‘ಗಾಳಿಯನ್ನು ಗುದ್ದಬೇಡಿ’
1. ಒಂದನೇ ಕೊರಿಂಥ 9:26 ನಮ್ಮ ಸಾರುವ ಕೆಲಸಕ್ಕೆ ಹೇಗೆ ಅನ್ವಯವಾಗುತ್ತದೆ?
1 “ನಾನು ಗೊತ್ತುಗುರಿಯಿಲ್ಲದೆ ಓಡುತ್ತಿಲ್ಲ; ನಾನು ಗಾಳಿಯನ್ನು ಗುದ್ದುವವನಂತೆ ಗುದ್ದುತ್ತಿಲ್ಲ” ಎಂದು ಬರೆದನು ಅಪೊಸ್ತಲ ಪೌಲ. (1 ಕೊರಿಂ. 9:26) ಇಲ್ಲಿ ಪೌಲ ತಾನು ಆಧ್ಯಾತ್ಮಿಕ ಗುರಿಗಳ ಮೇಲಿಟ್ಟಿದ್ದ ಅಚಲ ಗಮನದ ಬಗ್ಗೆ ಮಾತಾಡುತ್ತಿದ್ದನು. ಆದರೆ ಈ ತತ್ವ ನಮ್ಮ ಸಾರುವ ಕೆಲಸಕ್ಕೂ ಅನ್ವಯ. ನಾವು ಅದಕ್ಕಾಗಿ ವ್ಯಯಿಸುವ ಸಮಯ, ಶಕ್ತಿ ‘ಗಾಳಿಯನ್ನು ಗುದ್ದುವಂತೆ’ ಇರಬಾರದು. ಬದಲಿಗೆ ಗರಿಷ್ಠ ಮಟ್ಟದ ಫಲಿತಾಂಶ ತರುವಂಥದ್ದಾಗಿರಬೇಕು. ಹೇಗೆ?
2. ಯಾವಾಗ, ಎಲ್ಲಿ ಸಾರಬೇಕೆಂಬ ವಿಷಯದಲ್ಲಿ ನಾವು ಪೌಲ ಮತ್ತು ಇತರ ಸುವಾರ್ತಾ ಸೇವಕರನ್ನು ಹೇಗೆ ಅನುಕರಿಸಬಹುದು?
2 ಜನರಿದ್ದಲ್ಲಿಗೆ ಹೋಗಿ: ಒಂದನೇ ಶತಮಾನದಲ್ಲಿ ಪೌಲ ಮತ್ತು ಇತರ ಸುವಾರ್ತಾ ಸೇವಕರು ಜನರಿದ್ದಲ್ಲಿಗೆ ಹೋಗಿ ಸಾರಿದರು. (ಅ. ಕಾ. 5:42; 16:13; 17:17) ಅದೇ ರೀತಿ ನಿಮ್ಮ ಸೇವಾ ಕ್ಷೇತ್ರದಲ್ಲಿ ಹೆಚ್ಚಾಗಿ ಜನರು ಸಂಜೆ ಮನೆಯಲ್ಲಿ ಇದ್ದರೆ ಆ ಸಮಯದಲ್ಲಿ ಮನೆಮನೆ ಸೇವೆಮಾಡಿ. ಎಲ್ಲರೂ ಬೆಳಗ್ಗೆ ಕೆಲಸಕ್ಕೆ ಹೋಗುವ ಇಲ್ಲವೆ ಸಂಜೆ ಮನೆಗೆ ಹಿಂದಿರುಗುವ ಸಮಯದಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಜನರು ಜಾಸ್ತಿ ಇರುತ್ತಾರಾ? ಖರೀದಿಗೆಂದು ನಿಮ್ಮ ಸೇವಾ ಕ್ಷೇತ್ರದ ಜನ ಯಾವ ಸಮಯದಲ್ಲಿ ಹೆಚ್ಚಾಗಿ ಅಂಗಡಿಗಳಿಗೆ ಬರುತ್ತಾರೆ? ಇಂಥ ಸಮಯಗಳಲ್ಲಿ ಬೀದಿ ಸಾಕ್ಷಿಕಾರ್ಯ ಮಾಡಿದರೆ ಹೆಚ್ಚು ಫಲಿತಾಂಶ ಸಿಗುತ್ತದೆ.
3. ಸೇವಾ ಕ್ಷೇತ್ರ ಆವರಿಸುವಾಗ ಗಾಳಿ ಗುದ್ದಿದಂತೆ ಆಗದಿರಲು ಏನು ಮಾಡಬೇಕು?
3 ಸೇವಾ ಕ್ಷೇತ್ರವನ್ನು ಆವರಿಸುವಾಗ: ಸೇವಾ ಕ್ಷೇತ್ರವನ್ನು ಆವರಿಸುವಾಗಲೂ ಗಾಳಿಯನ್ನು ಗುದ್ದಿದಂತೆ ಆಗಬಾರದು. ಉದಾಹರಣೆಗೆ, ಒಂದೇ ಸ್ಥಳಕ್ಕೆ ದೊಡ್ಡ ಗುಂಪು ಹೋದರೆ ಎಲ್ಲರಿಗೆ ಸಾಕಷ್ಟು ಸೇವಾ ಕ್ಷೇತ್ರವನ್ನು ಹಂಚಿಕೊಡುವಷ್ಟರಲ್ಲಿ ತುಂಬ ಸಮಯ, ಶಕ್ತಿ ಹೋಗಿಬಿಡುತ್ತದೆ. ಹಾಗಾಗಿ ಚಿಕ್ಕ ಚಿಕ್ಕ ಗುಂಪು ಮಾಡಿ. ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆಮಾಡುವಾಗ ಗುಂಪು ಚಿಕ್ಕದಿದ್ದರೆ ಸೇವಾ ಕ್ಷೇತ್ರವನ್ನು ಬೇಗನೆ ಆವರಿಸಲು ಮತ್ತು ಹೆಚ್ಚು ಜನರ ಹತ್ತಿರ ಮಾತಾಡಲು ಅವಕಾಶ ಸಿಗುತ್ತದೆ. ಅಲ್ಲದೆ ಮನೆ ಹತ್ತಿರವೇ ವೈಯಕ್ತಿಕ ಸೇವಾ ಕ್ಷೇತ್ರ ಪಡೆದುಕೊಂಡರೆ ಪ್ರಯಾಣದ ಸಮಯ ಉಳಿಸಬಹುದು.
4. ‘ಮನುಷ್ಯರನ್ನು ಹಿಡಿಯುವ’ ಕೆಲಸದಲ್ಲಿ ಹೇಗೆ ಯಶಸ್ಸು ಪಡೆಯಬಲ್ಲೆವು?
4 ಸುವಾರ್ತಾ ಸೇವಕರನ್ನು ಯೇಸು ‘ಮನುಷ್ಯರನ್ನು ಹಿಡಿಯುವ ಬೆಸ್ತರಿಗೆ’ ಹೋಲಿಸಿದನು. (ಮಾರ್ಕ 1:17) ಬೆಸ್ತರು ಸುಮ್ಮನೆ ಬಲೆ ಬೀಸುವುದಿಲ್ಲ. ಮೀನು ಹಿಡಿಯುವ ಉದ್ದೇಶದಿಂದಲೇ ಬೀಸುತ್ತಾರೆ. ತಮ್ಮ ಶ್ರಮ ವ್ಯರ್ಥವಾಗದಿರಲು ಎಲ್ಲಿ, ಯಾವಾಗ ಮೀನು ಸಿಗುತ್ತದೆಂದು ನೋಡಿ ತಡಮಾಡದೆ ಕೆಲಸಕ್ಕಿಳಿಯುತ್ತಾರೆ. ಹಾಗೇ ಸಾರುವ ಕೆಲಸದಲ್ಲಿ ಶ್ರಮಶೀಲರಾಗಿದ್ದು ನಮ್ಮ ಕೆಲಸ ವ್ಯರ್ಥವಾಗದಂತೆ ನೋಡಿಕೊಳ್ಳೋಣ.—ಇಬ್ರಿ. 6:11.