ಯೋಹಾನ
13 ಈ ಲೋಕ ಬಿಟ್ಟು ಅಪ್ಪನ+ ಹತ್ರ ಹೋಗೋ ಸಮಯ+ ಹತ್ರ ಆಗಿದೆ ಅಂತ ಯೇಸುಗೆ ಪಸ್ಕ ಹಬ್ಬಕ್ಕಿಂತ ಮುಂಚೆನೇ ಗೊತ್ತಿತ್ತು. ಹಾಗಾಗಿ ಲೋಕದಲ್ಲಿದ್ದ ತನ್ನ ಜನ್ರನ್ನ ಪ್ರೀತಿಸಿದನು. ಕೊನೇ ತನಕ ಅವ್ರನ್ನ ಪ್ರೀತಿಸ್ತಾನೇ ಇದ್ದನು.+ 2 ಯೇಸು ಮತ್ತು ಶಿಷ್ಯರು ರಾತ್ರಿ ಊಟಕ್ಕೆ ಸೇರಿ ಬಂದಿದ್ರು. ಆದ್ರೆ ಯೇಸುಗೆ ಮೋಸಮಾಡಿ ಹಿಡ್ಕೊಡಬೇಕು+ ಅನ್ನೋ ಯೋಚನೆಯನ್ನ ಸೈತಾನ ಈಗಾಗಲೇ ಸೀಮೋನನ ಮಗ ಇಸ್ಕರಿಯೂತ ಯೂದನ+ ಮನಸ್ಸಲ್ಲಿ ಬಿತ್ತಿದ್ದ. 3 ಅಪ್ಪ ತನಗೆಲ್ಲಾ ಅಧಿಕಾರ ಕೊಟ್ಟಿದ್ದಾನೆ ಅಂತ ಯೇಸುಗೆ ಗೊತ್ತಿತ್ತು. ದೇವರ ಹತ್ರದಿಂದ ಬಂದೆ, ದೇವರ ಹತ್ರಾನೇ ವಾಪಸ್ ಹೋಗ್ತೀನಿ ಅಂತಾನೂ ಆತನಿಗೆ ಗೊತ್ತಿತ್ತು.+ ಹಾಗಾಗಿ 4 ಯೇಸು ಊಟದ ಮೇಜಿಂದ ಎದ್ದು ತನ್ನ ಅಂಗಿ ಬಿಚ್ಚಿ ಪಕ್ಕಕ್ಕಿಟ್ಟು ಒಂದು ಬಟ್ಟೆ ತಗೊಂಡು ಸೊಂಟಕ್ಕೆ ಕಟ್ಕೊಂಡನು.+ 5 ಆಮೇಲೆ ಪಾತ್ರೆಯಲ್ಲಿ ನೀರು ತಗೊಂಡು ಶಿಷ್ಯರ ಕಾಲು ತೊಳೆದು ಸೊಂಟಕ್ಕೆ ಕಟ್ಕೊಂಡಿದ್ದ ಬಟ್ಟೆಯಿಂದ ಒರೆಸೋಕೆ ಶುರುಮಾಡಿದನು. 6 ಹೀಗೆ ಯೇಸು ಸೀಮೋನ ಪೇತ್ರನ ಹತ್ರ ಬಂದಾಗ ಅವನು “ಪ್ರಭು, ನೀನು ನನ್ನ ಕಾಲು ತೊಳಿತಿಯಾ?” ಅಂದ. 7 ಅದಕ್ಕೆ ಯೇಸು “ನಾನು ಮಾಡ್ತಾ ಇರೋದು ನಿನಗೀಗ ಅರ್ಥ ಆಗಲ್ಲ, ಆಮೇಲೆ ಅರ್ಥ ಆಗುತ್ತೆ” ಅಂದನು. 8 ಪೇತ್ರ “ಇಲ್ಲ, ನನ್ನ ಕಾಲು ತೊಳೆಯೋಕೆ ನಿನಗೆ ಯಾವತ್ತೂ ಬಿಡಲ್ಲ” ಅಂದ. ಯೇಸು “ನಾನು ನಿನ್ನ ಕಾಲು ತೊಳಿದಿದ್ರೆ+ ನಿನಗೆ ನನ್ನ ಜೊತೆ ಇರೋಕಾಗಲ್ಲ” ಅಂದನು. 9 ಅದಕ್ಕೆ ಪೇತ್ರ “ಪ್ರಭು, ಹಾಗಾದ್ರೆ ನನ್ನ ಕಾಲು ಮಾತ್ರ ಅಲ್ಲ, ನನ್ನ ಕೈ ತಲೆನೂ ತೊಳೆದುಬಿಡು” ಅಂದ. 10 ಅದಕ್ಕೆ ಯೇಸು “ಸ್ನಾನ ಮಾಡಿದವರು ಪೂರ್ತಿ ಶುದ್ಧರಾಗಿರ್ತಾರೆ. ಅವರು ಕಾಲು ಮಾತ್ರ ತೊಳ್ಕೊಂಡ್ರೆ ಸಾಕು. ನೀವು ಶುದ್ಧರಾಗಿದ್ದೀರ, ಆದ್ರೆ ನಿಮ್ಮಲ್ಲಿ ಎಲ್ರೂ ಶುದ್ಧರಲ್ಲ” ಅಂದನು. 11 ತನಗೆ ಮೋಸಮಾಡಿ ಹಿಡ್ಕೊಡಬೇಕಂತ ಇದ್ದವನು ಯಾರು ಅಂತ ಯೇಸುಗೆ ಗೊತ್ತಿತ್ತು.+ ಹಾಗಾಗಿ ಯೇಸು “ನಿಮ್ಮಲ್ಲಿ ಎಲ್ರೂ ಶುದ್ಧರಲ್ಲ” ಅಂದನು.
12 ಶಿಷ್ಯರ ಕಾಲು ತೊಳೆದ ಮೇಲೆ ಯೇಸು ಅಂಗಿ ಹಾಕಿ ಮತ್ತೆ ಊಟಕ್ಕೆ ಕೂತನು. ಆತನು “ನಾನು ಯಾಕೆ ನಿಮ್ಮ ಕಾಲು ತೊಳೆದೆ ಅಂತ ನಿಮಗೆ ಅರ್ಥ ಆಯ್ತಾ? 13 ನೀವು ನನ್ನನ್ನ ‘ಗುರು’ ಅಂತ ‘ಪ್ರಭು’ ಅಂತ ಕರಿತೀರ. ನೀವು ಆ ತರ ಕರಿಯೋದು ಸರಿನೇ.+ 14 ನಿಮ್ಮ ಗುರು, ಪ್ರಭು ಆಗಿರೋ ನಾನೇ ನಿಮ್ಮ ಕಾಲು ತೊಳೆದಿರುವಾಗ+ ನೀವು ಸಹ ಒಬ್ಬರ ಕಾಲನ್ನ ಇನ್ನೊಬ್ರು ತೊಳಿಲೇಬೇಕು.*+ 15 ನಾನು ಮಾಡಿದ ತರ ನೀವು ಮಾಡಬೇಕಂತಾನೇ ಒಂದು ಮಾದರಿ ಇಟ್ಟೆ.+ 16 ನಿಜ ಹೇಳ್ತೀನಿ, ಯಜಮಾನನಿಗಿಂತ ಆಳು ದೊಡ್ಡವನಲ್ಲ. ಅದೇ ತರ ಕಳಿಸಿದವನಿಗಿಂತ ಬಂದವನು ದೊಡ್ಡವನಲ್ಲ. 17 ನಾನು ಹೇಳಿದ ವಿಷ್ಯ ನಿಮಗೀಗ ಅರ್ಥ ಆಗಿರುತ್ತೆ. ಅದ್ರ ಪ್ರಕಾರ ನಡೆದ್ರೆ ಸಂತೋಷವಾಗಿ ಇರ್ತಿರ.+ 18 ನಿಮ್ಮೆಲ್ಲರ ಬಗ್ಗೆ ಮಾತಾಡ್ತಾ ಇಲ್ಲ. ನಾನು ಆರಿಸ್ಕೊಂಡವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಆದ್ರೆ ‘ಯಾರು ನನ್ನ ಜೊತೆ ಊಟ ಮಾಡ್ತಿದ್ನೋ ಅವನೇ ನನ್ನ ವಿರುದ್ಧ ತಿರುಗಿಬಿದ್ದಿದ್ದಾನೆ’+ ಅನ್ನೋ ಪವಿತ್ರ ಗ್ರಂಥದಲ್ಲಿರೋ ಮಾತು ನಿಜ ಆಗೇ ಆಗುತ್ತೆ.+ 19 ಮುಂದೆ ನಡಿಯೋ ಘಟನೆಗಳ ಬಗ್ಗೆ ಈಗಲೇ ಹೇಳ್ತೀನಿ. ಯಾಕಂದ್ರೆ ಆ ತರ ಆದಾಗ ಪವಿತ್ರ ಗ್ರಂಥದಲ್ಲಿ ಹೇಳಿದ್ದು ನನ್ನ ಬಗ್ಗೆನೇ ಅಂತ ನೀವು ನಂಬ್ತೀರ.+ 20 ನಿಜ ಹೇಳ್ತೀನಿ, ನಾನು ಕಳಿಸೋ ವ್ಯಕ್ತಿಯನ್ನ ಗೌರವಿಸುವವನು ನನ್ನನ್ನೂ ಗೌರವಿಸ್ತಾನೆ.+ ನನ್ನನ್ನ ಗೌರವಿಸುವವನು ನನ್ನನ್ನ ಕಳಿಸಿದ ದೇವರನ್ನೂ ಗೌರವಿಸ್ತಾನೆ” ಅಂದನು.+
21 ಇದನ್ನ ಹೇಳಿದ ಮೇಲೆ ಯೇಸುಗೆ ಒಳಗೊಳಗೆ ತುಂಬ ದುಃಖ ಆಯ್ತು. ಹಾಗಾಗಿ ಯೇಸು “ನಿಜ ಹೇಳ್ತೀನಿ, ನಿಮ್ಮಲ್ಲಿ ಒಬ್ಬ ನನಗೆ ನಂಬಿಕೆ ದ್ರೋಹ ಮಾಡ್ತಾನೆ” ಅಂದನು.+ 22 ಅವನ್ಯಾರು ಅಂತ ಅರ್ಥ ಆಗದೆ ಶಿಷ್ಯರು ಮುಖಮುಖ ನೋಡ್ಕೊಂಡ್ರು.+ 23 ಯೇಸು ತುಂಬ ಇಷ್ಟಪಡ್ತಿದ್ದ ಒಬ್ಬ ಶಿಷ್ಯ+ ಆತನ ಹತ್ರದಲ್ಲೇ* ಕೂತಿದ್ದ. 24 ಹಾಗಾಗಿ ಸೀಮೋನ ಪೇತ್ರ ಅವನಿಗೆ ಸನ್ನೆಮಾಡಿ “ಯೇಸು ಯಾರ ಬಗ್ಗೆ ಹೇಳ್ತಾ ಇದ್ದಾನೆ” ಅಂತ ಕೇಳಿದ. 25 ಆಗ ಯೋಹಾನ ಯೇಸು ಎದೆ ಕಡೆಗೆ ವಾಲಿ “ಪ್ರಭು, ಯಾರವನು?” ಅಂತ ಕೇಳಿದ.+ 26 ಅದಕ್ಕೆ ಯೇಸು “ನಾನು ಈ ರೊಟ್ಟಿ ತುಂಡನ್ನ ಅದ್ದಿ ಯಾರಿಗೆ ಕೊಡ್ತಿನೋ ಅವನೇ” ಅಂದನು.+ ಆಮೇಲೆ ಯೇಸು ರೊಟ್ಟಿ ತುಂಡನ್ನ ಅದ್ದಿ ಅದನ್ನ ಇಸ್ಕರಿಯೂತ ಸೀಮೋನನ ಮಗನಾಗಿದ್ದ ಯೂದನಿಗೆ ಕೊಟ್ಟನು. 27 ಯೂದ ಆ ರೊಟ್ಟಿ ತಗೊಂಡ. ಆಮೇಲೆ ಸೈತಾನ ಅವನ ಮನಸ್ಸಲ್ಲಿ ಹೋದ.+ ಆಗ ಯೇಸು “ಏನು ಮಾಡಬೇಕಂತ ಇದ್ದಿಯೋ ಅದನ್ನ ಬೇಗ ಮಾಡು” ಅಂದನು. 28 ಆದ್ರೆ ಯೇಸು ಯಾಕೆ ಹೀಗೆ ಹೇಳಿದನು ಅನ್ನೋದು ಊಟಕ್ಕೆ ಕೂತಿದ್ದ ಬೇರೆ ಯಾರಿಗೂ ಅರ್ಥ ಆಗಲಿಲ್ಲ. 29 ಯೂದನ ಹತ್ರ ಕಾಣಿಕೆ ಪೆಟ್ಟಿಗೆ ಇತ್ತಲ್ವಾ?+ ಹಾಗಾಗಿ ಯೇಸು “ಹಬ್ಬಕ್ಕೆ ಬೇಕಾಗಿರೋ ವಸ್ತುಗಳನ್ನ ತಗೊ” ಅಂತಾನೋ ‘ಬಡವರಿಗೆ ಹಣ ಕೊಡು’ ಅಂತಾನೋ ಹೇಳ್ತಿದ್ದಾನೆ ಅಂತ ನೆನಸಿದ್ರು. 30 ಹಾಗಾಗಿ ಯೂದ ಆ ರೊಟ್ಟಿ ತಗೊಂಡ ತಕ್ಷಣ ಹೊರಗೆ ಹೋದ. ಆಗ ರಾತ್ರಿ ಆಗಿತ್ತು.+
31 ಅವನು ಹೋದ ಮೇಲೆ ಯೇಸು “ಇವತ್ತಿಂದ ಜನ ನನ್ನನ್ನ ಹೊಗಳ್ತಾರೆ.+ ನನ್ನಿಂದಾಗಿ ದೇವರನ್ನ ಹೊಗಳ್ತಾರೆ. 32 ದೇವರೇ ತನ್ನ ಪಕ್ಕದಲ್ಲಿ ನನ್ನನ್ನ ಕೂರಿಸ್ಕೊಳ್ತಾನೆ.+ ಇದನ್ನ ತುಂಬ ಬೇಗ ಮಾಡ್ತಾನೆ. 33 ಚಿಕ್ಕ ಮಕ್ಕಳೇ, ನಾನು ನಿಮ್ಮ ಜೊತೆ ಸ್ವಲ್ಪ ಸಮಯ ಮಾತ್ರ ಇರ್ತಿನಿ. ನೀವು ನನ್ನನ್ನ ಹುಡುಕ್ತೀರ. ಆದ್ರೆ ‘ನಾನು ಹೋಗೋ ಜಾಗಕ್ಕೆ ನಿಮಗೆ ಬರೋಕಾಗಲ್ಲ’+ ಅಂತ ಯೆಹೂದ್ಯರಿಗೆ ಹೇಳಿದ ಮಾತನ್ನೇ ನಿಮ್ಗೂ ಹೇಳ್ತೀನಿ. 34 ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ+ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು.+ ಅದೇ ಆ ಆಜ್ಞೆ. 35 ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ” ಅಂದನು.+
36 ಸೀಮೋನ ಪೇತ್ರ ಯೇಸುಗೆ “ಪ್ರಭು, ಎಲ್ಲಿಗೆ ಹೋಗ್ತಾ ಇದ್ದಿಯಾ?” ಅಂತ ಕೇಳಿದ. ಅದಕ್ಕೆ ಯೇಸು “ನಾನು ಹೋಗೋ ಜಾಗಕ್ಕೆ ನೀನು ಈಗಲೇ ಬರೋಕಾಗಲ್ಲ. ಆಮೇಲೆ ಬರ್ತಿಯ” ಅಂದನು.+ 37 ಪೇತ್ರ “ಪ್ರಭು, ಈಗಲೇ ಯಾಕೆ ನಿನ್ನ ಜೊತೆ ಬರೋಕಾಗಲ್ಲ? ನಿನಗೋಸ್ಕರ ನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ” ಅಂದ.+ 38 ಅದಕ್ಕೆ ಯೇಸು “ನನಗೋಸ್ಕರ ಪ್ರಾಣ ಕೊಡ್ತಿಯಾ? ನಿಜ ಹೇಳ್ತೀನಿ, ಇವತ್ತು ರಾತ್ರಿ ಕೋಳಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+