ಅಧ್ಯಾಯ 14
ಯೆಹೋವನ ದಿವ್ಯ ಸಿಂಹಾಸನದ ಶೋಭೆ
ದರ್ಶನ 2—ಪ್ರಕಟನೆ 4:1—5:14
ವಿಷಯ: ದೇವರ ನ್ಯಾಯತೀರ್ಪಿನ ಸಿಂಹಾಸನದ ಮುಂದೆ ಭಯಚಕಿತಗೊಳಿಸುವ ಸಂಭವಗಳು
ನೆರವೇರಿಕೆಯ ಸಮಯ: 1914 ರಿಂದ ಆರಂಭಿಸಿ ಸಹಸ್ರ ವರ್ಷಗಳ ಅಂತ್ಯದ ತನಕ ಮತ್ತು ತದನಂತರ, ಪರಲೋಕ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಸೃಷ್ಟಿಯು ಯೆಹೋವನನ್ನು ಸ್ತುತಿಸುವ ಸಮಯದ ತನಕ ನಡೆಯುವ ಘಟನೆಗಳನ್ನು ಈ ದರ್ಶನವು ಪ್ರದರ್ಶಿಸುತ್ತದೆ.—ಪ್ರಕಟನೆ 5:13
1. ನಮ್ಮೊಂದಿಗೆ ಯೋಹಾನನು ಹಂಚಿಕೊಳ್ಳುವ ದರ್ಶನಗಳಲ್ಲಿ ನಾವು ತೀವ್ರಾಸಕ್ತಿಯುಳ್ಳವರಾಗಿರಬೇಕು ಯಾಕೆ?
ಯೋಹಾನನು ಇನ್ನಷ್ಟು ಆತ್ಮ ಕಲಕುವ ದರ್ಶನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಆರಂಭಿಸುತ್ತಾನೆ. ದೇವಪ್ರೇರಣೆಯಿಂದ ಅವನಿನ್ನೂ ಕರ್ತನ ದಿನದಲ್ಲಿಯೇ ಇದ್ದಾನೆ. ಆದುದರಿಂದ ಅವನೇನು ವರ್ಣಿಸುತ್ತಾನೋ, ಅದು ಆ ದಿನದಲ್ಲಿ ವಾಸ್ತವದಲ್ಲಿ ಜೀವಿಸುವ ನಮ್ಮೆಲ್ಲರಿಗಾಗಿ ಒಂದು ಆಳವಾದ ಅರ್ಥವನ್ನು ಕೊಡುತ್ತದೆ. ಈ ದರ್ಶನಗಳ ಮೂಲಕ, ಯೆಹೋವನು ಸ್ವರ್ಗೀಯ ನೈಜತೆಗಳ ಮೇಲಿನ ಅಗೋಚರತೆಗಳ ಮುಸುಕನ್ನು ತೆರೆಯುತ್ತಾನೆ ಮತ್ತು ಭೂಮಿಯ ಮೇಲೆ ಜಾರಿಗೊಳಿಸಲಿರುವ ಅವನ ನ್ಯಾಯತೀರ್ಪಿನ ಅವನ ಸ್ವಂತ ನೋಟಗಳನ್ನು ನಮಗೆ ಕೊಡುತ್ತಾನೆ. ಅದಲ್ಲದೆ, ನಮಗೆ ಸ್ವರ್ಗೀಯ ಅಥವಾ ಐಹಿಕ ನಿರೀಕ್ಷೆಯಿರಲಿ, ಯೆಹೋವನ ಉದ್ದೇಶದಲ್ಲಿ ನಮ್ಮ ಸ್ಥಾನವನ್ನು ನೋಡಲು ಈ ಪ್ರಕಟನೆಗಳು ನಮಗೆ ಸಹಾಯ ಮಾಡುತ್ತವೆ. ಆದಕಾರಣ, ನಾವೆಲ್ಲರೂ ಯೋಹಾನನು ಹೇಳುವ ಮಾತುಗಳಲ್ಲಿ ತೀವ್ರಾಸಕ್ತಿಯುಳ್ಳವರಾಗಿರುತ್ತಾ ಮುಂದುವರಿಯಬೇಕು: “ಈ ಪ್ರವಾದನಾ ಮಾತುಗಳನ್ನು ಗಟ್ಟಿಯಾಗಿ ಓದುವವನೂ ಕೇಳುವವರೂ, ಮತ್ತು ಅದರಲ್ಲಿ ಬರೆದಿರುವ ಸಂಗತಿಗಳನ್ನು ಕೈಕೊಂಡು ನಡೆಯುವವರೂ ಸಂತೋಷಿಗಳು.”—ಪ್ರಕಟನೆ 1:3, NW.
2. ಈಗ ಯೋಹಾನನಿಗೆ ಯಾವ ಅನುಭವವಾಗುತ್ತದೆ?
2 ಅನಂತರ ಯೋಹಾನನು ಏನನ್ನು ವೀಕ್ಷಿಸುತ್ತಾನೋ ಅದು 20 ನೆಯ ಶತಕದ ಮನುಷ್ಯನಿಗೆ ವಿಡಿಯೋ ಮೂಲಕ ಸಾದರ ಪಡಿಸಲ್ಪಟ್ಟ ಯಾವುದಕ್ಕಿಂತಲೂ ಮಿಗಿಲಾದದ್ದು! ಅವನು ಬರೆಯುವುದು: “ಇವುಗಳಾದ ಮೇಲೆ ನಾನು ನೋಡಿದೆನು, ಮತ್ತು ಇಗೋ! ಪರಲೋಕದಲ್ಲಿ ತೆರೆದಿದ್ದ ಒಂದು ಬಾಗಿಲು, ಮತ್ತು ನಾನು ಕೇಳಿದ ಮೊದಲ ವಾಣಿ ಒಂದು ತುತೂರಿಯಿಂದಲೋ ಎಂಬಂತೆ ಇದ್ದು, ನನ್ನ ಸಂಗಡ ಮಾತಾಡುತ್ತಾ ಹೇಳಿದ್ದು: ‘ಇಲ್ಲಿ ಮೇಲಕ್ಕೆ ಬಾ, ಮತ್ತು ಮುಂದಕ್ಕೆ ಆಗಬೇಕಾದ ಸಂಗತಿಗಳನ್ನು ನಾನು ನಿನಗೆ ತೋರಿಸುವೆನು.’” (ಪ್ರಕಟನೆ 4:1, NW) ದರ್ಶನದಲ್ಲಿ ಯೋಹಾನನು ಆಧುನಿಕ ಗಗನಯಾತ್ರಿಗಳಿಂದ ಅನ್ವೇಷಿಸಲ್ಪಟ್ಟ ಭೌತ ಹೊರಾಂತರಾಳಕ್ಕಿಂತಲೂ ಎಷ್ಟೋ ಎತ್ತರದಲ್ಲಿರುವ, ದ್ರವ್ಯ ವಿಶ್ವದ ಆಕಾಶಗಂಗೆಗಳಿಗಿಂತಲೂ ಕೂಡ ಎಷ್ಟೋ ಉನ್ನತದಲ್ಲಿರುವ, ಯೆಹೋವನ ಸಾನ್ನಿಧ್ಯದ ದಿವ್ಯ ಅಗೋಚರತೆಯನ್ನು ತೂರಿಕೊಂಡು ಹೋಗುತ್ತಾನೆ. ತೆರೆದಿದ್ದ ಬಾಗಿಲಿನೊಳಗಿಂದ ಪ್ರವೇಶಿಸುವವನಂತೆ, ಯೆಹೋವನು ಸ್ವತಃ ಸಿಂಹಾಸನಾರೂಢನಾಗಿರುವ ಕಟ್ಟಕಡೆಯ ಆತ್ಮ ಸ್ವರ್ಗಗಳ ಉಸಿರುಗಟ್ಟಿಸುವ ಅವಿಚ್ಛಿನ್ನ ದೃಶ್ಯವನ್ನು ತನ್ನ ಕಣ್ಣುಗಳಿಗೆ ರಸದೌತಣವಾಗಿ ಉಣಿಸುವಂತೆ ಯೋಹಾನನನ್ನು ಆಮಂತ್ರಿಸಲಾಯಿತು. (ಕೀರ್ತನೆ 11:4; ಯೆಶಾಯ 66:1) ಎಂತಹ ಒಂದು ಸುಯೋಗ!
3. “ತುತೂರಿಯಿಂದಲೋ ಎಂಬಂತೆ” ಇದ್ದ ವಾಣಿಯು ಯಾವುದನ್ನು ಮನಸ್ಸಿಗೆ ತರುತ್ತದೆ, ಮತ್ತು ಅದರ ಉಗಮನು ನಿಸ್ಸಂದೇಹವಾಗಿ ಯಾರಾಗಿರುತ್ತಾನೆ?
3 ಬೈಬಲ್ ಈ “ಮೊದಲ ವಾಣಿ”ಯನ್ನು ಗುರುತಿಸುವುದಿಲ್ಲ. ಈ ಮೊದಲು ಕೇಳಿದ ಯೇಸುವಿನ ಬಲವಾದ ವಾಣಿಯಂತೆ, ಇದಕ್ಕೆ ಆಜ್ಞಾಧಿಕಾರದ ತುತೂರಿಯಂತಹ ಧ್ವನಿಯಿತ್ತು. (ಪ್ರಕಟನೆ 1:10, 11) ಸೀನಾಯಿ ಬೆಟ್ಟದ ಮೇಲೆ ಯೆಹೋವನ ಸಾನ್ನಿಧ್ಯವನ್ನು ಸೂಚಿಸಿದ ಭೇದಿಸಿಕೊಂಡು ಬಂದ ತುತೂರಿಯ ಧ್ವನಿಘೋಷವನ್ನು ಅದು ಮನಸ್ಸಿಗೆ ತರುತ್ತದೆ. (ವಿಮೋಚನಕಾಂಡ 19:18-20) ನಿಸ್ಸಂದೇಹವಾಗಿ, ಯೆಹೋವನು ಹಾಜರಾಗಲು ಅಪ್ಪಣೆಗಳನ್ನೀಯುವುದರ ಮಹಾ ವೈಭವದ ಮೂಲನಾಗಿದ್ದಾನೆ. (ಪ್ರಕಟನೆ 1:1) ದರ್ಶನದಲ್ಲಿ, ಯೆಹೋವನ ಸಾರ್ವಭೌಮತೆಯ ಅಪಾರವಾದ ಸಾಮ್ರಾಜ್ಯದ ಅತಿ ಪವಿತ್ರ ಸ್ಥಾನದಲ್ಲಿ ಯೋಹಾನನು ಪ್ರವೇಶಿಸುವಂತೆ ಅವನು ಬಾಗಿಲನ್ನು ತೆರೆದಿದ್ದಾನೆ.
ಯೆಹೋವನ ಕಣ್ಣುಕೋರೈಸುವ ಸಾನ್ನಿಧ್ಯ
4. (ಎ) ಅಭಿಷಿಕ್ತ ಕ್ರೈಸ್ತರಿಗೆ ಯೋಹಾನನ ದರ್ಶನವು ಯಾವ ಅರ್ಥದಲ್ಲಿದೆ? (ಬಿ) ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿರುವವರಿಗೆ ಈ ದರ್ಶನವು ಯಾವ ಅರ್ಥದಲ್ಲಿದೆ?
4 ಯೋಹಾನನು ಏನನ್ನು ನೋಡುತ್ತಾನೆ? ಅವನ ಮಹತ್ತಾದ ಅನುಭವವನ್ನು ನಮ್ಮೊಂದಿಗೆ ಈಗ ಹಂಚಿಕೊಳ್ಳುವಾಗ, ಆಲಿಸಿರಿ: “ಇವುಗಳಾದ ಮೇಲೆ ಕೂಡಲೆ ನಾನು ಆತ್ಮವಶನಾದೆನು: ಮತ್ತು ಇಗೋ! ಪರಲೋಕದಲ್ಲಿ ಒಂದು ಸಿಂಹಾಸನವು ಅದರ ಸ್ಥಾನದಲ್ಲಿತ್ತು, ಮತ್ತು ಸಿಂಹಾಸನದ ಮೇಲೆ ಒಬ್ಬನು ಕೂತಿದ್ದನು.” (ಪ್ರಕಟನೆ 4:2, NW) ಆ ಕ್ಷಣದಲ್ಲಿಯೇ, ದೇವರ ಕಾರ್ಯಕಾರೀ ಶಕ್ತಿಯ ಮೂಲಕ ಯೋಹಾನನು ಯೆಹೋವನ ಸಿಂಹಾಸನದ ಬಳಿಯೇ ರವಾನಿಸಲ್ಪಡುತ್ತಾನೆ. ಯೋಹಾನನಿಗೆ ಎಷ್ಟು ರೋಮಾಂಚವಾಗಿದ್ದಿರಬೇಕು! ಎಲ್ಲಿ “ಲಯ ಕಳಂಕ ಕ್ಷಯಗಳಿಲ್ಲದ ಬಾಧ್ಯತೆಯು” ಅವನಿಗೆ ಮತ್ತು ಇತರ ಅಭಿಷಿಕ್ತ ಕ್ರೈಸ್ತರಿಗಾಗಿ ಕಾದಿರಿಸಲ್ಪಟ್ಟಿದೆಯೋ, ಆ ಪರಲೋಕದ ಉಜ್ವಲ ಪ್ರಭೆಯ ಪೂರ್ವವೀಕ್ಷಣೆಯನ್ನು ಅವನಿಗೆ ಇಲ್ಲಿ ಕೊಡಲಾಗುತ್ತದೆ. (1 ಪೇತ್ರ 1:3-5; ಫಿಲಿಪ್ಪಿ 3:20) ಯೋಹಾನನ ದರ್ಶನವು ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿರುವವರಿಗೂ ಕೂಡ ಅಗಾಧವಾದ ಅರ್ಥದಲ್ಲಿರುತ್ತದೆ. ಯೆಹೋವನ ಸಾನ್ನಿಧ್ಯದ ಮಹಿಮೆಯನ್ನು ಮತ್ತು ಜನಾಂಗಗಳ ನ್ಯಾಯತೀರಿಸಲು ಯೆಹೋವನಿಂದ ಉಪಯೋಗಿಸಲ್ಪಡುವ ಸ್ವರ್ಗೀಯ ಆಡಳಿತ ಸ್ವರೂಪವನ್ನು ಮತ್ತು ಅನಂತರ ಭೂಮಿಯ ಮೇಲೆ ಮಾನವ ಜೀವನಗಳ ಕಾರ್ಯಭಾರವನ್ನು ಗ್ರಹಿಸಿಕೊಳ್ಳಲು ಅವರಿಗೆ ಅದು ಸಹಾಯ ಮಾಡುತ್ತದೆ. ಖಂಡಿತವಾಗಿಯೂ ಯೆಹೋವನು ಬಲು ಸೊಗಸಾದ ಸಂಘಟನೆಯ ದೇವರಾಗಿರುತ್ತಾನೆ!
5. ಒಡಂಬಡಿಕೆಯ ಮಂಜೂಷದ ಆವರಣದಿಂದ ಸಾಂಕೇತಿಸಲ್ಪಟ್ಟ ಯಾವ ವಾಸ್ತವತೆಯನ್ನು ಯೋಹಾನನು ಕಾಣುತ್ತಾನೆ?
5 ಯೋಹಾನನು ಅಲ್ಲಿ ಪರಲೋಕದಲ್ಲಿ ನೋಡಿದ ಹೆಚ್ಚಿನವುಗಳು, ಅರಣ್ಯದಲ್ಲಿದ್ದ ದೇವದರ್ಶನದ ಗುಡಾರದ ಲಕ್ಷಣಗಳನ್ನು ಹೋಲುತ್ತವೆ. ಇಸ್ರಾಯೇಲ್ಯರಿಗೆ ಸತ್ಯಾರಾಧನೆಯ ಒಂದು ಪವಿತ್ರಾಲಯದೋಪಾದಿ ಸುಮಾರು 1,600 ವರ್ಷಗಳ ಮೊದಲು ಇದು ಕಟ್ಟಲ್ಪಟ್ಟಿತ್ತು. ಆ ದೇವದರ್ಶನದ ಗುಡಾರದ ಪರಮ ಪವಿತ್ರ ಸ್ಥಾನದಲ್ಲಿ ಒಡಂಬಡಿಕೆಯ ಮಂಜೂಷವಿತ್ತು ಮತ್ತು ಯೆಹೋವನು ತಾನೇ ಮಾತಾಡಿದ್ದು ಆ ಮಂಜೂಷದ ಗಟ್ಟಿಯಾದ ಚಿನ್ನದ ಆವರಣದ ಮೇಲಿನಿಂದಲೇ. (ವಿಮೋಚನಕಾಂಡ 25:17-22; ಇಬ್ರಿಯ 9:5) ಆದಕಾರಣ, ಮಂಜೂಷದ ಆವರಣವು ಯೆಹೋವನ ಸಿಂಹಾಸನದ ಸಂಕೇತವಾಗಿ ವರ್ತಿಸಿತು. ಆ ಸಾಂಕೇತಿಕ ಪ್ರತಿನಿಧಿತ್ವದ ವಾಸ್ತವತೆಯನ್ನು ಈಗ ಯೋಹಾನನು ಕಾಣುತ್ತಾನೆ: ತನ್ನ ಉನ್ನತ ಸ್ವರ್ಗೀಯ ಸಿಂಹಾಸನದ ಮೇಲೆ ಮನೋಹರವಾದ ಮಹಾ ವೈಭವದಲ್ಲಿ ಸಾರ್ವಭೌಮ ಕರ್ತನಾದ ಯೆಹೋವನು ತಾನೇ ಕೂತಿದ್ದಾನೆ!
6. ಯೆಹೋವನ ಕುರಿತಾಗಿ ಯಾವ ಅಭಿಪ್ರಾಯವನ್ನು ಯೋಹಾನನು ನಮಗೆ ನೀಡುತ್ತಾನೆ, ಮತ್ತು ಇದು ಯಾಕೆ ಸಮಂಜಸವಾಗಿದೆ?
6 ಯೆಹೋವನ ಸಿಂಹಾಸನದ ದರ್ಶನಗಳನ್ನು ನೋಡಿದ ಮೊದಲಿನ ಪ್ರವಾದಿಗಳಿಗೆ ಅಸದೃಶವಾಗಿ, ಯೋಹಾನನು ಅದರಲ್ಲಿ ಕೂತಿರುವ ಪರಿಶುದ್ಧನ ಕುರಿತು ಸವಿವರವಾಗಿ ವರ್ಣಿಸುವುದಿಲ್ಲ. (ಯೆಹೆಜ್ಕೇಲ 1:26, 27; ದಾನಿಯೇಲ 7:9, 10) ಆದರೆ ಸಿಂಹಾಸನಾರೂಢನಾಗಿರುವವನ ಕುರಿತಾಗಿ ತನ್ನ ಮನಸ್ಸಿನ ಮೇಲಾದ ಅಭಿಪ್ರಾಯಗಳನ್ನು ನಮಗೆ ಯೋಹಾನನು ಈ ಮಾತುಗಳಿಂದ ಕೊಡುತ್ತಾನೆ; “ಮತ್ತು ಕೂತಿದ್ದವನು ತೋರಿಕೆಯಲ್ಲಿ ಒಂದು ಸೂರ್ಯಕಾಂತ ಮಣಿ ಮತ್ತು ಅಮೂಲ್ಯವಾದ ಕೆಂಪು ಬಣ್ಣದ ಮಣಿಯಂತಿದ್ದಾನೆ, ಮತ್ತು ಸಿಂಹಾಸನದ ಸುತ್ತಲೂ ತೋರಿಕೆಯಲ್ಲಿ ಮರಕತದಂತಿರುವ ಒಂದು ಮುಗಿಲುಬಿಲ್ಲು ಇದೆ.” (ಪ್ರಕಟನೆ 4:3, NW) ಎಂತಹ ಅನುಪಮ ಭವ್ಯತೆ! ಹೊಳಪಿನ, ಥಳಥಳಿಸುವ ರತ್ನಮಣಿಗಳಂತೆ, ಯೋಹಾನನು ಪ್ರಶಾಂತವಾದ, ಮಿನುಗುವ ಸೊಬಗನ್ನು ಗ್ರಹಿಸುತ್ತಾನೆ. “ದಿವ್ಯ ಬೆಳಕುಗಳ ತಂದೆ” ಯೋಪಾದಿ ಯೆಹೋವನ ಕುರಿತಾಗಿ ಯಾಕೋಬನ ವರ್ಣನೆಯೊಂದಿಗೆ ಇದು ಎಷ್ಟೊಂದು ತಕ್ಕದ್ದಾಗಿ ಒಪ್ಪುತ್ತದೆ. (ಯಾಕೋಬ 1:17, NW) ಪ್ರಕಟನೆಯನ್ನು ಬರೆದ ಸ್ವಲ್ಪ ಸಮಯದ ಅನಂತರ, ಯೋಹಾನನು ಸ್ವತಃ ಬರೆದದ್ದು: “ದೇವರು ಬೆಳಕಾಗಿದ್ದಾನೆ ಮತ್ತು ಆತನಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ.” (1 ಯೋಹಾನ 1:5) ಯೆಹೋವನು ನಿಜವಾಗಿಯೂ ಎಷ್ಟು ಶೋಭೆಯ ಮಹಿಮಾಭರಿತ ವ್ಯಕ್ತಿಯಾಗಿರುತ್ತಾನೆ!
7. ಯೆಹೋವನ ಸಿಂಹಾಸನದ ಸುತ್ತಲೂ ಒಂದು ಮುಗಿಲುಬಿಲ್ಲು ಇರುವ ವಾಸ್ತವಾಂಶದಿಂದ ನಾವೇನನ್ನು ಕಲಿಯಬಲ್ಲೆವು?
7 ಸಿಂಹಾಸನದ ಸುತ್ತಲು ಮರಕತ ವರ್ಣದ ಮುಗಿಲುಬಿಲ್ಲನ್ನು ಯೋಹಾನನು ಕಾಣುವುದನ್ನು ಗಮನಿಸಿರಿ. ಮುಗಿಲು ಬಿಲ್ಲು (ಈರ್’ಇಸ್) ಎಂದು ಇಲ್ಲಿ ತರ್ಜುಮೆಯಾದ ಗ್ರೀಕ್ ಶಬ್ದವು, ಒಂದು ಪೂರ್ಣವಾದ ವೃತ್ತರೂಪವನ್ನು ಸೂಚಿಸುತ್ತದೆ. ನೋಹನ ದಿನಗಳ ಸಂಬಂಧದಲ್ಲಿ ಮುಗಿಲುಬಿಲ್ಲನ್ನು ಮೊದಲ ಬಾರಿ ಬೈಬಲಿನಲ್ಲಿ ಉಲ್ಲೇಖಿಸಲಾಗಿದೆ. ಜಲಪ್ರಲಯದ ನೀರು ಇಳಿದಾಗ, ಮೇಘಗಳಲ್ಲಿ ಒಂದು ಮುಗಿಲುಬಿಲ್ಲು ಕಾಣಿಸುವಂತೆ ಯೆಹೋವನು ಮಾಡಿದನು, ಮತ್ತು ಅದು ಏನನ್ನು ಸಂಕೇತಿಸುತ್ತದೆ ಎಂದು ಈ ಮಾತುಗಳಿಂದ ಅವನು ವಿವರಿಸಿದನು: “ನಾನು ಮೇಘಗಳಲ್ಲಿ ಮುಗಿಲುಬಿಲ್ಲನ್ನು ಇಟ್ಟಿರುತ್ತೇನೆ ಮತ್ತು ಅದು ನನ್ನ ಮತ್ತು ಭೂಮಿಯ ನಡುವಿನ ಒಡಂಬಡಿಕೆಯ ಒಂದು ಗುರುತಾಗಿ ಇರುವುದು. ಮತ್ತು ನನ್ನ ಮತ್ತು ನಿಮ್ಮ ಮತ್ತು ಎಲ್ಲಾ ಜೀವರಾಶಿಗಳ ಸಕಲ ಜೀವಾತ್ಮಗಳ ನಡುವೆ ಇರುವ ಈ ಒಡಂಬಡಿಕೆಯನ್ನು ನಾನು ಖಂಡಿತವಾಗಿಯೂ ಜ್ಞಾಪಕಮಾಡಿಕೊಳ್ಳುವೆನು; ಮತ್ತು ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಜೀವರಾಶಿಗಳನ್ನು ನಾಶಮಾಡುವ ಜಲಪ್ರಲಯವಾಗುವುದಿಲ್ಲ.” (ಆದಿಕಾಂಡ 9:13, 15) ಹಾಗಾದರೆ, ಸ್ವರ್ಗೀಯ ದರ್ಶನವು ಯಾವುದನ್ನು ಯೋಹಾನನ ಮನಸ್ಸಿಗೆ ತಂದಿರಬೇಕು? ಇಂದು ಯೋಹಾನ ವರ್ಗದವರು ಆನಂದಿಸುತ್ತಿರುವಂತಹ ಒಂದು ಸಮಾಧಾನಕರ ಸಂಬಂಧವನ್ನು ಯೆಹೋವನೊಂದಿಗೆ ಇಡುವ ಜರೂರಿಯ ಕುರಿತಾಗಿ ಅವನು ಕಂಡ ಮುಗಿಲುಬಿಲ್ಲು ಅವನನ್ನು ಜ್ಞಾಪಿಸಿದ್ದಿರಬೇಕು. ಅದು ಯೆಹೋವನ ಸಾನ್ನಿಧ್ಯದ ಪ್ರಶಾಂತತೆ ಮತ್ತು ಶಾಂತಿಯನ್ನು ಅವನ ಮನಸ್ಸಿನಲ್ಲಿ ಅಚ್ಚೊತ್ತಿರಬೇಕು, ನೂತನ ಭೂಮಿಯ ಸಮಾಜದಲ್ಲಿ ಮಾನವ ಕುಲದ ಮೇಲೆ ತನ್ನ ಗುಡಾರವನ್ನು ಯೆಹೋವನು ಹರಡುವಾಗ ಎಲ್ಲಾ ವಿಧೇಯ ಮಾನವರಿಗೆ ವ್ಯಾಪಿಸಲಿರುವ ಪ್ರಶಾಂತತೆಯು ಅದಾಗಿದೆ.—ಕೀರ್ತನೆ 119:165; ಫಿಲಿಪ್ಪಿ 4:7; ಪ್ರಕಟನೆ 21:1-4.
ಇಪ್ಪತ್ತನಾಲ್ಕು ಹಿರಿಯರನ್ನು ಗುರುತಿಸುವುದು
8. ಸಿಂಹಾಸನದ ಸುತ್ತಲೂ ಯೋಹಾನನು ಯಾರನ್ನು ಕಾಣುತ್ತಾನೆ, ಮತ್ತು ಇವರು ಯಾರನ್ನು ಪ್ರತಿನಿಧಿಸುತ್ತಾರೆ?
8 ಪುರಾತನ ದೇವದರ್ಶನದ ಗುಡಾರದಲ್ಲಿ ಸೇವೆ ಮಾಡಲು ಯಾಜಕರನ್ನು ನೇಮಿಸಲಾಗಿತ್ತು ಎಂದು ಯೋಹಾನನು ತಿಳಿದಿದ್ದನು. ಆದುದರಿಂದ ಅವನು ಅನಂತರ ವಿವರಿಸಿದ್ದನ್ನು ಕಾಣುವಾಗ ಅವನಿಗೆ ಆಶ್ಚರ್ಯವಾಗಿದ್ದಿರಬಹುದು: “ಮತ್ತು ಸಿಂಹಾಸನದ ಸುತ್ತಲೂ ಇಪ್ಪತ್ತನಾಲ್ಕು ಸಿಂಹಾಸನಗಳಿವೆ, ಮತ್ತು ಈ ಸಿಂಹಾಸನಗಳ ಮೇಲೆ ಬಿಳಿಯ ಹೊರಗಣ ವಸ್ತ್ರಗಳನ್ನು ಧರಿಸಿಕೊಂಡಿದ್ದ ಇಪ್ಪತ್ತನಾಲ್ಕು ಹಿರಿಯರು ಕೂತಿರುವುದನ್ನು, ಮತ್ತು ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿರುವುದನ್ನು ಕಂಡೆನು.” (ಪ್ರಕಟನೆ 4:4, NW) ಹೌದು, ಯಾಜಕರ ಬದಲಾಗಿ ಅಲ್ಲಿ ಸಿಂಹಾಸನಾರೂಢರಾಗಿದ್ದ ಮತ್ತು ರಾಜರಂತೆ ಕಿರೀಟಧಾರಿಗಳಾಗಿದ್ದ 24 ಹಿರಿಯರಿದ್ದಾರೆ. ಈ ಹಿರಿಯರು ಯಾರು? ಪುನರುತ್ಥಾನಗೊಂಡ, ಮತ್ತು ಈಗ ಯೆಹೋವನು ಅವರಿಗೆ ವಚನಿಸಿದ ಸ್ವರ್ಗೀಯ ಪದವಿಗಳಲ್ಲಿ ಆಸೀನರಾಗಿರುವ ಕ್ರೈಸ್ತ ಸಭೆಯ ಅಭಿಷಿಕ್ತರೇ ಹೊರತು ಬೇರೆ ಯಾರೂ ಅಲ್ಲ. ಅದನ್ನು ನಾವು ಹೇಗೆ ಬಲ್ಲೆವು?
9, 10. ಮಹಿಮಾಯುಕ್ತ ಸ್ವರ್ಗೀಯ ಪದವಿಯಲ್ಲಿರುವ ಅಭಿಷಿಕ್ತ ಕ್ರೈಸ್ತ ಸಭೆಯನ್ನು 24 ಹಿರಿಯರು ಪ್ರತಿನಿಧಿಸುತ್ತಾರೆ ಎಂದು ನಾವು ಹೇಗೆ ಬಲ್ಲೆವು?
9 ಮೊತ್ತಮೊದಲಾಗಿ, ಅವರು ಕಿರೀಟಗಳನ್ನು ಧರಿಸಿದವರಾಗಿದ್ದಾರೆ. ಅಭಿಷಿಕ್ತ ಕ್ರೈಸ್ತರು ‘ನಿರ್ಲಯತ್ವದ ಒಂದು ಕಿರೀಟವನ್ನು’ ಪಡೆಯುವುದರ ಮತ್ತು ಅಂತ್ಯವಿಲ್ಲದ ಜೀವವನ್ನು—ಅಮರತ್ವವನ್ನು ಪಡೆಯುವುದರ ಕುರಿತು ಬೈಬಲು ಮಾತಾಡುತ್ತದೆ. (1 ಕೊರಿಂಥ 9:25; 15:53, 54) ಆದರೆ ಈ 24 ಹಿರಿಯರು ಸಿಂಹಾಸನಗಳ ಮೇಲೆ ಕೂತಿರುವುದರಿಂದ, ಈ ಸಂದರ್ಭದಲ್ಲಿ ಬಂಗಾರದ ಕಿರೀಟಗಳು ರಾಜ್ಯಾಧಿಕಾರವನ್ನು ಪ್ರತಿನಿಧಿಸುತ್ತವೆ. (ಪ್ರಕಟನೆ 6:2 ಹೋಲಿಸಿರಿ; 14:14.) ಇದು ಯೇಸುವಿನ ಅಭಿಷಿಕ್ತ ಹೆಜ್ಜೇಜಾಡಿನ ಹಿಂಬಾಲಕರು ತಮ್ಮ ಸ್ವರ್ಗೀಯ ಹುದ್ದೆಯಲ್ಲಿ 24 ಹಿರಿಯರಿಂದ ಚಿತ್ರಿಸಲ್ಪಟ್ಟಿದ್ದಾರೆಂಬ ಊಹೆಯನ್ನು ಬೆಂಬಲಿಸುತ್ತದೆ, ಯಾಕಂದರೆ ತನ್ನ ರಾಜ್ಯದಲ್ಲಿ ತನ್ನೊಂದಿಗೆ ಸಿಂಹಾಸನಗಳಲ್ಲಿ ಅವರು ಕುಳಿತುಕೊಳ್ಳಲು ಯೇಸುವು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿದನು. (ಲೂಕ 22:28-30) ಕೇವಲ ಯೇಸುವು ಮತ್ತು ಈ 24 ಹಿರಿಯರು ಮಾತ್ರ—ದೇವದೂತರು ಸಹಿತ ಇಲ್ಲ—ಯೆಹೋವನ ಸಾನ್ನಿಧ್ಯದಲ್ಲಿ ಪರಲೋಕದಲ್ಲಿ ಆಳಲಿರುವರು ಎಂದು ವರ್ಣಿಸಲಾಗುತ್ತದೆ.
10 ಇದು ಲವೊದಿಕೀಯದ ಸಭೆಗೆ ಯೇಸುವು ಮಾಡಿದ ವಾಗ್ದಾನದೊಂದಿಗೆ ಹೊಂದಿಕೆಯಲ್ಲಿರುತ್ತದೆ: “ಜಯಶಾಲಿಯಾಗುವವನಿಗೆ ನನ್ನ ಸಿಂಹಾಸನದಲ್ಲಿ ನನ್ನೊಂದಿಗೆ ಕೂತುಕೊಳ್ಳುವಂತೆ ನಾನು ಅನುಮತಿಸುವೆನು.” (ಪ್ರಕಟನೆ 3:21, NW) ಆದರೆ 24 ಹಿರಿಯರ ಸ್ವರ್ಗೀಯ ನೇಮಕವು ಕೇವಲ ಸರಕಾರೀ ಆಡಳಿತಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಪ್ರಕಟನೆಯ ಪುಸ್ತಕದ ಪೀಠಿಕೆಯಲ್ಲಿ, ಯೇಸುವಿನ ಕುರಿತು ಯೋಹಾನನು ಹೇಳಿದ್ದು: “ಅವನು ನಮ್ಮನ್ನು ರಾಜ್ಯವನ್ನಾಗಿ, ತನ್ನ ದೇವರು ಮತ್ತು ತಂದೆಗೆ ಯಾಜಕರನ್ನಾಗಿ ಮಾಡಿದನು.” (ಪ್ರಕಟನೆ 1:5, 6, NW) ಇವರು ರಾಜರು ಮತ್ತು ಯಾಜಕರು ಎರಡೂ ಆಗಿರುತ್ತಾರೆ. “ಅವರು ದೇವರ ಮತ್ತು ಕ್ರಿಸ್ತನ ಯಾಜಕರಾಗಿರುವರು, ಮತ್ತು ಸಾವಿರ ವರ್ಷಗಳ ತನಕ ರಾಜರಾಗಿ ಅವನೊಂದಿಗೆ ಆಳುವರು.”—ಪ್ರಕಟನೆ 20:6, NW.
11. ಹಿರಿಯರ ಸಂಖ್ಯೆಯು 24 ಇರುವುದು ಯಾಕೆ ಯುಕ್ತವಾಗಿದೆ, ಮತ್ತು ಆ ಸಂಖ್ಯೆಯು ಏನನ್ನು ಸೂಚಿಸುತ್ತದೆ?
11 ಸಿಂಹಾಸನದ ಸುತ್ತಲೂ ಯೋಹಾನನು 24 ಹಿರಿಯರನ್ನು ಕಾಣುವುದರಲ್ಲಿ, ಆ 24 ಅಂಕೆಯ ಮಹತ್ವಾರ್ಥ ಏನು? ಅನೇಕ ರೀತಿಗಳಲ್ಲಿ ಇವರು ಪುರಾತನ ಇಸ್ರಾಯೇಲ್ಯರ ನಂಬಿಗಸ್ತ ಯಾಜಕರಿಂದ ಮುನ್ಚಿತ್ರಿಸಲ್ಪಟ್ಟಿದ್ದರು. ಅಭಿಷಿಕ್ತ ಕ್ರೈಸ್ತರಿಗೆ ಅಪೊಸ್ತಲ ಪೇತ್ರನು ಬರೆದದ್ದು: “ನೀವು ‘ಆಯ್ದುಕೊಂಡ ಒಂದು ಕುಲ, ರಾಜಯೋಗ್ಯ ಯಾಜಕತ್ವ, ಒಂದು ಪವಿತ್ರ ಜನಾಂಗ, ವಿಶೇಷ ಸ್ವಾಮ್ಯಕ್ಕಾಗಿರುವ ಒಂದು ಜನ’ ವಾಗಿರುತ್ತೀರಿ.” (1 ಪೇತ್ರ 2:9, NW) ಆಸಕ್ತಿಕರವಾಗಿಯೇ, ಆ ಪುರಾತನ ಯೆಹೂದಿ ಯಾಜಕತ್ವವು 24 ವರ್ಗಗಳಾಗಿ ವಿಭಾಗಿಸಲ್ಪಡುವಂತಾಯಿತು. ಯೆಹೋವನ ಮುಂದೆ ಸೇವೆ ಮಾಡಲು ವರ್ಷದಲ್ಲಿ ಅದರದ್ದೇ ವಾರಗಳು ಪ್ರತಿ ವರ್ಗಕ್ಕೆ ನೇಮಿಸಲ್ಪಟ್ಟಿದ್ದವು, ಆ ಮೂಲಕ ಪವಿತ್ರ ಸೇವೆಯು ಯಾವುದೇ ಕ್ರಮಭಂಗವಿಲ್ಲದೆ ಸಲ್ಲಿಸಲ್ಪಡುತ್ತಿತ್ತು. (1 ಪೂರ್ವಕಾಲವೃತ್ತಾಂತ 24:5-19) ಹಾಗಾದರೆ, ಸ್ವರ್ಗೀಯ ಯಾಜಕತ್ವದ ಕುರಿತು ಯೋಹಾನನ ದರ್ಶನದಲ್ಲಿ 24 ಹಿರಿಯರು ಸೂಚಿಸಲ್ಪಟ್ಟಿರುವುದು ಸಮಂಜಸವಾಗಿದೆ, ಯಾಕಂದರೆ ಈ ಯಾಜಕತ್ವವು ನಿಲ್ಲಿಸಲ್ಪಡದೆ, ನಿರಂತರ ಯೆಹೋವನನ್ನು ಸೇವಿಸುತ್ತದೆ. ಪೂರ್ಣಗೊಂಡಾಗ, 24 ವರ್ಗಗಳಿದ್ದು, ಪ್ರತಿಯೊಂದರಲ್ಲಿ 6,000 ಮಂದಿ ಜಯಶಾಲಿಗಳು ಇರುವರು ಯಾಕಂದರೆ ಪ್ರಕಟನೆ 14:1-4ರಲ್ಲಿ ನಮಗನ್ನುವುದು, ಕುರಿಮರಿಯಾದ ಯೇಸು ಕ್ರಿಸ್ತನೊಂದಿಗೆ ಸ್ವರ್ಗೀಯ ಚೀಯೋನ್ ಪರ್ವತದ ಮೇಲೆ ನಿಲ್ಲಲು “ಮಾನವ ಕುಲದಿಂದ ಕೊಂಡುಕೊಳ್ಳಲ್ಪಟ್ಟವರು” 1,44,000 ಮಂದಿ (24X6,000) ಆಗಿದ್ದಾರೆ. ದೈವಿಕವಾಗಿ ಸಮತೂಕವಾದ ಸಂಸ್ಥೆಯೊಂದನ್ನು ಅಂಕೆ 12 ಸೂಚಿಸುವುದರಿಂದ, 24 ಅಂತಹ ಒಂದು ಏರ್ಪಾಡನ್ನು ದ್ವಿಗುಣವಾಗಿ—ಯಾ ದೃಢವಾಗಿ—ಮಾಡುತ್ತದೆ.
ಮಿಂಚುಗಳು, ವಾಣಿಗಳು, ಮತ್ತು ಗುಡುಗುಗಳು
12. ಅನಂತರ ಯೋಹಾನನು ಏನನ್ನು ಕಾಣುತ್ತಾನೆ ಮತ್ತು ಕೇಳುತ್ತಾನೆ, ಮತ್ತು “ಮಿಂಚುಗಳು ಮತ್ತು ವಾಣಿಗಳು ಮತ್ತು ಗುಡುಗುಗಳು” ಮನಸ್ಸಿಗೆ ಏನನ್ನು ತರುತ್ತವೆ?
12 ಯೋಹಾನನು ನಂತರ ಏನನ್ನು ನೋಡುತ್ತಾನೆ ಮತ್ತು ಆಲಿಸುತ್ತಾನೆ? “ಮತ್ತು ಸಿಂಹಾಸನದೊಳಗಿಂದ ಮಿಂಚುಗಳು ಮತ್ತು ವಾಣಿಗಳು ಮತ್ತು ಗುಡುಗುಗಳು ಹೊರಡುತ್ತಾ ಇವೆ.” (ಪ್ರಕಟನೆ 4:5ಎ, NW) ಯೆಹೋವನ ದಿವ್ಯ ಶಕ್ತಿಯ ಭಯಚಕಿತಗೊಳಿಸುವ ಇತರ ಪ್ರದರ್ಶನಗಳನ್ನು ಇದು ಹೇಗೆ ನೆನಪಿಗೆ ತರುತ್ತದೆ! ಉದಾಹರಣೆಗೆ, ಸೀನಾಯಿ ಬೆಟ್ಟದ ಮೇಲೆ ಯೆಹೋವನು “ಇಳಿದು ಬಂದಾಗ,” ಮೋಶೆಯು ವರದಿಸಿದ್ದು: “ಮೂರನೆಯ ದಿನದಲ್ಲಿ ಪ್ರಾತಃಕಾಲವಾದಾಗ ಗುಡುಗುಗಳು ಮತ್ತು ಮಿಂಚುಗಳು ಸಂಭವಿಸಲಾರಂಭಿಸಿದವು ಮತ್ತು ಆ ಬೆಟ್ಟದ ಮೇಲೆ ಕಾರ್ಮುಗಿಲು ಮತ್ತು ತುತೂರಿಯ ಅತಿ ಮಹಾಧ್ವನಿಯೂ ಉಂಟಾಯಿತು. . . . ತುತೂರಿಯ ಧ್ವನಿಯು ಹೆಚ್ಚಾಗುತ್ತಾ, ಹೆಚ್ಚಾಗುತ್ತಾ ಹೋದಂತೆಯೇ, ಮೋಶೆಯು ಮಾತಾಡಲು ಆರಂಭಿಸಿದನು ಮತ್ತು ಸತ್ಯ ದೇವರು ವಾಣಿಯಿಂದ ಅವನಿಗೆ ಉತ್ತರ ನೀಡಲು ಆರಂಭಿಸಿದನು.”—ವಿಮೋಚನಕಾಂಡ 19:16-19, NW.
13. ಯೆಹೋವನ ಸಿಂಹಾಸನದಿಂದ ಹೊರಡುವ ಮಿಂಚುಗಳಿಂದ ಏನು ಚಿತ್ರಿತವಾಗಿದೆ?
13 ಕರ್ತನ ದಿನದಲ್ಲಿ, ಯೆಹೋವನು ತನ್ನ ಶಕ್ತಿಯನ್ನು ಮತ್ತು ಸಾನ್ನಿಧ್ಯವನ್ನು ಮಹೋನ್ನತ ರೀತಿಯಲ್ಲಿ ಪ್ರಕಟಿಸುತ್ತಾನೆ. ಅಲ್ಲ, ಅಕ್ಷರಶಃ ಮಿಂಚಿನಿಂದಲ್ಲ, ಯಾಕಂದರೆ ಯೋಹಾನನು ಸೂಚಕಗಳನ್ನು ನೋಡುತ್ತಿದ್ದಾನೆ. ಹಾಗಾದರೆ, ಮಿಂಚುಗಳು ಏನನ್ನು ಪ್ರತಿನಿಧಿಸುತ್ತವೆ? ಒಳ್ಳೇದು, ಮಿಂಚಿನ ಹೊಳಪು ಪ್ರಜ್ವಲಿಸಬಹುದು, ಆದರೆ ಅವುಗಳು ಒಬ್ಬನನ್ನು ಕೊಲ್ಲಲೂ ಬಹುದು. ಆದಕಾರಣ, ಯೆಹೋವನ ಸಿಂಹಾಸನದಿಂದ ಹೊರಡುವ ಈ ಮಿಂಚುಗಳು, ಅವನು ತನ್ನ ಜನರಿಗೆ ನಿರಂತರವಾಗಿ ಕೊಡುತ್ತಿರುವ ಜ್ಞಾನೋದಯದ ಹೊಳಪುಗಳನ್ನು ಮತ್ತು, ಇನ್ನು ಹೆಚ್ಚಾದ ಅರ್ಥದಲ್ಲಿ, ಅವನ ದಹಿಸುವ ನ್ಯಾಯತೀರ್ಪಿನ ಸಂದೇಶಗಳನ್ನು ಚೆನ್ನಾಗಿ ಚಿತ್ರಿಸುತ್ತವೆ.—ಹೋಲಿಸಿರಿ ಕೀರ್ತನೆ 18:14; 144:5, 6; ಮತ್ತಾಯ 4:14-17; 24:27.
14. ಇಂದು ವಾಣಿಗಳು ಹೇಗೆ ಧ್ವನಿಸಲ್ಪಟ್ಟಿವೆ?
14 ವಾಣಿಗಳ ಕುರಿತಾಗಿ ಏನು? ಸೀನಾಯಿ ಬೆಟ್ಟದ ಮೇಲೆ ಯೆಹೋವನು ಇಳಿದು ಬಂದಾಗ, ವಾಣಿಯೊಂದು ಮೋಶೆಯೊಂದಿಗೆ ಮಾತಾಡಿತು. (ವಿಮೋಚನಕಾಂಡ 19:19) ಪ್ರಕಟನೆಯ ಪುಸ್ತಕದಲ್ಲಿರುವ ಅನೇಕ ಆಜ್ಞೆಗಳನ್ನು ಮತ್ತು ಘೋಷಣೆಗಳನ್ನು ಪರಲೋಕದಿಂದ ಬಂದ ವಾಣಿಗಳು ಹೊರಡಿಸಿದವು. (ಪ್ರಕಟನೆ 4:1; 10:4, 8; 11:12; 12:10; 14:13; 16:1, 17; 18:4; 19:5; 21:3) ಇಂದು, ಯೆಹೋವನು ತನ್ನ ಜನರಿಗೆ ಆಜ್ಞೆಗಳನ್ನು ಮತ್ತು ಘೋಷಣೆಗಳನ್ನು ಕೂಡ ಹೊರಡಿಸಿದ್ದಾನೆ, ಬೈಬಲ್ ಪ್ರವಾದನೆಗಳ ಮತ್ತು ಸೂತ್ರಗಳ ಅವರ ತಿಳಿವಳಿಕೆಯಲ್ಲಿ ಜ್ಞಾನೋದಯವನ್ನುಂಟುಮಾಡಿದ್ದಾನೆ. ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಹೆಚ್ಚಾಗಿ ಜ್ಞಾನೋದಯವನ್ನುಂಟುಮಾಡುವ ಸಮಾಚಾರವನ್ನು ಹೊರಪಡಿಸಲಾಗಿದೆ, ಮತ್ತು ಇಂತಹ ಬೈಬಲ್ ಸತ್ಯತೆಗಳು, ಸರದಿಯಾಗಿ, ಲೋಕವ್ಯಾಪಕವಾಗಿ ಘೋಷಿಸಲ್ಪಟ್ಟಿವೆ. ಸುವಾರ್ತೆಯ ನಂಬಿಗಸ್ತ ಸಾರುವವರ ಕುರಿತಾಗಿ ಅಪೊಸ್ತಲ ಪೌಲನು ಹೇಳಿದ್ದು: “ಯಾಕೆ, ವಾಸ್ತವದಲ್ಲಿ ‘ಸಾರುವವರ ಧ್ವನಿಯು ಭೂಮಿಯಲ್ಲಿಲ್ಲಾ ಪ್ರಸರಿಸಿತು, ಮತ್ತು ಅವರ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿದವು.’”—ರೋಮಾಪುರ 10:18, NW.
15. ಕರ್ತನ ದಿನದ ಈ ಭಾಗದಲ್ಲಿ ಸಿಂಹಾಸನದಿಂದ ಯಾವ ಗುಡುಗುಗಳು ಹೊರಡಿಸಲ್ಪಟ್ಟಿವೆ?
15 ಸಾಮಾನ್ಯವಾಗಿ ಗುಡುಗು ಮಿಂಚನ್ನು ಹಿಂಬಾಲಿಸಿ ಬರುತ್ತದೆ. ದಾವೀದನು ಅಕ್ಷರಶಃ ಗುಡುಗನ್ನು “ಯೆಹೋವನ ಧ್ವನಿ” ಎಂದು ಸೂಚಿಸಿದ್ದಾನೆ. (ಕೀರ್ತನೆ 29:3, 4) ದಾವೀದನಿಗಾಗಿ ಅವನ ಶತ್ರುಗಳ ವಿರುದ್ಧ ಯೆಹೋವನು ಹೋರಾಡಿದಾಗ, ಅವನಿಂದ ಗುಡುಗು ಬರುತ್ತಿತ್ತು ಎಂದು ಹೇಳಲ್ಪಟ್ಟಿದೆ. (2 ಸಮುವೇಲ 22:14; ಕೀರ್ತನೆ 18:13) “ನಾವು ಗ್ರಹಿಸಲಾಗದ ಮಹಾಕಾರ್ಯಗಳನ್ನು” ಯೆಹೋವನು ನಡಿಸುವಾಗ, ಅವನ ಧ್ವನಿಯು ಗುಡುಗಿನಂತೆ ಕೇಳುತ್ತದೆ ಎಂದು ಎಲೀಹು ಯೋಬನಿಗೆ ಹೇಳಿದನು. (ಯೋಬ 37:4, 5) ಕರ್ತನ ದಿನದ ಈ ಸಮಯಾವಧಿಯಲ್ಲಿ ಯೆಹೋವನು ತನ್ನ ಶತ್ರುಗಳ ವಿರೋಧವಾಗಿ ತಾನು ಮಾಡಲಿರುವ ಮಹಾಕಾರ್ಯದ ಎಚ್ಚರಿಕೆಯನ್ನು ‘ಗುಡುಗಿದ್ದಾನೆ.’ ಈ ಸಾಂಕೇತಿಕ ಗುಡುಗಿನ ಆರ್ಭಟಗಳು ಪೃಥ್ವಿಯಲ್ಲಿಲ್ಲಾ ಪ್ರತಿಧ್ವನಿಸಿವೆ ಮತ್ತು ಪುನಃ ಪ್ರತಿಧ್ವನಿಸಿವೆ. ಈ ಗುಡುಗಿನ ಘೋಷಣೆಗಳಿಗೆ ನೀವು ಒಂದು ವೇಳೆ ಗಮನ ಹರಿಸಿದ್ದಲ್ಲಿ ಮತ್ತು ಅದರ ಮೊತ್ತಕ್ಕೆ ಕೂಡಿಸುವುದರಲ್ಲಿ ನಿಮ್ಮ ನಾಲಗೆಯ ವಿವೇಕಯುಕ್ತ ಪ್ರಯೋಗವನ್ನು ಮಾಡುತ್ತಿರುವಲ್ಲಿ, ನೀವು ಸಂತೋಷಿಗಳೇ ಸರಿ!—ಯೆಶಾಯ 50:4, 5; 61:1, 2.
ಬೆಂಕಿಯ ದೀಪಗಳು ಮತ್ತು ಒಂದು ಗಾಜಿನ ಸಮುದ್ರ
16. “ಬೆಂಕಿಯ ಏಳು ದೀಪಗಳಿಂದ” ಏನು ಸೂಚಿಸಲ್ಪಡುತ್ತದೆ?
16 ಯೋಹಾನನು ಇನ್ನೇನನ್ನು ನೋಡುತ್ತಾನೆ? ಇದನ್ನು: “ಮತ್ತು ಆ ಸಿಂಹಾಸನದ ಮುಂದೆ ಏಳು ಬೆಂಕಿಯ ದೀಪಗಳು ಉರಿಯುತ್ತಿವೆ, ಮತ್ತು ಇವು ದೇವರ ಏಳು ಆತ್ಮಗಳ ಅರ್ಥದಲ್ಲಿವೆ. ಮತ್ತು ಆ ಸಿಂಹಾಸನದ ಮುಂದೆ ಸ್ಫಟಿಕದಂತೆ ತೋರುವ ಒಂದು ಗಾಜಿನ ಸಮುದ್ರವಿದೆ.” (ಪ್ರಕಟನೆ 4:5ಬಿ, 6ಎ, NW) ಯೋಹಾನನು ತಾನೇ ಏಳು ದೀಪಗಳ ಮಹತ್ವಾರ್ಥವನ್ನು ನಮಗೆ ತಿಳಿಸುತ್ತಾನೆ: “ಇವು ದೇವರ ಏಳು ಆತ್ಮಗಳ ಅರ್ಥದಲ್ಲಿವೆ.” ಅಂಕೆ ಏಳು ದೈವಿಕ ಪೂರ್ಣತೆಯನ್ನು ಸೂಚಿಸುತ್ತದೆ; ಆದದರಿಂದ ಏಳು ದೀಪಗಳು ಪವಿತ್ರ ಆತ್ಮದ ಜ್ಞಾನೋದಯವನ್ನುಂಟುಮಾಡುವ ಶಕ್ತಿಯ ಪೂರ್ಣತೆಯನ್ನು ಪ್ರತಿನಿಧಿಸತಕ್ಕದ್ದು. ಆತ್ಮಿಕವಾಗಿ ಹಸಿದಿರುವ ಭೂಮಿಯ ಜನರಿಗೆ ಅದನ್ನು ದಾಟಿಸುವ ಜವಾಬ್ದಾರಿಕೆಯೊಂದಿಗೆ, ಈ ಜ್ಞಾನೋದಯವನ್ನು ತಮ್ಮ ವಶಕ್ಕೆ ನಂಬಿಕೆಯಿಂದ ಒಪ್ಪಿಸಲ್ಪಟ್ಟಿರುವುದಕ್ಕಾಗಿ, ಇಂದು ಯೋಹಾನ ವರ್ಗವು ಎಷ್ಟೊಂದು ಆಭಾರಿಯಾಗಿದೆ! ಒಂದು ನೂರಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಪ್ರತಿ ವರ್ಷ ಕಾವಲಿನಬುರುಜು ವಿನ 38 ಕೋಟಿಗಳಿಗಿಂತಲೂ ಹೆಚ್ಚಿನ ಪ್ರತಿಗಳು ಈ ಬೆಳಕನ್ನು ಪ್ರಕಾಶಿಸುವುದಕ್ಕಾಗಿ ನಾವೆಷ್ಟು ಆನಂದಿತರಾಗಿದ್ದೇವೆ!—ಕೀರ್ತನೆ 43:3.
17. “ಸ್ಫಟಿಕದಂತೆ ತೋರುವ ಗಾಜಿನ ಸಮುದ್ರ” ಏನನ್ನು ಸೂಚಿಸುತ್ತದೆ?
17 ಯೋಹಾನನು “ಸ್ಫಟಿಕದಂತೆ ತೋರುವ ಒಂದು ಗಾಜಿನ ಸಮುದ್ರ” ವನ್ನು ಕೂಡ ಕಾಣುತ್ತಾನೆ. ಯೆಹೋವನ ಸ್ವರ್ಗೀಯ ಆಸ್ಥಾನದೊಳಗೆ ಆಮಂತ್ರಿಸಲ್ಪಟ್ಟವರ ಸಂಬಂಧದಲ್ಲಿ ಇದು ಏನನ್ನು ಸಂಕೇತಿಸುತ್ತಿರಬಹುದು? ಯೇಸುವು ಸಭೆಯನ್ನು ಪವಿತ್ರಗೊಳಿಸಿದ ವಿಧದ ಕುರಿತು, ಪೌಲನು ಮಾತಾಡಿ, “ಅದನ್ನು ವಾಕ್ಯದ ಮೂಲಕ ಜಲದ ಸ್ನಾನದಿಂದ ಶುದ್ಧಮಾಡಿದನು.” (ಎಫೆಸ 5:27 [5:26, NW]) ತನ್ನ ಮರಣದ ಮೊದಲು, ಯೇಸುವು ಅವನ ಶಿಷ್ಯರಿಗೆ ಹೇಳಿದ್ದು: “ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ಶುದ್ಧರಾಗಿದ್ದೀರಿ.” (ಯೋಹಾನ 15:3) ಆದಕಾರಣ, ಸ್ಫಟಿಕದಂತಹ ಈ ಗಾಜಿನ ಸಮುದ್ರವು ಶುದ್ಧಗೊಳಿಸುವ, ದಾಖಲಾದ ದೇವರ ವಾಕ್ಯವನ್ನು ಪ್ರತಿನಿಧಿಸತಕ್ಕದ್ದು. ಯೆಹೋವನ ಸಾನ್ನಿಧ್ಯದ ಮುಂದೆ ಬರುವ ರಾಜಯೋಗ್ಯ ಯಾಜಕತ್ವದವರು ಅವನ ವಾಕ್ಯದ ಮೂಲಕ ಸಮಗ್ರವಾಗಿ ಶುದ್ಧೀಕರಿಸಲ್ಪಟ್ಟವರಾಗಿರಬೇಕು.
ಅಗೋ ನೋಡಿರಿ—“ನಾಲ್ಕು ಜೀವಿಗಳು”!
18. ಸಿಂಹಾಸನದ ಮಧ್ಯದಲ್ಲಿ ಮತ್ತು ಸುತ್ತಲೂ ಯೋಹಾನನು ಏನನ್ನು ಕಾಣುತ್ತಾನೆ?
18 ಯೋಹಾನನು ಈಗ ಇನ್ನೊಂದು ಲಕ್ಷಣವನ್ನು ಅವಲೋಕಿಸುತ್ತಾನೆ. ಅವನು ಬರೆಯುವುದು: “ಮತ್ತು ಆ ಸಿಂಹಾಸನದ ಮಧ್ಯದಲ್ಲಿ ಮತ್ತು ಸಿಂಹಾಸನದ ಸುತ್ತಲೂ, ಮುಂದೆ ಮತ್ತು ಹಿಂದೆ ಕಣ್ಣುಗಳಿರುವ ನಾಲ್ಕು ಜೀವಿಗಳು ಇವೆ.”—ಪ್ರಕಟನೆ 4:6ಬಿ, NW.
19. ನಾಲ್ಕು ಜೀವಿಗಳಿಂದ ಏನು ಚಿತ್ರಿಸಲ್ಪಡುತ್ತದೆ, ಮತ್ತು ಇದು ನಮಗೆ ಹೇಗೆ ತಿಳಿಯುತ್ತದೆ?
19 ಈ ಜೀವಿಗಳು ಏನನ್ನು ಚಿತ್ರಿಸುತ್ತವೆ? ಇನ್ನೊಬ್ಬ ಪ್ರವಾದಿಯಾದ ಯೆಹೆಜ್ಕೇಲನಿಂದ ವರದಿಸಲ್ಪಟ್ಟ ದರ್ಶನವೊಂದು ಉತ್ತರವನ್ನು ಕಂಡುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ದಿವ್ಯ ರಥವೊಂದರ ಮೇಲೆ ಸಿಂಹಾಸನಾರೂಢನಾಗಿರುವ ಯೆಹೋವನನ್ನು ಯೆಹೆಜ್ಕೇಲನು ಕಂಡನು, ಯೋಹಾನನಿಂದ ವಿವರಿಸಲ್ಪಟ್ಟವುಗಳಿಗೆ ಸಮಾನವಾಗಿರುವ ಲಕ್ಷಣಗಳು ಇರುವ ಜೀವಿಗಳು ಅದರೊಂದಿಗೆ ಇದ್ದವು. (ಯೆಹೆಜ್ಕೇಲ 1:5-11, 22-28) ಅನಂತರ, ಪುನಃ ಅದೇ ರಥ ಸಿಂಹಾಸನದೊಂದಿಗೆ ಜೀವಿಗಳು ಇರುವುದನ್ನು ಯೆಹೆಜ್ಕೇಲನು ಕಂಡನು. ಆದಾಗ್ಯೂ, ಈ ಬಾರಿ ಅವನು ಈ ಜೀವಿಗಳನ್ನು ಕೆರೂಬಿಯರು ಎಂದು ಸೂಚಿಸಿದನು. (ಯೆಹೆಜ್ಕೇಲ 10:9-15) ಯೋಹಾನನು ಕಂಡ ನಾಲ್ಕು ಜೀವಿಗಳು ದೇವರ ಬಹು ಕೆರೂಬಿಯರನ್ನು—ಅವನ ಆತ್ಮ ಸಂಸ್ಥೆಯಲ್ಲಿ ಉನ್ನತ ಪದವಿಯ ಜೀವಿಗಳು—ಪ್ರತಿನಿಧಿಸತಕ್ಕದ್ದು. ಯೆಹೋವನಿಗೆ ಅಷ್ಟೊಂದು ಹತ್ತಿರವಾಗಿ ಕೆರೂಬಿಯರು ಇರುವುದನ್ನು ಕಾಣುವುದು ಅಸಾಮಾನ್ಯ ಎಂದು ಯೋಹಾನನು ಎಣಿಸಲಿಕ್ಕಿಲ್ಲ, ಯಾಕಂದರೆ ಪುರಾತನ ದೇವದರ್ಶನದ ಗುಡಾರದ ಏರ್ಪಾಡಿನಲ್ಲಿ ಚಿನ್ನದ ಎರಡು ಕೆರೂಬಿಯರು ಯೆಹೋವನ ಸಿಂಹಾಸನವನ್ನು ಪ್ರತಿನಿಧಿಸುವ ಒಡಂಬಡಿಕೆಯ ಆವರಣದ ಮೇಲೆ ಪ್ರದರ್ಶಿಸಲ್ಪಟ್ಟಿದ್ದರು. ಈ ಕೆರೂಬಿಯರ ಮಧ್ಯದಿಂದ ಯೆಹೋವನ ವಾಣಿಯು ಜನಾಂಗಕ್ಕೆ ಆಜ್ಞೆಗಳನ್ನು ಹೊರಡಿಸುತ್ತಿತ್ತು.—ವಿಮೋಚನಕಾಂಡ 25:22; ಕೀರ್ತನೆ 80:1.
20. ಈ ನಾಲ್ಕು ಜೀವಿಗಳು “ಸಿಂಹಾಸನದ ಮಧ್ಯದಲ್ಲಿ ಮತ್ತು ಅದರ ಸುತ್ತಲೂ” ಇವೆ ಎಂದು ಹೇಗೆ ಹೇಳಸಾಧ್ಯವಿದೆ?
20 ಈ ನಾಲ್ಕು ಜೀವಿಗಳು “ಸಿಂಹಾಸನದ ಮಧ್ಯದಲ್ಲಿ ಮತ್ತು ಸಿಂಹಾಸನದ ಸುತ್ತಲೂ” ಇದ್ದವು. ನಿಖರವಾಗಿ ಇದರ ಅರ್ಥವೇನು? ಪ್ರತಿಯೊಂದು ಪಕ್ಕದ ಮಧ್ಯದಲ್ಲಿ ಒಂದೊಂದು ನಿಂತಿರುವ ರೀತಿಯಲ್ಲಿ ಅವರನ್ನು ಸಿಂಹಾಸನದ ಸುತ್ತಲೂ ನಿಲ್ಲಿಸಲಾಗುತ್ತದೆಂದು ಇದನ್ನು ಅರ್ಥೈಸಸಾಧ್ಯವಿದೆ. ಆದುದರಿಂದ, ಟುಡೇಸ್ ಇಂಗ್ಲಿಷ್ ವರ್ಷನ್ನ ತರ್ಜುಮೆಗಾರರು ಮೂಲ ಗ್ರೀಕ್ ವಾಕ್ಸರಣಿಯನ್ನು ಈ ರೀತಿಯಲ್ಲಿ ಸರಳಾನುವಾದ ಮಾಡಿದ್ದಾರೆ: “ಸಿಂಹಾಸನವನ್ನು ಆವರಿಸುತ್ತಾ ಅದರ ಪ್ರತಿಯೊಂದು ಪಕ್ಕಗಳಲ್ಲಿ.” ಪರ್ಯಾಯವಾಗಿ, ನಾಲ್ಕು ಜೀವಿಗಳು ಸಿಂಹಾಸನವು ಇರುವ ಪರಲೋಕದ ಕೇಂದ್ರ ಸ್ಥಾನದಲ್ಲಿವೆ ಎಂಬರ್ಥವೂ ಈ ವಾಕ್ಸರಣಿಗೆ ಇರಬಲ್ಲದು. ಆದುದರಿಂದಲೇ, ದ ಜೆರೂಸಲೇಮ್ ಬೈಬಲ್ ಈ ಪದವಿನ್ಯಾಸವನ್ನು ಕೊಟ್ಟಿರಬಹುದು: “ಕೇಂದ್ರದಲ್ಲಿ, ಸಿಂಹಾಸನದ ಸುತ್ತಲೂ ಗುಂಪಾಗಿ.” ಪ್ರಮುಖ ಸಂಗತಿಯೇನಂದರೆ ಯೆಹೋವನ ಸಿಂಹಾಸನಕ್ಕೆ ಕೆರೂಬಿಯರ ಸಾಮೀಪ್ಯವು, ಇದು ಯೆಹೋವನ ಸಂಸ್ಥೆಯ ರಥದ ಪ್ರತಿಯೊಂದು ಪಾರ್ಶ್ವಗಳಲ್ಲಿ ಯೆಹೆಜ್ಕೇಲನು ಕಂಡ ಕೆರೂಬಿಯರಿಗೆ ಸದೃಶವಾಗಿದೆ. (ಯೆಹೆಜ್ಕೇಲ 1:15-22) ಇದೆಲ್ಲವೂ ಕೀರ್ತನೆ 99:1 (NW) ರೊಂದಿಗೆ ಹೊಂದಿಕೆಯಲ್ಲಿದೆ: “ಯೆಹೋವನು ಸ್ವತಃ ರಾಜನಾಗಿದ್ದಾನೆ. . . . ಅವನು ಕೆರೂಬಿಯರ ಮೇಲೆ ಆಸೀನನಾಗಿದ್ದಾನೆ.”
21, 22. (ಎ) ನಾಲ್ಕು ಜೀವಿಗಳನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ? (ಬಿ) ನಾಲ್ಕು ಜೀವಿಗಳಲ್ಲಿ ಪ್ರತಿಯೊಂದರ ತೋರಿಕೆಯಿಂದ ಏನು ಪ್ರತಿನಿಧಿಸಲ್ಪಡುತ್ತದೆ?
21 ಯೋಹಾನನು ಮುಂದರಿಸುವುದು: “ಮತ್ತು ಮೊದಲನೆಯ ಜೀವಿಯು ಸಿಂಹದಂತಿದೆ, ಮತ್ತು ಎರಡನೆಯ ಜೀವಿಯು ಎಳೆಯ ಹೋರಿಯಂತಿದೆ, ಮತ್ತು ಮೂರನೆಯ ಜೀವಿಗೆ ಮನುಷ್ಯನಂತಿರುವ ಮುಖವು, ಮತ್ತು ನಾಲ್ಕನೆಯ ಜೀವಿಯು ಹಾರುವ ಗರುಡ ಪಕ್ಷಿಯಂತಿದೆ.” (ಪ್ರಕಟನೆ 4:7, NW) ಈ ನಾಲ್ಕು ಜೀವಿಗಳು ಒಂದು ಇನ್ನೊಂದರಿಂದ ಅಷ್ಟು ಭಿನ್ನವಾಗಿರುವುದೇಕೆ? ಈ ವಿಶಿಷ್ಟವಾದ ಜೀವಿಗಳು ನಿರ್ದಿಷ್ಟ ದೈವಿಕ ಗುಣಗಳನ್ನು ಎತ್ತಿ ತೋರಿಸುತ್ತವೆ ಎಂದು ವ್ಯಕ್ತವಾಗುತ್ತದೆ. ಮೊದಲನೆಯದು ಸಿಂಹವಾಗಿದೆ. ಸಿಂಹವನ್ನು ಬೈಬಲಿನಲ್ಲಿ, ವಿಶೇಷವಾಗಿ ನ್ಯಾಯ ಮತ್ತು ನೀತಿಯ ಬೆನ್ನಟ್ಟುವಿಕೆಯಲ್ಲಿ, ಧೈರ್ಯದ ಸಂಕೇತವಾಗಿ ಉಪಯೋಗಿಸಲಾಗಿದೆ. (2 ಸಮುವೇಲ 17:10; ಜ್ಞಾನೋಕ್ತಿ 28:1) ಆದದರಿಂದ, ಧೈರ್ಯದ ನ್ಯಾಯವೆಂಬ ದೈವಿಕ ಗುಣವನ್ನು ಸಿಂಹವು ಚೆನ್ನಾಗಿ ಪ್ರತಿನಿಧಿಸುತ್ತದೆ. (ಧರ್ಮೋಪದೇಶಕಾಂಡ 32:4; ಕೀರ್ತನೆ 89:14) ಎರಡನೆಯ ಜೀವಿಯು ಎಳೆಯ ಹೋರಿಯನ್ನು ಹೋಲುತ್ತದೆ. ನಿಮ್ಮ ಮನಸ್ಸಿಗೆ ಹೋರಿಯೊಂದು ಯಾವ ಗುಣವನ್ನು ನೆನಪಿಗೆ ತರುತ್ತದೆ? ಇಸ್ರಾಯೇಲ್ಯರಿಗೆ ಹೋರಿಯು ಅದರ ಶಕ್ತಿಯ ಕಾರಣ ಒಂದು ಅಮೂಲ್ಯ ಸ್ವತ್ತಾಗಿತ್ತು. (ಜ್ಞಾನೋಕ್ತಿ 14:4; ಯೋಬ 39:9-11ನ್ನು ಕೂಡ ನೋಡಿರಿ.) ಹಾಗಾದರೆ, ಎಳೇ ಹೋರಿಯು ಶಕ್ತಿಯನ್ನು, ಯೆಹೋವನಿಂದ ಒದಗಿಸಲ್ಪಡುವ ಚಾಲಕಶಕ್ತಿಯನ್ನು ಪ್ರತಿನಿಧಿಸುತ್ತದೆ.—ಕೀರ್ತನೆ 62:11; ಯೆಶಾಯ 40:26.
22 ಮೂರನೆಯ ಜೀವಿಗೆ ಮನುಷ್ಯನಂತಹ ಮುಖವೊಂದಿದೆ. ಇದು ದೇವರಂತಹ ಪ್ರೀತಿಯನ್ನು ಪ್ರತಿನಿಧೀಕರಿಸಬೇಕು, ಯಾಕಂದರೆ ಭೂಮಿಯ ಮೇಲೆ ದೇವರ ಸ್ವರೂಪದಲ್ಲಿ ಮನುಷ್ಯನೊಬ್ಬನು ಮಾತ್ರ ಅತ್ಯುತ್ಕೃಷ್ಟ ಗುಣವಾದ ಪ್ರೀತಿಯೊಂದಿಗೆ ಸೃಷ್ಟಿಸಲ್ಪಟ್ಟನು. (ಆದಿಕಾಂಡ 1:26-28; ಮತ್ತಾಯ 22:36-40; 1 ಯೋಹಾನ 4:8, 16) ನಿಸ್ಸಂದೇಹವಾಗಿ, ಯೆಹೋವನ ಸಿಂಹಾಸನದ ಸುತ್ತಲೂ ಸೇವೆ ಸಲ್ಲಿಸುತ್ತಿರುವಾಗ ಈ ಗುಣವನ್ನು ಕೆರೂಬಿಯರು ಪ್ರದರ್ಶಿಸುತ್ತಾರೆ. ಈಗ ನಾಲ್ಕನೆಯ ಜೀವಿಯ ಕುರಿತಾಗಿ ಏನು? ಇದು ತೋರಿಕೆಯಲ್ಲಿ ಹಾರುವ ಗರುಡ ಪಕ್ಷಿಯಂತಿದೆ. ಗರುಡನ ದೂರದೃಷ್ಟಿಗೆ ಯೆಹೋವನು ತಾನೇ ಗಮನವನ್ನು ಸೆಳೆಯುತ್ತಾನೆ: “ಅತಿ ದೂರದ ತನಕ ಅದರ ಕಣ್ಣುಗಳು ನೋಡುತ್ತಿರುತ್ತವೆ.” (ಯೋಬ 39:29, NW) ಆದಕಾರಣ, ಗರುಡ ಪಕ್ಷಿಯು ದೂರದೃಷ್ಟಿಯ ವಿವೇಕವನ್ನು ಒಳ್ಳೆಯದಾಗಿ ಸಂಕೇತಿಸುತ್ತದೆ. ಯೆಹೋವನು ವಿವೇಕದ ಉಗಮನು. ಅವನ ಕೆರೂಬಿಯರು ಆತನ ಆಜ್ಞೆಗಳಿಗೆ ವಿಧೇಯರಾಗುವಾಗ, ದೈವಿಕ ವಿವೇಕವನ್ನು ಅನುಸರಿಸುತ್ತಾರೆ.—ಜ್ಞಾನೋಕ್ತಿ 2:6; ಯಾಕೋಬ 3:17.
ಯೆಹೋವನ ಸ್ತುತಿಗಳು ಝಣತ್ಕರಿಸುತ್ತದೆ
23. ನಾಲ್ಕು ಜೀವಿಗಳು “ಕಣ್ಣುಗಳಿಂದ ತುಂಬಿವೆ” ಎಂಬ ವಾಸ್ತವಾಂಶದಿಂದ ಏನು ಸಾಂಕೇತಿಸಲ್ಪಡುತ್ತದೆ, ಮತ್ತು ಅವುಗಳಿಗೆ ಮೂರು ಜೋಡಿ ರೆಕ್ಕೆಗಳು ಇದ್ದವು ಎನ್ನುವುದರಿಂದ ಯಾವುದಕ್ಕೆ ಒತ್ತು ಹಾಕಲಾಗುತ್ತದೆ?
23 ಯೋಹಾನನು ತನ್ನ ವರ್ಣನೆಯನ್ನು ಮುಂದರಿಸುತ್ತಾನೆ: “ಮತ್ತು ಆ ನಾಲ್ಕು ಜೀವಿಗಳ ಕುರಿತು, ಅವುಗಳಲ್ಲಿ ಪ್ರತಿಯೊಂದಕ್ಕೆ ಆರಾರು ರೆಕ್ಕೆಗಳಿವೆ; ಸುತ್ತ ಮತ್ತು ಕೆಳಗಡೆ ಅವುಗಳು ಕಣ್ಣುಗಳಿಂದ ತುಂಬಿವೆ. ಮತ್ತು ಅವುಗಳು ‘ಇದ್ದಾತನೂ ಇರುವಾತನೂ ಬರುವಾತನೂ ಸರ್ವಶಕ್ತನೂ ಆದ ಯೆಹೋವ ದೇವರು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು’ ಎಂದು ಹೇಳುವಾಗ ಅವುಗಳಿಗೆ ಹಗಲಿರುಳು ವಿಶ್ರಾಂತಿಯೇ ಇಲ್ಲ.” (ಪ್ರಕಟನೆ 4:8, NW) ಈ ಕಣ್ಣುಗಳ ತುಂಬಿರುವಿಕೆಯು ಸಂಪೂರ್ಣವಾದ ಮತ್ತು ದೂರ ದೃಷ್ಟಿಯ ದೃಷ್ಟಿವ್ಯಾಪ್ತಿಯನ್ನು ಸೂಚಿಸುತ್ತದೆ. ಅವುಗಳಿಗೆ ನಿದ್ರೆಯ ಆವಶ್ಯಕತೆ ಇಲ್ಲದಿರುವುದರಿಂದ, ನಾಲ್ಕು ಜೀವಿಗಳು ಇದನ್ನು ಎಡೆಬಿಡದೆ ಬಳಸುತ್ತವೆ. ಯಾರ ಕುರಿತು ಇದನ್ನು ಬರೆಯಲಾಗಿದೆಯೋ, ಅವನನ್ನು ಅವರು ಅನುಕರಿಸುತ್ತಾರೆ: “ಯೆಹೋವನ ಕುರಿತಾಗಿಯಾದರೋ, ತನ್ನ ಕಡೆಗೆ ಸಂಪೂರ್ಣ ಹೃದಯ ಉಳ್ಳವರ ಪರವಾಗಿ ತನ್ನ ಶಕ್ತಿಯನ್ನು ತೋರ್ಪಡಿಸಲು, ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ತನ್ನ ದೃಷ್ಟಿಯನ್ನು ಪ್ರಸರಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9, NW) ಅಷ್ಟೊಂದು ಸಂಖ್ಯೆಯಲ್ಲಿ ಕಣ್ಣುಗಳು ಇರುವ ಕಾರಣ, ಕೆರೂಬಿಯರು ಎಲ್ಲಾ ಕಡೆಗಳಲ್ಲಿಯೂ ನೋಡಶಕ್ತರಾಗಿದ್ದಾರೆ. ಅವರ ಗಮನದಿಂದ ಯಾವುದೂ ತಪ್ಪಿಹೋಗುವುದಿಲ್ಲ. ಈ ರೀತಿಯಲ್ಲಿ ನ್ಯಾಯತೀರ್ಪಿನ ಕೆಲಸದಲ್ಲಿ ದೇವರನ್ನು ಸೇವಿಸಲು ಅವರು ಉತ್ತಮವಾಗಿ ಸನ್ನದ್ಧರಾಗಿರುತ್ತಾರೆ. ಅವನ ಕುರಿತಾಗಿ ಹೇಳಿರುವುದು: “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವುದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.” (ಜ್ಞಾನೋಕ್ತಿ 15:3) ಮತ್ತು ಮೂರು ಜೋಡಿ ರೆಕ್ಕೆಗಳಿಂದ—ಬೈಬಲಿನಲ್ಲಿ ಅಂಕೆ ಮೂರನ್ನು ಒತ್ತು ಹಾಕಲಿಕ್ಕಾಗಿ ಉಪಯೋಗಿಸಲಾಗಿದೆ—ಯೆಹೋವನ ನ್ಯಾಯತೀರ್ಪುಗಳನ್ನು ಮಿಂಚಿನೋಪಾದಿ ತೀವ್ರವಾಗಿ ಘೋಷಿಸುವಂತೆ ಮತ್ತು ಅವುಗಳನ್ನು ಜಾರಿಗೊಳಿಸುವಂತೆ ಕೆರೂಬಿಯರು ಚಲಿಸಶಕ್ತರು.
24. ಯೆಹೋವನನ್ನು ಕೆರೂಬಿಯರು ಹೇಗೆ ಸ್ತುತಿಸುತ್ತಾರೆ, ಮತ್ತು ಯಾವ ಮಹತ್ವಾರ್ಥದೊಂದಿಗೆ?
24 ಆಲಿಸಿರಿ! ಕೆರೂಬಿಯರು ಯೆಹೋವನಿಗೆ ಸಲ್ಲಿಸುವ ಸ್ತುತಿಯ ಸಂಗೀತವು ಮಧುರವೂ, ಆತ್ಮ-ಕಲುಕುವಂತಹದ್ದೂ ಆಗಿರುತ್ತದೆ: “ಇದ್ದಾತನೂ ಇರುವಾತನೂ ಬರುವಾತನೂ ಸರ್ವಶಕ್ತನೂ ಆದ ಯೆಹೋವ ದೇವರು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು.” ಪುನಃ, ಮೂರುತನವು ಗಾಢತೆಯನ್ನು ಸೂಚಿಸುತ್ತದೆ. ಯೆಹೋವ ದೇವರ ಪರಿಶುದ್ಧತೆಯನ್ನು ಕೆರೂಬಿಯರು ಬಲವಾಗಿ ದೃಢೀಕರಿಸುತ್ತಾರೆ. ಅವನು ಪರಿಶುದ್ಧತೆಯ ಬುಗ್ಗೆಯೂ, ಅಂತಿಮ ಮಟ್ಟವೂ ಆಗಿರುತ್ತಾನೆ. ಅವನು “ಸರ್ವಯುಗಗಳ ರಾಜನೂ” ಕೂಡ ಆಗಿರುತ್ತಾನೆ, ಯಾವಾಗಲೂ “ಆದಿಯೂ, ಅಂತ್ಯವೂ (ಆ್ಯಲ್ಫ ಮತ್ತು ಓಮೆಗ, NW) ಮತ್ತು ಮೊದಲನೆಯವನೂ, ಕಡೆಯವನೂ, ಪ್ರಾರಂಭವೂ, ಸಮಾಪ್ತಿಯೂ” ಆಗಿರುತ್ತಾನೆ. (1 ತಿಮೊಥೆಯ 1:17; ಪ್ರಕಟನೆ 22:13) ಎಲ್ಲಾ ಸೃಷ್ಟಿಯ ಮುಂದೆ ಯೆಹೋವನ ಎಣೆಯಿಲ್ಲದ ಗುಣಗಳನ್ನು ಘೋಷಿಸುವಾಗ, ಕೆರೂಬಿಯರು ಬಿಡುವಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ.
25. ಯೆಹೋವನ ಗುಣಗಾನ ಮಾಡುವುದರಲ್ಲಿ ಜೀವಿಗಳು ಮತ್ತು 24 ಹಿರಿಯರು ಹೇಗೆ ಐಕ್ಯರಾಗುತ್ತಾರೆ?
25 ಸ್ವರ್ಗಗಳ ಸ್ವರ್ಗವು ಯೆಹೋವನ ಸ್ತುತಿಗಳಿಂದ ಪ್ರತಿಧ್ವನಿಸುತ್ತದೆ! ಯೋಹಾನನ ವಿವರಣೆಯು ಮುಂದರಿಯುವುದು: “ಮತ್ತು ಆ ಜೀವಿಗಳು ಸಿಂಹಾಸನಾಸೀನನಿಗೆ, ಸದಾ ಸರ್ವದಾ ಜೀವಿಸುವಾತನಿಗೆ, ಮಹಿಮೆ, ಗೌರವ ಮತ್ತು ವಂದನಾರ್ಪಣೆಯನ್ನು ಸಲ್ಲಿಸುವಾಗೆಲ್ಲ, ಇಪ್ಪತ್ತನಾಲ್ಕು ಹಿರಿಯರು ಆ ಸಿಂಹಾಸನಾಸೀನನ ಮುಂದೆ ಅಡಬ್ಡಿದ್ದು, ಆ ಸದಾ ಸರ್ವದಾ ಜೀವಿಸುವಾತನನ್ನು ಆರಾಧಿಸುತ್ತಾರೆ, ಮತ್ತು ಅವರು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಹೇಳುವುದು: ‘ಯೆಹೋವನೇ, ನಮ್ಮ ದೇವರು ಕೂಡ, ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ನೀನು ಅರ್ಹನು, ಏಕೆಂದರೆ ಸಕಲ ಸಂಗತಿಗಳನ್ನು ನೀನು ಸೃಷ್ಟಿಸಿದ್ದೀ, ಮತ್ತು ನಿನ್ನ ಚಿತ್ತದ ಕಾರಣ ಅವು ಅಸ್ತಿತ್ವಕ್ಕೆ ಬಂದವು ಮತ್ತು ಸೃಷ್ಟಿಸಲ್ಪಟ್ಟವು.’” (ಪ್ರಕಟನೆ 4:9-11, NW) ಎಲ್ಲಾ ಶಾಸ್ತ್ರಗ್ರಂಥದಲ್ಲಿ, ನಮ್ಮ ದೇವರು ಮತ್ತು ಸಾರ್ವಭೌಮ ಪ್ರಭುವಾದ ಯೆಹೋವನಿಗೆ ಸಲ್ಲಿಸಿದ ಅತ್ಯುತ್ತಮ ಗೌರವಾರ್ಪಣಾ ಘೋಷಣೆಗಳಲ್ಲಿ ಇದೊಂದಾಗಿರುತ್ತದೆ!
26. ಯೆಹೋವನ ಮುಂದೆ 24 ಹಿರಿಯರು ತಮ್ಮ ಕಿರೀಟವನ್ನು ಹಾಕುವುದು ಯಾಕೆ?
26 ಯೇಸುವು ಪ್ರದರ್ಶಿಸುವ ಅದೇ ಮನೋಭಾವವು 24 ಹಿರಿಯರಲ್ಲಿದೆ. ಅವರು ತಮ್ಮ ಕಿರೀಟಗಳನ್ನು ಯೆಹೋವನ ಮುಂದೆ ಹಾಕುತ್ತಾರೆ. ದೇವರ ಸಾನ್ನಿಧ್ಯದಲ್ಲಿ ತಮ್ಮನ್ನು ಸ್ವತಃ ಹೆಚ್ಚಿಸಿಕೊಳ್ಳುವುದು ಅವರ ಮನಸ್ಸುಗಳಿಂದ ಅತ್ಯಂತ ದೂರದಲ್ಲಿದೆ. ಯೇಸುವು ಯಾವಾಗಲೂ ಮಾಡುವಂತೆಯೇ, ದೇವರಿಗೆ ಮಾನ ಮತ್ತು ಪ್ರಭಾವವನ್ನು ತರುವ ಏಕಮಾತ್ರ ಉದ್ದೇಶದಿಂದ ತಮ್ಮ ಅರಸುತನವು ಇರುತ್ತದೆ ಎಂದವರು ದೀನತೆಯಿಂದ ಅಂಗೀಕರಿಸುತ್ತಾರೆ. (ಫಿಲಿಪ್ಪಿ 2:5, 6, 9-11) ಅಧೀನತೆಯಿಂದ ತಮ್ಮ ಸ್ವಂತ ನಿಕೃಷ್ಟತೆಯನ್ನು ಅವರು ಮಾನ್ಯಮಾಡುತ್ತಾರೆ ಮತ್ತು ಯೆಹೋವನ ಸಾರ್ವಭೌಮತೆಯ ಮೇಲೆ ತಮ್ಮ ಅಧಿಕಾರವು ಆತುಕೊಂಡಿದೆ ಎಂದವರು ಒಪ್ಪುತ್ತಾರೆ. ಈ ರೀತಿಯಲ್ಲಿ, ಸಮಸ್ತವನ್ನು ಸೃಷ್ಟಿಸಿದ ದೇವರಿಗೆ ಸ್ತುತಿ ಮತ್ತು ಮಹಿಮೆಯನ್ನು ಕೊಡುವುದರಲ್ಲಿ, ಕೆರೂಬಿಯರೊಂದಿಗೆ ಮತ್ತು ನಂಬಿಗಸ್ತ ಸೃಷ್ಟಿಯ ಇತರರೊಂದಿಗೆ ಅವರು ಹೃದಯಪೂರ್ವಕವಾಗಿ ಸಹಮತದಲ್ಲಿದ್ದಾರೆ.—ಕೀರ್ತನೆ 150:1-6.
27, 28. (ಎ) ಈ ದರ್ಶನದ ಯೋಹಾನನ ವಿವರಣೆಯು ನಮ್ಮನ್ನು ಹೇಗೆ ಪ್ರಭಾವಿಸತಕ್ಕದ್ದು? (ಬಿ) ಯೋಹಾನನು ತದನಂತರ ನೋಡುವ ಮತ್ತು ಕೇಳುವ ವಿಷಯದ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?
27 ಈ ದರ್ಶನದ ಯೋಹಾನನ ದಾಖಲೆಯ ಓದುವಿಕೆಯಿಂದ ಪ್ರೇರಿಸಲ್ಪಡದೇ ಇರಲು ಯಾರಿಗೆ ಸಾಧ್ಯ? ಅದು ಉಜ್ವಲತೆಯದ್ದು, ವೈಭವದ್ದು! ಆದರೆ ಇದರ ವಾಸ್ತವ್ಯವು ಏನಾಗಿರಲೇಬೇಕು? ಯೆಹೋವನ ಘನಗಾಂಭೀರ್ಯವೇ ಗಣ್ಯತೆಯ ಹೃದಯದ ಯಾವನನ್ನಾದರೂ, ಅವನು ನಾಲ್ಕು ಜೀವಿಗಳನ್ನು ಮತ್ತು 24 ಮಂದಿ ಹಿರಿಯರನ್ನು ಪ್ರಾರ್ಥನೆ ಹಾಗೂ ಬಹಿರಂಗವಾಗಿ ಆತನ ನಾಮವನ್ನು ಘೋಷಿಸುವುದರಲ್ಲಿ ಸೇರಿಕೊಳ್ಳುವಂತೆ ಕಳೆಯಿಂದ ತುಂಬಿಸಬೇಕು. ಈ ದೇವರಿಗೆ ಸಾಕ್ಷಿಗಳಾಗಿರಲು ಇಂದು ಕ್ರೈಸ್ತರು ಸುಯೋಗ ಹೊಂದಿರುತ್ತಾರೆ. (ಯೆಶಾಯ 43:10) ನಾವು ಇಂದು ಇರುವಂತಹ ಕರ್ತನ ದಿನಕ್ಕೆ ಯೋಹಾನನ ದರ್ಶನವು ಅನ್ವಯಿಸುತ್ತದೆ ಎಂದು ನೆನಪಿನಲ್ಲಿಡಿರಿ. “ಏಳು ಆತ್ಮಗಳು” ನಮ್ಮನ್ನು ಮಾರ್ಗದರ್ಶಿಸಲು ಮತ್ತು ಬಲಗೊಳಿಸಲು ಯಾವಾಗಲೂ ಹತ್ತಿರದಲ್ಲಿಯೇ ಇರುತ್ತವೆ. (ಗಲಾತ್ಯ 5:16-18) ಪರಿಶುದ್ಧ ದೇವರನ್ನು ಸೇವಿಸುವುದರಲ್ಲಿ ನಾವು ಪರಿಶುದ್ಧರಾಗಿರುವಂತೆ ಸಹಾಯಮಾಡಲು ಇಂದು ನಮಗೆ ದೇವರ ವಾಕ್ಯವು ಲಭ್ಯವಾಗುತ್ತದೆ. (1 ಪೇತ್ರ 1:14-16) ಈ ಪ್ರವಾದನೆಯ ಮಾತುಗಳನ್ನು ಗಟ್ಟಿಯಾಗಿ ಓದುವುದರಲ್ಲಿ ನಾವು ಖಂಡಿತವಾಗಿಯೂ ಸಂತೋಷ ಪಡುತ್ತೇವೆ. (ಪ್ರಕಟನೆ 1:3) ಯೆಹೋವನಿಗೆ ನಂಬಿಗಸ್ತರಾಗಿರಲು ಮತ್ತು ಅವನ ಸ್ತುತಿಗಳನ್ನು ಸಕ್ರಿಯವಾಗಿ ಹಾಡುವುದರಲ್ಲಿ ಲೋಕವು ನಮ್ಮನ್ನು ಎಂದೂ ಅಪಕರ್ಷಿಸುವಂತೆ ಬಿಡದಿರಲು ಅವು ನಮಗೆ ಎಂತಹ ಪ್ರೇರಣೆಯಾಗಿರುತ್ತವೆ!—1 ಯೋಹಾನ 2:15-17.
28 ಇಷ್ಟರ ತನಕ, ಪರಲೋಕದಲ್ಲಿ ಆ ತೆರೆದಿಟ್ಟ ಬಾಗಿಲಿನ ಮೂಲಕ ಒಳಗೆ ಬರಲು ಆಮಂತ್ರಿಸಲ್ಪಟ್ಟಾಗ ಅವನೇನು ಕಂಡನೋ, ಅದನ್ನು ಯೋಹಾನನು ವರ್ಣಿಸಿದ್ದಾನೆ. ಯೆಹೋವನ ದಿವ್ಯ ಸಿಂಹಾಸನದ ಮೇಲೆ, ಅವನ ಘನಗಾಂಭೀರ್ಯದ ಮತ್ತು ಪ್ರತಿಷ್ಠೆಯ ಎಲ್ಲಾ ವೈಭವದೊಂದಿಗೆ ಅವನು ಕೂತಿರುವುದನ್ನು ಯೋಹಾನನು ವರದಿ ಮಾಡುವುದು ಅತಿ ಎದ್ದುತೋರುವಂತಹದ್ದಾಗಿದೆ. ಸಂಸ್ಥೆಗಳೆಲ್ಲದರಲ್ಲಿ ಅತಿ ಬಲಾಢ್ಯವಾದದರ್ದಿಂದ—ಉಜ್ವಲತೆ ಮತ್ತು ನಿಷ್ಠೆಯಿಂದ ಹೊಳೆಯುವಂತಹದರಿಂದ—ಅವನು ಆವರಿಸಲ್ಪಟ್ಟಿರುತ್ತಾನೆ. ದೈವಿಕ ನ್ಯಾಯಸ್ಥಾನದ ಸಭೆಯು ನಡೆಯುತ್ತಾ ಇದೆ. (ದಾನಿಯೇಲ 7:9, 10, 18) ಏನೋ ಒಂದು ವಿಶೇಷ ಘಟನೆಯು ಸಂಭವಿಸಲು ವೇದಿಕೆಯು ಅಣಿಗೊಳಿಸಲ್ಪಡುತ್ತದೆ. ಅದೇನು, ಮತ್ತು ಅದು ನಮ್ಮನ್ನು ಇಂದು ಹೇಗೆ ಬಾಧಿಸುತ್ತದೆ? ದೃಶ್ಯವು ತೆರೆಯಲ್ಪಡುತ್ತಿರುವಂತೆಯೇ ನಾವು ಅದನ್ನು ನೋಡೋಣ!
[ಪುಟ 86 ರಲ್ಲಿ ಇಡೀ ಪುಟದ ಚಿತ್ರ]
[ಪುಟ 89 ರಲ್ಲಿ ಇಡೀ ಪುಟದ ಚಿತ್ರ]