ಹೃದಯದ ಇರಾದೆಗಳ ಕುರಿತು ಎಚ್ಚರವಹಿಸಿ
“ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ” ಎನ್ನುತ್ತದೆ ಬೈಬಲ್. (ಯೆರೆ. 17:9) ನಮ್ಮ ಹೃದಯ ಏನನ್ನಾದರೂ ತೀವ್ರವಾಗಿ ಬಯಸಿದರೆ, ಆ ಬಯಕೆಯನ್ನು ಹೇಗಾದರೂ ಮಾಡಿ ಪೂರೈಸಲು ದಾರಿ ಹುಡುಕುತ್ತೇವಲ್ಲವೇ?
“ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೇವದೂಷಣೆಗಳು ಹೊರಬರುತ್ತವೆ” ಎಂದು ಬೈಬಲ್ ಎಚ್ಚರಿಸುತ್ತದೆ. (ಮತ್ತಾ. 15:19) ಹೌದು, ನಮ್ಮ ಸಾಂಕೇತಿಕ ಹೃದಯ ನಮ್ಮನ್ನು ವಂಚಿಸಿ ಏಮಾರಿಸಬಹುದು. ದೇವರ ಚಿತ್ತಕ್ಕೆ ವಿರುದ್ಧವಾಗಿರುವ ಕೆಲಸದಲ್ಲಿ ಕೈಹಾಕುವುದು ತಪ್ಪಲ್ಲ ಎಂದು ನೆನಸುವಂತೆ ಮಾಡಬಹುದು. ಕೆಲವೊಮ್ಮೆ ನಮ್ಮ ಹೃದಯ ವಂಚಿಸುತ್ತಿದೆ ಎಂದು ನಮಗೆ ಗೊತ್ತೇ ಆಗಲಿಕ್ಕಿಲ್ಲ. ತಪ್ಪು ಮಾಡಿ ಹಳ್ಳಕ್ಕೆ ಬಿದ್ದ ಮೇಲೆಯೇ ಅದರ ಅರಿವು ನಮಗಾಗಬಹುದು. ಹಾಗಾಗಿ ತಪ್ಪು ಹೆಜ್ಜೆ ಇಡುವ ಮುಂಚೆಯೇ ನಮ್ಮ ಹೃದಯದ ಇರಾದೆಗಳನ್ನು ತಿಳಿದುಕೊಳ್ಳಬೇಕು. ಇದಕ್ಕೆ ಯಾವುದು ಸಹಾಯ ಮಾಡುತ್ತದೆ?
ನಿಮ್ಮ ಇರಾದೆಗಳನ್ನು ತಿಳಿದುಕೊಳ್ಳುವ ವಿಧ . . .
ಬೈಬಲನ್ನು ದಿನಂಪ್ರತಿ ಓದಿ ಮತ್ತು ಓದಿದ್ದನ್ನು ಧ್ಯಾನಿಸಿ. “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ ಯಾವುದೇ ಇಬ್ಬಾಯಿಕತ್ತಿಗಿಂತಲೂ ಹರಿತವಾದದ್ದೂ ಪ್ರಾಣಮನಸ್ಸುಗಳನ್ನು ಮತ್ತು ಕೀಲುಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ತೂರಿಹೋಗುವಂಥದ್ದೂ” ಆಗಿದೆ ಎಂದು ಬರೆದನು ಅಪೊಸ್ತಲ ಪೌಲ. ಬೈಬಲಿನಲ್ಲಿರುವ ದೇವರ ಮಾತು ನಮ್ಮ “ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ ವಿವೇಚಿಸಲು ಶಕ್ತವಾಗಿರುವಂಥದ್ದೂ ಆಗಿದೆ.” (ಇಬ್ರಿ. 4:12) ಬೈಬಲನ್ನು ಅಧ್ಯಯನ ಮಾಡುವಾಗ ನಮ್ಮ ಆಲೋಚನೆ, ಕ್ರಿಯೆಗಳು ನಿಜವಾಗಿಯೂ ಬೈಬಲ್ ಹೇಳುವಂಥ ರೀತಿಯಲ್ಲಿ ಇದೆಯಾ ಎಂದು ಪರೀಕ್ಷಿಸಬೇಕು. ಇದು ನಮ್ಮ ಹೃದಯದ ಸಂಕಲ್ಪಗಳನ್ನು ಅಥವಾ ಇರಾದೆಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಹಾಗಾಗಿ ಬೈಬಲನ್ನು ದಿನಾಲೂ ಓದೋದು, ಓದಿದ ವಿಷಯಗಳನ್ನು ಧ್ಯಾನಿಸೋದು ಎಷ್ಟೊಂದು ಪ್ರಾಮುಖ್ಯ ಅಲ್ಲವೇ? ಹಾಗೆ ಮಾಡುವಲ್ಲಿ ದೇವರ ಆಲೋಚನೆಗಳನ್ನು ಅರ್ಥಮಾಡಿಕೊಂಡು ವಿಷಯಗಳನ್ನು ಆತನ ದೃಷ್ಟಿಕೋನದಿಂದ ನೋಡಲು ಕಲಿಯುತ್ತೇವೆ.
ಬೈಬಲಿನಲ್ಲಿರುವ ಸಲಹೆಗಳನ್ನು, ತತ್ವಗಳನ್ನು ಅನ್ವಯಿಸುವಾಗ ನಮ್ಮ ಮನಸ್ಸಾಕ್ಷಿ ತರಬೇತಾಗುತ್ತದೆ. ಇದು ಆಂತರಿಕ ಸಲಹೆಗಾರನಂತೆ ನಮಗೆ “ಸಾಕ್ಷಿ” ಕೊಡುತ್ತದೆ. ಈ ಅಂತರ್ವಾಣಿ ನಾವು ತಪ್ಪನ್ನು ಮಾಡಲು ನೆಪಗಳನ್ನು ಹುಡುಕುವಾಗಲೇ ಎಚ್ಚರಿಕೆಯ ಗಂಟೆ ಬಾರಿಸಿ ತಡೆಯುತ್ತದೆ. (ರೋಮ. 9:1) ಮಾತ್ರವಲ್ಲ ನಮಗೆ “ಎಚ್ಚರಿಕೆ ನೀಡಲಿಕ್ಕಾಗಿ” ಬೈಬಲಿನಲ್ಲಿ ಅನೇಕ ಉದಾಹರಣೆಗಳು ದಾಖಲಾಗಿವೆ. (1 ಕೊರಿಂ. 10:11) ಈ ಉದಾಹರಣೆಗಳಿಂದ ಪಾಠ ಕಲಿಯುವುದು ನಾವು ತಪ್ಪು ದಾರಿಯಲ್ಲಿ ಹೆಜ್ಜೆಯನ್ನಿಡದಂತೆ ತಡೆಯುತ್ತದೆ. ನಮ್ಮ ಹೃದಯದ ಇರಾದೆಗಳನ್ನು ಪರೀಕ್ಷಿಸಲು ಇನ್ನೇನು ಮಾಡಬಹುದು?
ಹೃದಯದ ಸಂಕಲ್ಪಗಳನ್ನು ತಿಳಿದುಕೊಳ್ಳಲು ಸಹಾಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿ. ಯೆಹೋವನು “ಹೃದಯವನ್ನು ಶೋಧಿಸುವವ”ನಾಗಿದ್ದಾನೆ. (1 ಪೂರ್ವ. 29:17) ಆತನು “ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ.” (1 ಯೋಹಾ. 3:20) ದೇವರಿಗೆ ಮೋಸಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಚಿಂತೆಗಳನ್ನು, ಭಾವನೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಯೆಹೋವನ ಮುಂದೆ ಯಥಾರ್ಥವಾಗಿ ಬಿಚ್ಚಿಟ್ಟರೆ ನಾವು ನಮ್ಮ ಹೃದಯದ ಇರಾದೆಗಳನ್ನು ತಿಳಿದುಕೊಳ್ಳುವಂತೆ ಆತನು ಖಂಡಿತ ಸಹಾಯ ಮಾಡುತ್ತಾನೆ. ‘ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸಪ್ಪಾ’ ಅಂತಾನೂ ನಾವು ಪ್ರಾರ್ಥಿಸಬಹುದು. (ಕೀರ್ತ. 51:10) ನಮ್ಮ ಹೃದಯ ಯಾವುದರ ಕಡೆ ವಾಲುತ್ತಿದೆ ಎಂದು ತಿಳಿದುಕೊಳ್ಳಲು ಪ್ರಾರ್ಥನೆ ತುಂಬ ಮಹತ್ವದ್ದು.
ಕ್ರೈಸ್ತ ಕೂಟಗಳಲ್ಲಿ ಏಕಾಗ್ರತೆಯಿಂದ ಗಮನಕೊಡಿ. ಕೂಟಗಳಲ್ಲಿ ತಿಳಿಸಲಾಗುವ ವಿಷಯಗಳಿಗೆ ಜಾಗರೂಕವಾಗಿ ಕಿವಿಗೊಡುವಾಗ ನಾವು ಆಂತರ್ಯದಲ್ಲಿ ನಿಜವಾಗಲೂ ಎಂಥ ವ್ಯಕ್ತಿಯಾಗಿದ್ದೇವೆ ಎಂದು ಪರೀಕ್ಷಿಸಲು ಆಗುತ್ತದೆ. ಕೂಟಗಳಲ್ಲಿ ಪ್ರತಿಬಾರಿ ಹೊಸ ವಿಷಯಗಳನ್ನು ಕಲಿಯುವುದಿಲ್ಲ ನಿಜ. ಆದರೂ ತಪ್ಪದೆ ಕೂಟಗಳಿಗೆ ಹಾಜರಾಗುವಾಗ ಬೈಬಲ್ ತತ್ವಗಳ ನಮ್ಮ ತಿಳಿವಳಿಕೆ ಹೆಚ್ಚಾಗುತ್ತದೆ. ಮಾತ್ರವಲ್ಲ ಆಗಾಗ್ಗೆ ನಮಗೆ ಮರುಜ್ಞಾಪನಗಳನ್ನು ಕೊಡಲಾಗುತ್ತದೆ. ಇವು ನಮ್ಮ ಹೃದಯದ ಇರಾದೆಗಳನ್ನು ಪರೀಕ್ಷಿಸಲು ಸಹಾಯ ಮಾಡುತ್ತವೆ. ಸಹೋದರ-ಸಹೋದರಿಯರು ಕೊಡುವ ಉತ್ತರಗಳು ಕೂಡ ನಮ್ಮ ಆಂತರಿಕ ವ್ಯಕ್ತಿತ್ವವನ್ನು ರೂಪುಗೊಳಿಸುವುದರಲ್ಲಿ ಪಾತ್ರ ವಹಿಸುತ್ತವೆ. (ಜ್ಞಾನೋ. 27:17) ಕೂಟಗಳನ್ನು ತಪ್ಪಿಸಿಕೊಂಡು ಕ್ರೈಸ್ತ ಸಹವಾಸದಿಂದ ದೂರವಿದ್ದರೆ ಅದು ನಮ್ಮನ್ನು ‘ಸ್ವೇಚ್ಛಾನುಸಾರ ನಡೆಯುವಂತೆ’ ಮಾಡಿ ಅಪಾಯಕ್ಕೆ ಸಿಕ್ಕಿಸಬಲ್ಲದು. (ಜ್ಞಾನೋ. 18:1) ಆದ್ದರಿಂದ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ನಾನು ಪ್ರತಿ ಕೂಟವನ್ನು ತಪ್ಪದೆ ಹಾಜರಾಗುತ್ತೇನಾ? ಕೂಟಗಳಲ್ಲಿ ಪ್ರತಿಯೊಂದು ವಿಷಯವನ್ನು ಗಮನವಿಟ್ಟು ಕೇಳಿ ಪ್ರಯೋಜನ ಪಡೆಯುತ್ತೇನಾ?’—ಇಬ್ರಿ. 10:24, 25.
ನಿಮ್ಮ ಹೃದಯ ನಿಮ್ಮನ್ನು ಹೇಗೆ ವಂಚಿಸಬಹುದು?
ನಮ್ಮ ವಂಚಕ ಹೃದಯ ಅನೇಕ ವಿಷಯಗಳಲ್ಲಿ ನಮ್ಮನ್ನು ದಾರಿತಪ್ಪಿಸಬಲ್ಲದು. ಅವುಗಳಲ್ಲಿ ನಾಲ್ಕು ವಿಷಯಗಳೆಂದರೆ ಹಣ-ಆಸ್ತಿ ಮಾಡುವುದು, ಮದ್ಯಪಾನ, ಸ್ನೇಹಿತರ ಆಯ್ಕೆ, ಮನರಂಜನೆ.
ಹಣ-ಆಸ್ತಿ ಕೂಡಿಸಿಡುವ ಆಸೆ. ನಮ್ಮ ಶಾರೀರಿಕ ಅಗತ್ಯಗಳನ್ನು ಪೂರೈಸಲು ಇಚ್ಛಿಸುವುದು ತಪ್ಪಲ್ಲ. ಆದರೆ ಭೌತಿಕ ವಿಷಯಗಳಿಗೆ ಅತಿಯಾದ ಮಹತ್ವ ಕೊಡುವುದು ತಪ್ಪೆಂದು ಯೇಸು ಹೇಳಿದನು. ಅದನ್ನು ಆತನು ಒಂದು ಎಚ್ಚರಿಕೆಯ ದೃಷ್ಟಾಂತ ಕೊಡುವ ಮೂಲಕ ವಿವರಿಸಿದನು. ಒಬ್ಬ ಶ್ರೀಮಂತ ವ್ಯಕ್ತಿಗೆ ತನ್ನ ಜಮೀನಿನಲ್ಲಿ ಒಳ್ಳೆ ಫಸಲು ಸಿಕ್ಕಿತು. ಅದನ್ನು ತುಂಬಿಸಿಡಲು ಸ್ಥಳ ಇರಲಿಲ್ಲ. ಯಾಕೆಂದರೆ ಈಗಾಗಲೇ ಕಣಜಗಳೆಲ್ಲ ತುಂಬಿದ್ದವು. ಹಾಗಾಗಿ ಅವನು ತನ್ನ ಹಳೆ ಕಣಜಗಳನ್ನು ಕೆಡವಿ, ದೊಡ್ಡದಾದ ಹೊಸ ಕಣಜಗಳನ್ನು ಕಟ್ಟಲು ಯೋಜಿಸಿದನು. “ಅಲ್ಲಿ ದವಸಧಾನ್ಯಗಳನ್ನೂ ಎಲ್ಲ ಒಳ್ಳೆಯ ವಸ್ತುಗಳನ್ನೂ ತುಂಬಿಸಿಡುತ್ತೇನೆ. ಬಳಿಕ ನನ್ನ ಪ್ರಾಣಕ್ಕೆ, ‘ಪ್ರಾಣವೇ, ಅನೇಕ ವರ್ಷಗಳಿಗೆ ಸಾಕಾಗುವಷ್ಟು ಅನೇಕ ಒಳ್ಳೆಯ ವಸ್ತುಗಳು ನಿನಗಾಗಿ ಇಡಲ್ಪಟ್ಟಿವೆ; ಆರಾಮವಾಗಿರು, ತಿಂದು ಕುಡಿದು ಆನಂದಪಡುತ್ತಿರು’ ಎಂದು ಹೇಳುವೆನು” ಅಂದುಕೊಂಡನು. ಆದರೆ ಆ ಧನಿಕನು, ತಾನು ಅದೇ ರಾತ್ರಿ ಜೀವವನ್ನು ಕಳೆದುಕೊಂಡರೆ ಕೂಡಿಸಿಟ್ಟದ್ದೆಲ್ಲ ವ್ಯರ್ಥ ಎಂಬ ಸತ್ಯ ಸಂಗತಿಯನ್ನು ಮರೆತುಬಿಟ್ಟಿದ್ದನು.—ಲೂಕ 12:16-20.
ವಯಸ್ಸಾದಂತೆ, ‘ವೃದ್ಯಾಪ್ಯದಲ್ಲಿ ನಮ್ಮ ಜೀವನಕ್ಕಾಗಿ ಸಾಕಷ್ಟು ಹಣ ಇರಬೇಕಲ್ಲ’ ಎಂಬ ಚಿಂತೆ ಕಾಡಬಹುದು. ಹಾಗಾಗಿ ಕೂಟಗಳನ್ನು ತಪ್ಪಿಸಿ ಅಥವಾ ಕ್ರೈಸ್ತ ಜವಾಬ್ದಾರಿಗಳನ್ನು ಕಡೆಗಣಿಸಿ ಓವರ್ಟೈಮ್ ಕೆಲಸ ಮಾಡಲು ನೆವಗಳನ್ನು ಕೊಡುವ ಸಾಧ್ಯತೆಯಿದೆ. ಇಂಥ ಇರಾದೆ ನಮ್ಮಲ್ಲಿ ಬರದಂತೆ ಜಾಗ್ರತೆವಹಿಸಬೇಕಲ್ಲವೇ? ಯುವಪ್ರಾಯದಲ್ಲಿ ಇರುವುದಾದರೆ ನಾವು ಆರಿಸಿಕೊಳ್ಳಬಲ್ಲ ಉತ್ತಮ ಜೀವನ ಮಾರ್ಗ ಪಯನೀಯರ್ ಸೇವೆ ಅಂತ ನಮಗೆ ಗೊತ್ತಿರಬಹುದು. ಆದರೂ ‘ಜೀವನದಲ್ಲಿ ಮೊದಲು ಸೆಟ್ಲ್ ಆಗೋಣ, ದುಡ್ಡು ಕೂಡಿಸಿಟ್ಟು ಆಮೇಲೆ ಪಯನೀಯರಿಂಗ್ ಶುರು ಮಾಡಬಹುದಲ್ಲ’ ಅನ್ನೋ ಯೋಚನೆ ನಮ್ಮಲ್ಲಿ ಬರಬಹುದು. ನೀವು ಒಂದುವೇಳೆ ಹಾಗೆ ಯೋಚಿಸುವುದಾದರೆ ನೆನಪಿಡಿ, ದೇವರ ಸೇವೆ ಮಾಡುವ ಅತ್ಯುತ್ತಮ ಸಮಯ ಇದೇ ಆಗಿದೆ. ಯಾರಿಗೆ ಗೊತ್ತು ನಾಳೆ ನಾವು ಬದುಕಿರುತ್ತೇವೋ ಇಲ್ಲವೋ?
ಮದ್ಯಪಾನ. “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು” ಎನ್ನುತ್ತದೆ ಜ್ಞಾನೋಕ್ತಿ 23:20. ಒಬ್ಬ ವ್ಯಕ್ತಿಗೆ ಮದ್ಯಪಾನ ಸೇವನೆಯ ಬಗ್ಗೆ ಅತೀವ ಬಯಕೆ ಇರುವಲ್ಲಿ, ‘ನಾನು ದಿನಾ ಕುಡಿದರೂ ಅಮಲೇರುವಷ್ಟು ಕುಡಿಯಲ್ಲ. ಬೆಳಿಗ್ಗೆಯಿಂದ ತುಂಬ ಕೆಲಸ ಮಾಡಿ ಸುಸ್ತಾಗಿರೋದರಿಂದ ಕುಡಿಯುತ್ತೇನಷ್ಟೇ’ ಎಂದು ನೆನಸಬಹುದು. ಒಂದುವೇಳೆ ನೀವು ಸಹ ಇದೇ ಕಾರಣಕ್ಕಾಗಿ ಕುಡಿಯುತ್ತಿರುವುದಾದರೆ, ನಿಮ್ಮ ಹೃದಯದ ಇರಾದೆಗಳನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿನೋಡುವ ಸಮಯ ಇದೇ ಆಗಿದೆ.
ಸ್ನೇಹಿತರ ಆಯ್ಕೆ. ನಾವು ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ, ಸೇವೆಗೆ ಹೋದಾಗ ಸತ್ಯದಲ್ಲಿಲ್ಲದವರೊಂದಿಗೆ ಒಡನಾಟ ಮಾಡಬೇಕಾಗುತ್ತದೆ. ಅಂಥವರೊಂದಿಗೆ ಅಗತ್ಯಕ್ಕಿಂತ ಹೆಚ್ಚು ಸಮಯ ಕಳೆಯುವುದು, ಆಪ್ತ ಸ್ನೇಹ ಬೆಳೆಸುವುದು ತಪ್ಪಾಗಿದೆ. ‘ಇಲ್ಲ ಅವರಲ್ಲೂ ಅನೇಕ ಒಳ್ಳೇ ಗುಣಗಳಿವೆ’ ಎಂದು ನೆಪ ಕೊಟ್ಟು ಅವರೊಂದಿಗೆ ಸಹವಾಸ ಮಾಡೋದು ತಪ್ಪಲ್ಲವೆಂದು ಹೇಳುತ್ತೀರಾ? “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು ಎಚ್ಚರಿಸುತ್ತದೆ ಬೈಬಲ್. (1 ಕೊರಿಂ. 15:33) ಹೇಗೆ ಸ್ವಲ್ಪ ಹೊಲಸು ನೀರು ಶುದ್ಧ ನೀರನ್ನೆಲ್ಲಾ ಕಲುಷಿತಗೊಳಿಸುತ್ತದೋ ಹಾಗೆಯೇ ದೇವಭಕ್ತಿಯಿಲ್ಲದ ಜನರೊಂದಿಗಿನ ಸ್ನೇಹ ನಮ್ಮ ಆಧ್ಯಾತ್ಮಿಕತೆಯನ್ನೇ ಹಾಳುಮಾಡುತ್ತದೆ. ಲೋಕದ ಜನರ ಆಲೋಚನೆ, ಉಡುಪು, ಮಾತಿನ ಧಾಟಿ, ನಡಕೊಳ್ಳುವ ರೀತಿಯನ್ನು ನಾವೂ ಅನುಕರಿಸಲು ಶುರುಮಾಡುತ್ತೇವೆ.
ಮನರಂಜನೆಯ ಆಯ್ಕೆ. ಈ ಆಧುನಿಕ ತಂತ್ರಜ್ಞಾನದಿಂದಾಗಿ ನಾನಾ ತರದ ಮನರಂಜನೆ ಬೆರಳ ತುದಿಯಲ್ಲಿ ಲಭ್ಯವಿದೆ. ಅದರಲ್ಲಿ ಹೆಚ್ಚಿನದ್ದು ಕ್ರೈಸ್ತರಿಗೆ ಯೋಗ್ಯವಲ್ಲದ್ದೇ ಆಗಿದೆ. ಯಾವುದೇ ರೀತಿಯ ಅಶುದ್ಧತೆಯ ಪ್ರಸ್ತಾಪವು ನಮ್ಮಲ್ಲಿರಬಾರದು ಎಂದನು ಪೌಲ. (ಎಫೆ. 5:3) ಒಂದುವೇಳೆ ನಮ್ಮ ಹೃದಯವು ಯಾವುದು ಅಶುದ್ಧವೋ ಅಂತಹದನ್ನು ವೀಕ್ಷಿಸಲು ಅಥವಾ ಕೇಳಿಸಿಕೊಳ್ಳಲು ಬಯಸಿದರೆ? ‘ಎಲ್ಲರಿಗೂ ಮನರಂಜನೆ ವಿನೋದ-ವಿಹಾರ ಬೇಕೇ ಬೇಕು. ಅದಕ್ಕಾಗಿ ಏನು ಮಾಡುತ್ತೇವೆ ಅನ್ನೋದು ನಮಗೆ ಬಿಟ್ಟದ್ದು’ ಅಂತ ವಾದ ಮಾಡುತ್ತೇವಾ? ಹಾಗಿದ್ದಲ್ಲಿ ಪೌಲ ಕೊಟ್ಟ ಸಲಹೆಯನ್ನು ಹೃದಯಕ್ಕೆ ತೆಗೆದುಕೊಳ್ಳಿ. ಅಶುದ್ಧವಾಗಿರುವ ಯಾವುದನ್ನೂ ನೋಡಬೇಡಿ ಕೇಳಿಸಿಕೊಳ್ಳಬೇಡಿ.
ನಮ್ಮಿಂದ ಬದಲಾವಣೆ ಮಾಡಸಾಧ್ಯ
ಒಂದುವೇಳೆ ನಾವು ವಂಚಕ ಹೃದಯದ ಇರಾದೆಗಳಿಂದ ಮೋಸ ಹೋಗಿರುವಲ್ಲಿ ಅಥವಾ ತಪ್ಪನ್ನು ಮಾಡಲು ನೆಪಗಳನ್ನು ಕೊಡುವ ಸ್ವಭಾವ ಇರುವಲ್ಲಿ ಬದಲಾವಣೆ ಮಾಡಿಕೊಳ್ಳಲು ನಮ್ಮಿಂದಾಗುತ್ತದೆ. (ಎಫೆ. 4:22-24) ಹಾಗೆ ಬದಲಾವಣೆ ಮಾಡಿಕೊಂಡ ಇಬ್ಬರ ಉದಾಹರಣೆಗಳನ್ನು ಗಮನಿಸಿ.
ಮೀಗೆಲ್a ಎಂಬ ಸಹೋದರ ಭೌತಿಕ ವಸ್ತುಗಳ ಕಡೆಗೆ ತನಗಿದ್ದ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಿತ್ತು. ಅವನು ಹೇಳುವುದು: “ಮಾರುಕಟ್ಟೆಗೆ ಬರುವ ನವನವೀನ ವಸ್ತುಗಳಲ್ಲಿ ಅತ್ಯುತ್ತಮವಾದದ್ದನ್ನು ತಕ್ಷಣ ಖರೀದಿಸಬೇಕು, ಆರಾಮದ ಜೀವನ ನಡೆಸಬೇಕು ಅನ್ನೋ ಅಭಿಪ್ರಾಯ ನಮ್ಮ ದೇಶದಲ್ಲಿ ಸಾಮಾನ್ಯವಾಗಿತ್ತು. ಅಂಥ ಮನೋಭಾವ ನನ್ನನ್ನೂ ಪ್ರಭಾವಿಸಿತು. ನಾನು ಪ್ರಾಪಂಚಿಕತೆಗೆ ಬಲಿಯಾಗದೆಯೇ ಲೋಕದಿಂದ ಎಷ್ಟು ಆಗುತ್ತೋ ಅಷ್ಟು ಕೂಡಿಸಿಡಲು ಸಾಧ್ಯ ಅಂದುಕೊಂಡು ಶ್ರಮಿಸಿದೆ. ಆದರೆ ನಂತರ ನನಗೆ ಒಂದು ವಿಷ್ಯ ತಿಳಿತು. ಈ ರೀತಿ ವಸ್ತುಗಳನ್ನು ಕೂಡಿಸಿಡುತ್ತಾ ಹೋದರೆ ಇದಕ್ಕೆ ಕೊನೆಯೇ ಇಲ್ಲ ಎಂದು. ನನ್ನ ದೃಷ್ಟಿಕೋನ, ಹೃದಯದ ಇರಾದೆಗಳನ್ನು ಬದಲಾಯಿಸಿಕೊಳ್ಳಲು ಸಹಾಯಮಾಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿದೆ. ‘ನಾನು, ನನ್ನ ಹೆಂಡತಿ ಮತ್ತು ಮಗ ಎಲ್ಲರೂ ಪೂರ್ಣವಾಗಿ ನಿನ್ನ ಸೇವೆ ಮಾಡಲು ಬಯಸುತ್ತೇವೆ’ ಎಂದು ದೇವರಲ್ಲಿ ಹೇಳಿಕೊಂಡೆ. ನಂತರ ನಾವು ನಮ್ಮ ಜೀವನವನ್ನು ಸರಳಗೊಳಿಸಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಹೋಗಿ ಸೇವೆ ಸಲ್ಲಿಸಲು ನಿಶ್ಚಯಿಸಿದೆವು. ಹಾಗೆ ಮಾಡಿದ್ದರಿಂದ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯ ಆಯ್ತು. ಬಾಳಲ್ಲಿ ಸಂತೋಷ ಸಂತೃಪ್ತಿ ಇರಬೇಕಾದರೆ ಹೆಚ್ಚು ಭೌತಿಕ ವಸ್ತುಗಳು ಬೇಕಾಗಿಲ್ಲ ಎಂದು ತಿಳಿದುಕೊಂಡ್ವಿ.”
ಪ್ರಾಮಾಣಿಕವಾಗಿ ಸ್ವಪರೀಕ್ಷೆ ಮಾಡಿಕೊಳ್ಳುವುದು ದುಸ್ಸಹವಾಸವನ್ನು ತೊರೆಯಲು ಸಹಾಯ ಮಾಡುತ್ತದೆಂದು ಲೀ ಎಂಬವನ ಉದಾಹರಣೆ ತೋರಿಸುತ್ತದೆ. ಅವನು ಹೇಳುವುದು, “ನಾನು ವ್ಯಾಪಾರ ವ್ಯವಹಾರ ನಡೆಸುತ್ತಿದ್ದ ವಿದೇಶೀಯರೊಂದಿಗೆ ಹೆಚ್ಚು ಸಹವಾಸ ಬೆಳೆಸಿದೆ. ಅವರ ಜೊತೆಸೇರುತ್ತಿದ್ದೆ. ಅಲ್ಲಿ ಅತಿಯಾಗಿ ಮದ್ಯ ಸೇವಿಸಲಾಗುತ್ತದೆ ಎಂದು ಗೊತ್ತಿದ್ದರೂ ಅವರನ್ನು ಮತ್ತೆ ಮತ್ತೆ ಭೇಟಿಮಾಡಲು ನನಗೆ ಏನೋ ಒಂಥರ ಕುತೂಹಲ. ಇದರಿಂದ ನಾನು ಅನೇಕ ಬಾರಿ ಮತ್ತೇರುವಷ್ಟು ಕುಡಿದಿದ್ದೆ. ಆಮೇಲೆ ವಿಷಾದಿಸುತ್ತಿದ್ದೆ. ನನ್ನ ಹೃದಯವನ್ನು ಪ್ರಾಮಾಣಿಕವಾಗಿ ಪರೀಕ್ಷಿಸಬೇಕೆಂದು ಅನಿಸಿತು. ದೇವರ ವಾಕ್ಯದ ಸಲಹೆ ಮತ್ತು ಹಿರಿಯರ ಸಹಾಯವು ನಾನು ಯೆಹೋವನನ್ನು ಪ್ರೀತಿಸದ ಜನರೊಂದಿಗೆ ಸಹವಾಸ ಮಾಡುತ್ತಿದ್ದೇನೆ ಎಂದು ಮನಗಾಣಿಸಿತು. ಈಗ ನಾನು ಅವರನ್ನು ಭೇಟಿ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಹೆಚ್ಚಾಗಿ ಫೋನಿನಲ್ಲೇ ವ್ಯವಹಾರ ಮಾಡುತ್ತೇನೆ.”
ನಾವು ಸಹ ನಮ್ಮನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿ ಹೃದಯದ ಇರಾದೆಗಳನ್ನು ತಿಳಿದುಕೊಳ್ಳಬೇಕು. ಹೀಗೆ ಮಾಡುವಾಗ “ಹೃದಯರಹಸ್ಯಗಳನ್ನು ಬಲ್ಲವನಾದ” ಯೆಹೋವ ದೇವರ ಸಹಾಯ ಕೋರಬೇಕು. (ಕೀರ್ತ. 44:21) ದೇವರು ತನ್ನ ವಾಕ್ಯವಾದ ಬೈಬಲನ್ನು ನಮಗಾಗಿ ಒದಗಿಸಿದ್ದಾನೆ. ಕನ್ನಡಿಯಂತಿರುವ ಆ ವಾಕ್ಯವು ನಾವು ನಿಜವಾಗಿ ಎಂಥ ವ್ಯಕ್ತಿಗಳಾಗಿದ್ದೇವೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. (ಯಾಕೋ. 1:22-25) ಕ್ರೈಸ್ತ ಕೂಟಗಳಲ್ಲಿ ಮತ್ತು ಸಾಹಿತ್ಯದಲ್ಲಿ ಸಿಗುವ ಮರುಜ್ಞಾಪನಗಳು ಹಾಗೂ ಸಲಹೆಗಳು ಸಹ ನಮಗೆ ನೆರವಾಗುತ್ತವೆ. ಈ ಎಲ್ಲ ಸಹಾಯಕಗಳು ನಾವು ನಮ್ಮ ಹೃದಯವನ್ನು ಕಾಪಾಡಿಕೊಂಡು ನೀತಿಯ ಮಾರ್ಗದಲ್ಲಿ ನಡೆಯಲು ಸಹಾಯ ಮಾಡುತ್ತವೆ.
[ಪಾದಟಿಪ್ಪಣಿ]
a ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 22ರಲ್ಲಿರುವ ಚಿತ್ರ]
[ಪುಟ 23ರಲ್ಲಿರುವ ಚಿತ್ರ]
ದಿನಂಪ್ರತಿ ಬೈಬಲ್ ಓದುವುದು ನಮ್ಮ ಸಾಂಕೇತಿಕ ಹೃದಯದ ಮೇಲೆ ಯಾವ ಪ್ರಭಾವ ಬೀರುತ್ತದೆ?
[ಪುಟ 23ರಲ್ಲಿರುವ ಚಿತ್ರ]
ಪ್ರಾರ್ಥನೆಗಳು ನಮ್ಮ ಹೃದಯದಲ್ಲಿ ನಿಜವಾಗಿಯೂ ಏನಿದೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ
[ಪುಟ 23ರಲ್ಲಿರುವ ಚಿತ್ರ]
ಕ್ರೈಸ್ತ ಕೂಟಗಳು ನಮ್ಮ ಹೃದಯದ ಇರಾದೆಗಳನ್ನು ವಿವೇಚಿಸಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ