ನೀತಿವಂತರ ಪುನರುತ್ಥಾನವೊಂದಿರುವುದು
“ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ದೇವರಲ್ಲಿ . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.”—ಅ. ಕೃತ್ಯಗಳು 24:15.
1. ಆದಾಮ ಮತ್ತು ಹವ್ವರ ಪತನದಂದಿನಿಂದ ಮಾನವರೆಲ್ಲರನ್ನು ಯಾವ ಸನ್ನಿವೇಶವು ಎದುರಿಸಿಯದೆ?
“ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕಿಯ್ತಿಂದ ಮಾಡು; ನೀನು ಸೇರಬೇಕಾದ ಪಾತಾಳ (ಷೀಓಲ್, NW) ದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:10) ನಮ್ಮ ಪ್ರಥಮ ಹೆತ್ತವರಾದ ಆದಾಮ ಮತ್ತು ಹವ್ವರ ಪತನದಂದಿನಿಂದ, ಮಾನವಕುಲದ ಪ್ರತಿಯೊಂದು ಸಂತತಿಯು ಎದುರಿಸಿದಂತಹ ಸನ್ನಿವೇಶವೊಂದನ್ನು ವಿವೇಕಿಯಾದ ಅರಸ ಸೊಲೊಮೋನನು ಚೆನ್ನಾಗಿ ಆಯ್ದ ಈ ಕೆಲವೇ ಶಬ್ದಗಳಲ್ಲಿ ವರ್ಣಿಸುತ್ತಾನೆ. ಶ್ರೀಮಂತ ಮತ್ತು ಬಡವ, ಅರಸ ಮತ್ತು ಸಾಮಾನ್ಯ ವ್ಯಕ್ತಿ, ನಂಬಿಗಸ್ತ ಮತ್ತು ಅಪನಂಬಿಗಸ್ತ ಎಂಬ ಅಪವಾದವಿಲ್ಲದೆ, ಮರಣವು ಕಟ್ಟಕಡೆಗೆ ಪ್ರತಿಯೊಬ್ಬನನ್ನು ಕಬಳಿಸಿದೆ. ನಿಜವಾಗಿಯೂ, ಮರಣವು “ಅರಸನೋಪಾದಿ ಆಳಿದೆ.”—ರೋಮಾಪುರ 5:17, NW.
2. ಈ ಅಂತ್ಯದ ಸಮಯದಲ್ಲಿ ಕೆಲವು ನಂಬಿಗಸ್ತರು ಏಕೆ ಆಶಾಭಂಗವನ್ನು ಹೊಂದಿರಬಹುದು?
2 ವೈದ್ಯಕೀಯ ವಿಜ್ಞಾನದ ಈಗೀಗಿನ ಪ್ರಗತಿಗಳ ಹೊರತು, ಮರಣವು ಈ ದಿನದಲ್ಲೂ ಅರಸನೋಪಾದಿ ಆಳುತ್ತದೆ. ಇದು ಆಶ್ಚರ್ಯಕರವಲ್ಲದಿದ್ದರೂ, ಈ ದೀರ್ಘಕಾಲದ ಶತ್ರುವನ್ನು ಕೊನೆಗೆ ಮುಖಾಮುಖಿಯಾಗಿ ಎದುರಿಸಿದಾಗ, ಕೆಲವರು ಕೊಂಚಮಟ್ಟಿಗೆ ಆಶಾಭಂಗಗೊಂಡಿರಬಹುದು. ಯಾಕೆ? ಒಳ್ಳೇದು, ಹಿಂದೆ 1920 ಗಳಲ್ಲಿ, ವಾಚ್ ಟವರ್ ಸೊಸೈಟಿಯು “ಈಗ ಜೀವಿಸುತ್ತಿರುವ ಮಿಲ್ಯಾಂತರ ಜನರು ಎಂದೂ ಸಾಯುವುದಿಲ್ಲ” ಎಂಬ ಸಂದೇಶವನ್ನು ಘೋಷಿಸಿತು. ಈ ಮಿಲ್ಯಾಂತರ ಜನರು ಯಾರಾಗಿರುವರು? ಕುರಿ ಮತ್ತು ಆಡುಗಳ ಕುರಿತ ಯೇಸುವಿನ ಹೇಳಿಕೆಗಳಲ್ಲಿ ನುಡಿಯಲ್ಪಟ್ಟ “ಕುರಿಗಳು” ಅವರು. (ಮತ್ತಾಯ 25:31-46) ಈ ಕುರಿಸದೃಶರು ಅಂತ್ಯಕಾಲದಲ್ಲಿ ತೋರಿಬರುವರೆಂದು ಪ್ರವಾದಿಸಲ್ಪಟ್ಟಿದ್ದಾರೆ, ಮತ್ತು ಅವರ ನಿರೀಕ್ಷೆಯು ಭೂಪ್ರಮೋದವನದಲ್ಲಿ ನಿತ್ಯಜೀವವಾಗಿರುವುದು. ಸಮಯ ಗತಿಸಿದಂತೆ, ಯೆಹೋವನ ಉದ್ದೇಶಗಳಲ್ಲಿ ಈ “ಕುರಿಗಳ” ಸ್ಥಾನದ ಕುರಿತಾದ ಉತ್ತಮ ತಿಳಿವಳಿಕೆಯನ್ನು ದೇವರ ಜನರು ಪಡೆದುಕೊಂಡರು. ಈ ವಿಧೇಯ ಜನರು ಹಠಮಾರಿ “ಆಡು” ಗಳಿಂದ ಪ್ರತ್ಯೇಕಿಸಲ್ಪಡಲಿದ್ದಾರೆಂದೂ, ಮತ್ತು ಎರಡನೆಯವರ ನಾಶನದ ಬಳಿಕ, ಅವರಿಗಾಗಿ ಸಿದ್ಧಮಾಡಲ್ಪಟ್ಟಿರುವ ರಾಜ್ಯದ ಐಹಿಕ ಕ್ಷೇತ್ರವನ್ನು ಬಾಧ್ಯವಾಗಿ ಹೊಂದಲಿದ್ದಾರೆಂದೂ ತಿಳಿಯಲಾಯಿತು.
ಕುರಿಸದೃಶರ ಒಟ್ಟುಗೂಡಿಸುವಿಕೆ
3. 1935 ರಿಂದ ದೇವರ ಜನರು ಯಾವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ?
3 ಇಸವಿ 1935 ರಿಂದ ಆರಂಭಿಸಿ, ‘ನಂಬಿಗಸ್ತನಾದ ಆಳು’ ಅಂತಹ ಕುರಿಸದೃಶರನ್ನು ಕಂಡುಹಿಡಿದು ಅವರನ್ನು ಯೆಹೋವನ ಸಂಸ್ಥೆಯೊಳಗೆ ತರುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿಯದೆ. (ಮತ್ತಾಯ 24:45; ಯೋಹಾನ 10:16) ಯೇಸು ಈಗ ಯೆಹೋವನ ಸ್ವರ್ಗೀಯ ರಾಜ್ಯದಲ್ಲಿ ಆಳುತ್ತಿದ್ದಾನೆಂದೂ, ಮತ್ತು ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಮತ್ತು ನೀತಿಯು ವಾಸವಾಗಿರುವ ಒಂದು ಹೊಸ ಲೋಕದ ಬರಮಾಡುವಿಕೆಗೆ ಸಮಯವು ತೀವ್ರವಾಗಿ ಸಾಗುತ್ತಿದೆಯೆಂದೂ ಈ ವಿಧೇಯ ಕ್ರೈಸ್ತರು ತಿಳಿದುಕೊಂಡಿದ್ದಾರೆ. (2 ಪೇತ್ರ 3:13; ಪ್ರಕಟನೆ 12:10) ಆ ಹೊಸ ಲೋಕದಲ್ಲಿ, “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು” ಎಂಬ ಯೆಶಾಯನ ಹುರಿದುಂಬಿಸುವ ಮಾತುಗಳು ನೆರವೇರಲಿವೆ.—ಯೆಶಾಯ 25:8.
4. ಅರ್ಮಗೆದೋನಿನಲ್ಲಿ ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವುದನ್ನು ಕಾಣಲು ಮನಃಪೂರ್ವಕವಾಗಿ ನಿರೀಕ್ಷಿಸುತ್ತಿದ್ದರೂ, ಬೇರೆ ಕುರಿಗಳಲ್ಲಿ ಅನೇಕರಿಗೆ ಏನು ಸಂಭವಿಸಿದೆ?
4 ಸೈತಾನನ ಲೋಕದ ಅಂತ್ಯವು ಇಷ್ಟೊಂದು ನಿಕಟವಾಗಿರುವುದರಿಂದ, ಕುರಿಸದೃಶ ಕ್ರೈಸ್ತರು ಮಹಾ ಬಾಬೆಲಿನ ಮೇಲೆ ಮತ್ತು ಸೈತಾನನ ಲೋಕದ ಉಳಿದ ಭಾಗದ ಮೇಲೆ ಬರಲಿರುವ ಸಂಕಟದ ಸಮಯದಲ್ಲಿ, ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವ ತನಕ ಜೀವಿಸಲು ಅತ್ಯಾನಂದಿಸುವರು. (ಪ್ರಕಟನೆ 19:1-3, 19-21) ಆದರೆ ಅಧಿಕ ಸಂಖ್ಯಾತರಿಗೆ ಅದು ಆ ರೀತಿಯಲ್ಲಿ ಸಂಭವಿಸಲಿಲ್ಲ. ಎಂದಿಗೂ ಸಾಯದೆ ಇರುವ “ಮಿಲ್ಯಾಂತರ ಜನರ”ಲ್ಲಿ ಇರುವೆವೆಂದು ನಿರೀಕ್ಷೆಯಿಟ್ಟಿದ್ದ ಅನೇಕರು ನಿಶ್ಚಯವಾಗಿಯೂ ಸತ್ತರು. ಕೆಲವರು ಸೆರೆಮನೆಗಳಲ್ಲಿ ಮತ್ತು ಕೂಟಶಿಬಿರಗಳಲ್ಲಿ ಯಾ ಧರ್ಮಾಂಧರ ಹಸ್ತಗಳಲ್ಲಿ ಸತ್ಯಕ್ಕಾಗಿ ಧರ್ಮಬಲಿಗಳಾದರು. ಇತರರು ಅಪಘಾತಗಳಿಂದ ಯಾ ಸ್ವಾಭಾವಿಕ ಕಾರಣಗಳೆಂದು ಕರೆಯಲ್ಪಡುವ—ಅನಾರೋಗ್ಯ ಮತ್ತು ವೃದ್ಧಾಪ್ಯದಿಂದ ಸತ್ತರು. (ಕೀರ್ತನೆ 90:9, 10; ಪ್ರಸಂಗಿ 9:11) ಸ್ಪಷ್ಟವಾಗಿಗಿ, ಇನ್ನೂ ಅನೇಕರು ಅಂತ್ಯವು ಬರುವ ಮೊದಲು ಸಾಯುವರು. ನೀತಿಯು ವಾಸವಾಗಿರುವ ಒಂದು ಹೊಸ ಲೋಕದ ವಾಗ್ದಾನದ ನೆರವೇರಿಕೆಯನ್ನು ಅಂಥವರು ಹೇಗೆ ಕಾಣುವರು?
ಪುನರುತ್ಥಾನದ ನಿರೀಕ್ಷೆ
5, 6. ಅರ್ಮಗೆದೋನಿನ ಮುಂಚೆ ಸಾಯುವ ಭೂನಿರೀಕ್ಷೆಯುಳ್ಳ ಜನರಿಗೆ ಯಾವ ಭವಿಷ್ಯವಿದೆ?
5 ಅಪೊಸ್ತಲ ಪೌಲನು ರೋಮನ್ ದೇಶಾಧಿಪತಿ ಫೇಲಿಕ್ಸನ ಮುಂದೆ ಮಾತಾಡುತ್ತಿದ್ದಾಗ ಆ ಉತ್ತರವನ್ನು ಕೊಟ್ಟನು. ಅ. ಕೃತ್ಯಗಳು 24:15 ರಲ್ಲಿ ದಾಖಲಿಸಲ್ಪಟ್ಟಂತೆ, ಪೌಲನು ಧೈರ್ಯದಿಂದ ಘೋಷಿಸಿದ್ದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ದೇವರಲ್ಲಿ . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” ಪುನರುತ್ಥಾನದ ನಿರೀಕ್ಷೆಯು ಅತ್ಯಂತ ಕಠಿನ ಆಪತ್ತುಗಳ ಎದುರಲ್ಲಿ ನಮಗೆ ಧೈರ್ಯವನ್ನು ಕೊಡುತ್ತದೆ. ಆ ನಿರೀಕ್ಷೆಯ ಕಾರಣ, ಅಸ್ವಸ್ಥರಾಗುವ ಮತ್ತು ತಾವು ಸಾಯಲಿದ್ದೇವೆ ಎಂದು ಭಾವಿಸುವ ನಮ್ಮ ಪ್ರಿಯ ಮಿತ್ರರು ಅತಿಯಾಗಿ ಎದೆಗುಂದುವುದಿಲ್ಲ. ಏನೇ ಸಂಭವಿಸಲಿ, ನಂಬಿಗಸ್ತಿಕೆಯ ಬಹುಮಾನವನ್ನು ತಾವು ಕೊಯ್ಯುವೆವು ಎಂದು ಅವರಿಗೆ ತಿಳಿದದೆ. ಪುನರುತ್ಥಾನದ ನಿರೀಕ್ಷೆಯ ಕಾರಣ, ಹಿಂಸಕರ ಕೈಗಳಿಂದ ಮರಣವನ್ನು ಎದುರಿಸುವ ನಮ್ಮ ಧೀರ ಸಹೋದರರು ಮತ್ತು ಸಹೋದರಿಯರು, ಯಾವುದೆ ತೆರನಾಗಿ ತಮ್ಮ ಹಿಂಸಕರು ವಿಜಯವನ್ನು ಗಳಿಸುವುದು ಅಸಾಧ್ಯವೆಂದು ತಿಳಿದಿದ್ದಾರೆ. (ಮತ್ತಾಯ 10:28) ಸಭೆಯಲ್ಲಿ ಯಾರಾದರೊಬ್ಬರು ಸಾಯುವಾಗ, ಆ ವ್ಯಕ್ತಿಯನ್ನು ಕಳೆದುಕೊಳ್ಳಲು ನಮಗೆ ದುಃಖವಾಗುತ್ತದೆ, ಆದರೆ ಅದೇ ಸಮಯದಲ್ಲಿ, ಅವನು ಯಾ ಅವಳು ಬೇರೆ ಕುರಿಗಳಲ್ಲಿ ಒಬ್ಬರಾಗಿರುವಲ್ಲಿ, ನಮ್ಮ ಜೊತೆವಿಶ್ವಾಸಿಯು ಕೊನೆಯ ತನಕ ನಂಬಿಗಸ್ತನಾಗಿ ಕಂಡುಬಂದಿದ್ದಾನೆಂದೂ ಮತ್ತು ದೇವರ ಹೊಸ ಲೋಕದಲ್ಲಿ ಒಂದು ಭವಿಷ್ಯದ ಆಶ್ವಾಸನೆಯೊಂದಿಗೆ ಈಗ ವಿಶ್ರಮಿಸುತ್ತಿದ್ದಾನೆಂದೂ ನಾವು ಸಂತೋಷಿಸುತ್ತೇವೆ.—1 ಥೆಸಲೊನೀಕ 4:13.
6 ಹೌದು, ಪುನರುತ್ಥಾನದ ನಿರೀಕ್ಷೆಯು ನಮ್ಮ ನಂಬಿಕೆಯ ಒಂದು ಪ್ರಾಮುಖ್ಯವಾದ ವೈಶಿಷ್ಟ್ಯ. ಆದರೂ, ಪುನರುತ್ಥಾನದಲ್ಲಿ ನಮ್ಮ ನಂಬಿಕೆಯು ಅಷ್ಟು ದೃಢವಾಗಿದೆ ಏಕೆ, ಮತ್ತು ಆ ನಿರೀಕ್ಷೆಯಲ್ಲಿ ಯಾರು ಪಾಲಿಗರಾಗುತ್ತಾರೆ?
7. ಪುನರುತ್ಥಾನ ಎಂದರೇನು, ಮತ್ತು ಅದರ ನಿಶ್ಚಯತೆಯನ್ನು ವ್ಯಕ್ತಪಡಿಸುವ ಕೆಲವು ಶಾಸ್ತ್ರ ವಚನಗಳು ಯಾವುವು?
7 “ಪುನರುತ್ಥಾನ”ದ ಗ್ರೀಕ್ ಪದ ಆ್ಯನಸ್ಟ್ಯಾಸಿಸ್, ಇದರ ಅಕ್ಷರಾರ್ಥವು “ಎದ್ದು ನಿಲ್ಲುವುದು” ಎಂದಾಗಿದೆ. ಮೂಲತಃ ಅದು ಸತ್ತವರಿಂದ ಏಳುವುದಕ್ಕೆ ನಿರ್ದೇಶಿಸುತ್ತದೆ. ರಸಕರವಾಗಿ, “ಪುನರುತ್ಥಾನ” ಎಂಬ ನಿಜವಾದ ಶಬ್ದವು ಹೀಬ್ರು ಶಾಸ್ತ್ರಗಳಲ್ಲಿ ಕಂಡುಬರುವುದಿಲ್ಲವಾದರೂ, ಪುನರುತ್ಥಾನದ ನಿರೀಕ್ಷೆಯನ್ನು ಅಲ್ಲಿ ಸ್ಪಷ್ಟವಾಗಿಗಿ ಅಭಿವ್ಯಕ್ತಿಸಲಾಗಿದೆ. ಉದಾಹರಣೆಗಾಗಿ, ನಾವದನ್ನು, ಯೋಬನಿಂದ ಅವನ ಕಷ್ಟಾನುಭದ ನಡುವೆ ನುಡಿಯಲ್ಪಟ್ಟ ಮಾತುಗಳಲ್ಲಿ ಕಾಣುತ್ತೇವೆ: “ನೀನು ನನ್ನನ್ನು ಪಾತಾಳ (ಷೀಓಲ್, NW) ದಲ್ಲಿ ಬಚ್ಚಿಟ್ಟು . . . ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!” (ಯೋಬ 14:13) ತದ್ರೀತಿಯಲ್ಲಿ, ಹೋಶೇಯ 13:14 ರಲ್ಲಿ ನಾವು ಓದುವುದು: “ನಾನು ಅದನ್ನು ಪಾತಾಳ (ಷೀಓಲ್, NW)ದ ಅಧಿಕಾರದಿಂದ ಬಿಡಿಸಲೋ? ಮರಣದಿಂದ ಉದ್ಧರಿಸಲೋ? ಮರಣವೇ, ನಿನ್ನ ಉಪದ್ರವಗಳೆಲ್ಲಿ? ಪಾತಾಳವೇ, ನೀನು ಮಾಡುವ ನಾಶನವೆಲ್ಲಿ?” ಅಪೊಸ್ತಲ ಪೌಲನು 1 ಕೊರಿಂಥ 15:55 ರಲ್ಲಿ ಈ ಮಾತುಗಳನ್ನು ಉಲ್ಲೇಖಿಸಿ, ಮರಣದ ಮೇಲಣ ಪ್ರವಾದಿಸಲ್ಪಟ್ಟ ವಿಜಯವು ಪುನರುತ್ಥಾನದ ಮೂಲಕ ನೆರವೇರುತ್ತದೆಂದು ತೋರಿಸಿಕೊಟ್ಟನು. (ನಿಶ್ಚಯವಾಗಿ, ಆ ವಚನದಲ್ಲಿ ಪೌಲನು ಸ್ವರ್ಗೀಯ ಪುನರುತ್ಥಾನದ ಕುರಿತು ಮಾತಾಡುತ್ತಿದ್ದನು.)
ವಿಶ್ವಾಸಿಗಳು ‘ನೀತಿವಂತರೆಂದು ನಿರ್ಣಯಿಸಲ್ಪಡುವದು’
8, 9. (ಎ) ಅಸಂಪೂರ್ಣ ಮಾನವರು ನೀತಿವಂತರ ಪುನರುತ್ಥಾನದಲ್ಲಿ ಒಂದು ಪಾಲನ್ನು ಹೇಗೆ ಹೊಂದಬಲ್ಲರು? (ಬಿ) ಮರಣದಿಂದ ಅಂತ್ಯಗೊಳಿಸಲ್ಪಡದ ಒಂದು ಜೀವನದಲ್ಲಿ ನಮ್ಮ ನಿರೀಕ್ಷೆಯ ಆಧಾರವು ಯಾವುದು?
8 ಪ್ಯಾರಗ್ರಾಫ್ 5 ರಲ್ಲಿ ಉಲ್ಲೇಖಿತವಾದ, ಫೇಲಿಕ್ಸನಿಗೆ ನುಡಿದ ತನ್ನ ಹೇಳಿಕೆಯಲ್ಲಿ, ಪೌಲನು ನೀತಿವಂತರ ಮತ್ತು ಅನೀತಿವಂತರ ಪುನರುತ್ಥಾನವೊಂದಿರುವುದು ಎಂದು ಹೇಳಿದನು. ಎಬ್ಬಿಸಲ್ಪಡುವ ನೀತಿವಂತರು ಯಾರು? ಒಳ್ಳೇದು, ಸ್ವಭಾವತಃ ಯಾವ ಮನುಷ್ಯನೂ ನೀತಿವಂತನಲ್ಲ. ಜನನದಿಂದಲೇ ನಾವೆಲ್ಲರೂ ಪಾಪಿಗಳಾಗಿದ್ದೇವೆ, ಮತ್ತು ನಮ್ಮ ಜೀವಮಾನಕಾಲದಲ್ಲೆಲ್ಲಾ ನಾವು ಪಾಪಗಳನ್ನು ಗೈಯುತ್ತೇವೆ—ಎರಡು ಕಾರಣಗಳ ಮೇಲೆ ನಮ್ಮನ್ನು ಮರಣಕ್ಕೆ ಅರ್ಹರಾಗಿ ಮಾಡುತ್ತದೆ. (ರೋಮಾಪುರ 5:12; 6:23) ಆದರೂ, ಬೈಬಲಿನಲ್ಲಿ ‘ನೀತಿವಂತರೆಂದು ನಿರ್ಣಯಿಸಲ್ಪಡುವದು’ ಎಂಬ ಪದವನ್ನು ನಾವು ಕಾಣುತ್ತೇವೆ. (ರೋಮಾಪುರ 3:28) ಅಸಂಪೂರ್ಣರಾಗಿದ್ದರೂ, ಯೆಹೋವನಿಂದ ಅವರ ಪಾಪಗಳು ಕ್ಷಮಿಸಲ್ಪಟ್ಟಿರುವ ಮಾನವರಿಗೆ, ಇದು ಸೂಚಿಸುತ್ತದೆ.
9 ಸ್ವರ್ಗೀಯ ನಿರೀಕ್ಷೆಯಿರುವ ಅಭಿಷಿಕ್ತ ಕ್ರೈಸ್ತರ ಸಂಬಂಧದಲ್ಲಿ ಈ ಅಭಿವ್ಯಕ್ತಿಯು ಅತಿ ಪ್ರಧಾನವಾಗಿ ಬಳಸಲ್ಪಡುತ್ತದೆ. ರೋಮಾಪುರ 5:1 ರಲ್ಲಿ ಅಪೊಸ್ತಲ ಪೌಲನು ಹೇಳುವುದು: “ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ [ನೀತಿವಂತರೆಂದು ನಿರ್ಣಯಿಸಲ್ಪಟ್ಟ, NW] ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಉಂಟಾದ ಸಮಾಧಾನದಲ್ಲಿ ಇರೋಣ.” ಎಲ್ಲ ಅಭಿಷಿಕ್ತ ಕ್ರೈಸ್ತರು ನಂಬಿಕೆಯ ಕಾರಣ ನೀತಿವಂತರೆಂದು ಘೋಷಿಸಲ್ಪಡುತ್ತಾರೆ. ಯಾವುದರಲ್ಲಿ ನಂಬಿಕೆ? ಪೌಲನು ರೋಮಾಪುರ ಪುಸ್ತಕದಲ್ಲಿ ಗಣನೀಯವಾಗಿ ವಿವರಿಸುವಂತೆ, ಅದು ಯೇಸು ಕ್ರಿಸ್ತನಲಿಡ್ಲುವ ನಂಬಿಕೆಯಾಗಿದೆ. (ರೋಮಾಪುರ 10:4, 9, 10) ಯೇಸು ಒಬ್ಬ ಪರಿಪೂರ್ಣ ಮನುಷ್ಯನಾಗಿ ಸತ್ತನು ಮತ್ತು ಅನಂತರ ಸತ್ತವರೊಳಗಿಂದ ಪುನರುತ್ಥಾನಗೊಳಿಸಲ್ಪಟ್ಟು, ನಮ್ಮ ಪರವಾಗಿ ತನ್ನ ಮಾನವ ಜೀವದ ಬೆಲೆಯನ್ನು ತೆರಲು ಪರಲೋಕಕ್ಕೇರಿಹೋದನು. (ಇಬ್ರಿಯ 7:26, 27; 9:11, 12) ಆ ಯಜ್ಞವನ್ನು ಯೆಹೋವನು ಸ್ವೀಕರಿಸಿದಾಗ, ಯೇಸು ಕಾರ್ಯತಃ ಮಾನವಕುಲವನ್ನು ಪಾಪದ ಮತ್ತು ಮರಣದ ದಾಸ್ಯದಿಂದ ಕ್ರಯಕ್ಕೆ ಕೊಂಡನು. ಈ ಏರ್ಪಾಡಿನಲ್ಲಿ ನಂಬಿಕೆಯಿಡುವವರು ಅದರಿಂದ ಮಹತ್ತಾಗಿ ಪ್ರಯೋಜನ ಹೊಂದುತ್ತಾರೆ. (1 ಕೊರಿಂಥ 15:45) ಇದರ ಆಧಾರದ ಮೇಲೆ ನಂಬಿಗಸ್ತ ಪುರುಷರು ಮತ್ತು ಸ್ತ್ರೀಯರು ನಿರ್ದಯ ಶತ್ರುವಾದ ಮರಣದಿಂದ ಕೊನೆಗೊಳಿಸಲ್ಪಡದ ಜೀವವೊಂದನ್ನು ಬಾಧ್ಯವಾಗಿ ಹೊಂದುವ ನಿರೀಕ್ಷೆಯುಳ್ಳವರಾಗುತ್ತಾರೆ.—ಯೋಹಾನ 3:16.
10, 11. (ಎ) ನಂಬಿಗಸ್ತ ಅಭಿಷಿಕ್ತರನ್ನು ಯಾವ ಪುನರುತ್ಥಾನವು ಕಾಯುತ್ತದೆ? (ಬಿ) ಕ್ರೈಸ್ತಪೂರ್ವ ಆರಾಧಕರಿಂದ ಯಾವ ರೀತಿಯ ಪುನರುತ್ಥಾನವು ನಿರೀಕ್ಷಿಸಲ್ಪಟ್ಟಿತು?
10 ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಫಲವಾಗಿ, ನಂಬಿಗಸ್ತ ಅಭಿಷಿಕ್ತರು ನೀತಿವಂತರಾಗಿ ನಿರ್ಣಯಿಸಲ್ಪಟ್ಟು, ಯೇಸುವಿನಂತೆ ಅಮರ ಆತ್ಮ ಜೀವಿಗಳಾಗಿ ಎಬ್ಬಿಸಲ್ಪಡುವ ದೃಢ ನಿರೀಕ್ಷೆಯುಳ್ಳವರಾಗಿದ್ದಾರೆ. (ಪ್ರಕಟನೆ 2:10) ಅವರ ಪುನರುತ್ಥಾನವು ಪ್ರಕಟನೆ 20:6 ರಲ್ಲಿ ಹೇಳಲ್ಪಟ್ಟಿದೆ, ಅದನ್ನುವುದು: “ಪ್ರಥಮ ಪುನರುತ್ಥಾನದಲ್ಲಿ ಸೇರಿರುವವನು ಧನ್ಯನೂ ಪರಿಶುದ್ಧನೂ ಆಗಿದ್ದಾನೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ; ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರುಷ ಆಳುವರು.” ಇದು ಸ್ವರ್ಗೀಯ ಪುನರುತ್ಥಾನವಾಗಿದೆ. ಆದರೂ ಇದನ್ನು ಬೈಬಲು “ಪ್ರಥಮ ಪುನರುತ್ಥಾನ” ಎಂದು ಹೇಳುವುದನ್ನು ಗಮನಿಸಿರಿ. ಇನ್ನೂ ಹೆಚ್ಚು ಜನರು ಪುನರುತ್ಥಾನ ಹೊಂದಲಿರುವರೆಂದು ಇದರ ಒಳಾರ್ಥವಾಗಿದೆ.
11 ಯೆಹೋವ ದೇವರಲ್ಲಿ ದೃಢವಾದ ನಂಬಿಕೆಯನ್ನು ತೋರಿಸಿದ್ದ ಕ್ರೈಸ್ತಪೂರ್ವ ದೇವರ ಸೇವಕರ ಒಂದು ದೀರ್ಘವಾದ ಸಾಲಿಗೆ ಇಬ್ರಿಯ 11 ನೆಯ ಅಧ್ಯಾಯದಲ್ಲಿ ಪೌಲನು ಸೂಚಿಸಿದ್ದಾನೆ. ಇವರಿಗೂ ಪುನರುತ್ಥಾನವೊಂದರಲ್ಲಿ ನಂಬಿಕೆಯಿತ್ತು. ಆ ಅಧ್ಯಾಯದ 35 ನೆಯ ವಚನದಲ್ಲಿ, ಇಸ್ರಾಯೇಲಿನ ಇತಿಹಾಸದಲ್ಲಿ ಸಂಭವಿಸಿದ ಅದ್ಭುತಕರ ಪುನರುತ್ಥಾನಗಳ ಕುರಿತು ಪೌಲನು ಮಾತಾಡುತ್ತಾ, ಹೇಳುವುದು: “ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ ಹೊಂದಿದರು. ಕೆಲವರು ತಾವು ಯಾತನೆಯ ಯಂತ್ರಕ್ಕೆ ಕಟ್ಟಲ್ಪಟ್ಟಾಗ ಶ್ರೇಷ್ಠುಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿ ಮುರಿಸಿಕೊಂಡು ಸತ್ತರು.” ಆ ನಂಬಿಗಸ್ತ ಪುರಾತನ ಸಾಕ್ಷಿಗಳು, ಉದಾಹರಣೆಗೆ, ಎಲೀಯ ಮತ್ತು ಎಲೀಷರು ಒಳಗೂಡಿದ್ದವುಗಳಿಗಿಂತಲೂ ಹೆಚ್ಚು ಉತ್ತಮವಾದ ಒಂದು ಪುನರುತ್ಥಾನವನ್ನು ಮುನ್ನೋಡಶಕ್ತರಾದರು. (1 ಅರಸು 17:17-22; 2 ಅರಸುಗಳು 4:32-37; 13:20, 21) ದೇವರ ಸೇವಕರು ತಮ್ಮ ನಂಬಿಕೆಗಾಗಿ ಹಿಂಸಿಸಲ್ಪಡದಂತಹ ಒಂದು ಲೋಕದಲ್ಲಿ, ಸ್ತ್ರೀಯರು ತಮ್ಮ ಪ್ರಿಯರನ್ನು ಮರಣದಲ್ಲಿ ಕಳೆದುಕೊಳ್ಳದಂತಹ ಒಂದು ಲೋಕದಲ್ಲಿ ಪುನರುತ್ಥಾನ ಹೊಂದುವುದು ಅವರ ನಿರೀಕ್ಷೆಯಾಗಿತ್ತು. ಹೌದು, ನಾವು ನಿರೀಕ್ಷಿಸುವ ಅದೇ ಹೊಸ ಲೋಕದಲ್ಲಿ ಸತ್ತವರೊಳಗಿಂದ ಎದ್ದುಬರುವುದನ್ನು ಅವರು ಮುನ್ನೋಡಿದರು. (ಯೆಶಾಯ 65:17-25) ಈ ಹೊಸ ಲೋಕದ ಕುರಿತು ಯೆಹೋವ ದೇವರು ನಮಗೆ ತಿಳಿಸಿರುವಷ್ಟನ್ನು ಅವರಿಗೆ ಪ್ರಕಟಿಸಲಿಲ್ಲ. ಆದರೂ, ಅದು ಬರಲಿದೆ ಎಂದವರಿಗೆ ಗೊತ್ತಿತ್ತು ಮತ್ತು ಅದರಲ್ಲಿ ಜೀವಿಸಲು ಅವರು ಬಯಸಿದರು.
ಐಹಿಕ ಪುನರುತ್ಥಾನ
12. ಕ್ರೈಸ್ತ ಪೂರ್ವ ನಂಬಿಗಸ್ತರು ನೀತಿವಂತರೆಂದು ನಿರ್ಣಯಿಸಲ್ಪಟ್ಟರೋ? ವಿವರಿಸಿರಿ.
12 ಆ ಹೊಸ ಲೋಕದಲ್ಲಿ ಈ ನಂಬಿಗಸ್ತ ಕ್ರೈಸ್ತಪೂರ್ವ ಪುರುಷರ ಮತ್ತು ಸ್ತ್ರೀಯರ ಎಬ್ಬಿಸುವಿಕೆಯನ್ನು, ನೀತಿವಂತರ ಪುನರುತ್ಥಾನದ ಭಾಗವಾಗಿ ನಾವು ಯೋಚಿಸತಕ್ಕದ್ದೋ? ಸಪ್ರಮಾಣವಾಗಿ ಉತ್ತರವು ಹೌದು, ಯಾಕಂದರೆ ಬೈಬಲು ಅವರನ್ನು ನೀತಿವಂತರೆಂದು ಸೂಚಿಸುತ್ತದೆ. ಉದಾಹರಣೆಗೆ, ಶಿಷ್ಯ ಯಾಕೋಬನು ಪುರಾತನ ಕಾಲದಲ್ಲಿ ನೀತಿವಂತರೆಂದು ನಿರ್ಣಯಿಸಲ್ಪಟ್ಟ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯನ್ನು ನಿರ್ದಿಷ್ಟವಾಗಿ ಹೆಸರಿಸುತ್ತಾನೆ. ಪುರುಷನು ಹೀಬ್ರು ವಂಶದ ಮೂಲಪುರುಷನಾದ ಅಬ್ರಹಾಮನು. ಅವನ ಕುರಿತು ನಾವು ಓದುವುದು: “ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು, . . . ಮತ್ತು ದೇವರ ಸ್ನೇಹಿತನೆಂಬ ಹೆಸರು ಅವನಿಗೆ ಉಂಟಾಯಿತು.” ಮತ್ತು ಸ್ತ್ರೀಯು ಯೆಹೋವನಲ್ಲಿ ನಂಬಿಕೆಯಿಟ್ಟ ಇಸ್ರಾಯೇಲ್ಯೇತರಳಾದ ರಹಾಬಳಾಗಿದ್ದಳು. ಅವಳು “ನೀತಿವಂತಳೆಂಬ ನಿರ್ಣಯವನ್ನು ಹೊಂದಿ” ಹೀಬ್ರು ಜನಾಂಗದ ಭಾಗವಾಗಿ ಪರಿಣಮಿಸಿದಳು. (ಯಾಕೋಬ 2:23-25) ಹೀಗೆ, ಯೆಹೋವನಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ಬಲವಾದ ನಂಬಿಕೆಯನ್ನಿಟ್ಟ ಮತ್ತು ಮರಣದ ತನಕ ನಂಬಿಗಸ್ತರಾಗಿ ಉಳಿದ ಪ್ರಾಚೀನಕಾಲದ ಪುರುಷರು ಮತ್ತು ಸ್ತ್ರೀಯರು ಅವರ ನಂಬಿಕೆಯ ಆಧಾರದ ಮೇಲೆ ನೀತಿವಂತರೆಂದು ಯೆಹೋವನಿಂದ ನಿರ್ಣಯಿಸಲ್ಪಟ್ಟರು, ಮತ್ತು ಅವರು ನಿಸ್ಸಂದೇಹವಾಗಿ ‘ನೀತಿವಂತರ ಪುನರುತ್ಥಾನ’ ದಲ್ಲಿ ಪಾಲಿಗರಾಗುವರು.
13, 14. (ಎ) ಐಹಿಕ ನಿರೀಕ್ಷೆಯುಳ್ಳ ಕ್ರೈಸ್ತರು ನೀತಿವಂತರೆಂದು ನಿರ್ಣಯಿಸಲ್ಪಡಬಲ್ಲರೆಂದು ನಮಗೆ ಹೇಗೆ ತಿಳಿಯುತ್ತದೆ? (ಬಿ) ಇದು ಅವರಿಗೆ ಯಾವ ಅರ್ಥದಲ್ಲಿರುತ್ತದೆ?
13 ಆದರೂ, ಭೂನಿರೀಕ್ಷೆಯುಳ್ಳವರಾಗಿ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮತ್ತು ಈ ಅಂತ್ಯದ ಸಮಯದಲ್ಲಿ ನಂಬಿಗಸ್ತರಾಗಿ ಸಾಯುವ ಇಂದಿನ ಕುರಿಸದೃಶ ವ್ಯಕ್ತಿಗಳ ಕುರಿತೇನು? ಅವರು ನೀತಿವಂತರ ಪುನರುತ್ಥಾನದಲ್ಲಿ ಪಾಲಿಗರಾಗುವರೋ? ಹೌದೆಂದು ವ್ಯಕ್ತವಾಗುತ್ತದೆ. ಅಂತಹ ನಂಬಿಗಸ್ತರ ಒಂದು ಮಹಾ ಸಮೂಹವನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡನು. ಅವನು ಅವರನ್ನು ಹೇಗೆ ವರ್ಣಿಸುತ್ತಾನೆಂದು ನೋಡಿರಿ: “ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು. ಅವರು—ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ ಎಂದು ಮಹಾ ಶಬ್ದದಿಂದ ಕೂಗಿದರು.”—ಪ್ರಕಟನೆ 7:9, 10.
14 ಈ ನಮ್ರ ಜನರು ತಮ್ಮ ರಕ್ಷಣೆಯ ಕುರಿತು ದೃಢವಾದ ಮನವರಿಕೆಯುಳ್ಳವರಾಗಿದ್ದಾರೆಂಬುದನ್ನು ಗಮನಿಸಿರಿ, ಮತ್ತು ಇದನ್ನು ಅವರು ಯೆಹೋವನಿಗೂ “ಕುರಿಮರಿ” ಯಾದ ಯೇಸುವಿಗೂ ಅಧ್ಯಾರೋಪಿಸುತ್ತಾರೆ. ಅದಲ್ಲದೆ, ಅವರು ಯೆಹೋವನ ಮುಂದೆ ಮತ್ತು ಕುರಿಮರಿಯ ಮುಂದೆ, ಎಲ್ಲರೂ ಬಿಳೀ ನಿಲುವಂಗಿಗಳನ್ನು ಧರಿಸಿಕೊಂಡು ನಿಂತಿದ್ದಾರೆ. ಬಿಳೀ ನಿಲುವಂಗಿಗಳಲ್ಲಿ ಯಾಕೆ? ಒಂದು ಸ್ವರ್ಗೀಯ ಜೀವಿಯು ಯೋಹಾನನಿಗೆ ಹೇಳುವುದು: “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” (ಪ್ರಕಟನೆ 7:14) ಬೈಬಲಿನಲ್ಲಿ, ಬಿಳಿಯು ಶುದ್ಧತ್ವದ, ನೀತಿಯ ಒಂದು ಸಂಕೇತವಾಗಿದೆ. (ಕೀರ್ತನೆ 51:7; ದಾನಿಯೇಲ 12:10; ಪ್ರಕಟನೆ 19:8) ಮಹಾ ಸಮೂಹವು ದರ್ಶನದಲ್ಲಿ ಬಿಳೀ ಉಡುಪುಗಳಿಂದ ಕಾಣಲ್ಪಡುವ ನಿಜತ್ವದ ಅರ್ಥವು ಯೆಹೋವನು ಅವರನ್ನು ನೀತಿವಂತರಾಗಿ ವೀಕ್ಷಿಸುತ್ತಾನೆ ಎಂದಾಗಿದೆ. ಅದು ಹೇಗೆ ಸಾಧ್ಯ? ಹೇಗಂದರೆ ಅವರು ಕುರಿಮರಿಯ ರಕ್ತದಲ್ಲಿಯೊ ಎನ್ನುವಂತೆ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿರುವ ಕಾರಣದಿಂದಲೆ. ಯೇಸು ಕ್ರಿಸ್ತನು ಸುರಿಸಿದ ರಕ್ತದಲ್ಲಿ ಅವರು ನಂಬಿಕೆಯನ್ನಿಡುತ್ತಾರೆ ಮತ್ತು ಆ ಕಾರಣದಿಂದ ಮಹಾ ಸಂಕಟವನ್ನು ಪಾರಾಗುವ ನೋಟದೊಂದಿಗೆ ದೇವರ ಸ್ನೇಹಿತರೋಪಾದಿ ಅವರನ್ನು ನೀತಿವಂತರೆಂದು ನಿರ್ಣಯಿಸಲಾಗುತ್ತದೆ. ಆದಕಾರಣ, ಈಗ “ಮಹಾ ಸಮೂಹ”ದ ಭಾಗವಾಗಿದ್ದು ಮಹಾ ಸಂಕಟಕ್ಕೆ ಮುಂಚಿತವಾಗಿ ಸಾಯುವ ಯಾವನೇ ನಂಬಿಗಸ್ತ ಸಮರ್ಪಿತ ಕ್ರೈಸ್ತನು ನೀತಿವಂತರ ಐಹಿಕ ಪುನರುತ್ಥಾನದಲ್ಲಿ ಪಾಲುಗಾರನಾಗುವ ದೃಢನಿಶ್ಚಯವುಳ್ಳವನಾಗಿರಬಲ್ಲನು.
15. ನೀತಿವಂತರು ಮತ್ತು ಅನೀತಿವಂತರು ಇವರಿಬ್ಬರೂ ಪುನರುತ್ಥಾನಗೊಳಿಸಲ್ಪಡುವುದರಿಂದ, ನೀತಿವಂತರ ಪುನರುತ್ಥಾನದ ಉಪಯುಕ್ತತೆಯೇನು?
15 ಆ ಪುನರುತ್ಥಾನವನ್ನು ಪ್ರಕಟನೆ 20 ನೆಯ ಅಧ್ಯಾಯ 13 ನೆಯ ವಚನದಲ್ಲಿ ಈ ಮಾತುಗಳಲ್ಲಿ ವರ್ಣಿಸಲಾಗಿದೆ: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.” ಹೀಗೆ, ಯೆಹೋವನ ಮಹಾ ಸಹಸ್ರ ವರುಷದ ತೀರ್ಪಿನ ದಿನದಲ್ಲಿ, ದೇವರ ಜ್ಞಾಪಕದಲ್ಲಿರುವವರೆಲ್ಲರೂ—ನೀತಿವಂತರು ಅನೀತಿವಂತರು ಇಬ್ಬರೂ—ಪುನರುತ್ಥಾನಗೊಳಿಸಲ್ಪಡುವರು. (ಅ. ಕೃತ್ಯಗಳು 17:31) ನೀತಿವಂತರಿಗಾದರೊ ಅದು ಎಷ್ಟು ಹೆಚ್ಚು ಉತ್ತಮವಾಗಿರುವುದು! ಈಗಾಗಲೆ ಅವರು ನಂಬಿಕೆಯ ಜೀವಿತಗಳನ್ನು ಜೀವಿಸಿದ್ದಾರೆ. ಯೆಹೋವನೊಂದಿಗೆ ಅವರಿಗೆ ಈ ಮೊದಲೆ ಒಂದು ನಿಕಟ ಸಂಬಂಧವಿದ್ದು, ಆತನ ಉದ್ದೇಶಗಳ ಪೂರೈಕೆಯಲ್ಲಿ ಭರವಸೆಯಿದೆ. ಕ್ರೈಸ್ತ ಶಕಕ್ಕಿಂತ ಮುಂಚೆ ಇದ್ದ ನೀತಿವಂತರಾದ ಸಾಕ್ಷಿಗಳು ಮರಣದಿಂದ ಎಚ್ಚೆತ್ತವರಾಗಿ, ಸಂತಾನದ ಕುರಿತಾದ ಯೆಹೋವನ ವಾಗ್ದಾನಗಳು ನೆರವೇರಿದ ವಿಧವನ್ನು ಕಲಿಯಲು ಆತುರಪಡುವರು. (1 ಪೇತ್ರ 1:10-12) ನಮ್ಮ ದಿನಗಳಲ್ಲಿ ನೀತಿವಂತರೆಂದು ಯೆಹೋವನಿಂದ ವೀಕ್ಷಿಸಲ್ಪಡುವ ಬೇರೆ ಕುರಿಗಳವರು, ಈ ವಿಷಯಗಳ ವ್ಯವಸ್ಥೆಯಲ್ಲಿ ತಾವು ಸುವಾರ್ತೆಯನ್ನು ಸಾರಿದಾಗ ಮಾತಾಡಿದ ಭೂಪ್ರಮೋದವನವನ್ನು ಆತುರದಿಂದ ನೋಡಲು ಸಮಾಧಿಯಿಂದ ಹೊರಬರುವರು. ಅದು ಎಂತಹ ಸಂತೋಷಭರಿತ ಸಮಯವಾಗಿರುವುದು!
16. ನಮ್ಮ ಕಾಲದಲ್ಲಿ ಸಾಯುವವರ ತೀರ್ಪಿನ ದಿನದ ಪುನರುತ್ಥಾನದ ಕುರಿತು ನಾವೇನು ಹೇಳಬಲ್ಲೆವು?
16 ಆ ಸಹಸ್ರ ವರ್ಷದ ತೀರ್ಪಿನ ದಿನದಲ್ಲಿ, ಸೈತಾನನ ವಿಷಯಗಳ ವ್ಯವಸ್ಥೆಯ ಈ ಕೊನೆಯ ವರುಷಗಳಲ್ಲಿ ನಂಬಿಗಸ್ತರಾಗಿ ಸತ್ತವರು ನಿಕರವಾಗಿ ಯಾವಾಗ ಪುನರುತ್ಥಾನಗೊಳಿಸಲ್ಪಡುವರು? ಬೈಬಲು ಅದನ್ನು ಹೇಳುವುದಿಲ್ಲ. ಆದರೂ, ನೀತಿವಂತರೆಂದು ನಿರ್ಣಯಿಸಲ್ಪಟ್ಟವರಾಗಿ ನಮ್ಮ ಸಮಯದಲ್ಲಿ ಸಾಯುವವರು ಒಂದು ಶೀಘ್ರ ಪುನರುತ್ಥಾನವನ್ನು ಹೊಂದಿ, ಹೀಗೆ, ಮೃತರೊಳಗಿಂದ ಹಿಂದಿರುಗುವ ಪ್ರಾರಂಭದ ಸಂತತಿಗಳನ್ನು ಸ್ವಾಗತಿಸುವ ಕೆಲಸದಲ್ಲಿ ಅರ್ಮಗೆದೋನನ್ನು ಪಾರಾಗುವ ಮಹಾ ಸಮೂಹದೊಂದಿಗೆ ಪಾಲಿಗರಾಗಬಲ್ಲರೆಂದು ನೆನಸುವುದು ನ್ಯಾಯಸಮ್ಮತವಾಗಿರದೆ? ಹೌದು, ಖಂಡಿತವಾಗಿಯೂ!
ಸಾಂತ್ವನವನ್ನು ಕೊಡುವ ನಿರೀಕ್ಷೆ
17, 18. (ಎ) ಪುನರುತ್ಥಾನದ ನಿರೀಕ್ಷೆಯು ಯಾವ ಸಾಂತ್ವನವನ್ನು ಒದಗಿಸುತ್ತದೆ? (ಬಿ) ಯೆಹೋವನ ಕುರಿತು ನಾವೇನನ್ನು ಘೋಷಿಸಲು ಪ್ರೇರೇಪಿಸಲ್ಪಡುತ್ತೇವೆ?
17 ಪುನರುತ್ಥಾನದ ನಿರೀಕ್ಷೆಯು ಇಂದು ಎಲ್ಲ ಕ್ರೈಸ್ತರಿಗೆ ಬಲವನ್ನು ಮತ್ತು ಸಾಂತ್ವನವನ್ನು ನೀಡುತ್ತದೆ. ನಾವು ನಂಬಿಗಸ್ತರಾಗಿ ಉಳಿಯುವಲ್ಲಿ, ಯಾವ ಮುಂಗಾಣದ ಸಂಭವವಾಗಲಿ ಮತ್ತು ಯಾವ ಶತ್ರುವಾಗಲಿ ನಮ್ಮ ಬಹುಮಾನದಿಂದ ನಮ್ಮನ್ನು ವಂಚಿಸಲಾರವು! ಉದಾಹರಣೆಗೆ, 1992 ಯಿಯರ್ ಬುಕ್ ಆಫ್ ಜೆಹೊವಾಸ್ ವಿಟ್ನೆಸಸ್, ಪುಟ 177 ರಲ್ಲಿ, ತಮ್ಮ ನಂಬಿಕೆಯ ವಿಷಯದಲ್ಲಿ ಸಂಧಾನಮಾಡಿಕೊಳ್ಳುವ ಬದಲಾಗಿ ಜೀವವನ್ನೆ ತೊರೆದ ಇತಿಯೋಪ್ಯದ ಧೀರ ಕ್ರೈಸ್ತರ ಚಿತ್ರಗಳಿವೆ. ಶಿರೋನಾಮವು ಓದುವುದು: “ಪುನರುತ್ಥಾನದಲ್ಲಿ ನಾವು ನೋಡಲು ನಿರೀಕ್ಷಿಸುವ ಮುಖಗಳು.” ಈ ಜನರನ್ನು ಮತ್ತು ಮರಣದ ಎದುರಲ್ಲಿ ತದ್ರೀತಿಯ ನಂಬಿಗಸ್ತಿಕೆಯನ್ನು ತೋರಿಸಿದ ಅಸಂಖ್ಯಾತ ಇತರರನ್ನು ಪರಿಚಯಮಾಡಿಕೊಳ್ಳುವುದು ಅದೆಂಥ ಸುಯೋಗವಾಗಿರುವುದು!
18 ವಯಸ್ಸು ಯಾ ನಿರ್ಬಲತೆಯ ಕಾರಣ ಮಹಾ ಸಂಕಟವನ್ನು ಜೀವಂತವಾಗಿ ಪಾರಾಗಲಾರದ ನಮ್ಮ ಸ್ವಂತ ಪ್ರಿಯಜನರ ಮತ್ತು ಸ್ನೇಹಿತರ ಕುರಿತಾಗಿ ಏನು? ಪುನರುತ್ಥಾನದ ನಿರೀಕ್ಷೆಗೆ ಅನುಗುಣವಾಗಿ, ನಂಬಿಗಸ್ತರಾಗಿ ಉಳಿದಲ್ಲಿ ಅವರಿಗೆ ಒಂದು ಆಶ್ಚರ್ಯಕರವಾದ ಭವಿಷ್ಯವಿದೆ. ಮತ್ತು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೇಲೆ ನಾವೂ ಧೈರ್ಯದಿಂದ ನಂಬಿಕೆಯನ್ನು ಪ್ರದರ್ಶಿಸುವಲ್ಲಿ, ನಮಗೂ ಆಶ್ಚರ್ಯಕರ ಭವಿಷ್ಯವಿರುವುದು. ಯಾಕೆ? ಯಾಕಂದರೆ ಪೌಲನಂತೆ ನಾವು, “ನೀತಿವಂತರ ಅನೀತಿವಂತರ ಪುನರುತ್ಥಾನ” ದಲ್ಲಿ (NW) ನಿರೀಕ್ಷೆಯನ್ನಿಡುತ್ತೇವೆ. ನಮ್ಮೆಲ್ಲಾ ಹೃದಯದೊಂದಿಗೆ, ಈ ನಿರೀಕ್ಷೆಗಾಗಿ ಯೆಹೋವನಿಗೆ ನಾವು ಉಪಕಾರವನ್ನು ಸಲ್ಲಿಸುತ್ತೇವೆ. ನಿಶ್ಚಯವಾಗಿ, ಇದು ನಮ್ಮನ್ನು ಕೀರ್ತನೆಗಾರನ ಮಾತುಗಳನ್ನು ಪ್ರತಿಧ್ವನಿಸುವಂತೆ ಪ್ರಚೋದಿಸುತ್ತದೆ: “ಜನಾಂಗಗಳಲ್ಲಿ ಆತನ [ದೇವರ] ಘನತೆಯನ್ನೂ ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ. ಯೆಹೋವನು ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದಾನೆ.”—ಕೀರ್ತನೆ 96:3, 4.
ನೀವು ವಿವರಿಸಬಲ್ಲಿರೊ?
◻ ಐಹಿಕ ಪುನರುತ್ಥಾನದಲ್ಲಿ ನಮ್ಮ ನಿರೀಕ್ಷೆಯನ್ನು ದೃಢಪಡಿಸಲು ಯಾವ ಶಾಸ್ತ್ರವಚನಗಳು ಸಹಾಯಮಾಡುತ್ತವೆ?
◻ ಈಗ ಕ್ರೈಸ್ತರು ಯಾವ ಆಧಾರದ ಮೇಲೆ ನೀತಿವಂತರಾಗಿ ನಿರ್ಣಯಿಸಲ್ಪಡುತ್ತಾರೆ?
◻ ಪುನರುತ್ಥಾನದ ನಿರೀಕ್ಷೆಯು ನಮಗೆ ಹೇಗೆ ಧೈರ್ಯವನ್ನೂ ದೃಢನಿಶ್ಚಯವನ್ನೂ ಕೊಡುತ್ತದೆ?
[ಪುಟ 9 ರಲ್ಲಿರುವ ಚಿತ್ರ]
ಪೌಲನಂತೆ, ಅಭಿಷಿಕ್ತ ಕ್ರೈಸ್ತರು ಸ್ವರ್ಗೀಯ ಪುನರುತ್ಥಾನದಲ್ಲಿ ನಿರೀಕ್ಷೆಯನ್ನಿಡುತ್ತಾರೆ