ತೀತ—‘ನಿಮ್ಮ ಪ್ರಯೋಜನಕ್ಕಾಗಿ ದುಡಿಯುವ ಜೊತೆ ಕೆಲಸಗಾರ’
ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತ ಸಭೆಯಲ್ಲಿ ಕೆಲವೊಮ್ಮೆ ಸಮಸ್ಯೆಗಳೆದ್ದವು. ಇವುಗಳನ್ನು ಬಗೆಹರಿಸಲು ಧೈರ್ಯ ಹಾಗೂ ವಿಧೇಯತೆಯ ಆವಶ್ಯಕತೆಯಿತ್ತು. ಇಂತಹ ಅನೇಕ ಸವಾಲುಗಳನ್ನು ಸಫಲವಾಗಿ ಎದುರಿಸಿದ ಒಬ್ಬ ವ್ಯಕ್ತಿ ತೀತನಾಗಿದ್ದನು. ಅವನು ಅಪೊಸ್ತಲ ಪೌಲನೊಂದಿಗೆ ಈ ಕೆಲಸದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದು, ಇತರರು ಯೆಹೋವನ ಮಾರ್ಗಕ್ಕನುಸಾರ ಕ್ರಿಯೆಗೈಯುವಂತೆ ಸಹಾಯ ಮಾಡಲು ಅವನು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದನು. ಆದುದರಿಂದಲೇ, ತೀತನು ‘ಅವರ ಪ್ರಯೋಜನಕ್ಕಾಗಿ ದುಡಿಯುವ ಜೊತೆ ಕೆಲಸಗಾರ’ನಾಗಿದ್ದನೆಂದು, ಪೌಲನು ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಹೇಳಿದನು.—2 ಕೊರಿಂಥ 8:23.
ತೀತನು ಯಾರಾಗಿದ್ದನು? ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅವನ ಪಾತ್ರವು ಏನಾಗಿತ್ತು? ಮತ್ತು ಅವನ ನಡತೆಯನ್ನು ಪರಿಗಣಿಸುವುದರಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ?
ಸುನ್ನತಿಯ ವಿವಾದಾಂಶ
ತೀತನು ಸುನ್ನತಿಯಾಗಿರದ ಗ್ರೀಕನಾಗಿದ್ದನು. (ಗಲಾತ್ಯ 2:3)a ಪೌಲನು ಅವನನ್ನು “ನಮ್ಮೆಲ್ಲರಿಗೆ ಹುದುವಾಗಿರುವ ನಂಬಿಕೆಯ ಸಂಬಂಧದಲ್ಲಿ . . . ನಿಜಕುಮಾರ”ನೆಂದು ಕರೆಯುವುದರಿಂದ, ಅಪೊಸ್ತಲನ ಆತ್ಮಿಕ ಮಕ್ಕಳಲ್ಲಿ ತೀತನು ಒಬ್ಬನಾಗಿದ್ದಿರಬಹುದು. (ತೀತ 1:1; ಹೋಲಿಸಿ 1 ತಿಮೊಥೆಯ 1:2.) ಸುನ್ನತಿಯ ವಿಷಯವಾಗಿ ಚರ್ಚೆ ನಡೆಸಲು, ಸುಮಾರು ಸಾ.ಶ. 49ರಲ್ಲಿ ಪೌಲ, ಬಾರ್ನಬ, ಮತ್ತು ಸಿರಿಯ, ಅಂತಿಯೋಕ್ಯದಿಂದ ಬಂದ ಇತರರು ಯೆರೂಸಲೇಮಿಗೆ ಹೋದಾಗ, ತೀತನು ಅವರೊಂದಿಗಿದ್ದನು.—ಅ. ಕೃತ್ಯಗಳು 15:1, 2; ಗಲಾತ್ಯ 2:1.
ಯೆರೂಸಲೇಮಿನಲ್ಲಿ ನಡೆದ ಚರ್ಚೆಯಲ್ಲಿ, ಸುನ್ನತಿಯಾಗಿರದ ಅನ್ಯರ ಮತಾಂತರವೇ ಚರ್ಚೆಯ ಮುಖ್ಯ ವಿಷಯವಾಗಿತ್ತು. ಈ ಕಾರಣ, ಸುನ್ನತಿ ಆಗಿರಲಿ ಇಲ್ಲದಿರಲಿ ಯೆಹೂದ್ಯರು ಮತ್ತು ಯೆಹೂದ್ಯೇತರರು ದೇವರ ಅನುಗ್ರಹವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತೋರಿಸಿಕೊಡಲು, ತೀತನನ್ನು ಅವರ ಜೊತೆಯಲ್ಲಿ ಕರೆದುಕೊಂಡು ಹೋಗಲಾಯಿತೆಂದು ಹೇಳಲಾಗಿದೆ. ಮತಾಂತರಗೊಂಡ ಅನ್ಯರು ಸುನ್ನತಿ ಮಾಡಿಸಿಕೊಂಡು, ಧರ್ಮಶಾಸ್ತ್ರವನ್ನು ಆಚರಿಸುವ ಹಂಗಿನವರಾಗಿದ್ದರೆಂದು, ಕ್ರೈಸ್ತತ್ವವನ್ನು ಸ್ವೀಕರಿಸುವ ಮೊದಲು ಫರಿಸಾಯರಾಗಿದ್ದ ಯೆರೂಸಲೇಮ್ ಸಭೆಯ ಕೆಲವು ಸದಸ್ಯರು ವಾದಿಸಿದರು. ಆದರೆ ಈ ವಾದವನ್ನು ಪ್ರತಿರೋಧಿಸಲಾಯಿತು. ಸುನ್ನತಿ ಮಾಡಿಸಿಕೊಳ್ಳುವಂತೆ ತೀತನನ್ನು ಮತ್ತು ಇತರ ಅನ್ಯರನ್ನು ಒತ್ತಾಯಿಸುವುದು, ರಕ್ಷಣೆಯು ಧರ್ಮಶಾಸ್ತ್ರದ ಕ್ರಿಯೆಗಳ ಮೇಲಲ್ಲ, ಬದಲಿಗೆ ಯೆಹೋವನ ಅಪಾತ್ರ ದಯೆ ಹಾಗೂ ಯೇಸು ಕ್ರಿಸ್ತನ ಮೇಲಿರುವ ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂಬುದನ್ನು ಅಲ್ಲಗಳೆಯುವುದಕ್ಕೆ ಸಮಾನವಾಗಿರುವುದು. ಅಲ್ಲದೆ, ಅನ್ಯರು ಇಲ್ಲವೆ ರಾಷ್ಟ್ರಗಳ ಜನರು ದೇವರ ಪವಿತ್ರಾತ್ಮವನ್ನು ಪಡೆದಿದ್ದರೆಂಬ ಪ್ರಮಾಣವನ್ನು ತಿರಸ್ಕರಿಸುವುದಕ್ಕೂ ಸಮಾನವಾಗಿರುವುದು.—ಅ. ಕೃತ್ಯಗಳು 15:5-12.
ಕೊರಿಂಥಕ್ಕೆ ಕಳುಹಿಸಲ್ಪಟ್ಟದ್ದು
ಸುನ್ನತಿಯ ವಿವಾದಾಂಶವು ಬಗೆಹರಿಸಲ್ಪಟ್ಟ ಬಳಿಕ, ಅನ್ಯಜನಾಂಗದವರಿಗೆ ಸಾರುವ ಪೂರ್ಣ ಅಧಿಕಾರವು ಪೌಲ ಬಾರ್ನಬರಿಗೆ ಕೊಡಲಾಯಿತು. ಅದೇ ಸಮಯದಲ್ಲಿ ಅವರು ಬಡವರನ್ನು ಅಲಕ್ಷಿಸದಿರಲು ಪ್ರಯತ್ನಿಸಿದರು. (ಗಲಾತ್ಯ 2:9, 10) ಸುಮಾರು ಆರು ವರ್ಷಗಳ ನಂತರ, ಪ್ರೇರಿತ ದಾಖಲೆಯಲ್ಲಿ ತೀತನ ಕುರಿತು ಪುನಃ ಬರೆಯಲ್ಪಟ್ಟಾಗ, ಅವನು ಪವಿತ್ರ ಜನರಿಗಾಗಿ ಸರಬರಾಯಿಗಳನ್ನು ಒಟ್ಟುಗೂಡಿಸುವುದರಲ್ಲಿ ಪೌಲನ ಪ್ರತಿನಿಧಿಯಾಗಿ ಕೊರಿಂಥದಲ್ಲಿದ್ದನು. ತೀತನು ಈ ಕೆಲಸವನ್ನು ಮಾಡುತ್ತಿದ್ದಾಗ, ಮತ್ತೊಂದು ಒತ್ತಡಭರಿತ ಸನ್ನಿವೇಶವನ್ನು ಎದುರಿಸಿದನು.
ಕೊರಿಂಥದವರೊಂದಿಗೆ ಪೌಲನು ನಡೆಸಿದ ಪತ್ರವ್ಯವಹಾರವು ತೋರಿಸುವುದೇನೆಂದರೆ, ಅವರು “ಜಾರರ ಸಹವಾಸ ಮಾಡಬಾರದೆಂದು” ಅವನು ಪ್ರಥಮವಾಗಿ ಬರೆದನು. ತಮ್ಮ ಮಧ್ಯದಲ್ಲಿದ್ದ ಪಶ್ಚಾತ್ತಾಪಪಡದ ಜಾರನನ್ನು ಬಹಿಷ್ಕರಿಸುವಂತೆ ಅವನು ಅವರಿಗೆ ಹೇಳಬೇಕಿತ್ತು. ಹೌದು, ಪೌಲನು “ಬಹಳ ಕಣ್ಣೀರು ಬಿಡುತ್ತಾ” ಬಲವಾದ ಪತ್ರವನ್ನು ಅವರಿಗೆ ಬರೆದನು. (1 ಕೊರಿಂಥ 5:9-13; 2 ಕೊರಿಂಥ 2:4) ಈ ಮಧ್ಯೆ, ಅಗತ್ಯದಲ್ಲಿದ್ದ ಯೂದಾಯದ ಕ್ರೈಸ್ತರಿಗಾಗಿ ಮಾಡಲಾಗುತ್ತಿದ್ದ ಶೇಖರಣೆಯಲ್ಲಿ ನೆರವು ನೀಡುವಂತೆ, ತೀತನನ್ನು ಕೊರಿಂಥಕ್ಕೆ ಕಳುಹಿಸಲಾಯಿತು. ಬಹುಶಃ ಪೌಲನ ಪತ್ರಕ್ಕೆ, ಕೊರಿಂಥದವರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲಿಕ್ಕಾಗಿಯೂ ಅವನನ್ನು ಅಲ್ಲಿಗೆ ಕಳುಹಿಸಲಾಯಿತು.—2 ಕೊರಿಂಥ 8:1-6.
ಕೊರಿಂಥದವರು ಪೌಲನ ಸಲಹೆಗೆ ಹೇಗೆ ಪ್ರತಿಕ್ರಿಯಿಸುವರು? ಅದನ್ನು ತಿಳಿದುಕೊಳ್ಳಲು ಕಾತುರನಾಗಿದ್ದ ಪೌಲನು, ಎಫೆಸ ಪಟ್ಟಣದಲ್ಲಿದ್ದ ತೀತನನ್ನು ಏಜೀಯನ್ ಸಮುದ್ರದ ಆಚೆಗಿದ್ದ ಕೊರಿಂಥಕ್ಕೆ ಕಳುಹಿಸಿ, ಆದಷ್ಟು ಬೇಗನೆ ಅವರ ಪ್ರತಿಕ್ರಿಯೆಯ ಕುರಿತು ವರದಿಸುವಂತೆ ಹೇಳಿರಬಹುದು. ಚಳಿಗಾಲದಲ್ಲಿ ಸಮುದ್ರಯಾನವು (ನವೆಂಬರ್ ತಿಂಗಳಿನ ಮಧ್ಯಭಾಗದಲ್ಲಿ) ನಿಲ್ಲಿಸಲ್ಪಡುವ ಮುಂಚೆ ಇಂತಹ ಒಂದು ಯಾತ್ರೆಯು ಪೂರ್ಣಗೊಂಡಿದ್ದಲ್ಲಿ, ತೀತನು ಹಡಗಿನ ಮೂಲಕ ತ್ರೋವಕ್ಕೆ ಹೋಗಬಹುದಿತ್ತು, ಇಲ್ಲವೆ ಹೆಲಸ್ಪಾಂಟ್ನ ಮೂಲಕ ದೀರ್ಘವಾದ ಭೂಮಾರ್ಗವನ್ನು ಬಳಸಬಹುದಿತ್ತು. ತ್ರೋವದಲ್ಲಿ ಅವರು ಸಂಧಿಸಬೇಕಾಗಿದ್ದ ಸ್ಥಳಕ್ಕೆ ಪೌಲನು ಬಹುಶಃ ಬೇಗನೆ ಬಂದು ತಲಪಿದನೆಂದು ಕಾಣುತ್ತದೆ. ಏಕೆಂದರೆ, ಅಕ್ಕಸಾಲಿಗರು ಉಂಟುಮಾಡಿದ ಗಲಭೆಯ ಕಾರಣ ಅವನು ಸಮಯಕ್ಕೆ ಮುಂಚಿತವಾಗಿ ಎಫೆಸ ಪಟ್ಟಣವನ್ನು ಬಿಟ್ಟುಹೋಗಬೇಕಾಯಿತು. ತ್ರೋವದಲ್ಲಿ ಪೌಲನು ಆತಂಕದಿಂದ ಕಾದ ಬಳಿಕ, ತೀತನು ಹಡಗಿನಲ್ಲಿ ಬರಲಾರನೆಂದು ತಿಳಿದುಕೊಂಡನು. ಆದಕಾರಣ ಅವನನ್ನು ದಾರಿಯಲ್ಲಿ ಭೇಟಿಯಾಗುವ ಉದ್ದೇಶದಿಂದ ಭೂಮಾರ್ಗವನ್ನು ಹಿಡಿದನು. ಯೂರೋಪಿಯನ್ ಕ್ಷೇತ್ರವನ್ನು ತಲಪಿದ ಮೇಲೆ, ಅವನು ಎಗ್ನಾಟೀಆ ಮಾರ್ಗದಲ್ಲಿ ಸಂಚರಿಸಿ, ತೀತನನ್ನು ಮಕೆದೋನ್ಯದಲ್ಲಿ ಭೇಟಿಯಾದನು. ಕೊರಿಂಥದಿಂದ ಬಂದ ವಾರ್ತೆಯು ಶುಭವಾಗಿದ್ದ ಕಾರಣ, ಅದು ಪೌಲನಿಗೆ ನೆಮ್ಮದಿ ಹಾಗೂ ಆನಂದವನ್ನು ತಂದಿತು. ಸಭೆಯು ಅಪೊಸ್ತಲನ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತ್ತು.—2 ಕೊರಿಂಥ 2:12, 13; 7:5-7.
ತನ್ನ ಪ್ರತಿನಿಧಿಗೆ ಸಿಗಬಹುದಾಗಿದ್ದ ಸ್ವಾಗತದ ಕುರಿತು ಪೌಲನು ಚಿಂತಿಸಿದ್ದನಾದರೂ, ತೀತನು ತನ್ನ ನೇಮಕವನ್ನು ಪೂರೈಸುವಂತೆ ದೇವರು ಸಹಾಯಮಾಡಿದ್ದನು. ತೀತನನ್ನು ಜನರು “ಮನೋಭೀತಿಯಿಂದ ನಡುಗುವವರಾಗಿ” ಸ್ವೀಕರಿಸಿದರು. (2 ಕೊರಿಂಥ 7:8-15) ಡಬ್ಲ್ಯೂ. ಡಿ. ಥಾಮಸ್ ಅವರ ಮಾತುಗಳಿಗನುಸಾರ, “ಪೌಲನ ಬಲವಾದ ಖಂಡನೆಯನ್ನು ಶಕ್ತಿಹೀನಗೊಳಿಸದೆ, [ತೀತನು] ಕೊರಿಂಥದವರೊಂದಿಗೆ ಕೌಶಲಪೂರ್ಣವಾಗಿಯೂ ಜಾಣ್ಮೆಯಿಂದಲೂ ತರ್ಕಿಸಿದನು. ಮತ್ತು ಪೌಲನು ಅವರ ಆತ್ಮಿಕ ಕ್ಷೇಮವನ್ನೇ ಮನಸ್ಸಿನಲ್ಲಿಟ್ಟುಕೊಂಡು, ಅಷ್ಟೊಂದು ಬಲವಾದ ಪತ್ರವನ್ನು ಅವರಿಗೆ ಬರೆದನೆಂಬ ಆಶ್ವಾಸನೆಯನ್ನು ನೀಡಿದನೆಂದು ನಾವು ಊಹಿಸಸಾಧ್ಯವಿದೆ.” ಹೀಗೆ ಮಾಡುತ್ತಾ, ತೀತನು ಕೊರಿಂಥದ ಕ್ರೈಸ್ತರನ್ನು ಅವರ ವಿಧೇಯತೆ ಹಾಗೂ ಸಕಾರಾತ್ಮಕ ಬದಲಾವಣೆಗಳಿಂದಾಗಿ ಪ್ರೀತಿಸತೊಡಗಿದನು. ಅವರ ಪ್ರಶಂಸನೀಯ ಮನೋಭಾವವು ಅವನಿಗೆ ಉತ್ತೇಜನದಾಯಕವಾಗಿತ್ತು.
ಕೊರಿಂಥದಲ್ಲಿ ತೀತನು, ಯೂದಾಯದ ಪವಿತ್ರ ಜನರಿಗಾಗಿ ಸರಬರಾಯಿಗಳನ್ನು ಒಟ್ಟುಗೂಡಿಸಿದ ಮತ್ತೊಂದು ಕೆಲಸದ ಕುರಿತೇನು? ತೀತನು ಅದನ್ನೂ ನಿರ್ವಹಿಸುತ್ತಿದ್ದನೆಂದು, 2 ಕೊರಿಂಥದಲ್ಲಿರುವ ಮಾಹಿತಿಯಿಂದ ನಾವು ತಿಳಿದುಕೊಳ್ಳಸಾಧ್ಯವಿದೆ. ಆ ಪತ್ರವನ್ನು ಬಹುಶಃ ಮಕೆದೋನ್ಯದಲ್ಲಿ, ಸಾ.ಶ. 55ರ ಶರತ್ಕಾಲದಲ್ಲಿ, ಅಂದರೆ ತೀತ ಪೌಲರು ಭೇಟಿಯಾದ ಸ್ವಲ್ಪ ಸಮಯದಲ್ಲೇ ಬರೆಯಲಾಯಿತು. ಸಂಗ್ರಹವನ್ನು ಆರಂಭಿಸಿದ್ದ ತೀತನು, ಅದನ್ನು ಪೂರ್ಣಗೊಳಿಸುವ ಸಲುವಾಗಿ ಇಬ್ಬರು ಅನಾಮಧೇಯ ಸಹಾಯಕರೊಂದಿಗೆ ಮತ್ತೆ ಅಲ್ಲಿಗೆ ಕಳುಹಿಸಲ್ಪಟ್ಟನೆಂದು ಪೌಲನು ಬರೆದನು. ಕೊರಿಂಥದವರಲ್ಲಿ ಬಹಳಷ್ಟು ಆಸಕ್ತಿಯುಳ್ಳವನಾಗಿದ್ದ ತೀತನು, ಹಿಂದಿರುಗಲು ಇಚ್ಛೆಯುಳ್ಳವನಾಗಿದ್ದನು. ತೀತನು ಕೊರಿಂಥಕ್ಕೆ ಹಿಂದಿರುಗುತ್ತಿದ್ದಾಗ, ಬಹುಶಃ ಕೊರಿಂಥದವರಿಗೆ ಪೌಲನು ಬರೆದ ಎರಡನೆಯ ಪತ್ರವನ್ನು ಅವನು ಒಯ್ಯುತ್ತಿದ್ದನು.—2 ಕೊರಿಂಥ 8:6, 17, 18, 22.
ತೀತನು ವಿಷಯಗಳನ್ನು ಉತ್ತಮವಾಗಿ ಸಂಘಟಿಸಿದನಲ್ಲದೆ, ಕಷ್ಟಕರ ಸನ್ನಿವೇಶಗಳಲ್ಲಿ ಸೂಕ್ಷ್ಮವಾದ ನೇಮಕಗಳನ್ನು ಅವನಿಗೆ ನೀಡಬಹುದಾದ ಅರ್ಹ ವ್ಯಕ್ತಿಯಾಗಿದ್ದನು. ಅವನು ಧೈರ್ಯವಂತನೂ, ಪ್ರೌಢನೂ, ಸ್ಥಿರಚಿತ್ತನೂ ಆಗಿದ್ದನು. ಕೊರಿಂಥದ “ಅತಿಶ್ರೇಷ್ಠರಾದ ಅಪೊಸ್ತಲ”ರಿಂದ ಬರುತ್ತಿದ್ದ ಸವಾಲುಗಳನ್ನು ಎದುರಿಸಲು ತೀತನು ಯೋಗ್ಯವಾದ ವ್ಯಕ್ತಿಯೆಂದು ಪೌಲನು ಎಣಿಸಿದನು. (2 ಕೊರಿಂಥ 11:5) ತೀತನ ಕುರಿತಾದ ಈ ಅಭಿಪ್ರಾಯವು, ಶಾಸ್ತ್ರಗಳಲ್ಲಿನ ಅವನ ಮುಂದಿನ ಉಲ್ಲೇಖದಲ್ಲಿ, ಅಂದರೆ ಮತ್ತೊಂದು ವಿಶೇಷ ನೇಮಕದಿಂದ ದೃಢೀಕರಿಸಲ್ಪಟ್ಟಿದೆ.
ಕ್ರೇತದ್ವೀಪದಲ್ಲಿ
ಸಾ.ಶ. 61ರಿಂದ 64ರ ಸಮಯಾವಧಿಯಲ್ಲಿ ಪೌಲನು ತೀತನಿಗೆ ಪತ್ರ ಬರೆದಿರಬಹುದು. ತೀತನು ಆಗ ಕ್ರೇತದ್ವೀಪದಲ್ಲಿ ಸೇವೆಸಲ್ಲಿಸುತ್ತಿದ್ದನು. ಪೌಲನು ಅವನನ್ನು “ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ ಪಟ್ಟಣಪಟ್ಟಣಗಳಲ್ಲೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು” ಅಲ್ಲಿ ಬಿಟ್ಟಿದ್ದನು. ಸಾಮಾನ್ಯವಾಗಿ, ಕ್ರೇತದವರು “ಸುಳ್ಳುಗಾರರೂ ದುಷ್ಟಮೃಗಗಳೂ ಸೋಮಾರಿಗಳಾದ ಹೊಟ್ಟೇಬಾಕರೂ” ಆಗಿದ್ದರೆಂಬ ಖ್ಯಾತಿಯನ್ನು ಪಡೆದಿದ್ದರು. ಆದಕಾರಣ, ಕ್ರೇತದಲ್ಲಿ ತೀತನು ಪುನಃ ಧೈರ್ಯ ಮತ್ತು ದೃಢತೆಯಿಂದ ಕ್ರಿಯೆಗೈಯಬೇಕಿತ್ತು. (ತೀತ 1:5, 10-12) ಅದು ಬಹಳ ಜವಾಬ್ದಾರಿಯುತ ಕೆಲಸವಾಗಿತ್ತು, ಏಕೆಂದರೆ ಆ ದ್ವೀಪದಲ್ಲಿ ಅದು ಕ್ರೈಸ್ತಮತದ ಭವಿಷ್ಯವನ್ನೇ ರೂಪಿಸಲಿತ್ತು. ಭಾವೀ ಮೇಲ್ವಿಚಾರಕರಲ್ಲಿ ಯಾವ ಗುಣಗಳಿರಬೇಕೆಂದು ಪೌಲನು ದೈವಪ್ರೇರಣೆಯಿಂದ ಸ್ಪಷ್ಟಪಡಿಸುವ ಮೂಲಕ ತೀತನಿಗೆ ಸಹಾಯಮಾಡಿದನು. ಕ್ರೈಸ್ತ ಹಿರಿಯರ ನೇಮಕದ ಸಂಬಂಧದಲ್ಲಿ, ಆ ಅರ್ಹತೆಗಳು ಈಗಲೂ ಪರಿಗಣಿಸಲ್ಪಡುತ್ತವೆ.
ಕ್ರೇತದಿಂದ ತೀತನು ಯಾವಾಗ ಹಿಂದಿರುಗಿದನೆಂದು ಶಾಸ್ತ್ರವಚನಗಳು ಸೂಚಿಸುವುದಿಲ್ಲ. ಜೇನ ಮತ್ತು ಅಪೊಲ್ಲೋಸರು ತಮ್ಮ ಪ್ರಯಾಣದ ಯಾವುದೊ ಅನಿಶ್ಚಿತ ಸಮಯದಲ್ಲಿ ಕ್ರೇತದಲ್ಲಿ ತಂಗಲಿದ್ದರು. ಆ ಸಮಯದಲ್ಲಿ ಅವರ ಅಗತ್ಯಗಳನ್ನು ಪೂರೈಸುವಂತೆ ಪೌಲನು ತೀತನನ್ನು ಕೇಳಿಕೊಂಡ ಸಮಯದ ವರೆಗೂ ತೀತನು ಅಲ್ಲಿದ್ದನು. ಆದರೆ ತೀತನು ಆ ದ್ವೀಪದಲ್ಲಿ ಬಹಳ ಸಮಯ ಇರುವಂತಿರಲಿಲ್ಲ. ಅಲ್ಲಿಗೆ ಅರ್ತೆಮನನ್ನಾಗಲಿ ತುಖಿಕನನ್ನಾಗಲಿ ಕಳುಹಿಸಲು ಪೌಲನು ಯೋಜಿಸುತ್ತಿದ್ದನು. ತರುವಾಯ ಅವನು ಅಪೊಸ್ತಲ ಪೌಲನನ್ನು, ವಾಯವ್ಯ ಗ್ರೀಸಿನ ಪ್ರಸಿದ್ಧ ನಗರವಾದ ನಿಕೊಪೊಲಿಯಲ್ಲಿ ಭೇಟಿಯಾಗಬೇಕಿತ್ತು.—ತೀತ 3:12, 13.
ತೀತನ ಕುರಿತಾದ ಬೈಬಲಿನ ಕೊನೆಯ ಸಂಕ್ಷಿಪ್ತ ಉಲ್ಲೇಖದಿಂದ, ಬಹುಶಃ ಸಾ.ಶ. 65ರಲ್ಲಿ ಪೌಲನು ಅವನನ್ನು ಮತ್ತೊಂದು ನೇಮಕದ ಮೇಲೆ ಕಳುಹಿಸಿದನೆಂದು ನಾವು ತಿಳಿದುಕೊಳ್ಳುತ್ತೇವೆ. ಅದು ಅವನನ್ನು ಈಗಿನ ಕ್ರೋಏಷಿಯದಲ್ಲಿರುವ ಆ್ಯಡ್ರಿಯಾಟಿಕ್ ಸಮುದ್ರದ ಪೂರ್ವ ದಿಕ್ಕಿನಲ್ಲಿರುವ ದಲ್ಮಾತ್ಯಕ್ಕೆ ಕೊಂಡ್ಯೊಯಿತು. (2 ತಿಮೊಥೆಯ 4:10) ತೀತನು ಅಲ್ಲಿ ಏನು ಮಾಡಲಿದ್ದನೆಂದು ನಮಗೆ ತಿಳಿಯಪಡಿಸಿಲ್ಲ, ಆದರೆ ಸಭಾ ಸಂಗತಿಗಳನ್ನು ಕ್ರಮಪಡಿಸಲು ಮತ್ತು ಮಿಷನೆರಿ ಚಟುವಟಿಕೆಯಲ್ಲಿ ಭಾಗವಹಿಸಲು ಅವನನ್ನು ಅಲ್ಲಿಗೆ ಕಳುಹಿಸಲಾಯಿತೆಂದು ಸೂಚಿಸಲಾಗಿದೆ. ಹಾಗಿರುವಲ್ಲಿ, ಅವನು ಕ್ರೇತದಲ್ಲಿ ಯಾವ ಕೆಲಸವನ್ನು ಮಾಡಿದನೊ ಅದೇ ಕೆಲಸವನ್ನು ಇಲ್ಲಿಯೂ ಮಾಡಲಿದ್ದನು.
ತೀತನಂತಹ ಪ್ರೌಢ ಕ್ರೈಸ್ತ ಮೇಲ್ವಿಚಾರಕರಿಗಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! ಶಾಸ್ತ್ರೀಯ ತತ್ವಗಳ ಕುರಿತಾದ ಅವರ ಸ್ಪಷ್ಟ ತಿಳುವಳಿಕೆ, ಮತ್ತು ಅವುಗಳನ್ನು ಧೈರ್ಯದಿಂದ ಅನ್ವಯಿಸುವ ಸಾಮರ್ಥ್ಯವು, ಸಭೆಯ ಆತ್ಮಿಕತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ನಾವು ಅವರ ನಂಬಿಕೆಯನ್ನು ಅನುಕರಿಸಿ, ನಮ್ಮ ಜೊತೆ ವಿಶ್ವಾಸಿಗಳ ಆತ್ಮಿಕ ಅಭಿರುಚಿಗಳನ್ನು ಪ್ರವರ್ಧಿಸುವ ಮೂಲಕ ತೀತನಂತೆ ಇರೋಣ.—ಇಬ್ರಿಯ 13:7.
[ಪಾದಟಿಪ್ಪಣಿ]
a ಗಲಾತ್ಯ 2:3, ತೀತನನ್ನು ಒಬ್ಬ ಗ್ರೀಕನೋಪಾದಿ (ಹೆಲನ್) ವರ್ಣಿಸುತ್ತದೆ. ಅವನು ಗ್ರೀಕ್ ವಂಶದವನಾಗಿದ್ದನೆಂದು ಇದು ಅರ್ಥೈಸಬಹುದು. ಆದರೂ, ಭಾಷೆ ಹಾಗೂ ಸಂಸ್ಕೃತಿಯಲ್ಲಿ ಮಾತ್ರ ಗ್ರೀಕರಾಗಿದ್ದ ಜನರನ್ನು ಸೂಚಿಸಿ ಮಾತಾಡುವಾಗ, ಕೆಲವು ಗ್ರೀಕ್ ಬರಹಗಾರರು ಬಹುವಚನ ರೂಪವನ್ನು (ಹೆಲನೆಸ್) ಉಪಯೋಗಿಸಿದರೆಂದು ಪ್ರತಿಪಾದಿಸಲಾಗಿದೆ. ತೀತನು ಆ ಅರ್ಥದಲ್ಲಿ ಒಬ್ಬ ಗ್ರೀಕನಾಗಿದ್ದಿರಬಹುದು.
[ಪುಟ 31 ರಲ್ಲಿರುವ ಚಿತ್ರ]
ತೀತನು, ಕೊರಿಂಥ ಮತ್ತು ಇತರ ಕಡೆಗಳಲ್ಲಿದ್ದ ಕ್ರೈಸ್ತರ ಅಭಿರುಚಿಗಳಿಗಾಗಿ ದುಡಿದ ಒಬ್ಬ ಧೈರ್ಯವಂತ ಜೊತೆ ಕೆಲಸಗಾರನಾಗಿದ್ದನು