ಯೆಹೋವನ ಸಮೀಪಕ್ಕೆ ಬರುವಂತೆ ಜನರಿಗೆ ಸಹಾಯಮಾಡುವುದು
“ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” —ಯೋಹಾನ 14:6.
1. ಪುನರುತ್ಥಾನಗೊಂಡ ಬಳಿಕ ಯೇಸು ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು, ಮತ್ತು ಯೆಹೋವನ ಸಾಕ್ಷಿಗಳು ಆ ಆಜ್ಞೆಗೆ ವಿಧೇಯರಾಗಿರುವುದರಿಂದ ಯಾವ ಫಲಿತಾಂಶವು ದೊರಕಿದೆ?
“ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ.” ಈ ಆಜ್ಞೆಯನ್ನು ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕೊಟ್ಟನು. (ಮತ್ತಾಯ 28:19) ಯೆಹೋವ ಸಾಕ್ಷಿಗಳು ಕಳೆದ ಹತ್ತು ವರ್ಷಗಳಲ್ಲಿ, ಮೂವತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ದೇವರನ್ನು ತಿಳಿದುಕೊಂಡು, ಸಕಾಲದಲ್ಲಿ ಆತನ ಚಿತ್ತವನ್ನು ಮಾಡಲಿಕ್ಕಾಗಿ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡಿದ್ದಾರೆ. ಅಂಥವರು, ದೇವರ ಸಮೀಪಕ್ಕೆ ಬರುವಂತೆ ಸಹಾಯಮಾಡಲು ನಾವೆಷ್ಟು ಸಂತೋಷಪಡುತ್ತೇವೆ!—ಯಾಕೋಬ 4:8.
2. ಹಲವಾರು ಹೊಸಬರು ದೀಕ್ಷಾಸ್ನಾನ ಪಡೆಯುತ್ತಿದ್ದಾರಾದರೂ, ಅದೇ ಸಮಯದಲ್ಲಿ ಏನು ಸಂಭವಿಸಿದೆ?
2 ಆದರೆ, ಕೆಲವೊಂದು ದೇಶಗಳಲ್ಲಿ ಅನೇಕ ಹೊಸ ಶಿಷ್ಯರು ದೀಕ್ಷಾಸ್ನಾನವನ್ನು ಪಡೆದುಕೊಂಡಿರುವುದಾದರೂ ಅಲ್ಲಿ ರಾಜ್ಯ ಪ್ರಚಾರಕರ ಸಂಖ್ಯೆಯಲ್ಲಿ ಅನುಗುಣವಾದ ವೃದ್ಧಿಯಾಗಿಲ್ಲ. ಖಂಡಿತವಾಗಿಯೂ, ಮರಣಹೊಂದಿದವರನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ, ಏಕೆಂದರೆ ವಾರ್ಷಿಕವಾಗಿ ಮರಣಹೊಂದಿದವರ ಪ್ರಮಾಣವು ಸುಮಾರು 1 ಪ್ರತಿಶತವಾಗಿದೆ. ಆದರೂ, ಕಳೆದ ಕೆಲವು ವರ್ಷಗಳಲ್ಲಿ, ಒಂದಲ್ಲ ಒಂದು ಕಾರಣಕ್ಕಾಗಿ ಅನೇಕರು ನಂಬಿಕೆಯಿಂದ ಬಿದ್ದುಹೋಗಿದ್ದಾರೆ. ಏಕೆ? ಈ ಲೇಖನ ಮತ್ತು ಮುಂದಿನ ಲೇಖನವು, ಜನರು ಯೆಹೋವನ ಸಮೀಪಕ್ಕೆ ಬರುವಂತೆ ಸೆಳೆಯಲ್ಪಡುವ ವಿಧ ಮತ್ತು ಕೆಲವರು ಬಿದ್ದುಹೋಗುವುದಕ್ಕಾಗಿರುವ ಸಂಭಾವ್ಯ ಕಾರಣಗಳನ್ನು ಪರೀಕ್ಷಿಸುವುದು.
ನಮ್ಮ ಸಾರುವಿಕೆಯ ಉದ್ದೇಶ
3. (ಬಿ) ಯೇಸುವಿನ ಶಿಷ್ಯರಿಗೆ ವಹಿಸಲ್ಪಟ್ಟ ಕೆಲಸವು ಪ್ರಕಟನೆ 14:6ರಲ್ಲಿ ತಿಳಿಸಲ್ಪಟ್ಟಿರುವ ದೇವದೂತನ ಕೆಲಸದೊಂದಿಗೆ ಹೇಗೆ ಒಮ್ಮತದಿಂದಿದೆ? (ಬಿ) ರಾಜ್ಯ ಸಂದೇಶದಲ್ಲಿ ಜನರ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ಯಾವುದು ಒಂದು ಪರಿಣಾಮಕಾರಿ ವಿಧವಾಗಿ ಪರಿಣಮಿಸಿದೆ, ಆದರೆ ಇದರಲ್ಲಿ ಯಾವ ಸಮಸ್ಯೆಯಿದೆ?
3 ಈ ‘ಅಂತ್ಯಕಾಲದಲ್ಲಿ’ ಯೇಸುವಿನ ಶಿಷ್ಯರಿಗೆ “ರಾಜ್ಯದ ಈ ಸುವಾರ್ತೆಯ” ಕುರಿತಾದ “ಸತ್ಯ ಜ್ಞಾನ”ವನ್ನು ಹಬ್ಬಿಸುವ ನೇಮಕವಿದೆ. (ದಾನಿಯೇಲ 12:4, NW; ಮತ್ತಾಯ 24:14) ಅವರ ಕೆಲಸವು, “ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನ” ಇರುವ ದೇವದೂತನ ಕೆಲಸದೊಂದಿಗೆ ಒಮ್ಮತದಿಂದಿದೆ. (ಪ್ರಕಟನೆ 14:6) ದಿನನಿತ್ಯದ ಕಾರ್ಯಕಲಾಪಗಳಲ್ಲೇ ಮುಳುಗಿಹೋಗಿರುವ ಈ ಲೋಕದಲ್ಲಿ, ಪರಿಣಾಮಕಾರಿಯಾದ ರೀತಿಯಲ್ಲಿ ದೇವರ ರಾಜ್ಯದ ಕುರಿತಾಗಿ ಜನರಲ್ಲಿ ಆಸಕ್ತಿಯನ್ನು ಹುಟ್ಟಿಸಿ, ಅವರನ್ನು ಯೆಹೋವನ ಸಮೀಪಕ್ಕೆ ಬರುವಂತೆ ಸೆಳೆಯಲಿಕ್ಕಾಗಿ, ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆಯ ಕುರಿತಾಗಿ ಅವರಿಗೆ ಹೇಳಬೇಕಾಗುತ್ತದೆ. ಈ ವಿಷಯವನ್ನು ಅರ್ಥಮಾಡಿಕೊಳ್ಳಬಹುದಾದರೂ, ಕೇವಲ ಪ್ರಮೋದವನದೊಳಗೆ ಪ್ರವೇಶಿಸುವ ಉದ್ದೇಶದಿಂದ ದೇವಜನರೊಂದಿಗೆ ಸಹವಾಸಮಾಡುತ್ತಿರುವವರು, ಜೀವಕ್ಕೆ ನಡೆಸುವ ಇಕ್ಕಟ್ಟಾದ ದಾರಿಯಲ್ಲಿ ಸ್ಥಿರಚಿತ್ತರಾಗಿರುವುದಿಲ್ಲ.—ಮತ್ತಾಯ 7:13, 14.
4. ಯೇಸು ಮತ್ತು ಆಕಾಶಮಧ್ಯದಲ್ಲಿ ಹಾರುತ್ತಿರುವ ದೇವದೂತನಿಗನುಸಾರ ನಮ್ಮ ಸಾರುವ ಕೆಲಸದ ಉದ್ದೇಶವೇನಾಗಿದೆ?
4 ಯೇಸು ತಿಳಿಸಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.” (ಯೋಹಾನ 17:3) ಆಕಾಶ ಮಧ್ಯದಲ್ಲಿ ಹಾರುತ್ತಿರುವ ದೇವದೂತನು “ನಿತ್ಯವಾದ ಶುಭವರ್ತಮಾನ”ವನ್ನು ಘೋಷಿಸುತ್ತಾ, ಭೂನಿವಾಸಿಗಳಿಗೆ ಹೀಗೆ ಹೇಳುತ್ತಾನೆ: “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರ ಮಾಡಿರಿ.” (ಪ್ರಕಟನೆ 14:7) ಆದುದರಿಂದ ಸುವಾರ್ತೆಯನ್ನು ಸಾರುವ ನಮ್ಮ ಮುಖ್ಯ ಉದ್ದೇಶವು, ಜನರನ್ನು ಯೇಸು ಕ್ರಿಸ್ತನ ಮೂಲಕ ಯೆಹೋವನ ಸಮೀಪಕ್ಕೆ ಬರುವಂತೆ ಸಹಾಯಮಾಡುವುದೇ ಆಗಿದೆ.
ಯೆಹೋವನ ಕೆಲಸದಲ್ಲಿ ನಮ್ಮ ಪಾತ್ರ
5. ಪೌಲ ಮತ್ತು ಯೇಸುವಿನ ಯಾವ ಹೇಳಿಕೆಗಳು ನಾವು ನಮ್ಮ ಸ್ವಂತ ಕೆಲಸವನ್ನಲ್ಲ ಬದಲಾಗಿ ಯೆಹೋವನ ಕೆಲಸವನ್ನು ಮಾಡುತ್ತಿದ್ದೇವೆಂದು ತೋರಿಸುತ್ತವೆ?
5 ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಬರೆಯುತ್ತಿದ್ದಾಗ ಅಪೊಸ್ತಲ ಪೌಲನು, “ಸಮಾಧಾನವಿಷಯವಾದ ಸೇವೆ”ಯ ಕುರಿತಾಗಿ ಮತ್ತು ದೇವರು, ಜನರನ್ನು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ತನ್ನೊಂದಿಗೆ ಸಮಾಧಾನಮಾಡಿಸಿಕೊಳ್ಳುತ್ತಾನೆಂದು ಹೇಳುತ್ತಾನೆ. “ದೇವರೇ ನಮ್ಮ ಮೂಲಕ ಬುದ್ಧಿ ಹೇಳುವ ಹಾಗಾಯಿತು” ಮತ್ತು “ದೇವರೊಂದಿಗೆ ಸಮಾಧಾನವಾಗಿರೆಂದು ಕ್ರಿಸ್ತನ ಹೆಸರಿನಲ್ಲಿ . . . ಬೇಡಿಕೊಳ್ಳುತ್ತೇವೆ” ಎಂದು ಪೌಲನು ಹೇಳುತ್ತಾನೆ. ಈ ವಿಚಾರವು ಎಷ್ಟು ಮನಮುಟ್ಟುವಂತಹದ್ದಾಗಿದೆ! ‘ಕ್ರಿಸ್ತನ’ ಅಭಿಷಿಕ್ತ ‘ರಾಯಭಾರಿ’ಗಳಾಗಿರಲಿ ಅಥವಾ ಭೂನಿರೀಕ್ಷೆಯುಳ್ಳ ಅವರ ಸಹಾಯಕ ರಾಯಭಾರಿಗಳಾಗಿರಲಿ, ನಾವು ಮಾಡುತ್ತಿರುವ ಈ ಕೆಲಸವು ನಮ್ಮದ್ದಲ್ಲ, ಯೆಹೋವನದ್ದಾಗಿದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು. (2 ಕೊರಿಂಥ 5:18-20) ಕ್ರಿಸ್ತನ ಬಳಿ ಬರುವವರನ್ನು ಸೆಳೆಯುವವನು ಮತ್ತು ಕಲಿಸುವವನು ನಿಜವಾಗಿ ದೇವರಾಗಿದ್ದಾನೆ. ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ.”—ಯೋಹಾನ 6:44, 45.
6. ಯೆಹೋವನು ಹೇಗೆ ಒಂದು ಪೂರ್ವಭಾವಿ ರೀತಿಯಲ್ಲಿ ಜನಾಂಗಗಳನ್ನು ಅಲುಗಾಡಿಸುತ್ತಿದ್ದಾನೆ, ಮತ್ತು ಅದೇ ಸಮಯದಲ್ಲಿ ಆತನ ಆರಾಧನೆಯ “ಆಲಯ”ದಲ್ಲಿ ಯಾರು ಭದ್ರತೆಯನ್ನು ಕಂಡುಕೊಳ್ಳುತ್ತಿದ್ದಾರೆ?
6 ಈ ಕಡೇ ದಿವಸಗಳಲ್ಲಿ ಯೆಹೋವನು ಜನರನ್ನು ಸೆಳೆದು ಅವರಿಗಾಗಿ “ನಂಬಿಕೆಯ ಬಾಗಿಲನ್ನು” ಹೇಗೆ ತೆರೆಯುತ್ತಿದ್ದಾನೆ? (ಅ. ಕೃತ್ಯಗಳು 14:27; 2 ತಿಮೊಥೆಯ 3:1) ಒಂದು ಮುಖ್ಯ ವಿಧಾನವು, ರಕ್ಷಣೆ ಹಾಗೂ ಈ ದುಷ್ಟ ವಿಷಯಗಳ ವ್ಯವಸ್ಥೆಯ ವಿರುದ್ಧ ನ್ಯಾಯತೀರ್ಪಿನ ಸಂದೇಶಗಳನ್ನು ತನ್ನ ಸಾಕ್ಷಿಗಳು ಘೋಷಿಸುವಂತೆ ಮಾಡುವ ಮೂಲಕವೇ. (ಯೆಶಾಯ 43:12; 61:1, 2) ಈ ಲೋಕವ್ಯಾಪಕ ಘೋಷಣೆಯು, ಜನಾಂಗಗಳನ್ನು ಒಂದು ಪೂರ್ವಭಾವಿ ರೀತಿಯಲ್ಲಿ ಅಲುಗಾಡಿಸುತ್ತಿದೆ. ಇದು, ಬೇಗನೆ ಬರಲಿರುವ ನ್ಯಾಯತೀರ್ಪಿನ ಧ್ವಂಸದ ಒಂದು ಮುನ್ಸೂಚನೆಯಾಗಿದೆ. ಅದೇ ಸಮಯದಲ್ಲಿ, ದೇವರ ದೃಷ್ಟಿಯಲ್ಲಿ “ಅಮೂಲ್ಯ”ರಾಗಿರುವ ಜನರು, ಈ ವ್ಯವಸ್ಥೆಯಿಂದ ಹೊರತರಲ್ಪಟ್ಟು, ಆತನ ಸತ್ಯಾರಾಧನೆಯ “ಆಲಯ”ದಲ್ಲಿ ಭದ್ರತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಯೆಹೋವನು ಹಗ್ಗಾಯನ ಮೂಲಕ ದಾಖಲಿಸಿರುವ ತನ್ನ ಈ ಪ್ರವಾದನ ಮಾತುಗಳನ್ನು ನೆರವೇರಿಸುತ್ತಿದ್ದಾನೆ: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.”—ಹಗ್ಗಾಯ 2:6, 7, NW ಪಾದಟಿಪ್ಪಣಿ; ಪ್ರಕಟನೆ 7:9, 15.
7. ಯೆಹೋವನು ಜನರ ಹೃದಯಗಳನ್ನು ತೆರೆದು, ವ್ಯಕ್ತಿಗಳನ್ನು ತನ್ನ ಮತ್ತು ತನ್ನ ಪುತ್ರನ ಕಡೆಗೆ ಹೇಗೆ ಸೆಳೆಯುತ್ತಾನೆ?
7 ತನ್ನ ಸಾಕ್ಷಿಗಳು ‘ಹೇಳುವ ಮಾತುಗಳಿಗೆ ಲಕ್ಷಕೊಡುವುದಕ್ಕಾಗಿ,’ “ಜನಾಂಗಗಳ ಅತ್ಯುತ್ಕೃಷ್ಟ ವಿಷಯ”ಗಳಾಗಿರುವ ಈ ದೇವಭಯವುಳ್ಳ ವ್ಯಕ್ತಿಗಳ ಹೃದಯಗಳನ್ನು ಯೆಹೋವನು ತೆರೆಯುತ್ತಾನೆ. (ಹಗ್ಗಾಯ 2:6, 7, ಯೆಹೂದಿ ಪ್ರಕಾಶನ ಸಂಸ್ಥೆ; ಅ. ಕೃತ್ಯಗಳು 16:14) ಪ್ರಥಮ ಶತಮಾನದಲ್ಲಿ ಮಾಡಿದಂತೆ, ಸಹಾಯಕ್ಕಾಗಿ ಬೇಡಿಕೊಳ್ಳುವ ಪ್ರಾಮಾಣಿಕ ಜನರ ಬಳಿ ತನ್ನ ಸಾಕ್ಷಿಗಳನ್ನು ಮಾರ್ಗದರ್ಶಿಸಲು ಯೆಹೋವನು ಕೆಲವೊಮ್ಮೆ ದೇವದೂತರನ್ನು ಉಪಯೋಗಿಸಿದ್ದಾನೆ. (ಅ. ಕೃತ್ಯಗಳು 8:26-31) ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ದೇವರು ತಮಗಾಗಿ ಮಾಡಿರುವ ಅದ್ಭುತವಾದ ಏರ್ಪಾಡುಗಳ ಕುರಿತಾಗಿ ವ್ಯಕ್ತಿಗಳು ಕಲಿಯುತ್ತಿರುವಾಗ, ಅವರು ಯೆಹೋವನ ಪ್ರೀತಿಯಿಂದಾಗಿ ಆತನೆಡೆಗೆ ಸೆಳೆಯಲ್ಪಡುತ್ತಾರೆ. (1 ಯೋಹಾನ 4:9, 10) ಹೌದು, ದೇವರು ತನ್ನ “ಪ್ರೀತಿ-ದಯೆ,” ಅಥವಾ “ನಿಷ್ಠಾವಂತ ಪ್ರೀತಿಯ” ಮೂಲಕ ಜನರನ್ನು ತನ್ನೆಡೆಗೂ ತನ್ನ ಪುತ್ರನ ಕಡೆಗೂ ಸೆಳೆಯುತ್ತಾನೆ.—ಯೆರೆಮೀಯ 31:3, NW ಪಾದಟಿಪ್ಪಣಿ.
ಯೆಹೋವನು ಯಾರನ್ನು ಸೆಳೆಯುತ್ತಾನೆ?
8. ಯೆಹೋವನು ಯಾವ ರೀತಿಯ ಜನರನ್ನು ಸೆಳೆಯುತ್ತಾನೆ?
8 ತನಗಾಗಿ ಹುಡುಕುವವರನ್ನೇ ಯೆಹೋವನು ತನ್ನ ಹಾಗೂ ತನ್ನ ಮಗನ ಬಳಿಗೆ ಸೆಳೆಯುತ್ತಾನೆ. (ಅ. ಕೃತ್ಯಗಳು 17:27) ಇವರಲ್ಲಿ, ಕ್ರೈಸ್ತಪ್ರಪಂಚ ಹಾಗೂ ವಾಸ್ತವದಲ್ಲಿ ಲೋಕದಾದ್ಯಂತ “ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ” ಜನರು ಸೇರಿದ್ದಾರೆ. (ಯೆಹೆಜ್ಕೇಲ 9:4) ಇವರು, “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವ”ರಾಗಿದ್ದಾರೆ. (ಮತ್ತಾಯ 5:3, NW) ಖಂಡಿತವಾಗಿಯೂ, ಅವರು ಪ್ರಮೋದವನ ಭೂಮಿಯ ಮೇಲೆ ಸದಾಕಾಲ ಜೀವಿಸಲಿರುವ, “ಲೋಕದ ದೀನ [“ನಮ್ರ,” NW ಪಾದಟಿಪ್ಪಣಿ]” ಜನರಾಗಿದ್ದಾರೆ.—ಚೆಫನ್ಯ 2:3.
9. ಜನರು ‘ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳವ’ರಾಗಿದ್ದಾರೋ ಇಲ್ಲವೋ ಎಂಬುದನ್ನು ಯೆಹೋವನು ಹೇಗೆ ನೋಡಬಲ್ಲನು, ಮತ್ತು ಆತನು ಅವರನ್ನು ಹೇಗೆ ಸೆಳೆಯುತ್ತಾನೆ?
9 ಯೆಹೋವನು ಒಬ್ಬ ವ್ಯಕ್ತಿಯ ಹೃದಯವನ್ನು ನೋಡಬಲ್ಲನು. ರಾಜ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಹೇಳಿದ್ದು: “ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವದಾದರೆ ಆತನು ನಿನಗೆ ಸಿಕ್ಕುವನು.” (1 ಪೂರ್ವಕಾಲವೃತ್ತಾಂತ 28:9) ಒಬ್ಬ ವ್ಯಕ್ತಿಯು ಪಾಪಗಳ ಕ್ಷಮಾಪಣೆ ಹಾಗೂ ದೇವರ ನೀತಿಯ ಹೊಸ ವ್ಯವಸ್ಥೆಯಲ್ಲಿ ನಿತ್ಯ ಜೀವದ ನಿರೀಕ್ಷೆಗಾಗಿರುವ ದೈವಿಕ ಏರ್ಪಾಡುಗಳಿಗೆ ಪ್ರತಿಕ್ರಿಯಿಸುವನೋ ಇಲ್ಲವೋ ಎಂಬುದನ್ನು ಯೆಹೋವನು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿ ಮತ್ತು ಆತ್ಮ ಅಥವಾ ಪ್ರಬಲವಾದ ಮನೋಭಾವದ ಆಧಾರದ ಮೇಲೆ ಕಂಡುಹಿಡಿಯಬಲ್ಲನು. (2 ಪೇತ್ರ 3:13) ಯೆಹೋವನು ‘ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳ’ವರೆಲ್ಲರನ್ನೂ ತನ್ನ ಸಾಕ್ಷಿಗಳು ಸಾರುವ ಮತ್ತು ಕಲಿಸುವ ತನ್ನ ವಾಕ್ಯದ ಮೂಲಕ, ತನ್ನ ಹಾಗೂ ತನ್ನ ಮಗನ ಬಳಿ ಸೆಳೆಯುತ್ತಾನೆ ಮತ್ತು ಇವರು ‘ವಿಶ್ವಾಸಿ’ಗಳಾಗುತ್ತಾರೆ.—ಅ. ಕೃತ್ಯಗಳು 13:48, NW.
10. ಯೆಹೋವನು ಕೆಲವರನ್ನು ಸೆಳೆಯುವುದು ಮತ್ತು ಇನ್ನಿತರರನ್ನು ಸೆಳೆಯದಿರುವುದು, ಒಂದು ರೀತಿಯಲ್ಲಿ ದೇವರು ಮೊದಲೇ ಗೊತ್ತುಪಡಿಸಿರುವ ವಿಷಯವಲ್ಲವೆಂದು ಯಾವುದು ತೋರಿಸುತ್ತದೆ?
10 ಯೆಹೋವನು ಕೇವಲ ಕೆಲವರನ್ನು ಸೆಳೆಯುವುದು ಮತ್ತು ಇನ್ನಿತರರನ್ನು ಸೆಳೆಯದಿರುವುದು, ಒಂದು ರೀತಿಯಲ್ಲಿ ದೇವರು ಮೊದಲೇ ಗೊತ್ತುಪಡಿಸಿರುವ ವಿಷಯವಾಗಿದೆಯೊ? ಖಂಡಿತವಾಗಿಯೂ ಇಲ್ಲ! ದೇವರು ಜನರನ್ನು ಅವರ ಸ್ವಂತ ಆಕಾಂಕ್ಷೆಗಳ ಆಧಾರದ ಮೇಲೆ ಸೆಳೆಯುತ್ತಾನೆ. ಆತನು ಅವರ ಸ್ವತಂತ್ರ ಇಚ್ಛೆಯನ್ನು ಗೌರವಿಸುತ್ತಾನೆ. “ನಾನು ಜೀವಶುಭಗಳನ್ನೂ ಮರಣಾಶುಭಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. . . . ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ. ಆತನನ್ನು ಹೊಂದಿಕೊಂಡೇ ಇರ್ರಿ. ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಮಾಡಿ ಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.” ಮೋಶೆಯ ಈ ಮಾತುಗಳ ಮುಖಾಂತರ ಸುಮಾರು 3,000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಯೆಹೋವನು ಇಸ್ರಾಯೇಲ್ಯರ ಮುಂದಿಟ್ಟಿದ್ದ ಅದೇ ಆಯ್ಕೆಯನ್ನು ಆತನು ಇಂದಿನ ಭೂನಿವಾಸಿಗಳ ಮುಂದೆಯೂ ಇಡುತ್ತಾನೆ.—ಧರ್ಮೋಪದೇಶಕಾಂಡ 30:15-20.
11. ಇಸ್ರಾಯೇಲ್ಯರು ಹೇಗೆ ಜೀವವನ್ನು ಆದುಕೊಳ್ಳಬಹುದಿತ್ತು?
11 ‘ಯೆಹೋವನನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿ, ಆತನನ್ನು ಹೊಂದಿಕೊಂಡಿರುವ’ ಮೂಲಕ ಇಸ್ರಾಯೇಲ್ಯರು ಜೀವವನ್ನು ಆದುಕೊಳ್ಳಬಹುದಿತ್ತು ಎಂಬುದನ್ನು ಗಮನಿಸಿರಿ. ಆ ಮಾತುಗಳು ನುಡಿಯಲ್ಪಟ್ಟಾಗ, ಇಸ್ರಾಯೇಲ್ ಜನರು ಇನ್ನೂ ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಂಡಿರಲಿಲ್ಲ. ಅವರು ಮೋವಾಬ್ಯರ ಬಯಲುಸೀಮೆಯಲ್ಲಿದ್ದು, ಯೋರ್ದಾನ್ ಹೊಳೆಯನ್ನು ದಾಟಿ ಕಾನಾನ್ ದೇಶವನ್ನು ಪ್ರವೇಶಿಸಲು ತಯಾರಾಗಿದ್ದರು. ಬಹು ಬೇಗನೆ ಅವರಿಗೆ ಸಿಗಲಿದ್ದ “ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶ”ದ ಕುರಿತಾಗಿಯೇ ಅವರು ಯೋಚಿಸುತ್ತಾ ಇರುವುದು ಸಹಜವಾಗಿತ್ತಾದರೂ, ಅವರ ಕನಸುಗಳ ನನಸಾಗುವಿಕೆಯು, ಯೆಹೋವನಿಗಾಗಿರುವ ಅವರ ಪ್ರೀತಿ, ಆತನ ಮಾತಿಗೆ ವಿಧೇಯತೆ, ಮತ್ತು ಆತನಿಗೆ ಅಂಟಿಕೊಂಡಿರುವುದರ ಮೇಲೆ ಅವಲಂಬಿಸಿತ್ತು. (ವಿಮೋಚನಕಾಂಡ 3:8) ಮೋಶೆಯು ಇದನ್ನು ಈ ಮಾತುಗಳಲ್ಲಿ ಸ್ಪಷ್ಟಪಡಿಸಿದನು: “ನಾನು ಈಗ ನಿಮಗೆ ಬೋಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನು ಹೇಳಿದ ಮಾರ್ಗದಲ್ಲಿ ನಡೆದು ಆತನ ಆಜ್ಞಾವಿಧಿನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿಕೊಂಡು ಹೆಚ್ಚುವಿರಿ; ಮತ್ತು ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು.” (ಓರೆಅಕ್ಷರಗಳು ನಮ್ಮವು.)—ಧರ್ಮೋಪದೇಶಕಾಂಡ 30:16.
12. ಇಸ್ರಾಯೇಲ್ಯರ ಉದಾಹರಣೆಯು, ಸಾರುವ ಮತ್ತು ಕಲಿಸುವ ಕೆಲಸದ ಕುರಿತಾಗಿ ನಮಗೆ ಏನನ್ನು ಕಲಿಸಬೇಕು?
12 ಇಷ್ಟರ ವರೆಗೆ ತಿಳಿಸಲ್ಪಟ್ಟಿರುವ ವಿಷಯವು, ಅಂತ್ಯದ ಸಮಯದಲ್ಲಿ ನಾವು ಮಾಡುತ್ತಿರುವ ಸಾರುವ ಹಾಗೂ ಕಲಿಸುವ ಕೆಲಸದ ಕುರಿತಾಗಿ ಏನನ್ನಾದರೂ ಕಲಿಸಬೇಕಲ್ಲವೊ? ಬರಲಿರುವ ಪ್ರಮೋದವನ ಭೂಮಿಯ ಕುರಿತಾಗಿ ನಾವು ಯೋಚಿಸುತ್ತಾ ಇರುತ್ತೇವೆ ಮತ್ತು ಅದರ ಕುರಿತಾಗಿ ನಾವು ನಮ್ಮ ಶುಶ್ರೂಷೆಯಲ್ಲಿ ಮಾತಾಡುತ್ತೇವೆ. ಆದರೆ, ನಾವು ಅಥವಾ ನಾವು ಯಾರನ್ನು ಶಿಷ್ಯರನ್ನಾಗಿ ಮಾಡುತ್ತೇವೊ ಅವರು, ಕೇವಲ ಸ್ವಾರ್ಥ ಕಾರಣಗಳಿಗೋಸ್ಕರ ದೇವರನ್ನು ಸೇವಿಸುತ್ತಿರುವಲ್ಲಿ ಆ ವಾಗ್ದಾನವು ನೆರವೇರುವುದನ್ನು ನೋಡಲಿಕ್ಕಿಲ್ಲ. ನಾವು ಮತ್ತು ನಾವು ಯಾರಿಗೆ ಕಲಿಸುತ್ತೇವೊ ಅವರು, ಇಸ್ರಾಯೇಲ್ಯರಂತೆ ‘ಯೆಹೋವನನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿ, ಆತನಿಗೆ ಹೊಂದಿಕೊಂಡಿರಲು’ ಕಲಿಯಬೇಕು. ನಾವು ನಮ್ಮ ಶುಶ್ರೂಷೆಯನ್ನು ಪೂರೈಸುತ್ತಿರುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಲ್ಲಿ, ಜನರನ್ನು ದೇವರ ಕಡೆಗೆ ಸೆಳೆಯುವುದರಲ್ಲಿ ನಾವು ವಾಸ್ತವದಲ್ಲಿ ಆತನೊಂದಿಗೆ ಜೊತೆಗೂಡಿ ಕೆಲಸಮಾಡುತ್ತಿರುವವರಾಗುವೆವು.
ದೇವರ ಜೊತೆ ಕೆಲಸಗಾರರು
13, 14. (ಎ) 1 ಕೊರಿಂಥ 3:5-9ಕ್ಕನುಸಾರ, ನಾವು ಹೇಗೆ ದೇವರ ಜೊತೆ ಕೆಲಸಗಾರರಾಗುತ್ತೇವೆ? (ಬಿ) ಆಗುತ್ತಿರುವ ಯಾವುದೇ ವೃದ್ಧಿಗೆ ಗೌರವವು ಯಾರಿಗೆ ಸಲ್ಲಬೇಕು, ಮತ್ತು ಏಕೆ?
13 ದೇವರೊಂದಿಗೆ ಜೊತೆಗೂಡಿ ಕೆಲಸಮಾಡುವ ವಿಷಯವನ್ನು, ಒಂದು ಹೊಲದ ಸಾಗುವಳಿಯ ಕುರಿತು ತಿಳಿಸುವ ಮೂಲಕ ಪೌಲನು ದೃಷ್ಟಾಂತಿಸಿದನು. ಅವನು ಬರೆದುದು: “ಹಾಗಾದರೆ ಅಪೊಲ್ಲೋಸನು ಏನು? ಪೌಲನು ಏನು? ಅವರು ಸೇವಕರು; ಅವರ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ. ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳಿಸುತ್ತಾ ಬಂದವನು ದೇವರು. ಹೀಗಿರಲಾಗಿ ನೆಡುವವನಾಗಲಿ ನೀರುಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳಸುವ ದೇವರೇ ವಿಶೇಷವಾದವನು. ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ. ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. ನಾವು ದೇವರ ಜೊತೆಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.”—1 ಕೊರಿಂಥ 3:5-9.
14 ದೇವರ ಜೊತೆ ಕೆಲಸಗಾರರೋಪಾದಿ, ನಾವು ಜನರ ಹೃದಯಗಳಲ್ಲಿ “ಪರಲೋಕರಾಜ್ಯದ ವಾಕ್ಯವನ್ನು” ನೆಟ್ಟು, ಅನಂತರ ಚೆನ್ನಾಗಿ ತಯಾರಿಸಲ್ಪಟ್ಟ ಪುನರ್ಭೇಟಿಗಳು ಮತ್ತು ಬೈಬಲ್ ಅಭ್ಯಾಸಗಳನ್ನು ಮಾಡುವ ಮೂಲಕ ವ್ಯಕ್ತಪಡಿಸಲಾಗುವ ಯಾವುದೇ ಆಸಕ್ತಿಗೆ ನೀರೆರೆಯಬೇಕು. ನೆಲ, ಅಂದರೆ ಹೃದಯವು ಒಳ್ಳೆಯದಾಗಿರುವಲ್ಲಿ, ಬೈಬಲ್ ಸತ್ಯದ ಬೀಜವು ಒಂದು ಫಲಭರಿತ ಗಿಡವಾಗಿ ಬೆಳೆಯುವಂತೆ ಮಾಡುವ ಮೂಲಕ ಯೆಹೋವನು ತನ್ನ ಪಾತ್ರವನ್ನು ನಿರ್ವಹಿಸುವನು. (ಮತ್ತಾಯ 13:19, 23) ಆತನು ಆ ವ್ಯಕ್ತಿಯನ್ನು ತನ್ನ ಕಡೆಗೆ ಮತ್ತು ತನ್ನ ಪುತ್ರನ ಕಡೆಗೆ ಸೆಳೆಯುವನು. ಹೀಗೆ, ಅಂತಿಮವಾಗಿ ಹೇಳುವುದಾದರೆ, ರಾಜ್ಯ ಘೋಷಕರ ಸಂಖ್ಯೆಯಲ್ಲಿ ಆಗುತ್ತಿರುವ ಯಾವುದೇ ವೃದ್ಧಿಯು, ಯೆಹೋವನು ಜನರ ಹೃದಯಗಳ ಮೇಲೆ ಮಾಡುತ್ತಿರುವ ಕೆಲಸದಿಂದಾಗಿದೆ. ಸತ್ಯದ ಬೀಜವು ಬೆಳೆದು, ಅಂತಹವರನ್ನು ಆತನು ತನ್ನೆಡೆಗೆ ಮತ್ತು ತನ್ನ ಪುತ್ರನ ಕಡೆಗೆ ಸೆಳೆಯುತ್ತಾನೆ.
ಬಾಳಿಕೆ ಬರುವ ನಿರ್ಮಾಣ ಕೆಲಸ
15. ಇತರರು ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ನಾವು ಹೇಗೆ ಸಹಾಯಮಾಡುತ್ತೇವೆಂಬುದನ್ನು ತೋರಿಸಲು ಪೌಲನು ಯಾವ ದೃಷ್ಟಾಂತವನ್ನು ಉಪಯೋಗಿಸಿದನು?
15 ಈ ವೃದ್ಧಿಯ ಕುರಿತಾಗಿ ನಾವು ಹರ್ಷಿಸುತ್ತೇವಾದರೂ, ಅದೇ ಸಮಯದಲ್ಲಿ ಜನರು ಯೆಹೋವನನ್ನು ಪ್ರೀತಿಸುತ್ತಾ, ಆತನ ಮಾತಿಗೆ ವಿಧೇಯರಾಗುತ್ತಾ ಮತ್ತು ಅಂಟಿಕೊಳ್ಳುತ್ತಾ ಮುಂದುವರಿಯುವಂತೆ ನಾವು ಪ್ರಾಮಾಣಿಕವಾಗಿ ಬಯಸುತ್ತೇವೆ. ಕೆಲವರು ತಣ್ಣಗಾಗಿ ಬಿದ್ದುಹೋಗುವುದನ್ನು ನೋಡುವಾಗ ನಮಗೆ ದುಃಖವಾಗುತ್ತದೆ. ಇದನ್ನು ತಡೆಗಟ್ಟಲು ನಾವು ಏನಾದರೂ ಮಾಡಬಹುದೋ? ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ನಾವು ಇತರರಿಗೆ ಹೇಗೆ ಸಹಾಯಮಾಡಬಲ್ಲೆವೆಂಬುದನ್ನು ಪೌಲನು ಇನ್ನೊಂದು ದೃಷ್ಟಾಂತದಲ್ಲಿ ತೋರಿಸುತ್ತಾನೆ. ಅವನು ಬರೆಯುವುದು: “ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. ಆ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ರತ್ನ ಕಟ್ಟಿಗೆ ಹುಲ್ಲು ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು.”—1 ಕೊರಿಂಥ 3:11-13.
16. (ಎ) ಪೌಲನು ಉಪಯೋಗಿಸಿದ ಎರಡು ದೃಷ್ಟಾಂತಗಳ ಉದ್ದೇಶ ಹೇಗೆ ಭಿನ್ನವಾಗಿದೆ? (ಬಿ) ನಮ್ಮ ಕಟ್ಟುವ ಕೆಲಸವು ಹೇಗೆ ಅತೃಪ್ತಿಕರವಾದದ್ದು ಮತ್ತು ಅಗ್ನಿನಿರೋಧಕವಲ್ಲದ್ದಾಗಿ ಪರಿಣಮಿಸಬಹುದು?
16 ಹೊಲದ ಕುರಿತಾದ ಪೌಲನ ದೃಷ್ಟಾಂತದಲ್ಲಿ ತೋರಿಸಲ್ಪಟ್ಟಿರುವಂತೆ, ಬೆಳವಣಿಗೆಯು ಸತತವಾದ ನೆಡುವಿಕೆ, ಕ್ರಮವಾದ ನೀರೆರೆಯುವಿಕೆ, ಮತ್ತು ದೇವರ ಆಶೀರ್ವಾದದ ಮೇಲೆ ಅವಲಂಬಿಸಿರುತ್ತದೆ. ಆದರೆ ಅಪೊಸ್ತಲನ ಇನ್ನೊಂದು ದೃಷ್ಟಾಂತವು, ತನ್ನ ನಿರ್ಮಾಣ ಕಾರ್ಯಕ್ಕೆ ಏನಾಗುವುದೊ ಅದರ ಕುರಿತು ಒಬ್ಬ ಕ್ರೈಸ್ತ ಶುಶ್ರೂಷಕನಿಗಿರುವ ಜವಾಬ್ದಾರಿಯನ್ನು ಎತ್ತಿತೋರಿಸುತ್ತದೆ. ಒಳ್ಳೆಯ ಗುಣಮಟ್ಟದ ಸಾಮಗ್ರಿಗಳೊಂದಿಗೆ ಅವನು ಒಂದು ದೃಢವಾದ ಅಸ್ತಿವಾರದ ಮೇಲೆ ಕಟ್ಟಿದ್ದಾನೊ? ಪೌಲನು ಎಚ್ಚರಿಸುವುದು: “ಪ್ರತಿಯೊಬ್ಬನು ತಾನು ಅದರ ಮೇಲೆ ಎಂಥದನ್ನು ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು.” (1 ಕೊರಿಂಥ 3:10) ಪ್ರಮೋದವನದಲ್ಲಿ ನಿತ್ಯಜೀವದ ನಿರೀಕ್ಷೆಯ ಕುರಿತು ಹೇಳುವ ಮೂಲಕ ಒಬ್ಬ ವ್ಯಕ್ತಿಯ ಆಸಕ್ತಿಯನ್ನು ಕೆರಳಿಸಿದ ನಂತರ, ಶಾಸ್ತ್ರೀಯ ಜ್ಞಾನದ ಮೂಲಭೂತ ವಿಷಯಗಳನ್ನು ಮಾತ್ರ ಕಲಿಸಿ, ಆಮೇಲೆ ನಿತ್ಯಜೀವವನ್ನು ಪಡೆಯಲು ಆ ವ್ಯಕ್ತಿಯು ಏನು ಮಾಡಬೇಕೆಂಬುದರ ಮೇಲೆಯೇ ನಾವು ಹೆಚ್ಚು ಮಹತ್ವವನ್ನು ಕೊಡುತ್ತೇವೋ? ನಾವು ಕಲಿಸುವಾಗಲೆಲ್ಲಾ ಕೇವಲ ಇದನ್ನೇ ಹೇಳುತ್ತಿರುತ್ತೇವೊ: ‘ನಿಮಗೆ ಪ್ರಮೋದವನದಲ್ಲಿ ನಿತ್ಯಜೀವ ಬೇಕಾದರೆ ನೀವು ಅಭ್ಯಾಸಮಾಡಬೇಕು, ಕೂಟಗಳಿಗೆ ಹೋಗಬೇಕು, ಮತ್ತು ಸಾರುವ ಕೆಲಸದಲ್ಲಿ ಪಾಲ್ಗೊಳ್ಳಬೇಕು.’ ಹಾಗೆ ಮಾಡುತ್ತಿರುವಲ್ಲಿ, ನಾವು ಆ ವ್ಯಕ್ತಿಯ ನಂಬಿಕೆಯನ್ನು ದೃಢವಾದ ಅಸ್ತಿವಾರದ ಮೇಲೆ ಕಟ್ಟುತ್ತಿಲ್ಲ. ಮತ್ತು ನಾವು ಏನನ್ನು ಕಟ್ಟುತ್ತೇವೊ ಅದು ಪರೀಕ್ಷೆಗಳ ಅಗ್ನಿಯನ್ನು ತಡೆದುಕೊಳ್ಳಲು ಅಥವಾ ಸಮಯದ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗಲಿಕ್ಕಿಲ್ಲ. ಒಬ್ಬ ವ್ಯಕ್ತಿಯು ಕೆಲವೊಂದು ವರ್ಷಗಳ ವರೆಗೆ ಯೆಹೋವನಿಗೆ ಸೇವೆಸಲ್ಲಿಸಿದ್ದರಿಂದಾಗಿ ಅವನು ಪ್ರಮೋದವನದಲ್ಲಿ ಜೀವಿಸಬಹುದೆಂಬ ನಿರೀಕ್ಷೆಯನ್ನು ನೀಡುವ ಮುಖಾಂತರ ಜನರನ್ನು ಯೆಹೋವನ ಬಳಿ ಸೆಳೆಯಲು ಪ್ರಯತ್ನಿಸುವುದು, “ಕಟ್ಟಿಗೆ ಹುಲ್ಲು ಆಪು” ಮುಂತಾದ ಸಾಮಗ್ರಿಗಳೊಂದಿಗೆ ಕಟ್ಟಿದಂತಿರುವುದು.
ದೇವರಿಗಾಗಿ ಮತ್ತು ಕ್ರಿಸ್ತನಿಗಾಗಿ ಪ್ರೀತಿಯನ್ನು ಬೆಳೆಸುವುದು
17, 18. (ಎ) ಒಬ್ಬ ವ್ಯಕ್ತಿಯ ನಂಬಿಕೆಯು ತಾಳಿಕೊಳ್ಳಬೇಕಾದರೆ ಏನು ಅತ್ಯಗತ್ಯವಾಗಿದೆ? (ಬಿ) ಕ್ರಿಸ್ತನು ಒಬ್ಬ ವ್ಯಕ್ತಿಯ ಹೃದಯದಲ್ಲಿ ವಾಸಮಾಡುವಂತೆ ನಾವು ಹೇಗೆ ಸಹಾಯಮಾಡಬಹುದು?
17 ನಂಬಿಕೆಯು ಬಹುಕಾಲ ತಾಳಿಕೊಳ್ಳಬೇಕಾದರೆ, ಅದು ಯೇಸು ಕ್ರಿಸ್ತನ ಮೂಲಕ ಯೆಹೋವ ದೇವರೊಂದಿಗಿನ ಒಂದು ವೈಯಕ್ತಿಕ ಸಂಬಂಧದ ಮೇಲೆ ಆಧಾರಿಸಲ್ಪಟ್ಟಿರಬೇಕು. ಅಪರಿಪೂರ್ಣ ಮಾನವರೋಪಾದಿ, ದೇವರೊಂದಿಗಿನ ಅಂತಹ ಒಂದು ಸಮಾಧಾನಪೂರ್ವಕ ಸಂಬಂಧವನ್ನು ನಾವು ಕೇವಲ ಆತನ ಮಗನ ಮೂಲಕ ಬೆಳೆಸಿಕೊಳ್ಳಸಾಧ್ಯವಿದೆ. (ರೋಮಾಪುರ 5:10) ಯೇಸು ಹೀಗೆ ಹೇಳಿದ್ದನ್ನು ನೆನಪಿಸಿಕೊಳ್ಳಿರಿ: “ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” ನಂಬಿಕೆಯನ್ನು ಕಟ್ಟಲಿಕ್ಕಾಗಿ ಇತರರಿಗೆ ಸಹಾಯಮಾಡಲು, “ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.” ಇದರಲ್ಲಿ ಏನೆಲ್ಲ ಒಳಗೂಡಿದೆ?—ಯೋಹಾನ 14:6; 1 ಕೊರಿಂಥ 3:11.
18 ಕ್ರಿಸ್ತನನ್ನು ಅಸ್ತಿವಾರವಾಗಿಟ್ಟುಕೊಂಡು ಕಟ್ಟುವುದರ ಅರ್ಥವೇನೆಂದರೆ, ಬೈಬಲ್ ವಿದ್ಯಾರ್ಥಿಯು ಯೇಸುವಿಗಾಗಿ ಗಾಢವಾದ ಪ್ರೀತಿಯನ್ನು ವಿಕಸಿಸಿಕೊಳ್ಳುವಂತಹ ರೀತಿಯಲ್ಲಿ ಕಲಿಸುವುದೇ. ಯೇಸು ಒಬ್ಬ ವಿಮೋಚಕನು, ಸಭೆಯ ತಲೆ, ಪ್ರೀತಿಯ ಮಹಾ ಯಾಜಕ ಮತ್ತು ಆಳುತ್ತಿರುವ ಅರಸನೋಪಾದಿ ವಹಿಸುವ ಪಾತ್ರದ ಕುರಿತಾಗಿ ಪೂರ್ಣ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಅವನು ಆ ಪ್ರೀತಿಯನ್ನು ವಿಕಸಿಸಿಕೊಳ್ಳಸಾಧ್ಯವಿದೆ. (ದಾನಿಯೇಲ 7:13, 14; ಮತ್ತಾಯ 20:28; ಕೊಲೊಸ್ಸೆ 1:18-20; ಇಬ್ರಿಯ 4:14-16) ಇದರರ್ಥ, ನಾವು ಅವರಿಗೆ ಕಲಿಸುವಂತಹ ರೀತಿಯಿಂದ ಯೇಸು ಅವರಿಗೆ ಎಷ್ಟು ನೈಜವಾಗಿ ತೋರಬೇಕೆಂದರೆ, ಅವನು ಕಾರ್ಯತಃ ಅವರ ಹೃದಯಗಳಲ್ಲಿ ವಾಸಿಸಬೇಕು. ಅವರಿಗಾಗಿ ನಾವು ಮಾಡುವ ಪ್ರಾರ್ಥನೆಯು, ಎಫೆಸದಲ್ಲಿದ್ದ ಕ್ರೈಸ್ತರ ಪರವಾಗಿ ಯೇಸು ಮಾಡಿದಂತಹ ಬೇಡಿಕೆಯಂತಿರಬೇಕು. ಅವನು ಬರೆದುದು: “ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು, . . . ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವ ಹಾಗೆಯೂ ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ; ನೀವು ದೇವರ ಪ್ರೀತಿಯಲ್ಲಿ ನೆಲೆಗೊಂಡು [“ಅಸ್ತಿವಾರದ ಮೇಲೆ ನೆಲೆಗೊಂಡು ಸ್ಥಾಪಿಸಲ್ಪಡುವಂತೆ,” NW] . . . ಎಂದು ಆತನನ್ನು ಬೇಡಿಕೊಳ್ಳುತ್ತೇನೆ.”—ಎಫೆಸ 3:14-17.
19. ನಮ್ಮ ಬೈಬಲ್ ವಿದ್ಯಾರ್ಥಿಗಳ ಹೃದಯಗಳಲ್ಲಿ ಕ್ರಿಸ್ತನಿಗಾಗಿ ಪ್ರೀತಿಯನ್ನು ಬೆಳೆಸುವ ಪರಿಣಾಮವೇನಾಗಿರಬೇಕು, ಆದರೆ ಅವರಿಗೆ ಏನು ಕಲಿಸಲ್ಪಡಲೇಬೇಕು?
19 ನಮ್ಮ ವಿದ್ಯಾರ್ಥಿಗಳ ಹೃದಯಗಳಲ್ಲಿ ಕ್ರಿಸ್ತನಿಗಾಗಿ ಪ್ರೀತಿಯು ಅಂಕುರಿಸುವಂತಹ ರೀತಿಯಲ್ಲಿ ನಾವು ಕಟ್ಟುವಲ್ಲಿ, ಇದು ಸಹಜವಾಗಿಯೇ ಅವರಲ್ಲಿ ಯೆಹೋವ ದೇವರಿಗಾಗಿ ಪ್ರೀತಿಯನ್ನು ಬೆಳೆಸುವುದು. ಯೇಸು ತೋರಿಸಿದಂತಹ ಪ್ರೀತಿ, ಅನುಕಂಪ ಮತ್ತು ಕನಿಕರವು, ಯೆಹೋವನ ಗುಣಗಳನ್ನೇ ಯಥಾವತ್ತಾಗಿ ಪ್ರತಿಬಿಂಬಿಸಿದವು. (ಮತ್ತಾಯ 11:28-30; ಮಾರ್ಕ 6:30-34; ಯೋಹಾನ 15:13, 14; ಕೊಲೊಸ್ಸೆ 1:15; ಇಬ್ರಿಯ 1:3) ಆದುದರಿಂದಲೇ, ಜನರು ಯೇಸುವಿನ ಕುರಿತಾಗಿ ತಿಳಿದುಕೊಂಡು ಅವನನ್ನು ಪ್ರೀತಿಸಲಾರಂಭಿಸುವಾಗ ಅವರು ಯೆಹೋವನನ್ನೂ ತಿಳಿದುಕೊಂಡು ಪ್ರೀತಿಸಲಾರಂಭಿಸುವರು.a (1 ಯೋಹಾನ 4:14, 16, 19) ಕ್ರಿಸ್ತನು ಮಾನವಕುಲಕ್ಕಾಗಿ ಏನೆಲ್ಲಾ ಮಾಡಿದ್ದಾನೋ ಅದೆಲ್ಲದ್ದರ ಹಿಂದೆ ಯೆಹೋವನ ಹಸ್ತ ಇದೆ ಮತ್ತು ಈ ಕಾರಣದಿಂದ ನಾವು ಆತನಿಗೆ ಉಪಕಾರಸ್ತುತಿಗಳನ್ನು ಸಲ್ಲಿಸಬೇಕು ಹಾಗೂ “ನಮ್ಮ ರಕ್ಷಿಸುವ ದೇವರು” ಎಂದು ಆತನನ್ನು ಆರಾಧಿಸಬೇಕೆಂದು ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿದೆ.—ಕೀರ್ತನೆ 68:19, 20; ಯೆಶಾಯ 12:2-5; ಯೋಹಾನ 3:16; 5:19.
20. (ಎ) ಜನರು ದೇವರ ಮತ್ತು ಆತನ ಪುತ್ರನ ಸಮೀಪಕ್ಕೆ ಬರುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುವುದು?
20 ದೇವರ ಜೊತೆ ಕೆಲಸಗಾರರೋಪಾದಿ, ಜನರು ತಮ್ಮ ಹೃದಯಗಳಲ್ಲಿ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ, ದೇವರ ಮತ್ತು ಆತನ ಪುತ್ರನ ಸಮೀಪಕ್ಕೆ ಬರುವಂತೆ ನಾವು ಸಹಾಯಮಾಡೋಣ. ಈ ರೀತಿಯಲ್ಲಿ ಯೆಹೋವನು ಅವರಿಗೆ ನೈಜನಾಗುವನು. (ಯೋಹಾನ 7:28) ಕ್ರಿಸ್ತನ ಮೂಲಕ ಅವರು ದೇವರೊಂದಿಗೆ ಅತ್ಯಾಪ್ತವಾದ ಸಂಬಂಧವನ್ನು ಸ್ಥಾಪಿಸಲು ಶಕ್ತರಾಗುವರು ಮತ್ತು ಆತನನ್ನು ಪ್ರೀತಿಸಿ, ಆತನಿಗೆ ಅಂಟಿಕೊಂಡಿರುವರು. ಆತನಿಗಾಗಿ ಪ್ರೀತಿಯಿಂದ ಪ್ರಚೋದಿಸಲ್ಪಟ್ಟ ಸೇವೆಯನ್ನು ಮಾಡಲು ಅವರು ಸಮಯದ ಗಡಿಗಳನ್ನು ಇಡುವುದಿಲ್ಲ. ಅದಕ್ಕೆ ಬದಲಾಗಿ, ಯೆಹೋವನ ಅದ್ಭುತವಾದ ವಾಗ್ದಾನಗಳು ಆತನ ತಕ್ಕ ಸಮಯದಲ್ಲಿ ನೆರವೇರುವವು ಎಂದು ಅವರು ನಂಬಿಕೆಯಿಡುವರು. (ಪ್ರಲಾಪಗಳು 3:24-26; ಇಬ್ರಿಯ 11:6) ಇತರರು ನಂಬಿಕೆ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಹಾಗೂ ನಿರೀಕ್ಷೆಯನ್ನು ಬಲಗೊಳಿಸುವಂತೆ ನಾವು ಸಹಾಯಮಾಡಬೇಕು. ಆದರೆ ಅದೇ ಸಮಯದಲ್ಲಿ, ಪ್ರಚಂಡವಾದ ಬಿರುಗಾಳಿಗಳನ್ನು ಎದುರಿಸಿ ಪಾರಾಗಬಲ್ಲ ಒಂದು ಗಟ್ಟಿಮುಟ್ಟಾದ ಹಡಗಿನಂತೆ ಆಗಲು, ನಾವು ನಮ್ಮ ಸ್ವಂತ ನಂಬಿಕೆಯನ್ನೂ ಕಟ್ಟಬೇಕು. ಈ ವಿಷಯವನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಅಧ್ಯಯನ ಪ್ರಶ್ನೆಗಳು]
a ಯೇಸುವನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಮತ್ತು ಅವನ ಮುಖಾಂತರ ಅವನ ತಂದೆಯಾದ ಯೆಹೋವನನ್ನು ತಿಳಿದುಕೊಳ್ಳಲು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವು ಅತ್ಯುತ್ಕೃಷ್ಟವಾದ ನೆರವನ್ನು ನೀಡುವುದು.
ಪುನರ್ವಿಮರ್ಶೆ
◻ ಸಾಮಾನ್ಯವಾಗಿ ನಾವು ರಾಜ್ಯ ಸಂದೇಶದಲ್ಲಿ ಜನರ ಆಸಕ್ತಿಯನ್ನು ಹೇಗೆ ಕೆರಳಿಸುತ್ತೇವೆ, ಆದರೆ ಇದರಲ್ಲಿ ಯಾವ ಅಪಾಯವಿದೆ?
◻ ಯೆಹೋವನು ತನ್ನ ಮತ್ತು ತನ್ನ ಮಗನ ಬಳಿ ಯಾವ ರೀತಿಯ ಜನರನ್ನು ಸೆಳೆಯುತ್ತಾನೆ?
◻ ವಾಗ್ದತ್ತ ದೇಶದೊಳಗೆ ಇಸ್ರಾಯೇಲ್ಯರ ಪ್ರವೇಶವು ಯಾವುದರ ಮೇಲೆ ಅವಲಂಬಿಸಿತು, ಮತ್ತು ಇದರಿಂದ ನಾವೇನನ್ನು ಕಲಿಯಬಲ್ಲೆವು?
◻ ಜನರು ಯೆಹೋವನ ಮತ್ತು ಆತನ ಮಗನ ಸಮೀಪಕ್ಕೆ ಬರುವಂತೆ ಸಹಾಯಮಾಡುವುದರಲ್ಲಿ ನಾವು ಯಾವ ಪಾತ್ರ ವಹಿಸುತ್ತೇವೆ?
[ಪುಟ 10 ರಲ್ಲಿರುವ ಚಿತ್ರ]
ನಾವು ಜನರಿಗೆ ಪ್ರಮೋದವನದಲ್ಲಿನ ನಿತ್ಯ ಜೀವದ ನಿರೀಕ್ಷೆಯ ಬಗ್ಗೆ ತಿಳಿಸುತ್ತೇವಾದರೂ, ಅವರನ್ನು ಯೆಹೋವನ ಕಡೆಗೆ ಸೆಳೆಯುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ
[ಪುಟ 13 ರಲ್ಲಿರುವ ಚಿತ್ರ]
ನಾವು ಚೆನ್ನಾಗಿ ತಯಾರಿಸುವಲ್ಲಿ ನಮ್ಮ ಪುನರ್ಭೇಟಿಗಳು ತುಂಬ ಪರಿಣಾಮಕಾರಿಯಾಗಿರುವವು