ಅಧ್ಯಾಯ 28
ಎರಡು ಭಯಂಕರ ಮೃಗಗಳೊಂದಿಗೆ ಹೋರಾಡುವುದು
ದರ್ಶನ 8—ಪ್ರಕಟನೆ 13:1-18
ವಿಷಯ: ಏಳು ತಲೆಗಳ ಕಾಡು ಮೃಗ, ಎರಡು ಕೊಂಬುಗಳ ಕಾಡು ಮೃಗ, ಮತ್ತು ಕಾಡು ಮೃಗದ ವಿಗ್ರಹ
ನೆರವೇರಿಕೆಯ ಸಮಯ: ನಿಮ್ರೋದನ ದಿನಗಳಿಂದ ಹಿಡಿದು ಮಹಾ ಸಂಕಟದ ತನಕ
1, 2. (ಎ) ಘಟಸರ್ಪದ ಕುರಿತು ಯೋಹಾನನು ಏನು ಹೇಳುತ್ತಾನೆ? (ಬಿ) ಘಟಸರ್ಪನಿಂದ ಉಪಯೋಗಿಸಲ್ಪಡುವ ದೃಶ್ಯ ಸಂಸ್ಥೆಯೊಂದನ್ನು ಯೋಹಾನನು ಸಾಂಕೇತಿಕ ಭಾಷೆಯಲ್ಲಿ ಹೇಗೆ ವರ್ಣಿಸುತ್ತಾನೆ?
ಮಹಾ ಘಟಸರ್ಪವು ಭೂಮಿಗೆ ದೊಬ್ಬಲ್ಪಟ್ಟಿದೆ! ಇನ್ನೆಂದಿಗೂ ಪುರಾತನ ಸರ್ಪ ಯಾ ಅವನ ದೆವ್ವ ಹಿಂಬಾಲಕರು ಪರಲೋಕದೊಳಗೆ ಪುನಃ ಅನುಮತಿಸಲ್ಪಡರೆಂದು ಪ್ರಕಟನೆಯ ನಮ್ಮ ಅಧ್ಯಯನವು ನಮಗೆ ಸ್ಪಷ್ಟೀಕರಿಸುತ್ತದೆ. ಆದರೆ “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ” ವನ ಕುರಿತಾಗಿ ನಾವು ಇನ್ನೂ ಎಲ್ಲವನ್ನು ಹೇಳಿರುವುದಿಲ್ಲ. ‘ಸ್ತ್ರೀ ಮತ್ತು ಆಕೆಯ ಸಂತಾನ’ದ ವಿರುದ್ಧ ಹೋರಾಡಲು ಸೈತಾನನಿಂದ ಬಳಸಲ್ಪಡುವ ವಿಧಾನಗಳನ್ನು ಮುಂದಿನ ದಾಖಲೆಯು ಸವಿಸ್ತಾರವಾಗಿ ಗುರುತಿಸುತ್ತದೆ. (ಪ್ರಕಟನೆ 12:9, 17) ಆ ಕುಟಿಲ ಬುದ್ಧಿಯ ಘಟಸರ್ಪದ ಕುರಿತು ಯೋಹಾನನು ಹೇಳುವುದು: “ಮತ್ತು ಅದು ಸಮುದ್ರದ ಮರಳಿನ ಮೇಲೆ ನಿಶ್ಚಲವಾಗಿ ನಿಂತಿತು.” (ಪ್ರಕಟನೆ 13:1ಎ, NW) ಆದುದರಿಂದ ಘಟಸರ್ಪನ ಕಾರ್ಯಾಚರಣೆಯ ವಿಧಾನಗಳನ್ನು ಪರೀಕ್ಷಿಸಲು ನಾವೀಗ ಸ್ವಲ್ಪ ನಿಲ್ಲೋಣ.
2 ಪವಿತ್ರ ಪರಲೋಕಗಳು ಸೈತಾನನ ಮತ್ತು ಅವನ ದೆವ್ವಗಳ ಹಾಜರಿಯಿಂದ ಇನ್ನು ಮುಂದೆ ಬಾಧಿತವಾಗುವುದಿಲ್ಲ. ಆ ದುಷ್ಟಾತ್ಮಗಳು ಪರಲೋಕದಿಂದ ಉಚ್ಚಾಟಿಸಲ್ಪಟ್ಟಿವೆ ಮತ್ತು ಭೂಮಿಯ ಪರಿಸರಕ್ಕೆ ನಿರ್ಬಂಧಿಸಲ್ಪಟ್ಟಿವೆ. ಈ ಇಪ್ಪತ್ತನೆಯ ಶತಮಾನದಲ್ಲಿ ಪ್ರೇತಾರಾಧನೆಯ ಆಚಾರಗಳ ಪ್ರಚಂಡ ಬೆಳವಣಿಗೆಗೆ ಇದು ನಿಸ್ಸಂದೇಹವಾಗಿ ಕಾರಣವಾಗಿದೆ. ಕುಯುಕ್ತಿಯುಳ್ಳ ಸರ್ಪವು ಒಂದು ಭ್ರಷ್ಟ ಆತ್ಮ ಸಂಸ್ಥೆಯನ್ನು ಇನ್ನೂ ಉಳಿಸಿಕೊಂಡಿದೆ. ಆದರೆ ಮಾನವಕುಲವನ್ನು ಮರುಳುಗೊಳಿಸಲಿಕ್ಕೋಸ್ಕರ ಅವನು ಒಂದು ದೃಶ್ಯ ಸಂಸ್ಥೆಯನ್ನು ಕೂಡ ಉಪಯೋಗಿಸುತ್ತಾನೊ? ಯೋಹಾನನು ನಮಗನ್ನುವುದು: “ಮತ್ತು ಸಮುದ್ರದಿಂದ ಏಳು ತಲೆಗಳು ಮತ್ತು ಹತ್ತು ಕೊಂಬುಗಳು ಮತ್ತು ಅದರ ಕೊಂಬುಗಳ ಮೇಲೆ ಹತ್ತು ಮುಕುಟಗಳು ಮತ್ತು ಅದರ ತಲೆಗಳ ಮೇಲೆ ದೇವದೂಷಣನಾಮಗಳು ಇರುವ ಒಂದು ಕಾಡು ಮೃಗವು ಏರಿಬರುವುದನ್ನು ಕಂಡೆನು. ಈಗ ನಾನು ಕಂಡ ಕಾಡು ಮೃಗವು ಚಿರತೆಯಂತಿತ್ತು, ಆದರೆ ಅದರ ಕಾಲುಗಳು ಕರಡಿಯ ಕಾಲುಗಳಂತೆ ಇದ್ದವು, ಮತ್ತು ಅದರ ಬಾಯಿ ಸಿಂಹದ ಬಾಯಿಯಂತೆ ಇತ್ತು. ಮತ್ತು ಘಟಸರ್ಪವು ಮೃಗಕ್ಕೆ ಅದರ ಬಲ ಮತ್ತು ಅದರ ಸಿಂಹಾಸನ ಮತ್ತು ಮಹಾ ಅಧಿಕಾರವನ್ನು ಕೊಟ್ಟಿತು.”—ಪ್ರಕಟನೆ 13:1ಬಿ, 2, NW.
3. (ಎ) ದರ್ಶನಗಳಲ್ಲಿ ಪ್ರವಾದಿ ದಾನಿಯೇಲನು ಯಾವ ಭಯಂಕರ ಮೃಗಗಳನ್ನು ಕಂಡನು? (ಬಿ) ದಾನಿಯೇಲ 7ರ ಮಹಾಗಾತ್ರದ ಮೃಗಗಳು ಏನನ್ನು ಪ್ರತಿನಿಧಿಸುತ್ತಿದ್ದವು?
3 ಈ ವಿಲಕ್ಷಣ ಮೃಗವು ಏನಾಗಿದೆ? ಬೈಬಲು ತಾನೇ ಉತ್ತರ ಕೊಡುತ್ತದೆ. ಸಾ. ಶ. ಪೂ. 539 ರಲ್ಲಿ ಬಾಬೆಲ್ ಪತನಗೊಳ್ಳುವ ಮೊದಲು, ಯೆಹೂದಿ ಪ್ರವಾದಿಯಾದ ದಾನಿಯೇಲನು ಭಯಂಕರವಾದ ಮೃಗಗಳನ್ನೊಳಗೊಂಡ ದರ್ಶನಗಳನ್ನು ನೋಡಿದನು. ದಾನಿಯೇಲ 7:2-8 ರಲ್ಲಿ ಸಮುದ್ರದೊಳಗಿಂದ ನಾಲ್ಕು ಮೃಗಗಳು ಬರುವುದನ್ನು ಅವನು ವರ್ಣಿಸುತ್ತಾನೆ, ಮೊದಲನೆಯದು ಸಿಂಹವನ್ನು, ಎರಡನೆಯದು ಕರಡಿಯನ್ನು, ಮೂರನೆಯದು ಚಿರತೆಯನ್ನು ಹೋಲುತ್ತಿದ್ದವು, ಮತ್ತು “ಆಹಾ! ನಾಲ್ಕನೆಯ ಮೃಗವು ಕಾಣಿಸಿತು; ಅದು ಭಯಂಕರ, ಹೆದರಿಸುವಂಥದು, ಅಧಿಕಬಲವುಳ್ಳದ್ದು; . . . ಅದಕ್ಕೆ ಹತ್ತು ಕೊಂಬುಗಳಿದ್ದವು.” ಸುಮಾರು ಸಾ. ಶ. 96ರ ವರ್ಷದಲ್ಲಿ ಯೋಹಾನನಿಂದ ನೋಡಲ್ಪಟ್ಟ ಕಾಡು ಮೃಗಕ್ಕೆ ಅದು ಗಮನಾರ್ಹವಾಗಿ ಅನುರೂಪವಾಗಿದೆ. ಆ ಮೃಗಕ್ಕೆ ಕೂಡ ಒಂದು ಸಿಂಹದ, ಚಿರತೆಯ ಮತ್ತು ಕರಡಿಯ ಲಕ್ಷಣಗಳಿವೆ ಮತ್ತು ಅದಕ್ಕೆ ಹತ್ತು ಕೊಂಬುಗಳಿವೆ. ದಾನಿಯೇಲನಿಂದ ನೋಡಲ್ಪಟ್ಟ ದೊಡ್ಡ ಮೃಗಗಳ ಗುರುತು ಏನಾಗಿದೆ? ಅವನು ನಮಗೆ ತಿಳಿಸುವುದು: “ಈ ದೊಡ್ಡ ಮೃಗಗಳು ಲೋಕಸಾಗರದೊಳಗಿಂದ ಏರತಕ್ಕ ನಾಲ್ಕು ರಾಜ್ಯಗಳು (ನಾಲ್ಕು ರಾಜರು, NW).” (ದಾನಿಯೇಲ 7:17) ಹೌದು, ಆ ಮೃಗಗಳು ‘ರಾಜರನ್ನು’ (NW), ಯಾ ಭೂಮಿಯ ರಾಜಕೀಯ ಶಕ್ತಿಗಳನ್ನು ಪ್ರತಿನಿಧಿಸುತ್ತವೆ.
4. (ಎ) ದಾನಿಯೇಲ 8ರ ಹೋತ ಮತ್ತು ಟಗರು ಏನನ್ನು ಚಿತ್ರಿಸಿದವು? (ಬಿ) ಹೋತದ ದೊಡ್ಡ ಕೊಂಬು ಮುರಿಯಲ್ಪಟ್ಟಾಗ ಮತ್ತು ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಬಂದಾಗ ಏನು ಸೂಚಿಸಲ್ಪಟ್ಟಿತು?
4 ಇನ್ನೊಂದು ದರ್ಶನದಲ್ಲಿ, ಒಂದು ದೊಡ್ಡ ಕೊಂಬಿನ ಹೋತದಿಂದ ಕೆಡವಲ್ಪಟ್ಟ ಎರಡು ಕೊಂಬುಗಳುಳ್ಳ ಟಗರನ್ನು ದಾನಿಯೇಲನು ಕಾಣುತ್ತಾನೆ. ದೇವದೂತ ಗಬ್ರಿಯೇಲನು ಅವನಿಗೆ ಅದರ ಅರ್ಥವೇನೆಂದು ವಿವರಿಸುತ್ತಾನೆ: “ಆ ಟಗರು ಮೇದ್ಯಯ ಮತ್ತು ಪಾರಸಿಯ ರಾಜ್ಯ (ರಾಜರು, NW). ಮತ್ತು ಆ ಹೋತವು ಗ್ರೀಕ್ ರಾಜ್ಯ (ರಾಜನು, NW).” ಗಬ್ರಿಯೇಲನು ಹೋತದ ದೊಡ್ಡ ಕೊಂಬು ಮುರಿಯಲ್ಪಡುವುದು ಮತ್ತು ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಬರುವವು ಎಂದು ಪ್ರವಾದಿಸುವುದನ್ನು ಮುಂದುವರಿಸುತ್ತಾನೆ. ಸುಮಾರು 200 ಕ್ಕಿಂತಲೂ ಹೆಚ್ಚಿನ ವರ್ಷಗಳ ಅನಂತರ, ಮಹಾ ಅಲೆಕ್ಸಾಂಡರನು ಸತ್ತಾಗ, ಅವನ ರಾಜ್ಯವು ವಿಭಜಿತಗೊಂಡು, ಅವನ ಸೇನಾಧಿಪತಿಗಳಲ್ಲಿ ನಾಲ್ವರಿಂದ ನಾಲ್ಕು ರಾಜ್ಯಗಳಾಗಿ ಆಳಲ್ಪಟ್ಟಾಗ, ವಾಸ್ತವದಲ್ಲಿ ಇದು ಸಂಭವಿಸಿತು.—ದಾನಿಯೇಲ 8:3-8, 20-25.a
5. (ಎ) ಮೃಗಕ್ಕಾಗಿರುವ ಗ್ರೀಕ್ ಶಬ್ದವು ಯಾವ ಅಧಿಕಾರ್ಥಗಳನ್ನು ತಿಳಿಸುತ್ತದೆ? (ಬಿ) ಪ್ರಕಟನೆ 13:1, 2ರ ಕಾಡು ಮೃಗ, ಅದರ ಏಳು ತಲೆಗಳೊಂದಿಗೆ ಯಾವುದನ್ನು ಪ್ರತಿನಿಧಿಸುತ್ತದೆ?
5 ಹಾಗಾದರೆ, ಪ್ರೇರಿತ ಬೈಬಲಿನ ಗ್ರಂಥಕರ್ತನು, ಭೂಮಿಯ ರಾಜಕೀಯ ಶಕ್ತಿಗಳನ್ನು ಮೃಗಗಳೆಂದು ವೀಕ್ಷಿಸುತ್ತಾನೆಂಬುದು ತೀರಾ ಸ್ಪಷ್ಟವಾಗಿದೆ. ಯಾವ ರೀತಿಯ ಮೃಗಗಳು? ಪ್ರಕಟನೆ 13:1, 2ರ ಕಾಡು ಮೃಗವನ್ನು “ನಿರ್ದಯದ್ದು” ಎಂದು ಒಬ್ಬ ವ್ಯಾಖ್ಯಾನಗಾರನು ಕರೆಯುತ್ತಾ, ಅವನು ಕೂಡಿಸುವುದು: “θηρίον [ಥಿ-ರಿ’ಆನ್, “ಮೃಗ”ಕ್ಕೆ ಗ್ರೀಕ್ ಶಬ್ದ] ಎಂಬುದು ಕ್ರೂರ, ಧ್ವಂಸಕಾರಿ, ಭಯಾನಕ, ಅತಿ ಹಸಿವೆಯುಳ್ಳ, ಇತ್ಯಾದಿ ಗುಣಗಳ ವಿಕಾರರೂಪದ ಬೃಹದ್ದೇಹಿಯೆಂದು ತಿಳಿಸುವ ಅರ್ಥನಿರೂಪಣೆಗಳೆಲ್ಲವನ್ನು ನಾವು ಅಂಗೀಕರಿಸುತ್ತೇವೆ.”b ಯಾವುದರಿಂದ ಸೈತಾನನು ಮಾನವ ಕುಲದ ಮೇಲೆ ಪ್ರಭುತ್ವ ನಡಿಸುತ್ತಾನೋ ಆ ರಕ್ತದೂಷಿತ ರಾಜಕೀಯ ವ್ಯವಸ್ಥೆಯನ್ನು ಇದು ಎಷ್ಟು ಚೆನ್ನಾಗಿ ವರ್ಣಿಸುತ್ತದೆ! ಈ ಕಾಡು ಮೃಗದ ಏಳು ತಲೆಗಳಲ್ಲಿ, ಯೋಹಾನನ ದಿನಗಳ ತನಕ ಬೈಬಲ್ ಇತಿಹಾಸದಲ್ಲಿ ತೋರಿಬಂದ ಆರು ಪ್ರಧಾನ ಲೋಕ ಶಕ್ತಿಗಳಿಗೆ—ಐಗುಪ್ತ, ಅಶ್ಶೂರ್ಯ, ಬಾಬೆಲ್, ಮೇದ್ಯಯ-ಪಾರಸಿಯ, ಗ್ರೀಸ್, ಮತ್ತು ರೋಮ್—ಮತ್ತು ಏಳನೆಯದ್ದು ಅನಂತರ ತೋರಿಬರಲಿರುವ ಪ್ರವಾದಿಸಿದ್ದ ಲೋಕ ಶಕ್ತಿಗೆ ಸೂಚಿತವಾಗಿದೆ.—ಹೋಲಿಸಿರಿ ಪ್ರಕಟನೆ 17:9, 10.
6. (ಎ) ಕಾಡು ಮೃಗದ ಏಳು ತಲೆಗಳು ಯಾವುದರಲ್ಲಿ ಮುಂದಾಳುತನವನ್ನು ವಹಿಸಿವೆ? (ಬಿ) ಯೆಹೂದಿ ವಿಷಯಗಳ ವ್ಯವಸ್ಥೆಯ ಮೇಲೆ ತನ್ನ ಸ್ವಂತ ನ್ಯಾಯತೀರ್ಪನ್ನು ಜಾರಿಗೊಳಿಸಲು ಯೆಹೋವನಿಂದ ರೋಮ್ ಹೇಗೆ ಉಪಯೋಗಿಸಲ್ಪಟ್ಟಿತು, ಮತ್ತು ಯೆರೂಸಲೇಮಿನಲ್ಲಿದ್ದ ಕ್ರೈಸ್ತರು ಏನು ಮಾಡಿದರು?
6 ಯೋಹಾನನು ನೋಡಿದ ಕಾಡು ಮೃಗ ಒಂದು ದೇಹ ಹಾಗೂ ಏಳು ತಲೆಗಳು ಮತ್ತು ಹತ್ತು ಕೊಂಬುಗಳಿಂದ ಉಂಟುಮಾಡಲ್ಪಟ್ಟಂತೆ—ಈ ಏಳಲ್ಲದೆ, ಇತಿಹಾಸದಲ್ಲಿ ಇತರ ಲೋಕಶಕ್ತಿಗಳು ಇದ್ದವು ಎಂಬುದು ನಿಜ. ಆದರೆ, ಏಳು ತಲೆಗಳಿಂದ ಪ್ರತಿನಿಧಿಸಲ್ಪಟ್ಟ ಏಳು ಪ್ರಧಾನ ಶಕ್ತಿಗಳು, ಸರದಿಯ ಪ್ರಕಾರ, ದೇವರ ಜನರನ್ನು ಗೋಳುಗುಟ್ಟಿಸುವುದರಲ್ಲಿ ಮುಂದಾಳುತನವನ್ನು ವಹಿಸಿದ್ದವು. ಸಾ. ಶ. 33 ರಲ್ಲಿ ರೋಮ್ ಪ್ರಬಲವಾಗಿದ್ದಾಗ, ದೇವರ ಮಗನನ್ನು ಕೊಲ್ಲಲು ಸೈತಾನನು ಕಾಡು ಮೃಗದ ಆ ತಲೆಯನ್ನು ಬಳಸಿದನು. ಆ ಸಮಯದಲ್ಲಿ, ದೇವರು ಅಪನಂಬಿಕೆಯ ಯೆಹೂದಿ ವಿಷಯಗಳ ವ್ಯವಸ್ಥೆಯನ್ನು ತೊರೆದನು, ಮತ್ತು ತದನಂತರ ಸಾ. ಶ. 70 ರಲ್ಲಿ ಆ ಜನಾಂಗದ ಮೇಲೆ ಅವನ ನ್ಯಾಯತೀರ್ಪನ್ನು ಜಾರಿಗೊಳಿಸಲು ರೋಮಿಗೆ ಅನುಮತಿಸಿದನು. ಸಂತಸಕರವಾಗಿಯೇ, ದೇವರ ನಿಜ ಇಸ್ರಾಯೇಲ್ ಆಗಿರುವ, ಅಭಿಷಿಕ್ತ ಕ್ರೈಸ್ತರ ಸಭೆಗೆ ಮೊದಲೇ ಎಚ್ಚರಿಕೆಯನ್ನೀಯಲಾಗಿತ್ತು, ಮತ್ತು ಯೆರೂಸಲೇಮ್ ಮತ್ತು ಯೂದಾಯದಲ್ಲಿದ್ದವರು ಯೊರ್ದನ್ ನದಿಯ ಆಚೇಪಕ್ಕದಲ್ಲಿ ಸುರಕ್ಷೆಗೆ ಪಲಾಯನಗೈದರು.—ಮತ್ತಾಯ 24:15, 16; ಗಲಾತ್ಯ 6:16.
7. (ಎ) ವಿಷಯಗಳ ವ್ಯವಸ್ಥೆಯ ಸಮಾಪ್ತಿಯು ಆಗಮಿಸಿದಾಗ, ಮತ್ತು ಕರ್ತನ ದಿನವು ಆರಂಭಗೊಂಡಾಗ ಏನು ನಡೆಯಲಿಕ್ಕಿತ್ತು? (ಬಿ) ಪ್ರಕಟನೆ 13:1, 2ರ ಕಾಡು ಮೃಗದ ಏಳನೆಯ ತಲೆಯು ಯಾವುದಾಗಿ ಪರಿಣಮಿಸಿತು?
7 ಆದಾಗ್ಯೂ, ಸಾ. ಶ. ಒಂದನೆಯ ಶತಕದ ಅಂತ್ಯದೊಳಗೆ, ಈ ಆರಂಭದ ಸಭೆಯಲ್ಲಿದ್ದ ಅನೇಕರು ಸತ್ಯದಿಂದ ಬಿದ್ದುಹೋಗಿದ್ದರು, ಮತ್ತು ನಿಜಕ್ರೈಸ್ತ ಗೋದಿ, “ಪರಲೋಕ ರಾಜ್ಯದವರು, (ರಾಜ್ಯದ ಪುತ್ರರು, NW)” ಹೆಚ್ಚಾಗಿ ಹಣಜಿಗಳಿಂದ, “ಸೈತಾನನವರಿಂದ (ದುಷ್ಟನ ಪುತ್ರರು, NW)” ಅಡಗಿಸಲ್ಪಟ್ಟಿತ್ತು. ಆದರೆ ವಿಷಯಗಳ ವ್ಯವಸ್ಥೆಯ ಸಮಾಪ್ತಿಯು ಆಗಮಿಸಿದಾಗ, ಒಂದು ಸಂಘಟಿತ ಗುಂಪಿನೋಪಾದಿ ಅಭಿಷಿಕ್ತ ಕ್ರೈಸ್ತರು ಪುನಃ ತೋರಿಬರಲಾರಂಭಿಸಿದರು. ಕರ್ತನ ದಿನದಲ್ಲಿ, ನೀತಿವಂತರು “ಸೂರ್ಯನಂತೆ ಪ್ರಕಾಶಿಸಲಿಕ್ಕೆ” ಇದ್ದರು. ಆದಕಾರಣ, ಕ್ರೈಸ್ತ ಸಭೆಯು ಕೆಲಸಕ್ಕಾಗಿ ಸಂಘಟಿಸಲ್ಪಟ್ಟಿತು. (ಮತ್ತಾಯ 13:24-30, 36-43) ಅಷ್ಟರೊಳಗೆ, ರೋಮ್ ಸಾಮ್ರಾಜ್ಯವು ಇಲ್ಲವಾಗಿತ್ತು. ಬೃಹತ್ ಬ್ರಿಟಿಷ್ ಸಾಮ್ರಾಜ್ಯವು, ಬಲಾಢ್ಯವಾದ ಅಮೆರಿಕದೊಂದಿಗೆ ಲೋಕರಂಗದ ಕೇಂದ್ರವನ್ನು ಹಿಡಿದಿತ್ತು. ಈ ಉಭಯ ಲೋಕ ಶಕ್ತಿಯು ಕಾಡು ಮೃಗದ ಏಳನೆಯ ತಲೆಯಾಗಿ ಪರಿಣಮಿಸಿತು.
8. ಆ್ಯಂಗ್ಲೋ-ಅಮೆರಿಕನ್ ಉಭಯ ಲೋಕ ಶಕ್ತಿಯನ್ನು ಒಂದು ಮೃಗಕ್ಕೆ ಹೋಲಿಸಿದ್ದು ಯಾಕೆ ತಲ್ಲಣಗೊಳಿಸಕೂಡದು?
8 ಆಳುವ ರಾಜಕೀಯ ಶಕ್ತಿಗಳನ್ನು ಕಾಡು ಮೃಗದೊಂದಿಗೆ ಗುರುತಿಸುವುದು ತಲ್ಲಣಗೊಳಿಸುವ ವಿಷಯವಲ್ಲವೆ? ಭೂವ್ಯಾಪಕ ನ್ಯಾಯಾಲಯಗಳಲ್ಲಿ ಸಂಸ್ಥೆಯೋಪಾದಿ ಮತ್ತು ವ್ಯಕ್ತಿಶಃ ಯೆಹೋವನ ಸಾಕ್ಷಿಗಳ ಸ್ಥಾನಮಾನದ ಕುರಿತು ತಕರಾರು ಎದ್ದಾಗ, ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಹೀಗೆ ಕೆಲವು ವಿರೋಧಿಗಳು ವಾದಿಸಿದರು. ಆದರೆ ನಿಂತು, ಯೋಚಿಸಿರಿ! ಜನಾಂಗಗಳು ಮೃಗಗಳನ್ನು ಮತ್ತು ಕಾಡು ಜೀವಿಗಳನ್ನು ತಮ್ಮ ರಾಷ್ಟ್ರೀಯ ಚಿಹ್ನೆಗಳಾಗಿ ತಾವಾಗಿಯೇ ಅಂಗೀಕರಿಸಿಲ್ಲವೇ? ಉದಾಹರಣೆಗೆ, ಬ್ರಿಟಿಷ್ ಸಿಂಹ, ಅಮೆರಿಕದ ಹದ್ದು, ಮತ್ತು ಚೀನಾದ ಘಟಸರ್ಪಗಳಿವೆ. ಆದುದರಿಂದ, ಪವಿತ್ರ ಬೈಬಲಿನ ಗ್ರಂಥಕರ್ತನು ಕೂಡ ಲೋಕ ಶಕ್ತಿಗಳನ್ನು ಸಂಕೇತಿಸಲು ಮೃಗಗಳನ್ನು ಉಪಯೋಗಿಸಿದರೆ, ಯಾವನಾದರೂ ಯಾಕೆ ಅಡ್ಡಿಯನ್ನು ಮಾಡಬೇಕು?
9. (ಎ) ಸೈತಾನನು ಕಾಡು ಮೃಗಕ್ಕೆ ಮಹಾ ಅಧಿಕಾರವನ್ನು ಕೊಡುತ್ತಾನೆ ಎಂಬ ಬೈಬಲಿನ ಹೇಳಿಕೆಗೆ ಒಬ್ಬನು ಯಾಕೆ ಅಡ್ಡಿಮಾಡಬಾರದು? (ಬಿ) ಬೈಬಲಿನಲ್ಲಿ ಸೈತಾನನನ್ನು ಹೇಗೆ ವರ್ಣಿಸಲಾಗುತ್ತದೆ, ಮತ್ತು ಸರಕಾರಗಳನ್ನು ಅವನು ಹೇಗೆ ಪ್ರಭಾವಿಸುತ್ತಾನೆ?
9 ಇನ್ನೂ ಹೆಚ್ಚಾಗಿ, ಕಾಡು ಮೃಗಕ್ಕೆ ಮಹಾ ಅಧಿಕಾರವನ್ನು ಕೊಡುವಾತನು ಸೈತಾನನು ಎಂದು ಬೈಬಲ್ ಹೇಳುವುದಕ್ಕೆ ಯಾವನಾದರೂ ಯಾಕೆ ಆಕ್ಷೇಪಿಸಬೇಕು? ಆ ಹೇಳಿಕೆಯ ಮೂಲನು ದೇವರು ಆಗಿದ್ದಾನೆ, ಮತ್ತು ಅವನ ಮುಂದೆ ‘ಜನಾಂಗಗಳು ಕಪಿಲೆಯಿಂದುದುರುವ ತುಂತುರಿನಂತೆಯೂ ತ್ರಾಸಿನ ತಟ್ಟೆಯ ದೂಳಿನ ಹಾಗೂ ಇರುತ್ತವೆ.’ ತಮ್ಮ ಕುರಿತಾಗಿ ಅವನ ಪ್ರವಾದನಾ ವಾಕ್ಯವು ವಿವರಿಸಿದ ರೀತಿಗಾಗಿ ರೇಗುವುದರ ಬದಲಾಗಿ, ದೇವರ ಪ್ರಸನ್ನತೆಯನ್ನು ಗಳಿಸುವುದರಿಂದ ಆ ಜನಾಂಗಗಳಿಗೆ ಹೆಚ್ಚು ಒಳಿತಾಗುವುದು. (ಯೆಶಾಯ 40:15, 17; ಕೀರ್ತನೆ 2:10-12) ಸೈತಾನನು ಬೆಂಕಿಯ ನರಕದಲ್ಲಿ ಅಗಲಿಹೋದ ಆತ್ಮಗಳನ್ನು ಯಾತನೆಪಡಿಸುವ ಒಂದು ಪೌರಾಣಿಕ ವ್ಯಕ್ತಿಯಾಗಿ ಇರುವುದಿಲ್ಲ. ಅಂಥ ಒಂದು ಸ್ಥಳವೇ ಇಲ್ಲ. ಬದಲಾಗಿ, “ಪ್ರಕಾಶವುಳ್ಳ ದೇವದೂತ” ನೋಪಾದಿ—ಸಾಮಾನ್ಯ ರಾಜಕೀಯ ವ್ಯವಹಾರಗಳಲ್ಲಿ ಬಲಾಢ್ಯವಾದ ಪ್ರಭಾವವನ್ನು ಚಲಾಯಿಸುವ ವಂಚನೆಯ ಕುಶಲಿಯಾಗಿ ಸೈತಾನನನ್ನು ಬೈಬಲಿನಲ್ಲಿ ವರ್ಣಿಸಲಾಗುತ್ತದೆ.—2 ಕೊರಿಂಥ 11:3, 14, 15; ಎಫೆಸ 6:11-18.
10. (ಎ) ಹತ್ತು ಕೊಂಬುಗಳ ಪ್ರತಿಯೊಂದರ ಮೇಲೆ ಮುಕುಟಗಳಿದ್ದವು ಎಂಬ ವಾಸ್ತವಾಂಶದಿಂದ ಏನು ಸೂಚಿಸಲ್ಪಡುತ್ತದೆ? (ಬಿ) ಹತ್ತು ಕೊಂಬುಗಳು ಮತ್ತು ಹತ್ತು ಮುಕುಟಗಳು ಏನನ್ನು ಸಂಕೇತಿಸುತ್ತವೆ?
10 ಕಾಡು ಮೃಗಕ್ಕೆ ಅದರ ಏಳು ತಲೆಗಳ ಮೇಲೆ ಹತ್ತು ಕೊಂಬುಗಳಿವೆ. ಪ್ರಾಯಶಃ ನಾಲ್ಕು ತಲೆಗಳಲ್ಲಿ ಪ್ರತಿಯೊಂದರ ಮೇಲೆ ಒಂದೊಂದು ಮತ್ತು ಮೂರು ತಲೆಗಳಲ್ಲಿ ಪ್ರತಿಯೊಂದರ ಮೇಲೆ ಎರಡೆರಡು ಇದ್ದಿರಬೇಕು. ಅದಲ್ಲದೆ, ಅದರ ಕೊಂಬುಗಳ ಮೇಲೆ ಹತ್ತು ಮುಕುಟಗಳಿದ್ದವು. ದಾನಿಯೇಲನ ಪುಸ್ತಕದಲ್ಲಿ, ಭಯಂಕರವಾದ ಮೃಗಗಳು ವರ್ಣಿಸಲ್ಪಟ್ಟಿವೆ, ಮತ್ತು ಕೊಂಬುಗಳ ಎಣಿಕೆಯನ್ನು ಅಕ್ಷರಾರ್ಥವಾಗಿ ಅರ್ಥೈಸಬೇಕು. ಉದಾಹರಣೆಗೆ, ಟಗರಿನ ಎರಡು ಕೊಂಬುಗಳು ಮೇದ್ಯಯ ಮತ್ತು ಪಾರಸಿಯ ಎಂಬ ಎರಡು ಪಾಲುದಾರರಿರುವ ಒಂದು ಲೋಕ ಶಕ್ತಿಯನ್ನು ಪ್ರತಿನಿಧಿಸಿದರೆ, ಹೋತದ ಮೇಲಿನ ನಾಲ್ಕು ಕೊಂಬುಗಳು, ಮಹಾ ಅಲೆಕ್ಸಾಂಡರನ ಗ್ರೀಕ್ ಸಾಮ್ರಾಜ್ಯದಿಂದ ಬೆಳೆದುಬಂದ, ಸಹ ಅಸ್ತಿತ್ವದ ನಾಲ್ಕು ಸಾಮ್ರಾಜ್ಯಗಳನ್ನು ಪ್ರತಿನಿಧಿಸುತ್ತವೆ. (ದಾನಿಯೇಲ 8:3, 8, 20-22) ಆದಾಗ್ಯೂ, ಯೋಹಾನನು ನೋಡಿದ ಮೃಗದ ಮೇಲೆ ಹತ್ತು ಕೊಂಬುಗಳ ಎಣಿಕೆಯು ಸಾಂಕೇತಿಕವೆಂದು ಕಾಣುತ್ತದೆ. (ಹೋಲಿಸಿರಿ ದಾನಿಯೇಲ 7:24; ಪ್ರಕಟನೆ 17:12.) ಸೈತಾನನ ಪೂರ್ತಿ ರಾಜಕೀಯ ಸಂಸ್ಥೆಯನ್ನುಂಟುಮಾಡುವ ಸರ್ವಸ್ವತಂತ್ರ ರಾಷ್ಟ್ರಗಳ ಸಮಗ್ರತೆಯನ್ನು ಅವುಗಳು ಪ್ರತಿನಿಧಿಸುತ್ತವೆ. ಇವೆಲ್ಲ ಕೊಂಬುಗಳು ಹಿಂಸಾತ್ಮಕವೂ, ಆಕ್ರಮಣ ಪ್ರವೃತ್ತಿಯವುಗಳೂ ಆಗಿವೆ, ಆದರೆ ಏಳು ತಲೆಗಳಿಂದ ಸೂಚಿಸಲ್ಪಟ್ಟಂತೆ, ಒಂದು ಸಮಯದ ಒಂದು ಲೋಕ ಶಕ್ತಿಯಲ್ಲಿ ಮಾತ್ರವೇ ಶಿರಸ್ಸುತನವು ಇರುತ್ತದೆ. ತದ್ರೀತಿ, ಆ ಸಮಯದ ಒಂದು ಪ್ರಬಲವಾದ ರಾಷ್ಟ್ರ, ಯಾ ಲೋಕ ಶಕ್ತಿಯೊಂದಿಗೆ ಏಕಕಾಲಿಕವಾಗಿ ಈ ಎಲ್ಲ ಸರ್ವಸ್ವತಂತ್ರ ರಾಷ್ಟ್ರಗಳು ಆಳುವ ಅಧಿಕಾರವನ್ನು ಚಲಾಯಿಸುತ್ತವೆ ಎಂದು ಹತ್ತು ಮುಕುಟಗಳು ಸೂಚಿಸುತ್ತವೆ.
11. ಕಾಡು ಮೃಗದ ಮೇಲೆ “ದೇವದೂಷಣ ನಾಮಗಳು” ಇರುವ ವಾಸ್ತವಾಂಶದಿಂದ ಏನು ಸೂಚಿಸಲ್ಪಡುತ್ತದೆ?
11 ಈ ಕಾಡು ಮೃಗಕ್ಕೆ “ಅದರ ತಲೆಗಳ ಮೇಲೆ” ಯಾವುದು ಯೆಹೋವ ದೇವರಿಗೂ ಕ್ರಿಸ್ತ ಯೇಸುವಿಗೂ ಮಹಾ ಅಗೌರವವನ್ನು ತೋರಿಸುತ್ತದೋ ಅಂತಹ ಸ್ವಂತ ಸಮರ್ಥನೆಯನ್ನು ಮಾಡುವ “ದೇವದೂಷಣ ನಾಮಗಳು” ಇವೆ, ತನ್ನ ರಾಜಕೀಯ ಗುರಿಗಳನ್ನು ಸಾಧಿಸಲು ದೇವರ ಮತ್ತು ಕ್ರಿಸ್ತನ ಹೆಸರುಗಳನ್ನು ಕೃತ್ರಿಮವಾಗಿ ಅದು ಬಳಸಿದೆ; ಮತ್ತು ಅದರ ರಾಜಕೀಯ ಕಾರ್ಯಗತಿಗಳಲ್ಲಿ ವೈದಿಕರು ಕೂಡ ಭಾಗಿಗಳಾಗುವಂತೆ ಅನುಮತಿಯನ್ನೀಯುತ್ತಾ ಅದು ಸುಳ್ಳು ಧರ್ಮದೊಂದಿಗೆ ಆಟವಾಡಿದೆ. ಉದಾಹರಣೆಗೆ, ಇಂಗ್ಲೆಂಡಿನ ಶ್ರೀಮಂತ ಸಭೆ (ಹೌಸ್ ಆಫ್ ಲಾರ್ಡ್ಸ್) ಯಲ್ಲಿ ಬಿಷಪರುಗಳು ಸೇರಿದ್ದಾರೆ. ಫ್ರಾನ್ಸ್ ಮತ್ತು ಇಟೆಲಿಯಲ್ಲಿ ಕ್ಯಾತೊಲಿಕ್ ಕಾರ್ಡಿನಲರು ಪ್ರಾಮುಖ್ಯ ರಾಜಕೀಯ ಪಾತ್ರಗಳನ್ನು ವಹಿಸಿದ್ದಾರೆ, ಮತ್ತು ತೀರಾ ಇತ್ತೀಚಿಗೆ, ಲ್ಯಾಟಿನ್ ಅಮೆರಿಕದಲ್ಲಿ ರಾಜಕೀಯ ಹುದ್ದೆಗಳನ್ನು ಪಾದ್ರಿಗಳು ತೆಗೆದುಕೊಂಡಿದ್ದಾರೆ. “ದೇವರಲ್ಲಿ ನಾವು ಭರವಸವಿಡುತ್ತೇವೆ” ಎಂಬಂಥ ಧಾರ್ಮಿಕ ಗುರಿನುಡಿಗಳನ್ನು ಸರಕಾರಗಳು ತಮ್ಮ ಬ್ಯಾಂಕ್ ನೋಟುಗಳ ಮೇಲೆ ಮುದ್ರಿಸುತ್ತವೆ, ಮತ್ತು ತಮ್ಮ ಅಧಿಪತಿಗಳಿಗೆ ದೈವಿಕ ಮನ್ನಣೆಯಿದೆ ಎಂದು ಅವು ವಾದಿಸುತ್ತಾ, ಉದಾಹರಣೆಗೆ, “ದೇವರ ಕೃಪೆಯಿಂದ” ನೇಮಿತರಾಗಿದ್ದಾರೆಂದು ನಮೂದಿಸುತ್ತಾರೆ. ಇದೆಲ್ಲವೂ ನಿಜವಾಗಿಯೂ ದೇವದೂಷಣೆಯಾಗಿದೆ, ಯಾಕಂದರೆ ದೂಷಿತ ರಾಷ್ಟ್ರೀಯ ರಾಜಕೀಯ ರಂಗದಲ್ಲಿ ದೇವರನ್ನು ಒಳಗೂಡಿಸಲು ಅದು ಪ್ರಯತ್ನಿಸುತ್ತದೆ.
12. (ಎ) “ಸಮುದ್ರ” ದೊಳಗಿಂದ ಕಾಡು ಮೃಗದ ಬರೋಣಕ್ಕೆ ಯಾವ ಮಹತ್ವಾರ್ಥವು ಇದೆ, ಮತ್ತು ಅದು ಹೊರಗೆ ಬರಲು ಆರಂಭಿಸಿದ್ದು ಯಾವಾಗ? (ಬಿ) ಘಟಸರ್ಪವು ಸಾಂಕೇತಿಕ ಮೃಗಕ್ಕೆ ಮಹಾ ಅಧಿಕಾರವನ್ನು ಕೊಡುತ್ತದೆ ಎಂಬ ನಿಜಾಂಶದಿಂದ ಏನು ಸೂಚಿಸಲಾಗುತ್ತದೆ?
12 ಎಲ್ಲಿಂದ ಮಾನವ ಸರಕಾರಗಳು ಉದ್ಭವಿಸುತ್ತವೋ ಆ ಪ್ರಕ್ಷುಬ್ಧ ಜನಸಮೂಹಗಳ ತಕ್ಕದ್ದಾದ ಸಂಕೇತವಾಗಿರುವ “ಸಮುದ್ರ” ದೊಳಗಿಂದ ಈ ಕಾಡು ಮೃಗವು ಏರಿಬರುತ್ತದೆ. (ಯೆಶಾಯ 17:12, 13) ಯೆಹೋವನಿಗೆ ವಿರೋಧವಾಗಿರುವ ಜಲಪ್ರಲಯಾನಂತರದ ವಿಷಯಗಳ ವ್ಯವಸ್ಥೆಯು ತನ್ನನ್ನು ತಾನೇ ವ್ಯಕ್ತಪಡಿಸಿಕೊಂಡಾಗ, ಹಿಂದೆ ನಿಮ್ರೋದನ ದಿನಗಳಲ್ಲಿ (ಸುಮಾರು ಸಾ. ಶ. ಪೂ. 21 ನೆಯ ಶತಮಾನ) ಅಲ್ಲೋಲಕಲ್ಲೋಲವಾದ ಮಾನವ ಸಮುದ್ರದಿಂದ ಈ ಕಾಡು ಮೃಗವು ತಲೆದೋರಲು ಆರಂಭಿಸಿತು. (ಆದಿಕಾಂಡ 10:8-12; 11:1-9) ಆದರೆ ಕರ್ತನ ದಿನದ ಸಮಯಾವಧಿಯಲ್ಲಿ ಮಾತ್ರ ಅದರ ಏಳು ತಲೆಗಳಲ್ಲಿ ಕೊನೆಯದ್ದು ಪೂರ್ಣವಾಗಿ ತೋರ್ಪಡಿಸಿಕೊಂಡಿತು. ಘಟಸರ್ಪವು “ಮೃಗಕ್ಕೆ ಅದರ ಬಲ ಮತ್ತು ಅದರ ಸಿಂಹಾಸನ ಮತ್ತು ಮಹಾ ಅಧಿಕಾರವನ್ನು ಕೊಟ್ಟಿತು” ಎಂಬುದನ್ನೂ ಗಮನಿಸಿರಿ. (ಹೋಲಿಸಿರಿ ಲೂಕ 4:6.) ಮೃಗವು ಮಾನವ ಕುಲದ ಸಮೂಹಗಳ ನಡುವಿನ ಸೈತಾನನ ರಾಜಕೀಯ ಸೃಷ್ಟಿಯಾಗಿದೆ. ಸೈತಾನನು ನಿಜವಾಗಿಯೂ “ಇಹಲೋಕಾಧಿಪತಿ” ಯಾಗಿದ್ದಾನೆ.—ಯೋಹಾನ 12:31.
ಮಾರಕ ಹೊಡೆತ
13. (ಎ) ಕರ್ತನ ದಿನದ ಆರಂಭದಲ್ಲಿ ಕಾಡು ಮೃಗಕ್ಕೆ ಯಾವ ಆಪತ್ತು ಬಂದೆರಗುತ್ತದೆ? (ಬಿ) ಒಂದು ತಲೆಗೆ ಮಾರಕ ಹೊಡೆತ ದೊರೆತಾಗ ಇಡೀ ಕಾಡು ಮೃಗಕ್ಕೆ ಬಾಧೆ ತಗಲಿದ್ದು ಹೇಗೆ?
13 ಕರ್ತನ ದಿನದ ಆರಂಭದಲ್ಲಿ, ಕಾಡು ಮೃಗಕ್ಕೆ ವಿಪತ್ತು ಬಡಿಯುತ್ತದೆ. ಯೋಹಾನನು ವರದಿಸಿದ್ದು: “ಮತ್ತು ಅದರ ತಲೆಗಳಲ್ಲಿ ಒಂದು ಕಡಿಯಲ್ಪಟ್ಟು ಸತ್ತಿದೆಯೋ ಎಂಬಂತಿರುವುದನ್ನು ನಾನು ಕಂಡೆನು, ಆದರೆ ಅದರ ಮಾರಕ ಹೊಡೆತವು ವಾಸಿಗೊಂಡಿತು; ಮತ್ತು ಇಡೀ ಭೂಮಿಯು ಆ ಕಾಡು ಮೃಗವನ್ನು ಮೆಚ್ಚುಗೆಯಿಂದ ಹಿಂಬಾಲಿಸಿತು.” (ಪ್ರಕಟನೆ 13:3, NW) ಕಾಡು ಮೃಗದ ಒಂದು ತಲೆಯು ಮಾರಕ ಹೊಡೆತವನ್ನು ಹೊಂದಿತು ಎಂದು ಈ ವಚನವು ಹೇಳುತ್ತದೆ, ಆದರೆ ಇಡೀ ಮೃಗವು ಘಾಸಿಗೊಂಡಂತೆ 12 ನೆಯ ವಚನವು ಮಾತಾಡುತ್ತದೆ. ಹಾಗೆ ಯಾಕೆ? ಒಳ್ಳೇದು, ಕಾಡು ಮೃಗದ ಎಲ್ಲಾ ತಲೆಗಳು ಒಟ್ಟಿಗೆ ಪ್ರಾಬಲ್ಯಕ್ಕೆ ಬರುವುದಿಲ್ಲ. ಮಾನವ ಕುಲದ ಮೇಲೆ, ನಿರ್ದಿಷ್ಟವಾಗಿ ದೇವ ಜನರ ಮೇಲೆ ಪ್ರತಿಯೊಂದು ತನ್ನ ಸರದಿಯಲ್ಲಿ ಪ್ರಭುತ್ವವನ್ನು ಚಲಾಯಿಸಿತು. (ಪ್ರಕಟನೆ 17:10) ಹೀಗೆ, ಕರ್ತನ ದಿನವು ಆರಂಭಗೊಂಡಾಗ, ಅಲ್ಲಿ ಬಲಾಢ್ಯ ಲೋಕ ಶಕ್ತಿಯೋಪಾದಿ ಕಾರ್ಯಾಚರಿಸುವ ಒಂದೇ ಒಂದು ತಲೆ, ಏಳನೆಯದ್ದು ಇದೆ. ಆ ತಲೆಯ ಮೇಲೆ ಒಂದು ಮಾರಕ ಹೊಡೆತವು ಇಡೀ ಕಾಡು ಮೃಗಕ್ಕೆ ಮಹಾ ಸಂಕಟವನ್ನು ತರುತ್ತದೆ.
14. ಮಾರಕ ಹೊಡೆತ ಕೊಡಲ್ಪಟ್ಟದ್ದು ಯಾವಾಗ, ಮತ್ತು ಸೈತಾನನ ಕಾಡು ಮೃಗದ ಮೇಲೆ ಆದ ಪರಿಣಾಮವನ್ನು ಒಬ್ಬ ಮಿಲಿಟರಿ ಅಧಿಕಾರಿಯು ಹೇಗೆ ವರ್ಣಿಸಿದ್ದಾನೆ?
14 ಆ ಮಾರಕ ಹೊಡೆತ ಏನಾಗಿತ್ತು? ತದನಂತರ ಅದನ್ನು ಕತ್ತಿಯ (ಖಡ್ಗ, NW) ಹೊಡೆತ ಎಂದು ಕರೆಯಲಾಗಿದೆ, ಮತ್ತು ಕತ್ತಿಯೊಂದು ಹೋರಾಟದ ಒಂದು ಸಂಕೇತವಾಗಿದೆ. ಕರ್ತನ ದಿನದ ಆರಂಭದಲ್ಲಿ ಹೊಂದಿದ ಈ ಕತ್ತಿಯ ಗಾಯವು ಮೊದಲನೆಯ ಲೋಕ ಯುದ್ಧಕ್ಕೆ ಸಂಬಂಧಿಸಿರಬೇಕು, ಇದು ಸೈತಾನನ ರಾಜಕೀಯ ಕಾಡು ಮೃಗವನ್ನು ಧ್ವಂಸಗೊಳಿಸಿತು ಮತ್ತು ಬರಿದುಮಾಡಿತು. (ಪ್ರಕಟನೆ 6:4, 8; 13:14) ಆ ಯುದ್ಧದಲ್ಲಿ ಒಬ್ಬ ಮಿಲಿಟರಿ ಆಫೀಸರನಾಗಿದ್ದ ಗ್ರಂಥಕರ್ತ ಮಾರಿಸ್ ಜೆನಿವೈ, ಅದರ ಕುರಿತು ಹೇಳಿದ್ದು: “ಮಾನವ ಕುಲದ ಇಡೀ ಇತಿಹಾಸದಲ್ಲಿ ಆಗಸ್ಟ್ 2, 1914ಕ್ಕೆ ಇದ್ದಂಥ ಪ್ರಾಮುಖ್ಯತೆಯು ಬೇರೆ ಕೆಲವೇ ತಾರೀಖುಗಳಿಗೆ ಇವೆ ಎಂದು ಅಂಗೀಕರಿಸಲು ಪ್ರತಿಯೊಬ್ಬರು ಸಮ್ಮತಿಸುತ್ತಾರೆ. ಮೊದಲು ಯೂರೋಪ್, ಮತ್ತು ಬಲುಬೇಗನೆ ಇಡೀ ಮಾನವ ಕುಲವು ಒಂದು ಭಯಾನಕ ಘಟನೆಯಲ್ಲಿ ತಾವಾಗಿಯೇ ಧುಮುಕಿರುವುದಾಗಿ ಕಂಡುಕೊಂಡರು. ಒಪ್ಪಂದಗಳು, ಸಂಧಾನಗಳು, ನೈತಿಕ ನಿಯಮಗಳು, ಎಲ್ಲ ತಳಹದಿಗಳು ಅಲುಗಾಡಿಸಲ್ಪಟ್ಟವು; ಒಂದು ದಿನದಿಂದ ಮರುದಿನಕ್ಕೆ, ಪ್ರತಿಯೊಂದು ಪ್ರಶ್ನೆಗೊಡ್ಡಲಾಯಿತು. ಸಹಜಪ್ರವೃತ್ತಿಯ ಅಶುಭಗಳನ್ನು ಮತ್ತು ವಿವೇಚನಾಪರ ನಿರೀಕ್ಷಣೆಗಳೆರಡನ್ನೂ ಈ ಘಟನೆಯು ಮೀರಲಿಕ್ಕಿತ್ತು. ಬಹುಗಾತ್ರದ, ಅಸ್ತವ್ಯಸತ್ತೆಯ, ಘೋರಮಯವಾಗಿದ್ದ, ಅದು ತನ್ನ ಜಾಡಿನಲ್ಲಿ ನಮ್ಮನ್ನು ಇನ್ನೂ ಸೆಳೆಯುತ್ತದೆ.”—ಮಾರಿಸ್ ಜೆನಿವೈ, ಆ್ಯಕಡಮೀ ಪ್ರಾನ್ಸ್ವೆನ ಸದಸ್ಯ, ಪ್ರಾಮಿಸ್ ಆಫ್ ಗ್ರೇಟ್ನೆಸ್ (1968) ಪುಸ್ತಕದಿಂದ ಉದ್ಧರಿಸಲಾಗಿದೆ.
15. ಕಾಡು ಮೃಗದ ಏಳನೆಯ ತಲೆಯು ಅದರ ಮಾರಕ ಹೊಡೆತವನ್ನು ಪಡೆದದ್ದು ಹೇಗೆ?
15 ಕಾಡು ಮೃಗದ ಪ್ರಬಲವಾದ ಆ ಏಳನೆಯ ತಲೆಗೆ ಆ ಯುದ್ಧವು ಒಂದು ಪ್ರಧಾನ ವಿಪತ್ತಾಗಿತ್ತು. ಇತರ ಯೂರೋಪಿಯನ್ ರಾಷ್ಟ್ರಗಳೊಂದಿಗೆ, ಬ್ರಿಟನ್ ಅದರ ಯುವ ಪುರುಷರನ್ನು ಆಘಾತವೊಡ್ಡುವ ಸಂಖ್ಯೆಗಳಲ್ಲಿ ಕಳೆದು ಕೊಂಡಿತು. ಇಸವಿ 1916ರ ರಿವರ್ ಸಾಮ್ ಕದನವೆಂದು ಕರೆಯಲ್ಪಡುವ ಕೇವಲ ಒಂದು ಯುದ್ಧದಲ್ಲೇ 4,20,000 ಬ್ರಿಟಿಷ್ ಸೈನಿಕರೊಂದಿಗೆ,—1,94,000 ಫ್ರೆಂಚ್ ಮತ್ತು 4,40,000 ಜರ್ಮನ್ರು ಸತ್ತರು—10,00,000 ಕ್ಕಿಂತಲೂ ಹೆಚ್ಚು ಸಾವು-ನೋವುಗಳು! ಆರ್ಥಿಕವಾಗಿ ಸಹ, ಬ್ರಿಟನ್—ಮಿಕ್ಕ ಯೂರೋಪಿನೊಂದಿಗೆ—ನುಚ್ಚುನೂರಾಯಿತು. ಬೃಹತ್ ಬ್ರಿಟಿಷ್ ಸಾಮ್ರಾಜ್ಯವು ಹೊಡೆತದಿಂದ ತತ್ತರಿಸಿತು ಮತ್ತು ಪುನಃ ಎಂದಿಗೂ ಪೂರ್ಣವಾಗಿ ಚೇತರಿಸಲಿಲ್ಲ. ಇಪ್ಪತ್ತೆಂಟು ಪ್ರಧಾನ ರಾಷ್ಟ್ರಗಳು ಭಾಗವಹಿಸುವುದರೊಂದಿಗೆ, ಆ ಯುದ್ಧವು ನಿಜವಾಗಿಯೂ ಒಂದು ಮಾರಕ ಹೊಡೆತವೊಂದರಿಂದಲೋ ಎಂಬಂತೆ ಇಡೀ ಲೋಕವು ಅಳ್ಳಾಡುವಂತೆ ಮಾಡಿತು. ಆಗಸ್ಟ್ 4, 1979 ರಲ್ಲಿ, ಮೊದಲನೆಯ ಲೋಕ ಯುದ್ಧವು ಸ್ಫೋಟಿಸಿ, ಕೇವಲ 65 ವರ್ಷಗಳ ಅನಂತರ, ಇಂಗ್ಲೆಂಡಿನ ಲಂಡನಿನ ದ ಇಕಾನಮಿಸ್ಟ್ ಹೇಳಿದ್ದು: “ಲೋಕವು ಅಂದಿನಿಂದ ಪುನಃ ಸೆರೆಹಿಡಿಯಲು ಅದಕ್ಕೆ ಸಾಧ್ಯವಾಗದೇ ಹೋದ ಒಂದು ಸುಸಂಬದ್ಧತೆಯನ್ನು 1914 ರಲ್ಲಿ ಕಳೆದು ಕೊಂಡಿತು.”
16. ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಅದು ಉಭಯ ಲೋಕ ಶಕ್ತಿಯ ಒಂದು ಭಾಗವೆಂದು ಅಮೆರಿಕವು ಹೇಗೆ ತೋರಿಸಿತು?
16 ಅದೇ ಸಮಯದಲ್ಲಿ, ಆಂಗ್ಲೋ-ಅಮೆರಿಕನ್ ಲೋಕ ಶಕ್ತಿಯ ಭಾಗವಾಗಿ ವಿಶಿಷ್ಟವಾಗಿ ಎದ್ದುಬರಲು ಅಮೆರಿಕಕ್ಕೆ, ಮಹಾ ಯುದ್ಧ ಎಂದು ಆಗ ಕರೆಯಲ್ಪಟ್ಟ ಯುದ್ಧವು ಒಂದು ದಾರಿಯನ್ನು ತೆರೆಯಿತು. ಯುದ್ಧದ ಮೊದಲ ವರ್ಷಗಳಲ್ಲಿ, ಸಾರ್ವಜನಿಕ ಅಭಿಪ್ರಾಯವು ಅಮೆರಿಕವನ್ನು ಸಂಘರ್ಷಣೆಯಿಂದ ಹೊರಗೆ ಇಟ್ಟಿತು. ಆದರೆ ಇತಿಹಾಸಕಾರರಾದ ಇಸ್ಮೀ ವಿಂಗ್ಫೀಲ್ಡ್-ಸಾಟ್ಟ್ರ್ಫೊರ್ಡ್ ಬರೆದಂತೆ, “ಅತಿ ಮಹತ್ವದ ವಿಷಮ ಸ್ಥಿತಿಯ ಈ ಗಳಿಗೆಯಲ್ಲಿ, ಬ್ರಿಟನ್ ಮತ್ತು ಅಮೆರಿಕವು [ತಮ್ಮ] ಪೂರ್ತಿ ಅಧೀನಪಡಿಸಿಕೊಳ್ಳುವ ಐಕ್ಯ ಮತ್ತು ಸಾಮಾನ್ಯ ನ್ಯಾಸ ನಿರ್ವಹಣೆಯ ಕೈಗೂಡಿಸುವಿಕೆಯಲ್ಲಿ ತಮ್ಮ ಭಿನ್ನತೆಗಳನ್ನು ನಿವಾರಿಸಿಕೊಳ್ಳುತ್ತವೊ ಇಲ್ಲವೊ ಎಂಬುದು ಒಂದು ಪ್ರಶ್ನೆಯಾಗಿತ್ತು.” ಮುಂದೆ ಸಂಭವಿಸಿದಂತೆ, ಅವರು ನಿವಾರಿಸಿಕೊಂಡರು. ಅಮೆರಿಕವು 1917 ರಲ್ಲಿ ತತ್ತರಿಸುತ್ತಿರುವ ಮಿತ್ರರಾಷ್ಟ್ರಗಳ ಯುದ್ಧಪ್ರಯತ್ನಗಳನ್ನು ಬಲಗೊಳಿಸಲು ಸಂಪನ್ಮೂಲಗಳನ್ನು ಮತ್ತು ಮಾನವಶಕ್ತಿಯನ್ನು ಒದಗಿಸಿತು. ಹೀಗೆ, ಬ್ರಿಟನ್ ಮತ್ತು ಅಮೆರಿಕವು ಸಂಯೋಗಗೊಂಡಿರುವ ಏಳನೆಯ ತಲೆಯು ವಿಜಯೀ ಪಕ್ಷದ ಕಡೆಯಲ್ಲಿ ಹೊರಬಂತು.
17. ಯುದ್ಧಾನಂತರ ಸೈತಾನನ ಐಹಿಕ ವ್ಯವಸ್ಥೆಗೆ ಏನು ಸಂಭವಿಸಿತು?
17 ಯುದ್ಧಾನಂತರದ ಲೋಕವು ಅಪಾರವಾಗಿ ಭಿನ್ನವಾಗಿತ್ತು. ಮಾರಕ ಹೊಡೆತದಿಂದ ಧ್ವಂಸಗೊಳಿಸಲ್ಪಟ್ಟಿದ್ದರೂ, ಸೈತಾನನ ಐಹಿಕ ವ್ಯವಸ್ಥೆಯು ಪುನರುಜ್ಜೀವಗೊಂಡಿತು ಮತ್ತು ಹಿಂದೆಂದಿಗಿಂತಲೂ ಹೆಚ್ಚು ಬಲಾಢ್ಯವಾಯಿತು ಮತ್ತು ಅದರ ಚೇತರಿಸಿಕೊಳ್ಳುವ ಶಕ್ತಿಯ ಕಾರಣದಿಂದ, ಅದು ಮಾನವರ ಮೆಚ್ಚಿಕೆಯನ್ನು ಗಳಿಸಿತು.
18. ಸರ್ವಸಾಮಾನ್ಯವಾಗಿ ಮಾನವ ಕುಲವು “ಕಾಡು ಮೃಗವನ್ನು ಮೆಚ್ಚುಗೆಯಿಂದ ಹಿಂಬಾಲಿಸಿತು” ಎಂದು ಹೇಗೆ ಹೇಳಸಾಧ್ಯವಿದೆ?
18 ಇತಿಹಾಸಕಾರ ಚಾರ್ಲ್ಸ್ ಎಲ್. ಮೀ. Jr., ಬರೆಯುವುದು: “[ಮೊದಲನೆಯ ಲೋಕ ಯುದ್ಧದಿಂದ ಆಗಿರುವ] ಹಳೆಯ ಪದ್ಧತಿಯ ಪತನವು ಸ್ವ-ಆಳಿಕ್ವೆಯ—ಹೊಸ ರಾಷ್ಟ್ರಗಳ ಮತ್ತು ವರ್ಗಗಳ ವಿಮೋಚನೆಯ, ಹೊಸ ಸ್ವಾತಂತ್ರ್ಯ ಮತ್ತು ಸ್ವಾವಲಂಬನದ ಬಿಡುಗಡೆಯ—ಹಬ್ಬುವಿಕೆಗೆ ಅಗತ್ಯವಾದ ಒಂದು ಪೂರ್ವರಂಗವಾಗಿತ್ತು.” ಈ ಯುದ್ಧಾನಂತರದ ಶಕದ ವಿಕಸನದಲ್ಲಿ ಕಾಡು ಮೃಗದ ಈಗ ವಾಸಿಯಾದ ಏಳನೆಯ ತಲೆಯು ಮುಂದಾಳುತನ ವಹಿಸಿತು ಮತ್ತು ಅಮೆರಿಕದೊಂದಿಗೆ ಪ್ರಧಾನ ಪಾತ್ರದೊಳಗೆ ಚಲಿಸಿತು. ಜನಾಂಗ ಸಂಘ ಮತ್ತು ಸಂಯುಕ್ತ ರಾಷ್ಟ್ರ ಸಂಘ ಹೀಗೆ ಎರಡರ ಪಕ್ಷವಾಗಿ ಶಿಫಾರಸ್ಸು ಮಾಡುವುದರಲ್ಲಿ ಉಭಯ ಲೋಕ ಶಕ್ತಿಯು ನಾಯಕತ್ವವನ್ನು ವಹಿಸಿತು. ಅಮೆರಿಕದ ರಾಜಕೀಯ ಶಕ್ತಿಯು 1980 ಗಳೊಳಗೆ ಉನ್ನತ ಜೀವನ ಮಟ್ಟಗಳನ್ನು ನಿರ್ಮಿಸುವುದರಲ್ಲಿ, ರೋಗಗಳನ್ನು ತಡೆಗಟ್ಟುವುದರಲ್ಲಿ, ಮತ್ತು ಯಂತ್ರಕಲಾಶಾಸ್ತ್ರವನ್ನು ಪ್ರಗತಿಗೊಳಿಸುವುದರಲ್ಲಿ ಅನೇಕ ಅಧಿಕ ಸುಯೋಗ ಪಡೆದ ರಾಷ್ಟ್ರಗಳಿಗೆ ಮುಂದಾಳಾಗಿತ್ತು. ಅದು ಚಂದ್ರನ ಮೇಲೆ 12 ಮನುಷ್ಯರನ್ನೂ ಕೂಡ ಇರಿಸಿತ್ತು. ಆದಕಾರಣ ಸಾಮಾನ್ಯವಾಗಿ ಮಾನವಕುಲವು “ಆ ಕಾಡು ಮೃಗವನ್ನು ಮೆಚ್ಚುಗೆಯಿಂದ ಹಿಂಬಾಲಿಸಿ” ದ್ದರಲ್ಲೇನೂ ಆಶ್ಚರ್ಯವಿಲ್ಲ.
19. (ಎ) ಮಾನವ ಕುಲವು ಕಾಡು ಮೃಗವನ್ನು ನೋಡಿ ಮೆಚ್ಚಿಗೆ ವ್ಯಕ್ತಪಡಿಸುವುದಕ್ಕಿಂತಲೂ ಮುಂದಕ್ಕೆ ಹೇಗೆ ಹೋಗಿದೆ? (ಬಿ) ಭೂಮಿಯ ಎಲ್ಲಾ ರಾಜ್ಯಗಳ ಮೇಲೆ ಯಾರಿಗೆ ನಿರ್ವಿವಾದ ಅಧಿಕಾರವಿತ್ತು, ಮತ್ತು ನಮಗದು ತಿಳಿದಿರುವುದು ಹೇಗೆ? (ಸಿ) ಕಾಡು ಮೃಗಕ್ಕೆ ಸೈತಾನನು ಅಧಿಕಾರವನ್ನು ಹೇಗೆ ನೀಡುತ್ತಾನೆ, ಮತ್ತು ಅಧಿಕಾಂಶ ಜನರ ಮೇಲೆ ಯಾವ ಪರಿಣಾಮದೊಂದಿಗೆ?
19 ಮಾನವ ಕುಲವು ಕಾಡು ಮೃಗವನ್ನು ನೋಡಿ ಮೆಚ್ಚುವುದಕ್ಕಿಂತಲೂ ಹೆಚ್ಚಿನದನ್ನು ಮಾಡಿದೆ, ಇದನ್ನು ಯೋಹಾನನು ತದನಂತರ ಹೇಳುತ್ತಾನೆ: “ಮತ್ತು ಘಟಸರ್ಪವು ಆ ಕಾಡು ಮೃಗಕ್ಕೆ ಅಧಿಕಾರವನ್ನು ಕೊಟ್ಟದರ್ದಿಂದ ಅವರು ಅದನ್ನು ಆರಾಧಿಸಿದರು, ಮತ್ತು ಅವರು ಈ ಮಾತುಗಳಿಂದ ಕಾಡು ಮೃಗವನ್ನು ಆರಾಧಿಸಿದರು: ‘ಈ ಕಾಡು ಮೃಗದಂತೆ ಯಾರು ಇದ್ದಾರೆ? ಮತ್ತು ಅದರೊಂದಿಗೆ ಯಾರು ಯುದ್ಧಮಾಡಲು ಶಕ್ತರು?’” (ಪ್ರಕಟನೆ 13:4, NW) ಇಲ್ಲಿ ಭೂಮಿಯ ಮೇಲೆ ಯೇಸು ಇದ್ದಾಗ, ಭೂಮಿಯ ಎಲ್ಲಾ ರಾಜ್ಯಗಳ ಮೇಲೆ ತನಗೆ ಅಧಿಕಾರ ಇದೆ ಎಂದು ಸೈತಾನನು ವಾದಿಸಿದನು. ಯೇಸುವು ಇದನ್ನು ಅಲ್ಲಗಳೆಯಲಿಲ್ಲ; ವಾಸ್ತವದಲ್ಲಿ, ಅವನು ತಾನೇ ಸೈತಾನನನ್ನು ಇಹಲೋಕಾಧಿಪತಿ ಎಂದು ಸೂಚಿಸಿದನು ಮತ್ತು ಆ ಕಾಲದ ರಾಜಕೀಯದಲ್ಲಿ ಭಾಗವಹಿಸಲು ನಿರಾಕರಿಸಿದ್ದನು. ಸತ್ಯ ಕ್ರೈಸ್ತರ ಕುರಿತು ಅನಂತರ ಯೋಹಾನನು ಬರೆದದ್ದು: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ ಎಂದೂ ನಮಗೆ ಗೊತ್ತದೆ.” (1 ಯೋಹಾನ 5:19; ಲೂಕ 4:5-8; ಯೋಹಾನ 6:15; 14:30) ಸೈತಾನನು ಕಾಡು ಮೃಗಕ್ಕೆ ಅಧಿಕಾರವನ್ನು ವಹಿಸಿ ಕೊಡುತ್ತಾನೆ, ಮತ್ತು ಅವನದನ್ನು ರಾಷ್ಟ್ರೀಯತೆಯ ಆಧಾರದಲ್ಲಿ ಮಾಡುತ್ತಾನೆ. ಹೀಗೆ, ದೈವಿಕ ಪ್ರೀತಿಯಲ್ಲಿ ಐಕ್ಯದ ಬಂಧದಲ್ಲಿರುವ ಬದಲಾಗಿ, ಮಾನವ ಕುಲವು ಬುಡಕಟ್ಟು, ಕುಲ, ಮತ್ತು ರಾಷ್ಟ್ರದ ದುರಭಿಮಾನದಿಂದ ವಿಭಾಗಿತವಾಗಿದೆ. ಅಧಿಕಾಂಶ ಜನರು ವಾಸ್ತವದಲ್ಲಿ, ತಾವು ಎಲ್ಲಿ ಜೀವಿಸುತ್ತಿದ್ದಾರೋ ಆ ದೇಶದಲ್ಲಿ ಅಧಿಕಾರದಲ್ಲಿರುವ ಕಾಡು ಮೃಗದ ಆ ಭಾಗವನ್ನು ಆರಾಧಿಸುತ್ತಾರೆ. ಹೀಗೆ ಇಡೀ ಕಾಡು ಮೃಗವು ಮೆಚ್ಚಿಗೆ ಮತ್ತು ಆರಾಧನೆಯನ್ನು ಪಡೆಯುತ್ತದೆ.
20. (ಎ) ಕಾಡು ಮೃಗವನ್ನು ಜನರು ಆರಾಧಿಸುವುದು ಯಾವ ಅರ್ಥದಲ್ಲಿ? (ಬಿ) ಕಾಡು ಮೃಗದ ಅಂಥ ಆರಾಧನೆಯಲ್ಲಿ ಯೆಹೋವನನ್ನು ಆರಾಧಿಸುವ ಕ್ರೈಸ್ತರು ಯಾಕೆ ಪಾಲು ತೆಗೆದುಕೊಳ್ಳುವುದಿಲ್ಲ, ಮತ್ತು ಅವರು ಯಾರ ಮಾದರಿಯನ್ನು ಅನುಸರಿಸುತ್ತಾರೆ?
20 ಆರಾಧನೆ ಯಾವ ಅರ್ಥದಲ್ಲಿ? ದೇವರ ಪ್ರೀತಿಗಿಂತಲೂ ದೇಶದ ಪ್ರೀತಿಯನ್ನು ಮೊದಲಾಗಿ ಇಡುವ ಅರ್ಥದಲ್ಲಿಯೇ. ಹೆಚ್ಚಿನ ಜನರು ಅವರ ಜನ್ಮದ ದೇಶವನ್ನು ಪ್ರೀತಿಸುತ್ತಾರೆ. ಒಳ್ಳೆಯ ನಾಗರಿಕರೋಪಾದಿ, ಸತ್ಯ ಕ್ರೈಸ್ತರು ಕೂಡ ಯಾವ ದೇಶದಲ್ಲಿ ವಾಸಿಸುತ್ತಾರೋ ಆ ದೇಶದ ಅಧಿಪತಿಗಳನ್ನು ಮತ್ತು ಚಿಹ್ನೆಗಳನ್ನು ಗೌರವಿಸುತ್ತಾರೆ, ನಿಯಮಗಳಿಗೆ ವಿಧೇಯರಾಗುತ್ತಾರೆ, ಮತ್ತು ಅವರ ಸಮಾಜದ ಮತ್ತು ನೆರೆಯವರ ಶ್ರೇಯೋಭಿವೃದ್ಧಿಗೆ ತಮ್ಮ ಸಕಾರಾತ್ಮಕ ಕಾಣಿಕೆಯನ್ನು ನೀಡುತ್ತಾರೆ. (ರೋಮಾಪುರ 13:1-7; 1 ಪೇತ್ರ 2:13-17) ಆದಾಗ್ಯೂ, ಅವರು ಒಂದು ದೇಶಕ್ಕೆ ಬೇರೆಲ್ಲಾದರ ವಿರುದ್ಧ ಅಂಧ ಭಕ್ತಿಯನ್ನು ಕೊಡಸಾಧ್ಯವಿಲ್ಲ. “ತಪ್ಪಾಗಿರಲಿ, ಸರಿಯಾಗಿರಲಿ, ನಮ್ಮ ದೇಶ” ಎಂಬುದು ಒಂದು ಕ್ರೈಸ್ತ ಬೋಧನೆಯಲ್ಲ. ಆದುದರಿಂದ, ಯೆಹೋವ ದೇವರನ್ನು ಆರಾಧಿಸುವ ಕ್ರೈಸ್ತರು ಕಾಡು ಮೃಗದ ಯಾವುದೇ ಭಾಗಕ್ಕೆ ದುರಭಿಮಾನದ ದೇಶಭಕ್ತಿಯ ಆರಾಧನೆಯನ್ನು ಸಲ್ಲಿಸುವುದರಲ್ಲಿ ಭಾಗಿಗಳಾಗಸಾಧ್ಯವಿಲ್ಲ, ಯಾಕಂದರೆ ಇದು ಕಾಡು ಮೃಗದ ಅಧಿಕಾರದ ಉಗಮವಾದ ಘಟಸರ್ಪವನ್ನು ಆರಾಧಿಸುವುದಕ್ಕೆ ಸಮಾನವಾಗಿದೆ. “ಈ ಕಾಡು ಮೃಗದಂತೆ ಯಾರು ಇದ್ದಾರೆ?” ಎಂದು ಅವರು ಮೆಚ್ಚಿಕೆಯಿಂದ ಕೇಳಸಾಧ್ಯವಿಲ್ಲ. ಬದಲಾಗಿ, ಅವರು ಯೆಹೋವನ ವಿಶ್ವ ಸಾರ್ವಭೌಮತೆಯನ್ನು ಎತ್ತಿಹಿಡಿಯುವಾಗ, ಮೀಕಾಯೇಲನ—ಅವನ ಹೆಸರಿನ ಅರ್ಥ “ದೇವರಂತೆ ಯಾರಿದ್ದಾನೆ?”—ಮಾದರಿಯನ್ನು ಅನುಸರಿಸುವರು. ದೇವರ ನೇಮಿತ ಸಮಯದಲ್ಲಿ, ಈ ಮೀಕಾಯೇಲನಾಗಿರುವ ಕ್ರಿಸ್ತ ಯೇಸುವು, ಸೈತಾನನನ್ನು ಪರಲೋಕದಿಂದ ಹೊರಗಟ್ಟುವುದರಲ್ಲಿ ವಿಜಯಿಯಾದಂತೆ, ಕಾಡು ಮೃಗದೊಂದಿಗೆ ಯುದ್ಧಹೂಡುವನು ಮತ್ತು ಜಯಗಳಿಸುವನು.—ಪ್ರಕಟನೆ 12:7-9; 19:11, 19-21.
ದೇವಜನರೊಂದಿಗೆ ಯುದ್ಧಮಾಡುವುದು
21. ಕಾಡು ಮೃಗವನ್ನು ಸೈತಾನನು ಬಳಸುವ ಕಾರ್ಯವಿಧಾನವನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ?
21 ಕುತಂತ್ರಿಯಾದ ಸೈತಾನನಿಗೆ ತನ್ನ ಸ್ವಂತ ಉದ್ದೇಶ ಸಾಧನೆಯಲ್ಲಿ ಕಾಡು ಮೃಗವನ್ನು ಬಳಸುವ ಯೋಜನೆಗಳು ಇದ್ದವು. ಯೋಹಾನನು ಇದನ್ನು ನಮಗೆ ವಿವರಿಸುತ್ತಾನೆ: “ಮತ್ತು ಭಾರಿ ಮಾತುಗಳನ್ನು ಮತ್ತು ದೇವದೂಷಣೆಯ ಮಾತುಗಳನ್ನು ಆಡುವ ಒಂದು ಬಾಯಿ ಅದಕ್ಕೆ [ಏಳು ತಲೆಗಳ ಮೃಗ] ಕೊಡಲ್ಪಟ್ಟಿತು, ಮತ್ತು ನಲವತ್ತೆರಡು ತಿಂಗಳುಗಳ ಪರ್ಯಂತರ ಕಾರ್ಯಗಳನ್ನು ನಡಿಸುವ ಅಧಿಕಾರವು ಅದಕ್ಕೆ ಕೊಡಲ್ಪಟ್ಟಿತು. ಮತ್ತು ಅದು ದೇವರ ವಿರುದ್ಧ ದೂಷಣೆಯಲ್ಲಿ ತನ್ನ ಬಾಯಿಯನ್ನು, ಆತನ ನಾಮವನ್ನು, ಆತನ ನಿವಾಸವನ್ನು, ಸ್ವರ್ಗದಲ್ಲಿ ವಾಸಿಸುವವರನ್ನು ಸಹ ದೂಷಿಸಲಿಕ್ಕಾಗಿ ತೆರೆಯಿತು. ಮತ್ತು ಪವಿತ್ರ ಜನರೊಂದಿಗೆ ಯುದ್ಧಮಾಡಲು ಮತ್ತು ಅವರನ್ನು ಜಯಿಸಲು ಅದಕ್ಕೆ ಅನುಮತಿ ನೀಡಲಾಯಿತು, ಮತ್ತು ಪ್ರತಿಯೊಂದು ಕುಲ ಪ್ರಜೆ ಭಾಷೆ ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಮತ್ತು ಭೂನಿವಾಸಿಗಳೆಲ್ಲರೂ ಅದನ್ನು ಆರಾಧಿಸುವರು; ಕೊಯ್ಯಲ್ಪಟ್ಟ ಕುರಿಮರಿಯ ಜೀವದ ಸುರುಳಿಯಲ್ಲಿ ಲೋಕದ ಸ್ಥಾಪನೆಯಿಂದ ಅವರಲ್ಲಿ ಒಬ್ಬನ ಹೆಸರೂ ಬರೆಯಲ್ಪಟ್ಟರುವುದಿಲ್ಲ.”—ಪ್ರಕಟನೆ 13:5-8, NW.
22. (ಎ) ಯಾವ ಸಮಯಾವಧಿಗೆ 42 ತಿಂಗಳುಗಳು ಸೂಚಿಸುತ್ತವೆ? (ಬಿ) ನಲವತ್ತೆರಡು ತಿಂಗಳುಗಳಲ್ಲಿ ಅಭಿಷಿಕ್ತ ಕ್ರೈಸ್ತರು ‘ಜಯಿಸಲ್ಪಟ್ಟದ್ದು’ ಹೇಗೆ?
22 ಇಲ್ಲಿ ತಿಳಿಸಲ್ಪಟ್ಟ 42 ತಿಂಗಳುಗಳು, ದಾನಿಯೇಲನ ಪ್ರವಾದನೆಯಲ್ಲಿನ ಮೃಗಗಳಲ್ಲೊಂದರ ಕೊಂಬಿನಿಂದ ದೇವಜನರು ಪೀಡಿಸಲ್ಪಟ್ಟ ಅದೇ ಮೂರುವರೆ ವರ್ಷಗಳು ಎಂದು ತೋರುತ್ತದೆ. (ದಾನಿಯೇಲ 7:23-25; ಪ್ರಕಟನೆ 11:1-4 ಕೂಡ ನೋಡಿರಿ.) ಹೀಗೆ, 1914ರ ಕೊನೆಯಿಂದ 1918ರ ತನಕ, ಯುದ್ಧಗ್ರಸ್ತ ಜನಾಂಗಗಳು ಕಾಡು ಮೃಗಗಳೋಪಾದಿ ಅಕ್ಷರಶಃ ಒಬ್ಬರನ್ನೊಬ್ಬರು ಸಿಗಿದುಹಾಕುತ್ತಾರೊ ಎಂಬಂತೆ ಇರುವಾಗ, ಆ ಜನಾಂಗಗಳ ನಾಗರಿಕರು ಕಾಡು ಮೃಗವನ್ನು ಆರಾಧಿಸುವಂತೆ, ರಾಷ್ಟ್ರೀಯತೆಯ ಧರ್ಮದಲ್ಲಿ ಅತ್ಯಾಸಕ್ತಿಯುಳ್ಳವರಾಗುವಂತೆ, ತಮ್ಮ ದೇಶಕ್ಕಾಗಿ ಸಾಯಲೂ ಕೂಡ ಸಿದ್ಧರಾಗಿರುವಂತೆ ಬಲಾತ್ಕರಿಸಲ್ಪಟ್ಟರು. ತಮ್ಮ ಅಧಿಕತಮ ವಿಧೇಯತೆಯು ಯೆಹೋವ ದೇವರಿಗೆ ಮತ್ತು ಅವನ ಮಗನಾದ ಕ್ರಿಸ್ತ ಯೇಸುವಿಗೆ ಸಲ್ಲತಕ್ಕದ್ದು ಎಂದು ಭಾವಿಸಿದ್ದ ಅಭಿಷಿಕ್ತರಲ್ಲಿ ಅನೇಕರಿಗೆ ಅಂಥ ಒತ್ತಡವು ತೀವ್ರವಾದ ಸಂಕಟಕ್ಕೆ ನಡಿಸಿತು. (ಅ. ಕೃತ್ಯಗಳು 5:29) ಅವರ ಪರೀಕ್ಷೆಗಳು ಜೂನ್ 1918 ರಲ್ಲಿ, ಅವರು ‘ಜಯಿಸಲ್ಪಟ್ಟಾಗ’ ಒಂದು ಪರಾಕಾಷ್ಠೆಗೆ ತಲುಪಿದವು. ಅಮೆರಿಕದಲ್ಲಿ, ವಾಚ್ ಟವರ್ ಸೊಸೈಟಿಯ ಗಣ್ಯ ಅಧಿಕಾರಿಗಳು ಮತ್ತು ಇತರ ಪ್ರತಿನಿಧಿಗಳು ಅನ್ಯಾಯವಾಗಿ ಬಂಧಿಸಲ್ಪಟ್ಟರು, ಮತ್ತು ಅವರ ಕ್ರೈಸ್ತ ಸಹೋದರರಿಂದ ನಡಿಸಲ್ಪಡುತ್ತಿದ್ದ ಸಂಘಟಿತ ಸಾರುವಿಕೆಯು ಬಹಳವಾಗಿ ಅಡ್ಡಗಟ್ಟಲ್ಪಟ್ಟಿತು. “ಪ್ರತಿಯೊಂದು ಕುಲ ಪ್ರಜೆ ಭಾಷೆ ಜನಾಂಗಗಳ ಮೇಲೆ” ಅಧಿಕಾರ ಇದ್ದುದರಿಂದ, ಕಾಡು ಮೃಗವು ಲೋಕವ್ಯಾಪಕವಾಗಿ ದೇವರ ಕಾರ್ಯದ ಮೇಲೆ ತೀವ್ರಕ್ರಮ ಕೈಗೊಂಡಿತು.
23. (ಎ) “ಕುರಿಮರಿಯ ಜೀವದ ಸುರುಳಿ” ಏನಾಗಿದೆ, ಮತ್ತು 1918 ರಿಂದ ಯಾವುದು ಪೂರ್ಣತೆಗೆ ಮುಂದುವರಿಯುತ್ತಾ ಇದೆ? (ಬಿ) “ಪವಿತ್ರ ಜನರ” ಮೇಲೆ ಸೈತಾನನ ದೃಶ್ಯ ಸಂಸ್ಥೆಯ ತೋರಿಕೆಯ ವಿಜಯವು ಕೇವಲ ಶೂನ್ಯವಾಗಿತ್ತು ಯಾಕೆ?
23 ಇದು ಸೈತಾನನಿಗೆ ಮತ್ತು ಅವನ ದೃಶ್ಯ ಸಂಸ್ಥೆಗೆ ವಿಜಯವನ್ನು ತಂದಂತೆ ತೋರಿತು. ಆದರೆ ಅದು ಅವರಿಗೆ ದೀರ್ಘಕಾಲದ ಯಾವ ಪ್ರಯೋಜನಗಳನ್ನೂ ತರಲಾರದು, ಯಾಕಂದರೆ ಸೈತಾನನ ದೃಶ್ಯ ಸಂಸ್ಥೆಯಲ್ಲಿ ಯಾವನೂ ತನ್ನ ಹೆಸರನ್ನು “ಕುರಿಮರಿಯ ಜೀವದ ಸುರುಳಿಯಲ್ಲಿ” ಬರೆಸಿಕೊಂಡಿರುವುದಿಲ್ಲ. ಲಾಕ್ಷಣಿಕವಾಗಿ, ಈ ಸುರುಳಿಯಲ್ಲಿ ಅವನ ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನೊಂದಿಗೆ ಆಳುವವರ ಹೆಸರುಗಳು ಇರುತ್ತವೆ. ಮೊದಲನೆಯ ಹೆಸರುಗಳು ಸಾ. ಶ. 33ರ ಪಂಚಾಶತ್ತಮದಲ್ಲಿ ಬರೆಯಲ್ಪಟ್ಟವು. ಮತ್ತು ಅಂದಿನಿಂದ ಹಿಡಿದು ಮುಂದಿನ ವರುಷಗಳಲ್ಲಿ ಅಧಿಕಾಧಿಕ ಹೆಸರುಗಳು ಕೂಡಿಸಲ್ಪಟ್ಟಿವೆ. ರಾಜ್ಯದ 1,44,000 ಬಾಧ್ಯಸ್ಥರಲ್ಲಿ ಉಳಿದವರ ಮುದ್ರೆಯೊತಿಸ್ತುವಿಕೆಯು 1918 ರಿಂದ ಪೂರ್ಣತೆಗೆ ಮುಂದುವರಿಯುತ್ತಾ ಇದೆ. ಬಲುಬೇಗನೆ, ಕುರಿಮರಿಯ ಜೀವದ ಸುರುಳಿಯಲ್ಲಿ ಅವರೆಲ್ಲರ ಹೆಸರುಗಳನ್ನು ಅಳಿಸಲಾಗದಂತಹ ರೀತಿಯಲ್ಲಿ ಬರೆಯಲಾಗುತ್ತದೆ. ಕಾಡು ಮೃಗವನ್ನು ಆರಾಧಿಸುವ ವಿರೋಧಿಗಳ ವಿಷಯದಲ್ಲಾದರೊ, ಆ ಸುರುಳಿಯಲ್ಲಿ ಅವರಲ್ಲಿ ಒಬ್ಬನ ಹೆಸರೂ ಬರೆಯಲ್ಪಟ್ಟಿರುವುದಿಲ್ಲ. ಹೀಗೆ “ಪವಿತ್ರ ಜನರ” ಮೇಲೆ ಇವರಿಗೆ ದೊರಕಬಹುದಾದ ಯಾವುದೇ ವಿಜಯದ ತೋರುವಿಕೆಯು ಶೂನ್ಯವೂ, ಕೇವಲ ತಾತ್ಕಾಲಿಕವೂ ಆಗಿದೆ.
24. ವಿವೇಚನೆಯುಳ್ಳವರು ಯಾವುದನ್ನು ಆಲಿಸುವಂತೆ ಯೋಹಾನನು ಕರೆನೀಡುತ್ತಾನೆ, ಮತ್ತು ಆಲಿಸಲ್ಪಟ್ಟ ಮಾತುಗಳು ದೇವರ ಜನರಿಗಾಗಿ ಯಾವ ಅರ್ಥದಲ್ಲಿವೆ?
24 ಈಗ ವಿವೇಚನೆಯುಳ್ಳವರು ಬಹಳ ಜಾಗ್ರತೆಯಿಂದ ಆಲಿಸಲು ಯೋಹಾನನು ಕರೆನೀಡುತ್ತಾನೆ: “ಯಾವನಿಗಾದರೂ ಒಂದು ಕಿವಿಯಿದ್ದರೆ ಅವನು ಕೇಳಲಿ.” ಅನಂತರ ಅವನು ಹೇಳುವುದನ್ನು ಮುಂದರಿಸುವುದು: “ಯಾವನಾದರೂ ಬಂಧನಕ್ಕೆ ಉದ್ದೇಶಿಸಲ್ಪಟ್ಟವನಾದರೆ ಅವನು ಬಂಧನಕ್ಕೆ ಹೋಗುವನು. ಯಾವನಾದರೂ ಖಡ್ಗದಿಂದ ಕೊಲ್ಲುವಲ್ಲಿ ಅವನು ಖಡ್ಗದಿಂದಲೇ ಕೊಲ್ಲಲ್ಪಡಬೇಕು. ಪವಿತ್ರ ಜನರ ತಾಳ್ಮೆ ಮತ್ತು ನಂಬಿಕೆಯು ಅರ್ಥೈಸುವುದು ಇಲ್ಲಿಯೇ.” (ಪ್ರಕಟನೆ 13:9, 10, NW) ಅಪನಂಬಿಗಸ್ತ ಯೆರೂಸಲೇಮ್ ನಗರಕ್ಕಾಗಿರುವ ಯೆಹೋವನ ನ್ಯಾಯದಂಡನೆಗಳ ಹಿಂದೆಗೆದುಕೊಳ್ಳುವಿಕೆಯಿಲ್ಲವೆಂದು ತೋರಿಸಲು ಸಾ. ಶ. ಪೂ. 607 ಕ್ಕಿಂತ ಮುಂಚಿನ ವರ್ಷಗಳಲ್ಲಿ ತದ್ರೀತಿಯ ನುಡಿಗಳನ್ನು ಯೆರೆಮೀಯನು ಬರೆದನು. (ಯೆರೆಮೀಯ 15:2; ಇದನ್ನೂ ನೋಡಿರಿ ಯೆರೆಮೀಯ 43:11; ಜೆಕರ್ಯ 11:9.) ತನ್ನ ಮಹಾ ಶೋಧನೆಯ ಸಮಯದಲ್ಲಿ, ತನ್ನ ಹಿಂಬಾಲಕರು ಒಪ್ಪಂದಮಾಡಿಕೊಳ್ಳಬಾರದು ಎಂದು ಯೇಸು ಸ್ಪಷ್ಟಗೊಳಿಸಿದಾಗ ಅವನು ಅಂದದ್ದು: “ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:52) ತದ್ರೀತಿಯಲ್ಲಿ, ಇಂದು ಕರ್ತನ ದಿನಗಳಲ್ಲಿ ದೇವರ ಜನರು ಬೈಬಲ್ ಮೂಲ ತತ್ವಗಳಿಗೆ ಅಂಟಿಕೊಳ್ಳತಕ್ಕದ್ದು. ಕಾಡು ಮೃಗವನ್ನು ಆರಾಧಿಸುವ ಅಪಶ್ಚಾತ್ತಾಪಿಗಳಿಗೆ ಅಂತಿಮ ಪಾರಾಗುವಿಕೆಯಿಲ್ಲ. ಮುಂದಿರುವ ಹಿಂಸೆಗಳಲ್ಲಿ ಮತ್ತು ಶೋಧನೆಗಳಲ್ಲಿ ಪಾರಾಗಲು, ನಮಗೆಲ್ಲರಿಗೆ ನಿಶ್ಚಂಚಲವಾದ ನಂಬಿಕೆಯೊಂದಿಗೆ ತಾಳ್ಮೆಯು ಬೇಕು.—ಇಬ್ರಿಯ 10:36-39; 11:6.
ಎರಡು ಕೊಂಬುಗಳ ಕಾಡು ಮೃಗ
25. (ಎ) ಲೋಕರಂಗದಿಂದ ಮೇಲಕ್ಕೆ ಬಂದ ಇನ್ನೊಂದು ಸಾಂಕೇತಿಕ ಕಾಡು ಮೃಗವನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ? (ಬಿ) ಹೊಸ ಕಾಡು ಮೃಗದ ಎರಡು ಕೊಂಬುಗಳಿಂದ ಮತ್ತು ಭೂಮಿಯೊಳಗಿಂದ ಅದರ ಬರೋಣದಿಂದ ಏನು ಸೂಚಿಸಲ್ಪಟ್ಟಿದೆ?
25 ಈಗ ಇನ್ನೊಂದು ಕಾಡು ಮೃಗವು ಲೋಕರಂಗದ ಮೇಲೆ ಬರುತ್ತದೆ. ಯೋಹಾನನು ವರದಿಸುವುದು: “ಮತ್ತು ಇನ್ನೊಂದು ಕಾಡು ಮೃಗವು ಭೂಮಿಯಿಂದ ಮೇಲೇರಿ ಬರುವುದನ್ನು ಕಂಡೆನು, ಮತ್ತು ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು, ಆದರೆ ಅದು ಘಟಸರ್ಪದಂತೆ ಮಾತಾಡಲು ಆರಂಭಿಸಿತು. ಮತ್ತು ಅದು ಮೊದಲನೆಯ ಕಾಡು ಮೃಗದ ಅಧಿಕಾರವನ್ನೆಲ್ಲಾ ಅದರ ನೋಟದಲ್ಲಿ ನಡಿಸುತ್ತದೆ. ಮತ್ತು ಅದು ಮಾರಕ ಹೊಡೆತವು ವಾಸಿಯಾದ ಮೊದಲನೆಯ ಕಾಡು ಮೃಗವನ್ನು ಭೂಮಿ ಮತ್ತು ಅದರಲ್ಲಿ ನಿವಾಸಿಸುವವರು ಆರಾಧಿಸುವಂತೆ ಮಾಡುತ್ತದೆ. ಮತ್ತು ಅದು ಮಾನವ ಕುಲದ ಎದುರಿನಲ್ಲಿ ಆಕಾಶದಿಂದ ಭೂಮಿಗೆ ಬೆಂಕಿಯನ್ನು ಇಳಿದು ಬರುವಂತೆ ಸಹ ಮಾಡಿ ಮಹಾ ಸೂಚಕಕಾರ್ಯಗಳನ್ನು ನಡಸುತ್ತದೆ.” (ಪ್ರಕಟನೆ 13:11-13, NW) ಈ ಕಾಡು ಮೃಗಕ್ಕೆ ಎರಡು ಕೊಂಬುಗಳಿದ್ದು, ಎರಡು ರಾಜಕೀಯ ಶಕ್ತಿಗಳ ಸಹಭಾಗಿತ್ವವನ್ನು ಸೂಚಿಸುತ್ತದೆ. ಮತ್ತು ಅದು ಸಮುದ್ರದಿಂದ ಅಲ್ಲ, ಬದಲು ಭೂಮಿಯಿಂದ ಬರುತ್ತದೆಂದು ವರ್ಣಿಸಲ್ಪಡುತ್ತದೆ. ಹೀಗೆ, ಅದು ಸೈತಾನನ ಈಗಾಗಲೇ ಸ್ಥಾಪಿತಗೊಂಡಿರುವ ಐಹಿಕ ವಿಷಯಗಳ ವ್ಯವಸ್ಥೆಯಿಂದ ಹೊರಬರುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ, ಕರ್ತನ ದಿನದಲ್ಲಿ ಮಹತ್ವದ ಪಾತ್ರವನ್ನು ತೆಗೆದುಕೊಳ್ಳುವ ಒಂದು ಲೋಕಶಕ್ತಿ ಅದಾಗಿರಬೇಕು.
26. (ಎ) ಎರಡು ಕೊಂಬುಗಳ ಕಾಡು ಮೃಗ ಏನಾಗಿದೆ, ಮತ್ತು ಮೂಲ ಕಾಡು ಮೃಗಕ್ಕೆ ಅದು ಹೇಗೆ ಸಂಬಂಧಿಸಿದೆ? (ಬಿ) ಎರಡು ಕೊಂಬುಗಳ ಮೃಗದ ಕೊಂಬುಗಳು ಕುರಿಮರಿ ಕೊಂಬುಗಳಂತೆ ಇದ್ದದ್ದು ಯಾವ ಅರ್ಥದಲ್ಲಿ, ಮತ್ತು ಮಾತಾಡುವಾಗ ಅದು “ಘಟಸರ್ಪದೋಪಾದಿ” ಇರುವುದು ಹೇಗೆ? (ಸಿ) ರಾಷ್ಟ್ರೀಯವಾದಿಗಳಾದ ಜನರು ನಿಜವಾಗಿ ಯಾರನ್ನು ಆರಾಧಿಸುತ್ತಾರೆ, ಮತ್ತು ರಾಷ್ಟ್ರೀಯತೆಯನ್ನು ಯಾವುದಕ್ಕೆ ಸರಿದೂಗಿಸಲಾಗಿದೆ? (ಪಾದಟಿಪ್ಪಣಿಯನ್ನು ನೋಡಿರಿ.)
26 ಅದೇನಾಗಿರಬಲ್ಲದು? ಆ್ಯಂಗ್ಲೋ-ಅಮೆರಿಕನ್ ಲೋಕ ಶಕ್ತಿ—ಮೊದಲನೆಯ ಕಾಡು ಮೃಗದ ಏಳನೆಯ ತಲೆಯೇ ಆಗಿದೆ, ಆದರೆ ಒಂದು ವಿಶೇಷ ಪಾತ್ರದಲ್ಲಿ! ದರ್ಶನದಲ್ಲಿ ಒಂದು ಬೇರೆಯೇ ಆದ ಕಾಡು ಮೃಗವೆಂದು ಅದನ್ನು ಪ್ರತ್ಯೇಕಿಸುವುದರಿಂದ, ಲೋಕ ರಂಗದ ಮೇಲೆ ಅದು ಸ್ವಚ್ಛಂದತೆಯಿಂದ ಹೇಗೆ ವರ್ತಿಸುತ್ತದೆ ಎಂದು ಹೆಚ್ಚು ಸ್ಪಷ್ಟವಾಗಿ ನೋಡಲು ನಮಗೆ ಸಹಾಯ ಮಾಡುತ್ತದೆ. ಈ ಲಾಕ್ಷಣಿಕ ಎರಡು ಕೊಂಬುಗಳ ಕಾಡು ಮೃಗವು ಎರಡು ಸಹ ಬಾಳೆಯ್ವ, ಸ್ವತಂತ್ರವಾಗಿರುವ, ಆದರೆ ಸಹಕರಿಸುವ ರಾಜಕೀಯ ಶಕ್ತಿಗಳನ್ನು ಒಳಗೊಂಡಿದೆ. “ಕುರಿಮರಿಗಿರುವಂತೆ” ಅದರ ಎರಡು ಕೊಂಬುಗಳು, ಅದು ಇಡೀ ಲೋಕವು ತನ್ನೆಡೆಗೆ ನೋಡತಕ್ಕದ್ದಾದ ಒಂದು ಜ್ಞಾನೋದಯ ಹೊಂದಿದ ಸರಕಾರದ ರೂಪವಾಗಿದ್ದು, ತನ್ನನ್ನು ಶಾಂತ ಮತ್ತು ನಿರಾಕ್ರಮಣದ ಸ್ವಭಾವದ್ದು ಎಂದು ತೋರಿಸುತ್ತದೆ. ಆದರೆ ಅದು “ಘಟಸರ್ಪದಂತೆ” ಮಾತಾಡುತ್ತದೆ ಹೇಗಂದರೆ ಅದರ ಆಳಿಕೆಯ ರೀತಿಯನ್ನು ಸ್ವೀಕರಿಸದಿರುವ ಕಡೆಗಳಲ್ಲಿಲ್ಲಾ ಅದು ಒತ್ತಡ ಮತ್ತು ಬೆದರಿಕೆಗಳನ್ನು, ಮುಚ್ಚುಮರೆಯಿಲ್ಲದ ಬಲಪ್ರಯೋಗವನ್ನು ಕೂಡ ಬಳಸುತ್ತದೆ. ದೇವರ ಕುರಿಮರಿಯ ಆಳಿಕ್ವೆಯ ಕೆಳಗೆ ದೇವರ ರಾಜ್ಯಕ್ಕೆ ಅಧೀನತೆಯನ್ನು ಅದು ಪ್ರೋತ್ಸಾಹಿಸಿರುವುದಿಲ್ಲ, ಬದಲಾಗಿ ಮಹಾ ಘಟಸರ್ಪವಾದ ಸೈತಾನನ ಅಭಿರುಚಿಗಳನ್ನು ಅದು ಪ್ರೋತ್ಸಾಹಿಸಿದೆ. ಅದು ಮೊದಲನೆಯ ಕಾಡು ಮೃಗವನ್ನು ಆರಾಧಿಸುವುದಕ್ಕೆ ಹೊಂದಿಕೆಯಾಗಿರುವ, ರಾಷ್ಟ್ರೀಯ ವಿಭಜನೆಗಳನ್ನು ಮತ್ತು ದ್ವೇಷಗಳನ್ನು ಪ್ರವರ್ಧಿಸಿದೆ.c
27. (ಎ) ಅದು ಆಕಾಶದಿಂದ ಬೆಂಕಿಯನ್ನು ಇಳಿದುಬರುವಂತೆ ಮಾಡುತ್ತದೆ ಎಂಬ ನಿಜಾಂಶದಿಂದ ಎರಡು ಕೊಂಬುಗಳ ಕಾಡು ಮೃಗದ ಯಾವ ಮನೋಭಾವವು ಸೂಚಿಸಲ್ಪಡುತ್ತದೆ? (ಬಿ) ಎರಡು ಕೊಂಬುಗಳ ಕಾಡು ಮೃಗದ ಆಧುನಿಕ ಪಡಿರೂಪವನ್ನು ಜನರು ಹೇಗೆ ವೀಕ್ಷಿಸುತ್ತಾರೆ?
27 ಈ ಎರಡು ಕೊಂಬುಗಳ ಕಾಡು ಮೃಗವು ಆಕಾಶದಿಂದ ಬೆಂಕಿಯು ಸಹ ಇಳಿದುಬರುವಂತೆ ಮಾಡುವ ಮಹತ್ತಾದ ಸೂಚಕಕಾರ್ಯಗಳನ್ನು ನಡಿಸುತ್ತದೆ. (ಹೋಲಿಸಿರಿ ಮತ್ತಾಯ 7:21-23.) ಈ ಕೊನೆಯ ಸೂಚಕಕಾರ್ಯವು, ಬಾಳನ ಪ್ರವಾದಿಗಳನ್ನು ಪಂಥಾಹ್ವಾನಿಸಿದ ದೇವರ ಪುರಾತನ ಪ್ರವಾದಿ ಎಲೀಯನ ನೆನಪನ್ನು ನಮಗೆ ತರುತ್ತದೆ. ಯೆಹೋವನ ಹೆಸರಿನಲ್ಲಿ ಅವನು ಯಶಸ್ವಿಯಾದ ರೀತಿಯಲ್ಲಿ ಬೆಂಕಿಯನ್ನು ತರಿಸಿದಾಗ, ಅವನು ಸತ್ಯ ಪ್ರವಾದಿಯೆಂದೂ, ಬಾಳನ ಪ್ರವಾದಿಗಳು ಸುಳ್ಳು ಪ್ರವಾದಿಗಳೆಂದೂ ನಿಸ್ಸಂದೇಹವಾಗಿ ರುಜುವಾಯಿತು. (1 ಅರಸುಗಳು 18:21-40) ಬಾಳನ ಪ್ರವಾದಿಗಳಂತೆ, ಎರಡು ಕೊಂಬುಗಳ ಕಾಡು ಮೃಗವು, ಪ್ರವಾದಿಯೋಪಾದಿ ತನಗೆ ಬೇಕಾಗುವಷ್ಟು ಅರ್ಹತೆಗಳಿವೆ ಎಂದು ಭಾವಿಸುತ್ತದೆ. (ಹೋಲಿಸಿರಿ ಪ್ರಕಟನೆ 13:14, 15; 19:20.) ಹೌದು, ಎರಡು ಲೋಕ ಯುದ್ಧಗಳಲ್ಲಿ ದುಷ್ಟ ಶಕ್ತಿಗಳನ್ನು ನಿಶ್ಶೇಷಗೊಳಿಸಿದೆ, ಮತ್ತು ದೇವರಹಿತ ಕಾಮ್ಯೂನಿಸಂ ಎಂದು ಕರೆಯಲ್ಪಡುವುದರ ವಿರುದ್ಧ ಇಂದು ದೃಢವಾಗಿ ನಿಂತಿದೆ ಎಂದು ಅದು ವಾದಿಸುತ್ತದೆ! ಎರಡು ಕೊಂಬುಗಳ ಕಾಡು ಮೃಗದ ಆಧುನಿಕ ಪಡಿರೂಪವನ್ನು ಸ್ವಾತಂತ್ರ್ಯದ ರಕ್ಷಕ ಮತ್ತು ಒಳ್ಳೆಯ ಪ್ರಾಪಂಚಿಕ ವಸ್ತುಗಳ ಬುಗ್ಗೆಯೋಪಾದಿ ಅನೇಕರು ಖಂಡಿತವಾಗಿಯೂ ವೀಕ್ಷಿಸುತ್ತಾರೆ.
ಕಾಡು ಮೃಗದ ವಿಗ್ರಹ
28. ಎರಡು ಕೊಂಬುಗಳ ಕಾಡು ಮೃಗವು, ಕುರಿಮರಿಯಂತಹ ಕೊಂಬುಗಳು ಸೂಚಿಸುವಂತೆ, ಅಷ್ಟೊಂದು ನಿರ್ದೋಷಿಯಲ್ಲವೆಂದು ಯೋಹಾನನು ಹೇಗೆ ತೋರಿಸುತ್ತಾನೆ?
28 ಅದರ ಕುರಿಮರಿಯಂತಿರುವ ಕೊಂಬುಗಳು ಸೂಚಿಸುವಂತೆ ಎರಡು ಕೊಂಬುಗಳ ಈ ಕಾಡು ಮೃಗವು ಅಷ್ಟೊಂದು ನಿರ್ದೋಷಿಯೋ? ಯೋಹಾನನು ಹೇಳುವುದನ್ನು ಮುಂದರಿಸುತ್ತಾನೆ: “ಮತ್ತು ಕಾಡು ಮೃಗದ ನೋಟದಲ್ಲಿ ಸೂಚಕ ಕಾರ್ಯಗಳನ್ನು ಮಾಡುವ ಅಧಿಕಾರವು ಅದಕ್ಕೆ ಕೊಡಲ್ಪಟ್ಟದರ್ದಿಂದ ಅದು ಭೂಮಿಯ ಮೇಲೆ ವಾಸಿಸುವವರನ್ನು ತಪ್ಪುದಾರಿಗೆ ನಡಿಸುತ್ತದೆ, ಅದೇ ಸಮಯದಲ್ಲಿ ಖಡ್ಗದ ಹೊಡೆತಹೊಂದಿದ, ಆದರೂ ಚೇತರಿಸಿಕೊಂಡ ಕಾಡು ಮೃಗಕ್ಕೆ ವಿಗ್ರಹವೊಂದನ್ನು ಮಾಡಲು ಭೂಮಿಯ ಮೇಲೆ ವಾಸಿಸುವವರಿಗೆ ಅದು ಹೇಳುತ್ತದೆ. ಮತ್ತು ಆ ಕಾಡು ಮೃಗದ ವಿಗ್ರಹವು ಮಾತಾಡುವಂತೆ ಮತ್ತು ಆ ಕಾಡು ಮೃಗದ ವಿಗ್ರಹವನ್ನು ಯಾವುದೇ ರೀತಿಯಲ್ಲಿ ಆರಾಧಿಸಿದೆ ಇರುವವರೆಲ್ಲರನ್ನು ಕೊಲ್ಲಲ್ಪಡುವವರಾಗಿ ಮಾಡುವಂತೆ, ಆ ಕಾಡು ಮೃಗದ ವಿಗ್ರಹಕ್ಕೆ ಶ್ವಾಸವನ್ನು ಕೊಡುವಂತೆ ಅದಕ್ಕೆ ಅನುಮತಿ ನೀಡಲಾಯಿತು.”—ಪ್ರಕಟನೆ 13:14, 15, NW.
29. (ಎ) ಕಾಡು ಮೃಗದ ವಿಗ್ರಹದ ಉದ್ದೇಶವೇನು, ಮತ್ತು ಈ ವಿಗ್ರಹವು ಯಾವಾಗ ರಚಿಸಲ್ಪಟ್ಟಿತು? (ಬಿ) ಕಾಡು ಮೃಗದ ವಿಗ್ರಹವು ನಿರ್ಜೀವವಾದ ಪ್ರತಿಮೆಯಲ್ಲ ಯಾಕೆ?
29 ಈ “ಕಾಡು ಮೃಗದ ವಿಗ್ರಹ”ವು ಏನು, ಮತ್ತು ಅದರ ಉದ್ದೇಶವೇನು? ಯಾವುದರ ವಿಗ್ರಹವು ಅದಾಗಿದೆಯೋ ಆ ಏಳು ತಲೆಗಳ ಕಾಡು ಮೃಗದ ಆರಾಧನೆಯನ್ನು ವರ್ಧಿಸುವುದು ಮತ್ತು ಈ ರೀತಿಯಲ್ಲಿ ಕಾರ್ಯತಃ ಕಾಡು ಮೃಗದ ಅಸ್ತಿತ್ವವನ್ನು ಚಿರಸ್ಮರಣೀಯ ಮಾಡುವುದು ಉದ್ದೇಶವಾಗಿದೆ. ಏಳು ತಲೆಗಳ ಕಾಡು ಮೃಗವು ಅದರ ಖಡ್ಗದ ಹೊಡೆತದಿಂದ ಪುನರುಜ್ಜೀವಗೊಂಡ ಅನಂತರ ಅಂದರೆ, ಮೊದಲನೆಯ ಲೋಕ ಯುದ್ಧವು ಕೊನೆಗೊಂಡ ಅನಂತರ ಈ ವಿಗ್ರಹವು ರಚಿಸಲ್ಪಟ್ಟಿತು. ದೂರಾ ಬೈಲಿನಲ್ಲಿ ನೆಬೂಕದ್ನೆಚ್ಚರನಿಂದ ನಿಲ್ಲಿಸಲ್ಪಟ್ಟ ಪ್ರತಿಮೆಯಂತೆ, ಅದೊಂದು ನಿರ್ಜೀವ ಮೂರ್ತಿಯಾಗಿರುವುದಿಲ್ಲ. (ದಾನಿಯೇಲ 3:1) ಎರಡು ಕೊಂಬುಗಳ ಕಾಡು ಮೃಗವು ಈ ವಿಗ್ರಹದಲ್ಲಿ ಜೀವವನ್ನು ತುಂಬುತ್ತದೆ, ಆ ಮೂಲಕ ವಿಗ್ರಹವು ಜೀವಿಸಬಲ್ಲದು ಮತ್ತು ಲೋಕ ಇತಿಹಾಸದಲ್ಲಿ ಒಂದು ಪಾತ್ರವನ್ನು ವಹಿಸಬಲ್ಲದು.
30, 31. (ಎ) ಈ ವಿಗ್ರಹವು ಏನಾಗಿದೆ ಎಂದು ಇತಿಹಾಸದ ವಾಸ್ತವಾಂಶಗಳು ಗುರುತಿಸುತ್ತವೆ? (ಬಿ) ಈ ವಿಗ್ರಹವನ್ನು ಆರಾಧಿಸಲು ನಿರಾಕರಿಸಿದ್ದಕ್ಕಾಗಿ ಯಾರಾದರೂ ಕೊಲ್ಲಲ್ಪಟ್ಟಿದ್ದಾರೊ? ವಿವರಿಸಿರಿ.
30 ಇತಿಹಾಸದ ಕಾರ್ಯಸರಣಿಯು ಈ ವಿಗ್ರಹವನ್ನು ಬ್ರಿಟನ್ ಮತ್ತು ಅಮೆರಿಕದಿಂದ ನಿಯೋಜಿಸಲ್ಪಟ್ಟ, ಪ್ರವರ್ಧಿಸಲ್ಪಟ್ಟ ಮತ್ತು ಬೆಂಬಲಿಸಲ್ಪಟ್ಟ ಮತ್ತು ಆರಂಭದಲ್ಲಿ ಜನಾಂಗ ಸಂಘವೆಂದು ಪ್ರಸಿದ್ಧವಾದ ಸಂಸ್ಥೆಯೋಪಾದಿ ಗುರುತಿಸುತ್ತದೆ. ತದನಂತರ, ಪ್ರಕಟನೆ 17 ನೆಯ ಅಧ್ಯಾಯದಲ್ಲಿ, ಸ್ವತಂತ್ರವಾದ ಅಸ್ತಿತ್ವ ಇರುವ ಜೀವಂತವಿರುವ, ಉಸಿರಾಡುವ ಕಡುಗೆಂಪುವರ್ಣದ ಕಾಡು ಮೃಗವಾಗಿ ಅದು ಇನ್ನೊಂದು ಭಿನ್ನವಾದ ಚಿಹ್ನೆಯ ಕೆಳಗೆ ಕಾಣಬರುತ್ತದೆ. ಈ ಅಂತಾರಾಷ್ಟ್ರೀಯ ಸಂಘವು ‘ಮಾತಾಡುತ್ತದೆ,’ ಅಂದರೆ ಮಾನವಕುಲಕ್ಕೆ ಶಾಂತಿ ಮತ್ತು ಭದ್ರತೆಯನ್ನು ಅದು ಮಾತ್ರ ತರಶಕ್ತವಾಗಿದೆ ಎಂದು ಬಡಾಯಿಕೊಚ್ಚಿಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ, ಕಂಠೋಕ್ತ ದೂಷಣೆ ಮತ್ತು ನಿಂದೆಗಳನ್ನು ವಿನಿಮಯಮಾಡಿಕೊಳ್ಳಲು ಇರುವ ಸದಸ್ಯ ರಾಷ್ಟ್ರಗಳ ಒಂದು ವಾದಸ್ಥಾನವಾಗಿ ಅದು ಪರಿಣಮಿಸಿದೆ. ಅದರ ಅಧಿಕಾರಕ್ಕೆ ಮನ್ನಣೆಯನ್ನೀಯದ ಯಾವುದೇ ರಾಷ್ಟ್ರ ಯಾ ಜನಾಂಗಕ್ಕೆ ಸಾಮಾನ್ಯ ಹಕ್ಕುಬಾಧ್ಯತೆಗಳಿಂದ ಬಹಿಷ್ಕಾರದ ಯಾ ಸಜೀವ ಮರಣದ ಬೆದರಿಕೆಯನ್ನೊಡ್ಡಿದೆ. ಅದರ ಭಾವನಾಶಾಸ್ತ್ರಗಳನುಸಾರ ನಡೆಯಲು ತಪ್ಪುವ ಜನಾಂಗಗಳನ್ನು ಹೊರದಬ್ಬುವ ಬೆದರಿಕೆಯನ್ನು ಸಹ ಅದು ಒಡ್ಡಿದೆ. ಮಹಾ ಸಂಕಟದ ಮೇಲ್ನುಗ್ಗುವಿಕೆಯಲ್ಲಿ, ಕಾಡು ಮೃಗದ ಈ ವಿಗ್ರಹದ ಮಿಲಿಟರಿ “ಕೊಂಬುಗಳು” ಒಂದು ಧ್ವಂಸಕಾರಿ ಪಾತ್ರವನ್ನು ನೆರವೇರಿಸುವುವು.—ಪ್ರಕಟನೆ 7:14; 17:8, 16.
31 ಎರಡನೆಯ ಲೋಕ ಯುದ್ಧದಂದಿನಿಂದ, ಕಾಡು ಮೃಗದ ವಿಗ್ರಹವು—ಈಗ ಸಂಯುಕ್ತ ರಾಷ್ಟ್ರ ಸಂಘವೆಂದು ತೋರಿಬಂದಿದೆ—ಅಕ್ಷರಾರ್ಥಕ ರೀತಿಯಲ್ಲಿ ಈಗಾಗಲೇ ಹತಿಸುವಿಕೆಯನ್ನು ನಡಿಸಿದೆ. ಉದಾಹರಣೆಗೆ, 1950 ರಲ್ಲಿ ಸಂಯುಕ್ತ ರಾಷ್ಟ್ರ ಸೇನೆಯು ಉತ್ತರ ಮತ್ತು ದಕ್ಷಿಣ ಕೊರಿಯದ ನಡುವಣ ಯುದ್ಧದಲ್ಲಿ ರಣರಂಗಕ್ಕೆ ಇಳಿಯಿತು. ಸಂಯುಕ್ತ ರಾಷ್ಟ್ರ ಸೇನೆಯು ದಕ್ಷಿಣ ಕೊರಿಯದವರೊಂದಿಗೆ ಸೇರಿ 14,20,000 ಮಂದಿ ಉತ್ತರ ಕೊರಿಯದವರನ್ನು ಮತ್ತು ಚೀನಿಯರನ್ನು ಕೊಂದಿದೆ ಎಂದು ಅಂದಾಜಿಸಲಾಗಿದೆ. ತದ್ರೀತಿಯಲ್ಲಿ, 1960 ರಿಂದ 1964ರ ತನಕ ಸಂಯುಕ್ತ ರಾಷ್ಟ್ರ ಸೇನೆಗಳು ಕಾಂಗೋದಲ್ಲಿ (ಈಗ ಸಾಯೀರ್) ಬಹಳಷ್ಟು ಕ್ರಿಯಾತ್ಮಕವಾಗಿದ್ದವು. ಇದಲ್ಲದೆ, ಪೋಪರಾದ ಪೌಲ್ VI ಮತ್ತು ಜಾನ್ ಪೌಲ್ II ಸಹಿತ ಲೋಕದ ಧುರೀಣರು, ಈ ವಿಗ್ರಹವು ಶಾಂತಿಗಾಗಿ ಮನುಷ್ಯನ ಬಾಳುವ ಮತ್ತು ಅತ್ಯುತ್ತಮ ನಿರೀಕ್ಷೆಯೆಂದು ಸಮರ್ಥಿಸುವುದನ್ನು ಮುಂದುವರಿಸಿದ್ದಾರೆ. ಮಾನವ ಕುಲವು ಅದನ್ನು ಸೇವಿಸಲು ತಪ್ಪುವುದಾದರೆ, ಮಾನವ ವರ್ಗವು ತನ್ನನ್ನು ಸ್ವತಃ ನಾಶಗೊಳಿಸಿಕೊಳ್ಳುವುದು ಎಂದು ಅವರು ಪಟ್ಟುಹಿಡಿಯುತ್ತಾರೆ. ಹೀಗೆ ಅವರು ವಿಗ್ರಹದೊಂದಿಗೆ ಮತ್ತು ಅದರ ಆರಾಧನೆಯೊಂದಿಗೆ ಹೋಗಲು ನಿರಾಕರಿಸುವ ಎಲ್ಲಾ ಮಾನವರು ಸಾಂಕೇತಿಕವಾಗಿ ಕೊಲ್ಲಲ್ಪಡುವಂತೆ ಕಾರಣವಾಗುತ್ತಾರೆ.—ಹೋಲಿಸಿರಿ ಧರ್ಮೋಪದೇಶಕಾಂಡ 5:8, 9.
ಕಾಡು ಮೃಗದ ಗುರುತು
32. ದೇವರ ಸ್ತ್ರೀಯ ಸಂತಾನದವರಲ್ಲಿ ಉಳಿದವರಿಗೆ ಬಾಧೆಗಳನ್ನು ತರಲು ತನ್ನ ದೃಶ್ಯ ಸಂಸ್ಥೆಯ ರಾಜಕೀಯ ಭಾಗಗಳನ್ನು ಸೈತಾನನು ಕಾರ್ಯಸಾಧಿಸಲು ಬಳಸುವ ವಿಧವನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ?
32 ದೇವರ ಸ್ತ್ರೀಯ ಸಂತಾನದವರಲ್ಲಿ ಉಳಿದವರಿಗೆ ಗರಿಷ್ಠ ರೀತಿಯ ಬಾಧೆಗಳನ್ನು ತರಲು ತನ್ನ ದೃಶ್ಯ ಸಂಸ್ಥೆಯ ರಾಜಕೀಯ ಭಾಗಗಳನ್ನು ಸೈತಾನನು ಕಾರ್ಯಸಾಧಿಸಲು ಬಳಸುವ ವಿಧವನ್ನು ಯೋಹಾನನು ಈಗ ಕಾಣುತ್ತಾನೆ. (ಆದಿಕಾಂಡ 3:15) ಸ್ವತಃ “ಕಾಡು ಮೃಗ” ವನ್ನು ವರ್ಣಿಸಲು ಅವನೀಗ ಹಿಂದೆರಳುತ್ತಾನೆ: “ಮತ್ತು ಅದು ಎಲ್ಲ ವ್ಯಕ್ತಿಗಳನ್ನು—ಚಿಕ್ಕವರು ಮತ್ತು ದೊಡ್ಡವರು, ಐಶ್ವಯವಂತರು ಮತ್ತು ಬಡವರು, ಮತ್ತು ಸ್ವತತ್ರರು ಮತ್ತು ದಾಸರು—ಹೀಗೆ ಅವರು ಇವರಿಗೆ ಅವರ ಬಲಗೈಯಲ್ಲಿ ಅಥವಾ ಹಣೆಯಲ್ಲಿ ಒಂದು ಗುರುತನ್ನು ಕೊಡಬೇಕೆಂದು, ಮತ್ತು ಆ ಗುರುತು, ಕಾಡು ಮೃಗದ ಹೆಸರು ಯಾ ಅದರ ಹೆಸರಿನ ಅಂಕೆಯಿರುವ ವ್ಯಕ್ತಿಯಲ್ಲದೆ ಇನ್ನಾವನೂ ಮಾರಲು ಅಥವಾ ಕೊಳ್ಳಲು ಶಕ್ತನಾಗದಂತೆ ನಿರ್ಬಂಧಪಡಿಸುತ್ತದೆ. ವಿವೇಕವು ಒದಗಿಬರುವುದು ಇಲ್ಲಿಯೇ: ಬುದ್ಧಿಶಕ್ತಿಯುಳ್ಳವನು ಆ ಕಾಡು ಮೃಗದ ಅಂಕೆಯನ್ನು ಗಣಿಸಲಿ; ಏಕೆಂದರೆ ಅದು ಒಬ್ಬ ಮನುಷ್ಯನ ಅಂಕೆ; ಮತ್ತು ಅದರ ಅಂಕೆ ಆರುನೂರ ಅರುವತ್ತಾರು.”—ಪ್ರಕಟನೆ 13:16-18, NW.
33. (ಎ) ಕಾಡು ಮೃಗದ ಹೆಸರೇನು? (ಬಿ) ಅಂಕೆ ಆರು ಯಾವುದರೊಂದಿಗೆ ಜೋಡಿಸಲ್ಪಟ್ಟಿದೆ? ವಿವರಿಸಿರಿ.
33 ಕಾಡು ಮೃಗಕ್ಕೆ ಒಂದು ಹೆಸರು ಇದೆ, ಮತ್ತು ಈ ಹೆಸರು ಒಂದು ಅಂಕೆಯಾಗಿದೆ: 666. ಆರು, ಒಂದು ಅಂಕೆಯೋಪಾದಿ, ಯೆಹೋವನ ಶತ್ರುಗಳೊಂದಿಗೆ ಜೋಡಿಸಲ್ಪಡುತ್ತದೆ. ರೆಫಾಯರ ಫಿಲಿಷ್ಟಿಯ ಮನುಷ್ಯನೊಬ್ಬನು “ಎತ್ತರ” ದವನು, ಮತ್ತು ಅವನ “ಕೈಕಾಲುಗಳಿಗೆ ಆರಾರು ಬೆರಳುಗಳು” ಇದ್ದವನಾಗಿದ್ದನು. (1 ಪೂರ್ವಕಾಲವೃತ್ತಾಂತ 20:6) ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯು 6 ಮೊಳ ಅಗಲ ಮತ್ತು 60 ಮೊಳ ಎತ್ತರವಿದ್ದು, ಏಕಾರಾಧನೆಯಲ್ಲಿ ಅವನ ರಾಜಕೀಯ ಅಧಿಕಾರಿಗಳನ್ನು ಐಕ್ಯಗೊಳಿಸಲಿಕ್ಕಾಗಿತ್ತು. ಬಂಗಾರದ ಪ್ರತಿಮೆಯನ್ನು ಪೂಜಿಸಲು ದೇವರ ಸೇವಕರು ನಿರಾಕರಿಸಿದಾಗ, ಅವರನ್ನು ರಾಜನು ಬೆಂಕಿಯ ಆವಿಗೆಯೊಳಗೆ ಎಸೆಯುವಂತೆ ಮಾಡಿದನು. (ದಾನಿಯೇಲ 3:1-23) ಏಳು ಅಂಕೆಯು ದೇವರ ದೃಷ್ಟಿಕೋನದಲ್ಲಿ ಪೂರ್ಣತೆಗಾಗಿ ಇರುವುದಾದರೆ ಆರು ಅಂಕೆಯು ಅದಕ್ಕಿಂತ ಕಡಿಮೆಯದ್ದಾಗಿದೆ. ಆದಕಾರಣ, ಮೂರು ಬಾರಿ ಇರುವ ಆರು, ಗರಿಷ್ಠಮಟ್ಟದ ಅಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ.
34. (ಎ) ಕಾಡು ಮೃಗದ ಅಂಕೆಯು “ಒಬ್ಬ ಮನುಷ್ಯನ ಅಂಕೆಯಾಗಿದೆ” ಎಂಬ ವಾಸ್ತವಾಂಶದಿಂದ ಏನು ಸೂಚಿಸಲ್ಪಡುತ್ತದೆ? (ಬಿ) ಸೈತಾನನ ಲೋಕದ ರಾಜಕೀಯ ವ್ಯವಸ್ಥೆಗೆ 666 ಹೆಸರು ಯಾಕೆ ತಕ್ಕದ್ದಾಗಿದೆ?
34 ಹೆಸರು ವ್ಯಕ್ತಿಯೊಬ್ಬನನ್ನು ಗುರುತಿಸುತ್ತದೆ. ಹಾಗಾದರೆ ಈ ಅಂಕೆಯು ಮೃಗವನ್ನು ಗುರುತಿಸುವುದು ಹೇಗೆ? ಯೋಹಾನನು ಅದು “ಮನುಷ್ಯನ ಅಂಕೆಯಾಗಿದೆ,” ಎಂದು ಹೇಳುತ್ತಾನೆ, ಒಬ್ಬ ಆತ್ಮ ವ್ಯಕ್ತಿಯದ್ದಲ್ಲ, ಆ ಮೂಲಕ ಕಾಡು ಮೃಗವು ಐಹಿಕವಾಗಿದ್ದು, ಮಾನವ ಸರಕಾರವನ್ನು ಸಂಕೇತಿಸುತ್ತದೆ. ಏಳಕ್ಕೆ ಮುಟ್ಟಲು ಆರು ಅಂಕೆಯು ತಪ್ಪುವಂತೆ, 666 ಕೂಡ—ಮೂರನೆಯ ಭಾವದ ಆರು—ಪರಿಪೂರ್ಣತೆಯ ದೇವರ ಮಟ್ಟವನ್ನು ಮುಟ್ಟಲು ಎಷ್ಟೋ ವಿಷಾದನೀಯವಾಗಿ ತಪ್ಪುವ ಲೋಕದ ಬೃಹತ್ಗಾತ್ರದ ರಾಜಕೀಯ ವ್ಯವಸ್ಥೆಗೆ ಒಂದು ತಕ್ಕದ್ದಾದ ಹೆಸರಾಗಿದೆ. ಮಾನವ ಕುಲದ ಪೀಡಕನಾಗಿ ಮತ್ತು ದೇವರ ಜನರ ಹಿಂಸಕನಾಗಿ ಕಾಡು ಮೃಗವು ಕಾರ್ಯನಿರ್ವಹಿಸುವಂತೆ ದೊಡ್ಡ ರಾಜಕೀಯಗಳು, ದೊಡ್ಡ ಧರ್ಮ, ಮತ್ತು ದೊಡ್ಡ ವಾಣಿಜ್ಯಗಳು ಮಾಡುವಾಗ, ನಾಮ-ಅಂಕೆ 666ರ ಕೆಳಗೆ ಲೋಕದ ರಾಜಕೀಯ ಕಾಡು ಮೃಗವು ಸರ್ವೋಚ್ಚವಾಗಿ ಆಳುತ್ತದೆ.
35. ಹಣೆಯ ಮೇಲೆ ಯಾ ಬಲಗೈಯ ಮೇಲೆ ಕಾಡು ಮೃಗದ ಹೆಸರಿನಿಂದ ಗುರುತುಮಾಡಲ್ಪಡುವುದು ಅಂದರೆ ಅರ್ಥವೇನು?
35 ಹಣೆಯ ಮೇಲೆ, ಅಥವಾ ಬಲಗೈಯ ಮೇಲೆ ಕಾಡು ಮೃಗದ ಹೆಸರಿನ ಗುರುತು ಇರುವುದರ ಅರ್ಥವೇನು? ಯೆಹೋವನು ಇಸ್ರಾಯೇಲ್ಯರಿಗೆ ನಿಯಮಶಾಸ್ತ್ರವನ್ನು ನೀಡಿದಾಗ, ಅವನು ಅವರಿಗಂದದ್ದು: “ಆದದರಿಂದ ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲಿಯೂ ಮನಸ್ಸಿನಲ್ಲಿಯೂ ಇಟ್ಟುಕೊಳ್ಳಬೇಕು; ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ನಿಮ್ಮ ಹುಬ್ಬುಗಳ ನಡುವೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತಿರಬೇಕು.” (ಧರ್ಮೋಪದೇಶಕಾಂಡ 11:18) ನಿಯಮಶಾಸ್ತ್ರದಿಂದ ಅವರ ಎಲ್ಲಾ ಕಾರ್ಯಗಳು ಮತ್ತು ಯೋಚನೆಗಳು ಪ್ರಭಾವಿಸಲ್ಪಡಲು, ಇಸ್ರಾಯೇಲ್ಯರು ಅದನ್ನು ಅವರ ಮುಂದೆ ಯಾವಾಗಲೂ ಇಡತಕ್ಕದ್ದು ಎಂದು ಅದರ ಅರ್ಥ. ಅಭಿಷಿಕ್ತ 1,44,000 ಮಂದಿಯ ಹಣೆಯ ಮೇಲೆ ತಂದೆಯ ಹೆಸರು ಮತ್ತು ಯೇಸುವಿನ ಹೆಸರು ಬರೆಯಲ್ಪಟ್ಟಿವೆ ಎಂದು ಹೇಳಲಾಗುತ್ತದೆ. ಇದು ಅವರನ್ನು ಯೆಹೋವ ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ಸೇರಿದವರು ಎಂದು ಗುರುತಿಸುತ್ತದೆ. (ಪ್ರಕಟನೆ 14:1) ಅನುಕರಣೆಯಲ್ಲಿ, ಕಾಡು ಮೃಗದ ಪೈಶಾಚಿಕ ಗುರುತನ್ನು ಸೈತಾನನು ಬಳಸುತ್ತಾನೆ. ಕ್ರಯ ವಿಕ್ರಯದ ಪ್ರತಿದಿನದ ಚಟುವಟಿಕೆಗಳಲ್ಲಿ ತೊಡಗಿರುವ ಪ್ರತಿಯೊಬ್ಬನನ್ನು, ಕಾಡು ಮೃಗವು ವಿಷಯಗಳನ್ನು ಮಾಡುವ ರೀತಿಯಲ್ಲಿ,—ಉದಾಹರಣೆಗೆ ರಜಾದಿನಗಳನ್ನು ಆಚರಿಸುವುದರಲ್ಲಿ,—ಮಾಡುವಂತೆ ಒತ್ತಡಕ್ಕೆ ಹಾಕುತ್ತಾನೆ. ಅವರು ಅದರ ಗುರುತನ್ನು ಪಡೆಯುವಂತೆ ಅವರು ಕಾಡು ಮೃಗವನ್ನು ಆರಾಧಿಸುವಂತೆ, ಅದು ಅವರ ಜೀವನಗಳನ್ನು ಆಳುವಂತೆ ನಿರೀಕ್ಷಿಸಲ್ಪಡುತ್ತದೆ.
36. ಕಾಡು ಮೃಗದ ಗುರುತನ್ನು ಪಡೆಯಲು ನಿರಾಕರಿಸುವವರಿಗೆ ಯಾವ ಸಮಸ್ಯೆಗಳಿದ್ದವು?
36 ಕಾಡು ಮೃಗದ ಗುರುತನ್ನು ಪಡೆಯಲು ನಿರಾಕರಿಸುವವರಿಗಾದರೋ ಸತತವಾಗಿ ಸಮಸ್ಯೆಗಳು ಇದ್ದವು. ಉದಾಹರಣೆಗೆ, 1930 ಗಳ ಆರಂಭದಿಂದ, ಅವರು ಅನೇಕ ಕೋರ್ಟು ಮೊಕದ್ದಮೆಗಳನ್ನು ಹೋರಾಡಬೇಕಾಯಿತು ಮತ್ತು ಹಿಂಸಾತ್ಮಕ ದೊಂಬಿಗಲಾಟೆಗಳನ್ನು ಮತ್ತು ಇತರ ಹಿಂಸೆಗಳನ್ನು ಸಹಿಸಬೇಕಾಯಿತು. ನಿರಂಕುಶಧಿಕಾರದ ದೇಶಗಳಲ್ಲಿ, ಅವರನ್ನು ಕೂಟಶಿಬಿರಗಳಿಗೆ ದೊಬ್ಬಿದರು, ಅಲ್ಲಿ ಅನೇಕರು ಸತ್ತರು. ಎರಡನೆಯ ಲೋಕ ಯುದ್ಧದಂದಿನಿಂದ, ಅಸಂಖ್ಯಾತ ಯುವಕರು ದೀರ್ಘಕಾಲದ ಸೆರೆವಾಸಗಳ ಸಂಕಟಕ್ಕೀಡಾಗಿದ್ದಾರೆ, ಅನೇಕರು ಹಿಂಸಿಸಲ್ಪಟ್ಟದ್ದು ಮತ್ತು ಕೊಲ್ಲಲ್ಪಟ್ಟದ್ದೂ ಉಂಟು, ಯಾಕಂದರೆ ಅವರ ಕ್ರೈಸ್ತ ತಾಟಸ್ಥ್ಯದಲ್ಲಿ ಒಪ್ಪಂದ ಮಾಡಲು ಅವರು ನಿರಾಕರಿಸಿದರು. ಇತರ ದೇಶಗಳಲ್ಲಿ, ಕ್ರೈಸ್ತರು ಅಕ್ಷರಾರ್ಥಕವಾಗಿ ಕ್ರಯ ವಿಕ್ರಯ ಮಾಡಲು ಅಶಕ್ತರಾಗಿದ್ದಾರೆ; ಕೆಲವರಿಗೆ ಆಸ್ತಿಯ ಒಡೆಯರಾಗುವುದು ಅಸಾಧ್ಯವಾಗಿದೆ; ಇತರರು ಬಲಾತ್ಕಾರ ಸಂಭೋಗಕ್ಕೀಡಾಗಿದ್ದಾರೆ, ಕೊಲ್ಲಲ್ಪಟ್ಟಿದ್ದಾರೆ, ಯಾ ಅವರ ಸ್ವದೇಶದಿಂದ ಅವರನ್ನು ಹೊರಗಟ್ಟಲಾಗಿದೆ. ಯಾಕೆ? ಒಳ್ಳೆಯ ಮನಸ್ಸಾಕ್ಷಿಯಿಂದ, ಅವರು ರಾಜಕೀಯ ಪಕ್ಷದ ಕಾರ್ಡನ್ನು ಖರೀದಿಸಲು ನಿರಾಕರಿಸಿರುವುದರಿಂದಲೇ.d—ಯೋಹಾನ 17:16.
37, 38. (ಎ) ಕಾಡು ಮೃಗದ ಗುರುತನ್ನು ಪಡೆಯಲು ನಿರಾಕರಿಸುವವರಿಗೆ ಜೀವಿಸಲು ಈ ಲೋಕವು ಒಂದು ಕಷ್ಟದ ಸ್ಥಳವಾಗಿದೆ ಯಾಕೆ? (ಬಿ) ಸಮಗ್ರತೆಯನ್ನು ಯಾರು ಕಾಪಾಡಿಕೊಳ್ಳುತ್ತಿದ್ದಾರೆ, ಮತ್ತು ಏನನ್ನು ಮಾಡಲು ಅವರು ದೃಢಸಂಕಲ್ಪ ಮಾಡಿದ್ದಾರೆ?
37 ಭೂಮಿಯ ಕೆಲವು ಪ್ರದೇಶಗಳಲ್ಲಿ, ಧರ್ಮವು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ, ಯಾರಾದರೊಬ್ಬನು ಬೈಬಲ್ ಸತ್ಯದ ಪರವಾಗಿ ನಿಲ್ಲುವುದಾದರೆ, ಅವನ ಕುಟುಂಬ ಮತ್ತು ಹಿಂದಿನ ಮಿತ್ರರಿಂದ ಬಹಿಷ್ಕರಿಸಲ್ಪಡುತ್ತಾನೆ. ತಾಳಿಕೊಳ್ಳಲು ಮಹಾ ನಂಬಿಕೆಯ ಆವಶ್ಯಕತೆಯಿದೆ. (ಮತ್ತಾಯ 10:36-38; 17:22) ಪ್ರಾಪಂಚಿಕ ಐಶ್ವರ್ಯವನ್ನು ಅಧಿಕಾಂಶ ಜನರು ಎಲ್ಲಿ ಆರಾಧಿಸುತ್ತಾರೋ ಮತ್ತು ಎಲ್ಲಿ ಅಪ್ರಾಮಾಣಿಕತೆಯು ಬಹುವ್ಯಾಪಕವಾಗಿದೆಯೋ ಆ ಲೋಕವೊಂದರಲ್ಲಿ, ಕೆಲವೊಮ್ಮೆ ಒಂದು ಉಚ್ಚಮಟ್ಟದ ಮಾರ್ಗವನ್ನು ಬೆನ್ನಟ್ಟಲು ಯೆಹೋವನು ತನ್ನನ್ನು ಎತ್ತಿಹಿಡಿಯುವನು ಎಂದು ನಿಜ ಕ್ರೈಸ್ತನು ಸಂಪೂರ್ಣವಾಗಿ ಅವನಲ್ಲಿ ಭರವಸವಿಡಬೇಕಾಗುತ್ತದೆ. (ಕೀರ್ತನೆ 11:7; ಇಬ್ರಿಯ 13:18) ಅನೈತಿಕತೆಯಿಂದ ತುಂಬಿತುಳುಕುವ ಲೋಕವೊಂದರಲ್ಲಿ, ಶುದ್ಧವೂ, ನಿಷ್ಕಳಂಕವೂ ಆಗಿರಬೇಕಾದರೆ ಮಹತ್ತಾದ ದೃಢ ಸಂಕಲ್ಪ ಬೇಕಾಗಿದೆ. ರಕ್ತದ ಪವಿತ್ರತೆಯ ಮೇಲಿನ ದೇವರ ನಿಯಮವನ್ನು ಮುರಿಯಲು ಕಾಯಿಲೆ ಬೀಳುವ ಕ್ರೈಸ್ತರು ಆಗಾಗ್ಗೆ ವೈದ್ಯರಿಂದ ಮತ್ತು ದಾದಿಯರಿಂದ ಒತ್ತಡಕ್ಕೊಳಗಾಗುತ್ತಾರೆ; ಅವರ ನಂಬಿಕೆಯೊಂದಿಗೆ ಘರ್ಷಣೆಯಾಗುವ ಕೋರ್ಟ್ ಆರ್ಡರುಗಳನ್ನು ಕೂಡ ಅವರು ಪ್ರತಿರೋಧಿಸಬೇಕಾಗುತ್ತದೆ. (ಅ. ಕೃತ್ಯಗಳು 15:28, 29; 1 ಪೇತ್ರ 4:3, 4) ಮತ್ತು ನಿರುದ್ಯೋಗವು ಏರುತ್ತಿರುವ ಈ ದಿವಸಗಳಲ್ಲಿ, ಯಾವುದು ದೇವರ ಮುಂದೆ ತನ್ನ ಯಥಾರ್ಥತೆಯನ್ನು ಸಂಧಾನಮಾಡುವ ಅರ್ಥದಲ್ಲಿರುತ್ತದೋ ಅಂತಹ ಕೆಲಸಗಳಿಂದ ತಪ್ಪಿಸಿಕೊಳ್ಳುವುದು ನಿಜ ಕ್ರೈಸ್ತನೊಬ್ಬನಿಗೆ ಬಹಳಷ್ಟು ಕಷ್ಟವಾಗುತ್ತಾ ಇದೆ.—ಮೀಕ 4:3, 5.
38 ಹೌದು, ಕಾಡು ಮೃಗದ ಗುರುತು ಇಲ್ಲದವರಿಗೆ ಜೀವಿಸಲು ಈ ಲೋಕವು ಒಂದು ಕಷ್ಟಕರ ಸ್ಥಳವಾಗಿದೆ. ಸ್ತ್ರೀಯ ಸಂತಾನದ ಉಳಿದವರು ಮತ್ತು ಮಹಾ ಸಮೂಹದ ನಲವತ್ತು ಲಕ್ಷಕ್ಕಿಂತಲೂ ಅಧಿಕ ಜನರು, ದೇವರ ನಿಯಮಗಳನ್ನು ಮುರಿಯಲು ಎಲ್ಲಾ ತರಹದ ಒತ್ತಡಗಳು ಬರುವುದರ ನಡುವೆಯೂ ಯಥಾರ್ಥತೆಯನ್ನು ಕಾಪಾಡಿಕೊಳ್ಳುತ್ತಾ ಇರುವುದು ಯೆಹೋವನ ಶಕ್ತಿಯ ಮತ್ತು ಆಶೀರ್ವಾದದ ಎದ್ದುಕಾಣುವ ಒಂದು ನಿದರ್ಶನವಾಗಿದೆ. (ಪ್ರಕಟನೆ 7:9) ಲೋಕದಾದ್ಯಂತ ಐಕ್ಯದಿಂದ, ನಾವು ಕಾಡು ಮೃಗದ ಗುರುತನ್ನು ಪಡೆಯಲು ನಿರಾಕರಿಸುವಾಗ, ನಾವೆಲ್ಲರೂ ಯೆಹೋವನ ಮತ್ತು ಆತನ ನೀತಿಯ ಮಾರ್ಗಗಳನ್ನು ಮಹಿಮೆಗೇರಿಸುವುದನ್ನು ಮುಂದುವರಿಸೋಣ.—ಕೀರ್ತನೆ 34:1-3.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ವಿವರಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್ ಇವರಿಂದ ಪ್ರಕಾಶಿತವಾದ “ಯುವರ್ ವಿಲ್ ಬಿ ಡನ್ ಆನ್ ಅರ್ತ್” ಪುಸ್ತಕದ ಪುಟ 166-201ನ್ನು ದಯಮಾಡಿ ನೋಡಿರಿ.
b ಆರ್. ಸಿ. ಏಚ್. ಲೆನ್ಸ್ಕೀಯವರ ದ ಇಂಟರ್ಪ್ರಿಟೇಶನ್ ಆಫ್ ಸೇಂಟ್ ಜಾನ್ಸ್ ರೆವಲೇಶನ್, ಪುಟ 390-1.
c ವ್ಯಾಖ್ಯಾನಕಾರರು ರಾಷ್ಟ್ರೀಯತೆಯನ್ನು ಕಾರ್ಯತಃ ಒಂದು ಧರ್ಮವೆಂದು ಪರಿಗಣಿಸಿದ್ದಾರೆ. ಆದಕಾರಣ, ರಾಷ್ಟ್ರೀಯವಾದಿಗಳಾಗಿರುವ ಜನರು ತಾವು ಜೀವಿಸುವ ಆ ದೇಶದಿಂದ ಪ್ರತಿನಿಧಿಸಲ್ಪಟ್ಟ ಕಾಡು ಮೃಗದ ವಿಭಾಗವನ್ನು ನಿಜವಾಗಿಯೂ ಆರಾಧಿಸುತ್ತಾರೆ. ಅಮೆರಿಕದಲ್ಲಿನ ರಾಷ್ಟ್ರೀಯತೆಯ ಕುರಿತಾಗಿ ನಾವು ಓದುವುದು: “ರಾಷ್ಟ್ರೀಯತೆಯನ್ನು ಒಂದು ಧರ್ಮವಾಗಿ ವೀಕ್ಷಿಸುವಲ್ಲಿ, ಅದಕ್ಕೆ ಗತಕಾಲದ ಅನೇಕ ಮಹಾ ಧರ್ಮಗಳೊಂದಿಗೆ ಹಲವು ವಿಷಯಗಳಲ್ಲಿ ಸಮಾನತೆಯಿದೆ. . . . ಆಧುನಿಕ ಧಾರ್ಮಿಕ ರಾಷ್ಟ್ರೀಯವಾದಿಯು ತನ್ನ ಸ್ವಂತ ರಾಷ್ಟ್ರೀಯ ದೇವರ ಮೇಲೆ ಪರಾವಲಂಬನೆಯ ಪ್ರಜ್ಞೆಯುಳ್ಳವನಾಗಿದ್ದಾನೆ. ಅವನ ಶಕ್ತಿಶಾಲಿ ಸಹಾಯವನ್ನು ಅವನು ಅವಶ್ಯವೆಂದು ಭಾವಿಸುತ್ತಾನೆ. ತನ್ನ ಸ್ವಂತ ಪರಿಪೂರ್ಣತೆ ಮತ್ತು ಸಂತೋಷದ ಉಗಮವಾಗಿ ಅವನನ್ನು ಆತನು ಅಂಗೀಕರಿಸುತ್ತಾನೆ. ಕಟ್ಟುನಿಟ್ಟಾದ ಧಾರ್ಮಿಕ ಅರ್ಥದಲ್ಲಿ, ಅವನಿಗೆ ತನ್ನನ್ನು ಅಧೀನಪಡಿಸಿಕೊಳ್ಳುತ್ತಾನೆ. . . . ರಾಷ್ಟ್ರವು ಶಾಶ್ವತವೆಂದು ಕಲ್ಪಿಸಲ್ಪಡುತ್ತದೆ, ಮತ್ತು ಅವಳ ನಿಷ್ಠೆಯ ಪುತ್ರರ ಸಾವುಗಳು, ಅವಳ ಅಮರವಾದ ಕೀರ್ತಿ ಮತ್ತು ಮಹಿಮೆಗೆ ಕೂಡಿಸುತ್ತದೆ.”—ಜೆ. ಪೌಲ್ ವಿಲಿಯಮ್ಸ್ರಿಂದ ವಾಟ್ ಅಮೆರಿಕನ್ಸ್ ಬಿಲೀವ್ ಆ್ಯಂಡ್ ಹೌ ದೆ ವರ್ಷಿಪ್ ಎಂಬ ಪುಸ್ತಕದ ಪುಟ 359 ರಲ್ಲಿ ಕಾರ್ಲ್ಟನ್ ಜೆ.ಎಫ್. ಹೇಸ್, ಇವರ ಉದ್ಧರಣ.
d ಉದಾಹರಣೆಗೆ, ಸಪ್ಟಂಬರ 1, 1971ರ ವಾಚ್ಟವರ್ ಸಂಚಿಕೆಗಳ ಪುಟ 520; ಜೂನ್ 15, 1974ರ ಪುಟ 373; ಜೂನ್ 1, 1975ರ ಪುಟ 341; ಫೆಬ್ರವರಿ 1, 1979ರ ಪುಟ 23; ಜೂನ್ 1, 1979ರ ಪುಟ 20; ಮೇ 15, 1980ರ ಪುಟ 10 ನೋಡಿರಿ.
[Picture on page 195]
ಕಾಡು ಮೃಗದ ವಿಗ್ರಹಕ್ಕೆ ಶ್ವಾಸವನ್ನು ಕೊಡುವಂತೆ ಅನುಮತಿ ನೀಡಲಾಯಿತು