ಅಧ್ಯಯನ ಲೇಖನ 31
ಪ್ರಾರ್ಥನೆ ಒಂದು ಬೆಲೆಕಟ್ಟಲಾಗದ ವರ
“ನಿನ್ನ ಸನ್ನಿಧಿಯಲ್ಲಿ ನನ್ನ ಪ್ರಾರ್ಥನೆ ವಿಶೇಷವಾಗಿ ತಯಾರಿಸಿದ ಧೂಪದ ತರ, . . . ಇರಲಿ.”—ಕೀರ್ತ. 141:2.
ಗೀತೆ 67 ಯೆಹೋವನಿಗೆ ಪ್ರತಿ ದಿನವೂ ಪ್ರಾರ್ಥಿಸಿರಿ
ಕಿರುನೋಟa
1. ಪ್ರಾರ್ಥನೆ ಮಾಡೋ ಅವಕಾಶದ ಬಗ್ಗೆ ನಿಮಗೆ ಹೇಗನಿಸುತ್ತೆ?
ಇಡೀ ಭೂಮಿ ಮತ್ತು ಆಕಾಶವನ್ನ ಸೃಷ್ಟಿ ಮಾಡಿರೋ ಯೆಹೋವ ದೇವರ ಹತ್ರ ಪ್ರಾರ್ಥನೆಯಲ್ಲಿ ಮಾತಾಡೋದು ನಮಗೆ ಸಿಕ್ಕಿರೋ ಒಂದು ದೊಡ್ಡ ಸುಯೋಗ ಅಲ್ವಾ? ಯೆಹೋವ ದೇವರ ಹತ್ರ ನಾವು ಯಾವಾಗ ಬೇಕಿದ್ರೂ, ಯಾವ ಭಾಷೆಯಲ್ಲಿ ಬೇಕಿದ್ರೂ ಮಾತಾಡಬಹುದು. ಈ ತರ ಮಾತಾಡೋಕು ಮುಂಚೆ ಆತನು ಯಾವಾಗ ಸಿಕ್ತಾನೆ ಅಂತ ಕೇಳಬೇಕಾಗಿಲ್ಲ. ಹುಷಾರಿಲ್ಲದೆ ಆಸ್ಪತ್ರೆಯಲ್ಲಿ ಇದ್ದಾಗ ಅಥವಾ ಜೈಲಲ್ಲಿ ಇದ್ದಾಗ ಪ್ರಾರ್ಥನೆ ಮಾಡಿದ್ರೂ ಆತನು ಕೇಳಿಸಿಕೊಳ್ಳುತ್ತಾನೆ. ನಮಗೆ ಈ ಅವಕಾಶ ಕೊಟ್ಟಿದ್ದಕ್ಕೆ ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿನೇ.
2. ರಾಜ ದಾವೀದ ತಾನು ಪ್ರಾರ್ಥನೆಯನ್ನ ಅಮೂಲ್ಯವಾಗಿ ನೋಡ್ತಿದ್ದ ಅಂತ ಹೇಗೆ ತೋರಿಸಿಕೊಟ್ಟ?
2 ರಾಜ ದಾವೀದ ಪ್ರಾರ್ಥನೆ ಮಾಡೋ ಸುಯೋಗವನ್ನ ತುಂಬ ಅಮೂಲ್ಯವಾಗಿ ನೋಡಿದ. ಅದಕ್ಕೆ ಅವನು, “ನಿನ್ನ ಸನ್ನಿಧಿಯಲ್ಲಿ ನನ್ನ ಪ್ರಾರ್ಥನೆ ವಿಶೇಷವಾಗಿ ತಯಾರಿಸಿದ ಧೂಪದ ತರ . . . ಇರಲಿ” ಅಂತ ಹೇಳಿದ. (ಕೀರ್ತ. 141:1, 2) ದಾವೀದನ ಕಾಲದಲ್ಲಿ ಆರಾಧನೆಗಾಗಿ ಉಪಯೋಗಿಸುತ್ತಿದ್ದ ಧೂಪವನ್ನ ತುಂಬ ಜಾಗ್ರತೆಯಿಂದ ತಯಾರಿಸುತ್ತಿದ್ರು. (ವಿಮೋ. 30:34, 35) ಅದೇ ತರ ದಾವೀದ ಯೆಹೋವನ ಹತ್ರ ಪ್ರಾರ್ಥನೆ ಮಾಡುವಾಗ ಏನು ಹೇಳಬೇಕು ಅನ್ನೋದನ್ನ ತುಂಬ ಜಾಗ್ರತೆಯಿಂದ ಯೋಚನೆ ಮಾಡ್ತಿದ್ದ. ಯೆಹೋವ ದೇವರು ನಮ್ಮ ಪ್ರಾರ್ಥನೆಯನ್ನ ಇಷ್ಟಪಡಬೇಕಂದ್ರೆ ನಾವೂ ಅದೇ ತರ ಮಾಡಬೇಕು.
3. ನಾವು ಯೆಹೋವ ದೇವರ ಹತ್ರ ಹೇಗೆ ಪ್ರಾರ್ಥನೆ ಮಾಡಬೇಕು ಮತ್ತು ಯಾಕೆ?
3 ನಾವು ಯಾವಾಗಲೂ ಭಯಭಕ್ತಿಯಿಂದ ಪ್ರಾರ್ಥನೆ ಮಾಡಬೇಕು. ಯೆಶಾಯ, ಯೆಹೆಜ್ಕೇಲ, ದಾನಿಯೇಲ ಮತ್ತು ಯೋಹಾನ ನೋಡಿದ ಅದ್ಭುತ ದರ್ಶನಗಳ ಬಗ್ಗೆ ಸ್ವಲ್ಪ ಯೋಚನೆ ಮಾಡಿ! ಯೆಶಾಯ ದರ್ಶನದಲ್ಲಿ, ಯೆಹೋವ ‘ಒಂದು ಉನ್ನತ ಸಿಂಹಾಸನದ ಮೇಲೆ ಕೂತಿದ್ದನ್ನ’ ನೋಡಿದ. (ಯೆಶಾ. 6:1-3) ಯೆಹೋವ ದೇವರು ಸ್ವರ್ಗೀಯ ರಥದ ಮೇಲೆ ಕೂತಿರೋದನ್ನ ಯೆಹೆಜ್ಕೇಲ ನೋಡಿದ. “ಆತನ ಸುತ್ತ ತೇಜಸ್ಸು . . . ಮಳೆಬಿಲ್ಲಿನ ತರ ಇತ್ತು.” (ಯೆಹೆ. 1:26-28) ದಾನಿಯೇಲ ದರ್ಶನದಲ್ಲಿ ‘ಮಹಾ ವೃದ್ಧನನ್ನ’ ನೋಡಿದ. ಆತನ ಬಟ್ಟೆ ಮಂಜಿನ ತರ ಬಿಳುಪಾಗಿತ್ತು, ಅಗ್ನಿಯ ಜ್ವಾಲೆ ಆತನ ಸಿಂಹಾಸನ ಆಗಿತ್ತು. (ದಾನಿ. 7:9, 10) ಯೋಹಾನ ನೋಡಿದ ದರ್ಶನದಲ್ಲಿ ಸಿಂಹಾಸನದ ಸುತ್ತಲು ಹಸಿರು ಬಣ್ಣದ ರತ್ನದ ತರ ಮುಗಿಲುಬಿಲ್ಲು ಇತ್ತು. (ಪ್ರಕ. 4:2-4) ಇವರು ನೋಡಿದ ದರ್ಶನ ಬೇರೆಬೇರೆಯಾಗಿತ್ತು. ಆದ್ರೆ ಇವರೆಲ್ಲರೂ ಯೆಹೋವ ದೇವರು ಮಹಿಮೆಯಿಂದ ತುಂಬಿರೋ ಸಿಂಹಾಸನದ ಮೇಲೆ ಕೂತಿರೋದನ್ನ ನೋಡಿದ್ರು. ಯೆಹೋವನಿಗಿರೋ ಈ ಮಹಿಮೆಯ ಬಗ್ಗೆ ಯೋಚನೆ ಮಾಡಿದಾಗ ಪ್ರಾರ್ಥನೆಯಲ್ಲಿ ಆತನ ಜೊತೆ ಮಾತಾಡೋದನ್ನ ನೆನಸಿಕೊಂಡ್ರೇನೇ ಮೈಯೆಲ್ಲಾ ಜುಮ್ ಅನ್ನುತ್ತೆ! ಹಾಗಾದ್ರೆ ಯೆಹೋವನಿಗೆ ಪ್ರಾರ್ಥನೆ ಮಾಡುವಾಗ ನಾವೆಷ್ಟು ಭಯ ಭಕ್ತಿಯಿಂದ ಮಾಡಬೇಕು ಅಂತ ಇದ್ರಿಂದ ಗೊತ್ತಾಗುತ್ತೆ ಅಲ್ವಾ? ಆದ್ರೆ ನಾವು ಪ್ರಾರ್ಥನೆಯಲ್ಲಿ ಏನೆಲ್ಲಾ ಹೇಳಬಹುದು?
“ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ”
4. ಮತ್ತಾಯ 6:9, 10ರಲ್ಲಿರೋ ಆರಂಭದ ಮಾತುಗಳಿಂದ ನಮಗೇನು ಗೊತ್ತಾಗುತ್ತೆ?
4 ಮತ್ತಾಯ 6:9, 10 ಓದಿ. ಯೇಸು ಬೆಟ್ಟದ ಭಾಷಣ ಕೊಡ್ತಿದ್ದಾಗ ದೇವರಿಗೆ ಇಷ್ಟ ಆಗೋ ತರ ಪ್ರಾರ್ಥನೆ ಮಾಡೋದು ಹೇಗೆ ಅಂತ ತನ್ನ ಶಿಷ್ಯರಿಗೆ ಕಲಿಸಿಕೊಟ್ಟನು. “ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ” ಅಂತ ಹೇಳಿದ ಮೇಲೆ ಯೇಸು ದೇವರ ಉದ್ದೇಶಗಳ ಬಗ್ಗೆ ಮೊದಲು ಪ್ರಾರ್ಥಿಸಿದನು. ಯೆಹೋವನ ಹೆಸರಿಗಾಗಿ, ಆತನ ಶತ್ರುಗಳನ್ನೆಲ್ಲಾ ನಾಶ ಮಾಡೋ ಆತನ ಆಳ್ವಿಕೆಗಾಗಿ ಮತ್ತು ಮುಂದೆ ಆತನು ಜನರಿಗೆ ಕೊಡೋ ಆಶೀರ್ವಾದಗಳಿಗಾಗಿ ಪ್ರಾರ್ಥನೆ ಮಾಡಿದನು. ನಾವೂ ಈ ವಿಷಯಗಳಿಗಾಗಿ ಪ್ರಾರ್ಥನೆ ಮಾಡುವಾಗ ಯೆಹೋವನ ಇಷ್ಟಾನೇ ನಮ್ಮ ಇಷ್ಟ ಅಂತ ತೋರಿಸಿಕೊಡ್ತೀವಿ.
5. ನಾವು ನಮ್ಮ ವೈಯಕ್ತಿಕ ವಿಷಯಗಳಿಗಾಗಿ ಪ್ರಾರ್ಥನೆ ಮಾಡಬಹುದಾ?
5 ಆಮೇಲೆ ನಾವು ನಮ್ಮ ವೈಯಕ್ತಿಕ ವಿಷಯಗಳಿಗಾಗಿ ಪ್ರಾರ್ಥನೆ ಮಾಡಬಹುದು ಅಂತ ಯೇಸು ಕಲಿಸಿದನು. ನಾವು ಯೆಹೋವನ ಹತ್ರ ಇವತ್ತಿಗೆ ಬೇಕಾಗಿರೋ ಊಟ ಕೊಡು, ನಮ್ಮ ತಪ್ಪುಗಳನ್ನ ಕ್ಷಮಿಸು, ಕಷ್ಟ ಬಂದಾಗ ಸೋತು ಹೋಗದ ಹಾಗೆ ಕಾಪಾಡು, ಸೈತಾನನಿಂದ ನಮ್ಮನ್ನ ರಕ್ಷಿಸು ಅಂತ ಕೇಳಿಕೊಳ್ಳಬಹುದು. (ಮತ್ತಾ. 6:11-13) ಹೀಗೆ ಕೇಳಿಕೊಂಡಾಗ ನಾವು ಆತನ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿಸಿದ್ದೀವಿ ಮತ್ತು ಆತನನ್ನು ಮೆಚ್ಚಿಸೋಕೆ ಎಷ್ಟು ಆಸೆ ಪಡ್ತೀವಿ ಅನ್ನೋದನ್ನ ತೋರಿಸಿಕೊಡ್ತೀವಿ.
6. ನಾವು ಯೇಸು ಹೇಳಿದ್ದನ್ನೇ ಬಾಯಿಪಾಠ ಮಾಡಿ ಪ್ರಾರ್ಥಿಸಬೇಕಾ? ವಿವರಿಸಿ.
6 ಯೇಸು ಪ್ರಾರ್ಥನೆಯಲ್ಲಿ ಹೇಳಿಕೊಟ್ಟ ವಿಷಯಗಳನ್ನೇ ನಾವೂ ಬಾಯಿಪಾಠ ಮಾಡಿಕೊಂಡು ಅದನ್ನೇ ಹೇಳಬೇಕು ಅಂತ ಆತನು ಹೇಳಲಿಲ್ಲ. ಯಾಕಂದ್ರೆ ಯೇಸು ಬೇರೆಬೇರೆ ಸನ್ನಿವೇಶಗಳಲ್ಲಿ ಬೇರೆಬೇರೆ ತರ ಪ್ರಾರ್ಥನೆ ಮಾಡುತ್ತಿದ್ದನು. ಆಗ ಅವನು ತನ್ನ ಮನಸ್ಸಲ್ಲಿದ್ದ ವಿಷಯಗಳಿಗಾಗಿ ಪ್ರಾರ್ಥನೆ ಮಾಡಿದನು. (ಮತ್ತಾ. 26:39, 42; ಯೋಹಾ. 17:1-26) ನಾವೂ ನಮ್ಮ ಮನಸ್ಸಲ್ಲಿ ಕಾಡುತ್ತಿರೋ ವಿಷಯಗಳ ಬಗ್ಗೆ ಪ್ರಾರ್ಥನೆ ಮಾಡಬಹುದು. ಉದಾಹರಣೆಗೆ, ಒಂದು ನಿರ್ಣಯ ಮಾಡೋಕೂ ಮುಂಚೆ ನಮಗೆ ತಿಳುವಳಿಕೆ ಮತ್ತು ವಿವೇಕ ಕೊಡು ಅಂತ ಪ್ರಾರ್ಥನೆ ಮಾಡಬಹುದು. (ಕೀರ್ತ. 119:33, 34) ಒಂದು ಕಷ್ಟವಾದ ನೇಮಕ ಸಿಕ್ಕಿದಾಗ ಅದನ್ನ ಚೆನ್ನಾಗಿ ಮಾಡೋಕೆ ಸಹಾಯ ಕೇಳಬಹುದು. (ಜ್ಞಾನೋ. 2:6) ಹೆತ್ತವರು ಮಕ್ಕಳಿಗಾಗಿ, ಮಕ್ಕಳು ಹೆತ್ತವರಿಗಾಗಿ ಪ್ರಾರ್ಥನೆ ಮಾಡಬಹುದು. ಅಷ್ಟೇ ಅಲ್ಲ, ನಾವು ಸಿಹಿಸುದ್ದಿ ಸಾರೋ ಜನರಿಗಾಗಿ ಮತ್ತು ನಮ್ಮ ಬೈಬಲ್ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಬಹುದು. ಹಾಗಾದರೆ ನಾವು ಅದು ಬೇಕು ಇದು ಬೇಕು ಅಂತ ಕೇಳೋಕಷ್ಟೇ ಪ್ರಾರ್ಥನೆ ಮಾಡಬೇಕಾ?
7. ನಾವು ಪ್ರಾರ್ಥನೆಯಲ್ಲಿ ಯೆಹೋವನನ್ನು ಯಾಕೆ ಹೊಗಳಬೇಕು?
7 ನಾವು ಪ್ರಾರ್ಥನೆಯಲ್ಲಿ ಯೆಹೋವನನ್ನು ಹೊಗಳಬೇಕು. ಯಾಕಂದ್ರೆ ಆತನು “ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ” ಇರ್ತಾನೆ, ‘ಕರುಣೆ, ಕನಿಕರ ಇರೋ ದೇವರು, ಥಟ್ಟಂತ ಕೋಪಿಸಿಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತಾನೆ, ಮತ್ತು ಆತನು ನಂಬಿಗಸ್ತನು.’ (ಕೀರ್ತ. 86:5, 15) ಯೆಹೋವನಿಗೆ ಸರಿಸಾಟಿ ಯಾರೂ ಇಲ್ಲ. ಅಷ್ಟೇ ಅಲ್ಲ, ಆತನು ನಮಗೋಸ್ಕರ ತುಂಬ ವಿಷಯಗಳನ್ನ ಮಾಡಿದ್ದಾನೆ. ಅದಕ್ಕೆ ನಾವು ಪ್ರಾರ್ಥನೆಯಲ್ಲಿ ಆತನನ್ನ ಹಾಡಿ ಹೊಗಳಬೇಕು.
8. ನಾವು ಯಾವುದಕ್ಕೆಲ್ಲಾ ಯೆಹೋವನಿಗೆ ಥ್ಯಾಂಕ್ಸ್ ಹೇಳಬಹುದು? (ಕೀರ್ತನೆ 104:12-15, 24)
8 ನಾವು ಪ್ರಾರ್ಥನೆಯಲ್ಲಿ ಯೆಹೋವ ದೇವರನ್ನ ಹೊಗಳೋದರ ಜೊತೆಗೆ ಆತನಿಗೆ ಥ್ಯಾಂಕ್ಸ್ ಹೇಳಬೇಕು. ಯಾಕಂದ್ರೆ ನಾವು ಸಂತೋಷವಾಗಿ ಇರಬೇಕು ಅಂತ ಆತನು ತುಂಬ ವಿಷಯಗಳನ್ನ ಮಾಡಿದ್ದಾನೆ. ಉದಾಹರಣೆಗೆ, ಬಣ್ಣಬಣ್ಣದ ಹೂವುಗಳನ್ನ, ರುಚಿರುಚಿಯಾಗಿರೋ ಹಣ್ಣು ಹಂಪಲುಗಳನ್ನ ಮತ್ತು ನಾವು ಖುಷಿಖುಷಿಯಾಗಿರೋಕೆ ಸ್ನೇಹಿತರನ್ನ ಕೊಟ್ಟಿದ್ದಾನೆ. (ಕೀರ್ತನೆ 104:12-15, 24 ಓದಿ.) ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ನಂಬಿಕೆನ ಜಾಸ್ತಿ ಮಾಡಿಕೊಳ್ಳೋಕೆ ಬೇಕಾಗಿರೋ ಆಧ್ಯಾತ್ಮಿಕ ಆಹಾರವನ್ನ ಮತ್ತು ನಿರೀಕ್ಷೆಯನ್ನ ಕೊಟ್ಟಿದ್ದಾನೆ. ಅದಕ್ಕೆ ನಾವು ಥ್ಯಾಂಕ್ಸ್ ಹೇಳಲೇಬೇಕು.
9. ನಾವು ಯೆಹೋವನಿಗೆ ಮರೆಯದೇ ಥ್ಯಾಂಕ್ಸ್ ಹೇಳೋಕೆ ಏನು ಮಾಡಬಹುದು? (1 ಥೆಸಲೊನೀಕ 5:17, 18)
9 ಕೆಲವೊಂದು ಸಲ ನಾವು ಯೆಹೋವನಿಗೆ ಥ್ಯಾಂಕ್ಸ್ ಹೇಳೋದನ್ನ ಮರೆತುಬಿಡ್ತೀವಿ. ಈ ತರ ಆಗದೇ ಇರೋಕೆ ಏನು ಮಾಡಬಹುದು? ನೀವು ಯಾವುದಕ್ಕೆಲ್ಲಾ ಪ್ರಾರ್ಥನೆ ಮಾಡಿದ್ದೀರ ಅನ್ನೋದನ್ನ ಒಂದು ಕಡೆ ಬರೆದಿಡಿ. ಅದ್ರಲ್ಲಿ ಯೆಹೋವ ಯಾವುದಕ್ಕೆಲ್ಲ ಉತ್ತರ ಕೊಟ್ಟಿದ್ದಾನೆ ಅಂತ ಯೋಚನೆ ಮಾಡಿ. ಆಮೇಲೆ ಅದಕ್ಕೆ ಆತನಿಗೆ ಥ್ಯಾಂಕ್ಸ್ ಹೇಳಿ. (1 ಥೆಸಲೊನೀಕ 5:17, 18 ಓದಿ.) ನಾವು ಯಾರಿಗಾದರೂ ಸಹಾಯ ಮಾಡಿದಾಗ ಅವರು ಥ್ಯಾಂಕ್ಸ್ ಹೇಳಿದ್ರೆ ನಮಗೆ ತುಂಬ ಖುಷಿಯಾಗುತ್ತೆ. ಅದೇ ತರ ಯೆಹೋವ ನಮ್ಮ ಪ್ರಾರ್ಥನೆಗೆ ಉತ್ತರ ಕೊಟ್ಟಾಗ ಮರೆಯದೆ ಆತನಿಗೆ ಥ್ಯಾಂಕ್ಸ್ ಹೇಳಿದ್ರೆ ಆತನಿಗೂ ತುಂಬ ಖುಷಿಯಾಗುತ್ತೆ. (ಕೊಲೊ. 3:15) ಆತನಿಗೆ ಥ್ಯಾಂಕ್ಸ್ ಹೇಳೋಕೆ ಇನ್ನೊಂದು ಕಾರಣನೂ ಇದೆ. ಅದು ಯಾವುದು ಅಂತ ನೋಡೋಣ.
ಯೆಹೋವ ತನ್ನ ಪ್ರೀತಿಯ ಪುತ್ರನನ್ನ ಕೊಟ್ಟಿದ್ದಕ್ಕೆ ಋಣಿಯಾಗಿರಿ
10. ನಾವು ಯೆಹೋವನಿಗೆ ಥ್ಯಾಂಕ್ಸ್ ಹೇಳೋಕೆ 1 ಪೇತ್ರ 2:21ರಲ್ಲಿ ಇನ್ಯಾವ ಕಾರಣ ಇದೆ?
10 ಒಂದನೇ ಪೇತ್ರ 2:21 ಓದಿ. ಯೆಹೋವ ದೇವರು ಯೇಸುನ ಕಳಿಸಿಕೊಟ್ಟಿದ್ರಿಂದ ನಾವು ತುಂಬ ವಿಷಯಗಳನ್ನ ಕಲಿಯೋಕೆ ಆಯ್ತು. ಅದಕ್ಕೆ ನಾವು ಆತನಿಗೆ ತುಂಬ ಥ್ಯಾಂಕ್ಸ್ ಹೇಳಬೇಕು. ಯೇಸುವಿನ ಜೀವನದ ಬಗ್ಗೆ ನಾವು ತಿಳಿದುಕೊಂಡಿದ್ರಿಂದ ಯೆಹೋವ ದೇವರ ಬಗ್ಗೆ ಮತ್ತು ಆತನನ್ನ ಹೇಗೆ ಮೆಚ್ಚಿಸೋದು ಅನ್ನೋದರ ಬಗ್ಗೆ ಕಲಿಯೋಕೆ ಆಯ್ತು. ಅಷ್ಟೇ ಅಲ್ಲ, ಯೇಸು ಮಾಡಿರೋ ತ್ಯಾಗದಿಂದ ನಾವು ಯೆಹೋವ ದೇವರ ಜೊತೆ ಒಳ್ಳೇ ಫ್ರೆಂಡ್ ಆಗಿರೋಕೆ ಮತ್ತು ಜೀವನದಲ್ಲಿ ಖುಷಿ ಖುಷಿಯಾಗಿರೋಕೆ ಆಯ್ತು.—ರೋಮ. 5:1.
11. ನಮ್ಮ ಪ್ರಾರ್ಥನೆಗಳು ಯೆಹೋವನಿಗೆ ತಲುಪೋಕೆ ಯೇಸು ಹೇಗೆ ಸಹಾಯ ಮಾಡ್ತಾನೆ?
11 ನಾವು ಮಾಡೋ ಪ್ರಾರ್ಥನೆಗಳು ಯೇಸು ಮುಖಾಂತರಾನೇ ಯೆಹೋವನಿಗೆ ತಲುಪುತ್ತೆ. ಈ ಏರ್ಪಾಡನ್ನ ಮಾಡಿದ್ದಕ್ಕೆ ನಾವು ಯೆಹೋವನಿಗೆ ಥ್ಯಾಂಕ್ಸ್ ಹೇಳಬೇಕು. ನಾವು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಿದ್ರೆ ಯೆಹೋವ ದೇವರು ನಮ್ಮ ಪ್ರಾರ್ಥನೆಯನ್ನ ಕೇಳಿ ಅದಕ್ಕೆ ಉತ್ತರ ಕೊಡ್ತಾನೆ. ಯಾಕಂದ್ರೆ “ನನ್ನ ಮೂಲಕ ನೀವು ಏನೇ ಕೇಳಿದ್ರೂ ಅದನ್ನ ನಾನು ಮಾಡ್ತೀನಿ. ಮಗನ ಮೂಲಕ ಅಪ್ಪನಿಗೆ ಹೊಗಳಿಕೆ ಸಿಗೋ ತರ ಮಾಡ್ತೀನಿ” ಅಂತ ಯೇಸುನೇ ಹೇಳಿದ್ದಾನೆ.—ಯೋಹಾ. 14:13, 14.
12. ಯೆಹೋವ ತನ್ನ ಮಗನ ಮೂಲಕ ಮಾಡಿರೋ ಯಾವ ಸಹಾಯಕ್ಕಾಗಿ ನಾವು ಆತನಿಗೆ ಥ್ಯಾಂಕ್ಸ್ ಹೇಳಬಹುದು?
12 ಯೆಹೋವ ದೇವರು ನಮ್ಮ ಪಾಪಗಳನ್ನ ಯೇಸು ಕೊಟ್ಟ ಬಿಡುಗಡೆ ಬೆಲೆಯ ಆಧಾರದ ಮೇಲೆ ಕ್ಷಮಿಸುತ್ತಾನೆ. ಅದಕ್ಕೆ ಬೈಬಲ್ ಯೇಸುವನ್ನ ‘ಸ್ವರ್ಗದಲ್ಲಿ ಮಹಾನ್ ದೇವರ ಸಿಂಹಾಸನದ ಬಲಗಡೆ ಕೂತಿರೋ ಮಹಾ ಪುರೋಹಿತ’ ಅಂತ ಕರೆಯುತ್ತೆ. (ಇಬ್ರಿ. 8:1) ಯೇಸು, ನಮಗೆ “ಸಹಾಯ ಮಾಡೋಕೆ” ಅಂತಾನೇ ಯೆಹೋವನ ಜೊತೆ ಇದ್ದಾನೆ. (1 ಯೋಹಾ. 2:1) ‘ನಮಗೋಸ್ಕರ ಅಂಗಲಾಚಿ ಬೇಡೋ’ ಇಂಥ ಕರುಣಾಮಯಿ ಮಹಾ ಪುರೋಹಿತನನ್ನ ಕೊಟ್ಟಿದ್ದಕ್ಕೆ ನಾವು ಯೆಹೋವ ದೇವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ. (ರೋಮ. 8:34; ಇಬ್ರಿ. 4:15) ನಾವು ಅಪರಿಪೂರ್ಣರು. ಯೇಸುವಿನ ಬಿಡುಗಡೆ ಬೆಲೆ ಇಲ್ಲಾಂದ್ರೆ ನಾವು ಯೆಹೋವನ ಹತ್ರ ನೇರವಾಗಿ ಮಾತಾಡೋಕೆ ಆಗಲ್ಲ. ನಮಗೆ ಸಹಾಯ ಮಾಡೋಕೆ ಯೆಹೋವ ದೇವರು ತನ್ನ ಒಬ್ಬನೇ ಮಗನನ್ನ ಕೊಟ್ಟಿದ್ದಾನೆ. ಈ ಅಮೂಲ್ಯವಾದ ಉಡುಗೊರೆಗೆ ಯಾರೂ ಬೆಲೆ ಕಟ್ಟೋಕಾಗಲ್ಲ!
ಸಹೋದರ ಸಹೋದರಿಯರಿಗೋಸ್ಕರ ಪ್ರಾರ್ಥಿಸಿ
13. ಸಾಯೋ ಪರಿಸ್ಥಿತಿಯಲ್ಲೂ ಯೇಸು ತನ್ನ ಶಿಷ್ಯರ ಮೇಲೆ ಪ್ರೀತಿಯಿದೆ ಅಂತ ಹೇಗೆ ತೋರಿಸಿದನು?
13 ಯೇಸು ಸಾಯುವುದಕ್ಕೆ ಮುಂಚೆ ತನ್ನ ಶಿಷ್ಯರಿಗೋಸ್ಕರ ತುಂಬ ಹೊತ್ತು ಪ್ರಾರ್ಥನೆ ಮಾಡಿದನು. “ಇವ್ರನ್ನ ಸೈತಾನನಿಂದ ಕಾಪಾಡು” ಅಂತ ಯೆಹೋವನ ಹತ್ರ ಕೇಳಿಕೊಂಡನು. (ಯೋಹಾ. 17:15) ಇದ್ರಿಂದ ಯೇಸು ತನ್ನ ಶಿಷ್ಯರನ್ನ ಎಷ್ಟು ಪ್ರೀತಿಸುತ್ತಿದ್ದನು ಅಂತ ಗೊತ್ತಾಗುತ್ತೆ. ಯೇಸು ತನ್ನ ಪ್ರಾಣನೇ ಹೋಗುತ್ತಿದ್ರೂ ತನ್ನ ಬಗ್ಗೆ ಯೋಚಿಸದೆ, ಅಪೊಸ್ತಲರ ಬಗ್ಗೆ ಚಿಂತೆ ಮಾಡುತ್ತಿದ್ದನು.
14. ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು?
14 ನಾವು ಯೇಸು ತರಾನೇ ಇರಬೇಕು. ನಾವು ಯಾವಾಗಲೂ ನಮ್ಮ ಬಗ್ಗೆನೇ ಯೋಚನೆ ಮಾಡ್ತಾ ಇರಬಾರದು. ನಮ್ಮ ಸಹೋದರ ಸಹೋದರಿಯರಿಗೋಸ್ಕರ ಪ್ರಾರ್ಥನೆ ಮಾಡಬೇಕು. ಹೀಗೆ ಮಾಡುವಾಗ ಒಬ್ಬರನ್ನೊಬ್ಬರು ಪ್ರೀತಿಸಬೇಕು ಅಂತ ಯೇಸು ಕೊಟ್ಟ ಆಜ್ಞೆಯನ್ನ ಪಾಲಿಸುತ್ತೀವಿ ಮತ್ತು ನಮ್ಮ ಸಹೋದರ ಸಹೋದರಿಯರನ್ನ ನಾವು ಎಷ್ಟು ಇಷ್ಟ ಪಡ್ತೀವಿ ಅಂತ ಯೆಹೋವನಿಗೆ ಗೊತ್ತಾಗುತ್ತೆ. (ಯೋಹಾ. 13:34) ನಮ್ಮ ಪ್ರಾರ್ಥನೆ ಸಹೋದರ ಸಹೋದರಿಯರಿಗೆ ತುಂಬ ಸಹಾಯ ಮಾಡುತ್ತೆ. ಯಾಕಂದ್ರೆ “ನೀತಿವಂತರು ಅಂಗಲಾಚಿ ಮಾಡೋ ಪ್ರಾರ್ಥನೆಗೆ ತುಂಬ ಶಕ್ತಿ ಇದೆ” ಅಂತ ಬೈಬಲ್ ಹೇಳುತ್ತೆ.—ಯಾಕೋ. 5:16.
15. ನಮ್ಮ ಸಹೋದರ ಸಹೋದರಿಯರಿಗೋಸ್ಕರ ನಾವು ಯಾಕೆ ಪ್ರಾರ್ಥನೆ ಮಾಡಬೇಕು?
15 ನಮ್ಮ ಸಹೋದರ ಸಹೋದರಿಯರು ತುಂಬ ಕಷ್ಟಗಳನ್ನ ಎದುರಿಸುತ್ತಿರೋದ್ರಿಂದ ನಾವು ಅವರಿಗೋಸ್ಕರ ಪ್ರಾರ್ಥನೆ ಮಾಡಬೇಕು. ಉದಾಹರಣೆಗೆ, ಕೆಲವರಿಗೆ ಹುಷಾರಿಲ್ಲ, ಇನ್ನೂ ಕೆಲವರು ನೈಸರ್ಗಿಕ ವಿಪತ್ತಿನಿಂದ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಕೆಲವು ಕಡೆ ಯುದ್ಧಗಳಾಗುತ್ತಿದೆ ಮತ್ತು ಕೆಲವರು ವಿರೋಧ ಹಿಂಸೆಯನ್ನ ಎದುರಿಸುತ್ತಿದ್ದಾರೆ. ಹಾಗಾಗಿ ಇದನ್ನೆಲ್ಲಾ ಸಹಿಸಿಕೊಳ್ಳೋಕೆ ಅವರಿಗೆ ಶಕ್ತಿ ಕೊಡಪ್ಪಾ ಅಂತ ಯೆಹೋವನ ಹತ್ರ ನಾವು ಬೇಡಿಕೊಳ್ಳಬೇಕು. ಅಂಥವರಲ್ಲಿ ನಿಮಗೆ ಯಾರಾದ್ರೂ ಗೊತ್ತಿದ್ರೆ, ಅವರ ಹೆಸ್ರನ್ನ ಹೇಳಿ ಪ್ರಾರ್ಥನೆ ಮಾಡಿ. ಅಷ್ಟೇ ಅಲ್ಲ, ಅವರಿಗೆ ಸಹಾಯ ಮಾಡ್ತಿರೋ ಸಹೋದರ ಸಹೋದರಿಯರಿಗೋಸ್ಕರನೂ ಬೇಡಿಕೊಳ್ಳಿ. ಆಗ ನೀವು ನಿಜವಾಗಲೂ ಅವರನ್ನ ಪ್ರೀತಿಸ್ತೀರ ಅಂತ ತೋರಿಸಿಕೊಡ್ತೀರ.
16. ಸಭೆಯಲ್ಲಿ ಮುಂದೆ ನಿಂತು ಕೆಲಸ ಮಾಡುವವರಿಗೋಸ್ಕರ ಯಾಕೆ ಪ್ರಾರ್ಥಿಸಬೇಕು?
16 ಸಭೆಯಲ್ಲಿ ಮುಂದೆ ನಿಂತು ಕೆಲಸ ಮಾಡೋ ಸಹೋದರರಿಗೋಸ್ಕರ ನಾವು ಪ್ರಾರ್ಥನೆ ಮಾಡಿದ್ರೆ, ಅವರಿಗೆ ತುಂಬ ಖುಷಿಯಾಗುತ್ತೆ. ಅದರಿಂದ ಅವರಿಗೆ ಸಹಾಯನೂ ಆಗುತ್ತೆ. “ನಾನು ಸಿಹಿಸುದ್ದಿಯ ಪವಿತ್ರ ರಹಸ್ಯವನ್ನ ಸಾರುವಾಗ ಸರಿಯಾದ ಪದಗಳನ್ನ ಬಳಸೋಕೆ, ಧೈರ್ಯವಾಗಿ ಮಾತಾಡೋಕೆ ನನಗೋಸ್ಕರ ಪ್ರಾರ್ಥಿಸಿ” ಅಂತ ಅಪೊಸ್ತಲ ಪೌಲ ಕೇಳಿಕೊಂಡ. (ಎಫೆ. 6:19) ಇವತ್ತೂ ಸಹ ಸಹೋದರರು ನಮಗೋಸ್ಕರ ಕಷ್ಟಪಟ್ಟು ಕೆಲಸ ಮಾಡ್ತಿದ್ದಾರೆ. ಅವರನ್ನ ಮತ್ತು ಅವರು ಮಾಡ್ತಿರೋ ಕೆಲಸವನ್ನ ಆಶೀರ್ವದಿಸಪ್ಪಾ ಅಂತ ಯೆಹೋವನ ಹತ್ರ ಬೇಡಿಕೊಳ್ಳಬಹುದು. ಹೀಗೆ ಮಾಡಿದ್ರೆ, ಅವರ ಮೇಲೆ ನಮಗೆ ತುಂಬ ಪ್ರೀತಿಯಿದೆ ಅಂತ ತೋರಿಸ್ತೀವಿ.
ನಿಮಗೆ ಯಾರಾದ್ರೂ ಪ್ರಾರ್ಥನೆ ಮಾಡೋಕೆ ಹೇಳಿದಾಗ
17-18. ಯಾವಾಗೆಲ್ಲಾ ನಾವು ಬೇರೆಯವರಿಗೋಸ್ಕರ ಪ್ರಾರ್ಥನೆ ಮಾಡಬೇಕಾಗಬಹುದು? ಆಗ ನಾವು ಏನನ್ನ ಮನಸ್ಸಲ್ಲಿಡಬೇಕು?
17 ಕೆಲವೊಮ್ಮೆ ಬೇರೆಯವರಿಗೋಸ್ಕರ ಪ್ರಾರ್ಥನೆ ಮಾಡುವ ಅವಕಾಶಗಳು ನಮಗೆ ಸಿಗುತ್ತೆ. ಉದಾಹರಣೆಗೆ, ಒಬ್ಬ ಸಹೋದರಿ ಇನ್ನೊಬ್ಬ ಸಹೋದರಿಯನ್ನ ತನ್ನ ಬೈಬಲ್ ಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ ಅಂತ ನೆನಸಿ. ಆಗ ಅವರು ತನ್ನ ಜೊತೆ ಸ್ಟಡಿಗೆ ಬಂದಿರೋ ಸಹೋದರಿಗೆ ಪ್ರಾರ್ಥನೆ ಮಾಡೋಕೆ ಹೇಳಬಹುದು. ಆದ್ರೆ ಹೊಸದಾಗಿ ಬಂದಿರೋ ಸಹೋದರಿಗೆ ವಿದ್ಯಾರ್ಥಿಯ ಬಗ್ಗೆ ಜಾಸ್ತಿ ಗೊತ್ತಿಲ್ಲದೇ ಇರೋದ್ರಿಂದ ಸ್ಟಡಿ ಶುರುವಾಗುವಾಗ ಪ್ರಾರ್ಥನೆ ಮಾಡೋದಕ್ಕಿಂತ ಸ್ಟಡಿ ಮುಗಿದ ಮೇಲೆ ಪ್ರಾರ್ಥನೆ ಮಾಡಿದ್ರೆ ಚೆನ್ನಾಗಿರುತ್ತೆ. ಯಾಕಂದ್ರೆ ವಿದ್ಯಾರ್ಥಿಯ ಬಗ್ಗೆ ಮತ್ತು ಅವರಿಗೆ ಯಾವ ಸಹಾಯ ಬೇಕು ಅಂತ ತಿಳಿದುಕೊಂಡು ಅದಕ್ಕೆ ತಕ್ಕ ಹಾಗೆ ಪ್ರಾರ್ಥನೆ ಮಾಡೋಕಾಗುತ್ತೆ.
18 ಒಬ್ಬ ಸಹೋದರನಿಗೆ ಕ್ಷೇತ್ರ ಸೇವಾ ಕೂಟದಲ್ಲೋ ಅಥವಾ ಸಭೆಯಲ್ಲೋ ಪ್ರಾರ್ಥನೆ ಮಾಡೋಕೆ ಹೇಳಬಹುದು. ಆಗ ಆ ಸಹೋದರ ಕೂಟದ ಉದ್ದೇಶ ಏನು ಅನ್ನೋದನ್ನ ಮೊದಲು ಮನಸ್ಸಲ್ಲಿ ಇಟ್ಟುಕೊಳ್ಳಬೇಕು. ಅವನು ಮಾಡೋ ಪ್ರಾರ್ಥನೆ ಸಲಹೆ ಕೊಡೋ ತರನೋ ಅಥವಾ ಪ್ರಕಟಣೆ ಮಾಡೋ ತರನೋ ಇರಬಾರದು. ಸಾಮಾನ್ಯವಾಗಿ ಕೂಟಗಳಲ್ಲಿ ಗೀತೆ ಮತ್ತು ಪ್ರಾರ್ಥನೆಗೆ ಅಂತ 5 ನಿಮಿಷ ಕೊಟ್ಟಿರುತ್ತಾರೆ. ಹಾಗಾಗಿ ಪ್ರಾರ್ಥನೆ ಮಾಡುವಾಗ ‘ತುಂಬ ಮಾತಾಡುತ್ತಾ’ ಇರಬಾರದು. ಅದ್ರಲ್ಲೂ ಕೂಟದ ಆರಂಭದ ಪ್ರಾರ್ಥನೆಯನ್ನ ಹೀಗೆ ಮಾಡದೇ ಇದ್ರೆ ಒಳ್ಳೇದು.—ಮತ್ತಾ. 6:7.
ನಿಮ್ಮ ಜೀವನದಲ್ಲಿ ಪ್ರಾರ್ಥನೆ ಮುಖ್ಯವಾಗಿರಲಿ
19. ಯೆಹೋವನ ನ್ಯಾಯತೀರ್ಪಿನ ದಿನಕ್ಕೆ ತಯಾರಾಗಿರೋಕೆ ಯಾವುದು ಸಹಾಯ ಮಾಡುತ್ತೆ?
19 ನಾವು ಯಾವಾಗಲೂ ಪ್ರಾರ್ಥನೆ ಮಾಡ್ತಾ ಇರಬೇಕು. ಅದ್ರಲ್ಲೂ ಯೆಹೋವನ ನ್ಯಾಯತೀರ್ಪಿನ ದಿನ ಹತ್ತಿರ ಆಗ್ತಾ ಇದ್ದ ಹಾಗೆ ಇನ್ನೂ ಜಾಸ್ತಿ ಪ್ರಾರ್ಥನೆ ಮಾಡಬೇಕು. “ಯಾವಾಗ್ಲೂ ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಿ. ಆಗ ನಡಿಬೇಕಾದ ಈ ಎಲ್ಲ ವಿಷ್ಯಗಳಿಂದ ತಪ್ಪಿಸ್ಕೊಂಡು ಮನುಷ್ಯಕುಮಾರನ ಮುಂದೆ ನಿಲ್ಲೋಕಾಗುತ್ತೆ” ಅಂತ ಯೇಸು ಹೇಳಿದನು. (ಲೂಕ 21:36) ನಾವು ಎಷ್ಟು ಪ್ರಾರ್ಥನೆ ಮಾಡ್ತೀವೋ ನಮ್ಮ ನಂಬಿಕೆ ಅಷ್ಟು ಗಟ್ಟಿಯಾಗುತ್ತೆ. ಯೆಹೋವನ ನ್ಯಾಯತೀರ್ಪಿನ ದಿನ ಬಂದಾಗ ನಾವು ತಯಾರಾಗಿ ಇರ್ತೀವಿ.
20. ನಮ್ಮ ಪ್ರಾರ್ಥನೆ ಸುವಾಸನೆಯ ಧೂಪದ ತರ ಇರಬೇಕಂದ್ರೆ ಏನು ಮಾಡಬೇಕು?
20 ನಾವು ಇಲ್ಲಿ ತನಕ ಏನು ಕಲಿತ್ವಿ? ಪ್ರಾರ್ಥನೆ ಅನ್ನೋದು ಬೆಲೆ ಕಟ್ಟಲಾಗದ ಒಂದು ವರವಾಗಿದೆ. ಹಾಗಾಗಿ ನಾವು ಯೆಹೋವನಿಗೆ ಏನು ಇಷ್ಟಾನೋ ಆ ವಿಷಯಗಳ ಬಗ್ಗೆ ಮುಖ್ಯವಾಗಿ ಪ್ರಾರ್ಥನೆ ಮಾಡಬೇಕು. ಆತನು ನಮಗೋಸ್ಕರ ತನ್ನ ಮಗನನ್ನ ಕೊಟ್ಟಿರೋದ್ರಿಂದ ಮತ್ತು ಮುಂದೆ ತನ್ನ ಸರ್ಕಾರನ ತರೋದ್ರಿಂದ ಆತನಿಗೆ ಥ್ಯಾಂಕ್ಸ್ ಹೇಳಬೇಕು. ನಮ್ಮ ಸಹೋದರ ಸಹೋದರಿಯರಿಗೋಸ್ಕರನೂ ನಾವು ಪ್ರಾರ್ಥನೆ ಮಾಡಬಹುದು. ಅಷ್ಟೇ ಅಲ್ಲ, ನಮಗೆ ಬೇಕಾಗಿರೋ ವಿಷಯಗಳಿಗೆ ಮತ್ತು ಆತನ ಮೇಲಿರೋ ನಮ್ಮ ನಂಬಿಕೆಯನ್ನ ಜಾಸ್ತಿಮಾಡಿಕೊಳ್ಳೋಕೆ ಯೆಹೋವನ ಹತ್ರ ಸಹಾಯ ಕೇಳಬಹುದು. ನಾವು ಪ್ರಾರ್ಥನೆ ಮಾಡೋಕೆ ಮುಂಚೆ ಚೆನ್ನಾಗಿ ಯೋಚನೆ ಮಾಡಿ ಮಾತಾಡಬೇಕು. ಆಗ ನಾವು ಪ್ರಾರ್ಥನೆಯನ್ನ ಅಮೂಲ್ಯವಾಗಿ ನೋಡ್ತಿದ್ದೀವಿ ಅಂತ ತೋರಿಸ್ತೀವಿ ಮತ್ತು ನಮ್ಮ ಪ್ರಾರ್ಥನೆಗಳು ಯೆಹೋವ ದೇವರ ಮನಸ್ಸಿಗೆ ‘ಖುಷಿ’ ಕೊಡೋ ಸುವಾಸನೆಯ ಧೂಪದ ತರ ಇರುತ್ತೆ.—ಜ್ಞಾನೋ. 15:8.
ಗೀತೆ 57 ನನ್ನ ಹೃದಯದ ಧ್ಯಾನ
a ಯೆಹೋವ ನಮಗೆ ಪ್ರಾರ್ಥನೆ ಅನ್ನೋ ವರ ಕೊಟ್ಟಿರೋದ್ರಿಂದ ನಾವಾತನಿಗೆ ಯಾವಾಗಲೂ ಋಣಿಗಳಾಗಿರಬೇಕು. ನಮ್ಮ ಪ್ರಾರ್ಥನೆಗಳು ಆತನಿಗೆ ಇಷ್ಟ ಆಗಬೇಕು, ಮತ್ತು ನಾವು ಮಾಡೋ ಪ್ರಾರ್ಥನೆ ಸುವಾಸನೆ ಕೊಡೋ ಧೂಪದ ತರ ಇರಬೇಕು ಅಂತ ಬಯಸ್ತೀವಿ. ಹಾಗಾಗಿ ನಾವು ಯಾವುದಕ್ಕೆಲ್ಲಾ ಪ್ರಾರ್ಥನೆ ಮಾಡಬಹುದು ಮತ್ತು ಬೇರೆಯವರು ನಮ್ಮನ್ನ ತಮ್ಮ ಪರವಾಗಿ ಪ್ರಾರ್ಥನೆ ಮಾಡೋಕೆ ಕೇಳಿಕೊಂಡಾಗ ನಾವೇನನ್ನ ಮನಸ್ಸಲ್ಲಿ ಇಟ್ಟುಕೊಳ್ಳಬೇಕು ಅಂತ ಈ ಲೇಖನದಲ್ಲಿ ನೋಡೋಣ.
b ಚಿತ್ರ ವಿವರಣೆ: ಸ್ಕೂಲ್ಗೆ ಹೋಗಿರೋ ತನ್ನ ಮಕ್ಕಳಿಗೋಸ್ಕರ, ಹುಷಾರಿಲ್ಲದಿರೋ ತನ್ನ ಅಪ್ಪನಿಗೋಸ್ಕರ ಮತ್ತು ತಮ್ಮ ಬೈಬಲ್ ವಿದ್ಯಾರ್ಥಿ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳಸಿಕೊಳ್ಳೋಕೋಸ್ಕರ ಒಬ್ಬ ಸಹೋದರ ತನ್ನ ಹೆಂಡತಿ ಜೊತೆ ಪ್ರಾರ್ಥನೆ ಮಾಡ್ತಿದ್ದಾನೆ.
c ಚಿತ್ರ ವಿವರಣೆ: ಯೆಹೋವ ದೇವರು ತನ್ನ ಮಗನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಕ್ಕೆ, ಸುಂದರ ಭೂಮಿಯನ್ನ ನಮಗೆ ಮನೆಯಾಗಿ ಕೊಟ್ಟಿದ್ದಕ್ಕೆ ಮತ್ತು ರುಚಿರುಚಿಯಾದ ಹಣ್ಣು ಹಂಪಲುಗಳನ್ನ ಕೊಟ್ಟಿದ್ದಕ್ಕೆ ಒಬ್ಬ ಯುವ ಸಹೋದರ ಯೆಹೋವನಿಗೆ ಥ್ಯಾಂಕ್ಸ್ ಹೇಳ್ತಿದ್ದಾನೆ.
d ಚಿತ್ರ ವಿವರಣೆ: ಒಬ್ಬ ಸಹೋದರಿ ಯೆಹೋವ ದೇವರ ಹತ್ರ ಆಡಳಿತ ಮಂಡಲಿಯ ಸಹೋದರರಿಗೆ ಇನ್ನೂ ಹೆಚ್ಚಿನ ಪವಿತ್ರ ಶಕ್ತಿ ಕೊಡಿ ಅಂತ ಕೇಳಿಕೊಳ್ಳುತ್ತಿದ್ದಾರೆ. ನೈಸರ್ಗಿಕ ವಿಪತ್ತಿಂದ ಕಷ್ಟ ಅನುಭವಿಸುತ್ತಿರೋ ಮತ್ತು ವಿರೋಧ ಹಿಂಸೆಗಳನ್ನ ಎದುರಿಸುತ್ತಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡಿ ಅಂತ ಬೇಡಿಕೊಳ್ತಿದ್ದಾರೆ.