ಯೆಹೋವನು ನಮ್ಮ ಪ್ರಭು!
“ನಾವು ಮನುಷ್ಯರಿಗಿಂತಲೂ ಹೆಚ್ಚಾಗಿ ಪ್ರಭುವೆಂದು ದೇವರಿಗೆ ವಿಧೇಯರಾಗತಕ್ಕದ್ದು.”—ಅಪೊಸ್ತಲರ ಕೃತ್ಯ 5:29, NW.
1, 2. ಮಾನವ ಕೇಳಿಕೆಗಳು ದೈವಿಕ ಚಿತ್ತಕ್ಕೆ ವ್ಯತಿರಿಕ್ತವಾಗಿರುವಾಗ ಯೆಹೋವನ ಸಾಕ್ಷಿಗಳು ಯಾವ ಅಪೊಸ್ತಲಿಕ ಸ್ಥಾನವನ್ನು ತಕ್ಕೊಳ್ಳುತ್ತಾರೆ?
ಯೆಹೋವ ದೇವರು 12 ಪುರುಷರನ್ನು ಉಚ್ಛ ನ್ಯಾಯಾಲಯದ ಮುಂದೆ ಕೊಂಡೊಯ್ಯಲ್ಪಡುವಂತೆ ಬಿಟ್ಟಿದ್ದನು. ವರುಷ, ಸಾ.ಶ. 33. ನ್ಯಾಯಾಲಯ, ಯೆಹೂದಿ ಸನ್ಹೆದ್ರಿನ್. ನ್ಯಾಯ ವಿಚಾರಣೆಗೆ ಒಳಗಾಗಿದವ್ದರು ಯೇಸು ಕ್ರಿಸ್ತನ ಅಪೊಸ್ತಲರು. ಕೇಳಿರಿ ! ‘ಈ ಹೆಸರಿನ ಆಧಾರದಿಂದ ಕಲಿಸಬಾರದೆಂದು ನಾವು ಆಜ್ಞಾಪಿಸಿದೆವು. ಆದರೆ ನೀವು ಯೆರೂಸಲೇಮನ್ನು ನಿಮ್ಮ ಬೋಧನೆಯಿಂದ ತುಂಬಿಸಿದ್ದೀರಿ” ಎನ್ನುತ್ತಾನೆ ಮಹಾಯಾಜಕನು. ಆಗ ಪೇತ್ರನು ಮತ್ತು ಇತರ ಅಪೊಸ್ತಲರು, “ನಾವು ಮನುಷ್ಯರಿಗಿಂತಲೂ ಹೆಚ್ಚಾಗಿ ಪ್ರಭುವೆಂದು ದೇವರಿಗೆ ವಿಧೇಯರಾಗತಕ್ಕದ್ದು” ಎಂದು ಘೋಷಿಸುತ್ತಾರೆ. (ಅಪೊಸ್ತಲರ ಕೃತ್ಯ 5:27-29) ಕಾರ್ಯತಃ ಅವರು “ಯೆಹೋವನು ನಮ್ಮ ಪ್ರಭು” ಎಂದು ಹೇಳಿದರು !
2 ಯೇಸುವಿನ ನಿಜ ಹಿಂಬಾಲಕರ ಪ್ರಭು ಯೆಹೋವನೇ . ಇದು ಸಾ.ಶ. 61 ರಲ್ಲಿ “ಪ್ರಿಯ ವೈದ್ಯನಾಗಿರುವ ಲೂಕನು” ರೋಮಿನಿಂದ ಬರೆದ ಬೈಬಲ್ ಪುಸ್ತಕವಾದ ಅಪೊಸ್ತಲರ ಕೃತ್ಯಗಳಲ್ಲಿ ಸ್ಪಷ್ಟವಾಗುತ್ತದೆ. (ಕೊಲೊಸ್ಸೆಯವರಿಗೆ 4:14) ಅಪೊಸ್ತಲರಂತೆಯೇ, ಇಂದು ಯೆಹೋವನ ಜನರು, ಮಾನವ ಕೇಳಿಕೆಗಳು ದೇವರ ಚಿತ್ತಕ್ಕೆ ವ್ಯತಿರಿಕ್ತವಾಗಿರುವಾಗ, ತಮ್ಮ ಸ್ವರ್ಗೀಯ ತಂದೆಗೆ ವಿಧೇಯರಾಗುತ್ತಾರೆ. ಆದರೆ ಇನ್ನೇನನ್ನು ನಾವು ಈ ಕೃತ್ಯಗಳಿಂದ ಕಲಿಯುತ್ತೇವೆ? (ವ್ಯಕ್ತಿಪರ ಅಧ್ಯಯನದಲ್ಲಿ, ದಪ್ಪಕ್ಷರಗಳಲ್ಲಿ ಕೊಟ್ಟಿರುವ ಈ ಪುಸ್ತಕದ ಭಾಗಗಳನ್ನು ಓದಿರೆಂದು ನಮ್ಮ ಸೂಚನೆ.)
ಯೇಸು ಸಾಕ್ಷಿಗಳನ್ನು ನೇಮಿಸುತ್ತಾನೆ
3. ಯೇಸುವಿನ ಹಿಂಬಾಲಕರಿಗೆ “ಪವಿತ್ರಾತ್ಮದಲ್ಲಿ ಸ್ನಾನವಾದಾಗ” ಅವರ ಮುಖ್ಯ ಆಸಕ್ತಿಯು ಯಾವುದಾಗಿತ್ತು?
3 ತಾವು ಆತ್ಮಿಕವಾಗಿ ಬಲಗೊಳಿಸಲ್ಪಟ್ಟಿದ್ದ ಕಾರಣ ಅಪೊಸ್ತಲರು ದೇವರ ಪರವಾಗಿ ಸ್ಥಿರವಾದ ಸ್ಥಾನವನ್ನು ತೆಗೆದುಕೊಳ್ಳ ಸಾಧ್ಯವಾಯಿತು. ಕ್ರಿಸ್ತನು ಯಾತನಾ ಕಂಭದಲ್ಲಿ ಸತ್ತಿದ್ದರೂ ಅವನು ಪುನರುತ್ಥಾನ ಹೊಂದಿದ್ದನೆಂದು ಅವರಿಗೆ ಗೊತ್ತಿತ್ತು. (1:1-5) ಯೇಸು “ತನ್ನನ್ನು . . . ಜೀವಂತನೆಂದು ತೋರಿಸಿಕೊಂಡು” ನಾಲ್ವತ್ತು ದಿನಗಳಲ್ಲಿ ಮಾನವ ದೇಹಗಳನ್ನು ತಾಳಿ ರಾಜ್ಯ ಸತ್ಯಗಳನ್ನು ಕಲಿಸಿದನು. ಅವನು ತನ್ನ ಶಿಷ್ಯರಿಗೆ ಅವರು “ಪವಿತ್ರಾತ್ಮದಲ್ಲಿ” ದೀಕ್ಷಾಸ್ನಾನಕ್ಕಾಗಿ ಯೆರೂಸಲೇಮಿನಲ್ಲಿ ಕಾಯಬೇಕೆಂದೂ ಹೇಳಿದನು. ಆ ಬಳಿಕ, ಇಂದಿನ ಯೆಹೋವನ ಸಾಕ್ಷಿಗಳಂತೆಯೇ, ಸಾರುವ ಕೆಲಸವು ಅವರ ಮುಖ್ಯ ಆಸಕ್ತಿಯಾಗಿರುವುದು.—ಲೂಕ 24:27, 49; ಯೋಹಾನ 20:19–21:24.
4. ಯೇಸುವಿನ ಹಿಂಬಾಲಕರ ಮೇಲೆ ಪವಿತ್ರಾತ್ಮ ಬಂದಾಗ ಏನಾಗಲಿತ್ತು?
4 ಪವಿತ್ರಾತ್ಮನ ಸ್ನಾನವನ್ನು ಇನ್ನೂ ಹೊಂದಿರದಿದ್ದ ಅಪೊಸ್ತಲರು [ಕ್ರಿಸ್ತನ] ಭೂಮಿಯ ಆಳಿಕೆಯು ರೋಮನ್ ಆಧಿಪತ್ಯವನ್ನು ಅಂತ್ಯಗೊಳಿಸುವದೆಂದು ತಪ್ಪಾಗಿ ಎಣಿಸಿದ್ದರು. ಅವರು ಕೇಳಿದ್ದು: “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” (1:6-8) ಯೇಸು ‘ಇಲ್ಲ’ವೆಂದು ಹೇಳಿದನು. ಏಕೆಂದರೆ ‘ಕಾಲಗಳನ್ನೂ ಸಮಯಗಳನ್ನೂ ತಿಳಿಯುವದು ಅವರ ಕೆಲಸವಲ್ಲ.’ ‘ಆದರೆ ಪವಿತ್ರಾತ್ಮ ಅವರ ಮೇಲೆ ಬಂದಾಗ’ ಅದು ಅವರಿಗೆ, ಭೂಮಿಯ ರಾಜ್ಯದ ಕುರಿತಲ್ಲ, ದೇವರ ಸ್ವರ್ಗೀಯ ರಾಜ್ಯದ ಕುರಿತು ಸಾಕ್ಷಿ ನೀಡುವಂತೆ ಶಕ್ತಿ ನೀಡುವುದು. ಅವರು ಆಗ ಯೆರೂಸಲೇಮ್, ಯೂದಾಯ ಮತ್ತು ಸಮಾರ್ಯದಲ್ಲಿಯೂ “ಭೂಲೋಕದ ಕಟ್ಟಕಡೆಯ ವರೆಗೂ” ಸಾರುವರು. ಆತ್ಮದ ಸಹಾಯದಿಂದ, ಯೆಹೋವನ ಸಾಕ್ಷಿಗಳು ಈ ಅಂತ್ಯದ ದಿನಗಳಲ್ಲಿ ಈ ಕೆಲಸವನ್ನು ಲೋಕವ್ಯಾಪಕವಾದ ಮಟ್ಟದಲ್ಲಿ ಮಾಡುತ್ತಿದ್ದಾರೆ.
5. ಯೇಸು, ಹೋದ ರೀತಿಯಲ್ಲೀ ಬರುವುದು ಹೇಗೆ?
5 ಯೇಸುವಿನ ಸ್ವರ್ಗಾರೋಹಣಕ್ಕೆ ತುಸು ಮೊದಲು ಅವನು ಈ ಲೋಕವ್ಯಾಪಕವಾದ ಕೆಲಸವನ್ನು ಕೊಟ್ಟಿದ್ದನು. ಆ ಆರೋಹಣವು ತನ್ನ ಶಿಷ್ಯರಿಂದ ಸರಿದು ಹೋಗುವ ಮೇಲ್ಮುಖ ಚಲನೆಯಿಂದಾರಂಭಿಸಿ, ಬಳಿಕ ಯೇಸು ತನ್ನ ಸ್ವರ್ಗೀಯ ಪ್ರಭುವಿನ ಸಾನಿಧ್ಯಕ್ಕೂ ಆತ್ಮ ಕ್ಷೇತ್ರದ ಚಟುವಟಿಕೆಗೂ ಪ್ರವೇಶಿಸಿದನು. (1:9-11) ಮೋಡವು ಬಂದು ಯೇಸು ಅಪೊಸ್ತಲರ ಕಣ್ಣಿಗೆ ಮರೆಯಾದಾಗ ಅವನು ತನ್ನ ಮಾಂಸಿಕ ದೇಹವನ್ನು ಕಳಚಿದನು. ಆಗ ಇಬ್ಬರು ದೇವದೂತರು ತೋರಿಬಂದು ಯೇಸು ‘ಅದೇ ರೀತಿಯಾಗಿ ಬರುವನು’ ಎಂದು ಹೇಳಿದರು. ಮತ್ತು ಸಂಭವಿಸಿರುವುದೂ ಹಾಗೆಯೇ. ಅವನ ಅಗಲುವಿಕೆಯನ್ನು ಯೇಸುವಿನ ಶಿಷ್ಯರು ಮಾತ್ರ ಕಂಡರು. ಅದೇ ರೀತಿ ಅವನ ಅದೃಶ್ಯ ಹಿಂತಿರುಗುವಿಕೆಯನ್ನು ಯೆಹೋವನ ಸಾಕ್ಷಿಗಳು ಮಾತ್ರ ಗುರುತಿಸುತ್ತಾರೆ.
ಯೆಹೋವನು ಆಯ್ಕೆ ಮಾಡುತ್ತಾನೆ
6. ಇಸ್ಕಾರಿಯೋತ ಯೂದನ ಸ್ಥಾನಕ್ಕೆ ಭರ್ತಿಯಾದವನನ್ನು ಹೇಗೆ ಆರಿಸಲಾಯಿತು?
6 ಬೇಗನೇ ಅಪೊಸ್ತಲರು ಯೆರೂಸಲೇಮಿಗೆ ಹಿಂತಿರುಗಿ ಹೋದರು. (1:12-26) ಮಾಳಿಗೆಯಲ್ಲಿ (ಪ್ರಾಯಶಃ ಮಾರ್ಕನ ತಾಯಿ ಮರಿಯಳ ಮನೆಯಲ್ಲಿ) 11 ಮಂದಿ ನಿಷ್ಠೆಯ ಅಪೊಸ್ತಲರು ಯೇಸುವಿನ ಮಲ ತಮ್ಮಂದಿರು, ಅವನ ಇತರ ಶಿಷ್ಯರು ಮತ್ತು ತಾಯಿ ಮರಿಯಳೊಂದಿಗೆ ಪ್ರಾರ್ಥನೆಯಲ್ಲಿ ನಿರತರಾದರು. (ಮಾರ್ಕ 6:3; ಯಾಕೋಬ 1:1) ಆದರೆ ಯೂದನ “ಉದ್ಯೋಗ”ವನ್ನು [ಮೇಲ್ವಿಚಾರಣೆಯ ಸ್ಥಾನ, NW] ಯಾರು ಪಡೆಯುವರು? (ಕೀರ್ತನೆ 109:8) ದೇವರು ಯೇಸುವಿಗೆ ದ್ರೋಹಗೈದವನ ಸ್ಥಾನಕ್ಕೆ ಇನ್ನೊಬ್ಬ ಪುರುಷನನ್ನು ಆಯ್ದುಕೊಂಡಾಗ ಸುಮಾರು 120 ಶಿಷ್ಯರು ಅಲ್ಲಿ ಹಾಜರಿದ್ದರು. ಹೀಗೆ ಅಪೊಸ್ತಲಿಕ ಸಂಖ್ಯೆಯನ್ನು ಪುನಃ 12ಕ್ಕೆ ಭರ್ತಿಮಾಡಲಾಯಿತು. ಈ ಆಯ್ಕೆ ಯೇಸುವಿನ ಶುಶ್ರೂಷಾ ಕಾಲದಲ್ಲಿ ಶಿಷ್ಯನಾಗಿದ್ದವನೂ ಅವನ ಪುನರುತ್ಥಾನಕ್ಕೆ ಸಾಕ್ಷಿಯೂ ಆಗಿದ್ದವನ ಮೇಲೆ ಬೀಳಬೇಕಾಗಿತ್ತು. ಅವನು ಯೆಹೋವನನ್ನು ಪ್ರಭುವೆಂದು ಒಪ್ಪುವವನೂ ಆಗಿರಬೇಕಾಗಿತ್ತೆಂಬದು ನಿಶ್ಚಯ. ಪ್ರಾರ್ಥನೆಯಾದ ಬಳಿಕ ಮತ್ತೀಯ ಮತ್ತು ಯೋಸೇಫ ಬಾರ್ಸಬರ ಮೇಲೆ ಚೀಟುಹಾಕಲಾಗಿ ದೇವರು ಮತ್ತೀಯನ ಮೇಲೆ ಚೀಟು ಬೀಳುವಂತೆ ಮಾಡಿದನು.—ಜ್ಞಾನೋಕ್ತಿ 16:33.
7. (ಎ) ಯೂದನು “ತನ್ನ ದ್ರೋಹದಿಂದ ಸಂಪಾದಿಸಿದ ಹಣಕ್ಕೆ ಒಂದು ಹೊಲವನ್ನು” ಕೊಂಡುಕೊಂಡದ್ದು ಹೇಗೆ? (ಬಿ) ಯೂದನು ಸತ್ತದ್ದು ಹೇಗೆ?
7 ಯೂದ ಇಸ್ಕಾರಿಯೋತನು ಯೆಹೋವನನ್ನು ಪ್ರಭುವೆಂದು ಒಪ್ಪಿರಲಿಲ್ಲ. ಅವನು ದೇವಪುತ್ರನನ್ನು 30 ಬೆಳ್ಳಿ ನಾಣ್ಯಗಳಿಗೆ ಒಪ್ಪಿಸಿಕೊಟ್ಟು ದ್ರೋಹಮಾಡಿದ್ದನು ! ಯೂದನು ಆ ಹಣವನ್ನು ಮುಖ್ಯ ಯಾಜಕರಿಗೆ ಹಿಂದೆ ಕೊಟ್ಟರೂ, ಈ ದ್ರೋಹಿಯು “ತನ್ನ ದ್ರೋಹದಿಂದ ಸಂಪಾದಿಸಿದ ಹಣಕ್ಕೆ ಒಂದು ಹೊಲವನ್ನು ಕೊಂಡುಕೊಂಡನು” ಎಂದು ಪೇತ್ರನು ಹೇಳಿದನು. ಇದು ಹೇಗೆ? ಅವನು “ಜೀವಹತ್ಯದ ಹೊಲ”ವೆಂದು ಕರೆಯಲ್ಪಟ್ಟ ಸ್ಥಳವನ್ನು ಕೊಳ್ಳಲು ಹಣವನ್ನೂ ಕಾರಣವನ್ನೂ ಒದಗಿಸಿದನು. ಹಿನ್ನೋಮ್ ಕಣಿವೆಯ ತೆಂಕು ದಿಕ್ಕಿನ ಒಂದು ಸಮತಟ್ಟಾದ ಜಮೀನೇ ಇದು ಎಂದು ಗುರುತಿಸಲಾಗಿದೆ. ಸ್ವರ್ಗೀಯ ಪ್ರಭುವಿನೊಂದಿಗೆ ಅವನಿಗಿದ್ದ ಸಂಬಂಧವನ್ನು ಪೂರ್ತಿಯಾಗಿ ಹಾಳುಮಾಡಿಕೊಂಡ ಅವನು “ಉರ್ಲು ಹಾಕಿಕೊಂಡು ಸತ್ತನು.” (ಮತ್ತಾಯ 27:3-10) ಪ್ರಾಯಶಃ, ಹಗ್ಗ ಅಥವಾ ಕೊಂಬೆ ಮುರಿದು ಮೊನಚಾದ ಬಂಡೆಯ ಮೇಲೆ ‘ತಲೆಕೆಳಗಾಗಿ ಬೀಳಲಾಗಿ ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು.’ ನಮ್ಮಲ್ಲಿ ಯಾವನೂ ಇಂಥ ಸುಳ್ಳು ಸಹೋದರನಾಗದೇ ಇರಲಿ!
ಪವಿತ್ರಾತ್ಮಭರಿತರು!
8. ಯೇಸುವಿನ ಶಿಷ್ಯರು ಯಾವಾಗ ಪವಿತ್ರಾತ್ಮ ಸ್ನಾನ ಪಡೆದರು, ಇದರ ಪರಿಣಾಮವೇನಾಯಿತು?
8 ವಾಗ್ದಾನಿತವಾಗಿದ್ದ ಪವಿತ್ರಾತ್ಮ ಸ್ನಾನದ ವಿಷಯವೇನು? ಯೇಸು ಮೇಲೇರಿ ಹೋಗಿ ಹತ್ತು ದಿನಗಳಲ್ಲಿ ಅಂದರೆ, ಸಾ.ಶ. 33 ರ ಪಂಚಾಶತ್ತಮದಲ್ಲಿ ಇದು ನಡೆಯಿತು. (2:1-4) ಆ ದೀಕ್ಷಾಸ್ನಾನ ಎಷ್ಟು ರೋಮಾಂಚಕರವಾದ ಸಂಭವ ! ದೃಶ್ಯವನ್ನು ಭಾವಿಸಿ ಕೊಳ್ಳಿರಿ. ಆ ಮೇಲಂತಸ್ತಿನಲ್ಲಿ 120 ಶಿಷ್ಯರು ನೆರೆದಿದ್ದಾಗ, ‘ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೇ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.’ ಅದು ಗಾಳಿಯಾಗಿರಲಿಲ್ಲ, ಗಾಳಿಯಂತೆ ಕೇಳಿಸಿತ್ತು. “ಉರಿಯಂತಿದ್ದ” ನಾಲಿಗೆಗಳು ಪ್ರತಿಯೊಬ್ಬ ಶಿಷ್ಯ ಮತ್ತು ಅಪೊಸ್ತಲನ ಮೇಲೆ ಕೂತುಕೊಂಡವು. “ಅವರೆಲ್ಲರು ಪವಿತ್ರಾತ್ಮಭರಿತರಾಗಿ . . . ಬೇರೆ ಬೇರೆ ಭಾಷೆಗಳಲ್ಲಿ ಮಾತಾಡುವದಕ್ಕೆ ಪ್ರಾರಂಭಿಸಿದರು.” ಆ ಸ್ನಾನ ನಡೆದಾಗ ಅವರು ಪವಿತ್ರಾತ್ಮ ಜನಿತರು, ಅಭಿಷಿಕ್ತರು, ಆತ್ಮಿಕ ಬಾಧ್ಯತೆಗಾಗಿ ಮುದ್ರೆ ಹಾಕಲ್ಪಟ್ಟವರಾದರು.—ಯೋಹಾನ 3:3, 5; 2 ಕೊರಿಂಥ 1:21, 22; 1 ಯೋಹಾನ 2:20.
9. ಆತ್ಮಭರಿತ ಶಿಷ್ಯರು ಯಾವುದರ ಕುರಿತು ಮಾತಾಡಿದರು?
9 ಈ ಘಟನೆ ‘ಆಕಾಶದ ಕೆಳಗಿನ ಸಕಲ ರಾಷ್ಟ್ರಗಳಿಂದ’ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರಿಗೆ ಮತ್ತು ಯೆಹೂದಿ ಮತಕ್ಕೆ ಪರಿವರ್ತಿತರಾದವರ ಮೇಲೆ ಪ್ರಭಾವ ಬೀರಿತು. (2:5-13) ಬೆರಗಾದ ಅವರು ‘ನಮ್ಮಲ್ಲಿ ಪ್ರತಿಯೊಬ್ಬನು ತಮ್ಮ ತಮ್ಮ ಹುಟ್ಟು ಭಾಷೆಯಲ್ಲಿ ಕೇಳುತ್ತಿರುವದು ಹೇಗೆ?’ ಎಂದು ಕೇಳಿದರು. ಮೇದ್ಯ (ಯೂದಾಯದ ಪೂರ್ವಭಾಗ) ಫ್ರುಗ್ಯ (ಏಷ್ಯಾ ಮೈನರ್ನಲ್ಲಿ) ಮತ್ತು ರೋಮ್ (ಯುರೋಪ್ನಲ್ಲಿ) ಗಳ ಭಾಷೆಯನ್ನು ಅವರು ಕೇಳಿದಿರ್ದಬಹುದು. ಶಿಷ್ಯರು ವಿವಿಧ ಭಾಷೆಗಳಲ್ಲಿ “ದೇವರ ಮಹತ್ತುಗಳ ವಿಷಯವಾಗಿ” ಮಾತಾಡುವದನ್ನು ಕೇಳಿದ ಅನೇಕರು ಆಶ್ಚರ್ಯಭರಿತರಾದರೂ, ಹಾಸ್ಯಮಾಡುತ್ತಿದ್ದ ಕೆಲವರು ಅವರು ಕುಡಿದು ಮತ್ತರಾಗಿದ್ದಾರೆಂದು ಹೇಳಿದರು.
ಪೇತ್ರನು ಪ್ರೇರಕ ಸಾಕ್ಷಿ ನೀಡುತ್ತಾನೆ
10. ಸಾ.ಶ. 33 ರ ಪಂಚಾಶತ್ತಮದ ಈ ಘಟನೆ ಯಾವ ಪ್ರವಾದನೆಯನ್ನು ನೆರವೇರಿಸಿತು, ಮತ್ತು ಇದಕ್ಕೆ ಆಧುನಿಕ ದಿನಗಳಲ್ಲಿ ಹೋಲಿಕೆ ಇದೆಯೋ?
10 ಪೇತ್ರನು, ಬೆಳಿಗ್ಗೆ ಒಂಭತ್ತಕ್ಕೆ ಕುಡಿದು ಮತ್ತರಾಗುವುದು ಹೊತ್ತಿಗೆ ಮುಂಚೆಯೇ ಎಂದು ತೋರಿಸುತ್ತಾ ಸಾಕ್ಷಿಯನ್ನಾರಂಭಿಸುತ್ತಾನೆ. (2:14-21) ಇದಕ್ಕೆ ಬದಲು, ಈ ಘಟನೆಯು ಪವಿತ್ರಾತ್ಮವನ್ನು ತನ್ನ ಜನರ ಮೇಲೆ ಸುರಿಸುವ ದೇವರ ವಾಗ್ದಾನದ ನೆರವೇರಿಕೆಯೇ ಇದಾಗಿದೆ. ದೇವರು ಪೇತ್ರನನ್ನು, ಅವನು ನಮ್ಮ ದಿನಗಳನ್ನು ಸೂಚಿಸಿ “ಕಡೇ ದಿವಸಗಳಲ್ಲಿ” ಮತ್ತು “ಪ್ರವಾದಿಸುವವರು” ಎಂಬ ಮಾತುಗಳನ್ನು ಸೇರಿಸುವಂತೆ ಪ್ರೇರಿಸಿದನು. (ಯೋವೇಲ 2:28-32) ಯೆಹೋವನು ತನ್ನ ಮಹಾ ದಿನ ಬರುವುದಕ್ಕೆ ಮುಂಚಿತವಾಗಿ ಸ್ವರ್ಗದಲ್ಲಿ ಅದ್ಭುತಕಾರ್ಯಗಳನ್ನೂ ಭೂಮಿಯಲ್ಲಿ ಸೂಚಕ ಕಾರ್ಯಗಳನ್ನೂ ಕೊಡುವನು ಮತ್ತು ಆತನ ಹೆಸರನ್ನು ನಂಬಿಕೆಯಿಂದ ಹೇಳಿಕೊಳ್ಳುವವರು ಮಾತ್ರ ರಕ್ಷಣೆ ಹೊಂದುವರು. ಅಭಿಷಿಕ್ತರ ಮೇಲೆ ಇದೇ ರೀತಿಯ ಸುರಿಸುವಿಕೆಯು ಅವರು ಇಂದು ಮಹಾ ಚೈತನ್ಯದಿಂದ ಮತ್ತು ಕಾರ್ಯಸಾಧಕತೆಯಿಂದ ಪ್ರವಾದಿಸುವಂತೆ ಸಾಮರ್ಥ್ಯ ಕೊಟ್ಟಿದೆ.
11. ಯೇಸುವಿನ ಸಂಬಂಧದಲ್ಲಿ ಯೆಹೂದ್ಯರೇನು ಮಾಡಿದರು, ದೇವರೇನು ಮಾಡಿದನು?
11 ಪೇತ್ರನು ಆ ಬಳಿಕ ಮೆಸ್ಸೀಯನನ್ನು ಗುರುತುಪಡಿಸಿದನು. (2:22-28) ಯೇಸುವಿಗೆ ಮಹತ್ಕಾರ್ಯ, ಸೂಚಕಕಾರ್ಯ ಮತ್ತು ಅದ್ಭುತ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ದೇವರು ಕೊಟ್ಟು ಅವನ ಮೆಸ್ಸೀಯತನವನ್ನು ದೃಢೀಕರಿಸಿದನು. (ಇಬ್ರಿಯ 2:3, 4) ಆದರೆ ಯೆಹೂದ್ಯರು ಅವನನ್ನು “ಅನ್ಯಜನರ ಕೈಯಿಂದ” ಅಂದರೆ ದೇವರ ನಿಯಮವನ್ನು ಪಾಲಿಸದ ರೋಮನರಿಂದ ಶೂಲಕ್ಕೆ ಜಡಿಸಿದರು. “ದೇವರ ಸ್ಥಿರಸಂಕಲ್ಪಕ್ಕೂ ಭವಿಷದ್ಜ್ಞಾನಕ್ಕೂ ಅನುಸಾರವಾಗಿ” ಅಂದರೆ ಅದು ದೇವರ ಚಿತ್ತವಾಗಿದ್ದುದರಿಂದ ಯೇಸು ಒಪ್ಪಿಸಲ್ಪಟ್ಟನು. ಆದರೆ ದೇವರು ಯೇಸುವನ್ನು ಪುನರುತ್ಥಾನಗೊಳಿಸಿದನು ಮತ್ತು ಕೊಳೆಯದ ರೀತಿಯಲ್ಲಿ ಅವನ ದೇಹವನ್ನು ತೊಲಗಿಸಿಬಿಟ್ಟನು.—ಕೀರ್ತನೆ 16:8-11.
12. ದಾವೀದನು ಏನು ಮುನ್ನೋಡಿದನು, ಮತ್ತು ರಕ್ಷಣೆ ಯಾವುದರ ಮೇಲೆ ಹೊಂದಿಕೊಂಡಿದೆ?
12 ಪೇತ್ರನ ಸಾಕ್ಷಿ ಮುಂದುವರಿದಂತೆ ಮೆಸ್ಸೀಯನ ಕುರಿತಾದ ಪ್ರವಾದನೆ ಇನ್ನೂ ಹೆಚ್ಚು ಒತ್ತಿಹೇಳಲ್ಪಟ್ಟಿತು. (2:29-36) ದಾವೀದನು ತನ್ನ ಅತ್ಯಂತ ಮಹಾ ಕುಮಾರ ಮೆಸ್ಸೀಯ ಯೇಸುವಿನ ಪುನರುತ್ಥಾನವನ್ನು ಮುನ್ನೋಡಿದನೆಂದು ಪೇತ್ರನು ಹೇಳಿದನು. ಸ್ವರ್ಗದಲ್ಲಿ, ದೇವರ ಬಲಗಡೆಗೆ ಏರಿಸಲ್ಪಟ್ಟ ಸ್ಥಾನದಿಂದ ಯೇಸು ತನ್ನ ತಂದೆಯಿಂದ ಪಡೆದ ಪವಿತ್ರಾತ್ಮವನ್ನು ಸುರಿಸಿದ್ದಾನೆ. (ಕೀರ್ತನೆ 110:1) ಪೇತ್ರನನ್ನಾಲಿಸುತ್ತಿದ್ದವರು ಶಿಷ್ಯರ ಮೇಲೆ ಕೂತ ಉರಿಯಂತಿದ್ದ ನಾಲಿಗೆ ಮತ್ತು ಅವರು ಮಾತಾಡಿದ ವಿದೇಶ ಭಾಷೆಗಳನ್ನು ‘ಕಂಡುಕೇಳಿ’ ಅದರ ಕೆಲಸವನ್ನು ನೋಡಿದರು. ಯೇಸುವನ್ನು ಕರ್ತನೆಂದೂ ಮೆಸ್ಸೀಯನೆಂದೂ ಒಪ್ಪುವದರ ಮೇಲೆ ರಕ್ಷಣೆ ಹೊಂದಿಕೊಂಡಿದೆ ಎಂದೂ ಅವನು ತೋರಿಸಿದನು.—ರೋಮಾಪುರದವರಿಗೆ 10:9; ಫಿಲಿಪ್ಪಿಯವರಿಗೆ 2:9-11.
ಯೆಹೋವನು ವೃದ್ಧಿ ಕೊಡುತ್ತಾನೆ
13. (ಎ) ಸರಿಯಾದ ಸ್ನಾನ ಪಡೆಯಲು ಯೆಹೂದ್ಯರು ಮತ್ತು ಮತಾವಲಂಬಿಗಳು ಏನು ಒಪ್ಪಿಕೊಳ್ಳಬೇಕಾಗಿತ್ತು? (ಬಿ) ಎಷ್ಟು ಜನರು ದೀಕ್ಷಾಸ್ನಾನ ಹೊಂದಿದರು ಮತ್ತು ಯೆರೂಸಲೇಮಿನಲ್ಲಿ ಇದರಿಂದಾದ ಪರಿಣಾಮವೇನು?
13 ಪೇತ್ರನ ಮಾತುಗಳು ಎಷ್ಟು ಕಾರ್ಯಸಾಧಕವಾಗಿದ್ದವು ! (2:37-42) ಮೆಸ್ಸೀಯನ ವಧೆಗೆ ಒಪ್ಪಿಗೆ ಕೊಟ್ಟದ್ದಕ್ಕಾಗಿ ಅವನಿಗೆ ಕಿವಿಗೊಡುತ್ತಿದ್ದವರಿಗೆ ಹೃದಯ ತಿವಿದಂತಾಯಿತು. ಅವನು ಅವರನ್ನು ಪ್ರೋತ್ಸಾಹಿಸಿದ್ದು: “ನಿಮ್ಮ ಪಾಪಗಳು ಪರಿಹಾರವಾಗುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ.” ಯೆಹೂದ್ಯರೂ ಯೆಹೂದಿ ಮತಾವಲಂಬಿಗಳೂ ಯೆಹೋವನು ದೇವರೆಂದೂ ಆತನ ಆತ್ಮ ಅವರಿಗೆ ಅವಶ್ಯವೆಂದೂ ಆಗಲೇ ಒಪ್ಪಿಕೊಂಡಿದ್ದರು. ಈಗ ಅವರು ಪಶ್ಚಾತ್ತಾಪಪಟ್ಟು ತಂದೆ, ಮಗ, ಮತ್ತು ಪವಿತ್ರಾತ್ಮದ ಹೆಸರಿನಲ್ಲಿ (ಹುದ್ದೆ ಅಥವಾ ಕಾರ್ಯವನ್ನು ಒಪ್ಪಿಕೊಂಡು) ದೀಕ್ಷಾಸ್ನಾನ ಹೊಂದಲಿಕ್ಕಾಗಿ ಯೇಸುವನ್ನು ಮೆಸ್ಸೀಯನೆಂದು ಅಂಗೀಕರಿಸಬೇಕಾಗಿತ್ತು. (ಮತ್ತಾಯ 28:19, 20) ಈ ಯೆಹೂದ್ಯರಿಗೆ ಮತ್ತು ಮತಾವಲಂಬಿಗಳಿಗೆ ಸಾಕ್ಷಿ ನೀಡಿದುದರ ಮೂಲಕ ಪೇತ್ರನು, ವಿಶ್ವಾಸಿಗಳಾದ ಯೆಹೂದ್ಯರು ಸ್ವರ್ಗರಾಜ್ಯವನ್ನು ಪ್ರವೇಶಿಸುವಂತೆ ಜ್ಞಾನ ಮತ್ತು ಸಂದರ್ಭವನ್ನು ಒದಗಿಸಲು ಯೇಸು ಕೊಟ್ಟ ಪ್ರಥಮ ಆತ್ಮಿಕ ಕೀಲಿಕೈಯನ್ನು ಉಪಯೋಗಿಸಿದನು. (ಮತ್ತಾಯ 16:19) ಆ ಒಂದೇ ದಿನದಲ್ಲಿ 3,000 ಮಂದಿ ದೀಕ್ಷಾಸ್ನಾನ ಹೊಂದಿದರು ! ಅಷ್ಟೊಂದು ಸಾಕ್ಷಿಗಳು ಯೆರೂಸಲೇಮಿನಂಥ ಚಿಕ್ಕ ಕ್ಷೇತ್ರದಲ್ಲಿ ಸಾರುವುದನ್ನು ಭಾವಿಸಿರಿ !
14. ವಿಶ್ವಾಸಿಗಳು “ತಮ್ಮದೆಲ್ಲವನ್ನು ಹುದುವಾಗಿ” ಏಕೆ ಮತ್ತು ಯಾವ ವಿಧದಲ್ಲಿ ಬಳಸಿದರು?
14 ದೂರದ ಸ್ಥಳಗಳಿಂದ ಬಂದವರು ಹೆಚ್ಚು ಸಮಯ ಉಳಿಯಲು ಆಹಾರ ಸಾಮಗ್ರಿಗಳ ಕೊರತೆಯುಳ್ಳವರಾಗಿದ್ದರು. ಆದರೂ ಈ ಹೊಸ ವಿಶ್ವಾಸದ ಕುರಿತು ಹೆಚ್ಚು ಕಲಿತು ಅದನ್ನು ಇತರರಿಗೆ ಸಾರುವ ಅಪೇಕ್ಷೆ ಅವರಲ್ಲಿತ್ತು. ಆಗ ಯೇಸುವಿನ ಆದಿ ಹಿಂಬಾಲಕರು, ಇಂದಿನ ಯೆಹೋವನ ಸಾಕ್ಷಿಗಳಂತೆಯೇ, ಒಬ್ಬರಿಗೊಬ್ಬರು ಪ್ರೀತಿಪೂರ್ವಕವಾಗಿ ಸಹಾಯ ನೀಡಿದರು. (2:43-47) ವಿಶ್ವಾಸಿಗಳು ತತ್ಕಾಲಕ್ಕೆ “ತಮ್ಮದೆಲ್ಲವನ್ನು ಹುದುವಾಗಿ” ಅನುಭೋಗಿಸಿದರು. ಕೆಲವರು ತಮ್ಮ ಆಸ್ತಿಯನ್ನು ಮಾರಿದರು. ಅದರಿಂದ ಬಂದ ಹಣವನ್ನು ಕೊರತೆಯುಳ್ಳವರಿಗೆ ಹಂಚಲಾಯಿತು. ‘ಯೆಹೋವನು ರಕ್ಷಿಸಲ್ಪಟ್ಟವರನ್ನು ದಿನಾಲೂ ಅವರಿಗೆ ಸೇರಿಸುತ್ತಿದ್ದಾಗ’ ಸಭೆಯ ಪ್ರಾರಂಭವು ಉತ್ಕೃಷ್ಟ ರೀತಿಯಲ್ಲಿ ಆಯಿತು.
ರೋಗವಾಸಿ ಮತ್ತು ಅದರ ಪರಿಣಾಮ
15. ಪೇತ್ರ, ಯೋಹಾನರು ದೇವಾಲಯಕ್ಕೆ ಹೋದಾಗ ಏನಾಯಿತು, ಮತ್ತು ಜನರ ಪ್ರತಿವರ್ತನೆ ಏನಾಗಿತ್ತು?
15 ಯೆಹೋವನು “ಸೂಚಕ ಕಾರ್ಯಗಳ” ಮೂಲಕ ಯೇಸುವಿನ ಹಿಂಬಾಲಕರನ್ನು ಬೆಂಬಲಿಸಿದನು. (3:1-10) ಪೇತ್ರ, ಯೋಹಾನರು ಸಂಧ್ಯಾಯಜ್ಞದ ಪ್ರಾರ್ಥನಾ ಸಮಯಕ್ಕಾಗಿ 3 ಘಂಟೆಗೆ ದೇವಾಲಯಕ್ಕೆ ಹೋದಾಗ ಸುಂದರ ದ್ವಾರದ ಬಳಿ ಹುಟ್ಟು ಕುಂಟನೊಬ್ಬನು ‘ಕೃಪಾಭಿಕ್ಷೆ’ ಬೇಡುತ್ತಿದ್ದನು. ಆಗ ಪೇತ್ರನು, ‘ಬೆಳ್ಳಿ ಬಂಗಾರಗಳು ನನ್ನಲ್ಲಿಲ್ಲ. ಆದರೆ ಇರುವುದನ್ನು ಕೊಡುತ್ತೇನೆ. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ನಡೆದಾಡು !’ ಎಂದು ಹೇಳಿದನು. ಆ ಕ್ಷಣದಲ್ಲಿಯೇ ಅವನಿಗೆ ವಾಸಿಯಾಯಿತು ! ಅವನು “ನಡೆಯುತ್ತಾ ಹಾರುತ್ತಾ ದೇವರನ್ನು ಕೊಂಡಾಡುತ್ತಾ” ದೇವಾಲಯವನ್ನು ಪ್ರವೇಶಿಸಿದಾಗ ಜನರು ‘ಆನಂದ ಪರವಶ’ ರಾದರು. ಪ್ರಾಯಶಃ ಕೆಲವರು “ಕುಂಟನು ಜಿಂಕೆಯಂತೆ ಹಾರುವನು” ಎಂಬ ಮಾತುಗಳನ್ನು ಜ್ಞಾಪಿಸಿ ಕೊಂಡಿದಿರ್ದಬೇಕು.—ಯೆಶಾಯ 35:6.
16. ಅಪೊಸ್ತಲರಿಗೆ ಒಬ್ಬ ಕುಂಟನನ್ನು ವಾಸಿಮಾಡಲು ಸಾಧ್ಯವಾದದ್ದು ಹೇಗೆ?
16 ವಿಸ್ಮಯಗೊಂಡ ಜನರು ದೇವಾಲಯದ ಪೂರ್ವಬದಿಯಲ್ಲಿರುವ ಮುಚ್ಚಿರುವ ಮುಖಮಂಟಪವಾದ ಸೊಲೊಮೋನನ ಮಂಟಪದಲ್ಲಿ ನೆರೆದು ಬಂದರು. ಅಲ್ಲಿ ಪೇತ್ರನು ಒಂದು ಸಾಕ್ಷಿ ನೀಡಿದನು. (3:11-18) ಅಪೊಸ್ತಲರು ಕುಂಟನನ್ನು ದೇವರ ಮಹಿಮೆಗೆ ಏರಿಸಲ್ಪಟ್ಟಿದ್ದ ಸೇವಕ ಯೇಸುವಿನ ಮೂಲಕ ವಾಸಿ ಮಾಡುವಂತೆ ದೇವರು ಅವರಿಗೆ ಶಕ್ತಿ ಕೊಟ್ಟನೆಂದು ಅವನು ತೋರಿಸಿದನು. (ಯೆಶಾಯ 52:13–53:12) ಆದರೆ ಯೆಹೂದ್ಯರು ಆ “ಪರಿಶುದ್ಧನೂ ನೀತಿವಂತನೂ ಆಗಿರುವ ಪುರುಷನನ್ನು” ತ್ಯಜಿಸಿದರೂ ಯೆಹೋವನು ಅವನನ್ನು ಪುನರುತ್ಥಾನಗೊಳಿಸಿದನು. ಮೆಸ್ಸೀಯನನ್ನು ತಾವು ಮರಣಕ್ಕೆ ಒಪ್ಪಿಸುತ್ತಿದ್ದೇವೆಂದು ಜನರಿಗೆ ಮತ್ತು ಅಧಿಕಾರಿಗಳಿಗೆ ತಿಳಿದಿರದಿದ್ದರೂ “ತಾನು ನೇಮಿಸಿದ ಕ್ರಿಸ್ತನು ಬಾಧೆಯನ್ನನುಭವಿಸುವ” ಕುರಿತಾದ ಪ್ರವಾದನಾ ಮಾತುಗಳನ್ನು ದೇವರು ಹೀಗೆನೆರವೇರಿಸಿದನು.—ದಾನಿಯೇಲ 9:26.
17. (ಎ) ಯೆಹೂದ್ಯರು ಈಗ ಯಾವ ಕಾರ್ಯವನ್ನು ಮಾಡುವುದು ಅವಶ್ಯವಾಗಿತ್ತು? (ಬಿ) ನಮ್ಮ ದಿನಗಳಲ್ಲಿ ‘ಕ್ರಿಸ್ತನನ್ನು ಕಳುಹಿಸಿದಂದಿನಿಂದ’ ಏನು ನಡೆದಿದೆ?
17 ಮೆಸ್ಸೀಯನನ್ನು ಹಾಗೆ ಆದರಿಸಿದಕ್ಕಾಗಿ ಯೆಹೂದ್ಯರು ಈಗ ಏನು ಮಾಡಬೇಕೆಂದು ಪೇತ್ರನು ತೋರಿಸಿದನು. (3:19-26) ಅವರು “ಪಶ್ಚಾತ್ತಾಪ ಪಡುವ” ಅಥವಾ ತಮ್ಮ ಪಾಪಗಳಿಗಾಗಿ ತೀಕ್ಷ್ಣ ಪರಿತಾಪ ಪಡುವ ಮತ್ತು “ತಿರುಗಿ ಕೊಳ್ಳುವ” ಅಥವಾ ಪರಸ್ಪರ ವಿರುದ್ಧ ದಾರಿಗೆ ತಿರುಗಿ ಕೊಂಡು ಪರಿವರ್ತನೆ ಹೊಂದುವ ಅಗತ್ಯವಿತ್ತು. ಅವರು ಯೇಸುವನ್ನು ಮೆಸ್ಸೀಯನೆಂದು ನಂಬಿ, ಪ್ರಾಯಶ್ಚಿತ್ತ ಯಜ್ಞವನ್ನು ಅಂಗೀಕರಿಸುವಲ್ಲಿ ಪಾಪ ಕ್ಷಮಾಪಣೆ ಹೊಂದುವ ಅವರಿಗೆ ಯೆಹೋವನಿಂದ ವಿಶ್ರಾಂತಿ ಒದಗಿ ಬರುವುದು. (ರೋಮಾಪುರದವರಿಗೆ 5:6-11) ದೇವರು ಯೆಹೂದ್ಯರ ಪಿತೃಗಳೊಂದಿಗೆ, ಅಬ್ರಹಾಮನಿಗೆ, “ಭೂಮಿಯ ಎಲ್ಲಾ ಜನಾಂಗಗಳನ್ನು ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು,” ಎಂದು ಹೇಳಿ ಮಾಡಿದ ಒಡಂಬಡಿಕೆಯ ಪುತ್ರರೇ ಅವರು ಎಂದು ಅವರಿಗೆ ಜ್ಞಾಪಕ ಹುಟ್ಟಿಸಲ್ಪಟ್ಟಿತ್ತು. ಆದುದರಿಂದ ದೇವರು ಮೊದಲಾಗಿ ತನ್ನ ಮೆಸ್ಸೀಯ ಸೇವಕನನ್ನು ಪಶ್ಚಾತ್ತಾಪಪಟ್ಟ ಯೆಹೂದ್ಯರನ್ನು ವಿಮೋಚಿಸುವದಕ್ಕೆ ಕಳುಹಿಸಿದನು. ರಸಕರವಾದ ವಿಷಯವೇನಂದರೆ, 1914 ರಲ್ಲಿ, ಸ್ವರ್ಗೀಯ ರಾಜ್ಯಾಧಿಕಾರದಲ್ಲಿ ‘ಕ್ರಿಸ್ತನನ್ನು ಕಳುಹಿಸಿದಂದಿನಿಂದ’ ಯೆಹೋವನ ಸಾಕ್ಷಿಗಳ ಮಧ್ಯೆ ವಿಶ್ರಾಂತಿಕರವಾದ ಸತ್ಯಗಳ ಮತ್ತು ದೇವಪ್ರಭುತ್ವ ಸಂಘಟನೆಯ ಪುನಃಸ್ಥಾಪನೆಯಾಗಿದೆ.—ಆದಿಕಾಂಡ 12:3; 18:18; 22:18.
ಅವರು ನಿಲ್ಲಿಸಲಿಲ್ಲ!
18. “ಮನೆ ಕಟ್ಟುವವರು” ಯಾವ “ಕಲ್ಲನ್ನು” ತ್ಯಜಿಸಿದರು ಮತ್ತು ಯಾರಲ್ಲಿ ಮಾತ್ರ ರಕ್ಷಣೆ ಇದೆ?
18 ಪೇತ್ರ ಮತ್ತು ಯೋಹಾನರು ಯೇಸುವಿನ ಪುನರುತ್ಥಾನವನ್ನು ಸಾರಿದುದಕ್ಕೆ ಕೋಪಗೊಂಡ ಮುಖ್ಯ ಯಾಜಕರು, ದೇವಾಲಯದ ಅಧಿಪತಿ ಮತ್ತು ಸದ್ದುಕಾಯರು ಅವರನ್ನು ಹಿಡಿದು ಕಾವಲಲ್ಲಿಟ್ಟರು. (4:1-12) ಸದ್ದುಕಾಯರು ಪುನರುತ್ಥಾನವನ್ನು ನಂಬಿರಲಿಲ್ಲ. ಆದರೆ ಇತರ ಅನೇಕರು ನಂಬಿದರು. ಅವರಲ್ಲಿ ಪುರುಷರ ಸಂಖ್ಯೆಯೇ ಸುಮಾರು 5,000 ವಾಗಿತ್ತು. ಯೆರೂಸಲೇಮಿನ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಾಗ ಪೇತ್ರನು, ಆ ಕುಂಟನು, ಅವರು ಶೂಲಕ್ಕೇರಿಸಿದರೂ ದೇವರು ಎಬ್ಬಿಸಿದ “ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ” ವಾಸಿಯಾದನೆಂದು ಹೇಳಿದನು. ಯೆಹೂದಿ ಮನೆಕಟ್ಟುವವರು ತಿರಸ್ಕರಿಸಿದ ಆ “ಕಲ್ಲು” “ಮುಖ್ಯವಾದ ಮೂಲೆಗಲ್ಲು” ಆಯಿತು. (ಕೀರ್ತನೆ 118:22) ಇದಲ್ಲದೆ “ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ” ಎಂದು ಪೇತ್ರನಂದನು.
19. ಸಾರುವುದನ್ನು ನಿಲ್ಲಿಸಲು ಆಜ್ಞಾಪಿಸಲ್ಪಟ್ಟಾಗ ಅಪೊಸ್ತಲರ ಉತ್ತರ ಏನಾಗಿತ್ತು?
19 ಇಂಥ ಮಾತನ್ನು ನಿಲ್ಲಿಸುವ ಒಂದು ಪ್ರಯತ್ನ ನಡೆಯಿತು. (4:13-22) ವಾಸಿಯಾಗಿದ್ದ ಮನುಷ್ಯನು ಅಲ್ಲಿದ್ದ ಕಾರಣ, ಈ “ಪ್ರಸಿದ್ಧವಾದ ಒಂದು ಸೂಚಕ ಕಾರ್ಯವನ್ನು” ಅಲ್ಲಗಳೆಯುವದು ಅವರಿಗೆ ಅಸಾಧ್ಯವಾಗಿತ್ತು. ಆದರೂ ಪೇತ್ರ ಮತ್ತು ಯೋಹಾನರು ‘ಯೇಸುವಿನ ಹೆಸರಿನ ಮೇಲೆ ಎಲ್ಲಿಯೂ ಮಾತಾಡಬಾರದು ಅಥವಾ ಕಲಿಸಬಾರದು’ ಎಂಬ ಆಜ್ಞೆಯನ್ನು ವಿಧಿಸಲಾಯಿತು. ಅವರ ಉತ್ತರವೇನಾಗಿತ್ತು? ‘ನಾವು ನೋಡಿ ಕೇಳಿದ ವಿಷಯಗಳ ಕುರಿತು ಮಾತಾಡುವುದನ್ನು ನಿಲ್ಲಿಸುವುದು ಅಸಾಧ್ಯ.’ ಅವರು ಯೆಹೋವನನ್ನು ತಮ್ಮ ಪ್ರಭುವೆಂದು ತಿಳಿದು ವಿಧೇಯರಾದರು !
ಪ್ರಾರ್ಥನೆಗಳಿಗೆ ಉತ್ತರ ದೊರೆಯಿತು!
20 ಶಿಷ್ಯರು ಯಾವುದಕ್ಕಾಗಿ ಪ್ರಾರ್ಥಿಸಿದರು, ಮತ್ತು ಪರಿಣಾಮವೇನು?
20 ಯೆಹೋವನ ಸಾಕ್ಷಿಗಳು ತಮ್ಮ ಕೂಟಗಳಲ್ಲಿ ಪ್ರಾರ್ಥಿಸುವಂತೆಯೇ, ಬಿಡುಗಡೆ ಹೊಂದಿದ ಅಪೊಸ್ತಲರು ನಡೆದುದನ್ನು ತಿಳಿಸಿದಾಗ ಶಿಷ್ಯರು ಪ್ರಾರ್ಥಿಸಿದರು. (4:23-31) ಹೆರೋದ ಅಂತಿಪನೂ ಪೊಂತ್ಯ ಪಿಲಾತನೂ ಇಸ್ರಾಯೇಲ್ಯೇತರ ರೋಮನರು ಮತ್ತು ಇಸ್ರಾಯೇಲ್ಯರು ಕೂಡಿ ಮೆಸ್ಸೀಯನ ವಿರುದ್ಧ ಎದ್ದು ಬಂದಿದ್ದಾರೆ ಎಂದು ಗಮನಿಸಲಾಯಿತು. (ಕೀರ್ತನೆ 2:1, 2; ಲೂಕ 23:1-12) ಈ ಪ್ರಾರ್ಥನೆಗೆ ಉತ್ತರವಾಗಿ, ಯೆಹೋವನು ಶಿಷ್ಯರನ್ನು, ಅವರು ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡುವಂತೆ ಪವಿತ್ರಾತ್ಮದಿಂದ ತುಂಬಿಸಿದನು. ಹಿಂಸೆಯನ್ನು ನಿಲ್ಲಿಸ ಬೇಕೆಂದು ಅವರು ತಮ್ಮ ಪ್ರಭುವನ್ನು ಬೇಡಿಕೊಳ್ಳದೆ, ಅದರ ಎದುರಿನಲ್ಲೂ ಧೈರ್ಯದಿಂದ ಸಾರಲು ಸಮರ್ಥರಾಗುವಂತೆ ಅವರು ಕೇಳಿಕೊಂಡರು.
21. ಬಾರ್ನಬನು ಯಾರು, ಮತ್ತು ಅವನಲ್ಲಿ ಯಾವ ಗುಣಗಳಿದ್ದವು?
21 ವಿಶ್ವಾಸಿಗಳು ಸಕಲ ವಸ್ತುಗಳನ್ನೂ ಒಟ್ಟಿಗೆ ಅನುಭವಿಸುತ್ತಿದ್ದರು ಮತ್ತು ಅವರಲ್ಲಿ ಒಬ್ಬನಿಗೂ ಕೊರತೆ ಇರಲಿಲ್ಲ. (4:32-37) ಇವರಲ್ಲಿ ಒಬ್ಬ ದಾನದಾತನು ಸೈಪ್ರಸಿನ ಲೇವ್ಯನಾದ ಯೋಸೇಫನು. ಅಪೊಸ್ತಲರು ಇವನಿಗೆ “ದುಃಖಶಾಮಕ ಪುತ್ರ” ಎಂಬರ್ಥ ಬರುವ ಬಾರ್ನಬನೆಂಬ ಉಪನಾಮವನ್ನು, ಪ್ರಾಯಶಃ, ಅವನ ಸಹಾಯ ಮತ್ತು ಅನುರಾಗ ಪ್ರವೃತ್ತಿಯ ಕಾರಣ ಕೊಟ್ಟಿದ್ದರಬಹುದು. ನಮ್ಮಲ್ಲಿ ಸರ್ವರೂ ಈ ವ್ಯಕ್ತಿಯಂಥಾಗ ಬಯಸುವುದು ನಿಶ್ಚಯ.—ಅಪೊಸ್ತಲರ ಕೃತ್ಯ 11:22-24.
ಸುಳ್ಳುಗಾರರು ಬಯಲಾದದ್ದು!
22, 23. ಅನನೀಯ ಮತ್ತು ಸಫೈರಳ ಪಾಪ ಯಾವುದಾಗಿತ್ತು, ಮತ್ತು ಅವರ ಅನುಭವದಿಂದ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?
22 ಆದರೆ ಅನನೀಯ ಮತ್ತು ಅವನ ಪತ್ನಿ ಸಫೈರ ಯೆಹೋವನನ್ನು ಪ್ರಭುವೆಂದು ಒಪ್ಪಿಕೊಳ್ಳುವುದನ್ನು ನಿಲ್ಲಿಸಿದರು. (5:1-11) ಅವರು ತಮ್ಮ ಜಮೀನನ್ನು ಮಾರಿ ಎಲ್ಲಾ ಹಣವನ್ನು ಅಪೊಸ್ತಲರಿಗೆ ಕೊಟ್ಟಿದ್ದೇವೆಂದು ನಟಿಸಿದರೂ ಅದರಲ್ಲಿ ಸ್ವಲ್ಪವನ್ನು ತಾವೇ ಇಟ್ಟು ಕೊಂಡರು. ದೇವರಾತ್ಮವು ಕೊಟ್ಟ ಜ್ಞಾನದಿಂದ ಪೇತ್ರನು ಅವರ ಕಪಟತನವನ್ನು ತಿಳಿಯಲಾಗಿ ಅದು ಅವರನ್ನು ಮರಣಕ್ಕೆ ನಡಿಸಿತು. ಅಡ್ಡದಾರಿ ಹಿಡಿಯುವಂತೆ ಸೈತಾನನಿಂದ ಶೋಧಿಸಲ್ಪಡುವವರಿಗೆ ಇದೆಂಥ ಎಚ್ಚರಿಕೆ !—ಜ್ಞಾನೋಕ್ತಿ 3:32; 6:16-19.
23 ಈ ಫಟನೆಯ ಬಳಿಕ ದುರುದ್ದೇಶವುಳ್ಳ ಯಾವನಿಗೂ ಶಿಷ್ಯವರ್ಗವನ್ನು ಸೇರುವ ಧೈರ್ಯ ಬರಲಿಲ್ಲ. ಇತರರು ವಿಶ್ವಾಸಿಗಳಾದರು. (5:12-16) ಇದಲ್ಲದೇ, ರೋಗಿಗಳು ಮತ್ತು ಅಶುದ್ಧ ಆತ್ಮಗಳಿಂದ ಪೀಡಿತರು ದೇವರ ಶಕ್ತಿಯಲ್ಲಿ ನಂಬಿಕೆಯಿಟ್ಟಾಗ ‘ಅವರೆಲ್ಲರಿಗೂ ವಾಸಿಯಾಯಿತು.’
ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಿ
24, 25. ಯೆಹೂದಿ ಮುಖಂಡರು ಅಪೊಸ್ತಲರನ್ನೇಕೆ ಹಿಂಸಿಸಿದರು, ಆದರೆ ಈ ನಂಬಿಗಸ್ತರು ಎಲ್ಲಾ ಯೆಹೋವನ ಸಾಕ್ಷಿಗಳಿಗೆ ಯಾವ ಮಟ್ಟವನ್ನಿಟ್ಟರು?
24 ಮುಖ್ಯ ಯಾಜಕರೂ ಸದ್ದುಕಾಯರೂ ಈಗ ಎಲ್ಲಾ ಅಪೊಸ್ತಲರನ್ನು ಸೆರೆಮನೆಗೆ ಹಾಕಿ ಈ ಅದ್ಭುತಕರವಾದ ಬೆಳವಣಿಗೆಯನ್ನು ತಡೆ ಹಿಡಿಯ ಪ್ರಯತ್ನಿಸಿದರು. (5:17-25) ಆದರೆ ಆ ರಾತ್ರಿ ದೇವದೂತನು ಅವರನ್ನು ಬಿಡಿಸಿದನು. ಮತ್ತು ಹೊತ್ತು ಬೆಳಗಾಗುವುದರೊಳಗೆ ಅವರು ದೇವಾಲಯದೊಳಗೆ ಕಲಿಸುತ್ತಿದ್ದರು. ಹಿಂಸೆ ಯೆಹೋವನ ಸೇವಕರನ್ನು ನಿಲ್ಲಿಸಲಾರದು.
25 ಆದರೂ, ಅಪೊಸ್ತಲರನ್ನು ಸನ್ಹೆದ್ರಿನ್ನ ಮುಂದೆ ಕೊಂಡೊಯ್ದ ಸಮಯ ಅವರ ಮೇಲೆ ಒತ್ತಡ ಹಾಕಲ್ಪಟ್ಟಿತು. (5:26-42) ಕಲಿಸುವುದನ್ನು ನಿಲ್ಲಿಸ ಬೇಕೆಂದು ಆಜ್ಞಾಪಿಸಲ್ಪಟ್ಟಾಗ ಅವರು, “ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರ ಬೇಕಲ್ಲಾ” ಎಂದು ಹೇಳಿದರು. ಇದು ಯೇಸುವಿನ ಶಿಷ್ಯರಿಗೆ ಒಂದು ಮಟ್ಟವನ್ನು ಇಟ್ಟಿತು. ಯೆಹೋವನ ಸಾಕ್ಷಿಗಳು ಇಂದು ಇದನ್ನೇ ಅನುಸರಿಸುತ್ತಾರೆ. ನ್ಯಾಯಶಾಸ್ತ್ರಿ ಗಮಾಲಿಯೇಲನಿಂದ ಎಚ್ಚರಿಸಲ್ಪಟ್ಟ ಬಳಿಕ ಆ ನಾಯಕರು ಅಪೊಸ್ತಲರನ್ನು ಹೊಡೆದು, ಸಾರುವುದನ್ನು ನಿಲ್ಲಿಸಲು ಆಜ್ಞಾಪಿಸಿ, ಬಿಡುಗಡೆ ಮಾಡಿದರು.
26. ಅಪೊಸ್ತಲರ ಶುಶ್ರೂಷೆ ಯೆಹೋವನ ಸಾಕ್ಷಿಗಳ ಇಂದಿನ ಶುಶ್ರೂಷೆಗೆ ಹೇಗೆ ಹೋಲುತ್ತದೆ?
26 ಯೇಸುವಿನ ಹೆಸರಿನ ನಿಮಿತ್ತವಾಗಿ ತಾವು ಅಗೌರವಕ್ಕೆ ಪಾತ್ರರಾದುದಕ್ಕಾಗಿ ಅಪೊಸ್ತಲರು ಸಂತೋಷ ಪಟ್ಟರು. “ಪ್ರತಿ ದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಗಳಲ್ಲಿಯೂ ಉಪದೇಶ ಮಾಡುತ್ತಾ . . . ಶುಭವರ್ತಮಾನವನ್ನು ಸಾರುತ್ತಾ ಇದ್ದರು.” ಹೌದು, ಅವರು ಮನೆಮನೆಯ ಶುಶ್ರೂಷಕರಾಗಿದ್ದರು. ದೇವರಿಗೆ ವಿಧೇಯರಾಗಿ “ಯೆಹೋವನು ನಮ್ಮ ಪ್ರಭು !” ಎಂದು ಹೇಳುವ ಕಾರಣ ಆತ್ಮವನ್ನು ಪಡೆದಿರುವ ದೇವರ ಆಧುನಿಕ ದಿನಗಳ ಸಾಕ್ಷಿಗಳೂ ಮನೆಮನೆಯ ಶುಶ್ರೂಷಕರೇ. (w90 6/1)
ನೀವು ಹೇಗೆ ಉತ್ತರಿಸುವಿರಿ?
◻ ಯೇಸುವಿನ ಗತ ಮತ್ತು ಪ್ರಸ್ತುತ ಹಿಂಬಾಲಕರಿಂದ ಯಾವ ಆಜ್ಞೆ ನೆರವೇರಿಸಲ್ಪಡತಕ್ಕದ್ದು?
◻ ಸಾ.ಶ. 33 ರ ಪಂಚಾಶತ್ತಮದಲ್ಲಿ ಏನು ಸಂಭವಿಸಿತು?
◻ ಯೇಸು ಕೊಟ್ಟ ಪ್ರಥಮ ಆತ್ಮಿಕ ಕೀಲಿಕೈಯನ್ನು ಪೇತ್ರನು ಯಾವಾಗ ಮತ್ತು ಹೇಗೆ ಉಪಯೋಗಿಸಿದನು?
◻ ಅನನೀಯ ಮತ್ತು ಸಫೈರಳ ಅನುಭವದಿಂದ ನಾವೇನು ಕಲಿಯಬಲ್ಲೆವು?
◻ ಸಾರಬಾರದೆಂದು ಆಜ್ಞಾಪಿಸಲ್ಪಟ್ಟಾಗ ಅಪೊಸ್ತಲರು ಎಲ್ಲಾ ಯೆಹೋವನ ಸಾಕ್ಷಿಗಳಿಗೆ ಯಾವ ಮಟ್ಟವನ್ನಿಟ್ಟರು?