ನಾವು ನಂಬಿಕೆಯುಳ್ಳ ಜನರಾಗಿರೋಣ
“ನಾವಾದರೋ . . . ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.”—ಇಬ್ರಿಯ 10:39.
1. ಯೆಹೋವನ ನಿಷ್ಠಾವಂತ ಸೇವಕರಲ್ಲಿ ಪ್ರತಿಯೊಬ್ಬರ ನಂಬಿಕೆಯು ಅಮೂಲ್ಯವಾದದ್ದಾಗಿದೆ ಎಂದು ಏಕೆ ಹೇಳಸಾಧ್ಯವಿದೆ?
ನೀವು ಮುಂದಿನ ಬಾರಿ ಯೆಹೋವನ ಆರಾಧಕರಿಂದ ತುಂಬಿರುವ ಒಂದು ರಾಜ್ಯ ಸಭಾಗೃಹಕ್ಕೆ ಭೇಟಿನೀಡುವಲ್ಲಿ, ನಿಮ್ಮ ಸುತ್ತಲೂ ಇರುವವರ ಕಡೆಗೆ ದೃಷ್ಟಿಹಾಯಿಸಿರಿ. ಅವರು ನಂಬಿಕೆಯನ್ನು ಪ್ರದರ್ಶಿಸುವ ಅನೇಕ ವಿಧಗಳ ಕುರಿತು ಆಲೋಚಿಸಿರಿ. ಅನೇಕ ದಶಕಗಳಿಂದ ದೇವರಿಗೆ ಸೇವೆಸಲ್ಲಿಸಿರುವ ವೃದ್ಧರನ್ನು, ಅನುದಿನವೂ ಸಮವಯಸ್ಕರ ಒತ್ತಡವನ್ನು ಪ್ರತಿರೋಧಿಸುವ ಯುವ ಜನರನ್ನು ಮತ್ತು ದೇವಭಯವುಳ್ಳ ಮಕ್ಕಳನ್ನು ಬೆಳೆಸಲು ಹೆಣಗಾಡುತ್ತಿರುವ ಹೆತ್ತವರನ್ನು ನೀವು ನೋಡಬಹುದು. ಅನೇಕ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಸಭಾ ಹಿರಿಯರನ್ನು ಮತ್ತು ಶುಶ್ರೂಷಾ ಸೇವಕರನ್ನು ಸಹ ನೀವು ನೋಡಬಹುದು. ಹೌದು, ಯೆಹೋವನಿಗೆ ಸೇವೆಸಲ್ಲಿಸಲಿಕ್ಕಾಗಿ ಎಲ್ಲ ರೀತಿಯ ತಡೆಗಳನ್ನು ಎದುರಿಸಿ ಜಯಿಸುವ ಎಲ್ಲ ವಯೋಮಾನದ ಆತ್ಮಿಕ ಸಹೋದರ ಸಹೋದರಿಯರನ್ನು ನೀವು ಅಲ್ಲಿ ಕಾಣಬಹುದು. ಅವರಲ್ಲಿ ಪ್ರತಿಯೊಬ್ಬರ ನಂಬಿಕೆಯು ಎಷ್ಟು ಅಮೂಲ್ಯವಾದದ್ದು!—1 ಪೇತ್ರ 1:7.
2. ಇಬ್ರಿಯ 10 ಮತ್ತು 11ನೇ ಅಧ್ಯಾಯದಲ್ಲಿರುವ ಪೌಲನ ಸಲಹೆಯು ಇಂದು ನಮಗೆ ಹೇಗೆ ಪ್ರಯೋಜನಕರವಾಗಿದೆ?
2 ನಂಬಿಕೆಯ ಮಹತ್ವವನ್ನು ಅಪೊಸ್ತಲ ಪೌಲನಿಗಿಂತಲೂ ಉತ್ತಮವಾಗಿ ತಿಳಿದುಕೊಂಡಿರುವ ಅಪರಿಪೂರ್ಣ ಮಾನವರು ಕೆಲವರೇ ಆಗಿದ್ದಾರೆ. ಯಥಾರ್ಥವಾದ ನಂಬಿಕೆಯು “ಪ್ರಾಣರಕ್ಷಣೆ”ಗೆ ನಡೆಸುವುದೆಂದು ಅವನು ಹೇಳಿದನು. (ಇಬ್ರಿಯ 10:39) ಹಾಗಿದ್ದರೂ, ಈ ಅಪನಂಬಿಗಸ್ತ ಲೋಕದಲ್ಲಿ ನಂಬಿಕೆಯು ಆಕ್ರಮಣಕ್ಕೆ ಮತ್ತು ಸವೆತಕ್ಕೆ ಗುರಿಯಾಗಬಲ್ಲದೆಂಬುದು ಪೌಲನಿಗೆ ತಿಳಿದಿತ್ತು. ಈ ಕಾರಣ, ತಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದ ಯೆರೂಸಲೇಮ್ ಮತ್ತು ಯೂದಾಯದ ಇಬ್ರಿಯ ಕ್ರೈಸ್ತರ ಕುರಿತು ಅವನು ಬಹಳವಾಗಿ ಚಿಂತಿಸಿದನು. ನಾವು ಇಬ್ರಿಯ ಪುಸ್ತಕದ 10 ಮತ್ತು 11ನೇ ಅಧ್ಯಾಯಗಳ ಕೆಲವೊಂದು ಭಾಗಗಳನ್ನು ಪರಿಶೀಲಿಸಿದಂತೆ, ಆ ಕ್ರೈಸ್ತರ ನಂಬಿಕೆಯನ್ನು ಕಟ್ಟಲು ಪೌಲನು ಉಪಯೋಗಿಸಿದಂತಹ ವಿಧಾನಗಳ ಕಡೆಗೆ ಗಮನಕೊಡೋಣ. ಹೀಗೆ ಮಾಡುವ ಮೂಲಕ, ನಾವು ನಮ್ಮಲ್ಲಿ ಮತ್ತು ಇತರರಲ್ಲಿ ಬಲವಾದ ನಂಬಿಕೆಯನ್ನು ಹೇಗೆ ಕಟ್ಟಸಾಧ್ಯವಿದೆ ಎಂಬುದನ್ನು ನೋಡಬಲ್ಲೆವು.
ಒಬ್ಬರು ಇನ್ನೊಬ್ಬರಲ್ಲಿ ಭರವಸೆಯನ್ನು ವ್ಯಕ್ತಪಡಿಸಿರಿ
3. ಪೌಲನಿಗೆ ತನ್ನ ಜೊತೆ ಸಹೋದರ ಸಹೋದರಿಯರಲ್ಲಿ ಭರವಸೆಯಿತ್ತೆಂಬುದನ್ನು ಇಬ್ರಿಯ 10:39ರಲ್ಲಿರುವ ಅವನ ಮಾತುಗಳು ಹೇಗೆ ತೋರಿಸುತ್ತವೆ?
3 ನಮ್ಮ ಗಮನಕ್ಕೆ ಬರುವಂತಹ ಮೊದಲನೆಯ ಸಂಗತಿಯು, ಪೌಲನಿಗೆ ತನ್ನ ಓದುಗರ ಬಗ್ಗೆ ಇದ್ದಂತಹ ಒಳ್ಳೇ ಮನೋಭಾವವೇ ಆಗಿದೆ. ಅವನು ಬರೆದುದು: “ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.” (ಇಬ್ರಿಯ 10:39) ಪೌಲನು ತನ್ನ ನಂಬಿಗಸ್ತ ಜೊತೆ ಕ್ರೈಸ್ತರ ಬಗ್ಗೆ ಕೆಟ್ಟದ್ದನ್ನಲ್ಲ ಒಳ್ಳೇದನ್ನೇ ಯೋಚಿಸಿದನು. ಅವನು ‘ನಾವು’ ಎಂಬ ಪದವನ್ನು ಉಪಯೋಗಿಸಿದನೆಂಬುದನ್ನು ಸಹ ಗಮನಿಸಿರಿ. ಪೌಲನು ಒಬ್ಬ ನೀತಿವಂತನಾಗಿದ್ದನು. ಆದರೂ, ತಾನು ಅವರೆಲ್ಲರಿಗಿಂತಲೂ ಹೆಚ್ಚು ನೀತಿವಂತನೋ ಎಂಬಂತೆ ತನ್ನ ಓದುಗರೊಂದಿಗೆ ಅವನು ವರ್ತಿಸಲಿಲ್ಲ. (ಹೋಲಿಸಿ ಪ್ರಸಂಗಿ 7:16.) ಅವರೊಂದಿಗೆ ತನ್ನನ್ನೂ ಸೇರಿಸಿಕೊಂಡನು. ತಾನು ಮತ್ತು ತನ್ನ ನಂಬಿಗಸ್ತ ಕ್ರೈಸ್ತ ಓದುಗರು, ತಮ್ಮ ಮುಂದೆ ಬೆಟ್ಟದಂತೆ ಕಾಣುತ್ತಿರುವ ದಿಗಿಲುಗೊಳಿಸುವ ಅಡೆತಡೆಗಳನ್ನು ಎದುರಿಸುವರು, ಹಿಂದೆಗೆದವರಾಗಿ ನಾಶವಾಗುವುದನ್ನು ಧೈರ್ಯದಿಂದ ನಿರಾಕರಿಸುವರು ಮತ್ತು ನಂಬಿಕೆಯುಳ್ಳವರಾಗಿ ತಮ್ಮನ್ನು ತೋರ್ಪಡಿಸಿಕೊಳ್ಳುವರೆಂಬ ಭರವಸೆಯನ್ನು ಹೃತ್ಪೂರ್ವಕವಾಗಿ ವ್ಯಕ್ತಪಡಿಸಿದನು.
4. ಯಾವ ಕಾರಣಗಳಿಗಾಗಿ ಪೌಲನಿಗೆ ತನ್ನ ಜೊತೆ ವಿಶ್ವಾಸಿಗಳಲ್ಲಿ ಭರವಸೆಯಿತ್ತು?
4 ಪೌಲನು ಇಂತಹ ಭರವಸೆಯನ್ನು ಹೇಗೆ ಪಡೆದಿರಸಾಧ್ಯವಿತ್ತು? ಅವನು ಇಬ್ರಿಯ ಕ್ರೈಸ್ತರ ತಪ್ಪುಗಳಿಗೆ ಕುರುಡಾಗಿದ್ದನೊ? ಇಲ್ಲ, ಬದಲಾಗಿ ತಮ್ಮಲ್ಲಿದ್ದ ಆತ್ಮಿಕ ಕುಂದುಕೊರತೆಗಳನ್ನು ಜಯಿಸಲು ಅವರಿಗೆ ಸಹಾಯ ಮಾಡಿದ ನಿರ್ದಿಷ್ಟ ಸಲಹೆಯನ್ನು ಅವನು ನೀಡಿದನು. (ಇಬ್ರಿಯ 3:12; 5:12-14; 6:4-6; 10:26, 27; 12:5) ಹಾಗಿದ್ದರೂ, ತನ್ನ ಸಹೋದರರಲ್ಲಿ ಪೂರ್ಣ ಭರವಸೆಯನ್ನು ಪಡೆದಿರಲು ಪೌಲನಿಗೆ ಎರಡು ಕಾರಣಗಳಾದರೂ ಇದ್ದವು. (1) ಯೆಹೋವನನ್ನು ಅನುಕರಿಸುವವನೋಪಾದಿ, ದೇವಜನರನ್ನು ಯೆಹೋವನು ವೀಕ್ಷಿಸುವಂತೆಯೇ ಅವನೂ ವೀಕ್ಷಿಸಲು ಪ್ರಯತ್ನಿಸಿದನು. ಇದು ಕೇವಲ ಅವರ ತಪ್ಪುಗಳನ್ನು ಹುಡುಕುವ ವಿಷಯದಲ್ಲಿ ಮಾತ್ರವಲ್ಲ, ಅವರ ಒಳ್ಳೇ ಗುಣಗಳು ಮತ್ತು ಭವಿಷ್ಯತ್ತಿನಲ್ಲಿ ಒಳ್ಳೇದನ್ನು ಮಾಡಲು ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸುವ ವಿಷಯದಲ್ಲೂ ಸತ್ಯವಾಗಿತ್ತು. (ಕೀರ್ತನೆ 130:3; ಎಫೆಸ 5:1) (2) ಪೌಲನಿಗೆ ಪವಿತ್ರಾತ್ಮದ ಶಕ್ತಿಯಲ್ಲಿ ಬಲವಾದ ನಂಬಿಕೆಯಿತ್ತು. ಯೆಹೋವನನ್ನು ನಂಬಿಗಸ್ತನಾಗಿ ಸೇವಿಸಲು ಪ್ರಯತ್ನಿಸುವ ಯಾವ ಕ್ರೈಸ್ತನಿಗಾದರೂ ‘ಸಾಧಾರಣವಾದುದಕ್ಕಿಂತಲೂ ಹೆಚ್ಚಿನ ಶಕ್ತಿಯನ್ನು’ (NW) ದಯಪಾಲಿಸುವುದರಿಂದ, ಯೆಹೋವನನ್ನು ಯಾವ ಅಡೆತಡೆಯೂ ಮಾನವ ದೌರ್ಬಲ್ಯಗಳೂ ತಡೆಯಸಾಧ್ಯವಿಲ್ಲವೆಂಬುದು ಅವನಿಗೆ ಗೊತ್ತಿತ್ತು. (2 ಕೊರಿಂಥ 4:7; ಫಿಲಿಪ್ಪಿ 4:13) ಈ ಕಾರಣ ಪೌಲನಿಗೆ ತನ್ನ ಸಹೋದರ ಸಹೋದರಿಯರಲ್ಲಿದ್ದ ಭರವಸೆಯು ಅನುಚಿತವೂ ಅವಾಸ್ತವಿಕವೂ ಇಲ್ಲವೆ ಕೇವಲ ಆಶಾವಾದವಾಗಿರಲಿಲ್ಲ. ಆ ಭರವಸೆಗೆ ದೃಢವಾದ ಆಧಾರವೂ ಶಾಸ್ತ್ರೀಯ ಬೆಂಬಲವೂ ಇತ್ತು.
5. ನಾವು ಪೌಲನ ಭರವಸೆಯನ್ನು ಹೇಗೆ ಅನುಕರಿಸಬಲ್ಲೆವು, ಮತ್ತು ಯಾವ ಫಲಿತಾಂಶದೊಂದಿಗೆ?
5 ಪೌಲನು ಪ್ರದರ್ಶಿಸಿದಂತಹ ಭರವಸೆಯು ಸಾಂಕ್ರಾಮಿಕವಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಪೌಲನು ಯೆರೂಸಲೇಮ್ ಮತ್ತು ಯೂದಾಯದಲ್ಲಿದ್ದ ಸಭೆಗಳವರೊಂದಿಗೆ ಇಷ್ಟು ಉತ್ತೇಜನದಾಯಕವಾಗಿ ಮಾತಾಡಿದ್ದು ಅವರನ್ನು ಬಹಳವಾಗಿ ಹುರಿದುಂಬಿಸಿರಬೇಕು. ಯೆಹೂದಿ ವಿರೋಧಿಗಳ ಅಹಂಕಾರದ ತಾತ್ಸಾರ ಮನೋಭಾವ ಮತ್ತು ಮನಸ್ಸನ್ನು ಕುಗ್ಗಿಸುವಂತಹ ತಿರಸ್ಕಾರದ ಎದುರಿನಲ್ಲೂ, ತಾವು ನಂಬಿಗಸ್ತರಾಗಿ ಮುಂದುವರಿಯುವಂತೆ ನಿಶ್ಚಯಿಸಿಕೊಳ್ಳಲು ಇಂತಹ ಅಭಿವ್ಯಕ್ತಿಗಳು ಇಬ್ರಿಯ ಕ್ರೈಸ್ತರಿಗೆ ಸಹಾಯ ಮಾಡಿದವು. ಇಂದು ನಾವು ಒಬ್ಬರು ಇನ್ನೊಬ್ಬರಿಗೆ ಇದನ್ನೇ ಮಾಡಸಾಧ್ಯವಿದೆಯೊ? ಇತರರಲ್ಲಿರುವ ಅನೇಕ ಕುಂದುಕೊರತೆಗಳನ್ನು ಮತ್ತು ವಿಚಿತ್ರವಾದ ಗುಣವೈಶಿಷ್ಟ್ಯಗಳನ್ನು ಕಂಡುಹಿಡಿಯುವುದು ತುಂಬ ಸುಲಭವಾದ ಕೆಲಸವಾಗಿದೆ. (ಮತ್ತಾಯ 7:1-5) ಆದರೆ, ನಮ್ಮೆಲ್ಲರಲ್ಲಿರುವಂತಹ ಆ ಅಪೂರ್ವವಾದ ನಂಬಿಕೆಯನ್ನು ಲಕ್ಷ್ಯಕ್ಕೆ ತೆಗೆದುಕೊಂಡು ಗಣ್ಯಮಾಡುವುದಾದರೆ, ನಾವು ಒಬ್ಬರು ಇನ್ನೊಬ್ಬರಿಗೆ ಹೆಚ್ಚಿನ ಒಳಿತನ್ನು ಮಾಡಸಾಧ್ಯವಿದೆ. ಇಂತಹ ಉತ್ತೇಜನದಿಂದ ನಂಬಿಕೆಯು ಬಲವಾಗುವ ಸಾಧ್ಯತೆಯಿದೆ.—ರೋಮಾಪುರ 1:11, 12.
ದೇವರ ವಾಕ್ಯದ ಯೋಗ್ಯವಾದ ಬಳಕೆ
6. ಪೌಲನು ಇಬ್ರಿಯ 10:38ರಲ್ಲಿ ದಾಖಲಿಸಿದ ಮಾತುಗಳನ್ನು ಯಾವ ಮೂಲದಿಂದ ಉದ್ಧರಿಸುತ್ತಿದ್ದನು?
6 ಶಾಸ್ತ್ರಗಳನ್ನು ನಿಪುಣವಾಗಿ ಉಪಯೋಗಿಸುವ ಮೂಲಕವೂ ಪೌಲನು ತನ್ನ ಜೊತೆ ವಿಶ್ವಾಸಿಗಳಲ್ಲಿ ನಂಬಿಕೆಯನ್ನು ಕಟ್ಟಿದನು. ಉದಾಹರಣೆಗೆ, ಅವನು ಬರೆದುದು: “ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು” ಮತ್ತು “ಅವನು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ.” (ಇಬ್ರಿಯ 10:38) ಈ ವಿಷಯವನ್ನು ಪೌಲನು ಹಬಕ್ಕೂಕನ ಪ್ರವಾದನೆಯಿಂದ ಉದ್ಧರಿಸುತ್ತಿದ್ದನು.a ಈ ಮಾತುಗಳು ಪೌಲನ ಓದುಗರಿಗೆ ಚಿರಪರಿಚಿತವಾಗಿದ್ದವು, ಏಕೆಂದರೆ ಇಬ್ರಿಯ ಕ್ರೈಸ್ತರು ಈ ಪ್ರವಾದನ ಪುಸ್ತಕಗಳನ್ನು ಬಲ್ಲವರಾಗಿದ್ದರು. ಸಾ.ಶ. 61ರ ಸಮಯದಲ್ಲಿ ಯೆರೂಸಲೇಮ್ ಮತ್ತು ಅದರ ಅಕ್ಕಪಕ್ಕದಲ್ಲಿ ಜೀವಿಸುತ್ತಿದ್ದ ಕ್ರೈಸ್ತರ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಪೌಲನು ಉಪಯೋಗಿಸಿದಂತಹ ಹಬಕ್ಕೂಕನ ಮಾದರಿಯು ಸೂಕ್ತವಾದದ್ದಾಗಿತ್ತು. ಏಕೆ?
7. ಹಬಕ್ಕೂಕನು ತನ್ನ ಪ್ರವಾದನೆಯನ್ನು ಯಾವಾಗ ದಾಖಲಿಸಿದನು ಮತ್ತು ಆ ಸಮಯದಲ್ಲಿ ಯೂದಾಯದ ಸ್ಥಿತಿಯು ಹೇಗಿತ್ತು?
7 ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ನಾಶವಾಗುವ ಎರಡು ದಶಕಗಳ ಮುಂಚೆಯಷ್ಟೇ ಹಬಕ್ಕೂಕನು ತನ್ನ ಪುಸ್ತಕವನ್ನು ಬರೆದಿದ್ದನು. ಪ್ರವಾದಿಯು ಒಂದು ದರ್ಶನದಲ್ಲಿ “ತೀಕ್ಷ್ಣವೂ ತೀವ್ರವೂ ಆದ . . . ಜನಾಂಗವನ್ನು” ಅಂದರೆ ಕಸ್ದೀಯರನ್ನು (ಇಲ್ಲವೆ, ಬಾಬೆಲಿನವರನ್ನು) ಕಂಡನು. ಇವರು ಯೂದಾಯದ ಮೇಲೆ ರಭಸದಿಂದ ಆಕ್ರಮಣಮಾಡಿ, ಜನರನ್ನೂ ಜನಾಂಗಗಳನ್ನೂ ಕಬಳಿಸಿಬಿಡುತ್ತಾ ಯೆರೂಸಲೇಮನ್ನು ಧ್ವಂಸಗೊಳಿಸಿದರು. (ಹಬಕ್ಕೂಕ 1:5-11) ಆದರೆ, ಇಂತಹ ಒಂದು ಕೇಡನ್ನು ಯೆಶಾಯನ ದಿನಗಳಲ್ಲಿ, ಅಂದರೆ ಒಂದು ಶತಮಾನಕ್ಕಿಂತಲೂ ಮೊದಲೇ ಮುಂತಿಳಿಸಲಾಗಿತ್ತು. ಹಬಕ್ಕೂಕನ ಸಮಯದಲ್ಲಿ, ಒಳ್ಳೆಯ ಅರಸನಾದ ಯೋಷೀಯನ ತರುವಾಯ ಯೆಹೋಯಾಕೀಮನು ರಾಜ್ಯಭಾರವನ್ನು ವಹಿಸಿಕೊಂಡನು ಮತ್ತು ಯೂದಾಯದಲ್ಲಿ ಪುನಃ ದುಷ್ಟತನವು ತುಂಬಿತುಳುಕಲಾರಂಭಿಸಿತು. ಯೆಹೋವನ ಹೆಸರಿನಲ್ಲಿ ಮಾತಾಡಿದವರೆಲ್ಲರನ್ನು ಯೆಹೋಯಾಕೀಮನು ಹಿಂಸಿಸಿದನಲ್ಲದೆ ಅವರನ್ನು ಕೊಂದುಹಾಕಿದನು. (2 ಪೂರ್ವಕಾಲವೃತ್ತಾಂತ 36:5; ಯೆರೆಮೀಯ 22:17; 26:20-24) ಆದುದರಿಂದಲೇ ಕಳವಳಗೊಂಡ ಪ್ರವಾದಿಯಾದ ಹಬಕ್ಕೂಕನು, “ಯೆಹೋವನೇ, . . . ಎಷ್ಟು ಕಾಲ?” ಎಂದು ಮೊರೆಯಿಟ್ಟದ್ದರಲ್ಲಿ ಆಶ್ಚರ್ಯವೇ ಇಲ್ಲ.—ಹಬಕ್ಕೂಕ 1:2.
8. ಪ್ರಥಮ ಶತಮಾನದವರಿಗೆ ಮತ್ತು ಇಂದಿನ ಕ್ರೈಸ್ತರಿಗೆ ಹಬಕ್ಕೂಕನ ಮಾದರಿಯು ಏಕೆ ಸಹಾಯಕರವಾಗಿದೆ?
8 ಯೆರೂಸಲೇಮಿನ ನಾಶನವು ಎಷ್ಟು ನಿಕಟವಾಗಿತ್ತು ಎಂಬುದರ ಅರಿವು ಹಬಕ್ಕೂಕನಿಗೆ ಇರಲಿಲ್ಲ. ಅಂತೆಯೇ, ಯೆಹೂದಿ ವಿಷಯಗಳ ವ್ಯವಸ್ಥೆಯು ಯಾವಾಗ ಅಂತ್ಯಗೊಳ್ಳುವುದೆಂದು ಪ್ರಥಮ ಶತಮಾನದ ಕ್ರೈಸ್ತರಿಗೆ ಗೊತ್ತಿರಲಿಲ್ಲ. ನಮಗೂ ಈ ದುಷ್ಟ ವ್ಯವಸ್ಥೆಯ ಮೇಲೆ ಯೆಹೋವನ ನ್ಯಾಯತೀರ್ಪು ಬರಲಿರುವ ‘ದಿನ ಮತ್ತು ಗಳಿಗೆಯ’ ಕುರಿತು ತಿಳಿದಿಲ್ಲ. (ಮತ್ತಾಯ 24:36) ಆದಕಾರಣ, ಯೆಹೋವನು ಹಬಕ್ಕೂಕನಿಗೆ ನೀಡಿದ ಎರಡು ಅರ್ಥಗಳಿದ್ದ ಉತ್ತರವನ್ನು ನಾವು ಪರಿಗಣಿಸೋಣ. ಪ್ರಥಮವಾಗಿ, ಅಂತ್ಯವು ತಕ್ಕ ಸಮಯಕ್ಕೆ ಬರುವುದೆಂಬ ಆಶ್ವಾಸನೆಯನ್ನು ಆತನು ಈ ಪ್ರವಾದಿಗೆ ನೀಡಿದನು. ಮಾನವ ದೃಷ್ಟಿಯಿಂದ ಅದು ತಡವಾಗುತ್ತಿರುವಂತೆ ತೋರಿದರೂ, ಅದು “ತಾಮಸವಾಗದು” ಎಂದು ದೇವರು ತಿಳಿಸಿದನು. (ಹಬಕ್ಕೂಕ 2:3) ಎರಡನೆಯದಾಗಿ, ಯೆಹೋವನು ಹಬಕ್ಕೂಕನಿಗೆ ಜ್ಞಾಪಕ ಹುಟ್ಟಿಸಿದ್ದು: “ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು.” (ಹಬಕ್ಕೂಕ 2:4) ಎಂತಹ ಸುಂದರವಾದ ಸರಳ ಸತ್ಯಗಳು! ಅಂತ್ಯವು ಯಾವಾಗ ಬರುವುದೆಂಬುದು ಪ್ರಾಮುಖ್ಯವಲ್ಲ, ನಾವು ಎಂದೆಂದಿಗೂ ನಂಬಿಗಸ್ತರಾಗಿ ಜೀವಿಸುವೆವೊ ಎಂಬ ವಿಷಯವೇ ತುಂಬ ಪ್ರಾಮುಖ್ಯವಾದದ್ದಾಗಿದೆ.
9. ಯೆಹೋವನ ವಿಧೇಯ ಸೇವಕರು ತಮ್ಮ ನಂಬಿಗಸ್ತಿಕೆಯಿಂದ (ಎ) ಸಾ.ಶ.ಪೂ. 607ರಲ್ಲಿ (ಬಿ) ಸಾ.ಶ. 66ರ ನಂತರ ಹೇಗೆ ಜೀವಿಸುತ್ತಾ ಇದ್ದರು? (ಸಿ) ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಏಕೆ ಅತ್ಯಾವಶ್ಯಕವಾಗಿದೆ?
9 ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ಧ್ವಂಸಗೊಳಿಸಲ್ಪಟ್ಟಾಗ, ಯೆರೆಮೀಯ, ಅವನ ಕಾರ್ಯದರ್ಶಿಯಾದ ಬಾರೂಕ, ಎಬೆದ್ಮೆಲೆಕ, ಮತ್ತು ಆ ನಿಷ್ಠಾವಂತ ರೇಕಾಬನ ಮನೆತನದವರು, ಯೆಹೋವನು ಹಬಕ್ಕೂಕನಿಗೆ ಮಾಡಿದ ವಾಗ್ದಾನದ ಸತ್ಯತೆಯನ್ನು ಕಣ್ಣಾರೆ ಕಂಡರು. ಯೆರೂಸಲೇಮಿನ ಭಯಂಕರ ನಾಶನದಿಂದ ಪಾರಾಗಿ ಉಳಿಯುವ ಮೂಲಕ ಅವರು ‘ಬದುಕಿದರು.’ ಏಕೆ? ಏಕೆಂದರೆ, ಯೆಹೋವನು ಅವರ ನಂಬಿಗಸ್ತಿಕೆಗೆ ಪ್ರತಿಫಲವನ್ನು ನೀಡಿದನು. (ಯೆರೆಮೀಯ 35:1-19; 39:15-18; 43:4-7; 45:1-5) ತದ್ರೀತಿಯಲ್ಲಿ, ಪೌಲನು ನೀಡಿದ ಸಲಹೆಗೆ ಪ್ರಥಮ ಶತಮಾನದ ಇಬ್ರಿಯ ಕ್ರೈಸ್ತರು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಿರಬೇಕು. ಏಕೆಂದರೆ, ಸಾ.ಶ. 66ರಲ್ಲಿ ರೋಮನ್ ಸೇನೆಗಳು ಯೆರೂಸಲೇಮಿನ ಮೇಲೆ ದಾಳಿ ಮಾಡಿ, ತರುವಾಯ ವಿವರಿಸಲಾಗದ ಕಾರಣಕ್ಕಾಗಿ ಹಿಮ್ಮೆಟ್ಟಿದಾಗ, ಆ ಕ್ರೈಸ್ತರು ಪೂರ್ಣ ನಂಬಿಕೆಯಿಂದ ಯೇಸುವಿನ ಎಚ್ಚರಿಕೆಗೆ ಕಿವಿಗೊಟ್ಟು ಅಲ್ಲಿಂದ ಪಲಾಯನಗೈದರು. (ಲೂಕ 21:20, 21) ತಮ್ಮ ನಂಬಿಗಸ್ತಿಕೆಯ ಕಾರಣ ಅವರು ಪಾರಾಗಿ ಉಳಿದರು. ತದ್ರೀತಿಯಲ್ಲಿ, ಅಂತ್ಯವು ಬರುವ ತನಕ ನಾವು ಸಹ ನಂಬಿಗಸ್ತರಾಗಿದ್ದರೆ ಪಾರಾಗಿ ಉಳಿಯುವೆವು. ಈಗ ನಮ್ಮ ನಂಬಿಕೆಯನ್ನು ಬಲಪಡಿಸಲು ಇದು ಎಷ್ಟು ಮುಖ್ಯವಾದ ಕಾರಣವಾಗಿದೆ!
ನಂಬಿಕೆಯ ಮಾದರಿಗಳನ್ನು ಸಜೀವಗೊಳಿಸುವುದು
10. ಪೌಲನು ಯಾವ ರೀತಿಯಲ್ಲಿ ಮೋಶೆಯ ನಂಬಿಕೆಯನ್ನು ವರ್ಣಿಸಿದನು ಮತ್ತು ಈ ಸಂಬಂಧದಲ್ಲಿ ನಾವು ಮೋಶೆಯನ್ನು ಹೇಗೆ ಅನುಕರಿಸಬಲ್ಲೆವು?
10 ಉದಾಹರಣೆಗಳ ಪ್ರಭಾವಕಾರಿ ಉಪಯೋಗದ ಮೂಲಕವೂ ಪೌಲನು ನಂಬಿಕೆಯನ್ನು ಕಟ್ಟಿದನು. ಇಬ್ರಿಯ 11ನೇ ಅಧ್ಯಾಯವನ್ನು ನೀವು ಓದಿದಂತೆ, ಬೈಬಲ್ ಪಾತ್ರಗಳನ್ನು ಅವನು ಹೇಗೆ ಸಜೀವಗೊಳಿಸುತ್ತಾನೆಂಬುದನ್ನು ಗಮನಿಸಿರಿ. ಉದಾಹರಣೆಗೆ, ಮೋಶೆಯು “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು” ಎಂದು ಅವನು ಹೇಳುತ್ತಾನೆ. (ಇಬ್ರಿಯ 11:27, ಓರೆ ಅಕ್ಷರಗಳು ನಮ್ಮವು.) ಅಂದರೆ ಮೋಶೆಗೆ ಯೆಹೋವನು ಎಷ್ಟೊಂದು ವಾಸ್ತವವಾಗಿದ್ದನೆಂದರೆ, ಅವನು ಅದೃಶ್ಯ ದೇವರನ್ನು ಕಣ್ಣಾರೆ ನೋಡಿದನೋ ಎಂಬಂತಿತ್ತು. ನಮ್ಮ ಕುರಿತು ಇದನ್ನೇ ಹೇಳಸಾಧ್ಯವಿದೆಯೊ? ಯೆಹೋವನೊಂದಿಗೆ ಒಂದು ಸಂಬಂಧವಿರುವುದಾಗಿ ಹೇಳಿಕೊಳ್ಳುವುದು ಸುಲಭ, ಆದರೆ ಆ ಸಂಬಂಧವನ್ನು ಬಲಪಡಿಸಲು ನಾವು ಪ್ರಯಾಸಪಡಬೇಕಾಗಿದೆ. ಈ ಕೆಲಸವನ್ನೇ ನಾವು ಮಾಡತಕ್ಕದ್ದು! ನಾವು ಚಿಕ್ಕಪುಟ್ಟ ನಿರ್ಣಯಗಳೊಂದಿಗೆ ಎಲ್ಲ ರೀತಿಯ ತೀರ್ಮಾನಗಳನ್ನು ಮಾಡುವಾಗ ಯೆಹೋವನನ್ನು ಪರಿಗಣನೆಗೆ ತೆಗೆದುಕೊಳ್ಳುವಷ್ಟು ಆತನು ನಮಗೆ ವಾಸ್ತವವಾದ ವ್ಯಕ್ತಿಯಾಗಿದ್ದಾನೊ? ಅಂತಹ ರೀತಿಯ ನಂಬಿಕೆಯು, ತೀವ್ರವಾದ ವಿರೋಧವನ್ನು ಸಹ ತಾಳಿಕೊಳ್ಳುವಂತೆ ಸಹಾಯ ಮಾಡುವುದು.
11, 12. (ಎ) ಯಾವ ಪರಿಸ್ಥಿತಿಗಳಲ್ಲಿ ಹನೋಕನ ನಂಬಿಕೆಯು ಪರೀಕ್ಷಿಸಲ್ಪಟ್ಟಿದ್ದಿರಬಹುದು? (ಬಿ) ಯಾವ ಉತ್ತೇಜನದಾಯಕ ಪ್ರತಿಫಲವನ್ನು ಹನೋಕನು ಪಡೆದುಕೊಂಡನು?
11 ಹನೋಕನ ನಂಬಿಕೆಯನ್ನು ಸಹ ಪರಿಗಣಿಸಿರಿ. ಅವನು ಎದುರಿಸಿದಂತಹ ವಿರೋಧವನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆ ಸಮಯದಲ್ಲಿ ಜೀವಿಸುತ್ತಿದ್ದ ದುಷ್ಟ ಜನರ ವಿರುದ್ಧ ಅವನು ತೀಕ್ಷ್ಣವಾದ ನ್ಯಾಯದಂಡನೆಯ ಎಚ್ಚರಿಕೆಯನ್ನು ನೀಡಬೇಕಾಗಿತ್ತು. (ಯೂದ 14, 15) ಈ ನಂಬಿಗಸ್ತ ಪುರುಷನು ಎದುರಿಸಬೇಕಾಗಿದ್ದ ಹಿಂಸೆಯು ಎಷ್ಟು ಕ್ರೂರವಾಗಿ ತೋರಿತೆಂದರೆ, ಅವನ ವೈರಿಗಳು ಅವನನ್ನು ಸದೆಬಡಿಯುವ ಮೊದಲೇ ಯೆಹೋವನು ಅವನನ್ನು “ತೆಗೆದುಕೊಂಡು”ಬಿಟ್ಟನು, ಅಂದರೆ ಜೀವಿಸುವ ಸ್ಥಿತಿಯಿಂದ ಮರಣದ ಸ್ಥಿತಿಗೆ ಒಯ್ದನು. ಈ ಕಾರಣ, ತಾನು ನುಡಿದ ಪ್ರವಾದನೆಯ ನೆರವೇರಿಕೆಯನ್ನು ಹನೋಕನು ನೋಡಲಿಲ್ಲ. ಆದರೆ ಅವನಿಗೆ ಲಭಿಸಿದಂತಹ ಕೊಡುಗೆಯು, ಕೆಲವೊಂದು ವಿಧದಲ್ಲಿ ಇನ್ನೂ ಉತ್ತಮವಾಗಿತ್ತು.—ಇಬ್ರಿಯ 11:5; ಆದಿಕಾಂಡ 5:22-24.
12 ಪೌಲನು ವಿವರಿಸುವುದು: “ಅವನು [ಹನೋಕನು] ಒಯ್ಯಲ್ಪಡುವದಕ್ಕಿಂತ ಮೊದಲು ದೇವರಿಗೆ ಮೆಚ್ಚಿಕೆಯಾದವನಾಗಿದ್ದನೆಂದು ಸಾಕ್ಷಿಉಂಟು.” (ಇಬ್ರಿಯ 11:5) ಈ ಮಾತಿನ ಅರ್ಥವೇನಾಗಿತ್ತು? ಹನೋಕನು ಮರಣಾವಸ್ಥೆಯನ್ನು ತಲಪುವ ಮೊದಲು, ಅವನು ಯಾವ ಭೌಮಿಕ ಪ್ರಮೋದವನದಲ್ಲಿ ಒಂದು ದಿನ ಎದ್ದುಬರಲಿದ್ದನೋ ಅದರ ದರ್ಶನವನ್ನು ನೋಡುವ ಅವಕಾಶ ಅವನಿಗೆ ಸಿಕ್ಕಿದ್ದಿರಬಹುದು. ವಿಷಯವು ಏನೇ ಆಗಿರಲಿ, ಯೆಹೋವನು ಹನೋಕನ ನಂಬಿಗಸ್ತ ಮಾರ್ಗಕ್ರಮದಿಂದ ಬಹಳ ಪ್ರಸನ್ನನಾಗಿದ್ದನು ಎಂಬುದನ್ನು ಅವನು ತಿಳಿದುಕೊಂಡಿದ್ದನು. ಹನೋಕನು ಯೆಹೋವನನ್ನು ಸಂತೋಷಪಡಿಸಿದ್ದನು. (ಹೋಲಿಸಿ ಜ್ಞಾನೋಕ್ತಿ 27:11.) ಹನೋಕನ ಜೀವಿತವು ನಮ್ಮ ಹೃದಯವನ್ನು ಸ್ಪರ್ಶಿಸುವಂತಹದ್ದಾಗಿದೆ ಅಲ್ಲವೆ? ಅವನಂತೆ ನಂಬಿಗಸ್ತರಾಗಿ ಜೀವಿಸಲು ನೀವು ಬಯಸುವಿರೊ? ಹಾಗಾದರೆ, ಇಂತಹ ಮಾದರಿಗಳ ಕುರಿತು ಮನನಮಾಡಿ, ಅವರನ್ನು ನಿಜ ವ್ಯಕ್ತಿಗಳಾಗಿ ಪರಿಗಣಿಸಿರಿ. ಅನುದಿನವೂ ನಂಬಿಗಸ್ತರಾಗಿ ಜೀವಿಸಲು ನಿಶ್ಚಯಿಸಿರಿ. ಮತ್ತು ದೇವರು ತನ್ನ ಎಲ್ಲ ವಾಗ್ದಾನಗಳನ್ನು ನೆರವೇರಿಸಲಿರುವ ಒಂದು ದಿನಾಂಕ ಇಲ್ಲವೆ ನಿಗದಿತ ಸಮಯದ ಆಧಾರದ ಮೇಲೆ ನಂಬಿಗಸ್ತರು ಯೆಹೋವನನ್ನು ಸೇವಿಸುವುದಿಲ್ಲ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಬದಲಿಗೆ ನಾವು ಸದಾಕಾಲಕ್ಕೂ ಯೆಹೋವನಿಗೆ ಸೇವೆಸಲ್ಲಿಸಲು ನಿಶ್ಚಯಿಸಿದ್ದೇವೆ! ಹಾಗೆ ಮಾಡುವುದು, ಈ ಪ್ರಚಲಿತ ವಿಷಯಗಳ ವ್ಯವಸ್ಥೆಯಲ್ಲಿ ಮತ್ತು ಮುಂದಿನ ವ್ಯವಸ್ಥೆಯಲ್ಲಿ ಅತ್ಯುತ್ತಮ ಜೀವನ ರೀತಿಯಾಗಿರುವುದು.
ನಂಬಿಕೆಯಲ್ಲಿ ಹೆಚ್ಚು ಬಲಶಾಲಿಗಳಾಗಿ ಬೆಳೆಯುವ ವಿಧ
13, 14. (ಎ) ಇಬ್ರಿಯ 10:24, 25ರಲ್ಲಿ ದಾಖಲಾದ ಪೌಲನ ಮಾತುಗಳು, ನಮ್ಮ ಕೂಟಗಳನ್ನು ಆನಂದಭರಿತ ಸಮಯಗಳಾಗಿ ಮಾಡಲು ಹೇಗೆ ಸಹಾಯ ಮಾಡಬಹುದು? (ಬಿ) ಕ್ರೈಸ್ತ ಕೂಟಗಳ ಮುಖ್ಯ ಉದ್ದೇಶವು ಏನಾಗಿದೆ?
13 ಇಬ್ರಿಯ ಕ್ರೈಸ್ತರು ತಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಸಾಧ್ಯವಿರುವ ಹಲವಾರು ವ್ಯಾವಹಾರಿಕ ವಿಧಗಳನ್ನು ಪೌಲನು ತಿಳಿಸಿದನು. ನಾವು ಕೇವಲ ಎರಡನ್ನು ಪರಿಗಣಿಸೋಣ. ನಾವು ಕ್ರಮವಾಗಿ ಕ್ರೈಸ್ತ ಕೂಟಗಳಲ್ಲಿ ಒಟ್ಟುಗೂಡಬೇಕೆಂಬ ಇಬ್ರಿಯ 10:24, 25ರಲ್ಲಿರುವ ಅವನ ಸಲಹೆಯ ಪರಿಚಯ ನಮಗಿರಬಹುದು. ಇಂತಹ ಕೂಟಗಳಲ್ಲಿ ನಾವು ಕೇವಲ ವೀಕ್ಷಕರಾಗಿರಬೇಕೆಂಬುದು ಪೌಲನ ಪ್ರೇರಿತ ಮಾತುಗಳ ಅರ್ಥವಾಗಿರಲಿಲ್ಲವೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ. ಬದಲಿಗೆ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು, ದೇವರನ್ನು ಇನ್ನೂ ಹೆಚ್ಚಾಗಿ ಸೇವಿಸುವಂತೆ ಒಬ್ಬರನ್ನೊಬ್ಬರು ಪ್ರಚೋದಿಸಲು ಮತ್ತು ಒಬ್ಬರನ್ನೊಬ್ಬರು ಉತ್ತೇಜಿಸಲು ಕೂಟಗಳು ಅವಕಾಶವನ್ನು ಒದಗಿಸುತ್ತವೆಂದು ಪೌಲನು ತಿಳಿಯಪಡಿಸುತ್ತಾನೆ. ನಾವು ಕೇವಲ ತೆಗೆದುಕೊಳ್ಳುವವರಾಗಿರದೆ, ಕೊಡುವವರೂ ಆಗಿರಬೇಕು. ಹೀಗೆ ನಮ್ಮ ಕೂಟಗಳು ಆನಂದಭರಿತ ಸಮಯಗಳಾಗಿರಬಲ್ಲವು.—ಅ. ಕೃತ್ಯಗಳು 20:35.
14 ನಾವು ಯೆಹೋವ ದೇವರಿಗೆ ಆರಾಧನೆಯನ್ನು ಸಲ್ಲಿಸಬೇಕೆಂಬ ಪ್ರಧಾನ ಕಾರಣಕ್ಕಾಗಿಯೇ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತೇವೆ. ಪ್ರಾರ್ಥನೆ ಮತ್ತು ಸಂಗೀತದಲ್ಲಿ ಒಳಗೂಡುವ ಮೂಲಕ, ಗಮನಕೊಟ್ಟು ಆಲಿಸುವ ಮೂಲಕ, ಮತ್ತು ‘ತುಟಿಗಳ ಫಲ’ (NW)ವನ್ನು, ಅಂದರೆ ನಮ್ಮ ಹೇಳಿಕೆಗಳಲ್ಲಿ ಮತ್ತು ಕೂಟಗಳಲ್ಲಿ ಭಾಗವಹಿಸುವುದರಿಂದ ಯೆಹೋವನಿಗೆ ಅರ್ಪಿಸುವ ಸ್ತುತಿಯ ಮೂಲಕ ನಾವು ಅದನ್ನು ಮಾಡುತ್ತೇವೆ. (ಇಬ್ರಿಯ 13:15) ಈ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲ ಕೂಟಗಳಲ್ಲಿ ಅವುಗಳನ್ನು ಅನುಸರಿಸಿದರೆ, ಪ್ರತಿಯೊಂದು ಬಾರಿಯೂ ನಮ್ಮ ನಂಬಿಕೆಯು ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ.
15. ಇಬ್ರಿಯ ಕ್ರೈಸ್ತರು ತಮ್ಮ ಶುಶ್ರೂಷೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ ಪೌಲನು ಉತ್ತೇಜಿಸಿದ್ದೇಕೆ ಮತ್ತು ಅದೇ ಸಲಹೆಯು ಇಂದು ಸೂಕ್ತವಾಗಿದೆ ಏಕೆ?
15 ನಂಬಿಕೆಯನ್ನು ಕಟ್ಟುವ ಮತ್ತೊಂದು ವಿಧವು ಸಾರುವ ಕೆಲಸವೇ ಆಗಿದೆ. ಪೌಲನು ಬರೆದುದು: “ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿಸೋಣ; ವಾಗ್ದಾನಮಾಡಿದಾತನು ನಂಬಿಗಸ್ತನು.” (ಇಬ್ರಿಯ 10:23) ಇತರರು ಆ ಸುಯೋಗವನ್ನು ಬಿಟ್ಟುಬಿಡುವರೆಂದು ನಿಮಗೆ ತೋರುವಲ್ಲಿ, ಅದನ್ನು ಬಿಟ್ಟುಕೊಡದಂತೆ ನೀವು ಉತ್ತೇಜಿಸಬಹುದು. ಆ ಇಬ್ರಿಯ ಕ್ರೈಸ್ತರು ತಮ್ಮ ಶುಶ್ರೂಷೆಯನ್ನು ಬಿಟ್ಟುಕೊಡುವಂತೆ ಸೈತಾನನು ಖಂಡಿತವಾಗಿಯೂ ಒತ್ತಡ ಹೇರುತ್ತಿದ್ದನು ಮತ್ತು ಇಂದು ದೇವಜನರ ಮೇಲೆ ತದ್ರೀತಿಯ ಒತ್ತಡವನ್ನು ತರುತ್ತಿದ್ದಾನೆ. ಇಂತಹ ಒತ್ತಡದ ಕೆಳಗೆ ನಾವು ಏನು ಮಾಡತಕ್ಕದ್ದು? ಪೌಲನು ಏನು ಮಾಡಿದನೆಂಬುದನ್ನು ಪರಿಗಣಿಸಿರಿ.
16, 17. (ಎ) ಶುಶ್ರೂಷೆಗಾಗಿ ಪೌಲನು ಎಲ್ಲಿಂದ ಧೈರ್ಯವನ್ನು ಪಡೆದುಕೊಂಡನು? (ಬಿ) ನಮ್ಮ ಕ್ರೈಸ್ತ ಶುಶ್ರೂಷೆಯ ಯಾವುದಾದರೊಂದು ಅಂಶದಿಂದ ನಮಗೆ ಹೆದರಿಕೆಯಾಗುವುದಾದರೆ, ನಾವು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?
16 ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದುದು: “ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವೆಂಬದನ್ನೂ ನೀವೇ ಬಲ್ಲಿರಿ.” (1 ಥೆಸಲೊನೀಕ 2:2) ಪೌಲನು ಮತ್ತು ಅವನ ಸಂಗಾತಿಗಳು ಫಿಲಿಪ್ಪಿಯಲ್ಲಿ ಹೇಗೆ “ಅವಮಾನ”ಗೊಳಿಸಲ್ಪಟ್ಟರು? ಕೆಲವು ಪಂಡಿತರಿಗನುಸಾರ ಪೌಲನು ಉಪಯೋಗಿಸಿದಂತಹ ಗ್ರೀಕ್ ಶಬ್ದವು, ಅಪಮಾನಕರ, ಲಜ್ಜಾಸ್ಪದ, ಇಲ್ಲವೆ ಹಿಂಸಾತ್ಮಕ ವರ್ತನೆಯ ಅರ್ಥವನ್ನು ನೀಡಿತು. ಫಿಲಿಪ್ಪಿಯ ಅಧಿಕಾರಿಗಳು ಅವರನ್ನು ದೊಣ್ಣೆಗಳಿಂದ ಹೊಡೆದು, ಸೆರೆಮನೆಯಲ್ಲಿ ಹಾಕಿಸಿ, ಕಾಲುಗಳಿಗೆ ಕೋಳವನ್ನು ತೊಡಿಸಿದರು. (ಅ. ಕೃತ್ಯಗಳು 16:16-24) ಆ ವೇದನಾಮಯ ಅನುಭವವು ಪೌಲನ ಮೇಲೆ ಯಾವ ಪ್ರಭಾವವನ್ನು ಬೀರಿತು? ಅವನು ತನ್ನ ಮಿಷನೆರಿ ಪ್ರಯಾಣದ ಮುಂದಿನ ನಗರವಾದ ಥೆಸಲೊನೀಕಕ್ಕೆ ಹೋದಾಗ, ಅಲ್ಲಿ ಭಯದಿಂದ ಹಿಮ್ಮೆಟ್ಟುತ್ತಿರುವುದನ್ನು ಆ ನಗರದವರು ನೋಡಸಾಧ್ಯವಿತ್ತೊ? ಇಲ್ಲ, ಅವನು “ಧೈರ್ಯವನ್ನು ಕೂಡಿಸಿಕೊಂಡನು.” (NW) ಅವನು ಭಯದ ಮೇಲೆ ಜಯಸಾಧಿಸಿ, ಧೈರ್ಯದಿಂದ ಸಾರುತ್ತಾ ಮುಂದುವರಿದನು.
17 ಪೌಲನು ಧೈರ್ಯವನ್ನು ಎಲ್ಲಿಂದ ತಂದುಕೊಂಡನು? ಅದು ಅವನಲ್ಲೇ ಇತ್ತೊ? ಇಲ್ಲ, “ನಮ್ಮ ದೇವರ ಮೂಲಕ” ಧೈರ್ಯವನ್ನು ಕೂಡಿಸಿಕೊಂಡೆನೆಂದು ಅವನು ಹೇಳಿದನು. ಈ ಸಾಲನ್ನು, “ದೇವರು ನಮ್ಮ ಹೃದಯಗಳಿಂದ ಭಯವನ್ನು ತೆಗೆದುಬಿಟ್ಟನು” ಎಂಬುದಾಗಿ ತರ್ಜುಮೆ ಮಾಡಬಹುದೆಂದು ಬೈಬಲ್ ಭಾಷಾಂತರಕಾರರ ಒಂದು ಆಧಾರ ಗ್ರಂಥವು ತಿಳಿಸುತ್ತದೆ. ಆದುದರಿಂದ, ನಿಮ್ಮ ಶುಶ್ರೂಷೆಯ ಬಗ್ಗೆ ನಿಮಗೆ ಸಾಕಷ್ಟು ಧೈರ್ಯವಿರದಿದ್ದರೆ ಅಥವಾ ಅದರ ಯಾವುದಾದರೊಂದು ಅಂಶದ ವಿಷಯದಲ್ಲಿ ನಿಮಗೆ ಹೆದರಿಕೆಯಿರುವಲ್ಲಿ, ಯೆಹೋವನು ಪೌಲನಿಗೆ ಮಾಡಿದ ರೀತಿಯಲ್ಲಿ ನಿಮಗೂ ಮಾಡುವಂತೆ ಏಕೆ ವಿನಂತಿಸಿಕೊಳ್ಳಬಾರದು? ನಿಮ್ಮ ಹೃದಯದಿಂದ ಭಯವನ್ನು ತೆಗೆದುಹಾಕುವಂತೆ ಆತನಲ್ಲಿ ಕೇಳಿಕೊಳ್ಳಿರಿ. ಸಾರುವ ಕೆಲಸಕ್ಕಾಗಿ ಧೈರ್ಯವನ್ನು ಕೂಡಿಸಿಕೊಳ್ಳಲು ಆತನ ಸಹಾಯಕ್ಕಾಗಿ ಮೊರೆಯಿಡಿರಿ. ಜೊತೆಗೆ ಕೆಲವು ವ್ಯಾವಹಾರಿಕ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ. ಉದಾಹರಣೆಗೆ, ಸಾಕ್ಷಿಕಾರ್ಯದ ಯಾವ ಅಂಶದಲ್ಲಿ ನಿಮಗೆ ಸಾಕಷ್ಟು ಪರಿಣತಿಯಿಲ್ಲವೊ, ಅದರಲ್ಲಿ ಬಹಳವಾಗಿ ಪಳಗಿರುವ ಒಬ್ಬರೊಂದಿಗೆ ಸೇರಿ ಕೆಲಸಮಾಡಲು ನೀವು ಏರ್ಪಾಡು ಮಾಡಬಹುದು. ಅದು ವಾಣಿಜ್ಯ ಕ್ಷೇತ್ರದಲ್ಲಿ ಸಾಕ್ಷಿನೀಡುವುದು, ಬೀದಿಸಾಕ್ಷಿ, ಅನೌಪಚಾರಿಕ ಸಾಕ್ಷಿ, ಇಲ್ಲವೆ ಟೆಲಿಫೋನ್ ಸಾಕ್ಷಿಕಾರ್ಯವಾಗಿರಬಹುದು. ನಿಮ್ಮ ಜೊತೆಗಾರರು ಪ್ರಥಮ ಹೆಜ್ಜೆ ತೆಗೆದುಕೊಳ್ಳಲು ಸಿದ್ಧರಾಗಿರಬಹುದು. ಹಾಗಿರುವಲ್ಲಿ, ಗಮನಿಸಿರಿ ಮತ್ತು ಕಲಿತುಕೊಳ್ಳಿರಿ. ಆದರೆ, ತರುವಾಯ ಅದನ್ನು ಪ್ರಯತ್ನಿಸಿ ನೋಡಲು ಧೈರ್ಯವನ್ನು ಕೂಡಿಸಿಕೊಳ್ಳಿರಿ.
18. ನಮ್ಮ ಶುಶ್ರೂಷೆಯಲ್ಲಿ ನಾವು ಧೈರ್ಯವನ್ನು ಕೂಡಿಸಿಕೊಂಡರೆ ಯಾವ ಆಶೀರ್ವಾದಗಳನ್ನು ಪಡೆದುಕೊಳ್ಳುವೆವು?
18 ನೀವು ಧೈರ್ಯವನ್ನು ಕೂಡಿಸಿಕೊಳ್ಳುವಲ್ಲಿ, ಅದರಿಂದ ಸಿಗುವ ಫಲಿತಾಂಶಗಳ ಬಗ್ಗೆ ಆಲೋಚಿಸಿರಿ. ನೀವು ಪಟ್ಟುಬಿಡದೆ ಇದ್ದರೆ ಮತ್ತು ನಿರಾಶರಾಗದಿರಲು ಪ್ರಯಾಸಪಟ್ಟರೆ ಸತ್ಯವನ್ನು ಹಂಚಿಕೊಂಡದ್ದರಿಂದ ನಿಮಗೆ ಒಳ್ಳೆಯ ಅನುಭವಗಳು ಸಿಗಬಹುದು, ಇಲ್ಲದಿದ್ದರೆ ಆ ಅನುಭವಗಳು ನಿಮ್ಮ ಕೈತಪ್ಪುವವು. (ಪುಟ 25ನ್ನು ನೋಡಿರಿ.) ಕಷ್ಟಕರವಾಗಿದ್ದ ಕೆಲಸವನ್ನು ಮಾಡುವ ಮೂಲಕ ಯೆಹೋವನನ್ನು ಪ್ರಸನ್ನಗೊಳಿಸಿದ್ದೇವೆಂಬ ಅರಿವಿನಿಂದ ನಿಮಗೆ ಸಂತೃಪ್ತಿಯು ಸಿಗುವುದು. ನಿಮ್ಮ ಭಯವನ್ನು ಜಯಿಸುವುದರಲ್ಲಿ ಆತನ ಸಹಾಯ ಮತ್ತು ಆಶೀರ್ವಾದವನ್ನು ನೀವು ಅನುಭವಿಸುವಿರಿ. ನಿಮ್ಮ ನಂಬಿಕೆಯು ಬಲವಾಗಿರುವುದು. ನೀವು ನಿಮ್ಮ ನಂಬಿಕೆಯನ್ನು ಕಟ್ಟದೇ ಹೋದಲ್ಲಿ ಇತರರ ನಂಬಿಕೆಯನ್ನೂ ಕಟ್ಟಸಾಧ್ಯವಿಲ್ಲವೆಂಬುದು ಸತ್ಯ.—ಯೂದ 20, 21.
19. ‘ನಂಬಿಕೆಯುಳ್ಳ ಜನರಿಗೆ’ ಯಾವ ಅಮೂಲ್ಯವಾದ ಪ್ರತಿಫಲವು ಕಾದಿದೆ?
19 ನಿಮ್ಮ ಮತ್ತು ನಿಮ್ಮ ಸುತ್ತಲಿರುವ ಜನರ ನಂಬಿಕೆಯನ್ನು ಕಟ್ಟುತ್ತಾ ಇರಿ. ದೇವರ ವಾಕ್ಯದ ಸಮರ್ಥ ಬಳಕೆ, ನಂಬಿಕೆಯ ವಿಷಯದಲ್ಲಿ ಬೈಬಲಿನಲ್ಲಿರುವ ಮಾದರಿಗಳನ್ನು ಅಭ್ಯಾಸಿಸಿ ಅವುಗಳನ್ನು ಸಜೀವಗೊಳಿಸುವುದು, ಕ್ರೈಸ್ತ ಕೂಟಗಳಿಗಾಗಿ ತಯಾರಿಸಿ ಅವುಗಳಲ್ಲಿ ಭಾಗವಹಿಸುವುದು ಮತ್ತು ಸಾರ್ವಜನಿಕ ಶುಶ್ರೂಷೆಯ ಅಮೂಲ್ಯ ಸುಯೋಗವನ್ನು ಬಿಗಿಯಾಗಿ ಹಿಡಿದುಕೊಳ್ಳುವ ಮೂಲಕ ನಾವು ನಮ್ಮನ್ನು ಮತ್ತು ಇತರರನ್ನು ಬಲಪಡಿಸಬಹುದು. ಇದನ್ನೆಲ್ಲ ಮಾಡುವ ಮೂಲಕ “ನಂಬಿಕೆಯುಳ್ಳ”ವರೆಂಬ ಆಶ್ವಾಸನೆ ನಿಮಗಿರುವುದು. ಇಂತಹವರಿಗೆ ಅಮೂಲ್ಯವಾದ ಪ್ರತಿಫಲವಿದೆ ಎಂಬುದು ಸಹ ನೆನಪಿರಲಿ. ಇವರು ‘ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದಾರೆ.’b ನಿಮ್ಮ ನಂಬಿಕೆಯು ಸದಾ ವೃದ್ಧಿಸಲಿ ಮತ್ತು ಯೆಹೋವ ದೇವರು ನಿಮ್ಮನ್ನು ಎಂದೆಂದಿಗೂ ಸಂರಕ್ಷಿಸಲಿ!
[ಅಧ್ಯಯನ ಪ್ರಶ್ನೆಗಳು]
a ಪೌಲನು ಹಬಕ್ಕೂಕ 2:4ರ ಸೆಪ್ಟ್ಯುಅಜಿಂಟ್ ತರ್ಜುಮೆಯನ್ನು ಉಲ್ಲೇಖಿಸಿದನು. ಅದರಲ್ಲಿ, “ಯಾವನಾದರೂ ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ” ಎಂಬ ವಾಕ್ಸರಣಿಯೂ ಇದೆ. ಈ ಹೇಳಿಕೆಯು ಈಗ ಚಾಲ್ತಿಯಲ್ಲಿರುವ ಯಾವುದೇ ಹೀಬ್ರು ಹಸ್ತಪತ್ರಿಯಲ್ಲಿ ಕಂಡುಬರುವುದಿಲ್ಲ. ಈಗ ಅಸ್ತಿತ್ವದಲ್ಲಿರದ ಹೀಬ್ರು ಹಸ್ತಪ್ರತಿಗಳ ಮೇಲೆ ಈ ಸೆಪ್ಟ್ಯುಅಜಿಂಟ್ ಆಧಾರಿಸಿತ್ತೆಂಬುದು ಕೆಲವರ ಅಭಿಪ್ರಾಯ. ವಿಷಯವು ಏನೇ ಆಗಿರಲಿ, ದೇವರ ಪವಿತ್ರಾತ್ಮದ ಪ್ರೇರಣೆಯ ಕೆಳಗೆ ಪೌಲನು ಅದನ್ನು ಸೇರಿಸಿದನು. ಆದುದರಿಂದ ಅದಕ್ಕೆ ದೈವಿಕ ಮನ್ನಣೆಯಿದೆ.
b ಇಸವಿ 2000ಕ್ಕೆ ಯೆಹೋವನ ಸಾಕ್ಷಿಗಳ ವಾರ್ಷಿಕ ವಚನವು ಇದಾಗಿರುವುದು: “ನಾವಾದರೋ ಹಿಂದೆಗೆಯುವಂತಹ ಜನರಲ್ಲ . . . ಬದಲಿಗೆ ನಂಬಿಕೆಯುಳ್ಳ ಜನರಾಗಿದ್ದೇವೆ.”—ಇಬ್ರಿಯ 10:39, NW.
ನೀವು ಹೇಗೆ ಉತ್ತರಿಸುವಿರಿ?
◻ ಪೌಲನು ಇಬ್ರಿಯ ಕ್ರೈಸ್ತರಲ್ಲಿ ಭರವಸೆಯನ್ನು ವ್ಯಕ್ತಪಡಿಸಿದ್ದು ಹೇಗೆ ಮತ್ತು ನಾವು ಇದರಿಂದ ಏನನ್ನು ಕಲಿತುಕೊಳ್ಳಸಾಧ್ಯವಿದೆ?
◻ ಪೌಲನು ಪ್ರವಾದಿಯಾದ ಹಬಕ್ಕೂಕನಿಗೆ ಸೂಚಿಸಿ ಮಾತಾಡಿದ್ದು ಏಕೆ ಅಷ್ಟೊಂದು ಸೂಕ್ತವಾಗಿತ್ತು?
◻ ನಂಬಿಕೆಯ ಯಾವ ಶಾಸ್ತ್ರೀಯ ಮಾದರಿಗಳನ್ನು ಪೌಲನು ಸಜೀವಗೊಳಿಸಿದನು?
◻ ನಂಬಿಕೆಯನ್ನು ಕಟ್ಟುವ ಯಾವ ವ್ಯಾವಹಾರಿಕ ವಿಧಾನಗಳನ್ನು ಪೌಲನು ಶಿಫಾರಸುಮಾಡಿದನು?
[ಪುಟ 23 ರಲ್ಲಿರುವ ಚಿತ್ರ]
ಪೌಲನು ಫಿಲಿಪ್ಪಿಯಲ್ಲಿ ಹಿಂಸೆಯನ್ನು ಅನುಭವಿಸಿದ ಬಳಿಕವೂ ಸಾರುವುದನ್ನು ಮುಂದುವರಿಸಲು ಧೈರ್ಯವನ್ನು ಕೂಡಿಸಿಕೊಂಡನು
[ಪುಟ 24 ರಲ್ಲಿರುವ ಚಿತ್ರಗಳು]
ವಿವಿಧ ರೀತಿಯ ಸಾಕ್ಷಿಕಾರ್ಯದಲ್ಲಿ ತೊಡಗಲು ನೀವು ಧೈರ್ಯವನ್ನು ಕೂಡಿಸಿಕೊಳ್ಳಬಲ್ಲಿರೊ?