ಸಕಲ ಜನರಿಗಾಗಿರುವ ಒಂದು ಗ್ರಂಥ
“ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.
1. ಬೈಬಲಿನ ಕುರಿತು ಅವರ ಅಭಿಪ್ರಾಯವೇನೆಂದು ಪ್ರೊಫೆಸರರೊಬ್ಬರನ್ನು ಕೇಳಿದಾಗ ಅವರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಅವರು ಏನನ್ನು ಮಾಡಲು ನಿರ್ಧರಿಸಿದರು?
ಒಂದು ಆದಿತ್ಯವಾರ ಮಧ್ಯಾಹ್ನದಂದು ಪ್ರೊಫೆಸರ್ ಮನೆಯಲ್ಲಿದ್ದರು. ಅವರು ಯಾವ ಭೇಟಿಗಾರರನ್ನೂ ನಿರೀಕ್ಷಿಸುತ್ತಿರಲಿಲ್ಲ. ಆದರೆ ನಮ್ಮ ಕ್ರೈಸ್ತ ಸಹೋದರಿಯರಲ್ಲಿ ಒಬ್ಬಳು ಅವರ ಮನೆಗೆ ಭೇಟಿ ನೀಡಿದಾಗ, ಅವರು ಕಿವಿಗೊಟ್ಟರು. ಮಾಲಿನ್ಯ ಹಾಗೂ ಭೂಮಿಯ ಭವಿಷ್ಯತ್ತಿನ ಕುರಿತಾಗಿ ಅವಳು ಮಾತಾಡಿದಳು—ಈ ವಿಷಯಗಳು ಅವರಿಗೆ ಹಿಡಿಸಿದವು. ಆದರೂ, ಚರ್ಚೆಯಲ್ಲಿ ಅವಳು ಬೈಬಲನ್ನು ಪರಿಚಯಿಸಿದಾಗ, ಅವರು ಸಂದೇಹವಾದಿಯಾಗಿ ಕಂಡುಬಂದರು. ಆದುದರಿಂದ, ಬೈಬಲಿನ ಕುರಿತು ಅವರ ಅಭಿಪ್ರಾಯವೇನೆಂದು ಅವಳು ಅವರನ್ನು ಕೇಳಿದಳು.
“ಕೆಲವು ಬುದ್ಧಿವಂತ ಮನುಷ್ಯರಿಂದ ಬರೆಯಲ್ಪಟ್ಟ ಒಂದು ಉತ್ತಮ ಗ್ರಂಥ ಅದಾಗಿದೆ. ಆದರೆ ಬೈಬಲನ್ನು ಗಂಭೀರವಾಗಿ ಪರಿಗಣಿಸಬಾರದು” ಎಂದು ಅವರು ಉತ್ತರಿಸಿದರು.
“ನೀವೆಂದಾದರೂ ಬೈಬಲನ್ನು ಓದಿದ್ದೀರೊ?” ಎಂದು ಅವಳು ಕೇಳಿದಳು.
ಬೆಚ್ಚಿ ಬೆರಗಾಗಿ, ತಾನು ಅದನ್ನು ಓದಿರಲಿಲ್ಲ ಎಂಬುದನ್ನು ಆ ಪ್ರೊಫೆಸರರು ಒಪ್ಪಿಕೊಳ್ಳಲೇಬೇಕಾಯಿತು.
ತದನಂತರ ಅವಳು ಕೇಳಿದ್ದು: “ನೀವು ಎಂದೂ ಓದಿರದ ಒಂದು ಗ್ರಂಥದ ಕುರಿತಾಗಿ ಬಲವಾದ ನಿಶ್ಚಿತಾಭಿಪ್ರಾಯವನ್ನು ಹೇಗೆ ವ್ಯಕ್ತಪಡಿಸಸಾಧ್ಯವಿದೆ?”
ನಮ್ಮ ಸಹೋದರಿಯ ಬಳಿ ಒಂದು ಪಾಯಿಂಟ್ ಇತ್ತು. ಪ್ರೊಫೆಸರರು ಬೈಬಲನ್ನು ಪರೀಕ್ಷಿಸಿ, ತದನಂತರ ಅದರ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹೇಳುವ ನಿರ್ಧಾರವನ್ನು ಮಾಡಿದರು.
2, 3. ಅನೇಕ ಜನರಿಗೆ ಬೈಬಲು ಏಕೆ ಒಂದು ಅಜ್ಞಾತ ಗ್ರಂಥವಾಗಿದೆ ಮತ್ತು ಇದು ನಮಗೆ ಯಾವ ಪಂಥಾಹ್ವಾನವನ್ನು ಒಡ್ಡುತ್ತದೆ?
2 ಈ ಅಭಿಪ್ರಾಯವಿದ್ದದ್ದು ಪ್ರೊಫೆಸರರೊಬ್ಬರಿಗೇ ಅಲ್ಲ. ಅನೇಕ ಜನರು ಎಂದೂ ವೈಯಕ್ತಿಕವಾಗಿ ಬೈಬಲನ್ನು ಓದಿರದಿದ್ದರೂ, ಅದರ ಕುರಿತು ಅವರಿಗೆ ನಿಶ್ಚಿತ ಅಭಿಪ್ರಾಯಗಳಿವೆ. ಅವರ ಬಳಿ ಒಂದು ಬೈಬಲ್ ಇರಬಹುದು. ಅವರು ಅದರ ಸಾಹಿತ್ಯಾತ್ಮಕ ಅಥವಾ ಐತಿಹಾಸಿಕ ಮೌಲ್ಯವನ್ನು ಸಹ ಅಂಗೀಕರಿಸಬಹುದು. ಆದರೆ, ಅನೇಕರಿಗೆ ಅದು ಒಂದು ಅಜ್ಞಾತ ಗ್ರಂಥವಾಗಿದೆ. ‘ಬೈಬಲನ್ನು ಓದಲು ನನಗೆ ಸಮಯವೇ ಇಲ್ಲ’ ಎಂದು ಕೆಲವರು ಹೇಳುತ್ತಾರೆ. ‘ಅಂತಹ ಪುರಾತನ ಗ್ರಂಥವೊಂದು ನನ್ನ ಜೀವಿತಕ್ಕೆ ಹೇಗೆ ಸಂಬಂಧಪಟ್ಟದ್ದಾಗಿರಸಾಧ್ಯವಿದೆ?’ ಎಂದು ಕೆಲವರು ಸಂದೇಹಿಸುತ್ತಾರೆ. ಅಂತಹ ದೃಷ್ಟಿಕೋನಗಳು ನಮಗೆ ನಿಜವಾದ ಪಂಥಾಹ್ವಾನವನ್ನು ತಂದೊಡ್ಡುತ್ತವೆ. ಬೈಬಲು ‘ದೈವಪ್ರೇರಿತವಾಗಿದ್ದು ಉಪದೇಶಕ್ಕೆ ಉಪಯುಕ್ತವಾಗಿದೆ’ ಎಂದು ಯೆಹೋವನ ಸಾಕ್ಷಿಗಳು ದೃಢವಾಗಿ ನಂಬುತ್ತಾರೆ. (2 ತಿಮೊಥೆಯ 3:16, 17) ಆದರೆ, ತಮ್ಮ ಜಾತಿ, ರಾಷ್ಟ್ರ, ಅಥವಾ ಕುಲಸಂಬಂಧವಾದ ಹಿನ್ನೆಲೆಯು ಏನೇ ಆಗಿರಲಿ ಜನರು ಬೈಬಲನ್ನು ಪರೀಕ್ಷಿಸುವಂತೆ ನಾವು ಅವರಿಗೆ ಹೇಗೆ ಮನಗಾಣಿಸಸಾಧ್ಯವಿದೆ?
3 ಬೈಬಲು ನಮ್ಮ ಪರಿಗಣನೆಗೆ ಏಕೆ ಅರ್ಹವಾಗಿದೆ ಎಂಬುದಕ್ಕಿರುವ ಕೆಲವು ಕಾರಣಗಳನ್ನು ನಾವೀಗ ಚರ್ಚಿಸೋಣ. ಅಂತಹ ಒಂದು ಚರ್ಚೆಯು, ಬೈಬಲು ಏನು ಹೇಳುತ್ತದೋ ಆ ವಿಷಯಗಳನ್ನು ಅವರು ಪರಿಗಣಿಸಬೇಕೆಂಬುದನ್ನು ಅವರಿಗೆ ಮನಗಾಣಿಸುತ್ತಾ, ನಮ್ಮ ಶುಶ್ರೂಷೆಯಲ್ಲಿ ನಾವು ಭೇಟಿಯಾಗುವವರೊಂದಿಗೆ ತರ್ಕಿಸಲು ನಮ್ಮನ್ನು ಸಜ್ಜುಗೊಳಿಸುತ್ತದೆ. ಅದೇ ಸಮಯದಲ್ಲಿ, ಈ ಪುನರ್ವಿಮರ್ಶೆಯು, ನಿಜವಾಗಿಯೂ ಬೈಬಲು ಏನಾಗಿದೆಯೆಂದು—“ದೇವರ ವಾಕ್ಯ”—ಅದು ಪ್ರತಿಪಾದಿಸುತ್ತದೋ ಅದೇ ಆಗಿದೆ ಎಂಬ ನಮ್ಮ ಸ್ವಂತ ನಂಬಿಕೆಯನ್ನು ಬಲಗೊಳಿಸಬೇಕು.—ಇಬ್ರಿಯ 4:12.
ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಗ್ರಂಥ
4. ಬೈಬಲು ಲೋಕದಲ್ಲಿಯೇ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟ ಗ್ರಂಥವಾಗಿದೆಯೆಂದು ಏಕೆ ಹೇಳಸಾಧ್ಯವಿದೆ?
4 ಪ್ರಥಮವಾಗಿ, ಬೈಬಲು ಪರಿಗಣನೆಗೆ ಅರ್ಹವಾಗಿದೆ ಏಕೆಂದರೆ, ಅದು ಎಲ್ಲ ಮಾನವ ಇತಿಹಾಸದಲ್ಲಿಯೇ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟ ಹಾಗೂ ವ್ಯಾಪಕವಾಗಿ ಭಾಷಾಂತರಿಸಲ್ಪಟ್ಟ ಗ್ರಂಥವಾಗಿದೆ. 500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಚಲಿಸುವ ಅಚ್ಚುಮೊಳೆಗಳಿಂದ ಮುದ್ರಿಸಲ್ಪಟ್ಟ ಪ್ರಥಮ ಮುದ್ರಣವು, ಯೋಹಾನಸ್ ಗೂಟನ್ ಬರ್ಗ್ ಅವರ ಮುದ್ರಣಾಲಯದಿಂದ ಹೊರಬಂತು. ಅಂದಿನಿಂದ ನಾನೂರು ಕೋಟಿ ಬೈಬಲುಗಳು—ಪೂರ್ತಿ ಅಥವಾ ಆಂಶಿಕವಾಗಿ—ಮುದ್ರಿಸಲ್ಪಟ್ಟಿವೆ ಎಂದು ಅಂದಾಜುಮಾಡಲ್ಪಟ್ಟಿದೆ. 1996ರಷ್ಟಕ್ಕೆ, ಇಡೀ ಬೈಬಲು ಅಥವಾ ಅದರ ಭಾಗಗಳು, 2,167 ಭಾಷೆಗಳಿಗೆ ಹಾಗೂ ಭಾಷಾರೂಪಗಳಿಗೆ ಭಾಷಾಂತರಿಸಲ್ಪಟ್ಟಿದ್ದವು.a ಮಾನವ ಕುಟುಂಬದ 90 ಪ್ರತಿಶತಕ್ಕಿಂತಲೂ ಹೆಚ್ಚು ಜನರಿಗೆ, ತಮ್ಮ ಸ್ವಂತ ಭಾಷೆಗಳಲ್ಲಿ ಬೈಬಲಿನ ಒಂದು ಭಾಗವನ್ನಾದರೂ ಪಡೆದುಕೊಳ್ಳುವ ಅವಕಾಶವಿದೆ. ಇದರ ವಿತರಣೆಗೆ ಸರಿಸಾಟಿಯಾದ ಯಾವ ಗ್ರಂಥವೂ—ಧಾರ್ಮಿಕವಾದ ಅಥವಾ ಬೇರೆಯಾದ—ಇಲ್ಲ!
5. ಲೋಕದ ಎಲ್ಲೆಡೆಯೂ ಇರುವ ಜನರಿಗೆ ಬೈಬಲು ಸುಲಭವಾಗಿ ಲಭ್ಯವಾಗುವಂತೆ ನಾವು ಏಕೆ ನಿರೀಕ್ಷಿಸತಕ್ಕದ್ದು?
5 ಬೈಬಲು ದೇವರ ವಾಕ್ಯವಾಗಿದೆ ಎಂಬುದನ್ನು ಸಂಖ್ಯಾಸಂಗ್ರಹಣಗಳು ಮಾತ್ರವೇ ರುಜುಪಡಿಸುವುದಿಲ್ಲ. ಹಾಗಿದ್ದರೂ, ದೇವಪ್ರೇರಿತ ಲಿಖಿತ ದಾಖಲೆಯೊಂದು ಲೋಕದಲ್ಲೆಲ್ಲ ಇರುವ ಜನರಿಗೆ ಸುಲಭಲಭ್ಯವಾಗಿರುವಂತೆ ನಾವು ನಿಶ್ಚಯವಾಗಿಯೂ ನಿರೀಕ್ಷಿಸಬೇಕು. ಎಷ್ಟೆಂದರೂ, “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂದು ಸ್ವತಃ ಬೈಬಲೇ ನಮಗೆ ಹೇಳುತ್ತದೆ. (ಅ. ಕೃತ್ಯಗಳು 10:34, 35) ಇತರ ಯಾವುದೇ ಗ್ರಂಥಕ್ಕೆ ಅಸದೃಶವಾಗಿ, ಬೈಬಲು ರಾಷ್ಟ್ರೀಯ ಗಡಿಗಳನ್ನು ದಾಟಿದೆ ಮತ್ತು ಜಾತಿಸಂಬಂಧವಾದ ಹಾಗೂ ಕುಲಸಂಬಂಧವಾದ ತಡೆಗಟ್ಟುಗಳನ್ನು ಜಯಿಸಿದೆ. ನಿಜವಾಗಿಯೂ, ಬೈಬಲು ಸಕಲ ಜನರಿಗಾಗಿರುವ ಒಂದು ಗ್ರಂಥವಾಗಿದೆ!
ಸಂರಕ್ಷಿಸಲ್ಪಟ್ಟದ್ದರ ಕುರಿತಾದ ಒಂದು ಅಪೂರ್ವ ದಾಖಲೆ
6, 7. ಮೂಲ ಬೈಬಲ್ ಬರಹಗಳಲ್ಲಿ ಯಾವುವೂ ಈಗ ಅಸ್ತಿತ್ವದಲ್ಲಿಲ್ಲವೆಂಬುದು ಏಕೆ ಆಶ್ಚರ್ಯಕರವಾದದ್ದಾಗಿಲ್ಲ, ಮತ್ತು ಇದು ಯಾವ ಪ್ರಶ್ನೆಯನ್ನು ಎಬ್ಬಿಸುತ್ತದೆ?
6 ಬೈಬಲು ಏಕೆ ಪರೀಕ್ಷೆಗೆ ಅರ್ಹವಾಗಿದೆ ಎಂಬುದಕ್ಕೆ ಇನ್ನೊಂದು ಕಾರಣವಿದೆ. ಅದು ನೈಸರ್ಗಿಕ ಹಾಗೂ ಮಾನವ ಅಡಚಣೆಗಳಿಂದ ಪಾರಾಗಿ ಉಳಿದಿದೆ. ಭೀಕರವಾದ ಪಂಥಾಹ್ವಾನಗಳ ಎದುರಿನಲ್ಲಿಯೂ ಅದು ಹೇಗೆ ಸಂರಕ್ಷಿಸಲ್ಪಟ್ಟಿತೆಂಬುದರ ಕುರಿತಾದ ದಾಖಲೆಯು, ಪುರಾತನ ಬರಹಗಳಲ್ಲಿ ನಿಜವಾಗಿಯೂ ಅಪೂರ್ವವಾಗಿದೆ.
7 ಬೈಬಲಿನ ಲೇಖಕರು ತಮ್ಮ ಮಾತುಗಳನ್ನು, ಪಪೈರಸ್ (ಅದೇ ಹೆಸರಿನ ಈಜಿಪ್ಟಿನ ಸಸ್ಯದಿಂದ ಮಾಡಿದ್ದು) ಮತ್ತು ಚರ್ಮಕಾಗದ (ಪ್ರಾಣಿಗಳ ಚರ್ಮದಿಂದ ಮಾಡಿದ್ದು)ದ ಮೇಲೆ, ಮಸಿಯಿಂದ (ಇಂಕ್ನಿಂದ) ಬರೆದರೆಂಬುದು ಸ್ಪಷ್ಟ.b (ಯೋಬ 8:11) ಆದರೆ, ಅಂತಹ ಬರಹದ ಸಾಮಗ್ರಿಗಳಿಗೆ ನೈಸರ್ಗಿಕ ವೈರಿಗಳಿವೆ. ವಿದ್ವಾಂಸ ಆಸ್ಕಾರ್ ಪಾರೆಟ್ ವಿವರಿಸುವುದು: “ಬರವಣಿಗೆಯ ಈ ಎರಡೂ ಸಾಧನಗಳು, ತೇವ, ಬೂಷ್ಟು ಮತ್ತು ವಿವಿಧ ಕೀಟಗಳಿಂದ ಸಮಾನವಾಗಿ ಅಪಾಯಕ್ಕೊಳಗಾಗಿರುತ್ತವೆ. ಕಾಗದ ಮತ್ತು ಗಡುಸಾದ ಚರ್ಮ ಸಹ ತೆರೆದ ಸ್ಥಳದಲ್ಲಿ ಅಥವಾ ತೇವವಿರುವ ಕೋಣೆಯಲ್ಲಿ ಎಷ್ಟು ಸುಲಭವಾಗಿ ಕೆಡುತ್ತದೆಂಬುದು ದೈನಂದಿನ ಅನುಭವದಿಂದ ನಮಗೆ ತಿಳಿದಿದೆ.” ಆದುದರಿಂದ ಮೂಲ ಬೈಬಲ್ ಬರಹಗಳಲ್ಲಿ ಯಾವುವೂ ಈಗ ಅಸ್ತಿತ್ವದಲ್ಲೆಲ್ಲವೆಂಬುದು ಆಶ್ಚರ್ಯಕರವೇನಲ್ಲ; ಬಹಳ ಸಮಯದ ಹಿಂದೆಯೇ ಅವು ನಶಿಸಿಹೋಗಿರಬಹುದು. ಆದರೆ ಮೂಲ ಬರಹಗಳು ನೈಸರ್ಗಿಕ ಶತ್ರುಗಳಿಗೆ ತುತ್ತಾಗಿರುವಲ್ಲಿ, ಬೈಬಲ್ ಹೇಗೆ ಪಾರಾಗಿ ಉಳಿಯಿತು?
8. ಗತ ಶತಮಾನಗಳಲ್ಲಿ, ಬೈಬಲ್ ಬರಹಗಳು ಹೇಗೆ ಸಂರಕ್ಷಿಸಲ್ಪಟ್ಟವು?
8 ಮೂಲಪ್ರತಿಗಳು ಬರೆಯಲ್ಪಟ್ಟಾದ ಸ್ವಲ್ಪದರಲ್ಲಿಯೇ, ಕೈಬರಹದ ಪ್ರತಿಗಳ ಉತ್ಪನ್ನವು ಆರಂಭಗೊಂಡಿತು. ಪುರಾತನ ಇಸ್ರಾಯೇಲಿನಲ್ಲಿ, ಧರ್ಮಶಾಸ್ತ್ರ ಮತ್ತು ಪವಿತ್ರಶಾಸ್ತ್ರದ ಇತರ ಭಾಗಗಳ ನಕಲುಮಾಡುವಿಕೆಯು ಕಾರ್ಯತಃ ಒಂದು ವೃತ್ತಿಯಾಗಿ ಪರಿಣಮಿಸಿತು. ಉದಾಹರಣೆಗೆ, ಯಾಜಕನಾದ ಎಜ್ರನು “ಮೋಶೆಯ ಧರ್ಮೋಪದೇಶದಲ್ಲಿ ಪಾರಂಗತನಾದ ಶಾಸ್ತ್ರಿ [“ನಕಲುಗಾರ,” NW]ಯಾಗಿದ್ದನು” ಎಂದು ವರ್ಣಿಸಲ್ಪಟ್ಟಿದ್ದಾನೆ. (ಎಜ್ರ 7:6, 11; ಹೋಲಿಸಿರಿ ಕೀರ್ತನೆ 45:1.) ಆದರೆ ಉತ್ಪಾದಿಸಲ್ಪಟ್ಟ ಆ ಪ್ರತಿಗಳು ಸಹ ನಶ್ವರವಾಗಿದ್ದವು; ಕೊನೆಗೆ ಇವನ್ನು ಸಹ ಬೇರೆ ಕೈಬರಹದ ಪ್ರತಿಗಳಿಂದ ಸ್ಥಾನಭರ್ತಿಮಾಡಬೇಕಾಯಿತು. ಪ್ರತಿಗಳನ್ನು ನಕಲು ಮಾಡುವ ಈ ಕಾರ್ಯವಿಧಾನವು ಅನೇಕ ಶತಮಾನಗಳ ತನಕ ಮುಂದುವರಿಯಿತು. ಮಾನವರು ಪರಿಪೂರ್ಣರಾಗಿಲ್ಲದಿರುವುದರಿಂದ, ನಕಲುಗಾರರ ತಪ್ಪುಗಳು ಬೈಬಲಿನ ಗ್ರಂಥಪಾಠವನ್ನು ಗಣನೀಯವಾಗಿ ಬದಲಾಯಿಸಿದವೊ? ಅತ್ಯಧಿಕ ಸಾಕ್ಷ್ಯವು ಇಲ್ಲವೆನ್ನುತ್ತದೆ!
9. ಮ್ಯಾಸರೀಟರ ಮಾದರಿಯು, ಬೈಬಲಿನ ನಕಲುಗಾರರ ಅತಿಯಾದ ಜಾಗ್ರತೆ ಹಾಗೂ ನಿಷ್ಕೃಷ್ಟತೆಯನ್ನು ಹೇಗೆ ದೃಷ್ಟಾಂತಿಸುತ್ತದೆ?
9 ನಕಲುಗಾರರು ತುಂಬ ಪಾರಂಗತರಾಗಿದ್ದರು ಮಾತ್ರವಲ್ಲ, ತಾವು ನಕಲುಮಾಡುತ್ತಿದ್ದಂತಹ ಮಾತುಗಳಿಗಾಗಿ ಅವರಲ್ಲಿ ಬಹಳ ಗೌರವವಿತ್ತು. “ನಕಲುಗಾರ” ಎಂಬುದಕ್ಕಿರುವ ಹೀಬ್ರು ಶಬ್ದಕ್ಕೆ, ಎಣಿಕೆ ಮಾಡುವುದು, ದಾಖಲೆಮಾಡುವುದು ಎಂಬ ರೆಫರೆನ್ಸ್ ಇದೆ. ಈ ನಕಲುಗಾರರ ಅತಿಯಾದ ಜಾಗ್ರತೆ ಹಾಗೂ ನಿಷ್ಕೃಷ್ಟತೆಯನ್ನು ದೃಷ್ಟಾಂತಿಸಲಿಕ್ಕಾಗಿ, ಮ್ಯಾಸರೀಟರನ್ನು ತೆಗೆದುಕೊಳ್ಳಿರಿ. ಅವರು ಸಾ.ಶ. ಆರನೆಯ ಮತ್ತು ಹತ್ತನೆಯ ಶತಮಾನಗಳ ಮಧ್ಯೆ ಜೀವಿಸಿದ ಹೀಬ್ರು ಶಾಸ್ತ್ರಗಳ ನಕಲುಗಾರರಾಗಿದ್ದರು. ವಿದ್ವಾಂಸರಾದ ಟಾಮಸ್ ಹಾರ್ಟ್ವೆಲ್ ಹಾರ್ನ್ರಿಗನುಸಾರ, ಅವರು “[ಹೀಬ್ರು] ಅಕ್ಷರಮಾಲೆಯ ಪ್ರತಿ ಅಕ್ಷರವು ಹೀಬ್ರು ಶಾಸ್ತ್ರಗಳಲ್ಲೆಲ್ಲ ಎಷ್ಟು ಬಾರಿ ಬರುತ್ತದೆ” ಎಂಬುದನ್ನು ಗೊತ್ತುಮಾಡಿದರು. ಅದರ ಅರ್ಥವೇನೆಂಬುದರ ಕುರಿತು ಆಲೋಚಿಸಿರಿ! ಒಂದೇ ಒಂದು ಅಕ್ಷರವೂ ಬಿಟ್ಟುಬಿಡಲ್ಪಡದಂತೆ, ಈ ನಿವೇದಿತ ನಕಲುಗಾರರು ತಾವು ನಕಲುಮಾಡಿದ ಪದಗಳನ್ನು ಮಾತ್ರವಲ್ಲ ಅಕ್ಷರಗಳನ್ನೂ ಲೆಕ್ಕಿಸುವಷ್ಟು ಜಾಗ್ರತೆವಹಿಸಿದರು. ಅಷ್ಟೇಕೆ, ಒಬ್ಬ ವಿದ್ವಾಂಸನ ಲೆಕ್ಕಕ್ಕನುಸಾರ, ಅವರು ಹೀಬ್ರು ಶಾಸ್ತ್ರಗಳಲ್ಲಿರುವ 8,15,140 ಅಕ್ಷರಗಳನ್ನು ಒಂದೊಂದಾಗಿ ಗಮನಿಸುತ್ತಿದ್ದರೆಂಬ ವರದಿಯಿದೆ! ಇಂತಹ ಶ್ರದ್ಧಾಪೂರ್ವಕ ಪ್ರಯತ್ನವು ನಿಷ್ಕೃಷ್ಟತೆಯ ಉನ್ನತ ಮಟ್ಟವನ್ನು ಖಚಿತಪಡಿಸಿತು.
10. ಆಧುನಿಕ ಭಾಷಾಂತರಗಳು ಯಾವುದರ ಮೇಲೆ ಆಧಾರಿತವಾಗಿವೆಯೋ ಆ ಹೀಬ್ರು ಹಾಗೂ ಗ್ರೀಕ್ ಮೂಲಪಾಠಗಳು, ಮೂಲ ಬರಹಗಾರರ ಮಾತುಗಳನ್ನು ಗಮನಾರ್ಹವಾದ ಯಥಾರ್ಥತೆಯೊಂದಿಗೆ ಪ್ರತಿನಿಧಿಸುತ್ತವೆ ಎಂಬುದಕ್ಕೆ ತೀವ್ರಾಸಕ್ತಿಯನ್ನು ಕೆರಳಿಸುವ ಯಾವ ಸಾಕ್ಷ್ಯವಿದೆ?
10 ವಾಸ್ತವವಾಗಿ, ಆಧುನಿಕ ಭಾಷಾಂತರಗಳು ಯಾವುದರ ಮೇಲೆ ಆಧಾರಿತವಾಗಿವೆಯೋ ಆ ಹೀಬ್ರು ಹಾಗೂ ಗ್ರೀಕ್ ಮೂಲಪಾಠಗಳು, ಮೂಲ ಬರಹಗಾರರ ಮಾತುಗಳನ್ನು ಗಮನಾರ್ಹವಾದ ಯಥಾರ್ಥತೆಯೊಂದಿಗೆ ಪ್ರತಿನಿಧಿಸುತ್ತವೆ ಎಂಬುದಕ್ಕೆ ತೀವ್ರಾಸಕ್ತಿಯನ್ನು ಕೆರಳಿಸುವ ಸಾಕ್ಷ್ಯವಿದೆ. ಈ ಸಾಕ್ಷ್ಯದಲ್ಲಿ ನಮ್ಮ ದಿನದ ವರೆಗೆ ಪಾರಾಗಿ ಉಳಿದಿರುವ ಸಾವಿರಾರು ಹಸ್ತಲಿಖಿತ ಬೈಬಲ್ ಹಸ್ತಪ್ರತಿಗಳು—ಇಡೀ ಹೀಬ್ರು ಶಾಸ್ತ್ರದ ಅಥವಾ ಹೀಬ್ರು ಶಾಸ್ತ್ರದ ಭಾಗಗಳ ಸುಮಾರು 6,000 ಹಸ್ತಪ್ರತಿಗಳು ಹಾಗೂ ಗ್ರೀಕ್ ಭಾಷೆಯಲ್ಲಿ ಕ್ರೈಸ್ತ ಶಾಸ್ತ್ರಗಳ ಸುಮಾರು 5,000 ಹಸ್ತಪ್ರತಿಗಳೆಂದೂ ಅಂದಾಜು ಮಾಡಲ್ಪಟ್ಟಿದೆ—ಸೇರಿವೆ. ಈಗ ಅಸ್ತಿತ್ವದಲ್ಲಿರುವ ಅನೇಕ ಹಸ್ತಪ್ರತಿಗಳ ಜಾಗರೂಕವಾದ, ತುಲನಾತ್ಮಕ ವಿಶ್ಲೇಷಣೆಯು, ಮೂಲಪಾಠದ ವಿದ್ವಾಂಸರು ನಕಲುಗಾರರ ಯಾವುದೇ ದೋಷಗಳನ್ನು ಕಂಡುಹಿಡಿದು, ಮೂಲಗ್ರಂಥಪಾಠವನ್ನು ನಿರ್ಧರಿಸಲು ಶಕ್ತರನ್ನಾಗಿ ಮಾಡಿದೆ. ಹೀಬ್ರು ಶಾಸ್ತ್ರವಚನಗಳ ಮೂಲಪಾಠದ ವಿಷಯದಲ್ಲಿ ಹೇಳಿಕೆ ನೀಡುತ್ತಾ, ವಿದ್ವಾಂಸರಾದ ವಿಲಿಯಮ್ ಏಚ್. ಗ್ರೀನ್ ಹೀಗೆ ಹೇಳಸಾಧ್ಯವಿತ್ತು: “ಪ್ರಾಚೀನ ಸಮಯದ ಇನ್ನಾವುದೇ ಕೃತಿಯು ಇಷ್ಟು ನಿಷ್ಕೃಷ್ಟವಾಗಿ ರವಾನಿಸಲ್ಪಟ್ಟಿಲ್ಲವೆಂದು ಯಾವುದೇ ವಾಗ್ವಾದವಿಲ್ಲದೆ ಹೇಳಬಹುದಾಗಿದೆ.” ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಮೂಲಪಾಠದಲ್ಲಿಯೂ ತದ್ರೀತಿಯ ದೃಢಭರವಸೆಯನ್ನು ಇರಿಸಸಾಧ್ಯವಿದೆ.
11. ಒಂದನೆಯ ಪೇತ್ರ 1:24, 25ರ ಬೆಳಕಿನಲ್ಲಿ, ಬೈಬಲು ನಮ್ಮ ದಿನದ ವರೆಗೂ ಏಕೆ ಪಾರಾಗಿ ಉಳಿದಿದೆ?
11 ಮೂಲ ಪ್ರತಿಗಳಿಗೆ ಬದಲಾಗಿ ಹಸ್ತಲಿಖಿತ ಪ್ರತಿಗಳು—ಅವುಗಳ ಅಮೂಲ್ಯ ಸಂದೇಶದೊಂದಿಗೆ—ಬರೆಯಲ್ಪಡದೆ ಇರುತ್ತಿದ್ದಲ್ಲಿ, ಬೈಬಲು ಎಷ್ಟು ಸುಲಭವಾಗಿ ನಶಿಸಿಹೋಗಸಾಧ್ಯವಿತ್ತು! ಅದರ ಪಾರಾಗಿ ಉಳಿಯುವಿಕೆಗಾಗಿ ಒಂದೇ ಒಂದು ಕಾರಣವಿದೆ—ಯೆಹೋವನೇ ತನ್ನ ವಾಕ್ಯವನ್ನು ಜೋಪಾನವಾಗಿರಿಸಿದವನೂ, ಅದನ್ನು ಸಂರಕ್ಷಿಸಿದವನೂ ಆಗಿದ್ದಾನೆ. 1 ಪೇತ್ರ 1:24, 25ರಲ್ಲಿ, ಬೈಬಲು ತಾನೇ ಹೇಳುವಂತೆ, “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತದೆ. ಹುಲ್ಲು ಒಣಗಿಹೋಗುವದು, ಹೂವು ಉದುರಿಹೋಗುವದು; ಕರ್ತನ ಮಾತೋ ಸದಾಕಾಲವೂ ಇರುವದು.”
ಮಾನವಕುಲದ ಸಜೀವ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿದೆ
12. ಶತಮಾನಗಳಿಂದ ಪುನಃ ಪುನಃ ನಕಲುಮಾಡುವುದರೊಂದಿಗೆ, ಬೈಬಲು ಇನ್ನಾವ ಅಡಚಣೆಯನ್ನು ಎದುರಿಸಿದೆ?
12 ಶತಮಾನಗಳ ಪುನಃ ಪುನಃ ನಕಲುಮಾಡುವಿಕೆಯಿಂದ ಪಾರಾಗಿ ಉಳಿಯುವುದು ಸಾಕಷ್ಟು ದೊಡ್ಡ ಪಂಥಾಹ್ವಾನವಾಗಿತ್ತಾದರೂ, ಬೈಬಲು ಇನ್ನೊಂದು ಅಡಚಣೆಯನ್ನು ಎದುರಿಸಿತು—ಸಮಕಾಲೀನ ಭಾಷೆಗಳಿಗೆ ಭಾಷಾಂತರವಾಗುವುದು. ಜನರ ಹೃದಯಗಳನ್ನು ತಲಪಲಿಕ್ಕಾಗಿ ಬೈಬಲು, ಅವರ ಭಾಷೆಯಲ್ಲಿಯೇ ಮಾತಾಡಬೇಕು. ಆದರೆ, 1,100ಕ್ಕಿಂತಲೂ ಹೆಚ್ಚು ಅಧ್ಯಾಯಗಳು ಹಾಗೂ 31,000ಕ್ಕಿಂತಲೂ ಹೆಚ್ಚು ವಚನಗಳುಳ್ಳ ಬೈಬಲನ್ನು ಭಾಷಾಂತರಿಸುವುದು ಸುಲಭದ ಕೆಲಸವಲ್ಲ. ಆದರೂ, ಗತ ಶತಮಾನಗಳಲ್ಲಿ, ನಿವೇದಿತ ಭಾಷಾಂತರಕಾರರು ಈ ಪಂಥಾಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದರಲ್ಲದೆ, ಕೆಲವೊಮ್ಮೆ ಅವರು ದುಸ್ತರವಾಗಿ ಕಂಡುಬಂದ ಅಡಚಣೆಗಳನ್ನು ಎದುರಿಸಿದರು.
13, 14. (ಎ) ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ, ಬೈಬಲ್ ಭಾಷಾಂತರಕಾರನಾದ ರಾಬರ್ಟ್ ಮಾಫಟನು ಆಫ್ರಿಕದಲ್ಲಿ ಯಾವ ಪಂಥಾಹ್ವಾನವನ್ನು ಎದುರಿಸಿದನು? (ಬಿ) ಲೂಕನ ಸುವಾರ್ತೆಯು ತಮ್ಮ ಭಾಷೆಯಲ್ಲಿ ಲಭ್ಯವಾದಾಗ, ಟ್ಸ್ವಾನ ಭಾಷೆಯನ್ನು ಮಾತಾಡುವ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು?
13 ಉದಾಹರಣೆಗಾಗಿ, ಬೈಬಲು ಆಫ್ರಿಕದ ಭಾಷೆಗಳಲ್ಲಿ ಹೇಗೆ ಭಾಷಾಂತರಗೊಂಡಿತೆಂಬುದನ್ನು ಪರಿಗಣಿಸಿರಿ. 1800ನೆಯ ವರ್ಷದಲ್ಲಿ, ಇಡೀ ಆಫ್ರಿಕದಲ್ಲಿ ಸುಮಾರು ಒಂದು ಡಸನ್ ಲಿಖಿತ ಭಾಷೆಗಳು ಮಾತ್ರ ಇದ್ದವು. ಇತರ ನೂರಾರು ಆಡು ಭಾಷೆಗಳಿಗೆ ಲಿಪಿ ಇರಲಿಲ್ಲ. ಬೈಬಲ್ ಭಾಷಾಂತರಕಾರ ರಾಬರ್ಟ್ ಮಾಫಟ್ನಿಗೆ ಇದೇ ರೀತಿಯ ಪಂಥಾಹ್ವಾನವನ್ನು ಎದುರಿಸಲಿಕ್ಕಿತ್ತು. 1821ರಲ್ಲಿ, ತನ್ನ 25ನೆಯ ವಯಸ್ಸಿನಲ್ಲಿ, ಅವನು ಆಫ್ರಿಕದ ದಕ್ಷಿಣಭಾಗದಲ್ಲಿರುವ ಟ್ಸ್ವಾನ ಭಾಷೆಯನ್ನು ಆಡುವ ಜನರ ಮಧ್ಯೆ ಒಂದು ಪ್ರಚಾರಕ ಸಂಸ್ಥೆ (ಮಿಷನ್)ಯನ್ನು ಸ್ಥಾಪಿಸಿದನು. ಅವರ ಅಲಿಖಿತ ಭಾಷೆಯನ್ನು ಕಲಿಯಲಿಕ್ಕಾಗಿ, ಅವನು ಆ ಜನರೊಂದಿಗೆ ಬೆರೆತನು. ಮಾಫಟ್ ಪಟ್ಟುಹಿಡಿದು ಮುಂದುವರಿದನು, ಮೂಲ ಪಾಠಪುಸ್ತಕಗಳು ಅಥವಾ ಶಬ್ದಕೋಶಗಳ ಸಹಾಯವಿಲ್ಲದೆ, ಕಾಲಕ್ರಮೇಣ ಅವನು ಆ ಭಾಷೆಯ ಪೂರ್ಣಾನುಭವಪಡೆದು, ಅದರ ಒಂದು ಲಿಖಿತ ರೂಪವನ್ನು ವಿಕಸಿಸಿ, ಟ್ಸ್ವಾನದ ಕೆಲವು ಜನರಿಗೆ ಆ ಲಿಪಿಯನ್ನು ಓದಲು ಕಲಿಸಿದನು. ಎಂಟು ವರ್ಷಗಳ ವರೆಗೆ ಟ್ಸ್ವಾನ ಜನರ ಮಧ್ಯೆ ಕೆಲಸಮಾಡಿದ ಬಳಿಕ, 1829ರಲ್ಲಿ, ಅವನು ಲೂಕನ ಸುವಾರ್ತೆಯ ಭಾಷಾಂತರವನ್ನು ಮುಗಿಸಿದನು. ತರುವಾಯ ಅವನು ಹೇಳಿದ್ದು: “ಸಂತ ಲೂಕನ ಪ್ರತಿಗಳನ್ನು ಪಡೆದುಕೊಳ್ಳಲಿಕ್ಕಾಗಿ ನೂರಾರು ಮೈಲು ಪಯಣಿಸಿ ಬಂದ ವ್ಯಕ್ತಿಗಳ ಕುರಿತು ನನಗೆ ತಿಳಿದಿದೆ. . . . ಅವರು ಸಂತ ಲೂಕನ ಸುವಾರ್ತೆಯ ಭಾಗಗಳನ್ನು ಪಡೆದು, ಅವುಗಳಿಗಾಗಿ ಅತ್ತು, ಅವನ್ನು ತಮ್ಮ ಎದೆಗಳಿಗಪ್ಪಿ ಹಿಡಿಯುತ್ತ, ನಾನು ಅನೇಕರಿಗೆ ‘ನಿಮ್ಮ ಪುಸ್ತಕಗಳನ್ನು ನೀವು ಕಣ್ಣೀರಿನಿಂದ ಹಾಳುಮಾಡುವಿರಿ’ ಎಂದು ಹೇಳುವ ತನಕ, ಕೃತಜ್ಞತೆಯ ಕಣ್ಣೀರನ್ನು ಸುರಿಸುವುದನ್ನು ನಾನು ನೋಡಿದ್ದೇನೆ.” ಲೂಕನ ಸುವಾರ್ತೆಯನ್ನು ಓದುತ್ತಿದ್ದ ಅನೇಕ ಜನರನ್ನು ನೋಡಿ, ಅವರ ಬಳಿ ಏನಿತ್ತೆಂದು ಅವರನ್ನು ಕೇಳಿದ ಆಫ್ರಿಕನ್ ಪುರುಷನೊಬ್ಬನ ಕುರಿತಾಗಿಯೂ ಮಾಫಟ್ ಹೇಳಿದನು. “ಇದು ದೇವರ ವಾಕ್ಯ” ಎಂದು ಅವರು ಉತ್ತರಿಸಿದರು. “ಅದು ಮಾತಾಡುತ್ತದೊ?” ಎಂದು ಆ ಪುರುಷನು ಕೇಳಿದನು. “ಹೌದು, ಅದು ಹೃದಯದೊಂದಿಗೆ ಮಾತಾಡುತ್ತದೆ” ಎಂದು ಅವರು ಹೇಳಿದರು.
14 ಮಾಫಟನಂತಹ ನಿವೇದಿತ ಭಾಷಾಂತರಕಾರರು, ಅನೇಕ ಆಫ್ರಿಕನರಿಗೆ, ಅವರ ಪ್ರಥಮ ಲಿಖಿತ ಲಿಪಿಯನ್ನು ಕೊಟ್ಟರು. ಆದರೆ ಭಾಷಾಂತರಕಾರರು, ಆಫ್ರಿಕದ ಜನರಿಗೆ ಅದಕ್ಕಿಂತಲೂ ಹೆಚ್ಚು ಅಮೂಲ್ಯವಾದ ಕೊಡುಗೆಯನ್ನು ಕೊಟ್ಟರು—ಅವರ ಸ್ವಂತ ಭಾಷೆಯಲ್ಲಿ ಬೈಬಲು. ಅದಲ್ಲದೆ, ಮಾಫಟ್ ದೈವಿಕ ನಾಮವನ್ನು ಟ್ಸ್ವಾನ ಜನರಿಗೆ ಪರಿಚಯಿಸಿದನು, ಮತ್ತು ಅವನು ಆ ಹೆಸರನ್ನು ತನ್ನ ಭಾಷಾಂತರದಲ್ಲಿಲ್ಲಾ ಉಪಯೋಗಿಸಿದನು.c ಹೀಗೆ, ಟ್ಸ್ವಾನದವರು ಬೈಬಲನ್ನು “ಯೆಹೋವನ ಬಾಯಿ” ಎಂದು ಸೂಚಿಸಿ ಹೇಳಿದರು.—ಕೀರ್ತನೆ 83:18.
15. ಇಂದು ಬೈಬಲು ಏಕೆ ತೀರ ಸಜೀವವಾದದ್ದಾಗಿದೆ?
15 ಲೋಕದ ವಿವಿಧ ಭಾಗಗಳಲ್ಲಿದ್ದ ಇತರ ಭಾಷಾಂತರಕಾರರು, ತದ್ರೀತಿಯ ಅಡ್ಡಿತಡೆಗಳನ್ನು ಎದುರಿಸಿದರು. ಬೈಬಲನ್ನು ಭಾಷಾಂತರಿಸಲಿಕ್ಕಾಗಿ ಕೆಲವರು ತಮ್ಮ ಜೀವಗಳನ್ನೂ ಅಪಾಯಕ್ಕೊಡ್ಡಿದರು. ಇದರ ಕುರಿತು ಆಲೋಚಿಸಿರಿ: ಬೈಬಲು ಪುರಾತನ ಹೀಬ್ರು ಮತ್ತು ಗ್ರೀಕ್ ಭಾಷೆಯಲ್ಲಿಯೇ ಉಳಿದಿರುತ್ತಿದ್ದಲ್ಲಿ, ಅದು ಬಹಳ ದೀರ್ಘ ಸಮಯದ ಹಿಂದೆಯೇ “ಮೃತ”ವಾಗುತ್ತಿದ್ದಿರಬಹುದು. ಏಕೆಂದರೆ ಸಕಾಲದಲ್ಲಿ ಆ ಭಾಷೆಗಳು ಕಾರ್ಯತಃ ಅಧಿಕಾಂಶ ಜನರಿಂದ ಮರೆಯಲ್ಪಟ್ಟವು ಮತ್ತು ಭೂಮಿಯ ಅನೇಕ ಭಾಗಗಳಲ್ಲಿ ಎಂದಿಗೂ ಆ ಭಾಷೆಯ ಸುಳಿವೇ ಇರಲಿಲ್ಲ. ಆದರೂ, ಬೈಬಲು ತೀರ ಸಜೀವವಾಗಿದೆ. ಏಕೆಂದರೆ ಇನ್ನಾವುದೇ ಗ್ರಂಥಕ್ಕೆ ಅಸದೃಶವಾಗಿ, ಅದು ಲೋಕದಾದ್ಯಂತವಿರುವ ಜನರಿಗೆ ಅವರ ಸ್ವಂತ ಭಾಷೆಯಲ್ಲಿ “ಮಾತಾಡ”ಬಲ್ಲದು. ಫಲಿತಾಂಶವಾಗಿ, ಅದರ ಸಂದೇಶವು “[ಅದನ್ನು] ನಂಬುವವರಾದ ನಿಮ್ಮೊಳಗೆ ಬಲವಾಗಿ ಕೆಲಸ ನಡಿಸುತ್ತದೆ.” (1 ಥೆಸಲೊನೀಕ 2:13) ದ ಜೆರೂಸಲೇಮ್ ಬೈಬಲ್ ಈ ಮಾತುಗಳನ್ನು ಹೀಗೆ ತರ್ಜುಮೆಮಾಡುತ್ತದೆ: “ಅದನ್ನು ನಂಬುವವರಾದ ನಿಮ್ಮಲ್ಲಿ ಅದು ಇನ್ನೂ ಒಂದು ಸಜೀವ ಶಕ್ತಿಯಾಗಿದೆ.”
ಭರವಸೆಗೆ ಅರ್ಹವಾದದ್ದು
16, 17. (ಎ) ಬೈಬಲು ಭರವಸಾರ್ಹವಾಗಿರಬೇಕಾದರೆ, ಯಾವ ಸಾಕ್ಷ್ಯವು ಅಸ್ತಿತ್ವದಲ್ಲಿರಬೇಕು? (ಬಿ) ಬೈಬಲ್ ಲೇಖಕನಾದ ಮೋಶೆಯ ಯಥಾರ್ಥತೆಯನ್ನು ದೃಷ್ಟಾಂತಿಸುವ ಒಂದು ಉದಾಹರಣೆಯನ್ನು ಕೊಡಿ.
16 ‘ನಿಜವಾಗಿಯೂ ಬೈಬಲಿನ ಮೇಲೆ ಭರವಸೆಯಿಡಸಾಧ್ಯವಿದೆಯೆ?’ ಎಂದು ಕೆಲವರು ಆಶ್ಚರ್ಯಪಡಬಹುದು. ‘ನಿಜವಾಗಿಯೂ ಜೀವಿಸಿದ್ದ ಜನರನ್ನು, ವಾಸ್ತವವಾಗಿ ಅಸ್ತಿತ್ವದಲ್ಲಿದ್ದ ಸ್ಥಳಗಳನ್ನು ಮತ್ತು ಖಂಡಿತವಾಗಿಯೂ ಸಂಭವಿಸಿದ ಘಟನೆಗಳನ್ನು ಅದು ಸೂಚಿಸುತ್ತದೋ?’ ನಾವು ಅದರ ಮೇಲೆ ಭರವಸೆಯಿಡಬೇಕಾದರೆ, ಅದು ಜಾಗರೂಕರಾಗಿದ್ದ ಪ್ರಾಮಾಣಿಕ ಲೇಖಕರಿಂದ ಬರೆಯಲ್ಪಟ್ಟಿತೆಂಬುದಕ್ಕೆ ಸಾಕ್ಷ್ಯವು ಇರಲೇಬೇಕು. ಇದು ಬೈಬಲನ್ನು ಪರೀಕ್ಷಿಸಲಿಕ್ಕಾಗಿರುವ ಇನ್ನೊಂದು ಕಾರಣಕ್ಕೆ ನಮ್ಮನ್ನು ನಡಿಸುತ್ತದೆ: ಅದು ನಿಷ್ಕೃಷ್ಟವಾದದ್ದೂ ಭರವಸಾರ್ಹವಾದದ್ದೂ ಆಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯವಿದೆ.
17 ಪ್ರಾಮಾಣಿಕ ಲೇಖಕರು ಕೇವಲ ಸಾಫಲ್ಯಗಳನ್ನು ಮಾತ್ರವಲ್ಲ, ಕುಂದುಕೊರತೆಗಳನ್ನು ಸಹ ದಾಖಲಿಸುತ್ತಾರೆ, ಕೇವಲ ತಮ್ಮ ಒಳ್ಳೆಯ ಗುಣಗಳನ್ನು ಮಾತ್ರವಲ್ಲ, ದೌರ್ಬಲ್ಯಗಳನ್ನು ಸಹ ದಾಖಲಿಸುತ್ತಾರೆ. ಬೈಬಲಿನ ಲೇಖಕರು ಅಂತಹ ಚೈತನ್ಯದಾಯಕ ಯಥಾರ್ಥತೆಯನ್ನು ಪ್ರದರ್ಶಿಸಿದರು. ಉದಾಹರಣೆಗಾಗಿ, ಮೋಶೆಯ ಮುಚ್ಚುಮರೆಯಿಲ್ಲದ ಮಾತುಗಳನ್ನು ಪರಿಗಣಿಸಿರಿ. ಅವನು ಸತ್ಯತೆಯಿಂದ ವರದಿಸಿದ ವಿಷಯಗಳಲ್ಲಿ, ಯಾವುದು ಅವನ ಸ್ವಂತ ದೃಷ್ಟಿಯಲ್ಲಿ ಅವನನ್ನು ಇಸ್ರಾಯೇಲ್ಯರ ನಾಯಕನಾಗಲು ಅಯೋಗ್ಯನನ್ನಾಗಿ ಮಾಡಿತೋ ಆ ಸ್ವಂತ ವಾಕ್ಸಂಪತ್ತಿನ ಕೊರತೆ (ವಿಮೋಚನಕಾಂಡ 4:10); ವಾಗ್ದತ್ತ ದೇಶವನ್ನು ಪ್ರವೇಶಿಸುವುದರಿಂದ ಅವನನ್ನು ತಡೆದ ಗಂಭೀರವಾದ ತಪ್ಪು (ಅರಣ್ಯಕಾಂಡ 20:9-12; 27:12-14); ಚಿನ್ನದ ಬಸವನ ಮೂರ್ತಿಯನ್ನು ಮಾಡುವುದರಲ್ಲಿ ದಂಗೆಕೋರ ಇಸ್ರಾಯೇಲ್ಯರೊಂದಿಗೆ ಸಹಕರಿಸಿದ ತನ್ನ ಅಣ್ಣನಾದ ಆರೋನನ ಮಾರ್ಗಭ್ರಷ್ಟತೆ (ವಿಮೋಚನಕಾಂಡ 32:1-6); ತನ್ನ ಅಕ್ಕ ಮಿರ್ಯಾಮಳ ದಂಗೆ ಹಾಗೂ ಅವಳ ತೇಜೋವಧೆಮಾಡುವಂತಹ ಶಿಕ್ಷೆ (ಅರಣ್ಯಕಾಂಡ 12:1-3, 10); ತನ್ನ ಸೋದರಳಿಯರಾದ ನಾದಾಬ ಮತ್ತು ಅಬೀಹೂ ಅವರ ಪಾಷಂಡತೆ (ಯಾಜಕಕಾಂಡ 10:1, 2); ಮತ್ತು ದೇವರ ಸ್ವಕೀಯ ಜನರು ಪುನಃ ಪುನಃ ಆಪಾದಿಸಿದ ಹಾಗೂ ಗುಣುಗುಟ್ಟಿದ ಸಂಗತಿಗಳು ಸೇರಿದ್ದವು. (ವಿಮೋಚನಕಾಂಡ 14:11, 12; ಅರಣ್ಯಕಾಂಡ 14:1-10) ಇಂತಹ ಮುಚ್ಚುಮರೆಯಿಲ್ಲದ, ಯಥಾರ್ಥ ವರದಿ ಮಾಡುವಿಕೆಯು ಸತ್ಯದ ಕಡೆಗಿರುವ ನಿಜವಾದ ಚಿಂತೆಯನ್ನು ಸೂಚಿಸುವುದಿಲ್ಲವೊ? ತಮ್ಮ ಪ್ರಿಯರ, ತಮ್ಮ ಜನರ ಮತ್ತು ತಮ್ಮ ಕುರಿತಾಗಿಯೂ ಅಹಿತಕರವಾದ ಮಾಹಿತಿಯನ್ನು ವರದಿಮಾಡಲು ಬೈಬಲ್ ಲೇಖಕರು ಸಿದ್ಧರಾಗಿದ್ದುದರಿಂದ, ಅವರ ಬರವಣಿಗೆಗಳಲ್ಲಿ ಭರವಸೆಯಿಡಲು ಸಾಕಷ್ಟು ಕಾರಣವಿಲ್ಲವೆ?
18. ಬೈಬಲ್ ಲೇಖಕರ ಬರಹಗಳು ಭರವಸಾರ್ಹವೆಂಬುದನ್ನು ಯಾವುದು ಸೂಚಿಸುತ್ತದೆ?
18 ಬೈಬಲ್ ಲೇಖಕರ ಸಾಮಂಜಸ್ಯವು ಸಹ, ಅವರ ಬರಹಗಳು ಭರವಸಾರ್ಹವೆಂಬ ಒಪ್ಪಿಗೆಯನ್ನು ಸೂಚಿಸುತ್ತವೆ. 40 ಜನರು, ಸುಮಾರು 1,600 ವರ್ಷಗಳ ಅವಧಿಯಲ್ಲಿ, ಚಿಕ್ಕಪುಟ್ಟ ವಿವರಗಳ ವಿಷಯದಲ್ಲಿಯೂ ಒಮ್ಮತದಿಂದ ಬರೆದಿದ್ದಾರೆಂಬುದು ನಿಜವಾಗಿಯೂ ಗಮನಾರ್ಹವಾಗಿದೆ. ಆದರೂ, ಈ ಸಾಮರಸ್ಯವು ಗುಟ್ಟು ಒಪ್ಪಂದದ ಸಂಶಯವನ್ನು ಎಬ್ಬಿಸುವಷ್ಟು, ಜಾಗರೂಕತೆಯಿಂದ ಜೋಡಿಸಲ್ಪಟ್ಟಿರುವುದಿಲ್ಲ. ಅದಕ್ಕೆ ಬದಲಾಗಿ, ವಿವಿಧ ವಿವರಗಳ ಏರ್ಪಡಿಸುವಿಕೆಯಲ್ಲಿ ಹೂಟದ ಕೊರತೆಯು ಸ್ಪಷ್ಟವಾಗಿದೆ; ಅನೇಕವೇಳೆ ಆ ಹೊಂದಿಕೆಯು ಸ್ಪಷ್ಟವಾಗಿ ಕಾಕತಾಳೀಯವಾಗಿದೆ.
19. ಯೇಸುವಿನ ದಸ್ತಗಿರಿಯ ಕುರಿತಾದ ಸುವಾರ್ತಾ ವೃತ್ತಾಂತಗಳು, ನಿಜವಾಗಿಯೂ ಬುದ್ಧಿಪೂರ್ವಕವಲ್ಲದ ಒಮ್ಮತವನ್ನು ಹೇಗೆ ಪ್ರಕಟಪಡಿಸುತ್ತವೆ?
19 ದೃಷ್ಟಾಂತಕ್ಕಾಗಿ, ಯೇಸುವಿನ ದಸ್ತಗಿರಿಯ ರಾತ್ರಿಯಂದು ಸಂಭವಿಸಿದ ಘಟನೆಯನ್ನು ಪರಿಗಣಿಸಿರಿ. ಅವನ ಶಿಷ್ಯರಲ್ಲೊಬ್ಬನು ಕತ್ತಿಯನ್ನು ಹೊರತೆಗೆದು ಮಹಾಯಾಜಕನ ಸೇವಕನೊಬ್ಬನ ಕಿವಿಯನ್ನು ಕತ್ತರಿಸಿದನೆಂಬುದನ್ನು ಸುವಾರ್ತಾ ಲೇಖಕರಲ್ಲಿ ನಾಲ್ವರೂ ದಾಖಲಿಸುತ್ತಾರೆ. ಆದರೆ ಯೇಸು “ಆ ಕಿವಿಯನ್ನು ಮುಟ್ಟಿ ಅವನಿಗೆ ವಾಸಿಮಾಡಿದನು” ಎಂದು ಲೂಕನು ಮಾತ್ರವೇ ನಮಗೆ ಹೇಳುತ್ತಾನೆ. (ಲೂಕ 22:51) ಆದರೆ “ಪ್ರಿಯ ವೈದ್ಯ”ನೆಂದು ಪ್ರಖ್ಯಾತನಾಗಿದ್ದ ಲೇಖಕನಿಂದ ನಾವು ಅದನ್ನೇ ನಿರೀಕ್ಷಿಸುತ್ತೇವಲ್ಲವೇ? (ಕೊಲೊಸ್ಸೆ 4:14) ಅಲ್ಲಿದ್ದ ಎಲ್ಲ ಶಿಷ್ಯರಲ್ಲಿ ಕತ್ತಿಯನ್ನು ಪ್ರಯೋಗಿಸಿದವನು ಪೇತ್ರನಾಗಿದ್ದನೆಂದು ಯೋಹಾನನ ವೃತ್ತಾಂತವು ನಮಗೆ ಹೇಳುತ್ತದೆ—ಪೇತ್ರನ ದುಡುಕುವ ಹಾಗೂ ಉದ್ರೇಕದಿಂದ ವರ್ತಿಸುವ ಪ್ರವೃತ್ತಿಯ ದೃಷ್ಟಿಯಲ್ಲಿ ಈ ವಾಸ್ತವಾಂಶವು ಆಶ್ಚರ್ಯವನ್ನುಂಟುಮಾಡುವಂತಹದ್ದಲ್ಲ. (ಯೋಹಾನ 18:10; ಹೋಲಿಸಿರಿ ಮತ್ತಾಯ 16:22, 23 ಮತ್ತು ಯೋಹಾನ 21:7, 8.) ಅನಗತ್ಯವೆಂದು ತೋರುವ ಇನ್ನೊಂದು ವಿವರವನ್ನು ಯೋಹಾನನು ವರದಿಸುತ್ತಾನೆ: “ಆ ಆಳಿನ ಹೆಸರು ಮಲ್ಕನು.” ಯೋಹಾನನೊಬ್ಬನೇ ಆ ಮನುಷ್ಯನ ಹೆಸರನ್ನು ಕೊಡುವುದೇಕೆ? ಯೋಹಾನನ ವೃತ್ತಾಂತದಲ್ಲಿ ಮಾತ್ರವೇ ಇರುವ ಒಂದು ಅಮುಖ್ಯ ವಿಷಯದಿಂದ ಆ ವಿವರವು ಒದಗಿಸಲ್ಪಡುತ್ತದೆ—ಯೋಹಾನನಿಗೆ “ಮಹಾಯಾಜಕನ ಪರಿಚಯ” ಇತ್ತು. ಅವನಿಗೆ ಮಹಾಯಾಜಕನ ಮನೆಯ ಸಿಬ್ಬಂದಿಯ ಪರಿಚಯವೂ ಇತ್ತು; ಸೇವಕರಿಗೆ ಅವನ ಪರಿಚಯವಿತ್ತು ಮತ್ತು ಅವನಿಗೆ ಅವರ ಪರಿಚಯವಿತ್ತು.d (ಯೋಹಾನ 18:10, 15, 16) ಹಾಗಾದರೆ ಯೋಹಾನನು ಆ ಗಾಯಗೊಂಡಿದ್ದ ಮನುಷ್ಯನ ಹೆಸರನ್ನು ಹೇಳುವುದು ಸ್ವಾಭಾವಿಕವಾಗಿತ್ತು. ಇತರ ಸುವಾರ್ತಾ ಲೇಖಕರು, ಆ ಮನುಷ್ಯನು ಅವರಿಗೆ ಅಪರಿಚಿತನಾಗಿದ್ದುದರಿಂದ ಅವನನ್ನು ಹೆಸರಿಸುವುದಿಲ್ಲ. ಈ ಎಲ್ಲ ವಿವರಗಳ ಮಧ್ಯೆ ಇರುವ ಏಕಾಭಿಪ್ರಾಯವು ಗಮನಾರ್ಹವಾಗಿರುವುದಾದರೂ, ಅದು ಬುದ್ಧಿಪೂರ್ವಕವಲ್ಲವೆಂಬುದು ಸ್ಪಷ್ಟ. ಬೈಬಲಿನಾದ್ಯಂತ ತದ್ರೀತಿಯ ಅಸಂಖ್ಯಾತ ಉದಾಹರಣೆಗಳು ಇವೆ.
20. ಬೈಬಲಿನ ಕುರಿತು ಪ್ರಾಮಾಣಿಕ ಹೃದಯದ ಜನರು ಏನನ್ನು ತಿಳಿದುಕೊಳ್ಳಬೇಕಾಗಿದೆ?
20 ಆದುದರಿಂದ ನಾವು ಬೈಬಲಿನ ಮೇಲೆ ಭರವಸವಿಡಸಾಧ್ಯವಿದೆಯೆ? ನಿಶ್ಚಯವಾಗಿಯೂ! ಬೈಬಲ್ ಲೇಖಕರ ಯಥಾರ್ಥತೆ, ಮತ್ತು ಬೈಬಲಿನ ಆಂತರಿಕ ಸಾಮಂಜಸ್ಯವು, ಸತ್ಯದ ಸ್ಪಷ್ಟವಾದ ನಾದವನ್ನು ಕೊಡುತ್ತದೆ. ಪ್ರಾಮಾಣಿಕ ಹೃದಯದ ಜನರು, ತಾವು ಬೈಬಲಿನಲ್ಲಿ ಭರವಸೆಯಿಡಸಾಧ್ಯವಿದೆ ಎಂಬುದನ್ನು ತಿಳಿಯುವ ಅಗತ್ಯವಿದೆ, ಏಕೆಂದರೆ ಅದು “ಸತ್ಯ ದೇವರಾದ ಯೆಹೋವನ” (NW) ಪ್ರೇರಿತ ವಾಕ್ಯವಾಗಿದೆ. (ಕೀರ್ತನೆ 31:5) ಬೈಬಲು ಏಕೆ ಸಕಲ ಜನರಿಗಾಗಿರುವ ಒಂದು ಗ್ರಂಥವಾಗಿದೆ ಎಂಬುದಕ್ಕೆ ಇನ್ನೂ ಹೆಚ್ಚಿನ ಕಾರಣಗಳಿವೆ. ಮುಂದಿನ ಲೇಖನವು ಅವುಗಳನ್ನು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಯುನೈಟೆಡ್ ಬೈಬಲ್ ಸೊಸೈಟಿಗಳಿಂದ ಪ್ರಕಾಶಿಸಲ್ಪಟ್ಟ ಸಂಖ್ಯೆಗಳ ಮೇಲಾಧಾರಿತವಾಗಿದೆ.
b ರೋಮ್ನಲ್ಲಿನ ತನ್ನ ಎರಡನೆಯ ಸೆರೆವಾಸದ ಸಮಯದಲ್ಲಿ, ಪೌಲನು ತಿಮೊಥೆಯನಿಗೆ “ಪುಸ್ತಕವನ್ನೂ ಮುಖ್ಯವಾಗಿ ಚರ್ಮದ ಕಾಗದಗಳನ್ನೂ” ತರುವಂತೆ ಕೇಳಿಕೊಂಡನು. (2 ತಿಮೊಥೆಯ 4:13) ಸೆರೆಮನೆಯಲ್ಲಿರುವಾಗ ತಾನು ಅವುಗಳನ್ನು ಅಭ್ಯಾಸಿಸಸಾಧ್ಯವಾಗುವಂತೆ, ಹೀಬ್ರು ಶಾಸ್ತ್ರಗಳ ಕೆಲವು ಭಾಗಗಳಿಗಾಗಿ ಪೌಲನು ಕೇಳಿಕೊಳ್ಳುತ್ತಿದ್ದಿರಬಹುದು. “ಮುಖ್ಯವಾಗಿ ಚರ್ಮದ ಕಾಗದಗಳು” ಎಂಬ ವಾಕ್ಸರಣಿಯು, ಪಪೈರಸ್ನ ಸುರುಳಿಗಳು ಹಾಗೂ ಚರ್ಮಕಾಗದದ ಇತರ ಸುರುಳಿಗಳು—ಎರಡೂ—ಒಳಗೂಡಿದ್ದವೆಂಬುದನ್ನು ಸೂಚಿಸಬಹುದು.
c 1838ರಲ್ಲಿ, ಮಾಫಟ್ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಒಂದು ಭಾಷಾಂತರವನ್ನು ಮುಗಿಸಿದನು. ಅವನು ಒಬ್ಬ ಜೊತೆಕೆಲಸಗಾರನ ಸಹಾಯದಿಂದ, 1857ರಲ್ಲಿ ಹೀಬ್ರು ಶಾಸ್ತ್ರವಚನಗಳ ಭಾಷಾಂತರವನ್ನು ಪೂರ್ಣಗೊಳಿಸಿದನು.
d ಮಹಾಯಾಜಕನೊಂದಿಗೆ ಹಾಗೂ ಅವನ ಮನೆವಾರ್ತೆಯೊಂದಿಗಿನ ಯೋಹಾನನ ಪರಿಚಯವು, ಆ ವೃತ್ತಾಂತದಲ್ಲಿ ತರುವಾಯ ಇನ್ನೂ ಹೆಚ್ಚು ತೋರಿಸಲ್ಪಟ್ಟಿದೆ. ಮಹಾಯಾಜಕನ ಆಳುಗಳಲ್ಲಿ ಇನ್ನೊಬ್ಬನು, ಪೇತ್ರನು ಯೇಸುವಿನ ಶಿಷ್ಯರಲ್ಲಿ ಒಬ್ಬನೆಂಬ ಆರೋಪ ಹೊರಿಸಿದಾಗ, ಈ ಆಳು “ಪೇತ್ರನು ಕಿವಿಕತ್ತರಿಸಿದವನ ಬಂಧುವಾಗಿದ್ದ”ನೆಂದು ಯೋಹಾನನು ವಿವರಿಸುತ್ತಾನೆ.—ಯೋಹಾನ 18:26.
ನೀವು ಹೇಗೆ ಉತ್ತರಿಸುವಿರಿ?
◻ ಬೈಬಲು ಲೋಕದ ಅತಿ ಸುಲಭಲಭ್ಯ ಗ್ರಂಥವಾಗಿರುವಂತೆ ನಾವು ಏಕೆ ನಿರೀಕ್ಷಿಸತಕ್ಕದ್ದು?
◻ ಬೈಬಲು ನಿಷ್ಕೃಷ್ಟವಾಗಿ ಸಂರಕ್ಷಿಸಲ್ಪಟ್ಟಿದೆ ಎಂಬುದಕ್ಕೆ ಯಾವ ಸಾಕ್ಷ್ಯವಿದೆ?
◻ ಬೈಬಲನ್ನು ಭಾಷಾಂತರಿಸಿದವರು ಯಾವ ಅಡಚಣೆಗಳನ್ನು ಎದುರಿಸಿದರು?
◻ ಬೈಬಲ್ ಬರಹಗಳು ಭರವಸಾರ್ಹವೆಂಬುದನ್ನು ಯಾವುದು ಸೂಚಿಸುತ್ತದೆ?