“ದೇವರ ಮಹತ್ತು”ಗಳಿಂದ ಹುರಿದುಂಬಿಸಲ್ಪಡುವುದು
“ನಾವು ನಮ್ಮನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವದನ್ನು ಕೇಳುತ್ತೇವೆ.”—ಅ. ಕೃತ್ಯಗಳು 2:11.
1, 2. ಸಾ.ಶ. 33ರ ಪಂಚಾಶತ್ತಮದಲ್ಲಿ ಯೆರೂಸಲೇಮಿನಲ್ಲಿ ಯಾವ ಬೆರಗುಗೊಳಿಸುವ ಸಂಗತಿ ನಡೆಯಿತು?
ಯೆರೂಸಲೇಮಿನ ಒಂದು ಖಾಸಗಿ ಮನೆಯಲ್ಲಿ ಕೂಡಿಬಂದಿದ್ದ, ಯೇಸುವಿನ ಶಿಷ್ಯರಾಗಿದ್ದ ಸ್ತ್ರೀಪುರುಷರ ಒಂದು ಗುಂಪಿಗೆ, ಸಾ.ಶ. 33ರ ವಸಂತಕಾಲದ ಕೊನೆಯ ಭಾಗದ ಒಂದು ಬೆಳಿಗ್ಗೆ, ಬೆರಗಾಗಿಸುವ ಸಂಗತಿಯೊಂದು ಘಟಿಸಿತು. ‘ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಅದಲ್ಲದೆ ಉರಿಯಂತಿದ್ದ ನಾಲಿಗೆಗಳು ಅವರಿಗೆ ಕಾಣಿಸಿದವು, ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.’—ಅ. ಕೃತ್ಯಗಳು 2:2-4, 15.
2 ಆ ಮನೆಯ ಮುಂದುಗಡೆ ಜನರ ದೊಡ್ಡ ಗುಂಪು ಸೇರಿಬಂತು. ಆ ಗುಂಪಿನಲ್ಲಿ, ಪಂಚಾಶತ್ತಮ ಹಬ್ಬವನ್ನು ಆಚರಿಸಲು ಬಂದಿದ್ದ “ಸದ್ಭಕ್ತರಾದ,” ವಿದೇಶದಲ್ಲಿ ಹುಟ್ಟಿದ್ದ ಯೆಹೂದ್ಯರಿದ್ದರು. ಅವರಲ್ಲಿ ಪ್ರತಿಯೊಬ್ಬರು, “ದೇವರ ಮಹತ್ತುಗಳ ವಿಷಯವಾಗಿ” ತಮ್ಮ ತಮ್ಮ ಹುಟ್ಟುಭಾಷೆಗಳಲ್ಲಿ ಆ ಶಿಷ್ಯರು ಮಾತನಾಡುವುದನ್ನು ಕೇಳಿಸಿಕೊಂಡಾಗ ಅಚ್ಚರಿಗೊಂಡರು. ಹಾಗೆ ಮಾತಾಡುತ್ತಿದ್ದವರೆಲ್ಲರೂ ಗಲಿಲಾಯದವರಾಗಿದ್ದುದರಿಂದ ಅದು ಹೇಗೆ ಸಾಧ್ಯವಾದೀತು?—ಅ. ಕೃತ್ಯಗಳು 2:5-8, 11.
3. ಪಂಚಾಶತ್ತಮದಂದು ಸೇರಿಬಂದಿದ್ದ ಜನರಿಗೆ ಪೇತ್ರನು ಯಾವ ಸಂದೇಶವನ್ನು ತಿಳಿಯಪಡಿಸಿದನು?
3 ಆ ಗಲಿಲಾಯದವರಲ್ಲಿ ಒಬ್ಬನು ಅಪೊಸ್ತಲ ಪೇತ್ರನಾಗಿದ್ದನು. ಕೆಲವೇ ವಾರಗಳ ಹಿಂದೆ ಅನೀತಿವಂತರು ಯೇಸು ಕ್ರಿಸ್ತನನ್ನು ವಧಿಸಿದ್ದರೆಂದು ಅವನು ವಿವರಿಸಿದನು. ಆದರೆ ದೇವರು ತಾನೇ ತನ್ನ ಪುತ್ರನನ್ನು ಸತ್ತವರೊಳಗಿಂದ ಎಬ್ಬಿಸಿದ್ದನು. ತರುವಾಯ ಯೇಸು, ಪೇತ್ರನು ಮತ್ತು ಈಗ ಅಲ್ಲಿ ಉಪಸ್ಥಿತರಾಗಿದ್ದ ಇತರರು ಕೂಡಿದ್ದ ತನ್ನ ಶಿಷ್ಯರಲ್ಲಿ ಅನೇಕರಿಗೆ ತನ್ನನ್ನು ತೋರಿಸಿಕೊಂಡನು. ಅದಾಗಿ ಕೇವಲ ಹತ್ತು ದಿನಗಳ ಹಿಂದೆ, ಯೇಸು ಸ್ವರ್ಗಕ್ಕೇರಿ ಹೋಗಿದ್ದನು. ಪವಿತ್ರಾತ್ಮವನ್ನು ತನ್ನ ಶಿಷ್ಯರ ಮೇಲೆ ಸುರಿಸಿದವನು ಅವನೇ ಆಗಿದ್ದನು. ಹಾಗಾದರೆ, ಆ ಪಂಚಾಶತ್ತಮವನ್ನು ಆಚರಿಸುತ್ತಿದ್ದವರಿಗೆ ಇದು ಏನನ್ನಾದರೂ ಅರ್ಥೈಸಿತೊ? ಹೌದು, ನಿಶ್ಚಯವಾಗಿ. ಯೇಸುವಿನ ಮರಣವು ಅವರು ಅವನಲ್ಲಿ ನಂಬಿಕೆಯನ್ನಿಡುವಲ್ಲಿ, ಅವರು ಪಾಪಕ್ಷಮೆಯನ್ನು ಪಡೆದು, “ಪವಿತ್ರಾತ್ಮದಾನ”ವನ್ನು ಹೊಂದಲು ದಾರಿಯನ್ನು ತೆರೆಯಿತು. (ಅ. ಕೃತ್ಯಗಳು 2:22-24, 32, 33, 38) ಆಗ ಆ ಪ್ರೇಕ್ಷಕರು, ತಾವು ಕೇಳಿದ “ದೇವರ ಮಹತ್ತುಗಳ” ಸಂಬಂಧದಲ್ಲಿ ಹೇಗೆ ಪ್ರತಿವರ್ತನೆ ತೋರಿಸಿದರು? ಮತ್ತು ಈ ವೃತ್ತಾಂತವು, ಯೆಹೋವನಿಗೆ ನಾವು ಸಲ್ಲಿಸುವ ಸೇವೆಯ ಮೌಲ್ಯಮಾಪನ ಮಾಡುವಂತೆ ಹೇಗೆ ಸಹಾಯಮಾಡಬಲ್ಲದು?
ಕ್ರಿಯೆಗೆ ಪ್ರೇರಿಸಲ್ಪಟ್ಟದ್ದು!
4. ಸಾ.ಶ. 33ರ ಪಂಚಾಶತ್ತಮ ದಿನದಲ್ಲಿ ಯೋವೇಲನ ಯಾವ ಪ್ರವಾದನೆಯು ನೆರವೇರಿತು?
4 ಪವಿತ್ರಾತ್ಮವನ್ನು ಪಡೆದ ಯೆರೂಸಲೇಮಿನಲ್ಲಿದ್ದ ಆ ಶಿಷ್ಯರು, ಆ ಬೆಳಿಗ್ಗೆ ಅಲ್ಲಿ ಕೂಡಿಬಂದಿದ್ದ ಜನರಿಂದ ಮೊದಲ್ಗೊಂಡು ಇತರರಿಗೆ ರಕ್ಷಣೆಯ ಸುವಾರ್ತೆಯನ್ನು ಸಾರಲು ಸ್ವಲ್ಪವೂ ತಡಮಾಡಲಿಲ್ಲ. ಅವರ ಆ ಸಾರುವ ಕೆಲಸವು, ಎಂಟು ಶತಮಾನಗಳ ಹಿಂದೆ ಪೆತೂವೇಲನ ಮಗನಾಗಿದ್ದ ಯೋವೇಲನು ದಾಖಲಿಸಿದ್ದ ಈ ಗಮನಾರ್ಹವಾದ ಪ್ರವಾದನೆಯನ್ನು ನೆರವೇರಿಸಿತು: “ಯೆಹೋವನ ಆಗಮನದ ಭಯಂಕರವಾದ ಮಹಾ ದಿನವು ಬರುವದಕ್ಕೆ ಮುಂಚೆ . . . ಕಡೇ ದಿವಸಗಳಲ್ಲಿ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು; ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು; ಅವರೂ ಪ್ರವಾದಿಸುವರು.”—ಯೋವೇಲ 1:1; 2:28, 29, 31; ಅ. ಕೃತ್ಯಗಳು 2:17, 18, 20.
5. ಒಂದನೆಯ ಶತಮಾನದ ಕ್ರೈಸ್ತರು ಯಾವ ಅರ್ಥದಲ್ಲಿ ಪ್ರವಾದಿಸಿದರು? (ಪಾದಟಿಪ್ಪಣಿ ನೋಡಿ.)
5 ಅಂದರೆ ದಾವೀದ, ಯೋವೇಲ ಮತ್ತು ದೆಬೋರ—ಇವರು ಮಾಡಿದ ರೀತಿಯಲ್ಲಿ ದೇವರು ಸ್ತ್ರೀಪುರುಷರಾದ ಪ್ರವಾದಿಗಳ ಒಂದು ಸಂತತಿಯನ್ನೇ ಉತ್ಪಾದಿಸಿ, ಅವರು ಭವಿಷ್ಯದ ಸಂಗತಿಗಳನ್ನು ಮುಂತಿಳಿಸುವಂತೆ ಮಾಡುತ್ತಾನೆಂದು ಇದರರ್ಥವೊ? ಅಲ್ಲ. ಕ್ರೈಸ್ತ ‘ಗಂಡಸರೂ ಹೆಂಗಸರೂ ದಾಸದಾಸಿಯರೂ’ ಯೆಹೋವನು ಮಾಡಿದ್ದ ಮತ್ತು ಇನ್ನೂ ಮಾಡಲಿದ್ದ “ಮಹತ್ತು”ಗಳನ್ನು ತಿಳಿಯಪಡಿಸುವಂತೆ ಯೆಹೋವನ ಆತ್ಮದಿಂದ ಪ್ರೇರಿಸಲ್ಪಡುವ ಅರ್ಥದಲ್ಲಿ ಪ್ರವಾದಿಸುವರು. ಹೀಗೆ ಅವರು ಸರ್ವಶಕ್ತನ ಪ್ರತಿನಿಧಿಗಳಾಗಿ ಸೇವೆಮಾಡುವರು.a ಇದನ್ನು ಕೇಳಿದ ಆ ಜನಸಮೂಹವು ಹೇಗೆ ಪ್ರತಿವರ್ತಿಸಿತು?—ಇಬ್ರಿಯ 1:1, 2.
6. ಪೇತ್ರನ ಭಾಷಣವನ್ನು ಕೇಳಿದ ಅನೇಕರು ಏನು ಮಾಡುವಂತೆ ಪ್ರೇರಿಸಲ್ಪಟ್ಟರು?
6 ಆ ಜನಸಮೂಹವು ಪೇತ್ರನ ವಿವರಣೆಯನ್ನು ಕೇಳಿದಾಗ, ಅವರಲ್ಲಿ ಅನೇಕರು ಕ್ರಿಯೆಗೆ ಪ್ರೇರಿಸಲ್ಪಟ್ಟರು. “ಅವನ ಮಾತಿಗೆ ಒಪ್ಪಿಕೊಂಡವರು ದೀಕ್ಷಾಸ್ನಾನಮಾಡಿಸಿಕೊಂಡರು. ಆ ದಿವಸ ಸುಮಾರು ಮೂರು ಸಾವಿರ ಜನರು ಅವರಲ್ಲಿ ಸೇರಿದರು.” (ಅ. ಕೃತ್ಯಗಳು 2:41) ಸ್ವಾಭಾವಿಕ ಇಸ್ರಾಯೇಲ್ಯರೂ ಯೆಹೂದಿ ಮತಾವಲಂಬಿಗಳೂ ಆಗಿದ್ದ ಅವರಿಗೆ ಈಗಾಗಲೇ ಶಾಸ್ತ್ರದ ಮೂಲ ಜ್ಞಾನವಿತ್ತು. ಆ ಜ್ಞಾನ ಮತ್ತು ಅವರು ಪೇತ್ರನಿಂದ ಏನು ಕಲಿತರೊ ಆ ನಂಬಿಕೆಯು, ಅವರು ‘ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದಲು ಆಧಾರವನ್ನು ಒದಗಿಸಿತು. (ಮತ್ತಾಯ 28:19) ಅವರ ದೀಕ್ಷಾಸ್ನಾನಾನಂತರ “ಇವರು ಅಪೊಸ್ತಲರ ಬೋಧನೆಯನ್ನು ಕೇಳುವದರಲ್ಲಿ . . . ನಿರತರಾಗಿದ್ದರು.” ಅದೇ ಸಮಯದಲ್ಲಿ, ಹೊಸದಾಗಿ ಕಂಡುಕೊಂಡಿದ್ದ ತಮ್ಮ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳಲಾರಂಭಿಸಿದರು. “ಅವರು ದಿನಾಲೂ ಏಕಮನಸ್ಸಿನಿಂದ ದೇವಾಲಯದಲ್ಲಿ ಕೂಡುತ್ತಾ . . . ದೇವರನ್ನು ಕೊಂಡಾಡುವವರಾಗಿಯೂ ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು.” ಈ ಸಾಕ್ಷಿಕಾರ್ಯದ ಪರಿಣಾಮವಾಗಿ, “ಕರ್ತನು [“ಯೆಹೋವನು,” NW] ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು ಅವರ ಮಂಡಲಿಗೆ ಸೇರಿಸುತ್ತಿದ್ದನು.” (ಅ. ಕೃತ್ಯಗಳು 2:42, 46, 47) ಈ ಜನರು ಜೀವಿಸುತ್ತಿದ್ದ ಅನೇಕ ದೇಶಗಳಲ್ಲಿ ಕ್ರೈಸ್ತ ಸಭೆಗಳು ಬೇಗನೆ ಸ್ಥಾಪಿಸಲ್ಪಟ್ಟವು. ಈ ಉನ್ನತಿಯು, ಭಾಗಶಃವಾದರೂ, ಅವರು ಹಿಂದಿರುಗಿ ಮನೆಗೆ ಹೋದಾಗ ಆಸಕ್ತಿಯಿಂದ “ಸುವಾರ್ತೆ” ಸಾರಿದುದರ ಪರಿಣಾಮವಾಗಿದ್ದದ್ದು ನಿಸ್ಸಂದೇಹ.—ಕೊಲೊಸ್ಸೆ 1:23.
ದೇವರ ವಾಕ್ಯವು ಕಾರ್ಯಸಾಧಕವಾದದ್ದು
7. (ಎ) ಇಂದು ಸರ್ವ ಜನಾಂಗಗಳ ಜನರನ್ನು ಯೆಹೋವನ ಸಂಸ್ಥೆಗೆ ಯಾವುದು ಆಕರ್ಷಿಸುತ್ತದೆ? (ಬಿ) ಲೋಕವ್ಯಾಪಕ ಕ್ಷೇತ್ರದಲ್ಲಿ ಮತ್ತು ಸ್ಥಳಿಕವಾಗಿ ಹೆಚ್ಚು ಅಭಿವೃದ್ಧಿಗೆ ಯಾವ ಸಾಧ್ಯತೆಯಿದೆ ಎಂದು ನೀವು ನೋಡುತ್ತೀರಿ? (ಪಾದಟಿಪ್ಪಣಿಯನ್ನು ನೋಡಿ.)
7 ಹಾಗಾದರೆ ಇಂದು ದೇವರ ಸೇವಕರಾಗಲು ಬಯಸುವವರ ವಿಷಯವೇನು? ಅವರೂ ದೇವರ ವಾಕ್ಯವನ್ನು ಜಾಗರೂಕತೆಯಿಂದ ಅಧ್ಯಯನ ಮಾಡಬೇಕು. ಅವರು ಹಾಗೆ ಮಾಡಿದಾಗ ಯೆಹೋವನು, “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು,” ಎಂದು ಅವರಿಗೆ ತಿಳಿದುಬರುತ್ತದೆ. (ವಿಮೋಚನಕಾಂಡ 34:6; ಅ. ಕೃತ್ಯಗಳು 13:48) ಯಾರ ಸುರಿಸಲ್ಪಟ್ಟ ರಕ್ತವು ಅವರ ಎಲ್ಲ ಪಾಪವನ್ನು ಶುದ್ಧೀಕರಿಸಬಲ್ಲದೊ ಆ ಯೇಸು ಕ್ರಿಸ್ತನ ಮೂಲಕ ದೇವರು ಮಾಡಿರುವ ಪ್ರಾಯಶ್ಚಿತ್ತ ಯಜ್ಞದ ದಯಾಭರಿತ ಏರ್ಪಾಡಿನ ಕುರಿತು ಅವರು ಕಲಿಯುತ್ತಾರೆ. (1 ಯೋಹಾನ 1:7) “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವ” ದೇವರ ಉದ್ದೇಶಕ್ಕೂ ಅವರು ಕೃತಜ್ಞರಾಗಿರುತ್ತಾರೆ. (ಅ. ಕೃತ್ಯಗಳು 24:15) ಈ “ಮಹತ್ತುಗಳ” ಮೂಲನಿಗಾಗಿ ಅವರ ಹೃದಯದಲ್ಲಿ ಪ್ರೀತಿಯು ಉಕ್ಕೇರಿ, ಈ ಅಮೂಲ್ಯ ಸತ್ಯಗಳನ್ನು ಸಾರುವಂತೆ ಅವರು ಪ್ರೇರಿಸಲ್ಪಡುತ್ತಾರೆ. ಆಗ ಅವರು ದೇವರ ಸಮರ್ಪಿತ ಮತ್ತು ಸ್ನಾತ ಸೇವಕರಾಗಿ, “ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ” ತುಂಬಿಕೊಳ್ಳುತ್ತಾ ಹೋಗುತ್ತಾರೆ.b—ಕೊಲೊಸ್ಸೆ 1:10ಎ; 2 ಕೊರಿಂಥ 5:14.
8-10. (ಎ) ದೇವರ ವಾಕ್ಯವು “ಕಾರ್ಯಸಾಧಕವಾಗಿದೆ” ಎಂದು ಒಬ್ಬ ಕ್ರೈಸ್ತ ಸ್ತ್ರೀಯ ಅನುಭವವು ಹೇಗೆ ತೋರಿಸುತ್ತದೆ? (ಬಿ) ಯೆಹೋವನ ವಿಷಯದಲ್ಲಿ ಮತ್ತು ಆತನು ತನ್ನ ಸೇವಕರನ್ನು ಉಪಚರಿಸುವ ವಿಷಯದಲ್ಲಿ ಈ ಅನುಭವವು ನಿಮಗೆ ಏನು ಕಲಿಸಿದೆ? (ವಿಮೋಚನಕಾಂಡ 4:12)
8 ದೇವರ ಸೇವಕರು ತಮ್ಮ ಬೈಬಲ್ ಅಧ್ಯಯನದಿಂದ ಗಳಿಸುವ ಜ್ಞಾನವು ಕೇವಲ ಮೇಲುಮೇಲಿನದ್ದಲ್ಲ. ಅಂತಹ ಜ್ಞಾನವು ಅವರ ಹೃದಯಗಳನ್ನು ಹುರಿದುಂಬಿಸಿ, ಯೋಚನಾ ವಿಧವನ್ನು ಬದಲಾಯಿಸಿ, ಅವರ ಒಂದು ಭಾಗವಾಗಿ ಪರಿಣಮಿಸುತ್ತದೆ. (ಇಬ್ರಿಯ 4:12) ದೃಷ್ಟಾಂತಕ್ಕೆ, ಕಮೀಲ್ ಎಂಬ ಸ್ತ್ರೀ ವೃದ್ಧರನ್ನು ಪರಾಮರಿಸುವ ಕೆಲಸದಲ್ಲಿದ್ದಳು. ಆಕೆಯ ರೋಗಿಗಳಲ್ಲಿ ಒಬ್ಬಳು ಮಾರ್ಥ ಎಂಬ ಯೆಹೋವನ ಸಾಕ್ಷಿಯಾಗಿದ್ದಳು. ಆಕೆಗೆ ಒಂದು ವಿಧದ ಮಾನಸಿಕ ವ್ಯಾಧಿ ಇದ್ದದ್ದರಿಂದ, ಆಕೆಯ ಮೇಲೆ ಯಾವಾಗಲೂ ಕಣ್ಣಿಟ್ಟು, ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತಿತ್ತು. ಆಕೆಗೆ ಊಟಮಾಡಲು ಹೇಳಬೇಕಾಗಿದ್ದುದು ಮಾತ್ರವಲ್ಲ, ತುತ್ತನ್ನು ನುಂಗುವಂತೆಯೂ ಹೇಳಬೇಕಾಗಿತ್ತು. ಆದರೂ, ನಾವು ನೋಡಲಿರುವಂತೆ, ಒಂದು ಸಂಗತಿ ಮಾತ್ರ ಮಾರ್ಥಳ ಮನಸ್ಸಿನಲ್ಲಿ ಅಳಿಸಲಾಗದಂತೆ ಅಚ್ಚೊತ್ತಲ್ಪಟ್ಟಿತ್ತು.
9 ಒಂದು ದಿನ, ಕಮೀಲ್ ಯಾವುದೊ ವೈಯಕ್ತಿಕ ಸಮಸ್ಯೆಯ ಕಾರಣ ಅಳುತ್ತಿರುವುದನ್ನು ಮಾರ್ಥ ನೋಡಿದಳು. ಆಕೆ ಕಮೀಲಳನ್ನು ಅಪ್ಪಿಕೊಂಡು ತನ್ನೊಂದಿಗೆ ಬೈಬಲ್ ಅಧ್ಯಯನವನ್ನು ಮಾಡುವಂತೆ ಕೇಳಿಕೊಂಡಳು. ಆದರೆ ಮಾರ್ಥಳ ಸ್ಥಿತಿಗತಿಯಲ್ಲಿರುವ ಒಬ್ಬಳು ಬೈಬಲ್ ಅಧ್ಯಯನ ನಡೆಸಬಲ್ಲಳೊ? ಹೌದು, ನಡೆಸಬಲ್ಲಳು! ಮಾರ್ಥಳು ಹೆಚ್ಚಿನ ಮಟ್ಟಿಗೆ ಜ್ಞಾಪಕಶಕ್ತಿಯನ್ನು ಕಳೆದುಕೊಂಡಿದ್ದಳಾದರೂ, ಆಕೆಯ ಮಹತ್ತಾದ ದೇವರನ್ನಾಗಲಿ, ಬೈಬಲಿನಿಂದ ತಾನು ಕಲಿತಿದ್ದ ಅಮೂಲ್ಯ ಸತ್ಯಗಳನ್ನಾಗಲಿ ಆಕೆ ಮರೆತು ಬಿಟ್ಟಿರಲಿಲ್ಲ. ಅಧ್ಯಯನದ ಸಮಯದಲ್ಲಿ, ಪ್ರತಿ ಪರಿಚ್ಛೇದವನ್ನು ಓದುವಂತೆ, ಉದ್ಧರಿಸಿದ ವಚನಗಳನ್ನು ತೆರೆದು ಓದುವಂತೆ, ಪುಟದ ಕೆಳಭಾಗದಲ್ಲಿದ್ದ ಪ್ರಶ್ನೆಗಳನ್ನು ಓದುವಂತೆ ಮತ್ತು ಅದಕ್ಕೆ ಉತ್ತರ ಕೊಡುವಂತೆ ಮಾರ್ಥ ಕಮೀಲಳಿಗೆ ತಿಳಿಸಿದಳು. ಇದು ಕೆಲವು ಕಾಲ ಮುಂದುವರಿಯಿತು ಮತ್ತು ಮಾರ್ಥಳ ಇತಿಮಿತಿಗಳ ಎದುರಿನಲ್ಲಿಯೂ ಕಮೀಲ್ ಬೈಬಲ್ ಜ್ಞಾನದಲ್ಲಿ ಪ್ರಗತಿಹೊಂದಿದಳು. ಈಗ ದೇವರನ್ನು ಸೇವಿಸುವ ಇತರರೊಂದಿಗೆ ಕಮೀಲ್ ಜೊತೆಸೇರಬೇಕೆಂದು ಮಾರ್ಥ ಗ್ರಹಿಸಿದಳು. ಈ ಉದ್ದೇಶದಿಂದ, ಕಮೀಲ್ ತನ್ನ ಪ್ರಥಮ ಕೂಟಕ್ಕಾಗಿ ರಾಜ್ಯ ಸಭಾಗೃಹಕ್ಕೆ ಹೋಗುವಾಗ ಆಕೆಗೆ ತಕ್ಕದಾದ ಉಡುಪು ಇರುವಂತೆ, ಮಾರ್ಥ ತನ್ನ ವಿದ್ಯಾರ್ಥಿಗೆ ಉಡುಪನ್ನೂ ಒಂದು ಜೋಡಿ ಶೂಗಳನ್ನೂ ಒದಗಿಸಿದಳು.
10 ಮಾರ್ಥಳ ಪ್ರೀತಿಪೂರ್ವಕವಾದ ಆಸಕ್ತಿಯಿಂದ, ಮಾದರಿಯಿಂದ ಮತ್ತು ದೃಢನಿಶ್ಚಯತೆಯಿಂದ ಕಮೀಲ್ ಪ್ರಚೋದಿಸಲ್ಪಟ್ಟಳು. ಮಾರ್ಥಳು ತನಗೆ ಬೈಬಲಿನಿಂದ ಕಲಿಸಲು ಪ್ರಯತ್ನಿಸುತ್ತಿದ್ದ ಸಂಗತಿಯು ಅತಿ ಪ್ರಾಮುಖ್ಯವಾಗಿತ್ತೆಂಬುದು ಕಮೀಲ್ಳಿಗೆ ಮನದಟ್ಟಾಯಿತು. ಏಕೆಂದರೆ, ಶಾಸ್ತ್ರದಿಂದ ಕಲಿತಿದ್ದ ಈ ವಿಷಯಗಳಲ್ಲದೆ ಮಾರ್ಥಳಿಗೆ ಹೆಚ್ಚುಕಡಿಮೆ ಎಲ್ಲವೂ ಮರೆತುಹೋಗಿತ್ತು. ಸಮಯಾನಂತರ, ಕಮೀಲಳಿಗೆ ಅಲ್ಲಿಂದ ಇನ್ನೊಂದು ಕಡೆಗೆ ವರ್ಗವಾದಾಗ, ತಾನು ಕ್ರಿಯೆಗೈಯಲು ಸಮಯ ಬಂದಿದೆಯೆಂದು ಅವಳು ಗ್ರಹಿಸಿದಳು. ಅವಳಿಗೆ ಸಿಕ್ಕಿದ ಮೊದಲನೆಯ ಅವಕಾಶದಲ್ಲೇ ಅವಳು, ಮಾರ್ಥಳು ಕೊಟ್ಟಿದ್ದ ಉಡುಪು ಮತ್ತು ಶೂಗಳನ್ನು ತೊಟ್ಟು ರಾಜ್ಯ ಸಭಾಗೃಹಕ್ಕೆ ಹೋದಳು ಮತ್ತು ಅಲ್ಲಿ ಒಂದು ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಿಕೊಂಡಳು. ಕಮೀಲ್ ಉತ್ತಮ ಪ್ರಗತಿಯನ್ನು ಮಾಡಿ ದೀಕ್ಷಾಸ್ನಾನ ಪಡೆದಳು.
ಯೆಹೋವನ ಮಟ್ಟಗಳನ್ನು ಪ್ರತಿಬಿಂಬಿಸಲು ಹುರಿದುಂಬಿಸಲ್ಪಟ್ಟದ್ದು
11. ಸಾರುವ ಕೆಲಸದಲ್ಲಿ ಹುರುಪನ್ನು ತೋರಿಸುವುದಕ್ಕೆ ಕೂಡಿಸಿ, ನಾವು ರಾಜ್ಯ ಸಂದೇಶದಿಂದ ಹುರಿದುಂಬಿಸಲ್ಪಟ್ಟಿದ್ದೇವೆಂದು ಇನ್ನಾವ ವಿಧದಲ್ಲಿ ತೋರಿಸಬಲ್ಲೆವು?
11 ಇಂದು ಮಾರ್ಥ ಮತ್ತು ಕಮೀಲ್ರಂತೆ “ರಾಜ್ಯದ . . . ಸುವಾರ್ತೆ”ಯನ್ನು ಲೋಕವ್ಯಾಪಕವಾಗಿ ಸಾರುವ 60 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳಿದ್ದಾರೆ. (ಮತ್ತಾಯ 24:14; 28:19, 20) ಒಂದನೆಯ ಶತಮಾನದ ಕ್ರೈಸ್ತರಂತೆ, ಇವರೂ “ದೇವರ ಮಹತ್ತು”ಗಳಿಂದ ಆಳವಾಗಿ ಪ್ರಚೋದಿತರಾಗಿದ್ದಾರೆ. ಯೆಹೋವನ ನಾಮವನ್ನು ಧರಿಸುವ ಸುಯೋಗ ತಮಗಿದೆ ಎಂಬುದನ್ನು ಮತ್ತು ಆತನು ತನ್ನ ಆತ್ಮವನ್ನು ತಮ್ಮ ಮೇಲೆ ಸುರಿಸಿದ್ದಾನೆ ಎಂಬುದನ್ನು ಅವರು ಗಣ್ಯಮಾಡುತ್ತಾರೆ. ಆದಕಾರಣ, “ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷ”ಪಡಿಸಲು ಅವರು ಸಕಲ ಪ್ರಯತ್ನವನ್ನೂ ಮಾಡುತ್ತಾರೆ. ಇದರಲ್ಲಿ ಬೇರೆ ವಿಷಯಗಳಲ್ಲದೆ, ಉಡುಪು ಮತ್ತು ಕೇಶಶೈಲಿಯ ಸಂಬಂಧದಲ್ಲಿ ದೇವರ ಮಟ್ಟಕ್ಕೆ ಗೌರವ ಕೊಡುವ ವಿಷಯವೂ ಸೇರಿದೆ.—ಕೊಲೊಸ್ಸೆ 1:10; ತೀತ 2:10.
12. ಉಡುಪು ಮತ್ತು ಕೇಶಶೈಲಿಯ ವಿಷಯದಲ್ಲಿ ಯಾವ ನಿರ್ದಿಷ್ಟ ಸಲಹೆಯು 1 ತಿಮೊಥೆಯ 2:9, 10ರಲ್ಲಿದೆ?
12 ಹೌದು, ನಮ್ಮ ವೈಯಕ್ತಿಕ ತೋರಿಕೆಯ ಸಂಬಂಧದಲ್ಲಿ ಯೆಹೋವನು ಮಟ್ಟಗಳನ್ನು ಇಟ್ಟಿರುತ್ತಾನೆ. ಈ ವಿಷಯದಲ್ಲಿ ದೇವರ ಕೆಲವು ಆವಶ್ಯಕತೆಗಳನ್ನು ಅಪೊಸ್ತಲ ಪೌಲನು ಸೂಚಿಸಿದನು: “ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ [“ಸ್ವಸ್ಥ ಮನಸ್ಸಿನವರಾಗಿಯೂ,” NW] ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.”c ಈ ಮಾತುಗಳಿಂದ ನಾವು ಏನು ಕಲಿತುಕೊಳ್ಳುತ್ತೇವೆ?—1 ತಿಮೊಥೆಯ 2:9, 10.
13. (ಎ) ‘ಮರ್ಯಾದೆಗೆ ತಕ್ಕ ಉಡುಪು’ ಎಂದರೇನು? (ಬಿ) ಯೆಹೋವನ ಮಟ್ಟಗಳು ನ್ಯಾಯಸಮ್ಮತವಾಗಿವೆ ಎಂದು ನಾವೇಕೆ ಹೇಳಸಾಧ್ಯವಿದೆ?
13 ಕ್ರೈಸ್ತರು “ಮರ್ಯಾದೆಗೆ ತಕ್ಕ ಉಡುಪನ್ನು” ಉಟ್ಟುಕೊಳ್ಳಬೇಕೆಂದು ಪೌಲನ ಮಾತುಗಳು ತೋರಿಸುತ್ತವೆ. ಅವರ ತೋರಿಕೆಯು ಕೊಳಕಿನದ್ದು, ಚೊಕ್ಕಟವಿಲ್ಲದ್ದು ಅಥವಾ ಅಸ್ತವ್ಯಸ್ತವಾದದ್ದು ಆಗಿರಬಾರದು. ಕಾರ್ಯತಃ ಪ್ರತಿಯೊಬ್ಬರೂ—ಬಡವರಾಗಿರುವವರು ಸಹ—ತಮ್ಮ ಉಡುಪುಗಳು ನೀಟಾಗಿವೆ, ಶುದ್ಧವಾಗಿವೆ ಮತ್ತು ಕಾಣಲು ಅಂದವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ, ಆ ನ್ಯಾಯಸಮ್ಮತವಾದ ಮಟ್ಟಗಳನ್ನು ಪೂರೈಸಬಲ್ಲರು. ದೃಷ್ಟಾಂತಕ್ಕೆ, ದಕ್ಷಿಣ ಅಮೆರಿಕದ ಒಂದು ದೇಶದಲ್ಲಿ, ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಸಾಕ್ಷಿಗಳು ಕಾಡಿನ ಮಧ್ಯೆ ಅನೇಕ ಕಿಲೊಮೀಟರುಗಳಷ್ಟು ದೂರ ನಡೆದು, ಆ ಬಳಿಕ ದೋಣಿಗಳನ್ನು ಹತ್ತಿ ತಾಸುಗಟ್ಟಲೆ ಪ್ರಯಾಣ ಮಾಡುತ್ತಾರೆ. ಈ ಪ್ರಯಾಣದ ಸಮಯದಲ್ಲಿ, ಕೆಲವರು ನದಿಗೆ ಬೀಳುವುದೊ, ಮುಳ್ಳಿನ ಪೊದೆಗಳಲ್ಲಿ ಅವರ ಬಟ್ಟೆಗಳು ಹರಿದುಹೋಗುವುದೊ ಇದ್ದೇ ಇರುತ್ತದೆ. ಈ ಕಾರಣದಿಂದ, ಅಧಿವೇಶನದ ಪ್ರದೇಶಕ್ಕೆ ಬರುವಾಗ ಈ ಅಧಿವೇಶನಕಾರರು ತೋರಿಕೆಯಲ್ಲಿ ಅನೇಕವೇಳೆ ತುಸು ಅಸ್ತವ್ಯಸ್ತರಾಗಿ ಕಂಡುಬರುತ್ತಾರೆ. ಆದರೆ ಅವರು ಕೂಡಲೆ ಬಟನ್ಗಳನ್ನು ಹೊಲಿಯಲು, ಜಿಪ್ಗಳನ್ನು ಸರಿಮಾಡಲು ಮತ್ತು ಅಧಿವೇಶನಕ್ಕೆ ತಾವು ಧರಿಸಲಿರುವ ಬಟ್ಟೆಗಳನ್ನು ತೊಳೆದು ಇಸ್ತ್ರಿಮಾಡಲು ಸಮಯವನ್ನು ತೆಗೆದುಕೊಳ್ಳುತ್ತಾರೆ. ಯೆಹೋವನ ಮೇಜಿನ ಭೋಜನದಲ್ಲಿ ಉಣ್ಣಲು ಸಿಕ್ಕಿರುವ ಆಮಂತ್ರಣವನ್ನು ಅವರು ಬೆಲೆಯುಳ್ಳದ್ದಾಗಿ ಎಣಿಸುತ್ತಾರೆ ಮತ್ತು ಹೀಗೆ ತಕ್ಕ ರೀತಿಯ ಉಡುಪನ್ನು ತೊಡಲು ಅವರು ಬಯಸುತ್ತಾರೆ.
14. (ಎ) ‘ಮಾನಸ್ಥರಾಗಿಯೂ ಸ್ವಸ್ಥ ಮನಸ್ಸಿನವರಾಗಿಯೂ’ ಉಡುಪುಡುವುದು ಏನನ್ನು ಅರ್ಥೈಸುತ್ತದೆ? (ಬಿ) ನಾವು ‘ದೇವಭಕ್ತರೆನಿಸಿಕೊಳ್ಳುವ ಜನರಿಗೆ ಯುಕ್ತವಾಗಿರುವ’ ಉಡುಪನ್ನು ಧರಿಸುವುದರಲ್ಲಿ ಏನು ಒಳಗೂಡಿದೆ?
14 ನಾವು ‘ಮಾನಸ್ಥರಾಗಿಯೂ ಸ್ವಸ್ಥ ಮನಸ್ಸಿನವರಾಗಿಯೂ’ ಉಡುಪುಡಬೇಕೆಂದು ಪೌಲನು ಸೂಚಿಸುತ್ತಾನೆ. ಅಂದರೆ ನಮ್ಮ ತೋರಿಕೆಯು ಪ್ರದರ್ಶನಾತ್ಮಕವೂ, ವಿಚಿತ್ರವೂ, ಕಾಮಪ್ರಚೋದಕವೂ, ಅಂಗಾಂಗಗಳನ್ನು ಅಶ್ಲೀಲವಾಗಿ ತೋರಿಸುವಂತಹದ್ದೂ, ಗೀಳುಪ್ರಿಯವೂ ಆಗಿರಬಾರದೆಂದು ಅರ್ಥ. ಇದಕ್ಕೆ ಕೂಡಿಸಿ, ‘ದೇವಭಕ್ತಿ’ಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಾವು ಬಟ್ಟೆ ಧರಿಸಬೇಕು. ಇದು ನಾವು ಚಿಂತಿಸುವಂತೆ ಮಾಡುತ್ತದೆ, ಅಲ್ಲವೆ? ಕೇವಲ ಕೂಟಗಳಿಗೆ ಯೋಗ್ಯ ರೀತಿಯ ಉಡುಪನ್ನುಟ್ಟು, ಆ ಬಳಿಕ ಬೇರೆ ಸಮಯಗಳಲ್ಲಿ ಬಟ್ಟೆಯ ವಿಷಯದಲ್ಲಿ ತೀರ ಅಲಕ್ಷ್ಯಭಾವದಿಂದಿರಬೇಕೆಂದು ಇದರ ಅರ್ಥವಲ್ಲ. ನಾವು ದಿನದ 24 ತಾಸೂ ಕ್ರೈಸ್ತರಾಗಿರುವುದರಿಂದ ನಮ್ಮ ವೈಯಕ್ತಿಕ ತೋರಿಕೆಯು ಸದಾ ಭಕ್ತಿ ಮತ್ತು ಗೌರವಯೋಗ್ಯವಾದ ಮನೋಭಾವವನ್ನು ಪ್ರತಿಬಿಂಬಿಸಬೇಕು. ನಾವು ಮಾಡುತ್ತಿರುವ ಕೆಲಸಕ್ಕನುಸಾರವಾಗಿ ನಮ್ಮ ಕೆಲಸದ ಬಟ್ಟೆಗಳಾಗಲಿ, ಶಾಲಾ ವಸ್ತ್ರಗಳಾಗಲಿ ಇರಬೇಕೆಂಬುದು ನಿಜವಾದರೂ, ಆಗಲೂ ನಾವು ಮಾನ ಮತ್ತು ಘನತೆಯಿಂದ ಬಟ್ಟೆಧರಿಸಬೇಕು. ನಮ್ಮ ಉಡುಪು ಸದಾ ದೇವರಲ್ಲಿ ನಂಬಿಕೆಯನ್ನು ತೋರಿಸುವಂತಹದ್ದಾಗಿರುವಲ್ಲಿ, ನಮ್ಮ ತೋರಿಕೆಯ ವಿಷಯದಲ್ಲಿ ನಾಚಿಕೆಪಡುವ ಕಾರಣವಿಲ್ಲದಿರುವುದರಿಂದ, ನಾವು ಅನೌಪಚಾರಿಕವಾಗಿ ಸಾಕ್ಷಿ ನೀಡಲು ಎಂದಿಗೂ ಹಿಂಜರಿಯೆವು.—1 ಪೇತ್ರ 3:15.
‘ಲೋಕವನ್ನು ಪ್ರೀತಿಸಬೇಡಿ’
15, 16. (ಎ) ಉಡುಪು ಮತ್ತು ಕೇಶಾಲಂಕಾರದ ವಿಷಯದಲ್ಲಿ ನಾವು ಲೋಕವನ್ನು ಅನುಕರಿಸುವುದರಿಂದ ದೂರವಿರುವುದು ಏಕೆ ಪ್ರಾಮುಖ್ಯವಾದದ್ದಾಗಿದೆ? (1 ಯೋಹಾನ 5:19) (ಬಿ) ಯಾವ ಪ್ರಾಯೋಗಿಕ ಕಾರಣಕ್ಕಾಗಿ ನಾವು ಉಡುಪು ಮತ್ತು ಕೇಶಾಲಂಕಾರದ ಗೀಳುಗಳಿಂದ ದೂರವಿರಬೇಕು?
15 ಒಂದನೆಯ ಯೋಹಾನ 2:15, 16ರಲ್ಲಿ ಕೊಡಲ್ಪಟ್ಟಿರುವ ಸಲಹೆಯು ಸಹ, ಉಡುಪು ಮತ್ತು ಕೇಶಾಲಂಕಾರದ ನಮ್ಮ ಆಯ್ಕೆಯ ವಿಷಯದಲ್ಲಿ ಮಾರ್ಗದರ್ಶನವನ್ನು ಒದಗಿಸುತ್ತದೆ. ನಾವು ಅಲ್ಲಿ ಹೀಗೆ ಓದಬಹುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.”
16 ಆ ಸಲಹೆ ಎಷ್ಟು ಸಮಯೋಚಿತವಾಗಿದೆ! ಸಮಾನಸ್ಥರ ಒತ್ತಡವು ಹಿಂದೆಂದಿಗಿಂತಲೂ ಹೆಚ್ಚು ತೀಕ್ಷ್ಣವಾಗಿರುವ ಈ ಯುಗದಲ್ಲಿ, ಈ ಲೋಕವು ನಮ್ಮ ಉಡುಪಿನ ಆಯ್ಕೆಯನ್ನು ನಿಯಂತ್ರಿಸುವಂತೆ ನಾವು ಬಿಡಬಾರದು. ಇತ್ತೀಚಿನ ವರ್ಷಗಳಲ್ಲಿ ಉಡುಪು ಮತ್ತು ಕೇಶಾಲಂಕಾರದ ಶೈಲಿಗಳು ಅವನತಿಗಿಳಿದಿವೆ. ವ್ಯಾಪಾರ ಹಾಗೂ ವೃತ್ತಿಪರ ಜನರ ಉಡುಪಿನ ನಿಯಮಾವಳಿ ಸಹ, ಕ್ರೈಸ್ತರಿಗೆ ಯಾವುದು ಸೂಕ್ತವಾದದ್ದಾಗಿದೆ ಎಂಬುದರ ವಿಷಯದಲ್ಲಿ ಯಾವಾಗಲೂ ವಿಶ್ವಾಸಾರ್ಹವಾದ ಮಟ್ಟವನ್ನು ಒದಗಿಸುವುದಿಲ್ಲ. ನಾವು ದೇವರ ಮಟ್ಟಗಳಿಗನುಸಾರ ಜೀವಿಸಬೇಕಾದರೆ ಮತ್ತು ಹೀಗೆ “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರ”ವಾಗಿರಬೇಕಾದರೆ, ನಾವು ಏಕೆ ಯಾವಾಗಲೂ “ಇಹಲೋಕದ ನಡವಳಿಕೆಯನ್ನು ಅನುಸರಿಸದೆ” ಇರುವುದರ ಆವಶ್ಯಕತೆಯ ಅರಿವುಳ್ಳವರಾಗಿರಬೇಕು ಎಂಬುದಕ್ಕೆ ಇದು ಇನ್ನೊಂದು ಕಾರಣವಾಗಿದೆ.—ರೋಮಾಪುರ 12:2; ತೀತ 2:10.
17. (ಎ) ನಾವು ಬಟ್ಟೆಯನ್ನು ಖರೀದಿಸುವಾಗ ಅಥವಾ ಒಂದು ಶೈಲಿಯನ್ನು ಆಯ್ಕೆಮಾಡುವಾಗ ಯಾವ ಪ್ರಶ್ನೆಗಳನ್ನು ಪರಿಗಣಿಸಸಾಧ್ಯವಿದೆ? (ಬಿ) ಕುಟುಂಬ ಸದಸ್ಯರ ವೈಯಕ್ತಿಕ ತೋರಿಕೆಯ ವಿಷಯದಲ್ಲಿ ಕುಟುಂಬದ ಯಜಮಾನರು ಏಕೆ ಆಸಕ್ತಿ ವಹಿಸಬೇಕು?
17 ಬಟ್ಟೆಯನ್ನು ಖರೀದಿಸುವುದಕ್ಕೆ ನಿರ್ಣಯಿಸುವ ಮೊದಲಾಗಿ, ‘ಈ ಶೈಲಿ ನನಗೇಕೆ ಹಿಡಿಸುತ್ತದೆ? ನಾನು ಮೆಚ್ಚುವ ಪ್ರಸಿದ್ಧ ಮನೋರಂಜನೆಗಾರನು ಇದನ್ನು ಧರಿಸುತ್ತಾನೆಂದೊ? ಈ ಶೈಲಿಯನ್ನು ಒಂದು ರಸ್ತೆ ಪುಂಡರ ಗುಂಪು ಇಲ್ಲವೆ ಸ್ವತಂತ್ರ, ದಂಗೆಕೋರ ಮನೋಭಾವವನ್ನು ಬೆಳೆಸುವವರ ಗುಂಪು ಆರಿಸಿಕೊಂಡಿದೆಯೊ?’ ಎಂದು ಕೇಳಿಕೊಳ್ಳುವುದು ವಿವೇಕಪ್ರದ. ಆ ಉಡುಪನ್ನು ನಾವು ಸೂಕ್ಷ್ಮವಾಗಿ ಪರೀಕ್ಷಿಸುವುದೂ ಅಗತ್ಯ. ಅದು ಉಡುಪೊ ಲಂಗವೊ ಆಗಿರುವಲ್ಲಿ, ಅದರ ಉದ್ದವೆಷ್ಟಿದೆ? ಅದನ್ನು ಯಾವ ಆಕಾರದಲ್ಲಿ ಕತ್ತರಿಸಿ ಮಾಡಲಾಗಿದೆ? ಆ ಉಡುಪು ಮರ್ಯಾದೆಯದ್ದೂ, ಉಚಿತವಾದದ್ದೂ, ಘನತೆಯುಳ್ಳದ್ದೂ ಆಗಿದೆಯೊ ಅಥವಾ ಮೈಗೆ ಅಂಟಿಕೊಳ್ಳುವಷ್ಟು ಬಿಗಿಯಾದದ್ದು, ಕಾಮಪ್ರಚೋದಕವಾದದ್ದೂ ಆಗಿದೆಯೊ ಇಲ್ಲವೆ ಅಚ್ಚುಕಟ್ಟಿಲ್ಲದ್ದಾಗಿದೆಯೊ? ಸ್ವತಃ ಹೀಗೆ ಕೇಳಿಕೊಳ್ಳಿ: ‘ನಾನು ಈ ಉಡುಪನ್ನು ತೊಡುವಲ್ಲಿ ಅದು ಇತರರನ್ನು ಮುಗ್ಗರಿಸಿ ಬೀಳಿಸಲು ಕಾರಣವಾದೀತೊ?’ (2 ಕೊರಿಂಥ 6:3, 4) ಇದು ನಮಗೇಕೆ ಚಿಂತೆಗೆ ಕಾರಣವಾಗಿರಬೇಕು? ಬೈಬಲು, “ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ,” ಎಂದು ಹೇಳುವ ಕಾರಣವೇ. (ರೋಮಾಪುರ 15:3) ಕ್ರೈಸ್ತ ಕುಟುಂಬಗಳ ಯಜಮಾನರು ತಮ್ಮ ಕುಟುಂಬದವರ ತೋರಿಕೆಯ ವಿಷಯದಲ್ಲಿ ಆಸಕ್ತಿ ವಹಿಸಬೇಕು. ತಾವು ಆರಾಧಿಸುವ ಮಹಿಮಾಭರಿತ ದೇವರ ಮೇಲೆ ಅವರಿಗಿರುವ ಗೌರವದ ಕಾರಣ, ಕುಟುಂಬದ ಯಜಮಾನರು ಅಗತ್ಯವಿರುವಲ್ಲಿ ದೃಢವಾದ, ಪ್ರೀತಿಪೂರ್ವಕವಾದ ಸಲಹೆಯನ್ನು ನೀಡಲು ಹಿಂಜರಿಯಬಾರದು.—ಯಾಕೋಬ 3:13.
18. ನಿಮ್ಮ ಉಡುಪು ಮತ್ತು ಕೇಶಾಲಂಕಾರಕ್ಕೆ ಜಾಗರೂಕ ಗಮನವನ್ನು ಕೊಡುವಂತೆ ಯಾವುದು ನಿಮ್ಮನ್ನು ಪ್ರಚೋದಿಸುತ್ತದೆ?
18 ನಾವು ಒಯ್ಯುತ್ತಿರುವ ಸಂದೇಶವು, ಯಾರು ಘನತೆ ಮತ್ತು ಪರಿಶುದ್ಧತೆಯ ಸಾಕಾರವಾಗಿದ್ದಾನೋ ಆ ಯೆಹೋವನಿಂದ ಬರುತ್ತದೆ. (ಯೆಶಾಯ 6:3) ನಾವು ಆತನ “ಪ್ರಿಯರಾದ ಮಕ್ಕಳು” ಆಗಿ ಆತನನ್ನು ಅನುಕರಿಸುವಂತೆ ಬೈಬಲು ಉತ್ತೇಜನ ಕೊಡುತ್ತದೆ. (ಎಫೆಸ 5:1) ನಮ್ಮ ಉಡುಪು ಮತ್ತು ಕೇಶಾಲಂಕಾರವು ನಮ್ಮ ಸ್ವರ್ಗೀಯ ತಂದೆಯ ಮೇಲೆ ಒಂದೇ ಒಳ್ಳೆಯ ಇಲ್ಲವೆ ಕೆಟ್ಟ ಪರಿಣಾಮವನ್ನು ಬೀರಬಲ್ಲದು. ನಮ್ಮ ಅಪೇಕ್ಷೆಯಾದರೊ ಆತನ ಹೃದಯವನ್ನು ಸಂತೋಷಪಡಿಸುವುದೇ ಎಂಬುದಂತೂ ನಿಶ್ಚಯ!—ಜ್ಞಾನೋಕ್ತಿ 27:11.
19. “ದೇವರ ಮಹತ್ತುಗಳ”ನ್ನು ಇತರರಿಗೆ ತಿಳಿಯಪಡಿಸುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?
19 ನೀವು ಕಲಿತಿರುವ “ದೇವರ ಮಹತ್ತುಗಳ” ಕುರಿತು ನಿಮಗೆ ಹೇಗನಿಸುತ್ತದೆ? ನಾವು ಸತ್ಯವನ್ನು ಕಲಿತಿರುವುದಕ್ಕಾಗಿ ನಾವೆಷ್ಟು ಅನುಗ್ರಹಪಾತ್ರರು! ಯೇಸು ಕ್ರಿಸ್ತನ ಸುರಿಸಲ್ಪಟ್ಟ ರಕ್ತದಲ್ಲಿಟ್ಟಿರುವ ನಂಬಿಕೆಯ ಕಾರಣ, ನಮ್ಮ ಪಾಪಗಳು ಕ್ಷಮಿಸಲ್ಪಡುತ್ತವೆ. (ಅ. ಕೃತ್ಯಗಳು 2:38) ಇದರ ಪರಿಣಾಮವಾಗಿ, ದೇವರ ಮುಂದೆ ನಮಗೆ ವಾಕ್ಸ್ವಾತಂತ್ರ್ಯವಿದೆ. ನಿರೀಕ್ಷಾರಹಿತರಂತೆ, ನಾವು ಮರಣಭಯದಿಂದಿರುವುದಿಲ್ಲ. ಬದಲಿಗೆ, “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ” ದಿನದ ವಿಷಯದಲ್ಲಿ ಯೇಸು ಕೊಟ್ಟ ಆಶ್ವಾಸನೆ ನಮಗಿದೆ. (ಯೋಹಾನ 5:28, 29) ಯೆಹೋವನು ಈ ಸಕಲ ವಿಷಯಗಳನ್ನು ನಮಗೆ ತಿಳಿಸಿಕೊಟ್ಟಿರುವುದರಲ್ಲಿ ತನ್ನ ಕೃಪಾಶೀಲತೆಯನ್ನು ತೋರಿಸಿರುತ್ತಾನೆ. ಇದಲ್ಲದೆ, ತನ್ನ ಆತ್ಮವನ್ನೂ ಆತನು ನಮ್ಮ ಮೇಲೆ ಸುರಿಸಿರುತ್ತಾನೆ. ಆದುದರಿಂದ, ಈ ಸಕಲ ಸುವರಗಳಿಗಾಗಿ ನಮ್ಮಲ್ಲಿರುವ ಕೃತಜ್ಞತಾಭಾವವು, ನಾವು ಆತನ ಉನ್ನತ ಮಟ್ಟಗಳಿಗೆ ಮಾನವನ್ನು ತೋರಿಸಿ, ಹುರುಪಿನಿಂದ, ಈ “ಮಹತ್ತು”ಗಳನ್ನು ಸಾರುತ್ತಾ ಆತನನ್ನು ಸ್ತುತಿಸುವಂತೆ ನಮ್ಮನ್ನು ಪ್ರಚೋದಿಸಬೇಕು.
[ಪಾದಟಿಪ್ಪಣಿಗಳು]
a ಮೋಶೆ ಮತ್ತು ಆರೋನರು ತನ್ನ ಜನರ ಪರವಾಗಿ ಫರೋಹನೊಂದಿಗೆ ಮಾತಾಡುವಂತೆ ಯೆಹೋವನು ನೇಮಿಸಿದಾಗ, ಆತನು ಮೋಶೆಗೆ ಹೇಳಿದ್ದು: “ನಿನ್ನನ್ನು ಫರೋಹನಿಗೆ ದೇವರ ಸ್ಥಾನದಲ್ಲಿ ನೇಮಿಸಿದ್ದೇನೆ, ನೋಡು. ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು.” (ಓರೆ ಅಕ್ಷರಗಳು ನಮ್ಮವು.) (ವಿಮೋಚನಕಾಂಡ 7:1) ಆರೋನನು ಇಲ್ಲಿ ಪ್ರವಾದಿಯಾಗಿ ಸೇವೆ ಮಾಡಿದ್ದು, ಭವಿಷ್ಯವಾಣಿಯನ್ನು ನುಡಿಯುವ ಅರ್ಥದಲ್ಲಲ್ಲ, ಮೋಶೆಯ ಪ್ರತಿನಿಧಿಯಾಗಿ ಅಥವಾ ವದನಕನಾಗಿದ್ದ ಅರ್ಥದಲ್ಲಿಯೇ.
b ಮಾರ್ಚ್ 28, 2002ರಂದು ಕರ್ತನ ಸಂಧ್ಯಾ ಭೋಜನದ ವಾರ್ಷಿಕಾಚರಣೆಗೆ ಕೂಡಿಬಂದ ಮಹಾ ಸಮೂಹದವರಲ್ಲಿ ಲಕ್ಷಾಂತರ ಮಂದಿ ಇನ್ನೂ ಯೆಹೋವನನ್ನು ಕ್ರಿಯಾಶೀಲರಾಗಿ ಸೇವಿಸುತ್ತಿಲ್ಲ. ಈ ಆಸಕ್ತರಲ್ಲಿ ಅನೇಕರ ಹೃದಯಗಳು ಸುವಾರ್ತೆಯ ಪ್ರಚಾರಕರಾಗುವ ಸುಯೋಗವನ್ನು ಎಟುಕಿಸಿಕೊಳ್ಳಲು ಬೇಗನೆ ಪ್ರೇರಿಸಲ್ಪಡಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ.
c ಪೌಲನ ಮಾತುಗಳು ಕ್ರೈಸ್ತ ಸ್ತ್ರೀಯರಿಗೆ ಸಂಬೋಧಿಸಲ್ಪಟ್ಟಿರುವುದಾದರೂ, ಕ್ರೈಸ್ತ ಪುರುಷರಿಗೂ ಯುವಜನರಿಗೂ ಅವೇ ಮೂಲತತ್ತ್ವಗಳು ಅನ್ವಯವಾಗುತ್ತವೆ.
ಹೇಗೆ ಉತ್ತರಕೊಡುವಿರಿ?
• ಸಾ.ಶ. 33ರ ಪಂಚಾಶತ್ತಮದಲ್ಲಿ ಜನರು ಯಾವ “ಮಹತ್ತುಗಳ” ಕುರಿತು ಕೇಳಿಸಿಕೊಂಡರು, ಮತ್ತು ಅದಕ್ಕೆ ಅವರು ಹೇಗೆ ಪ್ರತಿವರ್ತನೆ ತೋರಿಸಿದರು?
• ಒಬ್ಬನು ಯೇಸು ಕ್ರಿಸ್ತನ ಶಿಷ್ಯನಾಗುವುದು ಹೇಗೆ, ಮತ್ತು ಶಿಷ್ಯನಾಗುವುದರಲ್ಲಿ ಏನೆಲ್ಲ ಸೇರಿಕೊಂಡಿದೆ?
• ನಮ್ಮ ಉಡುಪು ಮತ್ತು ಕೇಶಾಲಂಕಾರಕ್ಕೆ ನಾವು ಗಮನಕೊಡುವುದು ಏಕೆ ಪ್ರಾಮುಖ್ಯ?
• ಒಂದು ಉಡುಪೊ ಶೈಲಿಯೊ ಯೋಗ್ಯವೆಂಬುದನ್ನು ನಿರ್ಧರಿಸಲು ಯಾವ ಸಂಗತಿಗಳನ್ನು ಪರಿಗಣಿಸಬೇಕು?
[ಪುಟ 15ರಲ್ಲಿರುವ ಚಿತ್ರ]
ಯೇಸು ಸತ್ತವರೊಳಗಿಂದ ಎದ್ದು ಬಂದಿದ್ದಾನೆಂದು ಪೇತ್ರನು ಪ್ರಕಟಿಸಿದನು
[ಪುಟ 17ರಲ್ಲಿರುವ ಚಿತ್ರಗಳು]
ನಿಮ್ಮ ವೈಯಕ್ತಿಕ ತೋರಿಕೆಯು ನೀವು ಆರಾಧಿಸುವ ದೇವರಿಗೆ ಒಳ್ಳೇ ಹೆಸರನ್ನು ತರುತ್ತದೊ?
[ಪುಟ 18ರಲ್ಲಿರುವ ಚಿತ್ರಗಳು]
ಕ್ರೈಸ್ತ ಹೆತ್ತವರು ತಮ್ಮ ಕುಟುಂಬ ಸದಸ್ಯರ ತೋರಿಕೆಯಲ್ಲಿ ಆಸಕ್ತಿವಹಿಸಬೇಕು