ನಿಮ್ಮ ಆತ್ಮ ಸಂಯಮವು ಆಸ್ತಿತ್ವದಲ್ಲಿರಲಿ ಮತ್ತು ಸಮೃದ್ಧವಾಗಲಿ
“ನಿಮಗಿರುವ ನಂಬಿಕೆಗೆ . . . ದಮೆಯನ್ನೂ [ಆತ್ಮ ಸಂಯಮ, NW] ಕೂಡಿಸಿರಿ.”—2 ಪೇತ್ರ 1:5, 6.
1. ಯಾವ ಅಸಾಮಾನ್ಯ ಸನ್ನಿವೇಶದಲ್ಲಿ ಒಬ್ಬ ಕ್ರೈಸ್ತನು ಸಾಕ್ಷಿ ಕೊಡಬಹುದು?
ಯೇಸು ಹೇಳಿದ್ದು: “ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ . . . ಸಾಕ್ಷಿಯಾಗುವದು.” (ಮತ್ತಾಯ 10:18) ಒಬ್ಬ ರಾಜ್ಯಪಾಲ, ನ್ಯಾಯಾಧೀಶ, ಅಥವಾ ಅಧ್ಯಕ್ಷರ ಮುಂದೆ ನೀವು ಕರೆಯಲ್ಪಡುವಲ್ಲಿ, ನೀವು ಯಾವ ವಿಷಯದಲ್ಲಿ ಮಾತಾಡುವಿರಿ? ಪ್ರಾಯಶಃ ಪ್ರಥಮವಾಗಿ, ನೀವು ಅಲ್ಲಿರುವ ಕಾರಣದ, ನಿಮ್ಮ ವಿರುದ್ಧ ಹಾಕಿರುವ ಅಪವಾದದ ವಿಷಯವೇ. ನೀವು ಹಾಗೆ ಮಾತಾಡಲು ದೇವರಾತ್ಮವು ಸಹಾಯ ಮಾಡುವುದು. (ಲೂಕ 12:11, 12) ಆದರೆ ಆತ್ಮ ಸಂಯಮದ ಕುರಿತು ಮಾತಾಡುವುದನ್ನು ನೀವು ಭಾವಿಸಬಲ್ಲಿರೊ? ಅದು ನಮ್ಮ ಕ್ರೈಸ್ತ ಸಂದೇಶದ ಒಂದು ಪ್ರಮುಖ ಭಾಗವೆಂದು ನೀವು ಪರಿಗಣಿಸುತ್ತೀರೊ?
2, 3. (ಎ) ಪೌಲನು ಫೇಲಿಕ್ಸನಿಗೆ ಮತ್ತು ದ್ರೂಸಿಲ್ಲಳಿಗೆ ಸಾಕ್ಷಿಕೊಡುವಂತಾದದ್ದು ಹೇಗೆ? (ಬಿ) ಆ ಸನ್ನಿವೇಶದಲ್ಲಿ ಆತ್ಮ ಸಂಯಮದ ವಿಷಯ ಮಾತಾಡುವುದು ಪೌಲನಿಗೆ ಯೋಗ್ಯ ವಿಷಯವಾಗಿ ಏಕೆ ಇತ್ತು?
2 ಒಂದು ನಿಜ ಜೀವನ ದೃಷ್ಟಾಂತವನ್ನು ಪರಿಗಣಿಸಿರಿ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಲಾಯಿತು. ಮಾತಾಡುವ ಸಂದರ್ಭ ಕೊಡಲ್ಪಟ್ಟಾಗ, ಅವನು ಕ್ರೈಸ್ತನಾಗಿರುವ, ಸಾಕ್ಷಿಯಾಗಿರುವ ತನ್ನ ನಂಬಿಕೆಗಳನ್ನು ವಿವರಿಸಲು ಬಯಸಿದನು. ನೀವು ಆ ದಾಖಲೆಯನ್ನು ಪರೀಕ್ಷಿಸಬಲ್ಲಿರಿ, ಮತ್ತು ಅಲ್ಲಿ ಅವನು “ಸುನೀತಿ ದಮೆ [ಆತ್ಮ ಸಂಯಮ, NW] ಮುಂದಣ ನ್ಯಾಯವಿಚಾರಣೆ,” ಇವುಗಳ ಕುರಿತು ತಾರ್ಕಿಕ ಸಾಕ್ಷಿಯನ್ನು ಕೊಟ್ಟದ್ದನ್ನು ನೀವು ಕಂಡುಕೊಳ್ಳುವಿರಿ. ಕೈಸರೈಯದಲ್ಲಿ ಅಪೊಸ್ತಲ ಪೌಲನ ಒಂದು ಅನುಭವಕ್ಕೆ ನಾವು ಸೂಚಿಸುತ್ತಿದ್ದೇವೆ. ಆರಂಭದ ತನಿಖೆಯೊಂದು ನಡೆದಿತ್ತು. “ಕೆಲವು ದಿವಸಗಳಾದ ಮೇಲೆ ಫೇಲಿಕ್ಸನು ಯೆಹೂದ್ಯಳಾದ ದ್ರೂಸಿಲ್ಲಳೆಂಬ ಸ್ವಂತ ಹೆಂಡತಿಯೊಂದಿಗೆ ಬಂದು ಪೌಲನನ್ನು ಕರಿಸಿಕೊಂಡು ಕ್ರಿಸ್ತ ಯೇಸುವಿನಲ್ಲಿಡತಕ್ಕ ನಂಬಿಕೆಯ ವಿಷಯವಾಗಿ ಅವನು ಹೇಳಿದ ಮಾತುಗಳನ್ನು ಕೇಳಿದನು.” (ಅ. ಕೃತ್ಯಗಳು 24:24) ಫೇಲಿಕ್ಸನು “ಸಕಲ ವಿಧದ ಕ್ರೌರ್ಯ ಮತ್ತು ಕಾಮಾಸಕ್ತಿಯನ್ನು ಆಚರಿಸಿ, ರಾಜನ ಅಧಿಕಾರವನ್ನು ಗುಲಾಮನ ಸಕಲ ಸಹಜ ಪ್ರವೃತ್ತಿಯಿಂದ ನಡಿಸಿದನು” ಎಂದು ಇತಿಹಾಸ ವರದಿ ಮಾಡುತ್ತದೆ. ಅವನಿಗೆ ಹಿಂದೆ ಎರಡು ಬಾರಿ ಮದುವೆಯಾಗಿದ್ದರೂ ದ್ರೂಸಿಲ್ಲಳು ತನ್ನ ಗಂಡನನ್ನು (ದೇವರ ನಿಯಮವನ್ನು ಉಲ್ಲಂಘಿಸಿ) ವಿಚ್ಛೇದನ ಮಾಡುವಂತೆ ಮತ್ತು ತನ್ನ ಮೂರನೆಯ ಹೆಂಡತಿಯಾಗುವಂತೆ ಅವನು ಪ್ರೇರಿಸಿದನು. ಒಂದು ವೇಳೆ ಈ ಹೊಸ ಧರ್ಮವಾದ ಕ್ರೈಸ್ತತ್ವದ ಬಗೆಗೆ ಕೇಳಬಯಸಿದ್ದು ಆಕೆಯೇ ಆಗಿರಬಹುದು.
3 ಪೌಲನು “ಸುನೀತಿ ದಮೆ ಮುಂದಣ ನ್ಯಾಯವಿಚಾರಣೆ” ಗಳ ಕುರಿತು ಮಾತಾಡಿದನು. (ಅ. ಕೃತ್ಯಗಳು 24:25) ಇದು, ದೇವರ ಸತ್ಯವಂತಿಕೆಯ ಮಟ್ಟಗಳು ಮತ್ತು ಫೇಲಿಕ್ಸ್ ಮತ್ತು ದ್ರೂಸಿಲ್ಲ ಯಾವುದರ ಭಾಗವಾಗಿದ್ದರೊ ಅದರ ಕ್ರೌರ್ಯ ಮತ್ತು ಅನ್ಯಾಯದ ಮಧ್ಯೆ ಇರುವ ತಾರತಮ್ಯವನ್ನು ಸ್ಪಷ್ಟಪಡಿಸುತ್ತಿತ್ತು. ಫೇಲಿಕ್ಸನು ಆ ವಿಚಾರಣೆಯಲ್ಲಿ ನ್ಯಾಯವನ್ನು ಪ್ರದರ್ಶಿಸುವಂತೆ ಫೆಲಿಕ್ಸನನ್ನು ಪ್ರಚೋದಿಸಲು ಪೌಲನು ನಿರೀಕ್ಷಿಸಿದಿರ್ದಬಹುದು. ಆದರೆ “ದಮೆ [ಆತ್ಮ ಸಂಯಮ, NW] ಮುಂದಣ ನ್ಯಾಯವಿಚಾರಣೆ” ಗಳ ವಿಷಯವನ್ನು ಏಕೆ ಎತ್ತಬೇಕು? ಈ ದುರಾಚಾರಿ ಜೊತೆ, “ಕ್ರಿಸ್ತ ಯೇಸುವಿನಲ್ಲಿಡತಕ್ಕ ನಂಬಿಕೆ”ಗೆ ಯಾವುದು ಆವಶ್ಯಕವೆಂದು ವಿಚಾರಿಸಿತು. ಆದುದರಿಂದ ಯೇಸುವನ್ನು ಹಿಂಬಾಲಿಸುವುದೆಂದರೆ ಒಬ್ಬನ ಯೋಚನೆ, ನುಡಿ, ಮತ್ತು ನಡೆಯನ್ನು ಅಂಕೆಯಲಿಡ್ಲುವುದು ಆವಶ್ಯಕವೆಂದು ಅವರು ತಿಳಿಯುವ ಆವಶ್ಯವಿತ್ತು. ಆತ್ಮ ಸಂಯಮದ ಅರ್ಥ ಇದೇ. ಸಕಲ ಮಾನವರು ತಮ್ಮ ಯೋಚನೆ, ನುಡಿ, ನಡೆಗಳ ವಿಷಯದಲ್ಲಿ ದೇವರಿಗೆ ಉತ್ತರವಾದಿಗಳಾಗಿದ್ದಾರೆ. ಆದುದರಿಂದ, ಪೌಲನ ಮೊಕದ್ದಮೆಯಲ್ಲಿ ಫೇಲಿಕ್ಸನ ಯಾವುದೇ ನ್ಯಾಯತೀರ್ಪಿಗಿಂತ, ಆ ರಾಜ್ಯಪಾಲನೂ ಅವನ ಹೆಂಡತಿಯೂ ದೇವರ ಮುಂದೆ ಎದುರಿಸುವ ನ್ಯಾಯತೀರ್ಪು ಎಷ್ಟೋ ಹೆಚ್ಚು ಪ್ರಾಮುಖ್ಯವಾಗಿತ್ತು. (ಅ. ಕೃತ್ಯಗಳು 17:30, 31; ರೋಮಾಪುರ 14:10-12) ಪೌಲನ ಸಂದೇಶವನ್ನು ಕೇಳಿದಾಗ ಫೇಲಿಕ್ಸನು “ಭಯಗ್ರಸ್ತ” ನಾದದ್ದು ಗ್ರಾಹ್ಯವೇ.
ಅದು ಪ್ರಾಮುಖ್ಯವಾದರೂ ಸುಲಭವಲ್ಲ
4. ಆತ್ಮ ಸಂಯಮವು ಏಕೆ ನಿಜ ಕ್ರೈಸ್ತತ್ವದ ಪ್ರಾಮುಖ್ಯ ಭಾಗವಾಗಿದೆ?
4 ಆತ್ಮ ಸಂಯಮವು ಕ್ರೈಸ್ತತ್ವದ ಒಂದು ಅತ್ಯಾವಶ್ಯಕವಾದ ಭಾಗವೆಂದು ಅಪೊಸ್ತಲ ಪೌಲನು ಒಪ್ಪಿಕೊಂಡನು. ಯೇಸುವಿನ ಆಪ್ತ ಜೊತೆಗಾರರಲ್ಲಿ ಒಬ್ಬನಾದ ಅಪೊಸ್ತಲ ಪೇತ್ರನು ಇದನ್ನು ದೃಢೀಕರಿಸಿದನು. ಸ್ವರ್ಗದಲ್ಲಿ “ದೈವಸ್ವಭಾವದಲ್ಲಿ ಪಾಲನ್ನು” ಹೊಂದುವವರಿಗೆ ಬರೆದಾಗ, ನಂಬಿಕೆ, ಪ್ರೀತಿ, ಮತ್ತು ಆತ್ಮ ಸಂಯಮದಂತಹ ಕೆಲವು ಆವಶ್ಯಕ ಗುಣಗಳನ್ನು ಪ್ರದರ್ಶಿಸುವಂತೆ ಪೇತ್ರನು ಪ್ರೋತ್ಸಾಹಿಸಿದನು. ಹೀಗೆ ಈ ಆಶ್ವಾಸನೆಯಲ್ಲಿ ಆತ್ಮ ಸಂಯಮವು ಸೇರಿತ್ತು: “ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಪರಿಜ್ಞಾನವನ್ನು ಹೊಂದುವ ವಿಷಯದಲ್ಲಿ ನಿಮ್ಮನ್ನು ಆಲಸ್ಯಗಾರರೂ ನಿಷ್ಫಲರೂ ಆಗದಂತೆ ಮಾಡುತ್ತವೆ.”—2 ಪೇತ್ರ 1:1, 4-8.
5. ನಾವು ಆತ್ಮ ಸಂಯಮದ ಕುರಿತು ವಿಶೇಷವಾಗಿ ಚಿಂತಿತರಾಗಿರಬೇಕೇಕೆ?
5 ಆದರೂ, ನಾವು ಆತ್ಮ ಸಂಯಮವನ್ನು ಪ್ರದರ್ಶಿಸಬೇಕೆಂದು ಹೇಳುವುದು, ನಮ್ಮ ದೈನಂದಿನ ಜೀವಿತದಲ್ಲಿ ನಿಜವಾಗಿಯೂ ಅದನ್ನು ಅಭ್ಯಸಿಸುವುದಕ್ಕಿಂತ ಹೆಚ್ಚು ಸುಲಭವೆಂದು ನಿಮಗೆ ಗೊತ್ತು. ಇದಕ್ಕೆ ಒಂದು ಕಾರಣವು ಆತ್ಮ ಸಂಯಮವು ತುಲನಾತ್ಮಕವಾಗಿ ವಿರಳವಾಗಿರುವುದೇ. ಪೌಲನು 2 ತಿಮೊಥೆಯ 3:1-5 ರಲ್ಲಿ ನಮ್ಮ ದಿನಗಳಲ್ಲಿ, “ಕಡೇ ದಿವಸಗಳಲ್ಲಿ,” ಇರುವ ಮನೋಭಾವಗಳನ್ನು ವರ್ಣಿಸುತ್ತಾನೆ. ನಮ್ಮ ಕಾಲಾವಧಿಯನ್ನು ಗುರುತಿಸುವ ಲಕ್ಷಣಗಳಲ್ಲಿ ಒಂದು ಅನೇಕರು “ದಮೆಯಿಲ್ಲದವರು” ಆಗಿರುವುದು. ಇದು ನಮ್ಮ ಸುತ್ತಲು ಎಲ್ಲೆಲ್ಲಿಯೂ ರುಜುವಾಗಿರುವುದನ್ನು ನಾವು ನೋಡುತ್ತೇವೆ, ಅಲ್ಲವೆ?
6. ಆತ್ಮ ಸಂಯಮದ ಕೊರತೆಯು ಇಂದು ಹೇಗೆ ತೋರಿಸಲ್ಪಡುತ್ತಿದೆ?
6 “ಅಂಕೆ ತಪ್ಪಿದ ಭಾವ ಪ್ರದರ್ಶನ” ಯಾ “ಅಡಗಿರುವ ಭಾವೋದ್ರೇಕವನ್ನು ಹೊರಹಾಕುವುದು” ಮೂಲತಃ ಆರೋಗ್ಯಕರ ಎಂಬುದು ಅನೇಕ ಜನರ ನಂಬಿಕೆ. ಅವರ ವೀಕ್ಷಣವು, ಯಾವ ರೀತಿಯ ಆತ್ಮ ಸಂಯಮವನ್ನೂ ಅಸಡ್ಡೆ ಮಾಡಿ, ಕೇವಲ ಆವೇಗಪರತೆಗಳನ್ನು ತೃಪ್ತಿಪಡಿಸುವ, ಸಾರ್ವಜನಿಕವಾಗಿ ಪ್ರಸಿದ್ಧರಾದ ಅನುಕರಣೀಯ ವ್ಯಕ್ತಿಗಳಿಂದ ಬಲಪಡಿಸಲ್ಪಡುತ್ತದೆ. ದೃಷ್ಟಾಂತಕ್ಕೆ: ವೃತ್ತಿಪರ ಕ್ರೀಡೆಗಳಲ್ಲಿ ಇಷ್ಟಪಡುವ ಅನೇಕರಿಗೆ ಒರಟು ಭಾವೋದ್ರೇಕದ ಪ್ರದರ್ಶನಗಳು, ಹಿಂಸಾತ್ಮಕ ಕೋಪದ್ದು ಸಹ ರೂಢಿಯಾಗಿವೆ. ಪಶುಪ್ರಾಯವಾದ ಕಾದಾಟಗಳು ಯಾ ದೊಂಬಿಯ ದೃಶ್ಯಗಳು ಕ್ರೀಡಾ ಸಂದರ್ಭಗಳಲ್ಲಿ ನಡೆದುದನ್ನು, ಕಡಿಮೆ ಪಕ್ಷ ವಾರ್ತೆಯಿಂದಾದರೂ ಕೇಳಿದ್ದು ನಿಮ್ಮ ಜ್ಞಾಪಕಕ್ಕೆ ಬರುವುದಿಲ್ಲವೆ? ಆದರೆ ನಮ್ಮ ಉದ್ದೇಶವು, ನಾವು ಆತ್ಮ ಸಂಯಮದ ಕೊರತೆಯ ಮಾದರಿಗಳನ್ನು ಪುನರ್ವಿಮರ್ಶಿಸುವುದಕ್ಕೆ ಹೆಚ್ಚು ಸಮಯ ಕೊಡುವುದನ್ನೂ ಕೇಳಿಕೊಳ್ಳುವುದಲ್ಲ. ನಾವು ಆತ್ಮ ಸಂಯಮವನ್ನು ತೋರಿಸಬೇಕಾಗಿರುವ ಅನೇಕ ಕ್ಷೇತ್ರಗಳ—ನಮ್ಮ ಆಹಾರ ಮತ್ತು ಪಾನೀಯದ ಅನುಭೋಗ, ವಿರುದ್ಧ ಲಿಂಗಜಾತಿಯೊಂದಿಗೆ ನಮ್ಮ ವರ್ತನೆ, ಮತ್ತು ಹವ್ಯಾಸಗಳಲ್ಲಿ ನಾವು ವ್ಯಯಿಸುವ ಸಮಯ ಮತ್ತು ಹಣ—ಪಟ್ಟಿಯನ್ನು ನೀವು ಮಾಡಬಲ್ಲಿರಿ. ಆದರೆ ಅವುಗಳಲ್ಲಿ ಅನೇಕವನ್ನು ಮೇಲಿಂದ ಮೇಲೆ ಪರೀಕ್ಷಿಸುವ ಬದಲು, ಆತ್ಮ ಸಂಯಮವನ್ನು ಪ್ರದರ್ಶಿಸಬೇಕಾದ ಒಂದು ಪ್ರಧಾನ ಕ್ಷೇತ್ರವನ್ನು ನಾವು ಪರೀಕ್ಷಿಸೋಣ.
ನಮ್ಮ ಭಾವೋದ್ರೇಕಗಳ ಸಂಬಂಧದಲ್ಲಿ ಆತ್ಮ ಸಂಯಮ
7. ಆತ್ಮ ಸಂಯಮದ ಯಾವ ರೂಪವು ವಿಶೇಷ ಗಮನಕ್ಕೆ ಅರ್ಹವಾಗಿದೆ?
7 ನಮ್ಮ ವರ್ತನೆಗಳನ್ನು ಕ್ರಮಪಡಿಸುವುದರಲ್ಲಿ ಯಾ ಅಂಕೆಯಲಿಡ್ಲುವುದರಲ್ಲಿ ನಮ್ಮಲ್ಲಿ ಅನೇಕರು ತಕ್ಕಮಟ್ಟಿಗೆ ಸಾಫಲ್ಯ ಪಡೆದಿದ್ದೇವೆ. ನಾವು ಕದಿಯುವುದಿಲ್ಲ, ಅನೈತಿಕತೆಗೆ ಬಲಿಬೀಳುವುದಿಲ್ಲ, ಇಲ್ಲವೆ ಕೊಲೆ ಮಾಡುವುದಿಲ್ಲ; ಅಂತಹ ತಪ್ಪುಗಳ ಕುರಿತ ದೇವರ ನಿಯಮವೇನೆಂದು ನಾವು ತಿಳಿದಿದ್ದೇವೆ. ಆದರೆ ನಮ್ಮ ಭಾವನೆಗಳನ್ನು ನಿಯಂತ್ರಿಸುವುದರಲ್ಲಿ ನಾವೆಷ್ಟು ಸಾಫಲ್ಯ ಹೊಂದಿದ್ದೇವೆ? ಸಕಾಲದಲ್ಲಿ, ಭಾವಾತ್ಮಕ ಆತ್ಮ ಸಂಯಮವನ್ನು ಬೆಳೆಸಲು ತಪ್ಪುವವರು ಅನೇಕ ವೇಳೆ ತಮ್ಮ ವರ್ತನೆಗಳ ಸಂಬಂಧದಲ್ಲಿ ಆತ್ಮ ಸಂಯಮ ನಷ್ಟವನ್ನು ಹೊಂದುತ್ತಾರೆ. ಆದುದರಿಂದ ನಮ್ಮ ಭಾವಾವೇಶದ ಮೇಲೆ ನಾವು ಕೇಂದ್ರೀಕರಿಸೋಣ.
8. ನಮ್ಮ ಭಾವಾವೇಶಗಳ ಸಂಬಂಧದಲ್ಲಿ ಯೆಹೋವನು ನಮ್ಮಿಂದ ಏನು ಅಪೇಕ್ಷಿಸುತ್ತಾನೆ?
8 ನಾವು ಯಾವುದೇ ಭಾವಾವೇಶವಿಲ್ಲದ ಅಥವಾ ಅದನ್ನು ಪ್ರದರ್ಶಿಸದ ಯಂತ್ರ ಮನುಷ್ಯರಾಗಬೇಕೆಂದು ಯೆಹೋವ ದೇವರು ಅಪೇಕ್ಷಿಸುವುದಿಲ್ಲ. ಲಾಜರನ ಸಮಾಧಿಯ ಬಳಿ, ಯೇಸು “ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ” ದನು. ಬಳಿಕ “ಯೇಸು ಕಣ್ಣೀರು ಬಿಟ್ಟನು.” (ಯೋಹಾನ 11:32-38) ಚಿನಿವಾರರನ್ನು ದೇವಾಲಯದಿಂದ ಓಡಿಸಿದಾಗ, ತನ್ನ ಕೃತ್ಯಗಳ ಪರಿಪೂರ್ಣ ನಿಯಂತ್ರಣದೊಂದಿಗೆ ಅವನು ತೀರಾ ಪ್ರತ್ಯೇಕ ರೀತಿಯ ಭಾವಾವೇಶವನ್ನು ತೋರಿಸಿದನು. (ಮತ್ತಾಯ 21:12, 13; ಯೋಹಾನ 2:14-17) ಅವನ ನಿಷ್ಠಾವಂತ ಶಿಷ್ಯರು ಸಹ ಆಳವಾದ ಭಾವಗಳನ್ನು ವ್ಯಕ್ತಪಡಿಸಿದರು. (ಲೂಕ 10:17; 24:41; ಯೋಹಾನ 16:20-22; ಅ. ಕೃತ್ಯಗಳು 11:23; 12:12-14; 20:36-38; 3 ಯೋಹಾನ 4) ಆದರೂ, ತಮ್ಮ ಭಾವಾವೇಶಗಳು ಪಾಪಕ್ಕೆ ನಡೆಸದಂತೆ ಮಾಡಲು ಆತ್ಮ ಸಂಯಮದ ಆವಶ್ಯಕತೆಯನ್ನು ಅವರು ಗ್ರಹಿಸಿದರು. ಇದನ್ನು ಎಫೆಸ 4:26 ಸುಸ್ಪಷ್ಟಪಡಿಸುತ್ತದೆ: “ಕೋಪ ಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕೆ ಮುಂಚೆ ನಿಮ್ಮ ಸಿಟ್ಟು ತೀರಲಿ.”
9, ನಮ್ಮ ಭಾವಾವೇಶಗಳನ್ನು ನಿಯಂತ್ರಿಸುವುದು ಅಷ್ಟು ಪ್ರಾಮುಖ್ಯವೇಕೆ?
9 ಒಬ್ಬ ಕ್ರೈಸ್ತನು ಆತ್ಮ ಸಂಯಮವನ್ನು ತೋರಿಸುತ್ತಾನೆಂದು ಕಾಣುವಾಗಲೇ ವಾಸ್ತವದಲ್ಲಿ ಅವನ ಭಾವಾವೇಶಗಳು ಅಂಕೆ ತಪ್ಪುವ ಅಪಾಯವಿದೆ. ಹೇಬೆಲನ ಯಜ್ಞವನ್ನು ದೇವರು ಅಂಗೀಕರಿಸಿದಾಗ ನಡೆದ ಪ್ರತಿವರ್ತನೆಯನ್ನು ನೆನಪಿಸಿಕೊಳ್ಳಿರಿ: “ಇದರಿಂದ ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು. ಆಗ ಯೆಹೋವನು ಅವನಿಗೆ—ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು [ಅದರ ತೃಷ್ಣೆ ನಿನಗಾಗಿಯೇ ಇದೆ, NW].” (ಆದಿಕಾಂಡ 4:5-7) ಕಾಯಿನನು ತನ್ನ ಭಾವಾವೇಶವನ್ನು ನಿಯಂತ್ರಿಸುವುದರಲ್ಲಿ ತಪ್ಪಿದನು, ಮತ್ತು ಇದು ಹೇಬೆಲನನ್ನು ಕೊಲೆಮಾಡುವುದಕ್ಕೆ ಅವನನ್ನು ನಡಿಸಿತು. ಅನಿಯಂತ್ರಿತ ಭಾವಾವೇಶಗಳು ಒಂದು ಅನಿಯಂತ್ರಿತ ಕೃತ್ಯಕ್ಕೆ ನಡಿಸಿದವು.
10. ಹಾಮಾನನ ಮಾದರಿಯಿಂದ ನೀವೇನು ಕಲಿಯುತ್ತೀರಿ?
10 ಮೊರ್ದೆಕೈ ಮತ್ತು ಎಸ್ತೇರಳ ದಿನಗಳಿಂದಲೂ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಮೊರ್ದೆಕೈ ತನಗೆ ತಲೆಬಗ್ಗಿಸಲಿಲ್ಲವೆಂದು ಹಾಮಾನ್ ಎಂಬ ಅಧಿಕಾರಿ ಸಿಟ್ಟುಗೊಂಡನು. ತರುವಾಯ ತಾನು ಅನುಗ್ರಹಿತನಾಗುವೆನೆಂದು ಹಾಮಾನನು ತಪ್ಪಾಗಿ ಯೋಚಿಸಿದನು. “ಆ ದಿನ ಹಾಮಾನನು ಆನಂದಲಹರಿಯಲ್ಲಿ ಮನೆಗೆ ಹೋಗುತ್ತಿರುವಾಗ ಮೊರ್ದೆಕೈಯು ತನಗೆ ಭಯಪಡದೆ ತನ್ನ ಮುಂದೆ ಏಳದೆ ಅರಮನೆಯ ಹೆಬ್ಬಾಗಲಿನಲ್ಲಿ ಕೂತಿರುವದನ್ನು ಕಂಡು ಅವನ ಮೇಲೆ ಕೋಪಭರಿತನಾದನು. ಆದರೂ ತನ್ನನ್ನು ಬಿಗಿಹಿಡಿದುಕೊಂಡು ಮನೆಗೆ” ಹೋದನು. (ಎಸ್ತೇರಳು 5:9, 10) ಅವನಿಗೆ ಥಟ್ಟನೆ ಆನಂದಭಾವದ ಅನುಭವವಾಯಿತು. ಆದರೂ ಯಾರ ಮೇಲೆ ಅವನಿಗೆ ಅಸೂಯೆಯಿತ್ತೋ, ಅವನನ್ನು ಕೇವಲ ನೋಡಿ ಥಟ್ಟನೆ ಅವನಿಗೆ ಕೋಪವೂ ಬಂತು. ಹಾಮಾನನು “ತನ್ನನ್ನು ಬಿಗಿಹಿಡಿದು” ಕೊಂಡನೆಂದು ಬೈಬಲು ಹೇಳುವಾಗ, ಅವನು ಆತ್ಮ ಸಂಯಮದಲ್ಲಿ ಆದರ್ಶನಾಗಿದ್ದನೆಂದು ನೀವು ನೆನಸುತ್ತೀರೊ? ನಿಶ್ಚಯವಾಗಿಯೂ ಇಲ್ಲ. ಹಾಮಾನನು ಸದ್ಯಕ್ಕೆ ತನ್ನ ಕೃತ್ಯಗಳನ್ನು ಮತ್ತು ಯಾವುದೇ ಭಾವಾವೇಶದ ತೋರಿಕೆಯನ್ನು ಹಿಡಿತದಲ್ಲಿಟ್ಟುಕೊಂಡರೂ ಅಸೂಯೆಯ ಅವನ ಕೋಪವನ್ನು ಹಿಡಿತದಲ್ಲಿಟ್ಟುಕೊಳ್ಳಲು ತಪ್ಪಿದನು. ಅವನ ಭಾವಾವೇಶಗಳು ಕೊಲೆಯ ಹೂಟವನ್ನು ಹೂಡುವಂತೆ ಅವನನ್ನು ನಡಿಸಿದವು.
11. ಫಿಲಿಪ್ಪಿ ಸಭೆಯಲ್ಲಿ ಯಾವ ಸಮಸ್ಯೆಯಿತ್ತು, ಮತ್ತು ಯಾವುದು ಇದಕ್ಕೆ ನಡೆಸಿದಿರ್ದಬಹುದು?
11 ತದ್ರೀತಿ, ಭಾವಾವೇಶಗಳ ಸಂಯಮದ ಕೊರತೆಯು ಇಂದು ಕ್ರೈಸ್ತರಿಗೆ ಮಹತ್ತಾದ ಹಾನಿಯನ್ನು ಮಾಡಬಲ್ಲದು. ‘ಓ, ಆದರೆ ಸಭೆಯಲ್ಲಿ ಅದೊಂದು ಸಮಸ್ಯೆಯಾಗಿರಲಿಕ್ಕಿಲ್ಲ’ ಎಂದು ಕೆಲವರು ಅಭಿಪ್ರಯಿಸಬಹುದು. ಆದರೆ ಅದು ಸಮಸ್ಯೆಯಾಗಿತ್ತು. ಫಿಲಿಪ್ಪಿಯ ಇಬ್ಬರು ಅಭಿಷಿಕ್ತ ಕ್ರೈಸ್ತರ ಮಧ್ಯೆ, ಬೈಬಲು ವರ್ಣಿಸದಿರುವ ಒಂದು ಗಂಭೀರ ಸಮಸ್ಯೆಯಿತ್ತು. ಇದನ್ನು ಒಂದು ಸಾಧ್ಯತೆಯಾಗಿ ಭಾವಿಸಿರಿ: ಯುವೊದ್ಯ ಕೆಲವು ಜನ ಸೋದರ, ಸೋದರಿಯರನ್ನು ಒಂದು ಊಟಕ್ಕೋ ಆಪ್ಯಾಯನವಾದ ಗೋಷ್ಠಿಗೋ ಕರೆದಿದಳ್ದು. ಸಂತುಕೆಯು ಆಮಂತ್ರಿಸಲ್ಪಟ್ಟಿರಲ್ಲಿಲ, ಮತ್ತು ಇದು ಆಕೆಯನ್ನು ನೋಯಿಸಿತು. ಪ್ರಾಯಶಃ ಮುಂದಿನ ಒಂದು ಸಂದರ್ಭದಲ್ಲಿ ಯುವೊದ್ಯಳನ್ನು ಆಮಂತ್ರಿಸದೆ ಇದ್ದು ಆಕೆ ಪ್ರತಿವರ್ತನೆ ತೋರಿಸಿದಳು. ಆ ಬಳಿಕ ಅವರಿಬ್ಬರೂ ಇನ್ನೊಬ್ಬರ ದೋಷಗಳಿಗಾಗಿ ಹುಡುಕತೊಡಗಿದರು; ಮತ್ತು ಸಕಾಲದಲ್ಲಿ ಅವರು ಪರಸ್ಪರವಾಗಿ ಮಾತಾಡುವುದನ್ನೇ ಬಿಟ್ಟರು. ಇಂಥ ಒಂದು ದೃಶ್ಯ ವಿವರದಲ್ಲಿ, ಊಟಕ್ಕೆ ಆಮಂತ್ರಣದ ಕೊರತೆಯು ಮೂಲ ಸಮಸ್ಯೆಯಾಗಿರುವುದೊ? ಇಲ್ಲ. ಅದು ಕೇವಲ ಕಿಡಿಯಾಗಿರುವುದು. ಈ ಇಬ್ಬರು ಅಭಿಷಿಕ್ತ ಸೋದರಿಯರು ತಮ್ಮ ಭಾವಾವೇಶಗಳನ್ನು ನಿಯಂತ್ರಿಸಲು ತಪ್ಪಿದಾಗ, ಆ ಕಿಡಿ ಕಾಡ್ಗಿಚ್ಚಾಗಿ ಪರಿಣಮಿಸಿತು. ಸಮಸ್ಯೆ ಮುಂದುವರಿದು ಒಬ್ಬ ಅಪೊಸ್ತಲನು ಮಧ್ಯೆ ಬರುವ ತನಕ ಬೆಳೆಯಿತು.—ಫಿಲಿಪ್ಪಿ 4:2, 3.
ನಿಮ್ಮ ಭಾವಾವೇಶಗಳು ಮತ್ತು ನಿಮ್ಮ ಸಹೋದರರು
12. ಪ್ರಸಂಗಿ 7:9 ರಲ್ಲಿ ಕಂಡುಬರುವ ಬುದ್ಧಿವಾದವನ್ನು ದೇವರು ನಮಗೆ ಏಕೆ ಕೊಟ್ಟಿದ್ದಾನೆ?
12 ಒಬ್ಬನಿಗೆ ಕಡೆಗಣಿಸಲ್ಪಟ್ಟ, ನೋಯಿಸಲ್ಪಟ್ಟ ಯಾ ದುರಭಿಪ್ರಾಯದಿಂದ ನೋಡಲ್ಪಟ್ಟ ಅನಿಸಿಕೆ ಇರುವಾಗ, ಅವನ ಭಾವಗಳನ್ನು ನಿಯಂತ್ರಿಸುವುದು ಸುಲಭವಲ್ಲವೆಂಬುದು ಒಪ್ಪಿಕೊಳ್ಳತಕ್ಕ ವಿಷಯ. ಇದು ಯೆಹೋವನಿಗೆ ಗೊತ್ತಿದೆ, ಏಕೆಂದರೆ ಆತನು ಮಾನವನ ಆದಿಯಿಂದ ಮಾನವ ಸಂಬಂಧಗಳನ್ನು ಅವಲೋಕಿಸಿದ್ದಾನೆ. ದೇವರು ನಮಗೆ ಬುದ್ಧಿ ಹೇಳುವುದು: “ನಿನ್ನ ಮನಸ್ಸು ಕೋಪಕ್ಕೆ ಆತುರ ಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” (ಪ್ರಸಂಗಿ 7:9) ದೇವರು ಪ್ರಥಮವಾಗಿ ಭಾವಗಳಿಗೆ ಗಮನ ಕೊಡುತ್ತಾನೆ, ಕೃತ್ಯಗಳಿಗಲ್ಲವೆಂದು ಗಮನಿಸಿರಿ. (ಜ್ಞಾನೋಕ್ತಿ 14:17; 16:32; ಯಾಕೋಬ 1:19) ‘ನನ್ನ ಭಾವಗಳನ್ನು ನಿಯಂತ್ರಿಸಲು ನಾನು ಹೆಚ್ಚು ಗಮನವನ್ನು ಕೊಡಬೇಕೊ?’ ಎಂದು ಸ್ವತಃ ಕೇಳಿಕೊಳ್ಳಿರಿ.
13, 14. (ಎ) ಲೋಕದಲ್ಲಿ, ಭಾವಾವೇಶಗಳನ್ನು ನಿಯಂತ್ರಿಸಲು ತಪ್ಪುವುದರಿಂದ ಸಾಮಾನ್ಯವಾಗಿ ಏನು ಬೆಳೆಯುತ್ತದೆ? (ಬಿ) ಕ್ರೈಸ್ತರು ವೈರಗಳನ್ನು ಇಟ್ಟುಕೊಳ್ಳುವಂತೆ ಯಾವ ಸಂಗತಿಗಳು ನಡಿಸಿಯಾವು?
13 ಲೋಕದಲ್ಲಿ ತಮ್ಮ ಭಾವಾವೇಶಗಳನ್ನು ನಿಯಂತ್ರಿಸಲು ತಪ್ಪುವ ಅನೇಕ ಜನರು ಕುಲವೈರಗಳನ್ನು—ತಮ್ಮ ವಿರುದ್ಧ ಯಾ ಒಬ್ಬ ಸಂಬಂಧಿಯ ವಿರುದ್ಧ ಆಗಿರುವ ವಾಸ್ತವವಾದ ಯಾ ಕಲ್ಪಿಸಿದ ತಪ್ಪಿನ ಕಾರಣ ಕಟುವಾದ, ಹಿಂಸಾತ್ಮಕವೂ ಆದ ಕುಲವೈರಗಳನ್ನು ಆರಂಭಿಸುತ್ತಾರೆ. ಭಾವಾವೇಶಗಳು ಒಮ್ಮೆ ಸಂಯಮ ತಪ್ಪಿದವೆಂದರೆ ಅವು ದೀರ್ಘಕಾಲದ ತನಕ ತಮ್ಮ ಹಾನಿಕರ ಪ್ರಭಾವವನ್ನು ಬೀರಬಲ್ಲವು. (ಹೋಲಿಸಿ ಆದಿಕಾಂಡ 34:1-7, 25-27; 49:5-7; 2 ಸಮುವೇಲ 2:17-23; 3:23-30; ಜ್ಞಾನೋಕ್ತಿ 26:24-26.) ನಿಸ್ಸಂದೇಹವಾಗಿ ಕ್ರೈಸ್ತರು, ಅವರು ಯಾವುದೇ ರಾಷ್ಟ್ರೀಯ ಯಾ ಸಾಂಸ್ಕೃತಿಕ ಹಿನ್ನೆಲೆಯವರಾಗಿರಲಿ, ಇಂತಹ ನಿಷ್ಠುರವಾದ ವೈರ ಮತ್ತು ದ್ವೇಷಗಳನ್ನು, ಅವು ತಪ್ಪಾದವುಗಳು, ಕೆಟ್ಟವು, ಮತ್ತು ವಿಸರ್ಜಿಸಬೇಕಾದವುಗಳು ಎಂದು ವೀಕ್ಷಿಸಬೇಕು. (ಯಾಜಕಕಾಂಡ 19:17) ದ್ವೇಷಗಳನ್ನು ತ್ಯಜಿಸುವುದು, ಭಾವಾವೇಶದ ಸಂಬಂಧದಲ್ಲಿ ನಿಮ್ಮ ಆತ್ಮ ಸಂಯಮದ ಭಾಗವಾಗಿದೆ ಎಂದು ನೀವು ವೀಕ್ಷಿಸುತ್ತೀರೊ?
14 ಯುವೊದ್ಯ ಮತ್ತು ಸಂತುಕೆಯ ವಿಷಯದಲ್ಲಿ ನಡೆದಂತೆಯೆ, ಭಾವಾವೇಶಗಳನ್ನು ನಿಯಂತ್ರಿಸಲು ತಪ್ಪುವಿಕೆ ಈಗ ಸಮಸ್ಯೆಗಳಿಗೆ ನಡಿಸಬಲ್ಲದು. ಒಂದು ಮದುವೆಯ ಔತಣಕ್ಕೆ ಆಮಂತ್ರಿಸಲ್ಪಡಲಿಲ್ಲವೆಂದು ಒಬ್ಬ ಸಹೋದರಿಗೆ ಕಡೆಗಣಿಸಲ್ಪಟ್ಟ ಅನಿಸಿಕೆಯಾಗಬಹುದು. ಅಥವಾ ಅದರಲ್ಲಿ ಆಕೆಯ ಮಗನನ್ನು ಯಾ ಸೋದರಸಂಬಂಧಿಯನ್ನು ಸೇರಿಸದೆ ಇದ್ದಿರಬಹುದು. ಅಥವಾ ಪ್ರಾಯಶಃ ಒಬ್ಬ ಸಹೋದರನು ಇನ್ನೊಬ್ಬ ಜೊತೆಕ್ರೈಸ್ತನಿಂದ ಒಂದು ಬಳಸಿದ ಕಾರನ್ನು ಖರೀದಿಸಿದನು, ಮತ್ತು ಸ್ವಲ್ಪ ಸಮಯದಲ್ಲಿ ಅದು ಕೆಟ್ಟು ಹೋಯಿತು. ಕಾರಣವು ಯಾವುದೇ ಇರಲಿ, ಇದು ನೋವಿನ ಅನಿಸಿಕೆಗಳನ್ನು ತಂದಿತು, ಭಾವಾವೇಶಗಳು ನಿಯಂತ್ರಿಸಲ್ಪಡಲಿಲ್ಲ ಮತ್ತು ಇದರಲ್ಲಿ ಒಳಗೂಡಿದವ್ದರಿಗೆ ಶಾಂತಿಭಂಗವಾಯಿತು. ಆಗ ಏನಾಗಸಾಧ್ಯವಿದೆ?
15. (ಎ) ಕ್ರೈಸ್ತರ ಮಧ್ಯೆ ವೈರಗಳಿಂದಾಗಿ ಯಾವ ದುಃಖಕರ ಪರಿಣಾಮಗಳು ಫಲಿಸಿವೆ? (ಬಿ) ವೈರಗಳನ್ನು ಇಟ್ಟುಕೊಳ್ಳುವ ಪ್ರವೃತ್ತಿಗೆ ಯಾವ ಬೈಬಲ್ ಬುದ್ಧಿವಾದ ಅನ್ವಯಿಸುತ್ತದೆ?
15 ಶಾಂತಿಭಂಗವಾದವನು ತನ್ನ ಭಾವಾವೇಶವನ್ನು ನಿಯಂತ್ರಿಸಲು ಮತ್ತು ತನ್ನ ಸೋದರನೊಂದಿಗೆ ಶಾಂತಿ ಮಾಡಲು ಕೆಲಸ ನಡಿಸದಿರುವಲ್ಲಿ, ದ್ವೇಷವು ಬೆಳೆಯಬಲ್ಲದು. ಒಂದು ನಿರ್ದಿಷ್ಟವಾದ ಸಭಾ ಪುಸ್ತಕ ಅಧ್ಯಯನಕ್ಕೆ ತನ್ನನ್ನು ನೇಮಿಸಬಾರದು, ಏಕೆಂದರೆ “ತನಗೆ ಇಷ್ಟವಿಲ್ಲದ” ಯಾರೋ ಒಬ್ಬ ಕ್ರೈಸ್ತನು ಯಾ ಒಂದು ಕುಟುಂಬ ಅಲ್ಲಿ ಹಾಜರಾಗುತ್ತದೆ ಎಂದು ಒಬ್ಬ ಸಾಕ್ಷಿಯು ಹೇಳಿದ ಸಂದರ್ಭಗಳಿವೆ. ಎಷ್ಟು ದುಃಖಕರ! ಕ್ರೈಸ್ತರು ಒಬ್ಬರನ್ನೊಬ್ಬರು ಲೌಕಿಕ ಕೋರ್ಟುಗಳಿಗೆ ತೆಗೆದುಕೊಂಡು ಹೋಗುವುದು ಅವರಿಗೆ ಸೋಲು ಎಂದು ಬೈಬಲು ಹೇಳುತ್ತದೆ, ಹಾಗಾದರೆ ಹಿಂದೆ ನಮ್ಮನ್ನು ಯಾ ಯಾವನೊ ಸಂಬಂಧಿಯನ್ನು ಕಡೆಗಣಿಸಿದ್ದಕ್ಕಾಗಿ ಒಬ್ಬ ಸಹೋದರನನ್ನು ದೂರವಿಡುವುದು ಅದಕ್ಕೆ ಸಮಾನವಾದ ಸೋಲಾಗಿರಲಿಕ್ಕಿಲ್ಲವೊ? ನಮ್ಮ ರಕ್ತಸಂಬಂಧಗಳನ್ನು ನಮ್ಮ ಸಹೋದರ ಸಹೋದರಿಯರೊಂದಿಗಿನ ಶಾಂತಿಗೂ ಮುಂದಾಗಿ ಇಡುತ್ತೇವೆಂದು ನಮ್ಮ ಭಾವಾವೇಶಗಳು ತೋರಿಸುತ್ತವೆಯೆ? ನಮ್ಮ ಸಹೋದರಿಗಾಗಿ ನಾವು ಸಾಯಲು ಸಿದರ್ದಿದ್ದೇವೆಂದು ನಾವು ಹೇಳುತ್ತೇವೆಯೆ, ಆದರೆ ನಮ್ಮ ಭಾವಾವೇಶಗಳು ಈಗ ಆಕೆಯೊಂದಿಗೆ ನಾವು ಮಾತಾಡದೆ ಇರುವಷ್ಟು ನಮ್ಮನ್ನು ಪ್ರಚೋದಿಸುತ್ತವೆಯೆ? (ಯೋಹಾನ 15:13 ಹೋಲಿಸಿರಿ.) ದೇವರು ನಮಗೆ ನಾಟುವಂತೆ ಹೇಳುವುದು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ.”—ರೋಮಾಪುರ 12:17-19; 1 ಕೊರಿಂಥ 6:7.
16. ಭಾವಾವೇಶಗಳನ್ನು ನಿಭಾಯಿಸುವ ಸಂಬಂಧದಲ್ಲಿ ಅಬ್ರಹಾಮನು ಯಾವ ಉತ್ತಮ ಮಾದರಿಯನ್ನಿಟ್ಟನು?
16 ಬದ್ಧ ವೈರ ಮುಂದುವರಿಯುವಂತೆ ಬಿಡುವ ಬದಲಿಗೆ, ಶಾಂತಿ ಮಾಡುವುದು ಯಾ ಆ ದೂರಿಗೆ ಕಾರಣವೇನೆಂದು ನಿರ್ಧರಿಸುವುದು, ನಮ್ಮ ಭಾವಾವೇಶಗಳ ಸಂಯಮವನ್ನು ಮತ್ತೆ ಪಡೆಯುವ ಕಡೆಗೆ ಇಡುವ ಹೆಜ್ಜೆಯಾಗಿದೆ. ಅಬ್ರಹಾಮನ ದೊಡ್ಡ ಹಿಂಡುಗಳನ್ನು ಲೋಟನವುಗಳೊಂದಿಗೆ ಪೋಷಿಸಲು ಜಮೀನಿಗೆ ಸಾಧ್ಯವಾಗದೆ ಇದ್ದಾಗ, ಅವರ ಕೂಲಿಯಾಳುಗಳು ಅದಕ್ಕಾಗಿ ಜಗಳವಾಡತೊಡಗಿದ್ದನ್ನು ನೆನಪಿಸಿಕೊಳ್ಳಿರಿ. ಆಗ ಅಬ್ರಹಾಮನು ತನ್ನ ಭಾವಾವೇಶವು ತನ್ನನ್ನು ಜಯಿಸುವಂತೆ ಬಿಟ್ಟನೊ? ಅಥವಾ ಅವನು ಆತ್ಮ ಸಂಯಮವನ್ನು ಪ್ರದರ್ಶಿಸಿದನೊ? ಪ್ರಶಂಸಾರ್ಹವಾಗಿ, ಅವನು ಆ ವ್ಯವಹಾರದ ಬಿಕ್ಕಟ್ಟಿಗೆ ಒಂದು ಶಾಂತಿಯುಕ್ತ ಪರಿಹಾರವನ್ನು ಸೂಚಿಸಿದನು; ಪ್ರತಿಯೊಬ್ಬನಿಗೆ ಪ್ರತ್ಯೇಕವಾದ ಪ್ರದೇಶವಿರಲಿ. ಮತ್ತು ಅವನು ಲೋಟನಿಗೆ ಪ್ರಥಮ ಆಯ್ಕೆಯನ್ನು ಕೊಟ್ಟನು. ಅಬ್ರಹಾಮನಿಗೆ ಯಾವ ವೈಮನಸ್ಯವೂ ಇರಲಿಲ್ಲ ಮತ್ತು ಅವನು ವೈರವನ್ನು ಕಟ್ಟಿಕೊಂಡಿರಲಿಲ್ಲವೆಂಬುದನ್ನು ರುಜುಪಡಿಸುತ್ತಾ, ಅವನು ಆ ಬಳಿಕ ಲೋಟನ ಪರವಾಗಿ ಯುದ್ಧಕ್ಕೆ ಹೋದನು.—ಆದಿಕಾಂಡ 13:5-12; 14:13-16.
17. ಒಂದು ಸಂದರ್ಭದಲ್ಲಿ ಪೌಲ ಮತ್ತು ಬಾರ್ನಬರು ಹೇಗೆ ವಿಫಲಗೊಂಡರು, ಆದರೆ ಆ ಬಳಿಕ ಏನು ಹಿಂಬಾಲಿಸಿತು?
17 ಪೌಲ ಮತ್ತು ಬಾರ್ನಬರ ಮಧ್ಯೆ ನಡೆದ ಒಂದು ಘಟನೆಯಿಂದಲೂ ನಾವು ಆತ್ಮ ಸಂಯಮದ ಕುರಿತು ಕಲಿಯಬಲ್ಲೆವು. ಅನೇಕ ವರ್ಷಗಳಲ್ಲಿ ಸಹಭಾಗಿಗಳಾಗಿದ್ದ ಬಳಿಕ, ಒಂದು ಪ್ರಯಾಣದಲ್ಲಿ ಮಾರ್ಕನನ್ನು ಕರೆದುಕೊಂಡು ಹೋಗಬೇಕೊ ಬೇಡವೊ ಎಂಬ ವಿಷಯದಲ್ಲಿ ಅವರು ಭಿನ್ನಾಭಿಪ್ರಾಯಪಟ್ಟರು. “ಈ ವಿಷಯದಲ್ಲಿ ತೀಕ್ಷೈ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿದರು. ಬಾರ್ನಬನು ಮಾರ್ಕನನ್ನು ಕರಕೊಂಡು ಸಮುದ್ರಮಾರ್ಗವಾಗಿ ಕುಪ್ರದ್ವೀಪಕ್ಕೆ ಹೋದನು.” (ಅ. ಕೃತ್ಯಗಳು 15:39) ಈ ಪಕ್ವತೆಯ ಪುರುಷರು ಆ ಸಂದರ್ಭದಲ್ಲಿ ತಮ್ಮ ಭಾವಾವೇಶಗಳನ್ನು ನಿಯಂತ್ರಿಸಿಕೊಳ್ಳಲು ತಪ್ಪಿದ ವಿಷಯವು ನಮಗೆ ಒಂದು ಎಚ್ಚರಿಕೆಯನ್ನು ಒದಗಿಸಬೇಕು. ಅದು ಅವರಿಗೆ ಸಂಭವಿಸಿರುವಲ್ಲಿ ನಮಗೂ ಸಂಭವಿಸಬಲ್ಲದು. ಆದರೆ ಅವರು ಒಂದು ಬಾಳುವ ಮನಸ್ತಾಪ ವಿಕಾಸಗೊಳ್ಳುವಂತೆ ಯಾ ವೈರ ಬೆಳೆಯುವಂತೆ ಬಿಡಲಿಲ್ಲ. ಈ ಸಹೋದರರು ತಮ್ಮ ಭಾವಾವೇಶಗಳ ಸಂಯಮವನ್ನು ಪುನಃ ಪಡೆದರು ಮತ್ತು ತರುವಾಯ ಒಟ್ಟುಗೂಡಿ ಶಾಂತಿಯಿಂದ ಕೆಲಸಮಾಡಿದರೆಂದು ದಾಖಲೆ ರುಜುಪಡಿಸುತ್ತದೆ.—ಕೊಲೊಸ್ಸೆ 4:10; 2 ತಿಮೊಥೆಯ 4:11.
18. ಭಾವನೆಗಳಿಗೆ ನೋವಾಗಿರುವಲ್ಲಿ, ಪಕ್ವತೆಯ ಕ್ರೈಸ್ತನು ಏನು ಮಾಡಬಲ್ಲನು?
18 ದೇವಜನರ ಮಧ್ಯೆ ನೊಂದ ಅನುಭವಗಳು, ವೈರಗಳು ಸಹ, ಇರಬಹುದೆಂಬದನ್ನು ನಾವು ನಿರೀಕ್ಷಿಸಸಾಧ್ಯವಿದೆ. ಅವು ಹೀಬ್ರು ಸಮಯಗಳಲ್ಲಿ ಮತ್ತು ಅಪೊಸ್ತಲರ ದಿನಗಳಲ್ಲಿ ಇದ್ದವು. ನಮ್ಮ ದಿನಗಳ ಯೆಹೋವನ ಸೇವಕರುಗಳ ಮಧ್ಯೆಯೂ ಅವು ಸಂಭವಿಸಿವೆ, ಏಕೆಂದರೆ ನಾವೆಲ್ಲರೂ ಅಪೂರ್ಣರು. (ಯಾಕೋಬ 3:2) ಸಹೋದರರ ಮಧ್ಯೆ ಬರುವ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಒಡನೆ ಕಾರ್ಯ ನಡೆಸಬೇಕೆಂದು ಯೇಸು ತನ್ನ ಹಿಂಬಾಲಕರನ್ನು ಪ್ರೋತ್ಸಾಹಿಸಿದನು. (ಮತ್ತಾಯ 5:23-25) ಆದರೆ ನಮ್ಮ ಆತ್ಮ ಸಂಯಮವನ್ನು ಉತ್ತಮಗೊಳಿಸುವ ಮೂಲಕ ಅವುಗಳನ್ನು ಪ್ರಥಮವಾಗಿ ತಡೆಹಿಡಿಯುವುದು ಇನ್ನೂ ಹೆಚ್ಚು ಉತ್ತಮ. ನಿಮ್ಮ ಸಹೋದರನಾಗಲಿ ಸಹೋದರಿಯಾಗಲಿ ಹೇಳಿದ ಯಾ ಮಾಡಿದ ತುಲನಾತ್ಮಕವಾಗಿ ಚಿಕ್ಕದಾಗಿರುವ ಒಂದು ಸಂಗತಿಯಿಂದ ಕಡೆಗಣಿಸಲ್ಪಟ್ಟ ಅನಿಸಿಕೆ ನಿಮಗಾದರೆ ಅಥವಾ ನೋಯಿಸಲ್ಪಟ್ಟರೆ, ನಿಮ್ಮ ಭಾವಾವೇಶಗಳನ್ನು ಯಾಕೆ ನಿಯಂತ್ರಿಸಿಕೊಳ್ಳಬಾರದು ಮತ್ತು ಮರೆತು ಬಿಡಬಾರದು? ಆ ವ್ಯಕ್ತಿ ತಪ್ಪು ತನ್ನದೆಂದು ಒಪ್ಪಿಕೊಳ್ಳುವ ತನಕ ನಿಮಗೆ ತೃಪ್ತಿಯಾಗುವುದಿಲ್ಲವೋ ಎಂಬಂತೆ, ಅವನ ಮುಕಾಬಿಲೆ ಮಾಡುವುದು ನಿಜವಾಗಿಯೂ ಅಗತ್ಯವೊ? ನಿಮ್ಮ ಭಾವಾವೇಶಗಳನ್ನು ಎಷ್ಟರ ಮಟ್ಟಿಗೆ ಹಿಡಿತದಲ್ಲಿಟ್ಟುಕೊಳ್ಳುವವರು ನೀವಾಗಿದ್ದೀರಿ?
ಅದು ಸಾಧ್ಯ!
19. ನಮ್ಮ ಭಾವಾವೇಶಗಳನ್ನು ನಿಯಂತ್ರಿಸುವ ವಿಷಯದಲ್ಲಿ ನಮ್ಮ ಚರ್ಚೆಯನ್ನು ಕೇಂದ್ರೀಕರಿಸಿದ್ದು ಏಕೆ ಯೋಗ್ಯವಾಗಿರುತ್ತದೆ?
19 ನಾವು ಪ್ರಧಾನವಾಗಿ ನಮ್ಮ ಭಾವಾವೇಶಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ, ಆತ್ಮ ಸಂಯಮದ ಒಂದು ರೂಪದ ವಿಷಯದಲ್ಲಿ ವಿಚಾರ ಮಾಡಿದ್ದೇವೆ. ಮತ್ತು ಅದು ಒಂದು ಮುಖ್ಯ ಕ್ಷೇತ್ರವಾಗಿದೆ, ಏಕೆಂದರೆ ನಮ್ಮ ಭಾವಾವೇಶಗಳನ್ನು ನಿಯಂತ್ರಿಸಿಕೊಳ್ಳಲು ತಪ್ಪುವುದು, ನಮ್ಮ ನಾಲಗೆಯ, ನಮ್ಮ ಲೈಂಗಿಕ ಪ್ರವೃತ್ತಿಗಳ, ನಮ್ಮ ತಿನ್ನುವ ಅಭ್ಯಾಸಗಳ, ಮತ್ತು ಎಲ್ಲಿ ನಾವು ಆತ್ಮ ಸಂಯಮವನ್ನು ಪ್ರದರ್ಶಿಸತಕ್ಕದ್ದೂ, ಜೀವಿತದ ಆ ಅನೇಕ ಇತರ ಭಾಗಗಳಲ್ಲಿ ಸಂಯಮ ನಷ್ಟಕ್ಕೆ ನಡಿಸಬಲ್ಲದು. (1 ಕೊರಿಂಥ 7:8, 9; ಯಾಕೋಬ 3:5-10) ಆದರೆ ಧೈರ್ಯ ತೆಗೆದುಕೊಳ್ಳಿರಿ, ಏಕೆಂದರೆ ಆತ್ಮ ಸಂಯಮವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನೀವು ಪ್ರಗತಿಹೊಂದಬಲ್ಲಿರಿ.
20. ಪ್ರಗತಿಯು ಸಾಧ್ಯವೆಂದು ನಮಗೆ ಹೇಗೆ ಖಾತ್ರಿಯಾಗಬಲ್ಲದು?
20 ಯೆಹೋವನು ನಮಗೆ ಸಹಾಯ ಮಾಡಲು ಇಷ್ಟವುಳ್ಳವನಾಗಿದ್ದಾನೆ. ನಮಗೆ ಇದು ಹೇಗೆ ಖಾತರಿ? ಹೇಗೆಂದರೆ, ಆತ್ಮ ಸಂಯಮ ಆತನ ಆತ್ಮದ ಫಲಗಳಲ್ಲಿ ಒಂದು. (ಗಲಾತ್ಯ 5:22, 23) ಹೀಗೆ, ಯೆಹೋವನಿಂದ ಪವಿತ್ರಾತ್ಮವನ್ನು ಪಡೆಯಲು ಮತ್ತು ಅದಕ್ಕೆ ಯೋಗ್ಯರಾಗಲು ಮತ್ತು ಅದರ ಫಲವನ್ನು ಪ್ರದರ್ಶಿಸಲು ನಾವು ಎಷ್ಟರ ಮಟ್ಟಿಗೆ ಕೆಲಸ ನಡಿಸುತ್ತೇವೋ ಅಷ್ಟರ ಮಟ್ಟಿಗೆ ನಾವು ಹೆಚ್ಚು ಆತ್ಮ ಸಂಯಮವುಳ್ಳವರಾಗಲು ನಿರೀಕ್ಷಿಸಬಲ್ಲೆವು. ಯೇಸುವಿನ ಆಶ್ವಾಸನೆಯನ್ನು ಎಂದಿಗೂ ಮರೆಯಬೇಡಿರಿ: “ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ . . . ಪವಿತ್ರಾತ್ಮವರವನ್ನು ಕೊಡುವನಲ್ಲವೇ.”—ಲೂಕ 11:13; 1 ಯೋಹಾನ 5:14, 15.
21. ಭವಿಷ್ಯತ್ತಿನಲ್ಲಿ, ಆತ್ಮ ಸಂಯಮ ಮತ್ತು ನಿಮ್ಮ ಭಾವಾವೇಶಗಳ ಕುರಿತು ನೀವೇನು ಮಾಡಲು ನಿರ್ಧರಿಸುತ್ತೀರಿ?
21 ಅದು ಸುಲಭವಾಗಿರುವುದೆಂದು ಭಾವಿಸಬೇಡಿ. ತಮ್ಮ ಭಾವಾವೇಶಗಳನ್ನು ತೀರಾ ಸಡಿಲು ಬಿಟ್ಟಿರುವವರ ಮಧ್ಯೆ ಬೆಳೆದ ಕೆಲವರಿಗೆ, ಹೆಚ್ಚು ಉದ್ರೇಕ ಪ್ರಕೃತಿಯ ಕೆಲವರಿಗೆ, ಅಥವಾ ಆತ್ಮ ಸಂಯಮವನ್ನು ಪ್ರದರ್ಶಿಸಲು ಎಂದಿಗೂ ಪ್ರಯತ್ನಿಸದೆ ಇರುವ ಕೆಲವರಿಗೆ ಇದು ಹೆಚ್ಚು ಕಷ್ಟಕರವಾಗಿದ್ದೀತು. ಅಂತಹ ಕ್ರೈಸ್ತನಿಗೆ, ಆತ್ಮ ಸಂಯಮವನ್ನು ಅಸ್ತಿತ್ವದಲ್ಲಿರಿಸುತ್ತಾ ಅದನ್ನು ಸಮೃದ್ಧವಾಗಿ ಮಾಡುವುದು ಒಂದು ನಿಜ ಪಂಥಾಹ್ವಾನವಾಗಬಹುದು. ಆದರೂ ಇದು ಸಾಧ್ಯ. (1 ಕೊರಿಂಥ 9:24-27) ನಾವು ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಹತ್ತಿರ ಹತ್ತಿರವಾಗುತ್ತಿರುವಾಗ, ಬಿಗಿತಗಳೂ ಒತ್ತಡಗಳೂ ಹೆಚ್ಚುವುವು. ನಮಗೆ ಕಡಿಮೆಯಲ್ಲ, ಹೆಚ್ಚು, ಎಷ್ಟೋ ಹೆಚ್ಚು ಆತ್ಮ ಸಂಯಮವು ಬೇಕಾಗಿರುವುದು! ನಿಮ್ಮ ಆತ್ಮ ಸಂಯಮದ ಸಂಬಂಧದಲ್ಲಿ ನಿಮ್ಮನ್ನು ಪರೀಕ್ಷಿಸಿಕೊಳ್ಳಿರಿ. ಉತ್ತಮಗೊಳಿಸಲು ಅವಶ್ಯವಿರುವ ಕ್ಷೇತ್ರಗಳನ್ನು ನೀವು ನೋಡುವಲ್ಲಿ, ಅದನ್ನು ಸಾಧಿಸಲು ಕೆಲಸ ನಡಿಸಿರಿ. (ಕೀರ್ತನೆ 139:23, 24) ದೇವರೊಂದಿಗೆ ಆತನ ಆತ್ಮದ ಹೆಚ್ಚಿನಂಶಕ್ಕಾಗಿ ಕೇಳಿಕೊಳ್ಳಿರಿ. ನಿಮ್ಮ ಆತ್ಮ ಸಂಯಮ ಅಸ್ತಿತ್ವದಲ್ಲಿದ್ದು ಸಮೃದ್ಧವಾಗುವಂತೆ ಆತನು ನಿಮ್ಮನ್ನು ಆಲಿಸಿ, ನಿಮಗೆ ಸಹಾಯ ಮಾಡುವನು.—2 ಪೇತ್ರ 1:5-8.
ಪುನರಾಲೋಚನೆಗೆ ವಿಷಯಗಳು
▫ ನಿಮ್ಮ ಭಾವಾವೇಶಗಳ ನಿಯಂತ್ರಣವು ಅಷ್ಟು ಪ್ರಾಮುಖ್ಯವೇಕೆ?
▫ ಹಾಮಾನ ಮತ್ತು ಯುವೊದ್ಯ ಮತ್ತು ಸಂತುಕೆಯ ದೃಷ್ಟಾಂತಗಳಿಂದ ನೀವೇನು ಕಲಿತಿದ್ದೀರಿ?
▫ ಮನನೋಯುವ ಕಾರಣವು ಸಂಭವಿಸುವಲ್ಲಿ, ನೀವು ಪ್ರಾಮಾಣಿಕತೆಯಿಂದ ಏನು ಮಾಡಲು ಪ್ರಯತ್ನಿಸುವಿರಿ?
▫ ಯಾವುದೇ ವೈರ ಕಟ್ಟಿಕೊಳ್ಳುವುದನ್ನು ತಪ್ಪಿಸಲು ಆತ್ಮ ಸಂಯಮ ನಿಮಗೆ ಹೇಗೆ ಸಹಾಯಮಾಡಬಲ್ಲದು?
[ಪುಟ 18 ರಲ್ಲಿರುವ ಚಿತ್ರ]
ಫೇಲಿಕ್ಸನ ಮತ್ತು ದ್ರೂಸಿಲ್ಲಳ ಎದುರಿಗಿರುವಾಗ, ಪೌಲನು ನೀತಿ ಮತ್ತು ಆತ್ಮ ಸಂಯಮದ ಕುರಿತು ಮಾತಾಡಿದನು