ಶಾಂತಿಸಮಾಧಾನ—ಸಾವಿರ ವರ್ಷ ಮತ್ತು ಅನಂತಕಾಲ
“ದೇವರು ಎಲ್ಲರಿಗೂ ಎಲ್ಲವೂ ಆಗುವನು.”—1 ಕೊರಿಂ. 15:28.
ವಿವರಿಸಿ. . .
ಈ ವಚನಗಳು ನೆರವೇರುವಾಗ ನೀವು ಹೇಗೆ ಪ್ರಯೋಜನ ಪಡೆಯುವಿರಿ?
1. “ಮಹಾ ಸಮೂಹವು” ಆನಂದಿಸಲಿರುವ ರೋಮಾಂಚಕ ವಿಷಯಗಳು ಯಾವುವು?
ಕರುಣಾಮಯಿ, ನ್ಯಾಯವಂತ ಅರಸನಿರುವ ಬಲಿಷ್ಠ ಸರ್ಕಾರವು ಒಂದು ಸಾವಿರ ವರ್ಷಗಳಲ್ಲಿ ಪ್ರಜೆಗಳಿಗೆ ಎಷ್ಟೆಲ್ಲ ಒಳ್ಳೇ ವಿಷಯಗಳನ್ನು ಮಾಡಬಲ್ಲದೆಂದು ಊಹಿಸಿ ನೋಡಿ. ಅತ್ಯದ್ಭುತ ಘಟನೆಗಳು ಎಣಿಸಲಾಗದ ‘ಮಹಾ ಸಮೂಹದವರಿಗಾಗಿ’ ಕಾದಿವೆ. ಈಗಿರುವ ದುಷ್ಟ ಲೋಕವನ್ನು ಕೊನೆಗಾಣಿಸುವ “ಮಹಾ ಸಂಕಟವನ್ನು” ಅವರು ಪಾರಾಗುವರು.—ಪ್ರಕ. 7:9, 14.
2. ಕಳೆದ 6,000 ವರ್ಷಗಳಲ್ಲಿ ಮಾನವರು ಎಂಥ ದುಸ್ಥಿತಿಯನ್ನು ಅನುಭವಿಸಿದ್ದಾರೆ?
2 ಆದರೆ ಮಾನವನ ಆಳ್ವಿಕೆ ತೀರ ವ್ಯತಿರಿಕ್ತವಾದದ್ದನ್ನೇ ಸಾಧಿಸಿದೆ. ಕಳೆದ 6,000 ವರ್ಷಗಳ ಮಾನವ ಇತಿಹಾಸದುದ್ದಕ್ಕೂ ಸ್ವಯಂ ಆಡಳಿತ, ಸ್ವಯಂನಿರ್ಣಯದಿಂದ ಉಂಟಾಗಿರುವ ಹೇಳಲಾರದಷ್ಟು ಕಷ್ಟನಷ್ಟಗಳೇ ಎದ್ದುಕಾಣುತ್ತವೆ. ಹೌದು ಬೈಬಲ್ ಹೇಳುವಂತೆ, ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂ. 8:9) ಪರಿಸ್ಥಿತಿ ಇಂದು ಹೇಗಿದೆ? ಯುದ್ಧ, ದಂಗೆ ಒಂದೆಡೆಯಾದರೆ ಬಡತನ, ಕಾಯಿಲೆ, ಪರಿಸರ ನಾಶ, ಹವಾಮಾನ ವೈಪರೀತ್ಯ ಇತ್ಯಾದಿ ಸಮಸ್ಯೆಗಳು ಇನ್ನೊಂದೆಡೆ. ಹಾಗಾಗಿ ಜನರು ಭೂಮಿಯನ್ನು ಹಾಳುಮಾಡುವುದನ್ನು ಬಿಟ್ಟುಬಿಡದಿದ್ದರೆ ಹಾನಿ ತಪ್ಪಿದ್ದಲ್ಲ ಎನ್ನುತ್ತಾರೆ ಸರ್ಕಾರಿ ಅಧಿಕಾರಿಗಳು.
3. ಸಾವಿರ ವರ್ಷದ ಆಳ್ವಿಕೆಯಲ್ಲಿ ಏನೇನು ಸಂಭವಿಸಲಿದೆ?
3 ಆದರೆ ನಾವು ಭಯಭೀತರಾಗಬೇಕಿಲ್ಲ. ಏಕೆಂದರೆ ಮಾನವರಿಗೂ ಭೂಮಿಗೂ ಆಗಿರುವ ಹಾನಿಯನ್ನು ದೇವರ ರಾಜ್ಯವು ಸರಿಪಡಿಸಲಿದೆ. ಮೆಸ್ಸೀಯ ರಾಜನಾದ ಯೇಸು ಕ್ರಿಸ್ತ ಹಾಗೂ ಅವನ 1,44,000 ಮಂದಿ ಜೊತೆ ರಾಜರು ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಇದನ್ನು ಮಾಡುವರು. ಯೆಹೋವನ ಈ ಹೃದಯಸ್ಪರ್ಶಿ ವಾಗ್ದಾನವನ್ನು ಆ ರಾಜ್ಯ ನೆರವೇರಿಸುವುದು: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾ. 65:17) ಯಾವ ಅಪೂರ್ವ ಘಟನೆಗಳು ಭವಿಷ್ಯದಲ್ಲಿ ಸಂಭವಿಸಲಿವೆ? ಇವು ಕಣ್ಣಿಗೆ “ಕಾಣದಿರುವಂಥ ಸಂಗತಿಗಳು” ಆಗಿದ್ದರೂ ಬೈಬಲ್ ಪ್ರವಾದನೆಗಳ ಸಹಾಯದಿಂದ ಅವುಗಳ ನಸುನೋಟವನ್ನು ಪಡೆದುಕೊಳ್ಳೋಣ.—2 ಕೊರಿಂ. 4:18.
‘ಅವರು ಮನೆಗಳನ್ನು ಕಟ್ಟುವರು, ತೋಟಗಳನ್ನು ಮಾಡುವರು’
4. ವಸತಿ ವಿಷಯದಲ್ಲಿ ಅನೇಕರಿಗೆ ಯಾವ ಸಮಸ್ಯೆಯಿದೆ?
4 ಸ್ವಂತ ಮನೆಯಿರಬೇಕೆಂಬ ಆಸೆ ಯಾರಿಗೆ ತಾನೇ ಇಲ್ಲ? ತಾನು ತನ್ನ ಸಂಸಾರದೊಂದಿಗೆ ಸುರಕ್ಷಿತವಾಗಿ ಸ್ವಂತ ಸೂರಿನಡಿಯಲ್ಲಿ ಜೀವಿಸಬೇಕೆಂದು ಪ್ರತಿಯೊಬ್ಬನು ಬಯಸುವುದು ಸಹಜ. ಆದರೆ ಈ ಜಗತ್ತಿನಲ್ಲಿ ವಸತಿ ಒಂದು ದೊಡ್ಡ ಸಮಸ್ಯೆಯಾಗಿದೆ. ಜನರಿಂದ ಕಿಕ್ಕಿರಿದಿರುವ ನಗರಗಳಲ್ಲಿ ಇನ್ನೂ ಜನ ಹರಿದುಬರುತ್ತಲೇ ಇದ್ದಾರೆ. ಹೆಚ್ಚಿನವರಿಗೆ ಗುಡಿಸಲುಗಳಲ್ಲಿ ಕೊಳಚೆಪ್ರದೇಶಗಳಲ್ಲಿ ಕಾಲ ತಳ್ಳದೆ ಬೇರೆ ದಾರಿಯಿಲ್ಲ. ಸ್ವಂತ ಮನೆ ಎನ್ನುವುದು ಅವರಿಗೆ ನನಸಾಗದ ಕನಸಾಗಿಯೇ ಉಳಿಯುತ್ತದೆ.
5, 6. (1) ಯೆಶಾಯ 65:21 ಮತ್ತು ಮೀಕ 4:4 ಹೇಗೆ ನೆರವೇರಿಕೆ ಹೊಂದುವುದು? (2) ಆ ಆಶೀರ್ವಾದಗಳನ್ನು ಪಡೆಯಲು ನಾವೇನು ಮಾಡಬೇಕು?
5 ಆದರೆ ದೇವರ ರಾಜ್ಯ ಭೂಮಿಯ ಮೇಲೆ ಆಳ್ವಿಕೆ ನಡೆಸುವಾಗ ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ಪ್ರತಿಯೊಬ್ಬರ ಆಸೆ ಈಡೇರುವುದು. “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು” ಎಂದು ಯೆಶಾಯ ಪ್ರವಾದಿಸಿದನು. (ಯೆಶಾ. 65:21) ಆದರೆ ಮನೆ ಇದ್ದರಷ್ಟೆ ಸಾಲದು ಅಲ್ಲವೆ? ಇಂದು ಹಲವರಿಗೆ ಸ್ವಂತ ಮನೆಯಿದೆ. ಕೆಲವರಿಗೆ ದೊಡ್ಡ ಬಂಗಲೆ ಕೂಡ ಇರಬಹುದು. ಹಾಗಿದ್ದರೂ ಹಣಕಾಸಿನ ತೊಂದರೆಯಿಂದ ಮನೆ ಕಳಕೊಳ್ಳುವ ಸಂಭವವಿದೆ ಅಥವಾ ಕಳ್ಳರು ದರೋಡೆಕೋರರಿಂದ ಎಲ್ಲವನ್ನು ಕಳಕೊಳ್ಳಬಹುದು. ದೇವರ ರಾಜ್ಯದಲ್ಲಾದರೋ ಇಂಥ ಭಯ ಇರಬೇಕಾಗಿಲ್ಲ. ಪ್ರವಾದಿ ಮೀಕನು ಹೀಗೆ ಬರೆದನು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.
6 ದೇವರ ರಾಜ್ಯದ ಕೆಳಗೆ ಅಂಥ ಸುಂದರ ಪರಿಸ್ಥಿತಿಯಲ್ಲಿ ಇರಲು ನಾವೇನು ಮಾಡಬೇಕು? ಈಗ ನಮಗೆ ವಾಸಿಸಲು ಮನೆ ಬೇಕಿದೆ ನಿಜ. ಆದರೆ ಅದನ್ನು ಪಡೆಯುವುದೊಂದೇ ನಮ್ಮ ಗುರಿಯಾಗಿರಬಾರದು. ಕುತ್ತಿಗೆ ವರೆಗೆ ಸಾಲ ಮಾಡಿಯಾದರೂ ಮನೆ ಕಟ್ಟಿಸಬೇಕೆಂಬ ಯೋಚನೆ ಬೇಡ. ಯೆಹೋವನ ವಾಗ್ದಾನದ ಮೇಲೆ ನಮ್ಮ ಮನಸ್ಸನ್ನಿಡುವುದು ವಿವೇಕಯುತ. ಯೇಸುವಿನ ಕುರಿತು ಯೋಚಿಸಿ. “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು. (ಲೂಕ 9:58) ಒಂದು ಒಳ್ಳೇ ಮನೆ ಹೊಂದಿರುವುದು ಯೇಸುವಿಗೆ ಅಸಾಧ್ಯವಾಗಿತ್ತಾ? ಖಂಡಿತ ಇಲ್ಲ. ಅವನು ನೆನಸಿದ್ದರೆ ಅವನಿಗಿದ್ದಂಥ ಕೌಶಲ ಮತ್ತು ಶಕ್ತಿಯಿಂದ ಅತಿ ಸುಂದರ ಮನೆ ಕಟ್ಟಿಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಏಕೆ? ಏಕೆಂದರೆ ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡಲು ಯಾವುದೂ ಅಡ್ಡಿಯಾಗದಂತೆ ಮತ್ತು ಯಾವುದೂ ತನ್ನ ಗಮನವನ್ನು ಭಂಗಮಾಡದಂತೆ ನೋಡಿಕೊಂಡನು. ನಾವು ಅವನ ಮಾದರಿಯನ್ನು ಅನುಕರಿಸುತ್ತಾ ಕಣ್ಣನ್ನು ಸರಳವಾಗಿಡೋಣ. ಈ ಲೋಕದಲ್ಲಿ ಮನೆಕಟ್ಟುವುದಕ್ಕಾಗಲಿ ಸಿರಿಸಂಪತ್ತನ್ನು ಕೂಡಿಸುವುದಕ್ಕಾಗಲಿ ಹೆಚ್ಚು ಮಹತ್ವ ಕೊಡದಿರುವ ಮೂಲಕ ಚಿಂತೆಯಿಂದ ಮುಕ್ತರಾಗಿರೋಣ.—ಮತ್ತಾ. 6:33, 34.
“ತೋಳವು ಕುರಿಯ ಸಂಗಡ ಮೇಯುವದು”
7. ಮಾನವರ ಮತ್ತು ಪ್ರಾಣಿಗಳ ಮಧ್ಯೆ ಯಾವ ರೀತಿಯ ಸಂಬಂಧ ಇರಬೇಕೆಂದು ಯೆಹೋವನು ಆಜ್ಞಾಪಿಸಿದನು?
7 ಯೆಹೋವನು ತನ್ನ ಸೃಷ್ಟಿಕಾರ್ಯದ ಕೊನೆಯಲ್ಲಿ ಮಾನವನನ್ನು ಸೃಷ್ಟಿಸಿದನು. ಮಾನವನು ಭೂಸೃಷ್ಟಿಗಳ ಕಿರೀಟ. ಅವನನ್ನು ಸೃಷ್ಟಿಸುವ ಮುಂಚೆ ಕುಶಲ ಶಿಲ್ಪಿಯಾದ ಏಕಜಾತ ಪುತ್ರನಿಗೆ ಯೆಹೋವನು ಹೀಗಂದನು: “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ.” (ಆದಿ. 1:26) ದೇವರು ಪ್ರಥಮ ಮಾನವನಿಗೆ ಸಕಲ ಪ್ರಾಣಿಪಕ್ಷಿಗಳನ್ನು ನೋಡಿಕೊಳ್ಳುವಂತೆ ಮತ್ತು ಅವುಗಳ ಮೇಲೆ ದೊರೆತನ ಮಾಡುವಂತೆ ಆಜ್ಞಾಪಿಸಿದನು. ಮುಂದೆ ಸಕಲ ಮಾನವರು ಆ ಅಧಿಕಾರವನ್ನು ಪಡೆಯಲಿದ್ದರು.
8. ಇಂದು ಪ್ರಾಣಿಗಳಲ್ಲಿ ಎಂಥ ಸ್ವಭಾವ ಸುವ್ಯಕ್ತ?
8 ಸಕಲ ಪ್ರಾಣಿಗಳನ್ನು ಅಧೀನದಲ್ಲಿ ಇಟ್ಟುಕೊಂಡು ಅವುಗಳೊಂದಿಗೆ ಶಾಂತಿಯಿಂದಿರಲು ಮಾನವರಿಗೆ ಸಾಧ್ಯವೇ? ನಾಯಿ, ಬೆಕ್ಕು ಹಾಗೂ ಇತರೆ ಮುದ್ದು ಪ್ರಾಣಿಗಳೆಂದರೆ ಬಹುಮಂದಿಗೆ ಜೀವ. ಆದರೆ ಕಾಡುಪ್ರಾಣಿಗಳು? ವಿಜ್ಞಾನಿಗಳು ಕಾಡುಪ್ರಾಣಿಗಳ ಜೊತೆಯಲ್ಲಿ ವಾಸಿಸಿ ಅಧ್ಯಯನ ಮಾಡಿದಾಗ ಮರಿಹಾಕುವ ಪ್ರಾಣಿಗಳು ಭಾವಜೀವಿಗಳೆಂದು ತಿಳಿದುಕೊಂಡರು. ನಿಜ, ನಾವು ಜೋರುಮಾಡಿದಾಗ ಪ್ರಾಣಿಗಳು ಹೆದರಿ ಓಡಿಹೋಗುತ್ತವೆ ಅಥವಾ ಕೋಪದಿಂದ ಗುರಕಾಯಿಸುತ್ತವೆ. ಹೀಗಿರುವಾಗ ಅವುಗಳಲ್ಲಿ ಕೋಮಲ ಭಾವನೆಗಳಿವೆಯೇ? ಹೌದು ಎನ್ನುತ್ತಾರೆ ವಿಜ್ಞಾನಿಗಳು. ತಮ್ಮ ಪುಟ್ಟ ಮರಿಗಳ ಲಾಲನೆಪಾಲನೆಯಲ್ಲಿ ತನ್ಮಯವಾಗಿರುವಾಗ ಪ್ರಾಣಿಗಳಲ್ಲಿನ ಪ್ರೀತಿಮಮತೆಯ ಭಾವನೆಗಳು ವ್ಯಕ್ತ.
9. ಭವಿಷ್ಯದಲ್ಲಿ ಪ್ರಾಣಿಗಳ ಸ್ವಭಾವದಲ್ಲಿ ಎಂಥ ಬದಲಾವಣೆ ಆಗಲಿದೆ?
9 ಆದ್ದರಿಂದ ಮಾನವರ ಮತ್ತು ಪ್ರಾಣಿಗಳ ಮಧ್ಯೆ ಶಾಂತಿ ನೆಲೆಸಿರುವುದೆಂದು ಬೈಬಲ್ ಹೇಳುವಾಗ ಅದೇನೂ ಆಶ್ಚರ್ಯದ ಸಂಗತಿಯಲ್ಲ. (ಯೆಶಾಯ 11:6-9; 65:25 ಓದಿ.) ಜಲಪ್ರಳಯದ ನಂತರ ನಾವೆಯಿಂದ ಹೊರಬಂದ ನೋಹ ಮತ್ತು ಅವನ ಕುಟುಂಬಕ್ಕೆ ಯೆಹೋವನು ಏನು ಹೇಳಿದನೆಂದು ನೆನಪಿಸಿಕೊಳ್ಳಿ. ಆತನು ಹೇಳಿದ್ದು: “ಭೂಮಿಯ ಮೇಲಿರುವ ಎಲ್ಲಾ ಮೃಗಗಳೂ . . . ನಿಮಗೆ ಬೆದರಿ ಅಂಜಿಕೊಳ್ಳುವವು.” ಅದೇ ರೀತಿ ಇಂದು ಪ್ರಾಣಿಗಳು ಹೆದರಿ ಅಂಜುವುದು ತಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿಯೇ. (ಆದಿ. 9:2, 3) ಆದರೆ ಪ್ರಾಣಿಗಳಲ್ಲಿರುವ ಆ ಭಯವನ್ನು ಯೆಹೋವನು ಕಡಿಮೆಗೊಳಿಸಿ ತನ್ನ ಮೂಲ ಉದ್ದೇಶವನ್ನು ಈಡೇರಿಸಶಕ್ತನು ಅಲ್ಲವೇ? (ಹೋಶೇ. 2:18) ಅಂಥ ಸಮಯದಲ್ಲಿ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬರೂ ಸಂತೋಷದ ಕಡಲಲ್ಲಿ ತೇಲುವುದು ಖಂಡಿತ.
“ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು”
10. ನಾವು ಕಣ್ಣೀರಿಡಲು ಕಾರಣವೇನು?
10 ಸೊಲೊಮೋನನು “ಲೋಕದಲ್ಲಿನ ಹಿಂಸೆಗಳನ್ನೆಲ್ಲಾ” ನೋಡಿದಾಗ “ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ” ಎಂದು ರೋದಿಸಿದನು. (ಪ್ರಸಂ. 4:1) ಇಂದಿನ ಪರಿಸ್ಥಿತಿ ಕೂಡ ಹಾಗೆಯೇ. ಇನ್ನೂ ಕೆಟ್ಟಿದೆ ಎಂದರೂ ತಪ್ಪಾಗದು. ನಾವೆಲ್ಲರೂ ಒಂದಲ್ಲ ಒಂದು ಕಾರಣದಿಂದ ಕಣ್ಣೀರಿಡುತ್ತೇವೆ. ಕೆಲವೊಮ್ಮೆ ಆನಂದದಿಂದ ಕಣ್ಣೀರು ಬರುತ್ತದಾದರೂ ಹೃದಯದಲ್ಲಿ ತುಂಬಿರುವ ವೇದನೆಯಿಂದ ಕಣ್ಣೀರು ಸುರಿಸುವುದೇ ಹೆಚ್ಚು.
11. ಯಾವ ಬೈಬಲ್ ವೃತ್ತಾಂತ ನಿಮ್ಮ ಮನಸ್ಪರ್ಶಿಸುತ್ತದೆ?
11 ಬೈಬಲಿನಲ್ಲಿರುವ ಈ ಮನಕಲಕುವ ದೃಶ್ಯಗಳನ್ನು ಚಿತ್ರಿಸಿಕೊಳ್ಳಿ. ಸಾರಳು 127 ವಯಸ್ಸಿನಲ್ಲಿ ತೀರಿಕೊಂಡಾಗ ಅಬ್ರಹಾಮನು “ಆಕೆಯ ನಿಮಿತ್ತ ಗೋಳಾಡಿ ಕಣ್ಣೀರುಸುರಿಸಿದನು.” (ಆದಿ. 23:1, 2) ನೊವೊಮಿ ತನ್ನಿಬ್ಬರು ವಿಧವೆ ಸೊಸೆಯರಿಗೆ ತವರುಮನೆಗೆ ಹೋಗಲು ಹೇಳಿದಾಗ ‘ಅವರು ಗಟ್ಟಿಯಾಗಿ ಅತ್ತರು.’ ಮತ್ತೆ ನೊವೊಮಿ ಒಪ್ಪಿಸಲು ಪ್ರಯತ್ನಿಸಿದಾಗ ‘ಅವರು ತಿರಿಗಿ ಗಟ್ಟಿಯಾಗಿ ಅತ್ತರು.’ (ರೂತ. 1:9, 14) ಕಾಯಿಲೆ ಬಿದ್ದ ಹಿಜ್ಕೀಯ ತಾನು ಇನ್ನೇನು ಸಾಯುತ್ತೇನೆಂದು ತಿಳಿದಾಗ ದೇವರಿಗೆ ಪ್ರಾರ್ಥಿಸುತ್ತಾ “ಬಹಳವಾಗಿ ಅತ್ತನು.” ಇದು ಖಂಡಿತ ಯೆಹೋವನ ಮನಸ್ಪರ್ಶಿಸಿತು. (2 ಅರ. 20:1-5) ಯೇಸುವನ್ನು ಅಲ್ಲಗಳೆದ ಪೇತ್ರನು ಹುಂಜ ಕೂಗುವುದನ್ನು ಕೇಳಿದಾಕ್ಷಣ “ಹೊರಗೆ ಹೋಗಿ ಬಹಳವಾಗಿ ಅತ್ತನು.” ಈ ಘಟನೆ ಯಾರ ಮನಸ್ಸನ್ನು ತಾನೆ ಕರಗಿಸುವುದಿಲ್ಲ?—ಮತ್ತಾ. 26:75.
12. ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ಮಾನವಕುಲಕ್ಕೆ ಯಾವ ವಿಧದಲ್ಲಿ ಪರಿಹಾರ ತರಲಿದೆ?
12 ಚಿಕ್ಕ ದೊಡ್ಡ ದುರಂತಗಳು ಸಾಮಾನ್ಯವಾದ್ದರಿಂದ ನಮಗೆಲ್ಲರಿಗೂ ಸಾಂತ್ವನ ಮತ್ತು ಪರಿಹಾರ ಬೇಕೇ ಬೇಕು. ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ನಮಗದನ್ನೇ ತರಲಿದೆ. “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.” (ಪ್ರಕ. 21:4) ದುಃಖ, ಗೋಳಾಟ, ನೋವು ಇಲ್ಲ ಅನ್ನುವಾಗಲೇ ನಮಗೆ ಸಂತೋಷವಾಗುತ್ತದಾದರೆ ಮಾನವಕುಲದ ಶತ್ರುವಾದ ಮರಣವೇ ಇಲ್ಲವೆಂದಾಗ ನಮ್ಮ ಸಂತೋಷ ಮುಗಿಲುಮುಟ್ಟವುದು ನಿಸ್ಸಂಶಯ. ಮರಣ ಹೇಗೆ ಇಲ್ಲವಾಗುತ್ತದೆ?
‘ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಹೊರಗೆ ಬರುವರು’
13. ಆದಾಮನು ಪಾಪ ಮಾಡಿದಂದಿನಿಂದ ಮರಣ ಮಾನವಕುಲವನ್ನು ಹೇಗೆ ಬಾಧಿಸಿದೆ?
13 ಆದಾಮನು ಪಾಪ ಮಾಡಿದಂದಿನಿಂದ ಮರಣವು ಮಾನವಕುಲದ ಮೇಲೆ ಅರಸನಂತೆ ಆಳ್ವಿಕೆ ನಡೆಸುತ್ತಿದೆ. ಯಾರೂ ಸೋಲಿಸಲಿಕ್ಕಾಗದ ಶತ್ರು ಅದು. ಅದರಿಂದ ತಪ್ಪಿಸಿಕೊಳ್ಳಲಿಕ್ಕಂತೂ ಆಗುವುದೇ ಇಲ್ಲ. ಅದು ತರುವ ದುಃಖದುಮ್ಮಾನಗಳನ್ನು ಪದಗಳಿಂದ ವಿವರಿಸಲಸಾಧ್ಯ. (ರೋಮ. 5:12, 14) ನಿಜವೇನೆಂದರೆ, ಕೋಟಿ ಕೋಟಿ ಜನರು “ಮರಣಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವಕ್ಕೆ” ಒಳಗಾಗಿದ್ದಾರೆ.—ಇಬ್ರಿ. 2:15.
14. ಮರಣವು ಇಲ್ಲದೆ ಹೋಗುವುದರಿಂದ ಫಲಿತಾಂಶ ಏನಾಗುತ್ತದೆ?
14 ಆದರೆ ‘ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡುವ’ ಸಮಯದ ಕುರಿತು ಬೈಬಲ್ ತಿಳಿಸುತ್ತದೆ. (1 ಕೊರಿಂ. 15:26) ಇದರಿಂದ ಎರಡು ಗುಂಪಿನವರು ಪ್ರಯೋಜನ ಪಡೆಯುವರು. ಈಗ ಜೀವಿಸುತ್ತಿರುವ ‘ಮಹಾ ಸಮೂಹದವರು’ ಮಹಾ ಸಂಕಟವನ್ನು ಪಾರಾಗಿ ಹೊಸ ಲೋಕದಲ್ಲಿ ನಿತ್ಯನಿರಂತರ ಜೀವಿಸುವ ಪ್ರತೀಕ್ಷೆ ಪಡೆದುಕೊಳ್ಳುವರು. ಮಾತ್ರವಲ್ಲ ಈಗಾಗಲೇ ಮರಣದ ಬಿಗಿಮುಷ್ಟಿಯಲ್ಲಿ ಸಿಲುಕಿರುವವರು ಪುನಃ ಜೀವಂತರಾಗಿ ಏಳುವರು. ಮೃತರು ಪುನರುತ್ಥಾನ ಹೊಂದಿ ಬರುವಾಗ ಮಹಾ ಸಮೂಹದವರಿಗೆ ಆಗುವ ಸಂತೋಷ ಸಂಭ್ರಮವನ್ನು ಊಹಿಸಬಲ್ಲಿರಾ? ಆ ಸನ್ನಿವೇಶ ಹೇಗಿರುತ್ತದೆಂದು ತಿಳಿಯಲು ಬೈಬಲಿನಲ್ಲಿರುವ ಪುನರುತ್ಥಾನದ ವೃತ್ತಾಂತಗಳನ್ನು ನಾವು ಜಾಗ್ರತೆಯಿಂದ ಓದೋಣ.—ಮಾರ್ಕ 5:38-42; ಲೂಕ 7:11-17 ಓದಿ.
15. ನಿಮ್ಮ ಪ್ರಿಯರೊಬ್ಬರು ಪುನರುತ್ಥಾನ ಹೊಂದಿ ಬರುವಾಗ ನಿಮಗೆ ಹೇಗನಿಸುವುದು?
15 ಮೇಲೆ ಓದಿದಂಥ ವಚನಗಳಲ್ಲಿರುವ ಈ ಅಭಿವ್ಯಕ್ತಿಗಳ ಕುರಿತು ಯೋಚಿಸಿ: “ಇದನ್ನು ನೋಡಿ ಅವರು ಆನಂದಪರವಶರಾದರು,” “ದೇವರನ್ನು ಮಹಿಮೆಪಡಿಸಿದರು.” ಆ ಸಂದರ್ಭಗಳಲ್ಲಿ ನೀವು ಅಲ್ಲಿ ಇದ್ದಿದ್ದರೆ ನಿಮಗೂ ಹಾಗೇ ಅನಿಸುತ್ತಿತ್ತಲ್ಲವೇ? ನಮ್ಮ ಆಪ್ತರು ಭವಿಷ್ಯದಲ್ಲಿ ಪುನರುತ್ಥಾನ ಹೊಂದಿ ಬರುವಾಗಲೂ ನಮ್ಮ ಹರ್ಷೋದ್ವೇಗಕ್ಕೆ ಎಲ್ಲೆಯೇ ಇರುವುದಿಲ್ಲ. “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ” ಎಂದನು ಯೇಸು. (ಯೋಹಾ. 5:28, 29) ಇಂಥ ವಿಷಯವನ್ನು ನಾವೆಂದೂ ನೋಡಿಲ್ಲ. ಇದು ‘ಕಾಣದಿರುವಂಥ ಸಂಗತಿಗಳಲ್ಲೇ’ ಅತ್ಯಂತ ಮನಸ್ಪರ್ಶಿಸುವಂಥದ್ದು.
“ದೇವರು ಎಲ್ಲರಿಗೂ ಎಲ್ಲವೂ ಆಗುವನು”
16. (1) ಭವಿಷ್ಯದಲ್ಲಿ ಪಡೆಯಲಿರುವ ಆಶೀರ್ವಾದಗಳ ಕುರಿತು ನಾವೇಕೆ ಈಗ ಉತ್ಸುಕತೆಯಿಂದ ಮಾತಾಡಬೇಕು? (2) ಕೊರಿಂಥದ ಕ್ರೈಸ್ತರನ್ನು ಪ್ರೋತ್ಸಾಹಿಸಲು ಪೌಲನು ಏನು ಹೇಳಿದನು?
16 ಹೌದು, ಈ ಕಠಿಣ ಕಾಲದಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವವರಿಗೆ ಅದ್ಭುತ ಭವಿಷ್ಯತ್ತಿದೆ. ನಾವು ಮುಂದೆ ಪಡೆಯಲಿರುವ ಆಶೀರ್ವಾದಗಳನ್ನು ಈಗ ನೋಡಲು ಸಾಧ್ಯವಿಲ್ಲವಾದರೂ ಅವುಗಳನ್ನು ಮನಸ್ಸಿನಲ್ಲಿ ಸದಾ ಯೋಚಿಸುತ್ತಿರುವುದು ಬಹು ಮುಖ್ಯ. ಹೀಗೆ ಮಾಡುವುದು ನಿಜವಾಗಿ ಪ್ರಾಮುಖ್ಯವಾದ ಸಂಗತಿಗಳ ಮೇಲೆ ಗಮನ ನೆಡಲು ಮತ್ತು ಈ ಲೋಕದ ಥಳುಕುಬಳುಕಿಗೆ ಮರುಳಾಗದಿರಲು ಸಹಾಯ ಮಾಡುವುದು. (ಲೂಕ 21:34; 1 ತಿಮೊ. 6: 17-19) ನಮ್ಮ ಅದ್ಭುತಕರ ನಿರೀಕ್ಷೆ, ಪ್ರತೀಕ್ಷೆಗಳ ಕುರಿತು ಕುಟುಂಬ ಆರಾಧನೆಯಲ್ಲಿ ಉತ್ಸುಕತೆಯಿಂದ ಮಾತಾಡೋಣ. ಜೊತೆ ವಿಶ್ವಾಸಿಗಳೊಂದಿಗೆ ಮಾತಾಡುವಾಗ, ಬೈಬಲ್ ವಿದ್ಯಾರ್ಥಿಗಳೊಂದಿಗೂ ಆಸಕ್ತರೊಂದಿಗೂ ಚರ್ಚೆಯಲ್ಲಿ ಒಳಗೂಡಿರುವಾಗ ಆ ಬಗ್ಗೆ ಉತ್ಸಾಹದಿಂದ ಮಾತಾಡಲು ಮರೆಯದಿರೋಣ. ಆಗ ನಮ್ಮ ನಿರೀಕ್ಷೆ ಹೃದಮನಗಳಲ್ಲಿ ಹಚ್ಚಹಸುರಾಗಿರುವುದು. ಅಪೊಸ್ತಲ ಪೌಲ ತನ್ನ ಜೊತೆ ಕ್ರೈಸ್ತರಿಗೆ ಪ್ರೋತ್ಸಾಹ ನೀಡುವಾಗ ಅದನ್ನೇ ಮಾಡಿದನು. ಒಂದರ್ಥದಲ್ಲಿ ಅವನು ಅವರನ್ನು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಗೆ ಕೊಂಡೊಯ್ದನು. 1 ಕೊರಿಂಥ 15:24, 25, 28ರಲ್ಲಿರುವ (ಓದಿ.) ಪೌಲನ ಮಾತುಗಳ ಪೂರ್ಣಾರ್ಥವನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸಿ.
17, 18. (1) ಮಾನವ ಇತಿಹಾಸದ ಆರಂಭದಲ್ಲಿ ಯೆಹೋವನು ಯಾವ ವಿಧದಲ್ಲಿ “ಎಲ್ಲರಿಗೂ ಎಲ್ಲವೂ” ಆಗಿದ್ದನು? (2) ಶಾಂತಿಸಾಮರಸ್ಯವನ್ನು ಪುನಃಸ್ಥಾಪಿಸಲು ಯೇಸು ಏನು ಮಾಡುವನು?
17 ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಜೀವನ ಎಷ್ಟು ಸುಮಧುರ ಎಂದು ವರ್ಣಿಸಲು “ದೇವರು ಎಲ್ಲರಿಗೂ ಎಲ್ಲವೂ ಆಗುವನು” ಎಂಬ ವಾಕ್ಯಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ. ಇದರ ಅರ್ಥವೇನು? ಇದನ್ನು ತಿಳಿಯಲು ಏದೆನಿನಲ್ಲಿ ಆದಾಮಹವ್ವರು ಆನಂದಿಸಿದ ಸಮಯಕ್ಕೆ ಹಿಂತೆರಳೋಣ. ಶಾಂತಿಸಾಮರಸ್ಯದಿಂದ ಕೂಡಿದ್ದ ಯೆಹೋವನ ವಿಶ್ವ ಕುಟುಂಬದ ಭಾಗವಾಗಿ ಅವರಿದ್ದರು. ಭೂಮಿ ಹಾಗೂ ಸ್ವರ್ಗದಲ್ಲಿದ್ದ ತನ್ನೆಲ್ಲಾ ಸೃಷ್ಟಿಜೀವಿಗಳ ಮೇಲೆ ವಿಶ್ವ ಪರಮಾಧಿಕಾರಿಯಾದ ಯೆಹೋವನೇ ನೇರವಾಗಿ ಆಳ್ವಿಕೆ ನಡೆಸುತ್ತಿದ್ದನು. ಅವರು ಯೆಹೋವನೊಂದಿಗೆ ನೇರವಾಗಿ ಮಾತಾಡಸಾಧ್ಯವಿತ್ತು. ಆತನನ್ನು ಆರಾಧಿಸಸಾಧ್ಯವಿತ್ತು. ಆಶೀರ್ವಾದಗಳನ್ನು ಪಡೆಯಸಾಧ್ಯವಿತ್ತು. ಹೌದು, ಆತನೇ “ಎಲ್ಲರಿಗೂ ಎಲ್ಲವೂ” ಆಗಿದ್ದನು.
18 ಆದರೆ ಸೈತಾನನ ಪ್ರಭಾವಕ್ಕೊಳಗಾಗಿ ಮಾನವರು ಯೆಹೋವನ ಪರಮಾಧಿಕಾರದ ವಿರುದ್ಧ ದಂಗೆ ಎದ್ದಾಗ ಆ ಶಾಂತಿಸಂಬಂಧ ಮುರಿದುಬಿತ್ತು. ಹಾಗಿದ್ದರೂ ಆರಂಭದಲ್ಲಿದ್ದ ಆ ಶಾಂತಿ-ಐಕ್ಯವನ್ನು ಪುನಃಸ್ಥಾಪಿಸಲು ಮೆಸ್ಸೀಯನ ರಾಜ್ಯವು 1914ರಿಂದ ಪ್ರಗತಿಪರವಾಗಿ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದೆ. (ಎಫೆ. 1:9, 10) ಈಗ ನಾವು “ಕಾಣದಿರುವಂಥ” ಅದ್ಭುತಕರ ಸಂಗತಿಗಳು ಸಾವಿರ ವರ್ಷದ ಆಳ್ವಿಕೆಯಲ್ಲಿ ನೈಜ ಸಂಗತಿಯಾಗುವವು. ಅನಂತರ ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ “ಸಮಾಪ್ತಿ.” ಮುಂದೆ ಏನಾಗುವುದು? “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು” ಕೊಡಲ್ಪಟ್ಟಿದ್ದರೂ ಯೇಸುವಿಗೆ ಒಂದಿನಿತೂ ಹೆಬ್ಬಯಕೆ ಇಲ್ಲ. ಯೆಹೋವನ ಸ್ಥಾನವನ್ನು ಕಿತ್ತುಕೊಳ್ಳುವ ದುರುದ್ದೇಶವೂ ಆತನಿಗಿಲ್ಲ. ವಿನಮ್ರನಾಗಿ ಯೇಸು ‘ತನ್ನ ದೇವರೂ ತಂದೆಯೂ ಆಗಿರುವಾತನಿಗೆ ರಾಜ್ಯವನ್ನು ಒಪ್ಪಿಸಿಕೊಡುವನು.’ ತನ್ನ ಅದ್ವಿತೀಯ ಸ್ಥಾನ, ಅಧಿಕಾರವನ್ನು “ದೇವರ ಮಹಿಮೆಗಾಗಿ” ಉಪಯೋಗಿಸುವನು.—ಮತ್ತಾ. 28:18; ಫಿಲಿ. 2:9-11.
19, 20. (1) ದೇವರ ರಾಜ್ಯದ ಪ್ರಜೆಗಳೆಲ್ಲರೂ ತಾವು ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುತ್ತೇವೆಂದು ಹೇಗೆ ತೋರಿಸಿಕೊಡುವರು? (2) ಭವಿಷ್ಯದಲ್ಲಿ ನಾವು ಯಾವೆಲ್ಲ ಆಶೀರ್ವಾದಗಳನ್ನು ಪಡೆಯಲಿದ್ದೇವೆ?
19 ಅಷ್ಟರಲ್ಲಿ ದೇವರ ರಾಜ್ಯದ ಭೂಪ್ರಜೆಗಳು ಪರಿಪೂರ್ಣರಾಗಿರುವರು. ಯೇಸುವಿನ ಮಾದರಿಯನ್ನು ಅವರು ಅನುಸರಿಸುತ್ತಾ ದೀನತೆಯಿಂದಲೂ ಸಂತೋಷದಿಂದಲೂ ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುವರು. ತಮ್ಮ ಮೇಲೆ ಯೆಹೋವನೇ ಆಳಬೇಕೆಂಬ ಮನದ ಇಂಗಿತವನ್ನು ತೋರಿಸಿಕೊಡುವವರು ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗುವರು. (ಪ್ರಕ. 20:7-10) ಆ ಬಳಿಕ ಎಲ್ಲ ದಂಗೆಕೋರರು ಮಾನವರಾಗಿರಲಿ ದೂತರಾಗಿರಲಿ ನಿತ್ಯನಾಶನಕ್ಕೆ ಗುರಿಯಾಗುವರು. ಹರುಷದ ಹೊನಲು ಉಕ್ಕೇರುವ ಸಮಯ ಅದು! “ಎಲ್ಲರಿಗೂ ಎಲ್ಲವೂ ಆಗುವ” ಯೆಹೋವನನ್ನು ಆತನ ವಿಶ್ವ ಕುಟುಂಬದ ಪ್ರತಿಯೊಬ್ಬರೂ ಆನಂದದಿಂದ ಸ್ತುತಿಸುವರು.—ಕೀರ್ತನೆ 99:1-3 ಓದಿ.
20 ದೇವರ ರಾಜ್ಯವು ಶೀಘ್ರದಲ್ಲೇ ತರಲಿರುವ ಅದ್ಭುತಕರ ಸಂಗತಿಗಳು ಈಗ ನಿಮ್ಮನ್ನು ಯೆಹೋವನ ಚಿತ್ತ ಮಾಡುವುದರ ಮೇಲೆ ಗಮನ ನೆಡುವಂತೆ ಪ್ರಚೋದಿಸುತ್ತಿದೆಯಾ? ಸೈತಾನನ ಲೋಕ ಕೊಡುವ ಸುಳ್ಳು ನಿರೀಕ್ಷೆ, ಪೊಳ್ಳು ಸಾಂತ್ವನದಿಂದ ದಾರಿತಪ್ಪದಂತೆ ಎಚ್ಚರವಹಿಸುವಿರಾ? ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಿ ಎತ್ತಿಹಿಡಿಯುವ ನಿಮ್ಮ ನಿರ್ಧಾರವನ್ನು ಇನ್ನಷ್ಟು ಬಲಗೊಳಿಸುವಿರಾ? ಇದನ್ನು ನಿತ್ಯನಿರಂತರಕ್ಕೂ ಮಾಡುವ ಆಶೆ ನಿಮಗಿದೆಯೆಂದು ನಿಮ್ಮ ಕ್ರಿಯೆಗಳೇ ತೋರಿಸಿಕೊಡಲಿ. ಆಗ ಶಾಂತಿಸಮೃದ್ಧಿಯನ್ನು ಸಾವಿರ ವರ್ಷ ಮಾತ್ರವಲ್ಲ ಅನಂತ ಅನಂತಕಾಲಕ್ಕೂ ಆನಂದಿಸುವ ಸೌಭಾಗ್ಯ ನಿಮ್ಮದಾಗುವುದು.
[ಪುಟ 11ರಲ್ಲಿರುವ ಚಿತ್ರ]
ಯೇಸು ರಾಜನಾಗಿ ನೇಮಕವನ್ನು ಪೂರೈಸಿದ ಬಳಿಕ ದೀನತೆಯಿಂದ ತನ್ನ ತಂದೆಗೆ ರಾಜ್ಯವನ್ನು ಒಪ್ಪಿಸಿಕೊಡುವನು