ಫಿಲಿಪ್ಪಿ
4 ಹೀಗಿರಲಾಗಿ ಪ್ರಿಯರೂ ನಾನು ಹಂಬಲಿಸುವವರೂ ಆಗಿರುವ ನನ್ನ ಸಹೋದರರೇ, ನನ್ನ ಆನಂದವೂ ಕಿರೀಟವೂ ಆಗಿರುವ ಪ್ರಿಯರೇ, ಈ ರೀತಿಯಲ್ಲಿ ನೀವು ಕರ್ತನಲ್ಲಿ ದೃಢವಾಗಿ ನಿಲ್ಲಿರಿ.
2 ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಿ ಎಂದು ನಾನು ಯುವೊದ್ಯಳನ್ನೂ ಸಂತುಕೆಯನ್ನೂ ಪ್ರಬೋಧಿಸುತ್ತೇನೆ. 3 ಕ್ಲೆಮೆನ್ಸ್ನೊಂದಿಗೆ ಹಾಗೂ ನನ್ನ ಉಳಿದ ಜೊತೆಕೆಲಸಗಾರರೊಂದಿಗೆ ಸುವಾರ್ತೆಯ ಕೆಲಸದಲ್ಲಿ ನನಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಿದಂಥ ಈ ಸ್ತ್ರೀಯರಿಗೆ ನೆರವು ನೀಡುತ್ತಿರುವಂತೆ ಯಥಾರ್ಥ ಜೊತೆ ಕೆಲಸಗಾರನಾದ ನಿನ್ನನ್ನು ಕೇಳಿಕೊಳ್ಳುತ್ತೇನೆ. ಅವರ ಹೆಸರುಗಳು ಜೀವಬಾಧ್ಯರ ಪುಸ್ತಕದಲ್ಲಿ ಬರೆದಿದೆ.
4 ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ. ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ. 5 ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ. ಕರ್ತನು ಸಮೀಪವಾಗಿದ್ದಾನೆ. 6 ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. 7 ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.
8 ಕೊನೆಯದಾಗಿ ಸಹೋದರರೇ, ಯಾವ ವಿಷಯಗಳು ಸತ್ಯವಾಗಿವೆಯೊ, ಯಾವ ವಿಷಯಗಳು ಗಂಭೀರವಾದ ಚಿಂತನೆಗೆ ಅರ್ಹವಾಗಿವೆಯೊ, ಯಾವ ವಿಷಯಗಳು ನೀತಿಯುತವಾಗಿವೆಯೊ, ಯಾವ ವಿಷಯಗಳು ನೈತಿಕವಾಗಿ ಶುದ್ಧವಾಗಿವೆಯೊ, ಯಾವ ವಿಷಯಗಳು ಪ್ರೀತಿಯೋಗ್ಯವಾಗಿವೆಯೊ, ಯಾವ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೊ, ಸದ್ಗುಣವಾಗಿರುವ ಯಾವುದಿದ್ದರೂ ಮತ್ತು ಸ್ತುತಿಗೆ ಯೋಗ್ಯವಾಗಿರುವ ಯಾವುದೇ ವಿಷಯವಿದ್ದರೂ ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ. 9 ನೀವು ನನ್ನಿಂದ ಕಲಿತುಕೊಂಡ, ಅಂಗೀಕರಿಸಿದ, ಕೇಳಿಸಿಕೊಂಡ ಮತ್ತು ನೋಡಿದ ವಿಷಯಗಳನ್ನು ಪರಿಪಾಠಮಾಡಿರಿ; ಆಗ ಶಾಂತಿಯ ದೇವರು ನಿಮ್ಮೊಂದಿಗಿರುವನು.
10 ಈಗ ಕೊನೆಗೂ ನನ್ನ ಪರವಾದ ನಿಮ್ಮ ಯೋಚನೆಯನ್ನು ನೀವು ಪುನಃ ಚೇತರಿಸಿದ್ದಕ್ಕಾಗಿ ನಾನು ಕರ್ತನಲ್ಲಿ ಬಹಳವಾಗಿ ಹರ್ಷಿಸುತ್ತೇನೆ; ಇಂಥ ಯೋಚನೆ ನಿಮ್ಮಲ್ಲಿ ನಿಜವಾಗಿ ಇತ್ತಾದರೂ, ಅದನ್ನು ವ್ಯಕ್ತಪಡಿಸಲು ನಿಮಗೆ ಅವಕಾಶ ಸಿಕ್ಕಿರಲಿಲ್ಲ. 11 ನಾನು ಕೊರತೆಯಲ್ಲಿದ್ದೇನೆ ಎಂದು ಹೀಗೆ ಹೇಳುತ್ತಿಲ್ಲ, ಏಕೆಂದರೆ ಎಲ್ಲ ಸನ್ನಿವೇಶಗಳಲ್ಲಿಯೂ ಸಂತುಷ್ಟನಾಗಿರುವುದು ಹೇಗೆಂಬುದನ್ನು ನಾನು ಕಲಿತುಕೊಂಡಿದ್ದೇನೆ. 12 ಆಹಾರದ ಕೊರತೆಯಲ್ಲಾಗಲಿ, ಸಮೃದ್ಧಿಯಲ್ಲಾಗಲಿ ಹೇಗೆ ಜೀವಿಸಬೇಕೆಂಬುದು ನನಗೆ ಗೊತ್ತು. ಎಲ್ಲ ವಿಷಯಗಳಲ್ಲಿ ಮತ್ತು ಎಲ್ಲ ಸನ್ನಿವೇಶಗಳಲ್ಲಿ ಸಂತೃಪ್ತನಾಗಿರುವುದು ಹೇಗೆ, ಹಸಿದವನಾಗಿರುವುದು ಹೇಗೆ, ಸಮೃದ್ಧಿಯಿಂದಿರುವುದು ಹೇಗೆ ಮತ್ತು ಕೊರತೆಯಿಂದಿರುವುದು ಹೇಗೆ ಎಂಬುದರ ಗುಟ್ಟು ನನಗೆ ತಿಳಿದಿದೆ. 13 ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.
14 ಹಾಗಿದ್ದರೂ, ನನ್ನ ಸಂಕಟದಲ್ಲಿ ನನ್ನೊಂದಿಗೆ ಪಾಲುಗಾರರಾಗುವ ಮೂಲಕ ನೀವು ಒಳ್ಳೇದನ್ನೇ ಮಾಡಿದ್ದೀರಿ. 15 ವಾಸ್ತವದಲ್ಲಿ ಫಿಲಿಪ್ಪಿಯವರೇ, ನಾನು ಆರಂಭದಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನ್ಯದಿಂದ ಹೊರಟುಹೋದಾಗ, ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದಲ್ಲಿ ನಿಮ್ಮನ್ನು ಬಿಟ್ಟು ಬೇರೆ ಯಾವ ಸಭೆಯವರೂ ನನ್ನೊಂದಿಗೆ ಪಾಲುಗಾರರಾಗಲಿಲ್ಲ ಎಂಬುದು ನಿಮಗೂ ಗೊತ್ತು. 16 ಏಕೆಂದರೆ ನಾನು ಥೆಸಲೊನೀಕದಲ್ಲಿದ್ದಾಗಲೂ ನನ್ನ ಕೊರತೆಯನ್ನು ನೀಗಿಸಲಿಕ್ಕಾಗಿ ಒಮ್ಮೆ ಮಾತ್ರವಲ್ಲದೆ ಎರಡನೇ ಬಾರಿಯೂ ನೀವು ಏನನ್ನಾದರೂ ಕೊಟ್ಟುಕಳುಹಿಸಿದಿರಿ. 17 ನಾನು ಅತ್ಯಾಸಕ್ತಿಯಿಂದ ನಿಮ್ಮ ದಾನವನ್ನು ಎದುರುನೋಡುತ್ತಿದ್ದೇನೆಂದಲ್ಲ, ಆದರೆ ನಿಮ್ಮ ಲೆಕ್ಕಕ್ಕೆ ಹೆಚ್ಚನ್ನು ಕೂಡಿಸುವಂಥ ಪ್ರತಿಫಲವನ್ನೇ ಅತ್ಯಾಸಕ್ತಿಯಿಂದ ಎದುರುನೋಡುತ್ತಿದ್ದೇನೆ. 18 ನನ್ನ ಬಳಿ ಅಗತ್ಯವಿರುವುದೆಲ್ಲವೂ ಇದೆ ಮತ್ತು ಸಮೃದ್ಧವಾಗಿ ಹೊಂದಿದ್ದೇನೆ. ನೀವು ಕಳುಹಿಸಿಕೊಟ್ಟದ್ದೆಲ್ಲವು ಈಗ ನನಗೆ ಎಪಫ್ರೊದೀತನಿಂದ ಸಿಕ್ಕಿದ್ದರಿಂದ ನಾನು ತೃಪ್ತನಾಗಿದ್ದೇನೆ. ಇದು ದೇವರಿಗೆ ಸುಗಂಧವಾಸನೆಯನ್ನು ಬೀರುವ ಕಾಣಿಕೆಯಾಗಿಯೂ ಸ್ವೀಕೃತವಾದ ಯಜ್ಞವಾಗಿಯೂ ಮೆಚ್ಚಿಕೆಯಾದದ್ದಾಗಿಯೂ ಇದೆ. 19 ನನ್ನ ದೇವರು ತನ್ನ ಮಹಿಮೆಯ ಐಶ್ವರ್ಯಕ್ಕೆ ತಕ್ಕಹಾಗೆ ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಎಲ್ಲ ಕೊರತೆಯನ್ನು ಸಂಪೂರ್ಣವಾಗಿ ನೀಗಿಸುವನು. 20 ನಮ್ಮ ದೇವರೂ ತಂದೆಯೂ ಆಗಿರುವಾತನಿಗೆ ಸದಾಕಾಲಕ್ಕೂ ಮಹಿಮೆಯು ಸಲ್ಲುತ್ತಾ ಇರಲಿ. ಆಮೆನ್.
21 ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವ ಎಲ್ಲ ಪವಿತ್ರ ಜನರಿಗೆ ನನ್ನ ವಂದನೆಯನ್ನು ತಿಳಿಸಿರಿ. ನನ್ನೊಂದಿಗಿರುವ ಸಹೋದರರು ನಿಮಗೆ ತಮ್ಮ ವಂದನೆಯನ್ನು ತಿಳಿಸಿದ್ದಾರೆ. 22 ಪವಿತ್ರ ಜನರೆಲ್ಲರು, ವಿಶೇಷವಾಗಿ ಕೈಸರನ ಮನೆಯವರು ನಿಮಗೆ ತಮ್ಮ ವಂದನೆಯನ್ನು ತಿಳಿಸಿದ್ದಾರೆ.
23 ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನೀವು ತೋರಿಸುವ ಮನೋಭಾವದೊಂದಿಗಿರಲಿ.