ರಕ್ಷಿಸಲ್ಪಡಲು ನಾವೇನು ಮಾಡತಕ್ಕದ್ದು?
ಒಬ್ಬ ಮನುಷ್ಯನು ಒಮ್ಮೆ ಯೇಸುವಿಗೆ ಕೇಳಿದ್ದು: “ಸ್ವಾಮೀ, ರಕ್ಷಣೆ ಹೊಂದುವವರು ಸ್ವಲ್ಪಜನರೋ?” ಯೇಸು ಹೇಗೆ ಉತ್ತರಿಸಿದನು? ‘ನನ್ನನ್ನು ನಿಮ್ಮ ಕರ್ತನು ಮತ್ತು ವಿಮೋಚಕನಾಗಿ ಕೇವಲ ಸ್ವೀಕರಿಸಿರಿ, ನೀವು ರಕ್ಷಿಸಲ್ಪಡುವಿರಿ’ ಎಂದು ಅವನು ಹೇಳಿದನೋ? ಇಲ್ಲ! ಯೇಸು ಹೇಳಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗುವದಕ್ಕೆ ಹೆಣಗಾಡಿರಿ. ಬಹುಜನ ಒಳಕ್ಕೆ ಹೋಗುವದಕ್ಕೆ ನೋಡುವರು, ಆದರೆ ಅವರಿಂದಾಗುವದಿಲ್ಲ ಎಂದು ನಿಮಗೆ ಹೇಳುತ್ತೇನೆ.”—ಲೂಕ 13:23, 24.
ಆ ಮನುಷ್ಯನ ಪ್ರಶ್ನೆಯನ್ನು ಉತ್ತರಿಸಲು ಯೇಸು ತಪ್ಪಿದನೋ? ಇಲ್ಲ, ರಕ್ಷಿಸಲ್ಪಡುವುದು ಎಷ್ಟು ಕಷ್ಟಕರವಾಗಿರುವುದೆಂದು ಆ ಮನುಷ್ಯನು ಕೇಳಲಿಲ್ಲ; ಸಂಖ್ಯೆಯು ಕೊಂಚವಾಗಿರುವುದೊ ಎಂಬುದಾಗಿ ಅವನು ಕೇಳಿದನು. ಆದುದರಿಂದ, ಒಬ್ಬನು ನಿರೀಕ್ಷಿಸುವುದಕ್ಕಿಂತ ತೀರ ಕಡಿಮೆ ಜನರು ಈ ಅದ್ಭುತಕರ ಆಶೀರ್ವಾದವನ್ನು ಪಡೆಯಲು ಕಠಿನವಾಗಿ ಶ್ರಮ ವಹಿಸುವರು ಎಂದು ಯೇಸು ಸೂಚಿಸಿದನಷ್ಟೇ.
‘ನನಗೆ ಅದು ಹೇಳಲ್ಪಟ್ಟಿರಲಿಲ್ಲ,’ ಎಂದು ಕೆಲವು ವಾಚಕರು ಪ್ರತಿರೋಧಿಸಬಹುದು. “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು” ಎಂದು ಹೇಳುವ ಯೋಹಾನ 3:16ನ್ನು ಇವರು ಉದ್ಧರಿಸಬಹುದು. ಆದಾಗಲೂ, ನಾವು ಉತ್ತರಿಸುವುದು: ‘ಹಾಗಾದರೆ, ನಾವು ಏನನ್ನು ನಂಬಬೇಕು? ಯೇಸು ವಾಸ್ತವವಾಗಿ ಜೀವಿಸಿದನು ಎಂಬುದನ್ನೋ? ಖಂಡಿತವಾಗಿಯೂ. ಆತನು ದೇವರ ಮಗನಾಗಿದ್ದಾನೆ ಎಂಬುದಾಗಿಯೋ? ಅವಶ್ಯವಾಗಿ! ಮತ್ತು ಬೈಬಲು ಯೇಸುವನ್ನು “ಬೋಧಕನು” ಮತ್ತು “ಕರ್ತನು” ಎಂದು ಕರೆಯುವುದರಿಂದ, ಆತನು ಏನನ್ನು ಕಲಿಸಿದನೋ ಅದನ್ನು ನಾವು ನಂಬಿ, ಆತನಿಗೆ ವಿಧೇಯರಾಗಿ ಆತನನ್ನು ಹಿಂಬಾಲಿಸಬಾರದೋ?’—ಯೋಹಾನ 13:13; ಮತ್ತಾಯ 16:16.
ಯೇಸುವನ್ನು ಹಿಂಬಾಲಿಸುವುದು
ಸಮಸ್ಯೆಯೇಳುವುದು ಇಲ್ಲಿಯೇ! ತಾವು “ರಕ್ಷಿಸಲ್ಪಟ್ಟಿ” ದ್ದೇವೆಂದು ತಿಳಿಸಲ್ಪಟ್ಟಿರುವ ಅನೇಕ ಜನರಿಗೆ ಯೇಸುವನ್ನು ಹಿಂಬಾಲಿಸುವ ಅಥವಾ ವಿಧೇಯರಾಗುವ ಯಾವುದೇ ಉದ್ದೇಶವಿಲ್ಲದಿರುವಂತೆ ತೋರುತ್ತದೆ. ವಾಸ್ತವದಲ್ಲಿ, ಒಬ್ಬ ಪ್ರಾಟೆಸ್ಟಂಟ್ ವೈದಿಕನು ಬರೆದುದು: “ಖಂಡಿತವಾಗಿಯೂ, ಕ್ರಿಸ್ತನಲ್ಲಿರುವ ನಮ್ಮ ನಂಬಿಕೆ ಮುಂದುವರಿಯಲೇಬೇಕು. ಆದರೆ ಅದು ನಿರುಪಾದಿಕವಾಗಿ ಆಗಲೇಬೇಕು ಅಥವಾ ಅವಶ್ಯವಾಗಿ ಮುಂದುವರಿಯುತ್ತದೆಂಬ ವಾದಕ್ಕೆ ಬೈಬಲಿನಲ್ಲಿ ಆಧಾರವೇ ಇಲ್ಲ.”
ವ್ಯತಿರಿಕ್ತವಾಗಿ, ತಾವು “ರಕ್ಷಿಸಲ್ಪಟ್ಟಿ”ದ್ದೇವೆ ಎಂದು ನೆನಸುವ ಕೆಲವು ಜನರ ನಡುವೆ ಸರ್ವಸಾಮಾನ್ಯವಾಗಿರುವ ಅನೈತಿಕ ಆಚರಣೆಗಳನ್ನು ಬೈಬಲು ಪಟ್ಟಿಮಾಡುತ್ತದೆ. ಅಂತಹ ಮಾರ್ಗಗಳಲ್ಲಿ ಮುಂದುವರಿಯುವವನೊಬ್ಬನ ಕುರಿತಾಗಿ, ಅದು ಕ್ರೈಸ್ತರಿಗೆ ಉಪದೇಶ ನೀಡಿದ್ದು: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” ನಿಶ್ಚಯವಾಗಿಯೂ ದೇವರು, ದುಷ್ಟ ಜನರು ತನ್ನ ಕ್ರೈಸ್ತ ಸಭೆಯನ್ನು ಕಲುಷಿತಗೊಳಿಸುವುದನ್ನು ಬಯಸಲಾರನು!—1 ಕೊರಿಂಥ 5:11-13.
ಹಾಗಾದರೆ, ಯೇಸುವನ್ನು ಹಿಂಬಾಲಿಸುವುದರ ಅರ್ಥವೇನು, ಮತ್ತು ನಾವು ಅದನ್ನು ಹೇಗೆ ಮಾಡಸಾಧ್ಯವಿದೆ? ಒಳ್ಳೇದು, ಯೇಸು ಏನು ಮಾಡಿದನು? ಅವನು ಅನೈತಿಕನಾಗಿದ್ದನೋ? ಒಬ್ಬ ವ್ಯಭಿಚಾರಿಯಾಗಿದ್ದನೊ? ಒಬ್ಬ ಕುಡುಕನಾಗಿದ್ದನೋ? ಒಬ್ಬ ಸುಳ್ಳುಗಾರನಾಗಿದ್ದನೊ? ಅವನು ವ್ಯಾಪಾರದಲ್ಲಿ ಅಪ್ರಾಮಾಣಿಕನಾಗಿದ್ದನೊ? ಖಂಡಿತವಾಗಿಯೂ ಇಲ್ಲ! ‘ಆದರೆ ನಾನು ನನ್ನ ಜೀವಿತದಿಂದ ಆ ಎಲ್ಲಾ ಸಂಗತಿಗಳನ್ನು ತೆಗೆದುಹಾಕಬೇಕೊ?’ ಎಂದು ನೀವು ಕೇಳಬಹುದು. ಉತ್ತರಕ್ಕಾಗಿ ಎಫೆಸ 4:17ರಿಂದ 5:5ರ ವರೆಗೆ ಪರಿಗಣಿಸಿರಿ. ನಾವು ಏನೇ ಮಾಡಿದರೂ ದೇವರು ನಮ್ಮನ್ನು ಸ್ವೀಕರಿಸುವನು ಎಂದು ಅದು ಹೇಳುವುದಿಲ್ಲ. ಬದಲಾಗಿ, “ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ”ರುವ ಲೌಕಿಕ ರಾಷ್ಟ್ರಗಳಿಂದ ನಾವು ಭಿನ್ನರಾಗಿರುವಂತೆ ಅದು ನಮಗೆ ಹೇಳುತ್ತದೆ. “ನೀವಾದರೋ ಕ್ರಿಸ್ತನ ಧರ್ಮವನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ. . . . ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; . . . ಕಳವು ಮಾಡುವವನು ಇನ್ನು ಮೇಲೆ ಕಳವು ಮಾಡದೆ . . . ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು. ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. . . . ಜಾರರು ದುರಾಚಾರಿಗಳು ವಿಗ್ರಹಾರಾಧಕರಂತಿರುವ ಲೋಭಿಗಳು ಇವರಲ್ಲಿ ಒಬ್ಬರಿಗಾದರೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲವೆಂದು ನೀವು ಚೆನ್ನಾಗಿ ಬಲ್ಲಿರಲ್ಲವೇ.”
ಆತನ ಮಾದರಿಗೆ ಹೊಂದಿಕೆಯಲ್ಲಿ ಜೀವಿಸಲು ನಾವು ಕಡಿಮೆಪಕ್ಷ ಪ್ರಯತ್ನಿಸದಿದ್ದರೆ ನಾವು ಯೇಸುವನ್ನು ಹಿಂಬಾಲಿಸುತ್ತಿದ್ದೇವೊ? ನಮ್ಮ ಜೀವಿತಗಳನ್ನು ಹೆಚ್ಚು ಕ್ರೈಸ್ತಸದೃಶವನ್ನಾಗಿ ಮಾಡುವುದರ ಕುರಿತಾಗಿ ನಾವು ಕೆಲಸ ಮಾಡಲಿಕ್ಕಿರುವುದಿಲ್ಲವೊ? “ವರ್ತನೆಯಲ್ಲಿ ಯಾವ ಬದಲಾವಣೆಗಳನ್ನು ಮಾಡದೆ—ಈಗ ಕ್ರಿಸ್ತನ ಬಳಿಗೆ ಬನ್ನಿರಿ” ಎಂದು ಹೇಳುವ ಒಂದು ಧಾರ್ಮಿಕ ಕಿರುಹೊತ್ತಗೆಯಂತೆ ಹೇಳುವ ಜನರಿಂದ ಆ ಅತ್ಯಾವಶ್ಯಕ ಪ್ರಶ್ನೆಯು ಎಂದಾದರೂ ಪರಿಗಣಿಸಲ್ಪಡುವುದು ವಿರಳ.
ಭಕ್ತಿಹೀನ ಮನುಷ್ಯರು “ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅರಿಯದವರು” ಆಗಿದ್ದರೆಂದು ಯೇಸುವಿನ ಶಿಷ್ಯರಲ್ಲಿ ಒಬ್ಬನು ಎಚ್ಚರಿಸಿದನು. (ಯೂದ 4) ದೇವರ ಕರುಣೆಯನ್ನು ನಾವು ವಾಸ್ತವದಲ್ಲಿ ‘ನಾಚಿಕೆಗೆಟ್ಟ ಕೆಲಸಗಳಿಗೆ ಒಂದು ನೆವವಾಗಿ’ ಹೇಗೆ ಮಾಡುತ್ತಿರಬಹುದು? ನಾವು ನಮ್ಮ ಹಿಂದೆ ಹಾಕಲು ಪ್ರಯತ್ನಿಸುತ್ತಿರುವ ಮಾನವ ಅಪರಿಪೂರ್ಣತೆಯ ಪಾಪಗಳ ಬದಲಿಗೆ, ನಾವು ಮಾಡುತ್ತಾ ಇರಲು ಉದ್ದೇಶಿಸುವ ಬುದ್ಧಿಪೂರ್ವಕ ಪಾಪಗಳನ್ನು ಕ್ರಿಸ್ತನ ಯಜ್ಞವು ಆವರಿಸುತ್ತದೆ ಎಂದು ಭಾವಿಸಿಕೊಳ್ಳುವ ಮೂಲಕ ನಾವು ಹಾಗೆ ಮಾಡಸಾಧ್ಯವಿದೆ. ನೀವು “ಶುದ್ಧರಾಗುವ, ಬಿಟ್ಟುಕೊಡುವ, ಅಥವಾ ತಿರುಗಿಕೊಳ್ಳ”ಬೇಕಾಗಿಲ್ಲ ಎಂದು ಹೇಳಿದ ಅಮೆರಿಕದ ಅತಿ ಪ್ರಸಿದ್ಧ ಸೌವಾರ್ತಿಕರಲ್ಲಿ ಒಬ್ಬನೊಂದಿಗೆ ನಾವು ನಿಶ್ಚಯವಾಗಿಯೂ ಸಮ್ಮತಿಸಲು ಬಯಸಲಿಕ್ಕಿಲ್ಲ.—ವ್ಯತ್ಯಾಸ ನೋಡಿ ಅ. ಕೃತ್ಯಗಳು 17:30; ರೋಮಾಪುರ 3:25; ಯಾಕೋಬ 5:19, 20.
ವಿಶ್ವಾಸವು ಕಾರ್ಯವನ್ನು ಪ್ರಚೋದಿಸುತ್ತದೆ
“ಯೇಸುವಿನಲ್ಲಿ ನಂಬಿಕೆಯನ್ನಿಡುವುದು” ಒಂದು ಏಕಮಾತ್ರ ಕೃತ್ಯವಾಗಿದೆ ಮತ್ತು ನಮ್ಮ ನಂಬಿಕೆಯು ವಿಧೇಯತೆಯನ್ನು ಪ್ರಚೋದಿಸುವಷ್ಟು ಬಲವಾಗಿರುವ ಅಗತ್ಯವಿಲ್ಲವೆಂದು ಅನೇಕ ಜನರಿಗೆ ಹೇಳಲ್ಪಟ್ಟಿದೆ. ಆದರೆ ಬೈಬಲ್ ಅಸಮ್ಮತಿಸುತ್ತದೆ. ಕ್ರೈಸ್ತ ಪಥವನ್ನು ಆರಂಭಿಸುವ ಜನರು ರಕ್ಷಿಸಲ್ಪಡುವರೆಂದು ಯೇಸು ಹೇಳಲಿಲ್ಲ. ಬದಲಾಗಿ, ಆತನು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 10:22) ಬೈಬಲು, ನಮ್ಮ ಕ್ರೈಸ್ತ ಪಥವನ್ನು, ಅದರ ಅಂತ್ಯದಲ್ಲಿ ರಕ್ಷಣೆಯು ಬಹುಮಾನವಾಗಿರುವ ಒಂದು ಓಟಕ್ಕೆ ಹೋಲಿಸುತ್ತದೆ. ಮತ್ತು ಅದು ಪ್ರೇರೇಪಿಸುವುದು: “ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ.”—1 ಕೊರಿಂಥ 9:24.
ಹೀಗೆ, “ಯೇಸುವನ್ನು ಸ್ವೀಕರಿಸುವುದು” ಯೇಸುವಿನ ಅತ್ಯುತ್ಕೃಷ್ಟ ಯಜ್ಞವು ನೀಡುವ ಆಶೀರ್ವಾದಗಳನ್ನು ಮಾತ್ರ ಸ್ವೀಕರಿಸುವುದಕ್ಕಿಂತ ತೀರ ಹೆಚ್ಚಿನದ್ದನ್ನು ಒಳಗೂಡಿಸುತ್ತದೆ. ವಿಧೇಯತೆಯು ಅವಶ್ಯವಾಗಿದೆ. ನ್ಯಾಯತೀರ್ಪು “ದೇವರ ಮನೆಯಲ್ಲಿಯೇ” ಪ್ರಾರಂಭವಾಗುತ್ತದೆಂದು ಅಪೊಸ್ತಲ ಪೇತ್ರನು ಹೇಳುತ್ತಾನೆ ಮತ್ತು ಕೂಡಿಸುವುದು: “ಅದು ನಮ್ಮಲ್ಲಿ ಪ್ರಾರಂಭವಾಗಲು ದೇವರ ಸುವಾರ್ತೆಯನ್ನು ನಂಬಲೊಲ್ಲದವರ [“ವಿಧೇಯರಾಗದವರ,” NW] ಗತಿ ಏನಾಗಬಹುದು?” (1 ಪೇತ್ರ 4:17) ಆದುದರಿಂದ ನಾವು ಸುಮ್ಮನೆ ಕೇಳುವದಕ್ಕಿಂತ ಮತ್ತು ನಂಬುವದಕ್ಕಿಂತ ಹೆಚ್ಚಿನದ್ದನ್ನು ಮಾಡತಕ್ಕದ್ದು. ನಾವು ‘ವಾಕ್ಯದ ಪ್ರಕಾರ ನಡೆಯುವವರಾಗಬೇಕು, ಅದನ್ನು ಕೇಳುವವರು ಮಾತ್ರವೇ ಆಗಿದ್ದು, [ನಮ್ಮನ್ನೇ] ಮೋಸಗೊಳಿಸಿಕೊಳ್ಳಬಾರದು’ ಎಂದು ಬೈಬಲು ಹೇಳುತ್ತದೆ.—ಯಾಕೋಬ 1:22.
ಯೇಸುವಿನ ಸ್ವಂತ ಸಂದೇಶಗಳು
ಆದಿಕಾಲದ ಏಳು ಕ್ರೈಸ್ತ ಸಭೆಗಳಿಗೆ ಯೋಹಾನನ ಮೂಲಕ ರವಾನಿಸಲ್ಪಟ್ಟ, ಯೇಸುವಿನಿಂದ ಬಂದ ಸಂದೇಶಗಳು, ಬೈಬಲ್ ಪುಸ್ತಕವಾದ ಪ್ರಕಟನೆಯಲ್ಲಿ ಅಡಕವಾಗಿವೆ. (ಪ್ರಕಟನೆ 1:1, 4) ಈ ಸಭೆಗಳಲ್ಲಿರುವ ಜನರು ಅವನನ್ನು ಈ ಮೊದಲೇ “ಸ್ವೀಕರಿಸಿ”ದುದರಿಂದ, ಅದು ಸಾಕೆಂದು ಯೇಸು ಹೇಳಿದನೋ? ಇಲ್ಲ. ಆತನು ಅವರ ಕೃತ್ಯಗಳನ್ನು, ಅವರ ಶ್ರಮ ಮತ್ತು ಅವರ ತಾಳ್ಮೆಯನ್ನು ಹೊಗಳಿದನು ಮತ್ತು ಅವರ ಪ್ರೀತಿ, ನಂಬಿಕೆ ಮತ್ತು ಶುಶ್ರೂಷೆಯ ಕುರಿತಾಗಿ ಮಾತಾಡಿದನು. ಆದರೆ ಪಿಶಾಚನು ಅವರನ್ನು ಪರೀಕ್ಷೆಗೆ ಒಳಪಡಿಸುವನು ಮತ್ತು ಅವರು “[ತಮ್ಮ] ಕೃತ್ಯಗಳಿಗೆ ತಕ್ಕ ಹಾಗೆ” ಬಹುಮಾನಿಸಲ್ಪಡುವರೆಂದು ಅವನು ಹೇಳಿದನು.—ಪ್ರಕಟನೆ 2:2, 10, 19, 23.
ಹೀಗೆ, ಒಂದು ಧಾರ್ಮಿಕ ಕೂಟದಲ್ಲಿ ಆತನನ್ನು “ಸ್ವೀಕರಿಸಿದ” ಕೂಡಲೇ ಅವರ ರಕ್ಷಣೆಯು ಒಂದು “ತೀರಿಸಲ್ಪಟ್ಟಿರುವ ಕೆಲಸ” ಎಂದು ಅವರಿಗೆ ಹೇಳಲ್ಪಟ್ಟಿದ್ದಾಗ ಹೆಚ್ಚಿನ ಜನರು ಗ್ರಹಿಸಿರುವುದಕ್ಕಿಂತ ಹೆಚ್ಚು ಮಹತ್ತಾದ ಬದ್ಧತೆಯನ್ನು ಯೇಸು ವರ್ಣಿಸಿದನು. ಯೇಸು ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು [“ನಿರಂತರವಾಗಿ,” NW] ನನ್ನ ಹಿಂದೆ ಬರಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.”—ಮತ್ತಾಯ 16:24, 25.
ನಮ್ಮನ್ನೇ ನಿರಾಕರಿಸಿಕೊಳ್ಳುವುದೊ? ಯೇಸುವನ್ನು ನಿರಂತರವಾಗಿ ಹಿಂಬಾಲಿಸುವುದೊ? ಅದು ಪ್ರಯತ್ನವನ್ನು ಅವಶ್ಯಪಡಿಸುವುದು. ಅದು ನಮ್ಮ ಜೀವಿತಗಳನ್ನು ಬದಲಾಯಿಸುವುದು. ಆದರೂ, ನಮ್ಮಲ್ಲಿ ಕೆಲವರು ‘ನಮ್ಮ ಪ್ರಾಣಗಳನ್ನು ಕಳಕೊಳ್ಳ’ಬೇಕಾಗುವುದು—ಆತನಿಗಾಗಿ ಸಾಯಬೇಕಾಗುವುದು—ಎಂದು ಯೇಸು ನಿಜವಾಗಿ ಹೇಳಿದನೋ? ಹೌದು, ಆ ರೀತಿಯ ನಂಬಿಕೆಯು, ದೇವರ ವಾಕ್ಯದಿಂದ ನೀವು ಕಲಿಯಸಾಧ್ಯವಿರುವ ಭವ್ಯ ಸಂಗತಿಗಳ ಜ್ಞಾನದಿಂದ ಮಾತ್ರವೇ ಬರುತ್ತದೆ. “ಅವನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮಶಕ್ತಿಯನ್ನೂ ಎದುರಿಸಲಾರದೆ ಹೋದ” ಧಾರ್ಮಿಕ ಮತಭ್ರಾಂತರಿಂದ ಸ್ತೆಫನನು ಕಲ್ಲೆಸೆಯಲ್ಪಟ್ಟ ದಿನದಂದು ಇದು ವ್ಯಕ್ತವಾಗಿತ್ತು. (ಅ. ಕೃತ್ಯಗಳು 6:8-12; 7:57-60) ಮತ್ತು ಇಂತಹ ನಂಬಿಕೆಯು ನಮ್ಮ ಸಮಯದಲ್ಲಿ, ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗಳನ್ನು ಉಲ್ಲಂಘಿಸುವ ಬದಲು, ನಾಸಿ ಕೂಟ ಶಿಬಿರಗಳಲ್ಲಿ ಸತ್ತ ನೂರಾರು ಯೆಹೋವನ ಸಾಕ್ಷಿಗಳಿಂದ ಪ್ರದರ್ಶಿಸಲ್ಪಟ್ಟಿದೆ.a
ಕ್ರೈಸ್ತ ಹುರುಪು
ನಾವು ನಮ್ಮ ಕ್ರೈಸ್ತ ನಂಬಿಕೆಯನ್ನು ದೃಢವಾಗಿ ಹಿಡಿದುಕೊಂಡಿರಬೇಕು ಯಾಕಂದರೆ, ನೀವು ಕೆಲವು ಚರ್ಚುಗಳಲ್ಲಿ ಅಥವಾ ಟೆಲಿವಿಷನಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೇಳಿರಬಹುದಾದ ವಿಷಯಕ್ಕೆ ಅಸದೃಶವಾಗಿ, ನಾವು ಬಿದ್ದುಹೋಗಸಾಧ್ಯವಿದೆ ಎಂದು ಬೈಬಲ್ ಹೇಳುತ್ತದೆ. “ನೀಟಾದ ಮಾರ್ಗವನ್ನು” ತೊರೆದಂತಹ ಕ್ರೈಸ್ತರ ಕುರಿತಾಗಿ ಅದು ಹೇಳುತ್ತದೆ. (2 ಪೇತ್ರ 2:1, 15) ಹೀಗಿರುವದರಿಂದ ನಾವು ‘ಮನೋಭೀತಿಯಿಂದ ನಡುಗುವವರಾಗಿ ನಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳುವ’ ಅಗತ್ಯವಿದೆ.—ಫಿಲಿಪ್ಪಿ 2:12; 2 ಪೇತ್ರ 2:20.
ಯೇಸು ಮತ್ತು ಆತನ ಅಪೊಸ್ತಲರು ಕಲಿಸುವುದನ್ನು ವಾಸ್ತವದಲ್ಲಿ ಕೇಳಿದಂತಹ ಜನರಾದ, ಪ್ರಥಮ ಶತಮಾನದ ಕ್ರೈಸ್ತರು, ವಿಷಯವನ್ನು ಗ್ರಹಿಸಿದಂತಹ ರೀತಿ ಇದಾಗಿತ್ತೊ? ಹೌದು. ತಾವು ಏನನ್ನಾದರೂ ಮಾಡಲೇಬೇಕಿತ್ತೆಂದು ಅವರಿಗೆ ತಿಳಿದಿತ್ತು. ಯೇಸು ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
ಯೇಸು ಅದನ್ನು ಹೇಳಿದ ಕೆಲವು ವಾರಗಳ ಬಳಿಕ ಕೇವಲ ಒಂದೇ ದಿನದಲ್ಲಿ 3,000 ಜನರು ದೀಕ್ಷಾಸ್ನಾನ ಹೊಂದಿದರು. ವಿಶ್ವಾಸಿಗಳ ಸಂಖ್ಯೆಯು ಕ್ಷಿಪ್ರವಾಗಿ 5,000ಕ್ಕೆ ಬೆಳೆಯಿತು. ನಂಬಿದವರು ಇತರರಿಗೆ ಕಲಿಸಿದರು. ಹಿಂಸೆಯು ಅವರನ್ನು ಚದರಿಸಿದಾಗ, ಅದು ಅವರ ಸಂದೇಶವನ್ನು ಹರಡಿಸಲು ಉಪಯುಕ್ತವಾಯಿತಷ್ಟೇ. ಕೇವಲ ಕೆಲವು ಮುಂದಾಳುಗಳು ಮಾತ್ರವಲ್ಲ, “ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾ ವಾಕ್ಯವನ್ನು ಸಾರುತ್ತಿದ್ದರು” ಎಂದು ಬೈಬಲು ಹೇಳುತ್ತದೆ. ಆದುದರಿಂದಲೇ ಸುಮಾರು 30 ವರ್ಷಗಳ ಬಳಿಕ, ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪ”ಟ್ಟಿದೆಯೆಂದು ಅಪೊಸ್ತಲ ಪೌಲನು ಬರೆಯಶಕ್ತನಾಗಿದ್ದನು.—ಅ. ಕೃತ್ಯಗಳು 2:41; 4:4; 8:4; ಕೊಲೊಸ್ಸೆ 1:23.
ಕೆಲವು ಟಿವಿ ಸೌವಾರ್ತಿಕರು ಮಾಡುವಂತೆ, ‘ಯೇಸುವನ್ನು ಈಗಲೇ ಸ್ವೀಕರಿಸಿರಿ, ನೀವು ಸದಾಕಾಲಕ್ಕೂ ರಕ್ಷಿಸಲ್ಪಡುವಿರಿ’ ಎಂದು ಹೇಳುವ ಮೂಲಕ ಪೌಲನು ಪರಿವರ್ತಿತರನ್ನು ಮಾಡಲಿಲ್ಲ. ಇಲ್ಲವೇ ಹೀಗೆ ಬರೆದಂತಹ ಅಮೆರಿಕದ ವೈದಿಕನ ಭರವಸೆಯೂ ಅವನಿಗಿರಲಿಲ್ಲ: “ಒಬ್ಬ ಹದಿವಯಸ್ಕನಾಗಿದ್ದಾಗಲೇ . . . ನಾನು ರಕ್ಷಿಸಲ್ಪಟ್ಟಿದ್ದೆ.” ರಾಷ್ಟ್ರಗಳ ಜನರಿಗೆ ಕ್ರೈಸ್ತ ಸಂದೇಶವನ್ನು ಕೊಂಡೊಯ್ಯಲು ಯೇಸು ಪೌಲನನ್ನು ವೈಯಕ್ತಿಕವಾಗಿ ಆರಿಸಿದ 20ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ, ಈ ಶ್ರಮಜೀವಿಯಾದ ಅಪೊಸ್ತಲನು ಬರೆದುದು: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.”—1 ಕೊರಿಂಥ 9:27; ಅ. ಕೃತ್ಯಗಳು 9:5, 6, 15.
ರಕ್ಷಣೆಯು ದೇವರಿಂದ ಬರುವ ಒಂದು ಉಚಿತ ಕೊಡುಗೆಯಾಗಿದೆ. ಅದನ್ನು ಸಂಪಾದಿಸಲು ಸಾಧ್ಯವಿಲ್ಲ. ಆದರೂ ಅದು ನಮ್ಮ ವತಿಯಿಂದ ಪ್ರಯತ್ನವನ್ನು ಅವಶ್ಯಪಡಿಸುತ್ತದೆ. ಯಾರಾದರೊಬ್ಬರು ನಿಮಗೆ ತುಂಬಾ ಅಮೂಲ್ಯವಾಗಿರುವ ಒಂದು ಕೊಡುಗೆಯನ್ನು ನೀಡುವುದಾದರೆ, ಮತ್ತು ನೀವು ಅದನ್ನು ತೆಗೆದುಕೊಂಡು ನಿಮ್ಮೊಂದಿಗೆ ಒಯ್ಯಲು ಸಾಕಷ್ಟು ಗಣ್ಯತೆಯನ್ನು ತೋರಿಸದಿದ್ದಲ್ಲಿ, ಕೃತಜ್ಞತೆಯ ನಿಮ್ಮ ಕೊರತೆಯು, ಅದನ್ನು ಬೇರೆ ಯಾರಾದರೊಬ್ಬರಿಗೆ ನೀಡುವಂತೆ ಕೊಡುಗನನ್ನು ಪ್ರೇರಿಸಬಹುದು. ಒಳ್ಳೇದು ಯೇಸು ಕ್ರಿಸ್ತನ ಜೀವರಕ್ತವು ಎಷ್ಟು ಅಮೂಲ್ಯವಾಗಿದೆ? ಅದೊಂದು ಉಚಿತ ಕೊಡುಗೆಯಾಗಿದೆ, ಆದರೆ ನಾವು ಅದಕ್ಕಾಗಿ ಆಳವಾದ ಗಣ್ಯತೆಯನ್ನು ಪ್ರದರ್ಶಿಸಬೇಕು.
ನಿಜ ಕ್ರೈಸ್ತರು ದೇವರ ಮುಂದೆ ಒಂದು ಮೆಚ್ಚುಗೆಯ ಸ್ಥಾನದಲ್ಲಿರುವ ಕಾರಣದಿಂದ ಅವರು ರಕ್ಷಿಸಲ್ಪಟ್ಟಿರುವ ಒಂದು ಸ್ಥಿತಿಯಲ್ಲಿದ್ದಾರೆ. ಒಂದು ಗುಂಪಿನೋಪಾದಿ, ಅವರ ರಕ್ಷಣೆಯು ಖಚಿತವಾಗಿದೆ. ವ್ಯಕ್ತಿಪರವಾಗಿ, ಅವರು ದೇವರ ಅವಶ್ಯಕತೆಗಳನ್ನು ತಲಪಬೇಕು. ಆದರೂ, ನಾವು ತಪ್ಪಿಬೀಳಬಹುದು, ಯಾಕಂದರೆ ಯೇಸು ಹೇಳಿದ್ದು: “ಯಾವನು ನನ್ನಲ್ಲಿ ನೆಲೆಗೊಂಡಿರುವದಿಲ್ಲವೋ ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು.”—ಯೋಹಾನ 15:6.
‘ದೇವರ ವಾಕ್ಯವು ಸಜೀವವಾಗಿದೆ’
ಇದಕ್ಕೆ ಮುಂಚಿನ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಸಂಭಾಷಣೆಯು ಬಹುಮಟ್ಟಿಗೆ 60 ವರ್ಷಗಳ ಹಿಂದೆ ಸಂಭವಿಸಿತು. ರಕ್ಷಣೆಯು ಕೇವಲ ಯೇಸು ಕ್ರಿಸ್ತನ ಮೂಲಕವೇ ಬರುತ್ತದೆ ಎಂದು ಜಾನಿ ಇನ್ನೂ ನಂಬುತ್ತಾನೆ, ಆದರೆ ನಾವು ಅದನ್ನು ಎಟುಕಿಸಿಕೊಳ್ಳಬೇಕೆಂಬುದನ್ನು ಅವನು ಗ್ರಹಿಸುತ್ತಾನೆ. ಮಾನವಕುಲಕ್ಕಾಗಿರುವ ನಿರೀಕ್ಷೆಯ ಏಕೈಕ ನಿಜ ಮೂಲದ ಕಡೆಗೆ ಬೈಬಲ್ ನಿರ್ದೇಶಿಸುತ್ತದೆ ಮತ್ತು ನಾವು ಆ ಅದ್ಭುತಕರವಾದ ಪುಸ್ತಕವನ್ನು ಅಭ್ಯಾಸಿಸಬೇಕು, ಅದರಿಂದ ಪ್ರೇರೇಪಿಸಲ್ಪಡಬೇಕು, ಮತ್ತು ಅದು ನಮ್ಮನ್ನು ಪ್ರೀತಿ, ನಂಬಿಕೆ, ದಯೆ, ವಿಧೇಯತೆ ಮತ್ತು ತಾಳ್ಮೆಯ ಕೃತ್ಯಗಳನ್ನು ಮಾಡಲು ಪ್ರಚೋದಿಸುವಂತೆ ಬಿಡಬೇಕು ಎಂಬ ವಿಷಯದಲ್ಲಿ ಅವನು ಮನವರಿಕೆಯುಳ್ಳವನಾಗಿ ಉಳಿದಿದ್ದಾನೆ. ಅವನ ಮಕ್ಕಳು ಇದೇ ಸಂಗತಿಗಳನ್ನು ನಂಬುವಂತೆ ಅವರನ್ನು ಪೋಷಿಸಿದ್ದಾನೆ, ಮತ್ತು ಅದಕ್ಕೆ ಪ್ರತಿಯಾಗಿ ಈಗ ಅವರು ತಮ್ಮ ಮಕ್ಕಳನ್ನು ಅದೇ ರೀತಿಯಲ್ಲಿ ಪೋಷಿಸುತ್ತಿರುವದನ್ನು ಕಾಣಲು ಸಂತೋಷಿತನಾಗಿದ್ದಾನೆ. ಪ್ರತಿಯೊಬ್ಬನಿಗೆ ಆ ರೀತಿಯ ನಂಬಿಕೆಯಿದ್ದಿದ್ದರೆ ಚೆನ್ನಾಗಿರುತ್ತಿತ್ತೆಂದು ಅವನು ಹಾರೈಸುತ್ತಾನೆ, ಮತ್ತು ಅವನು ಅದನ್ನು ಇತರರ ಹೃದಮನಸ್ಸುಗಳಲ್ಲಿ ಬೇರೂರುವಂತೆ ಮಾಡಲು ತನ್ನಿಂದ ಸಾಧ್ಯವಾದುದೆಲ್ಲವನ್ನು ಮಾಡುತ್ತಾನೆ.
“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಎಂದು ಬರೆಯುವಂತೆ ಅಪೊಸ್ತಲ ಪೌಲನು ಪ್ರೇರಿಸಲ್ಪಟ್ಟಿದ್ದನು. (ಇಬ್ರಿಯ 4:12) ಅದು ಜೀವಿತಗಳನ್ನು ಬದಲಾಯಿಸಬಲ್ಲದು. ಅದು ಪ್ರೀತಿ, ನಂಬಿಕೆ ಮತ್ತು ವಿಧೇಯತೆಯ ಹೃತ್ಪೂರ್ವಕ ಕೃತ್ಯಗಳಿಗೆ ನಿಮ್ಮನ್ನು ಪ್ರಚೋದಿಸಬಲ್ಲದು. ಆದರೆ ಬೈಬಲು ಏನು ಹೇಳುತ್ತದೊ ಅದನ್ನು ಕೇವಲ ಮಾನಸಿಕವಾಗಿ “ಸ್ವೀಕರಿಸು”ವುದಕ್ಕಿಂತ ಹೆಚ್ಚಿನದ್ದನ್ನು ನೀವು ಮಾಡಬೇಕು. ಅದನ್ನು ಅಭ್ಯಾಸಿಸಿರಿ ಮತ್ತು ಅದರಿಂದ ನಿಮ್ಮ ಹೃದಯವು ಪ್ರಚೋದಿಸಲ್ಪಡುವಂತೆ ಬಿಟ್ಟುಕೊಡಿರಿ. ಅದರ ವಿವೇಕವು ನಿಮ್ಮನ್ನು ಮಾರ್ಗದರ್ಶಿಸಲಿ. 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಸುಮಾರು 50,00,000 ಸಿದ್ಧಮನಸ್ಸಿನ ಯೆಹೋವನ ಸಾಕ್ಷಿಗಳು ಉಚಿತ ಮನೆ ಬೈಬಲ್ ಅಭ್ಯಾಸಗಳನ್ನು ನೀಡುತ್ತಾರೆ. ಅಂತಹ ಒಂದು ಅಭ್ಯಾಸದಿಂದ ನೀವು ಏನನ್ನು ಕಲಿಯಸಾಧ್ಯವಿದೆಯೆಂದು ನೋಡಲಿಕ್ಕಾಗಿ, ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. ನೀವು ಗಳಿಸುವ ನಂಬಿಕೆ ಮತ್ತು ಆತ್ಮಿಕ ಬಲವು ನಿಮ್ಮನ್ನು ಸಂತೋಷಗೊಳಿಸುವುದು!
[ಪಾದಟಿಪ್ಪಣಿ]
a ದ ನಾಸಿ ಸ್ಟೇಟ್ ಆ್ಯಂಡ್ ದ ನ್ಯೂ ರಿಲಿಜನ್ಸ್: ಫೈವ್ ಕೇಸ್ ಸ್ಟಡೀಸ್ ಇನ್ ನಾನ್-ಕನ್ಫರ್ಮಿಟಿ, ಎಂಬ ತನ್ನ ಪುಸ್ತಕದಲ್ಲಿ ಡಾ. ಕ್ರಿಸ್ಟೀನ್ ಇ. ಕಿಂಗ್ ವರದಿಸಿದ್ದು: “ಪ್ರತಿ ಇಬ್ಬರು ಜರ್ಮನ್ [ಯೆಹೋವನ] ಸಾಕ್ಷಿಗಳಲ್ಲಿ ಒಬ್ಬ ಸಾಕ್ಷಿಯು ಸೆರೆಮನೆಗೆ ಹಾಕಲ್ಪಟ್ಟನು, ನಾಲ್ವರಲ್ಲಿ ಒಬ್ಬರು ತಮ್ಮ ಜೀವಗಳನ್ನು ಕಳೆದುಕೊಂಡರು.”
[ಪುಟ 7 ರಲ್ಲಿರುವ ಚೌಕ]
‘ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ಹೋರಾಡಬೇಕು’ ಏಕೆ?
ಬೈಬಲಿನ ಯೂದ ಪುಸ್ತಕವು, “ಯೇಸು ಕ್ರಿಸ್ತನಿಗಾಗಿ ಕಾಯಲ್ಪಟ್ಟವರೂ . . . ಕರೆಯಲ್ಪಟ್ಟ”ವರಿಗೆ ಸಂಬೋಧಿಸಲ್ಪಟ್ಟಿದೆ. ಅವರು ‘ಯೇಸುವನ್ನು ಸ್ವೀಕರಿಸಿ’ದ ಕಾರಣದಿಂದ ಅವರ ರಕ್ಷಣೆಯು ನಿಶ್ಚಿತವಾಗಿತ್ತೆಂದು ಅದು ಹೇಳುತ್ತದೋ? ಇಲ್ಲ, ಯೂದನು ಅಂತಹ ಕ್ರೈಸ್ತರಿಗೆ “ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ . . . ಹೋರಾಡಬೇಕೆಂದು” ಹೇಳಿದನು. ಹಾಗೆ ಮಾಡುವುದಕ್ಕಾಗಿ ಅವನು ಅವರಿಗೆ ಮೂರು ಕಾರಣಗಳನ್ನು ಕೊಟ್ಟನು. ಮೊದಲನೆಯದಾಗಿ, ದೇವರು “ತನ್ನ ಪ್ರಜೆಯನ್ನು ಐಗುಪ್ತ ದೇಶದೊಳಗಿಂದ ಬಿಡಿಸಿ”ದನು, ಆದರೆ ಅನಂತರ ಅವರಲ್ಲಿ ಅನೇಕರು ಬಿದ್ದುಹೋದರು. ಎರಡನೆಯದಾಗಿ, ದೇವದೂತರು ಕೂಡ ದಂಗೆಯೆದ್ದರು ಮತ್ತು ದೆವ್ವಗಳಾಗಿ ಪರಿಣಮಿಸಿದರು. ಮೂರನೆಯದಾಗಿ, ದೇವರು ಸೊದೋಮ್ ಗೊಮೋರವನ್ನು ನಾಶಮಾಡಿದ್ದು, ಆ ಪಟ್ಟಣಗಳಲ್ಲಿ ಆಚರಿಸಲ್ಪಡುತ್ತಿದ್ದ ವಿಪರೀತ ಲೈಂಗಿಕ ಅನೈತಿಕತೆಯ ಕಾರಣದಿಂದಲೇ. ಯೂದನು ಈ ಬೈಬಲ್ ಸಂಬಂಧಿತ ವೃತ್ತಾಂತಗಳನ್ನು “ಒಂದು ಎಚ್ಚರಿಕೆಯ ಉದಾಹರಣೆಯಾಗಿ” (NW) ಸಾದರಪಡಿಸುತ್ತಾನೆ. ಹೌದು, “ಯೇಸು ಕ್ರಿಸ್ತನಿಗಾಗಿ ಕಾಯಲ್ಪಟ್ಟ” ವಿಶ್ವಾಸಿಗಳು ಸಹ ನಿಜ ನಂಬಿಕೆಯಿಂದ ಬಿದ್ದುಹೋಗದಿರುವಂತೆ ಜಾಗ್ರತೆ ವಹಿಸಬೇಕು.—ಯೂದ 1-7.
[ಪುಟ 8 ರಲ್ಲಿರುವ ಚೌಕ]
ಯಾವುದು ಸರಿ?
ಬೈಬಲು ಹೇಳುವುದು: “ಧರ್ಮಪ್ರಮಾಣಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡು”ತ್ತಾರೆ. ಅದು ಇದನ್ನೂ ಹೇಳುತ್ತದೆ: “ಮನುಷ್ಯನು ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೇ ಹೊರತು ಬರೀ ನಂಬಿಕೆಯಿಂದಲ್ಲ.” ಯಾವುದು ಸರಿ? ನಾವು ನೀತಿವಂತರಾಗಿ ನಿರ್ಣಯಿಸಲ್ಪಡುವುದು ನಂಬಿಕೆಯಿಂದಲೊ ಕ್ರಿಯೆಗಳಿಂದಲೊ?—ರೋಮಾಪುರ 3:28; ಯಾಕೋಬ 2:24.
ಬೈಬಲಿನಿಂದ ಬರುವ ಸಮಂಜಸ ಉತ್ತರವೇನಂದರೆ ಎರಡೂ ಸರಿಯಾಗಿವೆ.
ದೇವರು ಮೋಶೆಯ ಮೂಲಕ ಕೊಟ್ಟಂತಹ ನಿಯಮವು, ಅನೇಕ ಶತಮಾನಗಳ ವರೆಗೆ ಯೆಹೂದಿ ಆರಾಧಕರು ನಿರ್ದಿಷ್ಟ ಯಜ್ಞಗಳನ್ನು ಮತ್ತು ಅರ್ಪಣೆಗಳನ್ನು ಮಾಡಲು, ಹಬ್ಬದ ದಿನಗಳನ್ನು ಆಚರಿಸಲು, ಆಹಾರಪಥ್ಯ ಮತ್ತು ಇತರ ಆವಶ್ಯಕತೆಗಳನ್ನು ಪಾಲಿಸುವಂತೆ ಅವಶ್ಯಪಡಿಸಿತ್ತು. ಯೇಸು ಪರಿಪೂರ್ಣ ಯಜ್ಞವನ್ನು ಒದಗಿಸಿದ ನಂತರ, ಅಂತಹ “ಧರ್ಮಪ್ರಮಾಣಸಂಬಂಧವಾದ ಕರ್ಮ”ಗಳು ಅಥವಾ ಬರೀ “ಕ್ರಿಯೆಗಳು,” ಇನ್ನುಮುಂದೆ ಅಗತ್ಯವಿರಲಿಲ್ಲ.—ರೋಮಾಪುರ 10:4.
ಆದರೆ ಮೋಶೆಯ ನಿಯಮಶಾಸ್ತ್ರದ ಕೆಳಗೆ ನಡಿಸಲ್ಪಟ್ಟ ಈ ಕ್ರಿಯೆಗಳು ಯೇಸುವಿನ ಶ್ರೇಷ್ಠ ಯಜ್ಞದಿಂದ ಸ್ಥಾನಪಲ್ಲಟಗೊಳಿಸಲ್ಪಟ್ಟವು ಎಂಬ ವಾಸ್ತವಾಂಶವು, ನಾವು ಬೈಬಲಿನ ಉಪದೇಶಗಳನ್ನು ಅಲಕ್ಷಿಸಬಹುದು ಎಂಬುದನ್ನು ಅರ್ಥೈಸುವುದಿಲ್ಲ. ಅದು ಹೇಳುವುದು: “ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಮ್ಮನ್ನು [ಹಳೆಯ] ನಿರ್ಜೀವಕರ್ಮಗಳಿಂದ ಬಿಡಿಸಿ, ನಾವು ಜೀವಿಸುತ್ತಿರುವ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುವಂತೆ ನಮ್ಮ ಮನಸ್ಸಾಕ್ಷಿಗಳನ್ನು ಶುದ್ಧೀಕರಿಸುವುದಲ್ಲವೇ?”—ಇಬ್ರಿಯ 9:14, NW.
ನಾವು “ಜೀವಿಸುತ್ತಿರುವ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿ”ಸುವುದು ಹೇಗೆ? ಇತರ ವಿಷಯಗಳೊಂದಿಗೆ ಬೈಬಲು ನಮಗೆ, ಶರೀರದ ಕರ್ಮಗಳನ್ನು ಹೋರಾಡಲು, ಲೋಕದ ಅನೈತಿಕತೆಯನ್ನು ಪ್ರತಿರೋಧಿಸಲು, ಮತ್ತು ಅದರ ಪಾಶಗಳನ್ನು ಹೋಗಲಾಡಿಸಲು ಹೇಳುತ್ತದೆ. ಅದು ಹೇಳುವುದು: “ನಂಬಿಕೆಯ ಶ್ರೇಷ್ಠ ಹೋರಾಟವನ್ನು ಹೋರಾಡು,” “ಸುಲಭವಾಗಿ ಹತ್ತಿಕೊಳ್ಳುವ ಪಾಪವನ್ನು” ತೆಗೆದುಹಾಕು ಮತ್ತು “ನಮ್ಮ ನಂಬಿಕೆಯ ಮುಖ್ಯ ನಿಯೋಗಿ ಮತ್ತು ಪರಿಪೂರ್ಣಗೊಳಿಸುವವನಾದ ಯೇಸುವಿನ ಕಡೆಗೆ ನಾವು ಶ್ರದ್ಧಾಪೂರ್ವಕವಾಗಿ ನೋಡುತ್ತಿರುವಂತೆ, ನಮ್ಮ ಮುಂದೆ ಇಡಲ್ಪಟ್ಟಿರುವ ಓಟವನ್ನು ತಾಳ್ಮೆಯಿಂದ ಓಡು” (NW). ಮತ್ತು ‘ಬಳಲಿ ನಮ್ಮ ಪ್ರಾಣಗಳಲ್ಲಿ ಬಿಟ್ಟುಕೊಡದಂತೆ’ ಬೈಬಲು ನಮ್ಮನ್ನು ಪ್ರೇರೇಪಿಸುತ್ತದೆ.—1 ತಿಮೊಥೆಯ 6:12; ಇಬ್ರಿಯ 12:1-3; ಗಲಾತ್ಯ 5:19-21.
ಈ ವಿಷಯಗಳನ್ನು ಮಾಡುವುದರಿಂದ ನಾವು ರಕ್ಷಣೆಯನ್ನು ಸಂಪಾದಿಸುವುದಿಲ್ಲ, ಯಾಕಂದರೆ ಇಂತಹ ಒಂದು ದಂಗು ಬಡಿಸುವ ಆಶೀರ್ವಾದಕ್ಕೆ ಅರ್ಹನಾಗಲು ಯಾವ ಮನುಷ್ಯನೂ ಎಂದೂ ಸಾಕಷ್ಟನ್ನು ಮಾಡಲಾರನು. ಆದರೆ, ದೇವರು ಮತ್ತು ಕ್ರಿಸ್ತನು ನಾವು ಮಾಡಬೇಕೆಂದು ಬಯಸುವ, ಬೈಬಲು ಹೇಳುವ ಸಂಗತಿಗಳನ್ನು ಮಾಡುವ ಮೂಲಕ ನಾವು ನಮ್ಮ ಪ್ರೀತಿ ಮತ್ತು ವಿಧೇಯತೆಯನ್ನು ಪ್ರದರ್ಶಿಸಲು ತಪ್ಪಿಹೋಗುವುದಾದರೆ, ನಾವು ಈ ಭವ್ಯ ಕೊಡುಗೆಗೆ ಅರ್ಹರಾಗುವುದಿಲ್ಲ. ನಮ್ಮ ನಂಬಿಕೆಯನ್ನು ಪ್ರದರ್ಶಿಸಲು ಕ್ರಿಯೆಗಳಿಲ್ಲದೆ, ಯೇಸುವನ್ನು ಹಿಂಬಾಲಿಸುತ್ತೇವೆಂಬ ನಮ್ಮ ವಾದವು ತೀರ ನ್ಯೂನವಾಗಿರುವುದು, ಯಾಕಂದರೆ ಬೈಬಲು ಸ್ಪಷ್ಟವಾಗಿ ತಿಳಿಸುವುದು: “ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.”—ಯಾಕೋಬ 2:17.
[ಪುಟ 7 ರಲ್ಲಿರುವ ಚಿತ್ರ]
ಬೈಬಲನ್ನು ಅಭ್ಯಾಸಿಸಿರಿ ಮತ್ತು ಅದರಿಂದ ಪ್ರಚೋದಿಸಲ್ಪಡಿರಿ