ದೇವರಿಂದ ಮಹಿಮೆಯನ್ನು ಹೊಂದಲು ಯಾವುದೂ ನಿಮಗೆ ಅಡ್ಡಿಯಾಗದಿರಲಿ
“ದೀನಮನಸ್ಸುಳ್ಳವನು ಮಾನವನ್ನು [ಮಹಿಮೆಯನ್ನು, NW] ಪಡೆಯುವನು.”—ಜ್ಞಾನೋ. 29:23.
ನಿಮ್ಮ ಉತ್ತರವೇನು?
ದೇವರು ನಮಗೆ ಯಾವ ರೀತಿಯಲ್ಲಿ ಮಹಿಮೆಯನ್ನು ಕೊಡುತ್ತಾನೆ?
ಆ ಮಹಿಮೆಯನ್ನು ಹೊಂದದಂತೆ ಯಾವುದು ನಮಗೆ ಅಡ್ಡಿಯಾಗಬಲ್ಲದು?
ನಾವು ತೋರಿಸುವ ತಾಳ್ಮೆ ಇತರರಿಗೆ ಹೇಗೆ ಮಹಿಮೆಯನ್ನು ತರಬಲ್ಲದು?
1, 2. (1) “ಮಹಿಮೆ” ಎಂಬ ಪದಕ್ಕೆ ಮೂಲಭಾಷೆಯಲ್ಲಿ ಯಾವ ಅರ್ಥವಿದೆ? (2) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
ಮಹಿಮೆ ಘನ ಮಾನ ಎಂಬ ಪದಗಳನ್ನು ಕೇಳಿಸಿಕೊಳ್ಳುವಾಗ ಯಾವುದು ನಿಮ್ಮ ಮನಸ್ಸಿಗೆ ಬರುತ್ತದೆ? ದೇವರನ್ನು ಮಹಿಮೆಗೇರಿಸುವ ಅದ್ಭುತ ಸೃಷ್ಟಿ ನೆನಪಾಗುತ್ತದೆಯೇ? (ಕೀರ್ತ. 19:1) ಅಥವಾ ಜನರು ಸಿರಿವಂತರಿಗೆ, ಮೇಧಾವಿಗಳಿಗೆ, ದೊಡ್ಡ ಸಾಧನೆ ಮಾಡಿದವರಿಗೆ ಕೊಡುವ ಮಾನ ನೆನಪಾಗುತ್ತದೆಯೇ? ಬೈಬಲ್ ವಚನಗಳಲ್ಲಿ ಬಳಸಲಾಗಿರುವ “ಮಹಿಮೆ” ಅಥವಾ “ಘನತೆ” ಎಂಬ ಪದಕ್ಕೆ ಮೂಲಭಾಷೆಯಲ್ಲಿರುವ ಪದದ ಅರ್ಥ “ಭಾರ” ಎಂದಾಗಿದೆ. ಪ್ರಾಚೀನ ಕಾಲದಲ್ಲಿ ನಾಣ್ಯಗಳನ್ನು ಬೆಲೆಬಾಳುವ ಲೋಹಗಳಿಂದ ತಯಾರಿಸಲಾಗುತ್ತಿತ್ತು. ನಾಣ್ಯದ ಭಾರ ಎಷ್ಟು ಹೆಚ್ಚಿರುತ್ತಿತ್ತೊ ಅದರ ಮೌಲ್ಯವೂ ಅಷ್ಟೆ ಹೆಚ್ಚಾಗಿರುತ್ತಿತ್ತು. ಹಾಗಾಗಿ ಸಮಯ ಕಳೆದಂತೆ ಭಾರವಾದವುಗಳನ್ನು ಸೂಚಿಸಲು ಬಳಸಲಾದ ಪದಗಳು ‘ಬಹು ಅಮೂಲ್ಯ,’ ‘ಘನವೈಭವವುಳ್ಳ,’ ‘ಪ್ರಭಾವಶಾಲಿ’ ಎಂಬ ಸಾಂಕೇತಿಕ ಅರ್ಥವನ್ನು ಪಡೆದುಕೊಂಡವು.
2 ಸಾಮಾನ್ಯವಾಗಿ ಜನರು ಇತರರ ಸ್ಥಾನ, ಅಧಿಕಾರ, ಪ್ರಖ್ಯಾತಿ ನೋಡಿ ಅವರಿಗೆ ಮಾನ ಕೊಡುತ್ತಾರೆ. ಯೆಹೋವನು ಮಾನವರಿಗೆ ಮಹಿಮೆಯನ್ನು ಕೊಡುತ್ತಾನೆಂದು ಬೈಬಲ್ ಹೇಳುತ್ತದೆ. ಹಾಗಾದರೆ ಆತನು ನಮ್ಮಲ್ಲಿ ಏನನ್ನು ನೋಡುತ್ತಾನೆ? ಜ್ಞಾನೋಕ್ತಿ 22:4 ಹೇಳುವುದು: “ಧನ ಮಾನ [ಮಹಿಮೆ, NW] ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.” ಶಿಷ್ಯ ಯಾಕೋಬನು ಬರೆದದ್ದು: “ಯೆಹೋವನ ದೃಷ್ಟಿಯಲ್ಲಿ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ಆತನು ನಿಮ್ಮನ್ನು ಉನ್ನತಕ್ಕೇರಿಸುವನು.” (ಯಾಕೋ. 4:10) ದೇವರು ಯಾವ ರೀತಿಯಲ್ಲಿ ನಮಗೆ ಮಹಿಮೆ ಕೊಡುತ್ತಾನೆ? ಆ ಮಹಿಮೆಯನ್ನು ಪಡೆಯಲು ಯಾವುದು ನಮಗೆ ತಡೆಯಾಗಬಲ್ಲದು? ಇತರರೂ ದೇವರಿಂದ ಮಹಿಮೆಯನ್ನು ಹೊಂದಲು ನಾವು ಹೇಗೆ ನೆರವಾಗಬಹುದು?
3-5. ಯೆಹೋವನು ನಮಗೆ ಹೇಗೆ ಮಹಿಮೆಯನ್ನು ಕೊಡುತ್ತಾನೆ?
3 ಯೆಹೋವನು ‘ನನ್ನ ಬಲಗೈಯನ್ನು ಹಿಡಿದು ಮಹಿಮೆಗೆ ನಡೆಸುವನು’ ಎಂದು ಹೇಳುವ ಮೂಲಕ ಕೀರ್ತನೆಗಾರನು ಯೆಹೋವನಲ್ಲಿ ತನಗಿದ್ದ ಭರವಸೆಯನ್ನು ವ್ಯಕ್ತಪಡಿಸಿದನು. (ಕೀರ್ತನೆ 73:23, 24 ಓದಿ.) ಹಾಗಾದರೆ ಯೆಹೋವನು ತನ್ನ ದೀನ ಸೇವಕರಿಗೆ ಹೇಗೆ ಮಹಿಮೆ ಕೊಡುತ್ತಾನೆ? ಅವರನ್ನು ಗೌರವಿಸುವ ಮೂಲಕ. ಅದನ್ನು ಆತನು ಅನೇಕ ವಿಧಗಳಲ್ಲಿ ಮಾಡುತ್ತಾನೆ. ಉದಾಹರಣೆಗೆ, ಅವರು ತನ್ನ ಚಿತ್ತವನ್ನು ಅರ್ಥ ಮಾಡಿಕೊಳ್ಳಲು ಸಹಾಯಮಾಡುತ್ತಾನೆ. (1 ಕೊರಿಂ. 2:7) ತನ್ನ ವಾಕ್ಯವನ್ನು ಆಲಿಸಿ ಪಾಲಿಸುವವರಿಗೆ ತನ್ನೊಂದಿಗೆ ಸ್ನೇಹ ಬೆಳೆಸಿಕೊಳ್ಳುವ ಅವಕಾಶ ಕೊಡುವ ಮೂಲಕ ಘನಮಾನ ಕೊಡುತ್ತಾನೆ.—ಯಾಕೋ. 4:8.
4 ಯೆಹೋವನು ತನ್ನ ಸೇವಕರಿಗೆ ಸುವಾರ್ತೆ ಸಾರುವ ಮಹಿಮಾನ್ವಿತ ಸುಯೋಗವನ್ನು ಸಹ ಕೊಟ್ಟಿದ್ದಾನೆ. (2 ಕೊರಿಂ. 4:1, 7) ಈ ಸುಯೋಗ ನಮ್ಮನ್ನು ಮಹಿಮೆಗೆ ನಡೆಸುತ್ತದೆ. ಯಾರು ಈ ಸುಯೋಗವನ್ನು ಯೆಹೋವನನ್ನು ಸ್ತುತಿಸಲಿಕ್ಕಾಗಿ ಮತ್ತು ಇತರರಿಗೆ ಪ್ರಯೋಜನ ತರಲಿಕ್ಕಾಗಿ ಉಪಯೋಗಿಸುತ್ತಾರೋ ಅವರಿಗೆ ಯೆಹೋವನು ಹೀಗೆ ವಾಗ್ದಾನ ಮಾಡಿದ್ದಾನೆ: “ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು.” (1 ಸಮು. 2:30) ಹೌದು, ಅವರು ಯೆಹೋವನಿಂದ ಒಂದು ಉತ್ತಮ ಹೆಸರನ್ನು ಗಳಿಸುತ್ತಾರೆ. ಅಷ್ಟೇ ಅಲ್ಲ ಸಭೆಯಲ್ಲಿರುವ ಇತರರ ಮೆಚ್ಚುಗೆಗೂ ಪಾತ್ರರಾಗುತ್ತಾರೆ.—ಜ್ಞಾನೋ. 11:16; 22:1.
5 ‘ಯೆಹೋವನನ್ನು ನಿರೀಕ್ಷಿಸಿ ಆತನ ಮಾರ್ಗವನ್ನೇ ಅನುಸರಿಸುವವರಿಗೆ’ ಯಾವ ಭವಿಷ್ಯವಿದೆ? ಈ ವಾಗ್ದಾನ ಅವರಿಗಿದೆ: “ಆತನು [ಯೆಹೋವನು] ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.” (ಕೀರ್ತ. 37:34) ಹೌದು, ಅವರು ಭೂಮಿಯ ಮೇಲೆ ನಿತ್ಯನಿರಂತರ ಜೀವಿಸುವರು. ಯೆಹೋವನಿಂದ ಎಂಥ ಅಪೂರ್ವ ಮಹಿಮೆ ಅವರಿಗೆ!—ಕೀರ್ತ. 37:29.
“ನಾನು ಮನುಷ್ಯರಿಂದ ಮಹಿಮೆಯನ್ನು ಸ್ವೀಕರಿಸುವುದಿಲ್ಲ”
6, 7. ಅನೇಕರು ಯೇಸುವನ್ನು ಯಾಕೆ ನಂಬಲಿಲ್ಲ?
6 ಯೆಹೋವನಿಂದ ಮಹಿಮೆ ಪಡೆಯುವುದನ್ನು ಯಾವುದು ತಡೆಯಬಲ್ಲದು? ಒಂದು, ಯೆಹೋವನೊಂದಿಗೆ ಸ್ನೇಹ ಇಲ್ಲದವರ ಅಭಿಪ್ರಾಯಗಳಿಗೆ ಹೆಚ್ಚು ಮಹತ್ವ ಕೊಡುವುದು. ಯೇಸುವಿನ ಕಾಲದಲ್ಲಿದ್ದ ಅಧಿಪತಿಗಳು ಹೀಗೆಯೇ ಮಾಡಿದರು. ಅವರ ಕುರಿತು ಅಪೊಸ್ತಲ ಯೋಹಾನನು ಬರೆದದ್ದನ್ನು ಗಮನಿಸಿ: “ಅಧಿಪತಿಗಳಲ್ಲಿಯೂ ಅನೇಕರು [ಯೇಸುವಿನಲ್ಲಿ] ನಂಬಿಕೆಯಿಟ್ಟರು, ಆದರೆ ಫರಿಸಾಯರ ನಿಮಿತ್ತ ಸಭಾಮಂದಿರದಿಂದ ಬಹಿಷ್ಕರಿಸಲ್ಪಡದಿರಲಿಕ್ಕಾಗಿ ಅವರು ಅವನಲ್ಲಿ ನಂಬಿಕೆಯಿಟ್ಟಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ; ಏಕೆಂದರೆ ಅವರು ದೇವರಿಂದ ಬರುವ ಮಹಿಮೆಗಿಂತಲೂ ಹೆಚ್ಚಾಗಿ ಮನುಷ್ಯರ ಮಹಿಮೆಯನ್ನು ಇಷ್ಟಪಟ್ಟರು.” (ಯೋಹಾ. 12:42, 43) ಆ ಅಧಿಪತಿಗಳು ಫರಿಸಾಯರ ಮಾತುಗಳಿಗೆ, ಅವರ ಅಭಿಪ್ರಾಯಗಳಿಗೆ ಅಷ್ಟೊಂದು ಪ್ರಮುಖತೆ ಕೊಡದಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ?
7 ಅನೇಕ ಜನರು ತನ್ನನ್ನು ಯಾಕೆ ಸ್ವೀಕರಿಸುವುದಿಲ್ಲ ಮತ್ತು ನಂಬುವುದಿಲ್ಲ ಎಂದು ಯೇಸು ತನ್ನ ಶುಶ್ರೂಷೆಯ ಆರಂಭದಲ್ಲಿ ಸ್ಪಷ್ಟಪಡಿಸಿದನು. (ಯೋಹಾನ 5:39-44 ಓದಿ.) ಮೆಸ್ಸೀಯನು ಬರುವ ವಿಷಯ ಇಸ್ರಾಯೇಲ್ಯರಿಗೇನು ಗೊತ್ತಿಲ್ಲದ ವಿಷಯವಾಗಿರಲಿಲ್ಲ. ಅವನು ಬರುವುದನ್ನು ಇಡೀ ಇಸ್ರಾಯೇಲ್ ಜನಾಂಗದವರು ಅನೇಕ ಶತಮಾನಗಳಿಂದ ಕಾಯುತ್ತಾ ಇದ್ದರು. ಯೇಸು ಸಾರುವ ಕೆಲಸವನ್ನು ಆರಂಭಿಸಿದ ಸಮಯದಲ್ಲಿ ಕೆಲವರು ಕ್ರಿಸ್ತನ ಆಗಮನದ ಸಮಯ ಇದೇ ಎಂದು ದಾನಿಯೇಲನ ಪ್ರವಾದನೆಯಿಂದ ಗ್ರಹಿಸಿದ್ದಿರಬೇಕು. ಅದು ಹೇಗೆ ಗೊತ್ತಾಗುತ್ತದೆಂದರೆ ಕೆಲವು ತಿಂಗಳ ಹಿಂದೆಯಷ್ಟೇ ಸ್ನಾನಿಕ ಯೋಹಾನನು ಸುವಾರ್ತೆ ಸಾರುತ್ತಿದ್ದಾಗ “ಪ್ರಾಯಶಃ ಇವನೇ ಕ್ರಿಸ್ತನಾಗಿರಬಹುದೊ” ಎಂದು ಅನೇಕರು ಅಂದುಕೊಂಡರು. (ಲೂಕ 3:15) ವರ್ಷಗಳಿಂದ ಕಾಯುತ್ತಿದ್ದ ಮೆಸ್ಸೀಯನು ಈಗ ಅವರ ಮಧ್ಯೆ ನಿಂತು ಬೋಧಿಸುತ್ತಿದ್ದನು. ಆದರೂ ಧರ್ಮಶಾಸ್ತ್ರದಲ್ಲಿ ಪ್ರವೀಣರಾಗಿದ್ದವರೇ ಅವನನ್ನು ಸ್ವೀಕರಿಸಲಿಲ್ಲ. ಏಕೆ? ಉತ್ತರ ಯೇಸುವಿನ ಈ ಮಾತುಗಳಲ್ಲಿದೆ: “ನೀವು ಒಬ್ಬರಿಂದ ಇನ್ನೊಬ್ಬರಿಗೆ ಸಿಗುವ ಮಹಿಮೆಯನ್ನು ಸ್ವೀಕರಿಸುತ್ತಿದ್ದು, ಒಬ್ಬನೇ ದೇವರಿಂದ ಬರುವ ಮಹಿಮೆಯನ್ನು ಪಡೆಯಲು ಪ್ರಯತ್ನಿಸದಿರುವಾಗ ನೀವು ನಂಬುವುದಾದರೂ ಹೇಗೆ?”
8, 9. ಮನುಷ್ಯರಿಂದ ಸಿಗುವ ಮಹಿಮೆಯು ದೇವರಿಂದ ಸಿಗುವ ಮಹಿಮೆಯನ್ನು ಹೇಗೆ ಅಲ್ಪ ಮೌಲ್ಯದ್ದಾಗಿ ತೋರಿಸುತ್ತದೆ ಎನ್ನುವುದನ್ನು ಬೆಳಕಿನ ದೃಷ್ಟಾಂತದ ಮೂಲಕ ವಿವರಿಸಿ.
8 ಮನುಷ್ಯರಿಂದ ಸಿಗುವ ಮಹಿಮೆಯು ದೇವರಿಂದ ಸಿಗುವ ಮಹಿಮೆಯನ್ನು ಹೇಗೆ ಅಲ್ಪ ಮೌಲ್ಯದ್ದಾಗಿ ತೋರಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ದೃಷ್ಟಾಂತ ಗಮನಿಸಿ. ಮಹಿಮೆಯನ್ನು ಬೆಳಕಿಗೆ ಹೋಲಿಸಬಹುದು. ನಮ್ಮ ಇಡೀ ವಿಶ್ವ ಬೆಳಕಿನ ಭಂಡಾರ. ಕತ್ತಲ ರಾತ್ರಿಯಲ್ಲಿ ಆಕಾಶದೆಡೆ ತಲೆಯೆತ್ತಿ ನೋಡಿದಾಗ ಮಿನುಗುವ ಸಾವಿರಾರು ನಕ್ಷತ್ರಗಳು ನಿಮ್ಮ ಮನಸೂರೆಗೊಳಿಸಿರಬಹುದು. “ನಕ್ಷತ್ರಗಳ ಮಹಿಮೆ” ನಿಜಕ್ಕೂ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. (1 ಕೊರಿಂ. 15:40, 41) ಅದೇ ನೀವು ನಗರ ಪ್ರದೇಶದಲ್ಲಿ ನಿಂತು ವೀಕ್ಷಿಸುವುದಾದರೆ ನಕ್ಷತ್ರಗಳು ಅಷ್ಟಾಗಿ ಕಾಣುವುದಿಲ್ಲ. ಯಾಕೆ? ಯಾಕೆಂದರೆ ನಗರದ ರಸ್ತೆಗಳಲ್ಲಿ, ಕಟ್ಟಡಗಳಲ್ಲಿ ಹಾಗೂ ಸುತ್ತುಮುತ್ತಲಿರುವ ಲೈಟ್ಸ್ಗಳ ಪ್ರಖರ ಬೆಳಕು ನಕ್ಷತ್ರಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿರುವಂತೆ ತೋರುತ್ತದೆ. ಅದರರ್ಥ ನಕ್ಷತ್ರಗಳ ಬೆಳಕಿಗಿಂತ ವಿದ್ಯುತ್ ದೀಪಗಳ ಬೆಳಕು ಹೆಚ್ಚೆಂದಾ? ಇಲ್ಲ. ನಗರದ ಲೈಟ್ಗಳು ನಮಗೆ ಹತ್ತಿರದಲ್ಲಿರುವುದರಿಂದ ದೂರದಲ್ಲಿರುವ ನಕ್ಷತ್ರಗಳನ್ನು ಮಸುಕಾಗಿ ಕಾಣುವಂತೆ ಅವು ಮಾಡುತ್ತವೆ. ನಾವು ನಕ್ಷತ್ರಗಳ ಮಹಿಮಾಭರಿತ ಸೌಂದರ್ಯವನ್ನು ಸವಿಯಬೇಕಾದರೆ ಮಾನವನಿರ್ಮಿತ ಬೆಳಕಿನಿಂದ ದೂರಹೋಗಬೇಕು.
9 ಅದೇ ರೀತಿ ಮನುಷ್ಯರಿಂದ ಮಹಿಮೆಯನ್ನು ಹೊಂದಲು ನಾವು ಇಷ್ಟಪಡುವಾಗ ಯೆಹೋವನಿಂದ ಸಿಗುವ ಮಹಿಮೆಯನ್ನು ಗಣ್ಯ ಮಾಡುವುದಿಲ್ಲ, ಅದನ್ನು ಪಡೆಯಲು ಪ್ರಯತ್ನವನ್ನೂ ಹಾಕಲಿಕ್ಕಿಲ್ಲ. ಅನೇಕರು ಸುವಾರ್ತೆಗೆ ಕಿವಿಗೊಡದಿರಲು ಕಾರಣವೇನೆಂದರೆ ಕುಟುಂಬದವರು ಪರಿಚಯಸ್ಥರು ಏನು ಅಂದುಕೊಳ್ಳುತ್ತಾರೆ ಅನ್ನುವ ಭಯ. ಮನುಷ್ಯರಿಂದ ಮಹಿಮೆಯನ್ನು ಪಡೆಯಬೇಕೆಂಬ ಆಸೆ ಯೆಹೋವನ ಸೇವಕರಲ್ಲೂ ಬರಲು ಸಾಧ್ಯನಾ? ಈ ಉದಾಹರಣೆ ಗಮನಿಸಿ. ಒಬ್ಬ ಯುವವ್ಯಕ್ತಿಗೆ ಒಂದು ಕ್ಷೇತ್ರದಲ್ಲಿ ಸುವಾರ್ತೆ ಸಾರಲಿಕ್ಕಿದೆ. ಅಲ್ಲಿ ಅವನಿಗೆ ಪರಿಚಯವಿರುವವರು ತುಂಬ ಮಂದಿ ಇದ್ದಾರೆ. ಆದರೆ ಇವನು ಯೆಹೋವನ ಸಾಕ್ಷಿಯೆಂದು ಅವರಿಗೆ ಗೊತ್ತಿಲ್ಲ. ಹೀಗಿರುವಾಗ ಈ ಸಹೋದರನು ಸುವಾರ್ತೆ ಸಾರಲು ಹಿಂಜರಿಯುತ್ತಾನಾ? ಇನ್ನೊಂದು ಸಂದರ್ಭ ಗಮನಿಸಿ. ಒಬ್ಬನು ತಾನಿಟ್ಟ ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದಾನೆ. ಅದನ್ನು ಬೇರೆಯವರು ಹುಚ್ಚುತನವೆಂದು ಹೇಳಿದಾಗ ಅವನಿಗೆ ಹೇಗನಿಸುತ್ತದೆ? ಆಧ್ಯಾತ್ಮಿಕ ದೃಷ್ಟಿಕೋನವಿಲ್ಲದವರ ಇಂತಹ ಅಭಿಪ್ರಾಯಗಳು ತನ್ನ ಜೀವನವನ್ನು ಪ್ರಭಾವಿಸುವಂತೆ ಬಿಡುತ್ತಾನೋ? ಅಥವಾ ನೆನಸಿ, ಒಬ್ಬ ಕ್ರೈಸ್ತನು ಗಂಭೀರ ಪಾಪ ಮಾಡಿದ್ದಾನೆ. ಸಭೆಯಲ್ಲಿ ತನಗಿರುವ ಸುಯೋಗವನ್ನು ಎಲ್ಲಿ ಕಳೆದುಕೊಳ್ಳುತ್ತೇನೊ ಅಥವಾ ತನ್ನವರನ್ನು ದುಃಖಪಡಿಸುತ್ತೇನೊ ಎಂಬ ಭಯದಿಂದ ತನ್ನ ಪಾಪವನ್ನು ಮುಚ್ಚಿಡುತ್ತಾನೋ? ಅವನು ಯೆಹೋವನೊಂದಿಗಿನ ಸಂಬಂಧವನ್ನು ಎಲ್ಲಕ್ಕಿಂತ ಹೆಚ್ಚು ಮಹತ್ವವೆಂದೆಣಿಸುವಲ್ಲಿ ಬೈಬಲ್ ಸಲಹೆಯಂತೆ ‘ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿಕೊಂಡು’ ಅವರ ನೆರವನ್ನು ಪಡೆದುಕೊಳ್ಳುತ್ತಾನೆ.—ಯಾಕೋಬ 5:14-16 ಓದಿ.
10. (1) ಇತರರಿಂದ ಮಾನ ಪಡೆಯುವುದರ ಕುರಿತು ಅತಿಯಾಗಿ ಚಿಂತಿಸುವಾಗ ಏನಾಗಬಹುದು? (2) ದೀನತೆ ತೋರಿಸುವಾಗ ನಮಗೆ ಯಾವುದು ಸಿಕ್ಕೇ ಸಿಗುತ್ತದೆ?
10 ನೀವು ಆಧ್ಯಾತ್ಮಿಕವಾಗಿ ಪ್ರಗತಿ ಮಾಡಲು ಶ್ರಮಿಸುತ್ತಿರಬಹುದು. ಆದರೆ ಒಬ್ಬ ಸಹೋದರನು ನಿಮ್ಮಲ್ಲಿ ಏನನ್ನೋ ಗಮನಿಸಿ ನಿಮ್ಮ ಪ್ರಯೋಜನಕ್ಕಾಗಿ ಸಲಹೆ ಕೊಡಬಹುದು. ಆಗ ನಿಮಗೆ ಹೇಗನಿಸುತ್ತದೆ? ಆ ಸಲಹೆಯನ್ನು ಸ್ವೀಕರಿಸುತ್ತೀರಾ? ಇಲ್ಲವೆ ಅಹಂಕಾರದಿಂದ, ನಿಮ್ಮ ಗೌರವ ಕಡಿಮೆ ಆಗುತ್ತದೆಂಬ ಭಯದಿಂದ ಅಥವಾ ನೀವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳಲಿಕ್ಕಾಗಿ ಆ ಸಲಹೆಯನ್ನು ತಳ್ಳಿಹಾಕುತ್ತೀರಾ? ಇನ್ನೊಂದು ಸನ್ನಿವೇಶ ಗಮನಿಸಿ. ನೀವು ಇತರ ಸಹೋದರ ಸಹೋದರಿಯರೊಂದಿಗೆ ಸೇರಿ ಯಾವುದೊ ಕೆಲಸ ಮಾಡುತ್ತಿದ್ದೀರಿ. ಆ ಕೆಲಸ ಚೆನ್ನಾಗಿ ಆಗಲು ನೀವು ನಿಮ್ಮೆಲ್ಲ ಪ್ರಯತ್ನ ಹಾಕುತ್ತಿದ್ದೀರಿ, ವಿವೇಚನೆ ಬಳಸುತ್ತಿದ್ದೀರಿ. ‘ಇಷ್ಟೆಲ್ಲ ಮಾಡುತ್ತಿರೋದು ನಾನು, ಹೆಸರು ಎಲ್ಲಿ ಬೇರೆಯವರಿಗೆ ಹೋಗುತ್ತದೋ’ ಎಂದು ಚಿಂತಿಸುತ್ತೀರಾ? ಈ ಯಾವುದೇ ಸನ್ನಿವೇಶದಲ್ಲಿ ನೀವಿರುವುದಾದರೆ ನೆನಪಿಡಿ: “ದೀನಮನಸ್ಸುಳ್ಳವನು ಮಾನವನ್ನು [ಮಹಿಮೆಯನ್ನು, NW] ಪಡೆಯುವನು.”—ಜ್ಞಾನೋ. 29:23.
11. (1) ಯಾರಾದರೂ ನಮ್ಮನ್ನು ಹೊಗಳುವಾಗ ಮನಸ್ಸಿನಲ್ಲಿ ನಮಗೆ ಹೇಗನಿಸಬೇಕು? (2) ಏಕೆ?
11 ಸಭೆಯಲ್ಲಿ “ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರು”ವವರು ಮನುಷ್ಯನಿಂದ ಮಹಿಮೆಯನ್ನು ಬಯಸದಂತೆ ಜಾಗ್ರತೆವಹಿಸಬೇಕು. (1 ತಿಮೊ. 3:1; 1 ಥೆಸ. 2:6) ಒಬ್ಬ ಸಹೋದರನು ಚೆನ್ನಾಗಿ ನಿರ್ವಹಿಸಿದ ನೇಮಕಕ್ಕಾಗಿ ಶ್ಲಾಘನೆ ಪಡೆದುಕೊಂಡಾಗ ಹೇಗೆ ಪ್ರತಿಕ್ರಿಯಿಸಬೇಕು? ಅವರೇನು ಸೌಲನಂತೆ ತಮಗೋಸ್ಕರ ಒಂದು ಜ್ಞಾಪಕಸ್ತಂಭವನ್ನು ಕಟ್ಟಸಿಕೊಳ್ಳಲಿಕ್ಕಿಲ್ಲ ನಿಜ. (1 ಸಮು. 15:12) ಆದರೆ ಯೆಹೋವನ ಸಹಾಯ ಇಲ್ಲದಿದ್ದಲ್ಲಿ ತಾನು ಆ ನೇಮಕವನ್ನು ಉತ್ತಮವಾಗಿ ಮಾಡಲು ಆಗುತ್ತಿರಲಿಲ್ಲವೆಂದು ಒಪ್ಪಿಕೊಳ್ಳುವನೇ? ಮುಂದೆ ಕೂಡ ತನ್ನ ನೇಮಕವನ್ನು ಉತ್ತಮವಾಗಿ ನಿರ್ವಹಿಸಲು ಯೆಹೋವನ ಆಶೀರ್ವಾದ ಖಂಡಿತ ಬೇಕೆಂದು ಅಂಗೀಕರಿಸುವನೇ? (1 ಪೇತ್ರ 4:11) ಯಾರಾದರೂ ನಮ್ಮನ್ನು ಹೊಗಳಿದಾಗ ನಾವು ಮನಸ್ಸಿನೊಳಗೆ ಏನು ಅಂದುಕೊಳ್ಳುತ್ತೇವೊ ಅದೇ ತೋರಿಸಿಕೊಡುತ್ತದೆ ನಾವು ಎಂಥ ಮಹಿಮೆಯನ್ನು ಪಡೆದುಕೊಳ್ಳಲು ಬಯಸುತ್ತೇವೆ ಎಂದು.—ಜ್ಞಾನೋ. 27:21.
“ನಿಮ್ಮ ತಂದೆಯ ಇಚ್ಛೆಗಳನ್ನೇ ಮಾಡಬೇಕೆಂದಿದ್ದೀರಿ”
12. ಯೇಸುವಿನ ಸಂದೇಶಕ್ಕೆ ಕಿವಿಗೊಡದಂತೆ ಕೆಲವು ಯೆಹೂದ್ಯರನ್ನು ತಡೆದದ್ದು ಯಾವುದು?
12 ದೇವರಿಂದ ಮಹಿಮೆಯನ್ನು ಹೊಂದಲು ಅಡ್ಡಿಯಾಗಬಲ್ಲ ಇನ್ನೊಂದು ವಿಷಯ ನಮ್ಮಲ್ಲಿರುವ ತಪ್ಪಾದ ಇಚ್ಛೆಗಳು. ಅಂಥ ಇಚ್ಛೆಗಳು ನಮ್ಮಲ್ಲಿರುವುದಾದರೆ ನಾವು ದೈವಿಕ ಸತ್ಯಕ್ಕೆ ಸ್ವಲ್ಪವೂ ಕಿವಿಗೊಡುವುದಿಲ್ಲ. (ಯೋಹಾನ 8:43-47 ಓದಿ.) ಯೇಸುವಿನ ಕಾಲದ ಕೆಲವು ಯೆಹೂದ್ಯರು ಇದಕ್ಕೆ ಉದಾಹರಣೆ. ಯೇಸು ಹೇಳಿದಂತೆ, ಅವರು ‘ತಮ್ಮ ತಂದೆಯಾದ ಪಿಶಾಚನ ಇಚ್ಛೆಗಳನ್ನೇ ಮಾಡಬೇಕೆಂದಿದ್ದ’ ಕಾರಣ ಯೇಸುವಿನ ಸಂದೇಶಕ್ಕೆ ಕಿವಿಗೊಡಲಿಲ್ಲ.
13, 14. (1) ಮನುಷ್ಯನ ಮಿದುಳು ಶಬ್ದಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆಂದು ಸಂಶೋಧಕರು ಕಂಡುಕೊಂಡಿದ್ದಾರೆ? (2) ನಾವು ಯಾರಿಗೆ ಕಿವಿಗೊಡುತ್ತೇವೆ ಎನ್ನುವುದು ಯಾವುದರ ಮೇಲೆ ಹೊಂದಿಕೊಂಡಿದೆ?
13 ನಾವು ಯಾವುದಕ್ಕೆ ಕಿವಿಗೊಡುತ್ತೇವೆ ಯಾವುದಕ್ಕೆ ಕಿವಿಗೊಡುವುದಿಲ್ಲ ಎನ್ನುವುದು ನಮ್ಮ ಇಚ್ಛೆಯ ಮೇಲೆ ಹೊಂದಿಕೊಂಡಿದೆ. (2 ಪೇತ್ರ 3:5) ಇದನ್ನು ಅರ್ಥಮಾಡಿಕೊಳ್ಳಲು ನಮಗಿರುವ ಒಂದು ವಿಶೇಷ ಸಾಮರ್ಥ್ಯದ ಕುರಿತು ನೋಡೋಣ. ನಾವು ಕೇಳಲು ಇಷ್ಟಪಡದ ಶಬ್ದಗಳ ಕಡೆಗೆ ಗಮನಕೊಡದೆ ಇರುವಂಥ ಅದ್ವಿತೀಯ ಸಾಮರ್ಥ್ಯವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಒಂದು ಕ್ಷಣ ನಿಮ್ಮ ಸುತ್ತಮುತ್ತಲು ಯಾವೆಲ್ಲ ರೀತಿಯ ಶಬ್ದಗಳು ಕೇಳಿಬರುತ್ತಿವೆ ಎಂದು ಗಮನಿಸಿ. ಆ ನಾನಾ ರೀತಿಯ ಶಬ್ದಗಳು ಕೆಲವು ಸೆಕೆಂಡುಗಳ ಮುಂಚೆ ನಿಮ್ಮ ಗಮನಕ್ಕೆ ಬಂದಿರಲಿಲ್ಲ. ಏಕೆ? ಏಕೆಂದರೆ ನಮ್ಮ ಮಿದುಳಿಗೆ (ಲಿಂಬಿಕ್ ವ್ಯವಸ್ಥೆ) ಸುತ್ತಮುತ್ತಲಿನ ಎಲ್ಲ ರೀತಿಯ ಶಬ್ದಗಳನ್ನು ಒಂದೇ ಸಮಯದಲ್ಲಿ ಕೇಳಿಸಿಕೊಳ್ಳುತ್ತಾ ಕೇವಲ ಒಂದು ಶಬ್ದದೆಡೆಗೆ ಮಾತ್ರ ಗಮನ ಕೇಂದ್ರೀಕರಿಸುವ ಸಾಮರ್ಥ್ಯವಿದೆ. ಆದರೆ ಇಬ್ಬರು ವ್ಯಕ್ತಿಗಳು ಮಾತಾಡುತ್ತಿರುವಾಗ ಒಂದೇ ಸಮಯದಲ್ಲಿ ಇಬ್ಬರಿಗೂ ಕಿವಿಗೊಡುವ ಸಾಮರ್ಥ್ಯ ಮಿದುಳಿಗಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದ್ದರಿಂದ ನಾವು ಯಾರಿಗೆ ಗಮನ ಕೊಡಬೇಕೆಂದು ಆಯ್ಕೆ ಮಾಡಬೇಕಾಗುತ್ತದೆ. ಯಾರ ಮಾತನ್ನು ಕೇಳಿಸಿಕೊಳ್ಳಲು ಇಚ್ಛಿಸುತ್ತೀರೊ ನೀವು ಅವರನ್ನು ಆಯ್ಕೆ ಮಾಡುತ್ತೀರಿ. ಹಾಗೆಯೇ ಯೆಹೂದ್ಯರು ತಮ್ಮ ತಂದೆಯಾದ ಸೈತಾನನ ಇಚ್ಛೆಗಳನ್ನೇ ಮಾಡಬೇಕೆಂದು ಇಷ್ಟಪಟ್ಟದ್ದರಿಂದ ಯೇಸುವಿನ ಮಾತಿಗೆ ಕಿವಿಗೊಡಲಿಲ್ಲ.
14 ಬೈಬಲ್ ಹೇಳುವಂತೆ “ಜ್ಞಾನ” ಮತ್ತು “ಅಜ್ಞಾನ” ಎರಡೂ ತಮಗೆ ಕಿವಿಗೊಡುವಂತೆ ನಮಗೆ ಕರೆನೀಡುತ್ತಿರುತ್ತವೆ. (ಜ್ಞಾನೋ. 9:1-5, 13-17) ಅವೆರಡರಲ್ಲಿ ನಾವು ಯಾವ ಆಮಂತ್ರಣವನ್ನು ಆರಿಸಿಕೊಳ್ಳುತ್ತೇವೆ? ಇದಕ್ಕೆ ಉತ್ತರ ನಾವು ಯಾರ ಚಿತ್ತವನ್ನು ಮಾಡಲು ಇಷ್ಟಪಡುತ್ತೇವೋ ಅದರ ಮೇಲೆ ಹೊಂದಿಕೊಂಡಿದೆ. ಯೇಸುವಿನ ಕುರಿಗಳು ಅವನ ಮಾತಿಗೆ ಕಿವಿಗೊಡುತ್ತಾ ಅವನನ್ನು ಹಿಂಬಾಲಿಸುವವು. (ಯೋಹಾ. 10:16, 27) ಅವರು “ಸತ್ಯದ ಪಕ್ಷದಲ್ಲಿ”ರುತ್ತಾರೆ. (ಯೋಹಾ. 18:37) ಯಾವುದೇ ‘ಅಪರಿಚಿತರ ಸ್ವರಕ್ಕೆ’ ಕಿವಿಗೊಡುವುದಿಲ್ಲ. (ಯೋಹಾ. 10:5) ಇಂಥ ದೀನ ಜನರು ಮಹಿಮೆಗೆ ಪಾತ್ರರಾಗುತ್ತಾರೆ.—ಜ್ಞಾನೋ. 3:13, 16; 8:1, 18.
“ಅವು ನಿಮಗೆ ಮಹಿಮೆಯನ್ನು ಉಂಟುಮಾಡುತ್ತವೆ”
15. ಪೌಲನ ಕಷ್ಟಗಳು ಇತರರಿಗೆ ಹೇಗೆ ಮಹಿಮೆಯನ್ನು ತರಲಿದ್ದವು?
15 ಏನೇ ಆದರೂ ನಾವು ಯೆಹೋವನ ಚಿತ್ತವನ್ನು ಮಾಡುತ್ತಾ ಮುಂದುವರಿಯುವಾಗ ಇತರರೂ ಆತನ ಮಹಿಮೆಯನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತೇವೆ. ಪೌಲನು ಎಫೆಸ ಸಭೆಗೆ ಬರೆದದ್ದು: “ನಿಮ್ಮ ಪರವಾಗಿ ನಾನು ಅನುಭವಿಸಿರುವ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ, ಏಕೆಂದರೆ ಅವು ನಿಮಗೆ ಮಹಿಮೆಯನ್ನು ಉಂಟುಮಾಡುತ್ತವೆ.” (ಎಫೆ. 3:13) ಪೌಲ ಅನುಭವಿಸಿದ ಕಷ್ಟಗಳು ಎಫೆಸದವರಿಗೆ ಹೇಗೆ “ಮಹಿಮೆಯನ್ನು” ತರಲಿದ್ದವು? ಕಷ್ಟಪರೀಕ್ಷೆಗಳ ಮಧ್ಯದಲ್ಲೂ ಪೌಲ ಎಫೆಸ ಸಭೆಯವರಿಗಾಗಿ ಸೇವೆ ಸಲ್ಲಿಸುತ್ತಿದ್ದನು. ಇದು ಕ್ರೈಸ್ತರಾಗಿರುವ ಸುಯೋಗವನ್ನು ಗಂಭೀರವಾಗಿ ಕಾಣಲು ಮತ್ತು ಮಹತ್ವದ್ದಾಗಿ ಎಣಿಸಲು ಆ ಸಭೆಯವರಿಗೆ ಸಹಾಯಮಾಡಿತು. ಒಂದುವೇಳೆ ಪೌಲನು ಕಷ್ಟಪರೀಕ್ಷೆಗಳಿಗೆ ಮಣಿದು ಸೇವೆಯನ್ನು ಬಿಟ್ಟಿದ್ದರೆ, ಅವರು ಯೆಹೋವನೊಂದಿಗಿನ ಸಂಬಂಧವನ್ನು ಅಮೂಲ್ಯವೆಂದು ಮನಗಾಣಲು ಆಗುತ್ತಿರಲಿಲ್ಲ ಅಲ್ಲವೇ? ಅವರಿಗಿರುವ ಸುವಾರ್ತೆ ಸಾರುವ ಸುಯೋಗ ಹಾಗೂ ಭವಿಷ್ಯತ್ತಿನ ನಿರೀಕ್ಷೆ ಅಷ್ಟೊಂದು ಪ್ರಾಮುಖ್ಯವಲ್ಲ ಎಂದು ನೆನಸುವಂತೆ ಅದು ಮಾಡುತ್ತಿತ್ತಲ್ಲವೆ? ಆದರೆ ಪೌಲನ ತಾಳ್ಮೆಯ ಮಾದರಿಯು, ಕ್ರೈಸ್ತರಾಗಿದ್ದು ಏನೇ ತ್ಯಾಗ ಮಾಡಿದರೂ ಅದು ಸಾರ್ಥಕ ಎಂದು ಅವರಿಗೆ ತೋರಿಸಿಕೊಟ್ಟಿತು.
16. ಪೌಲ ಲುಸ್ತ್ರದಲ್ಲಿ ಎಂತಹ ವಿರೋಧವನ್ನು ಎದುರಿಸಿದನು?
16 ಪೌಲನಲ್ಲಿದ್ದ ಹುರುಪು, ತಾಳ್ಮೆ ಸಹೋದರರಿಗೆ ಎಷ್ಟೊಂದು ಸಹಾಯ ಮಾಡಿರಬಹುದೆಂದು ಯೋಚಿಸಿ. ಅಂಥ ಒಂದು ಘಟನೆಯನ್ನು ಅಪೊಸ್ತಲರ ಕಾರ್ಯಗಳು 14:19, 20ರಲ್ಲಿ ಹೀಗೆ ವಿವರಿಸಲಾಗಿದೆ: “ಅಂತಿಯೋಕ್ಯ ಮತ್ತು ಇಕೋನ್ಯದಿಂದ ಬಂದ ಯೆಹೂದ್ಯರು ಜನರ ಗುಂಪನ್ನು ಒಡಂಬಡಿಸಿ ಪೌಲನಿಗೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ [ಲುಸ್ತ್ರದಿಂದ] ಊರ ಹೊರಕ್ಕೆ ಎಳೆದುಹಾಕಿದರು. ಶಿಷ್ಯರು ಅವನ ಸುತ್ತಲೂ ಬಂದು ನಿಂತಾಗ ಅವನು ಎದ್ದು ಊರೊಳಕ್ಕೆ ಹೋದನು. ಮರುದಿನ ಅವನು ಬಾರ್ನಬನೊಂದಿಗೆ ದೆರ್ಬೆಗೆ ಹೋದನು.” ಕಲ್ಲೆಸೆತಗಳಿಂದ ಗಾಯವಾಗಿ ಇಡೀ ದಿನ ಶವದಂತೆ ಬಿದ್ದಿದ್ದ ಪೌಲ ಮಾರನೇ ದಿನವೇ 100 ಕಿಲೋಮೀಟರ್ ವರೆಗೆ ಪ್ರಯಾಣ ಮಾಡಿದ್ದನ್ನು ಊಹಿಸಿಕೊಳ್ಳಿ. ಅದೂ ಯಾವುದೇ ಬಸ್ಸುಕಾರು ಇಲ್ಲದ ಆ ಕಾಲದಲ್ಲಿ.
17, 18. (1) ಲುಸ್ತ್ರದಲ್ಲಿ ಪೌಲನ ಸಹಾಯಕ್ಕೆ ಬಂದ ಶಿಷ್ಯರಲ್ಲಿ ತಿಮೊಥೆಯನೂ ಇದ್ದನೆಂದು ಹೇಗೆ ಹೇಳಬಹುದು? (2) ಪೌಲ ತೋರಿಸಿದ ತಾಳ್ಮೆ ತಿಮೊಥೆಯನಿಗೆ ಹೇಗೆ ಸಹಾಯ ಮಾಡಿತು?
17 ಕಲ್ಲೆಸೆತದಿಂದ ಗಾಯಗೊಂಡ ಪೌಲನಿಗೆ ಸಹಾಯಕ್ಕೆ ಬಂದ ‘ಶಿಷ್ಯರಲ್ಲಿ’ ತಿಮೊಥೆಯನು ಇದ್ದನೋ? ಅಪೊಸ್ತಲರ ಕಾರ್ಯಗಳು ಪುಸ್ತಕದಲ್ಲಿ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಅವನು ಇದ್ದಿರಬಹುದು ಎಂದು ಹೇಳಸಾಧ್ಯ. ಹೇಗೆ ಅಂತೀರಾ? ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರದಲ್ಲಿರುವ ಈ ಮಾತನ್ನು ನೋಡಿ: “ನೀನಾದರೋ ನನ್ನ ಬೋಧನೆಯನ್ನೂ ನನ್ನ ಜೀವನ ರೀತಿಯನ್ನೂ . . . ನಿಕಟವಾಗಿ ಅನುಸರಿಸಿದ್ದೀ ಮತ್ತು ನನ್ನ ಹಿಂಸೆಗಳನ್ನೂ ನನ್ನ ಕಷ್ಟಗಳನ್ನೂ ಅಂತಿಯೋಕ್ಯ [ಊರಿನಿಂದ ಹೊರ ಅಟ್ಟಿದಾಗ], ಇಕೋನ್ಯ [ಕಲ್ಲೆಸೆದು ಕೊಲ್ಲಲು ಪ್ರಯತ್ನಿಸಿದಾಗ] ಮತ್ತು ಲುಸ್ತ್ರದಲ್ಲಿ [ಕಲ್ಲೆಸೆದಾಗ] ನನಗೆ ಸಂಭವಿಸಿದ ಸಂಗತಿಗಳನ್ನೂ ನಾನು ಎಂಥ ಹಿಂಸೆಗಳನ್ನು ಸಹಿಸಿಕೊಂಡಿದ್ದೇನೆ ಎಂಬುದನ್ನೂ ತಿಳಿದವನಾಗಿದ್ದೀ; ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು.”—2 ತಿಮೊ. 3:10, 11; ಅ. ಕಾ. 13:50; 14:5, 19.
18 ಆ ಎಲ್ಲ ಸಂದರ್ಭಗಳಲ್ಲಿ ಪೌಲ ಎಷ್ಟು ತಾಳ್ಮೆ ತೋರಿಸಿದನೆಂದು ತಿಮೊಥೆಯನಿಗೆ ಚೆನ್ನಾಗಿ ಗೊತ್ತಿತ್ತು. ಅದು ಅವನ ಮನಸ್ಸಿನ ಮೇಲೆ ಒಳ್ಳೇ ಪ್ರಭಾವ ಬೀರಿತು. ಪೌಲ ಲುಸ್ತ್ರಕ್ಕೆ ಭೇಟಿ ನೀಡಿದಾಗ ತಿಮೊಥೆಯನು ಒಬ್ಬ ಆದರ್ಶ ಕ್ರೈಸ್ತನಾಗಿದ್ದನು. “ಅವನ ವಿಷಯವಾಗಿ ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರು ಒಳ್ಳೇ ಸಾಕ್ಷಿ” ಹೇಳುತ್ತಿದ್ದರು. (ಅ. ಕಾ. 16:1, 2) ಸ್ವಲ್ಪ ಸಮಯದ ನಂತರ ತಿಮೊಥೆಯನು ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅರ್ಹನಾದನು.—ಫಿಲಿ. 2:19, 20; 1 ತಿಮೊ. 1:3.
19. ನಮ್ಮ ತಾಳ್ಮೆ ಇತರರನ್ನು ಹೇಗೆ ಪ್ರಭಾವಿಸಬಲ್ಲದು?
19 ಪೌಲನಂತೆ ನಾವು ಯಾವುದೇ ಅಡ್ಡಿ ಬಂದರೂ ದೇವರ ಚಿತ್ತವನ್ನು ಮಾಡುತ್ತಾ ಇರುವುದು ಇತರರ ಮೇಲೆ, ಅದರಲ್ಲೂ ಮುಖ್ಯವಾಗಿ ಯುವಜನರ ಮೇಲೆ ಒಳ್ಳೇ ಪ್ರಭಾವ ಬೀರುತ್ತದೆ. ಅವರು ಪ್ರಗತಿ ಹೊಂದಿ ದೇವರ ಸೇವೆಯನ್ನು ಹೆಚ್ಚು ಮಾಡುವಂತೆ ನಮ್ಮ ಮಾದರಿ ಸಹಾಯಮಾಡುತ್ತದೆ. ಸುವಾರ್ತೆ ಸಾರುವುದರಲ್ಲಿ ನಮಗಿರುವ ಕೌಶಲವನ್ನು ಮಾತ್ರವಲ್ಲ, ಜೀವನದಲ್ಲಿ ಪ್ರತಿಯೊಂದು ಸವಾಲನ್ನು ನಾವು ಹೇಗೆ ನಿಭಾಯಿಸುತ್ತೇವೆ ಅನ್ನುವುದನ್ನು ಸಹ ಯುವಜನರು ಗಮನಿಸಿ ಕಲಿಯುತ್ತಾರೆ. ಪೌಲನು ಸಹ ನಂಬಿಗಸ್ತರಾಗಿರುವ ಎಲ್ಲರೂ ‘ನಿತ್ಯವಾದ ಮಹಿಮೆಯೊಂದಿಗೆ ರಕ್ಷಣೆಯನ್ನು ಹೊಂದುವಂತೆ ಅವರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತಾ ಇದ್ದನು.’—2 ತಿಮೊ. 2:10.
20. ದೇವರಿಂದ ಮಹಿಮೆಯನ್ನು ಹೊಂದಲು ನಾವೇಕೆ ಪ್ರಯತ್ನಿಸುತ್ತಾ ಇರಬೇಕು?
20 ಹಾಗಾದರೆ ‘ಒಬ್ಬನೇ ದೇವರಿಂದ ಬರುವ ಮಹಿಮೆಯನ್ನು ಪಡೆಯಲು ಪ್ರಯತ್ನಿಸುತ್ತಾ’ ಇರಲು ನಮಗೆ ಅನೇಕ ಕಾರಣಗಳಿವೆ ಅಲ್ಲವೇ? (ಯೋಹಾ. 5:44; 7:18) ಹೌದು ಖಂಡಿತ! (ರೋಮನ್ನರಿಗೆ 2:6, 7 ಓದಿ.) ‘ಯಾರು ಆ ಮಹಿಮೆಯನ್ನು ಹೊಂದಬೇಕೆಂದು’ ಪ್ರಯತ್ನಿಸುತ್ತಾರೊ ಅವರಿಗೆ ಯೆಹೋವನು “ನಿತ್ಯಜೀವವನ್ನು ಕೊಡುವನು.” ಅಷ್ಟೆ ಅಲ್ಲ ನಾವು ‘ಒಳ್ಳೇದನ್ನು ಮಾಡುವುದರಲ್ಲಿ ತಾಳಿಕೊಳ್ಳುವಾಗ’ ಅದು ಇತರರನ್ನು ನಂಬಿಗಸ್ತರಾಗಿ ಉಳಿಯುವಂತೆ ಪ್ರಚೋದಿಸುತ್ತದೆ ಮತ್ತು ನಿತ್ಯಜೀವ ಪಡೆದುಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಯೆಹೋವನಿಂದ ಮಹಿಮೆಯನ್ನು ಹೊಂದಲು ಯಾವುದೂ ನಮಗೆ ಅಡ್ಡಿಯಾಗದಂತೆ ನೋಡಿಕೊಳ್ಳೋಣ.
[ಪುಟ 25ರಲ್ಲಿರುವ ಚಿತ್ರ]
[ಪುಟ 28ರಲ್ಲಿರುವ ಚಿತ್ರ]
[ಪುಟ 29ರಲ್ಲಿರುವ ಚಿತ್ರ]
ವೃದ್ಧ ಕ್ರೈಸ್ತರು ಪಟ್ಟುಹಿಡಿದು ಮಾಡುವ ಸೇವೆ ಯುವಜನರನ್ನು ಗಾಢವಾಗಿ ಪ್ರಭಾವಿಸುತ್ತದೆ