ಮನುಷ್ಯರನ್ನು ಹಿಡಿಯುವ ಬೆಸ್ತರಾಗಿ ಸೇವೆಮಾಡುವುದು
“ಯೇಸು ಸೀಮೋನನಿಗೆ—ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು [ಸಜೀವವಾಗಿ, NW] ಹಿಡಿಯುವವನಾಗಿರುವಿ.”—ಲೂಕ 5:10.
1, 2. (ಎ) ಮಾನವ ಕುಲದ ಇತಿಹಾಸದಲ್ಲಿ ಮೀನು ಹಿಡಿಯುವಿಕೆ ಯಾವ ಪಾತ್ರವನ್ನು ವಹಿಸಿದೆ? (ಬಿ) ಸುಮಾರು 2,000 ವರ್ಷಗಳ ಪೂರ್ವದಲ್ಲಿ ಯಾವ ಹೊಸ ರೀತಿಯ ಮೀನು ಹಿಡಿಯುವಿಕೆಯು ಪರಿಚಯ ಮಾಡಿಸಲ್ಪಟ್ಟಿತ್ತು?
ಸಾವಿರಾರು ವರ್ಷಗಳಿಂದ, ಮಾನವ ಕುಲವು ಅಹಾರಕ್ಕಾಗಿ ಭೂಮಿಯ ಸಾಗರಗಳಲ್ಲಿ, ಕೊಳಗಳಲ್ಲಿ ಮತ್ತು ನದಿಗಳಲ್ಲಿ ಮೀನು ಹಿಡಿಯುವಿಕೆಯನ್ನು ನಡಿಸಿದೆ. ಪುರಾತನ ಈಜಿಪ್ಟಿನಲ್ಲಿ, ನೈಲ್ ನದಿಯ ಮೀನು ಆಹಾರದ ಒಂದು ಪ್ರಧಾನ ಭಾಗವಾಗಿತ್ತು. ಮೋಶೆಯ ದಿನಗಳಲ್ಲಿ ನೈಲ್ ನದಿಯ ನೀರು ರಕ್ತವಾಗಿ ಮಾರ್ಪಟ್ಟಾಗ, ಉಂಟಾದ ನೀರಿನ ಅಭಾವದಿಂದ ಐಗುಪ್ತ್ಯರು ಬಾಧಿತರಾದರು ಮಾತ್ರವೇ ಅಲ್ಲ ಮೀನುಗಳು ಸತ್ತುಹೋದ ಕಾರಣ ಅವರ ಆಹಾರ ಸಂಗ್ರಹದ ಮೇಲೂ ಪರಿಣಾಮಬೀರಿತ್ತು. ತದನಂತರ, ಸೀನಾಯಿ ಬೆಟ್ಟದ ಬಳಿ ಯೆಹೋವನು ಇಸ್ರಾಯೇಲ್ಯರಿಗೆ ನಿಯಮ ಶಾಸ್ತ್ರವನ್ನು ಕೊಟ್ಟಾಗ, ನಿರ್ದಿಷ್ಟ ಮೀನುಗಳನ್ನು ತಿನ್ನಬಹುದು ಆದರೆ ಬೇರೆಯವುಗಳು ಅಶುದ್ಧವಾದುದರಿಂದ ಅವನ್ನು ತಿನ್ನಕೂಡದು ಎಂದು ಆತನು ಹೇಳಿದ್ದನು. ಇದು, ಇಸ್ರಾಯೇಲ್ಯರು ವಾಗ್ದಾನ ದೇಶಕ್ಕೆ ಬಂದಾಗ, ಮೀನು ತಿನ್ನುವರೆಂದೂ, ಹೀಗೆ ಅವರಲ್ಲಿ ಕೆಲವರು ಬೆಸ್ತರಾಗುವರೆಂದೂ ಸೂಚಿಸಿತ್ತು.—ವಿಮೋಚನಕಾಂಡ 7:20, 21; ಯಾಜಕಕಾಂಡ 11:9-12.
2 ಆದರೂ, ಸುಮಾರು 2,000 ವರ್ಷಗಳ ಹಿಂದೆ, ಇನ್ನೊಂದು ತರದ ಮೀನು ಹಿಡಿಯುವಿಕೆಯು ಮಾನವ ಕುಲಕ್ಕೆ ಪರಿಚಯಿಸಲ್ಪಟ್ಟಿತು. ಅದು ಒಂದು ಆತ್ಮಿಕ ರೀತಿಯ ಮೀನು ಹಿಡಿಯುವಿಕೆಯಾಗಿದ್ದು, ಬೆಸ್ತರಿಗೆ ಮಾತ್ರವಲ್ಲ ಮೀನಿಗೂ ಪ್ರಯೋಜನವಾಗಲಿಕ್ಕಿತ್ತು! ಈ ರೀತಿಯ ಮೀನು ಹಿಡಿಯುವಿಕೆ ಇಂದೂ ನಡಿಸಲ್ಪಡುತ್ತಾ ಇದ್ದು, ಲೋಕವ್ಯಾಪಕವಾಗಿ ಲಕ್ಷಾಂತರ ಜನರಿಗೆ ಹೇರಳವಾದ ಪ್ರಯೋಜನಗಳನ್ನು ತರುತ್ತಿದೆ.
“ಮನುಷ್ಯರನ್ನು ಸಜೀವವಾಗಿ ಹಿಡಿಯುವುದು”
3, 4. ಯಾವ ಇಬ್ಬರು ಬೆಸ್ತರು ಯೇಸು ಕ್ರಿಸ್ತನಲ್ಲಿ ಮಹಾಸಕ್ತಿಯನ್ನು ತೋರಿಸಿದರು?
3 ಈ ಹೊಸ ರೀತಿಯ ಮೀನು ಹಿಡಿಯುವಿಕೆಯನ್ನು ಪರಿಚಯ ಮಾಡಿಸಿದವನಾದ ಯೇಸುವು, ಸಾ.ಶ. 29 ರಲ್ಲಿ ಯೊರ್ದನ್ ಹೊಳೆಯಲ್ಲಿ ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನವನ್ನು ಪಡಕೊಂಡನು. ಕೆಲವು ವಾರಗಳ ಅನಂತರ, ಯೋಹಾನನು ತನ್ನ ಇಬ್ಬರು ಶಿಷ್ಯರಿಗೆ ಯೇಸುವನ್ನು ತೋರಿಸುತ್ತಾ, ಅಂದದ್ದು: “ಅಗೋ, ದೇವರು ನೇಮಿಸಿದ ಕುರಿ!” ಅಂದ್ರೆಯ ಎಂಬ ಹೆಸರಿನ ಈ ಶಿಷ್ಯರಲ್ಲೊಬ್ಬನು, ಬೇಗನೇ ತನ್ನ ಸಹೋದರ ಸೀಮೋನ್ ಪೇತ್ರನಿಗೆ ಹೇಳಿದ್ದು: “ಮೆಸ್ಸೀಯನು ನಮಗೆ ಸಿಕ್ಕಿದನು!” ರಸಕರವಾಗಿಯೇ, ಅಂದ್ರೆಯ ಮತ್ತು ಸೀಮೋನರಿಬ್ಬರೂ ಬೆಸ್ತರ ಕಸಬಿನವರಾಗಿದ್ದರು.—ಯೋಹಾನ 1:35, 36, 40, 41; ಮತ್ತಾಯ 4:18.
4 ಸ್ವಲ್ಪ ಹೆಚ್ಚು ಸಮಯ ದಾಟಿದ ಮೇಲೆ, ಎಲ್ಲಿ ಪೇತ್ರ ಮತ್ತು ಅಂದ್ರೆಯರು ವಾಸಿಸಿದ್ದರೋ ಅದಕ್ಕೆ ಅನತಿದೂರದಲ್ಲಿದ್ದ ಗಲಿಲಾಯ ಸಮುದ್ರದ ಪಕ್ಕದಲ್ಲಿ ಯೇಸು ಜನರ ಗುಂಪುಗಳಿಗೆ ಸಾರುತ್ತಿದ್ದನು. “ಪರಲೋಕ ರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ,” ಎಂದು ಅವನು ಜನರಿಗೆ ಹೇಳುತ್ತಿದ್ದನು. (ಮತ್ತಾಯ 4:13, 17) ಅವನ ಸಂದೇಶವನ್ನು ಕೇಳಲು ಪೇತ್ರ ಮತ್ತು ಅಂದ್ರೆಯರು ಆತುರದಿಂದಿದ್ದರು ಎಂಬದನ್ನು ನಾವು ಊಹಿಸಿಕೊಳ್ಳಬಲ್ಲೆವು. ಆದರೂ, ಯೇಸು ಆಗಲೇ ಹೇಳಲಿದ್ದ ಒಂದು ವಿಷಯವು ಅವರ ಜೀವನವನ್ನು ಸದಾಕಾಲಕ್ಕೂ ಮಾರ್ಪಡಿಸುವುದೆಂದು ಅವರು ನೆನಸಿರಲಿಲ್ಲವೆಂಬದು ಸಂಭವನೀಯ. ಅದಲ್ಲದೆ, ಯೇಸು ಅವರ ಎದುರಲ್ಲಿ ಏನು ಹೇಳಲಿದ್ದನೋ ಮತ್ತು ಮಾಡಲಿದ್ದನೋ ಅದು ಇಂದು ನಮಗೆಲ್ಲರಿಗೆ ಒಂದು ಮಹತ್ವಾರ್ಥವುಳ್ಳದ್ದಾಗಿದೆ.
5. ಬೆಸ್ತನಾಗಿದ್ದ ಪೇತ್ರನು ಯೇಸುವಿಗೆ ಹೇಗೆ ಸೇವೆಯನ್ನು ಸಲ್ಲಿಸ ಶಕ್ತನಾದನು?
5 ನಾವು ಓದುವುದು: “ಒಂದಾನೊಂದು ದಿವಸ ಜನರು ಒತ್ತಾಗಿ ಬಂದು ಆತನ ಮೇಲೆ ಬಿದ್ದುಕೊಂಡು ದೇವರ ವಾಕ್ಯವನ್ನು ಕೇಳುತ್ತಿರಲು ಗೇನೆಜರೇತ್ ಕೆರೆಯ ಅಂಚಿನಲ್ಲಿ ನಿಂತಿದ್ದ ಆತನು ಆ ಕೆರೆಯ ದಡದಲ್ಲಿ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.” (ಲೂಕ 5:1, 2) ಆ ಕಾಲದಲ್ಲಿ, ಬೆಸ್ತರ ಕಸುಬಿನವರು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಕೆಲಸ ಮಾಡುತ್ತಿದ್ದರು, ಮತ್ತು ಈ ಪುರುಷರು ರಾತ್ರಿಯಲ್ಲಿ ಮೀನುಗಾರಿಕೆಯ ಅನಂತರ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ಸಾರುವಂತೆ ಅವರ ದೋಣಿಗಳಲ್ಲಿ ಒಂದನ್ನು ಉಪಯೋಗಿಸಲು ಯೇಸು ನಿರ್ಣಯಿಸಿದನು. “ಆ ದೋಣಿಗಳಲ್ಲಿ ಸೀಮೋನನ ಒಂದು ದೋಣಿಯನ್ನು ಆತನು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಆತನು ಕೂತುಕೊಂಡು ದೋಣಿಯೊಳಗಿಂದಲೇ ಜನರಿಗೆ ಉಪದೇಶ ಮಾಡಿದನು.”—ಲೂಕ 5:3.
6, 7. ಮೀನು ಹಿಡಿಯುವಿಕೆಯನ್ನು ಒಳಗೂಡಿದ್ದ ಯಾವ ಅದ್ಭುತವನ್ನು ಯೇಸು ನಡಿಸಿದನು, ಇದು ಮೀನು ಹಿಡಿಯುವ ಕುರಿತಾದ ಯಾವ ಹೇಳಿಕೆಗೆ ನಡಿಸಿತು?
6 ಆದರೂ, ಜನರ ಗುಂಪಿಗೆ ಕಲಿಸುವುದಕ್ಕಿಂತ ಏನೋ ಹೆಚ್ಚು ವಿಷಯವು ಯೇಸುವಿನ ಮನಸ್ಸಿನಲ್ಲಿತ್ತೆಂಬದನ್ನು ಗಮನಿಸಿರಿ: “ಮಾತಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ—ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ ಎಂದು ಹೇಳಿದನು.” ಈ ಬೆಸ್ತರು ಆವಾಗಲೇ ರಾತ್ರಿಯಿಡೀ ಕೆಲಸಮಾಡಿದ್ದರೆಂಬದನ್ನು ಜ್ಞಾಪಿಸಿಕೊಳ್ಳಿರಿ. ಪೇತ್ರನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆ ಹಾಕುತ್ತೇನೆ,” ಎಂದು ಉತ್ತರಿಸಿದೇನ್ದೂ ಆಶ್ಚರ್ಯವಲ್ಲ. ಅವರು ಇದನ್ನು ಮಾಡಿದಾಗ ಏನು ಸಂಭವಿಸಿತು? “ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದು ಹೋಗುತ್ತಿದ್ದವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಪಾಲುಗಾರರಿಗೆ—ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನು ತುಂಬಿಸಲು ಅವು ಮುಳುಗುವ ಹಾಗಾದವು.”—ಲೂಕ 5:4-7.
7 ಯೇಸು ಒಂದು ಅದ್ಭುತವನ್ನು ಮಾಡಿದ್ದನು. ಸಮುದ್ರದ ಆ ಭಾಗದಲ್ಲಿ ರಾತ್ರಿಯಿಡೀ ಮೀನು ಇರಲಿಲ್ಲ; ಈಗ ಅದು ಮೀನುಗಳಿಂದ ತುಂಬಿಹೋಗಿತ್ತು. ಈ ಮಹತ್ಕಾರ್ಯವು ಪೇತ್ರನ ಮೇಲೆ ಬಲವಾದ ಪರಿಣಾಮ ಬೀರಿತು. “ಸೀಮೋನ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು—ಸ್ವಾಮೀ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗಬೇಕು ಅಂದನು. ಯಾಕಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ವಿಸ್ಮಯ ಹಿಡಿದಿತ್ತು; ಸೀಮೋನನ ಪಾಲುಗಾರರಾಗಿದ್ದಂಥ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆ ವಿಸ್ಮಯಪಟ್ಟರು.” ಯೇಸು ಪೇತ್ರನನ್ನು ಶಾಂತ ಮಾಡಿದನು ಮತ್ತು ಅನಂತರ ಪೇತ್ರನ ಜೀವಿತವನ್ನೇ ಬದಲಾಯಿಸಲಿಕ್ಕಿದ್ದ ಮಾತುಗಳನ್ನು ನುಡಿದನು: “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು [ಸಜೀವವಾಗಿ, NW] ಹಿಡಿಯುವವನಾಗಿರುವಿ.”—ಲೂಕ 5:8-10.
ಮನುಷ್ಯರನ್ನು ಹಿಡಿಯುವ ಬೆಸ್ತರು
8. ‘ಮನುಷ್ಯರನ್ನು ಸಜೀವವಾಗಿ ಹಿಡಿಯುವ’ ಆಮಂತ್ರಣಕ್ಕೆ ನಾಲ್ವರು ಕಸಬುದಾರ ಬೆಸ್ತರು ಹೇಗೆ ಪ್ರತಿಕ್ರಿಯೆ ತೋರಿಸಿದರು?
8 ಹೀಗೆ ಯೇಸು ಮೀನುಗಳನ್ನು ಮನುಷ್ಯರಿಗೆ ಹೋಲಿಸಿದನು, ಮತ್ತು ಈ ದೀನ ಬೆಸ್ತನು ತನ್ನ ಐಹಿಕ ಕಸಬನ್ನು ಬಿಟ್ಟುಕೊಟ್ಟು—ಮನುಷ್ಯರನ್ನು ಸಜೀವವಾಗಿ ಹಿಡಿಯುವ ಒಂದು ಎಷ್ಟೋ ಮಹತ್ತಾದ ರೀತಿಯ ಮೀನು ಹಿಡಿಯುವಿಕೆಯನ್ನು ಮಾಡುವಂತೆ ಆಮಂತ್ರಿಸಿದನು. ಪೇತ್ರ ಮತ್ತು ಅವನ ಸಹೋದರ ಆಂದ್ರೆಯನು ಆ ಆಮಂತ್ರಣವನ್ನು ಸ್ವೀಕರಿಸಿದರು. “ಅವರು ತಮ್ಮ ಬಲೆಗಳನ್ನು ಬಿಟ್ಟು [ಆ ಕೂಡಲೇ, NW] ಆತನ ಹಿಂದೆ ಹೋದರು.” (ಮತ್ತಾಯ 4:18-20) ಅನಂತರ ಯೇಸು, ತಮ್ಮ ದೋಣಿಯಲ್ಲಿ ತಮ್ಮ ಬಲೆಗಳನ್ನು ದುರುಸ್ತು ಮಾಡುತ್ತಿದ್ದ ಯಾಕೋಬ ಮತ್ತು ಯೋಹಾನರನ್ನು ಕರೆದನು. ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ಅವರನ್ನೂ ಆಮಂತ್ರಿಸಿದನು. ಅವರು ಹೇಗೆ ಪ್ರತಿಕ್ರಿಯೆ ತೋರಿಸಿದರು? “ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು.” (ಮತ್ತಾಯ 4:21, 22) ಮನುಷ್ಯಾತ್ಮಗಳ ಬೆಸ್ತನೋಪಾದಿ ಯೇಸು ಕೌಶಲ್ಯ ತೋರಿಸಿದನು. ಈ ಸಂದರ್ಭದಲ್ಲಿ ಅವನು, ನಾಲ್ಕು ಮನುಷ್ಯರನ್ನು ಸಜೀವವಾಗಿ ಹಿಡಿದನು.
9, 10. ಪೇತ್ರ ಮತ್ತು ಅವನ ಸಂಗಡಿಗರು ಯಾವ ನಂಬಿಕೆಯನ್ನು ತೋರಿಸಿದರು, ಮತ್ತು ಅವರು ಆತ್ಮಿಕ ಮೀನು ಹಿಡಿಯುವಿಕೆಯಲ್ಲಿ ಹೇಗೆ ತರಬೇತು ಹೊಂದಿದರು?
9 ಒಬ್ಬ ಕಸುಬುದಾರ ಬೆಸ್ತನು ತಾನು ಹಿಡಿದ ಮೀನು ಮಾರಿ ಜೀವನೋಪಾಯ ನಡಿಸುತ್ತಾನೆ, ಆದರೆ ಆತ್ಮಿಕ ಬೆಸ್ತನು ಅದನ್ನು ಮಾಡ ಸಾಧ್ಯವಿಲ್ಲ. ಆದದರಿಂದ, ಯೇಸುವನ್ನು ಹಿಂಬಾಲಿಸುವುದಕ್ಕಾಗಿ ಎಲ್ಲವನ್ನು ತ್ಯಜಿಸಿದಾಗ ಈ ಶಿಷ್ಯರು ಮಹಾ ನಂಬಿಕೆಯನ್ನು ತೋರಿಸಿದರು. ಆದರೂ, ತಮ್ಮ ಆತ್ಮಿಕ ಮೀನು ಹಿಡಿಯುವಿಕೆಯು ಸಾಫಲ್ಯವಾಗುವುದೆಂಬ ವಿಷಯದಲ್ಲಿ ಅವರಿಗೆ ಯಾವ ಸಂಶಯವೂ ಇರಲಿಲ್ಲ. ಫಲಕೊಡದ ನೀರು ಅಕ್ಷರಶಃ ಮೀನುಗಳಿಂದ ತುಂಬುವಂತೆ ಮಾಡಲು ಯೇಸು ಶಕ್ತನಾಗಿದ್ದನು. ತದ್ರೀತಿಯಲ್ಲಿ, ಇಸ್ರಾಯೇಲ್ ಜನಾಂಗದ ನೀರಿನೊಳಗೆ ತಮ್ಮ ಬಲೆಗಳನ್ನು ಹಾಕಿದಾಗ, ಮನುಷ್ಯರನ್ನು ಅವರು ದೇವರ ಸಹಾಯದಿಂದ ಸಜೀವವಾಗಿ ಹಿಡಿಯುವರೆಂಬ ನಿಶ್ಚಯವು ಶಿಷ್ಯರಿಗೆ ಇರಸಾಧ್ಯವಿತ್ತು. ಆಗ ಪ್ರಾರಂಭಗೊಂಡ ಆತ್ಮಿಕ ಮೀನು ಹಿಡಿಯುವ ಕೆಲಸವು ಮುಂದುವರಿಯುತ್ತಾ ಇದೆ, ಮತ್ತು ಯೆಹೋವನು ಹೇರಳವಾದ ಫಲವನ್ನು ಇನ್ನೂ ಕೊಡುತ್ತಿದ್ದಾನೆ.
10 ಮನುಷ್ಯರನ್ನು ಹಿಡಿಯುವ ಕೆಲಸದಲ್ಲಿ ಆ ಶಿಷ್ಯರಿಗೆ ಎರಡು ವರ್ಷಕ್ಕಿಂತಲೂ ಹೆಚ್ಚು ಸಮಯ ಯೇಸುವಿನಿಂದ ತರಬೇತು ದೊರಕಿತು. ಕೆಲವೊಮ್ಮೆ ಆತನು ಅವರಿಗೆ ಜಾಗ್ರತೆಯ ಸೂಚನೆಗಳನ್ನು ಕೊಟ್ಟನು ಮತ್ತು ಸಾರುವ ಕಾರ್ಯಕ್ಕೆ ತನಗೆ ಮುಂದಾಗಿ ಕಳುಹಿಸಿ ಕೊಟ್ಟನು. (ಮತ್ತಾಯ 10:1-7; ಲೂಕ 10:1-11) ಯೇಸು ಹಿಡುಕೊಡಲ್ಪಟ್ಟು ಕೊಲ್ಲಲ್ಪಟ್ಟಾಗ, ಶಿಷ್ಯರಿಗೆ ಧಕ್ಕೆ ಬಡೆದಂಥಾಯಿತು. ಆದರೆ ಯೇಸುವಿನ ಮರಣದ ಅರ್ಥವು ಇನ್ನು ಮುಂದೆ ಮನುಷ್ಯರನ್ನು ಹಿಡಿಯುವ ಕೆಲಸವು ನಡೆಯದು ಎಂದಾಗಿತ್ತೋ? ಘಟನಾವಳಿಗಳು ಬೇಗನೇ ಉತ್ತರವನ್ನು ಕೊಟ್ಟವು.
ಮಾನವ ಕುಲದ ಸಾಗರದಲ್ಲಿ ಮೀನು ಹಿಡಿಯುವುದು
11, 12. ತನ್ನ ಪುನರುತ್ಥಾನದ ಅನಂತರ, ಯೇಸುವು ಮೀನು ಹಿಡಿಯುವಿಕೆಗೆ ಸಂಬಂಧಿಸಿದ ಯಾವ ಅದ್ಭುತವನ್ನು ನಡಿಸಿದನು?
11 ಯೆರೂಸಲೇಮಿನ ಹೊರಗೆ ಯೇಸುವಿನ ಮರಣ ಮತ್ತು ಪುನರುತ್ಥಾನದ ಸ್ವಲ್ಪ ಸಮಯದಲ್ಲೇ, ಶಿಷ್ಯರು ಗಲಿಲಾಯಕ್ಕೆ ಹಿಂದೆ ಹೋದರು. ಒಂದು ಸಂದರ್ಭದಲ್ಲಿ ಅವರಲ್ಲಿ ಏಳು ಮಂದಿ ಗಲಿಲಾಯ ಸಮುದ್ರದ ಬಳಿ ಒಟ್ಟುಸೇರಿದ್ದರು. ಪೇತ್ರನು ತಾನು ಮೀನು ಹಿಡಿಯಲು ಹೋಗುತ್ತೇನೆಂದು ಹೇಳಿದನು, ಮತ್ತು ಇತರರೂ ಅವನ ಸಂಗಡ ಹೋದರು. ಎಂದಿನಂತೆ ಅವರು ರಾತ್ರಿಯಲ್ಲಿ ಮೀನು ಹಿಡಿಯಲು ಹೋದರು. ವಾಸ್ತವದಲ್ಲಿ ಅವರು ಪುನಃ ಸಮುದ್ರದಲ್ಲಿ ತಮ್ಮ ಬಲೆಯನ್ನು ರಾತ್ರಿಯಿಡೀ ಹಾಕಿದರೂ ಅವರಿಗೆ ಒಂದು ಮೀನೂ ಸಿಗಲಿಲ್ಲ. ಬೆಳಗಾಗುವಾಗ ದಡದಲ್ಲಿ ನಿಂತಿದ್ದ ಒಂದು ಮನುಷ್ಯಾಕೃತಿ ನೀರಿನಿಂದಾಚೆಯಿಂದ ಅವರಿಗೆ ಕರೆಗೊಟ್ಟಿತು: “ಮಕ್ಕಳಿರಾ, ಊಟಕ್ಕೆ ನಿಮಗೆ ಏನೂ ಇಲ್ಲವೇ?” ಶಿಷ್ಯರು ಪ್ರತ್ಯುತ್ತರ ಕೊಟ್ಟರು: “ಇಲ್ಲ!” ಆಗ ದಡದಲ್ಲಿ ನಿಂತಿದ್ದವನು ಅವರಿಗೆ ಅಂದದ್ದು: “‘ನೀವು ದೋಣಿಯ ಬಲಗಡೆಯಲ್ಲಿ ಬಲೆಬೀಸಿದರೆ ಸಿಕ್ಕುವದು.’ ಅವರು ಹಾಗೆ ಬೀಸಿದಾಗ ಮೀನುಗಳು ಬಹಳ ಹೆಚ್ಚಾಗಿ ಸಿಕ್ಕಿದ್ದರಿಂದ ಬಲೆಯನ್ನು ಎಳೆಯುವದಕ್ಕೆ ಆಗದೆ ಹೋಯಿತು.”—ಯೋಹಾನ 21:5, 6.
12 ಎಂಥ ಸ್ತಬ್ಧಗೊಳಿಸುವ ಅನುಭವವು! ಮೀನು ಹಿಡಿಯುವಿಕೆಯನ್ನು ಒಳಗೂಡಿದ್ದ ಆರಂಭದ ಅದ್ಭುತವನ್ನು ಶಿಷ್ಯರು ನೆನಪಿಸಿದ್ದು ಸಂಭವನೀಯ, ಮತ್ತು ಕಡಿಮೆ ಪಕ್ಷ ಅವರಲ್ಲೊಬ್ಬನು ದಡದಲ್ಲಿದ್ದ ಆ ಮನುಷ್ಯಾಕೃತಿ ಯಾರದ್ದು ಎಂದು ಗ್ರಹಿಸಿಕೊಂಡನು. “ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ—ಅವರು ಸ್ವಾಮಿಯವರು ಎಂದು ಹೇಳಿದನು. ಸ್ವಾಮಿಯವರೆಂದು ಸೀಮೋನ ಪೇತ್ರನು ಕೇಳಿ ಮೈಮೇಲೆ ಬಟ್ಟೆಯಿಲ್ಲದವನಾಗಿದ್ದರಿಂದ ಒಲ್ಲಿಯನ್ನು ಸುತ್ತಿಕೊಂಡು ಸಮುದ್ರದಲ್ಲಿ ದುಮುಕಿದನು. ದಡವು ದೂರವಾಗಿರದೆ ಹೆಚ್ಚು ಕಡಿಮೆ ಇನ್ನೂರು ಮೊಳದಲಿದ್ಲರ್ದಿಂದ ಉಳಿದ ಶಿಷ್ಯರು ದೋಣಿಯಲ್ಲಿಯೇ ಬಂದರು.”—ಯೋಹಾನ 21:7, 8.
13. ಯೇಸುವಿನ ದಿವಾರೋಹಣದ ಅನಂತರ ಯಾವ ಅಂತರ್ರಾಷ್ಟ್ರೀಯ ಮೀನು ಹಿಡಿಯುವ ಕಾರ್ಯಕ್ರಮವು ಪ್ರಾರಂಭಿಸಿತು?
13 ಈ ಅದ್ಭುತವು ಏನನ್ನು ಸೂಚಿಸಿತ್ತು? ಮನುಷ್ಯರನ್ನು ಹಿಡಿಯುವ ಬೆಸ್ತರ ಕೆಲಸವು ಮುಗಿದಿರಲಿಲ್ಲ ಎಂಬದನ್ನೇ. ಈ ವಾಸ್ತವಾಂಶವು, ಯೇಸು ಪೇತ್ರನಿಗೆ ಮತ್ತು ಅವನ ಮೂಲಕ ಎಲ್ಲಾ ಶಿಷ್ಯರಿಗೆ—ಯೇಸುವಿನ ಕುರಿಗಳನ್ನು ಮೇಯಿಸುವಂತೆ ಮೂರು ಸಾರಿ ಹೇಳಿದಾಗ, ಒತ್ತಿಹೇಳಲ್ಪಟ್ಟಿತ್ತು. (ಯೋಹಾನ 21:15-17) ಹೌದು, ಒಂದು ಆತ್ಮಿಕ ಉಣಿಸುವಿಕೆಯ ಕಾರ್ಯಕ್ರಮವು ಅವರ ಮುಂದಿತ್ತು. ತನ್ನ ಮರಣಕ್ಕೆ ಮುಂಚಿತವಾಗಿ, ಅವನು ಹೀಗೆ ಪ್ರವಾದಿಸಿದ್ದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವ ಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.” (ಮತ್ತಾಯ 24:14) ಆ ಭವಿಷ್ಯವಾಣಿಯ ಒಂದನೆಯ-ಶತಕದ ನೆರವೇರಿಕೆಯು ಪ್ರಾರಂಭಿಸುವ ಸಮಯವು ಅದಾಗಿತ್ತು. ಅವನ ಶಿಷ್ಯರು ತಮ್ಮ ಬಲೆಗಳನ್ನು ಮಾನವ ಕುಲದ ಸಮುದ್ರದೊಳಗೆ ಆಗಲೇ ಹಾಕಲಿಕ್ಕಿದ್ದರು. ಮತ್ತು ಆ ಬಲೆಗಳು ಖಾಲಿಯಾಗಿ ಮೇಲೆ ಬರಲಿಕ್ಕಿರಲಿಲ್ಲ.—ಮತ್ತಾಯ 28:19, 20.
14. ಯೆರೂಸಲೇಮಿನ ನಾಶನಕ್ಕೆ ಮುಂಚಿನ ವರ್ಷಗಳಲ್ಲಿ ಯೇಸುವಿನ ಶಿಷ್ಯರ ಮೀನು ಹಿಡಿಯುವ ಕೆಲಸವು ಯಾವ ರೀತಿಯಲ್ಲಿ ಆಶೀರ್ವದಿಸಲ್ಪಟ್ಟಿತು?
14 ಪರಲೋಕದಲ್ಲಿ ತನ್ನ ತಂದೆಯ ಸಿಂಹಾಸನಕ್ಕೆ ಏರಿಹೋಗುವ ಮೊದಲು, ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.” (ಅ.ಕೃತ್ಯಗಳು 1:8) ಸಾ.ಶ. 33 ರ ಪಂಚಾಶತ್ತಮ ದಿನದಲ್ಲಿ ಪವಿತ್ರಾತ್ಮವು ಶಿಷ್ಯರ ಮೇಲೆ ಸುರಿಸಲ್ಪಟ್ಟಾಗ, ಅಂತರ್ರಾಷ್ಟ್ರೀಯವಾಗಿ ಆತ್ಮಿಕ ಮೀನು ಹಿಡಿಯುವ ಒಂದು ಮಹಾ ಕೆಲಸವು ಪ್ರಾರಂಭಿಸಿತು. ಆ ಪಂಚಾಶತ್ತಮ ದಿನವೊಂದರಲ್ಲಿಯೇ, ಮೂರು ಸಾವಿರ ಆತ್ಮಗಳು ಸಜೀವವಾಗಿ ಹಿಡಿಯಲ್ಪಟ್ಟವು, ಮತ್ತು ಅನಂತರ ತುಸು ಸಮಯದೊಳಗೆ “ಗಂಡಸರ ಸಂಖ್ಯೆ ಸುಮಾರು ಐದು ಸಾವಿರದ ತನಕ ಬೆಳೆಯಿತು.” (ಅ.ಕೃತ್ಯಗಳು 2:41; 4:4) ಅಭಿವೃದ್ಧಿಯು ಮುಂದುವರಿಯುತ್ತಾ ಹೋಯಿತು. ದಾಖಲೆಯು ನಮಗೆ ಹೇಳುವುದು: “ಮತ್ತು ಇನ್ನು ಎಷ್ಟೋ ಮಂದಿ ಗಂಡಸರೂ ಹೆಂಗಸರೂ ಕರ್ತನಲ್ಲಿ ನಂಬಿಕೆ ಇಡುವವರಾಗಿ ಅವರ ಮಂಡಲಿಯನ್ನು ಸೇರಿಕೊಳ್ಳುತ್ತಿದ್ದರು.” (ಅ.ಕೃತ್ಯಗಳು 5:14) ಬೇಗನೇ, ಸಮಾರ್ಯದವರು ಸುವಾರ್ತೆಗೆ ಪ್ರತಿಕ್ರಿಯೆ ತೋರಿಸಿದರು ಮತ್ತು ತದನಂತರ ಸುನ್ನತಿಯಿಲ್ಲದ ಅನ್ಯರು ಸೇರಿಕೊಂಡರು. (ಅ.ಕೃತ್ಯಗಳು 8:4-8; 10:24, 44-48) ಪಂಚಾಶತ್ತಮದ ನಂತರ ಸುಮಾರು 27 ವರ್ಷಗಳಾದ ಮೇಲೆ, ಅಪೊಸ್ತಲ ಪೌಲನು ಕೊಲೊಸ್ಸೆಯ ಕ್ರೈಸ್ತರಿಗೆ, ಸುವಾರ್ತೆಯು “ಆಕಾಶದ ಕೆಳಗೆ ಸರ್ವ ಸೃಷ್ಟಿಗೆ ಸಾರಲ್ಪಟ್ಟಿತು” ಎಂದು ಬರೆದನು. (ಕೊಲೊಸ್ಸೆ 1:23) ಯೇಸುವಿನ ಶಿಷ್ಯರು ಗಲಿಲಾಯದ ನೀರಿನಿಂದ ಬಹಳ ದೂರದಲ್ಲಿ ಮೀನು ಹಿಡಿದಿದ್ದರು ಎಂಬದು ಸ್ಫುಟ. ರೋಮನ್ ಸಾಮ್ರಾಜ್ಯದ ಸುತ್ತಲೂ ಚದರಿದ್ದ ಯೆಹೂದ್ಯರ ನಡುವೆ ಹಾಗೂ ಫಲಾಪೇಕ್ಷೆಯಿಲ್ಲದ್ದಾಗಿ ತೋರಿದ್ದ ಯೆಹೂದ್ಯೇತರ ಜನತೆಯ ಸಮುದ್ರಗಳ ನಡುವೆ ಅವರು ತಮ್ಮ ಬಲೆಗಳನ್ನು ಹಾಕಿದ್ದರು. ಮತ್ತು ಅವರ ಬಲೆಗಳು ತುಂಬಿ ಮೇಲೆ ಬಂದವು. ಒಂದನೆಯ ಶತಕದ ಕ್ರೈಸ್ತರ ಅಗತ್ಯತೆಗಳಿಗಾಗಿ, ಮತ್ತಾಯ 24:14 ರ ಯೇಸುವಿನ ಪ್ರವಾದನೆಯು ಸಾ.ಶ. 70 ರಲ್ಲಿ ಯೆರೂಸಲೇಮು ನಾಶವಾಗುವ ಮುಂಚೆ ನೆರವೇರಿಕೆಯನ್ನು ಪಡೆಯಿತು.
“ಕರ್ತನ ದಿನದಲ್ಲಿ” ಮನುಷ್ಯರನ್ನು ಹಿಡಿಯುವುದು
15. ಪ್ರಕಟನೆ ಪುಸ್ತಕದಲ್ಲಿ ಯಾವ ಹೆಚ್ಚಿನ ಮೀನು ಹಿಡಿಯುವಿಕೆಯ ಕೆಲಸವು ಪ್ರವಾದಿಸಲ್ಪಟ್ಟಿದೆ, ಮತ್ತು ಅದು ಯಾವಾಗ ನಿರ್ವಹಿಸಲ್ಪಡಲಿಕ್ಕಿತ್ತು?
15 ಆದರೂ, ಮುಂದೆ ಹೆಚ್ಚನ್ನು ಮಾಡಲಿಕ್ಕಿತ್ತು. ಒಂದನೆಯ ಶತಕದ ಅಂತ್ಯದ ಸುಮಾರಿಗೆ, “ಕರ್ತನ ದಿನದಲ್ಲಿ” ಏನೆಲ್ಲಾ ಸಂಭವಿಸಲಿಕ್ಕಿವೆ ಎಂಬದರ ಪ್ರಕಟನೆಯನ್ನು ಜೀವಿತನಾಗಿದ್ದ ಕೊನೆಯ ಅಪೊಸ್ತಲ ಯೋಹಾನನಿಗೆ ಯೆಹೋವನು ದಯಪಾಲಿಸಿದನು. (ಪ್ರಕಟನೆ 1:1, 10) ಇದರ ಒಂದು ಮಹತ್ತಾದ ವೈಶಿಷ್ಟ್ಯವು ಸುವಾರ್ತೆಯನ್ನು ಭೂವ್ಯಾಪಕವಾಗಿ ತಿಳಿಸುವುದಾಗಿತ್ತು. ನಾವು ಓದುವುದು: “ಮತ್ತೊಬ್ಬ ದೇವದೂತನು ಆಕಾಶದ ಮಧ್ಯದಲ್ಲಿ ಹಾರಿ ಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೆ ಮತ್ತು ಸಕಲ ಭಾಷೆಗಳನ್ನಾಡುವವರಿಗೆ ಸಾರಿ ಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.” (ಪ್ರಕಟನೆ 14:6) ದೇವದೂತರ ಮಾರ್ಗದರ್ಶನೆಯ ಕೆಳಗೆ, ದೇವರ ಸೇವಕರು ಸುವಾರ್ತೆಯನ್ನು ಕೇವಲ ರೋಮನ್ ಸಾಮ್ರಾಜ್ಯದಳಲ್ಲೆಲ್ಲಾ ಅಲ್ಲ, ಅಕ್ಷರಶಃ ನಿವಾಸಿತ ಭೂಮಿಯಲ್ಲೆಲ್ಲಾ ಸಾರಲಿಕ್ಕಿದ್ದರು. ಆತ್ಮಗಳಿಗಾಗಿ ಬಲೆಹಾಕುವ ಒಂದು ಭೂವ್ಯಾಪಕ ಕಾರ್ಯವು ನಿರ್ವಹಿಸಲ್ಪಡಲಿತ್ತು, ಮತ್ತು ನಮ್ಮ ದಿನವು ಆ ದರ್ಶನದ ಒಂದು ನೆರವೇರಿಕೆಯನ್ನು ಕಂಡಿದೆ.
16, 17. ಆಧುನಿಕ ಕಾಲದ ಆತ್ಮಿಕ ಮೀನು ಹಿಡಿಯುವಿಕೆಯು ಯಾವಾಗ ಆರಂಭಿಸಿತು, ಮತ್ತು ಯೆಹೋವನು ಅದನ್ನು ಹೇಗೆ ಆಶೀರ್ವದಿಸಿದ್ದಾನೆ?
16 ಈ 20 ನೆಯ ಶತಮಾನದಲ್ಲಿ ಮೀನು ಹಿಡಿಯುವಿಕೆಯು ಹೇಗೆ ಸಾಗಿರುತ್ತದೆ? ಆರಂಭದಲ್ಲಿ, ಬೆಸ್ತರು ತುಲನಾತ್ಮಕವಾಗಿ ಕೊಂಚವೇ ಇದ್ದರು. ಲೋಕ ಯುದ್ಧ I ಕೊನೆಗೊಂಡ ಅನಂತರ, ಹುರುಪಿನ ಅಭಿಷಿಕ್ತ ಪುರುಷ ಮತ್ತು ಸ್ತ್ರೀಯರು ಮುಖ್ಯವಾಗಿ ಕೂಡಿದ್ದ ಸುಮಾರು ನಾಲ್ಕು ಸಾವಿರ ಕ್ರಿಯಾಶೀಲ ಸುವಾರ್ತಾ ಪ್ರಚಾರಕರು ಮಾತ್ರ ಇದ್ದರು. ಯೆಹೋವನು ದಾರಿ ತೆರೆದಲ್ಲೆಲ್ಲಾ ಅವರು ತಮ್ಮ ಬಲೆಗಳನ್ನು ಹಾಕಿದರು, ಮತ್ತು ಅನೇಕ ಆತ್ಮಗಳು ಸಜೀವವಾಗಿ ಹಿಡಿಯಲ್ಪಟ್ಟವು. ಎರಡನೆಯ ಲೋಕ ಯುದ್ಧವನ್ನು ಹಿಂಬಾಲಿಸಿ, ಯೆಹೋವನು ಮೀನು ಹಿಡಿಯಲಿಕ್ಕಾಗಿ ಹೊಸ ನೀರುಗಳನ್ನು ತೆರೆದನು. ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ್ನು ಹಾಜರಾದ ಮಿಶನೆರಿಗಳು ಅನೇಕ ದೇಶಗಳಲ್ಲಿ ಈ ಕಾರ್ಯದ ನುಗ್ಗುಮೊನೆಯಾದರು. ಆರಂಭದಲ್ಲಿ ತೀರಾ ಶುಷ್ಕವೆಂದು ತೋರಿರಬಹುದಾದ ಜಪಾನ್, ಇಟೆಲಿ, ಮತ್ತು ಸ್ಪೆಯ್ನ್ ಮೊದಲಾದ ದೇಶಗಳು, ಕಟ್ಟಕಡೆಗೆ ಆತ್ಮಗಳ ಹೇರಳವಾದ ಫಲವನ್ನು ಫಲಿಸಿದವು. ಪೂರ್ವ ಯೂರೋಪಿನಲ್ಲಿ ಮೀನುಗಾರಿಕೆಯು ಎಷ್ಟು ಸಾಫಲ್ಯಹೊಂದಿದೆ ಎಂಬದನ್ನು ಸಹ ನಾವು ಇತ್ತೀಚೆಗೆ ಕಲಿತಿದ್ದೇವೆ.
17 ಇಂದು ಅನೇಕ ದೇಶಗಳಲ್ಲಿ ಬಲೆಗಳು ಬಹಳಮಟ್ಟಿಗೆ ಹರಿದುಹೋಗುತ್ತಾ ಇವೆ. ಆತ್ಮಗಳ ಮಹಾ ಕೊಯ್ಲು ಹೊಸ ಸಭೆಗಳನ್ನು ಮತ್ತು ಸರ್ಕಿಟ್ಗಳನ್ನು ಸಂಘಟಿಸುವುದನ್ನು ಆವಶ್ಯಕವನ್ನಾಗಿ ಮಾಡಿದೆ. ಇವರನ್ನು ಸೇರಿಸಿಕೊಳ್ಳಲು, ಹೊಸ ರಾಜ್ಯ ಸಭಾಗೃಹಗಳು ಮತ್ತು ಎಸೆಂಬ್ಲಿ ಹಾಲ್ಗಳು ಎಲ್ಲಾ ಸಮಯ ಕಟ್ಟಲ್ಪಡುತ್ತಾ ಇವೆ. ಅಭಿವೃದ್ಧಿಯನ್ನು ನೋಡಿಕೊಳ್ಳಲು ಹೆಚ್ಚು ಹಿರಿಯರು ಮತ್ತು ಶುಶ್ರೂಷಾ ಸೇವಕರು ಬೇಕಾಗಿದ್ದಾರೆ. ಹಿಂದೆ 1919 ರಲ್ಲಿ ಆ ನಂಬಿಗಸ್ತ ಜನರಿಂದ ಒಂದು ಮಹಾ ಕಾರ್ಯವು ಪ್ರಾರಂಭಿಸಲ್ಪಟ್ಟಿತ್ತು. ಒಂದು ಅಕ್ಷರಶಃ ರೀತಿಯಲ್ಲಿ ಯೆಶಾಯ 60:22 ನೆರವೇರಿರುತ್ತದೆ. ಆ ನಾಲ್ಕು ಸಾವಿರ ಬೆಸ್ತರು ಇಂದು ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚಾಗಿರುವಾಗ, ‘ಚಿಕ್ಕವನಿಂದ ಒಂದು ಸಾವಿರವಾಗಿದೆ.’ ಮತ್ತು ಅಂತ್ಯವು ಇನ್ನೂ ಬಂದಿಲ್ಲ.
18. ಒಂದನೆಯ ಶತಮಾನದ ಆತ್ಮಿಕ ಬೆಸ್ತರ ಉತ್ತಮ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು?
18 ಇವೆಲ್ಲವೂ ವ್ಯಕ್ತಿಗಳೋಪಾದಿ ನಮಗೆ ಯಾವ ಅರ್ಥದಲ್ಲಿದೆ? ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರು ಮನುಷ್ಯರನ್ನು ಹಿಡಿಯುವ ಬೆಸ್ತರಾಗಲು ಕರೆಯಲ್ಪಟ್ಟಾಗ, “ಅವರು . . . ಎಲ್ಲವನ್ನೂ ಬಿಟ್ಟು [ಯೇಸುವನ್ನು] ಹಿಂಬಾಲಿಸಿದರು” ಎಂದು ದೇವರ ವಾಕ್ಯವು ಹೇಳುತ್ತದೆ. (ಲೂಕ 5:11) ನಂಬಿಕೆ ಮತ್ತು ಸಮರ್ಪಣೆಯ ಎಂಥ ಉತ್ತಮ ಮಾದರಿ! ಸ್ವ-ತ್ಯಾಗದ ಅದೇ ಆತ್ಮವನ್ನು, ಎಷ್ಟನ್ನೇ ತ್ಯಜಿಸಬೇಕಾದರೂ ಯೆಹೋವನ ಸೇವೆಗಾಗಿ ಅದೇ ಸಿದ್ಧ ಮನಸ್ಸನ್ನು ನಾವು ಬೆಳೆಸಬಲ್ಲೆವೇ? ಹಾಗೆ ಮಾಡಬಲ್ಲವೆಂದು ಲಕ್ಷಾಂತರ ಜನರು ಉತ್ತರಿಸಿದ್ದಾರೆ. ಒಂದನೇ ಶತಮಾನದಲ್ಲಿ, ಯೆಹೋವನು ಅನುಮತಿಸಿದ್ದಲ್ಲೆಲ್ಲಾ ಶಿಷ್ಯರು ಮನುಷ್ಯರಿಗಾಗಿ ಬಲೆ ಹಾಕಿದರು. ಯೆಹೂದ್ಯರ ಅಥವಾ ಅನ್ಯರ ಮಧ್ಯದಲ್ಲಿ ಎನ್ನದೆ, ಯಾವ ಕಾಯ್ದಿಡುವಿಕೆಯೂ ಇಲ್ಲದೆ ಅವರು ಬಲೆ ಹಾಕಿದರು. ನಾವು ಸಹಾ ಯಾವ ನಿರ್ಬಂಧ ಅಥವಾ ದುರಭಿಮಾನ ಇಲ್ಲದೆ ಪ್ರತಿಯೊಬ್ಬರಿಗೆ ಸುವಾರ್ತೆಯನ್ನು ಸಾರೋಣ.
19. ನಾವು ಎಲ್ಲಿ ಮೀನು ಹಿಡಿಯುತ್ತೇವೋ ಆ ನೀರು ಫಲಕಾರಿಯೆಂದು ತೋರದಿದ್ದರೆ ನಾವೇನು ಮಾಡಬೇಕು?
19 ಆದರೆ, ಒಂದುವೇಳೆ, ನಿಮ್ಮ ಸದ್ಯದ ಕ್ಷೇತ್ರವು ಫಲದಾಯಕವಲ್ಲವೆಂದು ಕಂಡಲ್ಲಿ ಆಗೇನು? ನಿರಾಶೆ ಹೊಂದಬೇಡಿರಿ. ಶಿಷ್ಯರು ರಾತ್ರಿಯಿಡೀ ಬಲೆ ಬೀಸಿದರೂ ಏನೂ ಸಿಕ್ಕದಾಗ ಯೇಸು ಅವರ ಬಲೆಗಳನ್ನು ಹೇಗೆ ತುಂಬಿಸಿದನೆಂಬದನ್ನು ಜ್ಞಾಪಿಸಿಕೊಳ್ಳಿರಿ. ಒಂದು ಆತ್ಮಿಕ ರೀತಿಯಲಿಯ್ಲಾ ಅದೇ ವಿಷಯವು ಸಂಭವಿಸಬಲ್ಲದು. ಉದಾಹರಣೆಗಾಗಿ, ಐರ್ಲೆಂಡ್ನಲ್ಲಿ, ನಂಬಿಗಸ್ತ ಸಾಕ್ಷಿಗಳು ಹಲವಾರು ವರ್ಷಗಳ ತನಕ ಪರಿಶ್ರಮ ಪಟ್ಟರೂ ಕೇವಲ ಸೀಮಿತ ಫಲಿತಾಂಶಗಳನ್ನು ಪಡೆದಿದ್ದರು. ಆದರೂ, ಇತ್ತೀಚೆಗೆ ಅದು ಬದಲಾಗಿದೆ. ಯೆಹೋವನ ಸಾಕ್ಷಿಗಳ 1991 ರ ವರ್ಷಪುಸ್ತಕ ವರದಿಸುವುದೇನಂದರೆ, 1990ರ ಸೇವಾ ವರ್ಷದ ಅಂತ್ಯದೊಳಗೆ, ಐರ್ಲೆಂಡ್ ಅನುಕ್ರಮವಾಗಿ 29 ಉನ್ನತ ಸಂಖ್ಯೆಗಳಲ್ಲಿ ಆನಂದಿಸಿದೆ! ಪ್ರಾಯಶಃ ನಿಮ್ಮ ಕ್ಷೇತ್ರವು ಒಂದು ದಿನ ಇಂತಹ ಫಲವನ್ನು ಉತ್ಪಾದಿಸುವುದು. ಆದ್ದರಿಂದ ಯೆಹೋವನು ಎಷ್ಟರ ತನಕ ಅನುಮತಿ ಕೊಡುತ್ತಾನೋ ಆ ತನಕ ಮೀನಿಗಾಗಿ ಬಲೆಹಾಕುತ್ತಾ ಇರ್ರಿ!
20. ಮನುಷ್ಯರನ್ನು ಹಿಡಿಯುವುದರಲ್ಲಿ ನಾವು ಯಾವಾಗ ಭಾಗವಹಿಸಬೇಕು?
20 ಇಸ್ರಾಯೇಲಿನಲ್ಲಿ, ಬೇರೆಲ್ಲಾ ಜನರು ಹಾಸಿಗೆಯಲ್ಲಿ ಬೆಚ್ಚಗಾಗಿ ಮತ್ತು ಆರಾಮವಾಗಿ ಮಲಗಿರುವಾಗ, ಬೆಸ್ತರಾದರೋ ರಾತ್ರಿಯಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು. ಅವರು ಹೊರಗೆ ಹೋಗುತ್ತಿದ್ದದ್ದು ತಮಗೆ ಅನುಕೂಲವಾಗಿದ್ದಾಗ ಅಲ್ಲ, ಹೆಚ್ಚು ಮೀನುಗಳನ್ನು ಹಿಡಿಯಲು ಶಕ್ತರಾಗಿದ್ದಾಗ. ನಾವು ಸಹಾ ನಮ್ಮ ಕ್ಷೇತ್ರವನ್ನು ಪರೀಕ್ಷಿಸಿ, ಹೆಚ್ಚಿನ ಜನರು ಮನೆಯಲ್ಲಿ ಇರುವಾಗ ಮತ್ತು ಪ್ರತಿಕ್ರಿಯೆ ತೋರಿಸುವಾಗ, ಮೀನು ಹಿಡಿಯಲೋ ಎಂಬಂತೆ ಹೋಗಬೇಕು. ಇದು ಸಾಯಂಕಾಲದ ವೇಳೆಯಲ್ಲಿ, ವಾರಾಂತ್ಯಗಳಲ್ಲಿ ಅಥವಾ ಬೇರೆ ಸಮಯದಲ್ಲಿ ಆಗಿರಬಹುದು. ಅದು ಯಾವಾಗಲೇ ಆಗಿರಲಿ, ಯೋಗ್ಯ ಹೃದಯದ ಜನರನ್ನು ಹುಡುಕಲು ನಾವು ನಮ್ಮಿಂದ ಶಕ್ಯವಾದದ್ದೆಲ್ಲವನ್ನು ಮಾಡೋಣ.
21. ನಮ್ಮ ಕ್ಷೇತ್ರದಲ್ಲಿ ಪದೇ ಪದೇ ಸೇವೆಯಾಗುತ್ತಿದ್ದರೆ ನಾವೇನನ್ನು ನೆನಪಿನಲ್ಲಡಬೇಕು?
21 ನಮ್ಮ ಕ್ಷೇತ್ರದಲ್ಲಿ ಹೆಚ್ಚು ಸಲ ಸೇವೆಯಾಗಿದ್ದಲ್ಲಿ ಆಗೇನು? ಲೋಕದ ಕಸಬುದಾರ ಬೆಸ್ತರು ತಮ್ಮ ಮೀನು ಹಿಡಿಯುವ ಕ್ಷೇತ್ರದಲ್ಲಿ ಬಹಳಷ್ಟು ಸಾರಿ ಬಲೆಬೀಸಲಾಗಿದೆ ಎಂದು ಆಗಿಂದಾಗ್ಯೆ ದೂರಿಡುತಾರ್ತೆ. ನಮ್ಮ ಆತ್ಮಿಕ ಮೀನು ಹಿಡಿಯುವ ಕ್ಷೇತ್ರಗಳು ತೀರಾ ಹೆಚ್ಚು ಬಲೆ ಬೀಸಲ್ಪಡಬಲ್ಲವೋ? ನಿಜವಾಗಿ ಹಾಗಿಲ್ಲ! ಹೆಚ್ಚು ಸಾರಿ ಆವರಿಸಲ್ಪಟ್ಟಾಗ ಸಹ ಅನೇಕ ಕ್ಷೇತ್ರಗಳು ಹೆಚ್ಚು ವೃದ್ಧಿಯನ್ನು ಕೊಡುತ್ತವೆ. ಒಳ್ಳೇ ಸೇವೆಯಾದ ಕಾರಣದಿಂದ ಕೆಲವು ಕ್ಷೇತ್ರಗಳು ಒಳ್ಳೇ ಫಲವನ್ನು ಕೊಡುತ್ತಿವೆ. ಆದಾಗ್ಯೂ, ಮನೆಗಳು ಹೆಚ್ಚು ಸಾರಿ ಸಂದರ್ಶಿಸಲ್ಪಡುವಾಗ, ಆ ಮನೆಯಲ್ಲಿ ಸಿಕ್ಕದವರೆಲ್ಲರ ಪಟ್ಟಿ ಮಾಡುವಂತೆ ಮತ್ತು ಅನಂತರ ಸಂಪರ್ಕಿಸುವಂತೆ ಹೆಚ್ಚು ಖಾತ್ರಿ ಮಾಡಿಕೊಳ್ಳಿರಿ. ಸಂಭಾಷಣೆಗಾಗಿ ಹಲವಾರು ವಿವಿಧ ವಿಷಯಗಳನ್ನು ಕಲಿತುಕೊಳ್ಳಿರಿ. ಯಾರಾದರೊಬ್ಬನು ಪುನಃ ಬೇಗನೇ ಸಂದರ್ಶಿಸುವನೆಂಬದನ್ನು ಮನಸ್ಸಿನಲ್ಲಿಡಿರಿ, ಆದುದರಿಂದ ನಿಮ್ಮ ಸ್ವಾಗತದ ಕಾಲಮೀರಬೇಡಿರಿ ಮತ್ತು ಬೇಹುಷಾರಿನಿಂದಾಗಿ ಮನೆಯವನಲ್ಲಿ ವಿರೋಧ ಭಾವ ಹುಟ್ಟಿಸಬೇಡಿರಿ. ಬೀದಿ ಸೇವೆ ಮತ್ತು ಅವಿಧಿ ಸಾಕ್ಷಿಯಲ್ಲಿ ನಿಮ್ಮ ನಿಪುಣತೆಯನ್ನು ಬೆಳೆಸಿರಿ. ಪ್ರತಿಯೊಂದು ಸಂದರ್ಭದಲ್ಲಿ ಮತ್ತು ಶಕ್ಯವಾದ ಪ್ರತಿಯೊಂದು ವಿಧಾನದಲ್ಲಿ ನಿಮ್ಮ ಆತ್ಮಿಕ ಬಲೆಗಳನ್ನು ಹಾಕುತ್ತಾ ಇರ್ರಿ.
22. ಈ ಸಮಯದಲ್ಲಿ ಯಾವ ಮಹಾ ಸುಯೋಗದಲ್ಲಿ ನಾವು ಆನಂದಿಸುತ್ತೇವೆ?
22 ಈ ಮೀನುಗಾರಿಕೆಯಲ್ಲಿ ಬೆಸ್ತರು ಮತ್ತು ಮೀನು ಇಬ್ಬರೂ ಪ್ರಯೋಜನ ಹೊಂದುತ್ತಾರೆಂಬದನ್ನು ನೆನಪಿಡಿರಿ. ನಾವು ಯಾರನ್ನು ಹಿಡಿಯುತ್ತೇವೋ ಅವರು ಎಡೆಬಿಡದೆ ಪ್ರಯತ್ನಪಟ್ಟಲ್ಲಿ, ಸದಾ ಜೀವಿಸ ಶಕ್ತರು. ಪೌಲನು ತಿಮೊಥಿಗೆ ಪ್ರೇರೇಪಿಸಿದ್ದು: “ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊಥಿ 4:16) ಆತ್ಮಿಕ ಮೀನು ಹಿಡಿಯುವಿಕೆಯಲ್ಲಿ ಮೊದಲ ತರಬೇತನ್ನು ತನ್ನ ಶಿಷ್ಯರಿಗೆ ಕೊಟ್ಟವನು ಯೇಸು ಮತ್ತು ಈ ಕಾರ್ಯವು ಇನ್ನೂ ಆತನ ಮಾರ್ಗದರ್ಶನದ ಕೆಳಗೆ ನಡಿಸಲ್ಪಡುತ್ತಾ ಇದೆ. (ಪ್ರಕಟನೆ 14:14-16 ಹೋಲಿಸಿರಿ.) ಅದನ್ನು ಮಾಡಿ ಪೂರೈಸುವುದರಲ್ಲಿ ಆತನ ಕೈಕೆಳಗೆ ಕೆಲಸ ಮಾಡುವ ಎಂಥ ಮಹಾ ಸುಯೋಗ ನಮಗಿದೆ! ಯೆಹೋವನು ಎಷ್ಟರ ತನಕ ಅನುಮತಿಸುತ್ತಾನೋ ಆ ತನಕ ನಾವು ನಮ್ಮ ಬಲೆಗಳನ್ನು ಹಾಕುತ್ತಾ ಇರೋಣ. ಆತ್ಮಗಳನ್ನು ಸಜೀವವಾಗಿ ಹಿಡಿಯುವದಕ್ಕಿಂತ ಹೆಚ್ಚು ಮಹತ್ತಾದ ಕೆಲಸವು ಬೇರೆ ಯಾವುದಾದರೂ ಇರುವ ಶಕ್ಯತೆ ಇದ್ದೀತೇ?
ನೀವು ನೆನಪಿಗೆ ತರಬಲ್ಲಿರೋ?
▫ ಯೇಸು ತನ್ನ ಹಿಂಬಾಲಕರನ್ನು ಯಾವ ಕೆಲಸ ಮಾಡಲು ತರಬೇತು ಮಾಡಿದನು?
▫ ಆತ್ಮಿಕ ಮೀನು ಹಿಡಿಯುವ ಕೆಲಸವು ಅವನ ಮರಣದಿಂದ ಅಂತ್ಯಗೊಳ್ಳದೆಂದು ಯೇಸು ತೋರಿಸಿದ್ದು ಹೇಗೆ?
▫ ಒಂದನೆಯ ಶತಕದಲ್ಲಿ ಆತ್ಮಿಕ ಮೀನು ಹಿಡಿಯುವ ಕೆಲಸವನ್ನು ಯೆಹೋವನು ಯಾವ ರೀತಿಯಲ್ಲಿ ಆಶೀರ್ವದಿಸಿದನು?
▫ “ಕರ್ತನ ದಿನ” ದಲ್ಲಿ ಮೀನಿನ ಯಾವ ಸಮೃದ್ಧ ರಾಶಿಯು ಬಲೆಯನ್ನು ತುಂಬಿತು?
▫ ವ್ಯಕ್ತಿಗಳಾದ ನಾವು ಇನ್ನೂ ಹೆಚ್ಚು ಸಾಫಲ್ಯಭರಿತ ಬೆಸ್ತರಾಗಬಲ್ಲೆವು ಹೇಗೆ?
[ಪುಟ 15 ರಲ್ಲಿರುವ ಚಿತ್ರ]
ಯೇಸುವಿನ ಪುನರುತ್ಥಾನದ ಅನಂತರ, ಅವನ ಅಪೊಸ್ತಲರು ಮನುಷ್ಯರನ್ನು ಹಿಡಿಯುವ ದೈವಿಕ ಕೆಲಸವನ್ನು ವಿಸ್ತರಿಸಿದರು