ಪಿಶಾಚನಿಗೆ ಅವಕಾಶಕೊಡಬೇಡಿರಿ
“ಸೈತಾನನಿಗೆ [ಪಿಶಾಚನಿಗೆ] ಅವಕಾಶಕೊಡಬೇಡಿರಿ.”—ಎಫೆಸ 4:27.
ಪಿಶಾಚನು ಕೊಂಬುಗಳು ಮತ್ತು ಸೀಳಿದ ಕಾಲ್ಗೊರಸುಗಳುಳ್ಳ, ಕೆಂಪು ಬಟ್ಟೆ ಧರಿಸಿರುವ, ದುಷ್ಟರನ್ನು ಅಗ್ನಿಮಯ ನರಕಕ್ಕೆ ಎಸೆಯಲು ಕವೆಗೋಲು ಉಪಯೋಗಿಸುವ ಜೀವಿಯೆಂದು ಶತಮಾನಗಳಿಂದಲೂ ಅನೇಕರು ಅಭಿಪ್ರಯಿಸಿದ್ದಾರೆ. ಆದರೆ ಬೈಬಲ್ ಆ ವಿಚಾರವನ್ನು ಬೆಂಬಲಿಸುವುದಿಲ್ಲ. ನಿಸ್ಸಂದೇಹವಾಗಿಯೂ ಇಂತಹ ತಪ್ಪು ಊಹೆಗಳು, ಕೋಟ್ಯಂತರ ಜನರು ಪಿಶಾಚನ ಅಸ್ತಿತ್ವವನ್ನು ಸಂಶಯಿಸುವಂತೆ ಇಲ್ಲವೆ ಆ ಪದವು ಕೆಟ್ಟದ್ದರ ಮೂಲಕಾರಣವೊಂದಕ್ಕೆ ಮಾತ್ರ ಅನ್ವಯಿಸುತ್ತದೆಂದು ಭಾವಿಸುವಂತೆ ಮಾಡಿವೆ.
2 ಪಿಶಾಚನ ಅಸ್ತಿತ್ವಕ್ಕೆ ಪ್ರತ್ಯಕ್ಷಸಾಕ್ಷಿಗಳ ರುಜುವಾತನ್ನೂ ಸ್ಪಷ್ಟವಾದ ಪ್ರಮಾಣವನ್ನೂ ಬೈಬಲ್ ಕೊಡುತ್ತದೆ. ಯೇಸು ಕ್ರಿಸ್ತನು ಅವನನ್ನು ಸ್ವರ್ಗೀಯ ಆತ್ಮಜೀವಿಗಳ ಲೋಕದಲ್ಲಿ ಕಂಡಿದ್ದನು ಮತ್ತು ಈ ಭೂಮಿಯಲ್ಲಿ ಅವನೊಂದಿಗೆ ಮಾತಾಡಿದನು. (ಯೋಬ 1:6; ಮತ್ತಾಯ 4:4-11) ಶಾಸ್ತ್ರಗಳು ಪಿಶಾಚನೆಂಬ ಈ ಆತ್ಮಜೀವಿಯ ಮೂಲ ಹೆಸರನ್ನು ತಿಳಿಸುವುದಿಲ್ಲವಾದರೂ, ಇವನು ದೇವರ ಮೇಲೆ ಮಿಥ್ಯಾಪವಾದವನ್ನು ಹೊರಿಸಿರುವುದರಿಂದ ಇವನನ್ನು ಪಿಶಾಚನು (ಅಂದರೆ “ಮಿಥ್ಯಾಪವಾದಿ” ಇಲ್ಲವೆ ಚಾಡಿಕೋರ) ಎಂದು ಕರೆಯುತ್ತವೆ. ಇವನು ಯೆಹೋವನನ್ನು ಪ್ರತಿಭಟಿಸುವುದರಿಂದ ಇವನನ್ನು ಸೈತಾನನು (ಅಂದರೆ “ಪ್ರತಿಭಟನಕಾರ”) ಎಂದೂ ಕರೆಯಲಾಗಿದೆ. ಹವ್ವಳನ್ನು ವಂಚಿಸಲು ಈ ಪಿಶಾಚನಾದ ಸೈತಾನನು ಸರ್ಪವನ್ನು ಬಳಸಿದ್ದರಿಂದ ಅವನನ್ನು “ಪುರಾತನ ಸರ್ಪ”ವೆಂದೂ ಸೂಚಿಸಲಾಗಿದೆ. (ಪ್ರಕಟನೆ 12:9; 1 ತಿಮೊಥೆಯ 2:14) ಅವನು “ಕೆಡುಕ”ನೆಂದೂ ಪ್ರಸಿದ್ಧನಾಗಿದ್ದಾನೆ.—ಮತ್ತಾಯ 6:13, Bsi Reference edition ಪಾದಟಿಪ್ಪಣಿ.a
3 ಯೆಹೋವನ ಸೇವಕರಾಗಿರುವ ನಾವು ಒಬ್ಬನೇ ಸತ್ಯದೇವರ ಪ್ರಧಾನಶತ್ರುವಾದ ಸೈತಾನನನ್ನು ಯಾವ ವಿಧದಲ್ಲಿಯೂ ಹೋಲಲು ಬಯಸುವುದಿಲ್ಲ. ಆದುದರಿಂದ, ‘ಪಿಶಾಚನಿಗೆ ಅವಕಾಶಕೊಡಬೇಡಿರಿ’ ಎಂಬ ಅಪೊಸ್ತಲ ಪೌಲನ ಸಲಹೆಗೆ ನಾವು ಕಿವಿಗೊಡಲೇಬೇಕು. (ಎಫೆಸ 4:27) ಹಾಗಾದರೆ, ನಾವು ಅನುಕರಿಸಲೇಬಾರದಾದ ಸೈತಾನನ ಕೆಲವು ಸ್ವಭಾವಲಕ್ಷಣಗಳಾವುವು?
ಮಹಾ ಚಾಡಿಕೋರನನ್ನು ಅನುಕರಿಸಬೇಡಿ
4 ಈ “ಕೆಡುಕನು” ಚಾಡಿಕೋರನಾಗಿರುವುದರಿಂದ ಪಿಶಾಚನೆಂದು ಕರೆಯಲ್ಪಡಲು ಅರ್ಹನಾಗಿದ್ದಾನೆ. ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೇಳಲಾಗುವ ತಪ್ಪಾದ, ದುರುದ್ದೇಶದ ಮತ್ತು ಮಾನಹಾನಿಯ ಹೇಳಿಕೆಯೇ ಚಾಡಿಯಾಗಿದೆ. ದೇವರು ಆದಾಮನಿಗೆ ಆಜ್ಞಾಪಿಸಿದ್ದು: “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:17) ಹವ್ವಳಿಗೆ ಸಹ ಇದು ತಿಳಿಸಲ್ಪಟ್ಟಿತ್ತು. ಆದರೆ ಪಿಶಾಚನು ಒಂದು ಸರ್ಪದ ಮೂಲಕ ಅವಳಿಗೆ ಹೇಳಿದ್ದು: “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” (ಆದಿಕಾಂಡ 3:4, 5) ಇದು ಯೆಹೋವ ದೇವರ ವಿರುದ್ಧ ಹೇಳಲಾದ ದುರುದ್ದೇಶಭರಿತ ಚಾಡಿಯಾಗಿತ್ತು!
5 “ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು” ಎಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸಲಾಗಿತ್ತು. (ಯಾಜಕಕಾಂಡ 19:16) ತನ್ನ ಸಮಯದಲ್ಲಿದ್ದ ಒಬ್ಬ ಚಾಡಿಕೋರನ ಕುರಿತು ಅಪೊಸ್ತಲ ಯೋಹಾನನು ಹೇಳಿದ್ದು: “ಸಭೆಗೆ ಕೆಲವು ಮಾತುಗಳನ್ನು ಬರೆದಿದ್ದೆನು; ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪುಕೊಡುವೆನು. ಅವನು ಹರಟೆಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟಕೆಟ್ಟ ಮಾತುಗಳನ್ನಾಡುತ್ತಾನೆ.” (3 ಯೋಹಾನ 9, 10) ದಿಯೊತ್ರೇಫನು ಯೋಹಾನನ ವಿಷಯದಲ್ಲಿ ಚಾಡಿಹೇಳುತ್ತಿದ್ದುದರಿಂದ ಅದಕ್ಕೆ ಲೆಕ್ಕಕೊಡಲು ಜವಾಬ್ದಾರನಾಗಿದ್ದನು. ನಿಷ್ಠಾವಂತನಾದ ಯಾವ ಕ್ರೈಸ್ತನು ದಿಯೊತ್ರೇಫನಂತಿದ್ದು, ಮಹಾ ಚಾಡಿಕೋರನಾಗಿರುವ ಸೈತಾನನನ್ನು ಅನುಕರಿಸಲು ಬಯಸಾನು?
6 ಯೆಹೋವನ ಸೇವಕರ ವಿರುದ್ಧ ಅನೇಕವೇಳೆ ಚಾಡಿಯ ಹೇಳಿಕೆಗಳನ್ನು ಮತ್ತು ಮಿಥ್ಯಾಪವಾದಗಳನ್ನು ಹೊರಿಸಲಾಗುತ್ತದೆ. “ಮಹಾಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು [ಯೇಸುವಿನ] ಮೇಲೆ ಬಹು ಬಲವಾಗಿ ದೂರು ಹೇಳುತ್ತಿದ್ದರು.” (ಲೂಕ 23:10) ಮಹಾಯಾಜಕ ಅನನೀಯ ಮತ್ತಿತರರು ಪೌಲನನ್ನು ತಪ್ಪಾಗಿ ದೂರಿದರು. (ಅ. ಕೃತ್ಯಗಳು 24:1-8) ಮತ್ತು ಬೈಬಲು ಸೈತಾನನನ್ನು, “ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು” ಎಂದು ಕರೆಯುತ್ತದೆ. (ಪ್ರಕಟನೆ 12:10) ಯಾರ ವಿರುದ್ಧ ತಪ್ಪಾಗಿ ದೂರು ಹೇಳಲಾಗುತ್ತಿದೆಯೊ ಆ ಸಹೋದರರು, ಈ ಕಡೇ ದಿವಸಗಳಲ್ಲಿ ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರಾಗಿದ್ದಾರೆ.
7 ಕ್ರೈಸ್ತನಾಗಿರುವ ಯಾವನೂ ಯಾರ ಮೇಲೆಯೂ ಚಾಡಿಹೇಳಬಾರದು ಅಥವಾ ಸುಳ್ಳು ಅಪವಾದಗಳನ್ನು ಹೊರಿಸಬಾರದು. ಆದರೆ ಒಂದುವೇಳೆ ನಮ್ಮ ಬಳಿ ಎಲ್ಲ ನಿಜತ್ವಗಳು ಇಲ್ಲದೆ ನಾವು ಯಾರ ವಿಷಯದಲ್ಲಾದರೂ ಸಾಕ್ಷಿ ಹೇಳುವಾಗ ಹಾಗಾಗಲು ಸಾಧ್ಯವಿದೆ. ಮೋಶೆಯ ಧರ್ಮಶಾಸ್ತ್ರಾನುಸಾರ, ಬೇಕುಬೇಕೆಂದು ಸುಳ್ಳುಸಾಕ್ಷಿ ನೀಡುವಲ್ಲಿ ಆ ಅಪವಾದಿಗೆ ಮರಣಶಿಕ್ಷೆಯಾಗಸಾಧ್ಯವಿತ್ತು. (ವಿಮೋಚನಕಾಂಡ 20:16; ಧರ್ಮೋಪದೇಶಕಾಂಡ 19:15-19) ಇದಲ್ಲದೆ, ಯೆಹೋವನಿಗೆ ಅಸಹ್ಯವಾಗಿರುವ ವಿಷಯಗಳಲ್ಲಿ, “ಅಸತ್ಯವಾಡುವ ಸುಳ್ಳುಸಾಕ್ಷಿ” ಸೇರಿದೆ. (ಜ್ಞಾನೋಕ್ತಿ 6:16-19) ಹೀಗಿರುವುದರಿಂದ, ನಾವು ನಿಶ್ಚಯವಾಗಿಯೂ ಪ್ರಧಾನ ಚಾಡಿಕೋರನನ್ನು ಮತ್ತು ಮಿಥ್ಯಾಪವಾದಿಯನ್ನು ಅನುಕರಿಸಬಾರದು.
ಆದಿ ಕೊಲೆಗಾರನ ಮಾರ್ಗಗಳನ್ನು ತ್ಯಜಿಸಿರಿ
8 ಪಿಶಾಚನು ಒಬ್ಬ ಕೊಲೆಗಾರನು. “ಅವನು ಆದಿಯಿಂದಲೂ ಕೊಲೆಗಾರನು” ಎಂದನು ಯೇಸು. (ಯೋಹಾನ 8:44) ಆದಾಮಹವ್ವರನ್ನು ದೇವರಿಂದ ದೂರ ತೊಲಗಿಸಿದಂಥ ತನ್ನ ಪ್ರಥಮ ಕೃತ್ಯ ಮೊದಲ್ಗೊಂಡು ಸೈತಾನನೊಬ್ಬ ಕೊಲೆಗಾರನಾಗಿರುತ್ತಾನೆ. ಅವನು ಪ್ರಥಮ ಮಾನವ ಜೊತೆಯ ಮೇಲೆ ಮತ್ತು ಅವರ ಸಂತಾನದ ಮೇಲೆ ಮರಣವನ್ನು ತಂದೊಡ್ಡಿದನು. (ರೋಮಾಪುರ 5:12) ಈ ಕೃತ್ಯವನ್ನು ಒಬ್ಬ ವ್ಯಕ್ತಿ ಮಾಡಿದನೆಂದು ಹೇಳಬಹುದೇ ಹೊರತು ಕೆಟ್ಟದ್ದರ ಬರಿಯ ಮೂಲಕಾರಣವು ಮಾಡಿತೆಂದು ಹೇಳಲಾಗದು ಎಂಬುದನ್ನು ಗಮನಿಸತಕ್ಕದ್ದು.
9 ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದಶಾಜ್ಞೆಗಳಲ್ಲಿ ಒಂದು, “ನರಹತ್ಯಮಾಡಬಾರದು” ಎಂದಾಗಿತ್ತು. (ಧರ್ಮೋಪದೇಶಕಾಂಡ 5:17) ಕ್ರೈಸ್ತರನ್ನು ಸಂಬೋಧಿಸುತ್ತ ಅಪೊಸ್ತಲ ಪೇತ್ರನು, ‘ನಿಮ್ಮಲ್ಲಿ ಯಾವನೂ ಕೊಲೆಗಾರನು’ ಆಗಿರಬಾರದು ಎಂದು ಬರೆದನು. (1 ಪೇತ್ರ 4:15) ಹೀಗಿರುವುದರಿಂದ ಯೆಹೋವನ ಸೇವಕರಾಗಿ ನಾವು ಯಾರನ್ನೂ ಹತಿಸದಿರುವೆವು. ಆದರೆ, ನಾವು ಜೊತೆ ಕ್ರೈಸ್ತನೊಬ್ಬನನ್ನು ದ್ವೇಷಿಸಿ, ಅವನು ಸತ್ತಿದ್ದರೆ ಒಳ್ಳೇದಿತ್ತು ಎಂದು ಬಯಸುವಲ್ಲಿ ನಾವು ದೇವರ ಮುಂದೆ ಅಪರಾಧಿಗಳಾಗುವೆವು. “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾನ 3:15) “ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು” ಎಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸಲಾಗಿತ್ತು. (ಯಾಜಕಕಾಂಡ 19:17) ಆದುದರಿಂದ, ನಮ್ಮ ಮತ್ತು ಜೊತೆ ವಿಶ್ವಾಸಿಯೊಬ್ಬನ ಮಧ್ಯೆ ಸಮಸ್ಯೆಯೇಳುವಲ್ಲಿ, ಕೊಲೆಗಾರನಾದ ಸೈತಾನನು ನಮ್ಮ ಕ್ರೈಸ್ತ ಐಕ್ಯವನ್ನು ನಾಶಗೊಳಿಸದಂತೆ, ನಾವು ತಡಮಾಡದೆ ಅದನ್ನು ಒಡನೆ ಪರಿಹರಿಸೋಣ.—ಲೂಕ 17:3, 4.
ಪ್ರಧಾನ ಸುಳ್ಳುಗಾರನ ವಿರುದ್ಧ ಸ್ಥಿರ ನಿಲ್ಲಿರಿ
10 ಸೈತಾನನು ಸುಳ್ಳುಗಾರನು. “ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ” ಎಂದನು ಯೇಸು. (ಯೋಹಾನ 8:44) ಸೈತಾನನು ಹವ್ವಳಿಗೆ ಸುಳ್ಳನ್ನು ಹೇಳಿದನು. ಯೇಸುವಾದರೋ ಸತ್ಯಕ್ಕೆ ಸಾಕ್ಷಿಕೊಡುವುದಕ್ಕೋಸ್ಕರ ಭೂಮಿಗೆ ಬಂದನು. (ಯೋಹಾನ 18:37) ಕ್ರಿಸ್ತನ ಅನುಯಾಯಿಗಳಾಗಿ ನಾವು ಪಿಶಾಚನಿಗೆದುರಾಗಿ ನಿಲ್ಲಬೇಕಾದರೆ, ನಾವು ಸುಳ್ಳಾಡಿ, ವಂಚಿಸಿ ಹಾಗೆ ಮಾಡಲಾರೆವು. ನಾವು “ನಿಜವನ್ನೇ” ಇಲ್ಲವೆ “ಸತ್ಯವನ್ನೇ” ಆಡಬೇಕು. (ಜೆಕರ್ಯ 8:16; ಎಫೆಸ 4:25) “ಸತ್ಯದ ದೇವರಾದ ಯೆಹೋವನು” ತನ್ನ ಸತ್ಯಸಾಕ್ಷಿಗಳನ್ನು ಮಾತ್ರ ಆಶೀರ್ವದಿಸುತ್ತಾನೆ. ದುಷ್ಟರಿಗೆ ಆತನನ್ನು ಪ್ರತಿನಿಧಿಸುವ ಹಕ್ಕಿಲ್ಲ.—ಕೀರ್ತನೆ 31:5, NIBV; 50:16; ಯೆಶಾಯ 43:10.
11 ಸೈತಾನನ ಸುಳ್ಳುಗಳಿಂದ ನಾವು ಆಧ್ಯಾತ್ಮಿಕವಾಗಿ ಸ್ವತಂತ್ರರಾಗಿರುವುದನ್ನು ಬಹುಮೂಲ್ಯವೆಂದೆಣಿಸುವುದಾದರೆ, “ಸತ್ಯಮಾರ್ಗ”ವಾದ ಕ್ರೈಸ್ತತ್ವಕ್ಕೆ ಅಂಟಿಕೊಳ್ಳುವೆವು. (2 ಪೇತ್ರ 2:2; ಯೋಹಾನ 8:32) ಕ್ರೈಸ್ತ ಬೋಧನೆಗಳ ಇಡೀ ಸಂಗ್ರಹವೇ “ಸುವಾರ್ತೆಯ ಸತ್ಯಾರ್ಥ”ವನ್ನು ರಚಿಸುತ್ತದೆ. (ಗಲಾತ್ಯ 2:5, 14) ನಮ್ಮ ರಕ್ಷಣೆಯು ‘ಸತ್ಯವಂತರಾಗಿ ನಡೆಯುವುದರ ಮೇಲೆ,’ ಅಂದರೆ ಸತ್ಯಕ್ಕೆ ಅಂಟಿಕೊಂಡಿದ್ದು “ಸುಳ್ಳಿಗೆ ಮೂಲಪುರುಷ”ನಾಗಿರುವವನ ವಿರುದ್ಧ ಸ್ಥಿರವಾಗಿ ನಿಲ್ಲುವುದರ ಮೇಲೆ ಹೊಂದಿಕೊಂಡಿದೆ.—3 ಯೋಹಾನ 3:3, 4, 8.
ಅತಿ ಪ್ರಮುಖ ಧರ್ಮಭ್ರಷ್ಟನನ್ನು ಪ್ರತಿಭಟಿಸಿರಿ
12 ಪಿಶಾಚನಾಗಿ ಪರಿಣಮಿಸಿದ ಆ ಆತ್ಮಜೀವಿಯು ಒಮ್ಮೆ ಸತ್ಯದಲ್ಲಿದ್ದನು. ಆದರೆ ಅವನು “ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ” ಎಂದು ಯೇಸು ಹೇಳಿದನು. (ಯೋಹಾನ 8:44) ಈ ಪ್ರಪ್ರಧಾನ ಧರ್ಮಭ್ರಷ್ಟನು ‘ಸತ್ಯದ ದೇವರನ್ನು’ ಪ್ರತಿಭಟಿಸುವ ಮಾರ್ಗವನ್ನು ಪಟ್ಟುಬಿಡದೆ ಬೆನ್ನಟ್ಟಿರುತ್ತಾನೆ. ಪ್ರಥಮ ಶತಮಾನದ ಕೆಲವು ಮಂದಿ ಕ್ರೈಸ್ತರು ತಪ್ಪುದಾರಿಗೆಳೆಯಲ್ಪಟ್ಟು, ಸತ್ಯದ ಮಾರ್ಗವನ್ನು ಬಿಟ್ಟುಹೋದ ಕಾರಣ ಪಿಶಾಚನ ಬಲಿಗಳಾಗಿ ಅವನ “ಉರ್ಲಿಗೆ” ಬಿದ್ದರೆಂಬುದು ವ್ಯಕ್ತ. ಆದುದರಿಂದ, ಇಂಥವರು ಆಧ್ಯಾತ್ಮಿಕವಾಗಿ ಚೇತರಿಸಿಕೊಂಡು ಸೈತಾನನ ಪಾಶದಿಂದ ಬಿಡಿಸಲ್ಪಡುವಂತೆ ಅವರಿಗೆ ಸೌಮ್ಯಭಾವದಿಂದ ಉಪದೇಶಿಸಬೇಕೆಂದು ಪೌಲನು ತನ್ನ ಜೊತೆಕೆಲಸಗಾರನಾದ ತಿಮೊಥೆಯನಿಗೆ ಹೇಳಿದನು. (2 ತಿಮೊಥೆಯ 2:23-26) ಆದರೆ, ಧರ್ಮಭ್ರಷ್ಟರ ಉರ್ಲಿಗೆ ಎಂದೂ ತುತ್ತಾಗದೆ ಮೊದಲೇ ಸತ್ಯಕ್ಕೆ ಬಲವಾಗಿ ಅಂಟಿಕೊಂಡಿರುವುದು ಎಷ್ಟೋ ಲೇಸು ಎಂಬುದು ನಿಶ್ಚಯ.
13 ಪಿಶಾಚನ ಮಾತಿಗೆ ಕಿವಿಗೊಟ್ಟು, ಅವನ ಸುಳ್ಳುಗಳನ್ನು ತಿರಸ್ಕರಿಸದಿದ್ದ ಕಾರಣವೇ ಮೊದಲ ಮಾನವ ದಂಪತಿಯು ಧರ್ಮಭ್ರಷ್ಟರಾದರು. ಆದುದರಿಂದ ನಾವು ಇಂದು ಧರ್ಮಭ್ರಷ್ಟರಿಗೆ ಕಿವಿಗೊಡಬೇಕೊ, ಅವರ ಸಾಹಿತ್ಯಗಳನ್ನು ಓದಬೇಕೊ ಇಲ್ಲವೆ ಇಂಟರ್ನೆಟ್ನಲ್ಲಿರುವ ಅವರ ವೆಬ್ಸೈಟ್ಗಳನ್ನು ಪರೀಕ್ಷಿಸಬೇಕೊ? ನಾವು ದೇವರನ್ನೂ ಸತ್ಯವನ್ನೂ ಪ್ರೀತಿಸುವಲ್ಲಿ ಹಾಗೆ ಮಾಡೆವು. ನಾವು ಧರ್ಮಭ್ರಷ್ಟರನ್ನು ನಮ್ಮ ಮನೆಯಲ್ಲಿ ಸೇರಿಸಿಕೊಳ್ಳುವುದಂತೂ ಬಿಡಿ, ಅವರಿಗೆ ವಂದನೆಯನ್ನೂ ಹೇಳಬಾರದು, ಏಕೆಂದರೆ ಅಂತಹ ವರ್ತನೆ ಅವರ ‘ದುಷ್ಕೃತ್ಯಗಳಲ್ಲಿ’ ನಮ್ಮನ್ನು ‘ಪಾಲುಗಾರರನ್ನಾಗಿಸುತ್ತದೆ.’ (2 ಯೋಹಾನ 9-11) “ನಾಶಮಾಡುವ ಆಲೋಚನಾಸರಣಿಗಳನ್ನು ಒಳಹೊಗಿಸಲು” ಪ್ರಯತ್ನಿಸಿ, “ಸೊಗಸಾಗಿ ಹೆಣೆದ ಪದಗುಚ್ಛಗಳಿಂದ” ನಮ್ಮನ್ನು ಬಳಿಸಿಕೊಳ್ಳಲು ಪ್ರಯತ್ನಿಸುವ ಸುಳ್ಳುಬೋಧಕರನ್ನು ಅನುಸರಿಸಲಿಕ್ಕಾಗಿ, ಕ್ರೈಸ್ತ “ಸತ್ಯಮಾರ್ಗ”ವನ್ನು ಬಿಟ್ಟು ಪಿಶಾಚನ ಮೋಸಕ್ಕೆ ನಾವು ಎಂದಿಗೂ ಬಲಿಯಾಗದಿರೋಣ.—2 ಪೇತ್ರ 2:1-3, ಬೈಯಿಂಗ್ಟನ್.
14 ಎಫೆಸದ ಕ್ರೈಸ್ತ ಹಿರಿಯರಿಗೆ ಪೌಲನು ಹೇಳಿದ್ದು: “ದೇವರು . . . [“ತನ್ನ ಸ್ವಂತ ಮಗನ ರಕ್ತದಿಂದಲೇ,” NW] ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ [“ವಕ್ರಮಾತುಗಳನ್ನಾಡಿ,” NIBV] ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.” (ಅ. ಕೃತ್ಯಗಳು 20:28-30) ಸಕಾಲದಲ್ಲಿ, ಇಂತಹ ಧರ್ಮಭ್ರಷ್ಟರು ಎದ್ದು, ‘ವಕ್ರಮಾತುಗಳನ್ನಾಡಿದ್ದು’ ನಿಜ.
15 ಸುಮಾರು ಸಾ.ಶ. 65ರಲ್ಲಿ, “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು” ಎಂದು ಅಪೊಸ್ತಲ ಪೌಲನು ತಿಮೊಥೆಯನನ್ನು ಪ್ರೋತ್ಸಾಹಿಸಿದನು. ಆದರೆ ಅದೇ ಸಮಯದಲ್ಲಿ “ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೆ ದೂರವಾಗಿರು; ಅವುಗಳಿಗೆ ಮನಸ್ಸು ಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು. ಅವರ ಮಾತು ಕೊಳಕು ಹುಣ್ಣಿನಂತೆ ಹರಡಿಕೊಳ್ಳುವದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ; ಅವರು ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಸತ್ಯಭ್ರಷ್ಟರಾಗಿ ಕೆಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ” ಎಂದು ಪೌಲನು ಬರೆದನು. ಧರ್ಮಭ್ರಷ್ಟತೆ ಆರಂಭವಾಗಿತ್ತು! ಪೌಲನು ಕೂಡಿಸಿ ಹೇಳಿದ್ದು: “ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ.”—2 ತಿಮೊಥೆಯ 2:15-19.
16 ಸತ್ಯಾರಾಧನೆಯನ್ನು ಮಲಿನಗೊಳಿಸಲು ಸೈತಾನನು ಧರ್ಮಭ್ರಷ್ಟರನ್ನು ಅನೇಕಬಾರಿ ಉಪಯೋಗಿಸಿದ್ದಾನಾದರೂ ಅವನು ಯಶಸ್ವಿಯಾಗಿಲ್ಲ. ಸುಮಾರು 1868ನೆಯ ವರುಷದಲ್ಲಿ, ಚಾರ್ಲ್ಸ್ ಟೇಸ್ ರಸಲ್ರವರು, ಕ್ರೈಸ್ತಪ್ರಪಂಚದ ಚರ್ಚುಗಳು ದೀರ್ಘಕಾಲದಿಂದ ಅಂಗೀಕರಿಸಿದ್ದ ಬೋಧನೆಗಳನ್ನು ಜಾಗರೂಕತೆಯಿಂದ ಪರೀಕ್ಷಿಸಿ, ಅವುಗಳಲ್ಲಿ ಬೈಬಲಿನ ಕುರಿತಾದ ಅಪಾರ್ಥವ್ಯಾಖ್ಯಾನಗಳನ್ನು ಕಂಡುಹಿಡಿದರು. ಆಗ ರಸಲ್ ಮತ್ತು ಇತರ ಸತ್ಯಾನ್ವೇಷಕರು ಅಮೆರಿಕದ ಪೆನ್ಸಿಲ್ವೇನಿಯ ಪ್ರಾಂತ್ಯದ ಪಿಟ್ಸ್ಬರ್ಗ್ನಲ್ಲಿ ಒಂದು ಬೈಬಲ್ ಅಧ್ಯಯನ ಕ್ಲಾಸನ್ನು ಆರಂಭಿಸಿದರು. ಅಂದಿನಿಂದ ಹಿಡಿದು ಸುಮಾರು 140 ವರುಷಗಳಲ್ಲಿ, ಯೆಹೋವನ ಸೇವಕರು ಜ್ಞಾನದಲ್ಲಿಯೂ ದೇವರ ಮತ್ತು ಆತನ ವಾಕ್ಯದ ಮೇಲಿನ ಪ್ರೀತಿಯಲ್ಲಿಯೂ ಹೆಚ್ಚು ಬೆಳೆದಿದ್ದಾರೆ. ಅತಿ ಪ್ರಮುಖ ಧರ್ಮಭ್ರಷ್ಟನಾದ ಸೈತಾನನ ತಂತ್ರಗಳ ಮಧ್ಯೆಯೂ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಆಧ್ಯಾತ್ಮಿಕ ಜಾಗರಣೆಯು ಈ ಸತ್ಯ ಕ್ರೈಸ್ತರು ಯೆಹೋವನಿಗೂ ಆತನ ವಾಕ್ಯಕ್ಕೂ ನಿಷ್ಠರಾಗಿ ಉಳಿಯುವಂತೆ ಸಹಾಯಮಾಡಿದೆ.—ಮತ್ತಾಯ 24:45.
ಇಹಲೋಕಾಧಿಪತಿಯು ನಿಮ್ಮನ್ನು ನಿಯಂತ್ರಿಸುವಂತೆ ಎಂದಿಗೂ ಬಿಡಬೇಡಿ
17 ಸೈತಾನನು ನಮ್ಮನ್ನು ಪಾಶದಲ್ಲಿ ಸಿಕ್ಕಿಸಪ್ರಯತ್ನಿಸುವ ಇನ್ನೊಂದು ವಿಧವು, ದೇವರಿಂದ ದೂರ ಸರಿದಿರುವ ಅನೀತಿಭರಿತ ಮಾನವ ಸಮಾಜವೆಂಬ ಈ ಲೋಕವನ್ನು ನಾವು ಪ್ರೀತಿಸುವಂತೆ ಸೆಳೆಯುವ ಮೂಲಕವೇ. ಪಿಶಾಚನನ್ನು “ಇಹಲೋಕಾಧಿಪತಿ” ಎಂದು ಕರೆದು, “ಅವನಿಗೆ ನನ್ನ ಮೇಲೆ ನಿಯಂತ್ರಣವಿಲ್ಲ” (NW) ಎಂದು ಯೇಸು ಹೇಳಿದನು. (ಯೋಹಾನ 14:30) ಸೈತಾನನು ನಮ್ಮನ್ನು ಎಂದಿಗೂ ನಿಯಂತ್ರಿಸದಿರಲಿ! “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂಬುದನ್ನು ನಾವು ಗ್ರಹಿಸಿರುತ್ತೇವೆಂಬುದು ನಿಜ. (1 ಯೋಹಾನ 5:19) ಈ ಕಾರಣದಿಂದಲೇ, ಯೇಸುವಿನಿಂದ ಒಂದು ಧರ್ಮಭ್ರಷ್ಟ ಆರಾಧನಾ ಕ್ರಿಯೆಗೆ ಪ್ರತಿಯಾಗಿ ಪಿಶಾಚನು ಅವನಿಗೆ “ಪ್ರಪಂಚದ ಎಲ್ಲಾ ರಾಜ್ಯಗಳನ್ನು” ಕೊಡುತ್ತೇನೆಂದು ಹೇಳಶಕ್ತನಾಗಿದ್ದನು. ಆದರೆ ದೇವಕುಮಾರನು ಇದನ್ನು ಕಡಾಖಂಡಿತವಾಗಿ ನಿರಾಕರಿಸಿದನು. (ಮತ್ತಾಯ 4:8-10) ಸೈತಾನನು ಆಳುತ್ತಿರುವ ಈ ಲೋಕವು ಕ್ರಿಸ್ತನ ಅನುಯಾಯಿಗಳನ್ನು ದ್ವೇಷಿಸುತ್ತದೆ. (ಯೋಹಾನ 15:18-21) ಹೀಗಿರುವುದರಿಂದ ನಾವು ಈ ಲೋಕವನ್ನು ಪ್ರೀತಿಸಬಾರದೆಂದು ಅಪೊಸ್ತಲ ಯೋಹಾನನು ಹೇಳಿದ್ದರಲ್ಲಿ ಆಶ್ಚರ್ಯವೇ ಇಲ್ಲ!
18 ಯೋಹಾನನು ಬರೆದುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) ನಾವು ಈ ಲೋಕವನ್ನು ಪ್ರೀತಿಸಲೇಬಾರದು. ಏಕೆಂದರೆ ಅದರ ಜೀವನರೀತಿಯು ಪಾಪಪೂರ್ಣ ಶರೀರವನ್ನು ಆಕರ್ಷಿಸುತ್ತದೆ ಮತ್ತು ಅದು ಯೆಹೋವ ದೇವರ ಮಟ್ಟಗಳಿಗೆ ತದ್ವಿರುದ್ಧವಾದದ್ದಾಗಿದೆ.
19 ಆದರೆ ಈ ಲೋಕಪ್ರೇಮ ನಮ್ಮ ಹೃದಯದಲ್ಲಿರುವುದಾದರೆ ಆಗೇನು? ಹಾಗಿರುವಲ್ಲಿ, ಈ ಪ್ರೀತಿ ಮತ್ತು ಅದರ ಜೊತೆಗಿರುವ ಶರೀರದಾಶೆಗಳನ್ನು ಮೆಟ್ಟಿನಿಲ್ಲಲು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸೋಣ. (ಗಲಾತ್ಯ 5:16-21) ಅನೀತಿಯುತ ಮಾನವ ಸಮಾಜದ ಮೇಲೆ ಅಧಿಕಾರ ನಡೆಸುವ ಅದೃಶ್ಯ “ಲೋಕಾಧಿಪತಿಗಳು” ‘ದುರಾತ್ಮಗಳ ಸೇನೆಯೇ’ ಆಗಿದೆ ಎಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುವಲ್ಲಿ, ಈ “ಪ್ರಪಂಚದ ದೋಷವು ಹತ್ತದಂತೆ” ನೋಡಿಕೊಳ್ಳಲು ನಾವು ಖಂಡಿತ ಪ್ರಯತ್ನಿಸುವೆವು.—ಯಾಕೋಬ 1:27; ಎಫೆಸ 6:11, 12; 2 ಕೊರಿಂಥ 4:4.
20 ತನ್ನ ಶಿಷ್ಯರ ಕುರಿತಾಗಿ ಯೇಸು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:16) ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಮರ್ಪಿತ ಸಂಗಾತಿಗಳು ಲೋಕದಿಂದ ಪ್ರತ್ಯೇಕರಾಗಿ, ನೈತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ನಿರ್ಮಲರಾಗಿರಲು ಪ್ರಯತ್ನಿಸುತ್ತಾರೆ. (ಯೋಹಾನ 15:19; 17:14; ಯಾಕೋಬ 4:4) ನಾವು ಲೋಕದಿಂದ ಪ್ರತ್ಯೇಕರಾಗಿರುವುದರಿಂದ ಮತ್ತು ‘ನೀತಿಯನ್ನು ಸಾರುವುದರಿಂದ’ ಈ ಅನೀತಿಭರಿತ ಲೋಕವು ನಮ್ಮನ್ನು ದ್ವೇಷಿಸುತ್ತದೆ. (2 ಪೇತ್ರ 2:5) ಜಾರರು, ವ್ಯಭಿಚಾರಿಗಳು, ಸುಲುಕೊಳ್ಳುವವರು, ವಿಗ್ರಹಾರಾಧಕರು, ಕಳ್ಳರು, ಸುಳ್ಳರು, ಕುಡುಕರು ಇರುವಂಥ ಮಾನವ ಸಮಾಜದ ಮಧ್ಯೆ ನಾವು ಜೀವಿಸುತ್ತಿರುವುದು ನಿಜವೇ. (1 ಕೊರಿಂಥ 5:9-11; 6:9-11; ಪ್ರಕಟನೆ 21:8) ಆದರೆ ನಾವು “ಪ್ರಾಪಂಚಿಕ ಆತ್ಮ” ಎಂಬ ಗಾಳಿಯನ್ನು ಉಸಿರಾಡುವುದಿಲ್ಲ, ಏಕೆಂದರೆ ನಾವು ಈ ಪಾಪಕರ ಪ್ರಚೋದಕಶಕ್ತಿಯಿಂದ ನಿಯಂತ್ರಿಸಲ್ಪಡುವುದಿಲ್ಲ.—1 ಕೊರಿಂಥ 2:12.
ಪಿಶಾಚನಿಗೆ ಯಾವ ಅವಕಾಶವನ್ನೂ ಕೊಡಬೇಡಿರಿ
21 ನಾವು “ಪ್ರಾಪಂಚಿಕ ಆತ್ಮ”ದಿಂದ ಪ್ರಚೋದಿತರಾಗುವ ಬದಲು, ಪ್ರೀತಿ ಮತ್ತು ಸ್ವನಿಯಂತ್ರಣದಂಥ ಗುಣಗಳನ್ನು ಫಲಿಸುವ ದೇವರಾತ್ಮದಿಂದ ನಡೆಸಲ್ಪಡುತ್ತಿದ್ದೇವೆ. (ಗಲಾತ್ಯ 5:22, 23) ನಮ್ಮ ನಂಬಿಕೆಯ ಮೇಲೆ ಪಿಶಾಚನ ಆಕ್ರಮಣ ನಡೆಯುವಾಗ, ಈ ಗುಣಗಳು ಅದನ್ನು ಎದುರಿಸಿ ನಿಲ್ಲುವಂತೆ ನಮಗೆ ಸಹಾಯಮಾಡುತ್ತವೆ. ನಾವು ‘ಉರಿಗೊಂಡು ಕೆಡುಕಿಗೆ ಕಾರಣ’ ಆಗುವಂತೆ ಅವನು ಬಯಸುವಾಗ, ದೇವರಾತ್ಮವು ನಾವು ‘ಕೋಪವನ್ನು ಅಡಗಿಸಿ ರೋಷವನ್ನು ಬಿಡುವಂತೆ’ ಸಹಾಯ ನೀಡುತ್ತದೆ. (ಕೀರ್ತನೆ 37:8) ಹೌದು, ನಾವು ಕೆಲವು ಬಾರಿ ನ್ಯಾಯವಾಗಿ ಕೋಪಿಸಿಕೊಳ್ಳಬಹುದಾದರೂ, ಪೌಲನು ನಮಗೆ ಸಲಹೆ ನೀಡುವುದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ.”—ಎಫೆಸ 4:26, 27.
22 ನಾವು ಕೋಪಾವಸ್ಥೆಯಲ್ಲಿಯೇ ಉಳಿಯುವಲ್ಲಿ ನಮ್ಮ ಕೋಪವು ಪಾಪದಲ್ಲಿ ಅಂತ್ಯಗೊಳ್ಳಬಲ್ಲದು. ಈ ಮಾನಸಿಕ ಸ್ಥಿತಿ ನಮಗಿರುವಲ್ಲಿ, ಸಭೆಯಲ್ಲಿ ವೈಷಮ್ಯವನ್ನು ವರ್ಧಿಸುವಂತೆ ಅಥವಾ ದುಷ್ಕೃತ್ಯಗಳಲ್ಲಿ ತೊಡಗುವಂತೆ ಮಾಡಲು ಪಿಶಾಚನಿಗೆ ಎಡೆ ದೊರೆಯುವುದು. ಆದಕಾರಣ, ಇತರರೊಂದಿಗೆ ನಮಗಿರುವ ವೈಮನಸ್ಸನ್ನು ನಾವು ದೈವಿಕ ರೀತಿಯಲ್ಲಿ ಬೇಗನೆ ಪರಿಹರಿಸುವುದು ಅಗತ್ಯ. (ಯಾಜಕಕಾಂಡ 19:17, 18; ಮತ್ತಾಯ 5:23, 24; 18:15, 16) ಆದುದರಿಂದ, ನಾವು ದೇವರಾತ್ಮದಿಂದ ನಡೆಸಲ್ಪಟ್ಟು, ಸ್ವನಿಯಂತ್ರಣವನ್ನು ರೂಢಿಸಿಕೊಂಡು, ನಮಗಿರಬಹುದಾದ ನ್ಯಾಯವಾದ ಸಿಟ್ಟು ಸಹ ನಮ್ಮಲ್ಲಿ ಎಂದಿಗೂ ಕಹಿಮನೋಭಾವ, ಮತ್ಸರ ಮತ್ತು ಹಗೆಯನ್ನು ಹುಟ್ಟಿಸುವಂತೆ ಬಿಡದಿರೋಣ.
23 ನಾವು ಅನುಕರಿಸಬಾರದಾದ ಪಿಶಾಚನ ಕೆಲವು ನಿರ್ದಿಷ್ಟ ಗುಣಗಳನ್ನು ಚರ್ಚಿಸಿದ್ದೇವೆ. ಆದರೆ ಕೆಲವು ಮಂದಿ ಓದುಗರು ಹೀಗೆ ಕೇಳಲು ಆಸಕ್ತರಾಗಿರಬಹುದು: ನಾವು ಸೈತಾನನಿಗೆ ಹೆದರಬೇಕೊ? ಅವನು ಕ್ರೈಸ್ತರ ಮೇಲೆ ಹಿಂಸೆಯನ್ನು ಪ್ರಚೋದಿಸುವುದೇಕೆ? ಪಿಶಾಚನ ಹಿಡಿತಕ್ಕೊಳಗಾಗದಂತೆ ನಾವು ಹೇಗೆ ತಪ್ಪಿಸಿಕೊಳ್ಳಬಲ್ಲೆವು?
[ಪಾದಟಿಪ್ಪಣಿ]
a ಇಸವಿ 2005, ನವೆಂಬರ್ 15ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ಪಿಶಾಚನು ನೈಜ ವ್ಯಕ್ತಿಯಾಗಿದ್ದಾನೊ?” ಎಂಬ ಮುಖಪುಟ ಲೇಖನಗಳನ್ನು ನೋಡಿ.
ನಿಮ್ಮ ಉತ್ತರವೇನು?
• ನಾವು ಯಾರ ಮೇಲೆಯೂ ಎಂದಿಗೂ ಚಾಡಿಹೇಳಬಾರದೇಕೆ?
• ಒಂದನೇ ಯೋಹಾನ 3:15ಕ್ಕೆ ಹೊಂದಿಕೆಯಲ್ಲಿ, ನಾವು ಕೊಲೆಗಾರರಾಗುವುದರಿಂದ ಹೇಗೆ ದೂರವಿರಬಲ್ಲೆವು?
• ನಾವು ಧರ್ಮಭ್ರಷ್ಟರನ್ನು ಹೇಗೆ ವೀಕ್ಷಿಸಬೇಕು, ಮತ್ತು ಏಕೆ?
• ನಾವು ಈ ಲೋಕವನ್ನು ಏಕೆ ಪ್ರೀತಿಸಬಾರದು?
[ಅಧ್ಯಯನ ಪ್ರಶ್ನೆಗಳು]
1. ಅನೇಕರು ಪಿಶಾಚನ ಅಸ್ತಿತ್ವವನ್ನು ಸಂಶಯಿಸಿರುವುದೇಕೆ?
2. ಪಿಶಾಚನ ಕುರಿತಾದ ಕೆಲವು ಶಾಸ್ತ್ರೀಯ ನಿಜತ್ವಗಳಾವುವು?
3. ನಾವು ಯಾವ ಪ್ರಶ್ನೆಯನ್ನು ಪರಿಗಣಿಸುವೆವು?
4. “ಕೆಡುಕನು” ದೇವರ ಬಗ್ಗೆ ಹೇಗೆ ಚಾಡಿಹೇಳಿದನು?
5. ಚಾಡಿಹೇಳಿದ್ದಕ್ಕಾಗಿ ಲೆಕ್ಕಕೊಡಲು ದಿಯೊತ್ರೇಫನು ಏಕೆ ಜವಾಬ್ದಾರನಾಗಿದ್ದನು?
6, 7. ನಾವು ಯಾರ ಮೇಲೆಯೇ ಆಗಲಿ, ಚಾಡಿಹೇಳುವುದರಿಂದ ಏಕೆ ದೂರವಿರಬೇಕು?
8. ಪಿಶಾಚನು “ಆದಿಯಿಂದಲೂ ಕೊಲೆಗಾರನು” ಆದದ್ದು ಯಾವ ವಿಧದಲ್ಲಿ?
9. ಒಂದನೇ ಯೋಹಾನ 3:15ರಲ್ಲಿ ಸೂಚಿಸಲಾಗಿರುವಂತೆ, ನಾವು ಹೇಗೆ ಕೊಲೆಗಾರರಾಗಬಲ್ಲೆವು?
10, 11. ಪ್ರಧಾನ ಸುಳ್ಳುಗಾರನಾದ ಸೈತಾನನ ವಿರುದ್ಧ ಸ್ಥಿರವಾಗಿ ನಿಲ್ಲಲು ನಾವೇನು ಮಾಡತಕ್ಕದ್ದು?
12, 13. ಧರ್ಮಭ್ರಷ್ಟರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?
14, 15. ಎಫೆಸದ ಹಿರಿಯರಿಗೆ ಮತ್ತು ತನ್ನ ಜೊತೆಕೆಲಸಗಾರನಾಗಿದ್ದ ತಿಮೊಥೆಯನಿಗೆ ಪೌಲನು ಯಾವ ಎಚ್ಚರಿಕೆಯನ್ನು ಕೊಟ್ಟನು?
16. ಅತಿ ಪ್ರಮುಖ ಧರ್ಮಭ್ರಷ್ಟನ ತಂತ್ರಗಳ ಮಧ್ಯೆಯೂ ನಾವು ದೇವರಿಗೆ ಮತ್ತು ಆತನ ವಾಕ್ಯಕ್ಕೆ ಏಕೆ ನಿಷ್ಠರಾಗಿ ಉಳಿದಿದ್ದೇವೆ?
17-19. ಪಿಶಾಚನ ಅಧಿಕಾರದ ಕೆಳಗಿರುವ ಲೋಕವು ಯಾವುದು, ಮತ್ತು ನಾವು ಅದನ್ನೇಕೆ ಪ್ರೀತಿಸಬಾರದು?
20. ನಾವು “ಲೋಕದವರಲ್ಲ” ಎಂದು ಏಕೆ ಹೇಳಸಾಧ್ಯವಿದೆ?
21, 22. ಪೌಲನು ಎಫೆಸ 4:26, 27ರಲ್ಲಿ ಕೊಟ್ಟಿರುವ ಸಲಹೆಯನ್ನು ನೀವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?
23. ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸಲಿರುವೆವು?
[ಪುಟ 23ರಲ್ಲಿರುವ ಚಿತ್ರ]
ಪಿಶಾಚನು ನಮ್ಮ ಕ್ರೈಸ್ತ ಐಕ್ಯವನ್ನು ನಾಶಗೊಳಿಸಲು ನಾವೆಂದಿಗೂ ಅವಕಾಶಕೊಡದಿರುವೆವು
[ಪುಟ 24ರಲ್ಲಿರುವ ಚಿತ್ರಗಳು]
ಈ ಲೋಕವನ್ನು ಪ್ರೀತಿಸಬಾರದೆಂದು ಯೋಹಾನನು ನಮ್ಮನ್ನು ಪ್ರೋತ್ಸಾಹಿಸಿದ್ದೇಕೆ?