ಬೈಬಲಿನ ದೃಷ್ಟಿಕೋನ
ನಿಮ್ಮ ಉಡುಪು ಮತ್ತು ಕೇಶಾಲಂಕಾರ—ದೇವರಿಗೆ ಅದು ಪ್ರಾಮುಖ್ಯವಾಗಿದೆಯೊ?
“ಪುಸ್ತಕದ ಪರಿವಿಡಿಯು ಅದರ ಒಳಲೇಖನಗಳನ್ನು ಪ್ರಕಟಪಡಿಸುವಂತೆಯೇ, . . . ಒಬ್ಬ ಸ್ತ್ರೀ ಇಲ್ಲವೆ ಪುರುಷನ ಹೊರತೋರಿಕೆ ಹಾಗೂ ಉಡಿಗೆತೊಡಿಗೆಯು, ಅವರ ಮಾನಸಿಕ ಪ್ರವೃತ್ತಿಯ ಸೂಚನೆಯನ್ನು ನಮಗೆ ನೀಡುತ್ತವೆ.” —ಇಂಗ್ಲಿಷ್ ನಾಟಕಕಾರ, ಫಿಲಿಪ್ ಮ್ಯಾಸಿಂಜರ್.
ಸಾಮಾನ್ಯ ಶಕ ಮೂರನೆಯ ಶತಮಾನದಲ್ಲಿ, ಚರ್ಚ್ ಬರಹಗಾರ ಟೈಟಸ್ ಕ್ಲೀಮನ್ಸ್, ಉಡುಪು ಮತ್ತು ಕೇಶಾಲಂಕಾರದ ವಿಷಯದಲ್ಲಿ ನಿಯಮಗಳ ಒಂದು ಉದ್ದವಾದ ಪಟ್ಟಿಯನ್ನು ನಿರೂಪಿಸಿದನು. ಆಭರಣಗಳು ಮತ್ತು ಭೋಗಾಸಕ್ತ ಇಲ್ಲವೆ ವರ್ಣರಂಜಿತ ಬಟ್ಟೆಗಳು ನಿಷೇಧಿಸಲ್ಪಟ್ಟಿದ್ದವು. ಸ್ತ್ರೀಯರು ತಮ್ಮ ಕೂದಲಿಗೆ ಬಣ್ಣಹಚ್ಚಿಕೊಳ್ಳಬಾರದಿತ್ತು, ಮತ್ತು “ಕುಯಕ್ತಿಯಿಂದ ಬಲೆಯಲ್ಲಿ ಬೀಳಿಸುವ ಸಾಧನಗಳನ್ನು ತಮ್ಮ ಮುಖಗಳಿಗೆ ಬಳಿದುಕೊಳ್ಳಬಾರದು” ಅಂದರೆ, “ಮೇಕಪ್ ಮಾಡಿಕೊಳ್ಳಬಾರದಿತ್ತು.” ಪುರುಷರು ತಮ್ಮ ತಲೆಯ ಕೂದಲನ್ನು ಬೋಳಿಸುವಂತೆ ಆದೇಶಿಸಲ್ಪಟ್ಟರು ಏಕೆಂದರೆ, “ಕತ್ತರಿಸಲ್ಪಟ್ಟ ಕೂದಲಿನಿಂದ . . . ಒಬ್ಬ ಪುರುಷನು ಗಂಭೀರವಾಗಿ ತೋರುತ್ತಾನೆ,” ಆದರೆ ಗಡ್ಡವನ್ನು ಮುಟ್ಟಬಾರದು, ಏಕೆಂದರೆ ಅದು “ಮುಖಕ್ಕೆ ಘನತೆಯನ್ನು ಮತ್ತು ಪಿತೃಸದೃಶ ಅಧಿಕಾರವನ್ನು ನೀಡುತ್ತದೆ.”a
ಶತಮಾನಗಳ ತರುವಾಯ, ಪ್ರಾಟೆಸ್ಟಂಟ್ ಮುಖಂಡನಾದ ಜಾನ್ ಕ್ಯಾಲ್ವಿನ್, ತನ್ನ ಹಿಂಬಾಲಕರು ಧರಿಸಿಕೊಳ್ಳಬಹುದಾದ ಬಟ್ಟೆಯ ಬಣ್ಣ, ಮತ್ತು ಮಾದರಿಯನ್ನು ನಿರ್ದಿಷ್ಟವಾಗಿ ಸೂಚಿಸುವ ಕಟ್ಟಳೆಗಳನ್ನು ವಿಧಿಸಿದನು. ಆಭರಣ ಮತ್ತು ಲೇಸ್ಗಳಿಗೆ ಸಮ್ಮತಿ ಇರಲಿಲ್ಲ, ಮತ್ತು ಸ್ತ್ರೀಯೊಬ್ಬಳು ತನ್ನ ಕೂದಲನ್ನು “ಬಹಳ ಮೇಲಕ್ಕೆ” ಎತ್ತಿಕಟ್ಟುವುದಕ್ಕಾಗಿ ಸೆರೆಮನೆಗೆ ಹಾಕಲ್ಪಡಬಹುದಿತ್ತು.
ಅನೇಕ ವರ್ಷಗಳಿಂದ ಧಾರ್ಮಿಕ ಮುಖಂಡರಿಂದ ಅನುಮೋದಿಸಲ್ಪಟ್ಟ ಇಂತಹ ವಿಪರೀತ ದೃಷ್ಟಿಕೋನಗಳ ಕಾರಣ, ಅನೇಕ ಪ್ರಾಮಾಣಿಕ ಜನರು ಹೀಗೆ ಯೋಚಿಸಿದ್ದಾರೆ, ನಾನು ಧರಿಸಿಕೊಳ್ಳುವಂತಹದ್ದು ದೇವರಿಗೆ ನಿಜವಾಗಿಯೂ ಪ್ರಾಮುಖ್ಯವಾಗಿದೆಯೊ? ಕೆಲವೊಂದು ಫ್ಯಾಶನ್ಗಳನ್ನು ಇಲ್ಲವೆ ಮೇಕಪ್ನ ಬಳಕೆಯನ್ನು ಆತನು ಅಸಮ್ಮತಿಸುತ್ತಾನೊ? ಬೈಬಲು ಈ ವಿಷಯದಲ್ಲಿ ಏನನ್ನು ಕಲಿಸುತ್ತದೆ?
ಒಂದು ವೈಯಕ್ತಿಕ ವಿಷಯ
ಆಸಕ್ತಿಕರವಾಗಿ, ಯೋಹಾನ 8:31, 32ರಲ್ಲಿ ದಾಖಲಿಸಲ್ಪಟ್ಟಂತೆ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” ಹೌದು, ಯೇಸು ಕಲಿಸಿದ ಸತ್ಯಗಳು, ಸಂಪ್ರದಾಯ ಮತ್ತು ಸುಳ್ಳು ಬೋಧನೆಗಳಿಂದ ಸೃಷ್ಟಿಸಲ್ಪಟ್ಟ ದಬ್ಬಾಳಿಕೆಯ ಹೊರೆಗಳಿಂದ ಜನರನ್ನು ಬಿಡುಗಡೆಗೊಳಿಸುವ ಉದ್ದೇಶವನ್ನು ಹೊಂದಿದ್ದವು. ಅವು ‘ಕಷ್ಟಪಡುವವರಿಗೆ ಮತ್ತು ಹೊರೆಹೊತ್ತವರಿಗೆ’ ನವಚೈತನ್ಯವನ್ನು ಉಂಟುಮಾಡಲಿಕ್ಕಾಗಿದ್ದವು. (ಮತ್ತಾಯ 11:28) ಜನರು ಇನ್ನು ಮುಂದೆ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳದಿರುವ ಮತ್ತು ವೈಯಕ್ತಿಕ ವಿಷಯಗಳಲ್ಲಿ ತಮ್ಮ ಸ್ವಂತ ವಿವೇಚನೆಯನ್ನು ಉಪಯೋಗಿಸದಿರುವ ಮಟ್ಟಿಗೆ, ಯೇಸುವಿಗಾಗಲಿ ಅವನ ತಂದೆಯಾದ ಯೆಹೋವ ದೇವರಿಗಾಗಲಿ, ಜನರ ಜೀವಿತಗಳನ್ನು ನಿಯಂತ್ರಿಸುವ ಬಯಕೆಯಿರುವುದಿಲ್ಲ. ಅವರು “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿ”ದುಕೊಂಡಿರುವ ಪ್ರೌಢ ವ್ಯಕ್ತಿಗಳಾಗುವಂತೆ ಯೆಹೋವನು ಬಯಸುತ್ತಾನೆ.—ಇಬ್ರಿಯ 5:14.
ಹೀಗೆ, ಉಡುಪು ಮತ್ತು ಕೇಶಾಲಂಕಾರದ ವಿಷಯದಲ್ಲಿ ಇಲ್ಲವೆ ಕಾಂತಿ ವರ್ಧಕಗಳ ಬಳಕೆಯ ವಿಷಯದಲ್ಲಿ, ಬೈಬಲು ಯಾವುದೇ ವಿಸ್ತೃತ ನಿಯಮಗಳನ್ನು ಒದಗಿಸುವುದಿಲ್ಲ. ಅದು ಯೆಹೂದ್ಯರ ಮೇಲೆ ಮೋಶೆಯ ಧರ್ಮಶಾಸ್ತ್ರವು ಹೊರಿಸಿದ, ಬಟ್ಟೆಯ ವಿಷಯವಾದ ನಿರ್ದಿಷ್ಟ ಆವಶ್ಯಕತೆಗಳನ್ನು ಮಾತ್ರ ತಿಳಿಯಪಡಿಸಿತು. ಇದು ಯೆಹೂದ್ಯರನ್ನು ಅವರ ಸುತ್ತಮುತ್ತಲಿರುವ ರಾಷ್ಟ್ರಗಳು ಹಾಗೂ ಅವರ ಅನೈತಿಕ ಪ್ರಭಾವದಿಂದ ದೂರವಿಡುವ ಉದ್ದೇಶದಿಂದ ಮಾಡಲಾಗಿತ್ತು. (ಅರಣ್ಯಕಾಂಡ 15:38-41; ಧರ್ಮೋಪದೇಶಕಾಂಡ 22:5) ಕ್ರೈಸ್ತ ಏರ್ಪಾಡಿನೊಳಗೆ, ಉಡುಪು ಮತ್ತು ಕೇಶಾಲಂಕಾರವು ವೈಯಕ್ತಿಕ ಅಭಿರುಚಿಯ ವಿಷಯವಾಗಿದೆ.
ಇದು, ನಾವು ಧರಿಸುವ ಉಡುಪಿನಲ್ಲಿ ದೇವರಿಗೆ ಆಸಕ್ತಿಯಿಲ್ಲ, ಅಥವಾ ಎಲ್ಲ ರೀತಿಯ ಉಡುಪು ಸ್ವೀಕಾರಯೋಗ್ಯವಾಗಿದೆ ಎಂಬುದನ್ನು ಸೂಚಿಸುವುದಿಲ್ಲ. ಅದಕ್ಕೆ ಬದಲಾಗಿ, ಉಡುಪು ಮತ್ತು ಕೇಶಾಲಂಕಾರದ ವಿಷಯವಾಗಿ ದೇವರ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ನ್ಯಾಯಸಮ್ಮತವಾದ ಮಾರ್ಗದರ್ಶನಗಳು ಬೈಬಲಿನಲ್ಲಿವೆ.
‘ಸಭ್ಯತೆಯಿಂದ ಮತ್ತು ಸ್ವಸ್ಥ ಮನಸ್ಸಿನಿಂದ’
ಕ್ರೈಸ್ತ ಸ್ತ್ರೀಯರು “ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ [“ಸಭ್ಯತೆಯಿಂದಲೂ ಸ್ವಸ್ಥ ಮನಸ್ಸಿನಿಂದಲೂ,” NW] ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳ”ಬಾರದೆಂದು ಅಪೊಸ್ತಲ ಪೌಲನು ಬರೆದನು. ತದ್ರೀತಿಯಲ್ಲಿ ಪೇತ್ರನು, “ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳು”ವುದರ ವಿರುದ್ಧ ಸಲಹೆ ನೀಡುತ್ತಾನೆ.—1 ತಿಮೊಥೆಯ 2:9, 10; 1 ಪೇತ್ರ 3:3.
ಕ್ರೈಸ್ತ ಸ್ತ್ರೀಪುರುಷರು ತಮ್ಮ ಹೊರತೋರಿಕೆಯನ್ನು ಹೆಚ್ಚು ಅಂದಗೊಳಿಸಿಕೊಳ್ಳಬಾರದೆಂದು ಪೇತ್ರ ಪೌಲರು ಸೂಚಿಸುತ್ತಿದ್ದಾರೊ? ಖಂಡಿತವಾಗಿಯೂ ಇಲ್ಲ! ವಾಸ್ತವದಲ್ಲಿ, ಆಭರಣ ಇಲ್ಲವೆ ಕಾಂತಿವರ್ಧಕ ಎಣ್ಣೆ ಮತ್ತು ಸುಗಂಧ ತೈಲಗಳನ್ನು ಉಪಯೋಗಿಸಿದ ನಂಬಿಗಸ್ತ ಸ್ತ್ರೀಪುರುಷರ ಕುರಿತು ಬೈಬಲು ತಿಳಿಸುತ್ತದೆ. ಅರಸ ಅಹಷ್ವೇರೋಷನ ಬಳಿಗೆ ಹೋಗುವ ಮೊದಲು, ಎಸ್ತೇರಳು ಸುಗಂಧ ತೈಲಗಳು ಮತ್ತು ಅಂಗ ಮರ್ದನವನ್ನು ಒಳಗೊಂಡ ಸೌಂದರ್ಯ ಪದ್ಧತಿಗೆ ಒಳಗಾದಳು. ಮತ್ತು ಯೋಸೇಫನು ಉತ್ತಮ ನಾರುಬಟ್ಟೆಯ ವಸ್ತ್ರಗಳನ್ನು ಮತ್ತು ಚಿನ್ನದ ಕಂಠಹಾರವನ್ನು ಹಾಕಿಕೊಂಡಿದ್ದನು.—ಆದಿಕಾಂಡ 41:42; ವಿಮೋಚನಕಾಂಡ 32:2, 3; ಎಸ್ತೇರಳು 2:7, 12, 15.
ಪೌಲನು ಉಪಯೋಗಿಸಿದ ‘ಸ್ವಸ್ಥ ಮನಸ್ಸಿನಿಂದ’ ಎಂಬ ವಾಕ್ಸರಣಿಯು, ಕೊಡಲ್ಪಟ್ಟ ಬುದ್ಧಿವಾದವನ್ನು ತಿಳಿದುಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಮೂಲಭೂತ ಗ್ರೀಕ್ ಪದವು, ಸಭ್ಯರು ಹಾಗೂ ಆತ್ಮನಿಯಂತ್ರಣ ಉಳ್ಳವರಾಗಿರುವುದನ್ನು ಸೂಚಿಸುತ್ತದೆ. ಅದು ಅನುಚಿತವಾದ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳದೆ, ತನ್ನ ಕುರಿತು ಹಿತಮಿತವಾಗಿ ಯೋಚಿಸುವುದನ್ನು ಅರ್ಥೈಸುತ್ತದೆ. ಇತರ ಬೈಬಲ್ ಭಾಷಾಂತರಗಳು ಈ ಪದವನ್ನು, “ವಿವೇಚನೆಯಿಂದ,” “ನ್ಯಾಯಯುತವಾಗಿ,” “ಸಂಸ್ಕರಿಸಲ್ಪಟ್ಟದ್ದಾಗಿ,” ಇಲ್ಲವೆ “ಆತ್ಮನಿಯಂತ್ರಣದೊಂದಿಗೆ” ಎಂಬುದಾಗಿ ತರ್ಜುಮೆ ಮಾಡುತ್ತವೆ. ಈ ಗುಣವು ಕ್ರೈಸ್ತ ಹಿರಿಯರಿಗೆ ಒಂದು ಅತ್ಯಾವಶ್ಯಕತೆಯಾಗಿದೆ.—1 ತಿಮೊಥೆಯ 3:2.
ನಮ್ಮ ಉಡುಪು ಮತ್ತು ಕೇಶಾಲಂಕಾರವು ಸಭ್ಯವೂ ಯೋಗ್ಯವೂ ಆಗಿರಬೇಕೆಂದು ಶಾಸ್ತ್ರವಚನಗಳು ನಮಗೆ ಹೇಳುವಾಗ, ಇತರರಿಗೆ ಜುಗುಪ್ಸೆ ಉಂಟುಮಾಡುವ ಮತ್ತು ನಮ್ಮ ಹಾಗೂ ಕ್ರೈಸ್ತ ಸಭೆಯ ಸತ್ಕೀರ್ತಿಯ ಮೇಲೆ ನಿಂದೆಯನ್ನು ತರುವಂತಹ ಯಾವುದೇ ಅತಿರೇಕ ಸ್ಟೈಲ್ಗಳಿಂದ ನಾವು ದೂರವಿರಬೇಕೆಂದು ಅವು ನಮ್ಮನ್ನು ಉತ್ತೇಜಿಸುತ್ತವೆ. ಶಾರೀರಿಕ ಅಲಂಕಾರದ ಮುಖಾಂತರ ತಮ್ಮ ಹೊರತೋರಿಕೆಯ ಕಡೆಗೆ ಗಮನವನ್ನು ಸೆಳೆಯುವ ಬದಲಿಗೆ, ದೇವರ ಕಡೆಗೆ ಪೂಜ್ಯಭಾವನೆಯುಳ್ಳವರು ಸ್ವಸ್ಥ ಮನಸ್ಸನ್ನು ಪ್ರದರ್ಶಿಸಬೇಕು ಮತ್ತು “ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣ”ದ ಮೇಲೆ ಹೆಚ್ಚಿನ ಒತ್ತನ್ನು ನೀಡಬೇಕು. ಇದು, “ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದು” ಎಂದು ಪೇತ್ರನು ಕೊನೆಗೊಳಿಸುತ್ತಾನೆ.—1 ಪೇತ್ರ 3:4.
ಕ್ರೈಸ್ತರು “ಜಗತ್ತಿಗೆಲ್ಲಾ ನೋಟ”ವಾಗಿದ್ದಾರೆ. ವಿಶೇಷವಾಗಿ ಸುವಾರ್ತೆಯನ್ನು ಸಾರುವ ಆಜ್ಞೆ ಅವರಿಗಿರುವುದರಿಂದ, ಇತರರಿಗೆ ತಾವು ನೀಡುವ ಅಭಿಪ್ರಾಯದ ಕುರಿತು ಅವರು ಜಾಗರೂಕರಾಗಿರಬೇಕು. (1 ಕೊರಿಂಥ 4:9; ಮತ್ತಾಯ 24:14) ಆದುದರಿಂದ ಆ ಅತ್ಯಾವಶ್ಯಕ ಸಂದೇಶಕ್ಕೆ ಕಿವಿಗೊಡುವುದರಿಂದ ಯಾವುದೇ ವಿಷಯವು, ಅಂದರೆ, ಅವರ ಹೊರತೋರಿಕೆಯು ಕೂಡ, ಇತರರು ಅಪಕರ್ಷಿತರಾಗುವಂತೆ ಮಾಡಲು ಅವರು ಬಯಸುವುದಿಲ್ಲ.—2 ಕೊರಿಂಥ 4:2.
ಸ್ಟೈಲ್ಗಳು ಒಂದು ಸ್ಥಳದಿಂದ ಮತ್ತೊಂದಕ್ಕೆ ಬಹಳ ಭಿನ್ನವಾಗಿರುವಾಗಲೂ, ವಿವೇಕಯುತ ಆಯ್ಕೆಗಳನ್ನು ಮಾಡಲು ತಮ್ಮನ್ನು ಶಕ್ತರನ್ನಾಗಿ ಮಾಡುವ ಸ್ಪಷ್ಟ ಹಾಗೂ ವಿವೇಚನೆಯುತ ಮಾರ್ಗದರ್ಶನಗಳನ್ನು ಬೈಬಲು ಜನರಿಗೆ ನೀಡುತ್ತದೆ. ಜನರು ಈ ತತ್ವಗಳನ್ನು ಎಷ್ಟರ ವರೆಗೆ ಪಾಲಿಸುತ್ತಾರೊ ಅಲ್ಲಿಯ ವರೆಗೆ, ಎಲ್ಲರು ಉಡುಪು ಮತ್ತು ಕೇಶಾಲಂಕಾರದ ವಿಷಯದಲ್ಲಿ, ತಮ್ಮ ವೈಯಕ್ತಿಕ ಅಭಿರುಚಿಯನ್ನು ವ್ಯಕ್ತಪಡಿಸುವಂತೆ ದೇವರು ಮುಕ್ತವಾಗಿ ಮತ್ತು ಪ್ರೀತಿಪೂರ್ವಕವಾಗಿ ಅನುಮತಿಸುತ್ತಾನೆ.
[ಅಧ್ಯಯನ ಪ್ರಶ್ನೆಗಳು]
a ಶಾಸ್ತ್ರವಚನಗಳನ್ನು ತಿರುಚಿಹೇಳುವ ಮೂಲಕ, ಈ ನಿಷೇಧಗಳನ್ನು ಎತ್ತಿಹಿಡಿಯುವ ಪ್ರಯತ್ನವನ್ನು ಮಾಡಲಾಯಿತು. ಬೈಬಲು ಇಂತಹ ವಿಷಯವನ್ನು ಹೇಳುವುದಿಲ್ಲವಾದರೂ, ಸ್ತ್ರೀಯೊಬ್ಬಳು “ಪ್ರಥಮ ಪಾಪದ ಮತ್ತು ಮಾನವ ಅಧಃಪತನದ . . . ಕಳಂಕ”ವಾಗಿದ್ದ ಕಾರಣ, ಸ್ತ್ರೀಯರು “ಹವ್ವಳಂತೆ ದುಃಖಿಸುತ್ತಾ ಮತ್ತು ಪಶ್ಚಾತ್ತಾಪಪಡುತ್ತಾ” ನಡೆದಾಡಬೇಕೆಂದು ಪ್ರಖ್ಯಾತ ತತ್ವಶಾಸ್ತ್ರಜ್ಞನಾದ ಟರ್ಟುಲಿಯನ್ ಕಲಿಸಿದನು. ವಾಸ್ತವದಲ್ಲಿ, ಸ್ವಾಭಾವಿಕವಾಗಿ ಸುಂದರವಾಗಿರುವ ಸ್ತ್ರೀಯೊಬ್ಬಳು, ತನ್ನ ಸೌಂದರ್ಯವನ್ನು ಮರೆಮಾಡುವ ಹಂತಕ್ಕೂ ಹೋಗಬೇಕೆಂದು ಅವನು ಒತ್ತಾಯಿಸಿದನು.—ಹೋಲಿಸಿ ರೋಮಾಪುರ 5:12-14; 1 ತಿಮೊಥೆಯ 2:13, 14.