ಯೆಹೋವ—ಬೋಧಿಸುವಾತನಾದ ಒಬ್ಬ ದೇವರು
“ಅವರೆಲ್ಲರು ದೇವರಿಂದ [“ಯೆಹೋವ,” NW] ಶಿಕ್ಷಿತರಾಗಿರುವರು.”—ಯೋಹಾನ 6:45.
1. ಅದ್ಭುತಗಳನ್ನು ಯೇಸು ಎಲ್ಲಿ ನಡೆಸಿದ್ದಾನೆ, ಮತ್ತು ಈಗ ಅವನಲ್ಲಿ ಏನು ಮಾಡುತ್ತಿದ್ದಾನೆ?
ಯೇಸು ಕ್ರಿಸ್ತನು ಇತ್ತೀಚೆಗೆ ಅದ್ಭುತಗಳನ್ನು ನಡೆಸಿದ್ದನು ಮತ್ತು ಈಗ ಗಲಿಲಾಯದ ಸಮುದ್ರದ ಹತ್ತಿರ ಕಪೆರ್ನೌಮಿನ ಸಭಾಮಂದಿರವೊಂದರಲ್ಲಿ ಕಲಿಸುತ್ತಿರುವುದನ್ನು ನೋಡಸಾಧ್ಯವಿದೆ. (ಯೋಹಾನ 6:1-21, 59) “ನಾನು . . . ಪರಲೋಕದಿಂದ ಬಂದೆನು” ಎಂದು ಅವನು ಹೇಳುವಾಗ ಅನೇಕರು ಅವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. “ಇವನು ಯೋಸೇಫನ ಮಗನಾದ ಯೇಸು ಅಲ್ಲವೇ. ಇವನ ತಂದೆತಾಯಿಗಳನ್ನು ನಾವು ಬಲ್ಲೆವಲ್ಲವೇ. ಈಗ ಇವನು ಪರಲೋಕದಿಂದ ಇಳಿದುಬಂದಿದ್ದೇನೆಂದು ಹೇಳುವದು ಹೇಗೆ?” ಎಂದು ಅವರು ಗೊಣಗುತ್ತಾರೆ. (ಯೋಹಾನ 6:38, 42) ಅವರನ್ನು ಗದರಿಸುತ್ತಾ ಯೇಸು ಘೋಷಿಸುವುದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು.”—ಯೋಹಾನ 6:44.
2. ಪುನರುತ್ಥಾನದ ಕುರಿತು ಯೇಸುವಿನ ವಾಗ್ದಾನವನ್ನು ನಂಬಲಿಕ್ಕೆ ಯಾವ ಆಧಾರವಿದೆ?
2 ದೇವರ ರಾಜ್ಯವು ಆಳುವಾಗ, ಕಡೇ ದಿನದಲ್ಲಿ ಪುನರುತ್ಥಾನಗೊಳ್ಳಲಿರುವುದು ಎಂತಹ ಒಂದು ಅದ್ಭುತವಾದ ವಾಗ್ದಾನ! ಈ ವಾಗ್ದಾನವನ್ನು ನಾವು ನಂಬಸಾಧ್ಯವಿದೆ ಏಕೆಂದರೆ ಅದು ತಂದೆಯಾದ ಯೆಹೋವ ದೇವರಿಂದ ಬೆಂಬಲಿಸಲ್ಪಟ್ಟಿದೆ. (ಯೋಬ 14:13-15; ಯೆಶಾಯ 26:19) ಸತ್ತವರು ಏಳುವರೆಂದು ಕಲಿಸುವ ಯೆಹೋವನು ನಿಶ್ಚಯವಾಗಿಯೂ, “ಎಲ್ಲರಿಗಿಂತ ಅತ್ಯಂತ ಮಹಾನ್ ಬೋಧಕನು.” (ಯೋಬ 36:22, ಟುಡೇಸ್ ಇಂಗ್ಲಿಷ್ ವರ್ಷನ್) ತಂದೆಯ ಕಲಿಸುವಿಕೆಯ ಕಡೆಗೆ ಗಮನವನ್ನು ನಿರ್ದೇಶಿಸುತ್ತಾ, ಯೇಸು ಮುಂದೆ ಹೇಳುವುದು: “ಅವರೆಲ್ಲರು ದೇವರಿಂದ [“ಯೆಹೋವನಿಂದ,” NW] ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ.”—ಯೋಹಾನ 6:45.
3. ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವೆವು?
3 “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು,” ಎಂದು ಯಾರ ಕುರಿತು ಪ್ರವಾದಿಯಾದ ಯೆಶಾಯನು ಬರೆದನೊ, ಅವರಲ್ಲಿ ಒಬ್ಬರಾಗಿರುವುದು ಖಂಡಿತವಾಗಿಯೂ ಒಂದು ಸುಯೋಗವಾಗಿರುವುದು. (ಯೆಶಾಯ 54:13) ಅವರಲ್ಲಿ ನಾವು ಒಬ್ಬರಾಗಿರಸಾಧ್ಯವೊ? ಯಾರು ಆತನಿಗೆ ಪುತ್ರರಂತೆ ಇದ್ದು ಆತನ ಬೋಧನೆಗಳನ್ನು ಪಡೆದಿದ್ದಾರೆ? ಯೆಹೋವನ ಆಶೀರ್ವಾದವನ್ನು ಪಡೆಯಲು ನಮಗೆ ಗೊತ್ತಿರಬೇಕಾದ ಮತ್ತು ಅದಕ್ಕನುಗುಣವಾಗಿ ವರ್ತಿಸಬೇಕಾದ ಆತನ ಅತಿ ಮುಖ್ಯವಾದ ಬೋಧನೆಗಳಾವುವು? ಪೂರ್ವದಲ್ಲಿ ಯೆಹೋವನು ಹೇಗೆ ಕಲಿಸಿದನು ಮತ್ತು ಇಂದು ಆತನು ಅದೇ ವಿಧದಲ್ಲಿ ಕಲಿಸುತ್ತಾನೊ? ಇವು, ನಾವು ಪರಿಗಣಿಸಲಿರುವ ಪ್ರಶ್ನೆಗಳಾಗಿವೆ.
ತಂದೆ, ಬೋಧಕ, ಪತಿ
4. ಯೆಹೋವನ ಪುತ್ರರಲ್ಲಿ ಆತನ ಬೋಧನೆಗಳನ್ನು ಪ್ರಥಮವಾಗಿ ಪಡೆದವರು ಯಾರಾಗಿದ್ದರು?
4 ಯೆಹೋವನು ತನ್ನ ಏಕಜಾತ ಪುತ್ರ, ಮಾನವಪೂರ್ವ ಯೇಸುವನ್ನು ಸೃಷ್ಟಿಸಿದಾಗ, ಆತನು ಪ್ರಥಮವಾಗಿ ತಂದೆಯೂ ಬೋಧಕನೂ ಆದನು. ಈತನನ್ನು “ವಾಕ್ಯ” ವೆಂದು ಕರೆಯಲಾಗಿದೆ, ಯಾಕೆಂದರೆ ಈತನು ಯೆಹೋವನ ಮುಖ್ಯ ವದನಕನು. (ಯೋಹಾನ 1:1, 14; 3:16) ಆ ವಾಕ್ಯ “[ತಂದೆಯ] ಪಕ್ಕದಲ್ಲಿ ಒಬ್ಬ ಕುಶಲ ಶಿಲ್ಪಿಯಂತೆ” ಕೆಲಸ ಮಾಡಿ, ತನ್ನ ತಂದೆಯ ಕಲಿಸುವಿಕೆಯಿಂದ ಚೆನ್ನಾಗಿ ಕಲಿತನು. (ಜ್ಞಾನೋಕ್ತಿ 8:22, 30, NW) ವಾಸ್ತವದಲ್ಲಿ ಇತರ ಎಲ್ಲ ವಿಷಯಗಳನ್ನು—ಆತ್ಮಿಕ “ದೇವಕುಮಾರ” ರನ್ನು ಸೇರಿಸಿ, ತಂದೆಯು ಅವನ ಮುಖಾಂತರ ಸೃಷ್ಟಿಸಿದ ನಿಯೋಗಿ ಅಥವಾ ಸಾಧನ ಅವನಾದನು. ದೇವರಿಂದ ಕಲಿಸಲ್ಪಡಲು ಅವರೆಷ್ಟು ಹರ್ಷಿಸಿದ್ದಿರಬೇಕು! (ಯೋಬ 1:6; 2:1; 38:7; ಕೊಲೊಸ್ಸೆ 1:15-17) ತದನಂತರ ಮೊದಲನೆಯ ಮಾನವನಾದ ಆದಾಮನು ಸೃಷ್ಟಿಸಲ್ಪಟ್ಟನು. ಅವನು ಸಹ “ದೇವರ ಮಗ” ನಾಗಿದ್ದನು ಮತ್ತು ಯೆಹೋವನು ಅವನಿಗೆ ಉಪದೇಶ ನೀಡಿದನೆಂದು ಬೈಬಲ್ ಪ್ರಕಟಿಸುತ್ತದೆ.—ಲೂಕ 3:38; ಆದಿಕಾಂಡ 2:7, 16, 17.
5. ಯಾವ ಅಮೂಲ್ಯ ಸುಯೋಗವನ್ನು ಆದಾಮನು ಕಳೆದುಕೊಂಡನು, ಆದರೂ ಯೆಹೋವನು ಯಾರಿಗೆ ಕಲಿಸಿದನು ಮತ್ತು ಏಕೆ?
5 ದುಃಖಕರವಾಗಿ, ಆದಾಮನು ತನ್ನ ಉದ್ದೇಶಪೂರ್ವಕ ಅವಿಧೇಯತೆಯಿಂದಾಗಿ, ದೇವರ ಮಗನಾಗಿ ಮುಂದುವರಿಯುವ ಸುಯೋಗವನ್ನು ಕಳೆದುಕೊಂಡನು. ಆದುದರಿಂದ ಅವನ ವಂಶಜರು ಕೇವಲ ಜನನದ ಆಧಾರದ ಮೇಲೆ ದೇವರ ಪುತ್ರರಾಗಿರುವ ಸಂಬಂಧವು ತಮ್ಮದೆಂದು ಪ್ರತಿಪಾದಿಸಲು ಸಾಧ್ಯವಿರಲಿಲ್ಲ. ಆದರೂ, ಆತನ ಕಡೆಗೆ ಮಾರ್ಗದರ್ಶನಕ್ಕಾಗಿ ನೋಡಿದ ಅಪರಿಪೂರ್ಣ ಮಾನವರಿಗೆ ಯೆಹೋವನು ಕಲಿಸಿದನು. ಉದಾಹರಣೆಗೆ ನೋಹನು, “ದೇವರೊಂದಿಗೆ ಅನ್ಯೋನ್ಯವಾಗಿ ನಡೆದ” “ನೀತಿವಂತನು” ಎಂದು ರುಜುವಾದನು; ಆದುದರಿಂದ ಯೆಹೋವನು ನೋಹನಿಗೆ ಉಪದೇಶ ನೀಡಿದನು. (ಆದಿಕಾಂಡ 6:9, 13–ಆದಿಕಾಂಡ 6:13 ರಿಂದ 7:5) ತನ್ನ ವಿಧೇಯತೆಯ ಮೂಲಕ ತಾನು “ದೇವರ [“ಯೆಹೋವನ,” NW] ಸ್ನೇಹಿತ” ನೆಂದು ಅಬ್ರಹಾಮನು ರುಜುಮಾಡಿದನು, ಆದುದರಿಂದ ಅವನು ಸಹ ಯೆಹೋವನಿಂದ ಕಲಿಸಲ್ಪಟ್ಟನು.—ಯಾಕೋಬ 2:23; ಆದಿಕಾಂಡ 12:1-4; 15:1-8; 22:1, 2.
6. ತನ್ನ “ಪುತ್ರ” ರಂತೆ ಯೆಹೋವನು ಯಾರನ್ನು ವೀಕ್ಷಿಸಿದನು, ಮತ್ತು ಅವರಿಗೆ ಆತನು ಯಾವ ರೀತಿಯ ಬೋಧಕನಾಗಿದ್ದನು?
6 ಬಹಳ ಸಮಯದ ನಂತರ, ಮೋಶೆಯ ದಿನದಲ್ಲಿ ಯೆಹೋವನು ಇಸ್ರಾಯೇಲ್ ರಾಷ್ಟ್ರದೊಂದಿಗೆ ಒಂದು ಒಡಂಬಡಿಕೆಯ ಸಂಬಂಧದೊಳಗೆ ಪ್ರವೇಶಿಸಿದನು. ಫಲಸ್ವರೂಪವಾಗಿ ಆ ರಾಷ್ಟವ್ರು, ಆತನ ಆರಿಸಿದ ಜನಾಂಗವಾಯಿತು ಮತ್ತು ಆತನ “ಮಗ” ನೆಂಬಂತೆ ವೀಕ್ಷಿಸಲ್ಪಟ್ಟಿತು. ದೇವರು ಹೇಳಿದ್ದು: “ಇಸ್ರಾಯೇಲ್ಜನವು ನನಗೆ ಚೊಚ್ಚಲಮಗನಂತೆ ಇದೆ.” (ವಿಮೋಚನಕಾಂಡ 4:22, 23; 19:3-6; ಧರ್ಮೋಪದೇಶಕಾಂಡ 14:1, 2) ಒಡಂಬಡಿಕೆಯ ಆ ಸಂಬಂಧದ ಆಧಾರದ ಮೇಲೆ, ಇಸ್ರಾಯೇಲ್ಯರಿಗೆ, ಪ್ರವಾದಿಯಾದ ಯೆಶಾಯನ ಮೂಲಕ ದಾಖಲಿಸಲ್ಪಟ್ಟಂತೆ ಹೀಗೆ ಹೇಳಸಾಧ್ಯವಿತ್ತು: “ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ.” (ಯೆಶಾಯ 63:16) ಯೆಹೋವನು, ತಂದೆಯೋಪಾದಿ ತನ್ನ ಜವಾಬ್ದಾರಿಯನ್ನು ವಹಿಸಿಕೊಂಡನು ಮತ್ತು ಇಸ್ರಾಯೇಲ್ ಎಂಬ ತನ್ನ ಮಕ್ಕಳಿಗೆ ಪ್ರೀತಿಯಿಂದ ಕಲಿಸಿದನು. (ಕೀರ್ತನೆ 71:17; ಯೆಶಾಯ 48:17, 18) ವಾಸ್ತವವಾಗಿ, ಅವರು ಅವಿಶ್ವಾಸಿಗಳಾದಾಗ, ಕರುಣೆಯಿಂದ ಆತನು ಅವರಲ್ಲಿ ಬೇಡಿಕೊಂಡದ್ದು: “ಭ್ರಷ್ಟರಾದ ಮಕ್ಕಳೇ, ತಿರುಗಿಕೊಳ್ಳಿರಿ.”—ಯೆರೆಮೀಯ 3:14.
7. ಯೆಹೋವನೊಂದಿಗೆ ಯಾವ ರೀತಿಯ ಸಂಬಂಧವನ್ನು ಇಸ್ರಾಯೇಲ್ ಹೊಂದಿತ್ತು?
7 ಇಸ್ರಾಯೇಲ್ನೊಂದಿಗೆ ಒಡಂಬಡಿಕೆಯ ಸಂಬಂಧದ ಪರಿಣಾಮವಾಗಿ, ಯೆಹೋವನು ಸಾಂಕೇತಿಕವಾಗಿ ಆ ರಾಷ್ಟ್ರದ ಪತಿಯೂ ಆದನು ಮತ್ತು ಅದು ಆತನ ಸಾಂಕೇತಿಕ ಪತ್ನಿಯಾಯಿತು. ಆಕೆಯ ಕುರಿತು ಪ್ರವಾದಿಯಾದ ಯೆಶಾಯನು ಬರೆದುದು: “ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ.” (ಯೆಶಾಯ 54:5; ಯೆರೆಮೀಯ 31:32) ಯೆಹೋವನು ಪತಿಯೋಪಾದಿ ತನ್ನ ಪಾತ್ರವನ್ನು ಗೌರವಾರ್ಹವಾಗಿ ನೆರವೇರಿಸಿದನಾದರೂ, ಇಸ್ರಾಯೇಲ್ ರಾಷ್ಟವ್ರು ನಿಷ್ಠೆಯಿಲ್ಲದ ಪತ್ನಿಯಾಯಿತು. ಯೆಹೋವನು ಹೇಳಿದ್ದು: “ಇಸ್ರಾಯೇಲ್ ವಂಶದವರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹವನ್ನು ಮಾಡಿಯೇ ಇದ್ದೀರಿ.” (ಯೆರೆಮೀಯ 3:20) ಯೆಹೋವನು ದ್ರೋಹಿಯಾದ ತನ್ನ ಪತ್ನಿಯ ಪುತ್ರರಿಗೆ ಮನವೆಮಾಡುತ್ತಾ ಇದ್ದನು; ಅವರ “ಬೋಧಕ” ನಾಗಿರುವುದನ್ನು ಆತನು ಮುಂದುವರಿಸಿದನು.—ಯೆಶಾಯ 30:20; 2 ಪೂರ್ವಕಾಲವೃತ್ತಾಂತ 36:15.
8. ಒಂದು ರಾಷ್ಟ್ರದಂತೆ ಇಸ್ರಾಯೇಲ್ ಯೆಹೋವನಿಂದ ತಿರಸ್ಕರಿಸಲ್ಪಟ್ಟಿತಾದರೂ, ಯಾವ ಸೂಚಿತರೂಪದ ಸಾಂಕೇತಿಕ ಪತ್ನಿ ಆತನಿಗೆ ಇನ್ನೂ ಇದ್ದಾಳೆ?
8 ತನ್ನ ಮಗನಾದ ಯೇಸು ಕ್ರಿಸ್ತನನ್ನು ಇಸ್ರಾಯೇಲ್ ತಿರಸ್ಕರಿಸಿ ಕೊಂದಾಗ, ದೇವರು ಅಂತಿಮವಾಗಿ ಆಕೆಯನ್ನು ತಿರಸ್ಕರಿಸಿದನು. ಆದುದರಿಂದ ಆ ಯೆಹೂದಿ ರಾಷ್ಟವ್ರು ಇನ್ನು ಮುಂದೆ ಆತನಿಗೆ ಒಬ್ಬ ಸಾಂಕೇತಿಕ ಪತ್ನಿಯಾಗಿರಲಿಲ್ಲ, ಇಲ್ಲವೇ ಆತನು ಆಕೆಯ ಮೊಂಡು ಪುತ್ರರಿಗೆ ತಂದೆಯಾಗಲಿ ಬೋಧಕನಾಗಲಿ ಆಗಿರಲಿಲ್ಲ. (ಮತ್ತಾಯ 23:37, 38) ಹಾಗಿದ್ದರೂ, ಇಸ್ರಾಯೇಲ್ ಕೇವಲ ಒಬ್ಬ ಪ್ರತಿನಿಧಿರೂಪದ ಅಥವಾ ಸಾಂಕೇತಿಕ ಪತ್ನಿಯಾಗಿತ್ತು. ಅಪೊಸ್ತಲ ಪೌಲನು ಯೆಶಾಯ 54:1ನ್ನು ಉದ್ಧರಿಸಿದನು. ಅದು ‘ಗಂಡನುಳ್ಳವಳಾದ’ ಸ್ವಾಭಾವಿಕ ಇಸ್ರಾಯೇಲ್ ರಾಷ್ಟ್ರದಿಂದ ಬೇರೆಯಾದ ಹಾಗೂ ಭಿನ್ನವಾದ ಒಬ್ಬ ‘ಬಂಜೆಯ’ ಕುರಿತು ಮಾತಾಡುತ್ತದೆ. ಅಭಿಷಿಕ್ತ ಕ್ರೈಸ್ತರು “ಮೇಲಣ ಯೆರೂಸಲೇಮ್” ಎಂದು ಅವನು ಕರೆಯುವ “ಬಂಜೆ”ಯ ಮಕ್ಕಳಾಗಿದ್ದಾರೆಂದು ಪೌಲನು ಪ್ರಕಟಿಸುತ್ತಾನೆ. ಈ ಸೂಚಿತರೂಪದ ಸಾಂಕೇತಿಕ ಸ್ತ್ರೀ, ದೇವರ ಆತ್ಮ ಜೀವಿಗಳ ಸ್ವರ್ಗೀಯ ಸಂಸ್ಥೆಯನ್ನು ಒಳಗೊಳ್ಳತ್ತಾಳೆ.—ಗಲಾತ್ಯ 4:26, 27.
9. (ಎ) ‘ನಿಮ್ಮ ಪುತ್ರರು ಯೆಹೋವನಿಂದ ಕಲಿಸಲ್ಪಡುವರು’ ಎಂಬುದರ ಕುರಿತು ಯೇಸು ಮಾತಾಡಿದಾಗ, ಅವನು ಯಾರನ್ನು ಸೂಚಿಸಿ ಮಾತಾಡಿದನು? (ಬಿ) ಯಾವ ಆಧಾರದ ಮೇಲೆ ಜನರು ದೇವರ ಆತ್ಮಿಕ ಪುತ್ರರಾಗುತ್ತಾರೆ?
9 ಹೀಗೆ ಕಪೆರ್ನೌಮಿನ ಸಭಾಮಂದಿರದಲ್ಲಿ ಯೇಸು, “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು” ಎಂಬ ಯೆಶಾಯನ ಪ್ರವಾದನೆಯನ್ನು ಉದ್ಧರಿಸಿದಾಗ, ದೇವರ ಪತ್ನಿಸದೃಶ ಸ್ವರ್ಗೀಯ ಸಂಸ್ಥೆಯಾದ “ಮೇಲಣ ಯೆರೂಸಲೇಮ್”ನ “ಪುತ್ರ” ರಾಗಲಿರುವವರ ಕುರಿತು ಮಾತಾಡುತ್ತಿದ್ದನು. ಸ್ವರ್ಗದಿಂದ ಬಂದ ದೇವರ ಪ್ರತಿನಿಧಿಯಾದ ಯೇಸು ಕ್ರಿಸ್ತನ ಬೋಧನೆಗಳನ್ನು ಸ್ವೀಕರಿಸುವ ಮೂಲಕ, ಆ ಯೆಹೂದಿ ಕೇಳುಗರು, ದೇವರ ಈ ಹಿಂದಿನ ಸ್ವರ್ಗೀಯ ಬಂಜೆಯ ಮಕ್ಕಳಾಗಿ ಪರಿಣಮಿಸಿ “ಒಂದು ಪವಿತ್ರ ರಾಷ್ಟ್ರವನ್ನು” “ದೇವರ ಆತ್ಮಿಕ ಇಸ್ರಾಯೇಲನ್ನು” ರೂಪಿಸಸಾಧ್ಯವಿತ್ತು. (1 ಪೇತ್ರ 2:9, 10; ಗಲಾತ್ಯ 6:16, NW) ದೇವರ ಆತ್ಮಿಕ ಪುತ್ರರಾಗಲು, ಯೇಸು ದೊರಕುವಂತೆ ಮಾಡಿದ ಮಹತ್ತರವಾದ ಅವಕಾಶವನ್ನು ವರ್ಣಿಸುತ್ತಾ, ಅಪೊಸ್ತಲ ಯೋಹಾನನು ಬರೆದುದು: “ಆತನು ತನ್ನ ಸ್ವಾಸ್ಥ್ಯಕ್ಕೆ ಬಂದನು; ಆದರೆ ಸ್ವಂತಜನರು ಆತನನ್ನು ಅಂಗೀಕರಿಸಲಿಲ್ಲ. ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರಕೊಟ್ಟನು.”—ಯೋಹಾನ 1:11, 12.
ಯೆಹೋವನ ಪ್ರಮುಖ ಬೋಧನೆಗಳು
10. ಏದೆನ್ನಲ್ಲಿ ದಂಗೆಯಾದ ಕೂಡಲೆ, “ಸಂತಾನ”ದ ಕುರಿತು ಯೆಹೋವನು ಏನನ್ನು ಕಲಿಸಿದನು ಮತ್ತು ಈ ಸಂತಾನ ಯಾರಾಗಿ ಪರಿಣಮಿಸಿದನು?
10 ಒಬ್ಬ ಪ್ರೀತಿಯ ತಂದೆಯೋಪಾದಿ ಯೆಹೋವನು, ತನ್ನ ಉದ್ದೇಶಗಳನ್ನು ತನ್ನ ಮಕ್ಕಳಿಗೆ ತಿಳಿಯಪಡಿಸುತ್ತಾನೆ. ಹೀಗೆ ಒಬ್ಬ ದಂಗೆಕೋರ ದೇವದೂತನು ಪ್ರಥಮ ಮಾನವ ಜೋಡಿಯನ್ನು ಅವಿಧೇಯವಾಗುವಂತೆ ಪ್ರೇರೇಪಿಸಿದಾಗ, ಭೂಮಿಯನ್ನು ಒಂದು ಪ್ರಮೋದವನವಾಗಿ ಮಾಡುವ ಆತನ ಉದ್ದೇಶವನ್ನು ನೆರವೇರಿಸಲು ತಾನು ಏನು ಮಾಡುವೆನೆಂಬುದರ ಕುರಿತು ಯೆಹೋವನು ಕೂಡಲೆ ಅವರಿಗೆ ತಿಳಿಯಪಡಿಸಿದನು. “ಪುರಾತನ ಸರ್ಪ” ವಾಗಿರುವ ಪಿಶಾಚನಾದ ಸೈತಾನನ “ಮತ್ತು ಸ್ತ್ರೀ”ಯ ನಡುವೆ ದ್ವೇಷವನ್ನುಂಟುಮಾಡುವೆನೆಂದು ಆತನು ಹೇಳಿದನು. ಸ್ತ್ರೀಯ “ಸಂತಾನವು” ಸೈತಾನನನ್ನು ಮಾರಕವಾಗಿ “ತಲೆಯಲ್ಲಿ” ಜಜ್ಜುವುದೆಂದು ಆತನು ತದನಂತರ ವಿವರಿಸಿದನು. (ಆದಿಕಾಂಡ 3:1-6, 15; ಪ್ರಕಟನೆ 12:9; 20:9, 10) ನಾವು ಗಮನಿಸಿರುವಂತೆ, “ಮೇಲಣ ಯೆರೂಸಲೇಮ್” ಎಂಬುದಾಗಿ ತದನಂತರ ಗುರುತಿಸಲ್ಪಟ್ಟ ಆ ಸ್ತ್ರೀಯು, ದೇವರ ಆತ್ಮ ಜೀವಿಗಳ ಸ್ವರ್ಗೀಯ ಸಂಸ್ಥೆಯಾಗಿದೆ. ಆದರೆ ಆಕೆಯ “ಸಂತಾನ” ಯಾರು? ಅವನು ಸ್ವರ್ಗದಿಂದ ಕಳುಹಿಸಲ್ಪಟ್ಟ ಮತ್ತು ಕಟ್ಟಕಡೆಗೆ ಸೈತಾನನನ್ನು ನಾಶಪಡಿಸಲಿರುವ ದೇವರ ಮಗನಾದ ಯೇಸು ಕ್ರಿಸ್ತನು.—ಗಲಾತ್ಯ 4:4; ಇಬ್ರಿಯ 2:14; 1 ಯೋಹಾನ 3:8.
11, 12. “ಸಂತಾನ”ದ ಕುರಿತಾದ ತನ್ನ ಪ್ರಮುಖ ಬೋಧನೆಯನ್ನು ಯೆಹೋವನು ಹೇಗೆ ವಿಸ್ತರಿಸಿದನು?
11 “ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ . . . ಅಸಂಖ್ಯವಾಗಿ ಮಾಡುವೆನು; . . . ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು,” ಎಂದು ಯೆಹೋವನು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ, “ಸಂತಾನ”ದ ಕುರಿತಾದ ಈ ಪ್ರಮುಖ ಬೋಧನೆಯನ್ನು ಆತನು ವಿಸ್ತರಿಸಿದನು. (ಆದಿಕಾಂಡ 22:17, 18) ಯೇಸು ಕ್ರಿಸ್ತನು ಅಬ್ರಹಾಮನ ವಾಗ್ದತ್ತ ಸಂತಾನವೆಂದು, ಆದರೆ ಇತರರೂ ಆ “ಸಂತಾನ”ದ ಭಾಗವಾಗುವರೆಂದು ವಿವರಿಸಲು ಯೆಹೋವನು ಅಪೊಸ್ತಲ ಪೌಲನನ್ನು ಉಪಯೋಗಿಸಿದನು. ಪೌಲನು ಬರೆದುದು: “ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.”—ಗಲಾತ್ಯ 3:16, 29.
12 ಸಂತಾನವಾದ ಕ್ರಿಸ್ತನು ಯೆಹೂದದ ರಾಜಯೋಗ್ಯ ವಂಶಪರಂಪರೆಯಿಂದ ಬರುವನೆಂದು ಮತ್ತು ಅವನಿಗೆ “ಅನ್ಯಜನಗಳೂ ವಿಧೇಯರಾಗಿರುವರು” ಎಂದು ಸಹ ಯೆಹೋವನು ಪ್ರಕಟಿಸಿದನು. (ಆದಿಕಾಂಡ 49:10) ಯೆಹೂದ ಕುಲದ ರಾಜ ದಾವೀದನ ಕುರಿತು ಯೆಹೋವನು ವಾಗ್ದಾನಿಸಿದ್ದು: “ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು. ಅವನ ಸಿಂಹಾಸನವು ಆಕಾಶವಿರುವ ವರೆಗೂ ಇರುವದು. ಅವನ ಸಂತತಿಯು ಶಾಶ್ವತವಾಗಿ ಇರುವದು; ಅವನ ಸಿಂಹಾಸನವು ಸೂರ್ಯನಂತೆ ನನ್ನ ಎದುರಿನಲ್ಲಿ” ಇರುವುದು. (ಕೀರ್ತನೆ 89:3, 4, 29, 36) ಯೇಸುವಿನ ಜನನವನ್ನು ಗಬ್ರಿಯೇಲ ದೇವದೂತನು ಪ್ರಕಟಿಸಿದಾಗ, ಮಗುವು ದೇವರ ನಿಯಮಿತ ಅರಸನು, ದಾವೀದನ ಸಂತಾನವೆಂದು ಅವನು ವಿವರಿಸಿದನು. ಗಬ್ರಿಯೇಲನು ಹೇಳಿದ್ದು: “ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. . . . ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.”—ಲೂಕ 1:32, 33; ಯೆಶಾಯ 9:6, 7; ದಾನಿಯೇಲ 7:13, 14.
13. ಯೆಹೋವನ ಆಶೀರ್ವಾದವನ್ನು ಪಡೆಯಲು, ಆತನ ಬೋಧನೆಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
13 ಯೆಹೋವನ ಆಶೀರ್ವಾದವನ್ನು ಪಡೆಯುವ ಸಲುವಾಗಿ, ದೇವರ ರಾಜ್ಯದ ಕುರಿತ ಈ ಪ್ರಮುಖ ಬೋಧನೆಯನ್ನು ನಾವು ತಿಳಿಯಬೇಕು ಮತ್ತು ಅದಕ್ಕನುಸಾರ ಕಾರ್ಯಮಾಡಬೇಕು. ಯೇಸು ಸ್ವರ್ಗದಿಂದ ಇಳಿದು ಬಂದನೆಂದು, ಅವನು ದೇವರ ನಿಯಮಿತ ಅರಸನು, ಭೂಮಿಯ ಮೇಲೆ ಪ್ರಮೋದವನದ ಪುನಃಸ್ಥಾಪನೆಯ ಮೇಲ್ವಿಚಾರಣೆ ಮಾಡುವ ರಾಜಯೋಗ್ಯ ಸಂತಾನವೆಂದು, ಮತ್ತು ಅವನು ಸತ್ತವರನ್ನು ಪುನರುತ್ಥಾನಗೊಳಿಸುವನೆಂದು ನಾವು ನಂಬಬೇಕು. (ಲೂಕ 23:42, 43; ಯೋಹಾನ 18:33-37) ಕಪೆರ್ನೌಮಿನಲ್ಲಿ ಸತ್ತವರನ್ನು ಪುನರುತ್ಥಾನಗೊಳಿಸುವುದರ ಕುರಿತು ಯೇಸು ಮಾತಾಡಿದಾಗ, ಅವನು ಸತ್ಯವನ್ನು ಮಾತಾಡಿದನೆಂದು ಯೆಹೂದ್ಯರಿಗೆ ಸುವ್ಯಕ್ತವಾಗಿರಬೇಕಾಗಿತ್ತು. ಯಾಕೆಂದರೆ ಕೇವಲ ಕೆಲವೇ ವಾರಗಳ ಮುಂಚೆ, ಪ್ರಾಯಶಃ ಅಲ್ಲಿ ಕಪೆರ್ನೌಮಿನಲ್ಲಿಯೆ, ಅವನು ಸಭಾಮಂದಿರದ ಒಬ್ಬ ಅಧ್ಯಕ್ಷ ಅಧಿಕಾರಿಯ 12 ವರ್ಷ ಪ್ರಾಯದ ಮಗಳನ್ನು ಪುನರುತ್ಥಾನಗೊಳಿಸಿದ್ದನು! (ಲೂಕ 8:49-56) ಆತನ ರಾಜ್ಯದ ಸಂಬಂಧದಲ್ಲಿ ನಿರೀಕ್ಷೆಯನ್ನು ಪ್ರೇರಿಸುವ ಯೆಹೋವನ ಬೋಧನೆಯನ್ನು ನಂಬಲು ಮತ್ತು ಅದಕ್ಕನುಗುಣವಾಗಿ ಕಾರ್ಯಮಾಡಲು ಖಂಡಿತವಾಗಿ ನಮಗೂ ಸಾಕಷ್ಟು ಕಾರಣವಿದೆ!
14, 15. (ಎ) ಯೆಹೋವನ ರಾಜ್ಯವು ಯೇಸುವಿಗೆ ಎಷ್ಟು ಪ್ರಾಮುಖ್ಯವಾಗಿದೆ? (ಬಿ) ಯೆಹೋವನ ರಾಜ್ಯದ ಕುರಿತು ನಾವು ಏನನ್ನು ತಿಳಿದುಕೊಳ್ಳಬೇಕು ಮತ್ತು ವಿವರಿಸಲು ಶಕ್ತರಾಗಿರಬೇಕು?
14 ಯೆಹೋವನ ರಾಜ್ಯದ ಕುರಿತು ಕಲಿಸುವುದಕ್ಕೆ ಯೇಸು ತನ್ನ ಭೂಜೀವಿತವನ್ನು ಸಮರ್ಪಿಸಿದನು. ಅದನ್ನು ತನ್ನ ಶುಶ್ರೂಷೆಯ ಮುಖ್ಯ ವಿಷಯವನ್ನಾಗಿ ಮಾಡಿದನು, ಮತ್ತು ಅದಕ್ಕಾಗಿ ಪ್ರಾರ್ಥಿಸುವಂತೆ ಸಹ ತನ್ನ ಹಿಂಬಾಲಕರಿಗೆ ಉಪದೇಶ ನೀಡಿದನು. (ಮತ್ತಾಯ 6:9, 10; ಲೂಕ 4:43) ಸ್ವಾಭಾವಿಕ ಯೆಹೂದ್ಯರು “ರಾಜ್ಯದ ಪುತ್ರ” ರಾಗುವ ಸರದಿಯಲಿದ್ದರು ಆದರೆ ನಂಬಿಕೆಯ ಕೊರತೆಯಿಂದಾಗಿ, ಅವರಲ್ಲಿ ಅನೇಕರು ಆ ಸುಯೋಗವನ್ನು ಪಡೆಯಲು ವಿಫಲರಾದರು. (ಮತ್ತಾಯ 8:12, NW; 21:43) ಒಂದು “ಚಿಕ್ಕ ಹಿಂಡು” ಮಾತ್ರ “ರಾಜ್ಯದ ಪುತ್ರ” ರಾಗುವ ಸುಯೋಗವನ್ನು ಪಡೆಯುತ್ತದೆಂದು ಯೇಸು ಪ್ರಕಟಿಸಿದನು. ಈ “ಪುತ್ರರು” ಅವನ ಸ್ವರ್ಗೀಯ ರಾಜ್ಯದಲ್ಲಿ “ಕ್ರಿಸ್ತನೊಂದಿಗೆ ಬಾಧ್ಯ” ರಾಗುತ್ತಾರೆ.—ಲೂಕ 12:32; ಮತ್ತಾಯ 13:38; ರೋಮಾಪುರ 8:14-17; ಯಾಕೋಬ 2:5.
15 ಭೂಮಿಯ ಮೇಲೆ ಆಳಿಕೆ ನಡೆಸಲು ಕ್ರಿಸ್ತನು ಎಷ್ಟು ಜನ ರಾಜ್ಯದ ಬಾಧ್ಯಸ್ಥರನ್ನು ತನ್ನೊಂದಿಗೆ ಸ್ವರ್ಗಕ್ಕೆ ಒಯ್ಯುವನು? ಬೈಬಲಿಗನುಸಾರ ಕೇವಲ 1,44,000 ಮಂದಿ. (ಯೋಹಾನ 14:2, 3; 2 ತಿಮೊಥೆಯ 2:12; ಪ್ರಕಟನೆ 5:10; 14:1-3; 20:4) ಆದರೆ ಆ ರಾಜ್ಯಾಳಿಕೆಯ ಭೂಪ್ರಜೆಗಳಾಗಿರುವ “ಬೇರೆ ಕುರಿಗಳು” ತನಗಿದ್ದವೆಂದು ಯೇಸು ಹೇಳಿದನು. ಇವರು ಒಂದು ಪ್ರಮೋದವನ ಭೂಮಿಯ ಮೇಲೆ ಸದಾಕಾಲ ಪರಿಪೂರ್ಣ ಆರೋಗ್ಯ ಮತ್ತು ಶಾಂತಿಯನ್ನು ಅನುಭವಿಸುವರು. (ಯೋಹಾನ 10:16; ಕೀರ್ತನೆ 37:29; ಪ್ರಕಟನೆ 21:3, 4) ರಾಜ್ಯದ ಕುರಿತಾದ ಯೆಹೋವನ ಬೋಧನೆಯನ್ನು ನಾವು ತಿಳಿದುಕೊಳ್ಳಬೇಕು ಮತ್ತು ವಿವರಿಸಲು ಶಕ್ತರಾಗಿರಬೇಕು.
16. ಯೆಹೋವನ ಯಾವ ಪ್ರಮುಖ ಬೋಧನೆಯನ್ನು ನಾವು ಕಲಿತು ಆಚರಿಸುವ ಅಗತ್ಯವಿದೆ?
16 ಯೆಹೋವನ ಇನ್ನೊಂದು ಪ್ರಮುಖ ಬೋಧನೆಯನ್ನು ಅಪೊಸ್ತಲ ಪೌಲನು ಗುರುತಿಸಿದನು. ಅವನು ಹೇಳಿದ್ದು: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿ . . . ಇದ್ದೀರಿ.” (1 ಥೆಸಲೊನೀಕ 4:9) ಯೆಹೋವನನ್ನು ಮೆಚ್ಚಿಸಲು ಅಂತಹ ಪ್ರೀತಿಯನ್ನು ನಾವು ಪ್ರದರ್ಶಿಸಬೇಕು. “ದೇವರು ಪ್ರೀತಿಸ್ವರೂಪಿಯು,” ಎಂದು ಬೈಬಲ್ ಹೇಳುತ್ತದೆ, ಮತ್ತು ಪ್ರೀತಿಯನ್ನು ತೋರಿಸುವುದರಲ್ಲಿ ನಾವು ಆತನ ಉದಾಹರಣೆಯನ್ನು ಅನುಕರಿಸಬೇಕು. (1 ಯೋಹಾನ 4:8; ಎಫೆಸ 5:1, 2) ವಿಷಾದಕರವಾಗಿ, ದೇವರು ನಮಗೆ ಪ್ರೀತಿಸುವಂತೆ ಕಲಿಸುವ ವಿಧದಲ್ಲಿ ತಮ್ಮ ಜೊತೆ ಮಾನವರನ್ನು ಪ್ರೀತಿಸುವಂತೆ ಕಲಿಯಲು ಹೆಚ್ಚಿನ ಜನರು ಶೋಚನೀಯವಾಗಿ ತಪ್ಪಿಹೋಗಿದ್ದಾರೆ. ನಮ್ಮ ಕುರಿತೇನು? ಯೆಹೋವನ ಈ ಬೋಧನೆಗೆ ನಾವು ಪ್ರತಿಕ್ರಿಯಿಸಿದ್ದೇವೊ?
17. ಯಾರ ಮನೋಭಾವವನ್ನು ನಾವು ಅನುಕರಿಸತಕ್ಕದ್ದು?
17 ಯೆಹೋವನ ಎಲ್ಲ ಬೋಧನೆಗಳನ್ನು ನಾವು ಗ್ರಹಿಸುವವರಾಗಿರುವುದು ಪ್ರಾಮುಖ್ಯ. ನಮ್ಮ ಮನೋಭಾವನೆಯು, ಹೀಗೆಂದು ಬರೆದ ಬೈಬಲ್ ಕೀರ್ತನೆಗಾರರಂತಿರಲಿ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು.” “ನಿನ್ನ ನಿಬಂಧನೆಗಳನ್ನು ನನಗೆ ಕಲಿಸು. ಉತ್ಕೃಷ್ಟವಾದ ಜ್ಞಾನವಿವೇಕಗಳನ್ನು ನನಗೆ ಹೇಳಿಕೊಡು . . . ನಿನ್ನ ವಿಧಿಗಳನ್ನು ಕಲಿಸು.” (ಕೀರ್ತನೆ 25:4, 5; 119:12, 66, 108) ನಿಮ್ಮ ಭಾವನೆಗಳು ಕೀರ್ತನೆಗಾರರ ಭಾವನೆಗಳಂತೆಯೇ ಇರುವಲ್ಲಿ, ನೀವು ಯೆಹೋವನಿಂದ ಕಲಿಸಲ್ಪಟ್ಟ ಜನರ ಒಂದು ದೊಡ್ಡ ಸಮೂಹದಲ್ಲಿ ಒಬ್ಬರಾಗಿರಸಾಧ್ಯವಿದೆ.
ಕಲಿಸಲ್ಪಟ್ಟವರ ಮಹಾ ಸಮೂಹ
18. ನಮ್ಮ ಸಮಯದಲ್ಲಿ ಏನು ಸಂಭವಿಸುವುದೆಂದು ಪ್ರವಾದಿಯಾದ ಯೆಶಾಯನು ಮುಂತಿಳಿಸಿದನು?
18 ನಮ್ಮ ಸಮಯದಲ್ಲಿ ಏನು ಸಂಭವಿಸುವುದೆಂದು ಪ್ರವಾದಿಯಾದ ಯೆಶಾಯನು ಮುಂತಿಳಿಸಿದನು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; . . . ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು . . . ಎಂದು ಹೇಳುವರು.” (ಯೆಶಾಯ 2:2, 3; ಮೀಕ 4:2, ಓರೆಅಕ್ಷರಗಳು ನಮ್ಮವು.) ಯೆಹೋವನಿಂದ ಕಲಿಸಲ್ಪಟ್ಟ ಈ ಜನರು ಯಾರು?
19. ಯೆಹೋವನಿಂದ ಕಲಿಸಲ್ಪಟ್ಟವರಲ್ಲಿ ಇಂದು ಯಾರು ಒಳಗೊಂಡಿದ್ದಾರೆ?
19 ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವವರಲ್ಲದೆ ಇತರರೂ ಅವರಲ್ಲಿ ಒಳಗೊಂಡಿದ್ದಾರೆ. ಮುಂಚೆ ಗಮನಿಸಿದಂತೆ, ರಾಜ್ಯ ಬಾಧ್ಯಸ್ಥರ “ಚಿಕ್ಕ ಹಿಂಡಿ” ನೊಂದಿಗೆ ಕೂಡಿಸಿ, ಆ ರಾಜ್ಯದ ಭೂಪ್ರಜೆಗಳಾದ “ಬೇರೆ ಕುರಿಗಳು” ಅವನಿಗಿದವ್ದೆಂದು ಯೇಸು ಹೇಳಿದನು. (ಯೋಹಾನ 10:16; ಲೂಕ 12:32) “ಮಹಾ ಸಂಕಟ” ವನ್ನು ಪಾರಾಗುವ “ಮಹಾ ಸಮೂಹ” ದವರು ಬೇರೆ ಕುರಿ ವರ್ಗದವರು, ಮತ್ತು ಯೇಸುವಿನ ಸುರಿಸಲ್ಪಟ್ಟ ರಕ್ತದಲ್ಲಿ ತಮ್ಮ ನಂಬಿಕೆಯ ಆಧಾರದ ಮೇಲೆ ಅವರು ಯೆಹೋವನ ಮುಂದೆ ಸ್ವೀಕೃತ ನಿಲುವನ್ನು ಆನಂದಿಸುತ್ತಾರೆ. (ಪ್ರಕಟನೆ 7:9, 14) ಯೆಶಾಯ 54:13 ರಲ್ಲಿ ತಿಳಿಸಲಾದ “ಪುತ್ರ” ರೊಂದಿಗೆ ಬೇರೆ ಕುರಿಗಳು ನೇರವಾಗಿ ಸೇರಿಸಲ್ಪಟ್ಟಿಲ್ಲವಾದರೂ, ಯೆಹೋವನಿಂದ ಕಲಿಸಲ್ಪಡುವ ಸಂಗತಿಯಿಂದ ಅವರು ಆಶೀರ್ವದಿಸಲ್ಪಡುತ್ತಾರೆ. ಆದುದರಿಂದ ಅವರು ಸೂಕ್ತವಾಗಿಯೇ ದೇವರನ್ನು “ತಂದೆ” ಎಂದು ಸಂಬೋಧಿಸುತ್ತಾರೆ, ಯಾಕೆಂದರೆ “ನಿತ್ಯನಾದ ತಂದೆ” ಯಾದ ಯೇಸು ಕ್ರಿಸ್ತನ ಮುಖಾಂತರ ಆತನು ಕಾರ್ಯತಃ ಅವರ ಪಿತಾಮಹನಾಗುವನು.—ಮತ್ತಾಯ 6:9; ಯೆಶಾಯ 9:6.
ಯೆಹೋವನು ಕಲಿಸುವ ವಿಧ
20. ಯಾವ ವಿಧಗಳಲ್ಲಿ ಯೆಹೋವನು ಕಲಿಸುತ್ತಾನೆ?
20 ಯೆಹೋವನು ಅನೇಕ ವಿಧಗಳಲ್ಲಿ ಕಲಿಸುತ್ತಾನೆ. ಉದಾಹರಣೆಗೆ, ತನ್ನ ಸೃಷ್ಟಿಶೀಲ ಕಾರ್ಯಗಳ ಮೂಲಕ ಆತನು ಹಾಗೆ ಮಾಡುತ್ತಾನೆ. ಇವು ಆತನ ಅಸ್ತಿತ್ವ ಹಾಗೂ ಆತನ ಮಹಾ ವಿವೇಕ—ಇವೆರಡರ—ಪ್ರಮಾಣವನ್ನು ನೀಡುತ್ತವೆ. (ಯೋಬ 12:7-9; ಕೀರ್ತನೆ 19:1, 2; ರೋಮಾಪುರ 1:20) ಇದಕ್ಕೆ ಕೂಡಿಸಿ, ಮಾನವಪೂರ್ವ ಯೇಸುವಿಗೆ ಉಪದೇಶ ನೀಡುವಾಗ ಮಾಡಿದಂತೆ ಆತನು ನೇರ ಸಂಸರ್ಗದ ಮೂಲಕ ಕಲಿಸುತ್ತಾನೆ. ತದ್ರೀತಿಯಲ್ಲಿ ದಾಖಲಿಸಲ್ಪಟ್ಟ ಮೂರು ಸಂದರ್ಭಗಳಲ್ಲಿ, ಆತನು ಭೂಮಿಯ ಮೇಲಿರುವ ಜನರೊಂದಿಗೆ ನೇರವಾಗಿ ಸ್ವರ್ಗದಿಂದ ಮಾತಾಡಿದನು.—ಮತ್ತಾಯ 3:17; 17:5; ಯೋಹಾನ 12:28.
21. ಯಾವ ದೇವದೂತನನ್ನು ಯೆಹೋವನು ವಿಶೇಷವಾಗಿ ತನ್ನ ಪ್ರತಿನಿಧಿಯಂತೆ ಉಪಯೋಗಿಸಿದನು, ಆದರೆ ಇತರರೂ ಉಪಯೋಗಿಸಲ್ಪಟ್ಟರೆಂದು ನಮಗೆ ಹೇಗೆ ಗೊತ್ತು?
21 ತನ್ನ ಜ್ಯೇಷ್ಠಪುತ್ರನಾದ “ವಾಕ್ಯ” ವನ್ನು ಸೇರಿಸಿ, ಕಲಿಸಲು ಪ್ರತಿನಿಧಿಗಳಂತೆ ದೇವದೂತರನ್ನೂ ಯೆಹೋವನು ಬಳಸುತ್ತಾನೆ. (ಯೋಹಾನ 1:1-3) ಏದೆನ್ ತೋಟದಲ್ಲಿ ತನ್ನ ಪರಿಪೂರ್ಣ ಮಾನವ ಪುತ್ರನಾದ ಆದಾಮನೊಂದಿಗೆ ಯೆಹೋವನು ನೇರವಾಗಿ ಮಾತಾಡಿದ್ದಿರಬಹುದಾದರೂ, ತನ್ನ ಪರವಾಗಿ ಮಾತಾಡಲು ಆತನು ಬಹುಶಃ ಮಾನವಪೂರ್ವ ಯೇಸುವನ್ನು ಉಪಯೋಗಿಸಿದನು. (ಆದಿಕಾಂಡ 2:16, 17) ಇವನು ಬಹುಶಃ “ಇಸ್ರಾಯೇಲ್ಯರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು” ಆಗಿದ್ದನು ಮತ್ತು ಅವನ ಕುರಿತು ಯೆಹೋವನು ಆಜ್ಞಾಪಿಸಿದ್ದು: “ಆತನ ಮಾತಿಗೆ ಕಿವಿಗೊಡಬೇಕು.” (ವಿಮೋಚನಕಾಂಡ 14:19; 23:20, 21) ನಿಸ್ಸಂದೇಹವಾಗಿ ಯೆಹೋಶುವನನ್ನು ಬಲಪಡಿಸಲು ಕಾಣಿಸಿಕೊಂಡ “ಯೆಹೋವನ ಸೇನಾಪತಿಯು” ಸಹ ಮಾನವಪೂರ್ವ ಯೇಸು ಆಗಿದ್ದನು. (ಯೆಹೋಶುವ 5:14, 15) ಮೋಶೆಗೆ ತನ್ನ ನಿಯಮವನ್ನು ನೀಡಲು ದೇವದೂತರನ್ನು ಉಪಯೋಗಿಸಿದಂತೆ, ಯೆಹೋವನು ತನ್ನ ಬೋಧನೆಗಳನ್ನು ತಿಳಿಸಲು ಇತರ ದೇವದೂತರನ್ನು ಕೂಡ ಆತನು ಉಪಯೋಗಿಸುತ್ತಾನೆ.—ವಿಮೋಚನಕಾಂಡ 20:1; ಗಲಾತ್ಯ 3:19; ಇಬ್ರಿಯ 2:2, 3.
22. (ಎ) ಕಲಿಸಲು ಭೂಮಿಯಿಂದ ಯೆಹೋವನು ಯಾರನ್ನು ಉಪಯೋಗಿಸಿದ್ದಾನೆ? (ಬಿ) ಇಂದು ಮಾನವರಿಗೆ ಯೆಹೋವನು ಉಪದೇಶ ನೀಡುವ ಪ್ರಧಾನ ವಿಧಾನವು ಯಾವುದು?
22 ಅದಲ್ಲದೆ ಯೆಹೋವ ದೇವರು ಕಲಿಸಲು ಮಾನವ ಪ್ರತಿನಿಧಿಗಳನ್ನು ಉಪಯೋಗಿಸುತ್ತಾನೆ. ಇಸ್ರಾಯೇಲಿನಲ್ಲಿ ಹೆತ್ತವರಿಗೆ ತಮ್ಮ ಮಕ್ಕಳಿಗೆ ಕಲಿಸಲಿಕ್ಕಿತ್ತು; ಪ್ರವಾದಿಗಳು, ಯಾಜಕರು, ಪ್ರಭುಗಳು, ಮತ್ತು ಲೇವಿಯರು ರಾಷ್ಟ್ರಕ್ಕೆ ಯೆಹೋವನ ನಿಯಮವನ್ನು ಕಲಿಸಿದರು. (ಧರ್ಮೋಪದೇಶಕಾಂಡ 11:18-21; 1 ಸಮುವೇಲ 12:20-25; 2 ಪೂರ್ವಕಾಲವೃತ್ತಾಂತ 17:7-9) ಭೂಮಿಯ ಮೇಲೆ ಯೇಸು ದೇವರ ಪ್ರಧಾನ ವದನಕನಾಗಿದ್ದನು. (ಇಬ್ರಿಯ 1:1, 2) ತಾನು ಕಲಿಸಿದ ವಿಷಯಗಳು, ನಿಖರವಾಗಿ ತಂದೆಯಿಂದ ತಾನು ಕಲಿತಿದ್ದ ವಿಷಯಗಳೇ ಎಂದು ಯೇಸು ಅನೇಕ ಬಾರಿ ಹೇಳಿದನು, ಆದುದರಿಂದ ಕಾರ್ಯತಃ ಅವನ ಕೇಳುಗರು ಯೆಹೋವನಿಂದ ಕಲಿಸಲ್ಪಡುತ್ತಿದ್ದರು. (ಯೋಹಾನ 7:16; 8:28; 12:49; 14:9, 10) ತನ್ನ ಹೇಳಿಕೆಗಳ ದಾಖಲೆ ಇಡುವಂತೆ ಯೆಹೋವನು ಮಾಡಿದ್ದಾನೆ, ಮತ್ತು ನಮ್ಮ ದಿನದಲ್ಲಿ ಮಾನವರಿಗೆ ಆತನು ಪ್ರಧಾನವಾಗಿ ಈ ಪ್ರೇರಿತ ಶಾಸ್ತ್ರಗಳ ಮೂಲಕ ಕಲಿಸುತ್ತಾನೆ.—ರೋಮಾಪುರ 15:4; 2 ತಿಮೊಥೆಯ 3:16.
23. ಯಾವ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವವು?
23 ಮಹತ್ವದ ಸಮಯಗಳಲ್ಲಿ ನಾವು ಜೀವಿಸುತ್ತಾ ಇದ್ದೇವೆ, ಯಾಕೆಂದರೆ ‘[ನಾವು ಜೀವಿಸುತ್ತಿರುವ] ದಿನಗಳ ಅಂತಿಮ ಭಾಗದಲ್ಲಿ ಅನೇಕ ಜನರು ಯೆಹೋವನ ಮಾರ್ಗಗಳ ಬಗ್ಗೆ ಉಪದೇಶಿಸಲ್ಪಡುವರು,’ ಎಂದು ಶಾಸ್ತ್ರಗಳು ವಾಗ್ದಾನಿಸುತ್ತವೆ. (ಯೆಶಾಯ 2:2, 3) ಈ ಉಪದೇಶವನ್ನು ಹೇಗೆ ಒದಗಿಸಲಾಗುತ್ತದೆ? ಈಗ ಪ್ರಗತಿಯಲ್ಲಿರುವ ಯೆಹೋವನ ಮಹಾ ಬೋಧನಾ ಕಾರ್ಯಕ್ರಮದಿಂದ ಪ್ರಯೋಜನ ಪಡೆಯಲು, ಅಷ್ಟೇ ಅಲ್ಲದೆ ಅದರಲ್ಲಿ ಭಾಗವಹಿಸಲು ನಾವು ಏನು ಮಾಡಬೇಕು? ಇಂತಹ ಪ್ರಶ್ನೆಗಳನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸುವೆವು.
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನು ತಂದೆಯೂ, ಬೋಧಕನೂ, ಪತಿಯೂ ಆದದ್ದು ಹೇಗೆ?
◻ “ಸಂತಾನ”ದ ಕುರಿತು ಯೆಹೋವನು ಏನನ್ನು ಕಲಿಸುತ್ತಾನೆ?
◻ ದೇವರ ಯಾವ ಪ್ರಮುಖ ಬೋಧನೆಗೆ ನಾವು ಗಮನಕೊಡಬೇಕು?
◻ ಯೆಹೋವನು ಹೇಗೆ ಕಲಿಸುತ್ತಾನೆ?
[ಪುಟ 10 ರಲ್ಲಿರುವ ಚಿತ್ರ]
ಯಾಯಿರನ ಮಗಳನ್ನು ಪುನರುತ್ಥಾನಗೊಳಿಸಿದ್ದು, ಯೇಸುವಿನ ಪುನರುತ್ಥಾನದ ವಾಗ್ದಾನವನ್ನು ನಂಬಲು ಆಧಾರವನ್ನು ಒದಗಿಸಿತು