ತನ್ನ ವಾಗ್ದಾನದ ವಿಷಯದಲ್ಲಿ ದೇವರು ವಿಳಂಬಿಸುತ್ತಿಲ್ಲ
“ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ?” ಈ ಮಾತುಗಳನ್ನು, ಸಾ.ಶ.ಪೂ. ಏಳನೆಯ ಶತಮಾನದಲ್ಲಿ ಜೀವಿಸಿದ ಹೀಬ್ರು ಪ್ರವಾದಿಯಾದ ಹಬಕ್ಕೂಕನು ನುಡಿದನು. ಆದರೆ ಇವು ತೀರ ಪರಿಚಿತವಾದ ಮಾತುಗಳಾಗಿವೆ, ಅಲ್ಲವೆ? ನಾವು ಹಾತೊರೆಯುವ ವಿಷಯಗಳನ್ನು ಕೂಡಲೇ ಅಥವಾ ಆದಷ್ಟು ಬೇಗನೆ ಪಡೆದುಕೊಳ್ಳಲು ಬಯಸುವುದು ಮಾನವ ಸ್ವಭಾವವಾಗಿದೆ. ತತ್ಕ್ಷಣ ತೃಪ್ತಿನೀಡುವ ಈ ಯುಗದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.—ಹಬಕ್ಕೂಕ 1:2.
ದೇವರು ತನ್ನ ವಾಗ್ದಾನಗಳನ್ನು ಈ ಮೊದಲೇ ನೆರವೇರಿಸಬೇಕಾಗಿತ್ತೆಂದು ಭಾವಿಸಿದ ಕೆಲವರು ಪ್ರಥಮ ಶತಮಾನದಲ್ಲಿ ಜೀವಿಸುತ್ತಿದ್ದರು. ಅವರೆಷ್ಟು ತಾಳ್ಮೆಯಿಲ್ಲದವರಾಗಿದ್ದರೆಂದರೆ, ದೇವರನ್ನು ನಿಧಾನಿ ಇಲ್ಲವೆ ತಡಮಾಡುವವನು ಎಂಬುದಾಗಿ ಅವರು ಪರಿಗಣಿಸಿದರು. ಈ ಕಾರಣ, ಕಾಲದ ವಿಷಯದಲ್ಲಿ ದೇವರ ನೋಟವು ನಮ್ಮ ನೋಟಕ್ಕಿಂತ ಬಹಳ ಭಿನ್ನವಾಗಿದೆ ಎಂಬುದನ್ನು ಅಪೊಸ್ತಲ ಪೇತ್ರನು ಅವರಿಗೆ ಜ್ಞಾಪಕ ಹುಟ್ಟಿಸಬೇಕಾಗಿತ್ತು. ಪೇತ್ರನು ಬರೆಯುವುದು: “ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ಮರೆಯಬೇಡಿರಿ.”—2 ಪೇತ್ರ 3:8.
ಕಾಲವನ್ನು ಲೆಕ್ಕಿಸುವ ಈ ವಿಧಕ್ಕನುಸಾರ, 80 ವರ್ಷ ಪ್ರಾಯದ ಒಬ್ಬ ವ್ಯಕ್ತಿಯು ಸುಮಾರು ಎರಡು ತಾಸುಗಳು ಮಾತ್ರ ಜೀವಿಸಿದ್ದಾನೆ, ಮತ್ತು ಮಾನವಕುಲದ ಇತಿಹಾಸವೆಲ್ಲವೂ ಸುಮಾರು ಆರು ದಿನಗಳಷ್ಟು ದೀರ್ಘವಾಗಿದೆ. ನಾವು ವಿಷಯಗಳನ್ನು ಈ ದೃಷ್ಟಿಯಿಂದ ನೋಡುವಾಗ, ದೇವರು ನಮ್ಮೊಂದಿಗೆ ವ್ಯವಹರಿಸುವ ರೀತಿಯನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ.
ಆದರೆ ದೇವರು ಕಾಲದ ವಿಷಯದಲ್ಲಿ ಉದಾಸೀನನಲ್ಲ. ಬದಲಿಗೆ ಆತನು ಸಮಯ ಪ್ರಜ್ಞೆಯುಳ್ಳವನಾಗಿದ್ದಾನೆ. (ಅ. ಕೃತ್ಯಗಳು 1:7) ಆದುದರಿಂದ, ಪೇತ್ರನು ಹೀಗೆ ಮುಂದುವರಿಸಿ ಹೇಳುವುದು: “ಕರ್ತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.” (2 ಪೇತ್ರ 3:9) ಸಮಯವು ತನಗೆ ಸಾಕಾಗಲಾರದೇನೊ ಎಂಬಂತೆ, ಮನುಷ್ಯರ ಹಾಗೆ ಬೇಗ ಬೇಗನೆ ಕೆಲಸಗಳನ್ನು ಮಾಡುವ ಒತ್ತಡ ದೇವರಿಗಿರುವುದಿಲ್ಲ. ‘ನಿತ್ಯತೆಯ ಅರಸ’ನೋಪಾದಿ ಆತನಿಗೆ ಅದ್ಭುತಕರವಾದ ಹೊರನೋಟವಿದ್ದು, ಯಾವ ಸಮಯದಲ್ಲಿ ಆತನ ಕ್ರಿಯೆಗಳು ಹೆಚ್ಚಿನವರಿಗೆ ಒಳಿತನ್ನು ತರುವವೆಂದು ಆತನು ನಿರ್ಧರಿಸಶಕ್ತನು.—1 ತಿಮೊಥೆಯ 1:17.
ದೇವರು ವಿಳಂಬಿಸುತ್ತಿರುವಂತೆ ತೋರುವ ಕಾರಣವನ್ನು ವಿವರಿಸಿದ ಮೇಲೆ, ಪೇತ್ರನು ಈ ಎಚ್ಚರಿಕೆಯನ್ನು ನೀಡುತ್ತಾನೆ: “ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ.” ಅಂದರೆ, ಲೆಕ್ಕವೊಪ್ಪಿಸುವ ದಿನವು, ಜನರು ನಿರೀಕ್ಷಿಸದೇ ಇರುವಾಗ ಬರುವುದು. ತದನಂತರ, ಮುಂದಿನ ವಚನಗಳಲ್ಲಿ “ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳ” ಜನರು ದೇವರ ವಾಗ್ದತ್ತ “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಪ್ರವೇಶಿಸುವ ಅದ್ಭುತಕರ ಪ್ರತೀಕ್ಷೆಯ ಕುರಿತು ಪೇತ್ರನು ಹೇಳುತ್ತಾನೆ.—2 ಪೇತ್ರ 3:10-13.
ದೇವರ ನ್ಯಾಯತೀರ್ಪು ಇನ್ನೂ ಬಂದಿಲ್ಲವೆಂಬುದಕ್ಕೆ ನಾವು ಮತ್ತಷ್ಟು ಗಣ್ಯತೆಯನ್ನು ತೋರಿಸುವಂತೆ ಇದು ಪ್ರಚೋದಿಸಬೇಕು. ಆತನ ತಾಳ್ಮೆಯ ಕಾರಣ, ನಾವು ಆತನ ಉದ್ದೇಶವನ್ನು ತಿಳಿದುಕೊಳ್ಳಲು ಮತ್ತು ಆತನ ವಾಗ್ದತ್ತ ಆಶೀರ್ವಾದಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ನಮ್ಮ ಜೀವಿತಗಳನ್ನು ಸರಿಹೊಂದಿಸಿಕೊಳ್ಳಲು ಸಾಧ್ಯಮಾಡಿದೆ. ಪೇತ್ರನು ವಾದಿಸುವಂತೆ, “ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು” ನಾವು ಎಣಿಸಿಕೊಳ್ಳಬಾರದೊ? (2 ಪೇತ್ರ 3:15) ಆದರೆ, ದೇವರ ತಾಳ್ಮೆಯಲ್ಲಿ ಮತ್ತೊಂದು ಅಂಶವಿದೆ.
ಪೂರ್ಣಸಿದ್ಧಿಗೆ ಬರಬೇಕಾದ ಅಪರಾಧ
ಮಾನವಕುಲದೊಂದಿಗೆ ದೇವರು ಗತಕಾಲದಲ್ಲಿ ವ್ಯವಹರಿಸಿದ ರೀತಿಯನ್ನು ನಾವು ಅಭ್ಯಸಿಸುವಾಗ, ಸುಧಾರಣೆಯ ಯಾವ ನಿರೀಕ್ಷೆಯೂ ಇಲ್ಲದ ವರೆಗೆ ಆತನು ನ್ಯಾಯತೀರ್ಪನ್ನು ತಡೆದುಹಿಡಿದಿದ್ದನೆಂದು ನಾವು ಗಮನಿಸುತ್ತೇವೆ. ಉದಾಹರಣೆಗೆ, ಕಾನಾನ್ಯರ ವಿರುದ್ಧ ದೇವರ ನ್ಯಾಯತೀರ್ಪಿನ ವಿಷಯದಲ್ಲಿ, ಬಹಳ ಮುಂಚಿತವಾಗಿಯೇ ಆತನು ಅಬ್ರಹಾಮನಿಗೆ ಅವರ ಪಾಪಗಳ ಕುರಿತು ತಿಳಿಸಿದ್ದನು. ಆದರೆ ಆ ನ್ಯಾಯತೀರ್ಪನ್ನು ಜಾರಿಗೊಳಿಸುವ ತಕ್ಕ ಕಾಲ ಇನ್ನೂ ಬಂದಿರಲಿಲ್ಲ. ಏಕೆ? ಏಕೆಂದರೆ “ಅಮೋರಿಯರ [ಕಾನಾನ್ಯರ] ಅಪರಾಧವು ಇನ್ನೂ ಪೂರ್ಣಸ್ಥಿತಿಗೆ [ಬಂದಿರಲಿಲ್ಲ],” ಎಂದು ಬೈಬಲು ಹೇಳುತ್ತದೆ ಅಥವಾ ನಾಕ್ಸ್ರ ತರ್ಜುಮೆಯು ಹೇಳುವಂತೆ “ಅಮೋರಿಯರ ದುಷ್ಟತನವು ಅದರ ಪೂರ್ಣಹಂತವನ್ನು ತಲಪಿರಲಿಲ್ಲ.”—ಆದಿಕಾಂಡ 15:16.a
ಸುಮಾರು 400 ವರ್ಷಗಳ ನಂತರ ದೇವರ ನ್ಯಾಯತೀರ್ಪು ಬಂದಾಗ, ಅಬ್ರಹಾಮನ ಸಂತತಿಯವರಾದ ಇಸ್ರಾಯೇಲ್ಯರು ಆ ದೇಶವನ್ನು ಸ್ವಾಧೀನಪಡಿಸಿಕೊಂಡರು. ತಮ್ಮ ಮನೋಭಾವ ಹಾಗೂ ಕ್ರಿಯೆಗಳ ಕಾರಣ ರಹಾಬಳು ಮತ್ತು ಗಿಬ್ಯೋನ್ಯರಂತಹ ಕೆಲವೇ ಕಾನಾನ್ಯರು ರಕ್ಷಿಸಲ್ಪಟ್ಟರೂ, ಆಧುನಿಕ ಪ್ರಾಕ್ತನಶಾಸ್ತ್ರದ ಕಂಡುಹಿಡಿತಗಳು ತೋರಿಸುವಂತೆ ಹೆಚ್ಚಿನವರು ಅಶುದ್ಧತೆಯ ಗರಿಷ್ಠ ಮಟ್ಟವನ್ನು ತಲಪಿದ್ದರು. ಅವರು ಲಿಂಗಪೂಜೆ, ವೇಶ್ಯಾವಾಟಿಕೆ, ಮತ್ತು ಶಿಶು ಬಲಿಯ ಆಚರಣೆಯಲ್ಲಿ ತೊಡಗಿದ್ದರು. ಹ್ಯಾಲಿ ಅವರ ಬೈಬಲ್ ಕೈಪಿಡಿ ಹೇಳುವುದು: “ಕಾನಾನ್ಯ ನಗರಗಳ ಅವಶೇಷಗಳನ್ನು ಅಗೆದುನೋಡಿದ ಪ್ರಾಕ್ತನಶಾಸ್ತ್ರಜ್ಞರು, ದೇವರು ಅವರನ್ನು ಏಕೆ ಈ ಮೊದಲೇ ನಾಶಗೊಳಿಸಲಿಲ್ಲ ಎಂಬುದಾಗಿ ವಿಸ್ಮಯಪಡುತ್ತಾರೆ.” ಕೊನೆಗೆ, ಕಾನಾನ್ಯರ ‘ಪಾಪದ ಮಟ್ಟವು ಪೂರ್ಣವಾಗಿತ್ತು’, ಅವರ ದುಷ್ಟತನವು “ತನ್ನ ಪೂರ್ಣಸ್ಥಿತಿಯನ್ನು ತಲಪಿತ್ತು.” ಸರಿಯಾದ ಮನೋಭಾವವನ್ನು ಪ್ರದರ್ಶಿಸಿದ ಕೆಲವರನ್ನು ಉಳಿಸಿ, ಇಡೀ ದೇಶವನ್ನು ದೇವರು ಶುದ್ಧಗೊಳಿಸಿದಾಗ, ಆತನು ಅನ್ಯಾಯಗಾರನು ಎಂಬ ಆರೋಪವನ್ನು ಯಾರೂ ಹೊರಿಸಲು ಸಾಧ್ಯವಿರಲಿಲ್ಲ.
ನೋಹನ ದಿನದಲ್ಲೂ ನಾವು ತದ್ರೀತಿಯ ದೃಶ್ಯವನ್ನು ನೋಡುತ್ತೇವೆ. ಜಲಪ್ರಳಯದ ಮುಂಚೆ ಜನರು ದುಷ್ಟರಾಗಿದ್ದರೆಂಬ ವಾಸ್ತವಾಂಶದ ಎದುರಿನಲ್ಲೂ, ಅವರ ಕಾಲವು ಇನ್ನೂ 120 ವರ್ಷಗಳ ವರೆಗೆ ಮುಂದುವರಿಯುವುದೆಂದು ದೇವರು ಕರುಣೆಯಿಂದಲೇ ನಿರ್ಧರಿಸಿದನು. ಆ ಸಮಯದಲ್ಲಿ ನೋಹನು “ಸುನೀತಿಯನ್ನು ಸಾರುವವ”ನಾದನು. (2 ಪೇತ್ರ 2:5) ಕಾಲವು ಗತಿಸಿದಂತೆ, ಅವರ ದುಷ್ಟತನವು ಪಕ್ವಗೊಂಡಿತೆಂಬುದು ಸ್ಪಷ್ಟ. “ದೇವರು ಲೋಕವನ್ನು ನೋಡಿದಾಗ ಅದು ಕೆಟ್ಟು ಹೋಗಿತ್ತು; ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.” (ಆದಿಕಾಂಡ 6:3, 12) ಅವರ ‘ಪಾಪದ ಮಟ್ಟವು ಪೂರ್ಣಗೊಂಡಿತ್ತು.’ ಕಾಲವು ಗತಿಸಿದಂತೆ ಅವರ ತಪ್ಪಾದ ಪ್ರವೃತ್ತಿಗಳು ತುತ್ತತುದಿಯನ್ನು ತಲಪಿದವು. ದೇವರು ಕ್ರಿಯೆಗೈದಾಗ ಆತನು ಸಂಪೂರ್ಣವಾಗಿ ನ್ಯಾಯವಂತನಾಗಿದ್ದನು. ಎಂಟು ಜನರು ಮಾತ್ರ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು, ಮತ್ತು ಅವರನ್ನು ಆತನು ರಕ್ಷಿಸಿದನು.
ದೇವರು ಇಸ್ರಾಯೇಲ್ ಜನಾಂಗವನ್ನು ಉಪಚರಿಸಿದ ರೀತಿಯಲ್ಲೂ ನಾವು ಇದೇ ನಮೂನೆಯನ್ನು ಕಾಣುತ್ತೇವೆ. ಅವರು ಅಪನಂಬಿಗಸ್ತರಾಗಿ ಮತ್ತು ನೀತಿಭ್ರಷ್ಟರಾಗಿ ನಡೆದರೂ, ದೇವರು ನೂರಾರು ವರ್ಷಗಳ ಕಾಲ ಅವರೊಂದಿಗೆ ತಾಳ್ಮೆಯಿಂದಿದ್ದನು. ದಾಖಲೆಯು ಹೇಳುವುದು: “ಯೆಹೋವನು ತನ್ನ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ ಸಾವಕಾಶಮಾಡದೆ ತನ್ನ ದೂತರ ಮುಖಾಂತರವಾಗಿ ಅವರನ್ನು ಎಚ್ಚರಿಸುತ್ತಾ ಇದ್ದರೂ ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅವರ ತಾಪವು ಆರಿಹೋಗಲೇ ಇಲ್ಲ.” (2 ಪೂರ್ವಕಾಲವೃತ್ತಾಂತ 36:15, 16) ಸುಧಾರಣೆಯು ಇನ್ನುಮುಂದೆ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಜನರು ತಲಪಿದ್ದರು. ಯೆರೆಮೀಯ ಮತ್ತು ಇನ್ನಿತರರು ಮಾತ್ರ ರಕ್ಷಿಸಲ್ಪಡಬಹುದಿತ್ತು. ದೇವರು ಅಂತಿಮವಾಗಿ ಉಳಿದವರ ಮೇಲೆ ನ್ಯಾಯತೀರ್ಪನ್ನು ತಂದಾಗ, ಆತನನ್ನು ಅನ್ಯಾಯಗಾರನು ಎಂದು ಯಾರೂ ಕರೆಯಲು ಸಾಧ್ಯವಿರಲಿಲ್ಲ.
ದೇವರು ಕ್ರಿಯೆಗೈಯುವ ಕಾಲವು ಹತ್ತಿರವಿದೆ
ಕಾಲವು ಪಕ್ವವಾಗುವ ತನಕ ದೇವರು ಈ ಪ್ರಚಲಿತ ವಿಷಯಗಳ ವ್ಯವಸ್ಥೆಯ ಮೇಲೆ ತನ್ನ ನ್ಯಾಯತೀರ್ಪನ್ನು ತಡೆದುಹಿಡಿದಿರುತ್ತಾನೆಂದು ಈ ಉದಾಹರಣೆಗಳಿಂದ ನಾವು ನೋಡಸಾಧ್ಯವಿದೆ. ಇದು ದೇವರ ಸಾಂಕೇತಿಕ ವಧಕಾರನಿಗೆ ಕೊಡಲ್ಪಟ್ಟ ಆಜ್ಞೆಯಿಂದ ತಿಳಿದುಬರುತ್ತದೆ: “ನಿನ್ನ ಹದವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷೇಗೊಂಚಲುಗಳನ್ನು ಕೊಯ್ಯಿ; ಅದರ ಹಣ್ಣುಗಳು ಪೂರಾ ಮಾಗಿವೆ . . . ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯು ದ್ರಾಕ್ಷೇಬಳ್ಳಿಯ ಹಣ್ಣನ್ನು ಕೊಯಿದು ದೇವರ ರೌದ್ರವೆಂಬ ದೊಡ್ಡ ತೊಟ್ಟಿಯಲ್ಲಿ ಹಾಕಿದನು.” ಮಾನವಕುಲದ ದುಷ್ಟತನವು “ಮಾಗಿ”ಹೋಗಿತ್ತು, ಅಂದರೆ ಅದು ಸುಧಾರಣೆಯ ಸಂಭವನೀಯತೆಯ ಹಂತವನ್ನು ಮೀರಿತ್ತು ಎಂಬುದನ್ನು ಗಮನಿಸಿರಿ. ದೇವರು ನ್ಯಾಯತೀರಿಸುವಾಗ, ಆತನ ಹಸ್ತಕ್ಷೇಪವು ನ್ಯಾಯವಾದದ್ದಾಗಿ ಇರುವುದೆಂಬ ವಿಷಯದಲ್ಲಿ ಯಾವ ಸಂದೇಹವೂ ಇರುವುದಿಲ್ಲ.—ಪ್ರಕಟನೆ 14:18, 19.
ಮೇಲಿನ ವಿಷಯವನ್ನು ಪರಿಗಣಿಸುವಾಗ, ಈ ಲೋಕದ ವಿರುದ್ಧ ದೇವರ ನ್ಯಾಯತೀರ್ಪು ಹತ್ತಿರವಿರಬೇಕೆಂಬುದು ತೀರ ಸ್ಪಷ್ಟವಾಗಿದೆ. ಏಕೆಂದರೆ ಗತಕಾಲದಲ್ಲಿ ದೇವರ ನ್ಯಾಯತೀರ್ಪನ್ನು ಬರಮಾಡಿಕೊಂಡ ವೈಶಿಷ್ಟ್ಯಗಳನ್ನು ಇಂದು ನಾವು ಈ ಲೋಕದಲ್ಲಿ ಕಾಣುತ್ತೇವೆ. ನೋಹನ ದಿನದ ಪ್ರಳಯದ ಮುಂಚೆ ಇದ್ದಂತೆಯೇ, ಇಡೀ ಲೋಕವು ಹಿಂಸಾಚಾರದಿಂದ ತುಂಬಿರುವುದನ್ನು ನಾವು ನೋಡುತ್ತೇವೆ. ಜನರ ಮನೋಭಾವವು ಆದಿಕಾಂಡ 6:5ರಲ್ಲಿ ವರ್ಣಿಸಲಾದ ವಿಷಯಕ್ಕೆ ಹೆಚ್ಚೆಚ್ಚು ಅನುಗುಣವಾಗುತ್ತಿದೆ: “[ಮನುಷ್ಯರು] ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿ”ದೆ. ಕಾನಾನ್ಯರ ವಿರುದ್ಧ ದೇವರ ನ್ಯಾಯತೀರ್ಪನ್ನು ತಂದ ಘೋರ ಪಾಪಗಳು ಇಂದು ಸರ್ವಸಾಮಾನ್ಯವಾಗಿವೆ.
ವಿಶೇಷವಾಗಿ ಒಂದನೆಯ ಜಾಗತಿಕ ಯುದ್ಧದಂದಿನಿಂದ, ಮಾನವಕುಲವು ಎದೆಗುಂದಿಸುವ ಬದಲಾವಣೆಗಳನ್ನು ಅನುಭವಿಸಿದೆ. ಭೂಮಿಯು ಕೋಟಿಗಟ್ಟಲೆ ಜನರ ರಕ್ತದಿಂದ ತೋಯ್ದಿರುವುದನ್ನು ಅದು ಕಂಡಿದೆ. ಯುದ್ಧ, ಜನಹತ್ಯೆ, ಭಯೋತ್ಪಾದನೆ, ಪಾತಕ, ಮತ್ತು ನಿಯಮರಾಹಿತ್ಯವು ಲೋಕವ್ಯಾಪಕವಾಗಿ ತಲೆದೋರಿವೆ. ಕ್ಷಾಮ, ರೋಗ, ಮತ್ತು ಅನೈತಿಕತೆ ನಮ್ಮ ಭೂಗೋಲವನ್ನು ಬೆನ್ನಟ್ಟುತ್ತಿವೆ. “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು” ಯೇಸು ಹೇಳಿದ ಆ ದುಷ್ಟ ಸಂತತಿಯ ಮಧ್ಯೆ ನಾವು ಜೀವಿಸುತ್ತೇವೆಂದು ಪ್ರಮಾಣಗಳು ತೋರಿಸುತ್ತವೆ. (ಮತ್ತಾಯ 24:34) ಲೋಕವು “ಪಾಪದ ಮಟ್ಟವನ್ನು” ಈಗ ಪೂರ್ಣಗೊಳಿಸುತ್ತಿದೆ. “ಭೂಮಿಯ ದ್ರಾಕ್ಷೇಗೊಂಚಲುಗಳು” ಕೊಯ್ಲಿಗಾಗಿ ಮಾಗುತ್ತಿವೆ.
ನೀವು ಕ್ರಿಯೆಗೈಯಬೇಕಾದ ಕಾಲವು ಇದೇ ಆಗಿದೆ
ನ್ಯಾಯತೀರ್ಪಿನ ಕಾಲವು ಸಮೀಪಿಸಿದಂತೆ, ಎರಡು ರೀತಿಯ ಮಾಗುವಿಕೆಯು ಸಂಭವಿಸುತ್ತದೆಂದು ಹೇಳುವಂತೆ ಅಪೊಸ್ತಲ ಯೋಹಾನನಿಗೆ ತಿಳಿಸಲಾಯಿತು. ಒಂದು ಕಡೆಯಲ್ಲಿ, “ಅನ್ಯಾಯ ಮಾಡುವವನು ಇನ್ನೂ ಅನ್ಯಾಯಮಾಡಲಿ; ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆಮಾಡಿಕೊಳ್ಳಲಿ.” ಮತ್ತೊಂದು ಕಡೆಯಲ್ಲಿ, “ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರಮಾಡಿಕೊಳ್ಳಲಿ.” (ಪ್ರಕಟನೆ 22:10, 11) ಈ ಎರಡನೆಯ ಕಾರ್ಯವು ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುವ ಲೋಕವ್ಯಾಪಕ ಬೈಬಲಿನ ಶೈಕ್ಷಣಿಕ ಕೆಲಸದ ಸಂಬಂಧದಲ್ಲಿ ನೆರವೇರುತ್ತಿದೆ. ಈ ಕೆಲಸದ ಉದ್ದೇಶವು, ಅವರಿಗೆ ದೇವರು ಅಪೇಕ್ಷಿಸುವುದನ್ನು ಕಲಿಸಿಕೊಡುವುದಾಗಿದೆ. ಹೀಗೆ, ಜನರು ನಿತ್ಯಜೀವವನ್ನು ಪಡೆದುಕೊಳ್ಳಲು ಯೋಗ್ಯರೆಂದು ತೀರ್ಮಾನಿಸಲ್ಪಡಬಲ್ಲರು. ಈ ಚಟುವಟಿಕೆಯು ಈಗ ಸುಮಾರು 87,000 ಸಭೆಗಳ ಮೂಲಕ 233 ದೇಶಗಳಲ್ಲಿ ನಡೆಯುತ್ತಿದೆ.
ದೇವರು ವಿಳಂಬಿಸುವವನಲ್ಲ. ಜನರು ತನ್ನ ವಾಗ್ದಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ “ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು” (NW) ಬೇಕಾದ ಸಮಯವನ್ನು ಆತನು ತಾಳ್ಮೆಯಿಂದ ಅನುಮತಿಸಿದ್ದಾನೆ. (ಎಫೆಸ 4:24) ಇಂದು, ಸತತವಾಗಿ ಹದಗೆಡುತ್ತಿರುವ ಲೋಕದ ಪರಿಸ್ಥಿತಿಗಳ ಎದುರಿನಲ್ಲೂ ದೇವರು ಇನ್ನೂ ಕಾಯುತ್ತಿದ್ದಾನೆ. ಅನಂತ ಜೀವನಕ್ಕೆ ನಡೆಸುವ ಜ್ಞಾನವನ್ನು ತಮ್ಮ ನೆರೆಯವರೊಂದಿಗೆ ಹಂಚಿಕೊಳ್ಳಲು, ತಮ್ಮಿಂದ ಸಾಧ್ಯವಾದುದನ್ನು ಲೋಕದ ಸುತ್ತಲೂ ಇರುವ ಯೆಹೋವನ ಸಾಕ್ಷಿಗಳು ಮಾಡುತ್ತಿದ್ದಾರೆ. (ಯೋಹಾನ 17:3, 17) ಸಂತೋಷಕರವಾಗಿ, ಪ್ರತಿ ವರ್ಷ ಸುಮಾರು 3,00,000 ಜನರು ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ.
ನಿತ್ಯಜೀವವನ್ನು ಪರಿಗಣಿಸುವಾಗ, ಇದು ಕಾಯುವ ಸಮಯವಲ್ಲ, ಕ್ರಿಯೆಗೈಯುವ ಸಮಯವಾಗಿದೆ. ಬಹಳ ಬೇಗನೆ ನಾವು ಯೇಸುವಿನ ವಾಗ್ದಾನದ ನೆರವೇರಿಕೆಯನ್ನು ನೋಡಲಿದ್ದೇವೆ: “ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.”—ಯೋಹಾನ 11:26.
[ಅಧ್ಯಯನ ಪ್ರಶ್ನೆಗಳು]
a ದ ಸಾನ್ಸೀನೊ ಖುಮಾಷ್ನಲ್ಲಿ ಈ ವಚನದ ಪಾದಟಿಪ್ಪಣಿಯು ಹೇಳುವುದು: “ಸರ್ವನಾಶಕ್ಕೆ ಯೋಗ್ಯವಾಗಬೇಕಾದರೆ, ರಾಷ್ಟ್ರವೊಂದರ ಪಾಪದ ಮಟ್ಟವು ಪೂರ್ಣಗೊಳ್ಳುವ ತನಕ ದೇವರು ಅದನ್ನು ದಂಡಿಸುವುದಿಲ್ಲ.”
[ಪುಟ 6 ರಲ್ಲಿರುವ ಚಿತ್ರ]
ಭೂಮಿಯ ದ್ರಾಕ್ಷೇಗೊಂಚಲು ಮಾಗಿದಾಗ ಕುಡುಗೋಲನ್ನು ಹಾಕಿ ಕೊಯ್ಯುವಂತೆ ದೇವರ ವಧಕಾರನಿಗೆ ಹೇಳಲಾಯಿತು
[ಪುಟ 7 ರಲ್ಲಿರುವ ಚಿತ್ರ]
ಜನರು ದೇವರ ಅನಂತ ಆಶೀರ್ವಾದಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಸಹಾಯ ಮಾಡುತ್ತಿದ್ದಾರೆ