ಯೋಹಾನ
18 ಯೇಸು ಇದನ್ನು ಹೇಳಿದ ಬಳಿಕ ತನ್ನ ಶಿಷ್ಯರೊಂದಿಗೆ ಕಿದ್ರೋನಿನ ಚಳಿಗಾಲದ ತೊರೆಕಣಿವೆಯನ್ನು ದಾಟಿಹೋದನು. ಅಲ್ಲಿ ಒಂದು ತೋಟವಿತ್ತು, ಅವನೂ ಅವನ ಶಿಷ್ಯರೂ ಅದರೊಳಗೆ ಪ್ರವೇಶಿಸಿದರು. 2 ಅವನಿಗೆ ನಂಬಿಕೆ ದ್ರೋಹಮಾಡಲಿದ್ದ ಯೂದನಿಗೂ ಈ ಸ್ಥಳ ಗೊತ್ತಿತ್ತು, ಏಕೆಂದರೆ ಯೇಸು ಅಲ್ಲಿ ಅನೇಕ ಸಾರಿ ತನ್ನ ಶಿಷ್ಯರೊಂದಿಗೆ ಕೂಡಿಬಂದಿದ್ದನು. 3 ಆದುದರಿಂದ ಯೂದನು ಸೈನಿಕರ ತಂಡವನ್ನೂ ಮುಖ್ಯ ಯಾಜಕರ ಮತ್ತು ಫರಿಸಾಯರ ಅಧಿಕಾರಿಗಳನ್ನೂ ಕರೆದುಕೊಂಡು ದೀವಟಿಗೆಗಳನ್ನೂ ದೀಪಗಳನ್ನೂ ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು. 4 ತನಗೆ ಸಂಭವಿಸಲಿದ್ದ ಎಲ್ಲವನ್ನೂ ತಿಳಿದವನಾಗಿದ್ದ ಯೇಸು ಮುಂದಕ್ಕೆ ಹೋಗಿ ಅವರಿಗೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು. 5 ಅವರು ಅವನಿಗೆ, “ನಜರೇತಿನ ಯೇಸುವನ್ನು” ಎಂದು ಉತ್ತರಕೊಟ್ಟರು. ಅವನು ಅವರಿಗೆ, “ನಾನೇ ಅವನು” ಎಂದನು. ಆಗ ಅವನಿಗೆ ನಂಬಿಕೆ ದ್ರೋಹಮಾಡಲಿದ್ದ ಯೂದನೂ ಅವರೊಂದಿಗೆ ನಿಂತುಕೊಂಡಿದ್ದನು.
6 ಅವನು ಅವರಿಗೆ, “ನಾನೇ ಅವನು” ಎಂದು ಹೇಳಿದಾಗ ಅವರು ಹಿಂದೆ ಸರಿದು ನೆಲಕ್ಕೆ ಬಿದ್ದರು. 7 ಆದುದರಿಂದ ಅವನು ಅವರಿಗೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಪುನಃ ಕೇಳಿದಾಗ ಅವರು, “ನಜರೇತಿನ ಯೇಸುವನ್ನು” ಎಂದರು. 8 ಅದಕ್ಕೆ ಯೇಸು, “ನಾನೇ ಅವನೆಂದು ನಿಮಗೆ ಹೇಳಿದೆನಲ್ಲ. ನೀವು ನನ್ನನ್ನು ಹುಡುಕುತ್ತಿರುವುದಾದರೆ ಇವರನ್ನು ಹೋಗಲು ಬಿಡಿರಿ” ಎಂದನು. 9 “ನೀನು ನನಗೆ ಕೊಟ್ಟಿರುವವರಲ್ಲಿ ಒಬ್ಬನನ್ನೂ ನಾನು ಕಳೆದುಕೊಂಡಿಲ್ಲ” ಎಂದು ಅವನು ಹೇಳಿದ ಮಾತು ನೆರವೇರುವಂತೆ ಹೀಗಾಯಿತು.
10 ಆಗ ಸೀಮೋನ ಪೇತ್ರನ ಬಳಿ ಒಂದು ಕತ್ತಿ ಇದ್ದುದರಿಂದ ಅವನು ಅದನ್ನು ಹೊರಗೆಳೆದು ಮಹಾ ಯಾಜಕನ ಆಳಿಗೆ ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿಬಿಟ್ಟನು. ಆ ಆಳಿನ ಹೆಸರು ಮಲ್ಕ ಎಂದಾಗಿತ್ತು. 11 ಆದರೆ ಯೇಸು ಪೇತ್ರನಿಗೆ, “ಕತ್ತಿಯನ್ನು ಒರೆಯಲ್ಲಿ ಹಾಕು. ನನ್ನ ತಂದೆಯು ನನಗೆ ಕೊಟ್ಟಿರುವ ಪಾತ್ರೆಯಿಂದ ನಾನು ಕುಡಿಯಬಾರದೊ?” ಎಂದು ಹೇಳಿದನು.
12 ಆಗ ಸೈನಿಕರ ತಂಡವೂ ಸಹಸ್ರಾಧಿಪತಿಯೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದು ಕಟ್ಟಿ 13 ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು; ಇವನು ಆ ವರ್ಷದ ಮಹಾ ಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು. 14 ವಾಸ್ತವದಲ್ಲಿ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ಅವರಿಗೆ ಪ್ರಯೋಜನಕರವೆಂದು ಯೆಹೂದ್ಯರಿಗೆ ಸಲಹೆ ನೀಡಿದವನು ಈ ಕಾಯಫನೇ ಆಗಿದ್ದನು.
15 ಸೀಮೋನ ಪೇತ್ರನೂ ಇನ್ನೊಬ್ಬ ಶಿಷ್ಯನೂ ಯೇಸುವನ್ನು ಹಿಂಬಾಲಿಸುತ್ತಿದ್ದರು. ಆ ಶಿಷ್ಯನಿಗೆ ಮಹಾ ಯಾಜಕನ ಪರಿಚಯವಿದ್ದುದರಿಂದ ಅವನು ಯೇಸುವಿನೊಂದಿಗೆ ಮಹಾ ಯಾಜಕನ ಅಂಗಳದೊಳಗೆ ಹೋದನು. 16 ಆದರೆ ಪೇತ್ರನು ಹೊರಗೆ ಬಾಗಿಲ ಬಳಿಯಲ್ಲಿ ನಿಂತುಕೊಂಡಿದ್ದನು. ಆದುದರಿಂದ ಮಹಾ ಯಾಜಕನ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಹೋಗಿ ಬಾಗಲು ಕಾಯುವ ಸೇವಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು. 17 ಆಗ ಬಾಗಲು ಕಾಯುವ ಸೇವಕಿಯು ಪೇತ್ರನಿಗೆ, “ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನೇನು?” ಎಂದು ಕೇಳಿದಾಗ ಅವನು, “ಅಲ್ಲ” ಎಂದನು. 18 ಆಗ ಚಳಿಯಿದ್ದುದರಿಂದ ಆಳುಗಳೂ ಅಧಿಕಾರಿಗಳೂ ಇದ್ದಲಿನ ಬೆಂಕಿಯನ್ನು ಹೊತ್ತಿಸಿ ಅದರ ಸುತ್ತಲೂ ಚಳಿಕಾಯಿಸಿಕೊಳ್ಳುತ್ತಾ ನಿಂತಿದ್ದರು. ಪೇತ್ರನು ಸಹ ಅವರೊಂದಿಗೆ ನಿಂತುಕೊಂಡು ಚಳಿಕಾಯಿಸಿಕೊಳ್ಳುತ್ತಾ ಇದ್ದನು.
19 ಮುಖ್ಯ ಯಾಜಕನು ಯೇಸುವನ್ನು ಅವನ ಶಿಷ್ಯರ ಕುರಿತಾಗಿಯೂ ಅವನ ಬೋಧನೆಯ ಕುರಿತಾಗಿಯೂ ಪ್ರಶ್ನಿಸಿದನು. 20 ಯೇಸು ಅವನಿಗೆ, “ನಾನು ಲೋಕದ ಮುಂದೆ ಬಹಿರಂಗವಾಗಿ ಮಾತಾಡಿದ್ದೇನೆ. ನಾನು ಯಾವಾಗಲೂ ಯೆಹೂದ್ಯರೆಲ್ಲರೂ ಕೂಡಿಬರುವ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಬೋಧಿಸಿದ್ದೇನೆ; ರಹಸ್ಯವಾಗಿ ಏನನ್ನೂ ಮಾತಾಡಿಲ್ಲ. 21 ಹಾಗಿರುವಾಗ ನೀನು ನನ್ನನ್ನು ಏಕೆ ಪ್ರಶ್ನಿಸುತ್ತೀ? ನನ್ನ ಮಾತುಗಳನ್ನು ಕೇಳಿಸಿಕೊಂಡವರನ್ನು ಪ್ರಶ್ನಿಸು. ನೋಡು, ನಾನು ಹೇಳಿದ್ದು ಇವರಿಗೆ ತಿಳಿದಿದೆ” ಎಂದು ಉತ್ತರಕೊಟ್ಟನು. 22 ಅವನು ಇದನ್ನು ಹೇಳಿದ ಮೇಲೆ ಪಕ್ಕದಲ್ಲಿ ನಿಂತಿದ್ದ ಅಧಿಕಾರಿಗಳಲ್ಲಿ ಒಬ್ಬನು ಯೇಸುವಿನ ಮುಖಕ್ಕೆ ಹೊಡೆದು, “ನೀನು ಮುಖ್ಯ ಯಾಜಕನಿಗೆ ಹೀಗೆ ಉತ್ತರಕೊಡುತ್ತೀಯೊ?” ಎಂದು ಹೇಳಿದನು. 23 ಯೇಸು ಅವನಿಗೆ, “ನಾನು ತಪ್ಪಾಗಿ ಮಾತಾಡಿದ್ದರೆ ಆ ತಪ್ಪಿನ ವಿಷಯದಲ್ಲಿ ಸಾಕ್ಷಿಹೇಳು; ಆದರೆ ಸರಿಯಾಗಿ ಮಾತಾಡಿದ್ದರೆ ನೀನು ಯಾಕೆ ನನ್ನನ್ನು ಹೊಡೆಯುತ್ತೀ?” ಎಂದನು. 24 ಆಗ ಅನ್ನನು ಅವನನ್ನು ಕಟ್ಟಿಸಿ ಮಹಾ ಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.
25 ಈ ಸಮಯದಲ್ಲಿ ಸೀಮೋನ ಪೇತ್ರನು ನಿಂತುಕೊಂಡು ಚಳಿಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅವರು ಅವನಿಗೆ, “ನೀನು ಸಹ ಅವನ ಶಿಷ್ಯರಲ್ಲಿ ಒಬ್ಬನೇನು?” ಎಂದು ಕೇಳಿದರು. ಅವನು ಅದನ್ನು ನಿರಾಕರಿಸುತ್ತಾ, “ಅಲ್ಲ” ಎಂದನು. 26 ಮಹಾ ಯಾಜಕನ ಆಳುಗಳಲ್ಲಿ ಯಾರ ಕಿವಿಯನ್ನು ಪೇತ್ರನು ಕತ್ತರಿಸಿದ್ದನೋ ಅವನ ಸಂಬಂಧಿಕನಾಗಿದ್ದ ಒಬ್ಬನು, “ನಾನು ನಿನ್ನನ್ನು ತೋಟದಲ್ಲಿ ಅವನೊಂದಿಗೆ ನೋಡಿದೆನಲ್ಲವೆ?” ಎಂದನು. 27 ಆದರೂ ಪೇತ್ರನು ಅದನ್ನು ಪುನಃ ಅಲ್ಲಗಳೆದನು; ತಕ್ಷಣವೇ ಒಂದು ಹುಂಜವು ಕೂಗಿತು.
28 ಬಳಿಕ ಅವರು ಯೇಸುವನ್ನು ಕಾಯಫನ ಬಳಿಯಿಂದ ರಾಜ್ಯಪಾಲನ ಅರಮನೆಗೆ ಕರೆದುಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ರಾಜ್ಯಪಾಲನ ಅರಮನೆಯೊಳಗೆ ಹೋದರೆ ಮಲಿನಗೊಂಡು ಪಸ್ಕದ ಊಟಕ್ಕೆ ಅಡ್ಡಿಯಾದೀತೆಂದು ಅವರು ಹೊರಗೇ ನಿಂತರು. 29 ಆದುದರಿಂದ ಪಿಲಾತನೇ ಹೊರಗೆ ಅವರ ಬಳಿಗೆ ಬಂದು, “ನೀವು ಈ ಮನುಷ್ಯನ ವಿರುದ್ಧ ಯಾವ ಆಪಾದನೆಯನ್ನು ತಂದಿದ್ದೀರಿ?” ಎಂದು ಕೇಳಿದನು. 30 ಅದಕ್ಕೆ ಅವರು ಅವನಿಗೆ, “ಈ ಮನುಷ್ಯನು ತಪ್ಪಿತಸ್ಥನಲ್ಲದಿದ್ದರೆ ನಾವು ಇವನನ್ನು ನಿನಗೆ ಒಪ್ಪಿಸಿಕೊಡುತ್ತಿರಲಿಲ್ಲ” ಎಂದು ಉತ್ತರಕೊಟ್ಟರು. 31 ಇದರಿಂದಾಗಿ ಪಿಲಾತನು ಅವರಿಗೆ, “ನೀವೇ ಇವನನ್ನು ತೆಗೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರಕ್ಕನುಸಾರ ತೀರ್ಪುಮಾಡಿರಿ” ಎಂದನು. ಅದಕ್ಕೆ ಯೆಹೂದ್ಯರು ಅವನಿಗೆ, “ಯಾರನ್ನೂ ಕೊಲ್ಲುವುದು ನಮಗೆ ಧರ್ಮಸಮ್ಮತವಾದದ್ದಲ್ಲ” ಎಂದರು. 32 ಹೀಗೆ ಯೇಸು ತಾನು ಯಾವ ರೀತಿಯ ಮರಣವನ್ನು ಪಡೆಯಲು ಗೊತ್ತುಮಾಡಲ್ಪಟ್ಟಿದ್ದೇನೆಂದು ಸೂಚಿಸಲು ಹೇಳಿದ ಮಾತು ನೆರವೇರುವಂತಾಯಿತು.
33 ಆಗ ಪಿಲಾತನು ಪುನಃ ರಾಜ್ಯಪಾಲನ ಅರಮನೆಯೊಳಗೆ ಹೋಗಿ ಯೇಸುವನ್ನು ಕರೆದು ಅವನಿಗೆ, “ನೀನು ಯೆಹೂದ್ಯರ ಅರಸನೊ?” ಎಂದು ಕೇಳಿದನು. 34 ಅದಕ್ಕೆ ಯೇಸು, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತಿದ್ದೀಯೊ? ಅಥವಾ ಇತರರು ನನ್ನ ಕುರಿತು ನಿನಗೆ ಹೇಳಿದರೊ?” ಎಂದು ಕೇಳಿದನು. 35 ಪಿಲಾತನು, “ನಾನೇನು ಒಬ್ಬ ಯೆಹೂದ್ಯನೊ? ನಿನ್ನ ಸ್ವಂತ ಜನರೂ ಮುಖ್ಯ ಯಾಜಕರೂ ನಿನ್ನನ್ನು ನನಗೆ ಒಪ್ಪಿಸಿಕೊಟ್ಟರು. ನೀನು ಏನು ಮಾಡಿದಿ?” ಎಂದು ಕೇಳಿದನು. 36 ಅದಕ್ಕೆ ಯೇಸು, “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ. ನನ್ನ ರಾಜ್ಯವು ಈ ಲೋಕದ ಭಾಗವಾಗಿರುತ್ತಿದ್ದರೆ ನಾನು ಯೆಹೂದ್ಯರ ಕೈಗೆ ಒಪ್ಪಿಸಲ್ಪಡದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಈ ಮೂಲದ್ದಲ್ಲ” ಎಂದು ಉತ್ತರಕೊಟ್ಟನು. 37 ಆಗ ಪಿಲಾತನು ಅವನಿಗೆ, “ಹಾಗಾದರೆ ನೀನು ಒಬ್ಬ ಅರಸನೊ?” ಎಂದು ಕೇಳಿದಾಗ ಯೇಸು, “ನಾನು ಒಬ್ಬ ಅರಸನೆಂದು ನೀನೇ ಹೇಳುತ್ತಾ ಇದ್ದೀ. ನಾನು ಸತ್ಯಕ್ಕೆ ಸಾಕ್ಷಿಹೇಳಲಿಕ್ಕಾಗಿಯೇ ಹುಟ್ಟಿದ್ದೇನೆ ಮತ್ತು ಅದಕ್ಕಾಗಿಯೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯದ ಪಕ್ಷದಲ್ಲಿರುವ ಎಲ್ಲರೂ ನನ್ನ ಸ್ವರಕ್ಕೆ ಕಿವಿಗೊಡುತ್ತಾರೆ” ಎಂದು ಹೇಳಿದನು. 38 ಪಿಲಾತನು ಅವನಿಗೆ, “ಸತ್ಯ ಎಂದರೇನು?” ಅಂದನು.
ಇದನ್ನು ಹೇಳಿದ ಮೇಲೆ ಅವನು ಪುನಃ ಯೆಹೂದ್ಯರ ಬಳಿಗೆ ಹೊರಗೆ ಹೋಗಿ ಅವರಿಗೆ, “ನನಗೆ ಅವನಲ್ಲಿ ಯಾವ ತಪ್ಪೂ ಕಂಡುಬಂದಿಲ್ಲ. 39 ಮಾತ್ರವಲ್ಲದೆ, ನಾನು ಪಸ್ಕಹಬ್ಬದಂದು ನಿಮಗೆ ಒಬ್ಬ ಸೆರೆಯಾಳನ್ನು ಬಿಡುಗಡೆಮಾಡುವ ಪದ್ಧತಿ ನಿಮ್ಮಲ್ಲಿದೆ. ನಾನು ನಿಮಗಾಗಿ ಯೆಹೂದ್ಯರ ಅರಸನನ್ನು ಬಿಡುಗಡೆಮಾಡಬೇಕೆಂದು ನೀವು ಬಯಸುತ್ತೀರೊ?” ಎಂದು ಕೇಳಿದನು. 40 ಆಗ ಅವರು, “ಈ ಮನುಷ್ಯನನ್ನಲ್ಲ, ಬರಬ್ಬನನ್ನು ಬಿಡುಗಡೆಮಾಡು” ಎಂದು ಪುನಃ ಗಟ್ಟಿಯಾಗಿ ಕೂಗಿದರು. ಈ ಬರಬ್ಬನು ಒಬ್ಬ ದರೋಡೆಕಾರನಾಗಿದ್ದನು.