಿಗಣಿಸುತ್ತಿದ್ದರು. (ಯೋಹಾನ 17:17) ನಂಬಿಕೆ ಮತ್ತು ಆಚಾರಗಳ ಸಂಬಂಧದಲ್ಲಿ ಇದೇ ಅವರ ಮಟ್ಟವಾಗಿತ್ತು. ಎರಡನೆಯ ಮತ್ತು ಮೂರನೆಯ ಶತಮಾನಗಳ ಅಲೆಕ್ಸಾಂಡ್ರಿಯದ ಕ್ಲೆಮೆಂಟ್ ಎಂಬವನು ಹೇಳಿದ್ದು: “ಗಮನಾರ್ಹವಾದ ಉತ್ಕೃಷ್ಟತೆಗಾಗಿ ಪ್ರಯಾಸಪಡುತ್ತಿರುವ ಅವರು, ತಮ್ಮ ನಂಬಿಕೆಗೆ ಶಾಸ್ತ್ರದಿಂದಲೇ ರುಜುವಾತು ದೊರೆಯುವ ವರೆಗೆ ತಮ್ಮ ಸತ್ಯಾನ್ವೇಷಣೆಯನ್ನು ನಿಲ್ಲಿಸುತ್ತಿರಲಿಲ್ಲ.”
15 ಆ ಆದಿಕ್ರೈಸ್ತರಂತೆಯೇ ಯೆಹೋವನ ಸಾಕ್ಷಿಗಳು ಬೈಬಲನ್ನು ತುಂಬ ಗೌರವದಿಂದ ಕಾಣುತ್ತಾರೆ. ‘ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೆ . . . ಉಪಯುಕ್ತವಾಗಿದೆ’ ಎಂದು ಅವರು ನಂಬುತ್ತಾರೆ. (2 ತಿಮೊಥೆಯ 3:16) ಆದಕಾರಣ, ಬೈಬಲನ್ನು ತಮ್ಮ ಪ್ರಧಾನ ಪಠ್ಯಪುಸ್ತಕವಾಗಿ ಉಪಯೋಗಿಸುವುದರ ಫಲವಾಗಿ ಯೆಹೋವನ ಇಂದಿನ ಸೇವಕರು ಕಲಿತಿರುವ ವಿಷಯಗಳನ್ನು ಗಣನೆಗೆ ತೆಗೆದುಕೊಂಡು, ಆ ಆದಿಕ್ರೈಸ್ತರ ಕೆಲವು ನಂಬಿಕೆಗಳನ್ನು ನಾವು ಚರ್ಚಿಸೋಣ.
ಮೃತರ ಕುರಿತಾದ ಸತ್ಯ
16. ಮೃತರ ಸಂಬಂಧದಲ್ಲಿ ಸತ್ಯವಿಷಯವೇನು?
16 ಶಾಸ್ತ್ರದಲ್ಲಿ ಹೇಳಲ್ಪಟ್ಟಿರುವ ವಿಷಯಗಳನ್ನು ನಂಬಿದ ಕಾರಣ, ಆದಿಕ್ರೈಸ್ತರು ಮೃತರ ವಿಷಯದಲ್ಲಿ ಸತ್ಯವನ್ನೇ ಬೋಧಿಸಿದರು. ಮಾನವರು ಸಾಯುವಾಗ ದೇಹದಿಂದ ಹೊರಹೋಗಿ ಜೀವಿಸುತ್ತಾ ಇರುವಂಥದ್ದೇನೂ ಇಲ್ಲವೆಂಬುದನ್ನು ಅವರು ಅಂಗೀಕರಿಸಿದರು. “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ,” ಎಂಬುದೂ ಅವರಿಗೆ ತಿಳಿದಿತ್ತು.—ಪ್ರಸಂಗಿ 9:5, 10.
17. ಮೃತರಿಗಿರುವ ನಿರೀಕ್ಷೆಯನ್ನು ನೀವು ಹೇಗೆ ವಿವರಿಸುವಿರಿ?
17 ಆದರೂ, ಯೇಸುವಿನ ಆದಿಶಿಷ್ಯರಿಗೆ ದೇವರ ಸ್ಮರಣೆಯಲ್ಲಿರುವ ಮೃತರು ಪುನರುತ್ಥಾನಗೊಳಿಸಲ್ಪಡುವರು ಅಥವಾ ಉಜ್ಜೀವಿಸಲ್ಪಡುವರು ಎಂಬ ದೃಢ ನಿರೀಕ್ಷೆಯಿತ್ತು. ಈ ನಂಬಿಕೆಯನ್ನು ಪೌಲನು ಸುವ್ಯಕ್ತವಾಗಿ ಹೀಗೆ ತಿಳಿಯಪಡಿಸಿದನು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” (ಅ. ಕೃತ್ಯಗಳು 24:15) ಸಮಯಾನಂತರವೂ, ತಾನು ಕ್ರೈಸ್ತನೆಂದು ಹೇಳಿಕೊಂಡ ಮೀನೂಕಿಯುಸ್ ಫೀಲಿಕ್ಸ್ ಎಂಬವನು ಬರೆದುದು: “ದೇವರಿಂದ ಆದಿಯಲ್ಲಿ ಸೃಷ್ಟಿಸಲ್ಪಟ್ಟ ಮನುಷ್ಯನನ್ನು ಆತನು ಪುನಃ ಹೊಸದಾಗಿ ನಿರ್ಮಿಸಸಾಧ್ಯವಿಲ್ಲ ಎಂದು ವಾದಿಸುವಷ್ಟು ಮೂರ್ಖನೂ ಬುದ್ಧಿಹೀನನೂ ಯಾರು?” ಆದಿಕ್ರೈಸ್ತರಂತೆಯೇ, ಯೆಹೋವನ ಸಾಕ್ಷಿಗಳೂ ಮೃತರು ಮತ್ತು ಪುನರುತ್ಥಾನದ ವಿಷಯದಲ್ಲಿ ಶಾಸ್ತ್ರೀಯ ಸತ್ಯಕ್ಕೆ ಅಂಟಿಕೊಂಡಿರುತ್ತಾರೆ. ನಾವೀಗ ದೇವರ ಮತ್ತು ಕ್ರಿಸ್ತನ ಪರಿಚಯಕ್ಕೆ ಗಮನವೀಯೋಣ.
ಸತ್ಯ ಮತ್ತು ತ್ರಯೈಕ್ಯ
18, 19. ತ್ರಯೈಕ್ಯ ಬೋಧನೆ ಶಾಸ್ತ್ರಾಧಾರಿತವಲ್ಲ ಎಂದು ಏಕೆ ಹೇಳಸಾಧ್ಯವಿದೆ?
18 ಆದಿಕ್ರೈಸ್ತರು ದೇವರು, ಕ್ರಿಸ್ತನು ಮತ್ತು ಪವಿತ್ರಾತ್ಮವನ್ನು ತ್ರಯೈಕ್ಯವಾಗಿ ವೀಕ್ಷಿಸಲಿಲ್ಲ. ದಿ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ತ್ರಯೈಕ್ಯ ಎಂಬ ಪದವಾಗಲಿ, ಹಾಗೆಂಬ ಸ್ಪಷ್ಟ ಬೋಧನೆಯಾಗಲಿ ಹೊಸ ಒಡಂಬಡಿಕೆಯಲ್ಲಿ ತೋರಿಬರುವುದೂ ಇಲ್ಲ, ‘ಇಸ್ರಾಯೇಲೇ, ಕೇಳು; ನಮ್ಮ ದೇವರಾದ ಕರ್ತನು ಒಬ್ಬನೇ ಕರ್ತನು’ ಎಂಬ ಹಳೇ ಒಡಂಬಡಿಕೆಯ ಶಮಾ [ಒಂದು ಹೀಬ್ರು ಪ್ರಾರ್ಥನೆ]ವನ್ನು ಯೇಸು ಮತ್ತು ಅವನ ಹಿಂಬಾಲಕರು ವಿರೋಧಿಸಿದ್ದೂ ಇಲ್ಲ (ಧರ್ಮೋ. 6:4).” ಕ್ರೈಸ್ತರು ರೋಮನ್ ತ್ರಯೈಕ್ಯವನ್ನಾಗಲಿ, ಇತರ ದೇವತೆಗಳನ್ನಾಗಲಿ ಆರಾಧಿಸಲಿಲ್ಲ. ಅವರು, ಯೆಹೋವನನ್ನು ಮಾತ್ರ ಆರಾಧಿಸಬೇಕೆಂಬ ಯೇಸುವಿನ ಹೇಳಿಕೆಯನ್ನು ಅಂಗೀಕರಿಸಿದರು. (ಮತ್ತಾಯ 4:10) ಇದಲ್ಲದೆ, ಅವರು “ತಂದೆಯು ನನಗಿಂತ ದೊಡ್ಡವನು,” ಎಂಬ ಕ್ರಿಸ್ತನ ಮಾತುಗಳನ್ನು ನಂಬಿದರು. (ಯೋಹಾನ 14:28) ಯೆಹೋವನ ಸಾಕ್ಷಿಗಳ ಇಂದಿನ ನಂಬಿಕೆಗಳೂ ಅವೇ.
19 ಯೇಸುವಿನ ಆದಿಶಿಷ್ಯರು ದೇವರು, ಕ್ರಿಸ್ತನು ಮತ್ತು ಪವಿತ್ರಾತ್ಮದ ಮಧ್ಯೆ ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸಿದರು. ವಾಸ್ತವವೇನಂದರೆ, ಅವರು (1) ತಂದೆಯ ಹೆಸರಿನಲ್ಲಿ, (2) ಮಗನ ಹೆಸರಿನಲ್ಲಿ, ಮತ್ತು (3) ಪವಿತ್ರಾತ್ಮದ ಹೆಸರಿನಲ್ಲಿ ಶಿಷ್ಯರಿಗೆ ದೀಕ್ಷಾಸ್ನಾನ ಕೊಟ್ಟರೇ ಹೊರತು ತ್ರಯೈಕ್ಯದ ಹೆಸರಿನಲ್ಲಲ್ಲ. ಯೆಹೋವನ ಸಾಕ್ಷಿಗಳೂ ಅದೇ ರೀತಿಯ ಶಾಸ್ತ್ರೀಯ ಸತ್ಯವನ್ನು ಬೋಧಿಸುವುದರಿಂದ, ತಂದೆ, ಆತನ ಮಗ ಮತ್ತು ಪವಿತ್ರಾತ್ಮದ ಮಧ್ಯೆ ವ್ಯತ್ಯಾಸವಿದೆಯೆಂದು ತೋರಿಸುತ್ತಾರೆ.—ಮತ್ತಾಯ 28:19.
ಸತ್ಯ ಮತ್ತು ದೀಕ್ಷಾಸ್ನಾನ
20. ದೀಕ್ಷಾಸ್ನಾನಾರ್ಥಿಗಳಿಗೆ ಯಾವ ಜ್ಞಾನವು ಅಗತ್ಯ?
20 ಜನರಿಗೆ ಸತ್ಯವನ್ನು ಕಲಿಸಿ ಅವರನ್ನು ಶಿಷ್ಯರನ್ನಾಗಿ ಮಾಡುವರೆ ಯೇಸು ತನ್ನ ಹಿಂಬಾಲಕರಿಗೆ ಆದೇಶ ಕೊಟ್ಟನು. ದೀಕ್ಷಾಸ್ನಾನಕ್ಕೆ ಅರ್ಹರಾಗಲು ಅವರಿಗೆ ಶಾಸ್ತ್ರದ ಮೂಲ ಜ್ಞಾನದ ಅಗತ್ಯವಿದೆ. ಉದಾಹರಣೆಗೆ, ಅವರು ತಂದೆಯ ಸ್ಥಾನ ಮತ್ತು ಅಧಿಕಾರವನ್ನೂ ಮಗನಾದ ಯೇಸು ಕ್ರಿಸ್ತನ ಸ್ಥಾನ ಮತ್ತು ಅಧಿಕಾರವನ್ನೂ ಒಪ್ಪಿಕೊಳ್ಳಬೇಕು. (ಯೋಹಾನ 3:16) ದೀಕ್ಷಾಸ್ನಾನಾರ್ಥಿಗಳು, ಪವಿತ್ರಾತ್ಮವು ಒಬ್ಬ ವ್ಯಕ್ತಿಯಲ್ಲ, ದೇವರ ಕಾರ್ಯಕಾರಿ ಶಕ್ತಿ ಎಂಬುದನ್ನೂ ತಿಳಿಯುವುದು ಅಗತ್ಯ.—ಅ. ಕೃತ್ಯಗಳು 2:1-4.
21, 22. ದೀಕ್ಷಾಸ್ನಾನವು ವಿಶ್ವಾಸಿಗಳಿಗೆ ಮಾತ್ರವೆಂದು ನೀವೇಕೆ ಹೇಳುವಿರಿ?
21 ಆದಿಕ್ರೈಸ್ತರು, ದೇವರ ಚಿತ್ತವನ್ನು ಮಾಡಲು ತಮ್ಮನ್ನು ಯಾವ ಷರತ್ತೂ ಇಲ್ಲದೆ ಸಮರ್ಪಿಸಿಕೊಂಡಿದ್ದ, ತಿಳಿವಳಿಕೆಯಿದ್ದ ಮತ್ತು ಪಶ್ಚಾತ್ತಾಪವನ್ನು ತೋರಿಸಿದ್ದ ವ್ಯಕ್ತಿಗಳಿಗೆ ಮಾತ್ರ ದೀಕ್ಷಾಸ್ನಾನ ನೀಡಿದರು. ಸಾ.ಶ. 33ರ ಪಂಚಾಶತ್ತಮದಲ್ಲಿ ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಯೆಹೂದ್ಯರೂ ಮತಾಂತರಿಗಳೂ ಆಗಲೇ ಹೀಬ್ರು ಶಾಸ್ತ್ರದ ಜ್ಞಾನವುಳ್ಳವರಾಗಿದ್ದರು. ಆದುದರಿಂದ, ಅಪೊಸ್ತಲ ಪೇತ್ರನು ಮೆಸ್ಸೀಯನಾದ ಯೇಸುವಿನ ವಿಷಯದಲ್ಲಿ ಮಾತಾಡಿದ್ದನ್ನು ಕೇಳಿದಾಗ, ಸುಮಾರು 3,000 ಮಂದಿ ‘ಅವನ ಮಾತಿಗೆ ಒಪ್ಪಿಕೊಂಡರು ಮತ್ತು ದೀಕ್ಷಾಸ್ನಾನಮಾಡಿಸಿಕೊಂಡರು.’—ಅ. ಕೃತ್ಯಗಳು 2:41; 3:19–4:4; 10:34-38.
22 ಕ್ರೈಸ್ತ ದೀಕ್ಷಾಸ್ನಾನ ವಿಶ್ವಾಸಿಗಳಿಗಾಗಿದೆ. ಸಮಾರ್ಯದ ಕ್ರೈಸ್ತರು ಸತ್ಯವನ್ನು ಸ್ವೀಕರಿಸಿದರು ಮತ್ತು “ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ವಿಷಯದಲ್ಲಿಯೂ ಶುಭವರ್ತಮಾನವನ್ನು ಸಾರಲು ಗಂಡಸರೂ ಹೆಂಗಸರೂ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡರು.” (ಅ. ಕೃತ್ಯಗಳು 8:12) ಯೆಹೋವನ ಕುರಿತಾದ ಜ್ಞಾನವಿದ್ದ ಆ ಭಕ್ತ ಮತಾಂತರಿಯಾಗಿದ್ದ ಐಥಿಯೋಪ್ಯದ ಕಂಚುಕಿಯು, ಮೆಸ್ಸೀಯನ ಪ್ರವಾದನೆಯ ನೆರವೇರಿಕೆಯ ಕುರಿತು ಫಿಲಿಪ್ಪನು ಮಾಡಿದ ಹೇಳಿಕೆಗಳನ್ನು ಮೊದಲು ಅಂಗೀಕರಿಸಿ, ಬಳಿಕ ದೀಕ್ಷಾಸ್ನಾನ ಹೊಂದಿದನು. (ಅ. ಕೃತ್ಯಗಳು 8:34-36) ಸಮಯಾನಂತರ, ಪೇತ್ರನು ಕೊರ್ನೇಲ್ಯನಿಗೂ ಇತರ ಅನ್ಯರಿಗೂ, “ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂದೂ, ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವವರು ಪಾಪಕ್ಷಮೆಯನ್ನು ಪಡೆಯುವರೆಂದೂ ಹೇಳಿದನು. (ಅ. ಕೃತ್ಯಗಳು 10:35, 43; 11:18) ಇದೆಲ್ಲವೂ, ‘ಶಿಷ್ಯರನ್ನಾಗಿ ಮಾಡಿ, ನಾನು ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಉಪದೇಶಮಾಡಿ,’ ಎಂಬ ಯೇಸುವಿನ ಆಜ್ಞೆಗೆ ಹೊಂದಿಕೆಯಲ್ಲಿದೆ. (ಮತ್ತಾಯ 28:19, 20; ಅ. ಕೃತ್ಯಗಳು 1:8) ಯೆಹೋವನ ಸಾಕ್ಷಿಗಳು ಇದೇ ಮಟ್ಟಕ್ಕೆ ಅಂಟಿಕೊಂಡು, ಶಾಸ್ತ್ರಗಳ ಮೂಲ ಜ್ಞಾನವಿದ್ದು, ದೇವರಿಗೆ ಸಮರ್ಪಿಸಿಕೊಂಡಿರುವವರಿಗೆ ಮಾತ್ರ ದೀಕ್ಷಾಸ್ನಾನ ಮಾಡಿಸುತ್ತಾರೆ.
23, 24. ಕ್ರೈಸ್ತ ದೀಕ್ಷಾಸ್ನಾನದ ಸರಿಯಾದ ರೀತಿಯು ಯಾವುದು?
23 ನೀರಿನಲ್ಲಿ ಮಾಡಲಾಗುವ ಪೂರ್ಣ ನಿಮಜ್ಜನವೇ ವಿಶ್ವಾಸಿಗಳಿಗೆ ಸರಿಯಾದ ದೀಕ್ಷಾಸ್ನಾನ ವಿಧಾನವಾಗಿದೆ. ಯೋರ್ದನಿನಲ್ಲಿ ಯೇಸುವಿಗೆ ದೀಕ್ಷಾಸ್ನಾನವಾದಾಗ, “ಆತನು ನೀರಿನೊಳಗಿಂದ ಮೇಲಕ್ಕೆ” ಬಂದನು. (ಮಾರ್ಕ 1:10) ಐಥಿಯೋಪ್ಯದ ಕಂಚುಕಿಯು “ನೀರಿನ [“ಜಲರಾಶಿಯ,” NW]” ಬಳಿಗೆ ಬಂದನು. ಅವನೂ ಫಿಲಿಪ್ಪನೂ “ನೀರಿನೊಳಕ್ಕೆ ಇಳಿದರು” ಮತ್ತು ಬಳಿಕ ನೀರಿನಿಂದ “ಮೇಲಕ್ಕೆ” ಬಂದರು. (ಅ. ಕೃತ್ಯಗಳು 8:36-40) ದೀಕ್ಷಾಸ್ನಾನವನ್ನು ಸಾಂಕೇತಿಕವಾದ ‘ಹೂಣಲ್ಪಡುವಿಕೆ’ಯೊಂದಿಗೆ ಶಾಸ್ತ್ರವು ಜೋಡಿಸುವುದು ಸಹ, ದೀಕ್ಷಾಸ್ನಾನವು ನೀರಿನಲ್ಲಿ ಪೂರ್ಣ ಮುಳುಗುವಿಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ.—ರೋಮಾಪುರ 6:4-6; ಕೊಲೊಸ್ಸೆ 2:12.
24 ದಿ ಆಕ್ಸ್ಫರ್ಡ್ ಕಂಪ್ಯಾನ್ಯನ್ ಟು ದ ಬೈಬಲ್ ಹೇಳುವುದು: “ಹೊಸ ಒಡಂಬಡಿಕೆಯಲ್ಲಾದ ನಿರ್ದಿಷ್ಟ ದೀಕ್ಷಾಸ್ನಾನಗಳ ವಿವರಣೆಗಳು, ದೀಕ್ಷಾಸ್ನಾನವಾದ ವ್ಯಕ್ತಿಯನ್ನು ನೀರಿನಲ್ಲಿ ಅದ್ದಲಾಯಿತೆಂದು ಸೂಚಿಸುತ್ತವೆ.” ಇಪ್ಪತ್ತನೆಯ ಶತಮಾನದ ಲಾರೂಸ್ (ಪ್ಯಾರಿಸ್, 1928) ಎಂಬ ಫ್ರೆಂಚ್ ಕೃತಿಗನುಸಾರ, “ಆದಿಕ್ರೈಸ್ತರು ನೀರು ಎಲ್ಲಿ ಕಂಡುಬರುತ್ತಿತ್ತೊ ಅಲ್ಲೆಲ್ಲ ನಿಮಜ್ಜನದ ಮೂಲಕ ದೀಕ್ಷಾಸ್ನಾನ ಪಡೆದರು.” ಯೇಸುವಿನ ತರುವಾಯ—ಕ್ರೈಸ್ತತ್ವದ ವಿಜಯ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “[ದೀಕ್ಷಾಸ್ನಾನವು] ಅದರ ಅತಿ ಪ್ರಾಥಮಿಕ ರೂಪದಲ್ಲಿ ಸ್ನಾನಾರ್ಥಿಯು ತನ್ನ ನಂಬಿಕೆಯನ್ನು ಪ್ರಕಟಪಡಿಸುವಂತೆಯೂ, ಇದಾದ ಬಳಿಕ ಯೇಸುವಿನ ಹೆಸರಿನಲ್ಲಿ ಪೂರ್ಣ ನಿಮಜ್ಜನ ಹೊಂದುವಂತೆಯೂ ಕೇಳಿಕೊಂಡಿತು.”
25. ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
25 ಆದಿಕ್ರೈಸ್ತರ ಈ ಮೇಲೆ ತಿಳಿಸಲ್ಪಟ್ಟಿರುವ ಬೈಬಲಾಧಾರಿತ ನಂಬಿಕೆಗಳೂ ಆಚಾರಗಳೂ ಕೇವಲ ಉದಾಹರಣೆಗಳಾಗಿವೆ. ಅವರ ನಂಬಿಕೆಗಳಿಗೂ ಯೆಹೋವನ ಸಾಕ್ಷಿಗಳ ನಂಬಿಕೆಗಳಿಗೂ ಇರುವ ಇತರ ಸಾದೃಶ್ಯಗಳನ್ನೂ ಕೊಡಲು ಸಾಧ್ಯವಿದೆ. ಮುಂದಿನ ಲೇಖನದಲ್ಲಿ, ಜನರಿಗೆ ಸತ್ಯವನ್ನು ಬೋಧಿಸುವವರನ್ನು ಗುರುತಿಸುವ ಇನ್ನೂ ಹೆಚ್ಚಿನ ರೀತಿಗಳನ್ನು ನಾವು ಚರ್ಚಿಸುವೆವು.
[ಪುಟ 19ರಲ್ಲಿರುವ ಚಿತ್ರವಿವರಣೆ]
ನೀವು ಹೇಗೆ ಉತ್ತರ ಕೊಡುವಿರಿ?
• ಯಾವ ವಿಧದ ಆರಾಧನೆಯನ್ನು ದೇವರು ಅಪೇಕ್ಷಿಸುತ್ತಾನೆ?
• ಸತ್ಯವು ಯೇಸುವಿನ ಮೂಲಕ ನಿಜಸ್ವರೂಪವಾಗಿ ಪರಿಣಮಿಸಿದ್ದು ಹೇಗೆ?
• ಮೃತರ ಕುರಿತಾದ ಸತ್ಯವಿಷಯವೇನು?
• ಕ್ರೈಸ್ತ ದೀಕ್ಷಾಸ್ನಾನವು ಹೇಗೆ ನಡೆಸಲ್ಪಡುತ್ತದೆ, ಮತ್ತು ದೀಕ್ಷಾಸ್ನಾನಾರ್ಥಿಗಳಿಂದ ಏನು ಅಪೇಕ್ಷಿಸಲ್ಪಡುತ್ತದೆ?
[ಪುಟ 16ರಲ್ಲಿರುವ ಚಿತ್ರ]
ಯೇಸು ಪಿಲಾತನಿಗೆ ಹೇಳಿದ್ದು: ‘ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದಕ್ಕೋಸ್ಕರ ಬಂದಿದ್ದೇನೆ’
[ಪುಟ 17ರಲ್ಲಿರುವ ಚಿತ್ರ]
‘ನಾನೇ ಸತ್ಯವಾಗಿದ್ದೇನೆ’ ಎಂದು ಯೇಸು ಹೇಳಿದ್ದು ಏಕೆಂದು ವಿವರಿಸಬಲ್ಲಿರಾ?
[ಪುಟ 18ರಲ್ಲಿರುವ ಚಿತ್ರ]
ಕ್ರೈಸ್ತ ದೀಕ್ಷಾಸ್ನಾನದ ವಿಷಯದಲ್ಲಿ ಸತ್ಯವಿಷಯವೇನು?