ಕಾಡು ಮೃಗ ಮತ್ತು ಅದರ ಸಂಖ್ಯೆಯನ್ನು ಗುರುತಿಸುವುದು
ಒಂದು ರಹಸ್ಯವನ್ನು ಬಿಡಿಸುವುದು ನಿಮಗೆ ಇಷ್ಟಕರವಾದ ವಿಷಯವಾಗಿದೆಯೋ? ಇದನ್ನು ಮಾಡಲಿಕ್ಕಾಗಿ ನೀವು ಕಟ್ಟಕಡೆಗೆ ಉತ್ತರವನ್ನು ಕಂಡುಕೊಳ್ಳುವಂತೆ ನಿಮಗೆ ಸಹಾಯಮಾಡುವಂಥ ಸುಳಿವುಗಳಿಗಾಗಿ ನೀವು ಹುಡುಕಾಟ ನಡಿಸುತ್ತೀರಿ. ದೇವರು ತನ್ನ ಪ್ರೇರಿತ ಗ್ರಂಥದಲ್ಲಿ, ಪ್ರಕಟನೆ 13ನೆಯ ಅಧ್ಯಾಯದ ಕಾಡು ಮೃಗದ ಹೆಸರು ಅಥವಾ ಗುರುತಾಗಿರುವ ಸಂಖ್ಯೆ 666ಕ್ಕೆ ಸಂಬಂಧಿಸಿದ ಅಗತ್ಯವಾದ ಸುಳಿವುಗಳನ್ನು ಒದಗಿಸುತ್ತಾನೆ.
ಈ ಲೇಖನದಲ್ಲಿ, ಮೃಗದ ಗುರುತಿನ ಅರ್ಥವನ್ನು ಬಯಲುಪಡಿಸಲಿರುವ ನಾಲ್ಕು ಮುಖ್ಯ ತರ್ಕಸರಣಿಗಳನ್ನು, ಅಂದರೆ ಅತ್ಯಾವಶ್ಯಕ ಸುಳಿವುಗಳನ್ನು ನಾವು ನೋಡಲಿರುವೆವು. ಈ ವಿಷಯಗಳನ್ನು ನಾವು ಪರಿಗಣಿಸುವೆವು: (1) ಕೆಲವೊಮ್ಮೆ ಬೈಬಲ್ ಹೆಸರುಗಳು ಹೇಗೆ ಆಯ್ಕೆಮಾಡಲ್ಪಡುತ್ತವೆ, (2) ಕಾಡು ಮೃಗವು ಏನಾಗಿದೆ, (3) ಸಂಖ್ಯೆ 666 ‘ಮನುಷ್ಯನ ಸಂಖ್ಯೆ’ಯಾಗಿರುವುದರ ಅರ್ಥವೇನು, ಮತ್ತು (4) ಸಂಖ್ಯೆ 6ರ ಸೂಚಿತಾರ್ಥವೇನು ಮತ್ತು ಇದು ಮೂರು ಸಂಖ್ಯೆಗಳಲ್ಲಿ ಅಂದರೆ 600+60+6 ಎಂದು ಅಥವಾ 666 ಎಂದು ಬರೆಯಲಾಗಿರುವುದೇಕೆ?—ಪ್ರಕಟನೆ 13:18.
ಬೈಬಲ್ ಹೆಸರುಗಳು—ಕೇವಲ ಗುರುತುಪಟ್ಟಿಗಳಿಗಿಂತಲೂ ಹೆಚ್ಚನ್ನು ಒಳಗೂಡಿವೆ
ವಿಶೇಷವಾಗಿ ದೇವರಿಂದ ಕೊಡಲ್ಪಟ್ಟ ಬೈಬಲ್ ಹೆಸರುಗಳು ಅನೇಕವೇಳೆ ವಿಶೇಷ ಮಹತ್ವಾರ್ಥವುಳ್ಳವುಗಳಾಗಿವೆ. ಉದಾಹರಣೆಗೆ, ಅಬ್ರಾಮನು ದೊಡ್ಡ ಸಮುದಾಯಕ್ಕೆ ಮೂಲಪಿತನಾಗಲಿದ್ದುದರಿಂದ, ದೇವರು ಈ ಮೂಲಪಿತನ ಹೆಸರನ್ನು ಅಬ್ರಹಾಮನೆಂದು ಬದಲಾಯಿಸಿದನು. ಈ ಹೆಸರಿನ ಅರ್ಥ ‘ಅನೇಕ ಜನಾಂಗಗಳ ಮೂಲಪಿತ’ ಎಂದಾಗಿದೆ. (ಆದಿಕಾಂಡ 17:5) ಮರಿಯಳ ಭಾವೀ ಮಗುವಿಗೆ ಯೇಸು ಎಂದು ಹೆಸರಿಡುವಂತೆ ದೇವರು ಯೋಸೇಫ ಮರಿಯರಿಗೆ ಹೇಳಿದನು. ಆ ಹೆಸರಿನ ಅರ್ಥ “ಯೆಹೋವನು ರಕ್ಷಣೆಯಾಗಿದ್ದಾನೆ” ಎಂದಾಗಿತ್ತು. (ಮತ್ತಾಯ 1:21; ಲೂಕ 1:31) ಈ ಅರ್ಥಪೂರ್ಣ ಹೆಸರಿಗೆ ಹೊಂದಿಕೆಯಲ್ಲಿ, ಯೇಸುವಿನ ಶುಶ್ರೂಷೆ ಮತ್ತು ಯಜ್ಞಾರ್ಪಿತ ಮರಣದ ಮೂಲಕ ಯೆಹೋವನು ನಮ್ಮ ರಕ್ಷಣೆಯನ್ನು ಸಾಧ್ಯಗೊಳಿಸಿದನು.—ಯೋಹಾನ 3:16.
ಅದೇ ರೀತಿಯಲ್ಲಿ, ದೇವರಿಂದ ಕೊಡಲ್ಪಟ್ಟ 666 ಎಂಬ ಸಂಖ್ಯಾರ್ಥಕ ಹೆಸರು, ಮೃಗದ ಗುಣವೈಶಿಷ್ಟ್ಯವೆಂದು ದೇವರು ಯಾವುದನ್ನು ಪರಿಗಣಿಸುತ್ತಾನೋ ಅದನ್ನು ಖಂಡಿತವಾಗಿಯೂ ಪ್ರತಿನಿಧಿಸಲೇಬೇಕು. ಸಹಜವಾಗಿಯೇ, ಆ ವಿಶಿಷ್ಟ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನಾವು ಮೊದಲಾಗಿ ಮೃಗವನ್ನು ಗುರುತಿಸುವ ಮತ್ತು ಅದರ ಚಟುವಟಿಕೆಗಳ ಕುರಿತು ಕಲಿಯುವ ಅಗತ್ಯವಿದೆ.
ಮೃಗವು ಬಯಲುಪಡಿಸಲ್ಪಟ್ಟದ್ದು
ಸಾಂಕೇತಿಕ ಮೃಗಗಳ ಅರ್ಥದ ಮೇಲೆ ಬೈಬಲಿನ ದಾನಿಯೇಲ ಪುಸ್ತಕವು ಬಹಳಷ್ಟು ಬೆಳಕನ್ನು ಬೀರುತ್ತದೆ. ಏಳನೆಯ ಅಧ್ಯಾಯವು, ಸಿಂಹ, ಕರಡಿ, ಚಿರತೆ, ಹಾಗೂ ಕಬ್ಬಿಣದ ದೊಡ್ಡ ಹಲ್ಲುಗಳಿದ್ದ ಭಯಂಕರವಾದ “ನಾಲ್ಕು ದೊಡ್ಡ ಮೃಗಗಳ” ಸುಸ್ಪಷ್ಟ ಚಿತ್ರಣವನ್ನು ಒಳಗೂಡಿದೆ. (ದಾನಿಯೇಲ 7:2-7) ದಾನಿಯೇಲನು ನಮಗೆ ಹೇಳುವುದೇನೆಂದರೆ, ಈ ಮೃಗಗಳು ವಿಸ್ತಾರವಾದ ಸಾಮ್ರಾಜ್ಯದಾದ್ಯಂತ ಅನುಕ್ರಮವಾಗಿ ಆಳಲಿರುವಂಥ “ರಾಜರನ್ನು” (NW) ಅಥವಾ ರಾಜಕೀಯ ರಾಜ್ಯಗಳನ್ನು ಪ್ರತಿನಿಧಿಸುತ್ತವೆ.—ದಾನಿಯೇಲ 7:17, 23.
ಪ್ರಕಟನೆ 13:1, 2ರ ಮೃಗದ ಕುರಿತು ಇಂಟರ್ಪ್ರಿಟರ್ಸ್ ಡಿಕ್ಷನೆರಿ ಆಫ್ ದ ಬೈಬಲ್ ಸೂಚಿಸಿ ಹೇಳುವುದೇನೆಂದರೆ, ಇದು “ದಾನಿಯೇಲನ ದರ್ಶನದ ನಾಲ್ಕು ಮೃಗಗಳ ಎಲ್ಲಾ ಗುಣಲಕ್ಷಣಗಳನ್ನು ತನ್ನಲ್ಲೇ ವಿಲೀನಗೊಳಿಸಿಕೊಳ್ಳುತ್ತದೆ . . . ಇದಕ್ಕನುಗುಣವಾಗಿ, [ಪ್ರಕಟನೆಯ] ಈ ಮೊದಲ ಮೃಗವು, ಲೋಕದಲ್ಲಿ ದೇವರಿಗೆ ವಿರುದ್ಧವಾಗಿರುವ ಎಲ್ಲಾ ರಾಜಕೀಯ ಆಳ್ವಿಕೆಯ ಸಂಯೋಜಿತ ಶಕ್ತಿಗಳನ್ನು ಪ್ರತಿನಿಧಿಸುತ್ತದೆ.” ಈ ಅಭಿಪ್ರಾಯೋಕ್ತಿಯು ಪ್ರಕಟನೆ 13:7ರಿಂದ ದೃಢೀಕರಿಸಲ್ಪಟ್ಟಿದೆ. ಮೃಗದ ಕುರಿತು ಈ ವಚನವು ಹೇಳುವುದು: “ಸಕಲ ಕುಲ ಪ್ರಜೆ ಭಾಷೆ ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.”a (ಓರೆ ಅಕ್ಷರಗಳು ನಮ್ಮವು.)
ಬೈಬಲು ಮೃಗಗಳನ್ನು ಮಾನವ ಆಳ್ವಿಕೆಯ ಸಂಕೇತಗಳೋಪಾದಿ ಏಕೆ ಉಪಯೋಗಿಸುತ್ತದೆ? ಕಡಿಮೆಪಕ್ಷ ಎರಡು ಕಾರಣಗಳಿಗಾಗಿ. ಮೊದಲನೆಯದಾಗಿ, ಶತಮಾನಗಳಿಂದಲೂ ಸರಕಾರಗಳು ಒಟ್ಟುಗೂಡಿಸಿಕೊಂಡಿರುವ ರಕ್ತಪಾತದ ಮೃಗೀಯ ದಾಖಲೆಯ ಕಾರಣದಿಂದಲೇ. ವಿಲ್ ಮತ್ತು ಎರೀಯಲ್ ಡ್ಯುರಾಂಟ್ ಎಂಬ ಇತಿಹಾಸಕಾರರು ಬರೆದುದು: “ಯುದ್ಧವು ಇತಿಹಾಸದ ನಿರಂತರ ವೈಶಿಷ್ಟ್ಯವಾಗಿದೆ ಮತ್ತು ನಾಗರಿಕತೆ ಹಾಗೂ ಪ್ರಜಾಪ್ರಭುತ್ವವು ದೃಢವಾಗಿ ಸ್ಥಾಪಿತವಾಗಿರುವುದಾದರೂ ಯುದ್ಧವೇನೂ ಕಡಿಮೆಯಾಗಿಲ್ಲ.” ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ’ ಎಂಬುದು ಎಷ್ಟು ನಿಜವಾಗಿದೆ! (ಪ್ರಸಂಗಿ 8:9) ಎರಡನೆಯ ಕಾರಣವು, ‘ಆ ಮೃಗಕ್ಕೆ ಘಟಸರ್ಪನಾದ [ಸೈತಾನನು] ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ’ ಕೊಟ್ಟಿರುವುದೇ ಆಗಿದೆ. (ಪ್ರಕಟನೆ 12:9; 13:2) ಇದಕ್ಕೆ ಹೊಂದಿಕೆಯಲ್ಲಿ, ಮಾನವ ಆಳ್ವಿಕೆಯು ಪಿಶಾಚನ ಉತ್ಪನ್ನವಾಗಿದ್ದು, ಇದು ಅವನ ಮೃಗೀಯ, ಘಟಸರ್ಪದಂಥ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ.—ಯೋಹಾನ 8:44; ಎಫೆಸ 6:12.
ಆದರೂ, ಪ್ರತಿಯೊಬ್ಬ ಮಾನವ ಅಧಿಪತಿಯು ಸೈತಾನನ ನೇರವಾದ ಸಾಧನವಾಗಿದ್ದಾನೆ ಎಂಬುದನ್ನು ಇದು ಅರ್ಥೈಸುವುದಿಲ್ಲ. ವಾಸ್ತವದಲ್ಲಿ, ಒಂದರ್ಥದಲ್ಲಿ ಮಾನವ ಸಮಾಜಕ್ಕೆ ಸ್ಥಿರತೆಯನ್ನು ಕೊಡುವ ಮೂಲಕ ಮಾನವ ಸರಕಾರಗಳು “ದೇವರ ಸೇವಕ”ನಂತೆ ಕಾರ್ಯನಡಿಸುತ್ತವೆ; ಇವುಗಳಿಲ್ಲದಿರುತ್ತಿದ್ದಲ್ಲಿ ಎಲ್ಲೆಡೆಯೂ ಅವ್ಯವಸ್ಥೆಯೇ ರಾರಾಜಿಸುತ್ತಿದ್ದಿರಸಾಧ್ಯವಿತ್ತು. ಮತ್ತು ಕೆಲವು ನಾಯಕರು ಸತ್ಯಾರಾಧನೆಯಲ್ಲಿ ಭಾಗವಹಿಸುವ ಹಕ್ಕನ್ನೂ ಒಳಗೊಂಡು ಇತರ ಮೂಲಭೂತ ಮಾನವ ಹಕ್ಕುಗಳನ್ನು ಸಂರಕ್ಷಿಸಿದ್ದಾರೆ. ಆದರೆ ಸೈತಾನನು ಇದನ್ನು ಇಷ್ಟಪಡುವುದಿಲ್ಲ. (ರೋಮಾಪುರ 13:3, 4; ಎಜ್ರ 7:11-27; ಅ. ಕೃತ್ಯಗಳು 13:7) ಆದರೂ, ಪಿಶಾಚನ ಪ್ರಭಾವದ ಕಾರಣದಿಂದ ಯಾವ ಮಾನವನೇ ಆಗಲಿ ಅಥವಾ ಮಾನವ ಸಂಸ್ಥೆಯೇ ಆಗಲಿ ಜನರಿಗೆ ನಿತ್ಯವಾದ ಶಾಂತಿ ಮತ್ತು ಭದ್ರತೆಯನ್ನು ತರಲು ಶಕ್ತವಾಗಿಲ್ಲ.b—ಯೋಹಾನ 12:31.
“ಒಂದು ಮಾನವ ಸಂಖ್ಯೆ”
ಸಂಖ್ಯೆ 666ನ್ನು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಮೂರನೆಯ ಸುಳಿವು, ಅದು ‘ಮನುಷ್ಯನ ಸಂಖ್ಯೆ’ ಅಥವಾ ದಿ ಆ್ಯಂಪ್ಲಿಫೈಡ್ ಬೈಬಲ್ ತಿಳಿಸುವಂತೆ “ಒಂದು ಮಾನವ ಸಂಖ್ಯೆ” ಎಂದು ಕರೆಯಲ್ಪಟ್ಟಿರುವುದೇ ಆಗಿದೆ. ಈ ಅಭಿವ್ಯಕ್ತಿಯು ಏಕಮಾತ್ರ ಮಾನವನನ್ನು ಸೂಚಿಸಸಾಧ್ಯವಿಲ್ಲ, ಏಕೆಂದರೆ ಯಾವನೇ ಮಾನವನಲ್ಲ ಬದಲಾಗಿ ಸೈತಾನನು ಮೃಗದ ಮೇಲೆ ಅಧಿಕಾರವುಳ್ಳವನಾಗಿದ್ದಾನೆ. (ಲೂಕ 4:5, 6; 1 ಯೋಹಾನ 5:19; ಪ್ರಕಟನೆ 13:2, 18) ಅದಕ್ಕೆ ಬದಲಾಗಿ, ಈ ಮೃಗವು “ಒಂದು ಮಾನವ ಸಂಖ್ಯೆ”ಯನ್ನು ಅಥವಾ ಗುರುತನ್ನು ಹೊಂದಿರುವುದು, ಇದು ಒಂದು ಮಾನವ ಸಂಘಟನೆಯಾಗಿದೆಯೇ ಹೊರತು ಆತ್ಮಿಕ ಅಥವಾ ಪೈಶಾಚಿಕ ಸಂಘಟನೆಯಲ್ಲ ಎಂಬುದನ್ನೂ ಮತ್ತು ಆದುದರಿಂದಲೇ ಇದು ಕೆಲವೊಂದು ಮಾನವ ಪ್ರವೃತ್ತಿಗಳನ್ನು ವ್ಯಕ್ತಪಡಿಸುತ್ತದೆ ಎಂಬುದನ್ನೂ ಸೂಚಿಸುತ್ತದೆ. ಈ ಪ್ರವೃತ್ತಿಗಳು ಏನಾಗಿರಬಹುದು? ಬೈಬಲ್ ಉತ್ತರಿಸುತ್ತಾ ಹೇಳುವುದು: ‘ಎಲ್ಲಾ [ಮಾನವರು] ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.’ (ರೋಮಾಪುರ 3:23) ಆದುದರಿಂದಲೇ, ಈ ಮೃಗವು “ಒಂದು ಮಾನವ ಸಂಖ್ಯೆ”ಯನ್ನು ಹೊಂದಿರುವುದು, ಸರಕಾರಗಳು ಪಾಪಭರಿತ ಮಾನವ ಸ್ಥಿತಿಗತಿಯನ್ನು ಅಂದರೆ ಪಾಪ ಮತ್ತು ಅಪರಿಪೂರ್ಣತೆಯ ಗುರುತನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಸೂಚಿಸುತ್ತದೆ.
ಇದು ಸತ್ಯವಾಗಿದೆ ಎಂಬುದಕ್ಕೆ ಇತಿಹಾಸವೇ ಪುರಾವೆ ನೀಡುತ್ತದೆ. ಮಾಜಿ ಯು.ಎಸ್. ಸೆಕ್ರಿಟರಿ ಆಫ್ ಸ್ಟೇಟ್ ಹೆನ್ರಿ ಕಿಸಿಂಜರ್ ಹೇಳಿದ್ದು: “ಇಷ್ಟರ ತನಕ ಅಸ್ತಿತ್ವದಲ್ಲಿದ್ದ ಪ್ರತಿಯೊಂದು ನಾಗರಿಕತೆಯು ಕಾಲಕ್ರಮೇಣ ನೆಲಕಚ್ಚಿದೆ. ಇತಿಹಾಸವು ವಿಫಲಗೊಂಡಿರುವ ಪ್ರಯತ್ನಗಳ, ಕೈಗೂಡದ ಮಹತ್ವಾಕಾಂಕ್ಷೆಗಳ ಒಂದು ಕಥೆಯಾಗಿದೆ . . . ಆದುದರಿಂದ, ಇತಿಹಾಸಕಾರನಾಗಿರುವ ಒಬ್ಬನು ದುರಂತದ ವಿಷಯದಲ್ಲಿ ಅನಿವಾರ್ಯತೆಯ ಪರಿಜ್ಞಾನದೊಂದಿಗೆ ಬದುಕಬೇಕಾಗಿದೆ.” ಕಿಸಿಂಜರ್ನ ಯಥಾರ್ಥ ಗುಣವಿಮರ್ಶೆಯು ಈ ಮೂಲಭೂತ ಬೈಬಲ್ ಸತ್ಯಕ್ಕೆ ಸಾಕ್ಷ್ಯ ನೀಡುತ್ತದೆ: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.
ಈಗ ನಾವು ಮೃಗವನ್ನು ಗುರುತಿಸಿ, ದೇವರು ಅದನ್ನು ಹೇಗೆ ಪರಿಗಣಿಸುತ್ತಾನೆ ಎಂಬುದನ್ನು ವಿವೇಚಿಸಿ ತಿಳಿದುಕೊಂಡಿರುವುದರಿಂದ, ನಮ್ಮ ಗೂಢಾರ್ಥದ ಅಂತಿಮ ಭಾಗವನ್ನು, ಅಂದರೆ ಸಂಖ್ಯೆ ಆರು ಮತ್ತು ಅದನ್ನು ಮೂರು ಸಂಖ್ಯೆಗಳಲ್ಲಿ ಬರೆಯಲಾಗಿರುವುದೇಕೆ—666, ಅಥವಾ 600+60+6—ಎಂಬುದನ್ನು ಪರೀಕ್ಷಿಸುವ ಸ್ಥಾನದಲ್ಲಿ ನಾವಿದ್ದೇವೆ.
ಆರು ಎಂಬ ಸಂಖ್ಯೆಯನ್ನು ಮೂರು ಬಾರಿ ಪುನರಾವರ್ತಿಸಿರುವುದೇಕೆ?
ಶಾಸ್ತ್ರವಚನಗಳಲ್ಲಿ ಕೆಲವು ಸಂಖ್ಯೆಗಳಿಗೆ ಸಾಂಕೇತಿಕ ಸೂಚಿತಾರ್ಥವಿದೆ. ಉದಾಹರಣೆಗೆ, ಏಳು ಎಂಬ ಸಂಖ್ಯೆಯು ಅನೇಕವೇಳೆ ದೇವರ ದೃಷ್ಟಿಯಲ್ಲಿ ಪೂರ್ಣವಾಗಿರುವ ಅಥವಾ ಪರಿಪೂರ್ಣವಾಗಿರುವ ಸಂಗತಿಯನ್ನು ಸಂಕೇತಿಸಲು ಉಪಯೋಗಿಸಲ್ಪಡುತ್ತದೆ. ದೃಷ್ಟಾಂತಕ್ಕಾಗಿ, ದೇವರ ಸೃಷ್ಟಿಕಾರಕ ವಾರವು ಏಳು ‘ದಿನಗಳನ್ನು’ ಅಥವಾ ವಿಸ್ತೃತ ಕಾಲಾವಧಿಗಳನ್ನು ಒಳಗೂಡಿದ್ದು, ಈ ಸಮಯದಲ್ಲಿ ದೇವರು ಭೂಮಿಗಾಗಿರುವ ತನ್ನ ಸೃಷ್ಟಿಕಾರಕ ಉದ್ದೇಶವನ್ನು ಪೂರ್ಣವಾಗಿ ಪೂರೈಸುತ್ತಾನೆ. (ಆದಿಕಾಂಡ 1:3–2:3) ದೇವರ “ಮಾತುಗಳು” “ಏಳು ಸಾರಿ ಪುಟಕ್ಕೆ ಹಾಕಿದ” ಚೊಕ್ಕ ಬೆಳ್ಳಿಯಂತಿದ್ದು, ಪರಿಪೂರ್ಣವಾಗಿ ಶುದ್ಧೀಕರಿಸಲ್ಪಟ್ಟಿವೆ. (ಕೀರ್ತನೆ 12:6; ಜ್ಞಾನೋಕ್ತಿ 30:5, 6) ಕುಷ್ಠರೋಗಿಯಾಗಿದ್ದ ನಾಮಾನನಿಗೆ ಯೊರ್ದನ್ ಹೊಳೆಗೆ ಹೋಗಿ ಏಳು ಸಾರಿ ಸ್ನಾನಮಾಡುವಂತೆ ಹೇಳಲಾಯಿತು, ತದನಂತರವೇ ಅವನು ಸಂಪೂರ್ಣವಾಗಿ ಗುಣಮುಖನಾದನು.—2 ಅರಸುಗಳು 5:10, 14.
ಆರು ಎಂಬ ಸಂಖ್ಯೆಯು ಏಳಕ್ಕಿಂತ ಒಂದು ಕಡಿಮೆಯಾಗಿದೆ. ಹೀಗಿರುವುದರಿಂದ ಇದು ದೇವರ ದೃಷ್ಟಿಯಲ್ಲಿ ಅಪರಿಪೂರ್ಣವಾದ, ಅಥವಾ ದೋಷವುಳ್ಳ ವಿಷಯವೊಂದಕ್ಕೆ ಸೂಕ್ತವಾದ ಸಂಕೇತವಾಗಿಲ್ಲವೋ? ಖಂಡಿತವಾಗಿಯೂ ಹೌದು! (1 ಪೂರ್ವಕಾಲವೃತ್ತಾಂತ 20:6, 7) ಅಷ್ಟುಮಾತ್ರವಲ್ಲದೆ, 666ರಲ್ಲಿ ಆರು ಎಂಬ ಸಂಖ್ಯೆಯನ್ನು ಮೂರು ಬಾರಿ ಪುನರಾವರ್ತಿಸಿರುವುದು, ಆ ಅಪರಿಪೂರ್ಣತೆಯನ್ನು ಬಲವಾಗಿ ಒತ್ತಿಹೇಳುತ್ತದೆ. ಈಗಾಗಲೇ ನಾವು ಪರಿಗಣಿಸಿರುವಂತೆ, 666 ಎಂಬುದು “ಒಂದು ಮಾನವ ಸಂಖ್ಯೆ”ಯಾಗಿದೆ ಎಂಬ ವಾಸ್ತವಾಂಶವು ಸಹ ಇದೇ ಸರಿಯಾದ ಅರ್ಥವಾಗಿದೆ ಎಂಬುದನ್ನು ರುಜುಪಡಿಸುತ್ತದೆ. ಹೀಗೆ, ಮೃಗದ ಇತಿಹಾಸ, ಅದರ “ಮಾನವ ಸಂಖ್ಯೆ,” ಮತ್ತು 666 ಎಂಬ ಸಂಖ್ಯೆ—ಇದೆಲ್ಲವೂ ಒಂದೇ ಒಂದು ಸುಸ್ಪಷ್ಟ ಮುಕ್ತಾಯಕ್ಕೆ ಕೈತೋರಿಸುತ್ತದೆ; ಅದೇನೆಂದರೆ ಯೆಹೋವನ ದೃಷ್ಟಿಯಲ್ಲಿ ಸಂಪೂರ್ಣ ಕುಂದುಕೊರತೆ ಹಾಗೂ ವೈಫಲ್ಯ.
ಮೃಗದ ಕುಂದುಕೊರತೆಗಳ ಕುರಿತಾದ ಕಣ್ಣಿಗೆ ಕಟ್ಟುವಂಥ ವರ್ಣನೆಯು, ಪುರಾತನ ಬಾಬೆಲಿನ ರಾಜನಾಗಿದ್ದ ಬೇಲ್ಶಚ್ಚರನ ಬಗ್ಗೆ ಏನು ಹೇಳಲ್ಪಟ್ಟಿತೋ ಅದನ್ನು ನಮ್ಮ ನೆನಪಿಗೆ ತರುತ್ತದೆ. ದಾನಿಯೇಲನ ಮೂಲಕ ಯೆಹೋವನು ಆ ಅಧಿಪತಿಗೆ ಹೇಳಿದ್ದು: “ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡು ಬಂದಿದ್ದೀ.” ಅದೇ ರಾತ್ರಿಯಲ್ಲಿ ಬೇಲ್ಶಚ್ಚರನು ಕೊಲ್ಲಲ್ಪಟ್ಟನು, ಮತ್ತು ಪ್ರಬಲವಾಗಿದ್ದ ಬಾಬೆಲ್ ಸಾಮ್ರಾಜ್ಯವು ಕುಸಿದುಬಿತ್ತು. (ದಾನಿಯೇ 5:27, 30) ತದ್ರೀತಿಯಲ್ಲಿ, ರಾಜಕೀಯ ಮೃಗ ಹಾಗೂ ಅದರ ಗುರುತನ್ನು ಹೊಂದಿರುವವರ ಕುರಿತಾದ ದೇವರ ನ್ಯಾಯತೀರ್ಪು, ಆ ಮೃಗ ಮತ್ತು ಅದನ್ನು ಬೆಂಬಲಿಸುವವರ ಅಂತ್ಯವನ್ನು ಅರ್ಥೈಸುತ್ತದೆ. ಆದರೂ, ಈ ವಿದ್ಯಮಾನದಲ್ಲಿ ದೇವರು ಕೇವಲ ಒಂದೇ ಒಂದು ರಾಜಕೀಯ ವ್ಯವಸ್ಥೆಯನ್ನಲ್ಲ ಬದಲಾಗಿ ಮಾನವ ಆಳ್ವಿಕೆಯ ಪ್ರತಿಯೊಂದು ಜಾಡನ್ನೂ ಸಂಪೂರ್ಣವಾಗಿ ನಿರ್ಮೂಲನಮಾಡುವನು. (ದಾನಿಯೇಲ 2:44; ಪ್ರಕಟನೆ 19:19, 20) ಹೀಗಿರುವುದರಿಂದ, ನಾವು ಆ ಮೃಗದ ಮಾರಕ ಗುರುತನ್ನು ಹೊಂದುವುದರಿಂದ ದೂರವಿರುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ!
ಗುರುತು ನಿರೂಪಿಸಲ್ಪಟ್ಟಿರುವುದು
ಪ್ರಕಟನೆ ಪುಸ್ತಕವು, ಸಂಖ್ಯೆ 666ನ್ನು ಪ್ರಕಟಪಡಿಸಿದ ಕೂಡಲೆ ಯಜ್ಞದ ಕುರಿಯಾಗಿರುವ ಯೇಸು ಕ್ರಿಸ್ತನ 1,44,000 ಮಂದಿ ಹಿಂಬಾಲಕರ ಕುರಿತು ತಿಳಿಸುತ್ತದೆ. ಇವರ ಹಣೆಯ ಮೇಲೆ ಯೇಸುವಿನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದೆ. ಈ ಹೆಸರುಗಳು, ಹೆಸರುಗಳನ್ನು ಹೊಂದಿರುವವರು ಯಾರ ವಿಷಯದಲ್ಲಿ ಹೆಮ್ಮೆಯಿಂದ ಸಾಕ್ಷಿ ನೀಡುತ್ತಾರೋ ಆ ಯೆಹೋವನಿಗೆ ಮತ್ತು ಆತನ ಪುತ್ರನಿಗೆ ಸೇರಿದವರಾಗಿದ್ದಾರೆ ಎಂಬುದನ್ನು ಗುರುತಿಸುತ್ತವೆ. ತದ್ರೀತಿಯಲ್ಲಿ, ಯಾರು ಮೃಗದ ಗುರುತನ್ನು ಹೊಂದಿರುತ್ತಾರೋ ಅವರು ತಾವು ಮೃಗಕ್ಕೆ ದಾಸರಾಗಿದ್ದೇವೆ ಎಂಬುದನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಾರೆ. ಹೀಗೆ, ಸಾಂಕೇತಿಕವಾಗಿ ಹೇಳುವುದಾದರೆ, ಬಲಗೈಯ ಮೇಲಾಗಲಿ ಹಣೆಯ ಮೇಲಾಗಲಿ ಇರುವ ಗುರುತು, ಈ ಗುರುತನ್ನು ಹೊಂದಿರುವ ವ್ಯಕ್ತಿಯು ಮೃಗದಂತಿರುವ ಲೋಕದ ರಾಜಕೀಯ ವ್ಯವಸ್ಥೆಗಳಿಗೆ ಆರಾಧನಾಭರಿತ ಬೆಂಬಲವನ್ನು ಕೊಡುವವನಾಗಿದ್ದಾನೆ ಎಂಬುದನ್ನು ಗುರುತಿಸುವ ಒಂದು ಸಂಕೇತವಾಗಿದೆ. ಈ ಗುರುತನ್ನು ಹೊಂದಿರುವವರು, ಯೋಗ್ಯವಾಗಿ ದೇವರಿಗೆ ಸೇರಬೇಕಾಗಿರುವುದನ್ನು “ಕೈಸರನಿಗೆ” ಕೊಡುತ್ತಾರೆ. (ಲೂಕ 20:25; ಪ್ರಕಟನೆ 13:4, 8; 14:1) ಅವರು ಇದನ್ನು ಹೇಗೆ ಮಾಡುತ್ತಾರೆ? ರಾಜಕೀಯ ಸರಕಾರಕ್ಕೆ, ಅದರ ಸಂಕೇತಗಳಿಗೆ, ಮತ್ತು ನಿರೀಕ್ಷೆ ಹಾಗೂ ರಕ್ಷಣೆಗಾಗಿ ಅವರು ಯಾವುದರ ಮೇಲೆ ಆತುಕೊಳ್ಳುತ್ತಾರೋ ಆ ಮಿಲಿಟರಿ ಶಕ್ತಿಗೆ ಆರಾಧನಾಭರಿತ ಸನ್ಮಾನವನ್ನು ಕೊಡುವ ಮೂಲಕವೇ. ಸತ್ಯ ದೇವರಿಗೆ ಅವರು ಸಲ್ಲಿಸುವ ಯಾವುದೇ ಆರಾಧನೆಯು ಕೇವಲ ಬಾಯುಪಚಾರದ ಸೇವೆಯಾಗಿದೆ.
ಇದಕ್ಕೆ ತದ್ವಿರುದ್ಧವಾಗಿ ಬೈಬಲು ನಮ್ಮನ್ನು ಉತ್ತೇಜಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ; ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” (ಕೀರ್ತನೆ 146:3, 4) ಯಾರು ಈ ವಿವೇಕಭರಿತ ಸಲಹೆಗೆ ಕಿವಿಗೊಡುತ್ತಾರೋ ಅವರು, ಸರಕಾರಗಳು ತಮ್ಮ ವಾಗ್ದಾನಗಳನ್ನು ಪೂರೈಸಲು ತಪ್ಪಿಹೋಗುವಾಗ ಅಥವಾ ಆಡಳಿತ ಕೌಶಲವುಳ್ಳ ನಾಯಕರು ತಮ್ಮ ಉನ್ನತ ಸ್ಥಾನಗಳನ್ನು ಕಳೆದುಕೊಳ್ಳುವಾಗ ಸ್ವಲ್ಪವೂ ಭ್ರಮನಿರಸನಗೊಳ್ಳುವುದಿಲ್ಲ.—ಜ್ಞಾನೋಕ್ತಿ 1:33.
ಇದು, ಸತ್ಯ ಕ್ರೈಸ್ತರು ಮಾನವಕುಲದ ದಿಕ್ಕೆಟ್ಟ ಸ್ಥಿತಿಯನ್ನು ನೋಡಿ ಕೈಕಟ್ಟಿ ಕುಳಿತುಕೊಳ್ಳುತ್ತಾರೆ ಎಂಬುದನ್ನು ಅರ್ಥೈಸುವುದಿಲ್ಲ. ಅದಕ್ಕೆ ಬದಲಾಗಿ, ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲಿರುವ ಏಕಮಾತ್ರ ಸರಕಾರದ ಕುರಿತು, ತಾವು ಪ್ರತಿನಿಧಿಸುವಂಥ ದೇವರ ರಾಜ್ಯದ ಕುರಿತು ಅವರು ಬಹಿರಂಗವಾಗಿ ಸಾರುತ್ತಾರೆ.—ಮತ್ತಾಯ 24:14.
ದೇವರ ರಾಜ್ಯ—ಮಾನವಕುಲದ ಏಕಮಾತ್ರ ನಿರೀಕ್ಷೆ
ಯೇಸು ಭೂಮಿಯಲ್ಲಿದ್ದಾಗ ಅವನ ಸಾರುವಿಕೆಯ ಮುಖ್ಯ ವಿಷಯವು ದೇವರ ರಾಜ್ಯವೇ ಆಗಿತ್ತು. (ಲೂಕ 4:43) ಕೆಲವೊಮ್ಮೆ ಕರ್ತನ ಪ್ರಾರ್ಥನೆ ಎಂದು ಕರೆಯಲ್ಪಡುವ ತನ್ನ ಮಾದರಿ ಪ್ರಾರ್ಥನೆಯಲ್ಲಿ, ಆ ರಾಜ್ಯದ ಬರುವಿಕೆಗಾಗಿ ಮತ್ತು ಭೂಮಿಯ ಮೇಲೆ ದೇವರ ಚಿತ್ತದ ನೆರವೇರುವಿಕೆಗಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9, 10) ಆ ರಾಜ್ಯವು ಇಡೀ ಭೂಮಿಯ ಮೇಲೆ ಆಳ್ವಿಕೆ ನಡಿಸುವ ಒಂದು ಸರಕಾರವಾಗಿದೆ; ಇದು ಭೂಮಿಯ ಒಂದು ರಾಜಧಾನಿಯಿಂದಲ್ಲ ಬದಲಾಗಿ ಸ್ವರ್ಗದಿಂದ ಆಳ್ವಿಕೆ ನಡಿಸುತ್ತದೆ. ಆದುದರಿಂದಲೇ ಯೇಸು ಅದನ್ನು “ಪರಲೋಕರಾಜ್ಯ” ಎಂದು ಕರೆದನು.—ಮತ್ತಾಯ 11:12.
ತನ್ನ ಭಾವೀ ಪ್ರಜೆಗಳಿಗಾಗಿ ತನ್ನ ಪ್ರಾಣವನ್ನೇ ತ್ಯಾಗಮಾಡಿದ ಯೇಸು ಕ್ರಿಸ್ತನಲ್ಲದೆ ಇನ್ಯಾರು ಆ ರಾಜ್ಯದ ರಾಜರಾಗಲು ತಕ್ಕ ಯೋಗ್ಯತೆಯನ್ನು ಪಡೆದಿದ್ದಾರೆ? (ಯೆಶಾಯ 9:6, 7; ಯೋಹಾನ 3:16) ಈಗ ಬಲಿಷ್ಠ ಆತ್ಮ ವ್ಯಕ್ತಿಯಾಗಿರುವ ಈ ಪರಿಪೂರ್ಣ ರಾಜನು, ಅತಿ ಬೇಗನೆ ಆ ಕಾಡು ಮೃಗವನ್ನು, ಅದರ ಅಧಿಪತಿಗಳನ್ನು, ಮತ್ತು ಅದರ ಸೈನಿಕರನ್ನು “ಗಂಧಕದಿಂದ ಉರಿಯುವ ಬೆಂಕಿಯ ಕೆರೆ”ಗೆ ದೊಬ್ಬಲಿದ್ದಾನೆ. ಇದು ಸಂಪೂರ್ಣ ನಾಶನದ ಸಂಕೇತವಾಗಿದೆ. ಆದರೆ ಇಷ್ಟಕ್ಕೇ ಎಲ್ಲವೂ ಕೊನೆಗೊಳ್ಳುವುದಿಲ್ಲ. ಯೇಸುವು ಸೈತಾನನನ್ನೂ ನಿರ್ಮೂಲನಮಾಡಲಿದ್ದಾನೆ, ಇದನ್ನು ಯಾವ ಮಾನವನೂ ಎಂದಿಗೂ ಮಾಡಲಾರನು.—ಪ್ರಕಟನೆ 11:15; 19:16, 19-21; 20:2, 10.
ದೇವರ ರಾಜ್ಯವು ಅದರ ಎಲ್ಲಾ ವಿಧೇಯ ಪ್ರಜೆಗಳಿಗೆ ಶಾಂತಿಯನ್ನು ತರುವುದು. (ಕೀರ್ತನೆ 37:11, 29; 46:8, 9) ದುಃಖ, ನೋವು, ಮತ್ತು ಮರಣವು ಸಹ ಇನ್ನಿರುವುದಿಲ್ಲ. ಮೃಗದ ಹೆಸರಿನಿಂದ ತಮ್ಮನ್ನು ಗುರುತಿಸಿಕೊಳ್ಳದಿರುವಂಥ ಜನರಿಗೆ ಎಷ್ಟು ಮಹಿಮಾಯುತವಾದ ಪ್ರತೀಕ್ಷೆಯು ಕಾದಿರುವುದು!—ಪ್ರಕಟನೆ 21:3, 4.
[ಪಾದಟಿಪ್ಪಣಿಗಳು]
a ಈ ವಚನಗಳ ವಿವರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 28ನೆಯ ಅಧ್ಯಾಯವನ್ನು ನೋಡಿರಿ.
b ಮಾನವ ಆಳ್ವಿಕೆಯು ಅನೇಕವೇಳೆ ಮೃಗೀಯವಾಗಿರುತ್ತದೆ ಎಂಬುದನ್ನು ಸತ್ಯ ಕ್ರೈಸ್ತರು ಮನಗಂಡಿದ್ದಾರಾದರೂ, ಬೈಬಲ್ ಮಾರ್ಗದರ್ಶಿಸುವಂತೆಯೇ ಅವರು ಸರಕಾರದ ‘ಮೇಲಧಿಕಾರಿಗಳಿಗೆ’ ತಮ್ಮನ್ನು ಅಧೀನಪಡಿಸಿಕೊಳ್ಳುತ್ತಾರೆ. (ರೋಮಾಪುರ 13:1) ಆದರೂ, ಇಂಥ ಅಧಿಕಾರಿಗಳು ದೇವರ ನಿಯಮಕ್ಕೆ ವಿರುದ್ಧವಾಗಿ ಕ್ರಿಯೆಗೈಯುವಂತೆ ಅವರಿಗೆ ಆಜ್ಞೆ ನೀಡುವಾಗ, ಅವರು ‘ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗುತ್ತಾರೆ.’—ಅ. ಕೃತ್ಯಗಳು 5:29.
[ಪುಟ 5ರಲ್ಲಿರುವ ಚೌಕ]
666ರ ಅರ್ಥದ ಸುಳಿವುಗಳು
1. ಅಬ್ರಹಾಮ, ಯೇಸು, ಹಾಗೂ ಇನ್ನಿತರರ ಹೆಸರುಗಳಂತೆಯೇ, ಬೈಬಲ್ ಹೆಸರುಗಳು ಅನೇಕವೇಳೆ ಆ ಹೆಸರನ್ನು ಹೊಂದಿರುವ ವ್ಯಕ್ತಿಯ ಪ್ರವೃತ್ತಿಗಳು ಅಥವಾ ಗುಣಲಕ್ಷಣಗಳ ಕುರಿತು ಏನನ್ನಾದರೂ ತಿಳಿಯಪಡಿಸುತ್ತವೆ. ತದ್ರೀತಿಯಲ್ಲಿ, ಮೃಗದ ಸಂಖ್ಯಾರ್ಥಕ ಹೆಸರು ಸಹ ಅದರ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತದೆ.
2. ಬೈಬಲಿನ ದಾನಿಯೇಲ ಪುಸ್ತಕದಲ್ಲಿ, ಬೇರೆ ಬೇರೆ ಮೃಗಗಳು ಅನುಕ್ರಮವಾಗಿ ಆಳುವಂಥ ಮಾನವ ರಾಜ್ಯಗಳನ್ನು ಅಥವಾ ಸಾಮ್ರಾಜ್ಯಗಳನ್ನು ಪ್ರತಿನಿಧಿಸುತ್ತವೆ. ಪ್ರಕಟನೆ 13:1, 2ರ ಸಂಯುಕ್ತ ಮೃಗವು, ಸೈತಾನನಿಂದ ಅಧಿಕಾರವನ್ನು ಪಡೆದಿರುವ ಮತ್ತು ಅವನಿಂದ ನಿಯಂತ್ರಿಸಲ್ಪಡುವ ಲೋಕವ್ಯಾಪಕವಾದ ರಾಜಕೀಯ ವ್ಯವಸ್ಥೆಯನ್ನು ಸಂಕೇತಿಸುತ್ತದೆ.
3. ಮೃಗವು “ಮನುಷ್ಯನ ಸಂಖ್ಯೆ” ಅಥವಾ “ಮಾನವ ಸಂಖ್ಯೆ”ಯನ್ನು ಹೊಂದಿರುವುದು, ಇದು ಮಾನವ ಸಂಘಟನೆಯಾಗಿದೆ ದೆವ್ವಗಳದ್ದಲ್ಲ ಎಂಬುದನ್ನು ಸೂಚಿಸುತ್ತದೆ. ಆದುದರಿಂದಲೇ ಇದು ಪಾಪ ಹಾಗೂ ಅಪರಿಪೂರ್ಣತೆಯಿಂದ ಉಂಟಾಗುವ ಮಾನವ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತದೆ.
4. ದೇವರ ದೃಷ್ಟಿಯಲ್ಲಿ ಆರು ಎಂಬ ಸಂಖ್ಯೆಯು ಬೈಬಲಿಗನುಗುಣವಾಗಿ ಪೂರ್ಣವಾಗಿರುವ ಅಥವಾ ಪರಿಪೂರ್ಣವಾಗಿರುವ ಏಳು ಎಂಬ ಸಂಖ್ಯೆಗಿಂತ ಕಡಿಮೆಯಾಗಿದ್ದು, ಅಪರಿಪೂರ್ಣತೆಯನ್ನು ಸೂಚಿಸುತ್ತದೆ. 666 ಎಂಬ ಗುರುತು, ಈ ಸಂಖ್ಯೆಯನ್ನು ಮೂರು ಬಾರಿ ಪುನರಾವರ್ತಿಸುವ ಮೂಲಕ ಆ ಕೊರತೆಯನ್ನು ಒತ್ತಿಹೇಳುತ್ತದೆ.
[ಪುಟ 6ರಲ್ಲಿರುವ ಚಿತ್ರಗಳು]
666 ಎಂಬ ಸಂಖ್ಯೆಯು ಉತ್ತಮವಾಗಿ ಸೂಚಿಸುವಂತೆ, ಮಾನವ ಆಳಿಕೆಯು ವೈಫಲ್ಯವಾಗಿ ಪರಿಣಮಿಸಿದೆ
[ಕೃಪೆ]
ಹಸಿವೆಯಿಂದ ಕೃಶವಾಗಿರುವ ಮಗು: UNITED NATIONS/Photo by F. GRIFFING
[ಪುಟ 7ರಲ್ಲಿರುವ ಚಿತ್ರಗಳು]
ಯೇಸು ಕ್ರಿಸ್ತನು ಭೂಮಿಗೆ ಪರಿಪೂರ್ಣ ಆಳ್ವಿಕೆಯನ್ನು ತರುವನು