ಯೋಹಾನ
10 “ನಿಜ ಹೇಳ್ತೀನಿ, ಕುರಿಹಟ್ಟಿಗೆ ಬಾಗಿಲಿಂದ ಬರದೆ ಗೋಡೆ ಹತ್ತಿ ಬರೋನು ಕಳ್ಳ, ಲೂಟಿಗಾರ.+ 2 ಆದ್ರೆ ಬಾಗಿಲಿಂದ ಒಳಗೆ ಬರೋನು ಕುರಿಗಳ ಕುರುಬ.+ 3 ಕುರುಬ ಬಂದಾಗ ಕಾವಲುಗಾರ ಬಾಗಿಲು ತೆರಿತಾನೆ.+ ಕುರಿಗಳು ಕುರುಬ ಹೇಳೋದನ್ನ ಕೇಳ್ತವೆ.+ ಕುರಿಗಳನ್ನ ಆತನು ಹೆಸ್ರಿಟ್ಟು ಕರಿತಾನೆ. ಅವುಗಳನ್ನ ಮೇಯಿಸೋಕೆ ಕರ್ಕೊಂಡು ಹೋಗ್ತಾನೆ. 4 ಕುರಿಗಳು ಹಟ್ಟಿಯಿಂದ ಹೊರಗೆ ಬಂದ ಮೇಲೆ ಕುರುಬ ಮುಂದೆ ಹೋಗ್ತಾನೆ. ಕುರಿಗಳಿಗೆ ಆತನ ಸ್ವರ ಚೆನ್ನಾಗಿ ಗೊತ್ತು. ಹಾಗಾಗಿ ಹಿಂದೆನೇ ಹೋಗ್ತವೆ. 5 ಯಾವತ್ತೂ ಅಪರಿಚಿತರ ಹಿಂದೆ ಹೋಗಲ್ಲ. ಅವ್ರಿಂದ ದೂರ ಓಡಿಹೋಗ್ತವೆ. ಯಾಕಂದ್ರೆ ಆ ಕುರಿಗಳು ಅಪರಿಚಿತರ ಸ್ವರವನ್ನ ಮುಂಚೆ ಯಾವತ್ತೂ ಕೇಳಿಸ್ಕೊಂಡಿರಲ್ಲ” ಅಂದನು. 6 ಯೇಸು ಹೇಳಿದ ಈ ಉದಾಹರಣೆ ಯೆಹೂದಿ ನಾಯಕರಿಗೆ ಅರ್ಥ ಆಗಲಿಲ್ಲ.
7 ಹಾಗಾಗಿ ಯೇಸು ಮಾತಾಡ್ತಾ ಹೀಗಂದನು “ನಿಜ ಹೇಳ್ತೀನಿ, ಕುರಿಗಳಿಗೆ ನಾನೇ ಬಾಗಿಲು.+ 8 ನನ್ನ ಹೆಸ್ರು ಹೇಳ್ಕೊಂಡು ಬಂದವ್ರೆಲ್ಲ ಕಳ್ಳರು, ಲೂಟಿಗಾರರು. ಕುರಿಗಳು ಅವರ ಮಾತು ಕೇಳಲಿಲ್ಲ. 9 ನಾನೇ ಬಾಗಿಲು. ನನ್ನ ಮೂಲಕ ಹೋಗೋರಿಗೆ ಮಾತ್ರ ರಕ್ಷಣೆ ಸಿಗುತ್ತೆ. ಅವರು ಒಳಗೆ ಹೋಗ್ತಾರೆ, ಹೊರಗೆ ಬರ್ತಾರೆ. ಅವ್ರಿಗೆ ಆಹಾರ ಸಿಗುತ್ತೆ.+ 10 ಕಳ್ಳರು ಕದಿಯೋಕೆ, ಕೊಲ್ಲೋಕೆ, ಹಾಳು ಮಾಡೋಕೆ ಬರ್ತಾರೆ.+ ಆದ್ರೆ ನಾನು ಬಂದಿದ್ದು ಕುರಿಗಳು ಜೀವ ಪಡ್ಕೊಂಡು ಶಾಶ್ವತವಾಗಿ ಬದುಕಲಿ ಅಂತ. 11 ನಾನು ಒಳ್ಳೇ ಕುರುಬ.+ ಒಳ್ಳೇ ಕುರುಬ ಕುರಿಗಳಿಗೋಸ್ಕರ ಪ್ರಾಣ ಕೊಡ್ತಾನೆ.+ 12 ಆದ್ರೆ ಕೂಲಿ ಮಾಡೋನು ಕುರುಬ ಅಲ್ಲ. ಆ ಕುರಿಗಳು ಅವನದ್ದಲ್ಲ. ಹಾಗಾಗಿ ತೋಳ ಬಂದಾಗ ಕುರಿಗಳನ್ನ ಬಿಟ್ಟು ಓಡಿ ಹೋಗ್ತಾನೆ. (ಆಗ ತೋಳ ಕುರಿಗಳನ್ನ ಚೆಲ್ಲಾಪಿಲ್ಲಿ ಮಾಡುತ್ತೆ.) 13 ಅವನು ಒಬ್ಬ ಕೂಲಿ ಕೆಲಸದವನು ಆಗಿರೋದ್ರಿಂದ ಕುರಿಗಳ ಬಗ್ಗೆ ತಲೆಕೆಡಿಸ್ಕೊಳ್ಳಲ್ಲ. 14 ನಾನು ಒಳ್ಳೇ ಕುರುಬ. ಕುರಿಗಳ ಬಗ್ಗೆ ನಂಗೊತ್ತು. ಕುರಿಗಳಿಗೆ ನನ್ನ ಬಗ್ಗೆ ಗೊತ್ತು.+ 15 ಅದೇ ತರ ಅಪ್ಪನಿಗೆ ನನ್ನ ಬಗ್ಗೆ ಗೊತ್ತು, ನನಗೆ ಅಪ್ಪನ ಬಗ್ಗೆ ಗೊತ್ತು.+ ನಾನು ಕುರಿಗಳಿಗೋಸ್ಕರ ನನ್ನ ಪ್ರಾಣನೇ ಕೊಡ್ತೀನಿ.+
16 ನನಗೆ ಬೇರೆ ಕುರಿಗಳೂ ಇವೆ. ಅವು ಈ ಹಿಂಡಿಗೆ ಸೇರಿಲ್ಲ.+ ಅವುಗಳನ್ನೂ ನಾನು ಸೇರಿಸಬೇಕು. ಅವು ನನ್ನ ಮಾತು ಕೇಳ್ತವೆ. ಆಗ ಎಲ್ಲ ಕುರಿಗಳು ಸೇರಿ ಒಂದೇ ಹಿಂಡು ಆಗುತ್ತೆ. ಒಬ್ಬನೇ ಕುರುಬ ಇರ್ತಾನೆ.+ 17 ನನ್ನ ಅಪ್ಪ ನನ್ನನ್ನ ತುಂಬ ಪ್ರೀತಿಸ್ತಾನೆ.+ ಯಾಕಂದ್ರೆ ನನ್ನ ಪ್ರಾಣವನ್ನ+ ಮತ್ತೆ ಪಡ್ಕೊಳ್ಳೋ ತರ ಅದನ್ನ ಕೊಡ್ತೀನಿ. 18 ಯಾರೂ ನನ್ನ ಪ್ರಾಣ ತೆಗಿಯೋಕಾಗಲ್ಲ. ನನ್ನಷ್ಟಕ್ಕೆ ನಾನೇ ಪ್ರಾಣ ಕೊಡ್ತಿದ್ದೀನಿ. ಅದನ್ನ ಕೊಡೋ ಅಧಿಕಾರ, ಅದನ್ನ ವಾಪಸ್ ಪಡ್ಕೊಳ್ಳೋ ಅಧಿಕಾರ ಎರಡೂ ನನಗಿದೆ.+ ನನ್ನ ಅಪ್ಪ ನನಗೆ ಇದನ್ನೇ ಹೇಳಿದ್ದಾನೆ.”
19 ಈ ಮಾತು ಕೇಳಿಸ್ಕೊಂಡು ಯೆಹೂದ್ಯರ ಮಧ್ಯ ಮತ್ತೆ ಕಿತ್ತಾಟ ಶುರು ಆಯ್ತು.+ 20 ಅವ್ರಲ್ಲಿ ತುಂಬ ಜನ “ಇವನಿಗೆ ಕೆಟ್ಟ ದೇವದೂತ ಹಿಡಿದಿದ್ದಾನೆ. ಈ ಹುಚ್ಚನ ಮಾತು ಯಾಕೆ ಕೇಳ್ತಾ ಇದ್ದೀರಾ?” ಅಂತಿದ್ರು. 21 ಇನ್ನು ಕೆಲವರು “ಕೆಟ್ಟ ದೇವದೂತ ಹಿಡಿದಿರೋ ಮನುಷ್ಯ ಈ ರೀತಿ ಮಾತಾಡಲ್ಲ. ಕುರುಡನಿಗೆ ಕಣ್ಣು ಕಾಣೋ ತರ ಕೆಟ್ಟ ದೇವದೂತನಿಗೆ ಮಾಡೋಕಾಗುತ್ತಾ?” ಅಂತಿದ್ರು.
22 ಅದೇ ಸಮಯದಲ್ಲಿ ಯೆರೂಸಲೇಮಲ್ಲಿ ದೇವಾಲಯದ ಸಮರ್ಪಣೆ ಹಬ್ಬ ನಡಿತಿತ್ತು. ಆಗ ಚಳಿಗಾಲ. 23 ಯೇಸು, ದೇವಾಲಯದಲ್ಲಿ ಸೊಲೊಮೋನನ ಮಂಟಪದಲ್ಲಿ+ ನಡಿತಾ ಇದ್ದನು. 24 ಯೆಹೂದ್ಯರು ಆತನ ಸುತ್ತ ನಿಂತು “ನೀನ್ಯಾರು ಅಂತ ತಿಳ್ಕೊಳ್ಳೋಕೆ ನಾವು ಇನ್ನೆಷ್ಟು ದಿನ ಕಾಯಬೇಕು? ಕ್ರಿಸ್ತನಾಗಿದ್ರೆ ನೇರವಾಗಿ ಹೇಳು” ಅಂತ ಕೇಳಿದ್ರು. 25 ಅದಕ್ಕೆ ಯೇಸು “ನಾನು ಹೇಳಿದ್ರೂ ನೀವು ನಂಬ್ತಾ ಇಲ್ಲ. ನಾನು ಅಪ್ಪನ ಹೆಸ್ರಲ್ಲಿ ಮಾಡ್ತಿರೋ ಕೆಲಸಗಳೇ ನಾನ್ಯಾರು ಅಂತ ಹೇಳುತ್ತೆ.+ 26 ನೀವು ನನ್ನ ಕುರಿಗಳಲ್ಲ. ಅದಕ್ಕೇ ನೀವು ನಂಬ್ತಾ ಇಲ್ಲ.+ 27 ನನ್ನ ಕುರಿಗಳು ನನ್ನ ಮಾತು ಕೇಳ್ತವೆ. ಅವುಗಳ ಬಗ್ಗೆ ನಂಗೊತ್ತು, ಅವು ನನ್ನ ಹಿಂದೆ ಬರ್ತವೆ.+ 28 ಅವುಗಳಿಗೆ ಶಾಶ್ವತ ಜೀವ ಕೊಡ್ತೀನಿ.+ ಅವು ಯಾವತ್ತೂ ನಾಶ ಆಗಲ್ಲ. ಅವುಗಳನ್ನ ಯಾರೂ ನನ್ನ ಕೈಯಿಂದ ಕಿತ್ಕೊಳ್ಳೋಕಾಗಲ್ಲ.+ 29 ಅಪ್ಪ ನನಗೆ ಕೊಟ್ಟಿರೋ ಆ ಕುರಿಗಳು ಎಲ್ಲದಕ್ಕಿಂತ ತುಂಬ ಪ್ರಾಮುಖ್ಯ. ಅವುಗಳನ್ನ ಅಪ್ಪನ ಕೈಯಿಂದನೂ ಯಾರೂ ಕಿತ್ಕೊಳ್ಳೋಕಾಗಲ್ಲ.+ 30 ನಾನೂ ನನ್ನ ಅಪ್ಪ ಒಂದೇ”*+ ಅಂದನು.
31 ಆಗ ಯೆಹೂದ್ಯರು ಯೇಸುಗೆ ಹೊಡಿಯೋಕೆ ಮತ್ತೆ ಕಲ್ಲು ಎತ್ಕೊಂಡ್ರು. 32 ಆಗ ಆತನು “ತಂದೆ ನನಗೆ ಹೇಳಿದ ಎಷ್ಟೋ ಒಳ್ಳೇ ಕೆಲಸಗಳನ್ನ ನಿಮಗೆ ತೋರಿಸಿದೆ. ಅದ್ರಲ್ಲಿ ಯಾವುದಕ್ಕಂತ ನನಗೆ ಕಲ್ಲು ಎಸಿಬೇಕಂತ ಇದ್ದೀರಾ?” ಅಂತ ಕೇಳಿದನು. 33 ಅದಕ್ಕೆ ಯೆಹೂದ್ಯರು “ಒಳ್ಳೇ ಕೆಲಸಕ್ಕಲ್ಲ, ನೀನು ದೇವರ ವಿರುದ್ಧ ಮಾತಾಡಿದ್ದಕ್ಕೆ.+ ನೀನು ಮನುಷ್ಯನಾಗಿದ್ರೂ ದೇವರು ಅಂತ ಹೇಳ್ಕೊಳ್ತಾ ಇದ್ದೀಯಲ್ಲಾ, ಅದಕ್ಕೆ ಕಲ್ಲು ಎಸಿಬೇಕಂತ ಇದ್ದೀವಿ” ಅಂದ್ರು. 34 ಯೇಸು “ನಿಮ್ಮ ನಿಯಮ ಪುಸ್ತಕದಲ್ಲಿ ‘ನೀವು ದೇವರುಗಳು’*+ ಅಂತ ದೇವರೇ ಹೇಳಿದ ಅಂತ ಬರೆದಿಲ್ವಾ? 35 ದೇವರ ಮಾತನ್ನ ಕೇಳದಿರೋ ಜನ್ರಿಗೇ ‘ದೇವರು’+ ಅಂತ ಕರಿದಿದ್ದಾನೆ. (ದೇವರ ಮಾತು ಯಾವತ್ತೂ ಸುಳ್ಳಾಗಲ್ಲ.) 36 ಹಾಗಿರುವಾಗ ನಾನು ದೇವರ ಮಗ+ ಅಂತ ಹೇಳಿದ್ರೆ ಅದೇಗೆ ‘ದೇವರ ವಿರುದ್ಧ ಮಾತಾಡಿದ’ ಹಾಗಾಗುತ್ತೆ? ಇಷ್ಟಕ್ಕೂ ಅಪ್ಪಾನೇ ನನ್ನನ್ನ ಪವಿತ್ರ ಮಾಡಿ ಲೋಕಕ್ಕೆ ಕಳಿಸಿದ್ದಾನೆ. 37 ನಾನು ಅಪ್ಪನ ಕೆಲಸಗಳನ್ನ ಮಾಡದಿದ್ರೆ ನನ್ನನ್ನ ನಂಬಬೇಡಿ. 38 ಮಾಡ್ತಾ ಇದ್ರೆ ನನ್ನನ್ನ ನಂಬದಿದ್ರೂ ಆ ಕೆಲಸಗಳನ್ನ ನಂಬಿ.+ ಆಗ ನಾನು ಮತ್ತು ಅಪ್ಪ ಆಪ್ತರಾಗಿ ಇದ್ದೀವಿ ಅಂತ ಅರ್ಥ ಮಾಡ್ಕೊಳ್ತೀರ. ಮುಂದೆನೂ ಅರ್ಥ ಮಾಡ್ಕೊಳ್ತೀರ”+ ಅಂದನು. 39 ಹಾಗಾಗಿ ಆ ಯೆಹೂದ್ಯರು ಆತನನ್ನ ಹಿಡಿಯೋಕೆ ಮತ್ತೆ ಪ್ರಯತ್ನಿಸಿದ್ರು. ಆದ್ರೆ ಯೇಸು ತಪ್ಪಿಸ್ಕೊಂಡನು.
40 ಆಮೇಲೆ ಯೇಸು ಯೋರ್ದನ್ ನದಿ ದಾಟಿ ಆಕಡೆ ಹೋದನು. ಈ ಮುಂಚೆ ಯೋಹಾನ ದೀಕ್ಷಾಸ್ನಾನ ಮಾಡಿಸ್ತಿದ್ದ ಸ್ಥಳಕ್ಕೆ+ ಹೋಗಿ ಅಲ್ಲೇ ಉಳ್ಕೊಂಡನು. 41 ತುಂಬ ಜನ ಆತನ ಹತ್ರ ಬಂದ್ರು. ಅವರು “ಯೋಹಾನ ಒಂದು ಅದ್ಭುತನೂ ಮಾಡಿಲ್ಲ. ಆದ್ರೆ ಇವನ ಬಗ್ಗೆ ಹೇಳಿದ್ದೆಲ್ಲ ನಿಜ”+ ಅಂತ ಮಾತಾಡ್ಕೊಳ್ತಿದ್ರು. 42 ಅಲ್ಲಿ ತುಂಬ ಜನ ಯೇಸು ಮೇಲೆ ನಂಬಿಕೆ ಇಟ್ರು.