ಕಾರ್ಯಮಗ್ನರು ನಿರ್ಜೀವಕರ್ಮಗಳಲ್ಲೋ ಅಥವಾ ಯೆಹೋವನ ಸೇವೆಯಲ್ಲೋ?
“ಕ್ಷಮಿಸಿ, ನಾನು ಕಾರ್ಯಮಗ್ನನಿದ್ದೇನೆ.” ರಾಜ್ಯದ ಸುವಾರ್ತೆಯನ್ನು ಬಹಿರಂಗವಾಗಿ ಸಾರುವಾಗ, ಯೆಹೋವನ ಸಾಕ್ಷಿಗಳು ಎದುರಿಸುವಂತಹ ಅಡ್ಡಿಗಳಲ್ಲಿ ಇದೊಂದಾಗಿರುತ್ತದೆ. (ಮತ್ತಾಯ 24:14) ಮತ್ತು “ನಾನು ಕಾರ್ಯಮಗ್ನನಿದ್ದೇನೆ” ಎಂಬ ಹೇಳಿಕೆಯು ಕೆಲವೊಮ್ಮೆ ಸುಲಭವಾಗಿ ದೊರೆಯುವ ಒಂದು ನೆವನಕ್ಕಿಂತ ಅಧಿಕವಾಗಿಲ್ಲದಿರುವದಾದರೂ, ಸತ್ಯವೇನಂದರೆ ಅನೇಕ ಜನರು ನಿಜವಾಗಿಯೂ ಕಾರ್ಯಮಗ್ನರಾಗಿರುತ್ತಾರೆ. “ಪ್ರಪಂಚದ ಚಿಂತೆ” ಯಿಂದ—ಜೀವನವನ್ನು ನಡಿಸುವ, ಬೆಲೆಪಟ್ಟಿಗಳನ್ನು (ಬಿಲ್ಸ್) ತೆರುವ, ಕೆಲಸಕ್ಕೆ ಹೋಗಿಬರುವ, ಮಕ್ಕಳನ್ನು ಪೋಷಿಸುವ, ಮನೆ, ಕಾರು, ಮತ್ತು ಇತರ ಸ್ವತ್ತುಗಳ ಜಾಗ್ರತೆಯನ್ನು ತಕ್ಕೊಳ್ಳುವ ಒತ್ತಡಗಳು—ಬಹುಮಟ್ಟಿಗೆ ಅವರು ವ್ಯಯವಾಗಿ ಹೋಗಿರುತ್ತಾರೆ.—ಮತ್ತಾಯ 13:22.
ಜನರು ನಿಜವಾಗಿಯೂ ಕಾರ್ಯಮಗ್ನರಿರಬಹುದಾದರೂ, ಕೆಲವರು ಮಾತ್ರವೇ ಫಲದಾಯಕ ಯಾ ಉತ್ಪಾದಕವಾದ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಇದು ವಿವೇಕಿ ಪುರುಷನಾದ ಸೊಲೊಮೋನನು ಒಮ್ಮೆ ಬರೆದಂತೆ ಇದೆ: “ಲೋಕದಲ್ಲಿ ಮನುಷ್ಯನು ಹೃದಯಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಲಾಭವೇನು? ಅವನ ದಿನಗಳೆಲ್ಲಾ ವ್ಯಸನಮಯವೇ, ಅವನ ಕೆಲಸವು ತೊಂದರೆಯೇ; ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ನಿಲಗಡೆಯಿಲ್ಲ. ಇದೂ ವ್ಯರ್ಥ.”—ಪ್ರಸಂಗಿ 2:22, 23.
ಅಂಥ ವ್ಯರ್ಥ ಚಟುವಟಿಕೆಯನ್ನು ಬೈಬಲು “ನಿರ್ಜೀವಕರ್ಮಗಳು” ಎಂದು ಕೂಡ ಕರೆದಿದೆ. (ಇಬ್ರಿಯ 9:14) ಅಂಥ ಕಾರ್ಯಗಳು ನಿಮ್ಮ ಜೀವನದ ಮೇಲೆ ಪ್ರಭುತ್ವವನ್ನು ನಡಿಸುತ್ತಿವೆಯೇ? ಒಬ್ಬ ಕ್ರೈಸ್ತನೋಪಾದಿ ಇದು ನಿಮ್ಮ ಮಹಾ ಆತಂಕಕ್ಕೆ ಕಾರಣವಾಗಿರತಕ್ಕದ್ದು, ಯಾಕಂದರೆ ದೇವರು “ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾನೆ.” (ಕೀರ್ತನೆ 62:12) ಮತ್ತು “ಸಮಯವು ಸಂಕೋಚವಾದದ್ದರಿಂದ” ನಿರ್ಜೀವಕರ್ಮಗಳಲ್ಲಿ ನಮ್ಮ ಸಮಯವನ್ನು ಹಾಳುಮಾಡದಿರಲು ನಾವು ವಿಶೇಷವಾಗಿ ಚಿಂತಿತರಾಗಿತಕ್ಕದ್ದು. (1 ಕೊರಿಂಥ 7:29) ಆದರೆ ನಿರ್ಜೀವ ಕರ್ಮಗಳು ಯಾವುವು? ನಾವು ಅವುಗಳನ್ನು ಹೇಗೆ ವೀಕ್ಷಿಸತಕ್ಕದ್ದು? ಮತ್ತು ನಿಜ ಮೌಲ್ಯದ ಕೆಲಸಗಳಲ್ಲಿ ಕಾರ್ಯಮಗ್ನರಾಗಿದ್ದೇವೆ ಎಂದು ನಾವು ಹೇಗೆ ನಿಶ್ಚಯದಿಂದಿರಬಹುದು?
ನಿರ್ಜೀವಕರ್ಮಗಳನ್ನು ಗುರುತಿಸುವದು
ಇಬ್ರಿಯ 6:1, 2 ರಲ್ಲಿ ಪೌಲನು ಬರೆದದ್ದು: “ಆದದರಿಂದ ನಿರ್ಜೀವಕರ್ಮಗಳ ಮೇಲಣ ನಂಬಿಕೆಯನ್ನು ಬಿಟ್ಟುಬಿಟ್ಟು ದೇವರಲ್ಲಿಯೇ ನಂಬಿಕೆಯಿಡಬೇಕಾದದ್ದು, ಸ್ನಾನ ಹಸ್ತಾರ್ಪಣಗಳ ವಿಷಯವಾದ ಉಪದೇಶ, ಸತ್ತವರಿಗೆ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಉಂಟೆಂಬದು ಇವುಗಳನ್ನು ಪದೇಪದೇ ಅಸ್ತಿವಾರವಾಗಿ ಹಾಕದೆ ಕ್ರಿಸ್ತನ ವಿಷಯವಾದ ಪ್ರಥಮಬೋಧನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ.” “ಪ್ರಥಮಬೋಧನೆಗಳಲ್ಲಿ” “ನಿರ್ಜೀವಕರ್ಮಗಳ ಮೇಲಣ ನಂಬಿಕೆಯನ್ನು ಬಿಟ್ಟು [ನಿರ್ಜೀವಕರ್ಮಗಳಿಂದ ಪಶ್ಚಾತ್ತಾಪ, NW ]” ಬಿಡುವದು ಸೇರಿರುತ್ತದೆ. ಕ್ರೈಸ್ತರೋಪಾದಿ, ಅಂತಹ ನಿರ್ಜೀವಕರ್ಮಗಳಿಂದ ಪೌಲನ ವಾಚಕರು ಈಗಾಗಲೇ ಪಶ್ಚಾತ್ತಾಪ ಪಟ್ಟಿದ್ದರು. ಅದು ಹೇಗೆ?
ಕ್ರಿಸ್ತನನ್ನು ಸ್ವೀಕರಿಸುವ ಮೊದಲು, ಮೊದಲನೆಯ ಶತಕದ ಕೆಲವರು “ಶರೀರಭಾವದ ಕರ್ಮಗಳಲ್ಲಿ”—ಹೆಸರಿಸುವದಾದರೆ, “ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ” ಮತ್ತು ಇತರ ದುಷ್ಟ ಕೃತ್ಯಗಳಲ್ಲಿ ತೊಡಗಿದ್ದರು. (ಗಲಾತ್ಯ 5:19-21) ಅಂಕೆಯಲ್ಲಿಡಲ್ಪಡದಿದ್ದಲ್ಲಿ, ಅಂಥ ಕರ್ಮಗಳು ಅವರ ಆತ್ಮಿಕ ಮರಣಕ್ಕೆ ನಡಿಸುತ್ತಿದ್ದವು. ಆದರೂ, ಕರುಣಾಮಯವಾಗಿಯೇ, ಆ ಕ್ರೈಸ್ತರು ಅವರ ನಾಶಕಾರೀ ಪಥದಿಂದ ತಿರುಗಿದರು, ಪಶ್ಚಾತ್ತಾಪ ಪಟ್ಟರು, ಮತ್ತು “ತೊಳೆದುಕೊಂಡರು.” ಹೀಗೆ ಅವರು ಯೆಹೋವನೊಂದಿಗೆ ಒಂದು ಶುದ್ಧವಾದ ನಿಲುವಿನಲ್ಲಿ ಆನಂದಿಸಿದರು.—1 ಕೊರಿಂಥ 6:9-11.
ಆದರೂ, ಎಲ್ಲಾ ಕ್ರೈಸ್ತರು ಕೆಟ್ಟ ಮತ್ತು ಅನೈತಿಕವಾಗಿರುವ ಕರ್ಮಗಳಿಂದ ಪಶ್ಚಾತ್ತಾಪ ಪಟ್ಟುಕೊಳ್ಳುವ ಆವಶ್ಯಕತೆಯಿರಲಿಲ್ಲ. ಪ್ರಥಮವಾಗಿ ಪೌಲನ ಪತ್ರವು ಯೆಹೂದ್ಯ ವಿಶ್ವಾಸಿಗಳಿಗೆ ಸಂಬೋಧಿಸಲ್ಪಟ್ಟಿದ್ದು, ಅವರಲ್ಲಿ ಅನೇಕರು, ಕ್ರಿಸ್ತನನ್ನು ಸ್ವೀಕರಿಸುವ ಮೊದಲು ಮೋಶೆಯ ನೇಮದೊಡಂಬಡಿಕೆಯನ್ನು ಕರಾರುವಾಕಾಗಿ ಅನುಸರಿಸಿದ್ದರು ಎಂಬದರಲ್ಲಿ ಸಂದೇಹವಿಲ್ಲ. ಹಾಗಾದರೆ, ಯಾವ ನಿರ್ಜೀವಕರ್ಮಗಳಿಗೆ ಅವರು ಪಶ್ಚಾತ್ತಾಪ ಪಟ್ಟಿದ್ದರು? ಖಂಡಿತವಾಗಿಯೂ ನಿಯಮಶಾಸ್ತ್ರದ ಸಂಸ್ಕಾರಗಳನ್ನು ಮತ್ತು ಆಹಾರ ಪಥ್ಯದ ಆವಶ್ಯಕತೆಗಳನ್ನು ಅವರು ಅನುಸರಿಸಿದರ್ದಲ್ಲೇನೂ ತಪ್ಪಿರಲಿಲ್ಲ. ನಿಯಮ ಶಾಸ್ತ್ರವು “ಪರಿಶುದ್ಧವೂ ನ್ಯಾಯವೂ ಹಿತವೂ” ಆಗಿರಲಿಲ್ಲವೇ? (ರೋಮಾಪುರ 7:12) ಹೌದು, ಆದರೆ ರೋಮಾಪುರ 10:2, 3 ರಲ್ಲಿ, ಪೌಲನು ಯೆಹೂದ್ಯರ ಕುರಿತಾಗಿ ಅಂದದ್ದು: “ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿ ಕೊಡುತ್ತೇನೆ; ಆದರೂ ಅವರ ಆಸಕ್ತಿ ಜ್ಞಾನಾನುಸಾರವಾದದ್ದಲ್ಲ. ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದದ್ದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ.”
ಹೌದು, ಯೆಹೂದ್ಯರು ತಪ್ಪಾಗಿ ನಂಬಿದ್ದೇನಂದರೆ ನಿಯಮ ಶಾಸ್ತ್ರವನ್ನು ಕಟ್ಟುನಿಟ್ಟಿನಿಂದ ಪರಿಪಾಲಿಸುವದರಿಂದ, ಅವರ ರಕ್ಷಣೆಯನ್ನು ಸಂಪಾದಿಸಬಲ್ಲರು. ಆದಾಗ್ಯೂ, “ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲ” ಎಂದು ಪೌಲನು ವಿವರಿಸಿದನು. (ಗಲಾತ್ಯ 2:16) ಕ್ರಿಸ್ತನ ಪ್ರಾಯಶ್ಚಿತವ್ತು ಒದಗಿಸಿಯಾದ ನಂತರ, ನೇಮನಿಷ್ಠೆಗಳ ಕರ್ಮಗಳು—ಅವು ಎಷ್ಟೇ ಧರ್ಮಶ್ರದ್ಧೆ ಯಾ ಉದಾತ್ತದ್ದಾಗಿರಲಿ—ನಿರ್ಜೀವಕರ್ಮಗಳಾಗಿದ್ದವು ಮತ್ತು ರಕ್ಷಣೆಯನ್ನು ಗಳಿಸುವದರಲ್ಲಿ ಯಾವುದೇ ಮೌಲ್ಯವಿಲ್ಲದವುಗಳಾಗಿದ್ದವು. ಆದಕಾರಣ ಸುಹೃದಯದ ಯೆಹೂದ್ಯರು ಅಂಥ ನಿರ್ಜೀವಕರ್ಮಗಳಿಂದ ಪಶ್ಚಾತ್ತಾಪಪಡುವ ಮತ್ತು ಅವರ ಪಶ್ಚಾತ್ತಾಪವನ್ನು ಸಾಂಕೇತಿಸುವ ದೀಕ್ಷಾಸ್ನಾನವನ್ನು ಪಡೆಯುವ ಮೂಲಕ ದೇವರ ಮೆಚ್ಚಿಕೆಯನ್ನು ಅನ್ವೇಷಿಸಿದರು.—ಅ.ಕೃತ್ಯಗಳು 2:38.
ಇದರಿಂದ ನಾವೇನು ಕಲಿಯುತ್ತೇವೆ? ಏನೆಂದರೆ ನಿರ್ಜೀವಕರ್ಮಗಳಲ್ಲಿ ಕೆಟ್ಟ ಯಾ ಅನೈತಿಕ ಕೃತ್ಯಗಳಿಗಿಂತಲೂ ಅಧಿಕವಾದದ್ದು ಸೇರಿರಬಹುದು; ಆತ್ಮಿಕವಾಗಿ ಸತ್ತಿರುವ, ವ್ಯರ್ಥವಾದ, ಯಾ ಫಲರಹಿತವಾದ ಯಾವುದೇ ಕಾರ್ಯವು ಅವುಗಳಲ್ಲಿ ಒಳಗೂಡಿರುತ್ತದೆ. ಆದರೆ ಅಂಥ ನಿರ್ಜೀವಕರ್ಮಗಳಿಂದ ಎಲ್ಲಾ ಕ್ರೈಸ್ತರು ಅವರ ದೀಕ್ಷಾಸ್ನಾನದ ಮೊದಲು ಪಶ್ಚಾತ್ತಾಪಪಡುವದಿಲ್ಲವೇ? ನಿಜ, ಆದರೆ ಮೊದಲನೆಯ ಶತಕದ ಕೆಲವು ಕ್ರೈಸ್ತರು ತದನಂತರ ಅನೈತಿಕ ನಡತೆಗೆ ಪುನಃ ಹಿಂತಿರುಗಿದರು. (1 ಕೊರಿಂಥ 5:1) ಮತ್ತು ಮೋಶೆಯ ನಿಯಮದೊಡಂಬಡಿಕೆಯ ನಿರ್ಜೀವಕರ್ಮಗಳನ್ನು ಆಚರಿಸುವದಕ್ಕೆ ಹಿಂತೆರಳುವ ಒಂದು ಒಲವು ಯೆಹೂದ್ಯ ಕ್ರೈಸ್ತರಲ್ಲಿತ್ತು. ಪೌಲನು ಅಂಥವರಿಗೆ ನಿರ್ಜೀವಕರ್ಮಗಳಿಗೆ ಹಿಂತೆರಳದಂತೆ ಮರುಜ್ಞಾಪನ ಮಾಡಬೇಕಾಯಿತು.—ಗಲಾತ್ಯ 4:21; 5:1.
ನಿರ್ಜೀವಕರ್ಮಗಳ ವಿರುದ್ಧ ಕಾಪಾಡಿಕೊಳ್ಳುವದು
ಆದಕಾರಣ ಯೆಹೋವನ ಜನರು ನಿರ್ಜೀವಕರ್ಮಗಳ ಪಾಶದೊಳಗೆ ಪುನಃ ಹಿಂತಿರುಗದಂತೆ ಇಂದು ಜಾಗ್ರತರಾಗಿರತಕ್ಕದ್ದು. ನೈತಿಕವಾಗಿ ಒಪ್ಪಂದಮಾಡಲು, ಅಪ್ರಾಮಾಣಿಕರಾಗಲು, ಮತ್ತು ಲೈಂಗಿಕ ದುರ್ವರ್ತನೆಯ ಕೃತ್ಯಗಳಲ್ಲಿ ತೊಡಗಲು ಒತ್ತಡಗಳಿಂದ ಕಾರ್ಯತಃ ಪ್ರತಿಯೊಂದು ಪಕ್ಕಗಳಿಂದ ನಾವು ಆಕ್ರಮಣಕ್ಕೊಡ್ಡಲ್ಪಡುತ್ತಿದ್ದೇವೆ. ಅಂಥ ಒತ್ತಡಗಳಿಗೆ ಪ್ರತಿ ವರ್ಷ ಸಾವಿರಾರು ಕ್ರೈಸ್ತರು ತುತ್ತಾಗುತ್ತಾರೆ ಮತ್ತು ಅನಂತರ ಪಶ್ಚಾತ್ತಾಪ ಪಡದಿದ್ದರೆ, ಕ್ರೈಸ್ತ ಸಭೆಯಿಂದ ಹೊರತಳ್ಳಲ್ಪಡುತ್ತಾರೆ ಎಂದು ಹೇಳಲು ದುಃಖವಾಗುತ್ತದೆ. ಆದುದರಿಂದ, ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಒಬ್ಬ ಕ್ರೈಸ್ತನು ಎಫೆಸ 4:22-24 ರಲ್ಲಿರುವ ಪೌಲನ ಬುದ್ಧಿವಾದಕ್ಕೆ ಕಿವಿಕೊಡತಕ್ಕದ್ದು: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು. ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.”
ಯಾರಿಗೆ ಪೌಲನು ಬರೆದನೊ ಆ ಎಫೆಸದವರು ಖಂಡಿತವಾಗಿಯೂ ಈಗಾಗಲೇ ಬಹುಮಟ್ಟಿಗೆ ಹೊಸ ಸ್ವಭಾವವನ್ನು ಧರಿಸಿದ್ದರು. ಆದರೆ ಹಾಗೆ ಮಾಡುವದು ಒಂದು ಅವಿನಿರತ ಕಾರ್ಯವಿಧಾನ ಎಂದು ಗಣ್ಯಮಾಡುವಂತೆ ಪೌಲನು ಅವರಿಗೆ ಸಹಾಯ ಮಾಡಿದನು! ನಿಲ್ಲಿಸದೆ ಪ್ರಯತ್ನ ಮಾಡದಿದ್ದರೆ, ಒಂದು ಭ್ರಷ್ಟಗೊಳಿಸುವ ಪ್ರಭಾವದೋಪಾದಿ ಪಟ್ಟುಹಿಡಿಯುವ ಮೋಸಕರವಾದ ದುರಾಶೆಗಳಿಂದ ಪುನಃ ನಿರ್ಜೀವಕರ್ಮಗಳಿಗೆ ಕ್ರೈಸ್ತರು ನಡಿಸಲ್ಪಡಬಲ್ಲರು. ಇದು ನಮ್ಮ ವಿಷಯದಲ್ಲಿಯೂ ಇಂದೂ ಕೂಡ ಸತ್ಯವಾಗಿದೆ. ನಾವು ಹೊಸ ಸ್ವಭಾವವನ್ನು ಧರಿಸಿಕೊಳ್ಳಲು ನಿರಂತರವಾಗಿ ಹೆಣಗಬೇಕು, ನಮ್ಮ ಹಳೆಯ ಜೀವಿತ ವಿಧಾನದಿಂದ ಪಡೆದಿದ್ದ ಯಾವುದೇ ಲಕ್ಷಣದಿಂದ ಕಲಂಕಿತಗೊಳ್ಳಲು ಬಿಡಕೂಡದು. ನಾವು ಶರೀರಭಾವದ ಕರ್ಮದ ಯಾವುದೇ ವಿಧವನ್ನು ತ್ಯಜಿಸತಕ್ಕದ್ದು—ಹೌದು, ದ್ವೇಷಿಸತಕ್ಕದ್ದು. “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ,” ಎಂದು ಕೀರ್ತನೆಗಾರನು ಎಚ್ಚರಿಕೆಯನ್ನೀಯುತ್ತಾನೆ.—ಕೀರ್ತನೆ 97:10.
ಶ್ಲಾಘನೀಯವಾಗಿ, ಇಂದು ಯೆಹೋವನ ಜನರಲ್ಲಿ ಅಧಿಕಾಂಶ ಮಂದಿ ಈ ಬುದ್ಧಿವಾದವನ್ನು ಆಲಿಸಿರುತ್ತಾರೆ ಮತ್ತು ನೈತಿಕವಾಗಿ ಶುದ್ಧರಾಗಿ ಉಳಿದಿದ್ದಾರೆ. ಆದರೂ, ಕೆಲವರು ಅವುಗಳಲ್ಲಿ ತಾವಾಗಿಯೇ ತಪ್ಪಾಗಿರದಿದ್ದರೂ, ಕಟ್ಟಕಡೆಗೆ ವ್ಯರ್ಥ ಮತ್ತು ಫಲರಹಿತವಾಗಿರುವಂತಹ ಕಾರ್ಯಗಳಿಂದ ದಾರಿತಪ್ಪಿ ಹೋಗಿರುತ್ತಾರೆ. ಉದಾಹರಣೆಗೆ, ಹಣ ಮಾಡುವ ಹಂಚಿಕೆಗಳಲ್ಲಿ ಯಾ ಪ್ರಾಪಂಚಿಕ ವಸ್ತುಗಳನ್ನು ಸಂಪಾದಿಸುವದರಲ್ಲಿ ಕೆಲವರು ಕೊಚ್ಚಿಹೋಗಿರುತ್ತಾರೆ. ಆದರೆ ಬೈಬಲ್ ಎಚ್ಚರಿಸುವದು: “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.” (1 ತಿಮೊಥೆಯ 6:9) ಇತರರಿಗೆ, ಲೌಕಿಕ ವಿದ್ಯೆಯು ಒಂದು ಪಾಶವಾಗಿ ರುಜುವಾಗಿದೆ. ಕೆಲವೊಂದು ಮಟ್ಟದ ಲೌಕಿಕ ವಿದ್ಯೆಯು ಉದ್ಯೋಗವನ್ನು ಪಡೆಯಲು ಅವಶ್ಯವೆಂಬುದು ಖರೆ. ಆದರೆ ಸಮಯ ವ್ಯಯಿಸುವ ಉನ್ನತ ಲೌಕಿಕ ಶಿಕ್ಷಣದ ಬೆನ್ನಟ್ಟುವದರಿಂದ, ಕೆಲವರು ಸ್ವತಃ ತಮ್ಮನ್ನು ಆತ್ಮಿಕವಾಗಿ ಹಾನಿಗೊಳಿಸಿಕೊಂಡಿದ್ದಾರೆ.
ಹೌದು, ಕೆಲವೊಂದು ಕಾರ್ಯಗಳು ಸ್ವತಃ ತಮ್ಮಲ್ಲಿ ನೈತಿಕವಾಗಿ ತಪ್ಪಾಗಿರಲಿಕ್ಕಿಲ್ಲ. ಆದರೂ ಕೂಡ, ಅವು ಇಂದಿನ ನಮ್ಮ ಜೀವಿತಕ್ಕೆ ನಿಜವಾಗಿ ಕೂಡಿಸುವುದಿಲ್ಲವಾದರೆ ಯಾ ಯೆಹೋವ ದೇವರೊಂದಿಗೆ ನಮಗೆ ಮೆಚ್ಚಿಗೆಯನ್ನು ಗಳಿಸಲಾರವಾದರೆ, ಅವುಗಳು ನಿರ್ಜೀವವುಳ್ಳವುಗಳಾಗಿವೆ. ಅಂಥ ಕಾರ್ಯಗಳು ಸಮಯ ಮತ್ತು ಶಕ್ತಿಯನ್ನು ವ್ಯಯಿಸುತ್ತವೆ, ಆದರೆ ಆತ್ಮಿಕ ಪ್ರಯೋಜನಗಳನ್ನು, ಬಾಳುವ ಚೈತನ್ಯವನ್ನು ಉತ್ಪಾದಿಸುವದಿಲ್ಲ.—ಪ್ರಸಂಗಿ 2:11 ಹೋಲಿಸಿರಿ.
ಮೂಲ್ಯತೆಯುಳ್ಳ ಆತ್ಮಿಕ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರಲು ನೀವು ಕಠಿಣವಾಗಿ ಶ್ರಮಿಸುತಿದ್ದೀರಿ ಎಂಬುದಕ್ಕೆ ಸಂದೇಹವಿಲ್ಲ. ಆದರೂ ನಿಮ್ಮನ್ನೇ ಕ್ರಮವಾಗಿ ಪರೀಕ್ಷಿಸಿಕೊಳ್ಳುವದು ಸಹಾಯ ಮಾಡುವದು. ಸಮಯ ಸಮಯಕ್ಕೆ, ಇಂಥ ಪ್ರಶ್ನೆಗಳನ್ನು ನೀವು ಸ್ವತಃ ಕೇಳಿಕೊಳ್ಳಬಹುದು: ‘ಅನಾವಶ್ಯಕವಾದ ಐಹಿಕ ಕೆಲಸವನ್ನು ನಾನು ತೆಗೆದು ಕೊಂಡಿರುವದರಿಂದ, ನನ್ನ ಸೇವೆಯ ಭಾಗವಹಿಸುವಿಕೆ ಮತ್ತು ಕೂಟಕ್ಕೆ ಹಾಜರಾಗುವಿಕೆ ಬಾಧಿಸಲ್ಪಡುತ್ತಿದೆಯೇ?’ ‘ನನಗೆ ಮನೋರಂಜನೆಗೆ ಸಮಯ ಇದೆ, ಆದರೆ ವೈಯಕ್ತಿಕ ಮತ್ತು ಕುಟುಂಬ ಅಭ್ಯಾಸಕ್ಕೆ ಕೊಂಚವೇ ಸಮಯ ಇರುತ್ತದೋ?’ ‘ಐಹಿಕ ಸ್ವತ್ತುಗಳ ಜೋಪಾಸಣೆ ತಕ್ಕೊಳ್ಳಲು ನನ್ನ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ನಾನು ವಿನಿಯೋಗಿಸಿ, ಸಭೆಯಲ್ಲಿ ಅಸ್ವಸ್ಥರೂ ಯಾ ವಯಸ್ಸಾದವರೂ ಆಗಿರುವಂಥ ಸಹಾಯದ ಆವಶ್ಯಕತೆಯಿರುವವರ ಜಾಗ್ರತೆ ವಹಿಸಲು ನಾನು ತಪ್ಪಿಹೋಗುತ್ತೇನೊ?’ ಈ ಪ್ರಶ್ನೆಗಳ ಉತ್ತರಗಳು ಆತ್ಮಿಕ ಕಾರ್ಯಗಳಿಗೆ ನಿಮ್ಮ ವತಿಯಿಂದ ಹೆಚ್ಚು ಆದ್ಯತೆಯನ್ನು ಕೊಡುವ ಆವಶ್ಯಕತೆಯನ್ನು ಹೊರಗೆಡಹಬಹುದು.
ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರಿಸಿರಿ
ಒಂದು ಕೊರಿಂಥ 15:58 (NW ) ಹೇಳುವಂತೆ, “ಕರ್ತನ ಕೆಲಸದಲ್ಲಿ ಮಾಡಲು ಹೇರಳವಿದೆ.” ಅಗ್ರಸ್ಥಾನದಲ್ಲಿ, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ಇದೆ. ಪೌಲನು 2 ತಿಮೊಥೆಯ 4:5 ರಲ್ಲಿ ಒತ್ತಾಯಿಸಿದ್ದು: “ಶುಭವಾರ್ತೆಯ ಸಾರುವಿಕೆಯನ್ನು ನಿನ್ನ ಜೀವಿತದ ಕೆಲಸವನ್ನಾಗಿ ಮಾಡು, ಅಮೂಲಾಗ್ರವಾಗಿ ಮಾಡುವ ಸೇವೆಯಾಗಿರಲಿ.” (ಜೆರೂಸಲೇಮ್ ಬೈಬಲ್) ಹಿರಿಯರಿಗೆ ಮತ್ತು ಶುಶ್ರೂಷಾ ಸೇವಕರಿಗೆ ಕೂಡ ಮಂದೆಯ ಪರಿಗಣನೆಯನ್ನು ಮಾಡಲು ಬಹಳಷ್ಟು ಇದೆ. (1 ತಿಮೊಥೆಯ 3:1, 5, 13; 1 ಪೇತ್ರ 5:2) ಕುಟುಂಬದ ಶಿರಸ್ಸುಗಳಿಗೆ ಕೂಡ—ಅವರಲ್ಲಿ ಅನೇಕರು ಏಕ ಹೆತ್ತವರು—ಅವರ ಕುಟುಂಬಗಳ ಪರಾಮರಿಕೆ ಮಾಡುವದರಲ್ಲಿ ಮತ್ತು ದೇವರೊಂದಿಗಿನ ಅವರ ಸಂಬಂಧದಲ್ಲಿ ಮಕ್ಕಳು ಬೆಳೆಯುವಂತೆ ನೆರವಾಗುವದರಲ್ಲಿ ಗುರುತರವಾದ ಜವಾಬ್ದಾರಿ ಇದೆ. ಅಂಥ ಕಾರ್ಯಗಳು ಆಯಾಸ ಬರಿಸುವಂತಹದ್ದಾಗಿರಬಲ್ಲವು, ಕೆಲವೊಮ್ಮೆ ಪೂರ್ತಿ ಮುಳುಗಿಸಿಬಿಡುವಂಥವುಗಳು. ಆದರೆ ನಿರ್ಜೀವವಾಗಿರುವದಕ್ಕಿಂತ, ಎಷ್ಟೋ ಅಧಿಕತಮವಾಗಿ ಅವುಗಳು ನಿಜ ತೃಪ್ತಿಯನ್ನು ತರುತ್ತವೆ!
ಸಮಸ್ಯೆಯು ಇದಾಗಿದೆ: ಆವಶ್ಯಕವಾದ ಈ ಎಲ್ಲಾ ಮೂಲ್ಯತೆಯ ಕೆಲಸಗಳನ್ನು ಮಾಡಲು ಒಬ್ಬನು ಸಮಯವನ್ನು ಎಲ್ಲಿಂದ ಕಂಡುಕೊಳ್ಳುವನು? ಸ್ವ ಶಿಸ್ತು ಮತ್ತು ವೈಯಕ್ತಿಕ ಸಂಸ್ಥಾಪನೆಯು ಅತ್ಯಾವಶ್ಯಕ. ಪೌಲನು 1 ಕೊರಿಂಥ 9:26, 27 ರಲ್ಲಿ ಬರೆದದ್ದು: “ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ. ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” ಈ ವಚನದ ಸೂತ್ರವನ್ನು ಅನ್ವಯಿಸುವ ಒಂದು ವಿಧವು, ನಿಮ್ಮ ವೈಯಕ್ತಿಕ ದಿನಚರಿಯನ್ನು ಮತ್ತು ಜೀವಿತಶೈಲಿಯನ್ನು ನಿಯತಕಾಲಿಕವಾಗಿ ಪರೀಕ್ಷಿಸುವುದಾಗಿದೆ. ನಿಮ್ಮ ಸಮಯ ಮತ್ತು ಶಕ್ತಿಯ ಅನೇಕ ಅನಾವಶ್ಯಕ ವ್ಯಯಿಸುವಿಕೆಗಳನ್ನು ನೀವು ವರ್ಜಿಸಸಾಧ್ಯವಿರುವುದನ್ನು ನೀವು ಕಂಡುಕೊಳ್ಳಬಹುದು.
ಉದಾಹರಣೆಗೆ, ನಿಮ್ಮ ಶಕ್ತಿಯ ಮತ್ತು ಸಮಯದ ಹೆಚ್ಚಿನಾಂಶವು ಟೀವೀ ವೀಕ್ಷಣೆ, ಮನೋರಂಜನೆ ಲೌಕಿಕ ವಾಚನ, ಯಾ ಹವ್ಯಾಸಗಳಲ್ಲಿ ವೆಚ್ಚಮಾಡಲ್ಪಡುತ್ತದೋ? ನ್ಯೂ ಯಾರ್ಕ್ ಟೈಮ್ಸ್ ಲೇಖನಕ್ಕನುಸಾರ, ಅಮೆರಿಕದ ಸರಾಸರಿ ಪ್ರಾಯಸ್ಥನು ಟೀವೀ ವೀಕ್ಷಣೆಯಲ್ಲಿ “ವಾರಕ್ಕೆ 30 ತಾಸುಗಳಿಗಿಂತಲೂ ಸ್ವಲ್ಪ ಹೆಚ್ಚನ್ನು” ವ್ಯಯಿಸುವದರಲ್ಲಿ ಲೋಲುಪನಾಗಿರುತ್ತಾನೆ. ಖಂಡಿತವಾಗಿಯೂ ಅಂಥ ಸಮಯವನ್ನು ಇನ್ನು ಉತ್ತಮ ಉಪಯೋಗಕ್ಕೆ ಹಾಕಬಹುದು! ಒಬ್ಬ ಸಂಚರಣಾ ಮೇಲ್ವಿಚಾರಕನ ಪತ್ನಿಯು ವರದಿಸುವದು: “ಟೆಲಿವಿಷನ್ ನೋಡುವಂಥ ಎಲ್ಲಾ ಸಮಯ ಹಾಳುಗೆಡಹುವಿಕೆಗಳನ್ನು ನಾನು ಪೂರ್ಣವಾಗಿ ಹೆಚ್ಚು ಕಡಿಮೆ ಹೊರಗಿಟ್ಟಿದ್ದೇನೆ.” ಫಲಿತಾಂಶ? ಎರಡು ಸಂಪುಟಗಳ ಬೈಬಲ್ ಎನ್ಸೈಕ್ಲೊಪಿಡೀಯವಾದ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಸಮಗ್ರವಾಗಿ ಅವಳು ಓದಲು ಶಕ್ತಳಾದಳು!
ನಿಮ್ಮ ಜೀವನಶೈಲಿಯನ್ನು ಎಷ್ಟೊಂದು ಮಟ್ಟಿಗೆ ನೀವು ಸರಳಗೊಳಿಸಸಾಧ್ಯವಿದೆಯೆಂಬುದನ್ನು ಕೂಡ ನೀವು ಪರಿಗಣಿಸುವ ಅಗತ್ಯ ನಿಮಗಿರಬಹುದು. ಸೊಲೊಮೋನನು ಅಂದದ್ದು: “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.” (ಪ್ರಸಂಗಿ 5:12) ಅನಾವಶ್ಯಕವಾದ ಪ್ರಾಪಂಚಿಕ ಸೊತ್ತುಗಳ ಪರಾಮರಿಕೆ ಮಾಡಲು ನಿಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯು ವಿನಿಯೋಗಿಸಲ್ಪಡುತ್ತದೋ? ನಿಜವಾಗಿಯೂ, ನಮಗೆ ಹೆಚ್ಚು ಇದ್ದಷ್ಟಕ್ಕೆ, ಹೆಚ್ಚು ವಸ್ತುಗಳನ್ನು ಪರಾಂಬರಿಸಲು, ವಿಮೆ ಮಾಡಲು, ದುರುಸ್ತಿಮಾಡಲು, ಮತ್ತು ಸಂರಕ್ಷಿಸಲು ನಮಗೆ ಇರುತ್ತದೆ. ನಿಮ್ಮ ನಿರ್ದಿಷ್ಟ ಸ್ವತ್ತುಗಳನ್ನು ನೀವಾಗಿಯೇ ಸರಳವಾಗಿ ತೊರೆಯುವದು ನಿಮಗೆ ಅನುಕೂಲವಾಗಿರಬಲ್ಲದೋ?
ನಿಮ್ಮ ಸಮಯವನ್ನು ಉತ್ತಮವಾಗಿ ಬಳಸುವ ಇನ್ನೊಂದು ಮಾರ್ಗವು ಒಂದು ವಾಸ್ತವಿಕವಾದ ಕಾರ್ಯತಖ್ತೆಯು ಇರುವದೇ. ಅಂಥ ಕಾರ್ಯತಖ್ತೆಯು ಒಬ್ಬನ ವಿಶ್ರಾಂತಿ ಮತ್ತು ಮನೋರಂಜನೆಯ ಆವಶ್ಯಕತೆಯನ್ನು ಗಮನಕ್ಕೆ ತಕ್ಕೊಳ್ಳತಕ್ಕದ್ದು. ಆದರೆ ಆತ್ಮಿಕ ಅಭಿರುಚಿಗಳಿಗೆ ಆದ್ಯತೆಯನ್ನು ಕೊಡತಕ್ಕದ್ದು. ಕ್ರಮವಾಗಿ ಎಲ್ಲಾ ಸಭಾ ಕೂಟಗಳಿಗೆ ಹಾಜರಾಗಲು ಸಮಯವನ್ನು ಬದಿಗಿಡತಕ್ಕದ್ದು. ಸಾರುವ ಕಾರ್ಯಕ್ಕಾಗಿ ಯಾವ ದಿನಗಳನ್ನು ಯಾ ಸಾಯಂಕಾಲಗಳನ್ನು ಸಮರ್ಪಿಸಬೇಕೆಂದು ಕೂಡ ನೀವು ಮುಂಚಿತವಾಗಿಯೇ ನಿರ್ಧರಿಸಬಹುದು. ಜಾಗ್ರತೆಯ ಯೋಜನೆಯ ಮೂಲಕ, ಸೇವೆಯಲ್ಲಿ ನಿಮ್ಮ ಸಮಯವನ್ನು ಹೆಚ್ಚಿಸಲು, ಪ್ರಾಯಶಃ ಅಗಿಂದಾಗ್ಗೆ ಒಬ್ಬ ಸಹಾಯಕ ಪಯನೀಯರನಾಗಿ ಸೇವೆ ಸಲ್ಲಿಸಲೂ, ನಿಮಗೆ ಸಾಧ್ಯವಾಗಲೂ ಬಹುದು. ಆದರೂ, ಕೂಟಗಳಿಗೆ ಸಮಗ್ರವಾಗಿ ತಯಾರಿಸುವದರ ಸಹಿತ, ವೈಯಕ್ತಿಕ ಮತ್ತು ಕುಟುಂಬ ಅಭ್ಯಾಸಕ್ಕೆ ಕಾರ್ಯತಖ್ತೆಯಲ್ಲಿ ಸಮಯವನ್ನು ಇಡಲು ಖಂಡಿತ ಮಾಡಿರಿ. ತಯಾರಾಗಿರುವದರ ಮೂಲಕ ನೀವು ಸ್ವತಃ ಕೂಟಗಳಿಂದ ಹೆಚ್ಚನ್ನು ಪಡೆಯುವಿರಿ ಮಾತ್ರವಲ್ಲ, ನಿಮ್ಮ ಹೇಳಿಕೆಗಳ ಮೂಲಕ “ಪ್ರೀತಿಸಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸಲು” ನೀವು ಉತ್ತಮ ಸ್ಥಾನದಲ್ಲಿರುತ್ತೀರಿ.—ಇಬ್ರಿಯ 10:24.
ಅಭ್ಯಾಸ ಮಾಡಲು ಸಮಯವನ್ನು ಕಂಡುಕೊಳ್ಳಲು ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗಬಹುದು. ಉದಾಹರಣೆಗೆ, ಲೋಕವ್ಯಾಪಕವಾಗಿರುವ ಬೆತೆಲ್ ಕುಟುಂಬಗಳು ಪ್ರತಿದಿನ ಬೆಳಿಗ್ಗೆ ಬೇಗ ಏಳುವದರಿಂದ, ದಿನದ ವಚನದ ಚರ್ಚೆ ಇರುವಂತೆ ಸಾಧ್ಯವಾಗುತ್ತದೆ. ವೈಯಕ್ತಿಕ ಅಭ್ಯಾಸಕ್ಕಾಗಿ, ಪ್ರತಿ ದಿನ ಬೆಳಿಗ್ಗೆ ಸ್ವಲ್ಪ ಸಮಯವನ್ನು ನೀವು ಕೊಂಡುಕೊಳ್ಳಲು ಸಾಧ್ಯವಿರಬಹುದೇ? ಕೀರ್ತನೆಗಾರನು ಅಂದದ್ದು: “ಅರುಣೋದಯದಲ್ಲಿ ಎದ್ದು ಮೊರೆಯಿಟ್ಟೆನು; ನಿನ್ನ ವಾಕ್ಯವನ್ನು ನಿರೀಕ್ಷಿಸಿಕೊಂಡಿದ್ದೇನೆ.” (ಕೀರ್ತನೆ 119:147) ಮಲಗಲು ಒಂದು ಸಮಂಜಸವಾದ ತಾಸಿನಲ್ಲಿ ಹಾಸಿಗೆಗೆ ಹೋಗುವ ಕಾರ್ಯತಖ್ತೆ ಮಾಡುವ ಮೂಲಕ ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗುತ್ತದೆ, ಖಂಡಿತ. ಆ ಮೂಲಕ ನೀವು ಮಾರಣೇ ದಿನವನ್ನು ಒಳ್ಳೆಯ ಆರೋಗ್ಯ ಸ್ಥಿತಿಯಿಂದ ಮತ್ತು ವಿಶ್ರಾಂತಿಪಡೆದವರಾಗಿ ಆರಂಭಿಸಬಲ್ಲಿರಿ.
ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿ ಇರುವದರಿಂದ ಪ್ರಯೋಜನಗಳು
“ಕರ್ತನ ಕೆಲಸದಲ್ಲಿ ಮಾಡಲು ಹೇರಳವಿರುವದರಿಂದ” ಯೋಜನೆ, ಶಿಸ್ತು, ಮತ್ತು ಆತ್ಮ ತ್ಯಾಗದ ಆವಶ್ಯಕತೆಯಿದೆ. ಆದರೆ ಫಲಿತಾಂಶವಾಗಿ ನೀವು ಅಗಣಿತ ಪ್ರಯೋಜನಗಳಲ್ಲಿ ಆನಂದಿಸುವಿರಿ. ಆದುದರಿಂದ ಕಾರ್ಯಮಗ್ನರಾಗಿಯೇ ಇರ್ರಿ, ಶೂನ್ಯತೆ ಮತ್ತು ವೇದನೆಯನ್ನು ಮಾತ್ರವೇ ತರುವ ನಿರ್ಜೀವ ಯಾ ವ್ಯರ್ಥ ಕಾರ್ಯಗಳಲ್ಲಿ ಅಲ್ಲ, ಬದಲು ಯೆಹೋವನ ಸೇವೆಯಲ್ಲಿ. ಅಂಥ ಕಾರ್ಯಗಳಿಂದಲೇ, ನೀವು ನಿಮ್ಮ ವಿಶ್ವಾಸವನ್ನು ತೋರ್ಪಡಿಸುವಿರಿ, ದೇವರ ಮೆಚ್ಚಿಕೆಯನ್ನು ಮತ್ತು ಕಟ್ಟಕಡೆಗೆ, ನಿತ್ಯ ಜೀವದ ಬಹುಮಾನವನ್ನು ಗಳಿಸುವಿರಿ!
[ಪುಟ 28 ರಲ್ಲಿರುವ ಚಿತ್ರ]
ವಾಸ್ತವಿಕವಾದ ಕಾರ್ಯತಖ್ತೆಯೊಂದನ್ನು ಮಾಡುವದು ಕ್ರೈಸ್ತನೊಬ್ಬನಿಗೆ ಅವನ ಸಮಯವನ್ನು ಹೆಚ್ಚು ವಿವೇಕತನದಿಂದ ಉಪಯೋಗಿಸಲು ಸಹಾಯ ಮಾಡುತ್ತದೆ